Tuesday, 3 January 2017

ಗುಣಕ (ವಸು) ಪ್ರಣೀತ ಮಾನವ ಧರ್ಮ - ೧ನಾವೆಲ್ಲ ಲೋಕ ಕ್ಷೇಮದ ಚಿಂತನೆಯನ್ನು ಮಾಡೋಣ. ಮಾಂಧಾತಾ ನಹುಷೋಂಬರೀಷ ಸಗರೋ ರಾಜಾ ಪೃಥುರ ಇಳಯಾ ಧರ್ಮಸುತೋ ನಳೋ ದಶರಥೋ ಯಮೋ ಯಯಾತಿರ್ಯದುಃ ಇಕ್ಷ್ವಾಕುಶ್ಚ ವಿಭೀಷಣಶ್ಚ ಭರತಶ್ಚ ಉತ್ತಾನಪಾದೌ || ಇವರೆಲ್ಲ ಮಾಡಿದ್ದೇನು? ನಿಮ್ಮನ್ನು ರಕ್ಷಣೆ ಮಾಡುತ್ತೇವೆಂದು ಎತ್ತರದ ಸ್ಥಾನದಲ್ಲಿ ಕುಳಿತರು, ನಂತರ ಎಲ್ಲಿ ಹೋದರೋ ತಿಳಿದಿಲ್ಲ. ಆದರೆ ನಾವು ಮಾತ್ರ ಇಲ್ಲೇ ಇದ್ದೇವೆ. ನಮಗೆ ಮೇಲೆ ಹೋಗಲಿಕ್ಕೇ ಆಗಲಿಲ್ಲ. ಹಾಗಾಗಿ ಕೃಷ್ಣ ಹೇಳಿದ್ದೂ ಅದನ್ನೇ, ಮಾಡಿದ್ದೂ ಅದನ್ನೇ. ಹೋಗಲಿ ಬಿಡಿ. ಯೋಗಕ್ಷೇಮಂ ವಹಾಮ್ಯಹಂ ಎಂದು ಹೇಳಿದವನೊಬ್ಬ ಕೊನೆಗೆ ಎಲ್.ಐ.ಸಿ ಕಮಿಷನ್ ಏಜೆಂಟ್ ಆದ. ಒಬ್ಬನಲ್ಲ, ಎಲ್ಲರೂ ಮಾಡಿದ್ದು ಅದನ್ನೇ. ಅದು ಜೀವ ವಿಮಾ ಸುರಕ್ಷೆ. ನಿಮ್ಮನ್ನು ರಕ್ಷಣೆ ಮಾಡುತ್ತೇವೆ ಎಂದಾಕ್ಷಣ ಎಲ್ಲರೂ ಹಣ ಪಾವತಿಸಿದರು. ನಾವೊಂದು ಧ್ಯೇಯ ಇಟ್ಟುಕೊಂಡಿರುವುದೇನೆಂದರೆ "ಪ್ರಪಂಚವನ್ನೆಲ್ಲಾ ಪ್ರೀತಿಸುವ" - ಹಾಗಿದ್ದ ಮೇಲೆ ಕೃಷ್ಣಾದಿ ಯಾರನ್ನೂ ದ್ವೇಷಿಸುವುದಿಲ್ಲ. ನಾವು ಬೈದ ತಕ್ಷಣ, ದ್ವೇಷಿಸಿದ ತಕ್ಷಣ ಏನೂ ಆಗುವುದಿಲ್ಲ. ಏಕೆಂದರೆ ಕೃಷ್ಣನು ಭೌತಿಕ ಅಸ್ಥಿತ್ವದಲ್ಲೇ ಇಲ್ಲ, ದೈವಿ ಅಸ್ಥಿತ್ವ ಮಾತ್ರಈಗ ಇರುವುದು ನಮ್ಮ ಭೌತಿಕ ಅಸ್ಥಿತ್ವ ಮಾತ್ರ.

.10-105 -1 ऋषि: - कौत्सः सुमित्रो दुर्मित्रो वा, देवता - इन्द्र:, छन्द: - पिपीलिकामध्योष्णिक्, स्वर:- ऋषभः
 
क॒दा व॑सो स्तो॒त्रं हर्य॑त॒ आव॑ श्म॒शा रु॑ध॒द्वाः । दी॒र्घं सु॒तं वा॒ताप्या॑य ॥ 1

क॒दा व॑सो स्तो॒त्रं - ಈ ವಸುಂಧರೆಯ ಪರಿಣಾಮ ರೂಪವಾದಂತಹಾ ಮನುಷ್ಯ, ಪ್ರಾಣಿ, ಪಕ್ಷಿ, ಮರ, ಇತ್ಯಾದಿಗಳೆಲ್ಲ ವಸುಗಳು ಎಂದರ್ಥ. ಮನುಷ್ಯನನ್ನು ವಸು ಎಂದೂ ಕರೆಯುತ್ತಾರೆ. ಈ ವಸುಂಧರೆಯಲ್ಲಿ ಹುಟ್ಟಿದ ಎಲ್ಲ ಜೀವಿಗಳೂ ವಸುಗಳು ಎಂದರ್ಥ. ಇವುಗಳೆಲ್ಲ ಯಾವುದನ್ನು ಸ್ತೋತ್ರ ಮಾಡಬೇಕು? ಇಲ್ಲಿ ಸ್ತೋತ್ರ ಎಂದರೆ ಸ್ತುತಿ, ಪ್ರಾರ್ಥನೆ, ಅರ್ಥ ಮಾಡಿಕೊಳ್ಳುವುದು, ಜೀರ್ಣಿಸಿಕೊಳ್ಳುವುದು ಎಂಬರ್ಥ ಕೊಡುತ್ತದೆ.

स्तो॒त्रं हर्य॑त॒ आव॑ श्म॒शा रु॑ध॒द्वाः - ಯಾವುದಕ್ಕಾಗಿ ನಾವು ಬದುಕಬೇಕು? ಯಾವುದಕ್ಕಾಗಿ ನಾವು ಬೇಡಬೇಕು? ಈ ಒಂದು ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಇಲ್ಲಿರತಕ್ಕಂತಹಾ  ಎಲ್ಲಾ ಜೀವಿಗಳ ಹುಟ್ಟಿಗೆ ಒಂದು ಕಾರಣ, ಅದಕ್ಕೊಂದು ಗುರಿ ಇರಬೇಕಲ್ಲವೇ? ಅದಿದ್ದರೆ ಅಂತಹಾ ಕಾರಣದ ಯಶಸ್ಸು ಅಥವಾ ಪ್ರಾಪ್ತಿಗಾಗಿ ನಾವು ಯಾವುದನ್ನು ಬೇಡಬೇಕು (रु॑ध॒द्वाः)? ಏನು ಮಾಡಬೇಕು?

दी॒र्घं सु॒तं वा॒ताप्या॑य - ಎಷ್ಟೋ ಲಕ್ಷ ಕೋಟಿ ವರ್ಷಗಳಾದರೂ ಯಾವುದನ್ನು ಕೇಳಬೇಕು ಎಂಬ ಹಂತಕ್ಕೆ ನಾವಿನ್ನು ಬಂದಿಲ್ಲ. ಏಕೆ ಬಂದಿಲ್ಲ? ಮೂಲ ಪ್ರಶ್ನೆಯು ಉದ್ಭವವಾಗದೆ, ಉಪಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂಬುದು ಸಾಂಖ್ಯರ ವಾದ. ಮೂಲವು ಉತ್ಪನ್ನವಾದರೆ ಅದಕ್ಕೆ ಉಪಗಳು ಹುಟ್ಟಿಕೊಳ್ಳುತ್ತವೆ. ಏನು ಎನ್ನುವುದು ಹುಟ್ಟಿತು ಎಂಬುದು ದಾರ್ಶನಿಕರ ಸೈದ್ಧಾಂತಿಕ ವಾದ. ಆರಂಭಿಕವಾಗಿ ಜೀವಿಗಳಲ್ಲಿ ಏನು ಎನ್ನುವ ಕುತೂಹಲವು ಉತ್ಪನ್ನವಾಗುತ್ತದೆ. ಅಲ್ಲಿಯವರೆಗದು ಮೃತ್ ಸ್ವರೂಪ. ಕುತೂಹಲ ಹುಟ್ಟಿದಾಗ ಜೀವಿಯು ಪ್ರವರ್ತನೆಯಲ್ಲಿ ತೊಡಗುತ್ತದೆ. ತನ್ಮೂಲಕ ಅದು ಬೆಳೆಯಲಿಕ್ಕೆ ಶುರುವಾಗುತ್ತದೆ. ಇದು ದಾರ್ಶನಿಕ, ಆಧ್ಯಾತ್ಮವಾದಿಗಳ ವಾದ. ಪ್ರತಿಯೊಂದು ಜೀವಿಗೆ ಕುತೂಹಲ ಹುಟ್ಟಿದಾಗಲೇ ಅದು ಬೆಳೆಯಲಿಕ್ಕೆ ಶುರುವಾಗುವುದು. ತನ್ನ ಅನುಭವದಿಂದ ಒಳ್ಳೆಯದು-ಕೆಟ್ಟದ್ದನ್ನು ಅರ್ಥ ಮಾಡಿಕೊಳ್ಳುತ್ತದೆ. ಜೀವಿಯ ಹುಟ್ಟಿನ ಮೂಲದಲ್ಲಿ ಯಾವುದೇ ಗುರಿಯಿಲ್ಲ ಎನ್ನುವದು ದಾರ್ಶನಿಕರ ಅಭಿಪ್ರಾಯ. ಸಾಮಾನ್ಯ ೧೮೦೦೦ ದಾರ್ಶನಿಕರಲ್ಲಿ ೧೭೯೯೭ ಜನರೂ ಅದನ್ನೇ ಹೇಳಿದ್ದು. ಅಂದರೆ ಜೀವಿಯು ಜನ್ಮಕ್ಕೆ ಬಂದಾಗ ಏನೂ ಗುರಿಯಿಲ್ಲದ ಕಾರಣ, ಮೃತ್ ಸ್ವರೂಪ ಎಂದರು. ಅದಕ್ಕೆ ಕುತೂಹಲ ಹುಟ್ಟುತ್ತದೆ. ಆ ಕುತೂಹಲದಿಂದಾಗಿ ಅದು ಪ್ರವರ್ತನೆಗೆ ತೊಡಗುತ್ತದೆ. ಹಾಗಾಗಿ ಅದು ದೀಪಕ್ಕೆ ಹೋಗಿ ಕೈ ಇಡುತ್ತದೆ. ಸುಟ್ಟ ತಕ್ಷಣ ದೀಪವು ಕೈ ಸುಡುತ್ತದೆ ಎಂಬ ಅನುಭವ ಉಂಟಾಗುವ ಕಾರಣ ಪುನಃ ದೀಪ ಕಂಡಾಗ ಕೈ ಸುಟ್ಟುಕೊಳ್ಳುವ ದುಸ್ಸಾಹಸ ಮಾಡುವುದಿಲ್ಲ. ಒಳ್ಳೆಯದ್ದನ್ನು ಸ್ವೀಕರಿಸುತ್ತಾ, ಕೆಟ್ಟದ್ದನ್ನು ಬಿಡುತ್ತಾ ಹೋಗುತ್ತಿರುತ್ತದೆ. ಹೀಗೆ ಜೀವಿಗಳು ಹಿಂದಕ್ಕೆ ಹೋಗಿ ಮುಂದಕ್ಕೆ ಬರುವ ಗಾಲಿಯಂತೆ ನಿರಂತರ ಹುಟ್ಟು-ಸಾವು ಎಂಬ ಚಕ್ರಾವರ್ತುಲದಲ್ಲಿ ಅನಂತ ಕಾಲಘಟ್ಟದಲ್ಲಿ ತಿರುಗುತ್ತಲೇ ಇರುತ್ತವೆ.

        ದಾರ್ಶನಿಕ ಸಿದ್ಧಾಂತಗಳೆಲ್ಲವೂ ಅದನ್ನೇ ಹೇಳುವುದು. ಕೆಲವೇ ಕೆಲವು ಮಂದಿ, ಮೇಲ್ನೋಟದ ವ್ಯಾಖ್ಯಾನದಲ್ಲಿ ಪುನರ್ಜನ್ಮ ಸಿದ್ಧಾಂತ ಇಲ್ಲ ಎನ್ನುತ್ತಾರಷ್ಟೆ. ಆದರೆ ಅವರೆಲ್ಲರಲ್ಲೂ ಪುನರ್ಜನ್ಮ ಸಿದ್ಧಾಂತವಿದ್ದೇ ಇದೆ. ಅಷ್ಟು ಆಳಕ್ಕೆ ಚಿಂತನೆ ಮಾಡಲು ಗೊತ್ತಿಲ್ಲದ ಕಾರಣ ಅವರು ತಮ್ಮಲ್ಲಿ ಪುನರ್ಜನ್ಮವಿಲ್ಲ ಎನ್ನುತ್ತಾರೆ. ಕೆಲವರು ತಮ್ಮ ಮತದಲ್ಲಿ ಹುಟ್ಟಿದವರೆಲ್ಲ ನೇರ ಸ್ವರ್ಗಕ್ಕೇ ಹೋಗುವುದು ಎನ್ನುತ್ತಾರೆ. ಇನ್ನು ಕೆಲವರು ತಾವು ಸ್ವರ್ಗವನ್ನೇ ತೋರಿಸಿಕೊಡುತ್ತೇವೆ ಎನ್ನುತ್ತಾರೆ. ಅಂದರೆ ಅವರು ಸ್ವರ್ಗದಿಂದ ಇಳಿದು ಬಂದವರೇ? ಉದಾಹರಣೆಗೆ ಪುನರ್ಜನ್ಮ ಸಿದ್ಧಾಂತ ಇಲ್ಲ ಎಂದು ಹೇಳುವ ಮುಸ್ಲಿಮ್ ಮತ ತೆಗೆದುಕೊಳ್ಳಿ. ಅಲ್ಲಿ ಒಬ್ಬ ದೇವದೂತ ಬರುತ್ತಾನೆ ಎಂದು ಹೇಳುತ್ತಾರೆ. ಹಾಗಿದ್ದರೆ ಬೇರೆ ಒಂದು ಸ್ಥಳವಿದೆ. ಅಲ್ಲಿಂದ ಒಬ್ಬ ಬಂದು ಇಲ್ಲಿ ಹುಟ್ಟುತ್ತಾನೆ. ಅಂದ ಮೇಲೆ ಅದು ಪುನರ್ಜನ್ಮವೇ ಆಯಿತು! ಒಂದು ಸ್ವರ್ಗ ಇದೆ ಎನ್ನುವ ಕಲ್ಪನೆಯು ಅನುಭವದಿಂದ ಬರುವುದಾದರೆ ಅದು ಮುಂದಿನ ಜೀವನ ಕಾಲದಲ್ಲಿ ತಾನೇ? ಹಾಗಾಗಿ ದೇವದೂತನೆಂಬ ಆತ್ಮಿಕವಾಗಿ ಹುಟ್ಟುವ ಜೀವಿಗೆ ಸ್ವರ್ಗ ಇದೆ ಎನ್ನುವ ಕಲ್ಪನೆಯು ಮುಂಚೆಯೇ ಇದ್ದಿರಬೇಕಲ್ಲವೇ? ಹಾಗಿದ್ದಾಗ ಆತ ಹಿಂದೆಯೇ ಸ್ವರ್ಗಕ್ಕೆ ಹೋಗಿದ್ದು, ಈಗ ಇಲ್ಲಿ ಬಂದು ಹುಟ್ಟಿದ. ಆದ್ದರಿಂದ ಅದು ಪುನರ್ಜನ್ಮವೇ ಆಯಿತು. ಪುನರ್ಜನ್ಮ ಇದೆ ಎನ್ನುವ ದೀರ್ಘ ಚಿಂತನೆ ಮಾಡದ್ದರಿಂದ ಅದಿಲ್ಲ ಎನ್ನುತ್ತಾರೆ. ಅದಕ್ಕಿಂತ ಹೆಚ್ಚು ಅವರ ಮತದಲ್ಲಿ "ಚಿಂತನೆ ಮಾಡುವಂತಿಲ್ಲ" ಎನ್ನುವುದು ಅವರ ಸಿದ್ಧಾಂತ. ಹಾಗೇ ದಾರ್ಶನಿಕ ವಾದಗಳೆಲ್ಲವೂ ಅಷ್ಟೆ. ಕ್ರಿಶ್ಚನ್ ಮತದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕಂಡುಬರದಿದ್ದರೂ ಅಲ್ಪ ಸ್ವಲ್ಪ ಪುನರ್ಜನ್ಮದ ಕಲ್ಪನೆ ಇದೆ. ಹಾಗೆಯೇ ಪುನರ್ಜನ್ಮದ ಕಲ್ಪನೆಯೇ ಇಲ್ಲದ ಎಷ್ಟೋ ದಾರ್ಶನಿಕ ವಾದಗಳು ಆಗಿ ಹೋಗಿವೆ. ಆದರೆ ಅವರೆಲ್ಲ ಅದರ ಮುಂದಿನ ಚಿಂತನೆ ಮಾಡುವ ವಿವೇಕವನ್ನು ಕಳೆದುಕೊಂಡು ಹೇಳುತ್ತಿರುವುದು ಬಿಟ್ಟರೆ ಪುನರ್ಜನ್ಮ ಇಲ್ಲ ಎಂದು ಹೇಳುವ ಅಭಿಪ್ರಾಯ ಯಾವುದೇ ಮೂಲ ದರ್ಶನ ಶಾಸ್ತ್ರಗಳಲ್ಲಿ ಕಂಡುಬರುವುದಿಲ್ಲ.

        ನಮ್ಮ ಈ ಭಾರತೀಯ ನೆಲದಲ್ಲಿ ಹುಟ್ಟಿದಂತಹಾ ಅತೀ ವಿಶಿಷ್ಟವಾದ, ಎಲ್ಲರಿಗೂ ಹೆಸರಿಸಲಿಕ್ಕೆ ಆಗತಕ್ಕಂತಹಾ, ಪುನರ್ಜನ್ಮವನ್ನು ಒಪ್ಪದಿರುವ ಒಂದು ದರ್ಶನ ಶಾಸ್ತ್ರವೆಂದರೆ ಚಾರ್ವಾಕರದ್ದು. ಮುಂದೆ ಜನ್ಮವಿಲ್ಲ, ಸ್ವರ್ಗವಿಲ್ಲ, ಎಂತದೂ ಇಲ್ಲ, ಋಣಂ ಕೃತ್ವಾ ಘೃತಂ ಪಿಭೇತ್ - ಸಾಲ ಮಾಡಿ ತುಪ್ಪ ಕುಡಿಯಿರಿ ಎಂದರು. ಭಸ್ಮೀಕೃತ ಶರೀರಂ ಪುನರಾಗಮನಂ ಕುತಃ? ಅಂದರೆ ಭಸ್ಮವಾಗುವ ಈ ಶರೀರವು ಹೇಗೆ ತಾನೇ ಪುನಃ ಬರಲಿಕ್ಕೆ ಸಾಧ್ಯ? ಎಂದು ಪ್ರಶ್ನಿಸುವವರು ಚಾರ್ವಾಕರು. "ಋಣಂ ಕೃತ್ವಾ" ಎಂದಾಗ "ಋಣ ಮಾಡಿರಿ" = "ಸಾಲ ಮಾಡಿರಿ" ಎಂಬ ಆದೇಶವಿದೆ. ಸಾಲ ಎನ್ನುವುದು ಋಣ ಎನ್ನುವುದರ ಪರಿಣಾಮ ಫಲವೇ ವಿನಃ ಆರಂಭಿಕವಲ್ಲ. ಆರಂಭದಲ್ಲಿ ಋಣ ಮಾಡಲು ಆಗುತ್ತದೆಯೇ? ನೀವು ಸಾಲ ಮಾಡಿ ಅದನ್ನು ತೀರಿಸಲಾಗದಿದ್ದರೆ ನೀವು ಸಾಲ ತೀರಿಸಲಿಕ್ಕೆ ಮೂಲ ಜವಾಬ್ದಾರರಾಗುತ್ತೀರಿ. ಸಾಲ ತೀರಿಸಿದರೆ ಋಣವಿಲ್ಲ! ಹಾಗಾಗಿ ಸಾಲಕ್ಕೆ ಋಣ ಎಂಬುದು ಪರ್ಯಾಯ ಪದ ಕಂಡಿತಾ ಅಲ್ಲ. ಒಬ್ಬನಿಂದೊಬ್ಬ ತೆಗೆದುಕೊಳ್ಳುವಾಗ ಕಂಡಿತಾ ಅದು ಋಣವಲ್ಲ. ತೀರಿಸಲಿಕ್ಕೆ ಆಗದಿದ್ದರೆ ಅದು ಋಣ. ಹೀಗಿರಲು ಚಾರ್ವಾಕರು ಹೇಳಿದ್ದನ್ನು ಸರಿಯಾಗಿ ಪರಾಮರ್ಷಿಸಿ ನೋಡಿ - "ಋಣಂ ಕೃತ್ವಾ ಘೃತಂ ಪಿಭೇತ್". ಹಾಗಾದರೆ ಋಣ ಹೇಗೆ ಮಾಡುವುದು? ಅಲ್ಲಿಯೂ ಪೂರ್ವಜ್ಮದ ಸಿದ್ಧಾಂತವೇ ಬಂದಿತು. "ಚಾರ್ವಾಕರೊಬ್ಬರು ಪುನರ್ಜನ್ಮ ಇಲ್ಲ ಎಂದು ಹೇಳಿದರು" ಎಂದು ಚಾರ್ವಾಕ ಸಿದ್ಧಾಂತವನ್ನು, ಚಾರ್ವಾಕರ ಸಮಕ್ಷಮ ಇಲ್ಲದೇನೇ ವಿಮರ್ಷಿಸಿದರು ಎಂದು ಸಮರ್ಥವಾಗಿ ವಾದಿಸಿ ತೋರಿಸಿದ್ದಾರೆ ನಮ್ಮ ದರ್ಶನಕಾರರು. ಋಣ ಎನ್ನುವುದು ಪುನರ್ಜನ್ಮ ಸಿದ್ಧಾಂತದ ಒಂದು ಭದ್ರವಾದ ಮೆಟ್ಟಿಲು. ಅದಿಲ್ಲದೆ ಪುನರ್ಜನ್ಮಕ್ಕೆ ಆಧಾರವಿಲ್ಲ. "ಭಸ್ಮೀಭೂತಂ ಇದಂ ಶರೀರಂ" ಎಂಬ ವಾಕ್ಯದಲ್ಲೂ ದೇಹವು ಭಸ್ಮವಾಗುವ ತನಕ ಮಾತ್ರ ಎಂದಿತೇ ಹೊರತು ಆತ್ಮನನ್ನು ಕುರಿತಲ್ಲ. ದೇಹಕ್ಕೆ ಸಾವುಂಟು ಆತ್ಮಕ್ಕಲ್ಲ ಎಂದಾಯಿತಲ್ಲವೇ? ಭಸ್ಮೀಭೂತಂ ಇದಂ ಶರೀರಂ ಎಂಬ ವಾಕ್ಯದಲ್ಲಿ ಪಲಾಯನ ವಾದ ಸಹಿತವಾದಂತಹಾ ಒಂದು ಬೇಜವಾಬ್ದಾರಿ ಹೇಳಿಕೆ ಇದೆ ಎನ್ನುವುದನ್ನು ಮಾತ್ರ ತೆಗೆದುಕೊಂಡರೆ ಚಾರ್ವಾಕರ ಮಾತಿಗೆ ಒಂದಿಷ್ಟು ಬಲ ಬರುತ್ತದೆ. ಒಟ್ಟಾರೆ ಈಗ ನಿನಗೆ ತಿನ್ನಬೇಕು ಎಂದು ಸಾಲ ಮಾಡಿಯಾದರೂ ತಿನ್ನು, ನಂತರ ಸತ್ತು ಹೋಗು, ಸುಟ್ಟು ಹಾಕುತ್ತಾರೆ, ಪುನಃ ಹುಟ್ಟಿ ಬಂದರೂ ಇವನೇ ಸಾಲ ಮಾಡಿದ್ದು ಎಂದು ಗುರುತಿಸಲಿಕ್ಕೆ ಯಾರಿಗೂ ಆಗುವುದಿಲ್ಲ ಎನ್ನುವ ಪಲಾಯನ ವಾದವಿದು. ಅದಕ್ಕಿಂತ ಮುಂದಿನದರಲ್ಲಿ ಈ ವಾಕ್ಯಗಳಿಗೆ ಯಾವುದೇ ಮಹತ್ವವಿಲ್ಲ.

        ನಮ್ಮ ದರ್ಶನ ಶಾಸ್ತ್ರಕಾರರು ಚಾರ್ವಾಕರ ವಿಚಾರವು ಈ ರೀತಿ ವಿಮರ್ಷೆಗೆ ಒಳಗಾಗಬೇಕು ಎಂಬುದಕ್ಕೆ ಅವರ ವಾಕ್ಯಗಳಲ್ಲೇ ಬರುವ "ಋಣ", "ಶರೀರ" ಎಂಬ ಆಯ್ದ ಪದಗಳನ್ನೇ ಬಳಸಿ ಅದೊಂದು ನಿಷ್ಪ್ರಯೋಜಕ ಶಾಸ್ತ್ರವೆಂದು ತೋರಿಸಿಕೊಟ್ಟರು. ಚಾರ್ವಾಕರಲ್ಲೂ ಒಳ್ಳೊಳ್ಳೆ ಆದರ್ಶ ವಾಕ್ಯಗಳಿತ್ತು. ಅದು ಜನಜನಿತವಾಗಿರದೆ, ಮೇಲ್ಕಾಣಿಸಿದ ಕೆಲವೇ ವಾಕ್ಯಗಳು ಬಳಕೆಯಲ್ಲಿವೆ ಏಕೆ? ಜನರು ಚಾರ್ವಾಕರ ಹೆಸರು ಹೇಳಿಕೊಂಡು ವಾಕ್ಯ ಉದಾಹರಿಸುತ್ತಾರೆಯೇ ಹೊರತು ನೇರವಾಗಿ ಚಾರ್ವಾಕರು ಈಗ ಬಂದು ಹೇಳುವುದಲ್ಲ. ಚಾರ್ವಾಕರು ಹೀಗೆ ಹೇಳುತ್ತಿದ್ದರು ಎಂದು ನಮ್ಮ ಶಾಸ್ತ್ರವನ್ನು ನಾವು ಸಮರ್ಥಿಸಿಕೊಳ್ಳುವುದಕ್ಕಾಗಿ ಉದಾಹರಿಸಿದರಷ್ಟೆ. ಚಾರ್ವಾಕರ ಈ ವಾಕ್ಯದಲ್ಲಿರುವ ಖಂಡನೆಗಳು ಮಾತ್ರ ಉಳಿದುಕೊಂಡು ಬಂದವು. ಸುಲಭವಾಗಿ ಅವುಗಳನ್ನು ಖಂಡಿಸಿ ತೋರಿಸಬಹುದು. ಆದರೆ ಹಾಗೆ ತೋರಿಸುವುದರಿಂದ ಏನು ಲಾಭವಿದೆ? ಹಾಗಾಗಿ ಚಾರ್ವಾಕರಲ್ಲಿ, ಹೇಳಿಕೊಳ್ಳುವಂತಹಾ ಗಹನವಾದ ವಿಚಾರವೇನೂ ಇಲ್ಲ.

        ಇನ್ನು ಪುನರ್ಜನ್ಮ ಇದೆ ಎನ್ನುವ ಶಾಸ್ತ್ರಗಳಲ್ಲಾಗಲೀ, ಇಲ್ಲ ಎನ್ನುವ ಶಾಸ್ತ್ರಗಳಲ್ಲಾಗಲೀ ಇದಕ್ಕೆ ಹೊರತುಪಡಿಸಿದ ವಿಶಿಷ್ಟವಾದದ್ದು ಯಾವುದಾದರೂ ಇದೆಯೇ? क॒दा व॑सो स्तो॒त्रं - "ನಾವು ಮನುಷ್ಯರು, ಇಂತಹಾ ಒಂದು ಆದರ್ಶವಿದೆ ನಮ್ಮಲ್ಲಿ ಎಂದು ಹೇಳಿಕೊಳ್ಳುವಂತಹದ್ದು ಏನಿದೆ?" ಎಂದು ಈ ವೇದವಾಕ್ಯವು ಪ್ರಶ್ನಿಸುತ್ತದೆ. ಉತ್ತರ ರೂಪವಾಗಿ ಮೊದಲಿಗೇ ವೇದ ವಾಕ್ಯಗಳನ್ನು ಉದಾಹರಿಸುವುದು ಬೇಡ. ದರ್ಶನ ಶಾಸ್ತ್ರಗಳಲ್ಲಿ, ದಾರ್ಶನಿಕರಲ್ಲಿ ಹಲವು ಭಿನ್ನತೆಗಳಿವೆ. ವೇದ ಆಶ್ರಯಿಸಿದ ದರ್ಶನ ಶಾಸ್ತ್ರಗಳು ಹಲವಾದರೆ, ವಿಚಾರಗಳನ್ನೇ ಆಶ್ರಯಿಸಿ ಬೆಳೆದ ದರ್ಶನ ಶಾಸ್ತ್ರಗಳು ಬೇಕಾದಷ್ಟಿವೆ. ಯಾವುದಾದರೊಂದರಲ್ಲಿ ನಮಗೆ ಹೇಳಿಕೊಳ್ಳಲಿಕ್ಕೆ ಆಗುವಂತಹಾ ವಿಶಿಷ್ಟವಾದಂತಹಾ ಒಂದು ವಿಚಾರ ಇದೆಯೇ ಎಂದು ಕೇಳುತ್ತಾರೆ; ಈ ಸೂಕ್ತದ ಮೂಲ ದ್ರಷ್ಟಾರರಾದ ವಸುಗಳು. ಈ ಮಂತ್ರ ಉದ್ಘಾಟನೆ ಆಗುವ ಕಾಲಕ್ಕೇ ತುಂಬಾ ದರ್ಶನ ಶಾಸ್ತ್ರಗಳು ಆಗಿ ಹೋಗಿದ್ದವು. ಅವರ ಕಾಲಕ್ಕೆ ಸಾಂಖ್ಯರೂ ಆಗಿ ಹೋಗಿದ್ದರು ಎಂದು ಮುಂದೆ ಹೆಸರಿಸುತ್ತಾರೆ. ಪುರಾಣಿಕರೂ ಇದಕ್ಕೆ ಉತ್ತರಿಸಬಹುದು. ಆ ಕಾಲದಲ್ಲಿ ಸಮಾಜಕ್ಕೆ ಒಂದು ಉತ್ತಮ ಮಾರ್ಗದರ್ಶನ ಮಾಡಿದ್ದರು ಎಂದು ಹೇಳತಕ್ಕಂತಹಾ ಕಾಲದ ನಂತರವೂ ಮತ್ತೆಷ್ಟೋ ಜನ ದಾರ್ಶನಿಕರು ಆಗಿ ಹೋಗಿದ್ದಾರೆ. ಅವರ ವಾಕ್ಯಗಳಲ್ಲಿ ವಸುಗಳ ಈ ಪ್ರಶ್ನೆಗೆ ಉತ್ತರ ಸಿಗುತ್ತದೆಯೇ?

   ತೀರಾ ಇತ್ತೀಚೆಗೆ, ಇತಿಹಾಸ ಕಾಲದಲ್ಲಿ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಬಸವಣ್ಣ, ಬುದ್ಧ, ಮಹಾವೀರ, ಇತ್ಯಾದಿಗಳ ಆದರ್ಶ ವಾಕ್ಯಗಳಿವೆ. ಬಸವಣ್ಣ: "ಕಾಯಕವೇ ಕೈಲಾಸ", ಮಹಾವೀರ: "ಅಹಿಂಸಾ ಪರಮೋ ಧರ್ಮ", ಬುದ್ಧ: "ಆಸೆಯೇ ದುಃಖಕ್ಕೆ ಮೂಲ", ಶಂಕರಾಚಾರ್ಯರು: "ಅಹಂ ಬ್ರಹ್ಮಾಸ್ಮಿ", ಇತ್ಯಾದಿ ಕಾಣಬಹುದು. ಈ ಎಲ್ಲ ವಾಕ್ಯಗಳಲ್ಲಿ ಯಾವುದಾದರೂ ಒಂದು ನಿಖರವಾಗಿ, ಸ್ಪಷ್ಟವಾಗಿ ಈಗ ಮಂಡಿಸಲು ಸಾಧ್ಯವೇ? ಅವರ ಸಿದ್ಧಾಂತಕ್ಕೂ, ಅವರು ಹೇಳಿದಂತಹಾ ವಾಕ್ಯಕ್ಕೂ ಇರುವ ಸಂಪರ್ಕ ತೋರಿಸಿಕೊಡಲು ಸಾಧ್ಯವೇ? ಶಂಕರಾಚಾರ್ಯರ ಪರಮಭಕ್ತರು ನಾವು. ಖಂಡನೆಗಾಗಿಯಲ್ಲ, ಪ್ರಸಕ್ತ ಮಂತ್ರದ್ರಷ್ಟಾರರ ನಿರ್ಬಿಢ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಶಂಕರರೇ ಹೇಳಿದಂತಹಾ ವಾಕ್ಯವನ್ನು ತೆಗೆದುಕೊಂಡಾಗ ಸತ್ಯವಿಲ್ಲ. "ಅಹಂ ಬ್ರಹ್ಮಾಸ್ಮಿ" ಎಂದಾಗ ನಾನು + ಬ್ರಹ್ಮ ಎಂಬ ಎರಡಾಯಿತು. ಅದ್ವೈತ ಎಂದು ಹೇಳುವುದಕ್ಕೆ ಅಲ್ಲಿ ಏನು ಉಳಿಯಿತು? ಇದು ಅವರೇ ದ್ರಷ್ಟಿಸಿದ ವಾಕ್ಯವೇ? ಅಲ್ಲ, ಇದು ಉಪನಿಷತ್ ವಾಕ್ಯ. ಅದನ್ನು ವಿವರಿಸಲು ಉದಾಹರಿಸಿದರಷ್ಟೆ. ಶಂಕರಾಚಾರ್ಯರು ಬಹಳಾ ಸಾತ್ವಿಕ ಬ್ರಾಹ್ಮಣ, ಯಾವುದೂ ತನ್ನದ್ದೆಂದು ಹೇಳಲೇ ಇಲ್ಲ. ಎಲ್ಲವೂ "ನಮ್ಮದ್ದು" ಎಂದರೇ ಹೊರತು ನನ್ನದ್ದು ಎನ್ನುವುದು ಶಂಕರಾಚಾರ್ಯರಿಗೆ ಗೊತ್ತೇ ಇಲ್ಲ. ಆದರೆ ಜನರು ಮಾತ್ರ ಇದು ಶಂಕರಾಚಾರ್ಯರ ವಾಕ್ಯ ಎಂದು ಹೇಳಿಕೊಳ್ಳುತ್ತಾರೆ ಹೊರತು ಶಂಕರರೇ ತಮ್ಮದ್ದೆಂದು ಹೇಳಿಕೊಂಡಿಲ್ಲ. "ತತ್ ತ್ವಂ ಅಸಿ" - "ಅದು ನೀನೇ ಆಗಿದ್ದೀಯೆ" ಎಂಬುದು ಮತ್ತೊಂದು ವಾಕ್ಯ. ಇಲ್ಲಿಯೂ ಅದು + ನೀನು ಎಂಬ ದ್ವಂದ್ವವಿದೆ. ಇದನ್ನು ಹೇಳಿದಾಗ ಇರುವುದು ದ್ವೈತ ಸ್ಥಿತಿಯೇ ವಿನಃ ಅದ್ವೈತ ಸ್ಥಿತಿಯಲ್ಲ. ಹಾಗಿದ್ದರೆ ಅದ್ವೈತ ಮತ ಪ್ರತಿಷ್ಠಾಪನಾಚಾರ್ಯ ಪರಂಪರಾ ಎಂದು ಶಿಷ್ಯವರ್ಗದವರು ಹೇಳಿಕೊಳ್ಳುವುದೇ ಹೊರತು ಶಂಕರರು ತಾವೇ ಅದ್ವೈತ ಮತ ಸ್ಥಾಪಕರು ಎಂದು ಹೇಳಿಕೊಳ್ಳಲಿಲ್ಲ. ಅಲ್ಲಿ ಪರಂಪರಾ ಎಂದು ವಾಕ್ಯ ಕೊನೆಗೊಳ್ಳುತ್ತದೆ. ನಾವು ಈ ಪರಂಪರೆಯವರು ಎಂದು ಜನರು ಹೇಳಿಕೊಳ್ಳುವುದೇ ಹೊರತು ದರ್ಶನ ಶಾಸ್ತ್ರಕಾರರಲ್ಲ.

        ಹಾಗಾಗಿ ಪ್ರಸಕ್ತ ಮಂತ್ರದಲ್ಲಿ ವಸುಗಳು ಕೇಳುತ್ತಾರೆ: रु॑ध॒द्वाः - "ಯಾವುದನ್ನು ಹೇಳಬೇಕು? ಅಥವಾ ಯಾವುದನ್ನು ಕೇಳಬೇಕು? ಅಥವಾ ಯಾವುದಕ್ಕಾಗಿ ನಮ್ಮೀ ಜನ್ಮ? ಅಥವಾ ಯಾಕಾಗಿ ನಮ್ಮ ಪ್ರವರ್ತನೆ ಪ್ರಕೃತಿಯಲ್ಲಿದೆ?" आव॑ श्म॒शा - ಏನು ನಮ್ಮ ಗುರಿ? ಇದ್ಯಾವುದೂ ಅರ್ಥವಾಗದಂತಹಾ दी॒र्घं सु॒तं वा॒ताप्या॑य - ಎಷ್ಟೋ ಕೋಟಿ ವರ್ಷಗಳಿಂದ ಜೀವಿಗಳಾಗಿ ನಾವು ಬದುಕಿದ್ದೇವೆ. ಆದರೆ ಇಲ್ಲಿಯವರೆಗೂ ನಿರ್ಣಯವಾಗಿಲ್ಲ. ಮೀಮಾಂಸಕರು ಅಷ್ಟು ಸುಲಭವಾಗಿ ಬದ್ಧವಲ್ಲದ ಯಾವುದನ್ನೂ ನಿರ್ಣಯವಾಗಲಿಕ್ಕೆ ಬಿಡುವುದಿಲ್ಲ. ಇನ್ನು ಮುಂದೂ ನಿರ್ಣಯವಾಗುವುದಲ್ಲ. ಇದು ಪ್ರಸಕ್ತ ಪರಿಸ್ಥಿತಿ. ಹಾಗಾಗಿ ನಿರ್ಣಯವೇ ಮಾಡಲಾಗದಂತಹ ಒಂದು ವಿಶಿಷ್ಟ ವ್ಯವಸ್ಥೆಯನ್ನು ನಿರಂತರತೆಯ ಉದ್ದೇಶದಿಂದ ಭಗವಂತ ಸೃಷ್ಟಿ ಮಾಡಿದ್ದಾನೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಏಕೆ ನಿರ್ಣಯ ಮಾಡಲು ಆಗುವುದಿಲ್ಲ? ನಿರ್ಣಯ ಮಾಡಿಬಿಟ್ಟರೆ ಪ್ರಕೃತಿಯ ಅಂತ್ಯ. ಪ್ರಕೃತಿ ಮುಗಿದರೆ ಮುಂದೇನು? ಈ ಪ್ರಕೃತಿಯೇ ಭಗವಂತನ ಆಟದ ರಂಗಸ್ಥಳ. ಅವನಿಗೆ ಸಾಕೆನ್ನಿಸುವವರೆಗೆ ಅಂಕೆ ನಡೆಯುತ್ತದೆ. ಹಾಗಾಗಿ ಪ್ರಕೃತಿಯು ಮೂಲತಃ ನಮಗಲ್ಲ, ಭಗವಂತನಿಗೆ. ಅವನಿಗೆ ಆಟ ಸಾಕೆನ್ನಿಸಬೇಕಲ್ಲವೇ?

        ಯಾರೂ ಇದಮಿತ್ಥಂ ಎಂದು ನಿರ್ಣಯ ನೀಡಿಯೇ ಇಲ್ಲವೇ? ವೇದವೂ ಹೆಸರಿಸಿದೆ, ನಿರ್ಣಯ ಕೊಟ್ಟಿದೆ. ಆದರೆ ಅದನ್ನು ಅರ್ಥಮಾಡಿಕೊಂಡಿಲ್ಲವಷ್ಟೆ. ಹಾಗಾಗಿ ಇದಮಿತ್ಥಂ ನಿರ್ಣಯವಾಗಲೇ ಇಲ್ಲ. ಅರ್ಥ ಮಾಡಿಕೊಂಡವರು, ಮುಂದೆ ಹುಟ್ಟಿ ಬರುವ ಜ್ಞಾನಿಗಳಿಗೆ ಇದು ಅರ್ಥವಾಗಬಾರದು ಎಂದು ವಿಚಾರಗಳನ್ನು ಬೇರೆ ಬೇರೆ ಮಾಡಿ ಪುಟಗಳನ್ನು ಹರಿದು ಚೂರು ಮಾಡಿ ಗಾಳಿಯಲ್ಲಿ ತೇಲಿ ಬಿಟ್ಟರು. ಹಾಗಾಗಿ ಅರ್ಥವಾಗದಂತಹಾ ಅಯೋಮಯ ಸ್ಥಿತಿಯಲ್ಲಿಯೇ ಈ ಪ್ರಪಂಚ ನಡೆಯುತ್ತಿದೆ. ಅದರಲ್ಲಿ ಜ್ಞಾನಿಗಳು, ಮಹಾಜ್ಞಾನಿಗಳು, ತ್ರಿಕಾಲ ಜ್ಞಾನಿಗಳು, ವಿದ್ವಾಂಸರು, ಪಂಡಿತರು ಎಲ್ಲರೂ ಬರುವರು. ಆದರೆ ಅವರಿಗೆ ಈ ನಿರ್ಣಯಗಳು ಅರ್ಥವಾಗಿಲ್ಲ.

        ಸಾಂಖ್ಯರು ಇದಮಿತ್ಥಂ ಎಂದು ನಿರ್ಣಯ ಮಾಡಿಲ್ಲವೇ? ಹೌದು, ಎಲ್ಲವನ್ನೂ ಲೆಕ್ಕಿಸುತ್ತಾರೆ. ಆದರೆ ಋಗ್ವೇದದ ಹತ್ತನೇ ಮಂಡಲದ ಕೊನೆಯಲ್ಲಿ ಒಂದು ಅರ್ಥವೇ ಆಗಲಾರದ ಲೆಕ್ಕ ಇಟ್ಟಿದ್ದಾರೆ. ಪ್ರಕಟಿತ ಸಾಂಖ್ಯದರ್ಶನದಲ್ಲಿ ೨೪ ತತ್ತ್ವದವರೆಗೆ ಮಾತ್ರ ವಿಶ್ಲೇಷಿಸಿದ್ದಾರೆ. ಇನ್ನು ವೇದದಲ್ಲಿ ಬರುವ ಹಲವು ಸಾಂಖ್ಯ ಸೂತ್ರಗಳು ಅಗಣಿತ ಸಂಖ್ಯೆಗಳ ಗಣಕ, ಗುಣಕದ ಸೂತ್ರಗಳು. ಹೇಳಿಕೊಟ್ಟರೆ ಕಲಿಯಲಾಗದು, ನಿನ್ನ ನೀ ಅರಿತೊಡನೆ ಒದಗುವಾ ಸತ್ಯ, ಪರಮರಹಸ್ಯವದು ಎಂದರು. ಸೈದ್ಧಾಂತಿಕವಾಗಿ ಚರ್ಚೆ ಮಾಡುವಾಗ ಎಷ್ಟೇ ಸಂಖ್ಯೆಗಳನ್ನು ಕೊಡಬಹುದು. ಆದರೆ ಭಗವತ್ಸಂಕಲ್ಪ ಎಂದು ಹೇಳತಕ್ಕಂತಹಾ ಪ್ರಪಂಚದ ನಿರಂತರತೆಯ ಕೊನೆ ಎಂದು? ಹೇಗೆ? ಯಾವುದು ಕೊನೆ? ಅರ್ಥೈಸವುದಕ್ಕೆ ಸಾಂಖ್ಯರಿಗೂ ಆಗದೆ ಕೊನೆಯಲ್ಲಿ ಒಂದು ಲೆಕ್ಕವಿಟ್ಟು ಸಾಂಖ್ಯಶಾಸ್ತ್ರವನ್ನು ಮುಗಿಸುತ್ತಾರೆ. ಈ ಲೆಕ್ಕವನ್ನು ಅರ್ಥಮಾಡಿಕೊಳ್ಳುವವನು ಬಂದರೆ ಆಗ ನಮಗೆ ತೀರ್ಮಾನ ಎಂದು ಹೇಳಿ ಮರೆಯಾದರು. ಚೋದ್ಯವಾಗಿ ಹೇಳುವುದಾದರೆ ಸಾಂಖ್ಯರಿಗೂ ಮೋಕ್ಷವಿಲ್ಲ, ಪಿಶಾಚಿಗಳಾಗಿ ಅಲೆಯುತ್ತಾ ಇದ್ದಾರೆ. ಅವರಿಗೂ ಅರ್ಥವಾಗಿಲ್ಲ, ಏನು ಮಾಡುವುದು?

        ಅರ್ಥವೇ ಆಗದ ವ್ಯವಸ್ಥೆಯಲ್ಲಿ ಈ ಪ್ರಪಂಚವಿದೆ, ನಿರಂತರತೆಯಿದೆ. ಹಾಗಿದ್ದರೆ ನಾವು ಏನನ್ನು ಅಪೇಕ್ಷಿಸಬೇಕು? ಅಥವಾ ಏನನ್ನು ಕೇಳಬೇಕು? ಎಂಬುದು ಮೊದಲ ಪ್ರಶ್ನೆ. ಪ್ರಪಂಚದ ಎಲ್ಲ ಜೀವಿಗಳು ಕೇಳುವುದು ಅದನ್ನೇ. ಆದರೆ ನಾವು ಅದನ್ನೇ ಕೇಳುತ್ತಿದ್ದೇವೆ ಎಂದು ತಿಳಿದಿರುವುದಿಲ್ಲ. ಒಂದು ಸ್ಪಷ್ಟ ಚಿತ್ರಣವನ್ನು ರೂಪಿಸಿಕೊಂಡರೆ ಇಲ್ಲಿರತಕ್ಕಂತಹಾ ಎಲ್ಲಾ ಜೀವಿಗಳೂ ಭಗವಂತನ ಅಂಶಗಳೇ. ಅವೆಲ್ಲವೂ ಸ್ವಭಾವತಃ ಸಹಜ ಭಗವಂತ. ಎಲ್ಲವೂ ಭಿನ್ನ ಭಿನ್ನವಾಗಿವೆ. ಅವೆಲ್ಲ ಒಂದುಗೂಡಿದರೆ ಭಗವದ್ದರ್ಶನ ಆಗುತ್ತದೆ. ಭಗವಂತನ ರೂಪ ಬರುತ್ತದೆ. ಅಂದರೆ ಭಗವಂತನೆಂಬ ಒಂದು ಮಡಕೆ ಒಡೆದು ಹೋಯಿತು. ಆ ಮಡಕೆಯ ಚೂರುಗಳೇ ಆತ್ಮಗಳು. ಆ ಎಲ್ಲಾ ಚೂರುಗಳನ್ನು ಸಂಘಟಿಸಿದರೆ ಮಡಕೆ ಎಂಬ ಭಗವಂತನಾಗುತ್ತದೆ. "ಭಗವದ್ದರ್ಶನವೇ ನಮ್ಮ ಗುರಿ". "ನಾವು ಚೂರುಗಳಾಗಿ ಬದುಕುವುದಕ್ಕಿಂತ, ಚೂರುಗಳನ್ನು ಜೋಡಿಸುವವನಾಗುವ ಬದುಕು ಕೊಡು" ಎಂದು ಕೇಳಬೇಕು. ವಸುಗಳು ಹೇಳುತ್ತಾರೆ: "ನಮಗೆ ಈ ವ್ಯವಸ್ಥೆಯಲ್ಲಿ ಅಧಿಕಾರ ಕೊಡು" ಎಂದು ಲೋಕದ ಜನರು ಎಲ್ಲರೂ ಕೇಳುತ್ತಾರಂತೆ. ಪ್ರತಿಯೊಂದು ಜೀವಿಯೂ ಕೇಳಬೇಕಾದ್ದು ಏನೆಂದರೆ: "ಈ ಪ್ರಪಂಚದ ಸಂಘಟನೆಯಲ್ಲಿ ನಮಗೊಂದು ಅಧಿಕಾರ ಕೊಡು" ಎಂದು. ಸಂಘಟನೆ ಮಾಡುವುದಕ್ಕೆ ಹೊರಟರೆ ಮಾತ್ರ ಒಂದಲ್ಲ ಒಂದು ಕಾಲಕ್ಕೆ ಭಗವಂತ ಆಗಬಹುದು. ಎಲ್ಲದರ ಕೊನೆಯಲ್ಲಿ ಮಂಗಳ ಪದ್ಯ ಹೇಳುವಂತೆ ಋಗ್ವೇದದ ಕೊನೆಯಲ್ಲಿ ಒಂದು ಉಪಸಂಹಾರ ಮಂತ್ರವನ್ನು ಹೇಳುತ್ತಾರೆ:

.10-191-2: ऋषि: - संवननः, देवता - संज्ञानम्, छन्द: - अनुष्टुप्, स्वर: - गान्धारः

सं ग॑च्छध्वं॒ सं व॑दध्वं॒ सं वो॒ मनां॑सि जानताम् । 
दे॒वा भा॒गं यथा॒ पूर्वे॑ संजाना॒ना उ॒पास॑ते ॥

ನಾವೆಲ್ಲ ಸಾಂಘಿಕವಾಗಿ ಒಟ್ಟು ಸೇರಿ ಒಂದಲ್ಲ ಒಂದು ದಿವಸ ನಿನ್ನನ್ನು ಮನಃಪೂರ್ವಕವಾಗಿ ಓ ದೇವಾ ನಿನ್ನನ್ನು ಉಪಾಸನೆಯಿಂದ ಅರ್ಥ ಮಾಡಿಕೊಂಡೇ ತೀರುತ್ತೇವೆ. ಅಂದರೆ ಈಗ ಅರ್ಥವಾಗಿಲ್ಲ ಎಂದು ಹೇಳಿದಂತಾಯಿತು. ಆಶಾವಾದವೇ ಪ್ರವೃತ್ತ ಜೀವನ, ನಿರಾಶಾವಾದವೇ ನಿವೃತ್ತ ಜೀವನ.

.10-105-2: ऋषि: - कौत्सः सुमित्रो दुर्मित्रो वा, देवता - इन्द्र:, छन्द: - स्वराडार्च्यनुष्टुप्, स्वर:- गान्धारः

हरी॒ यस्य॑ सु॒युजा॒ विव्र॑ता॒ वेरर्व॒न्तानु॒ शेपा॑ । उ॒भा र॒जी न के॒शिना॒ पति॒र्दन् ॥

.10-105-3: ऋषि: - कौत्सः सुमित्रो दुर्मित्रो वा, देवता - इन्द्र:, छन्द: - भुरिगुष्णिक्, स्वर:- ऋषभः

अप॒ योरिन्द्र॒: पाप॑ज॒ आ मर्तो॒ न श॑श्रमा॒णो बि॑भी॒वान् । शु॒भे यद्यु॑यु॒जे तवि॑षीवान् ॥

ಏನು ಕೇಳಬೇಕು ಎನ್ನುವುದರಲ್ಲಿ ಬರುವ ಈ ಸಂಘಟನೆ ಮಾಡುವ ಕೆಲಸದಲ್ಲಿ ನಮಗೆ ಸ್ಥಾನ / ಉದ್ಯೋಗ ಬೇಕು ಎಂದು ಕೇಳಬೇಕು. ಹಾಗಿದ್ದಾಗ ಯಾವ ಹಂತ? ಯಾವ ಉದ್ಯೋಗ? ಮನುಷ್ಯನೇ ಆಗಿರಬೇಕು, ಪ್ರಾಣಿಯಾಗುವುದಲ್ಲ. ಪ್ರಾಣಿಯು ಮನುಷ್ಯನ ಮೇಲೆ ಹಿಡಿತ ಸಾಧಿಸುವುದಲ್ಲ. ಈ ಮಾನವಿಕ ಜೀವನಕ್ಕಿಂತ ಎತ್ತರವಾದದ್ದು ಯಾವುದು? "ಜ್ಞಾನಯುಕ್ತವಾದದ್ದು" ಯಾವುದಿರುವುದೋ ಅದು - ಮನೋಮಯ ಪ್ರವೃತ್ತಿಯಲ್ಲಿ ಉದ್ಭವಿಸುತ್ತದೆ. ಜ್ಞಾನಮಯ ಪ್ರವೃತ್ತಿಯಲ್ಲಿ ಇರತಕ್ಕಂತಹಾ ವ್ಯಾವಹಾರಿಕ ಜೀವನ ವಿಧಾನವನ್ನು ಮಾನವ ಜೀವನ ಎಂದರು. ಅಂದರೆ ಮನೋಮಯ ಪ್ರವೃತ್ತಿಯಿಂದ ಮಾತ್ರ ಮಾಡುವಂತಹಾ ಜೀವನವು ಮನುಷ್ಯನ ಜ್ಞಾನಮಯ ಜೀವನಕ್ಕೆ ರಹದಾರಿಯಾಗುತ್ತದೆ. ಹಾಗಾಗಿ ನಾವು ಕೇಳಬೇಕಾದ್ದು ಯಾವುದನ್ನು? ಆ ಸ್ಥಾನವನ್ನು! ಆಗ ಸಂಘಟನೆ ಮಾಡುವ ಶಕ್ತಿ ಬರುತ್ತದೆ. ಅದಕ್ಕೆ ಋಷಿ, ಗುರು, ದೇವದೂತ ಇತ್ಯಾದಿ ಬೇರೆ ಬೇರೆ ಉದ್ಯೋಗಗಳು, ಸ್ಥಾನಗಳು, ಪಟ್ಟಗಳಾಗಬಹುದು. ಅಷ್ಟು ಬಿಟ್ಟರೆ ಜ್ಞಾನವನ್ನು ಆಧರಿಸಿ ಬದುಕತಕ್ಕಂತಹಾ ಭಾಗಕ್ಕೆ ನಮ್ಮನ್ನು ತಲುಪಿಸುವಂತಹಾ ವಿಧಾನ ಯಾವುದಿದೆಯೋ, ಅಥವಾ ಆ ಸ್ಥಾನದಲ್ಲಿದ್ದಾಗ ಮನುಷ್ಯರನ್ನು ಸಂಘಟನೆ ಮಾಡುವುದಕ್ಕೆ "ಕೃಣ್ವಂತೋ ವಿಶ್ವಮಾರ್ಯಮ್", "ಲೋಕಾಃ ಸಮಸ್ತಾಃ ಸುಖಿನೋ ಭವಂತು" ಎಂಬಂತಹಾ ಉದಾತ್ತ ವಾಕ್ಯಗಳು ಉಚ್ಚಾರವಾಗಬೇಕಾದರೆ ಆ ಹಂತಕ್ಕೆ ಅವನು ಏರಬೇಕು.

        ಲೋಕದ ಎಲ್ಲರಿಗೂ ಕ್ಷೇಮವಾಗಲಿ ಎಂಬುದು ಉತ್ತಮವಾದ ಹಾರೈಕೆ. ಲೋಕದಲ್ಲಿ ಕ್ಷೇಮಪ್ರಾಪ್ತಿ ಇಲ್ಲ ಎನ್ನುವುದು ತಿಳಿಯುವುದು ಎಲ್ಲಿಂದ? ಲೋಕವು ರೋಗ ಪೀಡಿತವಾಗಿದೆ ಎಂದು ಅರ್ಥವಾಗುವುದು ಆತನಲ್ಲಿ ಜ್ಞಾನ ಉತ್ಪನ್ನವಾದಾಗ ಮಾತ್ರ. ಹಂದಿಗೆ ಎಂದಿಗಾದರೂ ಪಲ್ಲಂಗದ ಕಲ್ಪನೆ ಬಂದೀತೇ? ಅದು ಕೊಳಚೆ ನೀರಿನ ಮೇಲೆ ಮಲಗಿ ಅದನ್ನೇ ಪಲ್ಲಂಗ ಎಂದುಕೊಳ್ಳುತ್ತದೆ. ಪಲ್ಲಂಗ ಎಂಬ ನಯವಾದ ಹಾಸಿಗೆ ಇದೆ, ಅದರ ಮೇಲೆ ಮಲಗಲಿಕ್ಕೆ ಆಗುತ್ತದೆ ಎಂಬ ಕಲ್ಪನೆಯು ಎಂದಿಗಾದರೂ ಬಂದೀತೇ? ಇಲ್ಲದಿರೆ ಹಂದಿ ಏನ್ ಕೆಸರಲ್ಲಿ ಮುಳುಗಿರುವುದು ಕಷ್ಟ ಎಂದು ಹೇಳುತ್ತದೆಯೇ? ಹಾಗಾಗಿ ಎತ್ತರಕ್ಕೆ ಏರಿದವನಿಗೆ ಮಾತ್ರ ಲೋಕವು ಕ್ಷೇಮಕರವಾಗಿಲ್ಲ ಎಂದು ಗೊತ್ತಾಗುತ್ತದೆ. ಮಳೆ ಬಂದು ಮನೆ, ಊರು, ಬೆಳೆಯೆಲ್ಲ ಕೊಚ್ಚಿ ಹೋಯಿತು, ಪರಿಹಾರ ಕೊಡಿ ಎಂದು ನಾವು ಕೇಳುತ್ತೇವೆಯೇ ಹೊರತು ಹಂದಿ ತನ್ನ ಕೆಸರು ತೊಳೆದು ಹೋಯಿತೆಂದು ಮರುಗುವುದೇ? ಕೊಚ್ಚಿ ಹೋಗಿ ಮತ್ತೊಂದು ಕಡೆ ಕೊಚ್ಚೆ ಸಂಗ್ರಹವಾದಾಗ ಅಲ್ಲೇ ಮಲಗುತ್ತದೆ. ಹಾಗಾಗಿ ಅಭಾವ ಕಲ್ಪನೆ ನಮ್ಮಲ್ಲಿದೆ. ಆದರೆ ಅದರ ಘೋಷಣೆಯ ಶಕ್ತಿ ಇಲ್ಲ. ಅಭಾವ ಎಂದು ನಮಗೆ ಗೊತ್ತೇ ಇಲ್ಲ. ಇಲ್ಲಿ ಅಭಾವವಿದೆ ಎಂದು ಗುರುತಿಸಬೇಕಾದರೆ ಅಷ್ಟಾದರೂ ಜ್ಞಾನವನ್ನು ಹೊಂದಿದವನಾಗಬೇಕು. ಹಾಗಾಗಿ "ಅಭಾವವನ್ನು ಗುರುತಿಸುವ ಜ್ಞಾನವನ್ನು ಗಳಿಸಿಕೊಳ್ಳಬೇಕು" ಎಂಬುದು ಇಲ್ಲಿನ ಸಾರಾಂಶ. ಆ ಜ್ಞಾನದ ಸ್ಥಿತಿಯನ್ನು ಒದಗಿಸುವುದಕ್ಕೆ ಅಥವಾ ಬೇಡುವುದಕ್ಕೆ ಆಗಿರಬೇಕು. ಅದನ್ನು ಬೇಡುವತ್ತಲಾದರೂ ನಮ್ಮ ಗುರಿ ಇದ್ದರೆ ನಂತರ:

.10-105-4: ऋषि: - कौत्सः सुमित्रो दुर्मित्रो वा, देवता - इन्द्र:, छन्द: - निचृदुष्णिक्, स्वर:- ऋषभः

सचा॒योरिन्द्र॒श्चर्कृ॑ष॒ आँ उ॑पान॒सः स॑प॒र्यन् । न॒दयो॒र्विव्र॑तयो॒: शूर॒ इन्द्र॑: ॥

आव॑ श्म॒शा रु॑ध॒द्वाः - ಯಾವುದಕ್ಕೆ ನಾವು ಬೇಡಬೇಕು? ಯಾವುದಕ್ಕೆ ಕೊಡಬೇಕು? ಅನ್ನುವುದಕ್ಕೆ ನಾವು ಈ ಒಂದು ಅಂಶದಷ್ಟಾದರೂ ಮೊದಲು ಮೇಲಿರಬೇಕು. ಜ್ಞಾನದ ಹಂತಕ್ಕೆ ಮೇಲೇರಿ ಕೃಣ್ವಂತೋ ವಿಶ್ವಮಾರ್ಯಮ್ ಎಂದು ಹೇಳಬೇಕಾದರೆ ಕೆಳ ಹಂತದಲ್ಲಿ ಅನಾಗರೀಕತೆ ಇದೆ ಎಂದು ಅರ್ಥ. ಅನಾಗರೀಕತೆಯನ್ನು ಗುರುತಿಸದೆ ಅದರಲ್ಲೇ ಬದುಕುತ್ತಿದ್ದ ವ್ಯಕ್ತಿಯು ಉಳಿದವರೆಲ್ಲ ಅನಾಗರೀಕರು ಎಂದು ಕೂಗಿದರೆ ಅರ್ಥವಿದೆಯೇ? ತಾನು ಅನಾಗರೀಕತೆಯನ್ನು ಮೆಟ್ಟಿ ನಾಗರೀಕನಾದಾಗ ಮಾತ್ರ ಅದನ್ನು ಹೇಳಲು ಸಾಧ್ಯ. ಮಾನವ ಧರ್ಮ ದೀಪಿಕೆಯು ಬ್ರಾಹ್ಮಿಯಲ್ಲಿ ನಾಗರೀಕತೆಯ ವ್ಯಾಖ್ಯಾನವನ್ನು ಈ ರೀತಿ ನೀಡುತ್ತದೆ:

"ವಿಧ್ಯಾ, ವಿನಯ, ಭೂಷಣ, ದಯಾ, ಧರ್ಮ, ದಾಕ್ಷಿಣ್ಯ, ಸತ್ಯ, ನ್ಯಾಯಯುತಾಃ ಇತಿ ನಾಗರೀಕಃ"

        ಮಹಾಭಾರತದ ಒಂದು ಪ್ರಕರಣ ಗಮನಿಸಿ. ಹಸ್ತಿನಾವತಿಗೆ ಬಂದು ಎಮ್ಮೆಯ ಹಾಲು ಕುಡಿಯುವಲ್ಲಿಯವರೆಗೂ ಮಹಾಜ್ಞಾನಿ ಎನಿಸಿಕೊಂಡಿದ್ದ ಅಶ್ವತ್ಥಾಮನು ಕಲಗಚ್ಚೇ ಹಾಲೆಂದು ತಿಳಿದಿದ್ದ. ಆದರೂ ಎಮ್ಮೆಯ ಹಾಲು ಕುಡಿಯಲು ಸಿಕ್ಕಿತೇ ಹೊರತು ದನದ ಹಾಲಲ್ಲ! ಕೌರವರು ಅವನಿಗೆ ದನದ ಹಾಲನ್ನು ಕುಡಿಯಲು ಕೊಡಲಿಲ್ಲ. ದನದ ಹಾಲು ಕೊಟ್ಟರೆ ಅದರಿಂದ ಬುದ್ಧಿವಂತನಾಗಿ ಕೌರವರನ್ನು ಬಿಡುತ್ತಾನೆಯೇ? ಎಂದು ಬಹಳ ಚಿಂತಿಸಿದ್ದರು. ಎಮ್ಮೆಯ ಹಾಲು ಕುಡಿಸಿದ್ದರಿಂದ ಕೌರವ ಸತ್ತರೂ ಅವರ ನಿಷ್ಠೆ ಬಿಡಲಿಲ್ಲ. ಹಾಗಾದರೆ ಅಶ್ವತ್ಥಾಮನಿಗೆ ಸ್ವಾತಂತ್ರ್ಯವಿರಲಿಲ್ಲವೇ? ಸ್ವಾತಂತ್ರ್ಯವಿತ್ತು, ದನದ ಹಾಲೇ ಕುಡಿಯಬೇಕೆಂದು ಇಚ್ಛೆ ಇತ್ತು, ಆದರೆ ಧನವಿರಲಿಲ್ಲ. ಆಗ ದನವನ್ನು ನೋಡುವುದಕ್ಕೂ ತೆರ ಕೊಡಬೇಕಾದ ಪರಿಸ್ಥಿತಿ ಅವನಿಗಿತ್ತು. ದ್ರೋಣ ಸಿಕ್ಕಾಪಟ್ಟೆ ವಿಧ್ಯಾವಂತ. ನಮ್ಮ ಪಂಡಿತ ವಲಯದಲ್ಲಿ ಒಬ್ಬನು ತೀರಾ ಬಡವ ಎಂದು ಹೇಳುವುದಿದ್ದರೆ ಬಡವಾ ಎಂದು ನೇರವಾಗಿ ಹೇಳುವುದಿಲ್ಲ. ಇವನು ಸರಸ್ವತೀ ಪುತ್ರ ಎನ್ನುತ್ತಾರೆ! ಅಂದರೆ ಕುಡಿಯುವುದಕ್ಕೆ ನೀರಿಗೂ ಗತಿ ಇಲ್ಲ ಎಂದರ್ಥ. ಹಾಗೆ ದ್ರೋಣ ಬಹಳ ಬುದ್ಧಿವಂತ. ಬಹಳ ದೊಡ್ಡ ಪಂಡಿತ. ಬುದ್ಧಿವಂತನೂ, ಪಂಡಿತನೂ ಆದ ತಕ್ಷಣ ಅವೆರಡರ ಸ್ವಾಭಾವಿಕ ಘರ್ಷಣೆಯಿಂದಾಗಿ ಒಂದು ರೋಗ ಹುಟ್ಟುತ್ತದೆ. ಆತನಿಗ ಜನಬಳಕೆ ಬೇಡ ಎಂಬ ಉದ್ದಟತನದಿಂದ ಹೊಟ್ಟೆಗೆ ಹಿಟ್ಟಿಲ್ಲದಂತಾಗುತ್ತದೆ. ಅದೇ ಅಹಂಕಾರ ಎಂಬ ರೋಗ. ದ್ರೋಣನಿಗೂ, ಅವನ ಹೆಂಡತಿ ಕೃಪಿಗೂ ಹೊಟ್ಟೆಗಿಲ್ಲ. ಹಾಗಿದ್ದ ಮೇಲೆ ಹುಟ್ಟಿದ ಮಗು ಅಶ್ವತ್ಥಾಮನಿಗೆ ಏನು ತಾನೇ ಕೊಟ್ಟಾರು? ಅಕ್ಕಿ ತೊಳೆದು ಉಳಿದಿಟ್ಟ ಕಲಗಚ್ಚು ಮಾತ್ರ. ಆ ಸಮಸ್ಯೆಯ ಜಿಜ್ಞಾಸೆಗೆ ಬಿದ್ದೇ ದ್ರೋಣನು ದ್ರುಪದ ತನ್ನ ಸ್ನೇಹಿತ, ಅವನಲ್ಲಿ ಬೇಡಿ ತರುವೆನೆಂದು ಹೋಗಿದ್ದರೆ ಸಿಗುತ್ತಿತ್ತು. ದ್ರೋಣನಿಗೆ ಅಹಂಕಾರ ಜನಿತ ದುರ್ಮತಿಯಿಂದ ದ್ರುಪದನಲ್ಲಿ ಸಂಪತ್ತನ್ನು ಕಸಿದುಕೊಂಡು ಬರುತ್ತೇನೆ ಎಂದು ಹೋದ. ದ್ರುಪದನಾದರೋ ರಾಜ, ದ್ರೋಣನ ಅಹಂಕಾರಕ್ಕೆ ಸೊಪ್ಪು ಹಾಕದೆ ಓಡಿಸಿದ. ದ್ರೋಣ ಬೇಡಿದ್ದರೆ ದ್ರುಪದ ಕೊಡುತ್ತಿದ್ದನು. ಅದು ಬಿಟ್ಟು ತನ್ನ ಹಕ್ಕು ಕೊಡೆಂದು ಕೇಳಿದ್ದಕ್ಕೆ ಪ್ರತಿಯಾಗಿ ರಾಜನ ಹಕ್ಕು ಚಲಾಯಿಸಿ ತೋರಿಸಿ ಹಿಂದಕ್ಕೆ ಕಳುಹಿಸಿದ. ವಿಧ್ಯಾವಂತನೂ, ಬುದ್ಧಿವಂತನೂ ಆದಾಗ ಸ್ವಭಾವತಃ ಹುಟ್ಟುವುದೇ ಅಹಂಕಾರವೆಂಬ ರೋಗ. ಅಹಂಕಾರವು ಆತನನ್ನು ನಾಶದತ್ತ ಕೊಂಡೊಯ್ಯುತ್ತದೆ. ಆರ್ಥಿಕವಾಗಿ ಸೋಲುತ್ತಾನೆ ನಂತರ ಕೊನೆಯಲ್ಲಿ ದಾಸ್ಯಕ್ಕೆ ಬೀಳುತ್ತಾನೆ. ಸ್ನೇಹಿತ ದ್ರುಪದನಲ್ಲಿ ಬೇಡುವುದು ಅವಮಾನ ಎಂದು ತಿಳಿದಿಕೊಂಡವನು ಕೌರವರಲ್ಲಿ ದಾಸ್ಯಕ್ಕೆ ಬೀಳುತ್ತಾನೆ. ಪ್ರಾಣ ಇರುವಲ್ಲಿಯವರೆಗೂ ನಿಮ್ಮಲ್ಲಿ ಜೀವ ತೇಯುತ್ತೇನೆ ಎಂದು ಜೀತಕ್ಕೆ ಬಿದ್ದನು, ಊಳಿಗದವನಾದನು.

ಅಹಂಕಾರವೇ ಹಠ ಅಥವಾ ಛಲಕ್ಕೆ ಕಾರಣವಾಗುತ್ತದೆ. ಅದು ಸದ್ಗುಣ ಅಥವಾ ವಿಶಿಷ್ಟತೆ ಎಂದಲ್ಲ. ಆದ್ದರಿಂದ ಛಲದ ಪ್ರವೃತ್ತಿಯೇ ಮಹಾಭಾರತ. ದ್ರೋಣನೇ ಗುರು. ಕೌರವರಿಗೆ ಛಲ ಬಂದಿತೆಂದು ದೂರುವುದು ಏಕೆ? ಕೌರವರಿಗೆ ಛಲವನ್ನು ಕೊಟ್ಟವರು ಯಾರು? ವಿಧ್ಯೆ ಕೊಡದಾ ತಂದೆ, ಬುದ್ಧಿ ಕೊಡದಾ ಗುರುವು, ಬಿದ್ದು ಒದ್ದಾಡುತ್ತಿರಲು ಬಂದು ನೋಡದಾ ತಾಯಿ ಬದ್ಧ ವೈರಿಗಳೆಂದ ಸರ್ವಜ್ಞ. ಹಾಗಾಗಿ ಬುದ್ಧಿ ಕೊಡುವುದು ಗುರು. ಯಥಾ ಗುರು ತಥಾ ಶಿಷ್ಯ. ದ್ರೋಣನೆಂಬ ಬ್ರಾಹ್ಮಣನೊಬ್ಬನಲ್ಲಿ ಹುಟ್ಟಿದ ಛಲದ ಬೀಜವು ಕ್ಷತ್ರೀಯರಾದ ಕೌರವರೆಂಬ ಇಡೀ ವಂಶ ನಾಶಕ್ಕೆ ಕಾರಣವಾಯಿತು. ಈ ನಿಟ್ಟಿನಲ್ಲಿ ನೋಡಿದರೆ ಕಣ್ಣು ಕಾಣದ ತಂದೆ ಧೃತರಾಷ್ಟ್ರನಾಗಲೀ, ಶಿಷ್ಯರಾದ ಕೌರವರನ್ನಾಗಲಿ ದೂಷಿಸಲಾಗುವುದಿಲ್ಲ. ಛಲದ ಮೂಲ ಬೀಜನೇ ದ್ರೋಣ. ಪಾಂಡವರಿಗೆ ದ್ರೋಣನೇ ಗುರುವಲ್ಲವೇ? ಎಂದು ಕೇಳಬಹುದು. ಆದರೆ ಪಾಂಡವರು ಪಾಠವನ್ನು ಗುರು ದ್ರೋಣರಲ್ಲೂ, ಮನೆಪಾಠವನ್ನು ಜಗದ್ಗುರು ಕೃಷ್ಣನಲ್ಲಿಯೂ ಪಡೆದು ಸುಕೃತರಾದರು.

ಸ್ವಭಾವ ಜನ್ಯವಾದಂತಹಾ ಜ್ಞಾನದ ಸ್ಥಾನವನ್ನು ಪಡೆಯುವುದಕ್ಕೆ रु॑ध॒द्वाः? ಮನುಷ್ಯರು ಜ್ಞಾನವನ್ನು ಬೇಡಬೇಕು ಎಂದು ಹೇಳುತ್ತಾರೆ:  सचा॒योरिन्द्र॒श्चर्कृ॑ष॒ आँ उ॑पान॒सः स॑प॒र्यन् । न॒दयो॒र्विव्र॑तयो॒: शूर॒ इन्द्र॑: ॥ ಅದು ಯಾವ ರೀತಿ ಜ್ಞಾನವಾಗಿರಬೇಕು? ತನ್ನ ಸಹಜೀವಿಗಳನ್ನು ಆರ್ಯರನ್ನಾಗಿ ಮಾಡುವತ್ತಲಿನ ಜ್ಞಾನ. ತನ್ನ ಹೆಂಡತಿ ಮಕ್ಕಳಿಗೆ ಹಾಲು, ಅನ್ನ, ಖೀರ್, ಸಂಪತ್ತು, ಭೋಗೋಪಭೋಗಗಳ ಭಾಗ್ಯ ಸಿಗುವ ಜ್ಞಾನವಲ್ಲ. ದ್ರೋಣ ಕೇಳಿದ್ದೇನು? ತನ್ನ ಮಗನಿಗೆ ನಿತ್ಯವೂ ಹಾಲು ಕುಡಿಸಬೇಕು ಎಂಬ ಹಂತಕ್ಕೆ ಬಂದ. ಹಾಗಾಗಿ ಅವನಿಗೆ ದಾಸ್ಯ ಸಿಕ್ಕಿತು. ಸಂಘಟನೆಯನ್ನೂ ಮಾಡಿದ, ಆದರೆ ಸಂಘಟನೆಯು ಫಲ ಕೊಟ್ಟಿತೇ? ಅವನ ಛಲ ಮೆರೆಸಿರಬಹುದು ಬಿಟ್ಟರೆ ಅವನ ಸಂಘಟನೆಯು ಸಾರ್ವತ್ರಿಕ ಫಲ ಕೊಡಲಿಲ್ಲ. ಮಹಾಬುದ್ಧಿವಂತ, ಮಹಾವೀರಯೋಧರನ್ನು ಬೆಳೆಸಿದ. ಆದರೆ ಅವರವರೇ ಕಚ್ಚಾಡಿಕೊಂಡು ಸತ್ತರು. ಹಾಗಾಗಿ ದ್ರೋಣನ ಸಂಪಾದನೆ ಶೂನ್ಯ! ಎಷ್ಟೋ ಸಾವಿರ ವರ್ಷದ ಹಿಂದೆ ಭರದ್ವಾಜರ ಪ್ರಯೋಗ ಶಿಶುವೇ ದ್ರೋಣ. ಅದು ಸತ್ಸಂತಾನ ಎಂದು ಹೇಳುವಂತಿಲ್ಲ. ಅಷ್ಟು ಸಾವಿರಾರು ವರುಷ ಬದುಕಿ ಮಾಡಿದ್ದೇನು? ಇಂತಹದ್ದೊಂದು ಒಳ್ಳೆ ಕೆಲಸ ಮಾಡಿದ್ದ ದ್ರೋಣ ಎಂದು ಪೂರ್ವೋತ್ತರೀಯ ಮೀಮಾಂಸಕರಲ್ಲಿ ಸಿಕ್ಕಲಿಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಅಂತಹಾ ಜ್ಞಾನವಲ್ಲ. "ಪ್ರಪಂಚದಲ್ಲಿ ಆತ್ಮಿಕ ಸಂಘಟನೆ ಮಾಡುವಂತಹಾ ವೃತ್ತಿಯಲ್ಲಿ ತೊಡಗಲಿಕ್ಕೆ ಬೇಕಾದಂತಹಾ ಜ್ಞಾನವನ್ನು ಕೊಡು ಎಂದು ಕೇಳಬೇಕು".

            ಹಾಗೆ ಸಂಘಟನಾತ್ಮಕ ಜ್ಞಾನಾನ್ವೇಷಣೆಯಲ್ಲಿ ಐತಿಹಾಸಿಕ ಲಭ್ಯ ಗ್ರಂಥಗಳು, ಜ್ಞಾನಿಗಳು, ಜಗದ್ಗುರುಗಳು ಇತ್ಯಾದಿ ಎಲ್ಲವೂ ಸುಳ್ಳೇ!!! ಅವರ್ಯಾರೂ ಈ ಸಂಘಟನೆಯ ಪ್ರಯತ್ನ ಮಾಡಲಿಲ್ಲ. ಅವರೆಲ್ಲ ಈ ಪ್ರಾಪಂಚಿಕತೆ ಮುಂದುವರೆಯುವುದಕ್ಕೇ ಪ್ರಯತ್ನ ಮಾಡಿದವರು. ಆತ್ಮಿಕ ಸಂಘಟನೆಯ ಪ್ರಯತ್ನದಲ್ಲಿ ಇವರ್ಯಾರೂ ತೊಡಗಿಕೊಂಡದ್ದು ಕಂಡುಬರುವುದಿಲ್ಲ. ಹೆಸರಿಸದ ಇಬ್ಬರು ಸಿಗುತ್ತಾರೆ: ರಾಮ ಮತ್ತು ಧರ್ಮರಾಯ. ಅವರಿಬ್ಬರನ್ನು ಸಂಘಟಕರೆಂದು ಜನರು ಹೇಳಲೇ ಇಲ್ಲ. ಮರ್ಯಾದಾ ಪುರುಷೋತ್ತಮ ಎಂಬ ರಾಮನು ಆತ್ಮಿಕ ಸಂಘಟಕ ಎಂದು ಯಾವ ವ್ಯಾಖ್ಯಾನಕಾರರೂ ಹೇಳಲಿಲ್ಲ. ರಾಮನನ್ನು ದೇವರೆಂದರು, ಸೀತಾಪತಿ ಎಂದರು, ರಾಜನೆಂದೂ, ಇನ್ನು ಹಲವು ನಾಮದಲ್ಲಿ ಸಂಬೋಧಿಸಿದರು. ಅವೆಲ್ಲವೂ ಪ್ರಪಂಚವನ್ನು ವಿಘಟನೆ ಮಾಡುವ ತಂತ್ರದಲ್ಲೇ ಹೋಗುತ್ತದೆ. ಅವನು ಸಂಘಟನೆ ಮಾಡಿದನೆಂಬ ಒಂದೇ ಒಂದು ಮಾಪನದಲ್ಲಿ ರಾಮನನ್ನಾಗಲೀ, ಧರ್ಮರಾಯನನ್ನಾಗಲೀ ಚಿಂತಿಸಲಿಲ್ಲ. ಧರ್ಮರಾಯ ಧರ್ಮನಿಷ್ಠ, ಸಜ್ಜನ, ಸತ್ಯವ್ರತ ಪಾಲಕನಾದರೂ ಅಲ್ಲಲ್ಲಿ ಕೈಮೀರಿ ಸುಳ್ಳು ಹೇಳುವುದು ಎಂದೆಲ್ಲ ಹೇಳಿದರು. ಆದರೆ ರಾಮ ಮತ್ತು ಧರ್ಮರಾಯ ಮಾತ್ರ ಈ ರೀತಿ ವೇದದಲ್ಲಿ ಉಕ್ತ ಸಂಘಟನಾ ಪ್ರಯತ್ನವನ್ನು ಮಾಡಿದ ಸಂಘಟಕರು. ಉಳಿದವರೆಲ್ಲ ಜೀವನ ದೃಷ್ಟಿ, ಜೀವನಾದರ್ಶವು ಪ್ರಪಂಚದ ವಿಘಟನೆಯತ್ತಲೇ ಇತ್ತು. ಕೃಷ್ಣನಂತೂ ಸಂಪೂರ್ಣ ವಿಘಟನೆಯನ್ನೇ ಮಾಡಿದ್ದು, ಎಲ್ಲಿಯೂ ಸಂಘಟನೆ ಮಾಡಲಿಲ್ಲ. ಕೃಷ್ಣಭಕ್ತರು ಕೃಷ್ಣನು ದುರ್ಜನರನ್ನು ಮಹಾಭಾರತ ಯುದ್ಧದ ಮುಖೇನ ಭಗವಂತನಲ್ಲಿ ಸೇರಿಸಿದ ಎಂದು ಹೇಳಬಹುದು. ಆದರೆ ಅದು ಮುಂದಿನ ಭಾವುಕ ಆಧ್ಯಾತ್ಮಿಕ ಹೇಳಿಕೆಯಷ್ಟೆ. ಪುರಾತನ ಕಾಲದಲ್ಲಿ ಖಂಡ-ಪರಷು, ಶೈಬ್ಯರು, ತೃಣಬಿಂದು, ಪೃಥು, ಸತ್ಯವ್ರತ, ತೆಲಂಗ ಸ್ವಾಮಿಗಳು ಇತ್ಯಾದಿ ಕಂಡುಬಂದರೂ ಅವರ ಹೆಸರು ಸಂಘಟನಾ ಸಾಧನೆಗಳೆಲ್ಲ ಹೇಳ ಹೆಸರಿಲ್ಲದಂತೆ ಅಳಿಸಿ ಹಾಕಿದ್ದಾರೆ.

.10-105-3.1: ऋषि: - कौत्सः सुमित्रो दुर्मित्रो वा, देवता - इन्द्र:, छन्द: - भुरिगुष्णिक्, स्वर:- ऋषभः

अप॒ योरिन्द्र॒: पाप॑ज॒ आ मर्तो॒ न श॑श्रमा॒णो बि॑भी॒वान् ।

.10-105-5: ऋषि: - कौत्सः सुमित्रो दुर्मित्रो वा, देवता - इन्द्र:, छन्द: - विराडुष्निक्, स्वर:- ऋषभः

अधि॒ यस्त॒स्थौ केश॑वन्ता॒ व्यच॑स्वन्ता॒ न पु॒ष्ट्यै । व॒नोति॒ शिप्रा॑भ्यां शि॒प्रिणी॑वान् ॥

ಪ್ರಸಕ್ತ ಪ್ರಕಟಣೆಗಳಲ್ಲಿ ಮಂತ್ರಗಳೆಲ್ಲ ಆಚೆ ಈಚೆ ಹಾಕಿದ್ದಾರೆ. ಜೀವಿಗಳು ಹಾಗೂ ಮನುಷ್ಯ ಎನ್ನುವುದನ್ನು ತೆಗೆದುಕೊಂಡು ಹೋದಾಗ ಇದು ನಿರ್ಣಯವಾಗತಕ್ಕದ್ದಲ್ಲ. ಮನುಷ್ಯ ಎನ್ನತಕ್ಕಂತಹಾ ಭಾಗವನ್ನು ಮೊದಲು ವಿಭಜಿಸಿಕೊ. ಹಾಗಾಗಿ ಮನುಷ್ಯನೆಂದು ಗುರುತಿಸಲಿಕ್ಕೆ ಇರತಕ್ಕಂತಹಾ ೭ ಲಕ್ಷಣಗಳನ್ನು ಹೇಳುತ್ತಾರೆ. ಮನುಷ್ಯ ಎಂದರೇನು? ಜೀವಿ ಎಂದರೇನು? ಅವುಗಳಿಗಿರುವ ವ್ಯತ್ಯಾಸವೇನು? ಆಹಾರ, ವಿಹಾರ, ವ್ಯಾಪಾರಗಳು ಎಲ್ಲ ಜೀವಿಗಳಿಗಿವೆ. ಆದರೆ ಅವೆಲ್ಲಾ ಮಾನವತಾ ಪ್ರವೃತ್ತಿಯಲ್ಲ, ಎಲ್ಲ ಜೀವಿಗಳ ಪ್ರವೃತ್ತಿ. ಮಾನವತಾ ಪ್ರವೃತ್ತಿ ಎಂಬುದು ಮಾನವ ವರ್ಗವನ್ನು ಇತರೆ ಜೀವಿವರ್ಗದಿಂದ ಪ್ರತ್ಯೇಕಿಸುವ ಚಿನ್ನದಂತಹಾ ಗುಣಗಳು. ವಿಶಿಷ್ಟವಾದ ಏಳಂಶ ಉಳ್ಳದ್ದೇ ಮನುಷ್ಯ ಎನ್ನುತ್ತಾರೆ ವಸುಗಳು. ಮನುಷ್ಯ ಎನ್ನುವ ಒಂದು ಭೂಮಿಕೆಯನ್ನು ಮೊದಲು ಸಿದ್ಧ ಮಾಡಿಕೋ ಎಂದು ಹೇಳುತ್ತಾರೆ.

ಇಂತು,
ವಿಜ್ಞಾಸು
(ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ, ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು. 
ಇವರ ಆಯುರ್ವೇದ ಪಾಠದಿಂದ ತಯಾರಿಸಿದ ಲೇಖನಮಾಲೆ ಇದು)

No comments:

Post a Comment