Thursday, 20 October 2016

ಮನೋರಂಜನೆ ಹೇಗಿರಬೇಕು?


ಇಂದು ಈ ಪ್ರಾಪಂಚಿಕದಿ ಅಜ್ಞಾನದಿಂ ನೊಂದು ತೊಳಲುವ

ಹಂದಿ ಮಾನವ ನಿನಗೆ ಮನೋರಂಜನೆಯ ಅರ್ಥವಿದೆಯೆ

ಇಂದೀವರನ ಚರಣಭಜನೆ ದಾಸರಿಗೆ ರಂಜನೆಯು ಧನಿಕನಿಗೆ ದಾನವೇ ರಂಜನೆಯು ಮಾನವಗೆ

ಚಂದದಿಂ ಸಹಬಾಳ್ವೆ ರಂಜನೆಯು ಮರದಿಂದ ಹಾರುವುದೆ

ರಂಜನೆಯು ಕೋತಿಗಳಿಗೆ ಕಾಣೈ ತರತರದ ಬಣ್ಣದುಡುಗೆಯು

ಇಂದಿರಾಮುಖಿಯರಿಗೆ ರಂಜನೆಯು ಅಂದಂದಿನನ್ನವೂ ದುಡಿಯುವುದೆ ದಾಸ್ಯತ್ವವೇ ರಂಜನೆಯು ಅಜ್ಞಾನಿಗೆ ||ಭೂರಿಭೋಜನವು ರಂಜನೆಯು ಉಂಬವಗೆ ಮನದಿ ಕಶ್ಮಲವಿರಲು

ದಾರಿಯಡವುವುದೆ ರಂಜನೆಯು ದೂರುವುದೆ ರಂಜನೆಯು ಚಾಡಿಕೋರನಿಗೆ

ಹೋರಿಗೆದ್ದರೆ ರಂಜನೆಯು ಮಲ್ಲನಿಗೆ ಮೋಸಗೈವುದೆ ರಂಜನೆಯು ಕಳ್ಳನಿಗೆ ಸಾರಿ ಬೊಗಳುವುದೆ ರಂಜನೆಯು ಶ್ವಾನಗೆ

ಬಾರಿಬಾರಿಗು ತನ್ನ ಹೊಗಳಿದರೆ ರಂಜನೆಯು ಜಿಪುಣನಿಗೆ ಜಾಣನೆಂದೆಂಬ

ಬರಿ ನುಡಿಯೊಂದು ಸಾಕುಪಕಾರಿಗೆ ವ್ಹಾ! ಎಂದರೇ ಸಾಕು ಭಾಗವತನಿಗೆ

ಭೂರಿಜನ ಸೇರಿರಲು ರಂಜನೆಯು ವಿಕಟನಿಗೆ ಆ ದೇವನಿಗೆ ರಂಜನೆಯು ಬೇಡುವ ಭಕುತರಿಲ್ಲದಿರೆ ಇದು ಸತ್ಯ ||


ಮೇಲ್ಕಂಡ ರೀತಿಯಲ್ಲಿ ಈ ಚರಾಚರ ಪ್ರಕೃತಿಯಲ್ಲಿ ಜೀವಿಗಳೆಷ್ಟು ವಿಧವೊ ಅಷ್ಟು ವಿಧ ಮನರಂಜನೆಯಿರುತ್ತದೆ. ಒಂದಕ್ಕೊಂದು ಭಿನ್ನ ವಿರುದ್ಧ ರೀತಿಯ ಮನೋರಂಜನೆ ಅವುಗಳ ಸ್ಥಿತಿ ಗತಿ ಹೊಂದಿ ಇರುತ್ತದೆ. ಇದು ಒಟ್ಟು ಜೀವಸಂಕುಲ ಆಧರಿಸಿಯಾಯ್ತು. ಆದರೆ ಮಾನವ ಹಾಗಲ್ಲ, ಮಾನವನಿಗೇ ಕೆಲ ವಿಶೇಷ ಮನರಂಜನೆ ಇದೆ. ಅದರ ಬಗ್ಗೆ ವಿಶ್ಲೇಷಣೆ ಮಾಡೋಣ.

        ಮುಖ್ಯವಾಗಿ ಮಾನವ, ಅವನ ಜೀವನ, ಜನ್ಮಾಧಾರಿತ ಋಣ, ಕರ್ಮ, ಉದ್ದೇಶಗಳಿಗೆ ಮನೋಭೂಮಿಕೆ ಇರುತ್ತದೆ. ಅದರಲ್ಲಿ ಸ್ಥಿರತೆ + ಚಂಚಲತೆ ಎರಡು ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಈ ಚಂಚಲ ಮನಸ್ಸಿಗೆ ಒಂದು ಉತ್ತಮ ಸಂಸ್ಕಾರ ಕೊಡುವ ಪ್ರಯತ್ನವೇ ಮನೋರಂಜನೆಯ ಉದ್ದೇಶ. ಇಲ್ಲಿ ಬೋಧಪ್ರದ, ಆಚರಣೀಯ, ಅನುಕರಣೀಯ, ಸಂಸ್ಕಾರಸಹಿತವಾದ ವಿಚಾರಗಳ ಜೊತೆಯಲ್ಲಿ ಸಂಗೀತ, ನೃತ್ಯ, ಆಟಗಳ ವಿಚಾರ ಅಡಕವಾಗಿರುತ್ತದೆ. ಈ ನಾಲ್ಕರಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಅದು ಮನರಂಜನೆಯೆನ್ನಿಸುವುದಿಲ್ಲ. ಹಾಗಾಗಿ ಭಿನ್ನ ಭಿನ್ನ ರೂಪದ ಪ್ರಾದೇಶಿಕತೆಗೆ ಒತ್ತು ಕೊಟ್ಟು ಹಲವು ಮನರಂಜನಾ ಪ್ರಕ್ರಿಯೆಗಳು ಚಾಲ್ತಿಯಲ್ಲಿ ಬಂದವು. ಅಂತಹಾ ಆಟಗಳನ್ನು ಅಲ್ಲಲ್ಲಿ ಪ್ರಾದೇಶಿಕವಾಗಿಯೇ ಅವುಗಳು ಸಾರ್ಥಕ, ಇನ್ನೊಂದು ಕಡೆಯಲ್ಲಿ ಅದು ಅಪಭ್ರಂಶ. ಹಾಗಾಗಿ ಮನೋರಂಜನೆಗಳು:-
೧. ವೃತ್ತಿ ಆಧರಿತ ಜಾತೀಯ ಆಟಗಳು,

೨. ಜ್ಞಾನಾಧಾರಿತ ಕಲಾಪ್ರಕಾರಗಳು,

೩. ಬೋಧಪ್ರದ ಮನರಂಜನೆಗಳು,

೪. ಸಂಸ್ಕಾರವಿಚಾರ ಪ್ರಚಾರೋದ್ದೇಶ ಮನರಂಜನೆಗಳು ಎಂದು ನಾಲ್ಕು ರೀತಿಯಲ್ಲಿ ವಿಭಾಗಿಸಬಹುದು.
ಅವುಗಳನ್ನು ವಿವರವಾಗಿ ವಿಶ್ಲೇಷಿಸುವುದು ಅಷ್ಟು ಸುಲಭವಲ್ಲ. ಆದರೆ ಪ್ರಸಕ್ತಕಾಲೀನ ವಿದ್ಯಮಾನ ಮತ್ತು ಮನೋರಂಜನಾಪ್ರವೃತ್ತಿ ಮಾತ್ರ ಇದಕ್ಕೆ ವಿರುದ್ಧ ಮತ್ತು ತೀರಾ ವಿಕೃತವಾಗಿದೆ. ಈಗ ಮನರಂಜನೆಯೆಂದರೆ ಏನೆಂದೇ ಅರ್ಥವಿಲ್ಲದೆ ಮನಸ್ಸಿಗೆ ವಿಕೃತ ಸಂಸ್ಕಾರ ಕೊಡುತ್ತಿದೆ. ಮತ್ತು ಶೇ. ೭೮ ಭಾಗ ಜನತೆ ಬರೇ ಟಿ.ವಿ., ಮೊಬೈಲ್, ಕಂಪ್ಯೂಟರ್ ಮಾಧ್ಯಮ ಮಾತ್ರ ಮನರಂಜನೆಯೆಂದು ತಿಳಿದಿದೆ. ಆದರೆ ಟಿ.ವಿ., ಕಂಪ್ಯೂಟರ್, ಮೊಬೈಲ್ ಮಾಧ್ಯಮಗಳು ತನ್ನ ಜವಾಬ್ದಾರಿಯನ್ನರಿಯದೆ ಕೇವಲ ಲಾಭದಾಯಕ ದೃಷ್ಟಿಯಿಂದ ವ್ಯವಹರಿಸುತ್ತಿರುವುದರಿಂದ ಟಿ.ವಿ., ಕಂಪ್ಯೂಟರ್, ಮೊಬೈಲ್ ಮಾಧ್ಯಮಗಳು ಜನಮಾನಸದ “ತಮಾಸುರ”ನಾಗಿ ಪರಿವರ್ತಿತವಾಗುತ್ತಿದೆ. ಅದನ್ನು ಉದಾಹರಿಸಿ ವಿಷಕನ್ಯಾ + ತಮಾಸುರಸಂವಾದ –ವೆಂಬ ಒಂದು ವೇದಮೂಲದ ಕಥೆ ಉದಾಹರಿಸುತ್ತೇನೆ. ಗಮನಿಸಿ.

        ಒಂದು ಊರಿನಲ್ಲಿ ತಮನೆಂಬ ಬ್ರಾಹ್ಮಣನಿದ್ದ. ಮಹಾಜ್ಞಾನಿಯೂ, ವೇದವಿದನೂ, ಪಂಡಿತನೂ, ಷಟ್‌ಶಾಸ್ತ್ರಕೋವಿದನೂ, ಸಕಲತಂತ್ರಾಗಮ ನಿಪುಣನೂ ಆಗಿದ್ದು, ತನ್ನ ವಿಧ್ಯಾಬಲದಿಂದಾಗಿ ಅತೀ ಅಹಂಕಾರಿಯಾಗಿ ತನ್ನ ಶಕ್ತಿಬಲದಿಂದ ಲೋಕಪೀಡಕನಾಗಿದ್ದ. ಹಾಗಾಗಿ “ತಮಾಸುರ” ನೆಂದೇ ಖ್ಯಾತನಾಗಿದ್ದ. ಅವನ ಲೋಕಪೀಡನೆಯನ್ನು ಸಹಿಸದ ದೇವತೆಗಳು ಅವನ ನಾಶಕ್ಕೆ ಪ್ರಯತ್ನಿಸಿ ತಮ್ಮ ಕೈಲಾದ ಮಟ್ಟಿಗೆ ಹೋರಾಡಿದರೆ ಈತನು ಕೇವಲ ಮಂತ್ರಾಸ್ತ್ರಗಳಿಂದಲೇ ದೇವತೆಗಳನ್ನೂ, ಸಜ್ಜನರನ್ನೂ ಜಯಿಸಿ ಲೋಕವಿಕ್ರಮಿಯಾಗಿದ್ದ. ಆಗ ದೇವತೆಗಳೆಲ್ಲಾ ಶಿವನಲ್ಲಿ ಪ್ರಾರ್ಥಿಸಲಾಗಿ ಶಿವನು ತನ್ನ ಜಟೆಯನ್ನು ಆಧರಿಸಿ ನಿಂತಿರುವ ಗಂಗೆಗೆ ಆದೇಶಿಸುತ್ತಾನೆ. ನೀನು ಆ ತಮಾಸುರನನ್ನು ಯಾವುದೇ ರೀತಿಯಿಂದಲಾದರೂ ವಧಿಸು ಎಂದು. ಆಗ ಗಂಗೆ ತನಗೆ ಬರುವ ಬ್ರಹ್ಮಹತ್ಯಾ ದೋಷಕ್ಕೆ ಜವಾಬ್ದಾರರಾರು? ಎಂದು ಕೇಳಲಾಗಿ, ನಂತರ ನೀನು ಮುಂದೆ ನದಿಯಾಗಿ ಪ್ರವಹಿಸುವ ಕಾಲದಲ್ಲಿ ನನ್ನ ಪಾದದ ಮೇಲೆ ಹರಿದು ಲೋಕಪಾವನಿಯಾಗುತ್ತೀಯ. ಯಾರದ್ದೇ ಬ್ರಹ್ಮಹತ್ಯಾದಿ ದೋಷಗಳ ವಿಮೋಚನೆ ಮಾಡುವ ಪಾವನ ತೀರ್ಥವಾಗುತ್ತೀಯ. ಅಲ್ಲಿಯವರೆಗೆ ನೀನು ಈ ಬ್ರಹ್ಮಹತ್ಯಾ ದೋಷ ಕಾರಣದಿಂದಾಗಿ ಮತ್ಸ್ಯಗಂಧಿಯಾಗಿರು ಎಂದು ಆದೇಶಿಸುತ್ತಾನೆ. 

        ಅದರಂತೆ ಗಂಗೆ ತನ್ನೊಂದು ಭಾಗವನ್ನು ವಿಭಜಿಸಿ ಶಿವಸಂಕಲ್ಪದ ಪೂರೈಕೆಗಾಗಿ ಭೂಲೋಕಕ್ಕೆ ಬಂದು ತಮಾಸುರನ ವಿವರಗಳನ್ನು ತಿಳಿದು, ಇವನು ಎದುರಿಸಲಾರದ, ವಿರೋಧಿಸಲಾಗದ, ಧರಿಸಲಾಗದ, ಶಕ್ತಿಯೆಂದು ಅರಿತು ಕೂಡಲೇ ಇವನನ್ನು ತನ್ನ ಮೋಹಕ್ಕೆ ಒಳಪಡುವಂತೆ ಮಾಡಿ ಉಪಾಯದಿಂದ ನಾಶ ಮಾಡಬೇಕೆಂದು ತಿಳಿದು ಶಿವನನ್ನು ಪ್ರಾರ್ಥಿಸಿ  

1. ಹಾಲಾಹಲ, 
2. ಕಾರ್ಕೋಟಕ, 
3. ನಗರೀ, 
4. ಶಂಖ, 
5. ಊರ್ಜ, 
6. ಪಾಷಾಣ, 
7. ಬಭ್ರು, 
8. ಸೀಸ, 
9. ಕ್ಷೋಧ  

ಎಂಬ ನವಪಾಷಾಣವನ್ನು ಪಡೆದು ಪಾಷಾಣ ವಿಧ್ಯೆಯ ಮುಖೇನ ಸ್ವಲ್ಪ ಸ್ವಲ್ಪವಾಗಿ ವಿಷ ಪ್ರಾಶನ ಮಾಡುತ್ತಾ ವಿಷಕನ್ಯೆಯಾಗಿ ರೂಪುಗೊಂಡಳು. ಪ್ರಖರ ವಿಷಕನ್ಯೆಯಾದ ಮೇಲೆ ತನ್ನ ಹಾವಭಾವಗಳಿಂದ ಅಜ್ಞಾನದಿಂದ ತಮೋಗುಣವನ್ನೇ ಪ್ರಧಾನವಾಗಿ ರೂಪಿಸಿಕೊಂಡ ತಮಾಸುರನನ್ನು ಮೋಹಿಸಿ ವಶಪಡಿಸಿಕೊಂಡು ಅವನನ್ನು ತನ್ನ ವಿಷಪ್ರಭಾವದಿಂದ ಕೊಂದಳು. ತಮಾಸುರನ ಮರಣದಿಂದಾಗಿ ದೇವತೆಗಳೆಲ್ಲಾ ಸಂತೋಷ ಪಡುತ್ತಿರಲು ವಿಷಕಾರಣದಿಂದ ಕಪ್ಪಾದ ಭಾಗೀರಥಿಯು ಅಳುತ್ತಿದ್ದಳು. ಆಗ ಶ್ರೀಹರಿಯು ಅವಳನ್ನು ಅನುಗ್ರಹಿಸಿ ನಿನ್ನ ದೇಹದ ವಿಷವು ಇತರೆ ಲೋಕವಿಷಗಳನ್ನು ನಾಶಮಾಡುವ ಶಕ್ತಿಯಾಗಿ ಪರಿವರ್ತಿಸುತ್ತೇನೆ. ಗೋಮುಖದಲ್ಲಿ ಹುಟ್ಟಿ ನದಿಯಾಗಿ ಹರಿದು ಔಷಧೀರೂಪಳೆಂದೂ, ತೀರ್ಥಳೆಂದೂ, ಲೋಕಪಾವನೆಯೆಂದೂ, ಸಕಲ ಪಾಪಹಾರಿಣೀಯೆಂದೂ, ಖ್ಯಾತಳಾಗೆಂದೂ ಹರಸಿದನು.

        ಈ ರೀತಿಯಲ್ಲಿ ಒಂದು ಸಮಸ್ಯೆಗಾಗಿಯೇ ಒಂದು ರೂಪವನ್ನು ಅದೇ ಹೆಚ್ಚಿನದೆಂದು ಬಿಂಬಿಸುವ ಪ್ರವೃತ್ತಿಯು ಈಗಿನದ್ದಲ್ಲ, ಅತೀಪುರಾತನ. ಒಬ್ಬ ಅತೀ ಬುದ್ಧಿವಂತನನ್ನು ಸರಿದಾರಿಗೆ ತಂದು ಸಮಾಜದಲ್ಲಿ ಒಂದಾಗಿಸಲು ಸಾಧ್ಯವಿಲ್ಲವೆಂದಾದರೆ ಒಂದು ವ್ಯವಸ್ಥೆಯನ್ನೇ ಸೃಷ್ಟಿಸಿ, ಅದರಂತೆ ಸಮಾಜವನ್ನು ರೂಪಿಸಿ, ತನ್ಮೂಲಕ ಸಮಾಜದ ಸರ್ವನಾಶಕ್ಕೆ ಪ್ರಯತ್ನಿಸುವುದು ಇನ್ನೊಂದು ಮಾರ್ಗ. ಅಲ್ಲಿ ನಾಶವೇ ವಿನಃ ಸದುಪಾಯವಿಲ್ಲ. ಈಗಿನ ಮನೋರಂಜನಾ ವ್ಯಾಖ್ಯೆಯೂ ಅದೇ ಅಗಿರುತ್ತದೆ. ಅಲ್ಲಿ ತಮಾಸುರನು ವಿಷಕನ್ಯೆಯನ್ನು ಕೇಳುತ್ತಾನೆ – ನಿನ್ನ ದೇಹದ ತೀಕ್ಷ್ಣ ಮಾದಕತೆಯೇನು? ನಿನ್ನಲ್ಲಿರುವ ಮೋಹಕತೆಯೇನು? ಸಕಲ ಜಿತನಾದ ನನ್ನನ್ನೇ ಆಕರ್ಷಿಸುತ್ತಿದ್ದೀಯಲ್ಲ ಕಾರಣವೇನು? ಇದೆಲ್ಲದರ ಹಿಂದಿರುವ ನಿನ್ನ ರಹಸ್ಯವೇನು? ಉದ್ದೇಶವೇನು? ಎಂದು. ಆಗ ಒಂದೇ ವಾಕ್ಯದಲ್ಲಿ ವಿಷಕನ್ಯೆ ಭಾಗೀರಥಿಯು ಉತ್ತರಿಸುತ್ತಾಳೆ, ಅದೇ ಸ್ತ್ರೀರಹಸ್ಯ. ಇದನ್ನು ನೀನು ಅರಿಯಬೇಕಿದ್ದಲ್ಲಿ ನನ್ನನ್ನು ಬಳಸು, ಆಗ ನಿನಗೆ ಅರ್ಥವಾಗುತ್ತದೆ. ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು.

        ಈಗಿನ ಟಿ.ವಿ., ಕಂಪ್ಯೂಟರ್, ಮೊಬೈಲ್ ಇತ್ಯಾದಿ ಮಾಧ್ಯಮಗಳ ಪರಿಸ್ಥಿತಿಯೂ ಅದೇ ಆಗಿದೆ. ಜನರೆಲ್ಲಾ ಸೋಮಾರಿಗಳಾಗಿ ಟಿ.ವಿ., ಕಂಪ್ಯೂಟರ್, ಮೊಬೈಲ್ ಮುಂದೆ ಕುಳಿತಿದ್ದರೆ, ರೈತರು ಗದ್ದೆ ಕೆಲಸಕ್ಕೆ ಇಳಿಯದಿದ್ದರೆ, ತಾಯಿ ಅಡಿಗೆ ಮಾಡದೇನೇ ಹೋಟೆಲ್ ತಿಂಡಿಗೆ ಮಾರು ಹೋದರೆ, ಟಿ.ವಿ., ಸೀರಿಯಲ್ ತಪ್ಪುತ್ತದೆ ಎಂಬ ಕಾರಣಕ್ಕೆ ಕೆಲಸಕ್ಕೆ ರಜ ಹಾಕುವ ಪದ್ಧತಿ ಬೆಳೆದರೆ, ಓದಿ ಸಾಧನಾ ಹಾದಿಯಲ್ಲಿ ಮುನ್ನಡೆಯಬೇಕಾದ ಮಕ್ಕಳು ಮೊಬೈಲ್ ಹಿಡಿದು ಅನಗತ್ಯ ವಿಚಾರಗಳಲ್ಲಿ ತಲೆ ಕೆಡೆಸಿಕೊಂಡು ಕುಳಿತರೆ ಅದು ಮನರಂಜನೆಯಾದೀತೆ? ಮಾನವ ಸಂಕುಲದ ನಾಶದ ದಾರಿಯಲ್ಲವೇ? ವಿಚಾರವಾದಿಗಳು ಇದನ್ನು ಈ ಮುಖದಲ್ಲಿ ಚಿಂತಿಸುತ್ತೀರಾ ಎಂದು ವಿನಂತಿ ಮಾಡುತ್ತೇನೆ.       ಮನೋರಂಜನೆಯೆಂಬ ನೆಪದಲ್ಲಿ ವಿದೇಶೀಯರು ನಡೆಸಿದ ಟಿ.ವಿ., ಮೊಬೈಲ್, ಕಂಪ್ಯೂಟರ್ ಎಂಬ ವಿಷಕನ್ಯಾ ಪ್ರಯೋಗದಿಂದಾಗಿ ಸದಾ ಚೈತನ್ಯದಿಂದ ಪುಟಿಯುತ್ತಾ, ಆರೋಗ್ಯದಾಯಕನಾಗಿದ್ದ, ಭಾರತೀಯ ಸೋಮಾರಿಯಾಗಿ ಕುಳಿತು ತಿಂದು ತನ್ನ ಆರೋಗ್ಯ ಕೆಡಿಸಿಕೊಂಡು ರೋಗಿಷ್ಠನಾದ. ಭಾರತೀಯನಿಗೆ ಇದು ಅರ್ಥವಾಗುವ ಕಾಲಕ್ಕೆ ಪೂರ್ಣ ವಿಷವೇರಿದೆ, ಅಪಾಯ ತಪ್ಪಿದ್ದಲ್ಲ. ದಿನದ ೨೪ ಗಂಟೆಯೂ ೧೫೦ ಚಾನೆಲ್‍ಗಳಲ್ಲಿ ಬರುವ, ವಾಟ್ಸ್ಯಾಪ್-ವೈಬರ್-ಹೈಕ್-ಫೇಸ್ಬುಕ್-ಟ್ವಿಟ್ಟರ್ ಇತ್ಯಾದಿ ಕಂಪ್ಯೂಟರ್ + ಮೊಬೈಲ್ ತಂತ್ರಾಶಗಳಿಂದ ಹಬ್ಬುವ ಭ್ರಷ್ಟ, ಕೆಟ್ಟ, ಅಸಂಸ್ಕರಿತ, ಅಸಭ್ಯವಿಚಾರಗಳನ್ನೇ ತಲೆಯಲ್ಲಿ ತುಂಬುತ್ತಿದ್ದರೆ, ಮಾನವ ಸದ್ಗುಣಿಯಾಗಲು ಹೇಗೀ ಸಾಧ್ಯ?

       ಇನ್ನು ಆಟೋಟಗಳ ಉದ್ದಿಮೆ. ಕ್ರಿಕೆಟ್, ಬ್ಯಾಡ್‍ಮಿಂಟನ್, ಫುಟ್‍ಬಾಲ್ ಇತ್ಯಾದಿ ಕೆಲವೇ ಆಟಗಳು ಉದ್ದಿಮೆಯಾಗಿ ರೂಪುಗೊಂಡು ಕೋಟಿಗಟ್ಟಲೆ ಹಣ ಮಾಡುತ್ತಿವೆ. ಇನ್ನು ಆನ್‍ಲೈನಿಂದ ಬಳುವಳಿಯಾಗಿ ಬಂದಂತಹಾ ಲಕ್ಷಾಂತರ ಕಂಪ್ಯೂಟರ್ + ಮೊಬೈಲ್ ಗೇಮ್‍ಗಳು ಹಣ ಮಾಡುವ ಪ್ರಮುಖ ದಂಧೆಯಾಗಿ ರಾರಾಜಿಸುತ್ತಿವೆ. ಆಟಗಳು ಮನರಂಜನೆಗಾಗಿದೆಯೇ ವಿನಃ ದುಡಿಮೆಯ ದಾರಿಯಾಗಬಾರದು. ಹಾಗಾದರೆ ಅದು ಜೂಜು ಎನ್ನಿಸಿಕೊಳ್ಳುತ್ತದೆ. ಜೂಜು ನಿಷೇಧ. ಸಾಮಾನ್ಯ ಪ್ರಪಂಚದ ಎಲ್ಲಾ ದೇಶಗಳಲ್ಲೂ ಇದೆ. ಪ್ರಸಕ್ತ ಇಸ್ಪೀಟ್, ಲಾಟರಿ, ಕೋಳಿ ಅಂಕ, ಇತರೆ ಪ್ರಾಣಿಗಳ ಕಾದಾಟ ಇತ್ಯಾದಿಗಳು ಬಹಳ ಸಣ್ಣ ಪ್ರಮಾಣದ ಜೂಜು. ಪ್ರಪಂಚದಲ್ಲೇ ಅತಿ ಹೆಚ್ಚು ದೊಡ್ಡ ಜೂಜೆಂದರೆ ಕ್ರಿಕೆಟ್. 


       ಈಗ ಅದನ್ನೂ ಮೀರಿಸುವ ಆನ್‌ಲೈನ್ ಗೇಮ್‍ಗಳು, ಆನ್‍ಲೈನ್ ರಮ್ಮಿ ಆಡಿ ದುಡ್ಡು ಗೆಲ್ಲಿ ಶ್ರೀಮಂತರಾಗಿ ಎಂದು ಘಂಟಾಘೋಷವಾಗಿ ಬರುವ ಜಾಹಿರಾತುಗಳು. ಅದನ್ನೆಲ್ಲ ಸರ್ಕಾರಗಳೇ ಪೋಷಿಸುತ್ತಿವೆ. ಕ್ರಿಕೆಟ್‍ನ ನೆವದಲ್ಲಿ ನಡೆಯುವ ಇತರೆ ಜೂಜು ವ್ಯವಹಾರ ಎಷ್ಟೋ ದೇಶಗಳ ಬಜೆಟ್ ಹಣಕ್ಕಿಂತಲೂ ಹೆಚ್ಚು. ಇತ್ತಿಚಿನ ದಿನಗಳಲ್ಲಿ ಅದನ್ನೂ ಮೀರಿಸುತ್ತಿದೆ ಗೇಮಿಂಗ್ ಇಂಡಸ್ಟ್ರಿ. ಇದನ್ನು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ? ಇನ್ನು ಆಟಗಾರರೊ ಈಗ ಅವರನ್ನು ಕೊಂಡುಕೊಂಡು ಕಂಬಳದ ಕೋಣದಂತೆ ಬಳಸುವ ಪದ್ಧತಿ ಬಂದಿದೆ. ಹಿಂದೆ ಈ ಕ್ರಿಕೆಟ್ ಭಾರತಕ್ಕೆ ಬಂದಾಗ ಬ್ರಿಟಿಷ್ ದೊರೆಗಳು ಇದೊಂದು ಗೌರವಾನ್ವಿತ ಮಾನವ ಶಕ್ತಿಯ ತೀಕ್ಷ್ಣತೆಯ ಪ್ರಯೋಗಕಾರಿ ಆಟವೆಂದು ಪರಿಚಯಿಸಿದ್ದರು. ಆದರೆ ಅದು ಬೆಳೆಯುತ್ತಾ ಒಂದು ಜೂಜಿನ ಅಡ್ಡೆಯ ಸ್ವರೂಪ ಈಗ ಪಡೆದಿದೆ. ಅಲ್ಲದೆ ಹಲವು ಕೋಟಿ ಜನರನ್ನು ಸೋಮಾರಿಗಳಾಗಿ ಹೋಗುವಂತೆ ಮಾಡುತ್ತದೆ. ಇಲ್ಲಾ ಮೂರ್ಖರನ್ನಾಗಿಯಾದರೂ ಮಾಡುತ್ತಿದೆ (ಮ್ಯಾಚ್ ಫಿಕ್ಸಿಂಗ್). ಇನ್ನು ವಾಟ್ಸಾಪ್ ಇತ್ಯಾದಿಗಳನ್ನು ವಿಕೃತ ಮನೋರಂಜನೆಗೆ ಯುವಶಕ್ತಿಯು ಬಳಸುವಂತೆ ಪ್ರಕಟಗೊಳಿಸುತ್ತಿವೆ ಕಂಪೆನಿಗಳು. 


      ಅವರು ಪ್ರಕಟಿಸುವ ಯಾಪ್‍ಗಳು, ಫೋಟೋ, ವೀಡಿಯೋ, ಜೋಕ್‍ಗಳು ತಮ್ಮ ಬ್ಯಾಂಡ್‍ವಿಡ್ತ್ ಹೆಚ್ಚಳದ ಮುಖೇನ ಹಣ ಮಾಡುವ ಉದ್ದೇಶವನ್ನು ಮಾತ್ರ ಹೊಂದಿವೆ. ಅದಕ್ಕಾಗಿ ಇಲ್ಲಿಲ್ಲಾ ವಿಷಕನ್ಯಾ ಪ್ರಯೋಗವಾಗುತ್ತಿದೆ ಎಂದು ಅರ್ಥವಾಗುವುದಿಲ್ಲ. ಅನುಭವಿಸಿದ ಮೇಲೆ ಬದುಕಿಲ್ಲ. ಒಂದು ಕ್ರಿಕೇಟ್ ಯೋಜನೆ ಆರಂಭವಾದಾಗ ಕಡಿಮೆಯೆಂದರೂ ನೇರ ಕ್ರಿಕೆಟ್ ನೋಡುವವರಿಂದ ಕ್ರಿಕೆಟ್ ಮಂಡಳಿಯ ಸಂಪಾದನೆ ಎಷ್ಟೋ ಅದರ ೫೦ ಪಟ್ಟು ಜೂಜಾಡುತ್ತಾರೆ. ಒಂದು ಅಂದಾಜು ೧೦ ಕೋಟಿ ಜನರಾದರೂ ತಮ್ಮ ಉದ್ಯೋಗ ಬಿಟ್ಟು ಟಿ.ವಿ. ನೋಡುತ್ತಾರೆ. ಅಲ್ಲಿ ಪ್ರಚಾರ ಇತ್ಯಾದಿಗಳಿಂದ ಆಗುತ್ತಿರುವ ಚಲಾವಣೆ ಸಾವಿರಾರು ಕೋಟಿ ಹಣ. 

ಹಾಗೆ ಮೊಬೈಲ್ ಯ್ಯಾಪ್‍ಗಳಿಂದ, ಮೀಡಿಯಾ ಸ್ಟ್ರೀಮಿಂಗ್‍ಗಳಿಂದ ಜನರನ್ನು ಆಮಿಷಕ್ಕೆ (Addiction) ಸಿಲುಕಿಸಿ “ದಾಸ್ಯದಲ್ಲಿಡುವ” ಕಿರಣಮಾಯಾ ಪ್ರಯೋಗ ನಡೆಯುತ್ತಿದೆ. ಇದರಿಂದ ಸೈಬರ್ ಕ್ರೈಮ್‍ಗಳೂ ಹೆಚ್ಚುತ್ತಿವೆ. ಇದು ನವಪಾಷಾಣಗಳಿಗೂ ಮೀರಿದ ವಿಷಕನ್ಯಾಪ್ರಯೋಗ. ಎಚ್ಚರ! ಎಚ್ಚರ!! ಎಚ್ಚರ!!! ಇದೆಲ್ಲಾ ಮನರಂಜನೆಯೇ ಚಿಂತಿಸಿ? ಇಂತಹಾ ಮನರಂಜನೆ ನಮಗೆ ಬೇಕೆ? ಸದಾ ದುಡಿಮೆಯೇ ದೇವರು (ಕಾಯಕವೇ ಕೈಲಾಸ)
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲ ಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||
        ಎಂದ ಭಾರತ ದೇಶಕ್ಕೆ ಇದು ಸರಿಯೇ? ಚಿಂತಿಸಿರೆಂದು ಹೇಳುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

-      ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ
+
ಹೇಮಂತ್ ಕುಮಾರ್ ಜಿ.

Monday, 3 October 2016

ಉಪ್ಪಿಗಿಂತ ರುಚಿ ಬೇರೆಯಿಲ್ಲ! ಏನೀ ಲವಣ ರಹಸ್ಯ?

ನಮ್ಮ ನಂಬಿಕೆಯಾದ ಸತ್ಯ, ಧರ್ಮ, ನ್ಯಾಯ ಎಲ್ಲಿದೆ? ಸಮಕಾಲೀನ ಘಟ್ಟದಲ್ಲಿ ನಾವೆಲ್ಲಿದ್ದೇವೆ? ಉಪ್ಪು ಎಂದರೆ ಏನು? ಅದಕ್ಕೂ ಮಾನವನಿಗೂ ಇರುವ ಸಂಬಂಧವೇನು? ಈಗ ಆ ವಿಚಾರವಾಗಿ ನಾವೇನು ತಿಳಿದಿದ್ದೇವೆ? ಉಪ್ಪಿನ ಪ್ರಾಚೀನತೆ ಎಷ್ಟು? ಅದರ ಅಗತ್ಯವೆಷ್ಟು? ಅದು ಹೇಗೆ ಉತ್ಪಾದಿಸಲ್ಪಡುತ್ತಿತ್ತು? ಈಗ ಹೇಗಿದೆ? ಮತ್ತು ನಾವು ಭಾರತೀಯರು ಉಪ್ಪಿಗೆ ಯಾವ ಸ್ಥಾನ ಕೊಡುತ್ತಿದ್ದೆವು? ಇವೆಲ್ಲದರ ಬಗ್ಗೆ ಒಂದು ಪರಿಚಯಾತ್ಮಕ ಲೇಖನವಿದು. ಅಭಿಮಾನದಿಂದ ದಯವಿಟ್ಟು ಸ್ವೀಕರಿಸಿ ನಿಮಗೆ ಸರಿ ಅನ್ನಿಸಿದರೆ ಪಾಲಿಸಿ ಎಂದು ಕಳಕಳಿಯ ಪ್ರಾರ್ಥನೆ ಮಾತ್ರವೆಂದು ಘೋಷಿಸುತ್ತಿದ್ದೇನೆ.

          ಮೇಲೆ ಹೇಳಿದ ವಿಚಾರ ಬದ್ಧತೆಯೊಂದಿಗೆ ಉಪ್ಪು ಎಂಬ ವಿಚಾರವಾಗಿ ಚಿಂತನೆ ಮಾಡೋಣ. ಮೊದಲಾಗಿ ಉಪ್ಪು ಎಂದರೇನು? ಚಿಂತಿಸೋಣ. ಮಾನವ ಆಹಾರ ಪ್ರವೃತ್ತಿಯಲ್ಲಿ ರುಚಿಗೆ ಪ್ರಧಾನತೆ ಇದೆ. ಷಡ್ರಸಗಳಲ್ಲಿ ಉಪ್ಪು ಮೊದಲನೆಯದು. ಹಾಗೇ ಹುಳಿ, ಸಿಹಿ, ಖಾರ, ಕಹಿ, ಒಗರು ಎಂಬ ಇತರೆ ರಸಗಳಿದ್ದರೂ ಉಪ್ಪಿನ ಸ್ಥಾನ ಎತ್ತರದ್ದೇ! ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ; ಇದೊಂದು ಗಾದೆ ಮಾತು. ನಾಲಗೆಯನ್ನರಿತ ಮಾನವನು ರುಚಿಗೆ ಮಹತ್ವವನ್ನು ಕೊಡುತ್ತಾ ಬಂದಾಗ ಷಡ್ರಸೋಪೇತವಾದ ಪಾಕಶಾಸ್ತ್ರ ಉದ್ಭವವಾಯ್ತು. ಅಲ್ಲಿ ಉಪ್ಪು ತನ್ನ ಒಂದನೇ ಸ್ಥಾನವನ್ನು ಉಳಿಸಿಕೊಂಡಿದೆ. ಈ ಉಪ್ಪನ್ನು ತಯಾರಿಸುವ ವಿಧಾನ, ಬಳಸುವ ವಿಧಾನ, ಮಹತ್ವ ಹಾಗೂ ಅದರ ಧೈವೀಕಗುಣವನ್ನು ಲವಣಜನಕ ಶ್ಯಾವಾಶ್ವನು ವಿಶದವಾಗಿ ವಿವರಿಸಿದ್ದಾನೆ. ಮೂಲ ನಾರದ ಸಂಹಿತೆಯಲ್ಲಿನ ಲವಣ ಜನನ ವೃತ್ತಾಂತವನ್ನು ಓದಿದರೆ ನಿಮಗೆ ಅರ್ಥವಾಗಬಹುದು. ಮುಂದಿನ ಲೇಖನಗಳಲ್ಲಿ ಅದನ್ನು ಉದ್ಘಾಟಿಸಲು ಪ್ರಯತ್ನಿಸುತ್ತೇನೆ. 

ಈಗ ಪುರಾಣದ ವಿಚಾರ ಬಿಟ್ಟರೆ ನಮ್ಮ ದೇಶದಲ್ಲಿ ಉಪ್ಪಿನ ಮಹತ್ವ ಹೇಳುವ ಐತಿಹಾಸಿಕ ವಿಚಾರದ ಬಗ್ಗೆ ಬರೋಣ. ಉಪ್ಪಿನ ಗುಣ, ರಕ್ಷಣಾತ್ಮಕ ಶಕ್ತಿ, ಸೌಜನ್ಯ, ಋಣಶಕ್ತಿ, ವ್ಯಾಯಪರತೆ, ಸತ್ಯ, ಪ್ರಾಮಾಣಿಕತೆಯ ವಿಚಾರವಾಗಿ ನೋಡುವುದಿದ್ದರೆ ಉಪ್ಪನ್ನು ಉದಾಹರಿಸಿದ ಯಾವ ದೇಶವೂ ಇಲ್ಲ! ಉದಾ:- ಕನ್ನಡದ ಆಡುಮಾತಿನಲ್ಲಿ -

ತಿಂದ ಉಪ್ಪಿನ ಋಣ ತೀರಿಸಲೇಬೇಕು”,
ಉಂಡ ಮನೆಗೆ ಎರಡೆಣಿಸಬೇಡ”,
ಉಪ್ಪುಂಡ ಮನೆಗೆ ದ್ರೋಹ ಬಗೆಯಬೇಡ”,
ರುಚಿರಾಜ”, “ರಸರಾಜ”, “ಜಿಹ್ವಾದೇವ”, “ಅತಿರಸ”,
ಪುಣ್ಯಶಕ್ತಿ”, “ಪಾಪ ಪರಿಹಾರಕ”, “ಜೀವರಕ್ಷಕ”,

ಹೀಗೆ ಹೇಳುತ್ತಾ ಹೋದರೆ ಉಪ್ಪಿನ ಬಗ್ಗೆ ಆಡುಂಬೊಲದ ಮಾತು ಮುಗಿಯಲಾರದು. ಅಲ್ಲದೇ ಕೆಲ ವಿಶಿಷ್ಟ ಆಚರಣೆ ನಮ್ಮ ಸಂಸ್ಕೃತಿಯಲ್ಲಿದೆ; ಗಮನಿಸಿರಬಹುದು. ಉಪ್ಪು ಮಾರಾಟದ ವಸ್ತುವಲ್ಲ”. ಇತ್ತೀಚಿನವರೆಗೂ ಅದನ್ನು ಮಾತ್ರ ಅಂಗಡಿಕಾರ ಮಾರುತ್ತಿರಲಿಲ್ಲ. ಜೊತೆಗೆ ಬೆಂಕಿ ಪೊಟ್ಟಣವಾದರೂ ಕೊಟ್ಟು ಬೆಲೆ ಪಡೆಯುತ್ತಿದ್ದರು. ಉಪ್ಪು ಕಳ್ಳತನ ಮಾಡುವ ವಸ್ತುವಲ್ಲ”. ಹಾಗೇ ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತಿದ್ದ ಕಾಲವೂ ಇತ್ತು. ಮತ್ತು ಯಾತ್ರಾರ್ಥಿಗಳ ಸಂಗ್ರಹದ ಉಪ್ಪಿಗಾಗಿಯೇ ದರೋಡೆಕೋರರು ಯಾತ್ರಾರ್ಥಿಗಳಿಗೆ ಏನೂ ತೊಂದರೆ ಕೊಡದೆ ಬರೇ ಉಪ್ಪನ್ನು ಪಡೆದು ಬಿಟ್ಟ ಉದಾಹರಣೆ ಸಾವಿರಾರು. ಇದು ಭಾರತಾದ್ಯಂತ ಎಲ್ಲಾ ಭಾಷೆಗಳಲ್ಲಿ ಚಾಲ್ತಿಯಲ್ಲಿದೆ. ನಮಕ್ ಹರಾಮ್ = ಉಪ್ಪಿಗೆ ದ್ರೋಹವೆಂದೇ ಅರ್ಥ. 

ಉತ್ತರದ ಪಶ್ಚಿಮ ಕರಾವಳಿ ಗುಜರಾತಿನಿಂದ ಆರಂಭಿಸಿ ದಕ್ಷಿಣದ ಕನ್ಯಾಕುಮಾರಿವರೆಗೆ ಲವಣ ಸಮುದ್ರ ಎಂದು ಹೆಸರು. ಇಂದು ನಿರಂತರ ಉಪ್ಪಿನ ಉತ್ಪಾದನೆ, ಮಾರಾಟ, ದೇಶವಿದೇಶಗಳಿಗೆ ರಪ್ತು ನಡೆಯುತ್ತಿರುವ ವಿಶೇಷ ರಸಶಕ್ತಿ ಹೊಂದಿದ ತೀರಪ್ರದೇಶವೇ ಭಾರತದ ಮಹೋನ್ನತ ಆಸ್ತಿ. ಸಹ್ಯಾದ್ರಿಯ ಕಾಡುಗಳಲ್ಲಿರುವ ವಿಶೇಷ ಗುಣಶಕ್ತಿ ಹೊಂದಿದ ಗಿಡಮೂಲಿಕೆಗಳು ಕೊಳೆತು ನೀರಿನೊಂದಿಗೆ ಬೆರೆತು ನದಿಗಳಿಂದ ಸಮುದ್ರಕ್ಕೆ ಸೇರಿಸಲ್ಪಡುತ್ತವೆ. ನಿರಂತರ ಸಮುದ್ರ ಮಂಥನ ಮಾಡಿ, ರಸಸಂಸ್ಕಾರ ಮಾಡಿ, ನೀರಿನಲ್ಲಿ ಶೇಖರಣೆಯಾದ ರಸ ರೂಪಿ ಲವಣವೇ ನಾವು ತಿನ್ನುವ ಉಪ್ಪು. ಇದು ಪ್ರಪಂಚದ ಯಾವ ಸಮುದ್ರಕ್ಕೂ ಇರದ ವಿಶೇಷ ಗುಣ ಶಕ್ತಿ. ಹಾಗಾಗಿಯೇ ಭಾರತಕ್ಕೆ ಉಪ್ಪಿಗಾಗಿ ಬೇಡಿ ಬಂದ ವಿದೇಶಿ ವ್ಯಾಪಾರಿಗಳ ಸಂಖ್ಯೆ ಅಪಾರ. ಹಾಗಾಗಿ ತೀರ ಪ್ರದೇಶದಲ್ಲಿ ಸಾವಿರಾರು ಉಪ್ಪಿನ ವ್ಯಾಪಾರ ಕೇಂದ್ರಗಳಿದ್ದವು. ಪಶ್ಚಿಮ ಕರಾವಳಿಯಲ್ಲಿ ಈಗಲೂ ಆ ಹೆಸರು ಉಳಿದು ಬಂದಿದೆ. 

ಆದರೆ ಈಗ ಉಪ್ಪಿನ ಉತ್ಪಾದನೆಯ ಹಕ್ಕು, ಉಪ್ಪು ಬೆಳೆಯುವ ರೈತಕುಲಕ್ಕೆ ಇಲ್ಲ! ದೊಡ್ಡ ದೊಡ್ಡ ಕಂಪೆನಿಗಳ ಪಾಲಾಗಿದೆ. ಕಾರಣ, ನಮ್ಮ ಸರಕಾರದ ಮೂರ್ಖತನ. ಲಕ್ಷಾಂತರ ವರ್ಷದಿಂದ ನಾವು ಬೆಳೆಸಿ ಪ್ರಪಂಚಕ್ಕೆ ಹಂಚುತ್ತಿದ್ದ ಉಪ್ಪು ಈಗ ವಿದೇಶೀ ಅವಲಂಬಿತ ಕಂಪೆನಿ ಉದ್ಯೋಗವಾಗಿ ಮಾರ್ಪಟ್ಟಿದೆ. ಈ ವಿಚಾರವನ್ನು ತಮಗೆಲ್ಲರಿಗೂ ತಿಳಿಸಬೇಕೆಂಬ ಕಾರಣಕ್ಕಾಗಿಯೇ ಈ ಲೇಖನ ಬರೆಯುತ್ತಿದ್ದೇನೆ. ದಯವಿಟ್ಟು ಓದಿ ಅರ್ಥಮಾಡಿಕೊಂಡ ನೀವೇ ಭಾರತೀಯರು. ಘಟಕವಾಗಿ ರೂಪುಗೊಳ್ಳುವ ಆ ಹರಳುಗಳು ಒಂದೊಂದು ಶಿವಲಿಂಗವೇ. ಅದರ ರುಚಿಯೇ ತಾಯಿ ಆದಿಶಕ್ತಿ. ಅದರ ಗುಣವೇ ವಿಷ್ಣು. ಅದರಿಂದ ಪ್ರಾಪ್ತ ಜ್ಞಾನವೇ ಬ್ರಹ್ಮ ಎಂದು ತಿಳಿದ ಭಾರತೀಯರು ನಾವು. ಉಪ್ಪು ಮತ್ತು ಗೋಮಾತೆಯ ವಿಚಾರದಲ್ಲಿ ನಾವೆಲ್ಲಾ ಭಾರತೀಯರಾಗಿ ಒಂದಾಗುತ್ತೇವೆ. ಅದಂತೂ ಖಂಡಿತ. ಹಿಂದೆ ಬ್ರಿಟೀಷರು ಭಾರತದ ರಾಜಕೀಯದಲ್ಲಿ ಹಿಡಿತ ಸಾಧಿಸುತ್ತಾ ಅವರ ಆದಾಯ ಮೂಲ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಭಾರತೀಯ ಉಪ್ಪಿನ ಉದ್ಯಮದ ಮೇಲೆ ತೆರಿಗೆ ವಿಧಿಸಿದರು. ಅದನ್ನು ಕಂಡುಕೊಂಡ ನಮ್ಮ ಮಹಾತ್ಮಾ ಗಾಂಧೀಜಿಯವರು ಇಡೀ ಭಾರತ ಜನರ ಭಾವನೆಯನ್ನು ಬಡಿದೆಬ್ಬಿಸಿದರು. ಭಾರತೀಯರೆಲ್ಲಾ ಒಗ್ಗಟ್ಟಾದರು. ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನೇ ಭಾರತ ಬಿಟ್ಟು ತೊಲಗಿಸಿದರು. ಭಾರತೀಯರಲ್ಲಿ ಉಪ್ಪಿನ ಬಗ್ಗೆ ಇದ್ದ ಭಾವನಾತ್ಮಕ ಸಂಬಂಧ ಅಂತಹದ್ದು. ಉಪ್ಪು ಸತ್ಯ, ನ್ಯಾಯ, ಧರ್ಮ ಎಂದು ತಿಳಿದವರು. ಅದನ್ನು ಸ್ವಾಭಾವಿಕ ಕೃಷಿ ವಿಧಾನದಿಂದ ಮಾತ್ರ ನಮ್ಮ ರೈತರು ಬೆಳೆಯುತ್ತಿದ್ದರು. ಅದನ್ನು ಈಗ ನಮ್ಮ ಸರಕಾರ ತಡೆ ಹಿಡಿದಿದೆ. ವ್ಯವಸ್ಥಿತವಾಗಿ ಕಂಪೆನಿ ಉತ್ಪಾದಿತ ಉಪ್ಪನ್ನೇ ಬಳಸಬೇಕೆಂದು ಒತ್ತಾಯಪೂರ್ವಕ ಹೇರಿದೆ. ಹಾಗಾಗಿ ಇದು ಉಪ್ಪಿಗೆ ಮಾಡಿದ ದ್ರೋಹವಲ್ಲವೇ?ಪ್ರಸಕ್ತ ಕಾಲದ ಭಾರತೀಯರ ಸಾಮಾಜಿಕ ಜೀವನದ ನೈತಿಕ ಮಟ್ಟ ತೀರಾ ಕುಸಿದಿದೆ. ಕಾರಣ ಈ ಉಪ್ಪಿನ ದ್ರೋಹ. ಉಪ್ಪಿನ ವಿಚಾರದಲ್ಲಿ ಮಾಡುತ್ತಿರುವ ಮೋಸ. ಇದನ್ನರಿಯದೇ ಸಮಾಜದಲ್ಲಿ ನೈತಿಕತೆ ತರಲು ಕಾನೂನುಗಳನ್ನು ರೂಪಿಸ ಹೊರಟಿದೆ. ಆದರೆ ಕಾನೂನು ಅಪರಾಧಿಗಳನ್ನು ಶಿಕ್ಷಿಸಬಹುದೇ ವಿನಃ ಅಪರಾಧವನ್ನು ತಡೆಯುವುದಿಲ್ಲ”. ಅದಕ್ಕೆ ಬೇಕು ಇಚ್ಛಾಶಕ್ತಿಯುಕ್ತವಾದ ನೈತಿಕತೆ; ಅದನ್ನು ಕೊಡುವುದು ಉಪ್ಪು. ಅದರ ವಿಚಾರದಲ್ಲಿ ನಮ್ಮ ರಾಜಕಾರಣವು ಮಾಡಿದ ಭ್ರಷ್ಟಾಚಾರವೇ ಈ ಸ್ಥಿತಿಗೆ ಕಾರಣ.ದಿನಾ ಪತ್ರಿಕೆಯಲ್ಲಿ, ಟಿ.ವಿ. ಮಾಧ್ಯಮದಲ್ಲಿ ನೋಡುತ್ತೇವೆ – “ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡಿದ”. ಇದನ್ನು ಯಾವ ಕಾನೂನಿನಿಂದ ತಡೆಯುತ್ತೀರಾ? ಮನೆ ಮನೆಗೂ ಪೋಲೀಸ್ ಸಿಬ್ಬಂದಿ ಹಾಕಲು ಸಾಧ್ಯವೇ? ತಂದೆಗೆ ತನ್ನ ಮಗಳ ಮೇಲೇ ಕಾಮೇಚ್ಛೆ ಹುಟ್ಟುತ್ತದೆ, ಪ್ರಚೋದನೆಯಾಗುತ್ತದೆ ಅಂದರೆ ಅದಕ್ಕೆ ಕಾರಣ ಭ್ರಷ್ಟ ಉಪ್ಪು. ಅದನ್ನು ಮಾರಾಟದ ಉದ್ದೇಶದಿಂದ ತಯಾರಿಸಲಾಗಿದೆ. ಬಂಡವಾಳ ಶಾಹೀ ಪ್ರವೃತ್ತಿಯಿದೆಯೇ. ಮುಖ್ಯವಾಗಿ ಸ್ವಾಭಾವಿಕ ಸೂರ್ಯ ಸಂಸ್ಕಾರವಿಲ್ಲ. ಅಂದರೆ ಜ್ಞಾನಪ್ರೇರಣೆ ಇಲ್ಲ. ಉಪ್ಪು ಫ್ಯಾಕ್ಟರಿಯಲ್ಲಿ ತಯಾರಿಸುವುದಲ್ಲ. ಸ್ವಾಭಾವಿಕವಾಗಿ ಸೂರ್ಯ ಸಂಸ್ಕಾರ ಮುಖೇನ ಬೆಳೆಸಬೇಕು. ಹಾಗೇ ಅದು ಮಾರಾಟದ ವಸ್ತುವಲ್ಲ. ಜನರಲ್ಲಿ ಆ ಭಾವನೆ ಪ್ರಚೋದಿಸಬೇಕು. ಅದರ ಋಣದ ಕಲ್ಪನೆ ಮೂಡಬೇಕು. ಹಾಗೇ ದೇಹದಲ್ಲಿ ಸೇರಿದ ಅದರ ರಸಗುಣದಿಂದಾಗಿ ನಮ್ಮ ದೃಗ್ಗೋಚರ ಪ್ರಕೃತಿಯೆಲ್ಲವೂ ತಾಯಿಯೆಂಬ ಭಾವನೆ ಹುಟ್ಟಬೇಕು.  ಮೊದಲು ಭಾರತೀಯರಲ್ಲಿ ಇದ್ದದ್ದು ಇದೇ ಭಾವನೆ, ಹಾಗಾಗಿ ದ್ರೋಹ ಬುದ್ಧಿಯಿಲ್ಲ. ಈಗ ಈ ಭ್ರಷ್ಟ ಉಪ್ಪಿನ ಕಾರಣದಿಂದಾಗಿ ನಮ್ಮಲ್ಲಿ ತಾಯಿ ಶಬ್ದಕ್ಕೆ ಅರ್ಥವೇ ಇಲ್ಲದಂತಾಗಿದೆ. ಎಲ್ಲೆಲ್ಲೂ ಹೆಣ್ಣು ಕಾಮವಸ್ತು ಎಂದು ಬಿಂಬಿಸಲ್ಪಡುತ್ತಿದೆ. ತಂದೆಯು ತನ್ನ ಮಗಳನ್ನು ಅಮ್ಮ ಎಂದು ಕರೆಯುವುದು ನಮ್ಮ ಸಂಸ್ಕಾರ. ಆದರೆ ಈಗ ಹೆಚ್ಚಿನ ತಂದೆಯರಿಗೆ ತನ್ನ ಮಗಳೂ ಭೋಗವಸ್ತು, ಸೂಳೆಯೆನ್ನಿಸುತ್ತಿದೆಯೆಂದರೆ ಇದಕ್ಕಿಂತ ದುರಂತ ಬೇಕೆ? ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ ಖಂಡಿತ. ಅದಕ್ಕಾಗಿ ಎಚ್ಚೆತ್ತುಕೊಳ್ಳಿರಿ ಎಂದು ಪ್ರಾರ್ಥಿಸುತ್ತೇನೆ.


ಇನ್ನೊಂದು ಮುಖ್ಯ ವಿಷಯ ಗಮನಿಸಿ. ಮಾನವ ಮಾನವನಾಗಿ ಬಾಳಲು ಈ ಷಡ್ರಸಗಳ ಪಾಕ ವಿಧಾನ ತುಂಬಾ ಅಗತ್ಯ. ಅದನ್ನರಿಯದ ನಮ್ಮ ತಿಂಡಿ-ತೀರ್ಥ, ಊಟ, ಉಪಹಾರ ನಡೆಸುವ, ತಯಾರಿಸುವ, ಮಾರಾಟ ಮಾಡುವ ಸಂಸ್ಥೆಗಳು, ವ್ಯಾಪಾರಿಗಳು ಸಮಾಜ ದ್ರೋಹ ಮಾಡುತ್ತಿದ್ದಾರೆ. ಅವರ್ಯಾರೂ ಪಾಕಶಾಸ್ತ್ರ ಪ್ರವೀಣರಲ್ಲ. ಕೇವಲ ರುಚಿ ಪ್ರಧಾನತೆಯನ್ನು ಆಶ್ರಯಿಸಿದ ಆಹಾರ ಪದಾರ್ಥ ಉತ್ಪಾದನೆಯು ಧರ್ಮವಿರುದ್ಧ. ಆಹಾರ ಪದಾರ್ಥ, ತಿಂಡಿ-ತೀರ್ಥ ಉತ್ಪಾದನೆಯಲ್ಲಿ ಮುಖ್ಯವಾಗಿ ಈ ಲಕ್ಷಣಗಳಿರಬೇಕು:-
೧. ರುಚಿಯಾಗಿರಬೇಕು
೨. ಆರೋಗ್ಯದಾಯಕವಾಗಿರಬೇಕು
೩. ಜ್ಞಾನ ಪ್ರಚೋದಕವಾಗಿರಬೇಕು
೪. ಬೌದ್ಧಿಕ ಉನ್ನತಿಗೆ ಪೂರಕವಾಗಿರಬೇಕು
೫. ಅಮಲು, ಮತ್ತಿಗೆ ಕಾರಣವಾಗಬಾರದು
೬. ಯಾವುದೇ ದುಷ್ಪರಿಣಾಮಕಾರಿ ವಿಷಾಂಶ ರಹಿತವಾಗಿರಬೇಕು.
ಈ ೬ ರೂಪದ ಬದ್ಧತೆಯೊಂದಿಗೆ ಆಹಾರ ಉತ್ಪಾದನೆಯಾಗಬೇಕು. ಹಣ ಮಾಡುವ ಉದ್ದೇಶದ್ದಾಗಿರಬಾರದು. ಇಲ್ಲದಿದ್ದರೆ ಅದು ಸಮಾಜ ದ್ರೋಹ ಎನ್ನಿಸಿಕೊಳ್ಳುತ್ತದೆ. ವಿದೇಶಗಳಲ್ಲಿ ನಮ್ಮಲ್ಲಿಂದ ತರಕಾರಿ, ಹಣ್ಣು, ವೀಳ್ಯದೆಲೆ, ಅಡಿಕೆ, ಆಹಾರ ಪದಾರ್ಥಗಳು ನಿಷೇಧಿಸಲ್ಪಡುತ್ತಿವೆ. ಆದರೂ ಅದೇ ವಸ್ತುಗಳು ಭಾರತದಲ್ಲಿ ವಿಶೇಷ, ವಿಶಿಷ್ಟ, ಆರೋಗ್ಯದಾಯಕವೆಂಬ ರೀತಿಯಲ್ಲಿ ಅನುಮೋದನೆ ಪಡೆದು ಮಾರಾಟವಾಗುತ್ತದೆ ಎಂದರೆ ಅದು ದೇಶದ್ರೋಹ ಸಮಾಜದ್ರೋಹವಲ್ಲವೇ”? ಏನಕ್ಕೇನೋ ಮಾಡಿ ಹಣ ಮಾಡುವುದಾಗಲೀ ಏನಕ್ಕೇನೋ ಮಾಡಿ ಅಪರಾಧ ಗೈಯ್ಯುವುದಾಗಲೀ ಅಥವಾ ತಂದೆ, ಮಗಳು, ತಾಯಿಯ ಬೇಧವರಿಯದೆ ಸುಖಪಡುವುದಾಗಲೀ ಭಾರತೀಯ ಸಂಸ್ಕೃತಿಯಲ್ಲ. ಇನ್ನೊಮ್ಮೆ ವಿಚಾರ ಮಾಡಿ. ನೀವು ತಿನ್ನುವ ಉಪ್ಪಿಗೆ ಋಣ ಸಂದಾಯ ಮಾಡಿರೆಂದು ಹಾರೈಸುತ್ತೇನೆ. ಎಚ್ಚರ ಎಚ್ಚರ ಎಚ್ಚರ!!!
          ಕೇವಲ ಎಚ್ಚರಿಕೆಗಾಗಿ ಈ ಮಂತ್ರ ಉದಾಹರಿಸುತ್ತೇನೆ. ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿರಿ. ದೇಶದ ಮುಂದಿನ ಭವಿಷ್ಯ ಇದರಲ್ಲಿದೆ. 
(ಬ್ರಾಹ್ಮೀ ಭಾಷೆಯಲ್ಲಿ)
ಋಗ್ವೇದ ಮಂಡಲ ೮, ಸೂಕ್ತ ೧, ಮಂತ್ರ ೨
ಅವಕ್ರಕ್ಷಿಣಂ ವೃಷಭಂ ಯಥಾಜುರಂಗಾಂನ ಚರ್ಷಣೀ ಸಹಮ್ |
ವಿದ್ವೇಷಣಮ್ ಸಂವನನೋ ಭಯಂಕರಂ ಮಂಹಿಷ್ಠಮುಭಯಾವಿನಮ್ ||


*** ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರ ಲವಣ ವೃತ ಪುಸ್ತಕದ ಪ್ರಸ್ತಾವನೆ***