Saturday, 13 February 2016

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೨೦

  ಅರ್ಜುನನನ್ನು ಯುದ್ಧಕ್ಕೆ ಸಜ್ಜುಗೊಳಿಸುವ ವಿಚಾರವನ್ನು ಮುಂದುವರೆಸುತ್ತಲೇ ಇಪ್ಪತ್ತನೇ ಅಧ್ಯಾಯವು ಪ್ರಾರಂಭವಾಗಿದೆ. ಕುರುಕ್ಷೇತ್ರದ ಪಾಪದ ಸಿರಿಯನ್ನು ನಂದಿಸಿ, ಪುಣ್ಯದ ನೀರನ್ನು ಭರತ ಖಂಡದ ಅರ್ಧಭಾಗಕ್ಕೆ ಹರಿಸಬೇಕಾಗಿದೆ ಎಂದು ಕೃಷ್ಣನು ಅರ್ಜುನನಿಗೆ ಸೂಚಿಸುತ್ತಾನೆ. ನೇಮಿಯ ತಮ್ಮನಾಗಿ ನಾನೂ ಈಗ ಅರಹಂತನಾಗಿದ್ದೇನೆಂದು ಕೃಷ್ಣನು ಹೇಳುತ್ತಾನೆ. ಅರ್ಜುನ ಸುಭದ್ರೆಯರ ಪುತ್ರ ಅಭಿಮನ್ಯುವಿಗೆ ಚಕ್ರಬಂಧದ ವಿಚಾರ ತಿಳಿಸಿದ ಪ್ರಸಂಗದ ಉಲ್ಲೇಖವಿದೆ. ರಜೋಗುಣದ ವಿವರವನ್ನು ಕೌಂತೇಯನಿಗೆ ತಿಳಿಸಿದ ವಿವರವಿದೆ. ಜಗತ್ತಿನಲ್ಲಿ ಸಾಮವೇದವು ಕ್ಷೀಣಿಸುವ ವಿಚಾರ ಬಂದಿದೆ. ಹಣತೆಯೊಳಗಿನ ಎಣ್ಣೆ ಕರಗುವ ರೀತಿಯಲ್ಲಿ, ಗುಣವೆಲ್ಲ ಕರಗಿ ನೀರಾದರೂ, ಗುಣಧರ್ಮವು  ಕರುವಿನಲ್ಲಿರುವುದೆಂಬ ವಿಚಾರ ಸೂಚಿಸಿದ್ದಾನೆ. ಪ್ರತಿಮೆಯು ಆಕಾಶದಂತಾದಾಗ ರೂಪವೇ ಅರೂಪವೆನಿಸುತ್ತದೆ. ಚಿನ್ನವನ್ನು ಕರಗಿಸಿ ಎರಕಹೊಯ್ದರೆ, ಎರಕದರೂಪವೇ ಚಿನ್ನಕ್ಕೆ ಬರುತ್ತದೆ೦ದು ತತ್ವಸಿದ್ಧಾಂತದ ವಿಚಾರ ಸೂಚಿಸಿದ್ದಾನೆ. ಸಮರಥರು; ಮಹಾರಥರು; ಅತಿರಥರು; ಅರ್ಧರಥರು; ವಿಮಲ ಪರಾಕ್ರಮಯುತರ ವಿಚಾರಗಳನ್ನು ಹೇಳಿದ್ದಾನೆ.

  ಸಂತೋಷದಿಂದ ಕೇಳದಿರುವುದನ್ನು ಹೇಳುವಾಗ ಸ್ಥಿರಬುದ್ಧಿ ಇರಬೇಕು. ಹಾಗಿಲ್ಲದೇ ಅವಸರದಲ್ಲಿ ಹೇಳಿದರೆ ಅದು ಅರ್ಥವಾಗುವುದಿಲ್ಲ. ಜಗತ್ತಿನ ಹಿಂಸೆಯ ವಿಚಾರ ಬಿಟ್ಟು ಶತೃವನ್ನು ಕೊಲ್ಲುವುದು ಶ್ರೇಯಸ್ಕರವೆಂದು ಕೃಷ್ಣನು ಸೂಚಿಸುತ್ತಾನೆ. ಬಲಿಕೊಡುವುದು ಅಧರ್ಮ. ಪೂಜಾದಿ ಕಾರ್ಯಗಳಿಗೆ ಬಲಿ ಏಕೆಬೇಕು? ಆದರೆ, ಈ ಯುದ್ಧದ ಬಲಿ ಶತೃಹನನವೆನಿಸುವುದೆಂದೂ, ಎದೆಯಲ್ಲಿ ಗೆಲುವು ಅನುಮಾನವೆಂಬ ವಿಚಾರ ಮಸೆಯುತ್ತಿರುವಲ್ಲಿ, ಭೂಮಿಯಲ್ಲಿ ದಾಯಾದಿಗಳಿರಬೇಕೆಂಬಾಶೆಯು ಧರ್ಮರಾಯನ ರೀತಿ ಎಂದು ಕೃಷ್ಣನು ಸೂಚಿಸುತ್ತಾನೆ. ಜಿನದೇವನ ಜ್ಞಾನಮುದ್ರೆಯಲ್ಲಿ ಮನಸ್ಸೆಂಬ ಸಿಂಹಪೀಠದಲ್ಲಿ ಕುಳಿತು ಗೀತಾಕ್ಷರವೆಂಬ ಕಮಲದ ಶರೀರದಲ್ಲಿ ಶರೀರವಿಲ್ಲದಿರವಿಕೆಯನ್ನು ಸಾಧಿಸುವ ಕಾವ್ಯ ಎಂದು ಅದ್ವೈತದ ವಿವರ ಸೂಚಿಸಿದ್ದಾನೆ.

  ಅನುಲೋಮ-ಪ್ರತಿಲೋಮ ಕ್ರಮದಲ್ಲಿ (ಸರಿಯಾದಕ್ರಮ ಹಾಗೂ ಹಿಂದುಮುಂದಾದ ಕ್ರಮ) ಎರಡು ಶ್ಲೋಕಗಳನ್ನು ಕೊಟ್ಟಿದ್ದಾನೆ. ತತ್ವಾರ್ಥಮಹಾಸೂತ್ರ ಜಿನವಾಣಿಯಲ್ಲಿದ್ದುಶ್ರೀಋಷಿಮಂಡಲದ ಮಹಾಮಂತ್ರಗಳು ನೇಮಿ ಕೃಷ್ಣನ ಉಪದೇಶದಲ್ಲಿ ಅಡಕವಾಗಿದೆಯೆಂದೂ, ಇವುಗಳು ಸಿರಿಭೂವಲಯದಲ್ಲಿವೆಯೆಂದೂ ಹೇಳಿದ್ದಾನೆ. ಜ್ಞಾನಿಗಳಿಗೆ ಸಾವು ದಿನದಿನಕ್ಕೂ ದೂರವಾಗುತ್ತ, ಸಾವೇ ಇಲ್ಲದ ವೆಕುಂಠವಾಸ ಲಭಿಸುತ್ತದೆ. ನಾವುಗಳು ಪಡೆಯುವ ಉಭಯಮೋಕ್ಷವೆಂದರೆ ಆತ್ಮಕ್ಕೆ ದೊರೆಯುವ ಸ್ವಾತಂತ್ರ್ಯ ಎಂಬುದಾಗಿ ತಿಳಿಸಿದ್ದಾನೆ. ಎಲ್ಲ ರೀತಿಯ ಸೌಖ್ಯವನ್ನು  ಪಡೆಯುವಂಥ ಕಾಲದ ಲೆಕ್ಕವು ಖರ್ವಕ್ಕಿಂತಲೂ ಅಧಿಕವಾದುದು. ಎಲ್ಲ ವೈಭವಗಳನ್ನೂ ನೀಡುವ ಬಿಳಿಯ ತಾವರೆಯು ಸರ್ವಾರ್ಥ ಸಿದ್ಧಿಯಾಗುವ ನೂರು, ಸಾವಿರ ದಲಗಳನ್ನುಳ್ಳದ್ದಾಗಿರುತ್ತದೆ ಎಂದು ಸೂಚಿಸಿದ್ದಾನೆ. ಗಣಿತದ ಲೆಕ್ಕದಲ್ಲಿ ಬರುವ ದ್ರವ್ಯದ ಗಣನೆಯು ಅನಂತ ವಿಕಲ್ಪ. ಅಣುವಿನೊಳಗಿರುವ ಜೀವವಿಜ್ಞಾನವನ್ನು ಒಂದು ಕ್ಷಣದೊಳಗೆ ಹೇಳಲಾಗದು ಎಂದು ತಿಳಿಸಿದ್ದಾನೆ. ಗಣಧರರು ಹೇಳಿರುವ ದಿವ್ಯಧ್ವನಿಯ ಅರ್ಥವನ್ನು ತಿಳಿಯುವ ಶಕ್ತಿಯುತರಾದವರ ಗಣಿತದ ಕ್ಷೇತ್ರಾನುಗಮದ ಗುಣವನ್ನು ಹೇಳುತ್ತೇನೆ ಕೇಳಿರಿ ಎಂದಿದ್ದಾನೆ.  ಲೋಕಾಕಾಶದ ಕ್ಷೇತ್ರವು ಎಣಿಸಲಾಗದ ಕ್ಷೇತ್ರಗಳ ಜೀವಾದಿ ದ್ರವ್ಯಗಳನ್ನು ಹಾಳಾಗದ ರೀತಿಯಲ್ಲಿ ಛಲದಿಂದ ತನ್ನೊಳಗಿಟ್ಟುಕೊಂಡು ಸಲಹುತ್ತಿರುವುದಾಗಿ ಸೂಚಿಸಿದ್ದಾನೆ. ಅಖಿಲಾಂಡಕೋಟಿಬ್ರಹ್ಮಾಂಡನಾಯಕಿ ಎಂಬುದರ ವಿವರಣೆಯ ರೂಪವನ್ನಿಲ್ಲಿ ಕಾಣಾಬಹುದಾಗಿದೆ. ಹಲವಾರು ಲೋಕಗಳಿಗಾಶ್ರಯವಿತ್ತಿರುವ ಗಗನದೊಳಗೆ ಗಟ್ಟಿಯಾಗಿರುವ ಆರು ದ್ರವ್ಯಗಳ ವಿಚಾರ ತಿಳಿಸಿದ್ದಾನೆ. ಬೇರೆ ಬೇರೆ ಕ್ಷೇತ್ರಗಳ ವಿವರ, ನರಕಗಳ ವಿವರಗಳನ್ನು ಸೂಚಿಸಿದ್ದಾನೆ. ಸರ್ವಜ್ಞದೇವನ ಕಾಣ್ಕೆಯೊಳು ಬಂದಿರುವ ಸರ್ವಾಂಕಾಕ್ಷರ ಚಕ್ರದಲ್ಲಿ ನಿರ್ವಹಿಸಿರುವ ಕ್ಷೇತ್ರಾನುಯೋಗದ ಬಾಗಿಲು ಎಲ್ಲರಿಗೂ ಸುಲಭವಾಗಿಲ್ಲವೆಂದು ತಿಳಿಸಿದ್ದಾನೆ.


  ಒಂದೊಂದಲ ಒಂದು ಎಂಬುದು ಅಂಕವಿಜ್ಞಾನವಿರುವ ಗಣಿತಯೋಗದ ಒಂದು ಅಂಕವಾಗಿದೆ. ಶಂಕೆಯಿಲ್ಲದೇ ನೋಡಿದರೆ, ಆದಿಯಲ್ಲಿರುವುದು ಒಂದೇ ಆಗಿದೆ! ಇದನ್ನು ಬುದ್ದಿಯಿಲ್ಲದವನು ಹೇಗೆ ತಿಳಿಯುತ್ತೇನೆ ಎಂದು ಹೇಗೆ ಹೇಳುವನು? ಎಂದಿದ್ದಾನೆ. ಒಂದು ಎಂದರೆ ಅದ್ವೈತ. ಇದು ಸುಲಭವಾಗಿ ಅರ್ಥವಾಗದೆಂದು ಇಲ್ಲಿನ ಭಾವ. ಈ ಅಧ್ಯಾಯಾಂತರ್ಗತವಾಗಿ ಬರುವ ಅಶ್ವಗತಿಯ ಸಾಹಿತ್ಯವನ್ನು 'ಅಂ' ಕಾರದಿಂದ 'ಫಕ್' ಕಾರದ ವರೆವಿಗಿರುವ ೪ ಯೋಗವಾಹಗಳ ಸಹಿತವಾದ ೩೭ ಮೂಲ ವ್ಯಂಜನಾಕ್ಷರಗಳನ್ನು ಪದ್ಯಗಳ ಮೊದಲಕ್ಷರವಾಗಿ ಆಯ್ಕೆ ಮಾಡಿಕೊಂಡು, ಕಾವ್ಯರಚಿಸಿದ್ದಾನೆ. ಇವುಗಳ ಪೈಕಿ ಅಂ, ಅಃ, ಅಕ್, ಫಕ್ ಗಳಿಗೆ ಸೇರಿದ ಪದ್ಯಗಳು ೨೧ನೇ ಅಧ್ಯಾಯದ ಪಾದ ಪದ್ಯಗಳ ಅಶ್ವಗತಿಯ ಸಾಹಿತ್ಯದಲ್ಲಿ ಸೇರುತ್ತವೆ.

*    *     *

                                                            ಪುನರ್ ಅಧ್ಯಯನ ಹಾಗೂ ಪ್ರಚಾರ
- ಹೇಮಂತ್ ಕುಮಾರ್ ಜಿ.

ಆಕರ:- ಸುಧಾರ್ಥಿ, ಹಾಸನ ಇವರ "ಜಗತ್ತಿನ ಹತ್ತನೇ ಅಚ್ಚರಿ" ಹಾಗೂ "ಸಿರಿಭೂವಲಯ ಸಾರ" ಪುಸ್ತಕಗಳು.

No comments:

Post a Comment