Monday, 13 February 2017

ಪ್ರಾಪಂಚಿಕ :: ಮಾನವ ಜೀವನ :: ಆತ್ಮೋನ್ನತಿ೧) ಪ್ರಾಪಂಚಿಕವೆಂದರೆ ಮಾನವ ಜೀವನದ ಮೂಲೋದ್ದೇಶವಾದ ಆತ್ಮೋನ್ನತಿಗೆ ವಿರುದ್ಧವಾಗಿ ಜೀವನದಾಹೀ ಹೋರಾಟ.

೨) ಹಾಗೆ ಮಾನವನು ತನ್ನ ಐಹಿಕ ಜೀವನಕ್ಕಾಗಿ ರೂಪಿಸಿಕೊಂಡ ವಿಧಿ ವಿಧಾನಗಳೂ ಪ್ರಾಪಂಚಿಕವೇ.

೩) ಇನ್ನು ಜೀವನ ಕಷ್ಟ, ಸುಖ, ಶಾಂತಿ, ನೆಮ್ಮದಿ, ಸಮಾಧಾನ, ಲಾಭ, ನಷ್ಟ, ಜಯಾಪಜಯ, ಕೀರ್ತಿ, ಸಮ್ಮಾನ ಆಕಾಂಕ್ಷಿಗಳಾಗಿ ಹೋರಾಡುವ ಮಾನವ ಜೀವಿಯ ವರ್ತನೆಯನ್ನೂ ಪ್ರಾಪಂಚಿಕವೆನ್ನುತ್ತಾರೆ.

೪) ಹಾಗೇ ಕೊನೆಯದಾದ ಅತೀ ಹೀನಾಯವಾದ, ಕೆಟ್ಟವೃತ್ತಿಯಾದ ರಾಕ್ಷಸೀ ವೃತ್ತಿಯೆಂದು ಕರೆಸಿಕೊಳ್ಳುವ ಅಧಿಕಾರ ಲಾಲಸೆ, ಮೋಸ, ವಂಚನೆ, ದ್ರೋಹ, ಕಳ್ಳತನ, ಸುಳ್ಳು, ಕ್ರೋಧ, ಮೋಹ, ಮತ್ಸರ, ಪೈಶಾಚಿಕ ಕಾಮ, ಹತ್ಯಾದಿಗಳು ಇವೆಲ್ಲವನ್ನೂ ಪ್ರಾಪಂಚಿಕವೆನ್ನುತ್ತಾರೆ.

೫) ಈ ಎಲ್ಲವನ್ನೂ ಹೊರತುಪಡಿಸಿ ಸರ್ವವನ್ನೂ ಸಮಭಾವದಿಂದ ಸ್ವೀಕರಿಸುತ್ತಾ ಸಕಲ ಜೀವಾತ್ಮರ ಉದ್ಧಾರವೇ ಲೋಕೋದ್ಧಾರವೆಂದು ಭಾವಿಸಿ ಸರಳ, ಸಾತ್ವಿಕ, ತ್ಯಾಗಮಯೀ ಜೀವನ ನಡೆಸುವುದೇ ಪ್ರಾಪಂಚಿಕದಲ್ಲಿದ್ದೂ ಆತ್ಮೋನ್ನತಿ ಸಾಧಿಸುವ ಮಾರ್ಗ. ಇದೇ ಐದನೆಯ ಉತ್ಕೃಷ್ಟ ಮಾರ್ಗ. ಇದೇ "ಮಾನವ ಜೀವನ" ಎನ್ನಿಸಿಕೊಳ್ಳುತ್ತದೆ. ಆ ಮಾನವ ಜೀವನದ ವಿಚಾರವಾಗಿ ಒಂದಿಷ್ಟು ವಿವರ ಗಮನಿಸೋಣ.

        ಮೊದಲಾಗಿ ಮಾನವ ಜನ್ಮದ ಮಹತ್ವ ಚಿಂತನೆ ಮಾಡೋಣ. ಜನ್ಮ ಜನ್ಮಾಂತರದ ಪಾಪ ಕರ್ಮಗಳಿಂದಾಗಿ ನಾನಾ ಯೋನಿಗಳಲ್ಲಿ ಅಂಡಜ, ಸ್ವೇದಜ, ಉದ್ಭಿಜಗಳಲ್ಲಿ ಜನ್ಮ ತಾಳುತ್ತವೆ; ಜೀವರಾಶಿಗಳು. ಅವುಗಳ ಆ ಜನ್ಮದ ಹಲವು ಲಕ್ಷ ಜನ್ಮದ ಪುಣ್ಯ ಪ್ರಭಾವದಿಂದಾಗಿ ಮಾನವ ಜನ್ಮ ಬರುತ್ತದೆ. ಆದರೆ ಅದನ್ನು ಮಾನವ ಜೀವಿ ಅಥವಾ ಜಂತು ಎಂದು ಕರೆಯಲ್ಪಡುತ್ತದೆ. ಆ ಜೀವಿಗೆ ಉತ್ತಮ ಸಂಸ್ಕಾರ, ಬುದ್ಧಿ, ವಿವೇಕವಿದ್ದರೆ ಮಾನವನಾಗುತ್ತಾನೆ(ಳೆ). ಅವನ(ಳ)ಲ್ಲಿ ಉತ್ತಮ ಸಂಸ್ಕಾರಗಳಿದ್ದು ಅದನ್ನು ಪ್ರಾಕೃತಿಕ ಕೃತಜ್ಞತೆಯೊಂದಿಗೆ ಸ್ವೀಕರಿಸಿ ಬೆಳೆಯುವುದೇ ದ್ವಿಜತ್ವ. ಲೋಕಾಲೋಕಾಧ್ಯಯನ, ವೇದಾದಿ ಅಧ್ಯಯನ, ಸತ್ಯ, ಧರ್ಮ, ನ್ಯಾಯ ನಿಷ್ಠುರತೆಯನ್ನು ಮೈಗೂಡಿಸಿಕೊಂಡರೆ ವಿಪ್ರನಾಗುತ್ತಾನೆ. ತನ್ನ ಸರಳ ಜೀವನ, ಪರೋಪಕಾರಬುದ್ಧಿ, ನಿಸ್ವಾರ್ಥತೆ, ಅಸಂಗ್ರಹ, ಸತತಾಧ್ಯಯನ, ಕ್ರೋಧಾದಿ ನಿಗ್ರಹ, ಜಿತೇಂದ್ರಿಯತೆ ಸಾಧಿಸುವವನೇ ಬ್ರಾಹ್ಮಣ ಎನ್ನಿಸಿಕೊಳ್ಳುತ್ತಾನೆ. ಪ್ರತಿಯೊಬ್ಬ ಮಾನವನೂ ಬ್ರಾಹ್ಮಣನಾಗುವತ್ತ ತನ್ನ ಜೀವನದ ಗುರಿ, ರೂಪುರೇಷೆಗಳನ್ನು ರೂಪಿಸಿಕೊಳ್ಳಬೇಕು. ಅದೇ ಆತ್ಮೋದ್ಧಾರದ ಮಾರ್ಗ.

        ಈ ಪ್ರಾಪಂಚಿಕದಲ್ಲಿದ್ದು ಆತ್ಮೋದ್ಧಾರ ಸಾಧನೆ ಹೇಗೆ? ಚಿಂತಿಸೋಣ. ಮಾನವ ಜನ್ಮದ ಗುರಿ ಸಾಧಿಸಲು ಮಾನವರಾಗಿ ಪ್ರಯತ್ನಿಸೋಣ. ಆ ಸಂಬಂಧಿಯಾಗಿ ಈ ಕೆಳಗಿನ ಕೋಷ್ಟಕದಂತೆ ಜನ್ಮ ಸರಪಳಿ. ಅದರಲ್ಲಿ ಮಾನವನ ವಿವರಣೆ ಇರುತ್ತದೆ.

        ಅದಕ್ಕೆ ಬೇಕಾದ ಮಾನವಧರ್ಮಶಾಸ್ತ್ರ ಆಧಾರಿತವಾದ ಈ ಕೋಷ್ಟಕ ಗಮನಿಸಿ. ಇದರಲ್ಲಿ ಗುರಿ, ಸಾಧನೆ ಮತ್ತು ತೊಡಕುಗಳು, ಅನಿವಾರ್ಯತೆ, ವಿಜಯ ಸಾಧನೆಯ ಮಾರ್ಗವಿರುತ್ತದೆ.


ಈ ಮೇಲ್ಕಂಡಾ ನಕಾಶೆ ಗಮನಿಸಿ. ಜೀವಾತ್ಮನು ಪರಮಾತ್ಮ ಸಂಬಂಧ ಪಡೆದು ಋಣ ಕರ್ಮಾನುಸಾರ ಈ ಭುವಿಯಲ್ಲಿ ಜಗತಃ ಎಂಬ ರೂಪಿನಲ್ಲಿ ಆಯಾಯ ಕರ್ಮಕ್ಕನುಸಾರವಾಗಿ ಜನನಕ್ಕೆ ಬರುತ್ತದೆ. ಅದನ್ನೇ ಜಗತವೆಂದು ಕರೆದರು ಆಧ್ಯಾತ್ಮವಾದಿಗಳು. ಅಲ್ಲಿಂದ ಮುಂದೆ ಹುಟ್ಟು-ಸಾವಿನ ಸರಪಳಿ ಆರಂಭ, ನಿರಂತರ, ಸ್ವಭಾವಜನ್ಯ. ಈ ಸಂಕೋಲೆಯಿಂದ ಕಳಚಿಕೊಳ್ಳಬೇಕಾದರೆ ಮಾನವನಾಗಬೇಕು. ಅದಕ್ಕಿರುವ ದಾರಿಯೇ ಈ ಕೋಷ್ಟಕ. ಅದರ ಬಗ್ಗೆ ವಿವರಿಸುತ್ತೇನೆ. ಗಮನವಿಟ್ಟು ಓದಿ ಅರ್ಥಮಾಡಿಕೊಳ್ಳಿರಿ.

        ಕಾರ್ಯ + ಕಾರಣ + ಕರ್ತಾ ಎಂಬ ಮೂಲೋದ್ದೇಶ ಹೊಂದಿ ಕರ್ಮಾನುಸಾರ ಈ ಜಗತ್ತಿಗೆ ಬಂದ ಜೀವಿಯು ೪ ವಿಧದಲ್ಲಿ ಜನನಕ್ಕೆ ಬರುತ್ತದೆ. ಅದು ಅಂಡಾಜ, ಯೋಜಿನ, ಉದ್ಭಿಜ, ಸ್ವೇದಜವೆಂಬ ೪ ವಿಧಗಳು.

ಅದರಲ್ಲಿ ಒಂದನೆಯದಾದ ಅಂಡಜಗಳು - ಇವು ಬಹುಭಿನ್ನ. ೫ ಕಾರಣಗಳಿಂದ ಈ ಭುವಿಯ ಕರ್ಮ ಭೂಯಿಷ್ಠ ಪ್ರಕೃತಿಯ ಸಂಪರ್ಕ ಸಾಧಿಸುತ್ತವೆ. ಅವುಗಳಲ್ಲಿ ಸರೀಷಗಳು ವಿಶೇಷ ಜನ್ಮ. ಕ್ಲೇಷಗಳು ಋಣ ಜನ್ಮ. ಶಾಪ ರೂಪದವು ಕಷ್ಟ ಸಹಿಷ್ಣುಗಳು. ಜನ್ಮ ಕಾರಣ ಮಾತ್ರವಾದವು ಋಣಕಾರಕಗಳು. ಇನ್ನು ಪಾಪಾತ್ಮವಾದವುಗಳು ಸಂಚಿತಕ್ಕಾಗಿ ಬಂದವು. ನೇರವಾಗಿ ಜಗತಃಕ್ಕೆ ಸಂಬಂಧಿಸಿರುತ್ತವೆ. ಮತ್ತು ಪ್ರಕೃತಿಯ ನಿರಂತರತೆಗೆ ಇವು ಪೂರಕ. ಇವುಗಳಲ್ಲಿ ಹಲವು ಪಕ್ಷಿ ರೂಪದವೂ, ಹಲವು ಸರೀಸೃಪಗಳೂ, ಹಲವು ಉರಗಗಳೂ, ಏಕಪದೀ, ದ್ವಿಪದೀ, ಚತುಷ್ಪದಿ, ಷಟ್ಪದಿ, ಅಷ್ಟಪದೀ, ಸಹಸ್ರಪದಿಗಳೆಂದು ೬ ಭಾಗದ ಜನ್ಮವಿರುತ್ತದೆ. ಇವೆಲ್ಲಾ ಮೊದಲು ಅಂಡಜಗಳೆಂಬ ದ್ವಿಜತ್ವ ಪಡೆದ ಜೀವಿಗಳು.
       
        ಇನ್ನು ಎರಡನೇಯದಾದ ಉದ್ಭಿಜಗಳು. ಒಂದು ವಸ್ತುವಿನ ಅಥವಾ ರೂಪದ ಅಥವಾ ಜೀವಿಯ ಪರಿವರ್ತಿತ ರೂಪಗಳು. ಗೇಯಗಳು, ಕ್ಲಿಷ್ಟಗಳು, ನಾಶಹೇತುಗಳು. ಒಟ್ಟು ಪರಿವರ್ತಿತ ರೂಪವೆಂಬ ಕಾರಣದಿಂದ ಕಾಯ, ಕಾರಣ, ಕರ್ತಾನುಸಾರವಾಗಿ ಋಣ, ಕಾರಣ, ಬೌದ್ಧಿಕ, ಯೌಗಿಕಗಳೆಂಬ ೪ ವಿಧದಲ್ಲಿ ಪ್ರಕಟಗೊಳ್ಳುತ್ತವೆ. ಇದು ಪ್ರಕೃತಿಯ ಆಟ.
       
        ಮೂರನೇಯದಾದ ಸ್ವೇದಜ. ಲಿಂಗಭೇದವಿಲ್ಲದ ಸಂಪರ್ಕ ಅನಿವಾರ್ಯತೆ ಇಲ್ಲದೇನೇ ಪರಾಗಾದಿ ಸ್ಪರ್ಶದಿಂದ ಹುಟ್ಟುವ ಕ್ಷುದ್ರಗಳು. ಕಾರಣಗಳು, ಪರಿಣಾಮಕಾರಿಯಾದ ಕಾರ್ಯಗಳು. ಇದೂ ಕೂಡ ಧೈವೀಕ ಆಟವೆಂದೇ ಪರಿಗಣಿಸಬಹುದು. ಇವನ್ನು ಆತ್ಮಕ್ಕನುಸರಿಸಿದ ರೂಪಗಳಲ್ಲಿ  ಜನ್ಮಕಾರಣವೆಂದೂ, ಕರ್ಮಕ್ಕನುಸರಿಸಿದ ರೂಪದಲ್ಲಿ ಭೋಕ್ತೃ ಕಾರಣವೆಂದೂ ನಿರ್ಣಯಿಸಿರುತ್ತಾರೆ. ಇವೆಲ್ಲಾ ಜೀವಿಗಳ ಬೇರೆ ಬೇರೂಪದವುಗಳು, ಆತ್ಮದ ತುಣುಕುಗಳು.

ಇವೆಲ್ಲವುಗಳಿಗಿಂತ ವಿಶಿಷ್ಟವಾದ ಯೋನಿಜ ಜಂತುಗಳ ವಿಚಾರಕ್ಕೆ ಬರೋಣ. ಉಳಿಕೆ ಅಂಡಜ, ಸ್ವೇದಜ, ಉದ್ಭಿಜಗಳ ಬಗೆಗಿನ ಕರ್ಮ ಜಿಜ್ಞಾಸೆ ಅಗತ್ಯವಿಲ್ಲವೆಂದು ಬಿಟ್ಟು ಯೋನಿಜಗಳ ಬಗ್ಗೆ ವಿಮರ್ಶೆ ಮಾಡೋಣ. ಮುಖ್ಯವಾಗಿ ಯೋನಿಜಗಳಲ್ಲಿ ೭ ವಿಧ:-
೧) ಮಾನವ
೨) ಮೃಗ
೩) ಹಿಂಸ್ರಕ
೪) ರಾಕ್ಷಸ
೫) ಕ್ಷುದ್ರ
೬) ಬಲ್ಲ
೭) ಪುರೀಷ
ಈ ಏಳು ಬಗೆಯವೂ ಕೂಡ ಒಂದು ರೀತಿಯಲ್ಲಿ ವಿಶಿಷ್ಟ ಜನ್ಮ ಪಡೆದು ತನ್ನ ಕರ್ಮ ಕಾಳೆಯುವ ಉದ್ದೇಶದ ಕಾರಣಜನ್ಮವಾಗಿರುತ್ತವೆ. ಮೃಗ, ಹಿಂಸ್ರಕ, ರಾಕ್ಷಸ, ಕ್ಷುದ್ರ, ಬಲ್ಲ, ಪುರೀಷಗಳೆಲ್ಲವೂ ಯೋನಿಜವೇ ಆದರೂ ಅವು ಮಾನವಜನ್ಮಕ್ಕೆ ಅಥವಾ ನೈತಿಕತೆಗೆ ಬದ್ಧವಾಗಿರುವುದಿಲ್ಲ. ಹಾಗಾಗಿ ಅವುಗಳನ್ನೂ ಬಿಟ್ಟು ಮಾನವ ಜನ್ಮದಲ್ಲಿರುವ ೪ ವಿಧವನ್ನು ಮಾತ್ರ ಮೊದಲಾಗಿ ವಿಮರ್ಶಿಸೋಣ.

೧) ಮಾನವನಲ್ಲಿ ದೇವ
೨) ಮಾನವನಲ್ಲಿ ದ್ವಿಜ
೩) ಮಾನವನಲ್ಲಿ ಯಕ್ಷ
೪) ಮಾನವನಲ್ಲಿ ರಾಕ್ಷಸಾದಿಗಳೆಂದು ೪ ವಿಧ.

೧) ಮಾನವನಲ್ಲಿ ದೇವ:- ಇದು ಕಾರಣಜನ್ಮಗಳು. ಇದರಲ್ಲಿ ಕರ್ಮ ದೂಷಿತವಿರುವುದಿಲ್ಲ. ಯಾವುದೋ ಒಂದು ಕಾರಣಕ್ಕಾಗಿ ಜನ್ಮ ತಳೆದು ತಮ್ಮ ಉದ್ದೇಶದ ಗುರಿಯೊಂದಿಗೆ ವ್ಯವಹರಿಸಿ ಪ್ರಾಪಂಚಿಕದಲ್ಲಿದ್ದರೂ ಮುಕ್ತರಾಗಿ ವ್ಯವಹರಿಸುತ್ತಾ ಕಾರಣ ನಿಮಿತ್ತ ಕಾರ್ಯ ನೆರವೇರುತ್ತಲೇ ಈ ಭುವಿಯ ಬಂಧ ಕಳಚಿಕೊಳ್ಳುವ ಮಾನವ ವರ್ಗ.

೨) ಮಾನವನಲ್ಲಿ ದ್ವಿಜ:- ದ್ವಿಜವರ್ಗವೂ ಸದಾ ಸತ್ಕಾರ್ಯದಲ್ಲಿ ತೊಡಗುತ್ತಾ ಉತ್ತಮ ಸಂಸ್ಕಾರ ಪಡೆದು ಷಡ್ಗುಣಗಳನ್ನು ಮೈಗೂಡಿಸಿಕೊಂಡು ನಿರಂತರ ಸಾತ್ವಿಕರಾಗಿ ಬದುಕು ಸವೆಸುವ ವರ್ಗ. ತಮ್ಮ ಅಧ್ಯಯನ, ಉಪಾಸನೆ, ತಪಸ್ಸು ಎಲ್ಲವೂ ಲೋಕಕಲ್ಯಾಣಕ್ಕೆ ಮೀಸಲಿಟ್ಟ ತ್ಯಾಗಿಗಳು. ತಾವು ಈ ಪ್ರಪಂಚದ ಉಪಾಂಶುಗಳನ್ನು ಅಗತ್ಯತೆ ಅನುಸಾರ ಮಾತ್ರಾ ಬಳಸುತ್ತಾ ತನ್ನೆಲ್ಲವನ್ನೂ ಸಮಾಜಕ್ಕೆ ಮೀಸಲಿಟ್ಟ ಶ್ರೇಷ್ಠ ಮಾನವ ಜೀವಿಯೇ "ದ್ವಿಜ". ಈ ದ್ವಿಜನೇ ಭೂಮಿಯಲ್ಲಿ "ಭೂಸುರ" ಎನ್ನಿಸಿಕೊಳ್ಳುವವನು.

೩) ಮಾನವನಲ್ಲಿ ಯಕ್ಷ:- ತಾನು ಕಲಿತ ವಿಧ್ಯೆಯಿಂದ ಉಪಜೀವನಕ್ಕಾಗಿ ಸಂಪಾದನೆಗಿಳಿದು ವಿಧ್ಯೆಯ ದುರುಪಯೋಗ ಮಾಡುತ್ತಾ, ಧನ ಸಂಚಯನದ ಗುರಿಯೊಂದಿಗೆ ಬದುಕುತ್ತಾ ತಾನು, ತನ್ನದು, ತನ್ನವರು ಎಂಬ ಭೇದ ಭಾವದ ವರ್ಗವೇ ಯಕ್ಷ.

೪) ಮಾನವನಲ್ಲಿ ರಾಕ್ಷಸ:- ಅದರಲ್ಲಿ ರಾಕ್ಷಸ, ದೈತ್ಯ, ಅಸುರವೆಂಬ ೩ ವಿಧ. ಇದೂ ಮಾನವ ರೂಪದ ವಿಕೃತಿಗಳು. ಸದಾ ಲೋಕ ಕಂಟಕರು. ಅನ್ಯಾಯ ಮಾರ್ಗವನ್ನೇ ತುಳಿಯುವವರು. ತಮ್ಮಲ್ಲಿರುವ ಬಲವನ್ನು ಕೆಟ್ಟ ಮಾರ್ಗದಲ್ಲಿಯೇ ಬಳಸುವವರು. ಸದಾ ಮೂರ್ಖತನದ ವ್ಯವಹಾರವುಳ್ಳವರು. ಮೋಸ, ವಂಚನೆ, ದ್ರೋಹ, ಅನೃತವಚನವನ್ನೇ ಪುರುಷಾರ್ಥವಾಗಿ ತಿಳಿದವರು. ಧರ್ಮನಿಂದೆ, ದೇವನಿಂದೆ, ಗುರುನಿಂದೆ ಮಾಡುತ್ತಾ ಅದರಲ್ಲೇ ಬೇಳೆ ಬೇಯಿಸಿಕೊಳ್ಳುವವರು ಮಾನವರೂಪೀ ರಾಕ್ಷಸರು. ಅಭೋಜ್ಯ ಭಕ್ಷಣ, ಅನೀತಿ, ಅನೃತವಾಕ್ಯ, ಅತೀ ಅಹಂಕಾರ, ಆಕಾರ ವಿಕಾರಗಳಿಂದ ಸದಾ ಸಮಾಜದ ಮಧ್ಯದಲ್ಲಿದ್ದು ಸಮಾಜವನ್ನು ಸದಾ ಭಯಪಡಿಸಿಯಾದರೂ ಗೌರವ ಪಡೆಯುವ ಆಕಾಂಕ್ಷಿಗಳು. ಇವರು ಮಾನವರೂಪಿನಲ್ಲೇ ಇರುವುದರಿಂದ ಯಾರೂ ಸುಲಭದಲ್ಲಿ ಗುರುತಿಸಲಾರರು.

ಅದೇನೇ ಇರಲಿ ಈ ದ್ವಿಜತ್ವರೂಪದ ಮಾನವರ ಚಿಂತನೆ ಮಾಡೋಣ. ದ್ವಿಜತ್ವವು ಉತ್ತಮ ಮಾನವ ಲಕ್ಷಣ. ದ್ವಿಜನಾದವನು ಮಾನವನಾಗಿ ಬದುಕುತ್ತಾ ಉತ್ತಮನಾಗಿ ಪೂರ್ವಜನ್ಮಕೃತ ವಿಶೇಷ ಯೋಗದಿಂದ ಜನ್ಮಕ್ಕೆ ಬಂದಿದ್ದರೆ ಆತನೇ ಬ್ರಹ್ಮನೆನಿಸಿಕೊಳ್ಳುತ್ತಾನೆ. ಇನ್ನು ದ್ವಿಜದಲ್ಲಿ ಮಧ್ಯಮದವರಿದ್ದಾರೆ. ಜನ್ಮಾಂತರ ಕೆಲ ಪಾಪಶೇಷಗಳು, ಕರ್ಮ-ಋಣಗಳು; ಇವುಗಳನ್ನಾಶ್ರಯಿಸಿ ಕಷ್ಟಕರವಾದ ಜೀವನ ನಿರ್ವಹಣೆ ಮಾಡುತ್ತಾ ಕರ್ಮ ಕಳೆಯುತ್ತಾರೆ. ಇವರು ದುರಾಶಾ ಪೀಡಿತರಲ್ಲ. ಪಾಪಭೂಯಿಷ್ಠರಲ್ಲ. ಆದರೆ ಮಧ್ಯಮರು. ಅವರಿಗೆ ಬ್ರಹ್ಮಜ್ಞಾನ ಸ್ಫುರಿಸಲಾರದು. ಅವರ ಜ್ಞಾನವೇನಿದ್ದರೂ ಪ್ರಾಪಂಚಿಕವೇ. ಅದರಿಂದ ಮುಂದಕ್ಕೆ ಅವರ ಚಿಂತನೆ ನೆಗೆಯಲಾರದು. ಆದರೆ ನಿರುಪದ್ರವಿಗಳು. ಸಮಾಜಕ್ಕೆ ಹಿತಕಾರಿಗಳೂ, ಉಪಕಾರಿಗಳೂ, ಸತ್ಯವಂತರೂ ಆಗಿರುತ್ತಾರೆ.

ಇನ್ನು ದ್ವಿಜದಲ್ಲಿ ಅಧಮರು. ಸದಾ ಕುಟಿಲರು, ಭೋಗಾಕಾಂಕ್ಷಿಗಳೂ, ಸದಾ ಸರ್ವದಾ ಸೋಮಾರಿಗಳೂ, ಆದರೆ ಪ್ರಪಂಚದ ಎಲ್ಲವೂ ತಮ್ಮದಾಗಬೇಕೆಂಬ ದುರಾಸೆಯವರೂ, ತಮ್ಮ ಕುಹಕತನದಿಂದಲೇ ಲೋಕವನ್ನು ವಂಚಿಸುತ್ತಾ ಸಮಾಜವನ್ನು ವಂಚಿಸಿ ಬೇಳೆ ಬೇಯಿಸಿಕೊಳ್ಳುವ ಜನ. ಅವರ ವಿಚಾರ ಬಿಡಿ. ಉತ್ತಮ ದ್ವಿಜನು ಬ್ರಹ್ಮಜ್ಞಾನವನ್ನು ಪಡೆದವನು ವರ್ಣಾಶ್ರಮ ರೀತ್ಯಾ ಬ್ರಾಹ್ಮಣನೆನ್ನಿಸಿ ಲೋಕೋಪಕಾರಿಯಾಗುತ್ತಾನೆ. ಅವನೇ ತನ್ನ ಸಾಧನೆ, ಬಲ, ತೇಜಸ್ಸಿನಿಂದ ಲೋಕರಕ್ಷಣೆ ಮಾಡುತ್ತಾನೆ. ಹಾಗೇ ಪ್ರಕೃತಿಯ ನಿರಂತರೋಪಾಸನೆಯಿಂದ ಸುಭಿಕ್ಷ ಉಂಟಾಗುವಂತೆ ಮಾಡುತ್ತಾನೆ. ಹಾಗೇ ನೊಂದವರ ಸೇವೆಯೇ ತನ್ನ ಗುರಿಯೆಂದು ವ್ಯವಹರಿಸುತ್ತಾ ಸಕಲರನ್ನೂ, ಸಕಲವನ್ನೂ ಸಮಭಾವದಿಂದ ನೋಡುತ್ತಾ ನಿರಂತರತೆಗೆ ಸ್ಪಂದಿಸುತ್ತಿರುತ್ತಾನೆ. ಅವನೇ ನಿಜವಾದ ಬ್ರಾಹ್ಮಣ.

ಈ ಬ್ರಾಹ್ಮಣ್ಯವನ್ನು ಕುರಿತು ಎರಡು ಮಾತು ಬರೆದು ಮುಂದಿನ ವೈವರ್ತಾದಿಗಳ ಬಗ್ಗೆ ವಿವರಿಸುತ್ತೇನೆ. ಮುಖ್ಯವಾಗಿ ಈ ಭಾರತದೇಶ, ಇದರ ಶಕ್ತಿ, ಯುಕ್ತಿ, ಬಲ, ತೇಜ, ಓಜ, ವರ್ಚಗಳು ಆ ಬ್ರಾಹ್ಮಣ್ಯದಿಂದಲೇ ಆಗುವಂತಹದ್ದು. ಜಗತ್ತಿನ ಎಲ್ಲಾ ಆಗುಹೋಗುಗಳೂ ಈ ಬ್ರಹ್ಮಜ್ಞಾನ ಪಡೆದ ಬ್ರಾಹ್ಮಣ್ಯದಿಂದಲೇ ನಡೆಯುತ್ತದೆ. ಆದರೆ ಅವರು ಅದನ್ನು ಅಷ್ಟೇ ನಿಸ್ಪೃಹತೆಯಿಂದ ಸ್ವೀಕರಿಸುತ್ತಾರೆ. ಹಾಗಾಗಿ ಅವರನ್ನು ಈ ಸಮಾಜದ ಮಧ್ಯದಲ್ಲಿ ಸಾಮಾನ್ಯ ಜನರು ಗುರುತಿಸಲಾರರು. ಅಂತಹಾ ವಿರಾಗಿ, ತ್ಯಾಗಿ, ನಿಸ್ಪೃಹ, ಸರಳ, ಸಹೃದಯಿ, ದಯಾಪರನಾಗಿರುತ್ತಾನೆ - "ಬ್ರಾಹ್ಮಣ".

ಸಮಾಜ ಏನೇ ತಪ್ಪು ಮಾಡಲಿ, ಎಷ್ಟೇ ಕೆಟ್ಟದ್ದಾಗಿ ನಡೆಸಲಿ, ಪ್ರತಿಕ್ರಿಯಾ ಶೂನ್ಯದವರು. ಆದರೆ ಈ ಕಾರಣದಿಂದಾಗಿ ಸಮಾಜ ಮುಂದೆ ಮುಂದೆ ಬೆಲೆ ತೆರುತ್ತಲೇ ಇರುತ್ತದೆ. ಋಣ ರಾಹಿತ್ಯರಾದ ಇವರು ಜಗತ್ತಿನ ಎಲ್ಲವೂ ಆಗಿರಬಲ್ಲರು. ಆದರೆ ಸಾಮಾನ್ಯರಂತೆಯೇ ಬದುಕುತ್ತಾ ನಿಸ್ಪೃಹತೆಯಲ್ಲಿ ಸರಳ ಬದುಕು ಸಾಗಿಸುತ್ತಾರೆ. ಬ್ರಹ್ಮತೇಜಸ್ಸಿನ ಬಲ ಅವರಲ್ಲಿ ಸರ್ವದಾ ಆವಿರ್ಭಾವವಗಿರುತ್ತದೆ. ಪಂಚ ಮಕಾರಗಳನ್ನು ತ್ಯಜಿಸಿದ ಇವರಿಗೆ ಮಮಕಾರವೇ ಇಲ್ಲ. ಮಾತು ನಿಷ್ಠುರ, ಸತ್ಯ. ಧರ್ಮದ ಬಗ್ಗೆ ಅತೀವ ಗೌರವ. ಪರನಿಂದೆ ಮಾಡಲಾರರು. ಅಪ್ರಕಟಿತರಾಗಿಯೇ ಇರುತ್ತಾರೆ. ಈಗಲೂ ನಮ್ಮೀ ಭಾರತದಲ್ಲಿ ಹಲವಾರು ಜನ ಇಂತಹಾ ಬ್ರಹ್ಮಜ್ಞಾನಿಗಳಿದ್ದಾರೆ. ಅವರಿಂದಲೇ ಲೋಕದಲ್ಲಿ ಮಳೆ-ಬೆಳೆ ಎಂಬುದನ್ನು ಅರಿತುಕೊಳ್ಳಿ.

ಇನ್ನುಳಿದ ಉತ್ತಮದಲ್ಲಿ ವೈವರ್ತ, ಸಂವರ್ತ, ನಿರಾವರ್ತಗಳೆಂಬ ಮೂರು. ಅವುಗಳ ಬಗ್ಗೆ ನೋಡೋಣ. ಅದರಲ್ಲಿ ವೈವರ್ತ ಮತ್ತು ಸಂವರ್ತಗಳು ಪರಸ್ಪರ ವಿರುದ್ಧವಾಗಿಯೇ ಇರುವ ೨ ಬ್ರಹ್ಮವೃತ್ತಿಗಳು. ವೈವರ್ತ ಒಂದನ್ನು ಅನುಗ್ರಹಿಸಿದರೆ ಸಂವರ್ತ ಅದನ್ನು ಹಾಳು ಮಾಡುವುದೇ ಧ್ಯೇಯ ಗುರಿಯೆಂಬ ರೀತಿಯಲ್ಲಿ ವ್ಯವಹರಿಸುತ್ತದೆ. ಎರಡೂ ಬ್ರಹ್ಮವೃತ್ತಗಳೇ ಆದರೂ ಇವೆರಡರ ಕಾರಣದಿಂದಾಗಿ ಸದಾ ಜಂಜಾಟ ಹೋರಾಟವಿರುತ್ತದೆ. ಅವೆರಡರ ಹೋರಾಟದಿಂದಾಗಿ ಈ ಪ್ರಕೃತಿ ಸಹಜವಾಗಿ ನೋವನ್ನು ಅನುಭವಿಸುತ್ತದೆ. ಅವಕ್ಕೆ ಅವದ್ದೇ ಆದ ಗುರಿಯಿಲ್ಲದಿದ್ದರೂ ವ್ಯರ್ಥ ಹೋರಾಟ ಸಹಜವಾಗಿರುತ್ತದೆ. 

ಉದಾ:- ವಸಿಷ್ಠ+ವಿಶ್ವಾಮಿತ್ರರು, ಭೃಗು+ಆಂಗೀರಸರು, ಯಾಜಿ+ಸುಯಾಜಿಗಳು, ಬೃಹಸ್ಪತಿ+ಶುಕ್ರರು. ಹೀಗೆ ಉದಾಹರಿಸುತ್ತಾ ಹೋದಲ್ಲಿ ಮುಗಿಯದು. ಈ ಸಂವರ್ತ+ವೈವರ್ತಗಳ ವೈರುದ್ಧ್ಯದಿಂದ ಸದಾ ಪ್ರಕೃತಿ ವಿಪ್ಲವಗಳು, ಯುದ್ಧಗಳು, ಹೊಡೆದಾಟ, ದೊಂಬಿ, ಗಲಾಟೆ ಇದ್ದದ್ದೇ. ಅದರಿಂದ ಪ್ರಕೃತಿಯು ಜೀವರಾಶಿಗಳಿಗೆ ಪಾಠ ಮಾಡುತ್ತಿರುತ್ತದೆ. ಅದು ಈ ಪ್ರಕೃತಿಯ ಸಂವರ್ತ+ವೈವರ್ತವೆಂಬ ೨ ರೀತಿಯ ಸ್ವಭಾವಗಳು. ಆದರೆ ಬ್ರಹ್ಮವೇ. ಅಂದರೆ ಬ್ರಾಹ್ಮಣರೇ. ಪರಸ್ಪರ ವೈರುದ್ಧ್ಯವಾಗಿ ವ್ಯವಹರಿಸಲೇಬೇಕಾದ ಗುಣಧರ್ಮವನ್ನು ಹೊಂದಿ ಲೋಕೋತ್ತರವಾಗಿರುತ್ತದೆ.

ಇನ್ನು ನಾಲ್ಕನೆಯದಾದ ನಿರಾವರ್ತ. ಇದು ಬ್ರಾಹ್ಮಣವೇ ಆದರೂ ಅಪಾಯಕಾರಿ. ಉದಾ:- ಖರ, ದೂಷಣ, ತ್ರಿಶಿರ, ತ್ವಾಷ್ಟ್ರ, ಸಂವರ್ತ, ಉಶಿರ, ರಾವಣ, ಬಾಣರಾದಿಯಾಗಿ ಬ್ರಹ್ಮಜ್ಞಾನ ಪಡೆದು ಬ್ರಾಹ್ಮಣರಾಗಿ ತಮ್ಮ ಮಹತ್ವಾಕಾಂಕ್ಷೆಯಿಂದಾಗಿ ಲೋಕಕಂಟಕರಾಗಿಯೇ ಮೆರೆದರು. ಇತಿಹಾಸದಲ್ಲಿ ಏನೇನಕ್ಕೋ ಕಾರಣರಾದರು, ಲೋಕಕಂಟಕರಾದರು. ಬಹಿಷ್ಕೃತರಾದರೂ ಅವರನ್ನಾಶ್ರಯಿಸಿಯೇ ತಮ್ಮ ಬೇಳೆ ಬೇಯಿಸಿಕೊಂಡ ಜನಕ್ಕೇನೂ ಕೊರತೆಯಿಲ್ಲ. ಇವರೆಲ್ಲಾ ತಮ್ಮ ಸಾಧನಾ ಬಲದಿಂದಲೇ ಶಕ್ತರಾದರು. ಹಾಗೇ ಚಾಣಕ್ಯ+ಅಮಾತ್ಯರೂ ಕೂಡ ಒಂದು ರೀತಿಯಲ್ಲಿ ಈ ವರ್ಗಕ್ಕೇನೇ ಸೇರುತ್ತಾರೆ. ಯಾರು ಲೋಕ ಹಿತ ಮರೆತು ತಮ್ಮ ಸಿದ್ಧಾಂತದ ಹಿತವನ್ನೇ ಪ್ರಧಾನವೆಂದು ತಿಳಿದು ವ್ಯವಹರಿಸುವ ಸಮಕಾಲೀನ ಮತ ಪ್ರಸಂಗಕಾರರೂ ಕೂಡ ಈ ಸಾಲಿಗೆ ಸೇರುತ್ತಾರೆ. ಸಿದ್ಧಾಂತ, ಧರ್ಮ, ಮತ ಇವುಗಳೆಲ್ಲಾ ಸಮಸ್ಥಿತಿಯಲ್ಲಿ ಸಕಲ ಜೀವಿಗಳ ಬಾಳಿಗೆ ಸಹಾಯ, ಮಾರ್ಗದರ್ಶನ ಮಾಡಬೇಕೇ ವಿನಃ ನಾಶಕ್ಕೆ ಕಾರಣವಾಗಬಾರದು. ಹಾಗಾದಲ್ಲಿ ಆತ್ಮೋನ್ನತಿಯೆಂಬ ಸಕಲ ಜೀವಿಗಳ ಮೂಲಗುರಿ ದಾರಿ ತಪ್ಪುತ್ತದೆ. ಹಾಗಾಗಿ ಈ ಕೋಷ್ಟಕವನ್ನು ಓದಿ ಅರ್ಥಮಾಡಿಕೊಂಡು ಮಾನವರಾಗಿರೆಂದು ಹಾರೈಸುತ್ತೇನೆ.

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ
ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment