Wednesday, 11 November 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೭

  
ನವ ನವೀನ ಆಯಾಮ
ಭರತಚಕ್ರವರ್ತಿಗೆ ಭೂವಲಯವನ್ನಿತ್ತ ಕೇವಲಜ್ಞಾನಿಯಾದ ಆದಿಮನ್ಮಥನ ದೇಹದಳತೆಯು ಇಪ್ಪತ್ತೈದು ಬಿಲ್ಲಿನ ಪ್ರಮಾಣವೆಂದು ಸೂಚಿಸುವುದರೊಂದಿಗೆ ೧೭ನೇ ಅಧ್ಯಾಯವು ಪ್ರಾರಂಭವಾಗಿದೆ. ಈ ಅಗಾಧವಾದ ಕಾವ್ಯರಚನೆಗೆ ಸರ್ವಶಕ್ತಸ್ವರೂಪಿಯಾದ, ಆಗಮಸ್ವರೂಪಿಯಾದ, ಪ್ರದ್ಯುಮ್ನನನ್ನು; ಆದಿಮನ್ಮಥನನ್ನು ಅಂಕಾಕ್ಷರಗಳ ಪ್ರಾಪ್ತಿಗಾಗಿ ಪ್ರಾರ್ಥಿಸಿದ್ದಾನೆ. ಆದಿತೀರ್ಥಂಕರನು ನಿನ್ನ ಅಕ್ಕತಂಗಿಯರಿಗಿತ್ತ ಅಂಕಾಕ್ಷರಗಳನ್ನು ಕರುಣಿಸು ಎಂದು ಗೊಮ್ಮಟನಲ್ಲಿ ಬೇಡಿಕೊಂದ್ದಾನೆ. ಕರ್ನಾಟಕದ ಅರಸು ದಂಡಕರಾಜನು ದಂಡಕಾರಣ್ಯದ ವರೆವಿಗೂ ರಾಜ್ಯವಾಳಿದುದನ್ನು ಸೂಚಿಸುತ್ತಾನೆ. ಭೂಮಿಯನ್ನಾಳುವ ಆಶೆಯನ್ನುಳ್ಳ  ಕ್ಷತ್ರಿಯನು ಯಾವತೆರದಲ್ಲಿ ಬಾಳಬೇಕೆಂಬುದನ್ನು ಪಾರ್ಥನಿಗೆ ಕೃಷ್ಣನು ವಿವರಿಸಿದ ಅಂಶಗಳನ್ನು ಸೂಚಿಸಿದ್ದಾನೆ.

ಲೌಕಿಕ ಆಚಾರವಿಚಾರಗಳಲ್ಲಿ ಬದಲಾವಣೆಯಾಗುವುದು ಬಹಳ ಶೀಘ್ರವಾಗಿರಬಹುದು. ಆದರೆ, ಧಾರ್ಮಿಕ ಆಚಾರವಿಚಾರಗಳಲ್ಲಿ ಇಂಥ ಶೀಘ್ರ ಬದಲಾವಣೆಗಳಾಗುವುದಿಲ್ಲ. ಜನಿವಾರ ಧರಿಸುವುದು ಅರ್ಥಹೀನ ಕ್ರಿಯೆ ಎಂದು ಇಂದಿನವರು ನಿರ್ಧರಿಸಬಹುದು. ಆದರೆ ಈ ಜನಿವಾರ ಧರಿಸಲು ಇಂದಿಗೂ ಅನುಸರಿಸುತ್ತಿರುವ ಕ್ರಮವು ಸಾವಿರಾರು ವರ್ಷಗಳಿಂದಲೂ ಒಂದೇ ರೀತಿಯಲ್ಲಿರುವುದನ್ನು ನಾವು ಸಿರಿಭೂವಲಯದಲ್ಲಿ ಕಾಣಬಹುದು! ಜನಿವಾರವನ್ನು ಶಿರದಮೂಲಕ ಕೊರಳಲ್ಲಿ, ಹೃದಯಭಾಗದಲ್ಲಿರುವಂತೆ ಧರಿಸುವುದು ಅನಾದಿಕಾಲದಕ್ರಮ. ಇದನ್ನು ಒಪ್ಪದವರು, ಹೊಟ್ಟೆಯಪಾಡಿಗಾಗಿ ಯಾರೋ ಪುರೋಹಿತರು ಮಾಡಿರುವ ಕ್ರಮ ಇದು ಎಂದು ಹೀಗಳೆಯುವುದು ಸಾಮಾನ್ಯ ಸಂಗತಿ. ಈ ಜನಿವಾರ ಧರಿಸುವ ಕ್ರಮವು ಬಹಳ ಪ್ರಾಚೀನವಾದುದೆಂಬುದಕ್ಕೆ  ಸಿರಿಭೂವಲಯವು ಪ್ರತ್ಯಕ್ಷ ಸಾಕ್ಷಿಯಾಗಿದೆ. ಹತ್ತಿಯ ದಾರದಿಂದ ತಯಾರಾದ ಈ ಯಜ್ಞಸೂತ್ರವು ವಜ್ರದೇಹಿಗಳ ದೇಹವೆಂದು ಕುಮದೇಂದುಮುನಿಯು ಸೂಚಿಸುತ್ತಾನೆ. ಈ ಯಜ್ಞೋಪವೀತಕ್ಕೆ ಸಂಬಂಧಿದಂತೆ ಕರ್ಲಮಂಗಲಂ ಶ್ರೀಕಂಠಯ್ಯನವರು ಬರೆದಿರುವ ಮೌಲಿಕ ಲೇಖನದ ವಿವರಗಳನ್ನು  ಓದುಗರು ಪರಿಶೀಲಿಸಬಹುದು.


ಈ ಭಾಗದಲ್ಲಿ ಸಮುದ್ರವಿಜಯ ಮಹಾರಾಜನ ಹೆಸರನ್ನು ಸೂಚಿಸಿದ್ದಾನೆ. ಓಂಕಾರವನ್ನು ಅಪವಿತ್ರಗೊಳಿಸಲಾಗದೆಂದೂ, ಯಾರಿಗೆ ಆಧ್ಯಾತ್ಮಸಾಧನೆ ಸಾಧ್ಯವೋ, ಯಾರಿಗೆ ಅನಂತ ಸಂಸಾರವು ದೂರವಾಗಿದೆಯೋ ಅವರನ್ನು ಈ ಓಂಕಾರ; ಯಜ್ಞೋಪವೀತ; ಧರ್ಮ; ಸಂಪ್ರದಾಯಗಳು ರಕ್ಷಿಸುವುದೆಂದು ಸೂಚಿಸಿದ್ದಾನೆ. ಕೃಷ್ಣ ಬಲರಾಮರ ಉಪನಯನ ಸಂಸ್ಕಾರದ ವಿಚಾರ ಕುರಿತು ವಿವರಿಸಿದ್ದಾನೆ. ಬಾಹುಲಿಯು ಭರತನಿಗೆ ವಿವರಿಸಿದಂತೆ, ಕೃಷ್ಣನು ಪಾರ್ಥನಿಗೆ ವಿವರಿಸಿದಂತೆ, ತಾನು ಅಮೋಘವರ್ಷನಿಗೆ ಈ ಗ್ರಂಥದ ಸಾರವನ್ನು ವಿವರಿಸಿರುವುದಾಗಿ ಸೂಚಿಸಿದ್ದಾನೆ. ಜಯದ ಅಂತರಂಗ ಬಹಿರಂಗಗಳ ದರ್ಶವಿಲ್ಲಿ ಆಗುವುದೆಂದು ತಿಳಿಸಿದ್ದಾನೆ. ಯಾವ ಭಾಷೆಗೆ ಬೇಕಾದರೂ ತಿರುಗಿಸಿಕೊಂಡು ಸಾವಿರ ದೇಶವಾಳುವ ಈ ಅಂಕಿಗಳ ಕಾವ್ಯ ರಚನೆ ಆಗಿರುವುದು, ಪಾವನವಾದ ಕೇವಲಜ್ಞಾನದ ಪ್ರಸಾರಕ್ಕಾಗಿಯೇ ಎಂದು ಸೂಚಿಸಿದ್ದಾನೆ.

ಭಗವದ್ಗೀತೆಯು ಪಂಚಭಾಷೆಗಳಲ್ಲಿ ಪ್ರವಹಿಸಿ ಈ ಗ್ರಂಥದಲ್ಲಿ ತುಂಬಿರುವುದನ್ನೂ ತಿಳಿಸಿದ್ದಾನೆ. ಹುಟ್ಟುಸಾವುಗಳಿಲ್ಲದ ಅವಿನಾಶಿಯಾದ ಸತ್ದ್ರವ್ಯದ ಅರ್ಥಾಗಮದ ಅತಿಶಯವಿದು ಎಂದು ಗ್ರಂಥದ ಪ್ರಾಶಸ್ತ್ಯ ವಿವಸಿದ್ದಾನೆ. ಕುಮುದೇಂದುವಿನ ಕಾಲಕ್ಕಾಗಲೇ ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳು ಸೇರ್ಪಡೆಯಾಗಿರುವ ಕುರುಹು ಕಾಣಿಸುತ್ತದೆ. ಆದರೆ ಜಯಾಖ್ಯಾನದಲ್ಲಿ ಅಂತರ್ಗತವಾಗಿರುವ ೧೬೩ ಶ್ಲೋಕಗಳ ಭಗವದ್ಗೀತೆಯನ್ನು ಮಾತ್ರವೇ ಅವನು ಈ ಪ್ರಥಮಖಂಡದಲ್ಲಿ ನಿರೂಪಿಸಿದ್ದಾನೆ.

Bhagavadgita in Siribhuvalaya - ಸಿರಿಭೂವಲಯಾಂತರ್ಗತ ಭಗವದ್ಗೀತೆಯ ತುಣುಕು

ವ್ಯಾಸರು ಹೇಳಿದ ಅತೀತದ ಕಥೆಯನ್ನೆಲ್ಲವನ್ನೂ ಗೌತಮನು ಶ್ರೇಣಿಕರಾಜನಿಗೆ ತಿಳಿಸಿದನೆಂಬ ವಿಚಾರವನ್ನು ಸೂಚಿಸಿದ್ದಾನೆ. ಕೃಷ್ಣತೀರ್ಥಂಕರನಿಂದ ಬಂದ ಈ ಗೀತೋಪದೇಶವನ್ನು ಋಷಿರೂಪುಧರನಾದ ಕುಮುದೇಂದುಮುನಿಯು ಶುದ್ಧಮನಸ್ಸಿನಿಂದ ಅಮೋಘವರ್ಷಾಂಕನಿಗೆ ಶ್ರೀಗೀತೆಯಾಗಿ ಹೇಳಿದನೆಂದು ಸೂಚಿಸಿದ್ದಾನೆ. ಭಗವದ್ಗೀತೆಯನ್ನು ವೈಕುಂಠಕಾವ್ಯ ಎಂದು ಹೆಸರಿಸಿ, ನೇಮಿಜಿನವಂಶದಿಂದ ಬಂದ ಆನಂದದಾಯಕ ಕಾವ್ಯವೆಂದೂ; ಕುರುವಂಶ, ಹರಿವಂಶ, ಯದುವಂಶದ ರಾಜರು ಈ ಭರತಖಂಡವನ್ನಾಳಿದ ರಾಜ್ಯದ ಶ್ರೀನಿವಾಸ ಕಾವ್ಯವೆಂದೂ ಪ್ರಶಂಸಿಸಿದ್ದಾನೆ. ಈ ದಿವ್ಯ ಮನ್ಮಥಕಾವ್ಯದಲ್ಲಿ ತ್ರಿಕಾಲಕ್ಕೆ(ಭೂತ; ವರ್ತಮಾನ; ಭವಿಷ್ಯ) ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಅಳವಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾನೆ. ಆದಿಕಾಲದಲ್ಲಿ ಋಷಭಸೇನನಿಂದಾರಂಭಿಸಿ; ಅನಾದಿಕಾಲದಲ್ಲಿ ಗಂಗರರಾಜ್ಯದವರೆವಿಗೆ, ಹೀಗೆ ಆದಿ-ಅನಾದಿಗಳೆರಡನ್ನೂ ಸೇರಿಸಿ ಗೌತಮನಿಂದ ಹರಿದುಬಂದ ಕಾವ್ಯವಿದು ಎಂದು ಗ್ರಂಥದ ಪ್ರಾಚೀನತೆಯನ್ನು ನಿರೂಪಿಸಿದ್ದಾನೆ.

ಹೆಲಿಕಲ್ ಹೆಲಿಕ್ಸ್ ಮಾದರಿಯಲ್ಲಿ ಗ್ರಹಗಳ ಚಲನೆಯ ನಕ್ಷೆ. ಅತೀತನಾಗತ ಇಹ ಕಾಲಾಂತರ್ಗತ ಬ್ರಹ್ಮಾಂಡ ಪರಿಕಲ್ಪನೆ.
X ಕಾಲಾಯಾಮ, Y ಹಾಗೂ Z ಕ್ಷೇತ್ರಾಯಾಮ.

ನಾಥ ಸಂಪ್ರದಾಯದಲ್ಲಿ ಏಕಾಂಗವಾಗಿದ್ದ ತತ್ವೋಪದೇಶವು ಹನ್ನೆರಡು ಅಂಗಗಳಾಗಿ ಬೆಳೆದು, ಈಗ ನಾಲ್ಕುವೇದಗಳಾಗಿ ಸಾಗಿಬಂದು; ಭಗವದ್ಗೀತೆಯಾಗಿದೆ ಇದರ ಸರ್ವಭಾಷಾಂಕವೇ ಈಗಿನ ಸರ್ವಧರ್ಮಾಂಕ ಎಂದು ತಿಳಿಸಿ, ಸರ್ವಧರ್ಮ, ಮತ ಸಂಪ್ರದಾಯಗಳ ಮೂಲವೂ ಒಂದೇ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಅಂಕವಿಜ್ಞಾನದಿಂದ ಸಂವೃದ್ಧಿಯಾಗಿರುವ ಈ ಅಂಕ ಕಾವ್ಯದಲ್ಲಿ ಸಂಕಟವನ್ನೆಲ್ಲ ಪರಿಹಾರಮಾಡುವ ಶಕ್ತಿ ಇದೆಯೆಂದು ತಿಳಿಸಿ, ಅಂಕಲೇಶ್ವರನಿಗೆ ಮಂಗಲವನ್ನು ಹೇಳಿದ್ದಾನೆ. ಅಂಕಿಗಳಿಗೆ ಸಂಬಂಧಿಸಿದ ಸಕಲ ವಿಚಾರಗಳನ್ನೂ ವಿವರಿಸುವುದರೊಂದಿಗೆ ೧೭ನೇ ಅಧ್ಯಾಯವು ಮುಕ್ತಾಯವಾಗಿದೆ.

*    *     *
                                                                                               - ಸುಧಾರ್ಥಿ, ಹಾಸನ

1 comment:

  1. ಸರ್, ಸಿರಿಭೂವಲಯ ಸಂಚಿಕೆಯು ಸುಂದರವಾಗಿ ಮೂಡಿ ಬರುತ್ತಾ ಇದೆ, ಈ ತರಹದ ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸುತ್ತಾ ,

    - ಧನ್ಯವಾದಗಳು

    ReplyDelete