Wednesday, 13 January 2016

ನಮ್ಮ ಋಷೀ ಪರಂಪರೆ - ೧

ಪ್ರೀತಿಯ ಭಾರತೀಯ ಬಂಧುಗಳೇ,

ಈ ಪ್ರಪಂಚದ ಕ್ಷೇಮಾಭ್ಯುದಯ ಚಿಂತನೆಯಲ್ಲಿಯೇ ನಿತ್ಯ ನಿರಂತರ ತಮ್ಮನ್ನು ತೊಡಗಿಸಿಕೊಂಡ ಒಂದು ವರ್ಗವೇ ಋಷೀ ಪರಂಪರೆ. ಅದನ್ನು ವಿಸ್ತೃತವಾಗಿ ಚಿಂತಿಸ ಹೊರಟರೆ ಅದ್ಭುತ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ಅವರ ತ್ಯಾಗದ ಅಗಾಧತೆ ಅಳತೆ ಮಾಡಲಾಗದ್ದು. ಅವರ ಲೋಕಕಲ್ಯಾಣ ಗುರಿ ನಿತ್ಯ ನೂತನ. ಅವುಗಳಲ್ಲಿ ಕೆಲವೊಂದು ಋಷಿಗಳ ಅಧ್ಯಯನ ಮಾಡುತ್ತಾ ಅವರ ಪರಿಚಯ ಲೇಖನ ರೂಪದಲ್ಲಿ ಸಮಕಾಲೀನ ಘಟ್ಟದ ಸಮಾಜಕ್ಕೆ ತಿಳಿಸಲು ಪ್ರಯತ್ನಿಸುತ್ತೇನೆ. ಆ ಮುಖದಲ್ಲಿ ಒಬ್ಬೊಬ್ಬರಾಗಿ ಪರಿಚಯಿಸುತ್ತಾ ಹೋದಲ್ಲಿ ಈ ಲೇಖನಕ್ಕೆ ಕೊನೆಯಿರಲಿಕ್ಕಿಲ್ಲ. ಆದರೆ ಹಾಗೆಂದು ಬಿಡಲೂ ಸಾಧ್ಯವಿಲ್ಲ. ಕಾರಣ ಕೆಲವೊಂದು ಋಷಿವರೇಣ್ಯರ ವಿಚಾರವಾಗಿ ಸಮಕಾಲೀನ ಸಾಹಿತ್ಯದಲ್ಲಿ ಅವರ ಬಗ್ಗೆ ಇರತಕ್ಕ ಕೀಳು ಅಭಿರುಚಿಯ ಚಿತ್ರಣ ಮತ್ತು ಅವರ ಬಗ್ಗೆ ಇರುವ ತಪ್ಪು ಕಲ್ಪನೆ, ತಪ್ಪು ಇತಿಹಾಸ. ಅವನ್ನೆಲ್ಲಾ ಸ್ಪಷ್ಟ ಪಡಿಸುತ್ತಾ ಈ ಲೇಖನ ಮೂಲಕ ಸಾರ್ಥಕ್ಯತೆ ಪಡೆಯಲು ಪ್ರಯತ್ನಿಸುತ್ತೇನೆ.


ಅವುಗಳಲ್ಲಿ ಮುಖ್ಯವಾಗಿ ಏಳು ಬಗೆಯ ಋಷಿ ವರೇಣ್ಯರು ತಮ್ಮ ತಮ್ಮದ್ದಾದ ಕರ್ತವ್ಯ ನಿರ್ವಹಣೆಯಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡು ಲೋಕಕಲ್ಯಾಣ ಚಿಂತನೆಯಲ್ಲಿಯೇ ಕಾರ್ಯ ಪ್ರವೃತ್ತರಾಗಿದ್ದಾರೆ ಈಗಲೂ. ಆದರೆ ದೃಷ್ಟಿ ಪ್ರಪಂಚಕ್ಕೆ ಅದು ಕಾಣುತ್ತಿಲ್ಲ. ಕಾರಣ ಅವರು ಕೀರ್ತಿಗಾಮಿಗಳಲ್ಲ. ಅವರಿಗೆ ಫಲಾಫಲಗಳ ಅಪೇಕ್ಷೆಯಿಲ್ಲ. ಗುರುತಿಸುವ ಸಮಾಜ ಅವರಿಗೆ ಬೇಕಿಲ್ಲ. ಬದುಕುವ ಸಮಾಜ ಅವರಿಗೆ ಬೇಕಿದೆ. ಲೋಕದ ನಿತ್ಯ ನೂತನತೆ ಅವರಿಗೆ ಬೇಕಿದೆ ಅದೇ ರಹಸ್ಯ. ಆ ಏಳು ಬಗೆಯ ಕಾರ್ಯ ನಿರ್ವಹಣೆಯೆಂದರೆ ಏನು?ಪ್ರಶ್ನೆಗೆ ಮೊದಲು ಉತ್ತರಿಸುತ್ತೇನೆ.

೧) ಸೃಷ್ಟಿ ಕಲ್ಪ ಆಧರಿಸಿ ಕಾರ್ಯ ನಿರ್ವಹಣೆ (ಮಾನಸ ಪುತ್ರವರ್ಗ)
೨) ಅದರ ಸುಸೂತ್ರತೆ ಮತ್ತು ವೃತ್ತಿ ನಿಯಮ ನಿರೂಪಣೆ (ಸಪ್ತರ್ಷಿವರ್ಗ)
೩) ಧರ್ಮ ರಕ್ಷಣೆ, ಧರ್ಮ ಪ್ರವರ್ತನೆ, ವೇದ ಪರಿಷ್ಕರಣೆ (ವ್ಯಾಸವರ್ಗ)
೪) ವೇದ ಪರಿಷ್ಕರಣೆ+ ಅದನ್ನಾಧರಿಸಿದ ಸಮಾಜ ನಿರೂಪಣೆ (ಮುನಿ ಪರಂಪರೆ) ಸಂಸ್ಕರಣೆ +
೫) ಯಾಗ ಯಜ್ಞಾದಿಗಳು ಕಾಲಾಕಾಲವರಿತು ನಿರ್ವಹಣೆ (ಗೃತ್ಸಮದಾದಿ ವರ್ಗ)
೬) ಜೈವಿಕ ಸಂಕುಲ ರಕ್ಷಣೆ, ಪೂರಕ ವಿಜ್ಞಾನ (ಸಂಸ್ಥಾನಿಕವರ್ಗ)
೭) ಭೌತಿಕ ಸಂಪತ್ ಸಂಸ್ಕರಣೆ, ಪರಿಷ್ಕರಣೆ, ನಿರ್ವಹಣೆ (ರಾಜರ್ಷಿವರ್ಗ)

ಈ ಏಳು ವಿಧದಲ್ಲಿ ನಮ್ಮ ಋಷೀಪರಂಪರೆ ನಿತ್ಯವೂ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದೆಯೆಂಬುದು ಸತ್ಯ. ಹಾಗೆಂದು ಎಲ್ಲಿ? ಹೇಗೆ? ಏಕೆ? ಎಂದರೆ ಉತ್ತರದಾಯಿತ್ವ ಅವರದ್ದಲ್ಲ. ಜಗತ್ತಿನ ಆಸೆ, ಅನಂತ, ಉತ್ಕರ್ಷ, ಯೋಗ, ಪ್ರಾಪ್ತಿ, ಕಾಲ, ಕಾರಣ, ಕರ್ಮ, ಧೈವವೆಂಬ ಒಂಬತ್ತನ್ನು ನಿರಂತರವಾಗಿದ್ದು ತಾವು ಪೂರ್ಣರಾಗಿ ಅಂದರೆ ಶೂನ್ಯವಾಗಿ ನಿಷ್ಕಾಮರಾಗಿ ಕಾರ್ಯ ನಿರ್ವಹಣೆ ಮಾಡುವ ವರ್ಗವೇ ನಮ್ಮ ಋಷೀಪರಂಪರೆ. ಇವುಗಳ ಬಗ್ಗೆ ಪೂರ್ಣ ಪರಿಚಯ ಈಗಿನ ಪ್ರಸಕ್ತಕಾಲೀನ ಭಾಷೆಯಲ್ಲಿ ಕಷ್ಟಸಾಧ್ಯ. ಹಾಗೂ ಧಾರ್ಮಿಕ ಮತೀಯ ಸಂಕುಚಿತತೆಯಿಂದ ವಿವರಿಸಲು ಸಾಧ್ಯವಾಗಲಾರದು, ಅರ್ಥವೂ ಆಗಲಾರದು. ಆದರೆ ಅದು ಸತ್ಯವೇ. ಹಾಗಾಗಿ ವಿವರಿಸಲು ಪ್ರಯತ್ನಿಸುತ್ತೇನೆ. ಆದರೆ ನನ್ನ ಅಧ್ಯಯನ, ಅನುಭವ, ಲಭ್ಯಮಾಹಿತಿ, ಹಿರಿಯರ ಸಂಪರ್ಕ, ಮಹಾತ್ಮರ ಸಂಪರ್ಕ, ಸಹವಾಸಗಳಿಂದ ನಾನು ಕಂಡುಕೊಂಡ ಸತ್ಯವಿದು ಅದನ್ನು ವಿವರಿಸುತ್ತೇನೆ. ಹಲಕೆಲವು ಋಷಿಮುನಿಗಳನ್ನು ವರ್ಗೀಕರಿಸಿ ಅವರವರು ನಿರ್ವಹಿಸಿದ ಕಾರ್ಯಕಲಾಪಗಳ ಉದಾಹರಣೆ ಯೊಂದಿಗೆ ನಾನು ನನ್ನ ಮಿತಿಯಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.

ಅದರಲ್ಲಿ ಮೊದಲಾಗಿ ಮಾನಸ ಪುತ್ರವರ್ಗ. ಅವರ ಕಾರ್ಯನಿರ್ವಹಣೆ, ಲೋಕಾಚಾರ ಬದ್ಧತೆ, ಕಾಲಚರ್ಯೆ ಅವರ ಪ್ರಭೇದಗಳು.

೧. ಪ್ರಜಾಪತಿ,

೨. ಧರ್ಮಸತ್ವ,

೩. ಬೋಧಿಸತ್ವ,

೪. ಜ್ಞಾನಸತ್ವ,

೫. ಅಮೃತತ್ವ.

ಪಂಚವಿಧದ ಸತ್ವವಿದರಲ್ಲಿ ಅಡಕವಾಗಿರುತ್ತವೆ. ಕಾರಣ ಲೋಕೋನ್ನತಿ, ಬೆಳವಣಿಗೆ, ನಿತ್ಯ, ಚಿಂತನ+ಮಂಥನ ತನ್ಮೂಲಕ ಹೊಸ ಸೃಷ್ಟಿ, ಸಂಶೋಧನೆ. ಇವರ ಆದ್ಯ ಕರ್ತವ್ಯ. ಮುಂದಿನ ಬ್ರಹ್ಮಕಾಲದಲ್ಲಿ ಪ್ರಪಂಚ ಹೇಗಿರಬೇಕು? ಇಂದಿನ ಬ್ರಹ್ಮ ಕಾಲ ಅದಕ್ಕೆ ಹೇಗೆ ಪೂರಕವಾಗಿ ವ್ಯವಹರಿಸಬೇಕು? ಅದರ ನಿರೂಪಣೆ ಮಾಡುವ ವರ್ಗ ಈ ಮಾನಸ ಪುತ್ರವರ್ಗ. ಅವರಲ್ಲಿ ಮುಖ್ಯವಾಗಿ ಹಲವರನ್ನು ಲೋಕ ತಿಳಿದಿದೆ. ಅವರ ಮತ್ತು ಕೆಲವರ ಹೆಸರನ್ನು ವಿವರಿಸುತ್ತೇನೆ.

[ಅ] ಶಿವ ಮಾನಸ ಪುತ್ರವರ್ಗ :-                   

೦೧) ದೂರ್ವಾಸ
೦೨) ಭೃಂಗಿ
೦೩) ನಂದೀಶ್ವರ
೦೪) ಗಣಪತಿ
೦೫) ಸ್ಕಂಧ
೦೬) ಶರಭ
೦೭) ಶರಭಂಗ
೦೮) ಲೋಧ್ರ
೦೯) ದಕ್ಷಿಣಾ
೧೦) ಋಚೀಕ
೧೧) ಕೃಪ
೧೨) ಶೀರ್ಷ್ಣ
೧೩) ಕಪಾಲಿ
೧೪) ಭೈರವ
೧೫) ವೀರಭದ್ರ
೧೬) ದ್ರುಘಣ
೧೭) ಅಂಶುಮಂತ
೧೮) ಅರ್ಯಮಣ
೧೯) ಮರುತ
೨೦) ರುದ್ರ
೨೧) ಜ್ಞಾತಿ
೨೨) ಯತಿ
೨೩) ಹೂತಿ
೨೪) ಪ್ರಹೂತಿ
೨೫) ಉಶನಾ
೨೬) ಯಾಜಿ
೨೭) ಪ್ರಯಾಜಿಈ ಇಪ್ಪತ್ತೇಳು ಮಂದಿ ಶಿವ ಮಾನಸ ಪುತ್ರರು ಅವರ ಹೆಸರಿನಲ್ಲಿಯೇ ಮಹಾಕಾಲನಾದ ಶಿವನ ಕಾಲ ನಡೆಯಿದ್ದು ಇವರ ನಿತ್ಯಚರ್ಯೆ ಆಧರಿಸಿ ಭರ್ಗ+ಚಂದ್ರವೆಂಬ ಎರಡು ರೀತಿಯ ಕಾಲ ನಡೆಯಿರುತ್ತದೆ. ಈ ಮಹಾಕಾಲನ ಚರ್ಯೆಯನ್ನು ಪೂರ್ಣ ವಿವರಿಸಲು ಅವಕಾಶವಿಲ್ಲ. ಆದರೆ ಸ್ವಲ್ಪ ಸೂಚ್ಯವಾಗಿ ವಿವರಿಸಬಹುದು. ನಂತರದ ಕಾಲದಲ್ಲಿ ಕಾರಣವಿದ್ದು ಇವರೆಲ್ಲಾ ಭೂಮಿಯಲ್ಲಿ ಮಾನವರಾಗಿ ಜನಿಸಿ ಕಾರ್ಯ ನಿರ್ವಹಣೆ ಮಾಡಿದ್ದೂ ಉದಾಹರಣೆ ಇದೆ. ಅವರ ಕಾರ್ಯನಿರ್ವಹಣೆ ಬಗ್ಗೆ ಅವಕಾಶವಾದಾಗ ಈ ಲೇಖನದಲ್ಲಿ ಮುಂದೆ ವಿವರಿಸುತ್ತೇನೆ.

[ಆ] ವಿಷ್ಣು ಮಾನಸ ಪುತ್ರವರ್ಗ:-       

೦೧) ಮದನ
೦೨) ಅಂಶುಷೇಣ
೦೩) ಧ್ಯುಮತ್ಸೇನ
೦೪) ಇಂದ್ರದ್ಯುಮ್ನ
೦೫) ಸಂಕರ್ಷಣ
೦೬) ಪ್ರದ್ಯುಮ್ನ
೦೭) ಅನಿರುದ್ಧ
೦೮) ವೀರ್ಯವಾನ್
೦೯) ಸುದರ್ಶನ
೧೦) ಜಯ
೧೧) ವಿಜಯ
೧೨) ಗರುಡ ಈ ೧೨ ಜನರು ವಿಷ್ಣು ಮಾನಸಪುತ್ರರು. ನಂತರ ಅವರ ಕಾರ್ಯ ವಿಚಾರವಾದ ಕಥೆಗಳೂ ಪೌರಾಣಿಕವಾಗಿ ವಿವರಿಸಲ್ಪಟ್ಟಿವೆ.

[ಇ] ಬ್ರಹ್ಮ ಮಾನಸ ಪುತ್ರವರ್ಗ :-     


೧) ನಾರದಾದಿ (೬೦)
೨) ಮರೀಚ್ಯಾದಿ (೪೦)
೩) ದಕ್ಷಾದಿ (೧೮)
೪) ಕ್ಷೌಭ್ಯಾದಿ (೧೨)
೫) ಅತುಲ್ಯಾದಿ (೧೪)
ಒಟ್ಟು ೧೪೪ ಜನ ಬ್ರಹ್ಮಮಾನಸಪುತ್ರವರ್ಗ. ಇವರೆಲ್ಲ ನಿತ್ಯ ನಿರಂತರ ಸಂಚಾರಿಗಳಾಗಿ ಲೋಕ ವ್ಯವಹಾರ ನಿರ್ವಹಣೆಯಲ್ಲಿ ತೊಡಗಿರುವವರು. ಕಾಲಚಕ್ರದ ತಿರುಗುವಿಕೆಯಲ್ಲಿ ನಿತ್ಯಕರ್ಮಿಗಳಾಗಿ ಲೋಕ ವ್ಯಾಪಾರ ನಡೆಸುತ್ತಾರೆ. ಕಾಲ, ಕ್ಷಣ, ಕ್ಷಪದಿಂದ ಸೂಕ್ಷ್ಮವಾಗುತ್ತಾ ಅತೀವ ವೆಂಬಷ್ಟು ಪ್ರಮಾಣದ ಸೂಕ್ಷ್ಮತೆಯಲ್ಲಿಯೂ ಹಾಗೆ ದಿನ, ಮಾನ, ವರ್ಷ, ಪರ್ವ, ಯೋಗ, ಶಾಕ್ತ, ಸ್ನೇಹಿ, ಜವ, ಮಾಯಾ, ಕಾಲವೆಂಬ ದೀರ್ಘಮಾನದವರೆಗಿನ ಎಲ್ಲದರಲ್ಲೂ ನವಮಾಸ ವೆಂಬ ಗರ್ಭಾವಾಸವನ್ನು ನಡೆಸುವ ಹತ್ತನೆಯದಾದ ಕಾಲವೇ ಲೋಕ. ಇದಕ್ಕೆ ಕಾರಣೀಕರ್ತರಾದ ಈ ಮಾನಸಪುತ್ರವರ್ಗದ ಹಿರಿಮೆ ಎಷ್ಟು ಹೇಳಿದರೂ ಮುಗಿಯದು.

ನೆಯದಾದ ಸಪ್ತರ್ಷಿವರ್ಗ:- 

ಇವರ ಕರ್ತವ್ಯ ಕಾಲ ಆಧರಿಸಿ ಸುಸೂತ್ರತೆ ಕಾಯ್ದುಕೊಂಡು ಬರುವುದು, ಜೀವರ ಜೀವನ ವೃತ್ತಿಗೆ ಪ್ರೇಷಣೆ, ಈ ನಾಟಕೀಯ ಪ್ರಪಂಚದಲ್ಲಿ ಸತ್ಯ ಪ್ರಲೋಭನೆಯಿಂದ ವಂಚಿತ ಜೀವನ ನಿರೂಪಣೆ ಪಡೆದು ಜೀವ ಕೋಟಿಗಳನ್ನು ಮುನ್ನಡೆಸುವುದು. ಅದೇ ಪ್ರಪಂಚ. ಈ ಪ್ರಪಂಚ ಸೂತ್ರವನ್ನು ಆ ಹಂತಕ್ಕೆ ಏರಿದ ಋಷಿವರ್ಯರು ಮಾತ್ರ ಅರ್ಥೈಸಿಕೊಳ್ಳಬಲ್ಲರು. ಇವರು ಈಗ ನಲವತ್ತೊಂಬತ್ತು ಜನರು ಕಾರ್ಯ ನಿರ್ವಹಿಸಿರುತ್ತಾರೆ. ಅವರೆಲ್ಲರ ಚರಿತ್ರೆ ವ್ಯಾವಹಾರಿಕ ಪ್ರಪಂಚದಲ್ಲಿ ಅವರ ಪಾತ್ರ ನಿರ್ವಹಣೆ ವಿಚಾರವಾಗಿಯೂ ಪರಿಚಯ ಲೇಖನ ಬರೆಯಲು ಪ್ರಯತ್ನಿಸುತ್ತೇನೆ.


೩ನೆಯದಾದ ವ್ಯಾಸವರ್ಗ:- 


ಇವರು ಧರ್ಮರಕ್ಷಣೆ, ಧರ್ಮಪ್ರವರ್ತನೆ, ವೇದ ಪರಿಷ್ಕರಣೆಯಾಧರಿಸಿದ ಲೋಕಾಲೋಕ ವ್ಯಾಪಾರ ನಿರ್ಣಯ, ಕಾಲನಡೆ, ವೃತ್ತಿ, ವ್ಯಾವಹಾರಿಕ ಜೀವನ, ಸುಖ, ಕಷ್ಟ ನಿರೂಪಣೆ ಇತ್ಯಾದಿ ಲೋಕದ ಜೀವರೆಲ್ಲರ ನಿರ್ವಹಣೆಗಾಗಿ ಟೊಂಕಕಟ್ಟಿ ನಿಂತ ವರ್ಗ ವ್ಯಾಸಪಟ್ಟ.


೪ನೇಯದಾದ ವೇದ ಸಂಸ್ಕರಣೆ:- 

ಬಳಕೆಯಾಧರಿಸಿ ಸಮಾಜ ನಿರೂಪಣೆಗಾಗಿ ಮುನಿ ಪರಂಪರೆ. ಇದೊಂದು ಅಗಾಧ ಸಂಖ್ಯಾಬಲ ಹೊಂದಿದ ಧರ್ಮಚಕ್ರವರ್ತಿಯಾದ (ಅಥವಾ ಕಾಲನಿಯಮಾನುಸಾರವಾದ) ಒಂದು ವ್ಯವಸ್ಥೆಯ ಆಡಳಿತವಾಗಿರುತ್ತದೆ. ಇವರೆಲ್ಲಾ ಹೇಳದೇ ಮಾಡುವವರು. ನಿರ್ದಿಷ್ಟ ಕಾರ್ಯವನ್ನು, ನಿರ್ದಿಷ್ಟ ಉದ್ದೇಶವನ್ನು ನಡೆಸಿಯೇ ತೀರುವ ಶಕ್ತ ಸಂಘಟಿತ ಬಲವುಳ್ಳವರು. ಅಂದಾಜು ಏಳು ಕೋಟಿಯಷ್ಟು ಮುನಿ ಪರಂಪರೆ ಇದೆ. ಅವರೆಲ್ಲರ ಕಾರ್ಯವಿಧಾನ ಗುಪ್ತ, ಸಂಚಿತ, ನಿರ್ದಿಷ್ಟ, ನಿರ್ಬಂಧಿತ, ಜೈವೀಕ ಜನಿತ, ಹಾಗೂ ಕಾಲ ನಿಯಾಮಿತ. ಇವರೆಲ್ಲಾ ತಮ್ಮ ಕಾರ್ಯ ಕುಶಲತೆಯಲ್ಲಿ ಯಾವುದೇ ಸುಳಿವನ್ನೂ ಬಿಡಲಾರರು, ಬಿಟ್ಟು ಕೊಡಲಾರರು.


ನೇಯದಾದ ಗೃತ್ಸಮದಾದಿ ಋಷಿವರ್ಗ:-

ಯಾಗ ಯಜ್ಞಾದಿಗಳನ್ನು ನಿರ್ವಹಿಸುವುದು ಹಾಗೂ ಜೈವಿಕ ಸಂಕುಲದ ಬೌದ್ಧಿಕ ಅಭಿವೃದ್ಧಿ ಪಡಿಸುವುದು ಹಾಗೂ ಲೋಕದ ಸ್ಥಿರತೆ ಕಾಪಾಡುವ ದೃಷ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವರ್ಗವೇ (ಋಷೀಪರಂಪರೆ) ಗೃತ್ಸಮದಾದಿ ವರ್ಗ. ಅದಕ್ಕಾಗಿ ಅವರು ಸಿದ್ಧಪಡಿಸಿಕೊಂಡ ಭೂಮಿಕೆಗಳೋ ಅಗಾಧ, ಅದ್ಭುತ, ಅದ್ವಿತೀಯ. ಈ ಭೂಲೋಕದಲ್ಲಿ ಮಾತ್ರವಲ್ಲ ವರುಣ, ವಿಕರ್ಷಣ, ನಾಗ, ಸರ್ಪ, ಸುತಳ, ಸತ್ಯವೆಂಬ ಏಳು ಭಿನ್ನ ಭಿನ್ನ ತಾಣಗಳಲ್ಲಿ ನಿತ್ಯ ಯಾಗ ಪ್ರಕ್ರಿಯೆಯಲ್ಲಿ ತೊಡಗಿ ಕೊಂಡಿರುತ್ತಾರೆ. ಲೋಕ ನಿರೂಪಣೆಗಾಗಿ ಈ ಏಳು ಕ್ಷೇತ್ರಗಳಲ್ಲಿ ನಡೆಯುವ ಏಳು ಭಿನ್ನ ಭಿನ್ನ ಪ್ರಕ್ರಿಯೆಗಳೇ ಸಪ್ತ ಸೋಮಯಾಗಗಳು. ಇದರ ಮುಖ್ಯವಾದ ನಿರ್ವಹಣೆಯು ಋಷೀಪರಂಪರೆಯ ಜವಾಬ್ದಾರಿಯಾಗಿರುತ್ತದೆ. ಇದೆಲ್ಲಾ ವರ್ಣಿಸಲು ನನ್ನ ಬುದ್ಧಿಮತ್ತೆ ತುಂಬಾ ಅಲ್ಪ. ಆದರೂ ನಾನು ಈ ಭೌತಿಕ ಚಕ್ಷುವಿನಿಂದ ಗುರುತಿಸಿದ್ದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಏಕೆಂದರೆ ಅದು ನಮ್ಮ ಋಷೀ ಪರಂಪರೆ. ಈ ಲೇಖನದ ಮುಖ್ಯ ಅಂಶವಾಗಿರುತ್ತದೆ. ಇದರಲ್ಲಿ ಆಗಿ ಹೋದ ಋಷಿಗಳೆಲ್ಲರ ವರ್ಗವಾದರೂ ವಿವರಿಸಲು ಪ್ರಯತ್ನಿಸುತ್ತೇನೆ.


ನೇಯದಾದ ಸಂಸ್ಥಾನಿಕ ವರ್ಗ:- 


ಈ ವರ್ಗ ವಿಶಿಷ್ಟವಾದುದು. ಪ್ರಪಂಚದಲ್ಲಿ ಬೆರೆತು ಸಾಮಾನ್ಯ ನಾಗರೀಕರಂತಿದ್ದು ತಮ್ಮ ಉದ್ದೇಶ ಕಾರ್ಯ ನಿರ್ವಹಣೆ ಮಾಡುತ್ತಾ ಯಾರಿಗೂ ಯಾವ ಕುರುಹೂ ಕೊಡದೆ ಕಾರ್ಯ ನಿರ್ವಹಿಸುತ್ತಿರುವ ವರ್ಗ.


ನೇಯದಾದ ರಾಜರ್ಷಿವರ್ಗ:- 


ಇದು ಭಿನ್ನ ಭಿನ್ನ ಸಂಸ್ಕೃತಿ, ಆಚಾರ, ವಿಚಾರ ಹುಟ್ಟಿಸುತ್ತಾ ಏನಕೇನ ಪ್ರಕಾರೇಣ ಧರ್ಮಗ್ಲಾನಿಯನ್ನು ತಡೆದು ನಿತ್ಯನೂತನ ಸೃಷ್ಟಿಯ ರಕ್ಷಣೆಯಲ್ಲಿ ಕಾರ್ಯಪ್ರವೃತ್ತ ವರ್ಗ.


ಈ ಎಲ್ಲಾ ವರ್ಗದಲ್ಲಿಯೂ ನಿರ್ವಾಹಕರಾಗಿ ನಿರ್ವಹಿಸುತ್ತಿರುವ ಮಹರ್ಷಿ ಮಹೋದಯರ ವಿಚಾರವಾಗಿ ವಿವರವಾದ ಲೇಖನವನ್ನು ಬರೆಯಲು ನನ್ನ ಅಳತೆಗೆ ಸಿಕ್ಕಿದಷ್ಟು ಒದಗಿಸಲು ಪ್ರಯತ್ನಿಸುತ್ತೇನೆ ಎಂದು ವಿನಂತಿಸುತ್ತೇನೆ.

ಇಂತು,

ಕೆ. ಎಸ್. ನಿತ್ಯಾನಂದ
ಪೂರ್ವೋತ್ತರೀಯ ಮೀಮಾಂಸಕರು,
ಅಘಸ್ತ್ಯಾಶ್ರಮ, ತಲಪಾಡಿ.

No comments:

Post a Comment