Wednesday, 28 October 2015

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೩

                                              ||  ಶ್ರೀಗುರುಭ್ಯೋನಮಃ ||ವಸಿಷ್ಠರು ನಂತರದ ವಿಚಾರದಲ್ಲಿ ಇಲ್ಲಿನ ಮೂಲ ಸಿದ್ಧಾಂತ ಸಾಮಾಜಿಕ ಚೌಕಟ್ಟಿನ ಕೆಲ ಸೂತ್ರಗಳನ್ನು ಹೆಸರಿಸುತ್ತಾರೆ. ಭಾರತೀಯ ಜೀವನ ಪದ್ಧತಿಯಲ್ಲಿ ಮುಖ್ಯವಾಗಿ ೭ ರೀತಿಯ ಕುಟುಂಬ ಪದ್ಧತಿ ಇರುತ್ತವೆ. ಅದಕ್ಕೆ ಬದ್ಧರಾಗಿ ಜನ ಬದುಕಬೇಕೆಂದೂ, ಅದು ಈ ರೀತಿಯ ಸೂತ್ರ ಬದ್ಧತೆಯಲ್ಲಿದೆ ಎಂದೂ ಹೇಳುತ್ತಾ ಅದನ್ನು ಈ ಮಂತ್ರಗಳ ಮುಖೇನ ವಿವರಿಸುತ್ತಾರೆ. ಅದರ ವಿವರ ಹೀಗಿದೆ.

    1)     ಪ್ರಾಕೃತಿಕ ಕುಟುಂಬ (ವಸುಧೈವ ಕುಟುಂಬ)
    2)    ವಿಶ್ವ ಕುಟುಂಬ (ಜೈವಿಕ ಸಂತಾನ ಸಹಿತ)
    3)    ಧರ್ಮ ಕುಟುಂಬ
    4)   ಸಾಮಾಜಿಕ ಕುಟುಂಬ
    5)    ಕಾಲಬಂಧಿತ ಕುಟುಂಬ
    6)    ವೈಯಕ್ತಿಕ ಹುಟ್ಟು ಕುಟುಂಬ (ಅಥವಾ ಸ್ವಂತ)
    7)    ಆತ್ಮಿಕ ಕುಟುಂಬ (ಸಮಾನ ಚಿಂತನಾ ಕುಟುಂಬ)

ಇವೆಲ್ಲಾ ವಿಚಾರಗಳನ್ನೊಳಗೊಂಡ ಒಂದು ವಿಶಿಷ್ಟ ಕುಟುಂಬ, ಸಹಜೀವನ ಪದ್ಧತಿಯನ್ನು ವೇದಕಾಲದಿಂದಲೂ ಹುಟ್ಟು ಹಾಕಿ ಪೋಷಿಸಿಕೊಂಡು ಬಂದಿದ್ದರು ಋಷಿಗಳು. ಅವನ್ನೇ ಈ ಮುಂದಿನ ಮಂತ್ರಗಳು ವಿವರಿಸುತ್ತವೆ. ಅವು ಹೇಗೆ ಒಂದಕ್ಕೊಂದು ಸರಪಳಿಯಂತೆ ಹೊಂದಿಕೊಂಡಿದೆ? ಎಷ್ಟು ಸೂಕ್ತವಾಗಿದೆ? ಜೀವಜಂತುಗಳ ನಿರಂತರತೆಗೆ ಹೇಗೆ ಪೂರಕವಾಗಿದೆ? ಈ ಮಂತ್ರ ಓದಿ ವಿವರಣೆ ಗಮನಿಸಿ, ಲೆಕ್ಕ ಬಿಡಿಸಿ ಅರ್ಥಮಾಡಿಕೊಳ್ಳಿರಿ.

ಋಗ್ವೇದ ಮಂಡಲ - 7, ಸೂ - 60, ಮಂತ್ರ1-12
ಯದದ್ಯ ಸೂರ್ಯ ಬ್ರವೋಽನಾಗಾ ಉದ್ಯನ್ಮಿತ್ರಾಯ ವರುಣಾಯ ಸತ್ಯಮ್  | 
ವಯಂ ದೇವತ್ರಾದಿತೇ ಸ್ಯಾಮ ತವ ಪ್ರಿಯಾಸೋ ಅರ್ಯಮನ್ ಗೃಣಂತಃ || 1 ||
ಏಷಸ್ಯ ಮಿತ್ರಾವರುಣಾ ನೃಚಕ್ಷಾ ಉಭೇ ಉದೇತಿ ಸೂರ್ಯೋ ಅಭಿ ಜ್ಮನ್ | 
ವಿಶ್ವಸ್ಯ ಸ್ಥಾತುರ್ಜಗತಶ್ಚ ಗೋಪಾ ಋಜು ಮರ್ತೇಷು ವೃಜಿನಾ ಚ ಪಶ್ಯನ್ || 2 ||
ಅಯುಕ್ತ ಸಪ್ತ ಹರಿತಃ ಸದಸ್ಥಾದ್ಯಾ ಈಂ ವಹಂತಿ ಸೂರ್ಯಂ ಘೃತಾಚೀಃ | 
ಧಾಮಾನಿ ಮಿತ್ರಾವರುಣಾ ಯುವಾಕುಃ ಸಂ ಯೋ ಯೂಥೇವ ಜನಿಮಾನಿ ಚಷ್ಟೇ || 3 ||
ಉದ್ವಾಂ ಪೃಕ್ಷಾಸೋ ಮಧುಮಂತೋ ಅಸ್ಥುರಾ ಸೂರ್ಯೋ ಅರುಹಚ್ಛುಕ್ರಮರ್ಣಃ | 
ಯಸ್ಮಾ ಆದಿತ್ಯಾ ಅಧ್ವನೋ ರದಂತಿ ಮಿತ್ರೋ ಅರ್ಯಮಾ ವರುಣಃ ಸಜೋಷಾಃ || 4 ||
ಇಮೇ ಚೇತಾರೋ ಅನೃತಸ್ಯ ಭೂರೇರ್ಮಿತ್ರೋ ಅರ್ಯಮಾ ವರುಣೋ ಹಿ ಸಂತಿ | 
ಇಮ ಋತಸ್ಯ ವಾವೃಧುರ್ರೋಣೇ ಶಗ್ಮಾಸಃ ಪುತ್ರಾ ಅದಿತೇರದಬ್ಧಾಃ || 5 ||
ಇಮೇ ಮಿತ್ರೋ ವರುಣೋ ದೂಳಭಾಸೋಽಚೇತಸಂ ಚಿಚ್ಚಿತಯಂತಿ ದಕ್ಷೈಃ | 
ಅಪಿ ಕ್ರತುಂ ಸುಚೇತಸಂ ವತಂತಸ್ತಿರಶ್ಚಿದಂಹಃ ಸುಪಥಾ ನಯಂತಿ || 6 ||
ಇಮೇ ದಿವೋ ಅನಿಮಿಷಾ ಪೃಥಿವ್ಯಾಶ್ಚಿಕಿತ್ವಾಂಸೋ ಅಚೇತಸಂ ನಯಂತಿ | 
ಪ್ರವ್ರಾಜೇ ಚಿನ್ನದ್ಯೋ ಗಾಧಮಸ್ತಿ ಪಾರಂ ನೋ ಅಸ್ಯ ವಿಷ್ಪಿತಸ್ಯ ಪರ್ಷನ್ || 7 ||
ಯದ್ಗೋಪಾವದದಿತಿಃ ಶರ್ಮ ಭದ್ರಂ ಮಿತ್ರೋ ಯಚ್ಛಂತಿ ವರುಣಃ ಸುದಾಸೇ | 
ತಸ್ಮಿನ್ನಾ ತೋಕಂ ತನಯಂ ದಧಾನಾ ಮಾ ಕರ್ಮ ದೇವಹೇಳನಂ ತುರಾಸಃ || 8 ||
ಅವ ವೇದಿಂ ಹೋತ್ರಾಭಿರ್ಯಜೇತ ರಿಪಃ ಕಾಶ್ಚಿದ್ವರುಣಧ್ರುತಃ ಸಃ | 
ಪರಿದ್ವೇಷೋಭಿರರ್ಯಮಾ ವೃಣಕ್ತೂರಂ ಸುದಾಸೇ ವೃಷಣಾ ಉ ಲೋಕಮ್ || 9 ||
ಸಸ್ವಶ್ಚಿದ್ಧಿ ಸಮೃತಿಸ್ತ್ವೇಷ್ಯೇಷಾಮಪೀಚ್ಯೇನ ಸಹಸಾ ಸಹಂತೇ | 
ಯುಷ್ಮದ್ಭಿಯಾ ವೃಷಣೋ ರೇಜಮಾನಾ ದಕ್ಷಸ್ಯ ಚಿನ್ಮಹಿನಾ ಮೃಳತಾ ನಃ || 10 ||
ಯೋ ಬ್ರಹ್ಮಣೇ ಸುಮತಿಮಾಯಜಾತೇ ವಾಜಸ್ಯ ಸಾತೌ ಪರಮಸ್ಯ ರಾಯಃ | 
ಸೀಕ್ಷಂತ ಮನ್ಯುಂ ಮಘವಾನೋ ಅರ್ಯ ಉರು ಕ್ಷಯಾಯ ಚಕ್ರಿರೇ ಸುಧಾತು || 11 ||
ಇಯಂ ದೇವ ಪುರೋಹಿತಿರ್ಯುವಾಭ್ಯಾಂ ಯಜ್ಞೇಷು ಮಿತ್ರಾವರುಣಾವಕಾರಿ | 
ವಿಶ್ವಾನಿ ದುರ್ಗಾ ಪಿಪೃತಂ ತಿರೋ ನೋ ಯೂಯಂ ಪಾತ ಸ್ವಸ್ತಿಭಿಃ ಸದಾ ನಃ || 12 ||


ಮೊದಲಾಗಿ ಮಾನವನ ಆದ್ಯ ಕರ್ತವ್ಯ ಆತನು ಈ ಭೂಮಿಯ ಒಬ್ಬ ಪ್ರತಿನಿಧಿ ಹಾಗೂ ಸದಸ್ಯ ಮಾತ್ರಾವೆಂದು ಅರಿತಿರಬೇಕು. ತಾನು ಎಲ್ಲರಿಗೂ, ಎಲ್ಲವುದಕ್ಕೂ ಹೊಂದಿ ಸಹಬಾಳ್ವೆ ನಡೆಸಬೇಕು. ತನ್ಮೂಲಕ  ವಿಶ್ವ ಕುಟುಂಬಿಯಾಗಬೇಕು. ಈ ಸೈದ್ಧಾಂತಿಕ ಚೌಕಟ್ಟನ್ನು ಹೇಳುವ ಧರ್ಮವೇ ಮಾನವಧರ್ಮ. ಅದನ್ನಾಚರಿಸುವವನೇ ಧರ್ಮಕುಟುಂಬದ ಸದಸ್ಯ. ಇಲ್ಲಿ ಮತಾಚಾರವಿಲ್ಲ. ಹಾಗಾಗಿ ಎಲ್ಲಾ ಮತಗಳೂ ಸಮಾನ. ಎಲ್ಲಾ ಮಾನವರೂ ಸಮಾನವೆಂಬ ಮೂಲಸಿದ್ಧಾಂತದ ಆಧಾರದಲ್ಲಿ ಹುಟ್ಟಿಕೊಂಡಿದ್ದು ಸಾಮಾಜಿಕ ಜವಾಬ್ದಾರಿಯನ್ನು ಪುರಸ್ಕರಿಸಿದ ಸಾಮಾಜಿಕ ಕುಟುಂಬ. ಅದರಲ್ಲಿ ಹುಟ್ಟುವ ಜೀವಿ ಕಾಲಬಾಧಿತ. ಹುಟ್ಟು+ಸಾವುಗಳ ಮಧ್ಯದ ಕಾಲವೇ ಕುಟುಂಬಜೀವನ. ಅಲ್ಲಿ ನಾನಾ ಪಾತ್ರ. ಶಿಶು ಮಗು, ಹುಡುಗ, ಯುವಕ, ಗಂಡ, ಅಣ್ಣ, ತಮ್ಮ, ಅತ್ತೆ, ಮಾವ, ಅಜ್ಜ, ಅಪ್ಪ ಇತ್ಯಾದಿ ನಾನಾ ಪಾತ್ರ ಮಾಡುತ್ತಾ ಕಾಲ ಕುಟುಂಬದಲ್ಲಿ ಲೀನವಾಗುತ್ತಾನೆ. ಅದಕ್ಕಾಗಿ ಆರಿಸಿಕೊಂಡ ಕ್ಷೇತ್ರವೇ ಕಾಲಕುಟುಂಬ. ಹಾಗಾಗಿ ಈ ಮೂಲನೆಲೆಯಲ್ಲಿ ಯಾರು ಸತ್ಯ, ಧರ್ಮ, ನ್ಯಾಯದಿಂದ ತಮ್ಮ ಹಿತದೊಂದಿಗೆ ಸಮಾಜ ಹಿತಕ್ಕೆ ಧಕ್ಕೆ ಬಾರದಂತೆ ಬದುಕುತ್ತಾರೋ ಅದೇ ವೈಯಕ್ತಿಕ ಕುಟುಂಬ ಜೀವನ. ಅದೇ ಹುಟ್ಟು ಕುಟುಂಬ ಅಥವಾ ತಾನು ಹುಟ್ಟಿದ ಕುಲ, ಅದರ ಆಚಾರ, ವಿಚಾರಗಳ ಬಂಧನ, ಬಾಂಧವ್ಯಗಳು. ಆದರೆ ಅಲ್ಲಿ ಹುಟ್ಟಿದ ಆತ್ಮನಿಗೆ ಅವೆಲ್ಲಕ್ಕಿಂತ ಭಿನ್ನವಾದ ಆತ್ಮೋನ್ನತಿ ಸಾಧನೆಯ ಬದ್ಧತೆಯ ಇನ್ನೊಂದು ವಿಶೇಷ ರೀತಿಯ ಕುಟುಂಬವಿದೆ. ಅದೇ ಆತ್ಮಿಕ ಕುಟುಂಬ. ಈ ನೆಲೆಯಲ್ಲಿ ಈ ಕೆಳಗಿನ ಗಣಿತ ಸೂತ್ರವನ್ನು ಓದಿ ಅರ್ಥಮಾಡಿಕೊಳ್ಳಿರಿ.


ಏಸು ಪೇಳಲಿ ಮನುಜ ಕೇಳ್ ನೀ
ನೇಸು ಜನ್ಮವನೆತ್ತಿದೆಯೊ ಲೆಕ್ಕವಿರೆ
ಬಾಸುರದಿ ಮೇಳವಿಸುತಿದೆ ನಿತ್ಯ ನಿನ್ನಾಯ್ಕೆ ಮಾನವನೇ ||
ಹಾಸು ಹೊಕ್ಕಿದೆ ನೇಯುತಿದೆ ನಿಜ
ವೇಸು ಅಳೆದರು ಹೊಂದದದು ಲೆಕ್ಕ
ಹಾಸುತಿದೆ ಜಗವೆಲ್ಲ ಬರಿದೆ ವ್ಯರ್ಥವಾಗದಿರೂ || 1 ||


ಮೈತ್ರಿಯಿದೆ ಜಗದ ಜೀವರಲಿ ಆ
ಮಿತ್ರಾವರುಣರ ಯೋಜನೆಯೇ ಮಳೆ
ಮಿತ್ರನನುನಯನವೇ ಜೀವರು ಜಗವೆಲ್ಲ ತುಂಬಿ ||
ಮೈತ್ರಿಯವು ಕಾಳಿನೊಳಿಟ್ಟು ಭಗ
ವಂತ ಬೆಸೆದನು ಜೀವನವ ಈ
ಸುತ ನಡೆಮುಂದೆ ಆತ್ಮನೇ ನಿನ್ನಾತ್ಮದರಿವಿಗೆಡೆನೆಡೆಗೇ || 2 ||


ಹುಟ್ಟು ಮಾನವ ಜನ್ಮ ಅತಿಶ್ರೇಷ್ಠ
ಹುಟ್ಟಿಹೆ ನೀ ನಿನ್ನ ಹಿಂದಣ ಲೆಕ್ಕ
ಕ್ಕಿಟ್ಟು ಪುಟ ಕೊಡುವ ಕಾಲವು ಹೋರಿ ಬಂದಿಹುದೂ ||
ಕೆಟ್ಟ ಚಿಂತನೆ ಬೇಡ ನೀನಿರು
ದಿಟ್ಟ ಹೋರಾಟವಿರಲಿ ಸತ್ಯದಲಿ
ಮೆಟ್ಟಿ ಮುಂದಡಿಯಿಡಲು ಈ ಲೆಕ್ಕ ತೋರುವುದೂ || 3 ||ಅಜನು ತಾ ಹಿಂದೆ ಬರೆದನು ಲಲಾಟದಾ
ಒಜನೆ ಹೆಚ್ಚಿತು ಋಣಕರ್ಮದಾ ಲೆಕ್ಕ
ನಿಜವರಿತುಕೊ ಅಳಿಸಲಾಗದ ಬರೆಹವನು ನಿನಗೇ ||
ನಿಜ ಪೇಳ್ವೆ ಈ ಲೆಕ್ಕದಲಿ ಗುಣಕ
ಗಜದಳತೆ ಹೆಚ್ಚಿದೆ ನೀನಾದರೋ
ನಿಜವನರಿಯದೇ ನೊಂದು ಬಂದುದನು ಪಡೆಯೇ || 4 ||


ಮೂರು ಮೂರರಲಿ ಈ ಲೆಕ್ಕ ಖಂಡಿಸದ
ಮೂರು ಮತ್ತೇಳು ಹನ್ನೊಂದು ಈ ಜಗ
ಮಾರು ಹೋಗದಿರು ಆತ್ಮನೇ ನೀನೊಂದೆ ಬ್ರಹ್ಮವೊಂದೇ ||
ಮೂರರಾ ಗೊಡವೆ ನಿನಗೆ ಬೇಕೇ ಬಿಡು
ಮೂರರಾ ಚಿಂತೆ ನೀನೊಂದಾಗಿರೆ ಆಗ
ಮೂರು ಮಾರಿ ಹೋಗುವುದು ಅದುವೆ ಜಗದ ಸತ್ಯಾ || 5 ||

ಈ ಲೆಕ್ಕ ಅರ್ಥಮಾಡಿಕೊಳ್ಳಿರಿ, ಮುಂದಿನ ಲೇಖನಕ್ಕೆ ಕಾಯಿರಿ, ಉತ್ತರ ಸಿಗುತ್ತದೆ.
ಇಂತು

ಕೆ. ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ, 
ತಲಪಾಡಿ, ಕಾಸರಗೋಡು.

No comments:

Post a Comment