Friday, 12 February 2016

ನಮ್ಮ ಋಷೀ ಪರಂಪರೆ - ೨

ಪ್ರಿಯ ಓದುಗರೇ, 

ಹಿಂದಿನ ಸಂಚಿಕೆಯಲ್ಲಿ ಮುಖ್ಯ 7 ವಿಭಾಗದ ಮಹಾತ್ಮರ ಒಕ್ಕೂಟದ ಪರಿಚಯ ಮಾಡಿಕೊಟ್ಟಿದ್ದೇನೆ. ಅವರಲ್ಲಿ ಮುಖ್ಯವಾಗಿ ನಮ್ಮ ಸನಾತನ ಸಂಸ್ಕೃತಿಯ ತಳಹದಿಯಾದ ವೇದ ಅದರ ದೃಷ್ಟಾರರೆನಿಸಿದ ಋಷಿಮುನಿಗಳ ಪರಿಚಯ, ಅವರ ಸಾಧನೆ, ಶ್ರಮ, ಲೋಕಕ್ಷೇಮ ಚಿಂತನೆ, ತ್ಯಾಗ ಇವನ್ನು ಪರಿಚಯಿಸುವುದು ಆಗಿರುತ್ತದೆ. ಆದರೆ ಇಲ್ಲಿ ಮೊದಲೇ ಸ್ಪಷ್ಟಪಡಿಸುತ್ತೇನೆ ಇವೆಲ್ಲಾ ನನ್ನ ಇತಿಮಿತಿಯಲ್ಲಿರುತ್ತದೆ. ಅವರ ಪೂರ್ಣಶಕ್ತಿ, ಪೂರ್ಣಬಲ, ಪೂರ್ಣ ಸಂಶೋಧನಾ ವಿವರವನ್ನು ಹೇಳಲು ನನ್ನಲ್ಲಿ ಅವರಿಗಾಗುವ ಅಳತೆಗೋಲಿಲ್ಲ. ನನ್ನ ಆಳು, ಅಳತೆ ಪ್ರಮಾಣದಲ್ಲಿ ಬರೆಯುತ್ತಾ ಇದೊಂದು ಅವರ ಬಗೆಗಿನ ಸ್ತುತಿಯೆಂದು ಮಾತ್ರಾ ಹೇಳುತ್ತಾ ಹಾಗೂ ಓದುಗರಾದ ನಿಮ್ಮಲ್ಲೂ ಹಾಗೂ ಋಷಿಮುನಿಗಳಲ್ಲೂ ಕ್ಷಮೆ ಕೋರಿ ಆಶೀರ್ವಾದ ಬಯಸಿ ಬರೆಯುತ್ತಿದ್ದೇನೆ.

ಈ ಪರಮ ಶ್ರೇಷ್ಠ ಪರಂಪರೆಯಲ್ಲಿ ಒಟ್ಟು 12 ವಿಭಾಗವಿದೆ. ಅವರೆಲ್ಲಾ ವೇದದೃಷ್ಟಾರರೂ, ಪ್ರಯೋಗಶೀಲರೂ, ಲೋಕಕಲ್ಯಾಣವೇ ಗುರಿಯಾಗಿರುವವರೂ, ನಿಸ್ವಾರ್ಥಿಗಳೂ, ತ್ಯಾಗಿಗಳೂ ಆಗಿದ್ದಾರೆ. ಅವರ ಆ ಹನ್ನೆರಡು ವಿಭಾಗವನ್ನು ಮೊದಲು ಪರಿಚಯಿಸುತ್ತೇನೆ ಹಾಗೂ ಅವರ ಸಂಖ್ಯಾಬಲ ವಿವರಿಸುತ್ತೇನೆ. ಅವರಲ್ಲಿ ಒಟ್ಟು ಸಾಮೂಹಿಕ ಚಿಂತನೆಯನ್ನು ಮಾತ್ರಾ ಹನ್ನೆರಡು ವಿಭಾಗದಲ್ಲಿ ಈ ಲೇಖನದ ಮುಖೇನ ವಿವರಿಸುತ್ತೇನೆ. ಆ ಹನ್ನೆರಡು ವರ್ಗವೂ ನಿರಂತರ ವೇದ ಸಂಶೋಧಕರು.

01)    ಶತಾನಂದ ವರ್ಗ  1,72,000 ಮಂದಿ ಋಷಿಗಳು

02)   ಮರೀಚ್ಯಾದಿಗಳು  1,28,36,000 ಮಂದಿ ಋಷಿಗಳು

03)   ಪುಲಸ್ತ್ಯಾದಿಗಳು  1,64,27,000 ಮಂದಿ ಋಷಿಗಳು

04)  ಗೃತ್ಸಮದಾದಿಗಳು  1,10,00,000 ಮಂದಿ ಋಷಿಗಳು

05)   ಕಾಣ್ವಾದಿಗಳು  68,36,000 ಸಾವಿರ ಮಂದಿ ಋಷಿಗಳು

06)   ಸೂತಾದಿಗಳು  28,000 ಮಂದಿ ಋಷಿಗಳು

07)   ವಿಶ್ವಾಮಿತ್ರಾದಿಗಳು  18,64,000 ಮಂದಿ ಋಷಿಗಳು

08)   ವಸಿಷ್ಠಾದಿವರ್ಗ - 1,28,32,000 ಮಂದಿ ಋಷಿಗಳು

09)   ವಾಮದೇವಾದಿಗಳು -24,00,000 ಮಂದಿ ಋಷಿಗಳು

10)    ಸೋಮಕಾದಿವರ್ಗ 64,00,000 ಮಂದಿ ಋಷಿಗಳು

11)     ದೇವಲವರ್ಗ - 1,10,09,000 ಮಂದಿ ಋಷಿಗಳು

12)    ವಾಲಖಿಲ್ಯಾದಿ+ಮಂಡೂಕ್ಯಾದಿವರ್ಗ– 60,000 ಋಷಿಗಳು

ಈ 12 ವರ್ಗಗಳಲ್ಲಿ ಯಾವುದರಲ್ಲಿ ಅವರನ್ನು ಪ್ರಕಟಿಸಿಕೊಂಡರೋ ಅವರೆಲ್ಲಾ ಆ ವರ್ಗವದವರೆಂದು ಪ್ರತೀತಿ. ಇವರೆಲ್ಲರ ಒಟ್ಟು ಸಂಖ್ಯೆ 9 ಕೋಟಿಗೂ ಮಿಕ್ಕಿರುತ್ತದೆ. ಇವರೆಲ್ಲರೂ ವ್ಯಾಸರ ನಿರ್ದೇಶನದಂತೆಯೇ ಕಾರ್ಯ ನಿರ್ವಹಿಸುವವರು. ಹಾಗಾಗಿ ಇವರು ವೇದ ಮಂತ್ರಗಳ ದೃಷ್ಟಾರರೂ, ವ್ಯಾಸ ನಿರ್ದೇಶಿತ ಕ್ರಮಾನುಸಾರಿಗಳೂ, ನಿರಂತರ ಸಪ್ತಲೋಕಗಳಲ್ಲಿ ಎಡಬಿಡದೆ ಯಾಗ ಯಜ್ಞಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಪಂಚದ ನಡೆಯಲ್ಲಿ ನಿರ್ದೇಶಕರಾಗಿರು ತ್ತಾರೆ. ಇವರಲ್ಲಿ ಹಿಂದೆ ಹೇಳಿದ ಈ ಭೂಲೋಕ ಸಹಿತ ಸಪ್ತಲೋಕಗಳಲ್ಲಿ ಹೇಗೆ ನಿರಂತರ ಯಾಗ ಯಜ್ಞಗಳನ್ನು ನಡೆಸುತ್ತಾ ಧರ್ಮ ರಕ್ಷಣೆಯಲ್ಲಿ ತೊಡಗಿರುತ್ತಾರೆ ಎನ್ನುವ ವಿವರಣೆಯೊಂದಿಗೆ ವ್ಯಕ್ತಿ ಪರಿಚಯ ಮಾಡಿಕೊಡುತ್ತೇನೆ. ಇವರಲ್ಲಿ ಆಗಿಹೋದ ಮಹನೀಯರಲ್ಲಿ ಕೆಲವರ ಮುಖ್ಯ ಪಾತ್ರಗಳೇನು? ಅದರ ರಹಸ್ಯವೇನು? ಅದರ ಹಿನ್ನೆಲೆಯ ಉದ್ದೇಶವೇನು? ಲೋಕಕಲ್ಯಾಣವೇನು?ಎಂಬುದರ ರಹಸ್ಯ ಸ್ಫೋಟವೇ ಈ ಲೇಖನದ ಉದ್ದೇಶವೆಂದೂ ಈ ಮೂಲಕ ಸ್ಪಷ್ಟ ಪಡಿಸುತ್ತಾ ಮೊದಲು ಈ ಹನ್ನೆರಡು ವಿಭಾಗದ ಒಬ್ಬೊಬ್ಬರ ಪರಿಚಯ ಲೇಖನ ಹಾಗೂ ಅವರ ಕರ್ತೃತ್ವಶಕ್ತಿ ವಿವರಿಸುತ್ತೇನೆ.

ಈ ವಿಚಾರದಲ್ಲಿ ಮೊದಲನೆಯದಾದ ಶತಾನಂದವರ್ಗದ ವಿಚಾರವಾಗಿ ಮೊದಲಾಗಿ ಬರೆಯುತ್ತೇನೆ. ಏಕೆಂದರೆ ಅವರೆಲ್ಲಾ ಈ ಭೂಲೋಕದಲ್ಲಿಯೇ ಇದ್ದು ತಮ್ಮ ತಪಃ ಪ್ರಭಾವದಿಂದ ಲೋಕಕಲ್ಯಾಣ ನಿರತರಾಗಿರುವವರು. ಪೂರ್ಣವಾಗಿ ವ್ಯಾಸರ ನಿರ್ದೇಶನಕ್ಕೆ ಒಳಪಟ್ಟವರು. ಹಾಗಾಗಿ ಅವರೆಲ್ಲಾ ಮರೆಯಲ್ಲಿಯೇ ಇದ್ದು ಕಾರ್ಯಕುಶಲತೆ ಮೆರೆದ ಮಹನೀಯರು. ಅವರಲ್ಲಿ ಮೊದಲನೆಯದಾದ ಶತಾನಂದ ರ ಮೂಲ ಪರಿಚಯ ಮಾಡುತ್ತೇನೆ.

-:ಶತಾನಂದ:-

ಈ ವರ್ಗದ ಸಮೂಹದ ಲೆಕ್ಕ ಒಂದು ಲಕ್ಷದ ಎಪ್ಪತ್ತೆರಡು ಸಾವಿರ ಮಂದಿಯದ್ದು. ಇವರೆಲ್ಲಾ ಈ ಚತುರ್ದಶ ಭುವನ ಸೂತ್ರವನ್ನು ಸುಸ್ಥಿತಿಗೊಳಿಸುವ ಕಾರ್ಯದಲ್ಲಿ ನಿರಂತರ ಬ್ರಹ್ಮಕಲ್ಪದಿಂದಾರಂಭಿಸಿ ಈ ಶ್ವೇತ ವರಾಹ ಕಲ್ಪದವರೆಗೆ ಏಳು ಕಲ್ಪಗಳಲ್ಲೂ ತಮ್ಮ ಕಾರ್ಯ ಕುಶಲತೆ ಮೆರೆದವರು. ಅಂದಾಜು 960 ಕೋಟಿ ವರ್ಷದಿಂದ ಈ ಸಮೂಹ ಸಂಸ್ಥೆ ಕಾರ್ಯಪ್ರವೃತ್ತ ವಾಗಿದೆ. ಅವರ ಮೂಲ ಪುರುಷನೇ ಶತಾನಂದ. ತತ್ಕಾಲದಲ್ಲಿ ವರುಣಲೋಕದಲ್ಲಿ ವಾಸವಾಗಿದ್ದು ನಿರಂತರವಾಗಿ ಧ್ಯುಮಂತ ಸೋಮ ವೆಂಬ ಯಾಗ ಸಂಯೋಜನೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಮಾಹಿತಿ ಸಂಗ್ರಹಿಸಿದ ನಾನು ಇವರ ಪರಿಚಯಾತ್ಮಕ ಲೇಖನಕ್ಕೆ ಮನ ಮಾಡಿದ್ದೇನೆ.

ವಸುಷೇಣ ಮಾಲತಿಯರ ಮಗನಾಗಿ ಹುಟ್ಟಿದ ಬ್ರಹ್ಮಕಲ್ಪದ ಕಾಲದ ಹಿರಿಜೀವ. ಇವರ ಸಾಧನೆ, ಕಾರ್ಯಕೌಶಲ್ಯ, ಮಂತ್ರಶಕ್ತಿ, ಧೀಮಂತಿಕೆ ಇವುಗಳನ್ನು ಮಾಪನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಂಕಲ್ಪ ಮಾತ್ರದಿಂದ ಈ ಜೀವ ಜಗತ್ತಿನ ಎಲ್ಲವನ್ನೂ ನಿರ್ಣಯಿಸಬಲ್ಲರು. ಇಂತಹಾ ಧೀಮಂತ ವ್ಯಕ್ತಿಯ ಬಗ್ಗೆ ಹೇಳುವುದೂ ಒಂದು ಪುಣ್ಯಪ್ರದ ಕೆಲಸವೆಂದು ತಿಳಿದು ಬರೆಯುತ್ತಿದ್ದೇನೆ. ಇವುಗಳಲ್ಲಿ ಅತೀ ಮುಖ್ಯವಾದದ್ದು ಶತಾನಂದರ ಜನ್ಮವೃತ್ತಾಂತ. ಅದರ ಬಗ್ಗೆ ತಿಳಿಯೋಣ.

ಬ್ರಹ್ಮಕಲ್ಪದಲ್ಲಿ ಅರ್ಯಮನೆಂಬ ಸೂರ್ಯನು ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಜಗತ್ತಿನ ಜೀವರಾಶಿಗಳನ್ನು ಪೀಡಿಸುತ್ತಿದ್ದ. ಭೂಲೋಕದಲ್ಲಿ ಹೆಚ್ಚಿನ ಭಾಗ ನೀರೇ ಆವರಿಸಿತ್ತು. ಕೆಲ ಕೆಲವು ಭೂಪ್ರದೇಶಗಳ ಹೊರತುಪಡಿಸಿ ಎಲ್ಲವೂ ಜಲಮಯವಾಗಿತ್ತು. ಮಾನವರೂ, ಪ್ರಾಣಿಗಳೂ ನೀರನ್ನೇ ಆಶ್ರಯಿಸಿ ಬದುಕುತ್ತಿದ್ದರು. ಆದರೆ ನೀರೂ ಕೂಡ ಯಾವಾಗಲೂ ಬಿಸಿಯಾಗಿಯೇ ಇರುತ್ತಿತ್ತು. ಅದನ್ನು ಗೃತ್ಸಮದರು ವಿವರಿಸಿದ್ದಾರೆ ಗಮನಿಸಿ.

ಋಗ್ವೇದ ಮಂಡಲ-2, ಸೂಕ್ತ-7, ಮಂತ್ರ 1-6.

ಶ್ರೇಷ್ಠಂ ಯವಿಷ್ಠ ಭಾರತಾಗ್ನೇ ದ್ಯುಮಂತಮಾಭರ  
ವಸೋ ಪುರುಸ್ಪೃಹಂ ರಯಿಮ್ || 1 ||

ಮಾ ನೋ ಅರಾತಿರೀಶತ ದೇವಸ್ಯ ಮರ್ತ್ಯಸ್ಯ ಚ |
ಪರ್ಷಿ ತಸ್ಯಾ ಉತ ದ್ವಿಷಃ || 2 ||

ವಿಶ್ವಾ ಉತ ತ್ವಯಾ ವಯಂ ಧಾರಾ ಉದನ್ಯಾ ಇವ |
ಅತಿ ಗಾಹೇಮಹಿ ದ್ವಿಷಃ || 3 ||

ಶುಚಿಃ ಪಾವಕ ವಂದ್ಯೋಽಗ್ನೇ  ಬೃಹದ್ವಿರೋಚಸೇ |
ತ್ವಂ ಘೃತೇಭಿರಾಹುತಃ || 4 ||

ತ್ವಂ ನೋ ಅಸಿ ಭಾರತಾಗ್ನೇ ವಶಾಭಿರುಕ್ಷಭಿಃ |
ಅಷ್ಟಾಪದೀಭಿರಾಹುತಃ || 5 ||

ದ್ರ್ವನ್ನಃ ಸರ್ಪಿರಾಸುತಿಃ ಪ್ರತ್ನೋ ಹೋತಾ ವರೇಣ್ಯಃ |
ಸಹಸಸ್ಪುತ್ರೋ ಅದ್ಭುತಃ || 6 ||


ಎಂಬಂತೆ ಈ ವಸುಮತಿಯನ್ನಾಶ್ರಯಿಸಿದ ಸಕಲ ಜೀವರಾಶಿಗಳೂ ಸೂರ್ಯನ ಪ್ರಖರತೆಯಿಂದ ಬೇಯುತ್ತಿರಲಾಗಿ ಹಾಹಾಕಾರವೆದ್ದಿತ್ತು. ಈ ಸಂದರ್ಭದಲ್ಲಿ ವಸುಷೇಣನ ಪತ್ನಿ ಮಾಲತಿಯು ಗರ್ಭವತಿಯಾಗಿದ್ದಳು. ವಾತಾವರಣದ ಶಾಖ ಸಹಿಸಲಾರದೇ ತೊಳಲಾಡುತ್ತಿದ್ದಳು. ಪತ್ನಿಯ ಸಂಕಷ್ಟವನ್ನು ಸಹಿಸಲಾರದ ವಸುಷೇಣನು ಒಂದು ವಿಶಿಷ್ಟ ಯೋಜನೆ ತಯಾರು ಮಾಡುತ್ತಾನೆ. ಅತಿ ಗಾಹೇಮಹಿ ದ್ವಿಷಃ  ಎಂಬಂತೆ ಪ್ರತ್ಯಗ್ನಿಕರಣ ಮಾಡಿ ಸೂರ್ಯಶಾಖವನ್ನು ಉಪಸಂಹರಿಸುತ್ತಾನೆ. ಆಗ ಕ್ರೋಧಗೊಂಡ ಅರ್ಯಮನು ಮಾಲತಿಯ ಗರ್ಭಸ್ಥ ಶಿಶುವಿನ ಮೇಲೆ ಪರಿಣಾಮವಾಗುವಂತೆ ಮಾಡುತ್ತಾನೆ. ಅದರ ಪರಿಣಾಮವಾಗಿ ಶತಾನಂದನು ಜನಿಸುವಾಗ ಅತೀ ಕಪ್ಪಾಗಿ, ಮೈಮೇಲೆ ಹೊದಿಕೆಯಾಕಾರದಲ್ಲಿ ವಿಶೇಷ ಚರ್ಮಾಚ್ಛಾದನೆಯೊಂದಿಗೆ ಹುಟ್ಟಿ ಬರುತ್ತಾನೆ. ಲೋಕವೆಲ್ಲಾ ಈ ಅದ್ಭುತ ಶಿಶುವನ್ನು ನೋಡಿ ದಂಗಾಗುತ್ತಾರೆ. ಹುಟ್ಟಿದ ಶಿಶುವಾದ ಶತಾನಂದನು ತಾನೇ ಸ್ವತಃ ತನ್ನ ಅಳುವಿಕೆಯ ತರಂಗದಿಂದಲೇ ಸೂರ್ಯನ ಪಥವನ್ನು 64 ಲಕ್ಷ ಯೋಜನ ದೂರಕ್ಕೆ ತಳ್ಳುತ್ತಾನೆ. ಆಕಾಶಗಂಗೆಯಲ್ಲಿ ಸೂರ್ಯಕಿರಣ ಕ್ಷೀಣವಾಗುತ್ತಾ ಬಂದು ಭೂಮಿ ತಂಪಾಗುತ್ತದೆ. ಅದನ್ನು ಗುರುತಿಸಿದ ಆತನ ತಂದೆ ವಸುಷೇಣಶಂ ತಾರಯತೀ ಪ್ರಧಾನೇ ಆನಂದಮಿತಿ ಶತಾನಂದ ಎಂದು ನಾಮಕರಣ ಮಾಡುತ್ತಾನೆ. ಇದೇ ಶತಾನಂದರ ಜನ್ಮರಹಸ್ಯ. ನಂತರ ಶತಾನಂದರ ಜೀವನ ಚರಿತ್ರೆಯು ನಿರಂತರ ಹೋರಾಟದಲ್ಲಿಯೇ ಕಳೆಯಿತು. ಅದರ ಬಗ್ಗೆ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.
 ಇಂತು,

ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು
ಕಣ್ವಾಶ್ರಮ, ತಲಪಾಡಿ.

No comments:

Post a Comment