Sunday, 17 July 2016

ನಮ್ಮ ಋಷೀ ಪರಂಪರೆ-೫ : ವಸಿಷ್ಠರು-೧


ಕಲ್ಪಾಂತರಗಳಿಂದ ಇಂದಿಗೂ ಸದೇಹರಾಗಿರುವ
೯೦ ಅಡಿ ಎತ್ತರ ಉಳ್ಳ ವಸಿಷ್ಠ ಋಷಿವರೇಣ್ಯರು

ಲೋಕಮುಖದಲ್ಲಿ ಮೈತ್ರವರುಣಿಯರ ಮಗನೆಂದೂ, ಬ್ರಹ್ಮಮಾನಸ ಪುತ್ರನೆಂದೂ ಪ್ರಸಿದ್ಧರು. ಇವರ ಇತಿಹಾಸ ದೀರ್ಘಕಾಲೀನ. ಎಲ್ಲಿ ಆರಂಭ? ಎಲ್ಲಿ ಮುಕ್ತಾಯ? ಕಂಡು ಬರುವುದಿಲ್ಲ. ಆದರೆ ಈಗಲೂ ಪ್ರಕಟಣೆಯಲ್ಲಿರತಕ್ಕ ವಿಶಿಷ್ಟ ವ್ಯಕ್ತಿಯೇ, ಋಷಿಯೇ, ಬ್ರಹ್ಮರ್ಷಿಯೇ, "ವಸಿಷ್ಠರು". ಇಂತಹಾ ಮಹಾತ್ಮರ ಬಗ್ಗೆ, ಅವರ ಜೀವನದ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದೇನೆ; ಅವರ ಅನುಮತಿಯ ಮೇರೆಗೆ. ಮೊದಲು ವ್ಯಕ್ತಿ ಚಿತ್ರಣ ನೋಡೋಣ.

        ವಸಿಷ್ಠರು ಪುರಾಣೇತಿಹಾಸಗಳಲ್ಲಿ ಕಂಡು ಬಂದಂತೆ ಮೈತ್ರ+ವರುಣಿಯರ ಮಗನಾಗಲೀ ಅಥವಾ ಬ್ರಹ್ಮಮಾನಸ ಪುತ್ರರಾಗಲೀ ಆಧಾರ ಸಹಿತವಾಗಿ ಕಂಡು ಬರುವುದಿಲ್ಲ. ಹಾಗೂ ಕಲ್ಪ ಕಲ್ಪಾಂತರದಲ್ಲೂ ವಸಿಷ್ಠರು ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಹಾಗಾಗಿ ಈ ಮೇಲಿನ ಎರಡೂ ವಾದವೂ ನಿರ್ಬಲವಾಗುತ್ತದೆ. ಈ ಮಂತ್ರ ಗಮನಿಸಿ:

ಋಗ್ವೇದ ಮಂಡಲ-೭, ಸೂಕ್ತ-೪, ಮಂತ್ರ-೪
ಅಯಂ ಕವಿರಕವಿಷು ಪ್ರಚೇತಾ ಮರ್ತೇಷ್ವಗ್ನಿರಮೃತೋ ನಿ ಧಾಯಿ |
ಸ ಮಾ ನೋ ಅತ್ರ ಜುಹುರಃ ಸಹಸ್ವಃ ಸದಾ ತ್ವೇ ಸುಮನಸಃ ಸ್ಯಾಮ ||

ನೇರವಾಗಿ ಮರ್ತ್ಯವ್ಯಾಪ್ತಿಯ ಸಂದೇಶವನ್ನು ಯಾರೂ ಹೇಳದ ರೀತಿಯಲ್ಲಿ ವಿವರಿಸಿದ್ದಾರೆ. ಶುದ್ಧ ಕರ್ಮಠರಾದ ವಸಿಷ್ಠರು ಕರ್ಮಕಾಂಡ ಪ್ರವರ್ತಕರು ಎಂಬುದೂ ಇದರಿಂದ ಸಿದ್ಧವಾಗುತ್ತದೆ. ಮರ್ತ್ಯರಿಗೆ ಕರ್ಮವೇ ಪ್ರಧಾನವೆಂದೂ, ಕರ್ಮ ಚಾರಿತ್ರ್ಯದಿಂದ ದೇವ ದೇವೋತ್ತಮನಾಗಬಹುದೆಂದೂ, ಜ್ಞಾನವು ಕರ್ಮದಿಂದ ಸಿದ್ಧವೆಂದೂ ಪ್ರತಿಪಾದಿಸಿದ ಮಹಾತ್ಮರಿವರು. ಜೀವರಿಗೆ ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಯೇ ಪ್ರಧಾನವೆಂದೂ ತನ್ಮೂಲಕ ಸಂಜನಿಸುವುದು ಜ್ಞಾನಶಕ್ತಿಯೆಂದೂ ಪ್ರತಿಪಾದಿಸಿದ ಕರ್ಮವಿಪಾಕ ಸಿದ್ಧಾಂತವನ್ನು ಕೊಟ್ಟರು. ಅದು ಸಕಲ ಚರಾಚರಗಳೆಲ್ಲವೂ ಒಂದಲ್ಲಾ ಒಂದು ಕರ್ಮ ಚೇಷ್ಟಿತವೇ. ಅದನ್ನು ವಿಪಾಕಗೊಳಿಸಿಕೊಂಡಲ್ಲಿ ಮಾತ್ರಾ ಜ್ಞಾನ ಪ್ರಕಟವೆಂದು ಸಾಧಿಸಿ ತೋರಿಸಿಕೊಟ್ಟವರು. ಇಂತಹಾ ಶ್ರೇಷ್ಠ ಸಾಧಕರ ವಾಣಿಯಲ್ಲೇ ಅವರ ಜೀವನೇತಿಹಾಸವನ್ನು ದಾಖಲಿಸುವುದೊಂದು ಆನಂದ. ಈ ನೆಲೆಯಲ್ಲಿ ಆತ್ಮಸಂತೋಷವೆಂಬ ನೆಲೆಯಲ್ಲಿ ವಿವರಿಸುತ್ತೇನೆ.

        ಆರಂಭ ಬ್ರಹ್ಮಕಲ್ಪದಲ್ಲಿ ಒಂದು ಘಟನೆಯನ್ನು ಆಧರಿಸಿ ನೋಡಿದಲ್ಲಿ ಈ ವಸಿಷ್ಠರು ಬ್ರಹ್ಮ ಮಾನಸಪುತ್ರರಲ್ಲವೆಂದು ಸ್ಪಷ್ಟವಾಗುತ್ತದೆ. ಅದರಂತೆ ವಿಶ್ಲೇಷಣೆಗೆ ಒಳಪಡಿಸಿದಾಗ ಇವರು "ಸ್ವಯಂಭೂ" ಎಂಬುದೂ ಸಾಬೀತಾಗುತ್ತದೆ. ಹಾಗೂ ಆ ಕಾಲೀನ ಒಂದು ಘಟನೆಯೂ ಇದಕ್ಕೆ ಪೂರಕವಾಗಿರುತ್ತದೆ. ಅದೇನೆಂದರೆ ಋಗ್ವೇದದಲ್ಲಿ ಒಂದು ಮಂತ್ರ ಒಂದು ಘಟನೆಯನ್ನು ಹೇಳುತ್ತದೆ. ಅದೇನೆಂದರೆ "ವ್ಯೇತು ದಿದ್ಯುದ್ವಿಷಾಮಶೇವಾ ಯುಯೋತ ವಿಷ್ವಗ್ರಪಸ್ತನೂನಾಮ್" - ದ್ವಿಪದಾ ಛಂದಸ್ಸಿನಲ್ಲಿದೆ ಈ ಮಂತ್ರ. ಇದಕ್ಕೆ ವೇದ ರೀತ್ಯಾ ವಸಿಷ್ಠರೇ ದ್ರಷ್ಟಾರರು. ಅದು ಅವರ ಮನೋಭೂಮಿಕೆಯಿಂದ ಪರಿಷ್ಕರಣೆಗೊಂಡು ಹೊರಹೊಮ್ಮಿದ ಉದ್ಗಾರ. ಹಾಗೂ ಇಡೀ ವಿಶ್ವವೇ ಆಪಃ - ಅಂದರೆ ನೀರಾವಾರವಾಗಿರುವಾಗ ಇಲ್ಲಿ ದ್ವೇಷಾಸೂಯೆಗಳಾಗಲೀ, ನಾನು+ನೀನೆಂಬ ಭೇದವಾಗಲಿ ಇಲ್ಲ; ಆದರೆ ನೀರಿನಿಂದ ಆವರಿಸಲ್ಪಟ್ಟಿದೆ. ಅಂದರೆ ನೀರು = ಜೀವ. ಅಂದರೆ ಆಗಲೇ ಜೀವರಿಂದ ಆವರಿಸಲ್ಪಟ್ಟಿದೆಯೆಂದೇ ಅರ್ಥವಾಗುತ್ತದೆ. ಅದನ್ನಾಧರಿಸಿ ತನು = ರೂಪ ವ್ಯಾವೃತ್ತವಾಗಿದೆ. ಅಂದರೆ ಪರಿಪೂರ್ಣ ಜ್ಞಾನಾವೃತ್ತವಾದ ಬ್ರಹ್ಮವಿದೆ ಎಂದೇ ಅರ್ಥವಲ್ಲವೇ? ಹಾಗಿದ್ದರೆ ನಂತರ ಬಂದ ಬ್ರಹ್ಮನಿಗೆ, ಅಂದರೆ ಕಮಲೋದ್ಭವನಿಗೆ ಸಿಕ್ಕಿದ ಸೃಷ್ಟಿಯ ಅಧಿಕಾರ ನಂತರದ್ದೇ ಎಂದಲ್ಲವೆ? ಹಾಗಿದ್ದ ಮೇಲೆ ಮೂಲಚೈತನ್ಯಯುಕ್ತವಾದ ಒಂದು ಜೀವಕೋಟಿ ಪ್ರಭೇದವಿತ್ತು. ಅದರಲ್ಲಿ ವಸಿಷ್ಠರೊಬ್ಬರಾಗಿ ಗುರುತಿಸಿ ಉದ್ಭವಿಸಿದರು ಎಂದೇ ಅರ್ಥವಲ್ಲವೇ?

        ಹಾಗೇ ಅಥರ್ವದಲ್ಲಿ ಒಂದು ಮಂತ್ರ ಉದಾಹರಿಸಿದಲ್ಲಿ ಇನ್ನೂ ಸ್ಪಷ್ಟವಾಗುತ್ತದೆ. "ನಾ ಶಂಖಾ ನಾ ಲಂಕಾ ನಾ ಜೀವ ಪುರುಹೇತಿನಃ | ನಾ ದ್ವಿಷೋ ನಾ ವಿಮ್ರೋತ ನಾ ದೇವ ಸಮಹರ್ಷಿಣಃ" ||  ಈ ಪ್ರಕೃತಿಯಲ್ಲಿ ತಾನು, ನಾನು, ನನ್ನದು ಎಂಬ ಯಾವುದೂ ಪ್ರತ್ಯೇಕವಾಗಿ ಗುರುತಿಸಲ್ಪಡುವುದಿಲ್ಲ, ವ್ಯವಹಾರವಿಲ್ಲ, ಪ್ರಕಟವಿಲ್ಲ, ಭಾವ, ಬೋಧನೆ ಇಲ್ಲ; ಹಾಗಾಗಿ ರಾಗದ್ವೇಷಗಳಿಲ್ಲದ್ದು ಎಂದಿದ್ದಾರೆ. ಮುಂದಿನ ಹಿರಣ್ಯಗರ್ಭ ಬ್ರಹ್ಮನ ಸೃಷ್ಟಿಯಲ್ಲಿ ಇವೆಲ್ಲಾ ಬೆರೆತಿರಬಹುದು ಎಂದರೆ ವಸಿಷ್ಠ ಇವರಿಗಿಂತ ಪೂರ್ವೀಕನೆಂದೇ ಅರ್ಥ. ಇಲ್ಲಿ ದೇವನಿಲ್ಲ, ಆದರೆ ಶಿವ ಇದೆ ಎಂದಿದ್ದಾನೆ. ಅಂದರೆ ಸರ್ವದಾ ಶುಭವಿದೆ ಎಂದೇ ಅರ್ಥ. ಅದು ಹೀಗಿದೆ "ಸಜೂರ್ದೇವೇಭಿರ್ವಪಾಂ ನಪಾತಂ ಕೃದ್ವಂ ಶಿವೋ ನೋ ಅಸ್ತು" ಎಂದಿದೆ ವೇದ. ಅಂದರೆ ಈ ಹಿರಣ್ಯಗರ್ಭನಿಗಿಂತಲೂ ಮೊದಲೇ ಸೃಷ್ಟಿ ಇತ್ತು, ಅದು ಶುಭಪ್ರದವಾಗಿತ್ತು, ಅಲ್ಲಿ ವಸಿಷ್ಠರು ಇದ್ದರು ಎಂದೇ ಅರ್ಥ. ಹಾಗೇ "ಧಾತಾ ಯಥಾ ಪೂರ್ವಮಕಲ್ಪಯತ್" ಎಂದಿದೆ ವೇದ. ಧಾತನೆಂಬ ಬ್ರಹ್ಮನೂ ಹಿಂದಿನಂತೆಯೇ ಸೃಷ್ಟಿ ಮಾಡಿದ ಎಂದಿದೆ ವೇದ. ಹಾಗಿದ್ದರೆ ಈ ಉದಾಹರಣೆ ಗಮನಿಸಿದರೆ ವಸಿಷ್ಠರು ಯಾವ ಕಲ್ಪದವರು ಎಂದು ಊಹಿಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿ ವಸಿಷ್ಠರನ್ನು ಈ ಬ್ರಹ್ಮ ಸೃಷ್ಟಿಯ ಹೊರಗಿಟ್ಟೇ ಚಿಂತಿಸುವ ಔಚಿತ್ಯ ಕಂಡುಬರುತ್ತದೆ. ಹಾಗೇ ಅವರು ರಾಗದ್ವೇಷಾದಿಗಳನ್ನೇ ಅರಿಯದವರೆಂದೂ ಕಂಡು ಬರುತ್ತದೆ. ಅದಕ್ಕೆ ಆಧರಿಸಿದ ಕೆಲ ಮುಖ್ಯ ಉದಾಹರಣೆ ಗಮನಿಸೋಣ. ಪ್ರಸಿದ್ಧ ಕರ್ಮಕಾಂಡ ಪ್ರವರ್ತಕರಾದ ಇವರು ಹೆಚ್ಚಾಗಿ ರಾಜ ರಾಜಾಧಿರಾಜರಿಗೆಲ್ಲಾ ಪುರೋಹಿತರಾಗಿದ್ದು ಕಂಡು ಬರುತ್ತದೆ. ಹಾಗೇ ಅವರ ಕರ್ಮಾಂಗ ಬದ್ಧತೆ, ಅಳತೆ, ವ್ಯಾಪ್ತಿ ಮೀರಿದ ಶಿಸ್ತು ಕೂಡ ಇವರಲ್ಲಿ ಕಂಡು ಬರುತ್ತದೆ. ಇದಕ್ಕೆ ಆಧರಿಸಿದ ಪುರಾಣೇತಿಹಾಸಗಳಲ್ಲಿ ಕಂಡು ಬರುವ ಕೆಲ ಉದಾಹರಣೆ ಗಮನಿಸೋಣ.

        ಸೂರ್ಯವಂಶಕ್ಕೆ ಪುರೋಹಿತರಾಗಿದ್ದರು. ದಶರಥನ ಪುತ್ರಕಾಮ್ಯೇಷ್ಟಿಯಾಗ ಮಾಡಿಸಲಿಲ್ಲ, ರಾಮನ ವನವಾಸ ತಪ್ಪಿಸಲಿಲ್ಲ, ಸೀತಾ ಪರಿತ್ಯಾಗ ತಡೆಯಲಿಲ್ಲ. ಹರಿಶ್ಚಂದ್ರನಲ್ಲಿ ಅತೀವ ಪ್ರೇಮ ವಿಶ್ವಾಸ ಇಟ್ಟವರು. ಅದಕ್ಕಾಗಿ ವಿಶ್ವಾಮಿತ್ರನಂತಹಾ ಶೀಘ್ರಕೋಪಿಗಳೊಂದಿಗೆ ವಿರೋಧ ಕಟ್ಟಿಕೊಂಡರು. ಹಾಗೇ ಹರಿಶ್ಚಂದ್ರನು ಜಲೋದರ ರೋಗದಿಂದ ಬಳಲುತ್ತಿದ್ದಾಗ ವರುಣಯಾಗ ಮಾಡಿಸಲಿಲ್ಲ. ಅದೆಲ್ಲ ಅವರವರ ಕರ್ಮವೆಂದೇ ನಿರ್ಣಯಿಸಿರುವ ಮಹನೀಯರು. ಸದೇಹನಾಗಿಯೇ ಸ್ವರ್ಗಕ್ಕೆ ಹೋಗುವ ಇಚ್ಛೆಯನ್ನು ಹೊಂದಿದ ತ್ರಿಶಂಕುವಿನ ಬಯಕೆಗೆ ಸೊಪ್ಪು ಹಾಕಲಿಲ್ಲ. ತನ್ಮೂಲಕ ತನ್ನೆಲ್ಲಾ ನೂರು ಮಂದಿ ಮಕ್ಕಳನ್ನೂ ವಿಶ್ವಾಮಿತ್ರ ಬಲಿ ಪಡೆದ, ಆದರೆ ವಸಿಷ್ಠರು ದುಃಖಿಸಲಿಲ್ಲ. ಶೋಕ, ವೀತ, ರಾಗ ಭರಿತರೆಂದರೆ ಇದೇ ಅಲ್ಲವೇ? ಸುಖ+ದುಃಖ ಸಮೇ ಕೃತ್ವಾ, ಲಾಭ+ಅಲಾಭ, ಜಯ+ಅಪಜಯಗಳಲ್ಲಿ ಸಮಭಾವ ಹೊಂದಿದ್ದರು. ಅಂದರೆ ಈ ಬ್ರಹ್ಮಸೃಷ್ಟಿಯ ಪೂರ್ವದವರೇ ಅನ್ನುವುದಕ್ಕೆ ಇದೊಂದು ಸಾಕ್ಷಿ. ಅದು ಅವರ ಮಾನಸಿಕ ಮಟ್ಟ, ಸಂಸ್ಕಾರ. ತನ್ನನ್ನು ನಿರಂತರ ದ್ವೇಷಿಸುತ್ತಾ, ವಿರೋಧಿಸುತ್ತಾ ಬಂದ ವಿಶ್ವಾಮಿತ್ರನನ್ನು "ಬ್ರಹ್ಮರ್ಷಿ" ಎಂದು ಘೋಷಿಸಿದ್ದು ವಸಿಷ್ಠರೇ. ವಿಶ್ವಾಮಿತ್ರನೂ ಬ್ರಹ್ಮನ ವರದಿಂದಲಾಗುವ ಬ್ರಹ್ಮರ್ಷಿ ಪಟ್ಟ ಬೇಡ, ವಸಿಷ್ಠರ ಅನುಗ್ರಹಪೂರ್ವಕವಾದ ಬ್ರಹ್ಮರ್ಷಿಯಾಗಬೇಕೆಂದ. ಅದರ್ಥವೇನು? ವಸಿಷ್ಠರು ಬ್ರಹ್ಮನಿಗಿಂತ ಹೆಚ್ಚಿನವರೆಂದಲ್ಲವೇ? ಪುರಾತನರೆಂದಲ್ಲವೇ?

        ಅಧಿಕಾರದಲ್ಲಿ ಬ್ರಹ್ಮನೇ ಹೆಚ್ಚು, ಅದನ್ನು ವಸಿಷ್ಠರೂ ಒಪ್ಪಿದವರೇ, ಆದರೆ ಬ್ರಹ್ಮನಿಗಿಂತಲೂ "ಕಾಲಾತೀತರು" ಎಂಬುದನ್ನು ವಿಶ್ವಾಮಿತ್ರ ಅರ್ಥಮಾಡಿಕೊಂಡಿದ್ದ. ಶಿವನು ಶತ್ರುಜಯಕ್ಕಾಗಿ ವಿಶ್ವಾಮಿತ್ರನಿಗೆ ಅನುಗ್ರಹಿಸಿ ಕೊಟ್ಟ ದಿವ್ಯಾಸ್ತ್ರಗಳು ವಸಿಷ್ಠರ ದಂಡದಲ್ಲಿ ಲೀನವಾಯ್ತು. ಅಂದರೆ ಈ ಸೃಷ್ಟಿ, ಸ್ಥಿತಿ, ಲಯದ ಈ ಬ್ರಹ್ಮಕಲ್ಪಕ್ಕೆ ಅತೀತರೆಂದರ್ಥವಲ್ಲವೇ? ಸದಾ, ಸಚ್ಚಿಂತನೆ, ಸತ್ಸಂಗ, ಸಜ್ಜನ ಸಹವಾಸ, ಸದ್ವರ್ತನಗಳೇ ಈ ಶಕ್ತಿಯೆಂದು ಸಾಧಿಸಿ ತೋರಿಸಿಕೊಟ್ಟವರು ಇವರು. ಈ ಪ್ರಪಂಚವನ್ನಾಳಿದ ಬಹುತೇಕ ರಾಜರು, ಚಕ್ರವರ್ತಿಗಳು, ಮನು, ಮುನಿಗಳೆಲ್ಲರಿಗೂ ಪುರೋಹಿತರಾಗಿ ಆಚಾರ್ಯರಾಗಿದ್ದು ವಿನೀತಭಾವದಿಂದಲೇ ಸೇವೆ ಸಲ್ಲಿಸಿದವರು. ಇಂತಹಾ ಶ್ರೇಷ್ಠ ವಾಗ್ಮಿ, ತಾಳ್ಮೆಯ ಪ್ರತಿರೂಪ, ಸತ್ಯಸಂಧ, ಜ್ಞಾನಿ, ಲೋಕಮಾನ್ಯ, ತಪಸ್ವಿ, ಬ್ರಹ್ಮರ್ಷಿಯಾಗಿದ್ದರೂ ಇವರಲ್ಲಿ ಈ ಭೌತಿಕಗುಣವಾದ ಕಾಮ, ಕ್ರೋಧಾದಿ ಗುಣಗಳು ತೋರಲೇ ಇಲ್ಲ. ಈ ಸೃಷ್ಟಿಯ ಭೌತಿಕ ಜೀವಾಳವೇ ಈ ಆರು ಗುಣಗಳು. ಅವಿಲ್ಲದೇ ಸೃಷ್ಟಿಯಿಲ್ಲ. ಹಾಗಿದ್ದಾಗ ಇವರು ಈ ಭೌತಿಕ ಸೃಷ್ಟಿಗೇ ಅತೀತರೆಂಬುದಕ್ಕೆ ಬೇರೆ ಸಾಕ್ಷಿ ಬೇಕೆ?

ಈ ಸೃಷ್ಟಿಯಲ್ಲಿ ಕಾಮ=ಇಚ್ಛೆ ಇರಲೇಬೇಕು. ಅದು ಸೃಷ್ಟಿಯ ನಡೆ ಅಥವಾ ಚಲನೆ. ಕ್ರೋಧವಿರಲೇ ಬೇಕು; ಅದು ಹಸಿವೆ ಹುಟ್ಟಿಸಲು, ಬದುಕನ್ನು ಜಯಿಸಲು. ಲೋಭವಿರಲೇ ಬೇಕು; ಬದುಕನ್ನು ಸಾಗಿಸಲು. ಮತ್ಸರವಿರಲೇಬೇಕು; ಸಾಧಕನಾಗಲು. ಅವೆಲ್ಲಾ ಅವವುಗಳ ಅಳತೆಯಲ್ಲಿದ್ದರೇನೇ ಸೃಷ್ಟಿ, ಪ್ರಕೃತಿ, ಜೈವಿಕ ಸಮಭಾವ, ಸದ್ಯೋಜಾತಾದಿ ಭವಿಷ್ಯ ನಿರ್ಣಯಗಳು. ಆದರೆ ವಸಿಷ್ಠರು ಈ ಸೃಷ್ಟಿಗೆ ಅತೀತರಾದ್ದರಿಂದ ಅವರಲ್ಲಿ ಈ ಯಾವ ಗುಣ+ದೋಷಗಳೂ ಕಂಡುಬರುವುದಿಲ್ಲ. ಅದಿಲ್ಲದ ಸೃಷ್ಟಿಯೊಂದು ಹಿಂದೆ ಇತ್ತು ಎನ್ನುವುದಕ್ಕೆ ವಸಿಷ್ಠರೇ ಉದಾಹರಣೆ. ಈ ಸೃಷ್ಟಿಯಲ್ಲಿ ಅದು ಸ್ವಾಭಾವಿಕ ಹಾಗೂ ಅದನ್ನು ಜಯಿಸುವುದೇ ಜೀವನ ಸಾರ್ಥಕತೆ ಎಂಬಂತೆ ಆಧ್ಯಾತ್ಮಗಳು ಬಿಂಬಿಸುತ್ತಿವೆ. ಹಾಗಿದ್ದರೆ ಈ ಸೃಷ್ಟಿಯಲ್ಲಿ ಈ ದೋಷಗಳನ್ನು ಬ್ರಹ್ಮನು ಏಕೆ ಸೇರಿಸಿದ? ಇದರರ್ಥವೇನು? ಇವನ್ನೆಲ್ಲಾ ಮೆಟ್ಟಿ ನಿಂತವರೇ ವಸಿಷ್ಠರೆಂದು ಸಾಬೀತು ಪಡಿಸಿದ್ದಾರೆ. ಕಾರಣ ಅವರಿಗೆ ಈ ಜನ್ಮಸಂಸ್ಕಾರವಿರಲಿಲ್ಲ; ಹಾಗಾಗಿ. ಇವರ ಬಗ್ಗೆ ಇವರು ನಮಗೆ ನೀಡಿದ ಲೋಕಕಲ್ಯಾಣಕಾರಕ ಕಾರ್ಯಗಳ ಬಗ್ಗೆ ಹೇಳುವುದಿದ್ದರೆ. ಒಂದೆರಡಲ್ಲ. ಅದರ ಕೆಲ ಮುಖ್ಯಾಂಶಗಳನ್ನು ನೋಡೋಣ. ಅದನ್ನು ಅನಿವಾರ್ಯ ಕಾರಣದಿಂದಾಗಿ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.

-      ಕೆ. ಎಸ್. ನಿತ್ಯಾನಂದ ಸ್ವಾಮೀಜಿ,
 ಸಂಸ್ಥಾಪಕರು,
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು


No comments:

Post a Comment