Thursday, 31 December 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೯

ಗಣಿತ ಶಾಸ್ತ್ರದ ವಿಚಾರಗಳೊಂದಿಗೇ ಹತ್ತೊಂಬತ್ತನೇ ಅಧ್ಯಾಯವು ಪ್ರಾರಂಭವಾಗಿದೆ. ಗ್ರಂಥಕರ್ತಾರ ಕುಮುದೇಂದು ಮುನಿಯು ಜ್ಞಾನಸಾಗರವಾದ ಭಗವದ್ಗೀತೆಯ ಅಂಕವನ್ನು ಸೂಚಿಸಿದ್ದಾನೆ. ಬೀಜಾಕ್ಷರ, ಶೃತಜ್ಞಾನದ ಅರಿವು, ತತ್ವಾರ್ಥ ಮುಂತಾದುವುಗಳಿಗೆ ಇರುವ ನವಮಾಂಕ ಗಣನೆಯನ್ನು ಸೂಚಿಸಿದ್ದಾನೆ. ಯುದ್ಧದ ಹಲವಾರು ಪರಿಗಳನ್ನು ವಿವರಿಸಿದ್ದಾನೆ: 


 ಧನ ಯುದ್ಧ |
ಜಿನ ಯುದ್ಧ |
ಭೂವಲಯದ ಯುದ್ಧ |
ಘನ ಘೋರ ಮೃದುಲ ಜಗಳ
ಹರುಷವಳಿವ ಯುದ್ಧ |
ಸರಸಾಕ್ಷರ ಯುದ್ಧ |
ಗುರುಗಳೊಡನೆ ಮಾಳ್ಪ ಲಿಖಿತದರಿವಿನ ಯುದ್ಧ |
ಐಸಿರಿಯನಾರ್ಜಿಪ ಯುದ್ಧ |
ರೀತಿ ನೀತಿಯ ಯುದ್ಧ |
ಅನುಜರನೊಂದುಗೂಡಿಸಲು ಮಾಡುವ ಯುದ್ಧ |
ಜಿನಧರ್ಮ ಹರಿ ಹರ ವಣಿಕ ಶಣಸದೆ ಬಾಳಲು ಕುಣಿಕಂಕದ ಯುದ್ಧ |
ಘನಧರ್ಮ ಶಾಸನ ಯಶರೈ ಸಮತೆಯೊಳ್ ಮೆರೆಸಲು ದ್ರೋಹವ ಗೈವಾಗ ಮಮತೆಯ ತ್ಯಾಗಿಗಳ ಸುಪರಾಕ್ರಮದ ಉಪಕ್ರಮದನುಭವ ಮುದ್ರೆಯ ವಿಮಲ ಯುದ್ಧದ ಧರ್ಮ ಯುದ್ಧ

ಮನಸಿಂಹಪೀಠವ ಸಾಗಿಪ ಯುದ್ಧ |
ವರ ರಣ ದೀಕ್ಷೆಯೊಳ್ ನಿಂತು ಬಹಿರಂತರಂಗದ ಜನ ಯುದ್ಧ ಜಿನ ಅರಿಹನನಾ |
ಯಶದಂಕದೊಳಗನಂತಾಂಕ್ಷರವನರಿಯುವ ರಸಸಿದ್ಧಿ ಸಂಕ್ರಮ ಯುದ್ಧ |
ಯಶದ ವಿಜಯ ಶ್ರೀ ಯುದ್ಧ |
ಎಮ್ಮ ಪಾಪ ಭಸ್ಮವಾಗಿಸಲಿನ್ನು ಯುದ್ಧ |
ಮದನನಂದದಿ ಮೃದು ಯುದ್ಧ |

ಈ ಯುದ್ಧಗಳಿಗೂ ಒಂದೊಂದು ಅಂಕವಿರುವುದನ್ನು ಸೂಚಿಸಿದ್ದಾನೆ. ಸಮಂತಭದ್ರ ಋಷಿಯು ನಡೆಸಿದ ವಾಗ್ಯುದ್ಧದ ವಿಚಾರ ನಮೂದಿಸಿದ್ದಾನೆ. ಆಶೆಯ ರಾಶಿಯನ್ನು ನಾಶಗೈವ ರಾಶಿಯಂಕಿಗಳ ವಿವರ ತಿಳಿಸುತ್ತಲೇ, ನೇಮೀಗೀತೆ ಋಷಿ ಮ೦ಡಲದ ಬೀಜಾಕ್ಷರದ ವಜದಲ್ಲಿ ಸದ್ಗತಿ ದೊರೆಯುವ ವಿಮಲ ಗುಣಾಂತವಲ್ಲರಿ ಎಂದು ಪ್ರಶಂಸಿಸುತ್ತ, ಭಗವದ್ಗೀತೆಯ ಉಪದೇಶವನ್ನು ಮುಂದುವರೆಸಿದ್ದಾನೆ. 
ಮದನನ ರೀತಿಯಲ್ಲಿ ತ್ಯಾಗಮಾಡಲು ಮೃದುಯುದ್ಧಕ್ಕೆ ಬಂದಿದ್ದೇನೆ,
ನನ್ನ ಯದೆಯಲ್ಲಿ ಹೊಳೆದಂತೆ ಮಾಡುತ್ತೇನೆ ಎಂಬ ಅರಿವು ನಿನ್ನಲ್ಲಿದ್ದರೆ,
ನಿನ್ನ ಯದೆಯಲ್ಲಿ ಕುಳಿತಿರುವವನು ನಾನು ಎಂಬುದನ್ನು ಅರಿತುಕೋ 
ಎಂದು ಪಾರ್ಥನಿಗೆ ಕೃಷ್ಣನು ಎಚ್ಚರಿಸುತ್ತಾನೆ.


ಅಧ್ಯಾಯದ ಮೊದಲನೇ ಸಾಲಿನಿಂದ ಕೊನೆಯ ಸಾಲಿನವರೆಗೆ ಕೆಲವೊಂದು ನಿರ್ದಿಷ್ಟ ಸ್ಥಾನದಲ್ಲಿನ ಅಕ್ಷರ ಹಿಡಿದು ಕೆಳಗಿಳಿಯುವುದು. ಕೊನೆಯ ಸಾಲಿನಲ್ಲಿ ಬಲಬದಿಯ ಅಕ್ಷರದಿಂದ ಮೊದಲ ಸಾಲಿನವರೆಗೆ ಮೇಲ್ಮುಖವಾಗಿ ಸಾಗುವುದು, ರೀತಿಯ ಜೋಡಿನಾಗರ ಬಂಧದಲ್ಲಿ ಸಾಗಿದಾಗ; ೧೦ ಶ್ರೇಣಿಗಳಲ್ಲಿ ಸಂಸ್ಕೃತ ಸಾಹಿತ್ಯವು ದೊರೆಯುತ್ತದೆ. ಬಂಧವನ್ನು ಸುಲಭವಾಗಿ ಗುರುತಿಸುವಂತೆ ಮುದ್ರಣ ಮಾಡಲಾಗಿಲ್ಲ. ಬದಲಿಗೆ ಅಲ್ಲಿ ದೊರೆಯುವ ಅಕ್ಷರಗಳನ್ನೇ ತೆಗೆದು ಕೆಳಕಂಡಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ:




ಅವುಗಳನ್ನು ಜೋಡಿಸಿಕೊಂಡು ಓದುವ ಪ್ರಯತ್ನ ಮಾಡಿ ಸಿರಿಭೂವಲಯದ ಅಕ್ಷರಮಯ ಪ್ರಪಂಚಕ್ಕೆ ಇಳಿಯಿರೆಂದು ಓದುಗರಲ್ಲಿ ವಿನಂತಿ. ಆಗ ಸಿಗುವ ಸಂಸ್ಕೃತ ಸಾಹಿತ್ಯವು: "ಭಗವಾನ್ ರುಷಿಹಿ .... ಪ್ರಸನ್ನಸಹಸ್ಥಿ ತ್ವಯಂ".

  ಅಣುವಿನ, ಅಣುವಿನಂಕದ ವಿಚಾರವು ಮುಂದುವರೆದು, ಅಣುಗಳ ಗಣನೆಯಲ್ಲಿ:-



* ಯವೆಯಂಗುಲ
* ಆತ್ಮಾಂಗುಲ
* ಉತ್ಸೇಧಾಂಗುಲ
* ಮನು ಮುಖ್ಯರಾದವರಂಗುಲ
* ಚಕ್ರವರ್ತಿಗಳಂಗುಲ



ಐದನೇ ಕಾಲದ ಜನಗಳಂಗುಲಗಳನ್ನರಿಯುವ ಅಂಬರದ ಗಣಿತದಂಕಗಳ ವಿವರನೀಡುತ್ತಾನೆ. ಅಂಕವಿಜ್ಞಾನ, ಅಂಕದರ್ಶನ, ಸ್ಪರ್ಶನ, ವಿವಿಧ ಉತ್ಸೇಧಗಳು, ಅಂಕಗಳಿಂದಲೇ ಕೇವಲಜ್ಞಾನ ಪಡೆಯಲು ಸಾಧ್ಯವೆಂಬ ಸಂಗತಿ; ಅಂಕಗಳಭಂಗ; ಬಂಧದಿಂದಲೇ ಸಕಲವೂ ಸಷ್ಟಿಯಾಗಿರುವ ವಿಚಾರದೊಂದಿಗೆ ಅಂಕಗಳ ಮಹಿಮೆಯನ್ನು ಸೂಚಿಸುತ್ತಾ ೧೯ ನೇ ಅಧ್ಯಾಯವನ್ನು ಮುಕ್ತಾಯಗೊಳಿಸಿದ್ದಾನೆ.


*    *     *

                                                     ಪುನರ್ ಅಧ್ಯಯನ ಹಾಗೂ ಪ್ರಚಾರ
- ಹೇಮಂತ್ ಕುಮಾರ್ ಜಿ.

ಆಕರ:- ಸುಧಾರ್ಥಿ, ಹಾಸನ ಇವರ "ಜಗತ್ತಿನ ಹತ್ತನೇ ಅಚ್ಚರಿ" ಹಾಗೂ "ಸಿರಿಭೂವಲಯ ಸಾರ" ಪುಸ್ತಕಗಳು. ೧೯ನೇ ಅಧ್ಯಾಯದ ವಿವರಣೆಗಳ ಚಿತ್ರವನ್ನು ೧೯೫೩ನೇ ಇಸವಿಯ ಸರ್ವಾರ್ಥ ಸಿದ್ಧಿ ಸಂಘದವರ "ಸಿರಿಭೂವಲಯ" ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

No comments:

Post a Comment