Monday, 18 January 2016

ಮಾಂಸಾಹಾರ ಒಂದು ವಿಶ್ಲೇಷಣೆಪ್ರಿಯ ಸಮಾಜ ಬಾಂಧವರೇ,

        ಈ ಕೆಲದಿನಗಳಿಂದ ಹಲವಾರು ಮಾದ್ಯಮಗಳಲ್ಲಿ ತಿನ್ನುವ ಆಕಾಂಕ್ಷಿ ಜನ ತಮ್ಮ ತೀಟೆಗಾಗಿಯೋ ಅಥವಾ ಶುದ್ಧ ಶಾಖಾಹಾರಿಗಳಾದ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೋ ಮಾಂಸಹಾರಕ್ಕೆ ವೇದ, ಪುರಾಣ, ಸ್ಮೃತಿಗಳಲ್ಲಿ ಆಧಾರ ಹುಡುಕುತ್ತಿದ್ದಾರೆ. ಅದರಿಂದಲಾದರೂ ವೇದಗಳ ಬಗ್ಗೆ ಅಧ್ಯಯನ ನಡೆಯಲಿ ತುಂಬಾ ಸಂತೋಷ. ಯಾವುದೋ ರಾಜಕೀಯ ಕಾರಣ, ಪಕ್ಷದ್ವೇಷ, ವೈಯಕ್ತಿಕ ಹಿತಾಸಕ್ತಿ, ಇವುಗಳಿಂದ ಪ್ರಚೋದಿಸಲ್ಪಟ್ಟ ಬುದ್ಧಿ ಜೀವಿಗಳು ತಮಗೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈ ಲೇಖನ ಸಿದ್ಧಪಡಿಸಿದ್ದೇನೆ. ಓದಿ, ಅರ್ಥಮಾಡಿಕೊಳ್ಳಿ. ನಿಮ್ಮವರಿಗೆ ತಿಳಿಸಿ. "ಬದುಕುವುದಕ್ಕಾಗಿ ಮಾತ್ರ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ" ಲೇಖನ ಓದಿ.

        ಈ ಲೇಖನವು ದಿನಾಂಕ: ೧೮-೧೨-೨೦೦೩ ರ ತರಂಗ ವಾರಪತ್ರಿಕೆಯ ಲೇಖನದ ಗೋಹತ್ಯೆ ವಿಚಾರದ ವಿವರಣೆಯಾಗಿರುತ್ತದೆ. ಇದು ಯಾವುದೇ ಒಂದು ಧರ್ಮದ ನಿಂದನೆಯ ಉದ್ದೇಶವಲ್ಲ. ಯಾರನ್ನು ಖಂಡಿಸುವುದೂ ಇಲ್ಲ. ನೈಜತೆಯನ್ನು ನಾವು ಯಾವ ಮಾಪನದಲ್ಲಿ ಅಳೆಯಬೇಕು ಎಂಬುದಕ್ಕೆ ಕೆಲ ಉದಾಹರಣೆ ಕೊಡುತ್ತೇನೆ. ಮಾಂಸಾಹಾರಾಕಾಂಕ್ಷಿಗಳು ಗೋಮಾಂಸವನ್ನೇ ಅಥವಾ ಇನ್ಯಾವುದೇ ಪ್ರಾಣಿಯ ಮಾಂಸವನ್ನೇ ತಿನ್ನುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಅದಕ್ಕೆ ವೇದದ ಉದಾಹರಣೆ ಕೊಡುವುದಕ್ಕೆ ನನ್ನ ಅಭ್ಯಂತರವಿದೆ.

ಅಂದರೆ ಮಾಂಸಭಕ್ಷಕರಾದ ನೀವು ತಿನ್ನುವ ಆಹಾರಕ್ಕೆ ವೇದದ ಉದಾಹರಣೆ ಏಕೆ ಬೇಕು? ಆಲೋಚಿಸಿ. ಒಂದು ಕೆಲಸ ಮಾಡುವಾಗ ಇದು ಧರ್ಮಬದ್ಧ, ನ್ಯಾಯಬದ್ಧವೆಂದಾದರೆ ಅದಕ್ಕೆ ಯಾವ ಆಸರೆಯೂ ಬೇಕಿಲ್ಲ. ಆದರೆ ಮಾಂಸ ತಿನ್ನುವ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಇದೆ ಹಾಗಾಗಿ ನೀವು ಪೂರ್ವೋದಾಹರಣೆ ಹುಡುಕಿಕೊಂಡು ಹೋಗಿ ವೇದವನ್ನೋ, ಯಾವುದೋ ಧರ್ಮದ ಉದಾಹರಣೆಯನ್ನೋ ಕೊಟ್ಟು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತೀರಾ. ಈ ಸಮರ್ಥನೆ ಬೇಕೆ? ಏಕೆ ಬೇಕು? ಅದು ಅಪರಾಧಿ ಪ್ರಜ್ಞೆ. ತಪ್ಪು ಮಾಡುತ್ತಿದ್ದೇನೆ ಎನ್ನುವ ಮನೋಭಾವ. ಆತ್ಮಕ್ಕೆ ಒಪ್ಪಿದರೆ ಅಮೇಧ್ಯ ತಿನ್ನಿ. ಆದರೇ ವೇದದ ಸಮರ್ಥನೆಯೊಂದಿಗೆ ತಿಂದು ಆತ್ಮ ವಂಚನೆ ಮಾಡಿಕೊಳ್ಳಬೇಡಿ. ಆತ್ಮವಂಚನೆ ಮಾಡಿಕೊಳ್ಳುವ ಜೀವಿಯನ್ನು ವೇದವೇನು ಯಾವುದೇ ಧರ್ಮವಾಗಲೀ ದೇವರಾಗಲೀ ರಕ್ಷಿಸಲಾರ; ಇದು ಸತ್ಯ. ಅಥವಾ ಮಾಂಸ ತಿನ್ನುವುದಕ್ಕಾಗಿಯೇ ಹೊಸ ಧರ್ಮ ಹುಟ್ಟು ಹಾಕುವುದಲ್ಲ.

ಈಗ ನಾವು ವಿಮರ್ಶಿಸಬೇಕಾದ್ದು ಈ ವಿಚಾರವಾಗಿ.

"ಮಾಂಸ ಭಕ್ಷಣೆ" ಇದು ಆಹಾರವೇ?
ಮಾನವನಿಗೆ ಅಗತ್ಯವೇ?
ಅದಿಲ್ಲದೇ ಮನುಷ್ಯ ಬದುಕಲಾರನೇ?
ಈ ಆಹಾರದಿಂದ ನಾವು ಏನು ಅಭಿವೃದ್ಧಿ ಸಾಧಿಸಬಹುದು?
ಮನುಷ್ಯತ್ವದ ದ್ಯೋತಕವಾದ ಬುದ್ಧಿಗೆ ಪ್ರಚೋದಕವಾದ ಆಹಾರ ಯಾವುದು?

        ಈ ನಿಟ್ಟಿನಲ್ಲಿ ಚಿಂತಿಸಿದಾಗ ಮೊದಲನೆಯದಾದ "ಇದು ಆಹಾರವೇ" ಅಂದರೆ ಮನುಷ್ಯನಿಗೆ ಯಾವುದೇ ರೀತಿಯ ಮಾಂಸ ಆಹಾರವಾಗಲು ಸಾಧ್ಯವಿಲ್ಲ. ಯಾವುದೇ ಆಹಾರವು ಜೀರ್ಣಿಸಿಕೊಳ್ಳಲು ಮತ್ತು ಬಳಸಲು ಸೂಕ್ತ ದೇಹ ರಚನೆ ಇರಬೇಕು. ಹಾಗೆ ನೋಡಿದಲ್ಲಿ ಮನುಷ್ಯ ಸಹಜ ಜೀರ್ಣಕ್ರಿಯೆಯಿಂದ ಮಾಂಸ ಜೀರ್ಣಿಸಿಕೊಳ್ಳಲು ಅಂಗರಚನೆಯೂ ಅದರಂತಿಲ್ಲ. ಮನುಷ್ಯದೇಹಕ್ಕೆ ಅತೀ ಸೂಕ್ತ ಆಹಾರವೆಂದರೆ ಏಕದಳ ಧಾನ್ಯಗಳು. ಅಕ್ಕಿ, ಗೋಧಿ, ಜೋಳ, ರಾಗಿ ಹೊರತು ಪಡಿಸಿದ ಇತರೆ ಏಕದಳ ಧಾನ್ಯಗಳು ಅಭಾವ ಕಾಲದಲ್ಲಿ ಮಾತ್ರ ಬಳಸಬೇಕೆ ವಿನಃ ಎಲ್ಲಾ ಕಾಲದಲ್ಲಲ್ಲ. ಇನ್ನು ದ್ವಿದಳ ಧಾನ್ಯ ಉತ್ಪನ್ನಗಳು ಅಗತ್ಯಕ್ಕೆ ತಕ್ಕಷ್ಟು ಹಿತ ಮಿತವಾಗಿರಬೇಕೇ ವಿನಃ ಹೆಚ್ಚಾಗಿ ಬಳಸಬಾರದು. ಹಣ್ಣು, ಹಂಪಲು, ತರಕಾರಿಗಳು ಇವು ಮೇಲಿನ ಆಹಾರಕ್ಕೆ ಪೂರಕವಾಗಿರಬೇಕು. ದಂಟು, ನಾರು, ಬೇರು ಋತುಮಾನಕ್ಕೆ ತಕ್ಕಂತೆ ಹೊಂದಿರಬೇಕು. ಆ ಕಾಲದಲ್ಲಿ ಮಾತ್ರ ಬಳಸಬೇಕು. ಕಂದ ಮೂಲಗಳನ್ನು ಪ್ರಾದೇಶಿಕತೆಗೆ ಹೊಂದಿಕೊಂಡು ಸೂಕ್ತವಾಗಿ ಬಳಸಬೇಕು. ಇತರೆ ಪ್ರಾಕೃತಿಕ ಉತ್ಪನ್ನಗಳು ಬಳಸಬೇಕಾದಲ್ಲಿ, ಉಪಶಮನಾರ್ಥವಾಗಿದ್ದಲ್ಲಿ ತಜ್ಞರ ಸಲಹೆ ಪಡೆದು ಬಳಸಬೇಕು. ಇಷ್ಟಲ್ಲದೇ ಬೇರೆ ಆಹಾರ ಮನುಷ್ಯನಿಗೆ ಸೂಕ್ತವಲ್ಲ. "ಹೀಗಿರುವಾಗ ಮಾಂಸಾಹಾರವೇನು"?

            ಇನ್ನು ಎರಡನೆಯದಾದ "ಮಾನವನಿಗೆ ಮಾಂಸಾಹಾರ ಅಗತ್ಯವೇ"? ಎಂಬುದಾಗಿ. ಖಂಡಿತಾ ಇಲ್ಲ. ಜೀರ್ಣಿಸಿಕೊಳ್ಳಲಾಗದ ಆಹಾರ ತಿಂದು ಮನುಷ್ಯ ತನ್ನ ದೈಹಿಕ ಒಳ ಶಕ್ತಿಗಳನ್ನು ಕ್ಷೀಣಿಸಿಕೊಳ್ಳುತ್ತಾ ಬಂದು ನಾನಾ ಖಾಯಿಲೆಗಳಿಗೆ ಈಡಾಗುತ್ತಿದ್ದಾನೆ. ಆಯುಃ ಪ್ರಮಾಣ ಕುಂದುತ್ತಿದೆ. ಆಹಾರ ಗುಣವರಿತು ಶುದ್ಧ, ಬದ್ಧ ಆಹಾರ ಬಳಸಿದ ಮನುಷ್ಯನು ನಿರೋಗಿಯಾಗಿ ನೂರಾರು ವರ್ಷ ಬಾಳಬಲ್ಲ. ಮಾಂಸ ಮನುಷ್ಯನ ಆಹಾರವಂತೂ ಅಲ್ಲವೇ ಅಲ್ಲ.

        ಇನ್ನು ಮೂರನೆಯದಾದ "ಮಾಂಸಾಹಾರವಿಲ್ಲದೇ ಮನುಷ್ಯ ಬದುಕಲಾರನೇ"? ಖಂಡಿತಾ ಶುದ್ಧ ಶಾಖಾಹಾರಿಗಳಾದ ಮಾನವರೂ ಕೂಡಾ ಚೆನ್ನಾಗಿಯೇ ಬದುಕುತ್ತಿದ್ದಾರೆ. ಮಾಂಸಾಹಾರಿಯೇನು ಚಿರಂಜೀವಿಯಾದ ಉದಾಹರಣೆ ಇಲ್ಲ.

        ಇನ್ನು ನಾಲ್ಕನೆಯದಾದ "ಮಾಂಸಾಹಾರದಿಂದ ಏನು ಸಾಧಿಸಬಹುದು"? ಶೂನ್ಯ; ಸಾಧನೆಯೇನೂ ಇಲ್ಲ. ಶುದ್ಧ ಶಾಖಾಹಾರಿಯಲ್ಲಿರುವ ವಿವೇಚನಾ ಶಕ್ತಿ ಮಾಂಸಾಹಾರಿಯಲ್ಲಿಲ್ಲ. ಹೆಚ್ಚಿನ ಅವಿವೇಕ ಪ್ರಕರಣಗಳಲ್ಲಿ ಅವನು ಮಾಂಸಾಹಾರಿಯಾಗಿರುತ್ತಾನೆ. ಶಾಖಾಹಾರಿಗಳಲ್ಲಿ ಅವಿವೇಕಿಗಳು ಇಲ್ಲವೆಂತಿಲ್ಲ, ಇದ್ದಾರೆ. ಆದರೆ ಕಡಿಮೆ. ವಿವೇಕ, ಜಾಣ್ಮೆ, ಬೌದ್ಧಿಕ ಉನ್ನತಿಗಳು ಮನುಷ್ಯ ಲಕ್ಷಣ. ಆದ್ದರಿಂದ ಅಭಿವೃದ್ಧಿ ಪಥಾಕಾಂಕ್ಷಿಯಾದ ಮಾನವನು ಆಹಾರವಾಗಿ ಸ್ವೀಕರಿಸಬೇಕಾದ್ದು ಬುದ್ಧಿ ಬೆಳೆಯುವ ಆಹಾರವೇ ವಿನಃ ದೇಹ ಬೆಳೆಯುವ ಆಹಾರವಲ್ಲ. ಬುದ್ಧಿ ಬೆಳೆಯಲು ಶುದ್ಧ ಸಾತ್ವಿಕ ಆಹಾರವೇ ಮುಖ್ಯ ಕಾರಣ. "ಅನ್ನಾಜ್ಜಾಯತೇ ಬುದ್ಧಿ" ಇದು ಉಪನಿಷತ್ ವಾಕ್ಯ. ಅದು ಮಾತ್ರ ಮನುಷ್ಯನ ಬುದ್ಧಿಗೆ ಪ್ರಚೋದಕ ಆಹಾರವಾಗುವುದು. ಆಹಾರವು ಬುದ್ಧಿಗೆ ಪ್ರಚೋದಕವಾಗರಬೇಕೇ ವಿನಃ ದೇಹ ಮತ್ತು ಬುದ್ಧಿಗೆ ಉದ್ದೀಪನವಾಗಬಾರದು. ಉದ್ದೀಪನ ಆಹಾರ ಬಳಕೆಯಿಂದ ಮಾನವನು ರಾಕ್ಷಸನಾಗುತ್ತಾನೆ. ನರ ದೌರ್ಬಲ್ಯಾದಿ ಖಾಯಿಲೆಗೆ ಶರಣಾಗುತ್ತಾನೆ. ಮನುಷ್ಯತ್ವ ಕಳೆದುಕೊಂಡು ನಾಶವಾಗುತ್ತಾನೆ. ಹಾಗಾಗಿ ಪ್ರಚೋದಕ ಆಹಾರವಾದ ಶಾಖಾಹಾರೀ ಆಹಾರ ಮಾತ್ರ ಬಳಸಬೇಕು. ದೇಶದ ಅಪರಾಧ ಪ್ರಕರಣ, ರೋಗ ಪ್ರಕರಣ, ವಂಚನೆ ಪ್ರಕರಣ ಇತ್ಯಾದ ಸಮೀಕ್ಷೆ ನಡೆಸಿದಲ್ಲಿ, ಅವರಲ್ಲಿ ಹೆಚ್ಚಿನವರು ಮಾಂಸಾಹಾರಿಗಳಾಗಿದ್ದರು ಎಂಬುದು ಸತ್ಯ. ಹಾಗಾಗಿ ಮಾಂಸ ಭಕ್ಷಣೆ ಸರ್ವಥಾ ಮಾನವೀಯತೆಯ ಅಭಿವೃದ್ಧಿಗೆ ಸೂಕ್ತವಲ್ಲ.

ಇನ್ನು ನಮ್ಮ ಪೂರ್ವೀಕರು ಮಾಂಸಾಹಾರಿಗಳಾಗಿದ್ದರೇ ಚಿಂತಿಸೋಣ.

        ಇಲ್ಲಿ ನಮ್ಮ ಪೂರ್ವೀಕರು ಎಂದಾಗ ಅದನ್ನು ನಾಲ್ಕು ವಿಭಾಗ ಮಾಡಬೇಕು. ಅದರಲ್ಲಿ:

೧) ಧಾರ್ಮಿಕ ಹಿನ್ನಲೆಯಲ್ಲಿ.
೨) ದೇಶ ಕಾಲದಲ್ಲಿ
೩) ವೇದ ಕಾಲದಲ್ಲಿ
೪) ಪುರಾಣೇತಿಹಾಸದಲ್ಲಿ

ಈ ರೀತಿ ವಿಭಾಗಿಸಿಕೊಂಡಲ್ಲಿ ಮೊದಲನೆಯದಾದ "ಧಾರ್ಮಿಕ ಹಿನ್ನೆಲೆಯಲ್ಲಿ" ಒಂದು ಸಿದ್ಧಾಂತ ಅಥವಾ ಒಂದು ಮತ, ಒಂದು ಧರ್ಮವೆಂದು ತೆಗೆದುಕೊಂಡಲ್ಲಿ ಮತಾಚಾರ್ಯರ ಅಭಿಪ್ರಾಯ ಭೇದ ಬೇಕಾದಷ್ಟಿದೆಯಾದರೂ ಅವರಲ್ಲಿ ಕಂಡು ಬರುವ ಒಂದು ಮುಖ್ಯ ಸಾಮ್ಯ - ಮಾನವನು ಶ್ರೇಷ್ಠತೆಯನ್ನು ಪಡೆಯುವುದಾಗಿರುತ್ತದೆ. ಮಾನವೀಯ ಬದುಕಿಗೆ ಮಹತ್ವ ಕೊಟ್ಟ ಮತಾಚಾರ್ಯರುಗಳು ಎಲ್ಲಿಯೂ ಹಿಂಸೆಗೆ ಪ್ರಚೋದನೆ ಕೊಟ್ಟಿಲ್ಲ. ಸರ್ವ ಜೀವಿಗಳಲ್ಲೂ ಸಮಾನತೆಯನ್ನು ಉಪದೇಶಿಸಿದ್ದಾರೆ. ಎಲ್ಲಿಯೋ ಕೆಲ ಸಂದರ್ಭಗಳಲ್ಲಿ ತಮ್ಮನ್ನು ಅಥವಾ ತಮ್ಮ ಸಿದ್ಧಾಂತವನ್ನು ವಿರೋಧಿಸುವವರನ್ನು ಖಂಡಿಸುವ ಮಾತನಾಡಿರಬಹುದು, ಹಿಂಸೆಗೆ ಪ್ರಚೋದಿಸಿರಬಹುದು. ಆದರೆ ತಿನ್ನುವುದಕ್ಕಾಗಿ ಹಿಂಸೆ ಪ್ರಚೋದಿಸಿಲ್ಲ. ದಯಾ ಪರತೆಯನ್ನು ಎತ್ತಿ ಹಿಡಿದಿರವ ಮತಾಚಾರ್ಯರ ಅಭಿಪ್ರಾಯಕ್ಕೆ ವಿಕೃತ ವ್ಯಾಖ್ಯಾನ ಮಾಡಿದ ಧರ್ಮಾಂಧರು ಇನ್ನೊಂದು ಮತದವರ ನಂಬಿಕೆಯನ್ನು ಹೀಗೆಳೆಯುವ ಉದ್ದೇಶದಿಂದ ಅವರ ನಂಬಿಕೆಯ ಮುಖ್ಯ ಪ್ರಾಣಿಗಳ ಹಿಂಸೆಗ ಪ್ರಚೋದನೆ ಕೊಟ್ಟರೇ ವಿನಃ ಮತಾಚಾರ್ಯರ ಅಭಿಮತವಿರಲಿಲ್ಲ. ಹಿಂಸೆಯನ್ನು ಯಾರೂ ಪ್ರಚೋದಿಸಿಲ್ಲ.

        ಇನ್ನು ಎರಡನೆಯದಾದ "ದೇಶ ಕಾಲದಲ್ಲಿ" ಕೆಲ ಪ್ರದೇಶಗಳಲ್ಲಿ ಒಣ ಆಹಾರ ಬಳಕೆ, ಅತೀ ಶೀತ ಪ್ರದೇಶದಲ್ಲಿ ಘನ ಆಹಾರ ಬಳಕೆ ಅನಿವಾರ್ಯ. ಆ ಸಂದರ್ಭದಲ್ಲಿ ಕೆಲ ವೈದ್ಯ ವಿಧ್ಯಾ ಪ್ರವೀಣರು ಸೂಚಿಸಿದ ಉಪಶಮನ ಆಹಾರವೇ ಮುಂದೆ ಸಾರ್ವತ್ರಿಕ ಆಹಾರವಾಗಿ ಬಳಕೆಗೆ ಬಂದಿರಬಹುದು. ಇದು ದೇಶ ಕಾಲಕ್ಕೆ ಹೊಂದಿ ಬದಲಾಗಬೇಕೆಂಬ ಪ್ರಜ್ಞೆ ಇರಬೇಕು. ನಮ್ಮ ಭಾರತೀಯ ಪ್ರದೇಶಕ್ಕೆ ಸರ್ವಥಾ ಮಾಂಸಾಹಾರ ಅವಶ್ಯಕವಲ್ಲ. ಇದು ಯಾವುದೋ ದೇಶದ ಯಾವುದೋ ಕಾಲದ ಅವಶ್ಯಕತೆಗೆ ಹೊಂದಿದ ವ್ಯವಸ್ಥೆ ಅಷ್ಟೆ. ಅದು ಸರ್ವಕಾಲೀನವಲ್ಲ. ಸಾರ್ವದೇಶಿಕವೂ ಅಲ್ಲ. ಆಯಾಯ ಪ್ರದೇಶಕ್ಕೆ ಹೊಂದಿದಂತೆ ಸೂಕ್ತವಾಗಿರಬಹುದು ಅಷ್ಟೆ. ಒಟ್ಟಾರೆ ಮಾಂಸಾಹಾರ ಮನುಷ್ಯರಿಗೆ ಅರ್ಹವಲ್ಲ.
       
        ಇನ್ನು ಮೂರನೆಯದಾದ "ವೇದ ಕಾಲದಲ್ಲಿ ಮಾಂಸ ಭಕ್ಷಣೆ ಇದೆಯೇ"?  ಕೆಲವರು ವೇದ ಉದಾರಣೆ ಕೊಟ್ಟು ಸಮರ್ಥನೆ ಮಾಡಿಕೊಳ್ಳುತ್ತಾರೆಯಲ್ಲವೇ? ಇದು ಸರ್ವಥಾ ಸುಳ್ಳು. ಯಾವ ವೇದವೂ ಹಿಂಸೆಯನ್ನು ಹೇಳಿಲ್ಲ. ವೇದಗಳು ಅತೀತ, ಅನಂತ ಕಾಲದಿಂದ ಇರುವಂತಹವು. ಅವಕ್ಕೆ ಕಾಲ ನಿಗಧಿ ಪಡಿಸಲು ಸಾಧ್ಯವಿಲ್ಲ. ಇಲ್ಲಿ ಹೇಳುತ್ತಿರುವ ವೇದ ಕಾಲ ಎಂದರೆ ವೇದದ ಆದರ್ಶಗಳು ಮಾನವೀಯ ನೆಲೆಯಲ್ಲಿ ಉಚ್ರಾಯ ಸ್ಥಿತಿಯಲ್ಲಿದ ಕಾಲ. ಮಾಂಸ ಹೋಮ ದ್ರವ್ಯವಲ್ಲ (ಅಂದರೆ ಪ್ರಾಣಿ, ಪಕ್ಷಿ, ಜಲಚರ, ಮಾನವ ಇತ್ಯಾದಿ ಯಾವುದೇ ಜೀವಿಗಳ ಮಾಂಸ). ಮಾಂಸ, ಮಜ್ಜಾ, ವಪೆ ಇತ್ಯಾದಿ ಶಬ್ದಗಳು ವೇದಾರ್ಥದಲ್ಲಿ ಬೇರೆ ಅರ್ಥ ಕೊಡುವ ಪದಾರ್ಥಗಳು. ವೈದ್ಯಶಾಸ್ತ್ರದ ಮಾಂಸ ಮಜ್ಜೆಗಳು ವೇದದಲ್ಲಿ ಬಳಸಿಲ್ಲ. ಯಾವುದೋ ರಸಾಯನ ಶಾಸ್ತ್ರದ ಒಂದು ಶಬ್ದ ಸಮಾಜ ಶಾಸ್ತ್ರದಲ್ಲಿ ಬೇರೆಯೇ ಅರ್ಥ ಕೊಡುವುದಿಲ್ಲವೇ? ದೇಹಶಾಸ್ತ್ರ, ವೈದ್ಯ ವಿಜ್ಞಾನ ಬೇರೆ. ವೇದ ಕರ್ಮಾಂಗ, ಯಾಗ, ಯಜ್ಞ, ಅಧ್ವರ ಬೇರೆ. ಅಧ್ವರ = ಅಹಿಂಸೆ. ಧ್ವರ ಎಂದರೆ ಹಿಂಸೆ, ಅಧ್ವರ ಎಂದರೆ ಅಹಿಂಸೆ. ಯಾವುದೇ ವೇದದಲ್ಲೂ ಕೂಡಾ ಮಾಂಸ ಭಕ್ಷಣೆ ಹೇಳಿಲ್ಲ. ಹತ್ಯೆಯಂತೂ ಇಲ್ಲವೇ ಇಲ್ಲ. ಆದರೆ ವೇದದ ಅರ್ಥ ಬರೆಯುವ ಹುಚ್ಚರು ಅದನ್ನು ಅವರ ವ್ಯಾಪ್ತಿಯಲ್ಲಿ ಅರ್ಥಮಾಡಿಕೊಂಡರೆ ಅದಕ್ಕೆ ವೇದ ಜವಾಬ್ದಾರವಲ್ಲ. ಎಷ್ಟೋ ಜನ ವೇದದ ಆಧಾರ ಕೊಟ್ಟು ಅಮೇಧ್ಯ ತಿನ್ನುವ ನೀಚತನಕ್ಕಿಳಿದವರು ನಮ್ಮ ನಿಮ್ಮ ಮಧ್ಯೆ ಇದ್ದಾರೆ. ಆದರೆ ಅದು ಅವರ ಬಾಲಿಶ ಬುದ್ಧಿಯೇ ವಿನಃ ವೇದ ವಾಕ್ಯವಲ್ಲ. ಈ ಬಾರಿಯ ತರಂಗದಲ್ಲಿ (೧೮-೧೨-೨೦೦೩) ಒಂದು ಮಂತ್ರ ಉದಾಹರಿಸಿದ್ದಾರೆ.

ವಿಶ್ವೇತ್ಸಾ ವಿಷ್ಣುರಾಭಂದುರುಕ್ರಮ ಸ್ವೇಷಿತಃ |
ಶತಂ ಮಹಿಷಾನ್ ಕ್ಷೀರಪಾಕ ಮೋದನಂ ವರಾಹ ಮಂತ್ರ ಏಮುಷಂ ||

        ಇದಕ್ಕೆ ಅವರು ಬರೆದ ಅರ್ಥ - ಎಲೈ ಇಂದ್ರನೇ ವಿಸ್ತೃತವಾದ ಸಂಚಾರವುಳ್ಳವನೂ ನಿನ್ನಿಂದಲೇ ಪ್ರೇರಿತನೂ, ವ್ಯಾಪಕನೂ ಆದ ಆದಿತ್ಯನು ನಿನ್ನಿಂದ ಸಂಪ್ರೀತವಾದ ಸಕಲ ಉದಕವನ್ನೂ ಒದಗಿಸುತ್ತಾನೆ. ನೂರು ಎತ್ತುಗಳನ್ನು ಕ್ಷೀರದಿಂದ ಪಕ್ವ ಮಾಡಿದ ಅನ್ನವನ್ನು ಅವನೇ ಒದಗಿಸುತ್ತಾನೆ. ಇಂದ್ರನು ಉದಕವನ್ನು ಅಪಹರಿಸುವ ಮೇಘವನ್ನು ಸೀಳುತ್ತಾನೆ. ಈ ರೀತಿ ಅರ್ಥ ಮಾಡಿದ್ದಾರೆ. ಇವರಿಗೆ ಮಹಿಷ ಎಂದರೆ ಗೋವೆಂದು ಕಂಡದ್ದು ಹೇಗೆ? ಅಥವಾ ಎತ್ತಾದದ್ದು ಹೇಗೆ? ವಿಶ್ವೇತ್ಸಾ ಎಂದರೆ ಇಂದ್ರನೇ ಏಕೆ? ಮಂತ್ರದಲ್ಲಿ ಕಾಣುವ ವರಾಹ ಶಬ್ದಕ್ಕೆ ಹಂದಿ ಮಾಂಸ ಮಿಶ್ರಕವೆಂದು ಏಕೆ ಸೇರಿಸಿಲ್ಲ? ಇದೆಲ್ಲಾ ಆ ಮಂತ್ರದ ಅರ್ಥವೇ? ವೇದ ಇಷ್ಟು ಸಣ್ಣ ವಿಷಯ ಹೇಳುವುದಾಗದ್ದರೆ ಸಾವಿರ ಸಾವಿರ ವರ್ಷಗಳಿಂದ ಬರೇ ನೆನಪಿನ ಶಕ್ತಿಯಲ್ಲಿ ಉಳಿಸಿ ಬೆಳೆಸಿಕೊಂಡು ಬರಬೇಕಾದ ಅವಶ್ಯಕತೆ ಇದೆಯೇ? ಚಿಂತಿಸಿ. ವೇದ ವ್ಯಾಖ್ಯಾನಿಸತಕ್ಕದ್ದಲ್ಲ. ಅದರ ಅರ್ಥ ವೇದ್ಯವಾಗಬೇಕು. ಪದಶಃ ಅರ್ಥ ಮಾಡತಕ್ಕದ್ದಲ್ಲ. ಮತ್ತು ಅದು ಸಂಸ್ಕೃತ ಭಾಷೆಯಲ್ಲಿಲ್ಲ. ಹಾಗಾಗಿ ಮೂರ್ಖ ಪಂಡಿತರ ಕೈಗೆ ಸಿಕ್ಕಿ ನರಳುತ್ತಿದೆ.

        ಹಾಗಿದ್ದರೆ ಈ ಮಂತ್ರ ಏನನ್ನು ಹೇಳಬಹುದು? ಚಿಂತಿಸಿ. ಅದು ಏನನ್ನೂ ಹೇಳಲಾರದು. ಆದರೆ ತೋರಿಸಿ ಕೊಡಬಲ್ಲದು. ಅದೇನೆಂದರೆ, ಪ್ರಕೃತಿಗೂ ಮನುಷ್ಯನಿಗೂ ಇರುವ ಸಂಬಂಧ - ಮನುಷ್ಯ ಒಂದು ಭಾಗವಾದರೆ ಪ್ರಕೃತಿ ಎರಡು ಭಾಗ. ಅದೇ "ಮಹಿಷ". ತಾನೇ ತಾನಾಗಿ ಪ್ರಕಟಗೊಳ್ಳುವ ಗುಣ ಮಹಿಷವೇ ವಿನಃ ಕೋಣವಲ್ಲ. ಕೋಣನಲ್ಲೂ ಆ ಗುಣವಿರುವುದರಿಂದ ಮಹಿಷವೆಂದಿರಬಹುದು.

        ಪ್ರಕೃತಿಯಲ್ಲಿ ಮನುಷ್ಯನ ವ್ಯವಹಾರವೆಷ್ಟಿರುತ್ತದೆ ಎಂದರೆ ೬೪ ಭಾಗ. ಪ್ರಕೃತಿ ಮನುಷ್ಯನಲ್ಲಿ ಎಷ್ಟಿರುತ್ತದೆ ಎಂದರೆ ೩೨ ಭಾಗ. ಇದು ಸಹಜ ವ್ಯವಹಾರ. ಆದರೆ ಅದಕ್ಕೆ ೪ ಭಾಗದ ವಿವೇಚನೆ ಸೇರಿದರೆ ಇದರೊಂದಿಗೆ ವ್ಯತ್ಯಾಸವಾಗುತ್ತದೆ. ಅದೇ

೧. ಮನೋ,
೨. ಬುದ್ಧಿ,
೩. ಚಿತ್ತ,
೪. ಅಹಂಕಾರ.

ಈಗ ಎಷ್ಟಾಯ್ತು? ೬೪ + ೩೨ + ೪ = ೧೦೦. ಅದೇ ಶತ. ಅಂದರೆ ಶಂತಾರಯತೀತಿ ಶತಂ. ಇವುಗಳಿಂದ ಪ್ರಾಕೃತಿಕ ಸುಖವನ್ನು ನೀಡುವುದು ಅಥವಾ ದಾಟಿಸುವುದು ಅಥವಾ ಅದರಲ್ಲಿ ಬಂಧಿಸುವುದು ಅಥವಾ ನಾಶಕ್ಕೆ ಕಾರಣವಾಗಬಹುದು. ಅದೇ ವರಾಹ. ವರಾಹವೆಂದರೆ ಹಂದಿಯಲ್ಲ! ಇಲ್ಲಿಯೂ ೪:-

೧. ನೀಡುವುದು
೨. ದಾಟಿಸುವುದು
೩. ಬಂಧಿಸುವುದು ಅಥವಾ
೪. ನಾಶಪಡಿಸುವುದು.

ಇದು ಪ್ರಕೃತಿಯ ಗುಣ. ೩೨ ಭಾಗ ಪ್ರವರ್ತಿಸುವ ಪ್ರಕೃತಿಯು ಎಲೈ ಮಾನವನೇ, ನಿನಗೆ ಕೊಡಬಹುದು, ದಾಟಿಸಬಹುದು ಅಥವಾ ನಿನ್ನನ್ನು ಕರ್ಮ ಬಂಧನದಲ್ಲಿ ಸಿಲುಕಿಸಬಹುದು. ಅಥವಾ ನಿಷ್ಕಲ್ಮಷವಾದ ನಿನ್ನ ಆರ್ತತೆಯನ್ನು ಹಿಂಗಿಸಬಲ್ಲ ಕ್ಷೀರದಂತೆ ನಿನ್ನ ಜೀವನವಿರಲಿ. ಕ್ಷೀಣಂತಿ ರವಾಃ ಇತಿ ಕ್ಷೀರಃ ಎಂಬುದು ಆ ಮಂತ್ರದ ಭಾವವಾಗಿರುತ್ತದೆ. ಅರ್ಥವಲ್ಲ ತಿಳಿದಿರಲಿ. ಇನ್ನೂ ಈ ಪ್ರಕೃತಿಯಂತೆ ಮನುಷ್ಯ ವರ್ತಿಸುವ ೩೨ ಅಂಶ ವಿವರಿಸುತ್ತೇನೆ ಅರ್ಥ ಮಾಡಿಕೊಳ್ಳಿ.

೧. ನವದ್ವಾರಗಳು (೯):- ಅಲ್ಲಿನ ಸ್ರಾವಗಳ್ಯಾವುದೂ ಮನುಷ್ಯನ ಪ್ರಜ್ಞಾ ಪೂರ್ವಕಗಳಲ್ಲ. ಅದು ಪ್ರಕೃತಿ. ತಾನೇ ತಾನಾಗಿ ಸ್ಪಂದಿಸುತ್ತದೆ. ಸಹಜವಾಗಿ ಕಣ್ಣಿನ ನೀರು ಮನುಷ್ಯ ಪ್ರಯತ್ನದಿಂದ ಬರುವುದಿಲ್ಲ. ಸಂತೋಷ, ದುಃಖವಲ್ಲದೇ ಕಣ್ಣಿಗೆ ಬಾಧೆಯಾದಾಗ ಬರುವಂತಹದ್ದು. ಅದು ಪ್ರಕೃತಿ ಸಹಜ. ಹಾಗೇ ಮಲ, ಮೂತ್ರಾದಿಗಳೂ, ಕಿವಿಯ ಕೊಳೆಯು, ಬಾಯಿಯ ಜೊಲ್ಲು, ಮೂಗಿನ ಸಿಂಬಳ ಎಲ್ಲವೂ ಪ್ರಕೃತಿ ದತ್ತ. ಇವು ಪ್ರಕೃತಿಯು ವ್ಯವಹರಿಸುವ ೯ ವಿಧ.

೨. ಪಂಚೇಂದ್ರಿಯಗಳು (೫):- ಇದು ಪ್ರಕೃತಿಯ ಸಹಜ ಗುಣ. ಪ್ರಕೃತಿ ನಿಯಮದಂತೆ ವ್ಯವಹರಿಸುತ್ತದೆ. ಇಲ್ಲಿಯೂ ಮಾನವನ ಹಿಡಿತ ಇರುವುದಿಲ್ಲ.

೩. ಐದು ವಿಧದ ಕೂದಲು. ಕೂದಲೆಲ್ಲಾ ಒಂದೇ ಆಗಿ ಕಂಡರೂ ಮನುಷ್ಯ ದೇಹದಲ್ಲಿ ಹುಟ್ಟುವ ಕೂದಲಿನಲ್ಲಿ ೫ ವಿಧವಿರುತ್ತದೆ.

೪. ಎಂಟು ಕಾಮ ಸ್ಥಳಗಳು ಮತ್ತು ಒಂದು ಉತ್ಪಾದನಾ ಸ್ಥಳ ಅಥವಾ ಬೀಜ.

೫. ನಾಲ್ಕು ಮನೋ ಸ್ಥಳಗಳು:- ಮನೋ, ಬುದ್ಧಿ, ಚಿತ್ತ, ಅಹಂಕಾರ.

        ಒಟ್ಟು ಮನುಷ್ಯನಲ್ಲಿ ಪ್ರಕೃತಿ ವ್ಯವಹರಿಸುವ ಸ್ಥಾನ ೯ + ೫ + ೫ + ೮ + ೪ + ೧ = ೩೨. ಇವು ಪ್ರಕೃತಿ ಸ್ಥಳಗಳೆಂದು ಗುರುತಿಸಿದರು. ಪ್ರಕೃತಿಯು ಜೀವಿಯ ಭಾಗದಲ್ಲಿ ವ್ಯವಹರಿಸುವುದು. ಈ ವಿಚಾರದಲ್ಲಿ ಪ್ರಕೃತಿಯೇ ಸ್ವತಂತ್ರ.

        ಇನ್ನು ಮನುಷ್ಯ ಪ್ರಕೃತಿಯ ಭಾಗ. ಇದರ ಧನಾತ್ಮಕ ಅಂಶ ಮತ್ತು ಋಣಾತ್ಮಕ ಅಂಶವಾಗಿ ವ್ಯವಹರಿಸುವುದು ಎರಡು ರೀತಿಯಲ್ಲಿ. ಅಂದರೆ ೩೨ x ೨ = ೬೪ + ೩೨ ಒಟ್ಟು ೯೬. ಮನೋ, ಬುದ್ಧಿ, ಚಿತ್ತ, ಅಹಂಕಾರ ಸೇರಿ ೧೦೦. ಅದೇ ಆ ಮಂತ್ರದ ಶತಂ, ಅಂದರೆ ನೂರು. ಅಥವಾ ಪ್ರಕೃತಿ ಐಚ್ಛಿಕ ಕೇಂದ್ರ, ಘಾತ ಕೇಂದ್ರವೆಂದು ಅರ್ಥ. ಇವಿಷ್ಟೂ ಗುಣಗಳೂ ವಿವೇಕವೆಂಬ ಕಡಿವಾಣವನ್ನು ಹಾಕಿದ ಮನುಷ್ಯನು ತನ್ನ ಹಿಡಿತದಲ್ಲಿಟ್ಟು ಅದು ಮಹಿಷದಂತೆ ವ್ಯವಹರಿಸಲು ಬಿಡದೆ ಮಾನವನಾಗಿ ವರ್ತಿಸುವ ಮಜಲುಗಳೇ ನಾಗರೀಕ ಜೀವನದ ಉದಾಹರಣೆ.

ಕಾಮ - ಮನುಷ್ಯನಿಗೆ ನಿರ್ಬಂಧಿತ ಕಾಮ.
ಮಲ, ಮೂತ್ರ ವಿಸರ್ಜನೆ - ಗ್ರಾಮ ಶೌಚದ ಭದ್ರತೆಯ ನಿರ್ಬಂಧವಿದೆ.
ಸುಖ,ದುಃಖ - ಕರ್ತವ್ಯ ಬದ್ಧತೆಯ ನಿರ್ಬಂಧವಿದೆ.

       ಇವೆಲ್ಲಾ ಮಾನವನಾಗಲು ಬೇಕಾದ ಮಜಲುಗಳು. ಇದನ್ನು ಯಾರು ತನ್ನ ವಿವೇಕದ ಹಿಡಿತದಲ್ಲಿಟ್ಟು ವ್ಯವಹರಿಸುತ್ತಾನೋ ಅವನೇ ಮನುಷ್ಯ. ಪ್ರಕೃತಿಗೆ ಅಧೀನವಾಗಿ ತಿನ್ನುವುದಕ್ಕಾಗಲೀ ಅಥವಾ ಇನ್ಯಾವುದೇ ಕಾರ್ಯಕ್ಕಾಗಲೀ ಸ್ವೇಚ್ಛಾಚಾರಿಯಾದರೆ ಪ್ರಾಣಿ, ರಾಕ್ಷಸನೆಂದು ಕರೆಯುತ್ತಾರೆ. ಅದೇ ಉದ್ದೇಶದಿಂದ ಆಹಾರ ನಿರ್ಬಂಧನೆ ವಿಧಿಸಿದರು. ಹಾಗಾಗಿ ಮಾಂಸ ಆಹಾರವಲ್ಲವೆಂದು ತಿಳಿಯಿರಿ. ವೇದವು ಎಂದಿಗೂ ಹಿಂಸೆಗೆ ಪ್ರಚೋದನೆಯನ್ನು ಕೊಟ್ಟಿಲ್ಲ. ಆದರೆ ಸಂಸ್ಕೃತ ಪಂಡಿತರು ಸಂಸ್ಕೃತ ಭಾಷೆಯಲ್ಲಿ ವೇದವನ್ನು ಸಂಸ್ಕೃತವೆಂದು ಭಾವಿಸಿ ಅರ್ಥಮಾಡ ಹೋಗಿ ಈ ಸಮಸ್ಯೆಗೆ ಕಾರಣವಾಗಿರುತ್ತದೆ. ಉದಾಹರಣೆಗೆ ಒಂದು ಕಥೆ ಜ್ಞಾಪಿಸುತ್ತೇನೆ. ಬರೇ ಕಥೆಗಾಗಿ ಮಾತ್ರ ಈ ವಿಚಾರ.
      
     ಮಹಾಭಾರತ ಕವಿ ವೇದ ವ್ಯಾಸರು ಭಾರತ ಬರೆಯುವುದಕ್ಕೆ ಗಣಪತಿಯನ್ನು ಕೇಳುತ್ತಾರೆ. ಆಗ ಗಣಪತಿ ಬರೆದು ಕೊಡುವುದಕ್ಕೆ ಒಪ್ಪುತ್ತಾನೆ. ಆದರೆ ಒಂದು ನಿಬಂಧನೆ ಹಾಕುತ್ತಾನೆ. ಅದೇನೆಂದರೆ ನೀವು ಹೇಳುವುದನ್ನು ನಿಲ್ಲಿಸಬಾರದು, ನಿಲ್ಲಿಸಿದರೆ ನಾನು ಮುಂದೆ ಬರೆಯಲಾರೆನೆಂದು. ಆಗ ವ್ಯಾಸರು ನಾನು ಹೇಳುವ ಶ್ಲೋಕವನ್ನು ನೀನು ಅರ್ಥ ಮಾಡಿಕೊಂಡು ಬರೆಯಬೇಕೆಂದು ಪ್ರಾರ್ಥಿಸುತ್ತಾರೆ. ಅದಕ್ಕೆ ಒಪ್ಪಿ ಇಬ್ಬರೂ ಪರಸ್ಪರ ಒಪ್ಪಂದ ಮಾಡಿಕೊಂಡು ಲೇಖನ ಆರಂಭವಾಗುತ್ತದೆ. ಗಣಪತಿಗೆ ನಿದ್ರಾಹಾರವಿಲ್ಲ ಬಿಡಿ. ಆದರೆ ವೇದವ್ಯಾಸರಿಗೆ ನಿದ್ರಾಹಾರವಿಲ್ಲದಿದ್ದರೂ ತ್ರಿಕಾಲ ಸಂಧ್ಯಾವಂದನಾದಿ ಕಾರ್ಯಗಳಿಗೆ ಬಿಡುವು ಬೇಕಲ್ಲ. ಅದಕ್ಕಾಗಿ ವ್ಯಾಸರು ಜಟಿಲವಾದ ಶ್ಲೋಕ ರಚಿಸಿ ಸಂಧ್ಯಾವಂದನೆಗೆ ಹೋಗುತ್ತಿದ್ದರು. ಗಣಪತಿ ಆಲೋಚನಾ ಮಗ್ನನಾಗ ಕುಳಿತು ವ್ಯಾಸರು ಬರುವ ಹೊತ್ತಿಗೆ ಬರೆಯಲಾರದೇ ತಿಣುಕುತ್ತಿದ್ದ. ಇದು ಕಥಾ ಸಾರಾಂಶ. ಇದು ಪುರಾಣ ಇರಲಿ. ನಮಗೆ ವ್ಯಾಸರಲ್ಲಿ, ಗಣಪತಿಯಲ್ಲಿ ಪೂಜ್ಯತೆ ಇದೆ. ಆದರೆ ಈಗ ನಾವು ಗಣಪತಿಗೇ ಅರ್ಥವಾಗದ ಶ್ಲೋಕಕ್ಕೆ ಇದೇ ಅರ್ಥ ಎಂದು ಬರೆದು ಸಾವಿರ ಸಾವಿರ ವಿಧದ ಮಹಾಭಾರತ ರಚಿಸಿದ್ದೇವೆ. ಭಾರತ ವ್ಯಾಖ್ಯಾನಕಾರರ ದೃಷ್ಟಿಯಲ್ಲಿ ಗಣಪತಿ ಶತಮೂರ್ಖನೆ? ಅಥವಾ ರಚನಾಕಾರರು ಮೂರ್ಖರೇ ನೀವೇ ಹೇಳಿ? ಹೀಗೆ ನಮ್ಮ ಪಂಡಿತ ಸಮೂಹವಿದೆ ಅರ್ಥವಾಗಿರಬಹುದು. ವೇದದ ಗತಿಯೂ ಅಷ್ಟೆ ಎಂದು ನಿಮಗೆ ತಿಳಿಯಿತೆ.

    ಇನ್ನು ನಾಲ್ಕನೆಯದಾದ ಪುರಾಣ. ಇದು ಆಯಾಯ ಕಾಲಕ್ಕೆ, ಕಾಲಮಾನಕ್ಕೆ ಹೊಂದಿ, ಮತ, ಪಂಥಕ್ಕೆ ಪುರಸ್ಕಾರ ಕೊಡಲು ಹುಟ್ಟಿದ ಕಥೆಗಳು. ಇವುಗಳಲ್ಲಿಯೂ ಸಮರ್ಥನೀಯವಾದ ರಾಮಾಯಣ. ಅಲ್ಲಿ ನರಮೇಧಯಾಗದ ಒಂದು ಉದಾಹರಣೆ ಬರುತ್ತದೆ. ರಾಜಾ ಅಂಬರೀಷ ನರಮೇಧಯಾಗ ಸಂಪನ್ನಗೊಳಿಸಿದ. ಯಾಗ ಭಂಗವಾಯಿತು. ಆಗ ಯಜ್ಞಪುರುಷನು ಬ್ರಾಹ್ಮಣ ವಟುವನ್ನು ಬಲಿ ಕೊಟ್ಟರೆ ಯಾಗ ಪೂರ್ಣವಾಗುತ್ತದೆ ಎಂದು ಹೇಳಿದ. ಅದರಂತೆ ಋಚೀಕನ ಮಗ ಶುನಶ್ಶೇಫನನ್ನು ಹಣ ಕೊಟ್ಟು ತಂದ. ಆದರೆ ಸೋದರಮಾವ ವಿಶ್ವಾಮಿತ್ರನಿಂದ ನರಮೇಧ ನಡೆಯಲಿಲ್ಲ. ಶುನಃಶ್ಶೇಫನ ರಕ್ಷಣೆಯಾಯ್ತು. ಇದು ಕಥಾ ಸಾರಾಂಶ. ಹಲವಾರು ಪುರಾಣಗಳಲ್ಲಿ ಈ ಕಥೆಯು ಬೇರೆ ಪಾತ್ರಧಾರಿಗಳು ನಟಿಸಿದ ರೀತಿ; ಆದರೆ ವಿಶ್ವಾಮಿತ್ರ ಬಂದ ಉದಾಹರಣೆ ಬರುತ್ತದೆ. ಅಂದರೆ ವಿಶ್ವಾಮಿತ್ರನೆಂದರೆ ಋಷಿ ವಿಶ್ವಾಮಿತ್ರನಲ್ಲ. ಜನಸೇವಕ ಎಂಬ ಅರ್ಥದಲ್ಲಿ ವಿಶ್ವಾಮಿತ್ರ. ನರಮೇಧಯಾಗ ಮನುಷ್ಯನ ಕರ್ತವ್ಯಪ್ರಜ್ಞೆ, ತ್ಯಾಗಶೀಲತೆ, ಧರ್ಮಬದ್ಧತೆಯ ಪರೀಕ್ಷಾಯಾಗ. ಈತನು ಪರಿಪೂರ್ಣ ದೇಹವ್ಯಾಮೋಹವೂ ಇಲ್ಲದ ಪೂರ್ಣತ್ಯಾಗಿ ಎಂಬುದರ ನಿದರ್ಶನ. ವಿಶ್ವಾಮಿತ್ರನಂತಹ ಜನಸೇವಕರು ಅದನ್ನು ಪ್ರಮಾಣೀಕರಿಸುತ್ತಿದ್ದರು. ತೀರಾ ಇತ್ತೀಚಿನವರೆಗೂ ಆ ಪರೀಕ್ಷ ವಿಧಾನ ಬಳಕೆಯಲ್ಲಿದೆ.

        ಉದಾಹರಣೆಗೆ ದಕ್ಷಿಣಕನ್ನಡದ ಬಾರಕೂರಿನ ಭೂತಾಳಪಾಂಡ್ಯ, ಯಡಯೂರಿನ ಭಕ್ತಶಿರಿಯಾಳ. ಇವೆಲ್ಲಾ ಮಾನವ ಪರೀಕ್ಷೆಯ ದ್ಯೋತಕಗಳು. ಹಾಗೇ ಪುರಾಣ ಅರ್ಥಮಾಡಿಕೊಳ್ಳಲಾರದ ಭಾಷಾವಿಜ್ಞಾನ, ಭಾಷೆಯ ಉತ್ಪನ್ನ, ಅಕ್ಷರ ವಿಧ್ಯಾ, ಮಾನವೀಯ ಜೀವನ ವಿಧಾನ, ಮಾಪನ, ಧರ್ಮನಿಬಂಧನೆ, ನ್ಯಾಯಶಾಸ್ತ್ರ, ಆ ಪುರಾಣ ರಚಿಸಿದ ಕಾಲ, ದೇಶ, ಪಾತ್ರ, ಉದ್ದೇಶ ಅರ್ಥವಾಗಬೇಕು. ಬರೇ ಶಬ್ದಭಂಡಾರ ಅರಿತು ವ್ಯಾಖ್ಯಾನ ಮಾಡಿದರೆ ಇದೆಲ್ಲಾ ಸಹಜ.

        ಎಲ್ಲಿಯೂ ಹಿಂಸೆಗೆ ಅವಕಾಶ ಕೊಟ್ಟಿಲ್ಲ. ಆದರೆ ವೇದ ಹೇಳಿದೆ ಎಂದು ತಿನ್ನುವ, ಕೊಲ್ಲುವ, ದೋಚುವ ಮಂದಿಗೆ ಈಗಲೂ, ಆಗಲೂ, ಯಾವಾಗಲೂ ಬರವಿಲ್ಲ. ಆದರೆ ಅದು ವೇದ ಸಮರ್ಥನೀಯವಲ್ಲ. ನೀವು ಮಾಡುವ ಕೆಲಸ ನಿಮ್ಮ ಮನಸ್ಸಿಗೆ ಒಪ್ಪಿದರೆ ಮಾಡಿ. ಅದು ಬಿಟ್ಟು ಯಾವುದೋ ಒಂದರ ಆಶ್ರಯ ಪಡೆದು ತಪ್ಪು ಮಾಡಬೇಡಿ. ಹಿಂಸೆ ಮಾಡಬೇಡಿ. ಎಲ್ಲಾ ಜೀವಿಗಳೂ ನಮ್ಮಂತಯೇ ಎಂದು ತಿಳಿಯಿರಿ. ಸಾಧ್ಯವಾದರೆ ಪೋಷಿಸಿ. ಇಲ್ಲವಾದರೆ ಅವಷ್ಟಕ್ಕೇ ಬದುಕಲು ಬಿಡಿರಿ. ಅದು ಬಿಟ್ಟು ಕೊಂದು ತಿನ್ನುವ ದುಃಸಾಹಸಕ್ಕೆ ಇಳಿಯಬೇಡಿರಿ. ಅಲ್ಲದೇ ಅದರಲ್ಲಿ ವೇದ, ಧರ್ಮ, ಪುರಾಣ, ಇತಿಹಾಸವನ್ನು ಎಳೆಯಬೇಡಿರಿ. ಅಹಿಂಸಾ ಪಾಲನೆಗೆ ಯಾವ ಸರಕಾರ, ಕಾನೂನು ತರುವುದು ಬೇಕಿಲ್ಲ. ಕಾನೂನಿನಿಂದ ಅದು ಸಾಧ್ಯವಿಲ್ಲ. ನೀವು ದೃಢ ನಿಶ್ಚಯ ಮಾಡಿರಿ. ಶುದ್ಧ ಶಾಖಾಹಾರಿಗಳಾಗಿ. ಆದಷ್ಟು ಮಾಂಸಾಹಾರಿಗಳ ಸಂಪರ್ಕದಿಂದ ದೂರವಿರಿ. ಆಗ ಅವರು ನಿಮ್ಮ ಸಂಪರ್ಕಕ್ಕಾಗಿಯಾದರೂ ಶಾಖಾಹಾರಿಗಳಾಗುತ್ತಾರೆ.

        ಒಟ್ಟಾರೆ ಮಾಂಸಾಹಾರ ಮಾನವನಿಗಲ್ಲ, ದಾನವನಿಗೆ ಎಂದು ತಿಳಿಯಿರಿ.


ಇಂತು,
ಕೆ.ಎಸ್. ನಿತ್ಯಾನಂದ
ವೇದ-ವಿಜ್ಞಾನ ಮಂದಿರ,

ಚಿಕ್ಕಮಗಳೂರು

ಕೃಪೆ:- ಋತ್ವಿಕ್ ವಾಣಿ, ಜೂನ್ ೨೦೦೪.

No comments:

Post a comment