Monday, 11 April 2016

ಜ್ಯೋತಿರಾಯುರ್ವೇದ: ೩. ವಾತಾವರಣ ಜನ್ಯ, ೪. ಪರಿಸರ ಜನ್ಯ, ೫. ದೈಹಿಕ ಅಶಕ್ತತೆ


ಹಿಂದಿನ ಲೇಖನದಲ್ಲಿ ಆಹಾರ ಜನ್ಯ ವಿಚಾರ ಸ್ಥೂಲವಾಗಿ ತಿಳಿಸಲಾಗಿದೆ. ಅದಕ್ಕೆ ಪೂರಕವಾಗಿ ಕೆಳಕಂಡ ಎರಡು ವಿಸ್ತೃತ ಲೇಖನಗಳನ್ನೂ ನೀಡಲಾಗಿತ್ತು:ಮೂರನೇಯದಾದ ವಾತಾವರಣ ಜನ್ಯವನ್ನು ಜ್ಯೋತಿರಾಯುರ್ವೇದ ರೀತ್ಯಾ ಈ ರೀತಿ ಗುರುತಿಸಬಹುದು. ಮುಖ್ಯವಾಗಿ ಋತುಮಾನ ವ್ಯತ್ಯಾಸ, ಮಳೆ, ಚಳಿ, ಸೆಕೆ ಕಾಲ ವ್ಯತ್ಯಾಸ, ಅದಕ್ಕೆ ಹೊಂದಿಕೊಂಡಂತೆ ಪ್ರಾದೇಶಿಕವಾಗಿ ಪೂರ್ವೋದಾಹರಣೆಯಂತೆ ಬರತಕ್ಕ ಖಾಯಿಲೆಗಳು ಮತ್ತು ಅದರ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು.

ಉದಾ:- ಮಲೆನಾಡು ಪ್ರಾಂತ್ಯ ಕೊಪ್ಪ. ಮಳೆಗಾಲ ಆರಂಭವಾದಾಗ ಸಹಜವಾಗಿ ಮಲೇರಿಯಾ ಜ್ವರದ ಕಾಟ ಸಹಜ. ಆ ವರ್ಷ ಆಗತಕ್ಕ ಮಳೆಯನ್ನು ಹೊಂದಿ ವಾತಾವರಣ ಅಧ್ಯಯನದಿಂದ ಖಾಯಿಲೆಯ ತೀವ್ರತೆಯನ್ನು ತಿಳಿದು ವೈಧ್ಯನು ವ್ಯವಹರಿಸಬೇಕಾಗುತ್ತದೆ. ಆದರೆ ಅದೇ ಬಯಲು ಸೀಮೆಯ ಕಡೆ ಈ ಸಮಸ್ಯೆ ಇರುವುದಿಲ್ಲ. ಋತುಮಾನ, ಮಳೆ, ಬೆಳೆ, ಪ್ರದೇಶ, ವಯಸ್ಸು (ರೋಗಿಯದ್ದು), ಲಿಂಗ, ಆಹಾರ ಪದ್ಧತಿ, ಇವೆಲ್ಲದರ ಸ್ಪಷ್ಟ ಪರಿಚಯ ವೈಧ್ಯರಿಗೆ ಇರಬೇಕಾಗುತ್ತದೆ. ಆಗ ಮಾತ್ರ ರೋಗ ಗುರುತಿಸಲು ಸಾಧ್ಯ.

        ಸಾಗರ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ಒಂದು ದಿನ ಸಂಜೆ ೭ ಗಂಟೆ ಹೊತ್ತಿಗೆ ಹಳ್ಳಿಯ ಕೆಲವರು ಒಮ್ಮೆಗೇ ಚಿಕಿತ್ಸಾಲಯಕ್ಕೆ ಬಂದರು. ಪ್ರತಿಯೊಬ್ಬಾರೂ ಗಂಭೀರ ಸ್ಥಿತಿಯಲ್ಲಿಯೇ ಇದ್ದರು. ಅವರನ್ನು ಕರೆತಂದವರು ಏನಾಗಿದೆಯೆಂದು ಗೊತ್ತಿಲ್ಲ ಡಾಕ್ಟರೇ! ೪ ಗಂಟೆ ಹೊತ್ತಿಗೆ ವಾಂತಿ ಮಾಡಿಕೊಂಡರು, ನಂತರ ಸುಸ್ತು, ಸಂಕಟ, ನೋವು, ಅಷ್ಟು ಮಾತ್ರ ಗೊತ್ತು. ಈಗ ಪ್ರಜ್ಞಾಹೀನರಾಗಿದ್ದಾರೆ ಎಂದರು. ಆಗ ಅಲ್ಲಿನ ಅನುಭವಿ ವೈಧ್ಯರಾದ  ಮಿತ್ರರು ಆಲೋಚಿಸಿದರು. ಹಿಂದಿನ ದಿನ ಗುಡುಗು ಸಿಡಿಲಿನ ಆರ್ಭಟದ ಮಳೆ ಬಂದಿತ್ತು. ಕೂಡಲೇ ಒಬ್ಬನನ್ನು ಕರೆದು ಕೇಳಿದರು, ನಿನ್ನೆ ಅಣಬೆ ತಂದಿದ್ದೀರಾ ಊರಿಗೆ? ಎಂದು. ಹೌದೆಂದ ಹಳ್ಳಿಗನ ಮಾತಿನ ಮೇರೆಗೆ ವಿಷಯುಕ್ತ ಅಣಬೆ ತಿಂದಿರಬಹುದೆಂದು ಕೂಡಲೇ ಚಿಕಿತ್ಸೆ ಆರಂಭಿಸಿ ಎಲ್ಲರನ್ನೂ ಉಳಿಸಿಕೊಟ್ಟರು. ಇದೇ ವೈಧ್ಯ ವೃತ್ತಿಯ ಸಾರ್ಥಕತೆ. ಅವರಿಗೆ ಋತುಮಾನಗಳ ಪರಿಚಯ ಇದ್ದುದರಿಂದಾಗಿ ಅವರು ತಿಂದ ಆಹಾರದ ದೋಷವೇನೆಂದು ಗುರುತಿಸಿದರು. ಕೂಡಲೆ ಚಿಕಿತ್ಸೆ ಸಿಕ್ಕಿತು. ಬೇರೆ ಯಾವುದೇ ವಿಧಾನವೂ ಇಷ್ಟು ಕ್ಷಿಪ್ರಗತಿಯಲ್ಲಿ  ಸಾಧ್ಯವಿಲ್ಲ. ಹಾಗಾಗಿ ಜ್ಯೋತಿಷ್ಯದ ಮುಖೇನ ಪ್ರಾಕೃತಿಕ ವಾತಾವರಣ ಜನ್ಯ ಸಮಸ್ಯೆಯ ಅರಿವಿದ್ದಲ್ಲಿ ವೈಧ್ಯನು ಸಮರ್ಥನಾಗಬಹುದು.

ಈಗ ಪರಿಸರ ಜನ್ಯವೆಂಬ ೪ನೇ ವಿಚಾರ ಬರೆಯುತ್ತೇನೆ. ಈಗಿನ ಅಲರ್ಜಿ ಎನ್ನುವ ಒಗ್ಗದಿರುವಿಕೆ ಎಂಬ ಕೆಲ ರೀತಿಯ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಅದನ್ನೇ ಅಲರ್ಜಿ ಎಂದು ಗುರುತಿಸಿದರು. ಅದರ ಬಗ್ಗೆ ತಿಳಿಯಲು ಪರಿಸರದ ಪರಿಚಯ ವೈಧ್ಯರಿಗೆ ಅತೀ ಅಗತ್ಯ. ಇದು ಈಗ ಮಾನವ ಜನ್ಯ ಎಂದಾಗಿಬಿಟ್ಟಿದೆ. ಏಕೆಂದರೆ ಪರಿಸರವನ್ನು ಮಾನವನೇ ಹೆಚ್ಚು ಹಾಳುಗೈಯ್ಯುತ್ತಿರುವುದಲ್ಲವೇ? [ಓದಿರಿ:- ಭಾರತದ ನಗರಗಳಲ್ಲೆಲ್ಲ ಕಸ ಕಸ ಕಸ]

ಇನ್ನು ದೈಹಿಕ ಅಶಕ್ತತೆ ಎಂಬ ೫ನೇ ವಿಚಾರ ನೋಡೋಣ. ಪ್ರತಿಯೊಬ್ಬನಿಗೂ ಒಂದು ಪ್ರಮಾಣದ ದೈಹಿಕ ಶಕ್ತಿ, ಸಬಲತೆ, ಜ್ಞಾನಶಕ್ತಿ, ಅಂತರ್ಯಶಕ್ತಿ, ಧಾರಣಾಶಕ್ತಿ, ಇವುಗಳ ವ್ಯತ್ಯಾಸವಿರುತ್ತದೆ. ಅದನ್ನು ಆ ವ್ಯಕ್ತಿಯ ಜಾತಕದ ಮುಖೇನ ಪರಿಹರಿಸಿಕೊಳ್ಳಬಹುದು.


ಉದಾ:- ಒಬ್ಬನಿಗೆ ತಾನೊಬ್ಬ ಪುಟ್‍ಬಾಲ್ ಆಟಗಾರನಾಗಬೇಕೆಂಬ ಬಯಕೆ ಇರುತ್ತದೆ. ಆದರೆ ಅವನಿಗೆ ಅದಕ್ಕೆ ಸೂಕ್ತ ದೇಹದಾರ್ಢ್ಯತೆ ಇರುವುದಿಲ್ಲ. ಹಾಗಾಗಿ ಅವನ ಪ್ರಯತ್ನ ನಿಷ್ಫಲವಾಗಬಹುದು. ಆದರೆ ಅವನು ನಿಷ್ಪ್ರಯೋಜಕನೆಂದು ಅರ್ಥವಲ್ಲ. ಉಳಿಕೆ ಕಲಾವಿಧ್ಯೆಯಲ್ಲಿ ಅವನು ನಿಪುಣನಾಗಬಲ್ಲ. ಅವನಿಗೆ ಸೂಕ್ತವಾದ ಪರಿಸರ ಮತ್ತು ತಿಳುವಳಿಕೆ ಕೊಟ್ಟಲ್ಲಿ ಉತ್ತಮ ಕಲಾವಿದನಾಗಬಲ್ಲ. ಯಾರಿಗೆ ದೇಹದಾರ್ಢ್ಯತೆ ಇರುವುದಿಲ್ಲವೋ ಅವರ ಬೌದ್ಧಿಕತೆ ಮತ್ತು ಗ್ರಹಣಶಕ್ತಿ ಹೆಚ್ಚಿರುತ್ತದೆ. ಅದಕ್ಕೆ ಪೂರಕವಾಗಿ ಅವನನ್ನು ರೂಪಿಸಿದಲ್ಲಿ ಉತ್ತಮವಲ್ಲವೆ? ಹಾಗಾಗಿ ದೇಹ ವಿಜ್ಞಾನಾಧಾರಿತ ಮತ್ತು ಜ್ಯೋತಷ್ಯಾಧಾರಿತ ಸಲಹೆ ಸೂಕ್ತವಾಗಿ ಕೊಟ್ಟಲ್ಲಿ ಸಾರ್ಥಕವಲ್ಲವೇ?

ಅಕರ:- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ಋತ್ವಿಕ್ ವಾಣಿ ಮಾಸಪತ್ರಿಕೆ. 
ಆಧಾರ:- ಅತೀ ಪ್ರಾಚೀನವಾದ ಲಕ್ಷಾಂತರ ಶ್ಲೋಕವುಳ್ಳ ಬ್ರಾಹ್ಮಿ ಭಾಷೆಯಲ್ಲಿರುವ ಶಾರ್ಙ್ಘ್ಯಧರ ಪ್ರಣೀತ ಜ್ಯೋತಿರಾಯುರ್ವೇದ ಸಂಹಿತಾ.

No comments:

Post a Comment