Sunday, 13 December 2015

ವಿಜ್ಞಾನವೆಂದರೇನು?

ಲೋಕವೆಲ್ಲಾ ತಿಳಿದಿರುವುದು ಈಗಿನ ಸಾಯನ್ಸ್ ಎಂದು ಬಿಂಬಿಸುತ್ತಿರುವ ಬೊಗಳೆಯೇ ವಿಜ್ಞಾನವೆನ್ನುತ್ತಿದ್ದಾರೆ. ಆದರೆ ಅದು ವಿಜ್ಞಾನವಲ್ಲ. ಯಾವುದು ಮನುಷ್ಯನನ್ನು ಬೌದ್ಧಿಕವಾಗಿ ಎತ್ತರಕ್ಕೇರಿಸುತ್ತದೆಯೋ, ಯಾವುದು ಶಾಂತಿ, ದಯೆ, ಕರುಣೆ, ಔದಾರ್ಯ, ಸಹಿಷ್ಣುತೆ, ಜ್ಞಾನ ತುಂಬಿಸಬಲ್ಲದೋ ಅದು ವಿಜ್ಞಾನ. ಒಂದು ನಾಶಕಾರೀ ಅಸ್ತ್ರ ಕಂಡುಹಿಡಿದು ಲೋಕಕಂಟಕರಾಗುವುದು ವಿಜ್ಞಾನವಲ್ಲ. ಯಾವುದೇ ವಿಚಾರ, ಕಾರ್ಯ, ವೃತ್ತಿ, ಉತ್ಪಾದನೆ ಇವುಗಳು ಲೋಕನಾಶಕರವಲ್ಲದ ರೀತಿಯಲ್ಲಿ ಉತ್ಪಾದಿಸಿ ಲೋಕಕ್ಕೆ ತ್ಯಾಗರೀತಿಯಲ್ಲಿ ಕೊಡುತ್ತಾ ಹಾಗೇ ಆ ವಿಚಾರವು ಲೋಕಕಂಟಕವಾದಲ್ಲಿ ಅದನ್ನು ಹಿಂಪಡೆಯುವ ಅಂದರೆ ಉಪಸಂಹಾರ ವಿಧಿಯುಕ್ತವಾಗಿರುವ ಜ್ಞಾನವೇ ವಿಜ್ಞಾನವೆನ್ನಿಸಿಕೊಳ್ಳುತ್ತದೆ. ಈಗಿನ ಬಂಡವಾಳಶಾಹಿ ವೃತ್ತಿಯು ವಿಜ್ಞಾನವೆಂದರೆ ಅದು ನಿಮ್ಮ ಮೂರ್ಖತನವೆನ್ನಬಹುದು. ಇಲ್ಲಿ ಗಮನಿಸಿ ಒಂದು ಉದಾಹರಣೆ ಕೊಡುತ್ತೇನೆ.ಮೊಬೈಲ್:- ಇದು ಆರಂಭದಲ್ಲಿ ಬಳಕೆಗೆ ಬಂದಾಗ ಇದರ ಬೆಲೆ ಎಷ್ಟು ಗೊತ್ತೆ? ಅಂದಾಜು 70,000 ಕ್ಕೆ ಮಾರಾಟ. ದಿನಕ್ಕೆ 40 ರೂ. ಬಾಡಿಗೆ. ಒಂದು ಕಾಲ್ ಗೆ 12 ರೂ.ಗಿಂತ ಹೆಚ್ಚು. ಹಾಗೇ ಯಾರೋ ಒಬ್ಬ ತನ್ನ ಸಂಶೋಧನೆಯನ್ನು ಬಂಡವಾಳ ಮಾಡಿಕೊಳ್ಳುವ ನಿಟ್ಟಿನಲ್ಲಿ ರೂಪಿಸಿದ ಒಂದು ಎಲೆಕ್ಟ್ರಾನಿಕ್ ವಸ್ತುವು ಅದು ಉತ್ಪಾದಕ ಪರಿಕರವೇ ವಿನಃ ವಿಜ್ಞಾನವಲ್ಲ. ನಂತರ ಮುಂದುವರಿದ ಸಂಶೋಧನೆಯಿಂದಾಗಿ ಮೊಬೈಲ್ ಸರಳವಾಗುತ್ತಾ ಬಂದಿದ್ದರೂ ಅದರ ಬಳಕೆ, ವ್ಯಾಪ್ತಿ, ಉತ್ಪಾದಕ ವೆಚ್ಚ ಒಂದು ಸಂಸ್ಥೆಯ ಐಶಾರಾಮಿ ಜೀವನಕ್ಕೆ ಸಮಾಜ ಕೊಡುತ್ತಿರುವ ತೆರಿಗೆಯೆನ್ನಿಸಿಕೊಳ್ಳುತ್ತದೆಯೇ ವಿನಃ ಮೌಲ್ಯಾಧಾರಿತ ವಿಜ್ಞಾನವಲ್ಲ. ವಿವಿಧ ಜ್ಞಾನವು ಸಮಾಜಕ್ಕೆ ಮುಕ್ತವಾಗಿ ಉಚಿತವಾಗಿ ದೊರಕುತ್ತಾ ತನ್ಮೂಲಕ ಮಾನವನನ್ನು ಬೌದ್ಧಿಕ ಅಭಿವೃದ್ಧಿಯತ್ತ ಕೊಂಡೊಯ್ಯುವ ಜ್ಞಾನ ಮಾತ್ರ ವಿಜ್ಞಾನವೆನ್ನಿಸುತ್ತದೆ. 

ಈಗಿನ ಮೀಸಲು ಕಾನೂನು (ಪೇಟೆಂಟ್) ವಿಜ್ಞಾನ ಅಭಿವೃದ್ಧಿಗೆ ಕೆಟ್ಟ ಮಾರಕ ರೋಗ. ಯಾವುದೇ ಒಂದು ಸಂಶೋಧನೆ ಸಂಶೋಧಕನ ಆಸ್ತಿಯಲ್ಲ. ಅದು ಮೊದಲಿದ್ದದ್ದು. ಕಂಡು ಹಿಡಿದದ್ದು ಮಾತ್ರ ಅತನಷ್ಟೆ. ಹಾಗಾಗಿಯೇ (ರೀಸರ್ಚ್) ಸಂಶೋಧನೆ ಎನ್ನಿಸಿದೆ. ಆವಿಷ್ಕಾರಗೊಂಡ, ಗೊಳಿಸಿದ ಎಲ್ಲವೂ ಪೂರ್ವದಲ್ಲಿ ಇದ್ದದ್ದೇ ಆಗಿರುತ್ತದೆ. ಹೊಸ ಸೃಷ್ಟಿ ಖಂಡಿತಾ ಅಲ್ಲ. ಈಗಿನ ಬಂಡವಾಳಶಾಹೀ ಸಂಶೋಧನೆ ವಿಜ್ಞಾನವಲ್ಲ. ವಿಜ್ಞಾನವೆನ್ನಿಸಿಕೊಳ್ಳಲಾರದು. ಅವಲಂಬಿತವೆನ್ನುತ್ತದೆ. ಅದು ಮುಕ್ತತೆಗೆ ವಂಚಿತವೆನ್ನಿಸುತ್ತದೆ. ಅವಲಂಬನವೃತ್ತಿ ಮಾನವಗೆ ಯೋಗ್ಯವಲ್ಲ. ವಿಚಾರ ಸಂಪುಟವೃತ್ತಿ  ಎಂದು ಇದು ಕರೆಸಿಕೊಳ್ಳುತ್ತದೆ. 

ಏನಕೇನ ಪ್ರಕಾರೇಣ ವೈಜ್ಞಾನಿಕ ಆವಿಷ್ಕಾರ ದುರುಪಯೋಗಗೊಂಡರೆ ಮೊದಲು ಅದನ್ನು ಉಪಸಂಹರಿಸಿ ನಾಶ ಮಾಡಬೇಕೆನ್ನುತ್ತದೆ ವಿಜ್ಞಾನ ದರ್ಶನ ಶಾಸ್ತ್ರ. ಈಗ ಉತ್ಪಾದಿಸಿ ಬಿಡುತ್ತಾರೆ, ನಂತರ ಅದರ ದುಷ್ಪರಿಣಾಮ ತಡೆಯಲೂ ಆಗುವುದಿಲ್ಲ. ಸರಕಾರ ಕಾನೂನು ಮಾಡುತ್ತದೆ, ಕಾನೂನಿನ ಅಸ್ತ್ರವಿಟ್ಟು ಅಧಿಕಾರಿಗಳು ಭ್ರಷ್ಟರಾಗುತ್ತಾ ಲಂಚಗುಳಿಗರಾಗುತ್ತಾ ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತದೆ. ಇಂತಹದ್ದನ್ನು ವಿಜ್ಞಾನವೆನ್ನಲಾದೀತೆ? ಜನರಲ್ಲಿ ಸಜ್ಜನಿಕೆ, ದಯೆ, ದಾಕ್ಷಿಣ್ಯ, ಕರುಣೆ, ಸುಜ್ಞಾನ ಮೂಡಿಸದ ಯಾವುದೇ ಜ್ಞಾನ ವಿಜ್ಞಾನವಲ್ಲ. ಅದೇ ವಾಮಾಚಾರ. ಈ ಲೋಕಕಂಟಕವಾದದ್ದನ್ನೇ ವಿಜ್ಞಾನವೆಂದು ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ. ಖಂಡಿತಾ ಇದು ವಿಜ್ಞಾನವಾಗಲು ಸಾಧ್ಯವಿಲ್ಲ.

ಹಾಗಾಗಿ ಲೋಕಕ್ಕೆ ನೈಜ ವಿಜ್ಞಾನ ಬೇಕಿದ್ದಲ್ಲಿ ವೇದ ಓದಿರಿ. ವಿಜ್ಞಾನ ಅರಿಯಿರಿ, ಪಡೆಯಿರಿ, ಲೋಕೋದ್ಧಾರ ಮಾಡಿರಿ. ಹಿಂದೆಲ್ಲಾ ಉತ್ತಮ ಜೀವನ, ಸಾರ್ಥಕ್ಯ ಜೀವನ ಮಾಡಿದ ನಮ್ಮ ಹಿರಿಯರು, ಋಷಿ, ಮುನಿಗಳು ರಾಜ ಮಹಾರಾಜರು ಇರಲಿಲ್ಲವೆ? ಅಲ್ಲೆಲ್ಲಾ ಈಗಿನ ವಿಜ್ಞಾನವಿತ್ತೇ? ಖಂಡಿತಾ ಇರಲಿಲ್ಲ. ಆದರೆ ಲೋಕಕ್ಕೆ ಗೊತ್ತಿಲ್ಲದ ಭಾರತೀಯ ಋಷಿ ಪರಂಪರೆ, ರಾಜ ಮಹಾರಾಜರು, ಕ್ಷತ್ರಿಯ ವೀರರು, ಕಲಾವಿದರು, ಸುಜ್ಞಾನಿಗಳು, ವ್ಯಾಪಾರ ವಾಣಿಜ್ಯ ಪ್ರವೀಣರು, ಸೇವಾ ನಿಪುಣರು ಇವರೆಲ್ಲಾ ಯಾವ ಪ್ರಚಾರ ಮಾಧ್ಯಮ ಸಹಾಯ ಪಡೆಯದೇ ಲೋಕ ವಿಖ್ಯಾತರಾಗಲಿಲ್ಲವೆ? ಈಗೇಕೆ ವಿಜ್ಞಾನವೆಂಬ ಮೋಸದ ಬಳಕೆಯಿಂದ ಸಮಾಜವನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ?

ಈ ದಿಕ್ಕಿನಲ್ಲಿ ವಿಜ್ಞಾನವೆಂದರೇನೆಂದು ವೇದದ ಅಂತರ್ಯವನ್ನು ತಿಳಿಯಲು ಪ್ರಯತ್ನಿಸೋಣ.

ಋಗ್ವೇದ, ಮಂಡಲ.3, ಸೂಕ್ತ 39, ಮಂತ್ರ 5

ಸಖಾ ಹ ಯತ್ರ ಸಖಿಭಿರ್ನವಗ್ವೈರಭಿಜ್ಞ್ವಾ ಸತ್ವಭಿರ್ಗಾ ಅನುಗ್ಮನ್|
ಸತ್ಯಂ ತದಿಂದ್ರೋ ದಶಭಿರ್ದಶಗ್ವೈಃ ಸೂರ್ಯಂ ವಿವೇದ ತಮಸಿ ಕ್ಷಿಯಂತಮ್ ||

ಸಕಲ ಜೀವಿಗಳಿಗೆ ಉಪಯುಕ್ತವಾಗಿ ಶ್ರೇಷ್ಠತ್ವದೆಡೆಗೆ ಸಾಗುವ ಹಾದಿಯಲ್ಲಿ ಜೊತೆಗೂಡಿ, ಅಭಿವೃದ್ಧಿ ಮಾರ್ಗದಲ್ಲಿ ಪೂರಕವಾಗಿ ನಿರಂತರ ಸತ್ಯಮಾರ್ಗದರ್ಶವಾಗಿದ್ದು, ಹಲವು ಹತ್ತು ದಾರಿಗಳನ್ನು ತೆರೆದಿಡುತ್ತಾ, ವಿಷಯದ ವಿಚಾರದ ಬೆಳಕನ್ನು ಬೀರುತ್ತಾ, ಜೈವಿಕ ಜಗತ್ತಿನ ಉನ್ನತಿಗೆ ಕಾರಣವಾಗಿರುವುದೇ ವಿಜ್ಞಾನ. ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸುತ್ತದೆ. ಹಾಗೇ ಅಜ್ಞಾನ (ತಮಸಿ ಕ್ಷಿಯಂತಮ್) ನಾಶ ಮಾಡುತ್ತದೆ. ಸಾರ್ವಕಾಲಿಕ ಸತ್ಯವನ್ನು ತೋರಿಸಿ ಕೊಡುತ್ತದೆ (ಸತ್ಯಂ ವಿವೇದ). ಸಕಲ ಜೀವರಾಶಿಗಳಿಗೆ (ನವಗ್ವೈರಭಿಜ್ಞ್ವಾ) ಜ್ಞಾತವಾಗಿ ನೂತನವಾಗಿ ನಿತ್ಯತೆಯ ಮಾರ್ಗದರ್ಶಕವಾಗಿ ಪ್ರಕಟಗೊಳ್ಳುತ್ತದೆ. ಹಾಗೇ ದೇವಸಖಾವೆನ್ನಿಸಿದೆ ಯಾವುದೋ ಅದು ವಿಜ್ಞಾನ. ವಿಜ್ಞಾನದ ನೈಜ ಆವಿಷ್ಕಾರಗಳು ಯಾವುದೇ ಕಾರಣಕ್ಕೂ ನಾಶಕಾರಕವಲ್ಲ. ಯಾವ ಮುಖದಲ್ಲಿ ದೋಷವಿರಲು ಸಾಧ್ಯವಿಲ್ಲ (ದಶಭಿರ್ದಶಗ್ವೈಃ) ಇಂತಹಾ ವಿಜ್ಞಾನವನ್ನು ತೋರಿಸಿಕೊಡುತ್ತದೆ ವೇದ. ದಯವಿಟ್ಟು ಈಗಿನ ಬಂಡವಾಳಶಾಹಿ ವಿಜ್ಞಾನವನ್ನು ನಂಬದೇ ವೇದಮೂಲದ ವಿಜ್ಞಾನದಡಿಯಲ್ಲಿ ನೆರಳನ್ನಾಶ್ರಯಿಸಿ ನಿರಂತರ ದ್ವೇಷಾಸೂಯೆ ಇಲ್ಲದ ಆನಂದದಾಯಕ ಬದುಕನ್ನು ಸಾಧಿಸಿಕೊಳ್ಳುವುದೇ ವಿಜ್ಞಾನ. ಇದನ್ನು ಬಳಸಿರಿ ಎಂದು ಹಾರೈಸುತ್ತೇನೆ.

ತಂತ್ರಶಾಸ್ತ್ರಗಳಲ್ಲಿ ವಿಜ್ಞಾನದ ಬಗ್ಗೆ ಕೆಲ ಮಾಹಿತಿ ತಿಳಿಸುತ್ತಾ ಈ ವಿಜ್ಞಾನವನ್ನು ಪರಿಚಯಿಸುತ್ತೇನೆ ಎಂದಿದ್ದಾರೆ ತಾಂತ್ರಿಕರು. ಅವು ಹೀಗಿವೆ.

1)    ಸತ್ಯ ಮಾತ್ರಾ ವಿಜ್ಞಾನವೆನ್ನಿಸುತ್ತದೆ.

2)    ಪ್ರತ್ಯಕ್ಷ, ಅನುಮಾನಗಳಿಗೆ ವಿಜ್ಞಾನ ಬದ್ಧ.

3)    ಪ್ರಕಟದ ಮೂಲವನ್ನು ಅರ್ಥೈಸುವುದು ವಿಜ್ಞಾನ.

4)    ಲೋಕೋಪಯೋಗಿ ಜ್ಞಾನ.

5)    ಎಲ್ಲವನ್ನೂ ಸಾಧಿಸಿ ತೋರಬಲ್ಲ ವಿಶೇಷ ಜ್ಞಾನ.

6)    ಭೌತಶಾಸ್ತ್ರ ನಿಯಮದಂತೆಯೇ ಹೊಂದಿಯೇ ಇರಬೇಕಾದ ವಿಶಿಷ್ಠ ಜ್ಞಾನವೇ ವಿಜ್ಞಾನ.

7)    ಕ್ರಿಯಾತ್ಮಕ, ಕರ್ತೃತ್ವ ಶಕ್ತಿಯ ಗಣಿ

8)    ರೂಪ, ರೂಪಾಂತರ, ಭೇದ, ಆಜ್ಞಾ, ಸಂಜ್ಞಾ, ಕ್ರಿಯಾ, ಕರಣ, ನಿರೂಪಣ, ಪ್ರಕಟ, ಪರಿಜ್ಞಾನ, ಸ್ಮೃತ, ನೃತ, ಕೃತ, ಕಥಾ ಎಂಬ ಹದಿನಾಲ್ಕು ಮುಖ್ಯ ಅಂಶಗಳನ್ನೊಳಗೊಂಡದ್ದು ಯಾವುದೋ ಅದು ವಿಜ್ಞಾನವೆನ್ನಿಸಿಕೊಳ್ಳುತ್ತದೆ.

ನೆಲೆಯಲ್ಲಿ ಹದಿನಾಲ್ಕು ಅಂಶಗಳನ್ನೊಳಗೊಂಡ ತಂತ್ರವೇ ನಿಜವಾದ ವಿಜ್ಞಾನವೆನ್ನಬಹುದು.

ಇಂತು

ಕೆ. ಎಸ್. ನಿತ್ಯಾನಂದ
ಪೂರ್ವೋತ್ತರೀಯ ಮೀಮಾಂಸಕರು
ವೇದ ವಿಜ್ಞಾನ ಮಂದಿರ
ಚಿಕ್ಕಮಗಳೂರು

No comments:

Post a Comment