Friday, 8 January 2016

ಸುಗಮ ಜೀವನ - ಸರಳ ಆಹಾರ : ಭಾಗ ೧

ಭೂಲೋಕದ ಉಷ್ಣವಲಯವು ಪ್ರಾಕೃತಿಕ ಸಂಪತ್ತುಗಳ ತವರೂರು ಎಂಬುದು ನೆನಪಿಡಬೇಕಾದ ಸಂಗತಿ. ಈ ವಲಯದಲ್ಲಿ ಮಾನವ ಸಂಪತ್ತೂ ಗಣನೀಯವಾಗಿದೆ. ಪರಿಸರವೂ ಪೂರಕವಾಗಿದೆ. ಹವಾಗುಣವು ಜೀವಿಗಳ ವಿವಿಧ ರೂಪ ಗುಣಗಳಿಗೆ ಕಾರಣವಾಗಿದೆ. ಉತ್ತಮ ರವಿಕಿರಣ ಸತತವಾಗಿ ಸಿಗುತ್ತದೆ. ಫಲವತ್ತಾದ ಮಣ್ಣು, ಅಸಂಖ್ಯ ಜಲಾಶಯಗಳು, ಸಾಕಷ್ಟು ಗಾಳಿ, ಸಸ್ಯರಾಶಿ, ಪ್ರಾಣಿಕೋಟಿಗಳೇ ಮಾನವನೊಡನೆ ಸಹಬಾಳ್ವೆಗೆ ಸಜ್ಜಾಗಿ ಉಳಿದಿವೆ.

ಸಸ್ಯಗಳು ರವಿಕಿರಣವನ್ನು ಸೇರಿಸಿಕೊಂಡು ಲವಣ, ನೀರಾವಿ, ಗಾಳಿಗಳನ್ನು ಬಳಸಿ ತನಗೆ ಬೇಕಾಗುವುದಕ್ಕಿಂತಲೂ ಅಧಿಕವಾಗಿ ವಿವಿಧ ಪೋಷಕಾಂಶಗಳನ್ನು ತಯಾರಿಸಿಕೊಂಡು ಬೇರು, ಕಾಂಡ, ಎಲೆ, ಹೂ, ಕಾಯಿ, ಹಣ್ಣು, ಬೀಜಗಳಲ್ಲಿ ಶೇಖರಿಸಿಕೊಳ್ಳುತ್ತದೆ. ಈ ಚಟುವಟಿಕೆಯಿಂದ ಪರಿಸರದ ವಾತಾವರಣವು ಶುದ್ಧವಾಗುವುದು ಅಗೋಚರವಾದರೂ ನಿಜ. ಸತತವಾಗಿ ಸಂಗ್ರಹಣಾಕಾರ್ಯವು ಸಸ್ಯಗಳಿಂದ ನಡೆಯುವುದೇ ಈ ಭೂಲೋಕದ ಮೂಲ ವಸ್ತುಗಳ ಉಗಮ ಸ್ಥಾನ. ತನ್ನ ಚಟುವಟಿಕೆಗಳಿಗೆ ಬಳಸಿದ ಮೇಲೆ ಉಳಿದ ಪೋಷಕಾಂಶಗಳನ್ನು ಬೇರೆ ಬೇರೆ ರೂಪದಲ್ಲಿ ಗಿಡದ ಎಲ್ಲೆಡೆ ಸಂಗ್ರಹಿಸಿಡುವುದು ಸಸ್ಯಗಳ ಕೆಲಸ.

ಪ್ರಾಣಿಗಳಿಗೆ ಈ ಸಂಯೋಜನಾ ಶಕ್ತಿ ಇಲ್ಲದುದರಿಂದ ಪರಾವಲಂಬಿಯಾಗಿ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಸ್ಯಗಳನ್ನೇ ಹೊಂದಿಕೊಳ್ಳುವ ಅಗತ್ಯವಿದೆ. ಆಹಾರ, ವಸತಿ, ಔಷಧ, ಮನೋರಂಜನೆ, ಉಪಕರಣಗಳ ತಯಾರಿ ಮೊದಲಾದ ಪ್ರತಿಯೊಂದು ವಿಧದಲ್ಲೂ ಸಸ್ಯಗಳು ಉಪಯುಕ್ತವಾಗಿದೆ.

ಮಾನವನು ಅನಾದಿ ಕಾಲದಿಂದಲೂ ಪ್ರಕೃತಿಯ ಮಡಿಲಲ್ಲಿ ಉಳಿದು ಬೆಳೆದುದು ತನ್ನ ವಿಚಾರಶೀಲತೆಯಿಂದ; ವಿವೇಚನೆಯಿಂದ ಹಾಗೂ ವಿವೇಕದಿಂದ ಹೊಸ ಹೊಸ ಘಟಕಗಳನ್ನು ಬಳಸಿಕೊಂಡಾಗ ಜೀವನವು ಸುಗಮವೂ ಸರಳವೂ ಆಗಬಹುದು. ಪ್ರಾಣಿಗಳಿಗೆ ಆಹಾರದ ಅಗತ್ಯವೇನು?

  • ಶರೀರದ ಅಂಗಾಂಗಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳ ಪೂರೈಕೆ.
  • ಚಟುವಟಿಕೆಗಳಿಂದ ಸವೆದು ಹೋದ ಕಣಕಣಗಳ ಪುನಾರಚನೆಗೆ ಅಗತ್ಯವಿರುವ ಘಟಕಗಳ ಪೂರೈಕೆ.
  • ಕಣಕಣಗಳ ಚಟುವಟಿಕೆಗೆ ಉಪಯುಕ್ತವಾದ ಯೋಗ್ಯ ಶಕ್ತಿದಾಯಕ ಮೂಲ ವಸ್ತುಗಳ ಪೂರೈಕೆ.
  • ಕಣಕಣಗಳಲ್ಲೂ ಅಂಗಾಂಗಗಳಲ್ಲೂ ಉಂಟಾಗುವ ಕಶ್ಮಲಗಳ ನಿವಾರಣೆಗೆ ಬೇಕಾಗುವ ನಾರುಗಳ ಪೂರೈಕೆ.


ಇವುಗಳೆಲ್ಲ ಉಷ್ಣವಲಯದಲ್ಲಿ ಹೇರಳವಾಗಿ ದೊರೆಯುವುದರಿಂದ ಈ ಭೂಭಾಗದ ಜನರು ಪುಣ್ಯಶಾಲಿಗಳೆನ್ನಬಹುದು. ಆದರೆ ಅನುಕರಣೆಯಿಂದ ಜೀವನ ನಡೆಸಿ ನಿರ್ಭಾಗ್ಯರಾಗುವರು.

ಶಿಶುವು ಗರ್ಭಕೋಶದಲ್ಲಿ ಬೆಳೆಯುವಾಗ ಅಗತ್ಯವಿರುವ ಘಟಕಗಳನ್ನು ತನ್ನ ಸಂಪರ್ಕದಲ್ಲಿರುವ ಪೋಷಕ-ರಕ್ಷಕ ದ್ರವದಿಂದ ಪಡೆಯುತ್ತದೆ. ಪಚನಾಂಗಗಳೂ ಶ್ವಾಸಕೋಶಗಳೂ ರೂಪುಗೊಂಡಿದ್ದರೂ ಕಾರ್ಯಾಚರಣೆ ಮಾಡುವುದಿಲ್ಲ. ತಾಯಿಯ ರಕ್ತವು ಶಿಶುವಿನ ರಕ್ತದಿಂದ ಭಿನ್ನವಾಗಿರುವುದು ಗಮನಾರ್ಹ ವಿಚಾರ. ಈ ಎರಡು ಮಾಹಿತಿಗಳಿಂದಲೇ ಆಹಾರಾಂಶಗಳು ರಕ್ತದಲ್ಲಿ ಪ್ರಸಾರವಾಗುವುದಿಲ್ಲ ಎಂಬುದು ತಿಳಿಯುತ್ತದೆ. ಶರೀರದಲ್ಲಿ ಉತ್ಪನ್ನವಾಗಿರಬಹುದಾದ ಕಶ್ಮಲಗಳನ್ನೂ ಶರೀರದಿಂದ ಪರಿಸರದ ದ್ರವದಲ್ಲಿ ಸೇರಿಸಿ ಬಿಡುತ್ತದೆ. ಅವಯವಗಳು ಚಟುವಟಿಕೆಗಳಿಂದ ಕೂಡಿ ಪರಿಸರದೊಡನೆ ನಿಕಟ ಸಂಪರ್ಕದಿಂದ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವುದರೊಂದಿಗೆ ಮಲ ವಿಸರ್ಜನೆಯೂ ಚರ್ಮದ ಮೂಲಕವೇ ಆಗುವುದೆಂಬುದನ್ನು ತಿಳಿದುಕೊಳ್ಳಬೇಕು.

ಜನ್ಮ ತಾಳಿದ ಶಿಶುವು ಜನನದಾರಭ್ಯ ಪಚನ ಕ್ರಿಯೆಗಳನ್ನೂ, ಉಸಿರಾಟವನ್ನೂ ಮಾಡಿಕೊಳ್ಳುವುದಾದರೂ ಕೈಕಾಲುಗಳು ಎಳೆಯವಾಗಿ ಇನ್ನೂ ಸ್ವಾವಲಂಬನವಿರುವುದಿಲ್ಲ. ತಾಯಿಯ ಮೊಲೆ ಹಾಲು ಮಾತ್ರ ಸಂಪೂರ್ಣ ಆಹಾರವಾಗಿರುವುದು. ಆದರೆ ತಾಯಿಯಾದವಳು ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿರಬೇಕು ಹಾಗೂ ಯೋಗ್ಯ ಪ್ರಮಾಣದಲ್ಲಿರಬೇಕು. ತಾಯಿಯ ಹಾಲಿಗೆ ಪೂರಕವಾಗಿ ಎಳನೀರು ಶ್ರೇಷ್ಠ ಪಾನೀಯವಾಗಿದೆ. ಆಕಳ ಹಾಲು, ಮೇಕೆಯ ಹಾಲುಗಳನ್ನು ಹದವರಿತು ಕೊಡಬಹುದು. ಸರಿಯಾದ ಪ್ರಮಾಣದಲ್ಲಿ ಯೋಗ್ಯ ಪೋಷಕಾಂಷಗಳು ಲಭಿಸಿದಾಗ ಶಿಶುವಿನ ಆರೋಗ್ಯವು ಚೆನ್ನಾಗಿರುವುದು ಸಕಾಲದ ಮಲ ಮೂತ್ರ ವಿಸರ್ಜನೆಯಿಂದ ತಿಳಿಯಬಹುದು. ಮಗುವಿನ ಉಸಿರಾಟ ವಿಶ್ರಾಂತಿಗಳೂ ಉಪಯುಕ್ತ ಸೂಚಕಗಳಾಗಿವೆ. ಬೆಳೆಯುವ ಹಸುಳೆಗ ಹಣ್ಣುಗಳ ರಸವನ್ನೂ ಬೇಯಿಸಿದ ತರಕಾರಿಗಳನ್ನೂ ಹಿತವಾಗಿಯೂ ಮಿತವಾಗಿಯೂ ಕೊಡಬಹುದು. ಬೆಳೆದು ಬಂದಂತೆ ಆಹಾರ ವಿಹಾರ ವಿರಾಮಗಳ ಕ್ರಮಗಳೂ ವ್ಯತ್ಯಾಸವಾಗುವುದು ವಾಡಿಕೆ.

ತಾಯಿಯ ಮೊಲೆ ಹಾಲು ಬಿಟ್ಟು ಸ್ವತಂತ್ರವಾಗಿ ಆಹಾರ ಸೇವಿಸಲು ತೊಡಗಿದಾಗ ಮಾನವನ ಶರೀರ ರಚನೆ ಹಾಗೂ ಶಾರೀರಿಕ ಚಟುವಟಿಕೆಗಳು ಸಸ್ಯಜನ್ಯ ಘಟಕಗಳನ್ನು ಬಳಸಲು ಯೋಗ್ಯವಾಗಿರುತ್ತವೆ. ಪ್ರಾಣಿ ಜನ್ಯ ಹಾಲು ಉತ್ತಮ ಆಹಾರ ಘಟಕ. ಇದರಿಂದ ತಯಾರಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳೂ ಸೇವನೆಗೆ ಯೋಗ್ಯವಾಗಿದೆ. ಜೇನು ಹುಳಗಳು ಸಹಸ್ರಾರು ಹೂಗಳಿಂದ ಸಂಗ್ರಹಿಸಿದ ಮಕರಂದದಿಂದ ತಯಾರಾದ ಜೇನು ಕೂಡ ಉತ್ತಮ ಆಹಾರ ವಸ್ತುವಾಗಿದೆ. ಹಿತವಾಗಿಯೂ ಮಿತವಾಗಿಯೂ ಹದವರಿತು ಸೇವಿಸಬಹುದು.

ಇತರ ಪ್ರಾಣಿ ಜನ್ಯ ವಸ್ತುಗಳಾದ ಮಾಂಸ, ಮೀನು, ಕೋಳಿ, ಮೊಟ್ಟೆ ಹಾಗೂ ಹಾಲಿನಿಂದಲೇ ತಯಾರಿಸುವ ಗಿಣ್ಣಗಳು (yogurt, cheese, paneer, etc.,) ಮಾನವನ ಸೇವನೆಗೆ ಯೋಗ್ಯವಲ್ಲ.

      
ಪಚನಾಂಗಗಳಲ್ಲಿ ಈ ಘಟಕಗಳು ಪಚನವಾಗುವುದು ಅವುಗಳ ಕೊಳೆಯುವಿಕೆಯಿಂದ ಮಾತ್ರ ಎನ್ನಬಹುದು. ಈ ಕೊಳೆತದಿಂದ ಪಚನ ಕ್ರಿಯೆಯು ಆಮ್ಲೀಯ ಪರಿಸರವನ್ನುಂಟು ಮಾಡಿದಾಗ ದೊಡ್ಡ ಕರುಳಿನ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ. (ಅವುಗಳ ರಕ್ಷಣೆಗೆ ಕ್ಷಾರೀಯ ಪರಿಸರದ ಅಗತ್ಯವಿದೆ). ಸೇವಿಸಿದ ಆಹಾರದಲ್ಲಿ ನಾರಿನ ಅಂಶವು ಇಲ್ಲದಿರುವುದರಿಂದ ಮಲಬದ್ಧತೆ ಏರ್ಪಡುತ್ತದೆ. ಶರೀರದ ರಸವು ಆಮ್ಲೀಯವಾಗಿ ಕಣಕಣಗಳೂ ತಮ್ಮ ಕಾರ್ಯದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿರುವುದಿಲ್ಲ. ಬಹುಕೋಮಲವಾದ ಮೆದುಳು ಹಾಗೂ ಹೃದಯಗಳು ತಮ್ಮ ಚಟುವಟಿಕೆಯು ಸುಗಮವಾಗಲೆಂದು ಕ್ಷಾರೀಯ ಪರಿಸರವೇ ಬೇಕೆಂದು ಪರಿತಪಿಸುತ್ತವೆ. ಆಗ ಶರೀರದ ಎಲುಬು ಹಾಗೂ ಹಲ್ಲುಗಳಲ್ಲಿ ಸಂಗ್ರಹವಾಗಿರಬಹುದಾದ ಸುಣ್ಣದ ಲವಣಗಳು ಶರೀರ ರಸದಲ್ಲಿ ಬಿಡುಗಡೆಯಾಗುತ್ತವೆ. ಇದರಿಂದ ಈ ಕೋಮಲ ಅಂಗಗಳ ಚಟುವಟಿಕೆಗಳು ಸುಧಾರಿಸುತ್ತವೆ. ಆದರೆ ಎಲುಬು, ಹಲ್ಲುಗಳಿಂದ ಬಿಡುಗಡೆಯಾದ ಲವಣಗಳು ರಕ್ತಗತವಾಗಿ ಶರೀರದಿಂದ ಹೊರ ಹೋಗಲು ಪ್ರಯತ್ನ ಮಾಡಿದಾಗ ಮೂತ್ರ ಜನಕಾಂಗವು ಅತೀವ ಹಾನಿಗೆ ಒಳಗಾಗುವುದು. ಕೆಲವೊಮ್ಮೆ ಈ ಲವಣಗಳು ರಕ್ತನಾಳಗಳ ಒಳಗಿನ ಪೊರೆಯಲ್ಲಿ ಉಂಟಾಗಿರಬಹುದಾದ ಸೂಕ್ಷ್ಮ ಗಾಯಗಳಲ್ಲಿ ಶೇಖರಣೆಯಾಗಿ ರಕ್ತ ಚಲನೆಗೆ ಅಡಚಣೆಯಾಗಬಹುದು. ಇದರಿಂದ ಹಲವು ತರದ ಕಾಯಿಲೆಗಳು ತೋರುತ್ತವೆ.


ನವ ನಾಗರೀಕತೆಯ ಹೆಮ್ಮೆಯ ಕಾಯಿಲೆಯೆಂದು ಹೆಸರುವಾಸಿಯಾದ ಹೃದಯಾಘಾತ ಹಾಗೂ ಪಾರ್ಶ್ವವಾತಗಳು ಕೊಡುಗೆಗಳು. ಶರೀರದ ಗಂಟುಗಳಲ್ಲಿ ಸಂಗ್ರಹವಾಗಿ ಉಳಿಯಬಹುದು. ಮೂತ್ರಪಿಂಡದಲ್ಲಿ ಪಿತ್ತಕೋಶದಲ್ಲಿ ಕಲ್ಲಾಗಿ ಶೇಖರಣೆಯಾಗುವುದು ಇಂತಹ ಲವಣಗಳ ಸಂಗ್ರಹದಿಂದಲೇ ಎನ್ನಬಹುದು. ಶರೀರದ ಲವಲವಿಕೆ ಕುಗ್ಗಿ ಹೋಗಿ ಜಡತನವು ಬರುವುದು. ಪಿಷ್ಠದ ಅಭಾವದಿಂದಾಗಿ ಚಟುವಟಿಕೆಗಳಿಗೆ ಸಾಕಷ್ಟು ಶಕ್ತಿ ಪೂರೈಕೆ ಸಾಧ್ಯವಾಗದು. ಶರೀರದಲ್ಲಿ ತ್ಯಾಜ್ಯ ವಸ್ತುಗಳು ಸೇರಿ ಅನೇಕ ಅನಾಹುತಗಳನ್ನು ತಂದೊಡ್ಡುತ್ತವೆ. ಇಂತಹಾ ಪ್ರಾಣಿಜನ್ಯ ಘಟಕಗಳಲ್ಲಿ ಸಂಗ್ರಹವಿರವ ಕೊಬ್ಬಿನ ಅಂಶವಂತೂ ಸಂಪೂರ್ಣ ಕಶ್ಮಲವೇ ಆಗಿ ಉಳಿಯುವುದು ಅನೇಕ ಕಾಯಿಲೆಗಳಿಗೆ ಮೂಲ ಕಾರಣವಾಗಿರುವುದು. ಪ್ರಾಣಿಗಳ ಸಾಕಣೆಯಲ್ಲಿ ಬಳಸಲಾಗುವ ವಿವಿಧ ರಾಸಾಯನಿಕಗಳೂ ಮಾನವನ ಶರೀರದಲ್ಲಿ ತರಬಹುದಾದ ಅನಾಹುತಗಳು ಊಹನೆಗೂ ನಿಲುಕಲಾರವು. ಇತ್ತಿಚೆಗಿನ ದಶಕಗಳಲ್ಲಿ ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡ 'ಹುಚ್ಚುದನ'ಗಳ ಕಾಯಿಲೆಯು ಮಾನವ ನಿರ್ಮಿತವೆನ್ನಲೇಬೇಕು. ಕಸಾಯಿಕಟ್ಟೆಯ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಸಸ್ಯಾಹಾರಿಗಳಾದ ದನಗಳಿಗೆ 'ಕೃತಕ ಆಹಾರ'ಗಳಾಗಿ ಮಾಡಿದಾಗ ಮಾಂಸ ಹಾಗೂ ಹಾಲಿನ ಉತ್ಪತ್ತಯೇನೋ ಹೆಚ್ಚಾಯಿತು. ಅವುಗಳ ವ್ಯಾಪಾರದಿಂದ ಅಧಿಕ ಧನಲಾಭವೂ ಆಯಿತು. ಇಂತಹ "ಹುಚ್ಚು ದನ"ಗಳ ಮಾಂಸವಿರಲಿ ಹಾಲಿರಲಿ ಸೇವಿಸಿದ ಮಾನವರಲ್ಲೂ ಈ ಕಾಯಿಲೆಯು ಕಂಡುಬಂದಾಗಲೇ ಆಗಿ ಹೋದ ಪ್ರಮಾದದ ಅರಿವಾಯಿತು. ಈಗ ಭೂಲೋಕದ ಹಲವೆಡೆ ಇಂತಹ ಪ್ರಸಂಗಗಳು ಕಾಣಬರುತ್ತವೆ.

ಕೋಳಿ ಸಾಕಣೆಯಲ್ಲಿ ಅಧಿಕ ಇಳುವರಿಗಾಗಿ ಬಳಸಲಾಗುವ ಬೆಳವಣಿಗೆಯ ಘಟಕಗಳು ಮಾನವನ ಮೇಲೂ ಅಧಿಕ ಪರಿಣಾಮಕಾರಿಯಾಗಿವೆ. ಕೃಷಿ ಗೋರಕ್ಷೆಗೆಂದು ಬಳಸಲಾಗುವ ಎಲ್ಲಾ ರಾಸಾಯನಿಕಗಳೂ ಮಾನವನಿಗೆ ಮಾತ್ರವಲ್ಲ ಇತರ ಜೀವಿಗಳಿಗೂ ಮಾರಕವಾಗಿವೆ. ಅಳತೆ ಮೀರಿ ಬಳಸುವ ಕ್ರಿಮಿ ನಾಶಕಗಳಿಂದ ಶಿಲಾವರಣ ಜಲಾವರಣ ವಾತಾವರಣಗಳೂ ಕಲುಷಿತವಾಗಿವೆ.

ಸಸ್ಯಗಳಿಂದಲೇ ಬಂದ ಮಾತ್ರಕ್ಕೆ ಎಲ್ಲಾ ಕಚ್ಚಾ ವಸ್ತುಗಳನ್ನೂ ಸೇವಿಸಬಾರದು. ಹಿತವಾಗಿ ಮಿತವಾಗಿ ಬಳಸಿದರೆ ಲೇಸು, ಇಲ್ಲವಾದರೆ ಅನರ್ಥವಾಗಬಹುದು.

ದುರ್ವ್ಯಸನಗಳಿಗೆ ಬಳಸಲಾಗುವ ಮೂಲವಸ್ತುಗಳಲ್ಲಿ ಹೆಚ್ಚಿನವು ಸಸ್ಯ ಜನ್ಯಗಳಾಗಿವೆ. ಅಫೀಮು, ಗಾಂಜಾ, ತಂಬಾಕು, ಕಾಫಿ, ಚಾ, ಕೊಕ್ಕೊ, ಮದ್ಯಸಾರಗಳು ಈ ಬಗೆಯವು. ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ, ಆರ್ಥಿಕವಾಗಿ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುವುದು. ಆರೋಗ್ಯವೂ ಕೆಟ್ಟು ಹೋಗಿ ಬಿಡುತ್ತದೆ. ಇವುಗಳ ಶುದ್ಧೀಕರಣವನ್ನು ಕ್ರಮವರಿತು ಮಾಡಿಕೊಂಡು ಔಷಧಿಗಳಾಗಿ ಬಳಸುವ ಕಡೆ ಗಮನ ಹರಿಸಬೇಕು.

ಇನ್ನೂ ಕೆಲವು ದಿನಬಳಕೆಯಲ್ಲಿ ಇತ್ತೀಚೆಗೆ ಬಂದಿರುವ ಸಸ್ಯ ವಿಶೇಷಗಳನ್ನೂ ಉದಾಹರಣೆ ಸಹಿತ ತಿಳಿಯಬೇಕಾಗಿದೆ. ಟೊಮೆಟೊ, ಸೋಯಾ ಹಾಗೂ ಮೆಣಸು ಉತ್ತಮ ಉದಾಹರಣೆಗಳು. ಜಾಗತಿಕ ಮಟ್ಟದಲ್ಲಿ ಇನ್ನೂ ಹಲವಾರು ಸಸ್ಯಗಳು ಈ ರೀತಿ ಬಳಕೆಗೆ ಬಂದಿವೆ, ಬರುತ್ತಾ ಇರುತ್ತವೆ.

ಕೈಗಾರಿಕಾ ಲೋಕದ ಆರ್ಥಿಕ ಆಧಾರಿತ ಮೌಲ್ಯಗಳ ಬೆಳವಣಿಗೆಯಿಂದ ನವನಾಗರೀಕತೆಯನ್ನು ಅಳೆಯಲಾಗುತ್ತಿದೆ. ಇದರ ಮುನ್ನಡೆಯನ್ನು ಲಾಭ ನಷ್ಟಗಳ ಮೇಲೆ ತಿಳಿಯುತ್ತೇವೆ. ಮೂಲ ವಸ್ತುಗಳ ಸದುಪಯೋಗದಿಂದ ಗಳಿಸಬಹುದಾದ ಸರಳ ಜೀವನವನ್ನು ರೂಪಿಸಿಕೊಳ್ಳುವುದು ಮಾನವೀಯ ಸಂಸ್ಕಾರವಾಗಿ ಉಳಿಯುತ್ತದೆ. ಇದನ್ನು ತಿಳಿದು ಬಳಸಿ ಬೆಳೆಸಿ ಉಳಿಸಿಕೊಂಡರೆ ಈ ಜಗತ್ತು ಉಳಿಯುವುದು.      

(ಸಶೇಷ)
ಲೇಖಕರ ಪರಿಚಯ:- ದಿವಂಗತ ಡಾ|| ಪಳ್ಳತಡ್ಕ ಕೇಶವ ಭಟ್ಟರು ಮದರಾಸು ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ., ಎಂ.ಎಸ್ಸಿ., ಪಿಎಚ್.ಡಿ., ಪದವಿಗಳನ್ನು ಗಳಿಸಿದ್ದರು. ದಿವಂಗತ ಬಿ.ಜಿ.ಎಲ್. ಸ್ವಾಮಿಯವರ ಮಾರ್ಗದರ್ಶನದಲ್ಲಿ ಹತ್ತು ವರ್ಷ ತರಬೇತಿ. ಅನಂತರ ಸಾಗರದಾಚೆಯ ವೆನೆಜುಯೇಲ ದೇಶದ ಒರಿಯಂತೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ೧೮ ವರ್ಷಗಳ ಸೇವೆ.
            ೧೯೬೯ರಿಂದ ಅಸ್ಥಂಗತರಾಗುವತನಕ ಉಷ್ಣವಲಯದ ಅಮೇರಿಕಾ, ಆಫ್ರಿಕಾ ಹಾಗೂ ಏಷ್ಯಾ ಖಂಡಗಳಲ್ಲಿ ಅಧ್ಯಯನ, ಅಧ್ಯಾಪನ, ಪ್ರಕೃತಿ ಚಿಕಿತ್ಸೆ, ಸರಳ ಜೀವನಗಳ ಅಭ್ಯಾಸ; ಪ್ರವಚನ ಮಾಡಿದ್ದರು. ಅಂತಾರಾಷ್ಟ್ರೀಯ ಹಾಗೂ ಹಲವು ರಾಷ್ಟ್ರಗಳ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
            ವೆನೆಜುಯೇಲ ಮತ್ತಿತರ ದೇಶಗಳಲ್ಲಿ ಸಾತ್ವಿಕ ಆಹಾರ, ಸರಳ ಜೀವನ ಕ್ರಮಗಳ ಆಂದೋಲನವನ್ನು ನಡೆಸಿಕೊಂಡು ಬಂದಿದ್ದರು. ಸಸ್ಯಗಳ ಪರಿಚಯ, ಅವುಗಳ ಬಳಕೆ, ಬೆಳೆಸುವ ಕ್ರಮ, ಸಂಬಂಧಿಸಿದ ಸಿದ್ಧಾಂತಗಳು, ಆಹಾರ ಕ್ರಮ, ಖಗೋಳ ವಿಜ್ಞಾನ ಮೊದಲಾದ ವಿಚಾರಗಳಲ್ಲಿ ಸ್ಪೇನಿಶ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ಇಂಗ್ಲೀಷ್, ಫ್ರೆಂಚ್ ಭಾಷೆಗಳಿಗೆ ತರ್ಜುಮೆ ಆಗಿವೆ. ಕನ್ನಡದಲ್ಲಿ ಮೊತ್ತಮೊದಲಿಗೆ "ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನದೆಡೆಗೆ" ಎಂಬ ಪುಸ್ತಕವನ್ನು ೨೦೦೩ರಲ್ಲಿ ಪ್ರಕಟಿಸಿದರು. ಪ್ರಸಕ್ತ ಲೇಖನವನ್ನು ಇದೇ ಪುಸ್ತಕದಿಂದ ಆಯ್ದು ಹಾಗೂ ಅವರು ನಮ್ಮೊಂದಿಗೆ ಇದ್ದಾಗ ಚರ್ಚಿಸಿದ್ದ ನೆನಪುಗಳನ್ನು ಮಸ್ತಕದಲ್ಲಿ ಇರಿಸಿಕೊಂಡು ವಿನಮ್ರವಾಗಿ ಸ್ಮರಿಸಿಕೊಂಡು ಪ್ರಜೆಗಳ ಆಯಸ್ಸು ಮತ್ತು ಆರೋಗ್ಯವೆಂಬ ಸಂಪತ್ತು ವೃದ್ಧಿಸಲಿ ಎಂದು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

-      ಹೇಮಂತ್ ಕುಮಾರ್. ಜಿ.

No comments:

Post a comment