Tuesday, 29 December 2015

ಅಗಸ್ತ್ಯ ಲೋಪಾಮುದ್ರ ಸಂವಾದದಲ್ಲಿ ಸಪ್ತಪದಿ ವರ್ಣನೆ

ಸಪ್ತಪದಿ

ಬಾಳಿನಲ್ಲಿ ನಮ್ಮ ಪೂರ್ವಜರು ಹಾಕಿದ ಏಳು ಸೀಮಾರೇಖೆಯಿದೆ. ದಂಪತಿಗಳೇ, ಅದನ್ನು ದಾಟಲೇಬಾರದು ತಿಳಿದುಕೊಳ್ಳಿ.  ಸಪ್ತಪದಿಯನ್ನು ವೇದ ಮಂತ್ರಗಳ ಮುಖೇನ ವರ್ಣಿಸುತ್ತೇನೆ 
ಎನ್ನುತ್ತಾರೆ:

|| ಓಂ ಇಷ ಏಕಪದೀ ಭವ ||

ಲಲನೆಯಿಂದಲೆ ಜೀವನ ಲಾಲಿತ್ಯ ಆಶ್ರಮಧರ್ಮವಿದೆ
ಲಲನೆ ಕೇಳ್, ಮರೆಯದಿರು ಧರ್ಮ ನೀನೇ ಪೋಷಿಸಿಕೊ
ಲಾಲಿತ್ಯದಲಿ ಬೆಳೆಸು ಪ್ರಕೃತಿಯ ನಿರಂತರತೆಗೆ ಅಣಿ
ಗೊಳಿಸುತಲಿ ಬೆಳೆಸುವುದು, ಕಾಯುವುದು ಗೃಹಸ್ಥ ಧರ್ಮದಾ ಮೊದಲ ಹೆಜ್ಜೆಯದೂ || ೧ ||

|| ಓಂ ಊರ್ಜೇ ದ್ವಿಪದೀ ಭವ ||

ಸತಿಪತಿಯರೊಂದಾಗಿ ಬೆಳೆಸುವುದು ಕುಲಾಚಾರ
ಪತಿಧರ್ಮವನು ಸತಿಯೆ ನಿರ್ದೇಶಕಿಯು ಕಾರಣ 
ಪಿತನ ಕುಲೋದ್ಧಾರವಪ್ಪುದು ಕುಲಾಚಾರ ಬಿಟ್ಟೊಡೆ 
ಪತಿಗೆ ಏಳ್ಗೆಯಿಲ್ಲವೊ ಲಲನೆ ಕೇಳ್ ಗೃಹಸ್ಥ ಜೀವನದ ಎರಡನೇ ಹೆಜ್ಜೆ ಕುಲಾಚಾರವದೂ || ೨ ||

 || ಓಂ ರಾಯಸ್ಪೋಷಾಯ ತ್ರಿಪದೀ ಭವ ||

ದಾನಧರ್ಮವ ಮಾಡಿ ಅನ್ನವನು ಇಕ್ಕುತಲಿ ಸಿಕ್ಕಿದಾ ಪುಣ್ಯ
 ನೆಕ್ಕಿಯನು ಲೆಕ್ಕಿಸುತ, ಮಿಕ್ಕೆಲ್ಲಾ ಜನರ ಹೊಗಳದೇ ದೇವ
ನನು ಹೊಗಳಿ ಕೊಂಡಾಡಿ ಹಾಡಿ ಕುಣಿಯುವ ಭಕ್ತಿಯೊಳು
ದಾನ ಜೀವನೇ ಕೇಳ್, ಸಂಪದಕಾರಿ ರಾಯಸ್ಪೋಷವೆಂಬರು ಮೂರನೆಯ ಹೆಜ್ಜೆ ಕಾಣೂ || ೩ ||

|| ಓಂ ಮಯೋ ಭವ್ಯಾಯ ಚತುಷ್ಪದೀ ಭವ ||

ಅನುರಾಗದೊಳ್ ಸತಿಪತಿಯರಿರೆ ಸಂಕಲ್ಪ
ಕನುವಾಗಿ ಕುಲಕೇತನರಾದ ಸಂತಾನಗಳ ಪಡೆದು 
ಅನವರತ ಸದ್ಬೋಧೆ, ಸುಜ್ಞಾನ, ವಿಜ್ಞಾನ, ಆದಿಯಾಗಿ 
ನಾನಾ ವಿಧ್ಯೆಗಳ ಬೋಧಿಸುತ ಬೆಳೆಸುವುದು ಸತ್ಪ್ರಜೆಯ ನಾಲ್ಕನೆಯ ಹೆಜ್ಜೆ ಕಾಣೂ || ೪ ||

|| ಓಂ ಪ್ರಜಾಭ್ಯಃ ಪಂಚಪದೀ ಭವ ||

ಕುಲದ ಹಿರಿಯರ ಸೇವೆ, ಸವಿಮಾತು, ಕೈಂಕರ್ಯ
ಕುಲೋನ್ನತಿಯ ಚಿಂತನೆ, ಕುಲದ ಹಿರಿಮೆಯ ನಡತೆ
ಕುಲಾಚಾರ ಬೋಧನೆ, ಕಾಲ ಮಾರ್ಗಾನುಯಾಯಿಗಳ 
ಕಾಲವರಿತು ತಿದ್ದುತ, ಕಾಲಾಕಾಲ ಬೋಧವ ಪ್ರಕಟವಾಗಿಯೇ ಬೋಧಿಸುವುದು ಐದನೆಯ ಹೆಜ್ಜೆ ಕಾಣೂ||೫||

|| ಓಂ ಋತುಭ್ಯಃ ಷಟ್ಪದೀ ಭವ ||

ಜಗದ ಸತ್ಯವನರಿತು ಆತ್ಮರಹಸ್ಯವರಿಯುವ
ಮಿಗತೆ ದಾರಿಯ ಸಾಧನೆಯಲ್ಲಿ ನಡೆಯುವಾ
ಜಗದೊಡೆಯನಾ ನಾಟಕದಿ ಪಾತ್ರ ನಿರ್ವಹಿಸುತಲಿ
ಜಗದ ಋಣ ತೀರಿಸುತ, ಕೈವಲ್ಯ ಪಡೆವ ಸಾಧನೆಯೆ ಆರನೆಯ ಹೆಜ್ಜೆ ಕಾಣೂ || ೬ ||

 || ಓಂ ಸಖಾ ಸಪ್ತಪದೀ ಭವ ||

ಮಿತ್ರರಂತಿರಬೇಕು ಸರ್ವದಾ ದೂಷಣೆ ಸಲ್ಲ
ಮೈತ್ರಿಯಲಿ ಭಿನ್ನತೆ ಸಲ್ಲದೈ, ಸತಿಪತಿಯರಲಿ 
ಮೈತ್ರಿಯೇ ರಸಶಕ್ತಿ ಪರಸ್ಪರವಿರಲು ಚಿಂತನೆ
ಮಿತ್ರತ್ವವೇ ಲೋಕದುರಿಸಹಿಪ ಸುಲಭ ಮಾರ್ಗವು ಕಾಣು ಏಳನೆಯ ದಾರಿಯಿದು || ೭ ||


ಏಳು ನಡೆಗಳಲಿ ಏಳು ಧಾತುಗಳಿವೆ, ಸಂಸಾರದಾ 
ಏಳು ಸೂತ್ರಗಳಿವೆ. ಅನ್ಯೋನ್ಯತೆಯಲ್ಲಿ ಬಾಳಿದಾ 
ಏಳ್ಗೆಯಾ ಅನುಭವವಿದೆ, ಅನುಭಾವವಿದೆ
ಏಳಿಂಜೆಯಾದೊಡೆ ನೀನು ದಾಟುವೆ ಸಾಗರದ ಸಾರ್ತಕತೆಯಿದೆ ಲಲನೆ ಕೇಳೂ || ೮ ||

ಬಾಳು ಹಸನಾಗುವುದು, ಸುಖವು ಸುರಿಯುವುದು
ಹಾಳು ಕಷ್ಟಗಳು ದೂರಸರಿವವು, ಕರ್ಮಗಳು 
ಹೇಳ ಹೆಸರಿಲ್ಲದಂತೋಡುವುದು ತರಳೆ ಕೇಳ್
ಬಾಳಿನಾ ಬೊಂಬಾಳ ದೀವಿಗೆ ಏಳು ಹೆಜ್ಜೆಗಳು, ಅನ್ಯೋನ್ಯತೆಯೇ ಇದರ ಸೂತ್ರ || ೯ || 

ಇಂತೀ ಪರಿಯೊಳಗೆ ಮುನಿಯಗಸ್ತ್ಯನು ತರಳೆ ಲೋಪಾಮುದ್ರೆಗೆ 
ಬೋಧಿಸುತ ಕಟ್ಟಿದ ತಂತುವಿಗೆ ಸಾರ್ಥಕತೆ ತರುವ
ಅಂತು ಮಾರ್ಗವ ಪೇಳಿದನು ಒಲುಮೆಯಿಂದಾಭವವ ಹರಿದು ಮಾನವ ಜನುಮ ಸಾರ್ಥಕ
ವೆಂತು ಗೊಳಿಸಿಕೊಂಬುದಕೆ ಗೃಹಸ್ಥಜೀವನವು ಸುದಾರಿಯೆಂದು || ೧೦ ||

*ಆಕರ: ತಿರುಕ ಸಂಹಿತಾ ಭಾಗ-೧೫ - ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು.

No comments:

Post a comment