Thursday, 10 December 2015

ಅಗ್ನಿಯ ಕುರಿತು ಒಂದು ಅರಿವು

ಪ್ರೀತಿಯ ಭಾರತೀಯ ಬಂಧುಗಳೇ,

ಹಿಂದಿನ ತಿಂಗಳ ಕಂತಿನಲ್ಲಿ ಅಗ್ನಿಮುಖದರಿವು ನಿಮಗಾಗಲೀ ಎಂದು ಬರೆದ ಲೇಖನ ಓದಿರಬಹುದು. ಅಲ್ಲಿ ತಿಳಿಸಿದ ಕೆಲ ಪ್ರಶ್ನೆಗಳಿಗೆ ಬುದ್ಧಿವಂತರಾದ ನೀವು ಉತ್ತರ ತಿಳಿದು ಕೊಂಡಿರಬಹುದು. ಆ ನೆಲೆಯಲ್ಲಿ ಸರ್ವವ್ಯಾಪಕನೂ, ಸರ್ವನೂ, ಸರ್ವಸ್ವನೂ, ಸರ್ವವನ್ನೂ ತನ್ನಲ್ಲಿ ಏಕೀಭವಿತಾತ್ಮನೂ, ಸರ್ವಭಕ್ಷಕನೆಂದೂ ಪ್ರಪಂಚ ವಿಖ್ಯಾತನಾದ ಅಗ್ನಿಯ ಬಗ್ಗೆ ಇನ್ನೊಂದಿಷ್ಟು ತಿಳಿಯೋಣವಲ್ಲವೆ?

ಮೊದಲಾಗಿ ಸ್ತ್ರೀ ಎಂಬುದೇ ಆದಿಶಕ್ತಿ ಹಾಗೂ ಪ್ರಕೃತಿ, ಮಾಯೆ. ಅದರ ನೆಲೆಯಲ್ಲಿಯೇ ಸೂತ್ರಗಳು. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದಿದ್ದಾರೆ. ಅದರರ್ಥ ದೇಶದ ನಾರಿಯರೆಲ್ಲಾ ಪೂಜಾರ್ಹರೇ. ಆದರೆ ಪೂಜಾರ್ಹರು ಎಂದಾಗ ಭಕ್ತರಾಧೀನವೆಂದರ್ಥವೇ ತಾನೆ? ಹಾಗಾಗಿಯೇ ಭಕ್ತ ಇಲ್ಲಿ ಪುರುಷ. ಅವನ ಅಧೀನವೆಂಬುದೂ ಕೂಡ ಸತ್ಯವೇ. ಹಾಗೆಂದು ದಾಸ್ಯವಲ್ಲ. ದೇವ+ಭಕ್ತ ಸಂಬಂಧವಿದು. ಆ ಭಾವದಿಂದ ಕಲ್ಪಿಸಿಕೊಳ್ಳಿ. ಇಲ್ಲಿ ಭಕ್ತ ಆಗ್ರಹನಿರುತ್ತಾನೆ. ಹಾಗಾಗಿ ತಪ್ಪು ಕಲ್ಪಿಸಬಹುದು. ಆದರೆ ದೇವರು ಅನುಗ್ರಹಭಾವದಿಂದಿರು ತ್ತಾನೆ. ಇಲ್ಲಿ ತಪ್ಪು ಕಲ್ಪಿಸಲಾಗದು. ಇದೇ ಧೈವಭಾವ ಸಂಬಂಧ. ಹಾಗಾಗಿ ಅಧೀನತೆ ಪ್ರಕಟವಾಗುತ್ತದೆ, ದಾಸ್ಯವಲ್ಲ. ಅಧೀನತೆಯೆಂದಾಗ ದಾಸ್ಯವೆಂಬ ಕಲ್ಪನೆಯಲ್ಲಿ ಸ್ತ್ರೀ ಸಮಾಜ ಅಧೋಗತಿಗೆ ಇಳಿಯುತ್ತಿದೆ. ಅದನ್ನು ಬಿಟ್ಟು ಅನುಗ್ರಹಭಾವದಿಂದ ಹುಟ್ಟಿದ ಪ್ರೀತಿ ಸಂಜನಿಸಿದಲ್ಲಿ ಎಂದಿಗೂ ಭಿನ್ನತೆಯಿಲ್ಲ. ಸುಖ, ಸಂತೋಷ ಸಮೃದ್ಧಿಯಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡಲ್ಲಿ ಮುಂದಿನ ಲೇಖನ ನಿಮಗರ್ಥವಾಗಬಹುದು.


ಹಾಗಾಗಿ ಮುಖ್ಯಸ್ಥಾನದಲ್ಲಿ ನಿಲ್ಲಬಲ್ಲ ಅಗ್ನಿಯೇ ಸೂರ್ಯವೆಂಬ ಮೂಲತತ್ವದಲ್ಲಿ ಅಡಕವಾಗಿರುತ್ತದೆ. ಅದರಲ್ಲಿ ಮೂರು ಭಿನ್ನ ಭಿನ್ನ ಪ್ರಭೇದಗಳಿವೆ. ಅದರಲ್ಲಿ ಒಂದಂಶವೇ ಸೂರ್ಯ. ಉತ್ಕೃಷ್ಟ ಶಾಖ, ನಿರಂತರ ಜ್ವಲನಶೀಲ, ಇಂಧನರಾಹಿತ್ಯ ಸ್ಥಿತಿ. ಸೂಯವತೀ ಜ್ವಲತೀತಿ ರವೈಃ ಇತಿ ಸೂರ್ಯಃ ಸೂರ್ಯದ ಒಂದು ಭಾಗವಾಯ್ತು. ಇದು ಪ್ರತ್ಯಕ್ಷ. 


ಹಾಗೇ 2ನೇ ಭಾಗವಾಗಿ ಅಂಡಾಂತರ್ಗತ ಚೈತನ್ಯಭಾಗ. 
ಅದು ಮೂಲಚೈತನ್ಯ ಪ್ರಕೃತಿ, ಅಂಡಾಂತರ್ಗತ ಅದರ ಪೂರ್ಣಭಾವ ಪ್ರಕಟವಾಗುವುದು ಸ್ತ್ರೀಯರಲ್ಲಿ. ಅದನ್ನು ಜಗತ್ತು ಗುರುತಿಸುವುದು ಪಾವಕಾಗ್ನಿ ಎಂದು. ಅದೇ ಪಾವಕಾಗ್ನಿಯ ಒಂದು ರೂಪವೇ ವೈಶ್ವಾನರ. ಸಕಲ ಜೀವಿಗಳ ದೇಹದಲ್ಲಿ ವ್ಯಾಪಿಸಿ ಮಹಾವಿಷ್ಣು ರೂಪದಿಂದ ಜಗತ್ಸಂರಕ್ಷಕವಾಗಿದೆ. ಆಹಾರವನ್ನು ಭುಂಜಿಸಿ ದೇಹಕ್ಕೆ ಶಕ್ತಿರೂಪದಲ್ಲಿ ಪ್ರಪಂಚವನ್ನು ಪೊರೆಯುತ್ತಿದೆ. ಹಾಗೇ ಪಾವಕಾಗ್ನಿಯು ಸ್ತ್ರೀಯರ ಬ್ರಹ್ಮಾಂಡಭೂಮಿಕೆ ಅಥವಾ ಅಂಡಾಶಯದಲ್ಲಿದ್ದು ಪ್ರಪಂಚ ಸೃಷ್ಟಿಕ್ರಿಯೆಯಲ್ಲಿ ತೊಡಗಿರುತ್ತದೆ. ಹಾಗೇ ಕಣ್ಣಿನಲ್ಲಿ ಒಂದಂಶ ಸೇರಿ ಪ್ರಪಂಚ ನಾಶ ಕ್ರಿಯೆಯಲ್ಲಿಯೂ ತೊಡಗುತ್ತಾ ಒಂದು ರೀತಿಯಲ್ಲಿ ಸೃಷ್ಟಿ, ಸ್ಥಿತಿ, ಲಯಗಳೆಂಬ ಮೂರು ಕಾರ್ಯಗಳಿಂದ ನಿರ್ವಹಿಸುತ್ತಾ ತಿರೋಧಾನದಿಂದ ಪರಿಷ್ಕರಣೆಗೊಳಿಸಿ ಆತ್ಮ ಸಂಸ್ಕಾರ ಮಾಡುತ್ತಾ ಅನುಗ್ರಹರೂಪವಾಗಿ ಜನ್ಮಕ್ಕೆ ಬಂದು ವ್ಯಾವಹಾರಿಕ ಪ್ರಪಂಚದಲ್ಲಿ ವ್ಯವಹರಿಸುತ್ತದೆ. ಅದೇ ಗಾರ್ಹಪತ್ಯ, ದಕ್ಷಿಣ, ಆಹವನೀಯವೆಂಬ ಮೂರು ಪ್ರಭೇದದ ಅಗ್ನಿರೂಪ ಹಾಗು ಜೈವಿಕ ಸ್ವರೂಪ. ಅದೇ ಪ್ರಪಂಚ. ಅದರ ಸತ್ಯವನ್ನೇ ಈ ಕೆಳಗಿನ ಋಗ್ವೇದ ಮಂತ್ರಗಳು ವಿವರಿಸುತ್ತದೆ ಗಮನಿಸಿ.

ಋಗ್ವೇದ, ಮಂಡಲ.1, ಸೂಕ್ತ 89, ಮಂತ್ರ 1-10
ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತೋದಬ್ಧಾಸೋ ಅಪರೀತಾಸ ಉದ್ಭಿದಃ | 
ದೇವಾನೋ ಯಥಾ ಸದಮಿದ್ವೃಧೇ ಅಸನ್ನಪ್ರಾಯುವೋ ರಕ್ಷಿತಾರೋ ದಿವೇ ದಿವೇ || 1 ||

ಪ್ರಪಂಚದ ಜೈವಿಕ ಸೃಷ್ಟಿಯಲ್ಲಿ ವಿಶ್ವದೃಷ್ಟಿಯೆಂಬ ವಿಶೇಷ ಪ್ರಕ್ರಿಯೆ ಏನು? 
ಅದರ ಹಿನ್ನೆಲೆಯಲ್ಲಿ ದೇವಾ ಅರ್ಥಾತ್ ಕೊಡಲ್ಪಡುವುದು ಏನು? 
ಕೊಡಿಸುವುದು ಏನು
ಸಂಚಿತವೇನು
ಪ್ರಾಪ್ತಿಯಾದ ಅತ್ಮಿಕವೇನು? 
ಕಾಲಕಾರಣದಿಂದ ಪ್ರಾಪಂಚಿಕ ಆಗಾಮಿಯೇನು? 
ಇವೆಲ್ಲವೂ ಹೇಗೆ ರಕ್ಷಿಸಲ್ಪಡುತ್ತದೆ? 
ಏಕೆ ರಕ್ಷಿಸಲ್ಪಡುತ್ತದೆ? 
ರಕ್ಷಣೆಯ ಉದ್ದೇಶವೇನು? 
ಔಚಿತ್ಯವೇನು? 
ಇದರಲ್ಲಿರುವ ಆನಂದವೇನು? 

ಇವೆಲ್ಲವನ್ನೂ ವಿವರಿಸಿ ಅಗ್ನಿಸ್ವರೂಪ ವಿವರಿಸುತ್ತೇನೆ ಎಂದಿದೆ. ಈ ಮಂತ್ರಭಾಗ ಹಾಗೇ ದೇವಾಸುರಮರ್ತ್ಯವೆಂಬ ತ್ರಿಕರ್ಮ ಸಿದ್ಧಿ, ಶುದ್ಧಿ, ಬದ್ಧತೆ ಬಗ್ಗೆ ತಿಳಿಯೋಣ.

ದೇವಾನಾಂ ಭದ್ರಾ ಸುಮತಿರ್ಋಜೂಯತಾಂ ದೇವಾನಾಂ ರಾತಿರಭಿನೋ ನಿವರ್ತತಾಮ್ |  ದೇವಾನಾಂ ಸಖ್ಯ ಮುಪಸೇದಿಮಾ ವಯಂ ದೇವಾ ನ ಆಯುಃ ಪ್ರತಿರಂತು ಜೀವಸೇ || 2 ||

ಪ್ರಪಂಚದಲ್ಲಿ ಒಂದು ವಿಶಿಷ್ಟಶಕ್ತಿಯಿದೆ. ಅದನ್ನು ವಾಚ್ಯವಾಗಿ ಹೇಳುವುದಿದ್ದರೆ ಸತ್ಯ. ಪ್ರಪಂಚದ ಸತ್ಕರ್ಮಾಚರಣೆ ಹಾಗೇ ದಿನ, ರಾತ್ರಿ, ಕಾಲಸಂಚಾರ, ಮಳೆ, ಬೆಳೆ, ಸುಖ, ಸಮೃದ್ಧಿ, ಕ್ಷೇಮ, ಲಾಭ, ಸೃಷ್ಟ್ಯಾದಿ ನಿರಂತರತೆಯೆಲ್ಲವೂ ಈ ಸತ್ಯದ ಆಧಾರದಲ್ಲಿ ನಿಂತಿದೆ. ಸತ್ಯವೆಂದರೆ ವಾಚ್ಯಾರ್ಥ ಮಾತ್ರವಲ್ಲ, ಸತ್ಯವು ವಿವರಿಸಲಾಗದ, ದೃಗ್ಗೋಚರವಾಗದ, ನಿತ್ಯನೂತನ ನಿರಂತರವಾದದ್ದು. ಆದರೆ ಅದರ ನಡೆಯೇ ಪ್ರಪಂಚ ಸುಕೃತಿ. ಅದನ್ನು ಆವರಿಸಿ ಆವರಣದೊಳಗಡಕವಾಗುವಂತೆ ಮಾಡಿದ ಮಾಯೆ ಪ್ರಾಪಂಚಿಕವಾಗಿ ವಿಕೃತಿ. ಆದರೆ ಆಧ್ಯಾತ್ಮಿಕವಾಗಿ ಸತ್ಯವೇ. ಸತ್ಯದ ಹೊರತುಪಡಿಸಿ ಯಾವುದೂ ಇಲ್ಲ.

ತಾನ್ ಪೂರ್ವಯಾ ನಿವಿದಾ ಹೂಮಹೇ ವಯಂ ಭಗಂ ಮಿತ್ರಮದಿತಿಂ ದಕ್ಷಮಸ್ರಿಧಮ್ | ಅರ್ಯಮಣಂ ವರುಣಂ ಸೋಮಮಶ್ವಿನಾ ಸರಸ್ವತೀ ನಃ ಸುಭಗಾ ಮಯಸ್ಕರತ್ || 3 ||

ಜಗತ್ತಿನ ಭಿನ್ನತೆಯಲ್ಲಿ ಮುಖ್ಯವಾಗಿ ಕಾಣುವ ಪ್ರಭೇದ ಅರ್ಯಮಾ, ವರುಣ, ಸೋಮ, ಅಶ್ವಿನಿ, ಸರಸ್ವತಿ ಅಲ್ಲದೇ ಭಿನ್ನ ಭಿನ್ನವಾದ ಸತ್ಯಾಶ್ರಿತ ಸದಾಶಯಗಳೆಲ್ಲಾ ತುಂಬಿರುವ ಈ ಜಗದ್ವ್ಯಾಪಾರ ಕ್ಷೇತ್ರಕ್ಕೆ ಮೂಲ 

 1. ಪ್ರೇಷಕ, 
 2. ಪ್ರೇರಕ, 
 3. ಪುರಸ್ಕೃತ, 
 4. ಪರ್ಯಟನಾ, 
 5. ಪರಿಷ್ಕೃತ, 
 6. ಫರ್ಫರೀಕಾ, 
 7. ಪುಚ್ಚಟ, 
 8. ಪ್ರಣವ, 
 9. ಉತ್ಥಾನ,
 10. ಪ್ರೇರಣಾ, 
 11. ಸುಭಗಾ, 
 12. ದಕ್ಷ, 
 13. ನಿವಿದಾ, 
 14. ಭಗ, 
 15. ಮಿತ್ರ, 
 16. ಆದಿತ್ಯರಾದಿಯಾಗಿ ಅದಿತಿ 16 ವಿಧ ಭಿನ್ನತೆಯ ಶಕ್ತಿರೂಪಿಯಾಗಿ ಹೊರಹೊಮ್ಮಿದ ಮಾತೃತ್ವವೇ ಪಾವಕಾಗ್ನಿ ಪ್ರಭೇದಗಳು. ಅವೆಲ್ಲಾ ಈ ಜಗತ್ತಿನ ಜಗದ್ವ್ಯಾಪಾರ ಕ್ಷೇತ್ರದಲ್ಲಿ ಪ್ರವರ್ತನಾ ಶಕ್ತಿ. ಹಾಗೇ ಜಗದ್ವ್ಯಾಪಾರ ನಿಯಮಗಳನ್ನು ಮುಂದಿನ ಮಂತ್ರಗಳಲ್ಲಿ ಹೇಳುತ್ತದೆ.

ತನ್ನೋ ವಾತೋ ಮಯೋಭುವಾತು ಭೇಷಜಂ ತನ್ಮಾತಾ ಪೃಥಿವೀ ತತ್ಪಿತಾ ದ್ಯೌಃ | 
ತದ್ಗ್ರಾವಾಣಃ ಸೋಮಸುತೋ ಮಯೋಭುವಸ್ತದಶ್ವಿನಾ ಶೃಣುತಂ ಧಿಷ್ಣ್ಯಾ ಯುವಮ್ || 4 ||

ತಮೀಶಾನಂ ಜಗತಸ್ತಸ್ಥುಷಸ್ಪತಿಂ ಧಿಯಂ ಜಿನ್ವ ಮವಸೇ ಹೂಮಹೇ ವಯಮ್ |  
ಪೂಷಾ ನೋ ಯಥಾ ವೇದಸಾಮ ಸದ್ವೃಧೇ ರಕ್ಷಿತಾ ಪಾಯುರದಬ್ಧಃ ಸ್ವಸ್ತಯೇ || 5 ||

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ | 
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು || 6 ||

ಪೃಷದಶ್ವಾ ಮರುತಃ ಪೃಶ್ನಿಮಾತರಃ ಶುಭಂ ಯಾವಾನೋ ವಿದಥೇಷು ಜಗ್ಮಯಃ | 
ಅಗ್ನಿಜಿಹ್ವಾ ಮನವಃ ಸೂರಚಕ್ಷಸೋ ವಿಶ್ವೇ ನೋ ದೇವಾ ಅವಸಾ ಗಮನ್ನಿಹ || 7 ||

ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ | ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯ ಶೇಮ ದೇವಹಿತಂ ಯದಾಯುಃ || 8 ||

ಶತಮಿನ್ನು ಶರದೋ ಅಂತಿದೇವಾ ಯತ್ರಾ ನಶ್ಚಕ್ರಾ ಜರಸಂ ತನೂನಾಮ್ | 
ಪುತ್ರಾಸೋ ಯತ್ರ ಪಿತರೋ ಭವಂತಿ ಮಾ ನೋ ಮಧ್ಯಾರೀರಿಷತಾಯುರ್ಗಂತೋಃ || 9 || 

ಅದಿತಿರ್ದ್ಯೌರದಿತಿರಂತರಿಕ್ಷಮದಿತಿರ್ಮಾತಾ ಸ ಪಿತಾ ಸ ಪುತ್ರಃ | 
ವಿಶ್ವೇ ದೇವಾ ಅದಿತಿಃ ಪಂಚಜನಾ ಅದಿತಿರ್ಜಾತಮದಿತಿ ರ್ಜನಿತ್ವಮ್ || 10 ||ಇದೆಲ್ಲಾ ಜೈವಿಕ ಜಗತ್ತಿನ ಮಾತೃಶಕ್ತಿಯೆಂಬ ಅಗ್ನಿಯೇ ಎನ್ನುತ್ತದೆ ವೇದ. ವಿಶ್ವಚಿತ್ರಣವನ್ನು ಅತೀ ವಿವರವಾಗಿ ಬಿಂಬಿಸಿದೆ ವೇದ. ಜೀವಜಗತ್ತಿನ ಎಲ್ಲಾ ಅಂಶಗಳೂ ಇದರಲ್ಲಿ ಚಿತ್ರಿಸಲ್ಪಟ್ಟಿದೆ ವಿವರಿಸಲ್ಪಟ್ಟಿದೆ. ಹಾಗೇ ಅಗ್ನಿಯ ಭಿನ್ನ ಭಿನ್ನ ರೂಪದಲ್ಲಿ ತ್ರೇತಾಗ್ನಿಗಳ ರೂಪದಲ್ಲಿ ಇರುವ ಎಲ್ಲಾ ಭಿನ್ನತೆಯನ್ನೂ ವಿವರಿಸುತ್ತದೆ. ಹಾಗೂ ಅದರ ಶಕ್ತಿ, ಕಾರಕತ್ವ ಎಲ್ಲವನ್ನೂ ವಿವರಿಸಿದೆ ಈ ಕೆಳಗಿನ ಮಂತ್ರಗಳಲ್ಲಿ.

ಋಗ್ವೇದ, ಮಂಡಲ.1, ಸೂಕ್ತ 93, ಮಂತ್ರ 1-12

ಅಗ್ನೀಷೋಮಾವಿಮಂ ಸು ಮೇ ಶೃಣುತಂ ವೃಷಣಾ ಹವಮ್
ಪ್ರತಿ ಸೂಕ್ತಾನಿ ಹರ್ಯತಂ ಭವತಂ ದಾಶುಷೇ ಮಯಃ ||
ಅಗ್ನೀಷೋಮಾ ಯೋ ಅದ್ ವಾಮಿದಂ ವಚಃ ಸಪರ್ಯತಿ |
ತಸ್ಮೈ ಧತ್ತಂ ಸುವೀರ್ಯಂ ಗವಾಂ ಪೋಷಂ ಸ್ವಶ್ವ್ಯಮ್ ||
ಅಗ್ನೀಷೋಮಾ ಯ ಆಹುತಿಂ ಯೋ ವಾಂ ದಾಶಾದ್ಧವಿಷ್ಕೃತಿಮ್
ಸ ಪ್ರಜಯಾ ಸುವೀರ್ಯಂ ವಿಶ್ವ ಮಾಯುರ್ವ್ಯಶ್ನವತ್ ||
ಅಗ್ನೀಷೋಮಾ ಚೇತಿ ತದ್ವೀರ್ಯಂ ವಾಂ ಯದಮುಷ್ಣೀತ ಮವಸಂ ಪಣಿಂ ಗಾಃ | 
ಅವಾತಿರತಂ ಬೃಸಯಸ್ಯ ಶೇಷೋ ವಿಂದತಂ ಜ್ಯೋತಿರೇಕಂ ಬಹುಭ್ಯಃ ||
ಯುವಮೇತಾನಿ ದಿವಿ ರೋಚನಾನ್ಯಗ್ನಿಶ್ಚ ಸೋಮ ಸಕ್ರತೂ ಅಧತ್ತಮ್ | 
ಯುವಂ ಸಿಂಧೂರಭಿಶಸ್ತೇರವದ್ಯಾದಗ್ನೀಷೋಮಾ ವಮುಂಚತಂ ಗೃಭೀತಾನ್ ||
ಆನ್ಯಂ ದಿವೋ ಮಾತರಿಶ್ವಾ ಜಭಾರಾಮಥ್ನಾದನ್ಯಂ ಪರಿಶ್ಯೇನೋ ಅದ್ರೇಃ | 
ಅಗ್ನೀಷೋಮಾ ಬ್ರಹ್ಮಣಾ ವಾವೃಧಾನೋರುಂ ಯಜ್ಞಾಯ ಚಕ್ರಥುರು ಲೋಕಮ್ ||
ಅಗ್ನೀಷೋಮಾ ಹವಿಷಃ ಪ್ರಸ್ಥಿತಸ್ಯ ವೀತಂ ಹರ್ಯತಂ ವೃಷಣಾ ಜುಷೇಥಾಮ್ | 
ಸುಶರ್ಮಾಣಾ ಸ್ವವಸಾ ಹಿ ಭೂತಮಥಾ ಧತ್ತಂ ಯಜಮಾನಾಯ ಶಂಯೋಃ ||
ಯೋ ಅಗ್ನೀಷೋಮಾ ಹವಿಷಾ ಸಪರ್ಯಾದ್ದೇವದ್ರೀಚಾ ಮನಸಾ ಯೋ ಘೃತೇನ | 
ತಸ್ಯ ವ್ರತಂ ರಕ್ಷತಂ ಪಾತಮಂಹಸೋ ವಿಶೇ ಜನಾಯ ಮಹಿ ಶರ್ಮ ಯಚ್ಛತಮ್ ||
ಅಗ್ನೀಷೋಮಾ ಸವೇದಸಾ ಸಹೂತೀ ವನತಂ ಗಿರಃ ಸಂ ದೇವತ್ರಾ ಬಭೂವಥುಃ ||
ಅಗ್ನೀಷೋಮಾವನೇನ ವಾಂ ಯೋ ವಾಂ ಘೃತೇನ ದಾಶತಿ ತಸ್ಮೈ ದೀದಯತಂ ಬೃಹತ್ ||
ಅಗ್ನೀಷೋಮಾವಿಮಾನಿ ನೋ ಯುವಂ ಹವ್ಯಾ ಜುಜೋಷತಮ್ | ಆ ಯಾತ ಮುಪ ನಃ ಸಚಾ ||
ಅಗ್ನೀಷೋಮಾ ಪಿಪೃತಮರ್ವತೋ ನ ಆಪ್ಯಾಯಂತಾಮುಸ್ರಿಯಾ ಹವ್ಯಸೂದಃ | 
ಅಸ್ಮೇ ಬಲಾನಿ ಮಘವತ್ಸು  ಧತ್ತಂ ಕೃಣುತಂ ನೋ ಅಧ್ವರಂ ಶ್ರುಷ್ಟಿಮಂತಮ್ ||

ಈ ಭಿನ್ನ ಭಿನ್ನವಾದ ಕೆಲ ಅಗ್ನಿ ಪ್ರಭೇದಗಳು ಪ್ರಪಂಚ ಮುಖದಲ್ಲಿರುತ್ತವೆ. ಅವುಗಳೆಲ್ಲಾ ಯಾವುದೇ ಕಾರಣಕ್ಕೆ ಅವು ಒಂದೇ ಅಲ್ಲ. ಹಾಗೂ ಇನ್ನೊಂದು ಆ ಗುಣವನ್ನು ಹೊಂದಲು ಸಾಧ್ಯವಿಲ್ಲ. ಕೃತಕವಾಗಿಯೂ ಒದಗಿಸಲು ಸಾಧ್ಯವಿಲ್ಲ. ಸಹಜ ಶಾಖ ಮಾತ್ರದಿಂದ ಗುರುತಿಸುವ ಅಗ್ನಿಯಲ್ಲಿಯೇ ಸೌದೆ, ತೆಂಗಿನ ಚಿಪ್ಪು, ತೆಂಗಿನ ಸಿಪ್ಪೆ, ಅಡಿಕೆ ಸಿಪ್ಪೆ, ಗೇರುಬೀಜ ಇತ್ಯಾದಿ ಪ್ರಕೃತಿ ಮೂಲ, ಇನ್ನು ವಿದ್ಯುತ್, ಗ್ಯಾಸ್ ಇತ್ಯಾದಿ ಮೂಲದಲ್ಲಿಯೇ ಯಾವುದೂ ಒಂದರಂತಿಲ್ಲ ಒಂದು. ಹಾಗಿದ್ದ ಮೇಲೆ ಇನ್ನು ಮುಂದೆ ತಿಳಿಸುವ ಅಗ್ನಿ ಪ್ರಭೇದಗಳು ಅದಕ್ಕಿಂತ ತೀರಾ ಭಿನ್ನ. ಈ ಮೇಲ್ಕಂಡ ಭೌತಿಕವಸ್ತು ಮೂಲದಿಂದ ಉತ್ಪನ್ನಗಳಾದ ಬೆಂಕಿ ಶಾಖಕ್ಕೆ ಮಾತ್ರಾ. ಆದರೆ ಈ ಅಗ್ನಿಗಳು ಶಾಖ ಮಾತ್ರವಲ್ಲ, ಇತರೆ ಗುಣವನ್ನೂ ಹೊಂದಿದೆ. ಅವುಗಳಲ್ಲಿ ದಕ್ಷಿಣಾಗ್ನಿ ಪ್ರಭೇದ, ಗಾರ್ಹಪತ್ಯಾಗ್ನಿ ಪ್ರಭೇದ ಹಾಗೂ ಆವಹನೀಯಾಗ್ನಿ ಪ್ರಭೇದಗಳು ಎಂದು ಮೂರು ವಿಧ. ಅವುಗಳ ವಿಸ್ತೃತ ರೂಪ ಅಗಾಧ ಶಕ್ತಿ. ವಿವರಿಸಲಸಾಧ್ಯ. ಸ್ವಯಂಶಕ್ತಿ ಹಾಗೂ ಸ್ವಯಂಪ್ರೇರಿತ. ಅದರ ವಿವರಣೆ ಕೊಡಲು ನನ್ನ ಇತಿಮಿತಿಯಲ್ಲಿ ಪ್ರಯತ್ನಿಸುತ್ತೇನೆ.

ಮೊದಲು ದಕ್ಷಿಣಾಗ್ನಿ:-
 1. ಹವಿಷಃ
 2. ಪ್ರಸ್ಥಿತ
 3. ವೀತ
 4. ಹರ್ಯತ
 5. ವೃಷಣಾ
 6. ಜುಷತಾ
 7. ಸುಶರ್ಮ
 8. ಸ್ವವಸಾ
 9. ಭೂತ
 10. ಧತ್ತ
ಇವೆಲ್ಲಾ ದಕ್ಷಿಣಾಗ್ನಿಯಲ್ಲಿ ಮುಖ್ಯಪ್ರಭೇದ. ಇನ್ನು ಇವುಗಳ ಅಂಶಾಗ್ನಿಗಳು ಪ್ರತಿಯೊಂದೂ 6 ವಿಧದಲ್ಲಿವೆ. ಒಟ್ಟು 60 ಪ್ರಭೇದಗಳು. ಇವೆಲ್ಲಾ ಅತೀ ತೀಕ್ಷ್ಣಾಗ್ನಿಗಳು.

ಇದರಲ್ಲಿ ಹವಿಷಃ ದ ಜ್ವಲನಶಕ್ತಿ ಸಾಮಾನ್ಯ (1800 ಡಿಗ್ರಿ ಸೆಲ್ಸಿಯಸ್) ಅಥವಾ ಮಂಡೂರ ಶಾಖ. ಇದರ 6 ಪ್ರಭೇದಗಳು-
 1. ರಂಜಕ
 2. ವ್ಲೀಹ
 3. ಋಚಿ
 4. ಉನ್ಮಾತೃ
 5. ಖಾಂಡವ
 6. ಅನಲ
ಇವೆಲ್ಲಾ ಮೂಲಶಕ್ತಿಗೆ ಹತ್ತುಪಟ್ಟು ಹೆಚ್ಚುತ್ತಾ ಹೋಗುವ ಶಕ್ತಿಯವು. ಆದರೆ ಇವಕ್ಕೆ ಮೂಲ ಇಂಧನರಾಹಿತ್ಯ ಅಗ್ನಿಗಳು. ಇವಕ್ಕೆ ಉರಿಯಲು ಇಂಧನ ಬೇಡ. ಕಂಪಕಾರಣ ಜ್ವಲಿತವಿವು. ಅದರಲ್ಲಿ ಧತ್ತಾಗ್ನಿಯು ಒಮ್ಮೆ ಜ್ವಲಿತವಾದರೆ ಉಪಸಂಹಾರ ಗೊತ್ತಿಲ್ಲದಿದ್ದಲ್ಲಿ ಅದು ಆರುವುದೇ ಇಲ್ಲ. ಪ್ರಪಂಚದ ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುತ್ತಾ ಶೂನ್ಯ ಸೃಷ್ಟಿ ಮಾಡುವ ಅಗಾಧ ಶಕ್ತಿಯುತವಾದದ್ದು. ಇದರ ಶಕ್ತಿಯನ್ನು ಅಳೆಯುವುದಕ್ಕೆ ಮಾಪನವೇ ಇಲ್ಲ. 

ಒಂದು ವಿಚಾರ ಗಮನಿಸಿ. ಮಹಾಭಾರತ ಯುದ್ಧಕಾಲದಲ್ಲಿ ಕೌರವ ಭೀಷ್ಮರಲ್ಲಿ ತನ್ನ ಸೇನೆಯ ಮತ್ತು ಪಾಂಡವಸೇನೆಯ ಬಲಾಬಲ, ಅತಿರಥ, ಮಹಾರಥರ ಶಕ್ತಿಯನ್ನು ವಿವರಿಸ ಬೇಕೆಂದಾಗ ಭೀಷ್ಮರು ಹೇಳುತ್ತಾರೆ- ಯಾರು ಯಾರು ಎಂತಹ ವೀರರು ಹಾಗೂ ಒಟ್ಟು ಸೇನೆಯನ್ನು ಯಾರು ಎಷ್ಟು ಕಾಲದಲ್ಲಿ ನಿರ್ನಾಮ ಮಾಡಬಲ್ಲರು ಎಂದು ಹೇಳುತ್ತಾ ತನಗೆ ಒಂದಿನ, ದ್ರೋಣರಿಗೆ ಮೂರುದಿನ, ಅಶ್ವತ್ಥಾಮನಿಗೆ ಒಂದು ನಿಮಿಷ, ಪಾರ್ಥನಿಗೆ ನಿಮಿಷಾರ್ಧ ಸಾಕು. ಈ ಒಟ್ಟು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ನಾಶಮಾಡಲು ಎಂದು ಹೇಳುತ್ತಾರೆ. ಅಂದರೆ ಈ ಅಗ್ನಿಯ ಸಿದ್ಧಿ ಮಾಡಿಕೊಂಡವ ಕ್ಷಣಾರ್ಧದಲ್ಲಿ ಸರ್ವನಾಶ ಮಾಡಬಲ್ಲ ಎನ್ನುತ್ತಾರೆ. 18 ಅಕ್ಷೋಹಿಣಿ ಸೇನೆಯನ್ನು ಕ್ಷಣಾರ್ಧದಲ್ಲಿ ನಾಶಮಾಡುವ ಶಕ್ತಿ ಅರ್ಜುನ ಹೊಂದಿದ್ದಾನೆಯೆಂದರೆ ಆಗ್ನೇಯಾಸ್ತ್ರ ಶಕ್ತಿಯ ಪ್ರಮಾಣ ನೀವೇ ಅಳೆದುಕೊಳ್ಳಿರಿ. ಇವೆಲ್ಲಾ 60 ವಿಧದ ದಕ್ಷಿಣಾಗ್ನಿ ಪ್ರಭೇದಗಳು. ಇನ್ನು ಗಾರ್ಹಪತ್ಯಾಗ್ನಿಯಲ್ಲಿ 1011 ಪ್ರಭೇದಗಳು. ಇವೆಲ್ಲಾ ಸಹಜ ಇಂಧನಮೂಲ. ಭೌತಿಕವಸ್ತುಗಳನ್ನು ಅವಲಂಬಿಸಿ ಪ್ರಖರತೆ ಪಡೆಯುವ ಶಕ್ತಿಹೊಂದಿದ ಅಗ್ನಿಗಳು. ಇಲ್ಲಿ

ಚಿತಿಗಳು :- 184 ವಿಧ

ಇಷ್ಠಿಕಗಳು :- 156 ವಿಧ

ಸೋಮಗಳು :- 109 ವಿಧ

ಜಯಾದಿಗಳು :- 365 ವಿಧ
ಉಪಾಸನಾಗ್ನಿಗಳು :- 144 ವಿಧ
ಸಂಸ್ಕಾರಾಗ್ನಿಗಳು :- 53 ವಿಧ ಒಟ್ಟು 1011 ವಿಧ.

ಇವೆಲ್ಲಾ ಆಯಾಯ ಸಂಸ್ಕಾರ ಆಧರಿಸಿ ಅಗ್ನಿಯನ್ನು ಸಂಯೋಜನ ಮಾಡುವ ಪ್ರಕ್ರಿಯೆಯೇ ಸಂಸ್ಕಾರ ಎನ್ನಿಸಿಕೊಳ್ಳುತ್ತದೆ. ಅಲ್ಲಿ ಬಲವರ್ಧನಾದಿ 22 ಅಗ್ನಿಭೇದಗಳು ಸಾಮಾನ್ಯವಾಗಿ ಮಾನವಜೀವನ ಸಂಸ್ಕಾರಕ್ಕೆ ಸಾಕು. ಇನ್ನುಳಿದ 31 ವಿಧಗಳು ಯಾಗ, ಯಜ್ಞ, ಇಷ್ಠಿ, ಚಿತಿಗಳಲ್ಲಿ ಭಿನ್ನ ಭಿನ್ನ ರೂಪದಿಂದ ವ್ಯವಹರಿಸುತ್ತವೆ. ಒಟ್ಟು ವಿಶೇಷ ಉದ್ದೇಶದಿಂದ ಮಾಡುವ ಇತರೆ ಯಾಗಯಜ್ಞ ಯೋಜನದಲ್ಲಿ ಈ ಯಾವುದೇ ವಿಧದ ಅಗ್ನಿಯೂ ಬಳಕೆಯಾಗಬಹುದು. ಆದರೆ ಎಲ್ಲವೂ ಶಾಂತ, ಸುಶೀಲ, ಶ್ರೇಷ್ಠ ಅಗ್ನಿ ಪ್ರಭೇದಗಳು. ಇದನ್ನು ಮಾನವನಿಗೆ ಬಳಕೆಗೆ ಶ್ರೇಷ್ಠವೆಂದು ಸೂತ್ರಕಾರರು ಇವುಗಳನ್ನು ಮರ್ತ್ಯಾಗ್ನಿ ಪ್ರಭೇದವೆಂದು ಹೇಳಿರುತ್ತಾರೆ. ಇದರ ಮೂಲ ಮಾತ್ರಾ ಗೃಹಿಣಿ, ಸುಮಂಗಲಿ, ಹೆಣ್ಣು. ಅವಳೇ ಅನಸೂಯೆ.


ಇನ್ನು ಮೂರನೆಯದಾದ ಆವಹನೀಯಾಗ್ನಿ. ಇದು ಚಿತ್ರರೂಪಾ ಎಂದಿದೆ ವೇದ. ಹಲವು ಪರಿವರ್ತನೆಗಳಿಂದ ಭಿನ್ನಾಂಶಯುಕ್ತವಾಗಿದ್ದು ಪ್ರಾಪಂಚಿಕ ಬೆಳೆಸುತ್ತಾ ಆಧ್ಯಾತ್ಮದೆಡೆಗೆ ಕೊಂಡೊಯ್ಯುವ ವಿಶಿಷ್ಠಗುಣವನ್ನು ಹೊಂದಿರುತ್ತದೆ. ಆದರೆ ಇದರ ಮಾತೃಕೆಯೂ ಸ್ತ್ರೀಯೊಬ್ಬಳಿಂದ ಪ್ರಕಟಗೊಂಡು ಗೃಹಸ್ಥನಿಂದ ಔಪಾಸನೆಗೊಂಡು ನಂತರವೇ ಆವಹನೀಯ ಗುಣವನ್ನು ಹೊಂದಿ ಲೋಕಮುಖದಲ್ಲಿ ವ್ಯವಹರಿಸುತ್ತದೆ. ಅದರ ವಿವರ ಗಮನಿಸಿ

ಉದಾ:-ನಾಚಿಕೇತಾಗ್ನಿ. ಒಂದು ಆಹವನೀಯ ಭಾಗದ ಪ್ರಭೇದ. ಇಲ್ಲಿ ವಾಜಶ್ರವನ ಮಗ ನಚಿಕೇತನು ತಾನು ಆರ್ಜಿಸಿದ ಜ್ಞಾನಕಾರಣದಿಂದಾಗಿ ನಚಿಕೇತನ ಅಧ್ಯಾಪಿತ ಜ್ಞಾನವೇ ಒಂದು ಅಗ್ನಿ ಪ್ರಭೇದ. ಹಾಗೇ ಬೇರೆ ಬೇರೆ ಋಷಿ, ಮುನಿ, ಮನುಗಳ ಜ್ಞಾನವೇ ಅಗ್ನಿಯಾಗಿ ರೂಪು ಪಡೆಯುತ್ತದೆ. ಅದನ್ನು ಸಾಧಿಸುವ ವಿಧಾನವೇ ವಿಶೇಷ ಸಾಧನೆ. ಆದರೆ ಈ ಅಗ್ನಿಯಲ್ಲಿ ಶಾಖವಿಲ್ಲ, ಸುಡುವುದಿಲ್ಲ, ತಂಪಾಗಿರುತ್ತದೆ. ಅಲ್ಲಿ ಅದನ್ನು ಪ್ರಖರಗೊಳಿಸುವುದೇ ಒಂದು ತಾಂತ್ರಿಕವಿಧ್ಯೆ. ಇಲ್ಲಿ 
 1. ರಸಾದಿ ಸಂಸ್ಕರಣ ವಿಧ್ಯೆಗಳು, 
 2. ಧಾತು ಸಂಸ್ಕರಣಾದಿಗಳು, 
 3. ಲೋಹ ಸಂಸ್ಕರಣಾದಿಗಳು, 
 4. ಜೀವಸಂಸ್ಕರಣಾದಿಗಳು, 
 5. ಮಾನವ ಸಂಸ್ಕರಣಾದಿಗಳು, 
 6. ಮನೋ ಸಂಸ್ಕರಣಾದಿಗಳು, 
 7. ಆತ್ಮ ಸಂಸ್ಕರಣಾದಿಗಳು 
ಎಂಬ 7 ರೀತಿಯ  ಉಜ್ಜೀವಿತ ವಿಧ್ಯಾಪ್ರಕಾರವೇ ಇದೆ. ಇದು ಏನನ್ನೂ, ಏನಕ್ಕೇನೂ ಮಾಡಬಲ್ಲ ಪರಿವರ್ತಿಸಿ ರೂಪುಗೊಡುವ ಶಕ್ತಿ ಇದಕ್ಕಿದೆ.

ನಚಿಕೇತಾಗ್ನಿಯಲ್ಲಿ ನೀವು ಹೋಮಿಸಿದ ವಸ್ತು ಸುಡುವುದಿಲ್ಲ ಆದರೆ ವಸ್ತು ಪರಿವರ್ತನೆಯಾಗುತ್ತದೆ. ಅದು ಐಚ್ಛಿಕ. ಅದರಲ್ಲಿ ಶಾಖವಿಲ್ಲ. ಭೌತಿಕವಸ್ತುವನ್ನು ಯಾವುದನ್ನೂ ಸುಡುವುದಿಲ್ಲ. ಆದರೆ ಪರಿವರ್ತಿಸಬಲ್ಲದು. ಅದರ ರಸ, ದ್ರವ್ಯ, ಧಾತು, ಶಕ್ತಿ, ಋಣ, ಕಣ, ಗುಣ ಆಧರಿಸಿ ಅದು ರೂಪಾಂತರ ಹೊಂದುತ್ತದೆ. 

ಉದಾ:- ಒಬ್ಬನಿಗೆ ಒಂದು ಮಾವಿನ ಹಣ್ಣು ಬೇಕೆಂದರೆ ನಚಿಕೇತಾಗ್ನಿಯಲ್ಲಿ ಮಾವಿನ ಹಣ್ಣಿನ ರಸಾದಿ ಸಪ್ತಸಂಯೋಜನೆ ಮಾಡಿ ಹೋಮಿಸಿದಲ್ಲಿ ಮಾವಿನ ಹಣ್ಣಿನ ರಾಶಿಯೇ ದೊರಕುತ್ತದೆ. ಅದು ಅನಂತ. ನೀವು ಹೋಮಿಸಿದ ದ್ರವ್ಯ ಗಾತ್ರದಷ್ಟೇ ಅಲ್ಲ, ಅದರ ಸಾವಿರ-ಲಕ್ಷಪಟ್ಟು ಒದಗಿಸಿಕೊಡಬಲ್ಲದು. ಒಂದು ಶಿಶು ಬೇಕೆಂದು ಬಯಸಿ ಮಗುವಿನ ಅಂಶಯುಕ್ತಗೊಳಿಸಿ ಹೋಮಿಸಿದಲ್ಲಿ ಕೇಳಿದ, ಬಯಸಿದ ಪುರುಷ, ಪೌರುಷ, ಶಕ್ತ ಶಿಶು ಕುಂಡದಲ್ಲೇ ಆವಿರ್ಭಾವವಾಗುತ್ತದೆ. 

ಉದಾ:- ದ್ರೌಪದಿ, ದೃಷ್ಟದ್ಯುಮ್ನ, ತ್ರಿಶಿರ, ತ್ವಷ್ಟ್ರ, ಅಗ್ನಿವೇಶಿ, ಕಂಕ, ಕೃತು, ವೃತ್ರ ಇವರೆಲ್ಲರ ಜನನವೂ ಈ ರೀತಿಯದ್ದೇ. ಇದೆಲ್ಲಾ ವಿಶೇಷ ಸಾಧನೆಯಿಂದ ಆಹವನೀಯ ಸೂತ್ರದಲ್ಲಿ ಸಾಧ್ಯ. ಅದಕ್ಕಾದ ಅಗ್ನಿ ಸಾಧಿಸಿಕೊಳ್ಳಬೇಕಷ್ಟೆ. ಇವೆಲ್ಲಾ ಅಗ್ನಿಮುಖದಿಂದ ಸಾಧಿಸಿದ ಸಾಧನೆಯನ್ನು ಕಾಣಬಹುದು ನಾವು. ಹೀಗೆ ಪ್ರಧಾನವಾಗಿ ದಕ್ಷಿಣಾ, ಗಾರ್ಹಪತ್ಯ, ಆಹವನೀಯಾಗ್ನಿಯ ಪ್ರಭೇದವಿರುತ್ತದೆ. ಇದನ್ನು ಅರಿತು ಸಾಧಿಸಿದ ಸಾಧಕನು ಖಂಡಿತವಾಗಿ ಆತ್ಮೋದ್ಧಾರ ಮಾಡಿಕೊಳ್ಳಬಲ್ಲ. ಈ ವಿಚಾರವನ್ನು ತಿಳಿಸುತ್ತಾ ನನ್ನ ಮತಿಯ ಮಿತಿಯಲ್ಲಿ ಇದನ್ನು ಹೇಳಿದ್ದೇನೆ ಎಂದು ವಿನಯದಿಂದ ಪ್ರಾರ್ಥಿಸಿ ಅಗ್ನಿಯ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿದ ಮಹನೀಯರಲ್ಲಿ ವಿಜ್ಞಾಪಿಸಿಕೊಂಡು ಈ ಲೇಖನ ಮುಗಿಸುತ್ತಿದ್ದೇನೆ.
  ಇಂತು
ಕೆ. ಎಸ್. ನಿತ್ಯಾನಂದ
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ, 
ಚಿಕ್ಕಮಗಳೂರು

No comments:

Post a comment