Wednesday, 16 December 2015

ದೇಶದ ನಡೆ ಸರಿಯಿದೆಯೇ? ನಾವೆತ್ತ ಸಾಗುತ್ತಿದ್ದೇವೆ? ಮುಂದೇನು? ಪರಸ್ಪರ ಐಕ್ಯತೆ ಹೇಗೆ? - ವೈಧಿಕ ಚಿಂತನೆ


೧. ದೇಶದ ನಡೆ ಸರಿಯಿದೆಯೇ? 
೨. ನಾವೆತ್ತ ಸಾಗುತ್ತಿದ್ದೇವೆ? 
೩. ಮುಂದೇನು? 
೪. ಪರಸ್ಪರ ಐಕ್ಯತೆ ಹೇಗೆ?

ಈ ನಾಲ್ಕು ಚಿಂತನೆಗಳಲ್ಲಿ ಸರಿ ಯಾವುದು ತಪ್ಪು ಯಾವುದು ಅರ್ಥವಾಗದ ಸ್ಥಿತಿಗೆ ಹೋಗುತ್ತಿದ್ದಾನೆ ಸಾಮಾನ್ಯ ಜನ.  ಹಾಗಿದ್ದರೆ ಇದಕ್ಕೊಂದು ಉತ್ತರ, ಉತ್ತಮ ಪರಿಹಾರೋಪಾಯ ಬೇಕಲ್ಲವೆ? ಅದರ ಬಗ್ಗೆ ಚಿಂತನೆ ಮಾಡೋಣ. ನಮ್ಮೊಂದಿಗೆ ಬನ್ನಿ ಅಭಿಪ್ರಾಯ ಕೇಳಿರಿ. ಸರಿಯೆನ್ನಿಸಿದರೆ ಬಳಸಿರಿ.

ಮೊದಲು ದೇಶದ ನಡೆ ಸರಿಯಿದೆಯೆ? ಈ ಪ್ರಶ್ನೆಯನ್ನಿಟ್ಟುಕೊಂಡು ಚಿಂತಿಸೋಣ.

ಧೈವಸ್ಯ ಕಾರಣಂ ರಾಜಾ ರಾಜಾ ಪ್ರತ್ಯಕ್ಷ ದೇವತಾ |
ಪ್ರಜಾ ಪುಣ್ಯಸಶಕ್ತೇಯಂ ಲೋಕ ಲೋಕಸ್ಯ ಕಾರಣಂ ||

ಧೈವ ಚಿಂತನೆ ಅರಿಯಲಾರದ ನಾವು ರಾಜವರ್ತನೆ ಚಿಂತಿಸಲಾರೆವು. ಆದರೆ ರಾಜನೂ ಸರ್ವಶಕ್ತನಲ್ಲ. ಧೈವಾಧೀನವೇ ಪ್ರತಿ ಘಟನೆಯ ಹಿಂದಿದೆ. ಧೈವಚಿಂತನೆಯ ಉದ್ದೇಶವಿದೆ. ಅದನ್ನು ಅರಿತು ರಾಜ್ಯಾಡಳಿತದಲ್ಲಿ ಪ್ರಜಾಪುಣ್ಯವನ್ನು ಚಿಂತಿಸಿ ಅದರ ಶಕ್ತಾಶಕ್ತತೆ ಅರಿತು ಸೂಕ್ತ ನಿರ್ಧಾರ ಕೈಗೊಂಡು ಸದಾ ಪ್ರಜಾಕ್ಷೇಮ ಚಿಂತನೆ ಮಾಡುವವನೇ ರಾಜನೆನ್ನಿಸಿಕೊಳ್ಳಬಲ್ಲನು. ಅವನೇ ಲೋಕದ ನಡೆಗೆ ಕಾರಣನಾಗುತ್ತಾನೆ. ಕಾಲ ನಡೆಸುತ್ತಾನೆ. ಇಲ್ಲಿ ಕಾಲನ ನಡೆ ಮುಖ್ಯವೇ ವಿನಃ ರಾಜವರ್ತನೆಯಲ್ಲ. ಕಾಲ ಅಧೀನತೆಯಲ್ಲಿ ರಾಜನು ತನ್ನ ವೃತ್ತಿ ಧರ್ಮ ಅರಿತು ನಡೆಯಬೇಕಿದೆ. ಈ ದೃಷ್ಟಿಯಲ್ಲಿ ಚಿಂತಿಸಿದರೆ ಈಗಿನ ಆಳರಸರ ಭ್ರಾಂತಸ್ಥಿತಿ ಎಷ್ಟುಮಟ್ಟಿಗೆ ಕೆಟ್ಟಿದೆಯೆಂದು ಹೇಳಬಹುದು. ಅವರ ನಡೆ ಹೇಗೆ ಕೆಟ್ಟಿದೆ ಎಂದೂ ಅರಿಯಬಹುದು. ಅತೀ ಹೆಚ್ಚು ಕಾಲ ಅಂದರೆ ಸರಾಸರಿ ೭00 ವರ್ಷಕಾಲ ಪರಕೀಯರ ದಬ್ಬಾಳಿಕೆಯ ಆಳ್ವಿಕೆಯಲ್ಲಿಯೇ ನಲುಗಿದ್ದು ಭಾರತೀಯರು ಈಗ ಸ್ವಾತಂತ್ರ್ಯ ದರಿವು ಪಡೆಯಲು ಸಾಧ್ಯವೆ? ಹಾಗಿದ್ದ ಮೇಲೆ ಸ್ವಾತಂತ್ರ್ಯ ಎಂದರೇನೆಂದು ಅರಿಯಲೇ ನೂರಾರು ವರ್ಷಬೇಕು. ಇಲ್ಲಾ ಉತ್ತಮ ಶಿಕ್ಷಣದಿಂದ ಸಹಜ ಸ್ವಾತಂತ್ರ್ಯದರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಏನು ಮಾಡುತ್ತಿದೆ? ಏನೂ ಇಲ್ಲವೆಂದೇ ಹೇಳಬಹುದು. ಏಳುನೂರು ವರ್ಷಕಾಲ ವಿದೇಶೀಯರ, ವಿಧರ್ಮೀಯರ ಆಳ್ವಿಕೆಯಲ್ಲಿ ನಲುಗಿದ ಭಾರತೀಯನು ಎಚ್ಚೆತ್ತುಕೊಳ್ಳಲೇ ಅವಕಾಶವೀಯದೇ ನಮ್ಮೀ ಸರಕಾರವೆಂಬ ಪ್ರಜಾತಂತ್ರವಾದೀ ವ್ಯವಸ್ಥೆ ಬ್ರಿಟಿಷರಿಗೆ ಒತ್ತೆ ಇಟ್ಟೇ ಬದುಕುತ್ತಿದೆ. ಅದನ್ನಿನ್ನೂ ಬಿಡಿಸಿಕೊಳ್ಳಲೇ ಇಲ್ಲ. ಆ ಜೀತಪದ್ಧತಿ ಬ್ರಿಟಿಷರ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿಯೇ ಇದೆ. ಅದಕ್ಕೆ ೫ ವರ್ಷಕ್ಕೊಮ್ಮೆ ಪುಷ್ಟಿ ನೀಡಲೆಂದೇ ಚುನಾವಣೆ ನಾಟಕವಷ್ಟೆ. ಇಲ್ಲಿ ಸ್ವಂತಿಕೆಯಿಲ್ಲ ಸ್ವಾಭಿಮಾನವಿಲ್ಲ, ಸ್ವಾತಂತ್ರ್ಯಾನುಭೂತಿ ಇಲ್ಲ. ಹಾಗಿದ್ದ ಮೇಲೆ ಸ್ವಾತಂತ್ರ್ಯವೆಂದರೇನು? ಅದು ಸಿಕ್ಕಿದೆಯೇ? ಖಂಡಿತಾ ಇಲ್ಲ. ಇನ್ನೂ ಬ್ರಿಟಿಷರ ಕಾಲದ ಅಧಿಕಾರಶಾಹಿ ಆಡಳಿತವೇ ಇದೆ. ಹಾಗೇ ಭಾರತೀಯ ಸ್ವಾತಂತ್ರ್ಯಾನುಭೂತಿ ಮರೆತಿದ್ದಾನೆ. ಮೊದಲಾಗಿ ಶಿಕ್ಷಣ, ಆರೋಗ್ಯ, ರಕ್ಷಣೆ, ಆಹಾರ ಕ್ಷೇತ್ರದಲ್ಲಿ ಸರಕಾರ ಸ್ಥಿರತೆ ಕಾಪಾಡಲು ೭0 ವರ್ಷವಾದರೂ ಆಗಿಲ್ಲ. ಹಾಗಾಗಿ ಈ ಸ್ವಾತಂತ್ರ್ಯವೆಂದರೇನೆಂದೇ ಅರ್ಥವಾಗಿಲ್ಲ.

ಶಿಕ್ಷಣ ಉದ್ದಿಮೆಯಾಗಿದೆ, ಮಾರಾಟವಾಗುತ್ತಿದೆ. ಆರೋಗ್ಯ ಕೊಲೆಗಡುಕರ ಬೀಡಾಗುತ್ತಿದೆ. ರಕ್ಷಣೆಯು ಧರ್ಮಾಂಧರ, ಮೂರ್ಖರ, ಭಯೋತ್ಪಾದಕರ ಕಾಲಡಿಯಲ್ಲಿ ನೊಸೆಯುತ್ತಿದೆ. ಆಹಾರವು ಲಾಭಬಡುಕರ ಪಾಲಾಗಿ ಹಸಿವಿನಿಂದ ಜನ ಸಾಯುತ್ತಿದ್ದಾರೆ. ವಿದೇಶೀಯರ ವಿಷಾಕ್ತ ಆಹಾರವೇ ಶುದ್ಧ ಆಹಾರವೆಂದು ಸರಕಾರ ಪೋಷಿಸುತ್ತಿದೆ. ವಿದೇಶೀ ಕಂಪೆನಿಯ ಆಹಾರ ಖಂಡಿತಾ ಒಳ್ಳೆಯದಲ್ಲ. ಮುಖ್ಯವಾಗಿ ಸ್ವಾತಂತ್ರ್ಯವೆಂದರೆ ಶಿಕ್ಷಣ ಸ್ವಾತಂತ್ರ್ಯ, ಅನ್ನ ಸ್ವಾತಂತ್ರ್ಯ, ರಕ್ಷಣಾ ಸ್ವಾತಂತ್ರ್ಯ, ಆರೋಗ್ಯ ಸ್ವಾತಂತ್ರ್ಯ ಇವಿದ್ದರೆ ಅದೇ ಸ್ವಾತಂತ್ರ್ಯವೆನ್ನುತ್ತದೆ ವೇದ.

ಶಿಕ್ಷಣ ಸ್ವಾತಂತ್ರ್ಯವೆಲ್ಲಿದೆ? ಯಾವುದೇ ಒಂದು ವಿಷಯದಲ್ಲಿ ತಜ್ಞತೆ ಸಾಧಿಸುವುದೇ ಶಿಕ್ಷಣ ಸ್ವಾತಂತ್ರ್ಯ. ಇದರರಿವು ಸರಕಾರಕ್ಕಿಲ್ಲ. ಈಗ ಸರ್ಟಿಫಿಕೇಟ್ ಸ್ವಾತಂತ್ರ್ಯ ಶಿಕ್ಷಣ ಲಭ್ಯವಿದೆ. ಸರ್ಟಿಫಿಕೇಟ್ ಮಾರಾಟಕ್ಕಿದೆ. ಆ ರೀತಿಯ ಶಿಕ್ಷಿತರ ಕೈಯಲ್ಲಿ ಸಮಾಜ ಸಿಲುಕಿ ನಲುಗುತ್ತಿದೆ. 

ಅನ್ನ ಸ್ವಾತಂತ್ರ್ಯ- ತಾನು ಬೆಳೆಯ ಬೇಕು, ಬೆಳೆದು ಆಹಾರ ತಯಾರಿಸಿ ತಿನ್ನಬೇಕು. ಅದು ಬಿಟ್ಟು ಯಾವುದೋ ವಿದೇಶೀ ಕಂಪೆನಿಯ ವಿದ್ರೋಹಿತ ಅನ್ನ ಖಂಡಿತಾ ದೈಹಿಕ, ಮಾನಸಿಕ ಆರೋಗ್ಯಕ್ಕೆ ಪೂರಕವಲ್ಲ. ಆ ಸ್ವಾತಂತ್ರ್ಯವಿದೆಯೇ? ಇಲ್ಲವೇ ಇಲ್ಲ. ತಮ್ಮನ್ನು ತಾವು ಆಳಿಕೊಳ್ಳುವುದು ಎಂಬ ನೆಲೆಯಲ್ಲಿ ಪ್ರಜಾಪ್ರಭುತ್ವವಿದೆ. ಅಲ್ಲಿ ರಕ್ಷಣೆಗಾಗಿ ಸರಕಾರ, ಸರಕಾರದ ಯಾವುದೋ ಒಂದು ತುಷ್ಟೀಕರಣ ನೀತಿಗೆ ಮತಾಂಧರ ಮತೀಯ ಮೂಲಭೂತ ವಾದಕ್ಕೆ ಸಿಲುಕಿ ಜನನಾಶವಾಗುತ್ತಿದೆ. ಇದಕ್ಕೆ ಸರಕಾರವೇ ಕಾರಣವಾಗುತ್ತಿದೆ. 

ರಕ್ಷಣೆಯೆಲ್ಲಿ? ತನ್ನ ಆತ್ಮರಕ್ಷಣೆಗಾಗಿ ಹೋರಾಡಿದರೂ ಅದು ಕಾನೂನು ಕೈಗೆತ್ತಿಕೊಂಡಂತೆ ಎಂದು ಬಿಂಬಿಸಿ ಅಪರಾಧವೆನ್ನಲಾಗುತ್ತಿದೆ. ಇನ್ನು ಆರೋಗ್ಯ ಸ್ವಾತಂತ್ರ್ಯ, ಅದೊಂದು ವಿದೇಶೀ ಔಷಧಿ ಕಾರ್ಖಾನೆಗಳ ಸೊತ್ತಾಗಿದೆ. ವಿನಾಕಾರಣ ನಾನಾ ಖಾಯಿಲೆ ಬಿಂಬಿಸಿ ಜನರ ಆರೋಗ್ಯ ಕೆಡಿಸುತ್ತಿದ್ದಾರೆ. ಹಾಗಿದ್ದರೆ ಈ ಸ್ವಾತಂತ್ರ್ಯ ಅಥವಾ ಸ್ವರಾಜ್ಯ ಕಲ್ಪನೆ ಹೇಗಿತ್ತು ಎಂಬುದನ್ನು ವೇದ ಹೀಗೆ ಬಿಂಬಿಸಿದೆ ಗಮನಿಸೋಣ.

ಋಗ್ವೇದ, ಮಂಡಲ.೧, ಸೂಕ್ತ ೮೦, ಮಂತ್ರ ೧-೧೬

ಇತ್ಥಾಹಿ ಸೋಮ ಇನ್ಮದೇ ಬ್ರಹ್ಮಾ ಚಕಾರ ವರ್ಧನಮ್ | 
ಶವಿಷ್ಠ ವಜ್ರಿನ್ನೋಜಸಾ ಪೃಥಿವ್ಯಾ ನಿಃ ಶಶಾ ಅಹಿಮರ್ಚನ್ನನು ಸ್ವರಾಜ್ಯಮ್ || ||
ಸ ತ್ವಾ ಮದದ್ವೃಷಾ ಮದಃ ಸೋಮಃ ಶ್ಯೇನಾಭೃತಃ ಸುತಃ | 
ಯೇನಾವೃತ್ರಂ ನಿರದ್ಭ್ಯೋಜಘಂಥ ವಜ್ರಿನ್ನೋಜಸಾರ್ಚನ್ನನು ಸ್ವರಾಜ್ಯಮ್ || ||
ಪ್ರೇಹ್ಯಭೀಹಿ ಧೃಷ್ಣುಹಿ ನ ತೇ ವಜ್ರೋ ನಿಯಂಸತೇ | 
ಇಂದ್ರ ನೃಮ್ಣಂ ಹಿ ತೇ ಶವೋ ಹನೋ ವೃತ್ರಂ ಜಯಾ ಅಪೋಽರ್ಚನ್ನನು ಸ್ವರಾಜ್ಯಮ್ || ||
ನಿರಿಂದ್ರ ಭೂಮ್ಯಾ ಅಧಿ ವೃತ್ರಂ ಜಘಂಥ ನಿರ್ದಿವಃ | 
ಸೃಜಾ ಮರುತ್ವತೀರವ ಜೀವಧನ್ಯಾ ಇಮಾ ಅಪೋಽರ್ಚನ್ನನು ಸ್ವರಾಜ್ಯಮ್ || ||
ಇಂದ್ರೋ ವೃತ್ರಸ್ಯ ದೋಧತಃ ಸಾನುಂ ವಜ್ರೇಣ ಹೀಳಿತಃ | 
ಅಭಿಕ್ರಮ್ಯಾವ ಜಿಘ್ನತೇಽಪಃ ಸರ್ಮಾಯ ಚೋದಯನ್ನರ್ಚನ್ನನು ಸ್ವರಾಜ್ಯಮ್ || ||
ಅಧಿಸಾನೌ ನಿ ಜಿಘ್ನತೇ ವಜ್ರೇಣ ಶತಪರ್ವಣಾ | 
ಮಂದಾನ ಇಂದ್ರೋ ಅಂಧಸಃ ಸಖಿಭ್ಯೋ ಗಾತುಮಿಚ್ಛತ್ಯರ್ಚನ್ನನು ಸ್ವರಾಜ್ಯಮ್ || ||
ಇಂದ್ರ ತುಭ್ಯಮಿದದ್ರಿವೋಽನುತ್ತಂ ವಜ್ರಿನ್ ವೀರ್ಯಮ್ | 
ಯದ್ಧತ್ಯಂ ಮಾಯಿನಂ ಮೃಗಂ ತಮು ತ್ವಂ ಮಾಯಯಾವಧೀರರ್ಚನ್ನನು ಸ್ವರಾಜ್ಯಮ್ || ||
ವಿ ತೇ ವಜ್ರಾಸೋ ಅಸ್ಥಿರನ್ನವತಿಂ ನಾವ್ಯಾ೩ಅನು | 
ಮಹತ್ತ ಇಂದ್ರ ವೀರ್ಯಂ ಬಾಹ್ವೋಸ್ತೇ ಬಲಂ ಹಿತಮರ್ಚನ್ನನು ಸ್ವರಾಜ್ಯಮ್ || ೮ || 
ಸಹಸ್ರಂ ಸಾಕಮರ್ಚತ ಪರಿ ಷ್ಟೋಭತ ವಿಂಶತಿಃ | 
ಶತೈನಮನ್ವ ನೋನವುರಿಂದ್ರಾಯ ಬ್ರಹ್ಮೋದ್ಯತಮರ್ಚನ್ನನು ಸ್ವರಾಜ್ಯಮ್ || ೯ ||
ಇಂದ್ರೋ ವೃತ್ರಸ್ಯ ತವಿಷೀಂ ನಿರಹನ್ತ್ಸಹಸಾ ಸಹಃ | 
ಮಹತ್ತದಸ್ಯ ಪೌಂಸ್ಯಂ ವೃತ್ರಂ ಜಘನ್ವಾಙ್ ಅಸೃಜದರ್ಚನ್ನನು ಸ್ವರಾಜ್ಯಮ್ || ೧೦ ||
ಇಮೇ ಚಿತ್ತವ ಮನ್ಯವೇ ವೇಪೇತೇ ಭಿಯಸಾ ಮಹೀ | 
ಯದಿಂದ್ರ ವಜ್ರಿನ್ನೋಜಸಾ ವೃತ್ರಂ ಮರುತ್ವಾಙ್ ಅವಧೀರರ್ಚನ್ನನು ಸ್ವರಾಜ್ಯಮ್ || ೧೧ ||
ನ ವೇಪಸಾ ನ ತನ್ಯತೇಂದ್ರಂ ವೃತ್ರೋ ವಿ ಬೀಭಯತ್ | 
ಅಭ್ಯೇನಂ ವಜ್ರ ಆಯಸಃ ಸಹಸ್ರಭೃಷ್ಟಿರಾಯತಾರ್ಚನ್ನನು ಸ್ವರಾಜ್ಯಮ್ || ೧೨ || 
ಯದ್ವೃತ್ರಂ ತವ ಚಾಶನಿಂ ವಜ್ರೇಣ ಸಮಯೋಧಯಃ | 
ಅಹಿಮಿಂದ್ರ ಜಿಘಾಂಸತೋ ದಿವಿ ತೇ ಬದ್ಬಧೇ ಶವೋಽರ್ಚನ್ನನು ಸ್ವರಾಜ್ಯಮ್ || ೧೩ ||
ಅಭಿಷ್ಟನೇತೇ ಅದ್ರಿವೋ ಯತ್ಸ್ಥಾ ಜಗಚ್ಚ ರೇಜತೇ| 
ತ್ವಷ್ಟಾ ಚಿತ್ತವ ಮನ್ಯವ ಇಂದ್ರ ವೇವಿಜ್ಯತೇಭಿಯಾರ್ಚನ್ನನು ಸ್ವರಾಜ್ಯಮ್ || ೧೪ ||
ನ ಹಿ ನು ಯಾದಧೀಮಸೀಂದ್ರಂ ಕೋ ವೀರ್ಯಾ ಪರಃ |  
ತಸ್ಮಿನ್ನೃಮ್ಣಮುತ ಕ್ರತುಂ ದೇವಾ ಓಜಾಂಸಿ ಸಂ ದಧುರರ್ಚನ್ನನು ಸ್ವರಾಜ್ಯಮ್ || ೧೫ ||
ಯಾಮಥರ್ವಾ ಮನುಷ್ಪಿತಾ ದಧ್ಯಙ್ ದಿಯಮತ್ನತ |
ತಸ್ಮಿನ್ ಬ್ರಹ್ಮಾಣಿ ಪೂರ್ವಥೇಂದ್ರ ಉಕ್ಥಾ ಸಮಗ್ಮತಾರ್ಚನ್ನನು ಸ್ವರಾಜ್ಯಮ್ || ೧೬ ||

ಈ ಹದಿನಾರು ಮುಖ್ಯ ಅಂಶಗಳನ್ನೊಳಗೊಂಡು ಅಭಿವೃದ್ಧಿಯ ನೆಲೆಯಲ್ಲಿ ಮೂಲಜನಶಕ್ತಿಯನ್ನು ಬಳಸಿ ಬೆಳೆವ ದೇಶವೇ ಸ್ವತಂತ್ರದೇಶ. ಈಗ ಸದ್ಯದಲ್ಲಿ ಅವಲಂಬಿತ ಜೀವನವೇ ಸ್ವತಂತ್ರ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹಾಗಾಗಿ ಹಿಂದೆ ತಿಳಿಸಿದ ನಾಲ್ಕು ಅಂಶಗಳಲ್ಲಿ ಪ್ರತೀ ಪ್ರಜೆಯೂ ಸ್ವತಂತ್ರನಾಗುವತ್ತ ಅಭಿವೃದ್ಧಿಪಥ ಸಿದ್ಧಪಡಿಸಿದರೆ ಮಾತ್ರ ದೇಶದ ನಡೆ ಸರಿಯೆಂದು ಅರ್ಥೈಸಬಹುದು. ಸದ್ಯಕ್ಕಂತೂ ದೇಶದ ನಡೆ ಸರಿಯಿಲ್ಲವೆಂದು ಘಂಟಾಘೋಷವಾಗಿ ಹೇಳಬಹುದು.

ಇನ್ನು ೨ನೆಯದಾದ ಪ್ರಜಾವರ್ಗ ನಾವೆತ್ತ ಸಾಗುತ್ತಿದ್ದೇವೆ? ನಮ್ಮನ್ನೇ ನಾವು ಕೇಳಿಕೊಳ್ಳಬೇಕಿದೆಯಲ್ಲವೆ? ಗೊತ್ತು ಗುರಿಯಿಲ್ಲದ ಅನಾರೋಗ್ಯಕರ ರೀತಿಯಲ್ಲಿ ಸಾಗುತ್ತಿದ್ದು ಅರ್ಥವೇ ಆಗದ ಸ್ಥಿತಿಗೆ ತಲುಪುತ್ತಿದ್ದೇವೆ. ಪ್ರತೀ ಒಬ್ಬ ಪ್ರಜೆಯೂ ಚಿಂತಿಸಲೇಬೇಕಾದ ವಿಚಾರವಿದು. ಒಂದು ದೇಶ, ಅದಕ್ಕೆ ಸಂಬಂಧಿಸಿದ ಸಂವಿಧಾನ, ಅದರ ಅಡಿಯಲ್ಲಿ ನಿಯಮಬದ್ಧ ರೀತಿಯಲ್ಲಿ ಯಾರು ಬದುಕುತ್ತಾರೋ ಅವರು ಪ್ರಜೆಗಳು. ಶಾಸನ ಎಂದರೆ ನಿಯಮ. ಆ ನಿಯಮ ಪಾಲಿಸುವುದಕ್ಕಾಗಿಯೇ ಇರುವುದು. ಅದನ್ನು ಉಲ್ಲಂಘಿಸಿ ಬದುಕುವುದು ದೇಶದ್ರೋಹವೆನ್ನಿಸುತ್ತದೆ. ಹಾಗೂ ಅವನು ಆ ದೇಶದ ಪ್ರಜೆಯಾಗಿರಲು ಅನರ್ಹನೆನ್ನಿಸುತ್ತಾನೆ. ಆದರೆ ನಮ್ಮೀ ದೇಶದಲ್ಲಿ ಕಾನೂನು ರೂಪಿಸಿದ್ದೇ ಶಿಕ್ಷಿಸುವುದಕ್ಕಾಗಿ, ದಂಡಿಸುವುದಕ್ಕಾಗಿ, ನಿರ್ಬಂಧಿಸುವುದಕ್ಕಾಗಿ ಎಂಬಂತೆ ರೂಪಿಸಲ್ಪಟ್ಟಿದೆ. ಅಲ್ಲೆಲ್ಲಾ ಸಂಪೂರ್ಣ ಸ್ವಾತಂತ್ರ್ಯಹರಣವಾಗಿದೆ. ಹಾಗಿದ್ದ ಮೇಲೆ ಕಾನೂನು ಉಲ್ಲಂಘಿಸಿಯೇ ಬದುಕುವ ಪ್ರಜೆ ದೇಶದ್ರೋಹಿಯಾಗಿಯೇ ಬದುಕುತ್ತಿದ್ದಾನೆ ಎಂದರ್ಥವಲ್ಲವೆ? ಹಾಗಿದ್ದ ಮೇಲೆ ನಾವೆತ್ತ ಸಾಗುತ್ತಿದ್ದೇವೆ ಅರ್ಥವಾಗಲು ಸಾಧ್ಯವೇ ಇಲ್ಲ ಅಲ್ಲವೆ?

ಇನ್ನು ಮುಂದೇನು? ಅರ್ಥವಾಗಲಾರದು. ಆಗಲು ಸರಿಯಾದ ಶಿಕ್ಷಣವಿಲ್ಲ. ಯಾವುದೋ ವಿದೇಶೀ ಜ್ಞಾನ ಮಾತ್ರ ನಮಗೆ ಅನುಸರಿಸಲು ಇರುವುದು. ಸ್ವದೇಶೀಯ ಜ್ಞಾನಕ್ಕೆ ಮಾನ್ಯತೆ ಇಲ್ಲ. ನಾವೆಲ್ಲಾ ದಾಸ್ಯದಿಂದ ಗುಲಾಮಗಿರಿಗೆ ನೂಕಲ್ಪಟ್ಟಿದ್ದೇವೆ. ಗಾಣ ವಿದೇಶಿಯರದ್ದು, ಎತ್ತು ನೀವು ನಾವು, ಎಣ್ಣೆ ಅವರಿಗೆ.  ಬೆನ್ನು ನೋವು ನಮಗೆ. ಇದು ವಿದೇಶೀ ಬಂಡವಾಳ ಹೂಡಿಕೆಯ ಮೂರ್ಖ ಚಿಂತನೆ. ಹಾಗಿದ್ದ ಮೇಲೆ ಕಿಂ ಕರ್ತವ್ಯತಾ ಮೂಢರು ತಾನೆ? ಈ ಹಿಂದಿನ ಮಂತ್ರ ಗಮನಿಸಿ, ಸಹಸ್ರಂ ಸಾಕಮರ್ಚತ ಪರಿ ಷ್ಟೋಭತ ವಿಂಶತಿಃ | ಶತೈನಮನ್ವ ನೋನವುರಿಂದ್ರಾಯ ಬ್ರಹ್ಮೋದ್ಯತಮರ್ಚನ್ನನು ಸ್ವರಾಜ್ಯಮ್ ಎಂಬಂತೆ ಪ್ರಜೆಗಳ ಸುಖ, ಮುಖ, ವಿಕಗಳು ಭಿನ್ನ ಭಿನ್ನ ಸಹಸ್ರ. ಆದರೆ ಅದು ಒಟ್ಟು ವಿಭಜಿಸಲ್ಪಟ್ಟು ಸಮೀಕರಿಸಿದರೆ ಅದು ಇಪ್ಪತ್ತು ಪ್ರಭೇದಗಳು. ಆ ಮುಖದಲ್ಲಿ ಶಿಕ್ಷಣ ಪಡೆದು ಅರಿವಿನ ಸಾಗರದಲ್ಲಿ ಈಜಿದರೆ ನೂರಾರು ರೀತಿಯ ಜೀವನಾವಕಾಶ ಲಭ್ಯವಾಗುತ್ತದೆ. ಅದನ್ನು ಮಾತ್ರ ಬಳಸಿ.

ಒಂದು ದೇಶದಲ್ಲಿ ಬಾಳಿ ಬದುಕಿದರೆ ಅದನ್ನು ವೇದವು ಜ್ಞಾನಯುಕ್ತವಾದ ಸ್ವರಾಜ್ಯವೆನ್ನುತ್ತದೆ. ಆದರೆ ಈಗ ಇಲ್ಲಿ ನಿಮ್ಮ ಜ್ಞಾನವಿಲ್ಲ, ನಿಮ್ಮ ಸಾಹಸವಿಲ್ಲ, ನಿಮ್ಮ ಬಂಡವಾಳವಿಲ್ಲ, ಅದೆಲ್ಲಾ ವಿದೇಶೀಯ. ನೀವು ಬರೇ ಗುಲಾಮರು, ನಿಮಗೆ ಕೂಲಿ ಕೊಡುತ್ತಾರೆ, ಬದುಕುತ್ತೀರಿ. ಆದರೆ ಅದು ನಿಜವಾದ ಬದುಕಲ್ಲ. ಇಂತಹಾ ಬದುಕಿಗಿಂತ ನರಕವಾಸವೇ ಶ್ರೇಷ್ಠ. ನಿಮ್ಮ ಸ್ವಾಭಿಮಾನದ ಪೆಟ್ಟಿಗೆ ತೆರೆಯಿರಿ. ಭಾರತೀಯರಾಗಿ ಬದುಕಿರಿ. ಅದೇ ಸ್ವರ್ಗ. ಆ ಚಿಂತನೆ ಇಲ್ಲದಿದ್ದರೆ ಅದನ್ನು ಬದುಕೆಂದು ಹೇಳಲಾಗದು. ಅಲ್ಲಿ ಐಕ್ಯತೆ ಬರಲು ಸಾಧ್ಯವೇ ಇಲ್ಲ.

ಈ ನೆಲೆಯಲ್ಲಿ ಸಮಕಾಲೀನ ಘಟ್ಟದ ಚಿಂತನೆ ಮಾಡೋಣ. ನಮ್ಮಲ್ಲಿ ಈಗ ಒಂದೇ ಸಮನೆ ವಿದೇಶೀ ಬಂಡವಾಳ ಹೂಡಿಕೆ ಚಿಂತನೆ ಹುಟ್ಟುತ್ತಿದೆ. ಆದರೆ ಒಂದು ರೀತಿಯಲ್ಲಿ ಅದು ದೇಶ ಮಾರಾಟ ಮಾಡಿದಂತೆಯೇ. ಅದೂ ಸ್ವದೇಶೀ ಚಿಂತನೆಯ ಉತ್ಪಾದನೆಯಲ್ಲ, ವಿದೇಶೀ ಉತ್ಪಾದನೆ. ಹಾಗಿದ್ದ ಮೇಲೆ ದೇಶೀಯ ಆರ್ಥಿಕತೆ ಖಂಡಿತಾ ನೆಲಕಚ್ಚುತ್ತದೆ. ತಾತ್ಕಾಲಿಕ ಸರಕಾರಕ್ಕೆ ಲಾಭ ಅನ್ನಿಸಿದರೂ ಕಂಪೆನಿಯು ಯಾವುದೇ ಕಾರಣಕ್ಕೆ ನಮಗೆ ಲಾಭ ಮಾಡಿ ಕೊಡುವುದಕ್ಕೆ ಇಲ್ಲಿ ಬಂಡವಾಳ ಹೂಡುವುದಿಲ್ಲ. ತನ್ನ ಲಾಭ ಚಿಂತನೆಯಲ್ಲಿಯೇ ಬಂಡವಾಳ ಹೂಡುತ್ತದೆಯೆಂದ ಮೇಲೆ ಸ್ವಲ್ಪ ಸ್ವಲ್ಪವಾದರೂ ಲಾಭಾಂಶವೆಂಬ ದೃಷ್ಟಿಯ ದೇಶೀಯ ಸಂಪತ್ತು ವಿದೇಶಕ್ಕೆ ಹೋಗುತ್ತದೆ. ಅದು ಸರ್ವವ್ಯಾಪಿ ಆಗಿಯೇ ಆಗುತ್ತದೆ. ನಮ್ಮ ಜನಶಕ್ತಿ, ನಮ್ಮ ಕಚ್ಚಾವಸ್ತು ಶಕ್ತಿ, ನಮ್ಮ ನೆಲ, ಜಲ, ಪರಿಸರ ಮತ್ತು ನಮ್ಮದೇ ಆದ ಬಳಕೆಯಾದ ಶಕ್ತಿ. ಲಾಭ ಮಾತ್ರ ಅವರಿಗೆ. ಇದನ್ನು ಚಿಂತಿಸಿದ್ದೀರಾ? ಹಿಂದೊಮ್ಮೆ ವಿದೇಶೀಯರು ವ್ಯಾಪಾರಕ್ಕಾಗಿಯೇ ಬಂದರು. ನಂತರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡು ನಮ್ಮ ಸಂಪತ್ತನ್ನೆಲ್ಲಾ ದೋಚಿದರು. ಸ್ವದೇಶೀಯ ಮಂತ್ರದೊಂದಿಗೆ ಸ್ವಾತಂತ್ರ್ಯ ಪಡೆದ ನಾವು ಇಷ್ಟು ಬೇಗ ವಿದೇಶೀಯತೆಗೆ  ಮಾರು ಹೋಗುತ್ತಿದ್ದೇವೆ ಎಂದರೆ ನಮ್ಮಷ್ಟು ಮೂರ್ಖರು ಇನ್ನಾರೂ ಇರಲು ಸಾಧ್ಯವಿಲ್ಲ.

ಇನ್ನು ಮೊನ್ನೆ ದೀಪಾವಳಿಯಂದು ನಮ್ಮ ಸರಕಾರ ರೂಪಿಸಿದ ಟಿಪ್ಪು ಜಯಂತಿ. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ನಮ್ಮ ಕೆಲವು ಸಾಹಿತಿಗಳೂ, ಸರಕಾರವೂ, ಟಿಪ್ಪೂವನ್ನು ಪೂರ್ಣ ನಂಬಿದೆ, ಒಪ್ಪಿದೆ. ಅವನು ಸ್ವಾತಂತ್ರ್ಯ ಹೋರಾಟಗಾರ ಎಂದೇ ಬಿಂಬಿಸುತ್ತಿದೆ. ಆ ಪ್ರಯತ್ನದಲ್ಲಿ ಆಯೋಜಿಸಿದ ಜಯಂತಿ ಆಚರಣೆ ಕೆಲವರ ಜೀವ ನಷ್ಟಕ್ಕೆ ಕಾರಣವಾಯ್ತು. ಆದರೆ ಸ್ವಾತಂತ್ರ್ಯ ಹೋರಾಟವೆಂದರೇನು? ಎಂದು; ಎಂದೂ ಕೂಡ ನಮ್ಮನ್ನಾಳುವ ರಾಜಕಾರಣಿಗಳಿಗೆ ಹಾಗೂ ಸಾಹಿತಿಗಳಿಗೆ ಅರ್ಥವಾಗಿಲ್ಲವೆಂದರೆ ಅವರು ಪ್ರಶಸ್ತಿ ಹಿಂತಿರುಗಿಸುವ ಆಂದೋಲನ ಮಾಡುವುದಕ್ಕಿಂತ ಸರಕಾರವೇ ಹಿಂಪಡೆಯುವ ಆದೇಶ ಹೊರಡಿಸುವುದು ಸೂಕ್ತ. ಏಕೆಂದರೆ ಇತಿಹಾಸದಲ್ಲಿ ನಾನು ಓದಿದಂತೆ ನಮ್ಮ ದೇಶದಲ್ಲಿ ನಡೆದ ಮೊದಲ ಸಾರ್ವಜನಿಕ ಮತ್ತು ಸರಕಾರ ವಿರೋಧಿ ಪ್ರತಿಭಟನೆಯೆಂದರೆ ೧೮೫೭ರ ಸಿಪಾಯಿದಂಗೆ. ಅದನ್ನೇ ಮೊದಲ ಸ್ವಾತಂತ್ರ್ಯ ಹೋರಾಟವೆಂದು ಶಾಲೆಗಳಲ್ಲಿ ಪಠ್ಯಪುಸ್ತಕದಲ್ಲಿ ನಮೂದಿಸಿ ಪಾಠ ಮಾಡುತ್ತಿದ್ದರು. ಆದರೆ ಈಗ ಟಿಪ್ಪೂ ಸ್ವಾತಂತ್ರ್ಯ ಹೋರಾಟಗಾರನೆಂದರೆ ೧೭೯೦ರಷ್ಟು ಹಿಂದೆ ಸ್ವಾತಂತ್ರ್ಯ ಇತಿಹಾಸ ಹೋಗಬೇಕಾಗುತ್ತೆ. ಆ ಕಾಲದಲ್ಲಿ ಟಿಪ್ಪು ಮಾತ್ರವಲ್ಲ, ಬ್ರಿಟಿಷರು ಮಾತ್ರವಲ್ಲ, ಫ್ರೆಂಚರು, ಡಚ್ಚರು, ಫೋರ್ಚುಗೀಸರು ಇನ್ನೂ ಅನೇಕರ ವಸಾಹತು ಇದ್ದು ಅವರು ಸ್ಥಳೀಯ ಆಡಳಿತದ ಮೇಲೆ ಯುದ್ಧ ಸಾರಿದ್ದರು. ಅವರೆಲ್ಲಾ ಹೋರಾಡಿದ್ದರು. ಅವೆಲ್ಲಾ ಏಕೆ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಕರ್ನಾಟಕದ ತುಂಡುರಾಜರೆಷ್ಟು ಗೊತ್ತೆ ಸಾಹಿತಿಗಳಿಗೆ? ಖಂಡಿತಾ ಇಲ್ಲ. ಟಿಪ್ಪುವಾಗಲೀ ಅಥವಾ ಇನ್ನ್ಯಾರೇ ರಾಜರೇ ಆಗಲಿ ಸಮಗ್ರ ಭಾರತ ಚಿಂತನೆ ಇಲ್ಲದೇನೇ ತಮ್ಮ ರಾಜ್ಯಾಧಿಕಾರ ಉಳಿಸಿಕೊಳ್ಳವ ಹೋರಾಟ ಮಾಡಿದರು. ಒಂದು ವೇಳೆ ಸಮಗ್ರ ಚಿಂತನೆ ಇದ್ದಿದ್ದಲ್ಲಿ ಬ್ರಿಟಿಷರು ಆಳುವುದಕ್ಕೇ ಸಾಧ್ಯವಿರಲಿಲ್ಲ. ತುಂಡು ತುಂಡು ಸಂಸ್ಥಾನಗಳು ಒಗ್ಗಟ್ಟಿಲ್ಲದ ಕಾರಣದಿಂದ ಬ್ರಿಟಿಷರು ಗೆದ್ದರು ಎಂಬ ಸತ್ಯ ಇತಿಹಾಸ ಮರೆತು ತಿರುಚಿ ಟಿಪ್ಪೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸ ಹೊರಟ ಸರಕಾರದ ಮೂರ್ಖತನಕ್ಕೆ ಮದ್ದಿಲ್ಲವೇ? 

೧೯೭೦ನೇ ಇಸವಿಯವರೆಗೆ ಇತಿಹಾಸ ಪಾಠದಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟವೆಂದು ಕಲಿಸುತ್ತಿದ್ದುದು ಸಿಪಾಯಿದಂಗೆ. ಈಗ ಅದು ಏಕೆ ತಿರುಚಲ್ಪಟ್ಟಿತು? ಯಾವುದು ಸತ್ಯ? ಸುಳ್ಳು ಬೋಧನೆ ಶಿಕ್ಷಣದಲ್ಲಿ ಮಹಾಪರಾಧವಲ್ಲವೆ? ಇವಕ್ಕೆಲ್ಲಾ ಕೇಳಬೇಕಾದ ಸ್ವಾಭಿಮಾನೀ ಕನ್ನಡಿಗರಾರೂ ಇಲ್ಲವೆ? ಟಿಪ್ಪುವಿನ ಸಮಕಾಲೀನ ಧರ್ಮಣ್ಣನಾಯಕ, ಅನಂತರಾಮ ಹೇರ್ಳೆ, ಬಾಬೂಜಿ, ಸಂಗೊಳ್ಳಿ ರಾಯಣ್ಣ, ಅಬ್ಬಕ್ಕದೇವಿ, ಚೆನ್ನಮ್ಮ, ತಾತ್ಯಾಟೋಪಿ, ವೀರಮದಕರಿನಾಯಕ ಇವರು ಯಾರೂ ಕಾಣದೇ ಸರಕಾರ? ಟಿಪ್ಪುವನ್ನು ವಿಜೃಂಭಿಸುವ ಹುನ್ನಾರವೇನು? ಇದೂ ಒಂದು ರೀತಿಯ ಮೂಲಭೂತವಾದವೆಂದು ಅನ್ನಿಸದೇ? ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದು ಪ್ರಾತಃಸ್ಮರಣೀಯರಾಗಿದ್ದ ಕಾರ್ನಾಡು ಸದಾಶಿವರಾಯರು ಮರೆತು ಹೋದದ್ದು ಹೇಗೆ? ಇವೆಲ್ಲಾ ದೇಶದ + ರಾಜಕಾರಣದ ಅವನತಿ ಸೂಚಕವಲ್ಲವೆ? ಈ ಮುಖದಲ್ಲಿ ಸ್ವಾಭಿಮಾನೀ ಕನ್ನಡಿಗ ಏಕೆ ಸುಮ್ಮನಿದ್ದಾನೆ? ಅಜ್ಞಾನವೇ? ಸೋಮಾರಿತನವೇ? ನಿರಭಿಮಾನಿಯೇ? ಅಥವಾ ಗುಲಾಮನಾಗಿ ಮಾರಿಕೊಂಡಿದ್ದಾನೆಯೆ? ಇನ್ನೊಮ್ಮೆ ನಿಮ್ಮನ್ನು ಪ್ರಶ್ನಿಸಿಕೊಳ್ಳಿ ಎನ್ನುತ್ತಾ ಈ ಲೇಖನಕ್ಕೆ ಉತ್ತರ ಕಂಡುಕೊಳ್ಳಿರೆಂದು ವಿನಂತಿ.

                                                                                          ಇಂತು

ಕೆ. ಎಸ್. ನಿತ್ಯಾನಂದ
ಪೂರ್ವೋತ್ತರೀಯ ಮೀಮಾಂಸಕರು
ವೇದ ವಿಜ್ಞಾನ ಮಂದಿರ
ಚಿಕ್ಕಮಗಳೂರು


ಈ ಕೆಲವು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

1)    ಮೊದಲ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ನೀವು ಓದಿದ್ದೇನು?
2)   ಅದಕ್ಕೆ ಉತ್ತರಿಸಿದ್ದೇನು?
3)   ದೇಶಭಕ್ತನೂ, ವೀರನೂ ಟಿಪ್ಪುವಾಗಿದ್ದರೆ ಬ್ರಿಟಿಷರ ವಿರುದ್ಧ ಹೋರಾಡಲು ಫೋರ್ಚುಗೀಸರ ಸಹಾಯ ಏಕೆ ಪಡೆದ?
4)  ತನ್ನ ಮಕ್ಕಳನ್ನೇ ಒತ್ತೆಯಿಟ್ಟು ಬದುಕಿಕೊಂಡಿದ್ದೇಕೆ?
5)   ಹೆಂಡತಿ ಮಕ್ಕಳನ್ನು ಒತ್ತೆ ಇಡುವುದು ಯಾವ ಧರ್ಮ?
6)   ಪಂಚವಳ್ಳಿ ಗ್ರಾಮದಲ್ಲಿ ಸಾವಿರಾರು ಜನರನ್ನು ರಾತ್ರೋರಾತ್ರಿ ಕೊಂದು ಸುಡಿಸಿದ್ದೇಕೆ?
7)   ತಲಕಾವೇರಿ, ಭಾಗಮಂಡಲ ಇತ್ಯಾದಿ ದೇವಾಲಯಗಳಲ್ಲಿ ದೋಚಿದ್ದೇನು? ಅಲ್ಲಿನ ವಿಗ್ರಹ ಭಿನ್ನ ಮಾಡಿದ್ದೇಕೆ?
8)   ಟಿಪ್ಪು ದೇಶಭಕ್ತನಾಗಿದ್ದ ಎನ್ನುವುದಕ್ಕೆ ಇತರೆ ಪುರಾವೆಗಳೇನಿದೆ?

ಈ ಪ್ರಶ್ನೆಗಳನ್ನು ನಿಮಗೆ ಕೇಳಿಕೊಳ್ಳಿರಿ.

No comments:

Post a Comment