Tuesday, 5 January 2016

ಜ್ಯೋತಿರಾಯುರ್ವೇದ - ೩ : ಆಹಾರ ಜನ್ಯಇದು ಹೆಚ್ಚಾಗಿ ಪರಿಸರಕ್ಕೆ ಹೊಂದದ ಆಹಾರ ಪದ್ಧತಿ ಬಳಸುವುದರಿಂದ ಬರುತ್ತದೆ. ಪ್ರತಿಯೊಂದು ಪರಿಸರಕ್ಕೂ ಅದರದ್ದೇ ಆದ ಪ್ರಾಕೃತಿಕ ಆಹಾರವಿರುತ್ತದೆ. ಅದನ್ನು ಅರಿತು ಬಳಸಿ. ಆಹಾರ ಬದುಕುವುದಕ್ಕಾಗಿ ಇರಲಿ. ಆಹಾರಕ್ಕಾಗಿ ಬದುಕಬೇಡಿ. ಆಹಾರದಲ್ಲಿ ಷೋಕಿ, ಆಡಂಬರ, ಚಾಪಲ್ಯ ಬೇಡ. ಪ್ರಕೃತಿಗೆ ಹೊಂದುವ, ಪರಿಸರಕ್ಕೆ ಹೊಂದುವ, ಋತುಮಾನಕ್ಕೆ ಹೊಂದುವ ಆಹಾರ ಪದ್ಧತಿ ಬಳಸಿ ಸಮಾಜ ರಕ್ಷಣೆ ಮಾಡಿರಿ. ಇಡೀ ಪ್ರಪಂಚಕ್ಕೆಲ್ಲ ಒಂದೇ ಚಿಕಿತ್ಸಾ ಕ್ರಮವಾಗಲಿ, ಆಹಾರ ಪದ್ಧತಿಯಾಗಲಿ, ಜೀವನ ವಿಧಾನವಾಗಲಿ ಬಳಸುತ್ತೇವೆ ಎಂದರೆ ಸಾಧುವಲ್ಲ. ಇವೆಲ್ಲವೂ ದೇಶ + ಕಾಲ ಆಧರಿಸಿರುತ್ತದೆ. ನಮ್ಮ ಸೂತ್ರಕಾರರು ಇಡೀ ಭೂಮಂಡಲವನ್ನು ೨೭ ವಿಭಾಗ ಮಾಡಿ ಆಯಾ ಪ್ರದೇಶಕ್ಕಾಧರಿಸಿದ ಸೂತ್ರಗಳನ್ನು ರಚಿಸಿದ್ದಾರೆ. ಅದು ೨೮ ಶ್ರೌತ ಸೂತ್ರ ಗ್ರಂಥಗಳಲ್ಲಿ ಬ್ರಾಹ್ಮಿ ಭಾಷೆಯಲ್ಲಿ ಸೂತ್ರಕಾರರಿಂದಲೇ ನಮೂದಿತವಾಗಿದೆ. ಒಬ್ಬ ವ್ಯಕ್ತಿಯು ಆಶ್ವಲಾಯನ ಸೂತ್ರ ಅನ್ವಯವಾಗುವ ಪ್ರದೇಶದಲ್ಲಿ ಬಂದು ನೆಲೆಸಿದರೆ ಆಶ್ವಲಾಯನ ಸೂತ್ರದಂತೆಯೇ ತನ್ನ ಆಹಾರ-ವಿಹಾರ-ಆಚರಗಳನ್ನು ಅನುಸರಿಸಬೇಕು. ಇದು ಅನೂಚಾನ ಪದ್ಧತಿ. ಆ ರೀತಿಯ ಪ್ರಾದೇಶಿಕ ಸೂತ್ರಗಳು ಜನಪದಲ್ಲಿ ಹಾಸುಹೊಕ್ಕಾಗಿದೆ. ಅವು ಇಂತಿವೆ:
 1. ಆಶ್ವಲಾಯನ
 2. ಸಾಂಖ್ಯಾಯನ
 3. ಕೌಶೀತಕೀ
 4. ವಾಮದೇವ
 5. ಕಾತ್ಯಾಯನ
 6. ಔಡಲ
 7. ಬೋಧಾಯನ
 8. ಭರದ್ವಾಜ
 9. ಆಪಸ್ತಂಭ
 10. ಹಿರಣ್ಯಕೇಶೀ
 11. ಆರ್ಷೇಯ
 12. ಮಷಕ
 13. ಲಾಖ್ಯಾಯನ
 14. ದ್ರಾಹ್ಯಾಯಣ
 15. ಜೈಮಿನಿ
 16. ಭೃಗು
 17. ತ್ರಿಶಿರ
 18. ಸಾಮ ವಿಧಾನ
 19. ಕೌತುಮ
 20. ಪಂಚವಿಂಶ
 21. ವೈತಾನವೆಂಬ ೨೧ ಶ್ರೌತ ಸೂತ್ರಗಳು ಮತ್ತು
 22. ಪರಾಶರೀ
 23. ನಾರದೀಯ
 24. ಆರ್ಥಿವ
 25. ತಾಪತ್ಯ
 26. ಸೋಮಾಂಶು
 27. ವಾಸಿಷ್ಠ
 28. ರಾಣಾಯಣೀಯ ಎಂಬ ೭, ಒಟ್ಟು ೨೮ ಶ್ರೌತ ಸೂತ್ರಗಳು.

ದೇಶ + ಕಾಲಗಳನ್ನು ಅರಿತು ಆಹಾರ ಬಳಸಿ ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರಿ.

ಈ ಭೂಮಿಯಲ್ಲಿ ಜನ್ಮಕ್ಕೆ ಬಂದ ಪ್ರತಿಯೊಂದು ಜೀವಿಗೂ ಆಹಾರ ಮುಖ್ಯ. ಆದರೆ ಅದು ಮಿತು ಮತ್ತು ಆರೋಗ್ಯವೆಂಬ ನಿಯಮದಲ್ಲಿ ವ್ಯವಸ್ಥೆಗೊಂಡಿರುತ್ತದೆ. ಪ್ರತೀ ಜೀವಿಗೂ ಅದರದ್ದೇ ಆದ ನಿಯಮ ಹಾಗು ಅದರ ಪ್ರಾಪ್ತತೆ ವ್ಯವಸ್ಥೆ ಇದೆ. ಹಾಗೆ ಮಾನವನಿಗೂ ಆಹಾರ ನಿಯಮ ಮತ್ತು ವ್ಯವಸ್ಥೆ ರೂಪುಗೊಂಡಿದೆ. ಅದು ಪ್ರಾದೇಶಿಕವೂ ಕೂಡ ಆಗಿರುತ್ತದೆ. ಅದರಂತೆ ಮಾನವನು ಅರಿತು ವ್ಯವಹರಿಸಿದರೆ ನಿರೋಗಿಯಾಗಿ ಬದುಕಲು ಖಂಡಿತಾ ಸಾಧ್ಯ. ಹಾಗಾಗಿ ಒಂದು ಗಾದೆಯಿದೆ. ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಇದು ಸತ್ಯ.

ಈಗ ಪಶ್ಚಿಮ ಕರಾವಳೀ ತೀರದ ಜನರ ಮೂಲ ಆಹಾರ ಪದ್ಧತಿ ವಿವರಿಸುತ್ತೇನೆ. ಅದರಲ್ಲಿ ಈಗ ಹೇಳಹೊರಟಿರುವುದು B.P, Sugar, Kidney stone, Kidney failure, Heart attack, Stomach Ulcers, Cancer ಇತ್ಯಾದಿ ಖಾಯಿಲೆಯ ವಿರುದ್ಧ ಹೋರಾಟದಲ್ಲಿ ಜಯಾಕಾಂಕ್ಷಿಯಾದ ಈ ಪ್ರದೇಶದ ಜನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ ನಿಬಂಧನೆ ಎಂಬ ವಿಷಯ. ಒಂದು ವಿಚಾರ ನೆನಪಿಡಿ - ಈ ಮೇಲ್ಕಂಡ ಹೆಸರಿನ ಯಾವ ರೋಗಗಳೂ ನಮ್ಮ ದೇಶದಲ್ಲ, ವಿದೇಶೀಯ! ಏಕೆಂದರೆ ಭಾರತೀಯ ಆಯುರ್ವೇದವು ಈ ರೀತಿಯ ಆಂಗ್ಲ ನಾಮಕರಣವನ್ನಾಗಲೀ, ಅಯೋಮಯ ರೋಗ ಲಕ್ಷಣವಾಗಲೀ, ಹಣ ಮಾಡುವುದಕ್ಕಾಗಿ ಔಷಧ ಚಿಕಿತ್ಸೆಯನ್ನಾಗಲೀ ಹೇಳಲೇ ಇಲ್ಲ. ಮೊದಲು ಈ ಆಧುನಿಕ ಹೆಸರಿನ ರೋಗ ಭೀತಿ ಬಿಡಿರಿ! ದೇಹದಲ್ಲಿ ನಾದ + ಕಿರಣ ತರಂಗ ಪರಿಣಾಮ. ಅದರಿಂದ ಪ್ರೇಷಿತ ವಾತ, ಪಿತ್ತ, ಕಫ ಪರಿಣಾಮ ಚಿಂತನೆಯೇ ಆಯುರ್ವೇದದ ಅಚಲ ಸತ್ಯ.

ಮುಖ್ಯವಾಗಿ ಈ ಪ್ರದೇಶದ ಅಂದರೆ ಪಶ್ಚಿಮ ಕರಾವಳಿಯ ಜೀವಸಂಕುಲತೆ ಒಂದು ವಿಶಿಷ್ಟವೂ, ವಿಶೇಷವೂ ಆಗಿದೆ. ಇಲ್ಲಿ ಎಲ್ಲವೂ ವಿಶೇಷ. ಇಲ್ಲಿನ ಮಣ್ಣಿನ ಗುಣ, ವಾತಾವರಣ, ಜೀವ ಪ್ರಭೇದ, ಆಹಾರ ವಿಧಾನ ಕೂಡ ಒಂದಕ್ಕೊಂದು ಪೂರಕವಾಗಿ ವಿಶೇಷತೆಯನ್ನು ಸಾಧಿಸಿದೆ. ವಿಶೇಷವಾಗಿ ಮಾನವನು ತನ್ನ ಆಹಾರವನ್ನು ನೇರ ಬಳಸದೆ ಪಾಕ ವಿಧಾನದಿಂದ ಪಕ್ವಗೊಳಿಸಿ ಬಳಸಬೇಕು. ಅದು ಆಹಾರ ನಿಯಮ. ಇಲ್ಲಿ ಆ ಪಾಕವಿಧಾನ ಪೂರ್ತ ಆರೋಗ್ಯದಾಯಕ ಮತ್ತು ಶಾಸ್ತ್ರೀಯವಾಗಿದೆ. ಹಾಗಾಗಿ ಇಲ್ಲಿನ ಪಾಕ ಪ್ರವೀಣರು ಲೋಕಪ್ರಸಿದ್ಧ. ಇಲ್ಲಿ ಶಾಖವಿಲ್ಲದೆ ಅಂದರೆ ಬೇಯಿಸದೆ ಮಾಡುವ ಪಾಕ, ಸುಟ್ಟು ಮಾಡುವ ಪಾಕ, ಹಬೆಯ ಪಾಕ, ಬೇಯಿಸಿದ ಪಾಕ, ಉಪ್ಪಿನ ಪಾಕ, ರಸಪಾಕ, ಸಂಗ್ರಹಪಾಕ ಈ ರೀತಿಯ ಬೇರೆ ಬೇರೆ ಪಾಕ ವಿಧಾನಗಳಿವೆ. ಅವುಗಳಿಗೆ ಒಂದೊಂದು ಉದಾಹರಣೆ ಕೊಡುತ್ತೇನೆ.

೧) ಬೇಯಿಸದ ಪಾಕ:- ತಂಬುಳಿ.

೨) ಸುಟ್ಟು ಮಾಡುವ ಪಾಕ:- ಗೊಜ್ಜು.

೩) ಹಬೆಯ ಪಾಕ:- ಕಾಳುಗಳು.

೪) ಬೇಯಿಸಿದ ಪಾಕ:- ಅನ್ನ, ಸಾರು, ಹುಳಿ (ಸಾಂಬಾರು) ಇತ್ಯಾದಿ.

೫) ಉಪ್ಪಿನ ಪಾಕ:- ವಸ್ತುಗಳು, ತರಕಾರಿಗಳನ್ನು ಉಪ್ಪಿನಲ್ಲಿಟ್ಟು ಕೆಲ ದಿನಗಳ ನಂತರ ಬಳಸುವುದು. ಉದಾ:- ಹಲಸಿನ ತೊಳೆ.

೬) ರಸಪಾಕ:- ಮಾವಿನಹಣ್ಣು ಇತ್ಯಾದಿಗಳು.

೭) ಸಂಗ್ರಹ ಪಾಕ:- ತರಕಾರಿ ಇತ್ಯಾದಿಗಳನ್ನು ಒಣಗಿಸಿ ಇಡುವುದು.

ಇವೆಲ್ಲಾ ಪಾಕ ಉದ್ದೇಶದಿಂದ ಹಾಗೆ ಮಾಡುತ್ತಿದ್ದರು ಎಂದು ಕಂಡು ಬಂದಿದೆ. ಇವೆಲ್ಲ ತರಹೇವಾರು ಅಡಿಗೆ ಪದ್ಧತಿ ಕೇವಲ ತಿನ್ನುವ ಬಯಕೆಯಲ್ಲಿ ಹುಟ್ಟಿದ್ದಲ್ಲ. ಆರೋಗ್ಯಕ್ಕಾಗಿ ಹುಟ್ಟಿದ್ದು ಎಂಬುದು ಖಂಡಿತ. ಉದಾ:- ಈ ಪ್ರದೇಶದಲ್ಲಿ ಮಾವಿನಕಾಯಿ ಬೆಳೆಯುವ ಕಾಲದಲ್ಲಿ ಅದನ್ನು ಸಂಗ್ರಹಿಸಿ ಉಪ್ಪಿನಲ್ಲಿ ಹಾಕಿಟ್ಟು, ಮಳೆಗಾಲದಲ್ಲಿ ತರಕಾರಿ ಕೊರತೆ ಕಾಲದಲ್ಲಿ ಅದನ್ನು ಅಡಿಗೆಗೆ ಬಳಸುತ್ತಿದ್ದರು. ಅದು ನಿಜವಾಗಿಯೂ ತರಕಾರಿ ಕೊರತೆಯ ಕಾರಣವಲ್ಲ. ಅತೀ ಹೆಚ್ಚು ಮಳೆಯ ಕಾರಣದಿಂದ ಸಹಜ ವಾತಾವರಣ ಥಂಡಿ, ಕ್ಷಾರರಹಿತವಾಗಿರುವುದರಿಂದ ಆ ಕಾಲದಲ್ಲಿ ಮಾನವನಿಗೆ ಮಧುಮೇಹ ಬರಲು ಸುಲಭ. ಅದಕ್ಕಾಗಿ ಕ್ಷಾರಯುಕ್ತವಾದ ಮಾವಿನ ಕಾಯಿ ಮತ್ತು ಅದರ ಓಟೆ ರಕ್ಷಣಾತ್ಮಕವಾಗಿ ಬಳಸುತ್ತಿದ್ದರು. ಈಗ ಅದರ ಬಳಕೆ ಬಹುತೇಕರಲ್ಲಿ ನಿಂತಿದೆ.

        ಹೀಗೆ ಇಲ್ಲಿ ಜನರಲ್ಲಿ ಹಾಸುಹೊಕ್ಕಾಗಿ ಹೋದ ಆಹಾರ ಪದ್ಧತಿ ರಕ್ಷಣಾತ್ಮಕವಾಗಿತ್ತು. ಈಗಿನ ಜನರಲ್ಲಿ ಅದೆಲ್ಲ ಕಾಣೆಯಾಗಿದೆ. ಹಾಗಾಗಿ ನಾನಾ ಖಾಯಿಲೆಗಳು ಮನೆ ಸೇರಿವೆ. ಇಲ್ಲಿನ ಜನರಲ್ಲಿ ಈಗ ಅತೀ ಹೆಚ್ಚಿನ ಎಣ್ಣೆ ಮತ್ತು ಎಣ್ಣೆ ತಿಂಡಿಯ ಬಳಕೆಯಾಗುತ್ತಿದೆ. ಅದೂ ಮಾರಕವೆ! ಅಸಾಂಪ್ರದಾಯಕ ಎಣ್ಣೆ ವಿಷಕಾರಿ. ಇಲ್ಲಿ ಬಳಸುತ್ತಿದ್ದುದ್ದು ಮೊದಲು ಕೊಬ್ಬರಿ ಎಣ್ಣೆ ಮಾತ್ರ. ಈಗ ಅದನ್ನು ಬಿಟ್ಟು ಇತರೆ ಎಣ್ಣೆ ಬಳಸುತ್ತಿದ್ದಾರೆ. ಅದು ನಾನಾ ಖಾಯಿಲೆಗೆ ಕಾರಣ. ಇವುಗಳೆಲ್ಲದರ ಆಧಾರದಲ್ಲಿ ಈ ಕೆಳಗಿನ ಕೆಲ ಮುಖ್ಯ ಆಹಾರ ವ್ಯವಸ್ಥೆಯನ್ನು ತಿಳಿಸುತ್ತಿದ್ದೇನೆ.

೧) ಇಲ್ಲಿನ ಸಾಂಪ್ರದಾಯಕ ಆಹಾರದತ್ತ ಗಮನಕೊಡಿ.

೨) ಗಂಜಿ ಊಟ, ತಂಗಳು ಊಟ ಇಲ್ಲಿನ ಉತ್ತಮ ಬೆಳಗಿನ ಆಹಾರ.

೩) ಇಲ್ಲಿನ ಸಾಂಪ್ರದಾಯಕ ತರಕಾರಿ ಬಳಸಿ.

೪) ಊಟಕ್ಕೆ ವಾತಾವರಣದ ಕ್ಷಾರಗಳನ್ನು ತಡೆಯುವ ಶಕ್ತಿ ಇರುವ ತಂಬುಳಿ ಊಟ ಇರಲಿ.

೫) ಎಣ್ಣೆಯ ಬಳಕೆ ಅತೀ ಕಡಿಮೆ ಮಾಡಿ. ಕೊಬ್ಬರಿ ಎಣ್ಣೆ ಅಥವಾ ತುಪ್ಪ ಬಳಸಿ.

೬) ಹಿತವಾಗಿ ಮಿತವಾಗಿ ಊಟ ಮಾಡಿರಿ.

೭) ಮನೆಯಲ್ಲೇ ಅಡುಗೆ ಮಾಡಿರಿ, ಊಟ ಮಾಡಿರಿ. ಗೃಹಿಣಿಯು ಮಧ್ಯಾಹ್ನದ ಒಳಗೆ ಅಡುಗೆ ಮುಗಿಸಿ ಕಸ-ಕಡ್ಡಿಯನ್ನು ಸೇರಿಸಿ ಸಣ್ಣದಾಗಿ ಅಗ್ನಿ ಜ್ವಲನೆ ಮಾಡಿಕೊಂಡು ಅದರಲ್ಲಿ ಒಂದು ತುತ್ತನ್ನು ಅಗ್ನಿಗೆ ಸಮರ್ಪಣೆ ಮಾಡುವುದನ್ನು ವೈಶ್ವದೇವ ಎಂದಿದೆ ವೇದ. ಅದರಿಂದ ಕೌಟುಂಬಿಕ ಆರೋಗ್ಯ ಸಿದ್ಧಿ.

೮) ಹೊರಗಿನ ತಿಂಡಿಗಳನ್ನು ಸಂಪೂರ್ಣ ಬಿಡಿರಿ.

೯) ಬೆಳಗ್ಗೆ ಬೇಗ ಏಳಿರಿ.

೧೦) ತಿಂಗಳಿಗೊಮ್ಮೆಯಾದರೂ ಜಾಗರಣೆ ಮಾಡಿರಿ.

೧೧) ಸದಾ ಚಟುವಟಿಕೆಯಿಂದಿರಿ.

೧೨) ಸ್ವಲ್ಪ ಕಾಲವಾದರೂ ಪ್ರಾಣಾಯಾಮ ಮಾಡಿರಿ. ೧೫ ದಿನಕ್ಕೊಮ್ಮೆ ಉಪವಾಸ ಮಾಡಿರಿ.

        ಈ ಮೇಲ್ಕಂಡ ೧೨ ಆಚರಣೆಗಳನ್ನು ಪಾಲಿಸುತ್ತಾ ಸ್ವಸ್ತಚಿತ್ತರಾಗಿ ಮಿತಾಹಾರಿಗಳಾಗಿ ಬದುಕಿದಲ್ಲಿ ನಿರೋಗಿಗಳಾಗಿ ದೀರ್ಘಾಯುಷಿಗಳಾಗುವುದು ಖಂಡಿತ. ಯಾವಾಗಲೂ ಸಚ್ಚಿಂತನೆ, ಸತ್ಸಂಗದಿಂದ ಇದ್ದಲ್ಲಿ ಯಾವುದೇ ರೀತಿಯ ಅಪರಾಧೀ ಪ್ರಜ್ಞೆಯು ನಿಮ್ಮನ್ನು ಕಾಡಲಾರದು. ಇಲ್ಲಿನ ಕರಾವಳೀ ಆಹಾರ ಪದ್ಧತಿಯಲ್ಲಿ ವಿವರಿಸಿದಂತೆಯೇ ನಿಮ್ಮ ಆಚರಣೆಯಲ್ಲಿ ಹಾಸುಹೊಕ್ಕಾಗಿರುವ ನಿಮ್ಮ ಪ್ರದೇಶದ ಮೂಲ ಆಹಾರ ಪದ್ಧತಿಯನ್ನು ಪುನರುತ್ಥಾನ ಮಾಡಿಕೊಂಡು ಆರೋಗ್ಯ ಸಾಧಿಸಿರಿ. ಈ ಮೇಲ್ಕಂಡ ವಿಚಾರಗಳನ್ನು ಅಳವಡಿಸಿಕೊಂಡು ದೀರ್ಘಾಯುಷಿಗಳೂ, ನಿರೋಗಿಗಳೂ ಆಗಿರೆಂದು ಹಾರೈಸುತ್ತೇನೆ.


ಅನ್ನವದು ಕೇಳ್ ಮನುಜನೇ ಅದರ ರಸ ಗುಣ
ವಿನ್ನು ಕಪಿಲನು ಪಕ್ವವಾಗಲು ರಸವು ಬೇಕೈ
ಅನ್ನವೇ ಜೀವಿಗಳಿಗಾಧಾರ ಘೋಟಕದಿಂದ ನಿರಂತರತೆಯ ಸಾಧಿಸಿದ ಕಪಿಲನಾಶ್ರಯವೂ |
ಅನ್ನವೇ ಜ್ಞಾನ, ಅನ್ನವೇ ಬುದ್ಧಿ, ಅನ್ನವೇ ಸತ್ಯ ಸನ್ಮಾರ್ಗ
ಅನ್ನವನು ತಿನ್ನು ನೀ ಬೇರೆ ತಿನ್ನಲು ಬೇಡ ಮಾನವ
ಅನ್ನವಿಲ್ಲದಿರೆ ಜೀವಿಗಳು ಬದುಕಲಾರವು ಇದು ವಿಧಿ ಕಪಿಲನೇ ಅನ್ನ ಕಾಣೆಂದಾ ||

ಆಹಾರವಿಲ್ಲದೇ ಬದುಕುವ ವಿಧ್ಯೆ ಸಾಧಿಸಿ ಭೂಲೋಕದಲಿ
ಆಹಾರ ನಿಯಮವಿದೆ ಪೂರಕವು ಪರಸ್ಪರ ಅದಕೆ ಭಿನ್ನತೆ
ಆಹಾರ ನಿರ್ಬಂಧ ಬೇಡವೆನ್ನುತ ತನ್ನ ಸೂತ್ರದ ಅಂಶವನು ಮೇಳೈಸಿ ಪಾಕಶಾಸ್ತ್ರವ ರಚಿಸಿದಾ |
ಆಹಾರವದು ಶಾಸ್ತ್ರೀಯ ಷಡ್ರಸಗಳ ಪಾಕಮೋದಕವದು
ಆಹಾರದಿಂ ಜೀವನು ಪಾಕವನರಿತು ಭುಂಜಿಸಲು ದೀರ್ಘಾಯು
ಆಹಾರವೇ ಮಾನವಗೆ ಆರೋಗ್ಯ, ಆಯುಷ್ಯ, ಸುಖ, ಸಂತೋಷದಾಯಕವೆಂದು ಪಾಕಶಾಸ್ತ್ರವ ರಚಿಸಿದಾ ||

ಬಾಳಿನಾ ಮುಖದಲ್ಲಿ ಅನ್ನವೇ ಪರಬ್ರಹ್ಮ ಅನ್ನವಿಲ್ಲದಿರೆ ಕೂಳಿನಾ ಕದನ ಬಾರಿಯಪ್ಪುದು ಅನ್ನಕ್ಕಾಗಿ ಜೀವಿಗಳು ಬಾಳುವವು ಆದರೇನ್ ಅನ್ನವಿಲ್ಲದೆ ಬದುಕು ಸಾಧಿಪ ದಾರಿಯೇ ವಿಕೃತಿಯಾ ಒಂದು ಭಾಗ |
ಹೇಳುವಳು ತಾರೆ ಅನ್ನ ಕಾರಣವಲ್ಲ ಜನ್ಮಕೆ ಪುಣ್ಯವೇ ಕೇಳಿ ಕಾರಣ ಜನ್ಮದಾ ಗುರಿ ಆತ್ಮೋದ್ಧಾರ ಅದಕಾಗಿ ನೀವ್
ಬಾಳೆಲ್ಲ ಅನ್ನ ದುಡಿಯುತ ಇದ್ದು ವ್ಯರ್ಥ ಬಾಳುವಿರಿ ಅನ್ನ ಬಿಡಿ ಬನ್ನ ಪಡದಿರಿ ಸುಖವ ಕಾಣಿರೀ ||

ಅನ್ನ ಒಂದೇ ಕಾಣು ತಿನ್ನುವುದೆಲ್ಲ ಅನ್ನವು ಆದರೇನ್
ಅನ್ನದಾ ನಿಯಮವಿದೆ ಜೀವಿಗಳಿಗೆ ಪ್ರತ್ಯೇಕವಿದೆ
ಅನ್ನದಾ ದಾರಿಯರಿಯುವುದೆ ಇತರೆ ಮೃಗ ಪಕ್ಷಿ ಕ್ರಿಮಿ ಕೀಟ ಸರಿಸೃಪಾದಿಗಳಿಗೆ |
ಅನ್ನವಿದೆ ಮಾನವಗೆ ಬೇರೆ ಉದರಕೊಂದನ್ನ ಬದುಕಲು
ಅನ್ನವೇ ಜ್ಞಾನ ಆತ್ಮಗೆ ಇನ್ನು ಶ್ರವಣ, ಚಕ್ಷು, ಜಿಹ್ವಾದಿ
ಅನ್ನವೇ ಬೇರಿಹುದು ತ್ವಕ್ ಪ್ರಾಣಗಳಿಗನ್ನ ವಿಧಿಸಿಹುದು ಅರಿತುಕೊಂಡರೆ ಅದು ವಿಕೃತಿ ||

ದುಡಿದು ತಿನ್ನಲು ಬೇಕು ಮಾನವ ಉತ್ಪಾದಕನಾಗಿರಬೇಕು ಉದ್ಯೋಗವು ಉತ್ಪಾದಕತೆಯೆ ಹೊರತು
ಬಡಿದು ತಿನ್ನುವ, ಕುಳಿತು ಮಾಡುವ, ಮರೆತು ಮಲಗುವ, ಸೊನ್ನೆ ಸುತ್ತುವದು ಉದ್ಯೋಗವಲ್ಲವು ಅದು
ಕಡೆಯಲಿ ಸಾವಿನಂಚಿನ ವೃದ್ಧರಾ ಕೈಂಕರ್ಯ ಕೇಳೆಲವೊ ಮಾನವ ದೇಹಶ್ರಮ, ವ್ಯಾಯಾಮ, ವಿಚಕ್ಷಣೆಯಿದ್ದರದು ಉದ್ಯೋಗ
ಹೊಡೆದು ಓಡಿಸಿ ವಿದೇಶೀಯ ಅನುಕರಣೆಯೆಂಬ ಮಹಾರೋಗವನು ಅನುಸರಿಸಿ ನಿಮ್ಮಯ ಆಚಾರವನು
ಕಡೆಯ ದಿಕ್ಕಿನಲಿ ನೆಲೆಸಿದ ಶಿವನು ಸರಸ್ವತಿಯೊಂದಿಗಿಹನೆಂಬ ಸತ್ಯವ ಮರೆಯದಿರಿ ಬುದ್ಧಿ ಮಾರಾಟ
ಮಾಡದಿರಿ ಮೂರ್ಖರಾಗುವಿರಿ ಸುತರು ನಿಮಗೆ ಮುಂದೆ ಅಂತಕರಾಗಬಹುದೈ ಬಿಡಿ ಅದನು ದುಡಿಮೆಯಲಿ ಶ್ರಮವೇ ಇಂಧನವೆಂದು ತಿಳಿಯಿರಯ್ಯಾ ||


ಸಕಲ ಜೀವಿಗಳಿಗಾಶ್ರಯವನಿತ್ತು ತುತ್ತನು ನೀಡಿ ಸಲಹುವ
ಸಕಲ ಕರ್ಮವ ಭುಂಜಿಸುವ ಉಧ್ಯಾನವಿದು ಕರ್ಮಕೆ ಋಚಿ ಕೊಡುವ
ಸಕಲೇಶನಾ ಸಖನ ಆವಾಸ ಸ್ಥಾನವದು ಚರಾಚರಗಳೆಂಬ ರೂಪಕ್ಕೆ ಅಸ್ಥಿತ್ವವನೀವ ತತ್ವವೇ ಭೂಮಿಯೆಂದೂ |
ಸಕಲ ಜೀವಿಗಳೊಂದಾಗಿ ಬಾಳಿರೀ ಎಂದು ಆಹಾರ ಸಂತುಲದ
ವಿಕಲತೆಗೆ ಅವಕಾಶವಿಡದೆ ರಚಿಸುತ ಸಮತೋಲನ ಕಾಯ್ದು
ಸಕಲಾದಿ, ಹಾದಿ, ಕಾದಿಯನಿತ್ತು ಅನ್ನದಿಂ ಜ್ಞಾನವನು ತುಂಬಿ ಪೋಷಿಸುವ ಮೂಲಚೈತನ್ಯವನು ಪ್ರೇಷಿಸುವುದೂ ||


ಈ ಭುವಿಯೊಳಗೆ ಹುಟ್ಟಿದ ಜೀವಿಗಳಿಗೆಲ್ಲಾ ಕರ್ಮಬಂಧನವಿಹುದು
ಈ ರಹಸ್ಯವ ಬೋಧಿಸುತಿಹವು ಸಕಲ ವೇದಶಾಸ್ತ್ರಾದಿಗಳು ಆದರೇನ್
ಈ ರಹಸ್ಯವರಿತ ಮಾನವನೆಂದೂ ದುಃಖಿಯಾಗಲು ಬಿಡದೆ ಅವನ ಪ್ರಾಪ್ತ ಕರ್ಮಕೆ ರಸವ ಯೋಜಿಸುವಾ |
ಈ ಪಾಕಶಾಸ್ತ್ರವನು ಅರಿತವನಿನ್ನಿಲ್ಲ ಮರೆತು ಬಾಳುವೆ ಇಲ್ಲಿ ಋಣದಿಂ
ಈ ಜೀವನವ ಆನಂದಗೊಳಿಸುವ ಆತ್ಮನಾ ಹೋರಾಟದಲಿ ಕರ್ಮಕೆ ಋಚಿ ನೀಡಿ
ಈ ಭುವಿಯ ಸಕಲ ಜೀವಿಗಳ ಜನನ+ಮರಣಾದಿ ಘೋಷಿಸುತ ಪ್ರಾಕೃತತೆಯನು ಬೆಳೆಸುತಿದೆ ಸತತಾ ||


ಪ್ರಾಚ್ಯ ವೈಧ್ಯ ಕೆ. ಎಸ್. ನಿತ್ಯಾನಂದ,

ನಂದಗೋಕುಲ ಗೋಶಾಲೆ, ಕಲ್ಲಡ್ಕ.

No comments:

Post a comment