Thursday, 21 January 2016

ಸುಗಮ ಜೀವನ - ಸರಳ ಆಹಾರ : ಭಾಗ ೨ಕಾಫಿ, ಚಾ, ಕೊಕ್ಕೊಗಳು ಪಾನೀಯವಾಗಿ ಜನಪ್ರಿಯತೆ ಗಳಿಸಿದುದು ಇತ್ತೀಚೆಗಿನ ದಶಕಗಳಲ್ಲಾದರೂ ಅವುಗಳ ಬಳಕೆ ಕೆಲವು ಶತಕಗಳಿಂದಲೇ ಜಗತ್ತಿನ ಕೆಲವೆಡೆ ಮಾತ್ರ ಇದ್ದುದು ಸಾರಿಗೆ ಸಂಪರ್ಕದ ಮುನ್ನಡೆಯಿಂದ ಸಾಧ್ಯವಾಗಿದೆ. 'ಕೆಫೇನ್' 'ತೇಯಿನ್' 'ಥಿಯೊಬ್ರೊಮಿನ್'ಗಳಂತಹಾ ಮಾರಕ ಘಟಕಗಳು ಈ ಪಾನೀಯಗಳಲ್ಲಿ ಸೇರಿರುವುದು ಗಮನಾರ್ಹ. ಇವುಗಳನ್ನು ಆಲ್ಕಲೈಡ್ಗಳೆನ್ನುವರು. 'ಕೆಫೇನ್' ರಕ್ತನಾಳಗಳನ್ನು ಸಂಕುಚಿತಗೊಳಿಸಿದಾಗ ಅಂಗಾಂಗಗಳಲ್ಲಿ ಕಶ್ಮಲವು ಉಳಿದುಕೊಂಡು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೋಮಲವಾದ ಮೆದುಳು ಚುರುಕಾಗಿ ಉಳಿದ ಅಂಗಗಳನ್ನು ಎಚ್ಚರಗೊಳಿಸುವಾಗ ಶರೀರದಲ್ಲಿ ಹೆಚ್ಚು ಶಕ್ತಿ ಸಂಚಾರವಾದ ಅನುಭವವಾಗುವುದು. ಕಶ್ಮಲಗಳನ್ನು ಆದಷ್ಟು ಬೇಗ ಹೊರ ತಳ್ಳುವ ಆಸಕ್ತಿಯಿಂದಲೇ ಆದರೂ ಇದನ್ನೇ ಕೆಲಸಕ್ಕೆ ಉತ್ತೇಜನವೆಂದು ಜನರು ತಿಳಿಯುವರು. ಮೈ ಬಿಸಿಯೂ ಏರುವುದು ಕಶ್ಮಲಗಳ ಸಂಗ್ರಹವಾಗಿದೆಯೆಂದು ಸಾರುವ ಸಲುವಾಗಿ. ಈ ಪರಿಸ್ಥಿತಿಯಲ್ಲಿ ಹೃದಯ, ಯಕೃತ್, ಮೂತ್ರಜನಕಾಂಗ, ಮೇದೋಜ್ಜೀರಕ ಗ್ರಂಥಿಗಳೆಲ್ಲ ಕಶ್ಮಲಗಳನ್ನು ಹೊರತಳ್ಳುವ ಪ್ರಯತ್ನದಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡಿ ಬಹುಬೇಗ ಬಳಲುತ್ತವೆ. ಇದರಿಂದ ಕಾಯಿಲೆಗಳ ಸರಮಾಲೆಗಳೇ ಕಾಣಬರುತ್ತವೆ.'ಥಿಯೊಬ್ರೊಮಿನ್' ಬಳಕೆಯಿಂದ ನೆನಪು ಶಕ್ತಿ ಕಡಿಮೆಯಾಗಿ ಮೆದುಳು ರೋಗಗಳು ಕಾಣಬರುತ್ತವೆ. ಗರ್ಭಿಣಿಯು ಈ ಪಾನೀಯಗಳನ್ನು ಸೇವಿಸಿದರೆ ಗರ್ಭದಲ್ಲಿ ಬೆಳೆಯುವ ಭ್ರೂಣದ ಅಂಗಾಂಗಗಳು ನ್ಯೂನತೆಯಿಂದ ಕೂಡಿರುತ್ತವೆ. ಮುಂದಿನ ತಲೆಮಾರುಗಳು ಬಹುಶಃ ಬೆಳೆಯಲು ಕಷ್ಟ ಸಾಧ್ಯ. ಒಂದು ವೇಳೆ ಎರಡು ಮೂರನೆಯ ತಲೆಮಾರಿನಲ್ಲಿ ನಪುಂಸಕತೆ ಬರಬಹುದು. ಸಿಹಿ ಮೂತ್ರ ರೋಗಗಳೂ ಮುಂದಿನ ಪೀಳಿಗೆಗಳಲ್ಲಿ ಕಾಣಬರುತ್ತವೆ. ನಾಲಿಗೆ ಚಪಲಕ್ಕೆ ಖಾರವೇ ಬೇಕು. ಪೋರ್ಚುಗೀಸರು ಈ ಗುಟ್ಟನ್ನು ತಿಳಿದು ಭಾರತೀಯರಿಗೆ ಹಸಿಮೆಣಸು, ಕೆಂಪು ಮೆಣಸುಗಳನ್ನು ತಂದು ಕೊಟ್ಟು ಮಾರುಕಟ್ಟೆಗಳಲ್ಲೂ ಮನೆ ಮಠಗಳಲ್ಲೂ ಹೊಕ್ಕು ಕಣ್ಮನಗಳನ್ನು ಸೂರೆಗೊಳ್ಳುವಂತೆ ಮಾಡುವುದರಲ್ಲಿ ಸಫಲರಾದರು. ಇಲ್ಲಿಯ ಅತ್ಯಮೂಲ್ಯವಾದ ಕಳುಮೆಣಸನ್ನು ಪರದೇಶಗಳಲ್ಲಿ ಬೆಳೆಸಿ ಜಗತ್ತಿನ ಮಾರುಕಟ್ಟೆಯನ್ನೂ ಆಕ್ರಮಣ ಮಾಡಿ ಆಗಿದೆ. ಹಸಿಮೆಣಸಿರಲಿ ಹಣ್ಣುಮೆಣಸಿರಲಿ ಅದರ ಪುಡಿಯಿರಲಿ, ಇದರ ಒಂದು ಘಟಕವು ಪಚನಾಂಗದ ಒಳ ಪದರವನ್ನು ಕರಗಿಸುವುದರಿಂದ ಅನ್ನ ನಾಳದಲ್ಲಿ ವ್ರಣಗಳು ಕಾಣಿಸಿಕೊಳ್ಳುತ್ತವೆ. ಮೂತ್ರಜನಕಾಂಗ, ಯಕೃತ್ ಮೊದಲಾದ ಅಂಗಗಳು ವ್ಯಾಕುಲಗೊಳ್ಳುತ್ತವೆ. ರಕ್ತವೂ ತೆಳ್ಳಗಾಗುವುದು.


ಮೆಕ್ಸಿಕೋ ದೇಶದಿಂದ ಯೂರೋಪ್ ತಲುಪಿದ ಕಳೆಯೊಂದು ಕಪುಚಿನೊ ಪಾದ್ರಿಯವರ ಮೂಲಕ ಜಗತ್ತಿಗೆಲ್ಲ ಹರಡಿತು. ಟೊಮೆಟೊ ಮೂರು ತಿಂಗಳ ಬೆಳೆ. ಇದನ್ನು ಕೃಷಿ ಮಾಡಿ ಬಳಕೆಗೆ ತರುವ ಈ ಮೂರು ತಿಂಗಳ ಅವಧಿಯಲ್ಲಿ ಸುಮಾರು ೩೮ ಬಾರಿ ಕ್ರಿಮಿನಾಶಕ, ಶಿಲೀಂಧ್ರ ನಾಶಕಗಳು ಬಳಕೆಯಾಗುತ್ತವೆ. ಈ ರಾಸಾಯನಿಕಗಳು ಪರಿಸರ ಮಾಲಿನ್ಯ ಉಂಟು ಮಾಡುವ ಮಾರಕ ವಸ್ತುಗಳಾಗಿವೆ. ಟೊಮೆಟೊ ಹಣ್ಣಿನಲ್ಲಿ ಸಂಗ್ರಹವಾಗುವ ಈ ರಾಸಾಯನಿಕಗಳು ಮಾನವ ಸೇವನೆಗೆ ಯೋಗ್ಯವಲ್ಲ. ಅನೇಕ ಪೋಷಕಾಂಶಗಳು ಈ ಹಣ್ಣಿನಲ್ಲಿವೆ. ಸಾವಯವ ಪದ್ಧತಿಯಲ್ಲಿ ಬೆಳೆಸಿದರೂ ಟೊಮೆಟೊದಲ್ಲಿ ಯೂರಿಕ್ ಆಮ್ಲ, ಓಕ್ಸೇಲಿಕ್ ಆಮ್ಲ ಹಾಗೂ ಸೀಸ ಸಾಕಷ್ಟು ಪ್ರಮಾಣದಲ್ಲಿ ಶೇಖರವಾಗುವುದರಿಂದ ಮಾನವನ ಆರೋಗ್ಯದ ದೃಷ್ಟಿಯಿಂದ ಯೋಗ್ಯವಲ್ಲ. ಗಂಟುನೋವು, ಮೂತ್ರ ಪಿಂಡದ ಕಲ್ಲು, ಮೆದುಳಿನಲ್ಲಿಯೂ ದೇಹದ ಕೊಬ್ಬಿರುವಲ್ಲೆಲ್ಲ ಸೀಸವೂ ಸಂಗ್ರಹವಾಗುವುದು.

ಸೊಯಾಕಾಳು, ಜಪಾನ್ ಕೊರಿಯಾ ಚೀನಾ ದೇಶಗಳಲ್ಲಿ ಹಲವು ಶತಮಾನಗಳಿಂದಲೂ ಬಳಸಲಾಗುವ ಸಸ್ಯ ವಿಶೇಷ. ಜಗತ್ತಿನ ಸೋಯ ಸಂಗ್ರಹದ ಶೇಕಡಾ ೪೫ರಷ್ಟು ಉತ್ತರ ಅಮೇರಿಕಾದಲ್ಲಿ ಬೆಳೆಯಲಾಗುತ್ತದೆ. ಪ್ರಚಾರ ತಂತ್ರಜ್ಞಾನದಿಂದ ಇದನ್ನು ಜಗತ್ತಿನ ಉತ್ತಮ ಆಹಾರವೆಂದು ಹೇಳುತ್ತಾರೆ. ಎಣ್ಣೆ ತೆಗೆದು ಉಳಿದ ಹಿಂಡಿಯಿಂದ ಸುಮಾರು ೬೪೦೦ ವಿವಿಧ ರೂಪದ ಆಹಾರ ವಸ್ತುಗಳನ್ನು ಇದರಿಂದ ಮಾಡಿ ಮಾರಿರುತ್ತಾರೆ. ಈ ಎಲ್ಲ ರೂಪಗಳೂ ಮಾನವನಿಗೆ ಮಾರಕವಾಗಿವೆ ಎನ್ನಬಹುದು. 'ಟ್ರಿಫ್ಸಿನ್ ಇನ್‍ಹಿಬಿಟರಿ ಫೇಕ್ಟರ್' ಘಟಕವು ಮೇದೋಜ್ಜೀರಕ ಗ್ರಂಥಿಯನ್ನು ಕೆಡಿಸುತ್ತದೆ. ಸಿಹಿ ಮೂತ್ರ ರೋಗ ಬೇಗನೆ ಬರಬಹುದು.
        ಸೋಯಾ ಹಾಲು ಕುಡಿದ ಎಳೆಯ ಮಕ್ಕಳು ಲವಣಗಳನ್ನು ಹೀರಲು ಅಶಕ್ತರಾಗಿರುತ್ತಾರೆ. ಇದರಿಂದಾಗಿ ನಿರ್ನಾಳ ಗ್ರಂಥಿಗಳು ಸರಿಯಾಗಿ ಬೆಳೆಯಲಾರವು. ಸಿಹಿಮೂತ್ರವಲ್ಲದೆ ನಪುಂಸಕತ್ವ ಬರಬಹುದು.  ಓಕ್ಸೇಲಿಕ್ ಆಮ್ಲವಿರುವುದು ಮೂತ್ರಪಿಂಡ ಹಾಗೂ ಪಿತ್ತಕೋಶಗಳಲ್ಲಿ ಕಲ್ಲು ಬೆಳೆಸಲು ಸಹಕಾರಿಯಾಗಿದೆ. "ಸ್ಟೀರಾಯ್ಡ್"ಗಳು ಶರೀರದಲ್ಲಿ ಸೇರಿದಾಗ ಅನೇಕ ತರದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
        
"ವನಸ್ಪತಿ", "ಡಾಲ್ಡಾ", ವಿವಿಧ ಎಣ್ಣಿಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ಬಳಕೆಗೆ ಬಂದ ಇತರ ಆಹಾರ ವಸ್ತುಗಳು. ಮೈದಾ, ಬೆಳ್ತಿಗೆ ಅಕ್ಕಿ, ಸಕ್ಕರೆಗಳಂತೆ ಮಾರುಕಟ್ಟೆಯಲ್ಲಿ ಹಾಳಾಗಬಾರದೆಂದು ಶುದ್ಧೀಕರಣದ ಹೆಸರಿನಲ್ಲಿ ಹಲವು ರಾಸಾಯನಿಕಗಳನ್ನು ಮಿಶ್ರ ಮಾಡುವರು. ಇವುಗಳ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ರಾಸಾಯನಿಕ ಬಣ್ಣಗಳೂ ರುಚಿ ವಿಶೇಷಗಳೂ ವಿಷವಾಗಿವೆ.

ಬೆಣ್ಣೆ ತುಪ್ಪಗಳನ್ನು ಹದವರಿತು ಬಳಸಬಹುದು. ವೈಯಕ್ತಿಕ ಸಾಕುಬೇಕುಗಳೂ ಅಗತ್ಯಗಳೂ ವಿವಿಧ ರೀತಿಯವು. ಅವರವರ ಅಗತ್ಯಕ್ಕೆ ಹೊಂದಿಕೊಂಡು ಹೋಗಬೇಕು. ಹಾಗಾದರೆ ಏನು ಸೇವಿಸಬಹುದು?
   
ಅಕ್ಕಿ, ಗೋಧಿ, ಜೋಳ, ರಾಗಿ ಮೊದಲಾದ ಮೂಲ ವಸ್ತುಗಳನ್ನು ಬಳಸುವಾಗ ಅವುಗಳಲ್ಲಿ ಪ್ರಾಕೃತಿಕವಾಗಿ ಬರುವ ಪೋಷಕಾಂಶಗಳನ್ನು ಉಳಿಸಿಕೊಳ್ಳಬೇಕು. ಅಕ್ಕಿ ಕಾಳಿನ ಸುತ್ತಲೂ ಇರುವ ಕಂದು ಬಣ್ಣದ ಕವಚ(ತೌಡು)ದಲ್ಲಿ ಅನೇಕ ಪೋಷಕಾಂಶಗಳಿವೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದರೆ ಆರೋಗ್ಯದಾಯಕವಾಗುತ್ತದೆ.

ಕಡಲೆ, ಹೆಸರು, ಹುರುಳಿ, ತೊಗರಿಗಳಂತಹ ದ್ವಿದಳ ಧಾನ್ಯಗಳನ್ನು ೧೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಕೊಳ್ಳಬೇಕು. ಎರಡು ಮೂರು ದಿನಗಳಲ್ಲಿ ಮೊಳಕೆ ಬರಿಸಿಯೂ ಅಡಿಗೆಯಲ್ಲಿ ಬಳಸಬಹುದು.

        ಬೇಯಿಸಿ ಷಡ್ರಸಗಳನ್ನು ಸೇರಿಸಿ ಅಡುಗೆ ಮಾಡಬೇಕು. ಹಸಿ ತರಕಾರಿ ತಿನ್ನುವಾಗ ಪಚನಾಂಗದಲ್ಲಿ ಕ್ರಿಮಿ ಕೀಟಗಳೂ, ಸೂಕ್ಷ್ಮ ಜೀವಿಗಳೂ ಉಳಿದುಕೊಂಡು ಕಾಯಿಲೆ ಬರಬಹುದು. ಬೇಯಿಸಿದಾಗ ಈ ಹುಳ ಬಾಧೆ ಉಳಿಯದು. ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಉಳಿಸಿಕೊಂಡು ಅಡಿಗೆ ಮಾಡಿದಾಗ ತರಕಾರಿ ಬೇಯಿಸಿದ ನೀರನ್ನೂ ಬಳಸಬೇಕು.

    ಹಣ್ಣುಗಳನ್ನೂ ಚೆನ್ನಾಗಿ ತೊಳೆದು ಬಳಸಬೇಕು. ಹಣ್ಣುಗಳ ಹಾಗೂ ತರಕಾರಿಗಳ ರಸ ಕುಡಿಯುವಾಗ ಒಂದೆರಡು ಗಂಟೆಗಳ ಬಿಡುವಿರಬೇಕು. ಪಚನಾಂಗದ ಕಾರ್ಯವು ಇದರಿಂದ ಸುಗಮವಾಗುವುದು.        ಸಸ್ಯಗಳ ಬೇರು, ಕಾಂಡ, ಎಲೆ, ಹೂ, ಹಣ್ಣುಗಳಿಂದ ಸಿಗುವ ವಿವಿಧ ಶರ್ಕರ ಪಿಷ್ಟಗಳನ್ನು ಹುಳಿ ಬರಿಸಿ ಭಟ್ಟಿ ಇಳಿಸಿ ಬೇರೆ ಬೇರೆ ಗುಣ ಹೊಂದಿದ ಬಗೆ ಬಗೆಯ ಹೆಸರಿನ ಮದ್ಯಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಇವುಗಳು ಆಹಾರವಾಗಿ, ಪಾನೀಯವಾಗಿ, ಔಷಧವಾಗಿ ಮಾನವನ ಸೇವನೆಗೆ ಯೋಗ್ಯವಲ್ಲ. ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಸಾಮರಸ್ಯ ಕೆಡಿಸುವುದು ಈ ವ್ಯಸನ. ಅನೇಕ ಕಾಯಿಲೆಗಳನ್ನೂ ಉಂಟು ಮಾಡಬಹುದು.


        ಕಡಲ ನೀರಿನಲ್ಲಿ ಪ್ರತಿ ಲೀಟರಿಗೆ ೩೦-೩೫ ಗ್ರಾಂನಷ್ಟು ಲವಣಗಳಿವೆ. ಈ ನೀರನ್ನು ಸೋಸಿ ಸ್ವಚ್ಛ ಮಾಡಿ ಕುದಿಸಿದಾಗ ನೀರಿನ ಅಂಶವು ಆವಿಯಾಗಿ ಲವಣವು ಉಳಿಯುವುದು. ಈ ತರದಲ್ಲಿ ತಯಾರಿಸಿದ ಉಪ್ಪು ಅಡಿಗೆಯಲ್ಲಿ ಬಳಸಬಹುದು. ಖನಿಜಗಳಿಂದಲೂ ಒದಗಿದ ಉಪ್ಪು ಬಳಕೆಗೆ ಒದಗುತ್ತದೆ.
       
ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ |
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ |
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು |

ವಶನಾಗದಿಹ ನರನು? ಮಂಕುತಿಮ್ಮ ||

ಈ ಲೇಖನದ ಮೊದಲ ಭಾಗ - ಸುಗಮ ಜೀವನ - ಸರಳ ಆಹಾರ : ಭಾಗ ೧


ಲೇಖಕರ ಪರಿಚಯ:- ದಿವಂಗತ ಡಾ|| ಪಳ್ಳತಡ್ಕ ಕೇಶವ ಭಟ್ಟರು ಮದರಾಸು ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ., ಎಂ.ಎಸ್ಸಿ., ಪಿಎಚ್.ಡಿ., ಪದವಿಗಳನ್ನು ಗಳಿಸಿದ್ದರು. ದಿವಂಗತ ಬಿ.ಜಿ.ಎಲ್. ಸ್ವಾಮಿಯವರ ಮಾರ್ಗದರ್ಶನದಲ್ಲಿ ಹತ್ತು ವರ್ಷ ತರಬೇತಿ. ಅನಂತರ ಸಾಗರದಾಚೆಯ ವೆನೆಜುಯೇಲ ದೇಶದ ಒರಿಯಂತೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ೧೮ ವರ್ಷಗಳ ಸೇವೆ.
            ೧೯೬೯ರಿಂದ ಅಸ್ಥಂಗತರಾಗುವತನಕ ಉಷ್ಣವಲಯದ ಅಮೇರಿಕಾ, ಆಫ್ರಿಕಾ ಹಾಗೂ ಏಷ್ಯಾ ಖಂಡಗಳಲ್ಲಿ ಅಧ್ಯಯನ, ಅಧ್ಯಾಪನ, ಪ್ರಕೃತಿ ಚಿಕಿತ್ಸೆ, ಸರಳ ಜೀವನಗಳ ಅಭ್ಯಾಸ; ಪ್ರವಚನ ಮಾಡಿದ್ದರು. ಅಂತಾರಾಷ್ಟ್ರೀಯ ಹಾಗೂ ಹಲವು ರಾಷ್ಟ್ರಗಳ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
            ವೆನೆಜುಯೇಲ ಮತ್ತಿತರ ದೇಶಗಳಲ್ಲಿ ಸಾತ್ವಿಕ ಆಹಾರ, ಸರಳ ಜೀವನ ಕ್ರಮಗಳ ಆಂದೋಲನವನ್ನು ನಡೆಸಿಕೊಂಡು ಬಂದಿದ್ದರು. ಸಸ್ಯಗಳ ಪರಿಚಯ, ಅವುಗಳ ಬಳಕೆ, ಬೆಳೆಸುವ ಕ್ರಮ, ಸಂಬಂಧಿಸಿದ ಸಿದ್ಧಾಂತಗಳು, ಆಹಾರ ಕ್ರಮ, ಖಗೋಳ ವಿಜ್ಞಾನ ಮೊದಲಾದ ವಿಚಾರಗಳಲ್ಲಿ ಸ್ಪೇನಿಶ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ಇಂಗ್ಲೀಷ್, ಫ್ರೆಂಚ್ ಭಾಷೆಗಳಿಗೆ ತರ್ಜುಮೆ ಆಗಿವೆ. ಕನ್ನಡದಲ್ಲಿ ಮೊತ್ತಮೊದಲಿಗೆ "ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನದೆಡೆಗೆ" ಎಂಬ ಪುಸ್ತಕವನ್ನು ೨೦೦೩ರಲ್ಲಿ ಪ್ರಕಟಿಸಿದರು. ಪ್ರಸಕ್ತ ಲೇಖನವನ್ನು ಇದೇ ಪುಸ್ತಕದಿಂದ ಆಯ್ದು ಹಾಗೂ ಅವರು ನಮ್ಮೊಂದಿಗೆ ಇದ್ದಾಗ ಚರ್ಚಿಸಿದ್ದ ನೆನಪುಗಳನ್ನು ಮಸ್ತಕದಲ್ಲಿ ಇರಿಸಿಕೊಂಡು ವಿನಮ್ರವಾಗಿ ಸ್ಮರಿಸಿಕೊಂಡು ಪ್ರಜೆಗಳ ಆಯಸ್ಸು ಮತ್ತು ಆರೋಗ್ಯವೆಂಬ ಸಂಪತ್ತು ವೃದ್ಧಿಸಲಿ ಎಂದು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

-      ಹೇಮಂತ್ ಕುಮಾರ್. ಜಿ.

No comments:

Post a comment