Monday, 2 November 2015

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?


ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.

ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ ಕಜ್ಜಿಯ ಕೆರೆದಂತೆ ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:- ನೇತ್ರಾವತಿ ತಿರುವು ಯೋಜನೆ, ಕೋಲಾರದ ಗಣಿ ಪುನರುಜ್ಜೀವನ ಇತ್ಯಾದಿ ಇತ್ಯಾದಿ ಇವೆಲ್ಲಾ ಸೂಕ್ತ ಚಿಂತನೆಯಿಲ್ಲದ ಬರೇ ವೈಯಕ್ತಿಕ ಲಾಭ ಚಿಂತನೆಯ ಯೋಜನೆಗಳು. ಇವನ್ನು ಅಥವಾ ಇನ್ಯಾವುದೋ ಉದ್ಯೋಗ ಸೃಷ್ಟಿಯೆಂಬ ಕುಟಿಲ ಯೋಜನೆ ಕಂಪೆನಿ, ಫ್ಯಾಕ್ಟರಿಗಳನ್ನು ವಿದೇಶೀ ಬಂಡವಾಳ ಆಕರ್ಷಿಸಿ ಮಾಡುವುದು. ಸದ್ಯಕ್ಕೆ ದೇಶದ ಧಾರಣಾ ಸಾಮರ್ಥ್ಯ ದೃಷ್ಟಿಯಿಂದ ಸಾಧುವಲ್ಲ, ಉಪಯುಕ್ತವೂ ಅಲ್ಲ. ಅಪಾಯಕಾರಿಯಾಗಬಹುದು. ಹೀಗೆ ತಾತ್ಕಾಲಿಕ ಲಾಭ, ವೈಜ್ಞಾನಿಕತೆಯ ಭ್ರಾಂತಿಯಲ್ಲಿ ದೇಶ ಮುಂದುವರಿಯುತ್ತಿದೆ. ಸರಕಾರೀ ಆರ್ಥಿಕ ತಜ್ಞರೂ ಇದೇ ನಿಟ್ಟಿನಲ್ಲಿ ಚಿಂತಿಸುತ್ತಿದ್ದಾರೆ. ಆರ್ಥಿಕ ಪುನಶ್ಚೇತನವೆಂಬ ಕೂಗು ಕೇಳಿಬರುತ್ತಿದೆ. ರೈತರ ಸಾವಿಗೆ ಸಾಲ ಮಾಡಿಕೊಂಡದ್ದೇ ಕಾರಣವೆಂದು ಬಿಂಬಿಸಲಾಗುತ್ತಿದೆ. ಆದರೆ ಅದೇ ಪೂರ್ಣಸತ್ಯವಲ್ಲ. ರೈತನನ್ನು ಕಾಡುತ್ತಿರುವ ಅನಾಥ ಪ್ರಜ್ಞೆ. ರೈತನಿಗೂ ಇದು ಅರ್ಥವಾಗುತ್ತಿಲ್ಲ. ತಾನೇಕೆ ಸಾಯುತ್ತಿದ್ದೇನೆಂದು ಅರಿವಿಗೆ ಬರುವ ಹೊತ್ತಿಗೆ ಸತ್ತು ಸುಟ್ಟು ಮಣ್ಣಾಗುತ್ತಿದ್ದಾನೆ. ಇದು ದೇಶದ ಅಭಿವೃದ್ಧಿಯೆಂಬ ವಿಕೃತ ಯೋಜನೆಯ ಅಧಿಕಾರಿಗಳ ಮೂರ್ಖತನ. ಯಾರು ಅರ್ಥಮಾಡಿ ಕೊಳ್ಳಬಲ್ಲರೋ ಗೊತ್ತಿಲ್ಲ.

Netravathi Diversion Path Map
ಇನ್ನು ಈಗಿನ ದಕ್ಷಿಣಕನ್ನಡಾದ್ಯಂತ ಎದ್ದಿರುವ ನೇತ್ರಾವತಿ ತಿರುವು ಯೋಜನೆ ಅಥವಾ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ. ಇದು ಎಷ್ಟು ಪ್ರಸ್ತುತ? ಉಪಯುಕ್ತ. ಭವಿಷ್ಯದ ಪರಿಣಾಮವೇನು? ಐಚ್ಛಿಕ ಫಲ ದೊರೆತೀತೆ? ಕೋಲಾರ ಚಿಕ್ಕಬಳ್ಳಾಪುರ ಜನರ ದಾಹಕ್ಕೆ ತಂಪೆರೆಯಬಲ್ಲದೆ? ಅಲ್ಲಿಗೆ ಈ ನೀರು ಹೋಗಿ ತಲುಪಬಹುದೆ? ಮತ್ತು ಎಷ್ಟು ವೆಚ್ಚದಾಯಕ? ಇದಕ್ಕಿಂತ ಸುಲಭವಾಗಿ ಇತರೆ ಮೂಲಗಳಿಂದ ಶಾಶ್ವತ ಯೋಜನೆ ಬೇರೆ ತಯಾರಿಸಲು ಸಾಧ್ಯವಿಲ್ಲವೆ? ಖಂಡಿತಾ ಇದೆ. ಆದರೆ ಯೋಜನೆ ತಯಾರಿಸುವ ಅಧಿಕಾರಿಗಳಿಗೆ ಆ ಪ್ರಜ್ಞೆ ಬೇಕು ಅದಿಲ್ಲ. ಕೃಷ್ಣಯ್ಯ ಶೆಟ್ಟರು ಕಾಶಿಯಿಂದ ಗಂಗಾಜಲ ತೀರ್ಥರೂಪದಲ್ಲಿ ತಂದು ಹಂಚಿದರು. ಆದರೆ ಕುಡಿಯುವ ನೀರು ಕಾಶಿಯಿಂದ ತರಲು ಸಾಧ್ಯವಿಲ್ಲ, ತರುವ ಯೋಜನೆಯೂ ಸಾಧುವಲ್ಲ. 

ಹಿಂದಿನ ಉದಾಹರಣೆ ಗಮನಿಸಿ, ಭಗೀರಥ ಚಕ್ರವರ್ತಿಯಾಗಿ ತನ್ನ ಸಾಹಸಬಲದಿಂದ ಗಂಗೆಯನ್ನು ತಿರುಗಿಸಿ ಆರ್ಯಾವರ್ತಕ್ಕೆ ಹರಿಸಿದ. ಗಂಗೋದ್ಭವವಾಯ್ತು. ಆದರೇನು ತೀರ್ಥವಾಯ್ತು ಪಾನಯೋಗ್ಯವಲ್ಲವೆಂದೇ ಅಂದೇ ನಿರ್ಧರಿಸಲ್ಪಟ್ಟಿತು. ಕಾರಣ ವಿಶಿಷ್ಟ ಧರ್ಮಸೂಕ್ಷ್ಮ. ಆಡುಭಾಷೆಯಲ್ಲಿ ಒಂದು ಮಾತಿದೆ ಗಂಗಾಸ್ನಾನಂ ತುಂಗಾಪಾನಂ ಎಂದು. ಹಾಗಿದ್ದರೆ ಅದರರ್ಥವೇನು? ಕಸಿದು ತಂದ ನೀರು ಎಂದರ್ಥ. ಅದೆಷ್ಟೇ ಪವಿತ್ರವಾಗಿರಲಿ, ಶುದ್ಧವಾಗಿರಲಿ ಪಾನಕ್ಕೆ ಶ್ರೇಷ್ಠವಲ್ಲ. ಅದು ಧರ್ಮನಿಷೇಧವಿಧಿ. ಹಾಗಾಗಿ ಗಂಗೆಯ ನೀರು ವರ್ಣಯೋಜಿತವಾಗಿತ್ತು. ಈಗ ರೋಗಯೋಜಿತವಾಗಿದೆ. ಮುಂದೆ ಮಹಾಮಾರಿಯಾದರೂ ಆದೀತು; ಗಂಗಾ ಶುದ್ಧೀಕರಣ ಯೋಜನೆಯಿಂದ. ತನ್ಮೂಲಕ ಆರ್ಯಾವರ್ತ ಪ್ರದೇಶಕ್ಕೆ ಉಪಯುಕ್ತವಾಯ್ತೋ ಬಿಟ್ಟಿತೋ ಬೇರೆ. ಆದರೆ ಹಿಮಾಲಯ ಪಶ್ಚಿಮ ದಕ್ಷಿಣ ಪ್ರಾಂತ್ಯ ಮರುಭೂಮಿಯಾಯ್ತು. ಸಂಸ್ಕೃತಿ ಸುಪ್ತವಾಯ್ತು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿದೇಶೀಯ ಮ್ಲೇಂಛ, ದಸ್ಯು, ಅಸುರ, ಅಪಹತಿ, ದಂಶಕ, ಧೃಷ್ಣು, ಕಿನ್ನರ, ಯಕ್ಷರನ್ನು ತಡೆದು ಧರ್ಮಭೂಮಿಯನ್ನು ಉಳಿಸುತ್ತಿದ್ದ ಇವರು ಸರಸ್ವತಿಯ ಗುಪ್ತತೆಯಿಂದಾಗಿ ಜೀವನ ಕಷ್ಟವಾಗಿ ದೇಶಾಂತರ ಹೋಗಬೇಕಾಯ್ತು. ಸಾರಸ್ವತ, ಗೌಡ, ಕಿಂಶುಮಾರ, ಕ್ಷಪಣಕ, ಸತ್ಯಜಿತ್, ವಿರೂಪಜಿತ್ ಇತ್ಯಾದಿ ಇತ್ಯಾದಿ ಜನಾಂಗ ಶಾಶ್ವತವಾಗಿ ದೇಶಾಂತರ ಹೋಯ್ತು. ಈಗಿನ ಗುಜರಾತ್, ರಾಜಸ್ಥಾನ ಇತ್ಯಾದಿ ಸರಸ್ವತೀ ಕಣಿವೆ ಪ್ರದೇಶ ತನ್ನ ಸಂಸ್ಕೃತಿ ಸಹಿತವಾಗಿ ನಾಶವಾಯ್ತು. ಮತ್ತೊಂದು ನಾಗರೀಕತೆ ಗಂಗಾ ಕಣಿವೆ ಪ್ರದೇಶದಲ್ಲಿ ಬೆಳೆದಿರಬಹುದು, ಅದು ನೀವು ಗುರುತಿಸುವ ರೀತಿ ತಪ್ಪಾಗಿದೆ. ಗಂಗಾ ಕಣಿವೆಯ ಈಗಿನ ಪ್ರದೇಶ ಆರ್ಯಾವರ್ತದ ಮೇಲಿನ ಭಾಗವಾಗಿದ್ದು, ಅದು ಪರ್ವತದೇಶವೆಂದೇ ಪ್ರಸಿದ್ಧ. ಅಲ್ಲಿನ ಮಣ್ಣಿನ ಗುಣ ದಂಶಕ, ಕ್ರೂರ, ಪಾಪಭೀತಿ ರಹಿತ ವೃತ್ತಿ. ಹಾಗಾಗಿ ಗಂಗಾಕಣಿವೆಯಲ್ಲಿ ಬೆಳೆದ ಸಂಸ್ಕೃತಿ ಎಷ್ಟೇ ಪವಿತ್ರವೆಂದರೂ ಆ ಜನರಲ್ಲಿ ಈ ಮಣ್ಣಿನ ಗುಣ ಪ್ರೇಷಿತ ಯುದ್ಧಾಕಾಂಕ್ಷೆ, ಹೋರಾಟ, ಕ್ರೂರ ಪ್ರವೃತ್ತಿಯೊಂದಿಗೇನೆ ಬೆಳೆಯಿತು. ಉತ್ತಮ ಸಾತ್ವಿಕ, ಶೂರ, ವೀರ, ಧೀರ, ಉದಾರ, ವಾರ, ಮಾರ, ಕ್ಷೀರ, ಸಾರ, ಸಜ್ಜನವೆಂಬ ನವವಿಧ ಸಂಸ್ಕೃತಿ ನಾಶವಾಯ್ತು. ಅದು ಯಾವ ಸಂಕಲ್ಪವೋ ಭಗೀರಥನದ್ದೋ, ದೇವರದ್ದೋ, ದೇವತೆಗಳದ್ದೋ ತಿಳಿದಿಲ್ಲ ಬಿಡಿ. 

ಆದರೆ ಈ ನಮ್ಮ ಕರ್ನಾಟಕದ ಸಚಿವರೊಬ್ಬರ ಸಂಕಲ್ಪ ಹಟದಿಂದ ಎದ್ದು ನಿಂತಿದೆ. ಅದರ ದುಷ್ಪರಿಣಾಮ ಏನಾಗಬಹುದು ಈ ದೃಷ್ಟಿಯಿಂದ ಚಿಂತಿಸಿದ್ದೀರಾ? ಖಂಡಿತಾ ಇಲ್ಲವೆನ್ನಬಹುದು. ಇದೊಂದು ಸಣ್ಣ ಯೋಜನೆ, ಅದರಿಂದ ಯಾವುದೇ ದುಷ್ಪರಿಣಾಮವಿಲ್ಲವೆನ್ನ ಬಹುದು. ಸುಮ್ಮನೆ ಸಮುದ್ರಕ್ಕೆ ಹರಿದು ಹೋಗಿ ಹಾಳಾಗುತ್ತಿರುವ ನೀರನ್ನು ಬಳಸುತ್ತಿದ್ದೇವೆ ಎಂಬ ವೈಜ್ಞಾನಿಕತೆಯ ಪರಿಹಾರ ಹೇಳಬಹುದು. ಕುಡಿಯುವ ನೀರಿನ ಕೊರತೆ ನೀಗಿಸುವ ಒಂದು ಮಾನವೀಯ ಪ್ರಯತ್ನವೆಂಬ ವಿಶಿಷ್ಟ, ಆದರ್ಶ, ಪರೋಪಕಾರಿ, ಲೋಕಕಲ್ಯಾಣ ಕೃತಿಯನ್ನು ಲೋಕಮುಖಕ್ಕೆ ಹಿಡಿದು ತೋರಿಸಬಹುದು. ಆದರೆ ಇದರೊಂದಿಗೆ ಬಾಧಕಗಳೇನಿದೆ ಚಿಂತಿಸಿದ್ದೀರಾ? ಚಿಂತನಾ ಶಕ್ತಿ ಇದೆಯಾ? ಆ ನಿಟ್ಟಿನಲ್ಲಿ ಚಿಂತಿಸುವ ಶಕ್ತಿ ಇದೆಯಾ?  ಅರ್ಹತೆ ಇದೆಯಾ? ಮುಂದಿನ ಸಹಸ್ರಾರು ವರ್ಷದ ಭವಿಷ್ಯ ಚಿಂತನೆ ಇದೆಯಾ? ಇವೆಲ್ಲಾ ಆಧಾರದಲ್ಲಿ ಅಭಿವೃದ್ಧಿಕಾರ್ಯ ರೂಪಿಸಬೇಕೇ ವಿನಃ ತನ್ನ ಐದು ವರ್ಷದ ಜನಪ್ರತಿನಿಧಿತ್ವ ಕಾಲದಲ್ಲಿ ಏನೋ ಒಂದು ಮಾಡಿ ಓಟನ್ನೂ, ಜನ ಬೆಂಬಲವನ್ನೂ ಗಿಟ್ಟಿಸಿದರೆ ಸಾಕೆಂಬ ಹುಚ್ಚು ಪ್ರವೃತ್ತಿ ಅಗತ್ಯವೇ? ಇಂತಹ ದಿಕ್ಕು ಬದಲಿಸುವ ಒಂದು ಸ್ವಾಭಾವಿಕ ವ್ಯವಸ್ಥೆಯ ಮಾರ್ಪಾಡಿಗೆ ಮುಂಚೆ ಅದರ ಜೈವಿಕ ಮೂಲ ಸಂಶೋಧನೆಯಾಗಬೇಕು. ಅಲ್ಲಿಯೇ ಹುಟ್ಟಿ ಬೆಳೆದ ಚಿಂತಕನು ಮಾತ್ರ ಈ ತ್ಯಾಗ ಮಾಡಬಲ್ಲ. ಅದು ಬಿಟ್ಟು ಯಾರೋ, ಯಾವುದೋ ಊರಿನಲ್ಲಿ ಹುಟ್ಟಿ ಬೆಳೆದ ಒಬ್ಬ ವಿದ್ಯಾವಂತನೆಂಬ ಸರ್ಟಿಫಿಕೇಟ್ ಪಡೆದವನಿಂದ ಇಂತಹಾ ಯೋಜನೆ ಸಾಧ್ಯವಿಲ್ಲ. 

ಭಗೀರಥನ ವೈಯಕ್ತಿಕ ಕೌಟುಂಬಿಕ ಸಮಸ್ಯಾ ಪರಿಹಾರ ಕಾರಣದ ಒಂದು ಘಟನೆ ಮುಂದೆ ಒಂದು ಉತ್ತಮ ಸಂಸ್ಕೃತಿ ನಾಶಕ್ಕೆ ಕಾರಣವಾಯ್ತು. ಹಾಗೇ ಒಂದು ವಿಕೃತ ಸಂಸ್ಕೃತಿ ಉದ್ಭವಕ್ಕೆ ಕಾರಣವಾಯ್ತು ತಿಳಿಯಿರಿ. ಹಾಗಾಗಿ ಯಾವುದೇ ಯೋಜನೆಯು ಆರಂಬಕ್ಕೆ ಮುಂಚೆ ಈ ನಿಟ್ಟಿನಲ್ಲಿ ಚಿಂತಿಸುವ ಜ್ಞಾನಿಗಳ ಅಗತ್ಯವಿದೆ. ಎಲ್ಲವನ್ನೂ ಈಗಿನ ವಿಜ್ಞಾನ ವಿವರಿಸಲಾರದು, ಅಳೆಯಲಾರದು. ಏಕೆಂದರೆ ವಿಜ್ಞಾನ (ಈಗಿನದ್ದು) ಇನ್ನೂ ಒಂದು ವರ್ಷವೂ ಪೂರ್ಣ ತುಂಬದ ಮಗು ಹಾಗೂ ಐತಿಹಾಸಿಕ ಚಿಂತನೆಯಲ್ಲಿ ವಿಜ್ಞಾನ ಏನಕ್ಕೇನೂ ಅಲ್ಲ. ಅದನ್ನೇ ನಂಬಿ ನಡೆಯಬೇಡಿ. ವಿಜ್ಞಾನವೆಂಬ ಬೊಗಳೆಗೆ ಐತಿಹಾಸಿಕ ದೃಷ್ಟಿಯೇ ಇಲ್ಲ. ಯಾವುದೇ ವಿಜ್ಞಾನವೂ ಭೂತ ಚಿಂತನೆಯಿಂದ ಅಭಿವೃದ್ಧಿ ಪಡಿಸಿಲ್ಲ. ಶ್ರೀಯುತ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಸೆಪ್ಟೆಂಬರ್ 22, ೨೦೧೫ ನೇ ತಾರೀಖಿನಂದು ಪತ್ರಿಕಾ ಹೇಳಿಕೆ ನೀಡಿ ತಕ್ಷಣ ಕಾಮಗಾರಿ ನಿಲ್ಲಿಸಿ ಹಾಗೂ ವೈಜ್ಞಾನಿಕ ಚಿಂತನೆಯಾಗಲಿ ಎಂದಿದ್ದಾರೆ. ಸಮರ್ಥ ಸ್ಥಾನಬದ್ಧ ಹೇಳಿಕೆ. ಕಾರಣ ನೇತ್ರಾವತಿಯ ಜೀವಸೆಲೆಯಲ್ಲಿ ಒಂದಾದ ಧರ್ಮ ನ್ಯಾಯ ದ್ಯೋತಕದ ಧರ್ಮಾಧಿಕಾರಿ ಹೆಗ್ಗಡೆಯವರು ಸಾಕಷ್ಟು ಎಚ್ಚರಿಕೆ ಮತ್ತು ಅಧ್ಯಯನ ಅಗತ್ಯವೆಂದಿದ್ದಾರೆ. ಖಂಡಿತಾ ಸತ್ಯ. ಅದನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಅಧ್ಯಯನವಾಗಬೇಕೆಂಬುದು ಸತ್ಯ. ಈಗಿನ ಇಂಜಿನಿಯರ್, ಪರಿಸರವಾದಿ, ಜೈವಿಕ ತಂತ್ರಜ್ಞಾನ ಇಂಜಿನಿಯರ್‌ಗಳಿಂದಲ್ಲ. ಇತಿಹಾಸ ತಜ್ಞರು (ಸರ್ಟಿಫಿಕೇಟ್ ಅಲ್ಲ) ಅವರು ಅಧ್ಯಯನ ಮಾಡಬೇಕಿದೆ. ಈಗಿನ ಪಾರ್ಲಿಮೆಂಟ್ ಸದಸ್ಯರು ಶ್ರೀನಳಿನ್ ಕುಮಾರ್ ಕಟೀಲ್ ಅವರೂ ಇದಕ್ಕೆ ದನಿ ಗೂಡಿಸಿದ್ದಾರೆ. ಹಾಗೇ ರಾಜಕಾರಣಿಗಳು ಸಚಿವ ಸಂಪುಟ ನಿರ್ಧಾರದಂತೆ ಯೋಜನೆ ಅಲ್ಲ, ಹಾಗಿರಬಾರದು, ಉತ್ತಮ ಅಧ್ಯಯನವಾಗಬೇಕೆಂದಿದ್ದಾರೆ. ನೇತ್ರಾವತಿ ಕಣಿವೆ, ನದೀ ಉಗಮ ಕಾರಣ, ಮೂಲ ಚಿಂತನೆ, ತತ್ ಬಾಧಿತ ಪರಿಣಾಮ, ಆ ಮೂಲಕ ಹುಟ್ಟಿದ ಸಂಸ್ಕೃತಿ, ಜೈವಿಕ ಸಂಪತ್ತು, ಅವುಗಳ ಉಳಿಕೆ, ಬಾಳಿಕೆ, ತಾಳಿಕೆ, ಉಪಯುಕ್ತತೆ ಅರಿತು ಸಂಶೋಧನೆಯಾಗಬೇಕು ಹಾಗೂ ಹಲವು ನೂರಾರು ಕಿ.ಮೀ. ನೀರು ಹರಿದು ನಂತರ ಜನರಿಗೆ ಬಳಕೆಯಾಗುವುದರಿಂದ. ಸಹಜ ಹರಿವು ಪಾತ್ರಗಳು ಹೇಗಿವೆ? ಕೃತಕ ಪಾತ್ರದಲ್ಲಿ ಹರಿದ ನದಿ ನಂತರ ಕುಡಿಯಲು ಅರ್ಹ ನೀರಾಗಿ ಉಳಿಯುವುದೇಇವೆಲ್ಲಾ ಚಿಂತನೆ ಆಗಬೇಕಿದೆ. ಇವೆಲ್ಲಾ ಚಿಂತನೆ ನದೀಮೂಲ, ಅದರ ಸ್ವಾಭಾವಿಕ ಪಾತ್ರ, ಅದರಲ್ಲಿರುವ ವಿಶೇಷ ಗುಣ ಲಕ್ಷಣ, ಜೈವಿಕ ಉಪಯುಕ್ತತೆ ಅರಿತು ನಂತರ ಈಗಿನ ಯೋಜನಾ ಸ್ಥಳ, ಕೃತಕ ನದಿ ಹರಿವ ಪಾತ್ರ, ಅಲ್ಲಿನ ಭೂಲಕ್ಷಣ, ಮಣ್ಣಿನ ಗುಣಲಕ್ಷಣ, ಪರಿಣಾಮ ಇವುಗಳನ್ನೆಲ್ಲಾ ಆಧರಿಸಿ ಚಿಂತಿಸಬೇಕಿದೆ. ಅಲ್ಲಿಯ ಚಿಂತನೆಯ ರೂಪುರೇಷೆಗಳು ಹಾಗೂ ಇತರೆ ಸಾಧ್ಯತೆ ಬಾಧ್ಯತೆ ಕುರಿತು ಈ ಲೇಖನ ಮೂರು ವಿಧ ಚಿಂತನೆ ಮಾಡಲಾಗಿದೆ. ಅದನ್ನು ಓದಿ ನಂತರ ಚಿಂತನಾ ಶೀಲರನ್ನು ಸೇರಿಸಿ ಚಿಂತಿಸಿ ಎಂದು ವಿನಂತಿ.
೧) ಪೂರ್ವೋದಾಹರಣೆ
೨) ಮಣ್ಣಿನ ಗುಣಲಕ್ಷಣ
೩) ಹರಿವಿನ ಪಾತ್ರ ಪರಿಣಾಮ
೧) ಮೊದಲು ಪೂರ್ವೋದಾಹರಣೆ:-  ಭಗೀರಥನು ತನ್ನ ಕುಲಜರ ಉನ್ನತಿಗಾಗಿ ಮಾಡಿದ ಗಂಗಾವತರಣ ಪ್ರಯತ್ನದ ಪೂರ್ಣ ಪರಿಚಯ ಮಾಡಿಕೊಳ್ಳೋಣ. ಸಗರ ಚಕ್ರವರ್ತಿ, ಅವನ ೬೦ ಸಾವಿರ ಮಕ್ಕಳು ಏಕಕಾಲದಲ್ಲಿ ಅವರು ಮಾಡಿದ ದುಷ್ಕೃತ್ಯದಿಂದ ಭಸ್ಮವಾದರು, ಸುಟ್ಟು ಹೋದರು. ಹಾಗಿದ್ದರೆ ಅದೆಂಥಾ ಬೆಂಕಿ ಜ್ವಾಲೆ? ಅಷ್ಟು ಜನರನ್ನು ಏಕಕಾಲದಲ್ಲಿ ಭಸ್ಮ ಮಾಡುವ ಶಕ್ತಿ ಜ್ವಾಲೆ ನಂತರವೂ ಎಷ್ಟು ಪರಿಣಾಮ ಮಾಡಬಹುದು? ಅದು ಹಾಗೇ ನಂದಿಹೋಗಲು ಸಾಧ್ಯವೆ? ಲೋಕವನ್ನೆಲ್ಲಾ ಸುಡಲಾರದೇ? ಹಾಗಾಗಿ ಅದನ್ನು ನಂದಿಸುವ ಅಗ್ನಿಶಾಮಕ ಶಕ್ತಿ ಯಾವುದು? ಅದಕ್ಕೆ ಬೇಕು ಅಗಾಧ ನೀರಿನ ಸೆಲೆ. ಅದೇ ಭಗೀರಥನ ಪ್ರಯತ್ನದ ಮಾನಸ ಸರೋವರ ಮೂಲದಿಂದ ಈ ಪರ್ವತ ರಾಜ್ಯಗಳ ಹಾದಿಯಲ್ಲಿ ಆರ್ಯಾವರ್ತ ಪ್ರದೇಶದಲ್ಲಿ ಹರಿದು ನಂತರ ಭಂಗದಲ್ಲಿ ಮೃತ್ಯುಭೂಮಿಯನ್ನು ಶಾಂತಗೊಳಿಸಿ (ಭಂಗ=ಬಂಗಾಳ) ಅಲ್ಲಿಂದ ಸಮುದ್ರ ಸೇರುವ  ನಾಲಾ ಜೋಡಣೆ, ತನ್ಮುಖೇನ ಭಗೀರಥ ಯತ್ನ ಯಶಸ್ವಿ. ಅವರ ಕುಲ ಉದ್ಧಾರವಾಯಿತು ಎಂಬುದು ಸತ್ಯವಿರಬಹುದು. ಆದರೆ ಸರಸ್ವತಿ ನದಿಯ ಸ್ರೋತ ತಿರುಗಿಸಲ್ಪಟ್ಟಿತು. ಸಾರಸ್ವತಾದಿ ಏಳು ಮುಖ್ಯ ಸಂಸ್ಕೃತಿ ನಾಶವಾಯ್ತು ಅಥವಾ ದೇಶಾಂತರ ಹೋದರು. ಆ ಪ್ರದೇಶ ಮರಳುಗಾಡಾಯ್ತು. 

ಇನ್ನೊಂದು ಉದಾಹರಣೆ ಈಗಿನ ಒರಿಸ್ಸಾ ಪ್ರದೇಶದ ಕನ್ಯಾಕುಬ್ಜ ದೇಶ. ಅಲ್ಲಿನ ರಾಜನೂ ತನ್ನ ಪ್ರದೇಶದಲ್ಲಿ ಉತ್ತಮ ನೀರಾವರಿ ಯೋಜನೆ ಮಾಡಿ ಋಮಣ್ವತೀ ನದೀಪಾತ್ರವನ್ನು ಮಹಾನದಿಯೊಂದಿಗೆ ಜೋಡಿಸಿದ ನೀರಾವರಿಯಾಯ್ತು. ಕೃಷಿ ಭೂಮಿ ಒದಗಿತು. ಆಹಾರಧಾನ್ಯ ಬೆಳೆ ಸಮೃದ್ಧಿಯಾಯ್ತು. ಆದರೆ ಆತನು ಜೋಡಣೆಗೆ ಬಳಸಿದ ಕಾಲುವೆ ಪಾತ್ರ ವಿಕೃತ ಲೋಹ ಹೆಚ್ಚಾಗಿರುವ ಭೂಮಿ. ಅದರ ಮೂಲಕ ಹರಿದು ಬಂದ ನೀರನ್ನು ಬಳಸಿದ ಜನ ಕುಬ್ಜರೂ, ಅಂಗವಿಕಲರೂ, ಸಂತಾನಶಕ್ತಿರಹಿತರೂ ಆದರು. ಇವೆರಡೂ ನೈಜ ಇತಿಹಾಸ. ಈ ಇತಿಹಾಸಗಳ ಅಡಿಯಲ್ಲಿ ನೀರು ಹೇಗಿರಬೇಕು?  ಎಲ್ಲಿಂದ ಬಂದಿರಬೇಕು? ಅದರ ಮೂಲಕಾರಣ ಕರ್ತೃತ್ವವೇನು? ಆ ಪ್ರಾದೇಶಿಕ ಅನ್ನಾದಿಗಳಿಗೆ ಹೇಗೆ ಅದು ಪೂರಕ? ಇವೆಲ್ಲಾ ಅಲ್ಲಿ ಚಿಂತನೆಯಾಗಬೇಕಾದ ವಿಚಾರ. ಭೌಗೋಳಿಕ ವಾಸ್ತು ರೀತ್ಯಾ ಪಶ್ಚಿಮದಿಂದ ಪೂರ್ವಕ್ಕೆ ಹರಿವ ನೀರು ಬಳಕೆಗೆ ಯೋಗ್ಯವಲ್ಲ. ಹಾಗಾಗಿ ನದಿಯು ಎಲ್ಲಿ ಪಶ್ಚಿಮವಾಹಿನಿಯಾಗುತ್ತದೆ? ಅಲ್ಲಿನ ನೀರನ್ನೇ ಬಳಸುವ ಪದ್ಧತಿ ಇದೆ ಗಮನಿಸಿರಿ. ಇನ್ನೊಂದು ವಿಶೇಷ ವಿಶಿಷ್ಟ ತೀರಾ ಇತ್ತೀಚಿನ ವಿಜಯನಗರ ಹಂಪಿ ಹಾಳು ಹಂಪಿಯಾಗುವ ಹಿನ್ನೆಲೆಯಲ್ಲಿ ಕುಡಿವ ನೀರಿನ ಪಾತ್ರ ಎಷ್ಟು ಮುಖ್ಯ ಎಂದು ತಜ್ಞರಿಗೆ ಅರ್ಥವಾಗಿರಬಹುದು. ಆದರೆ ಆ ರೀತಿ ಬಳಕೆಯ ನೀರನ್ನು ತುಂಗಾದಂತಹ ಶ್ರೇಷ್ಠನೀರನ್ನು ಬಳಸಿಯೂ ಯೋಜನೆ ಯಶಸ್ವಿಯಾಗಲಿಲ್ಲ. ಕಾರಣ ಹರಿವ ಪಾತ್ರದ ದೋಷವೂ ಅಷ್ಟೇ ಪರಿಣಾಮಕಾರಿ.

ಇನ್ನು ಇದೇ ಸಹ್ಯಾದ್ರಿಯ ತಪ್ಪಲಿನ ಒಂದು ಗ್ರಾಮ. ಅಲ್ಲಿನ ಗ್ರಾಮದ ಜನರೆಲ್ಲಾ ಒಂದು ವಿಚಿತ್ರ ರೋಗಕ್ಕೆ ಸಿಲುಕುತ್ತಾರೆ. ಕೊನೆಗೆ ಕಾರಣ ಅನ್ವೇಷಿಸಿ ಹೋದಾಗ ಅವರೆಲ್ಲಾ ಬಳಸುತ್ತಿದ್ದ ನೀರಿನ ಮೂಲ ಒಂದೇ. ದೂರದ ಬೆಟ್ಟದಿಂದ ಹರಿದು ಬರುತ್ತಿದ್ದ ತೊರೆ, ತೊರೆಯ ಮೇಲ್ಭಾಗದಲ್ಲಿ ಒಂದು ಹೆಮ್ಮರ ವಿಷಮಸ್ತ. ಅದರ ಕಾಯಿಗಳು ಹಣ್ಣುಗಳು ಆ ತೊರೆಯಲ್ಲಿ ಬಿದ್ದು ಕೊಳೆತು ಅದರ ಶ್ಲೇಷಾಂಶ ಸೇರಿದ ನೀರನ್ನು ಕುಡಿಯುತ್ತಿದ್ದರು. ಖಾಯಿಲೆಗೆ ಅದೇ ಕಾರಣ. ನಂತರ ಅಲ್ಲಿನ ಮರ ಮತ್ತು ಆ ವರ್ಗದ ಮರಗಳನ್ನೆಲ್ಲಾ ಕಾಡಿನಿಂದ ಕಡಿದರು ಅದು ಬೇರೆ. ಆದರೆ ಜನ ತಾವು ಕುಡಿಯುವ ನೀರು, ತಿನ್ನುವ ಅನ್ನದ ಬಗ್ಗೆ ವಿಶೇಷ ಕಾಳಜಿ ಹೊಂದಿರಬೇಕು ಎಂಬುದು ಇದರ ಅರ್ಥ.

೨) ಮಣ್ಣಿನ ಗುಣಲಕ್ಷಣ:-  ನಮ್ಮ ರಾಜಕಾರಣಿಗಳು ತಮ್ಮ ಹೆಚ್ಚುಗಾರಿಕೆ ಹೇಳುವ ಭರದಲ್ಲಿ ನಾನು ಮಣ್ಣಿನ ಮಗ ಎನ್ನುತ್ತಾರೆ. ಆದರೆ ಜೀವಸೃಷ್ಟಿಯ ಒಂದು ಸತ್ಯ ಮತ್ತು ರಹಸ್ಯ ಅದರ ಸ್ಥೂಲ ಚಿಂತನೆ ಮಾಡುವ ಯೋಗ್ಯತೆಯೂ ಈಗಿನ ರಾಜಕಾರಣಿಗಳಿಗೆ ಇಲ್ಲ. ಮಣ್ಣು ಎಂದರೆ ನಿಮ್ಮ ಕಾಲಡಿ ಇರುವುದಲ್ಲ, ನಿಮ್ಮ ಪಹಣಿ ಪತ್ರದಲ್ಲಿರುವುದೂ ಅಲ್ಲ, ನಿಮ್ಮ ಸ್ವಾಮಿತ್ವ, ಅಧಿಕಾರತ್ವವೂ ಇಲ್ಲ, ನಿಮ್ಮ ಮೋಜಣಿ ಅಳತೆಗೆ ಸಿಗುವುದೂ ಇಲ್ಲ. ಅದನ್ನೆಲ್ಲಾ ಮೀರಿದ ಒಂದು ವಿಶಿಷ್ಟ ಶಕ್ತಿ, ಒಂದು ವಿಶಿಷ್ಟ ರೂಪ, ಒಂದು ವಿಶೇಷ ಪ್ರತಿಮಾ, ಒಂದು ವಿಶೇಷ ಭಾವ. ಅದರ ಮೂರ್ತ ಸ್ವರೂಪ ಅರ್ಥಮಾಡಿಕೊಳ್ಳಲಾಗದವ ವಿಜ್ಞಾನಿಯಲ್ಲ. ತಂತ್ರಜ್ಞಾನಿಯಲ್ಲ. ಮಣ್ಣಿಗೆ ಅದರದ್ದೇ ಆದ ಜೀವ ಸಂಕುಲ ಬೆಳೆಸುವ ವಿಶೇಷ ಗುಣವಿದೆ. ಬುದ್ಧಿಮತ್ತೆ, ಶಾಂತಿ, ದಯೆ, ಕರುಣೆ ಬೆಳೆಸುವ ಶಕ್ತಿ ಇದೆ. ಹಾಗೇ ಕೆಲ ಮಣ್ಣಿಗೆ ದುಷ್ಟತನ ಬೆಳೆಸುವ ಗುಣವೂ ಇದೆ. ಮಣ್ಣಿನಲ್ಲಿ ಒಟ್ಟು ವಿಶಿಷ್ಟ ಗುಣ ಹೊಂದಿದ ೧೭ ಪ್ರಭೇದವಿದೆ. 

* ವರ್ಣಾತ್ಮಕವಾಗಿ ಪಂಚ (೫)      
* ಗುಣಾತ್ಮಕವಾಗಿ ಷಟ್ (೬)        
* ಸಹನಾತ್ಮಕವಾಗಿ ಪಂಚ (೫)     
* ಮತ್ತೊಂದು (೧)                   
______________________________
= ೫+೬+೫+೧ = ೧೭ಪ್ರಭೇದಗಳು. 
______________________________

ಅವುಗಳಲ್ಲಿ ಆಯಾಯ ಮಣ್ಣಿನ ಗುಣ ಆಧರಿಸಿ ಧಾನ್ಯಾದಿಗಳೂ ಹಾಗೂ ಜೀವಸಂಕುಲ ಬೆಳೆಯಬೇಕು. ಅಲ್ಲಿ ಬೀಸುವ ಗಾಳಿ, ಹರಿಯುವ ನೀರು ಇವೆರಡೂ ಅದನ್ನು ಸುಸ್ಥಿತಿಯಲ್ಲಿಡುತ್ತದೆ. ಅಲ್ಲಿ ಬದಲಾವಣೆ ಸಾಧುವಲ್ಲ. ಮಾಡಿದರೆ ಅನರ್ಥಕಾರಿ. ಹಾಗೇ ಸ್ವಾಭಾವಿಕವಾಗಿ ಆ ಪ್ರದೇಶವನ್ನು ತೋಯಿಸಿ ನೆನೆಸಿ ಹದ ಮಾಡುವ ಶಕ್ತಿ ಅಲ್ಲಿ ಹರಿವ ನೀರಿಗಿದೆ. ಅದೂ ಕೂಡ ಅಲ್ಲಿನ ಸ್ವಾಭಾವಿಕ ಪ್ರಕೃತಿದತ್ತ ವ್ಯವಸ್ಥೆ. ಒಟ್ಟಾರೆ ಸಹ್ಯಾದ್ರಿಯಿಂದ ಪಶ್ಚಿಮಕ್ಕೆ ಹರಿಯುವ ನೀರನ್ನು ತಡೆದು ಅದನ್ನು ಪೂರ್ವವಾಹಿನಿಯಾಗಿ ಹರಿಸುವ ಸಾಹಸ ಖಂಡಿತಾ ಅಪಾಯಕಾರಿ.

೩) ಹರಿವಿನ ಪಾತ್ರ ಲಕ್ಷಣ:- ಈ ಚಿಕ್ಕಮಗಳೂರು ಜಿಲ್ಲೆಯಿಂದ ನೀರನ್ನು ಸಮತಲಸೂತ್ರದಂತೆ ಸ್ವಾಭಾವಿಕ ಕಣಿವೆ ಮೂಲಕ ಸುತ್ತಿ ಸುತ್ತಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಆಗ ಅದರ ಹರಿವಿನ ಪಾತ್ರ, ಹೀರಿಕೊಳ್ಳುವ ಶಕ್ತಿ ಅಲ್ಲಿನ ಮಣ್ಣಿನ ಕ್ಷಾರಾದಿ ಗುಣ ಆಧರಿಸಿ ನೀರು ಅಲ್ಲಿಯವರೆಗೆ ಹರಿದೀತೆ? ಹರಿದರೂ ಕುಡಿಯಲು ಉತ್ತಮ ಪಾನಯೋಗ್ಯ ನೀರಾದೀತೆ? ಇವೆಲ್ಲಾ ಚಿಂತನೆ ಮಾಡಬೇಕಿದೆ. ಬರಿದೆ ಯೋಜನೆ ಮಾಡುವುದರಿಂದ ಅರ್ಥವಿಲ್ಲ.

ಇವೆಲ್ಲದ ಆಧಾರದಲ್ಲಿ ಈ ಎತ್ತಿನಹೊಳೆ ಮತ್ತು ನೇತ್ರಾವತಿ ತಿರುವು ಯೋಜನೆ ಆಗಬೇಕು. ಈ ಚಿಂತನೆ ಇಲ್ಲದೇನೇ ಸಾಧಕ, ಬಾಧಕ, ಅರಿಯದೇ ಇಂತಹ ಯೋಜನೆಗಳು ಸಹ್ಯಾದ್ರಿಯ ನಾಶಕ್ಕೆ ಕಾರಣವಾಗಬಹುದು. ಹಾಗೂ ನ್ಯಾಯಿಕ, ಸದ್ಗುಣಿ, ಸಮರ್ಥ, ಸಜ್ಜನ ಜನಾಂಗವಾಗಿರುವ ನೇತ್ರಾವತಿ ಪಾತ್ರದ ಜನರಲ್ಲಿ ದುರ್ಬುದ್ಧಿ ಮೂಡಬಹುದು. ಕುಡಿಯುವ ನೀರು ತಿನ್ನುವ ಅನ್ನ ಮಾನವನಿಗೆ ಸಂಸ್ಕೃತಿ ಕಲಿಸುತ್ತದೆ. ಇದು ಪೂರ್ವೋದಾಹರಣೆ.

ಇನ್ನು ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಬೇಡವೆ? ಅವರು ನೀರಿಲ್ಲದೆ ಸಾಯಬೇಕೆ? ಎಂಬ ಅನುಕಂಪಾಧಾರಿತ ಪ್ರಶ್ನೆ ಮುಂದಿಡುತ್ತಾರೆ; ರಾಜಕಾರಣಿಗಳು. ಅದಕ್ಕೆ ಇತರೆ ಜಲಮೂಲ ಅರಸಿ ಪ್ರಕೃತಿಗೆ ಬಾಧಕವಿಲ್ಲದ ರೀತಿಯಲ್ಲಿ ಯೋಜನೆ ಸಾಧ್ಯವಿಲ್ಲವೆ? ಖಂಡಿತಾ ಇದೆ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದೆ, ನೀರು ಸಿಗುತ್ತಿಲ್ಲ ಎಂಬ ಭೂವಿಜ್ಞಾನಿಗಳ ವಾದ. ಆದರೆ ಕೋಲಾರ ಜಿಲ್ಲೆಯಲ್ಲಿ ಈಗಲೂ ವಿಪುಲ ನೀರಿನ ಸಂಗ್ರಹವಿದೆ. ತನ್ನಂತಾನೇ ಜಿನುಗು ನೀರಿನ ಒರತೆ ಇದೆ. ಅದರ ಮೂಲದಲ್ಲಿ ಅಗಾಧ ನೀರಿನ ಸಂಗ್ರಹವಿದೆ; ಖಾಲಿಯಾಗದ್ದು. ಕಾರಣ ಅಂತರ್ಜಲ ಸಂಪರ್ಕ ಭೂಗತವಾಗಿ ಗಜಪಥದಲ್ಲಿ ಎಲ್ಲಾ ಕಡೆ ಸಂಪರ್ಕ ಹೊಂದಿರುತ್ತದೆ. ಮೇಲೆ ಹರಿವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಲರಾಶಿ ಇದೆ. ಅದನ್ನು ಒದಗಿಸುವ ಯೋಜನೆ ರೂಪಿಸಿದರೆ ಎಂದೆಂದಿಗೂ ಬತ್ತದ ನೀರಿನ ಮೂಲ ಕೋಲಾರದ ಜನರಿಗೆ ಪ್ರಾಪ್ತವಾಗುತ್ತದೆ. ಅದನ್ನು ಪಡೆಯುವತ್ತ ಸಂಶೋಧನೆಯಾಗಲಿ ನೀರು ಖಂಡಿತಾ ದೊರೆಯುತ್ತದೆ. ಶಾಶ್ವತ ನೀರು ಒದಗುತ್ತದೆ. ನಿಖರವಾಗಿ ತಿಳಿದಿಲ್ಲ, ಪೇಪರ್ ಸುದ್ದಿ ಎಲ್ಲೋ ಓದಿದ ನೆನಪು ೨೮ ಸಾವಿರ ಕೋಟಿ ವೆಚ್ಚದ್ದು ಈ ಎತ್ತಿನ ಹೊಳೆ ಯೋಜನೆ ಎಂದು. ಆದರೆ ಅಲ್ಲಿಯೇ ನೀರು ಒದಗಿಸುವ ಅಥವಾ ಇತರೆ ಯೋಜನೆ ರೂಪದಲ್ಲಿ ಆ ಹಣದಲ್ಲಿ ಹತ್ತನೇ ಒಂದಂಶ ಹಣ ವೆಚ್ಚ ಮಾಡಿದರೂ ಉತ್ತಮ ನೀರಿನ ಸೌಲಭ್ಯ ಒದಗಿಸಬಹುದು. ಹಾಗಾಗಿ ಸಂಶೋಧಕರಿಗೆ ಸ್ವಾತಂತ್ರ್ಯ ಕೊಟ್ಟು ಆ ಮುಖದಲ್ಲಿ ಸಂಶೋಧನೆಯಾಗುವತ್ತ ಚಿಂತನೆ ನಡೆದರೆ ಉಪಯುಕ್ತವೆಂದು ತಿಳಿಸುತ್ತಾ ದೇಶ ಸಂಸ್ಕೃತಿ ಉಳಿಸುವತ್ತ ನಮ್ಮ ಸರಕಾರ ಗಮನ ಹರಿಸಲಿ ಎಂದು ಪ್ರಾರ್ಥಿಸಿ ಈ ಲೇಖನ ಮುಗಿಸುತ್ತಿದ್ದೇನೆ.

ಇಂತು
ಕೆ. ಎಸ್. ನಿತ್ಯಾನಂದ
ವೇದ ವಿಜ್ಞಾನ ಮಂದಿರ, 
ಚಿಕ್ಕಮಗಳೂರು.

2 comments:

  1. ಅತ್ಯುತ್ತಮ ಲೇಖನ. ಪ್ರಕೃತಿಗೆ ವಿರೋಧವಾದುದನ್ನು ನಾವು ವಿರೋಧಿಸಬೇಕು. ಇಲ್ಲದಿದ್ದರೆ ಪ್ರಕೃತಿಯೇ ಆ ಕಾರ್ಯವನ್ನು ವಿರೋಧಿಸಬೇಕಾಗಿ ಬರಬಹುದು.

    ReplyDelete