Friday, 20 November 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೮

ದ್ರೋಣನಾರು? ಪಾರ್ಥನಾರು? ಕೃಷ್ಣನಾರು? ಏನಿದು ಪಾಪಹರ ಕಾವ್ಯ? ಚಿಂತಿಸಿ
ವೇದದಿಂದ ಹುಟ್ಟಿದ ನಾಥ ಸಂಪ್ರದಾಯದ ಇಪ್ಪತ್ನಾಲ್ಕು ಜನ ತೀರ್ಥಂಕರರಲ್ಲಿ ಋಷಭದೇವನು (ಈಶ್ವರನೇ) ಮೊದಲನೇ ತೀರ್ಥಂಕರನೆಂದು ವಿವರಿಸುವುದರೊಂದಿಗೆ ೧೮ನೇ ಅಧ್ಯಾಯವು ಪ್ರಾರಂಭವಾಗಿದೆ. ದ್ರೋಣಾಚಾರ್ಯರಿಂದ ಶರವಿಧ್ಯೆ ಕಲಿತ ಪಾರ್ಥನು ಇಂದ್ರಕೀಲ ಪರ್ವತವನ್ನು ಹತ್ತುವಲ್ಲಿ ಸ್ತುತಿಸಿದ ಈ ಕಾವ್ಯವು ಪಾಪಹರವೆಂದು ಸೂಚಿಸಿದ್ದಾನೆ. ದಾಶರಥಿಗೂ; ಕೃಷ್ಣನಿಗೂ ದೊರೆತಿದ್ದು ಇದೇ ಜೀವನ ರಹಸ್ಯ ಎಂಬುದನ್ನು ತಿಳಿಸಿದ್ದಾನೆ.

ಅಕ್ಷರ ಗಂಗೆಯಲ್ಲಿ ಶ್ರೀ+ನಿವಾಸ
 ಗೀತಾಂಕದ ಅನುಭವವಾದವನು ತಾನೇ "'ಶ್ರೀನಿವಾಸ'"ನಾಗುತ್ತಾನೆ. ಅಕ್ಷರಗಂಗೆಯಲ್ಲಿ ಮಿಂದವನು ನನ್ನನ್ನೇ ಹೊಂದತ್ತಾನೆಂಬ ಭಗವದ್ವಾಣಿಯನ್ನು ಉಲ್ಲೇಖಿಸಿದ್ದಾನೆ. ಮಹಾಪಾಪಕ್ಷಯ ಮಾಡುವ ಈ ಕಥೆಯು, ಏತರಬಾಳೆಂದು ಹೇಳುವ ಈ ಕಾವ್ಯವು ಪೂರ್ವಪಕ್ಷವೆಂದು ತಿಳಿಸಿದ್ದಾನೆ. ಗಾಳಿಯಲ್ಲಿ ತೇಲುವ ಹಡಗಿಗೆ ನಿರ್ದಿಷ್ಟವಾದ ಗುರಿ ಇರುವುದಿಲ್ಲ. ಇದೇ ಕ್ರಮದಲ್ಲಿ ವಿಷಯಾಸಕ್ತಿ ತುಂಬಿದ ಮನಸ್ಸಿಗೆ ಕೇವಲ ಕಹಿ ಅಂಕಿಗಳಷ್ಟೇ ಸಿಗುವು ಎಂಬ ಎಚ್ಚರಿಕೆ ನೀಡಿದ್ದಾನೆ. ಆತ್ಮದ ಮೊರೆಹೊಕ್ಕು; ತಾನೇ ಪರಮಾತ್ಮವೆಂದರಿತು, ಎಲ್ಲವೂ ತಾನೇ ಎಂಬ ಭಾವನೆಯಿಂದ ವೆರಾಗ್ಯ ಸಾಧಿಸುವುದೇ ಅಂತರ್ದರ್ಶನವೆಂದು ಸೂಚಿಸಿದ್ದಾನೆ.

ಆಂತರಿಕ ಕ್ಷತಗಳನ್ನು ಗೆಲ್ಲುವುದೇ ಕ್ಷಾತ್ರ ತೇಜಸ್ಸು
ಸಾವಿರಮಾತುಗಳನ್ನಾಡುವುದಕ್ಕಿಂತಲೂ ಸಾವಿನ ಧರ್ಮವನ್ನರಿತುಫಲಾಪೇಕ್ಷೆಯಿಲ್ಲದ ನಿಷ್ಕಾಮಕರ್ಮಾವಲಂಬಿಯಾಗಿರುವುದರ ಮಹತ್ವವನ್ನು ವಿವರಿಸಿದ್ದಾನೆ. ನಿಷ್ಕಾಮಕರ್ಮಸಿದ್ಧಿಯನ್ನು ಸೂಚಿಸಿದ್ದಾನೆ. ಜೀವನದ ಹರ್ಷವಿಷಾದಗಳನ್ನು ನನಗೊಪ್ಪಿಸಿ, ಕುರುವಂಶದ ಅನ್ಯಾಯಗಳನ್ನು ಅರಿತು ಅಧ್ಯಾತ್ಮದೊ೦ದಿಗೆ ಕ್ಷಾತ್ರ ತೇಜಸ್ಸನ್ನು ನಿರ್ಮಮಕಾರ ಬುದ್ಧಿಯಿಂದ ಬೆರೆಸೆಂದು ಕೃಷ್ಣನು ಪಾರ್ಥನಿಗೆ ತಿಳಿಸಿದ್ದನ್ನು ಸೂಚಿಸಿದ್ದಾನೆ. ಯುದ್ಧಾಗಮವನ್ನು ಹೇಳುವ ಗಣಿತಾಂಕವನ್ನು ತಿಳಿಸಿದ್ದಾನೆ. 

ಬಾಯಿಯಲ್ಲಿದೆ ಬ್ರಹ್ಮಾಂಡ
ಕೃಷ್ಣನು ತನ್ನ ಬಾಯಿಯಲ್ಲೇ ತಾಯಿಗೆ ಬ್ರಹ್ಮಾಂಡವನ್ನು ತೋರಿಸಿದ ರೀತಿಯಲ್ಲಿ ಈ ಕಾವ್ಯವು ಜಗತ್ತಿನ ಸಕಲವನ್ನೂ ಒಳಗೊಂಡಿರುವುದೆಂದು ಹೇಳಿದ್ದಾನೆ. ಅರಿಷ್ಟನೇಮಿಯ ವಿಜಯದೊಳಗೆ ಬರುವ ವರ್ಣನೆಯ ಭಾಗವು ಜಗತ್ತಿಗೆ ಅನಾದಿ ಕಾಲದ ಉಸಿರು ಎಂದು ಸೂಚಿಸಿದ್ದಾನೆ. ಮೀಮಾಂಸೆಯು ದ್ವೈತವೆಂದೂ; ಅನೇಕಾಂತವು (ಎಲ್ಲದರ ಅಂತವು ಒಂದೇ ಎಂಬ) ಅದ್ವೆತವೆಂದೂ, ನೇಮಿಯು ಸಮನ್ವಯಗೊಳಿಸಿರುವ ಕಾವ್ಯ ಇದೆಂದೂ, ಭಗವದ್ಗೀತೆಯನ್ನೂ; ಭಗವದ್ಗೀತೆಯನ್ನು ಒಳಗೊಂಡ ಸಿರಿಭೂವಲಯವನ್ನೂ ಪ್ರಶಂಸಿಸಿದ್ದಾನೆ.

ಸೂಕ್ಷ್ಮಾತಿಸೂಕ್ಷ್ಮ ಗಣಿತ
  ಜೀವವಿಜ್ಞಾನ, ಶರೀರ ದ್ರವ್ಯಗಳು ಹಾಗೂ ಪರಮಾಣುಗಳ ಸೇನೆಯ ಅಂಕಿಗಳನ್ನು ಕಾಣುವುದು ಹೇಗೆಂದು ಹೇಳುತ್ತಾನೆ. ಸಕಲ ವಸ್ತು ವಿಷಯಗಳೂ ಅಂಕಗಣಿತಾತ್ಮಕವಾದುವೆಂದು, ಈ ಅಂಕಗಳು ಬಂದದ್ದೆಲ್ಲಿಂದ; ಅವುಗಳ ಸ್ವರೂಪವೇನು? ಜನನ, ಜೀವನ, ಮರಣಗಳಿಗೆ ಸೇರಿದ ಅಂಕಿಗಳಾವುವು? ಹುಟ್ಟುಸಾವುಗಳಿಲ್ಲದ ಮೋಕ್ಷ ಪದವಿಯ ಅಂಕಿಗಳನ್ನು ಕಾಣುವುದು ಹೇಗೆಮುಂತಾದ  ಹಲವಾರು ಪ್ರಶ್ನೆಗಳ ಮೂಲಕ ಅಂಕವಿಜ್ಞಾನವನ್ನೂ; ಮುಂದೆ ಇದೇ ಕ್ರಮದ ಹಲವಾರು ಪ್ರಶ್ನೆಗಳ ಮೂಲಕ ಅಣುವಿಜ್ಞಾನದ ವಿಚಾರವನ್ನೂ ಬಹಳ ದೀರ್ಘವಾಗಿ ವಿವೇಚಿಸಿ ವಿವರಿಸಿದ್ದಾನೆ. 

ಒಂದು ಅಕ್ಕಿ ಕಾಳಿನಲ್ಲಿ ಏನೇನಿದೆ ಗಮನಿಸಿರಿ.
ಒಂದು ಅನ್ನದ ಕಾಳಿನಿಂದ ಬರುವ ಶಕ್ತಿಯ ಪ್ರಮಾಣವನ್ನಳೆಯುವುದು ಹೇಗೆ? ಭತ್ತವನ್ನು ಕುಟ್ಟಿ ಅಕ್ಕಿ ಮಾಡಿದಾಗ ಉಂಟಾಗುವ ಹೊಟ್ಟು, ತೌಡು, ಅಕ್ಕಿ, ನುಚ್ಚಕ್ಕಿಯ ಎಣಿಕೆ, ತೌಡನ್ನು ಹಸುವಿಗೆ ಉಣಿಸಿದಾಗ, ದೊರೆಯುವ ಅಕ್ಕಿಯ ಲೆಕ್ಕ ಇತ್ಯಾದಿಗಳನ್ನು ಕಂಡುಹಿಡಿಯುವ ಕ್ರಮ ಗಣನೆಯನ್ನು ತಿಳಿಯಬಹುದೆಂದು ಸೂಚಿಸಿದ್ದಾನೆ. ಅಣುವನ್ನು ಪರಮಾಣುವನ್ನಾಗಿಸಿಕೊಳ್ಳುವ ವಿಧಾನ, ಅಣುವಿನ ಕೊನೆ ಆದಿಗಳನ್ನು ತಿಳಿಸುವ ಗಣಿತದ ಕ್ರಮವನ್ನು ಸೂಚಿಸಿದ್ದಾನೆ. ಈ ಅಣುವಿಜ್ಞಾನದ ವಿಚಾರವು ಮುಂದುವರೆದಿರುವಂತೆಯೇ ಹದಿನೆಂಟನೆಯ ಅಧ್ಯಾಯವು  ಮುಕ್ತಾಯವಾಗಿದೆ. 
*    *     *
                                                                                               - ಸುಧಾರ್ಥಿ, ಹಾಸನ

No comments:

Post a comment