Thursday, 26 November 2015

ಸಾರ್ವತ್ರಿಕ ಅಗ್ನಿಮುಖ-ವೈಶ್ವದೇವ

ಪ್ರೀತಿಯ ಭಾರತೀಯರೇ,
ನೀವೆಲ್ಲಾ ಈ ಆಂದೋಲನದಲ್ಲಿ ಕೈಗೂಡಿಸಿ ಭಾರತ ಕಟ್ಟುವ ಯೋಜನೆಯಲ್ಲಿ ಸಹಕರಿಸಿ. ಅದಕ್ಕಾಗಿ ವಿವರಣೆ ಸಹಿತ ಈ ಲೇಖನ ಪ್ರಕಟಣೆಪೂರ್ವಕ ನಿಮ್ಮನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಿರೆಂದು ಪ್ರಾರ್ಥಿಸುತ್ತೇನೆ. ಆದರೆ ಇಲ್ಲಿ ಪ್ರಸ್ತುತ ಪಡಿಸುವ ವಿಚಾರ ಬಹಳ ಹಿಂದೆ ನೀವೆಲ್ಲಾ ಮನೆ ಮನೆಗಳಲ್ಲಿ ಆಚರಿಸುವ ಒಂದು ಸರಳ ವಿಧಾನವಾಗಿರುತ್ತದೆ.


ಈ ಹಿನ್ನೆಲೆಯಲ್ಲಿ ಮೊದಲಾಗಿ ಅಗ್ನಿಮುಖವೆಂದರೇನು? ಮೊದಲು ತಿಳಿಯೋಣ. ಸಕಲ ಜೀವರಾಶಿಗಳು, ಚರಾಚರಗಳ ಅಸಿತ್ತ್ವವಿರುವುದು ಅಗ್ನಿಯಲ್ಲಿ. ಎಲ್ಲಿ ಅಗ್ನಿ ನಷ್ಟವಾಯ್ತೋ ಅಲ್ಲಿ ಪ್ರಾಣವಿಲ್ಲ. ಹಾಗಿದ್ದರೆ ಈ ಅಗ್ನಿಮುಖವೆಂದರೇನೆಂದು ಸರ್ವರೂ ತಿಳಿದಿರಬೇಕಲ್ಲವೆಪ್ರತಿಜೀವಿಯೂ ಅಗ್ನಿಯ ಕೃಪೆಯಿಂದ ಬದುಕಿರುವುದೆಂದಾದ ಮೇಲೆ ಅಗ್ನಿಯ ಬಗ್ಗೆ ತಿಳಿದಿರಲೇಬೇಕು. ಹಾಗೂ ಮಾನವನಾಗಿ ತಾನು ಸಕಲ ಜೀವಿಗಳ ಕಲ್ಯಾಣ ಉದ್ದೇಶದಿಂದ ತನ್ನ ಕರ್ತವ್ಯ ಮಾಡಲೇಬೇಕಲ್ಲವೆ? ಅದರ ಬಗ್ಗೆ ತಿಳಿಯುವ ಪ್ರಯತ್ನದಲ್ಲಿ ಈ ಹೆಜ್ಜೆ ಇರುತ್ತದೆ. ಇಲ್ಲಿ ಸಹಜ ಜೀವಶಕ್ತಿಯನ್ನು ಕುರಿತು ಆರಾಧಿಸುವ ಒಂದು ವಿಶಿಷ್ಟಪದ್ಧತಿಯೇ ಅಗ್ನಿಮುಖವೆನ್ನಿಸಿಕೊಳ್ಳುತ್ತದೆ. ಅದರ ಬಗ್ಗೆ ತಿಳಿಯೋಣ. 

ಆ ಆ ಆ ಗ್ನಾಮಿತಿ ಅಗ್ನಿಃ (ಸಾಮ)| 
ಆಗನ್ ನಾ ಆಯತನಂ 
ಆಗಾತ್ ಕೃತ ವಿಶೇಷಂ”| 
ಆಗಮತ್ಯೇತಿ ನ್ಯಾಲೀಬಿಶಸ್ಯಂ | ಇತಿ ತ್ರಯಃ (ಸಾಮ).

ಈ ನೆಲೆಯಲ್ಲಿ ಜೀವಿಗಳಲ್ಲಿ ಜೀವಶಕ್ತಿಯೂ, ಪ್ರಾಣಶಕ್ತಿಯೂ ಆಗಿ ನೆಲೆಸಿ ಚಲನಶೀಲಗೊಳಿಸುವ ಶಕ್ತಿಯೇ ಅಗ್ನಿ ಅದರ ನಿರಸನವೇ ಜಡತ್ವ ಪ್ರಥ್. ಈ ಪ್ರಥೆಯು ಅಗ್ನಿ ಸಂಯೋಗದಿಂದ ಜೀವ+ಪ್ರಾಣಯುಕ್ತವಾಗಿ ತೊಡಗಿಕೊಳ್ಳುವಿಕೆಯೇ ಆತ್ಮನ ಪರಿಕರಾವಲಂಬನವೆಂಬ ಜೀವನಯಾತ್ರೆಯ ಕಾಲ. ಇದನ್ನೇ ಜೀವನವೆಂದು ಗುರುತಿಸಿದರು. ಇದರಲ್ಲಿ ಅಗ್ನಿಯ ಪಾತ್ರ ಅತೀ ಮಹತ್ವ. ಅದನ್ನು ಈ ರೀತಿಯಲ್ಲಿ ವ್ಯಾವಹಾರಿಕವಾಗಿಯೂ ತಿಳಿಯಬಹುದು. ಜೀವಶಕ್ತಿಯೆಂದರೆ ದೇಹ ಬಿಸಿಯಾಗಿರುವುದು. ಅದು ತಣ್ಣಗಾದರೆ ಮೃತ. ದೇಹ ವ್ಯವಹಾರ ಕರ್ಮ. ಅಲ್ಲಿಯೂ ದೇಹದ ಶಾಖವೇ ವ್ಯವಹರಿಸುತ್ತದೆ. ಶಾಖ ಕ್ಷೀಣವಾಗುತ್ತಾ ಬಂದರೆ ನಿಶ್ಶ್ಯಕ್ತಿ, ನಿರ್ಬಲ, ಅಸಹಾಯವಾಗುತ್ತದೆ. ಹಾಗೇ ಆ ಶಕ್ತಿಗಾಗಿ ತಿನ್ನುವ ಆಹಾರವೇ ಇಂಧನ. ಅದರ ಜೀರ್ಣ ಕ್ರಿಯೆಯೇ ಅಗ್ನಿ ಉದ್ದೀಪನ. ತನ್ಮೂಲಕ ಶಕ್ತಿ ಸಂವಹನ. ಪುನಃ ತೊಡಗುವಿಕೆ. ಅದನ್ನೇ ಕೆಲಸ, ಕಾರ್ಯ, ಜೀವನ ಸಂಚಯನವೆನ್ನುತ್ತಾರೆ. ಈ ಮೂರು ರೀತಿಯಲ್ಲಿ ವ್ಯಾವಹಾರಿಕಾಗ್ನಿಯ ತೊಡಗುವಿಕೆಯೇ ಪ್ರಪಂಚ ಮರ್ತ್ಯಾಗ್ನಿ

ಹಾಗೇ ಸ್ವರ್ಗಾಗ್ನಿ, ನಾವು ಮಾಡುವ ಎಲ್ಲಾ ಕಾರ್ಯವೂ ಅರಿತು ಮಾಡಬೇಕು. ಅದು ಧರ್ಮ, ನ್ಯಾಯ ಬದ್ಧವಾಗಿದ್ದು ಸತ್ಯಕಾರ್ಯವಾಗಿರಬೇಕು. ಪರಿಣಾಮವಾಗಿ ಸತ್ಫಲದಾಯಕವಾಗಿರಬೇಕು, ಪುಣ್ಯದಾಯಕವೂ ಆಗಿರಬೇಕು. ಇದು ಒಂದು ವಿಧಾನ. ಹಾಗೇ ಪ್ರಕೃತಿ=ದೇಹಸುತ್ತಿನ ಗಿಡಮರ, ಕಲ್ಲು ಮುಳ್ಳು, ಇತರೆ ಜೀವಜಾಲ, ಆಕಾಶ, ಮೋಡ, ಸೂರ್ಯಾದಿ ಗ್ರಹಗಳೂ, ಹಗಲು+ರಾತ್ರಿ ಎಲ್ಲವೂ ಪ್ರಕೃತಿಯ ಅಂಶಗಳೇ. ಅದರ ನಿರಂತರತೆಯೂ ಒಂದು ಶಾಖ ನಿಯಮದಂತೆಯೇ ಅವಲಂಬಿಸಿರುತ್ತದೆ. ಅದನ್ನು ನಿತ್ಯ ನಿರಂತರ ಪ್ರಚೋದಿಸುತ್ತಾ ಜೈವಿಕ ವಿಕಾಸ ಹೊಂದಬೇಕು. ಇಲ್ಲವಾದಲ್ಲಿ ಜೀವ ವಿಕಾಸ ಸಾಧ್ಯವಿಲ್ಲ. ಮೂರನೆಯದಾಗಿ ಈ ಜೀವವಿಕಾಸ ಕ್ರಿಯೆ ಜೀವನ ಕ್ರಿಯೆಯ ಗುರಿ ಜೀವನ್ಮುಕ್ತಿ ಸಾಧನೆ. ಇದೇ ಸ್ವರ್ಗಾಗ್ನಿ. ಮರ್ತ್ಯಾಗ್ನಿಯು ಸ್ವರ್ಗಾಗ್ನಿಯಲ್ಲಿ ಸಂಯೋಗಗೊಂಡು ನಿರತವಾದರೆ ಜೀವಸೃಷ್ಟಿ ನಿತ್ಯ ನಿರಂತರ. ಅದನ್ನು ಸಾಧಿಸುವ ಕ್ರಿಯೆಯೇ ಅಗ್ನಿಮುಖವೆನ್ನಿಸಿದೆ. ಅದು ಹೇಗೆ? ಇಲ್ಲಿದೆ ಸರಳ ಉಪಾಯ. ಅದನ್ನು ಅರಿತು ನಡೆಸಿದಲ್ಲಿ ಈ ಲೋಕದ ಜೀವ ವಿಕಾಸ ಸಾಧಿಸಿದಂತೆಯೇ. ಬಿಟ್ಟರೆ ಜೈವಿಕ ಪ್ರಭೇದ ನಾಶ ಹೊಂದಿದಂತೆಯೇ. ಹಾಗಾಗಿ ಈ ಅಗ್ನಿಮುಖವೆಂಬ ಒಂದು ಸಾರ್ವತ್ರಿಕ ಕಾರ್ಯವನ್ನು ಎಲ್ಲರೂ ಶ್ರದ್ಧಾಭಕ್ತಿಯಿಂದ ನಿರಂತರ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುತ್ತೇವೆ. ನಮ್ಮೊಂದಿಗೆ ನಮ್ಮ ಲೋಕ ಉಳಿಯಬೇಕಿದ್ದಲ್ಲಿ ನಾವು ಕಾರ್ಯಪ್ರವೃತ್ತರಾಗಲೇ ಬೇಕಾದ ಅನಿವಾರ್ಯತೆ ಇರುತ್ತದೆ.

ಹಿಂದೆಲ್ಲಾ ಮನೆ ಮನೆಯಲ್ಲೂ ಅಗ್ನಿ ಉಪಾಸನೆ ನಡೆಯುತ್ತಿತ್ತು. ಮದುವೆಯಾದ ಪ್ರತೀ ಗೃಹಸ್ಥನು ಗೃಹಿಣಿಯ ದ್ವಾರಾ ಅಗ್ನಿ ಪಡೆದು ನಿತ್ಯೌಪಾಸನೆ ಆರಂಭಿಸುತ್ತಿದ್ದ. ಅದು ಗೃಹಸ್ಥನ ಒಂದು ಮುಖ್ಯ ಕರ್ತವ್ಯವೆಂಬಂತೆ ಚಾಲ್ತಿಯಲ್ಲಿತ್ತು. ಅಲ್ಲದೆ ಹಲವಾರು ಯಾಗ ಯಜ್ಞಗಳೂ ನಡೆಯುತ್ತಿದ್ದವು. ಅದರಲ್ಲಿ ಯಾವುದೋ ಒಂದು ಗಾರ್ಹಪತ್ಯ ಅಗ್ನಿಯ ಪ್ರಭೇದವೇ ಕಾರ್ಯ ಪ್ರವೃತ್ತವಾಗುವುದರಿಂದ ಜೈವಿಕ ವಿಕಾಸಕ್ಕೆ ಕೊರತೆ ಇರಲಿಲ್ಲ. ಆದರೆ ಈಗ ಔಪಾಸನೆ ನಡೆಯುತ್ತಿಲ್ಲ ಹಾಗೂ ಮಹಿಳೆಯರು ನಿತ್ಯ ಮನೆಯಲ್ಲಿ ಅಡುಗೆ ಮಾಡುತ್ತಾ ಅಗ್ನಿಯಲ್ಲಿ ಒಂದು ವಿಶಿಷ್ಟ ಉಪಾಸನೆ ಮಾಡುತ್ತಿದ್ದರು. ಅದೂ ನಿಂತು ಹೋಗಿರುತ್ತದೆ. ಕಾರಣ ಗ್ಯಾಸ್ ಸ್ಟವ್ ನಲ್ಲಿ ಅಡುಗೆ, ಒಲೆ ಹಚ್ಚುವುದೇ ಇಲ್ಲ. ಹಾಗಾಗಿ ಅಗ್ನಿ ಉಪಾಸನೆ ಪೂರ್ಣ ನಿಂತೇ ಹೋಗಿರುತ್ತದೆ. ಇನ್ನಾದರೂ ಮಹಿಳೆಯರು ಈ ತಮ್ಮ ಕರ್ತವ್ಯವನ್ನು ಅರಿತು ತಾವು ಮಾಡಿದ ಅಡುಗೆಯಲ್ಲಿ ಒಂದು ತುತ್ತು ಅಗ್ನಿಗೆ ಹಾಕುವುದರಿಂದ ಮಾಡುವ ಅಗ್ನಿ ಉಪಾಸನೆ ಆರಂಭಿಸಿದಲ್ಲಿ ಎಷ್ಟೋ ಲೋಕಕಲ್ಯಾಣ ಮಾಡಿದಂತಾಗುತ್ತದೆ. ಹಾಗಾಗಿ ಅಗ್ನಿಯ ಸ್ವಾಭಾವಿಕ ಶಕ್ತಿ ಊರ್ಧ್ವಮುಖ. ಆದರೆ ಅದನ್ನು ಸಮ್ಮುಖಗೊಳಿಸುವ ತಂತ್ರವೇ ಅಗ್ನಿಮುಖ ಪ್ರಯೋಗ


ಅಗ್ನ ಆಯೂಂಷಿ ಪವಸ ಆಶುವೋರ್ಜಮಿಷಂ ಚ ನಃ ಆರೇ ಬಾಧಸ್ವ ದುಚ್ಛುನಾಮ್ || 

ಅಗ್ನಿ ಒಂದು ತತ್ವ. ಸ್ವಯಂ ಪ್ರಕಟವಿಲ್ಲ. ಅವಲಂಬನೆ ಬೇಕು. ಅವಲಂಬನೆಯಿಂದ ಪ್ರಕಟಗೊಳ್ಳಬೇಕಾದ ತತ್ವವಾದ ಜೀವಶಕ್ತಿಗೆ ದೇಹವೇ ಅವಲಂಬನೆಯಾಗಿರುತ್ತದೆ. ಪ್ರಕೃತಿಯ ಯಾವುದಾದರೊಂದು ಚರ ಸ್ಥಿರ, ಜಡವಸ್ತುಗಳ ಅವಲಂಬನೆ ಸಿಕ್ಕಿದಲ್ಲಿ ಕರ್ಷಣಭೂತನಾಗಿ ಪ್ರಕಟಗೊಂಡು ಪ್ರಕೃತಿಯಲ್ಲಿ ರೂಪು ಪಡೆಯುತ್ತದೆ. ಹಾಗಾಗಿ ಅಗ್ನ ಆಯೂಂಷಿ. ಪ್ರಕಟಗೊಂಡಾ ದಹ್ಯ ಇತರೆ ಆಶ್ರಿತ ವಸ್ತು, ಜೀವಿ, ಜಡಗಳನ್ನು ಪರಿವರ್ತನೆ ಮಾಡುತ್ತದೆ. ಪವಸ ವೆಂದರೆ ಇದೇ ರೂಪಾಂತರ ಮಾಡುತ್ತದೆಯೇ ವಿನಃ ನಾಶಕಾರಕವಲ್ಲ. ಇದರಿಂದಾಗಿ ಅದರ ವಿಶಿಷ್ಟಗುಣವನ್ನು ಸಪ್ರಯೋಜಕವಾಗಿ ಬಳಸುವಂತೆ ಮಾಡುವ ಕೆಲ ಉಪಾಯಗಳ ಕ್ರೋಢೀಕರಣವೇ ಆಶು, ಊರ್ಜಾ, ಆಮಿಷ, ಮೂರು ತಂತ್ರಗಳು. ಅದನ್ನೇ ಆಘಾರ, ಆಕೂತಿ, ವಷಟ್ಕಾರಗಳೆಂಬ ಪ್ರಭೇದಗಳು. ಅದರ ಪ್ರವರ್ತನೆಯಿಂದ ಅಂದರೆ ಅದರ ದಹ್ಯ ಶಕ್ತಿಯಿಂದ ಬಾಧಕವನ್ನು ಬೇರ್ಪಡಿಸಿ ಸಮ್ಮುಖಗೊಳಿಸುವ ಸೂತ್ರವೇ ಅಗ್ನಿಮುಖ ಪ್ರಯೋಗ. ಊರ್ಧ್ವಮುಖಗಾಮಿ ಶಾಖ ಶಕ್ತಿಯನ್ನು ಸಮ್ಮುಖಗೊಳಿಸಿಕೊಂಡಲ್ಲಿ ಜೈವಿಕ ಪ್ರಚೋದನಾದಿ ಹಲವು ಕಾರ್ಯಗಳನ್ನು ನಡೆಸಲು ಸಾಧ್ಯ. ಅವೆಲ್ಲಾ ತಂತ್ರೋಕ್ತ ವಿಧಿಗಳು. ಅದರ ಬಗ್ಗೆ ಪೂರ್ಣ ವಿವರಣೆ ಕೊಡಲು ಸಾಧ್ಯವಿಲ್ಲ, ಸಾಧುವಲ್ಲ. ಆದರೆ ಜನಸಾಮಾನ್ಯ ಜೀವನದಲ್ಲಿ ಅಗ್ನಿಯ ಪಾತ್ರವನ್ನು ಅರ್ಥಮಾಡಿಕೊಂಡು ಸಾಮಾನ್ಯ ಬಳಕೆಯ ಬಗ್ಗೆ ಒಂದಿಷ್ಟು ವಿವರಿಸುತ್ತಾ ಅಗ್ನಿಮುಖದ ಅಗತ್ಯವನ್ನು ತಿಳಿಸುತ್ತೇನೆ.
ಋ.ಮಂ.1, ಸೂಕ್ತ 66, ಮಂತ್ರ 1-2
ರಯಿರ್ನ ಚಿತ್ರಾ ಸೂರೋ ನ ಸಂದೃಗಾಯುರ್ನ ಪ್ರಾಣೋ ನಿತ್ಯೋ ನ ಸೂನುಃ 
ತಕ್ವಾ ನ ಭೂರ್ಣಿರ್ವನಾ ಸಿಷಕ್ತಿ ಪಯೋ ನ ಧೇನುಃ ಶುಚಿರ್ವಿಭಾವಾ || 1 ||
ದಾಧಾರಕ್ಷೇಮಮೋಕೋ ನ ರಣ್ವೋ ಯವೋ ನ ಪಕ್ವೋ ಜೇತಾ ಜನಾನಾಮ್ | 
ಋಷಿರ್ನ ಸ್ತುಭ್ವಾ ವಿಕ್ಷು ಪ್ರಶಸ್ತೋ ವಾಜೀ ನ ಪ್ರೀತೋ ವಯೋ ದಧಾತಿ || 2 ||

ದೇಹದಲ್ಲಿ ಪರಿಪೂರ್ಣ ವ್ಯಾಪಿಸಿರುವ ಅಗ್ನಿಯು ಜೀವಿಯ ಆಯುಃ ರಕ್ಷಕವಾಗಿದ್ದು ತನ್ನ ಪ್ರಯತ್ನದಲ್ಲಿ ಅಗ್ನಿ ನಿತ್ಯ ನೂತನ, ನಿರಂತರ. ಹಾಗಾಗಿ ಜೀವಿಗೆ ಭಾಸದಿಂದ ಹೊಸತು ನಿರಂತರ. ಕ್ಷಣಕ್ಷಣಕ್ಕೂ ಬದಲಾವಣೆ ಶತಸ್ಸಿದ್ಧ. ಅದನ್ನಾಧರಿಸಿದ ಅಗ್ನಿ ಸ್ವರೂಪದಂತೆ ಜೈವಿಕಾಧಾರಿತ ಜೀವನ ವ್ಯವಸ್ಥೆಯನ್ನು ಸಮ್ಮುಖಗೊಳಿಸುವುದೇ ಅಗ್ನಿಮುಖ. ತನ್ಮೂಲಕ ಅಂತಃಶುದ್ಧಿ, ದೇಹಶುದ್ಧಿ, ವಿಚಾರಶುದ್ಧಿಯೊಂದಿಗೆ ಅಗ್ನಿಯ ಮುಖೇನ ಆರೋಗ್ಯ, ಜ್ಞಾನ, ಆನಂದ ಸಂಪಾದನೆಯೊಂದಿಗೆ ಸಾಧಿಸುವ ಸಾಧನೆಯಾಗಿರುತ್ತದೆ. ಅದನ್ನು ಸಾಧಿಸಲು ಅಗ್ನಿಮುಖ ಪ್ರಯೋಗದರಿವು ಅಗತ್ಯ. ಅದು 

೧. ಆಘಾರ, 
೨ ಆಕೂತಿ, 
೩. ಲಂಫಟ್ಕಾರ, 
೪. ವಷಟ್ಕಾರ, 
೫. ವೌಷಟ್ಕಾರ, 
೬. ಹುಂಫಟ್ಕಾರ, 
೧೦. ಕ್ಷಿತಿ, 
೧೧. ಮೂರ್ಧ್ನಿ, 
೧೨. ಸಿದ್ಧ
ಎಂಬ ನವ ವಿಧ ಅಗ್ನಿ ತಂತ್ರಗಳನ್ನು ಬಳಸಿ ಸಿದ್ಧಿಸಿಕೊಳ್ಳಬಹುದು. ಆದರೆ ಅವೆಲ್ಲಕ್ಕಿಂತ ಸುಲಭಸಾಧ್ಯವಾದ ಗೃಹಿಣಿಯ ಹಸ್ತಸಿದ್ಧಿಯಿಂದ ಲಭ್ಯವಾಗುವ ವಿಶೇಷ ವಿಶಿಷ್ಟ ಅಗ್ನಿಯೇ ಪಾವಕ ಅಥವಾ ಪಾಕಶಾಸನವೆಂಬ ಅಗ್ನಿ. ಅದರ ವಿಭಜಿತ ರೂಪವೇ ಔಪಾಸನಾಗ್ನಿ. ಅದನ್ನೇ ಗಾರ್ಹಪತ್ಯವೆಂದರು. ಹಾಗಾಗಿ ಗೃಹಿಣಿಯ ದೃಕ್ ಶಕ್ತಿಯಿಂದ ಉತ್ಪನ್ನವಾಗುವ ಪಾವಕಾಗ್ನಿ ಮುಖದ ಬಗ್ಗೆ ಬರೆಯುತ್ತೇನೆ.ಮೂಲಪ್ರಕೃತಿರೂಪಳಾದ ಪ್ರತೀ ಹೆಣ್ಣು ತನ್ನ ಸ್ವಂತಶಕ್ತಿಯಿಂದ ಪ್ರಕೃತಿಮೂಲ ಅನುಸಂಧಾನ ಮಾಡಬಲ್ಲಳು. ಅದು ಸಹಜ ಶಕ್ತಿ. ಆಕೆ ಅನುಸೂಯೆ. ಅಲ್ಲಿ ದಿತ್ಯಾದಿ ಪ್ರಭೇದಗಳು ನಿರಸನಗೊಂಡಲ್ಲಿ ಪೂರ್ಣಾಗ್ನಿ ಶಕ್ತಿರೂಪದಲ್ಲಿ ಪ್ರಕಟಗೊಳ್ಳಬಲ್ಲಳು. ಅದು ಸಹಜ ಸ್ವಭಾವ. ಅಸೂಯೆ ಅದಕ್ಕೆ ಮಾರಕ. ಅದು ಹೆಣ್ಣಿನ ಸ್ವಭಾವವೂ ಹೌದು. ಆದರೆ ಅಸೂಯೆ ಪೂರ್ಣ ತ್ಯಜಿಸಿದರೆ ಆಕೆಯೇ ಅನಸೂಯೆ. ಅನುಸೂಯೆ ಯಾದಲ್ಲಿ ಪೂರ್ಣಶಕ್ತಿ ಸ್ವರೂಪಿಣಿ ಹೆಣ್ಣು. ಅವಳ ದೃಕ್ ಶಕ್ತಿ ಅಗಾಧ ಅದ್ಭುತ. ವಿವಾಹಕಾಲದಲ್ಲಿ ಅವಳ ದೃಷ್ಟಿಯ ಘೋರತ್ವವನ್ನು ನಿವಾರಿಸಿ ಅಘೋರಚಕ್ಷು ವಾಗಿ ಪರಿವರ್ತಿಸಿ ದೃಕ್ ನಿಮ್ಮೀಲನ ಮಾಡುವ ಒಂದು ಸಂಸ್ಕಾರವೇ ಇದೆ. ಅದರಿಂದಾಗಿ ಆಕೆ ಗೃಹಿಣಿ ಎನ್ನಿಸಿಕೊಳ್ಳುತ್ತಾಳೆ. ಹಾಗೆ ಮಾಯೆಯು ಆಕೆಯಲ್ಲಿ ಅಸೂಯೆ ಪ್ರಕಟಗೊಳ್ಳುವಂತೆ ಮಾಡಿ ಪೂರ್ಣ ಶಕ್ತಿ ಸಿಗದಂತೆ ಮಾಡುತ್ತದೆ. ಹಾಗಾಗಿ ಸ್ತ್ರೀಯರೆಲ್ಲಾ ಅನುಸೂಯೆ ಯೆಂದಾದರೆ ಲೋಕವೇ ಸ್ವರ್ಗ, ಅದ್ಭುತ, ಆನಂದದಾಯಕ, ಮೋಕ್ಷಪ್ರದ. ಹಾಗಾಗಿಯೇ ಅಸೂಯೆ ಬಿಟ್ಟ ಗೃಹಿಣಿಯೇ ಈ ಪಾವಕಾಗ್ನಿಯನ್ನು ಮುಕ್ತವಾಗಿ ಸಾಧಿಸಬಲ್ಲಳು. ಅದು ಹೇಗೆಓದಿರಿ.


ಒಂದು ಹೆಣ್ಣು ಹುಟ್ಟುತ್ತಾ ಕನ್ಯೆ. ಅಂದರೆ ಆಕೆ ಪೂರ್ಣಳು. ನ್ಯಾಲಿಬೀಶಸ್ಯ ಸ್ವಯಂ ವಿಕ್ಷು ಸಂದೃಗ್ ರುಕ್ಮೇ ತ್ವೇಷಃ ಇತಿ ಕನ್ಯಾ ಎಂದರ್ಥ (ಬ್ರಾಹ್ಮಿ ಭಾಷೆಯಲ್ಲಿ ಶಬ್ದೋತ್ಪತ್ತಿ). ಆಕೆಯು ಹಲವು ಲಕ್ಷ ಅಂಡ ಸಹಿತವಾಗಿ ಜನ್ಮಕ್ಕೆ ಬಂದಿರುತ್ತಾಳೆ. ಅದನ್ನು ರಕ್ಷಿಪಲೋಸುಗವೇ ಆಕೆ ತನ್ನುದರದಲ್ಲಿ ಪಾವಕಾಗ್ನಿ ಧಾರಣೆ ಮಾಡಿರುತ್ತಾಳೆ. ಅದೇ ಮುಂದೆ ಪ್ರೌಢಳಾದಾಗ ಅದು ಫಲಿತಗೊಳ್ಳುತ್ತಾ ಜೈವಿಕ ಸೃಷ್ಟಿಗೆ ಕಾರಣಳಾಗುತ್ತಾಳೆ. ಈ ಪ್ರಕ್ರಿಯೆ ಸ್ವಯಂ, ಸ್ವತಂತ್ರ, ಪ್ರಕೃತಿ ಸಂಧಾನವೆಂಬ ಮೂಲ ಕ್ರಿಯೆ.  ಇದನ್ನು ಆಧಾರಕ್ರಿಯೆ ಯೆನ್ನುತ್ತಾರೆ. ಈ ಕ್ರಿಯೆಯೇ ಗೃಹಿಣಿಯಿಂದ ಲೋಕದ ಸಕಲ ಜೀವಿಗಳಿಗೆ ಸಿಗುವ ಪುನರುತ್ಥಾನ ಶಕ್ತಿ. ಆದರೆ ಇದು ಸ್ವಾಭಾವಿಕ ಕ್ರಿಯೆ. ಸಹಜ ಸಂಸ್ಕಾರದಿಂದ ಸಿದ್ಧಿ. ಮಹಿಳೆ ಅನುಸೂಯಳಾದರೆ ಇದು ಪ್ರಪಂಚಕ್ಕೇ ಮಾತೃ ಸ್ಥಾನದಲ್ಲಿ ನಿಲ್ಲುತ್ತದೆ. ಆ ಅಂಡರೂಪದ ಶಕ್ತಿಯೇ ಪ್ರಾಪಂಚಿಕ ಪ್ರಕೃತಿ. ಅದರ ಉನ್ಮೀಲನ ಕ್ರಿಯೆಯೇ ಪಾವಕಾಗ್ನಿ ಸಿದ್ಧಿ. ಹಾಗಾಗಿ ಸ್ತ್ರೀಯರ ರಜೋದರ್ಶನ ಕಾಲದಿಂದ ನಾಲ್ಕುದಿನ ಪರ್ಯಂತ ಗೃಹಸ್ಥನಿಗೆ ಅಗ್ನಿಸಿದ್ಧಿಯಿಲ್ಲ ಎಂಬುದು ವಾಡಿಕೆ. ಏಕೆಂದರೆ ಆ ಗೃಹಿಣಿ ತನ್ನುದರದಲ್ಲಾದ ಸ್ವಾಭಾವಿಕ ಪ್ರಕೃತಿ ಕ್ರಿಯೆಯಿಂದ ಚಂಚಲತೆ ಉಂಟಾಗಿರುತ್ತದೆ. ಆದರೆ ಅದೇ ಗೃಹಿಣಿ ಅನಸೂಯೆಯಾದರೆ ಈ ಮಾಸಿಕ ಋತುಚರ್ಯೆ ಬಾಧಕವಿಲ್ಲ. ಸಹಜಸ್ವಭಾವಸಿದ್ಧ ಪಾವಕಾಗ್ನಿ ಪಕ್ವಗೊಂಡು ಜೇತಾ ಎಂಬ ಪ್ರಕೃತಿ ನಿರೂಪಕವಾಗುತ್ತದೆ. ಹಾಗಾಗಿಯೇ ಅಹಲ್ಯಾ, ಸೀತಾ, ದ್ರೌಪದೀ, ತಾರಾ, ಮಂಡೋದರಿಯರು ವಿಶಿಷ್ಟ ನಿತ್ಯನೂತನ ಕನ್ಯೆಯರು. ಸ್ವಯಂಸಿದ್ಧ ಅಗ್ನಿಸ್ವರೂಪರು. ಪಾವಕನಿಂದಾಗಿ ಪಾವನತ್ವವನ್ನು ಪಡೆದವರು.


ಈ ನೆಲೆಯಲ್ಲಿ ಸ್ವಾಭಾವಿಕವಾಗಿ ನೆಲೆಸಿರುವ ಪಾವಕಾಗ್ನಿಯನ್ನು ಸದುಪಯೋಗ ಪಡಿಸಿಕೊಳ್ಳುವ ಮೊದಲ ಹಂತದಲ್ಲಿ ಗೃಹಿಣಿಯರು ತಾವು ಮಾಡಿದ ಅಡಿಗೆಯನ್ನೇ ಒಂದು ತುತ್ತು ಅಗ್ನಿಗೆ ಸಮರ್ಪಿಸುವುದು ಒಂದು ಸ್ವಾಭಾವಿಕ ಅಗ್ನಿಮುಖ. ಇಲ್ಲಿ ಮಂತ್ರ, ತಂತ್ರಗಳ ಅಗತ್ಯವಿಲ್ಲ. ಶೃದ್ಧೆ ಮಾತ್ರಾ ಸಾಕು. ನಂತರ ವಿಭಜಿಸಲ್ಪಟ್ಟ ಔಪಾಸನಾಗ್ನಿಯಲ್ಲಿ ಗೃಹಸ್ಥನು ಮಾಡುವ ಅಗ್ನಿಮುಖ. ಗೃಹಿಣಿ ಅನುಕೂಲೆಯೂ, ಸುಭಗಳೂ, ಶುಭಪ್ರದಳೂ, ಸುಮುಖೆಯೂ ಆದಲ್ಲಿ ಔಪಾಸನಾಗ್ನಿ ಸಿದ್ಧಿ. ಅದರಿಂದ ಗಾರ್ಹಪತ್ಯಾಗ್ನಿ, ಅದರ ಭಿನ್ನ ಸ್ವರೂಪದ ಅಗ್ನಿಗಳಿಂದ ಯಾಗ, ಯಜ್ಞಾದಿಗಳು. ಇಲ್ಲೆಲ್ಲಾ ಮೇಲೆ ಹೇಳಿದ ತಂತ್ರಮುಖೇನ ಅಗ್ನಿಮುಖ ಮಾಡಿಕೊಳ್ಳಬೇಕು. ಇದನ್ನೇ ಅಗ್ನಿಮುಖ ಪ್ರಯೋಗವೆಂದರು. ಇದನ್ನರಿತು ಎಲ್ಲರೂ ದಿನವೂ ಅಗ್ನಿಮುಖ ಮುಖೇನ ನಮ್ಮ ಪರಂಪರೆಯ ಅಗ್ನಿ ಉಪಾಸನೆ ನಡೆಸಿಕೊಂಡು ಬಂದಲ್ಲಿ ಲೋಕಕಲ್ಯಾಣವಾಗುತ್ತದೆಯೆಂದು ಈ ಮೂಲಕ ತಿಳಿಸುತ್ತಾ ನಿಮ್ಮಲ್ಲಿ ಕೆಲ ಪ್ರಶ್ನೆ ಹುಟ್ಟಿಸುತ್ತಿದ್ದೇನೆ. ಈ ಪ್ರಶ್ನೆಯನ್ನು ನಿಮ್ಮಲ್ಲೇ ಅಥವಾ ನಿಮ್ಮ ಪರಿಸರದಲ್ಲಿ, ವಿದ್ವಜ್ಜನರಲ್ಲಿ ಕೇಳಿ ತಿಳಿದು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿರೆಂದು ಪ್ರಾರ್ಥನೆ.

೦೧) ಗೃಹಸ್ಥಾಶ್ರಮಧರ್ಮದಲ್ಲಿ ಗೃಹಿಣಿಯ ಪಾತ್ರವೇನು?

೦೨) ಯಾವುದೇ ದಾನಾದಿಗಳಲ್ಲಿ ಹೆಂಡತಿಯ ಪಾತ್ರವೇಕೆ?

೦೩) ಗೃಹಸ್ಥನಲ್ಲದವನಿಗೆ ಔಪಾಸನಾಗ್ನಿಯಿಲ್ಲವೇಕೆ?

೦೪) ವಿಧುರನಿಗೆ ಔಪಾಸನಾಗ್ನಿಯಿಲ್ಲವೇಕೆ?

೦೫) ಯಾಗಯಜ್ಞಗಳಲ್ಲಿ ವಿಧುರನಿಗೆ ಅಧಿಕಾರವಿಲ್ಲವೇಕೆ?

೦೬) ವಿಧುರನಿಗೆ ಕನ್ಯಾ ಆಧಾನ ಆರ್ಹತೆ ಇಲ್ಲವೇಕೆ?

೦೭) ಗೃಹಿಣಿಯಿಂದ ವಿವಾಹಕಾಲದಲ್ಲಿ ಅಗ್ನಿ ಉಪಾಸನೆ ಎಂದರೇನು?

೦೮) ಗೃಹಸ್ಥನೆಂದರೆ ಮನೆಹೊಂದಿದವನೆಂದು ಅರ್ಥವೇ?

೦೯) ಗೃಹಿಣಿಯಿಲ್ಲದ ಮನೆ ಪೂಜ್ಯವಲ್ಲವೇಕೆ?

೧೦) ರಾಮನು ಸೀತೆಯ ಪ್ರತಿಮೆಯನ್ನು ಇಟ್ಟುಕೊಂಡು ಯಾಗ ಮಾಡಿದ್ದೇಕೆ?

೧೧) 12 ವರ್ಷಗಳ ಕಾಲ ದ್ರೌಪದಿ ರಜಸ್ವಲೆಯಾಗಲೇ ಇಲ್ಲವೇ?

೧೨) ಆ ದಿನಗಳಲ್ಲಿ ಪಾಂಡವರೂ, ಅವರ ಆಶ್ರಿತರೂ ಉಪವಾಸವಿದ್ದರೇ?

೧೩) ನಾಲ್ಕು ಸಾವಿರ ವರ್ಷ ಕಾಲ ಶಿಲೆಯಂತೆ ಜಡವಾಗಿದ್ದ ಅಹಲ್ಯೆ ಹೇಗೆ ಪುನಃ ಪುನೀತಳಾದಳು?

೧೪) ತಾರೆಯು ಜ್ಞಾನ ಸಂಪರ್ಕದಿಂದ ತನ್ನ ಅಂಡಾಶಯವನ್ನೇ ಹೇಗೆ ನಿರ್ಲಿಪ್ತಗೊಳಿಸಿಕೊಂಡಳು?

೧೫) ಮಂಡೋದರಿಯು ಗೃಹಿಣಿಯಾಗಿ ಹೇಗೆ ರಾವಣನಿಗೆ ಸಹಕಾರಿ?

೧೬) ಸೀತೆಯು ನಿಜವಾಗಿ ರಾವಣನಿಂದ ಅಪಹರಿಸಲ್ಪಟ್ಟಳೆ?

ಈ ಹದಿನಾರು ಪ್ರಶ್ನೆಗಳನ್ನು ನಿಮ್ಮ ಅಂತರ್ಯಕ್ಕೆ ಕೇಳಿ. ನಂತರ ಪರಿಸರ ಪ್ರಕೃತಿಗೆ ಕೇಳಿ. ನಂತರ ಸುತ್ತಿನ ಸಮಾಜಕ್ಕೆ ಕೇಳಿ. ವಿದ್ವಜ್ಜನರಲ್ಲಿ ಕೇಳಿ ಉತ್ತರ ಪಡೆದು ಅನಸೂಯೆಯರಾಗಿರೆಂದು ಹಾರೈಸುತ್ತೇನೆ.

  ಇಂತು

ಕೆ. ಎಸ್ ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

2 comments:

 1. guragalige namaskara.
  Namma samskriti hennige mahatwada sthana kottide.
  Adare sathi sahagamana elli yake hege bantu endu vivarisabahude.
  Madri ya kathe enu?
  Dayavittu uttrisi

  ReplyDelete
 2. 1. There is not even one single verse in Vedas that demeans women. On contrary there are a huge number of verses that glorify women to a level that is impossible to understand even by modern feminist intellectuals. http://agniveer.com/1291/women-in-vedas/ gives a very small sample.

  2. Sati Pratha has nothing to do with Vedas. Vedas, on contrary, appeal to a widow to start life afresh and not waste life merely remembering the past.

  3. There are thousands/lakhs of Sanskrit texts. Not everything becomes religion for Hindu. Most Hinduism haters just quote randomly from some vague Sanskrit texts that has no relation with Hinduism. To prove or disprove something in Hinduism, show evidence from Veda Samhitas alone. Because Vedas alone are unaltered and ultimate scriptural evidence. Of course, even Vedas are second to own conscience/intellect governed by Ishwar. Because even to understand Vedas, first requirement is conscience and intellect. That is why they say that Vedas are not for morons. Ved itself means intellect.

  Madri story will be discussed later.

  ReplyDelete