Friday, 20 January 2017

"ನೋಟು ಅನಾಣ್ಯೀಕರಣ" ಎಂಬ ಬ್ರಹ್ಮಾಸ್ತ್ರ ಪ್ರಯೋಗ


ಜನ-ಗಣ-ಮನ

ಲೋಕಾಃ ಸಮಸ್ತಾಃ ಸುಖಿನೋ ಭವಂತು

  ಮೇಲ್ಕಂಡ ಸಿದ್ಧಾಂತ ಆಧರಿಸಿದ ದೇಶೀಯ ರಾಜಕಾರಣವೇ ಭಾರತೀಯ ರಾಜ್ಯಶಾಸ್ತ್ರದ ಮೂಲ ತಳಹದಿ. ಇಲ್ಲಿ ಎಲ್ಲವೂ, ಎಲ್ಲರೂ, ಎಲ್ಲದರಲ್ಲಿಯೂ ಸುಖ ಕಾಣಬೇಕಿದೆ. ಅದೇ ಆದರ್ಶವೆಂದಿದೆ. ಕಾಣುವವನು ಎನ್ನುವ ನಾನು ಹೊರಗಿದ್ದು ಸುಖಸಾಗರದಲ್ಲಿ ನೋಟಕನಾಗಬೇಕು. ಆಟಕನಾಗಬಾರದು. ಪಾಠಕನಾಗಿ ಮುಕ್ತಿ ಗಳಿಸಬೇಕು ಇದು ಆದರ್ಶ. ಈ ನೆಲೆಯಲ್ಲಿ ನಮ್ಮೀ ದೇಶದ ರಾಜಕಾರಣವೂ ಕೂಡ ಬೆಳೆದು ಬಂದಿರುತ್ತದೆ. ಅದನ್ನಾಧರಿಸಿದ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರಗಳು ರೂಪುಗೊಂಡಿವೆ. ಈ ನಾಲ್ಕರ ಆಧಾರದಲ್ಲಿ ದೇಶ ನಿಂತಿದೆ. ಸಮೈಃ ಆಸತಾಯೇತಿ ಆಸ್ತಾ ತಾಯತೇತಿ ಸಮಸ್ತಾಃ” (ಬ್ರಾಹ್ಮಿ ಭಾಷೆ) ಎಂಬಂತೆ ನಾನು ಬಿಟ್ಟು ಅಲ್ಲ ಆದರೆ ನಾನತ್ವವೆಂಬ ಅಹಂಕಾರರಹಿತವಾದ ಲೋಕವೇ ಎಲ್ಲವೂ ಎಲ್ಲದರಲ್ಲಿಯೂ ಅಡಕವಾಗಿರುತ್ತಾ ಈ ಪ್ರಪಂಚದ ಸಕಲ ಜೀವಿಗಳ ಕ್ಷೇಮ ಹಾರೈಕೆಯೆಂಬ ಧ್ಯೇಯವೇ ನಮ್ಮೀ ದೇಶದ ಚಕ್ರವರ್ತಿಗಳಿಂದ ಪಾಲಿಸಿಕೊಂಡು ಬಂದ ರಾಜಕಾರಣವಾಗಿದೆ. ಇದನ್ನು ಏಕೆ ವಿವರಿಸುತ್ತಿದ್ದೇನೆ ಎಂದರೆ ಈಗಿನ ಸಮಕಾಲೀನ ಘಟ್ಟದಲ್ಲಿ ನಮ್ಮನ್ನಾಳುವ ಭಾ.ಜ.ಪ ಸರಕಾರ ಕೈಗೊಂಡ ಒಂದು ವಿಶೇಷ ನಿರ್ಣಯದಿಂದಾದ ಪರಿಣಾಮ ಚಿಂತನೆಗಾಗಿ ಬರೆಯುತ್ತಿದ್ದೇನೆ. ಇಲ್ಲಿ ಶ್ರೀಯುತ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದ ಬಗ್ಗೆ ಎರಡು ಮಾತು ಬರೆಯಲೇ ಬೇಕಿದೆ. ಹಾಗಾಗಿ ಈ ಲೇಖನ ಸಿದ್ಧಪಡಿಸಿದ್ದೇನೆ.

ನೋಟು ಅನಾಣ್ಯೀಕರಣ” ಇದು ಈಗಿನ ಸರಕಾರ ಕೈಗೊಂಡ ಒಂದು ಬದ್ಧ, ದೇಶ ಹಿತಕಾರಿ, ಪ್ರಬುದ್ಧ, ಸೂಕ್ತ ನಿರ್ಣಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಆರ್ಥಿಕ ಸ್ಥಿರತೆಗೆ ಇರುವ ಒಂದು ವಿಶೇಷ “ರಾಮಬಾಣ”. ಇದನ್ನು ಮೋದಿಯವರು ಅರ್ಥಮಾಡಿಕೊಂಡಿದ್ದರು. ಹಾಗಾಗಿ ಜಾರಿಗೆ ತಂದಿದ್ದಾರೆ. ಭವಿಷ್ಯದಲ್ಲಿ ೧೦೦ ವರ್ಷಕಾಲ ದೇಶೀಯ ಆರ್ಥಿಕತೆ ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಸಾಧ್ಯ. ಇದರ ಹಿನ್ನೆಲೆಯಲ್ಲಿ “ತ್ಯಾಗ”ವೆಂಬ ಸೂತ್ರ ಅಡಗಿದೆ. ಅದೇ “ಲೋಕಾಃ ಸಮಸ್ತಾಃ ಸುಖಿನೋ ಭವಂತು”

ನಮ್ಮಲ್ಲಿ ಒಂದು ಸಂಪ್ರದಾಯ ಚಾಲ್ತಿಯಲ್ಲಿದೆ. ನಮಗೆ ಅತೀ ಪ್ರಿಯವಾದ ವಸ್ತುವನ್ನು ತ್ಯಾಗ ಮಾಡುವುದು ಕಾಶೀಯಾತ್ರೆ ಇಂತಹ ಪ್ರಕರಣಗಳಲ್ಲಿ ಈ ಉದಾಹಱಣೆ ಕಾಣಬಹುದು. ಇಲ್ಲಿಯೂ ಇತ್ತೀಚೆಗೆ ಜನರಿಗೆ ಯೇನಕೇನ ಪ್ರಕಾರೇಣ ದುಡ್ಡೇ ಅತಿಪ್ರಿಯ. ದುಡ್ಡಿಗಾಗಿ ಏನೂ ಮಾಡಬಲ್ಲರು. ಕೊಲೆ, ಸುಲಿಗೆ, ದರೋಡೆ, ವಂಚನೆ, ಮೋಸ, ದಗಾ ಎಲ್ಲಾ ದುಡ್ಡಿಗಾಗಿ. ಅಂದರೆ ಜನರೆಲ್ಲಾ ಹೆಚ್ಚಾಗಿ ಪ್ರೀತಿಸುವ ವಸ್ತುವೇ ಹಣ. ಅದರ ಬಗ್ಗೆ ವೈರಾಗ್ಯ ಹುಟ್ಟಿಸುವ ಕೆಲಸದಲ್ಲಿ ಇದು ಮೊದಲನೇ ಹೆಜ್ಜೆ. ಅತೀ ಬೆಲೆಬಾಳುವ ವಸ್ತುವೆಂಬ ಭ್ರಾಂತಿಯಲ್ಲಿ ಸಾವಿರ ರೂಪಾಯಿಯ ನೋಟನ್ನಿಟ್ಟು ಪೂಜೆ ದೀಪಾವಳಿ ಹಬ್ಬದಲ್ಲಿ ಮಾಡಿದ ಜನ, ಇದು ಬರೇ ಪೇಪರ್ ಚೂರು ಎಂದಾಗ ಜನರಿಗೆ ಹುಟ್ಟುವ ಸಹಜ ವೈರಾಗ್ಯವೇ ಮುಂದಿನ ನೈಜ ವೈರಾಗ್ಯಕ್ಕೆ ಕಾರಣ. ಹಾಗಾಗಿ ಮೋದಿಯವರು ಭಾರತೀಯತೆಯ ಪಾಠ ಕಲಿಸಿದ್ದಾರೆ ಜನರಿಗೆ. ಜಗತ್ತಿನಲ್ಲಿ ದುಡ್ಡೇ ಎಲ್ಲವೂ ಅಲ್ಲ. ಅದೂ ಒಂದು ಜೀವನ ಸಾಮಗ್ರಿ ಎಂದು ಅರ್ಥ ಮಾಡಿಕೊಳ್ಳಿರಿ. ಅದರ ಮೇಲಿನ ಮೋಹ ಬಿಟ್ಟು ಆದಷ್ಟು ಸಜ್ಜನರಾಗಿ, ಅಲ್ಪತೃಪ್ತರಾಗಿ ಬಾಳಲು ಇದೀಗ ನಿಮಗೊಂದು ಸದವಕಾಶವನ್ನು ಸರಕಾರ ಕಲ್ಪಿಸಿದೆ. ಬಳಸಿ ಮಾನವರಾಗಿರೆಂದು ಹಾರೈಸುತ್ತಾ ಈ ನೋಟಿನ ಪ್ರಕರಣದಿಂದಾಗಿ ದೇಶೀಯ ಆರ್ಥಿಕತೆ ಹೇಗೆ ಬದಲಾವಣೆ ಕಾಣಬಹುದು ಹಾಗೂ ಅದನ್ನು ಎಷ್ಟು ಜನೋಪಯೋಗಿಯಾಗಿ ಬಳಸಬಹುದು ಎಂಬುದನ್ನು ಬರೆಯುತ್ತಿದ್ದೇನೆ ಓದಿರಿ.

ಈಗಿನ ಕಾಳಧನಿಕರ ಬಂಧನದಲ್ಲಿರುವ ನೋಟು ಪೂರ್ತಾ ತೆರಿಗೆಯೊಂದಿಗೆ ಹೊರಬಂದರೆ ಸರಕಾರಕ್ಕೆ ಹಲವು ಲಕ್ಷಕೋಟಿ ಲಾಭವಾಗುತ್ತದೆ. ಪರ್ಯಾಯವಾಗಿ ಜನರಿಗೆ ತೆರಿಗೆ, ಸಬ್ಸಿಡಿ, ಕಡಿಮೆ ಬಡ್ಡಿ ಸಾಲ, ರೋಡ್ ಟೋಲ್ ಗಳ ವಿನಾಯಿತಿ, ಅಗತ್ಯವಸ್ತುಗಳ ಮೇಲೆ ಸಬ್ಸಿಡಿ, ರೈತರಿಗೆ ಉಚಿತ ವಿದ್ಯುತ್, ಗೊಬ್ಬರ, ಬೀಜಗಳನ್ನು ಕೊಡಬಹುದು. ತನ್ಮೂಲಕ ದೇಶ ಆರ್ಥಿಕ ಬದ್ಧತೆ ಸಾಧಿಸಲು ಖಂಡಿತಾ ಸಾಧ್ಯ. ಹಾಗಾಗಿ ಈ ನೋಟು ಅನಾಣ್ಯೀಕರಣವೊಂದು ದೇಶಹಿತ ನಿರ್ಣಯವೆಂದು ಈ ಮೂಲಕ ಖಡಾಖಂಡಿತವಾಗಿ ಹೇಳಬಹುದು.

ಒಟ್ಟಾರೆ ಸದ್ಬುದ್ಧಿ ಕಲಿತ ಉತ್ತಮ ಸಮಾಜ ನಿರ್ಮಾಣದಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಬಹುದು. ಈಗ ಅದರ ಬಹುಕೋನ ಚಿಂತನೆಯನ್ನು ಈ ಸಂಚಿಕೆಯಲ್ಲಿ ಬರೆಯುತ್ತಿದ್ದೇನೆ. ಓದಿ ಅರ್ಥಮಾಡಿಕೊಂಡು ನರೇಂದ್ರ ಮೋದಿಯವರೊಂದಿಗೆ ಕೈ ಜೋಡಿಸಿ ನಿಮಗೆ ಸರಿ ಕಂಡು ಬಂದರೆ.  ಇಲ್ಲಿ ಮೊದಲಾಗಿ ನಾಲ್ಕು ಭಾಗದಲ್ಲಿ ನಾವು ಈ ಚಿಂತನೆ ಮಾಡಿದ್ದೇವೆ. ಅದರಲ್ಲಿ: 


೧. ಜನರನ್ನು ಸಜ್ಜನರನ್ನಾಗಿ ಮಾಡುವುದು. 
೨. ದೇಶದಲ್ಲಿ ಮಾನವಧರ್ಮ ಉದ್ದೀಪನಗೊಳಿಸುವುದು. 
೩. ದೇಶದ ಆರ್ಥಿಕತೆ ವೃದ್ಧಿಪಡಿಸಿ ಸರ್ವತೋಮುಖ ಅಭಿವೃದ್ಧಿ ಸಾಧನೆ. 
೪. ಪ್ರಪಂಚಾದ್ಯಂತ ಭಾರತೀಯರ ಗೌರವಾದರಗಳನ್ನು ಕಾಯ್ದುಕೊಳ್ಳುವುದು.

ಈ ನಾಲ್ಕೂ ನಿಟ್ಟಿನಲ್ಲಿ ಒಂದೇ ಆದ ಪ್ರಯತ್ನವಿದಾಗಿರುತ್ತದೆ. ಅದರ ಚಿಂತನೆಯೇ ಇದಾಗಿರುತ್ತದೆ.
  1. ಜನರಲ್ಲಿ ಸಜ್ಜನಿಕೆ ಬೆಳೆಯುವಂತೆ ಮಾಡುವುದು. ಅದರಲ್ಲಿ ಮುಖ್ಯವಾಗಿ ಆರ್ಥಿಕ ಅಹಂಕಾರ. ದುಡ್ಡಿದ್ದರೆ ಏನೂ ಮಾಡಬಹುದೆನ್ನುವ ಪ್ರವೃತ್ತಿಯೇ ಇದಕ್ಕೆ ಕಾರಣ. ಇದರ ಹಿನ್ನೆಲೆಯಲ್ಲಿ ಅಧರ್ಮ ರೀತಿಯಲ್ಲಿ ಜನರಿಗೆ ಸಿಕ್ಕಿದ ದುಡಿಮೆಯ ಅವಕಾಶ. ಅದು ಜನರಲ್ಲಿ ಮಾನವೀಯತೆ ಯನ್ನು ನಾಶ ಮಾಡುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಬಾಂಧವ್ಯ ಎಲ್ಲವನ್ನೂ ದುಡ್ಡಿನ ಮುಖೇನ ಅಳೆಯುವ ಹಂತಕ್ಕೆ ನಾವು ಬರುತ್ತಿದ್ದೇವೆ. ಹಾಗಾಗಿ ಅದಕ್ಕೆ ಉತ್ತಮ, ಧರ್ಮಬದ್ಧ, ನ್ಯಾಯಯುತ ಬೋಧನಾವಿಧಿ ಇದು. ಹಾಳು ಕಾಗದದ ಚೂರಿಗೆ ಜನ ಕೊಡುವ ಬೆಲೆ ತಂದೆ ತಾಯಿಗೆ ಕೂಡಾ ಕೊಡುತ್ತಿಲ್ಲ. ಕಾರಣ ದುಡ್ಡಿನ ಗತ್ತು, ಅಹಂಕಾರ ಮತ್ತು ಅಜ್ಞಾನ. ಇದನ್ನು ತಡೆಯಬೇಕಿದ್ದಲ್ಲಿ ಭಾವನಾತ್ಮಕವಾಗಿ ಮಾನವೀಯತೆ ಬೆಳೆಯಲು ಈ ನೋಟು ಅನಾಣ್ಯೀಕರಣ ಸಹಾಯಕ.
     

  2. ಈ ಭೂಮಿಯಲ್ಲಿ ಹುಟ್ಟಿದ ಪ್ರತೀ ಜೀವಿಗೂ ಬದುಕುವ ಹಕ್ಕಿದೆ. ಅವುಗಳ ಬದುಕಿಗೆ ಆಸರೆಯಾಗುವಂತೆ ಬದುಕು ಕಟ್ಟಿಕೊಳ್ಳುವುದೇ ಮಾನವಧರ್ಮ. ಈಗ ಹಣ ಮಾಡಲು ಹೊರಟ ಮಾನವ ಇಡೀ ಪ್ರಕೃತಿಯನ್ನು ತನ್ನ ದುರಾಸೆಯಿಂದ ಹಾಳು ಮಾಡುತ್ತಾ  ಇತರೆ ಜೀವ ಸಂಕುಲ ನಾಶ ಮಾಡುತ್ತಿದ್ದಾನೆ. ಒಟ್ಟಾರೆ ಹಣ ಮಾಡಬೇಕು ಎನ್ನುವ ದುರಾಸೆಯಿಂದ ಎಲ್ಲವನ್ನೂ ಹಾಳುಗೆಡುವುತ್ತಿದ್ದಾನೆ. ಅದನ್ನು ತಡೆಯುವಲ್ಲಿ  ಈ ನೋಟು ಅನಾಣ್ಯೀಕರಣ ಒಂದು ದೊಡ್ಡ ಬ್ರಹ್ಮಾಸ್ತ್ರ.
     
  3. ದೇಶದ ಆರ್ಥಿಕತೆ ವೃದ್ಧಿ, ಮೂಲಭೂತ ಸೌಲಭ್ಯವೃದ್ಧಿ, ಶಿಕ್ಷಣ, ಆರೋಗ್ಯ, ರಕ್ಷಣೆ, ಇದನ್ನು ಸಾಧಿಸಲು ಬೇಕು ಜನರು ನೀಡುವ ತೆರಿಗೆಯ ಶಕ್ತಿ ಸರಕಾರಕ್ಕೆ. ಆದರೆ ಎಲ್ಲರೂ ತೆರಿಗೆ ವಂಚಕರಾಗಿರುತ್ತಾರೆ. ಯಾರೂ ಪ್ರಾಮಾಣಿಕರಾಗಿ ತೆರಿಗೆ ಕಟ್ಟುತ್ತಿಲ್ಲ ಕಾರಣ ತೆರಿಗೆ ಕಟ್ಟುವವನಿಗಿರುವ ಕೆಲ ತಾಂತ್ರಿಕ ತೊಂದರೆಗಳು. ಅದನ್ನು ಅಧಿಕಾರಿಗಳು ದುರುಪಯೋಗ ಪಡಿಸಿ ಕೊಳ್ಳುವುದು. ತೆರಿಗೆ ಕಟ್ಟುವುದೇ ಅಸಾಧ್ಯವೆಂಬ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಭ್ರಷ್ಟಾಚಾರ, ಅಧಿಕಾರಿಗಳ ಮೋಸ ವಂಚನೆ, ಲಂಚಗುಳಿತನ. ಅದರ ನಿವಾರಣೆಗೆ ಇದು ಬ್ರಹ್ಮಾಸ್ತ್ರ.

  4. ಈ ದೇಶದಲ್ಲಿ ಹೊಟ್ಟೆಗಿಲ್ಲದೆ ಬೇಡುವವರಿಲ್ಲ, ಭಿಕ್ಷುಕರೂ ಇಲ್ಲ. ಆದರೆ ಭಿಕ್ಷೆಯೂ ಒಂದು ಉದ್ದಿಮೆಯಾಗಿ ಬೆಳೆದು ದೇಶವ್ಯಾಪಿಯಾಗಿದೆ. ಅದರಲ್ಲಿ ನಾನಾವಿಧ. ದೇಶದ ಕಾಳಧನಿಕರಲ್ಲಿ ಭಿಕ್ಷುಕರೂ ಇದ್ದಾರೆ. ತೆರಿಗೆ ವಂಚಕರಲ್ಲಿ ಭಿಕ್ಷುಕರೂ ಇದ್ದಾರೆ. ಅವರು ಹೊಟ್ಟೆಗಾಗಿ ಬೇಡುತ್ತಿಲ್ಲ ಇದು ಸತ್ಯ. ಹಾಗೆ ಅದೊಂದು ವಿಚಿತ್ರ ರೀತಿಯ ದಂಧೆಯಾಗಿ ಮಾರ್ಪಟ್ಟಿದೆ. ನಾನಾ ರೀತಿಯ ಡೊನೇಷನ್ ರೂಪದ ಭಿಕ್ಷೆ. ದೇಶದೆಲ್ಲೆಡೆ ಅವಿಚ್ಛಿನ್ನವಾಗಿ ಯಾವುದೇ ಕಾನೂನಿನ ತೊಡಕಿಲ್ಲದೇ ನಡೆಯುತ್ತಿದೆ. ಕೇಳಿದರೆ ಲೋಕಕಲ್ಯಾಣ”. ಜನರಲ್ಲಿ ಧಾರ್ಮಿಕ ಭಾವನೆ ಇದೆ, ಅದರ ದುರುಪಯೋಗ, ತನ್ಮೂಲಕ ಹಣ ಮಾಡುವ ದಂಧೆ. ತೆರಿಗೆ ವಂಚನೆ ನಡೆಯುತ್ತಲೇ ಇದೆ. ಪೂಜಾರಿಯು, ಅರ್ಚಕನು, ಪುರೋಹಿತನು, ಪುಢಾರಿಯೂ ಸಮಾನ ತೆರಿಗೆ ವಂಚಕರೇ. ಅರ್ಥಾತ್ ದೇಶದ್ರೋಹಿಗಳೇ. ವಿದೇಶಗಳಲ್ಲಿ ಹೋಗಿ ನಮ್ಮ ಹೆಸರಲ್ಲಿ ಅಲ್ಲಿ ಭಿಕ್ಷೆ ಬೇಡಿ ಇಲ್ಲಿ ತಂದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದು ಭಾರತೀಯರ ಗೌರವಾದರಗಳನ್ನು ಯಾವ ಮಟ್ಟಕ್ಕೆ ಇಳಿಸಿದೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಅರ್ಥಮಾಡಿಕೊಳ್ಳಿರಿ.

ಈ ನಾಲ್ಕೂ ಹಂತದ ಭ್ರಷ್ಟಾಚಾರ ತಡೆಯಲು ಈ ಅನಾಣ್ಯೀಕಱಣ ಒಂದೇ ವಿಶೇಷ ಬ್ರಹ್ಮಾಸ್ತ್ರ. ಇದು ಸತ್ಯ, ಸತ್ಯ, ಸತ್ಯ. ಹಾಗಿದ್ದರೆ ಮೊದಲು ಬ್ರಹ್ಮಾಸ್ತ್ರವೆಂದರೇನು ಚಿಂತಿಸೋಣ.


ಸಮಾಜದಲ್ಲಿ ಪರಿವರ್ತನೆ ತರುವಂತೆ ಮಾಡುವುದೇ ಅತೀ ಮುಖ್ಯವಾದ ಕಾರ್ಯ. ಅದು ತೀರಾ ವಿಕೃತಿಯತ್ತ ಹೋಗುತ್ತಿದ್ದರೆ ಬೇರೆ ದಾರಿಯೇ ಕಾಣದಿದ್ದಾಗ ಬ್ರಹ್ಮಾಸ್ತ್ರ ಪ್ರಯೋಗ ಅನಿವಾರ್ಯ. ಮೋದಿ ಮಾಡಿದ್ದೂ ಇದನ್ನೇ. ಒಟ್ಟು ಜನರಲ್ಲಿ  ಬ್ರಹ್ಮಾಸ್ತ್ರವೆಂದರೆ ನಾಶ ಮಾಡುವ ಒಂದು ಅಸ್ತ್ರ ಎಂಬಂತೆ ತಿಳಿದಿದೆ. ಆದರೆ ಅದು ಜೀವ ನಾಶಕ ಅಸ್ತ್ರವಲ್ಲ. ವಿಕೃತಿಯನ್ನು ನಾಶ ಮಾಡಿ ಸುಕೃತಿ ಬೆಳೆಯುವಂತೆ ಮಾಡುವ ಅಸ್ತ್ರ. ಹಾಗಾಗಿ ಬ್ರಹ್ಮಾಸ್ತ್ರ. ವಿಕೃತಿ ಅಜ್ಞಾನ ಸೂಚಕ, ಸುಕೃತಿ ಜ್ಞಾನ ಪ್ರದಾಯಕ.  ಬ್ರಹ್ಮ=ಜ್ಞಾನ. ಸುಜ್ಞಾನವನ್ನು ಅಸ್ತ್ರವತ್ ಪ್ರಯೋಗ ಮಾಡಿದಾಗ ಜನ ಮಾನಸದ ಅರಿವಿಗೆ ಬರದೇನೇ ಸುಜ್ಞಾನ ಮೂಡಬಲ್ಲದು. ಅದೇ ಬ್ರಹ್ಮಾಸ್ತ್ರ. ನಮ್ಮೀ ದೇಶದಲ್ಲಿ ಸುಖ ಅರಸಿ ಜೀವನವಿಲ್ಲ. ಸುಕೃತಿಯೊಂದಿಗೆ ಜೀವನ, ಶ್ರಮವೇ ಸತ್ಯ”, “ಕಾಯಕವೇ ಕೈಲಾಸ”, ಸತ್ಯವೇ ತಾಯಿತಂದೆ, ಸತ್ಯವೇ ಬಂಧುಬಳಗ, ಸುಜ್ಞಾನವೇ ಸಂಪತ್ತು, “ಪರೋಪಕಾರವೇ ಪುಣ್ಯ”, “ಪ್ರಾಪಂಚಿಕ ತ್ಯಾಗವೇ ಮುಕ್ತಿ”.

ಇದೇ ಜ್ಞಾನದ ನೆಲೆಯಲ್ಲಿ ಭಾರತೀಯರ ಜೀವನವಿದೆ. ಈಗ ಹದಗೆಟ್ಟಿರುವ ದುಡ್ಡಿನ ಬಾಂಧವ್ಯದ ದುರಾಗ್ರಹ ನಿವಾರಣೆಗೆ ಪ್ರಯೋಗಿಸಿದ ಬ್ರಹ್ಮಾಸ್ತ್ರ ಸರಿಯಾಗಿದೆ. ಇದರ ಮುಖೇನ ಈ ಭಾರತೀಯರ ಭಾರತೀಯತೆಯನ್ನು ಪುನರುಜ್ಜೀವನಗೊಳಿಸ ಬಲ್ಲರು ಮೋದಿಯವರು. ಸ್ವಲ್ಪ ಕಾಲ ಕಾದು ನೋಡಿ, ಆನಂದಾದಿ ಯೋಗಗಳು ಸಮೀಪಿಸಿದೆ, ಸತ್ಯ ತೆರೆದುಕೊಳ್ಳುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು

ಇಂತು
ಕೆ. ಎಸ್. ನಿತ್ಯಾನಂದ
ವೇದ-ವಿಜ್ಞಾನ ಮಂದಿರ
ಚಿಕ್ಕಮಗಳೂರು

No comments:

Post a Comment