Monday, 28 December 2015

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೫

||  ಶ್ರೀಗುರುಭ್ಯೋನಮಃ ||

ಮೊದಲಾಗಿ ವಸಿಷ್ಠರ ಯೋಗಶಕ್ತಿಯನ್ನು ಗಮನಿಸೋಣ. ನಂತರ ಅವರು ಯೋಗದ ಬಗ್ಗೆ ಹೇಳಿದ ವಿಚಾರದ ವೈಜ್ಞಾನಿಕ ಸತ್ಯಾಸತ್ಯತೆ ಗಮನಿಸೋಣ ಹಾಗೂ ಯೋಗದ ಆಸನಗಳು, ದೇಹ ಹೇಗೆ ಅದಕ್ಕೆ ಸ್ಪಂದಿಸುತ್ತದೆ ಎಂಬುದನ್ನು ಅವರ ಮಾತಿನಲ್ಲೇ ಗಮನಿಸೋಣ. ಇಲ್ಲಿ ಉದಾಹರಿಸುವ ಮಂತ್ರಗಳೆಲ್ಲಾ ಹಿಂದೆ ವಸಿಷ್ಠ ಮಂಡಲ ಋಗ್ವೇದದಲ್ಲಿದ್ದು ಈಗ ಖಿಲವೆಂದೂ, ಪರಿಶಿಷ್ಟವೆಂದೂ ಹಾಗೂ ಇತರೆ ವೇದ ಶಾಖೆಗಳಲ್ಲೂ ಸೇರಿ ಹೋಗಿವೆ. ಆದರೆ ಅದರ ಆರಂಭಿಕ ಛಂದೋಬದ್ಧವಾದ ಮೊದಲ ಪಾದ ಋಗ್ವೇದದಲ್ಲೂ ಇದೆ. ಹಾಗೂ ಎರಡನೆ ಪಾದ ಅಥವಾ ಪರಿಣಾಮ ಭಾಗ ಇತರೆ ಶಾಖೆಗಳಲ್ಲಿ ಸೇರಿಹೋಗಿವೆ. ಅದರ ವಿವರ ಹೆಚ್ಚಾಗಿ ಕೊಡಲಾರೆ. ನೀವೇ ವೇದಾಧ್ಯಯನ ಮಾಡಿ ತಿಳಿದುಕೊಳ್ಳಿ. ಅದರಲ್ಲಿ ಮೊದಲಾಗಿ ವಸಿಷ್ಠರ ಯೋಗಶಕ್ತಿ ಗಮನಿಸೋಣ.

ಸೃಷ್ಟಿಯ ಆದಿಯಿಂದ ಇಲ್ಲಿಯವರೆಗೆ ನಿರಂತರ ಬದುಕಿ ಸದೇಹರಾಗಿರುವ ವ್ಯಕ್ತಿಯೆಂದರೆ ವಸಿಷ್ಠರು ಒಬ್ಬರೇ. ನಂತರ ಚಿರಂಜೀವಿಗಳೆಂದು ಹೆಸರಿಸಲ್ಪಟ್ಟವರು ಈಗಲೂ ಬದುಕಿದ್ದರೂ ಅವರು ಹುಟ್ಟಿದ್ದು ಹಲವು ಯುಗಕಾಲ ಕಳೆದ ಮೇಲೆ. ಇವರು ಹಾಗಲ್ಲ, ಸೃಷ್ಟಿಯ ಆದಿಯಲ್ಲೇ ಮಿತ್ರಾ+ವರುಣ ಸಂಯೋಗದಿಂದ ಅಂದರೆ ಪ್ರಕೃತಿಯನ್ನು ನೀರಿನ ರೂಪದಲ್ಲಿ ಗುರುತಿಸುವ ಕಾಲದಲ್ಲಿಯೇ ಸೂರ್ಯ ಚೈತನ್ಯ ಸಂಯೋಗ ಕಾರಣದ ಸೃಷ್ಟಿ ವಸಿಷ್ಠರು

ಬಹುಶಃ ಪಂಚಕೃತ್ಯಗಳೆಂದು ಪ್ರಸಿದ್ಧವಾದ ಈ ಜಗತ್ ಸೃಷ್ಟಿಯ ನಿರಂತರತೆ ಹೊಂದಿಸುವ ಪೂರ್ವದಲ್ಲೇ ಏನಕೇನ ಪ್ರಕಾರೇಣ ಹುಟ್ಟಿದರು. ನಂತರ ಬೇರೆ ಬೇರೆ ಸಂದರ್ಭದಲ್ಲಿ ವಸಿಷ್ಠರಿಗೆ ಬೇರೆ ಜನ್ಮ ಕಾರಣ, ಸ್ಥಾನ, ಧೈವಿಕಗಳನ್ನು ಒದಗಿಸಿದೆ. ಅದು ಕೇವಲ ಊಹಾತ್ಮಕ, ಬ್ರಹ್ಮ ಮಾನಸ ಪುತ್ರರು ಎಂಬ ವಾದವೂ ಇದೆ. ಆದರೆ ವೇದದಲ್ಲಿ ವಸಿಷ್ಠರನ್ನು ಹೀಗೆಂದಿದೆ ಪ್ರತಿಸ್ತೋಮೈಃ ಜರಮಾಣೋ ವಸಿಷ್ಠಃ ಎಂದಿದೆ. ಹಾಗೇ ರಕ್ಷೋಹಣೋ ಸಂಭೃತಾ ವೀಳುಪಾಣಿಃ ಎಂದಿದೆ. ನಮ್ಮೆಲ್ಲರ ಏಳ್ಗೆಗಾಗಿಯೇ ಪ್ರತಿಜ್ಞಾಬದ್ಧವಾಗಿ ದುಡಿಯುವ ಒಂದು ಇಚ್ಛಾ, ಕ್ರಿಯಾ, ಜ್ಞಾನಶಕ್ತಿಯ ಮಾನವ ರೂಪವೇ ವಸಿಷ್ಠರು ಎಂದರೆ ತಪ್ಪಿಲ್ಲ. 

ಸೃಷ್ಟಿ, ಸ್ಥಿತಿ, ಲಯ, ಅನುಗ್ರಹ, ತಿರೋಧಾನ ಗಳೆಂಬ ಪಂಚಕೃತ್ಯಗಳಲ್ಲಿ ಅತೀತರಾಗಿ ಅವುಗಳ ತಾಳ, ಲಯಕ್ಕೆ ಸಿಗದೆ ತನ್ನದೇ ಆದ ಗತಿ ರೂಪಿಸಿಕೊಂಡ ಏಕೈಕ ವ್ಯಕ್ತಿಯೇ ವಸಿಷ್ಠರು. ಹಾಗಾಗಿ ಅವರ ಯೋಗಶಕ್ತಿಯನ್ನು ಇದಮಿತ್ಥಂ ಎಂದು ನಿರ್ಣಯಿಸಲು ಯಾರಿಂದಲೂ ಸಾಧ್ಯವೇ ಇಲ್ಲ. ಉದ್ಧರಣೆ ಹಿಡಿದು ಸಮುದ್ರ ಅಳೆದಂತೆ ಅಸಾಧ್ಯವಾದ ಕಾರ್ಯ. ಇಂತಹಾ ಯೋಗಿಯ ಅನುಭವದಲ್ಲಿ ಯೋಗವೆಂದರೇನೆಂದು ಅರಿಯುತ್ತಾ ಅದೂ ಕೂಡ ಹೇಗೆ ಗಣಿತ ರೀತ್ಯಾ ದೇಹವನ್ನು ನಿಯಮಿತಗೊಳಿಸ ಬಹುದೆಂದು ತಿಳಿಯೋಣ.

 
ಇನ್ನು ಎರಡನೆಯದಾಗಿ ಅವರು ಹೇಳಿದ ದೇಹಶಾಸ್ತ್ರ ರೀತ್ಯಾ ಅಳತೆಗಳು ಈಗಿನ ಪ್ರತಿಮಾ ಕಲ್ಪ ಹುಟ್ಟಿದ್ದೇ ಇದರ ಆಧಾರದಲ್ಲಿ. ಒಂದು ಮಾನವ ದೇಹ, ಅದರ ಮೂಗು, ಮುಖ, ಕುತ್ತಿಗೆ, ಕಂಠ, ಹೃದಯ, ಹೊಟ್ಟೆ, ಸೊಂಟ, ಭುಜ, ಬಾಹು, ಊರು, ಪಾಣಿ, ಪಾದ, ಉಪಸ್ಥಗಳು, ಎಷ್ಟಿರಬೇಕು? ಹೇಗಿದ್ದರೆ ಸಮಪ್ರಮಾಣ? ಅತಿಯಾದರೆ ಏನು? ಮಿತಿ ಹೇಗೆ? ಅಳತೆಯಲ್ಲಿ ಹೆಚ್ಚು ಕಡಿಮೆಯಾಗಲು ಕಾರಣವೇನು? ಎಂಬುದನ್ನೆಲ್ಲಾ ವಸಿಷ್ಠರು ವಿಸ್ತಾರವಾಗಿ ವಿವರಿಸಿದ್ದಾರೆ. ಅದಕ್ಕೆ ಪುರುಷ ಪ್ರಮಾಣವೆಂಬ ಒಂದು ಗಣಿತಸೂತ್ರವನ್ನೇ ವಿವರಿಸಿದ್ದಾರೆ. ಅದೆಲ್ಲಾ ದೇಹಶಾಸ್ತ್ರ ರೀತ್ಯಾ ಪರಿಪೂರ್ಣ, ಪ್ರತ್ಯಕ್ಷ ಪ್ರಮಾಣೀಕರಿಸಲು ಸಾಧ್ಯವಾದ ಸತ್ಯಗಳು. ಇದು ಯೋಗದ ಮುಖ್ಯ ಅಂಗವೂ ಹೌದು. ಏಕೆಂದರೆ ಸೂರ್ಯ ನಮಸ್ಕಾರ ಮಾಡುವ ಒಬ್ಬ ಮನುಷ್ಯ ಈ ಅಂಗಪ್ರಮಾಣ ಸರಿಯಿಲ್ಲದಿದ್ದಲ್ಲಿ ಸರಿಯಾಗಿ ಮಾಡಲಾರ.ಇನ್ನು ಯೋಗಸಾಧಕನಿಗೆ ಅತೀಮುಖ್ಯವಾದದ್ದು ಪರಿಕರಗಳು. ಅದರಲ್ಲಿ ಅಂಗ, ಅಂಗಿಣಿ, ಸ್ಥಾನ, ಮುದ್ರೆ, ಅಶ್ನೀತ, ಕಾಲ, ಶಾಂತ, ಸ್ಥಿರ, ಧೈರ್ಯ, ಆರೋಗ್ಯ. ಈ ದಶಗಳಿದ್ದಲ್ಲಿ ಒಬ್ಬ ಯೋಗ ಸಾಧಕನಾಗಿ ಸಾಧಿಸಿ ಯಶಸ್ಸು ಪಡೆಯಬಹುದು ಎಂದಿದ್ದಾರೆ. ಅದರಲ್ಲಿ

1) ಅಂಗ:- ನಿಯಮಿತ ದೇಹ ಪ್ರಮಾಣ ಬದ್ಧವಾದದ್ದು.

2) ಅಂಗಿಣಿ:- ಧರ್ಮಪತ್ನಿ. ಯೋಗಾರೂಢ ಶಕ್ತಿ. ಸಾಧಕನ ಸಾಧನಾಕಾಲದ ವಿಕೃತವನ್ನು ಹೀರಿ ಸಹಕರಿಸುವ ಚೈತನ್ಯ. ಅದಕ್ಕಾಗಿಯೇ ವಸಿಷ್ಠ ಆಗಿನ ಕಾಲದ ಸಾಮಾಜಿಕ ಚಿಂತನೆಯನ್ನು ಧಿಕ್ಕರಿಸಿ ಅರುಂಧತಿಯನ್ನು ವಿವಾಹವಾದದ್ದು. ಹೆಣ್ಣಿಗೆ ಸಮಾನ ಗೌರವ ಕೊಡಬೇಕೆಂಬುದನ್ನು ತಿಳಿಸಿದ ಮೊದಲ ವ್ಯಕ್ತಿಯೇ ವಸಿಷ್ಠರು. ಹಾಗೂ ಅವಳಿಂದ ಗಂಡ ಪಡೆಯುವುದೇ ಹೆಚ್ಚು ಆಧ್ಯಾತ್ಮಿಕವಾಗಿ. ಪ್ರಾಪಂಚಿಕವಾಗಿ ಮಾತ್ರಾ ಹೆಣ್ಣು ಹೆಚ್ಚು ಫಲ ಪಡೆಯುತ್ತಾಳೆ ಅಷ್ಟೆ. ಆದರೆ ಯೋಗಿಗೆ ತನ್ನ ಸಾಧನೆಗೆ ಹೆಣ್ಣು ಚೈತನ್ಯ, ಸ್ಫೂರ್ತಿ, ಸಾಧನ, ಪರಿಕರ. ಇದನ್ನು ಬಳಸಿಯೇ ಸಾಧಕನು ತನ್ನ ಸಾಧನೆಯನ್ನು ಏರಿಸಿಕೊಳ್ಳಬೇಕು. ಅದಕ್ಕೆ ಸಹಧರ್ಮಿಣಿಯಾಗಿ ಧರ್ಮಸ್ವರೂಪಳಾಗಿ ಮೂಲಚೈತನ್ಯ ರೂಪದಲ್ಲಿ ವ್ಯವಹರಿಸುತ್ತಾಳೆ. ಆ ಕಲ್ಪನೆಯಿಲ್ಲದ ಜನರಲ್ಲಿ ಮಾತ್ರ ಹೆಣ್ಣು ನಿಕೃಷ್ಟ ಅಷ್ಟೆ. ಆದರೆ ವಸಿಷ್ಠರ ದೃಷ್ಟಿಯಲ್ಲಿ  ಹೆಣ್ಣು  ಪೂರ್ಣ -  ತಾನು ಅಂಕ. ಇದು ಶೂನ್ಯ.

3) ಸ್ಥಾನ:- ತನ್ನ ಸಾಧನೆಗೆ ಆರಿಸಿಕೊಂಡ ಸ್ಥಳ, ಆಸನ, ತನ್ನ ವಯೋಮಾನ, ಶಕ್ತತೆ ಆಧರಿಸಿ ನಿರ್ಧಾರವಾಗಿರುತ್ತದೆ.

4) ಮುದ್ರೆ:- ಯಾವ ರೂಪದ ಸಾಧನೆ, ಅಂತರ್ಯಾನವೇ ಬಹಿರ್ಯಾನವೇ, ಆತ್ಮಚ್ಯುತಿಯೇ, ಆತ್ಮೋತ್ಕರ್ಷವೇ, ಆತ್ಮೋನ್ನತಿಯೇ, ಆತ್ಮೈಕ್ಯವೇ. ಇದು ಮುದ್ರೆಯಿಂದ ನಿರ್ಣಯ ವಾಗುತ್ತದೆ.

5) ಅಶ್ನೀತ:- ತನ್ನದ್ದೇ ಆದ ಋಣ + ಕರ್ಮ + ಜೀವನ + ಉದ್ದೇಶ + ಪರಿಸರ + ಆನುವಂಶಿಕ ಇವುಗಳನ್ನು ಆಧರಿಸಿದ ಅಶ್ನೀತವು ಮಾರ್ಗದರ್ಶಿಯಾಗಿರುತ್ತದೆ.

6) ಕಾಲ:- ವಯೋಮಾನ, ರಾಜ್ಯಕಾರಣ, ಧರ್ಮಬದ್ಧತೆ ಇವುಗಳನ್ನು ಆಧರಿಸಿ ಕಾಲ ಚೋದಕವಾಗಿರುತ್ತದೆ.

7) ಶಾಂತ:- ಪ್ರಾಪಂಚಿಕ ತೊಡಗುವಿಕೆಯಿಂದಾಗಿ ಉಂಟಾಗುವ ವಿಪ್ಲವತೆಯು ಮಾನಸಿಕ ಕ್ಷೋಭೆಗೆ ಕಾರಣವಾಗುತ್ತದೆ. ಅಲ್ಲಿ ಮನಸ್ಸಿಗೆ ಸಾಂತ್ವನ ಒದಗಣೆ ಬೇಕು. ಅದು ತನ್ನ ಸ್ವಯಾರ್ಜಿತ ಸಂಪತ್ತು, ಪುಣ್ಯ, ಸತ್ಕರ್ಮ, ಜೀವನ ವಿಧಾನ, ಪತ್ನಿ, ಪುತ್ರ, ಬಂಧು, ಮಿತ್ರರಿಂದ ಪ್ರಾಪ್ತವಾಗುವುದು.

8) ಸ್ಥಿರ:- ಒಂದು ಪ್ರಮಾಣದ ವಯೋಮಾನವನ್ನು ಹೊಂದಿ ಪೂರ್ವದಲ್ಲೇ ಜೀವನಾನುಭವ ಹೊಂದಿರುವುದು. ತನ್ಮೂಲಕ ಉಂಟಾಗುವ ಸ್ಥಿರತೆ.

9) ಧೈರ್ಯ:- ಪಾಪರಹಿತ, ಅಪರಾಧರಹಿತ, ರೋಗರಹಿತ ಜೀವನದಿಂದ ಲಭ್ಯವಾಗುತ್ತದೆ.

10) ಆರೋಗ್ಯ:- ಆಹಾರ, ವಿಹಾರ, ಪರಿಸರಗಳಿಂದ ಪ್ರಾಪ್ತವಾಗುವಂತಹದ್ದು.

ಇದೇ ಹತ್ತು ವಿಧದ ಪರಿಕರಗಳು. ಇದನ್ನು ಮೊದಲು ಸಾಧಿಸಿಕೊಳ್ಳಬೇಕು. ಯೋಗಶಾಸ್ತ್ರದಲ್ಲಿ ಇದು ಮುಖ್ಯವಾಗಿ ಆಸನಗಳೆನ್ನಿಸಿಕೊಳ್ಳುತ್ತದೆ. ಇದನ್ನು ವಸಿಷ್ಠರ ಮಾತಿನಲ್ಲೇ ಗಮನಿಸೋಣ.

ಋಗ್ವೇದ ಮಂಡಲ - ೭ ಸೂಕ್ತ - ೬೯ ಮಂತ್ರ - ೧


ಈ ಪಾಂಚಭೌತಿಕ ದೇಹದಲ್ಲಿ ಪಂಚಪಂಚಗಳ ಸ್ಥಿತಿಯು ಋಣತ್ರಯಗಳ ಕಾರಣದಿಂದ ನಿಯಂತ್ರಿಸಲ್ಪಡುತ್ತದೆ. ಅದರ ಸಾರಥಿಯೇ ಮನಸ್ಸು. ಯೋಗಾರೂಢನಾಗಬೇಕಾದ ವ್ಯಕ್ತಿಯು ಈ ಋಣಗಳ ಪ್ರತಿಬಂಧಕಕ್ಕೆ ಸಿಗದೇ ಇದರ ಹಿಡಿತ ಸಾಧಿಸಿ ಆರನ್ನು ಗೆದ್ದು ಏಳರ ಶಕ್ತಿಯನ್ನು ವೃದ್ಧಿಸಿಕೊಂಡು ಎಂಟರ ಅಂಗ ಅಂಗವನ್ನು ಸದೃಢಗೊಳಿಸಿಕೊಂಡು ನವ ಆವರಣಗಳಿಂದ ವೇಷ್ಟಿತನಾಗಿ ದಶರಥನಾಗಬೇಕು. ಅವನೇ ಯೋಗಿ ಎಂದರು. ಇದು ಯೋಗಸಾಧನೆಯ ಮೂಲ ನಿಯಮ. ಅದೇ ಆಸನ.  ಈ ವಿಧಾನದೊಂದಿಗೆ ತೊಡಗುವುದೇ ಪ್ರಾಣಾಯಾಮ.

ಈ ಯೋಗರಹಸ್ಯವನ್ನು ದೈಹಿಕ+ಮಾನಸಿಕ ಯೋಜನೆ ಯೊಂದಿಗೆ ೫ + ೬ + ೭ + ೮ + ೯ + ೧೦ ಎಂದರು. ಒಟ್ಟು ಮೊತ್ತ ೪೫. ಇದು ಒಂದು ವೇದದ ಛಂದಸ್ಸಿನ ಅಕ್ಷರಸಂಖ್ಯೆ. ಅದನ್ನು ಅದರಲ್ಲೇ ಹೇಳಿದ್ದಾರೆ. ಅದೇ ಮಂತ್ರವಿದು. ಈ ಮಂತ್ರ ಅಕ್ಷ ಸಂಖ್ಯಾ ನಿಯಮದಂತೆ ಯೋಗಿಯು ಈ ೪೫ರ ಅಧಿಪತ್ಯ ಸಾಧಿಸಿದಲ್ಲಿ ಖಂಡಿತಾ ಯೋಗಿಯಾಗುತ್ತಾನೆ. ಅದು ನೇರ ೦೧ ಎಂಬ ಕೇಂದ್ರ ಆರಂಭಿಸಿ ೧೦ ಎಂಬ ಸ್ಥಾನದಲ್ಲಿ ನಿರಸನಗೊಳ್ಳುತ್ತದೆ. ಅದನ್ನು ಹೀಗೆ ಹೇಳಿದ್ದಾರೆ. ಯೋ ಹ ಸ್ಯ ವಾಂ ವಾ ರಥಿರಾ ಆವಹ ತಾ ತಾ ಉಸ್ರಾ ರಥೋ ಪರಿಯಾತಿ ವರ್ತಿಃ ಎಂದಿದ್ದಾರೆ. ಇದನ್ನು ಹೀಗೆ ವಿವರಿಸಬಹುದು.

ಯಾರು ಯಾರಿಗೆ ಎಲ್ಲಿ ಏಕಾಗಿ
ಯಾರ್ಯಾರೋ ಎಲ್ಲೆಲ್ಲಿ ಸಲ್ಲದೇ
ಯಾರೆಂದರಿಯದೇ ತಾ ನಿತ್ಯನೆಂದು ಬೀಗುತ ಚರಿಸುತಲೀ ||
ಯಾರ ಕರ್ಮವಿದಲ್ಲ ಋಣವಿದಲ್ಲ
ಚಾರ ನಿನ್ನದೇ ಹೊರುತಲಿರು ನೀ
ಯಾರಿಲ್ಲ ನಿನಗೀ ಕಾಲದಲಿ ಗೆಲಿದರೆ ಯೋಗಿಯೆನಿಸುವೆಯೊ || ೧ ||

ತೃಣಮೂಲವೆಲ್ಲಿದೆ ಜೀವರಕ್ಷಕ
ಪ್ರಾಣಧಾತುವು ಬೇರಿನಲ್ಲಿದೆ ನೀ
ನರಿ ಮನುಜ ನಿನ್ನ ಮೂಲದ ಬೇರಿನಲ್ಲಿದೆ ಪ್ರಾಣವೂ ||
ತೃಣವಲ್ಲ ಜೀವನವು ಬಿಸಿಲಿಗೆ
ಬಾರಿಬಾರಿಗು ಒಣಗಿ ಸೊರಗಿಹುದು
ಊರಿ ಬೇರನು ಅಡಗಿಸಿ ಪ್ರಾಣಶಕ್ತಿಯ ನೀಡುತಲೀ ||||

ಕಾಣದಂತಿದೆ ಮೂಲಶಕ್ತಿಯು
ಕೋಣನಾಗದಿರು ಅರಿತುಕೊ
ಕಾಣಿಸಲು ಮೂಲ ಪ್ರಾಣಶಕ್ತಿಯು ಯೋಗವದು ||
ಗೇಣಿ ಕೊಡು ಮೂಲಕೆ ನೀನಿಂದರಿ
ಜಾಣತನದಲಿ ಬಾಳು ತೂಗಿಸು
ಕಾಣದಾತ್ಮನ ಅರಿವ ಪಡೆ ಮಾರ್ಗವಿದು ಸತ್ಯ ||||

ಹಾಗಾಗಿ ಈ ವಿಜ್ಞಾನಕ್ಕೆ ಎಂದಿಗೂ ಸಿಗದ, ಹೀಗೆ ಎಂದು ಹೇಳಲಾಗದ, ಒಂದೇ ಒಂದು ಜಗತ್ತಿನ ಸತ್ಯವೇ ಪರಮಾತ್ಮ. ಅದನ್ನು ಕಾಣಲು ಮೊದಲು ನಿನ್ನಾತ್ಮ ಸಾಕ್ಷಾತ್ಕಾರ ಮುಖ್ಯ. ಅದೇ ಯೋಗದ ಮುಖ್ಯ ಗುರಿ. ಇದನ್ನು ಸಾಧಿಸುವುದಕ್ಕಾಗಿಯೇ ಯೋಗಶಾಸ್ತ್ರ ಹುಟ್ಟಿಕೊಂಡಿದೆ. ಇದನ್ನರಿಯಲು ವೇದ ಓದಿರಿ ಎಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಇಂತು
ಕೆ. ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ, 
ತಲಪಾಡಿ, ಕಾಸರಗೋಡು.

No comments:

Post a Comment