Saturday, 9 April 2016

ನಮ್ಮ ಋಷೀ ಪರಂಪರೆ - ಶತಾನಂದ - ೪

ಅಂದು ರಾಜನಿಂದ ಹರಸಲ್ಪಟ್ಟು ಶುಭಾಶಿಷವನ್ನು ಪಡೆದು ಶತಾನಂದನು ಮಂದಾರ ಪರ್ವತ ಪ್ರದೇಶವನ್ನೇ ತನ್ನ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ತನ್ನಂತಯೇ ಸಮಾನಾಸಕ್ತಿ ಗುಣಕರ್ಮಯುಕ್ತರಾದವರನ್ನು ಕೂಡಿಕೊಂಡು ಅಲ್ಲಿ ವೇದಾಧ್ಯಯನ, ಪ್ರಯೋಗ ಪಾಠಶಾಲೆಯನ್ನು ಆರಂಭಿಸಿದ. ಹೊಸ ಹೊಸ ಸಂಶೋಧನೆಗಳನ್ನು ಮಾಡಲಾರಂಭಿಸಿದ. ಸುತ್ತಲಿನ ರಾಜ ಮಹಾರಾಜರೆಲ್ಲ ಆರ್ಥಿಕ, ಸಂಬಾರ, ವಸನಾದಿಗಳ ಸಹಾಯವನ್ನಿತ್ತು ಸೌಲಭ್ಯ ಕಲ್ಪಿಸಿಕೊಟ್ಟರು. ರಕ್ಷಣೆಯನ್ನೂ ಕೊಟ್ಟರು. ಕೆಲ ವರ್ಷಗಳಲ್ಲೇ ಶತಾನಂದರ ಗುಂಪು ಲೋಕೋತ್ತರ ಕೀರ್ತಿಶಾಲಿಗಳಾದರು. ಯಾಗಯಜ್ಞಗಳ ಮುಖೇನ ಹಲವು ಮುಖದ ಲೋಕಕಲ್ಯಾಣಕರವಾದ ಸಂಶೋಧನೆಗಳನ್ನು ಮಾಡಿ ಸಮಾಜಕ್ಕೆ ಧಾರೆಯೆರೆದರು. ಇವರ ಗುಂಪು ದೊಡ್ಡದಾಗುತ್ತಾ ಹೋಯ್ತು. ಅಷ್ಟೂ ಜನರು ತಮ್ಮ ಸ್ವಂತಿಕೆ ಇಲ್ಲದೇನೇ ಕೇವಲ ಲೋಕಹಿತಕ್ಕಾಗಿಯೇ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ನಿರ್ಲಿಪ್ತರಾಗಿ ಉಳಿದರು. ಈಗಲೂ ಅವರೆಲ್ಲಾ ತಮ್ಮನ್ನು ಸಂಪೂರ್ಣ ಲೋಕಹಿತಕ್ಕೆ ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಅವರ ಕೆಲ ಸಾಧನೆಗಳನ್ನು ಲೋಕಕ್ಕೆ ಪರಿಚಯಿಸುವುದರ ಮುಖೇನ ಶತಾನಂದರ ಪರಿಚಯ ಮಾಡಿಕೊಡುತ್ತೇನೆ.

ಒಂದಾನೊಂದು ಕಾಲದಲ್ಲಿ ದೇಶವನ್ನಾಳುವ ಕ್ಷತ್ರಿಯರೆಲ್ಲಾ ನಿರ್ವೀರ್ಯರಾಗಿ ನಿರ್ಬಲರಾಗಿ ಹೋದರು. ಸಮಾಜ ರಕ್ಷಣೆ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಹೆಸರಿಗೆ ಕ್ಷತ್ರಿಯರೆನ್ನಿಸಿಕೊಂಡರೂ ಅವರಲ್ಲಿ ಶೌರ್ಯ, ವೀರ್ಯ, ಸತ್ವ, ಧರ್ಮಬುದ್ಧಿ, ತ್ಯಾಗ, ಸತ್ಯಪರಿಪಾಲನೆ, ದಯಾಪರತೆ, ಕ್ಷಮಾಶೀಲತೆ, ಔದಾರ್ಯಗಳೇನೂ ಇರಲಿಲ್ಲ. ಅವರಿಂದ ಪ್ರಜೆಗಳ ಪಾಲನೆ ಅಸಾಧ್ಯವಾಯ್ತು. ದೇಶದಲ್ಲಿ ದೊಂಬಿ, ಗಲಾಟೆ, ಹೊಡೆದಾಟ, ಕೊಲೆ, ಸುಲಿಗೆ, ವಂಚನೆ, ಮೋಸ, ವಿದ್ರೋಹ, ಅನೈತಿಕತೆ, ಕಳ್ಳತನ, ಸೋಮಾರಿತನ, ಕರ್ತವ್ಯಭ್ರಷ್ಟತೆ ದೇಶದಲ್ಲಿ ತಾಂಡವವಾಡಲಾರಂಭಿಸಿತು. ಹಾಗೇ ಬರ, ರೋಗ, ಉತ್ಪಾತ, ಅನಾವೃಷ್ಠಿ, ಅತಿವೃಷ್ಟಿ, ಉಲ್ಕಾಪಾತಾದಿಗಳು ವಿಜೃಂಭಿಸಿದವು. ಇದನ್ನರಿತ ಶತಾನಂದನು ಈ ಸಮಸ್ಯೆಗೆ ಪರಿಹಾರ ಹುಡುಕಲೋಸುಗ ಪ್ರಯತ್ನಕ್ಕಿಳಿದ. ಅದಕ್ಕಾಗಿಯೇ ಸಂಶೋಧಿಸಿದ ಒಂದು ವಿಶಿಷ್ಟ  ಸಂವರ್ಧನಾ ಪ್ರಕ್ರಿಯೆಯೇ ವಿಶ್ವಂಜಯ ವೆಂಬ (ವಿಶ್ವಜಿತ್) ಯಾಗ. ಈ ಯಾಗದಲ್ಲಿ ಅಧ್ವರ್ಯುವೇ ಯಜಮಾನ. ಸ್ವಯಂ ತ್ಯಾಗಿ ಆಗಿದ್ದರೇನೇ ವಿಶ್ವಜಿತ್ ಯಾಗ ಮಾಡಲರ್ಹನಾಗುತ್ತಾನೆ. ಅದರ ವಿಧಿ, ವಿಧಾನ, ಸೂತ್ರಗಳು ಮಂತ್ರಗಳ್ಯಾವುವು ಎಂಬುದನ್ನು ತಿಳಿಸುತ್ತಾ ಶತಾನಂದರು ಹೇಗೆ ಕ್ಷತ್ರಿಯರಲ್ಲಿ ಬಲವನ್ನು ತುಂಬಿ ಸದೃಢರನ್ನಾಗಿ ಮಾಡಿ ದೇಶದ ವಿಪ್ಲವಗಳನ್ನು ಹೇಗೆ ದಮನಿಸಿದರೆಂಬ ವಿಚಾರ ತಿಳಿಸುತ್ತೇನೆ. ಯಾಗ ವಿಧಿ ಮೊದಲಾಗಿ ಪರಿಚಯಿಸುತ್ತೇನೆ. ಅದರಲ್ಲಿ ನಾಲ್ಕು ಹಂತದಲ್ಲಿ ಈ ಪ್ರಕ್ರಿಯೆ ಕಾಣುತ್ತದೆ. ಅದರಲ್ಲಿ ಯಾವುದೂ ನ್ಯೂನತೆಯಾಗದಿದ್ದಲ್ಲಿ ಖಂಡಿತವಾಗಿಯೂ ಪುನಃ ಸಂಘಟನೆ ಸಾಧ್ಯ.

1) ಕ್ಷೇತ್ರೋತ್ಪತ್ತಿ      1ನೇ ಭಾಗ        – ಪ್ರಕೃತಿ ಆಧರಿಸಿ
2) ವೀರ್ಯೋತ್ಪತ್ತಿ   2ನೇ ಭಾಗ        – ಚೈತನ್ಯ ಆಧರಿಸಿ
3) ಪ್ರಜೋತ್ಪತ್ತಿ      3ನೇ ಭಾಗ        – ಜ್ಞಾನ ಪ್ರಸರಣ ಆಧರಿಸಿ
4) ಸಂಘಟನೆ         4ನೇ ಭಾಗ        – ಚತುರೋಪಾಯ ಆಧರಿಸಿ 


ಈ ನಾಲ್ಕು ರೀತಿಯಲ್ಲಿಮೊದಲು ಕ್ಷೇತ್ರೋತ್ಪತ್ತಿ ಎಂಬುದನ್ನು ಆರಂಭಿಸಿ ಮೂಲಪ್ರಕೃತಿಯಲ್ಲಿ ಉದ್ದೀಪನ ತುಂಬಿಸಿ ಪ್ರಕೃತಿಗಾನದಿಂದ ಶಕ್ತ್ಯುತ್ಪಾದನಾ ಕ್ರಿಯೆಗೆ ಇಳಿದ. ತನ್ಮೂಲಕ ಎಲ್ಲಾ ರಜೋಶಕ್ತಿಗಳನ್ನೂ ಒಗ್ಗೂಡಿಸಿ ಅದರಲ್ಲಿ ಮೂಲಚೈತನ್ಯ ಪ್ರಸರಣವಾಗುವಂತೆ ಮಾಡುವ ಪ್ರಯತ್ನ ಮಾಡಿದ. ಆಗ ರಜೋಶಕ್ತಿಯ ಮೂಲತತ್ವ ಲಕ್ಷ್ಮಿ ಪ್ರಾದುರ್ಭಾವವಾಯ್ತು. ಶತಾನಂದನ ಬೇಡಿಕೆಯಂತೆ ತನ್ನ ಪಾತ್ರಕ್ಕೆ ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹಾಗೇ ನನ್ನಲ್ಲಿ ಚೈತನ್ಯರೂಪದ ಬೀಜೋತ್ಪತ್ತಿಗೆ ನೀನು ಸಿದ್ಧತೆ ಮಾಡಿಕೊ ಎಂದು ಹರಸಿ ಹೊರಟುಹೋಯ್ತು. ಆಗ ಎರಡನೆಯ ಹಂತದ ಚೈತನ್ಯ ಬೀಜೋತ್ಪಾನೆಗೆ ಬೇಕಾದ ಚೈತನ್ಯಾರಾಧನೆ ಆರಂಭಿಸಿದ. ಮೂಲಶಕ್ತಿಯಲ್ಲಿ ಬೀಜವಾಪನ  ಮಾಡಬೇಕಾದಲ್ಲಿ ಅದಕ್ಕೆ ಸರಿಸಮನಾದ ಶಕ್ತಿಗಾಗಿ ಚಿಂತಿಸಿ ಸತತ ಹನ್ನೆರಡು ವರುಷ ಕಾಲ ನಾರಾಯಣೀ ಯಾಗ ಪ್ರಕ್ರಿಯೆ ನಡೆಸಿದ. ಅಲ್ಲಿಯೂ ಯಜ್ಞಕುಂಡದಲ್ಲಿ ಚೈತನ್ಯ ಪ್ರಕಟವಾಗಿ “ಅಯ್ಯಾ ಶತಾನಂದನೇ, ನಿನ್ನ ಸಂಕಲ್ಪವೇ ನನ್ನ ಸಂಕಲ್ಪ. ನಿನಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತೇನೆ. ನೀನು ಹಿಂದೆ ಆರಾಧಿಸಿದ ಮೂಲಪ್ರಕೃತಿಯು ನನ್ನ ಕೂಡಿ ಒಂದು ಗಂಡು ಶಿಶುವಿಗೆ ಜನ್ಮ ನೀಡುತ್ತದೆ. ಅದನ್ನು ಬೆಳೆಸಿ ಸದೃಢಗೊಳಿಸಿ ಕ್ಷಾತ್ರರಕ್ಷಣೆ ಮಾಡು. ಲೋಕಕಲ್ಯಾಣ ಮಾಡು. ಅತಿಯಾದಲ್ಲಿ ನಾನೇ ಬಂದು ನಿಗ್ರಹಿಸುತ್ತೇನೆ” ಎಂದು ನಾರಾಯಣೀಯ ಚೈತನ್ಯವು ಅಂತರ್ಧಾನವಾಯ್ತು. 

ಆಗ ಮೂರನೆಯ ಹಂತದ ಕಾರ್ಯವಾಗಿ  ಪ್ರಜೋತ್ಪತ್ತಿಯೆಂಬ ಯಾಗವಾರಂಭಿಸಿದ. ದಕ್ಷ, ತ್ವಷ್ಟೃ, ಕರ್ದಮಾದಿ ನಲವತ್ತು ಜನ ಪ್ರಜಾಪತಿಗಳನ್ನು ಕುರಿತು ಏಕಕಾಲದಲ್ಲಿ ಸಂವರಣ ಮಂತ್ರ ಪುರಸ್ಸರವಾಗಿ ಧ್ಯಾನ, ಜಪ, ಹೋಮ, ತರ್ಪಣ, ನಮಸ್ಕಾರಾದಿ ಸ್ತೋತ್ರ ಸಹಿತವಾಗಿ ನಡೆಸಲಾಗಿ ಮೂಲಪ್ರಕೃತಿಯು ಕುದುರೆಯ ರೂಪದಲ್ಲಿ ಮಂದಾರ ಪರ್ವತದ ತಪ್ಪಲಿನಲ್ಲಿ ಪ್ರತ್ಯಕ್ಷವಾಯ್ತು. ಹಾಗೇ ನಾರಾಯಣೀಯ ಶಕ್ತಿಯೂ ಕುದುರೆಯ ರೂಪದಲ್ಲಿ ಆ ಕುದುರೆಯನ್ನು ಕೂಡಿ ಒಂದು ಕುದುರೆಯ ಮುಖದ ಮಾನವ ಶಿಶುವಿಗೆ ಜನ್ಮವಿತ್ತು ಅವೆರಡೂ ಅಂತರ್ಧಾನವಾದವು. ಶತಾನಂದನು ಆ ಹಯಗ್ರೀವನನ್ನು ಸಾಕಿ ಸಲಹಿ ಪ್ರೌಢನನ್ನಾಗಿ ಮಾಡಿದ. ಅವನಿಗೆ ಹೈಹಯನೆಂದು ನಾಮಕರಣ ಮಾಡಿದ. ಮುಂದೆ ಅವನ ವಂಶವೇ ಹೈಹಯ ವಂಶ. ಶತಾನಂದನು ಹೈಹಯನನ್ನು ಸಕಲ ವಿಧ್ಯಾ ಪ್ರವೀಣನೂ, ವೀರ, ಶೂರನೂ, ಧರ್ಮನಿಷ್ಠನೂ, ಸತ್ಯ ಪರಾಯಣನೂ, ತ್ಯಾಗಿಯೂ, ಉದಾರಿಯೂ ಆಗಿ ರೂಪಿಸಿದ. ಅವನನ್ನು ಮುಂದಿಟ್ಟುಕೊಂಡು ಸಂಘಟನೆಗಾಗಿ ಐಕ್ಯಮತ್ಯವೆಂಬ ಮಹಾಯಾಗವನ್ನು ಮಾಡಿ ಲೋಕದಲ್ಲೆಲ್ಲಾ ಶಾಂತಿ ನೆಲಸುವಂತೆ ಮಾಡಿದನು. ಈ ವಿಶ್ವಜಿತ್ ಯಾಗದಲ್ಲಿ ಯಶವನ್ನೂ ಕಂಡನು. 

ಹೀಗೆ ನಾನಾರೀತಿಯ ಯಾಗಗಳನ್ನು ಮಾಡಿದ್ದನು. ಲೋಕಕಲ್ಯಾಣಕಾರಕವಾದ ಕಾರ್ಯಗಳಲ್ಲಿ ಶತಾನಂದನ ವರ್ಗವು ಅತೀ ಹೆಚ್ಚಿನ ಕಾರ್ಯಕುಶಲತೆಯನ್ನು ಹೊಂದಿದೆ. ಶತಾನಂದರ ಕೃತ್ಯವಾದ ಹೈಹಯ ವಂಶವು 12 ಲಕ್ಷ ವರ್ಷದಷ್ಟು ಕಾಲ ಆಳಿ ಬದುಕಿ ನಂತರ ಕ್ಷತ್ರಿಯರೆಲ್ಲಾ ದುಷ್ಟರಾಗುತ್ತಾ ಬಂದರು. ಅವರಿಗೆ ನಾಯಕನಂತಿರುವ ಕಾರ್ತವೀರ್ಯಾರ್ಜುನ ನ ಕಾಲದಲ್ಲಿ ಮಹಾವಿಷ್ಣುವೇ ಸ್ವತಃ ಪರಶುರಾಮನಾಗಿ ಅವತರಿಸಿ ಕ್ರೂರಿಗಳಾದ ಹೈಹಯವಂಶದ ಕ್ಷತ್ರಿಯರನ್ನೆಲ್ಲಾ ಒಂದೂ ಬಿಡದೆ ಕೊಂದು ದುಷ್ಪ್ರವೃತ್ತಿಯನ್ನು ತಡೆದ ವಿಚಾರ ಇದರ ಮುಂದಿನ ಫಲಶ್ರುತಿ ನಿಮಗೆಲ್ಲಾ ತಿಳಿದಿದೆ. ಅದರರ್ಥ ಒಂದು ಸಮಸ್ಯೆಗೆ ಪರಿಹಾರವೆಂದು ರೂಪಿಸಿದ ಸಿದ್ಧಾಂತವೇ ಮುಂದೆ ಸಮಾಜಕಂಟಕ ವಾಗಬಹುದು. ಹಾಗಾಗಿ ಮಾನವನು ತನ್ನ ಜೀವನದಲ್ಲಿ ಕೃತಕತೆ ಇಲ್ಲದೇನೇ ಸ್ವಾಭಾವಿಕ, ಸ್ವತಂತ್ರ, ಸರಳ ಜೀವನ ಆರಿಸಿಕೊಳ್ಳಬೇಕು. ಆಗ ಮಾತ್ರ ಪ್ರಕೃತಿ ನಿತ್ಯನೂತನ ನಿರಂತರವಾಗಬಹುದೆಂದು ಹೇಳುತ್ತಾ ಮುಂದಿನ ಋಷಿಮುನಿಗಳ ಲೇಖನಕ್ಕೆ ಮುನ್ನಡಿ ಇಡುತ್ತೇನೆ.

ಇಂತು,

ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು

ಕಣ್ವಾಶ್ರಮ, ತಲಪಾಡಿ.

No comments:

Post a Comment