Friday, 4 December 2015

ಪ್ರಕೃತಿ ವಿಕೋಪಗಳು ಸಹಜವೇ? ಮಾನವಕೃತವೇ? ಉತ್ಪಾತಜ್ಞಾನ ಲಭ್ಯವೇ? ಉಪಸಂಹಾರ ಸಾಧ್ಯವೇ?


ಪ್ರಾಕೃತಿಕ ವಿಕೋಪಗಳು ಮನುಷ್ಯನು ಮಾಡುವ ಅನೀತಿ, ಅಧರ್ಮ, ಅನ್ಯಾಯಗಳಿಂದ ಉದ್ಭವಿಸುತ್ತವೆಯೇ? ಅಥವಾ ಸಹಜ ಪ್ರಾಕೃತಿಕ ಕ್ರಿಯೆಗಳೇ?

        ಪ್ರಕೃತಿ ವಿಕೋಪಗಳು ಕಂಡಿತ ಸ್ವಾಭಾವಿಕ ಕ್ರಿಯೆಗಳಲ್ಲ! ಅಸಮರ್ಪಕತೆ ಉಂಟಾದಾಗಲೇ ಪ್ರಕೃತಿ ವಿಕೋಪ ಬರುವಂತಹದ್ದು. ಪ್ರಕೃತಿಯಲ್ಲಿ ಆಗತಕ್ಕಂತಹಾ ಯಾವುದೇ ಉತ್ಪಾತವು ಯಜುರ್ವೇದಿಗಳಿಗೆ ಪೂರ್ವ ಸೂಚನೆ ನೀಡಿರುತ್ತದೆ. ಅದನ್ನು ತಿಳಿಯುವ ವಿಧಾನಗಳು ಯಜುರ್ವೇದದಲ್ಲಿದೆ. ಅದನ್ನು ತಿಳಿಯುವುದು ಯಜುರ್ವೇದಿಗಳ ಕರ್ತವ್ಯ. ಯಜುಶ್ಶಾಖೆಯವರು ತಮ್ಮ ಕರ್ತವ್ಯ ನಿರ್ವಹಣೆ ಮಾಡದೇ ಇರುವುದರಿಂದ ಪ್ರಕೃತಿಯಲ್ಲಿ ವಿಕೋಪಗಳಾಗುತ್ತದೆ.

        ಇನ್ನು ಒಂದು ವರ್ಷ ಬಿಟ್ಟು ಒಂದು ಭೂಕಂಪ ಆಗುತ್ತದೆ ಎಂದರೆ ಯಜುರ್ವೇದದಲ್ಲಿ ಇಂದು ಮಾಡುತ್ತಿರುವ ಅಮಾವಾಸ್ಯೇಷ್ಟಿಯಲ್ಲಿ ಅದನ್ನು ಕಂಡು ಹಿಡಿಯುತ್ತಾರೆ. ಅಮಾವಾಸ್ಯೆ ದಿವಸ ಸೂರ್ಯ ಹಾಗೂ ಚಂದ್ರನ ಕಿರಣಗಳು ಏಕೀಕೃತವಾಗುತ್ತದೆ, ಹೊಂದಾಣಿಕೆಯಾಗುತ್ತದೆ, ಸಮಾನಪಾದಕ್ಕೆ ಬರುತ್ತದೆ. ಆ ಪಾದಕ್ಕೆ ಬರುವಾಗ ಶುರುವಾಗುವ ಅಮಾವಾಸ್ಯೇಷ್ಟಿಯಿಂದ ಆ ವರ್ಷವಿಡೀ ನಡೆಯತಕ್ಕಂತಹಾ ಭೂಕಂಪವಾಗಲೀ, ಜಲಪ್ರವಾಹವಾಗಲೀ, ಅಥವಾ ಅನಾವೃಷ್ಟಿಯಾಗಲೀ, ಮಿಂಚು-ಗುಡುಗುಗಳಿಂದ ಸಮಾಜಕ್ಕೆ ತೊಂದರೆಯಾಗುವಂತಹದ್ದಾಗಲಿ, ಸಮುದ್ರದಲ್ಲಿ ಏಳುವ ವಿಕೃತಿಗಳಾಗಲಿ, ಇತ್ಯಾದಿಗಳನ್ನೆಲ್ಲ ಕೇವಲ ಒಂದು ತಿಂಗಳ ಅಧ್ಯಯನದಿಂದ ಕಂಡುಹಿಡಿಯುವುದಕ್ಕಾಗುತ್ತದೆ. ಅದು ಯಜುರ್ವೇದದ ಒಂದು ಭಾಗ. ಅದನ್ನು ಆಚರಿಸಬೇಕಾದ ಯಜುರ್ವೇದಿಗಳು ಬಿಟ್ಟಿರುವುದರಿಂದ ಪೂರ್ವ ಸೂಚೀ ಇಲ್ಲದೇ ಇರುವುದರಿಂದ ಉತ್ಪಾತಗಳಾದ ಮೇಲೆ ನಮ್ಮಲ್ಲಿ ಹವಾ(ಅವ)ಮಾನ ಇಲಾಖೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡುತ್ತಿರುತ್ತದೆ. ಅಲ್ಲಲ್ಲಿ ಚದುರಿದ ಹನಿಗಳು, ಬಂದರೆ ಬರಬಹುದು ಎಂದು ಹೇಳುತ್ತಾರೆ. ಆಗ ನೀವು ತಲೆಯ ಮೇಲೆ ಛತ್ರಿ ಹಿಡಿದುಕೊಳ್ಳುವುದು ಒಂದೇ ದಾರಿ. ಮತ್ತೇನು ಕೆಲಸವಿಲ್ಲ ಅಲ್ಲಿ.

ಉತ್ಪಾತಗಳ ತಡೆವ ಉತ್ಪಾತ ಸೃಷ್ಟಿಸುವ ಉತ್ಪಾತದರಿವ
ಉತ್ಪತಗಳು ನಡೆದರೂ ಆಪತ್ತುಗಳ ದೂರೀಕರಿಸಿ ಜಗಕೆ
ಉತ್ಪಾತದಂಕೆಯನು ಬೋಧಿಸುವ ಭೇದಿಸುವ ಉತ್ಪಾತರಹಸ್ಯಗಳ ವಿಧ್ಯೆಯಿದರೊಳಗೆ |
ಉತ್ಪಾತ ಶಂಖೆಯೂ ಕುರು-ಲಂಕಾ-ಅಂಕೆಯೊಳು
ಉತ್ಪಾತ ಹುಟ್ಟಲಾರದು ಅದರಂಕೆ ಈ ವೇದದೊಳು ಇದೆ
ಉತ್ಪಾತದರಿವ ಪಡೆದು ಕೂರ್ಚವ ಕಟ್ಟಿರೀ ನೀವ್ ಲೋಕದೊಳು ಜೀವ ಹಿತ ಕಾಯ್ವರಾಗೀ ||


ಆದರೆ ಹಿಂದಿನಿಂದಲೂ ಅಂತಹಾ ಉತ್ಪಾತಗಳನ್ನು ಗುರುತಿಸುತ್ತಿದ್ದರು. ಕಾಡು ಪ್ರಾಣಿಗಳೆಷ್ಟು ವೃದ್ಧಿಯಾಗುತ್ತವೆ? ಮಳೆ ಎಷ್ಟು ಬರುತ್ತದೆ? ಖಗ-ಮೃಗಗಳೆಷ್ಟು ವೃದ್ಧಿ-ಕ್ಷೀಣವಾಗುತ್ತವೆ? ವಿಷ ಜಂತುಗಳೆಷ್ಟು ಹುಟ್ಟುತ್ತದೆ? ಎಷ್ಟು ನಾಶವಾಗುತ್ತದೆ? ಎಲ್ಲ ವಿವರಗಳನ್ನೂ ಅಧ್ಯಯನ ಮಾಡುತ್ತಿದ್ದರು. ಈಗಲೂ ಅದರ ಅಣಕವೆಂಬಂತೆ ಪಂಚಾಂಗದಲ್ಲಿ ಒಂದು ಕೋಷ್ಠಕ ನೀಡಿರುತ್ತಾರೆ. ಆದರೆ ಅಜ್ಜನಕಾಲದಿಂದ ಬರೆದುಕೊಂಡು ಬಂದ ಪಂಚಾಂಗ ಗಣಿತಕ್ಕೆ ಪರಿಷ್ಕರಣೆ ಇಲ್ಲದೇ, ವೇದಗಣಿತ ಎಂಬ ಮೂಲ ಸಿದ್ಧಾಂತವೇ ಅರಿಯದೆ ಪಂಚಾಂಗಗಳೇ ಸರಿಯಿಲ್ಲ! ಇನ್ನು ಛತ್ರ, ಅಡಿಗೆ, ಲಾಡ್ಜ್ ಇತ್ಯಾದಿ ಉದ್ದಿಮೆಗಾರರಿಂದ ಕಮಿಷನ್ ತೆಗೆದುಕೊಂಡು ಬೇಕಾದಷ್ಟು ಮದುವೆ ಮುಹೂರ್ತಗಳನ್ನು ಪ್ರಕಟಿಸುವ ಪಂಚಾಂಗಗಳ ಯಾವ ವಿಚಾರಗಳನ್ನು ನಂಬುವುದೇ ಕಷ್ಟವಾಗುತ್ತಿದೆ. ಹಣ ಕೊಟ್ಟರೆ ಯಾವ ದುರ್ಮುಹೂರ್ತವೂ ಸುಮುಹೂರ್ತವಾಗಿಸುತ್ತಾರೆ. ಇದು ಈಗಿನ ವ್ಯವಸ್ಥೆಯ ಅಧಃಪತನ. ಆದರೆ ಹಿಂದೆಲ್ಲ ಯಜುರ್ವೇದದಲ್ಲಿ ಮಾಘ ಮಾಸದ ಅಮಾವಾಸ್ಯೆಯ ಆರಂಭದಿಂದ ಪೌರ್ಣಮಿಯವರೆಗೆ ಇಷ್ಟಿಯನ್ನು ಆಚರಿಸಿ ಇಂತಿಂತಿಹಾ ಸಮಸ್ಯೆಗಳು ಬರುತ್ತದೆ ಎಂದು ಗುರುತಿಸಿ ಅದಕ್ಕೊಂದು ನಿರ್ಣಯವನ್ನು ಕೊಡುತ್ತಿದ್ದರು. ಅಮಾವಾಸ್ಯೇಷ್ಟಿಗಳ ಮುಖೇನ ಇದನ್ನೆಲ್ಲ ಕಂಡುಹಿಡಿದು ಮುಂದಿನ ವರ್ಷದಲ್ಲಿ ಅದಕ್ಕೆ ಸಂಬಂಧಪಟ್ಟು ಏನೇನು ಪರಿಹಾರಗಳು ಬೇಕೆಂಬುದನ್ನು ಚಿಂತಿಸಿ ಅದನ್ನು ಯಾಜ್ಞಿಕನು ಮಾಡಬೇಕಾಗಿತ್ತು. ಆದರೆ ಈಗ ಅದೆಲ್ಲ ನಡೆಯುತ್ತಿಲ್ಲ.

ನೀರು ನೀರೆನ್ನದಿರಿ ಅದು ಜೀವ, ಅದು ಪ್ರಾಣ, ಅದುವೇ
ನೀರಾದ ಸ್ನೇಹಕವು ದೇಹದಾ ಅಂಶಗಳ ಬೆಸೆವುದು
ನೀರೊಳಿಹ ಮತ್ಸ್ವ ಅದಿಲ್ಲದಿರೆ ಜೀವಕೋಶಗಳ ವಿಘಟನೆಯಾಗಿರೆ ದೇಹ ನಷ್ಟ |
ನೀರೊಳಿಹ ನಾಲ್ಕಂಶ ಗುರುತಿಸಿದ ಕಪಿಲನೂ ಸ್ನೇಹಕ
ನೀರೊಳಿದೆ ಲೋಕದಲಿ ಸ್ನೇಹಕವಿಲ್ಲದಿರೆ ಲೋಕವೇ ಇಲ್ಲ
ನೀರೇ ಲೋಕ ಆಲೋಕವೆಂದು ಸಾರಿದ ಕಪಿಲ ತಾನೇ ನಾರಾಯಣಾಂಶನಾದಾ ||

ಉತ್ಪಾತಗಳು ಕಂಡಿತವಾಗಿಯೂ ಪೂರ್ವಸೂಚಿತ! ಈಗ ತಮಿಳು ನಾಡಿನಲ್ಲಲ್ಲ ಅತೀ ಹೆಚ್ಚು ಮಳೆ ಬಂದು ಊರಿಗೂರೇ ಜಲಾವೃತವಾಗಿದೆ. ಕರ್ನಾಟಕದಲ್ಲಿ ಹಲವು ಕಡೆಯಲ್ಲಿ ಕಾವು ಏರುತ್ತಿದೆ. ಕಾವೇರಿ ಗಲಾಟೆಯ ಪರಿಣಾಮವೇ ಇದು? ವರುಣನ ಕೋಪವೇ? ಏಕೆ? ಚಿಂತಿಸಿ. ಏಕೆ ಹೀಗಾಗುತ್ತಿದೆ ಎಂದು ರಾಜ್ಯಾಂಗವಾಗಲೀ, ಕಾರ್ಯಾಂಗವಾಗಲೀ, ಶಾಸಕಾಂಗವಾಗಲೀ ಚಿಂತಿಸಿತೇ? 

ಅನ್ನ ಎಂದರೆ ಬ್ರಹ್ಮ, ದೇವರು, ಭಾರತೀಯರ ಭಾವನಾತ್ಮಕ ಶಕ್ತಿ. ಅನ್ನಂ ನ ನಿಂದ್ಯಾತ್, ತದ್‍ ವ್ರತಮ್ ಎನ್ನುತ್ತದೆ. ಯಾವುದೇ ಕಾರಣಕ್ಕೂ ಅನ್ನದ ನಿಂದನೆ ಮಾಡಬಾರದು. ಆದರೆ ಈಗ ಯಾರಾದರೂ ಅನ್ನಕ್ಕೆ ಗೌರವ ಕೊಡುತ್ತಾರೆಯೇ?

ಕರ್ನಾಟಕದ ಆಡಳಿತದಲ್ಲಿ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಎಂದು ಶಾಸನ ಜಾರಿಯಲ್ಲಿದೆ. ಆ ಒಂದು ಕಿಲೋ ಅಕ್ಕಿ ಬೆಳೆಯಲಿಕ್ಕೆ ರೈತನ ಎಷ್ಟು ಶ್ರಮ, ಬೆವರು ಸುರಿಸಿರಬಹುದು? ಆಲೋಚಿಸಿ. ಅದನ್ನು ಅಷ್ಟು ಕೀಳು ಮಟ್ಟಕ್ಕೆ ಇಳಿಸಿದರೆ, ಆ ಅನ್ನ ಬೆಳೆಯುವುದಕ್ಕ ಮಳೆ ಬರುತ್ತದೆಯೇ? ಏಕೆ ಒಂದು ರೂಪಾಯಿಗೆ ಕೊಡಬೇಕು? ಪ್ರತಿಯೊಬ್ಬನಿಗೂ ಸರ್ಕಾರ ವಿಧಿಸಿದ ದಿನಗೂಲಿಯ ಮಿತಿಯಲ್ಲಿ ೩೬೮ರಿಂದ ೪೫೦ ರೂಪಾಯಿಗೆ ಏರಿಕೆ ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ೪೫೦ರೂ ಸಂಬಳ ತೆಗೆದುಕೊಂಡರೂ ಮಾಡುವುದು ಒಂದು ದಿವಸದ ಕೂಲಿಯೇ ತಾನೇ? ಹಾಗಿದ್ದ ಮೇಲೆ ಆತನು ಹೆಚ್ಚು ಅಕ್ಕಿ ತೆಗೆದುಕೊಳ್ಳುವದೇಕೆ? ಒಂದು ದಿವಸ ಕೆಲಸ ಮಾಡಿ ತಿಂಗಳೆಲ್ಲ ಮನೆಯಲ್ಲಿ ಮಲಗಿಕೊಂಡಿದ್ದರೂ ಧರ್ಮಕ್ಕೆ ೩೦ಕೆ.ಜಿ. ಅಕ್ಕಿ ಸಿಗುತ್ತದೆ. ಉಳಿದ ದುಡ್ಡಿನಲ್ಲಿ ಹೆಂಡ ಕುಡಿದು ಹೆಂಡತಿ ಮಕ್ಕಳಿಗೆ ಹೊಡೆಯುವುದು. ಬೇಕೇ ಅದು? ಸಂಬಳ ಹೆಚ್ಚು ತೆಗೆದುಕೊಳ್ಳಲಿ, ಆಕ್ಷೇಪವಿಲ್ಲ. ಆದರೆ ಶ್ರಮ ಪಟ್ಟು ಕೆಲಸ ಮಾಡಲಿ.

ಆದರೆ ತಿನ್ನುವ ಅನ್ನ ದೇವರು. ಅದಕ್ಕೆ ಸರಿಯಾದ ಗೌರವ ಕೊಟ್ಟು ಸರಿಯಾದ ಬೆಲೆ ಕೊಟ್ಟು ತಿನ್ನಲಿ. ಏಕೆ ಧರ್ಮಕ್ಕೆ ಕೊಡಬೇಕು? ಏಕೆ ಅಮ್ಮ ಹೋಟೆಲಿನಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ತಿಂಡಿ ತಿನಿಸು ಮಾರುತ್ತಿದ್ದಾರೆ. ಅದರಿಂದ ರೈತನಿಗೆ ಸರಿಯಾದ ಆದಾಯ ಸಿಗುತ್ತಿದೆಯೇ? ಮಧ್ಯವರ್ತಿಗಳ ಪಾತ್ರೆಯ ಗಾತ್ರವೆಷ್ಟು? ರೇಷನ್ ಕೊಡುವೆವೆಂಬ ಕೊಳಕು ನೀತಿಯನ್ನು ಇನ್ನೂ ಸರ್ಕಾರವು ಬಳಸುತ್ತಿದೆ ಎಂದರೆ ಅರ್ಥವಿದೆಯೇ? ರೇಷನ್ ಏಕೆ ಕೊಡಬೇಕು? ಯಾವಾಗ ಅನ್ನವೇ ಇಲ್ಲದ ಬರಗಾಲ ಪರಿಸ್ಥಿತಿ ಬಂದಿತ್ತೋ, ಆ ಪ್ರದೇಶಕ್ಕಾಗಿ ಬೇರೆ ಪ್ರದೇಶದಿಂದ ಆಹಾರ ವಸ್ತುಗಳ ಪೂರೈಕೆಯನ್ನು ಮಾಡುವ ಸಲುವಾಗಿ ರೇಷನ್ ವ್ಯವಸ್ಥೆ ಬಂದದ್ದು! ಅದೇ ಅನ್ನ ಬೆಳೆಯುವ ಕಾಲದಲ್ಲಿ ರೇಷನ್ ಕೊಡುವ ಮಹಾಪಾಪ. ರೇಷನ್ ಒಂದು ಹಕ್ಕಲ್ಲ. ಅಭಾವ ಸ್ಥಿತಿಯಲ್ಲಿ ಒದಗಿಸುವ ವ್ಯವಸ್ಥೆಗೆ ರೇಷನ್ ಎಂದು ಹೇಳುವುದು. ಈಗ ಎಲ್ಲ ಕಡೆಯಲ್ಲೂ ರೇಷನ್ ಕೊಡುತ್ತೇವೆ ಎಂಬ ಸ್ಲೋಗನ್ ಇದೆಯಷ್ಟೆ. ಆದರೆ ಎಲ್ಲರಿಗೂ ಸಿಕ್ಕುವುದೂ ಇಲ್ಲ. ಆ ಕೊಳಕು ರೇಷನ್ ಎಲ್ಲರಿಗೂ ಸರಿಯಾಗಿ ಸಿಕ್ಕಿದ್ದರೆ ಅವರ್ಯಾರೂ ಉಳಿಯುತ್ತಿರಲಿಲ್ಲ. ಎಲ್ಲರೂ ರೋಗ ಬಂದು ಸಾಯುತ್ತಿದ್ದರು.

ಅನ್ನವದು ಕೇಳು ಮನುಜನೇ ಅದರ ರಸ ಗುಣ
ವಿನ್ನು ಕಪಿಲನು ಪಕ್ವವಾಗಲು ರಸವು ಬೇಕೈ
ಅನ್ನವೇ ಜೀವಿಗಳಿಗಾಧಾರ ಘೋಟಕದಿಂದ ನಿರಂತರತೆಯ ಸಾಧಿಸಿದ ಕಪಿಲನಾಶ್ರಯವೂ |
ಅನ್ನವೇ ಜ್ಞಾನ, ಅನ್ನವೇ ಬುದ್ಧಿ, ಅನ್ನವೇ ಸತ್ಯ ಸನ್ಮಾರ್ಗ
ಅನ್ನವನು ತಿನ್ನು ನೀ ಬೇರೆ ತಿನ್ನಲು ಬೇಡ ಮಾನವ
ಅನ್ನವಿಲ್ಲದಿರೆ ಜೀವಿಗಳು ಬದುಕಲಾರವು ಇದು ವಿಧಿ ಕಪಿಲನೇ ಅನ್ನ ಕಾಣೆಂದಾ ||

ಅಂದಾಜು ೧೯೯೦ನೇ ಇಸವಿಯಿಂದ ಕರ್ನಾಟಕದಲ್ಲಿ ಸರ್ಕಾರದಿಂದ ರೇಷನ್ ಕಾರ್ಡ್ ಕೊಡುವ ವ್ಯವಸ್ಥೆ ಆರಂಭಿಸಿತು. ಆದರೆ ಇಲ್ಲಿಯವರೆಗೆ ಎಲ್ಲರಿಗೂ ಸರಿಯಾಗಿ ರೇಷನ್ ಕಾರ್ಡೇ ಕೊಟ್ಟು ಪೂರೈಸಿಲ್ಲ. ಏಕೆಂದರೆ ರೇಷನ್ ಕಾರ್ಡ್ ಕೊಡುವುದು ಏಕೆ? ಹೇಗೆ? ಎಂಬುದೇ ಗೊತ್ತಿಲ್ಲ. ನಮ್ಮ ಭಾರತೀಯರು ಭಿಕ್ಷುಕರಲ್ಲ. ಹಾಗಾಗಿ ಅವರು ಏನು ಸರ್ಕಸ್ ಮಾಡಿದರೂ ರೇಷನ್ ಕಾರ್ಡ್ ಕೊಡಲಾಗುವುದಿಲ್ಲ. ನಾವು ಭಿಕ್ಷುಕರಲ್ಲ, ಸ್ವಾಭಿಮಾನಿಗಳು. ಆಹಾರ ಬೆಳೆಯುವುದು ಕಡಿಮೆಯಾಗುತ್ತಿದೆ ಎಂದರೆ ಮಳೆ ಬರುವುದು ಕಡಿಮೆಯಾಗುತ್ತಿದೆ ಎನ್ನುತ್ತಾರೆ. ಏಕೆಂದರೆ ಅನ್ನಕ್ಕೆ ನಿಂದನೆ ಮಾಡುತ್ತಿದ್ದೀರಿ. ಅದರಿಂದ ಮಳೆ-ಬೆಳೆ ಕಡಿಮೆಯಾಗುತ್ತಿದೆ. ಅನ್ನಕ್ಕೆ ಗೌರವ ಕೊಡಿ, ಅನ್ನಕ್ಕೊಂದು ಸ್ಥಾನ ಮಾನ ಕೊಡಿ. ನಾವು ತಿಂದ ಅನ್ನವು ಸತ್ವವಾಗಿ ನಮ್ಮ ದೇಹಕ್ಕೆ ಒಳ್ಳೆಯ ಜ್ಞಾನವನ್ನು ಕೊಡುವಂತೆಯಾಗಲಿ. ಆಗ ಕಂಡಿತ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ.


ಈಗ ತಮಿಳು ನಾಡಿನಲ್ಲಿ ವಿಪರೀತ ಮಳೆ ಇದ್ದರೆ, ಕರ್ನಾಟಕದ ಹಲವು ಕಡೆ ವಿಪರೀತ ಸೆಕೆ. ಈ ರೀತಿಯಾದರೆ ಎಲ್ಲರ ಬದುಕೂ ದರ್ದರ. ಸಧ್ಯವಾದರೆ ಅನ್ನಕ್ಕೆ ಗೌರವ ಕೊಡುವಂತಹಾ ನಿರ್ಣಯವನ್ನು ಇಡೀ ಸಮಾಜವು ಮಾಡಲಿ. ಧರ್ಮಕ್ಕೆ ಅಕ್ಕಿ ಕೊಟ್ಟರೂ ಅದು ಬೇಡ. ನಾವು ನಿಮ್ಮ ಮನೆಯಲ್ಲಿ ಕೂಲಿ ಮಾಡಿಯಾದರೂ ಶ್ರಮಪಟ್ಟು ದುಡಿದು ನಿಮ್ಮಿಂದ ಅಕ್ಕಿ ಸಂಗ್ರಹಿಸಿ ತಿನ್ನುತ್ತೇವೆ ಎನ್ನುವ ನಿರ್ಧಾರಕ್ಕೆ ಒಟ್ಟು ಸಮಾಜವು ಬಂದರೆ ಕಂಡಿತವಾಗಿ ಯಾವ ಉತ್ಪಾತವೂ ಆಗುವುದಿಲ್ಲ. ಇದು ಸತ್ಯ. ಅದಕ್ಕೆ ನಾವೆಲ್ಲರೂ ಕೆಳಗಿನ ಪದ್ಯದಲ್ಲಿ ಕಪಿಲ ಮುನಿಯು ಹೇಳಿದಂತೆ ಭಗೀರಥರಾಗಬೇಕು.

ಕೇಳಿರೀ ಜನರೆಲ್ಲ ಭಗೀರಥನೊಬ್ಬನಲ್ಲವು ಇಚ್ಛಾಶಕ್ತಿ
ತಾಳಿ ನೀವ್ ನಿಮಗಿರಬೇಕು ಮೊದಲಲಿ ಜ್ಞಾನಶಕ್ತಿಯ
ಮೇಳವಿಸಿ ಕ್ರಿಯಾಶಕ್ತಿ ರೂಪುಗೊಂಡರೆ ಎಲ್ಲರೂ ಭಗೀರಥರೆ ಲೋಕದಲಿ ಎಲ್ಲವೂ ಗಂಗೆಯೇ ಸತ್ಯ |
ಹೇಳಿ ನಿಮ್ಮಲಿ ಜ್ಞಾನವಿದೆಯೇ ನಿಸ್ವಾರ್ಥತೆಯಿದೆಯೇ
ಕೇಳಿ ನೀವ್ ಕ್ರೋಧಾದಿಗಳ ಜಯಿಸಿರುವಿರೇ ಶಮದಮಾದಿ
ಗಳು ನಿಮ್ಮೊಳಿಹವೇ ಸಾಧಿಸುವ ಛಲ ನಿಮಗಿದೆಯೇ ಬಿಡಿ ನೀವೇ ಭಗೀರಥರು
ಶಿಲೆಯೊಳಗೆ ನೀರ ತರಬಹುದು ||

No comments:

Post a Comment