Sunday, 17 April 2016

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೨೦ (ಭಾಗ ೨)

  ಈ ಅಧ್ಯಾಯದಲ್ಲಿ ಹದಿನೆಂಟು ಶ್ರೇಣಿಗಳಲ್ಲಿ ಅಂತರ್ ಸಾಹಿತ್ಯವು ದೊರೆಯುವುದನ್ನು ಸೂಚಿಸಿದ್ದಾನೆ. ಕೃಷ್ಣನು ನೇಮಿ ತೀರ್ಥಂಕರನ ಶಿಷ್ಯನಾದ ಕಾರಣದಿಂದ 'ನೇಮಿಯತಮ್ಮ ಕಾಮ' ಎಂದು ಕೃಷ್ಣನನ್ನು ಸೂಚಿಸಿದ್ದಾನೆ. ಕೃಷ್ಣನು ಮಹಾಭಾರತಯುದ್ಧದಲ್ಲಿ ಹಿಂಸೆಗೆ ಸಾಕ್ಷಿಯಾದರೂ, ಆಗಮದೊಳಗೆಲ್ಲ ಜನರಿಗೆ ಮನದೊಳಗೇ ಅಹಿಂಸೆಯನ್ನು ಬೋಧಿಸಿ, ಶಮ; ದಮ; ಇಂದ್ರಿಯ ನಿಗ್ರಹ; ವಿಜಯಾದಿಗಳನ್ನು ನೀಡಿ, ದಾರಿತಪ್ಪಿದವರನ್ನು ಹಿಂಬಾಲಿಸಿ, ಅವರನ್ನು ಬದ್ಧಿಯ ವಶಕ್ಕೆ ನೀಡಿದ ಯೋಗೀಶ್ವರನೆಂದು ಸೂಚಿಸಿದ್ದಾನೆ. ತನ್ನ ಕಾವ್ಯದಿಂದ ಹೊಸಮಾನವರ ಸೃಷ್ಟಿಗೆ ಕಾರಣವಾಯಿತೆಂದು ಹೇಳಿರುವ ಕುಮುದೇಂದುವು ದಿವ್ಯ ಪದ್ಧತಿಗ್ರಂಥಗಳ ಸಾರ ಸರ್ವಸ್ವವನ್ನೂ ಮೂರರಿಂದ ಗುಣಿಸುತ್ತ ತಿಳಿದುಕೊಂಡು ನವಮಾಂಕ ಪದ್ಧತಿಯಲ್ಲಿ, ರಸಸಿದ್ಧಿಪ್ರಕ್ರಿಯೆ, ದಾಂಪತ್ಯ ವಿಜ್ಞಾನ, ಯಶಸ್ಸು, ಆಯಸ್ಸಿನ ವೃದ್ಧಿ ಇತ್ಯಾದಿ ಸಕಲ ವಿಚಾರಗಳನ್ನೂ ಸಂಯೋಗಗೊಳಿಸಿ, ಕಾವ್ಯರಚನೆ ಮಾಡಿರುವುದಾಗಿ ತಿಳಿಸಿದ್ದಾನೆ. ವೇದಮಂತ್ರಗಳಲ್ಲಿ ಇರುವುದು, ಮಧ್ಯಮ ಸಂಖ್ಯಾತ ಬ್ರಾಹ್ಮಣಗಳಲ್ಲಿರುವುದು, ಬ್ರಾಹ್ಮಿ-ಸೌಂದರಿಯರ ಅಂಕಾಕ್ಷರಗಳ ಧವಲಗಳಲ್ಲಿರುವುದು ಎಲ್ಲವೂ ಒಂದೇ ಎಂದು ಸ್ಪಷ್ಟಪಡಿಸಿದ್ದಾನೆ. ವ್ಯಾಸ ಪ್ರಣೀತವಾದ ಜಯಕಾವ್ಯದೊಂದಿಗೆ ಋಗ್ ಮಂತ್ರಗಳೂ ಈ ಕಾವ್ಯದಲ್ಲಿ ಅಡಕವಾಗಿವೆಯೆಂದು ಸೂಚಿಸಿದ್ದಾನೆ.

  ಸಿವಪಾರ್ವತೀಶನ ಗಣಿತದ ಶ್ರೀಕಂಠದನಿಯ ತಾಳೆಯೋಲೆಗಳ ಸುವಿಶಾಲ ಪತ್ರದಕ್ಷರದ ಭೂವಲಯಕೆ, ಸವಿಸ್ತರ ಕಾವ್ಯಕೆ ನನ್ನ ನಮಹವು ಎಂದು ವಂದಿಸಿರುವುದನ್ನು ಗಮನಿಸಿದಾಗ, ಕಾವ್ಯವು ಸುಶ್ರಾವ್ಯವಾಗಿ ಹಾಡುವುದಕ್ಕೆ ಒಗ್ಗುವಂತಿದೆ, ದೊಡ್ಡದಾದ ತಾಳೆಯೋಲೆಗಳ ಪತ್ರದಲ್ಲಿ ಅಕ್ಷರಗಳ ರೂಪದಲ್ಲಿ ಇದ್ದಿತೆಂಬ ಖಚಿತವಾದ ಮಾಹಿತಿಯು ದೊರೆಯುತ್ತದೆ. ಅಕ್ಷರಲಿಪಿಯ ಪ್ರತಿಯು ಲುಪ್ತವಾಗಿ; ಅಂಕಲಿಪಿಯ ಪ್ರತಿಯು ಮಾತ್ರವೇ ಉಳಿದುಬಂದಿದ್ದು ಈಗ ಅದೂ ವಿನಾಶದ ಹಾದಿ ಹಿಡಿದಿದೆ ಎಂದು ತಿಳಿಯಬೇಕಾಗಿದೆ. ಜ್ಞಾನದ ವಿಚಾರಲ್ಲಿ ನಾವು ಕನ್ನಡಿಗರು ಹೊಂದಿರುವ ನಿರ್ಲಕ್ಷ್ಯಕ್ಕೆ ಈ ಗ್ರಂಥದ ಅವಗಣನೆಯು ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

  ಜೈನ ಸಂಪ್ರದಾಯದವರ ಪರಮಪವಿತ್ರವಾದ ಪಂಚಧವಲಗಳೂ ಈ ಸಿರಿಭೂವಲಯದಲ್ಲಿ ಅಡಕವಾಗಿವೆಯೆಂದು ಸೂಚಿಸಿದ್ದಾನೆ. ಣವಕಾರ ಮಂತ್ರವು ಜಗತ್ತಿನಲ್ಲಿ ಅನಾದಿಯಾದುದು. ಇವು ಬಹಳ ವರ್ಣನಾತ್ಮಕವಾಗಿವೆ. ನಾನೇ ಇಂದ್ರನೆಂಬ ಪದವಿಯಿತ್ತು ಮುಕ್ತಿಗೆ ಒಯ್ಯುತ್ತದೆ. ಮಹಿಳೆಯರು ಮಹನೀಯರಾಗುತ್ತಾರೆ ಎಂದು ಘೋಷಿಸಿದ್ದಾನೆ!  

ಮಣಿಮಯ ಬಿಂಬಗಳ್ ಗೆರಗುತ ನಾನಿಂದು ಗಣಿತವ 
ಸಿದ್ಧಾಂಕಕ್ರಮದಿ ಎಣಿಸುತಲೀಗ ಭೂವಲಯಸಿದ್ಧಾಂತದ 
ಗುಣಗಳ ಕಥೆಯ ಪೇಳುವೆನಾಲಿಪುದು ಎಂದು ಸೂಚಿಸಿದ್ದಾನೆ. 

: (ಕ್:) ಎಂಬ ಅಕ್ಷರವು ಗಣಿತಕ್ಕೆ ಬರುವುದೆಂದು ತಿಳಿಸಿದ್ದಾನೆ. (ಈಗಲೂ ಬೀಜಗಣಿತದಲ್ಲಿ ಸೂತ್ರಗಳನ್ನು ಬಿಡಿಸುವಲ್ಲಿ ಇದರ ಉಪಯೋಗವಾಗುತ್ತಿರುವುದನ್ನು ಗಮನಿಸಬಹುದು) ಇದು ೬೩ನೆ ಅಕ್ಷರ. 

ಭೂವಲಯಾಗ್ರದ ಸಿದ್ಧತ್ವವಹಿಸೆ ಸಮಸ್ತಭೂವಲಯಾ; 
ಹಸಿವು ನೀರಡಿಕೆ ಇತ್ಯಾದಿಗಳ ಹದಿನೆಂಟು ಕುಸಿಯುವ 
ದೋಷಗಳನ್ನು ಇಲ್ಲವಾಗಿಸುವ ಕಾವ್ಯ ಎಂದು ಸೂಚಿಸಿದ್ದಾನೆ. • ಕಳ್ವಪ್ಪು
 • ಯಲವಭೂರು
 • ನಂದಿಯರ ಆವರ್ತ
 • ಅಯ್ದಾ
 • ಮೈದಾಳ
 • ಕೈದಾಳ
 • ಪೆನುಕೊಂಡೆ
 • ಕುಚಂಗಿ
 • ಸೈಗೊಟ್ಟಸಿವನೂರು
 • ಮಲೆಯೂರು
 • ಕುಸುಮದಪುರ
 • ಕುಂದಾಪುರ
 • ಸಿದ್ಧಾಪುರ
 • ಗೇರುಸೊಪ್ಪೆ
 • ಸಾಗರ
 • ನೀಲಗಿರಿ 

ಎಂಬುದಾಗಿ ಹಲವಾರು ಸ್ಥಳನಾಮಗಳನ್ನು ಹೇಳಿ

 • ಕೊಂಗುಣಿ
 • ಸಾಳಗುರುಗಳಚರಿಗೆ
 • ದ್ರಮಿಳರ ಅರಸೊತ್ತಿಗೆಯ ಶಿವಜಿನವಿಷ್ಣುಕಂಚಿ
 • ತಿರುಪ್ಪಳಮಾಗು
 • ತಿರುಕ್ಕುರಳಕೊಂಡ್ರಮ್
 • ಪೊನ್ನೂರ್
 • ಮೂನೂಲ್‌ತಿರುಮಲೆ
 • ಆಳ್ವಾರರೂರು
 • ಮೀನಾಕ್ಷಿ ಕಾಮಾಕ್ಷಿಕೋಯಿಲ್ 


ಎಂಬದಾಗಿ ದಕ್ಷಿಣ ಭಾರತದ ಹಲವಾರು ಸ್ಥಳಗಳ ಹೆಸರು ಸೂಚಿಸಿದ್ದಾನೆ.

  ಸ್ವಾತ್ಮನ ಧರ್ಮವೇ ನಿಜವಾದ ಹಿತ ಎನ್ನುವ ಜನರು ಬ್ರಹ್ಮನ ಪೂಜೆಯನ್ನೇಕೆ ನಿಲ್ಲಿಸಿದರು? ಎಂಬ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾನೆ! ಅಮೋಘವರ್ಷಾಂಕನು ತನ್ನ ರಾಜ್ಯದಲ್ಲಿ ಜನರೆಲ್ಲರೂ ಅಣುವ್ರತವನ್ನಾಚರಿಸಿ, ಜೈನಧರ್ಮವನ್ನು ಪರಿಪಾಲಿಸಬೇಕೆಂಬ ಆಜ್ಞೆಮಾಡಿದ್ದನ್ನು ಸೂಚಿಸಿದ್ದಾನೆ. ಬೆಳೆದ ಧಾನ್ಯಗಳನ್ನು ರಾಜನಿಗೆ ತಂದೊಪ್ಪಿಸುವುದೇ ತೆರಿಗೆ ಹಾಗೂ ಅನ್ನದಾನವಾಗಿತ್ತೆಂದು ತಿಳಿಸಿದ್ದಾನೆ. ಗಿರಿ; ಗುಹೆ; ಗಿಡದಡಿಯಲ್ಲಿ ಸೇನವನಗಳಲ್ಲಿರುತ್ತಿದ್ದ ಸಾಧುಸಂತರನ್ನೆಲ್ಲ ಗೌರವ ಪೂರ್ವಕವಾಗಿ ಸತ್ಕರಿಸಿ ಅನ್ನದಾನನೀಡುತ್ತಿದ್ದ ಕ್ರಮವನ್ನು ಸೂಚಿಸಿದ್ದಾನೆ. ಋಷಿಮುನಿಗಳಿಗೆ, ಜೈನಸಾಧು ಸಂತರಿಗೆ ಸಿಗುತ್ತಿದ್ದ ಗೌರವವನ್ನು ಕುರಿತು ವಿವರಿಸುವುದರೊಂದಿಗೆ ೨೦ನೇ ಅಧ್ಯಾಯವು ಮುಕ್ತಾಯವಾಗುತ್ತದೆ.

*    *     *

                                                            ಪುನರ್ ಅಧ್ಯಯನ ಹಾಗೂ ಪ್ರಚಾರ
- ಹೇಮಂತ್ ಕುಮಾರ್ ಜಿ.

ಆಕರ:- ಸುಧಾರ್ಥಿ, ಹಾಸನ ಇವರ "ಜಗತ್ತಿನ ಹತ್ತನೇ ಅಚ್ಚರಿ" ಹಾಗೂ "ಸಿರಿಭೂವಲಯ ಸಾರ" ಪುಸ್ತಕಗಳು.

No comments:

Post a comment