Wednesday, 8 February 2017

ನಮ್ಮ ಋಷೀ ಪರಂಪರೆ - ೬ : ವಸಿಷ್ಠರು-೨

ಈ ವಸಿಷ್ಠರ ಲೋಕಹಿತಕಾರ್ಯವನ್ನು ಲೆಕ್ಕ ಹಾಕ ತೊಡಗಿದರೆ ಮುಗಿಯದ ಕಥೆ. ಆದರೆ ಕೆಲ ವಿಷಯವಾದರೂ ತಿಳಿದಿರಲಿ ಎಂಬ ಕಾರಣಕ್ಕೆ ಈ ಕೆಲವೊಂದು ಘಟನೆಗಳನ್ನು ಉದಾಹರಿಸುತ್ತೇನೆ. ಮೊದಲಾಗಿ ಲೋಕವಂದ್ಯರಾದ, ಆದರ್ಶ ಪ್ರಾಯವಾದ, ಪ್ರಾತಃಸ್ಮರಣೀಯವಾದ ಅವರ ಗೃಹಸ್ಥ ಜೀವನ, ಅದಕ್ಕೆ ಸಂಬಂಧಿಸಿದ ಕಥೆ. ಅದೊಂದು ರೋಚಕವೂ, ಪೂರ್ಣವೂ ಆದ ವಿಶೇಷ ಕಥೆ ಓದಿರಿ.

ಹಿಂದೆ ಉತ್ತಮ ಮನುವಿನ ಕಾಲದಲ್ಲಿ ವಸಿಷ್ಠರು ಉತ್ತಮನಿಗೆ ಪುರೋಹಿತರಾಗಿದ್ದರು. ಧರ್ಮಭೀರುವೂ, ತ್ಯಾಗಿಯೂ, ಶೂರನೂ, ಧೀರನೂ, ಉದಾತ್ತನೂ ಆದ “ಉತ್ತಮನು” ಹೆಸರಿಗೆ ಅನ್ವರ್ಥಕನೇ ಆಗಿದ್ದನು. ಅವನ ಪೌರೋಹಿತ್ಯವೆಂದಾದ ಮೇಲೆ ಅದೇನು ಕಡಿಮೆ ಹುದ್ದೆಯೇ? ವಸಿಷ್ಠರು ರಾಜಗುರುವೆನಿಸಿಕೊಂಡು ಗೌರವಾನ್ವಿತರಾಗಿದ್ದರು. ಆಗ ಅಲ್ಲಿದ್ದ ಇತರೆ ಬ್ರಾಹ್ಮಣರಿಗೆ ಸಹಜ ಸ್ವಭಾವಸಿದ್ಧ ಮತ್ಸರವಿತ್ತು. ಆದರೇನು ವಸಿಷ್ಠರ ವಿಧ್ಯಾ, ಸಾಮರ್ಥ್ಯ, ತಪಃ ಪ್ರಭಾವದ ಮುಂದೆ ಅವರೆಲ್ಲಾ ಕಣಗಳಷ್ಟೆ, ಹಾಗಾಗಿ ಏನೂ ಮಾಡಲಾರದಾಗಿದ್ದರು. ಆ ಕಾಲದಲ್ಲಿಯೇ “ಚಂದ್ರಧ್ವಜ”ನೆಂಬ ಇನ್ನೊಬ್ಬ ಪರಾಕ್ರಮಿಯಾದ ರಾಜನಿದ್ದನು. ಅವನೂ ಉತ್ತಮನ ಆಳ್ವಿಕೆ ಚಕ್ರಾಧಿಪತ್ಯವನ್ನು ಒಪ್ಪಿ ಮಾಂಡಲಿಕನಾಗಿದ್ದನು. ಆದರೆ ಒಂದು ಕಾಲದಲ್ಲಿ ಅವನಿಗೆ “ಜ್ಯೋತಿಷ್ಟೋಮ” ಎಂಬ ಸೋಮಯಾಗ ಮಾಡಲು ಅಪೇಕ್ಷೆ ಹುಟ್ಟಿತು. ಆತನು ತನ್ನ ಕುಲಪುರೋಹಿತರಾದ “ವತ್ಸ”ರಲ್ಲಿ ಈ ವಿಚಾರ ಚಿಂತನೆ ಮಾಡಲಾಗಿ ಅವರು ಕೆಲ ಮುಖ್ಯ ವಿಷಯವನ್ನು ನಿಬಂಧನೆಯನ್ನೂ “ಚಂದ್ರಧ್ವಜ”ನಿಗೆ ತಿಳಿಸಿದರು. ಇದಕ್ಕೆ ನೀನು ಸಿದ್ಧನೂ, ಬದ್ಧನೂ ಆಗಿದ್ದಲ್ಲಿ ಯಾಗ ಮಾಡಬಹುದೆಂದರು. ಅವರು ವಿಧಿಸಿದ ನಿಯಮ ನಿಬಂಧನೆಗಳು ಹೀಗಿವೆ:-

1)    ಚಕ್ರವರ್ತಿಯ ಅನುಮೋದನೆ ಪಡೆದಿರಬೇಕು.

2)   ಯಾಗ ನಿರ್ವಹಣೆಗೆ ಅವರ ಪುರೋಹಿತರೇ ಇರಬೇಕು (ವಸಿಷ್ಠರು)

3)   ಅತ್ಯಗ್ನಿಷ್ಟೋಮವನ್ನು ಮಾಡುವಂತಿಲ್ಲ.

4)   ಯಾಗ ಸಮಾರೋಪಕ್ಕೆ ಚಕ್ರವರ್ತಿ ಇರಬೇಕು.

5)   ನಿನ್ನ ವೈಯಕ್ತಿಕ ಉದ್ದೇಶ ಮಾತ್ರ ಯಾಗದಲ್ಲಿರಬೇಕು.

6)   ನೀನೂ, ದೀಕ್ಷಿತರೂ, ಅಧ್ವರ್ಯುವೂ, ಉದ್ಗಾತೃಗಳೂ, ಬ್ರಹ್ಮನೂ, ಹೋತೃಗಳೂ, ಗೇಯರೂ, ಉಪವಿಧರೂ, ಹಾರೀತರೂ ಎಲ್ಲರೂ ಗೃಹಸ್ಥರಾಗಿರಬೇಕು.

7)    ಒಂದು ವರ್ಷಕಾಲ ನೀನು ಕೃಷಿಕಾರ್ಯದಲ್ಲಿ ತೊಡಗಿ ಉಕ್ತಧಾನ್ಯಗಳನ್ನು ಬೆಳೆದಿರಬೇಕು. ರೈತರಿಂದ ಪಡೆದಿದ್ದಾಗಿರಬಾರದು.

8)   ಆ ಒಂದು ವರ್ಷಕಾಲ ನೀನು ವ್ರತನಿಷ್ಠನಾಗಿರಬೇಕು.

9)   ಕೃಷಿ ಕಾರ್ಯಕ್ಕೆ ಹೊರತುಪಡಿಸಿದ ಆಯುಧ ಧಾರಣೆ ಮಾಡಬಾರದು. ನಿಶ್ಶಸ್ತ್ರನಾಗಿರಬೇಕು.

ಈ ಒಂಭತ್ತು ನಿಬಂಧನೆಗಳನ್ನು “ವತ್ಸ”ನೆಂಬ ಆತ್ರೇಯ ಪರಂಪರೆಯ ಪುರೋಹಿತನು ವಿಧಿಸಲಾಗಿ ರಾಜನು ಹಾಗೇ ಆಗಲೆಂದು ಚಕ್ರವರ್ತಿ ಉತ್ತಮನನ್ನು ಕಂಡು ತನ್ನ ಮನದ ಅಪೇಕ್ಷೆಯನ್ನು ತಿಳಿಸಲಾಗಿ ಉತ್ತಮನು ತಕ್ಷಣವೇ ಒಪ್ಪಿಗೆಯನ್ನಿತ್ತನು. ಆದರೆ ಆ ನಿಬಂಧನೆಯನ್ನು ಕೂಲಂಕುಷವಾಗಿ ಚಿಂತಿಸಲಾಗಿ ತನ್ನ ಪುರೋಹಿತರಾದ ವಸಿಷ್ಠರು ಈ ಯಾಗದಲ್ಲಿ ಭಾಗವಹಿಸುವಂತಿಲ್ಲ, ಏಕೆಂದರೆ ಆ ಕಾಲಘಟ್ಟದಲ್ಲಿ ವಸಿಷ್ಠರು ಗೃಹಸ್ಥರಾಗಿರಲಿಲ್ಲ, ಪತ್ನಿ ಇರಲಿಲ್ಲ. ಹಾಗೆಂದು ವಿವಾಹವಾಗಲಿಲ್ಲವೆಂದಲ್ಲ, ಅಲ್ಲಿಯವರೆಗೆ ಅವರು ಮದುವೆಯಾದ ಪತ್ನಿ ಬದುಕಿರಲಿಲ್ಲ. ಹಾಗಾಗಿ ಅರಸ ಇಕ್ಕಟ್ಟಿಗೆ ಸಿಲುಕಿದ. ಯಾಗ ನಿಬಂಧನೆಗೆ ರಾಜಪುರೋಹಿತನೇ ಪ್ರಧಾನವೆಂದೂ ಇದೆ, ಹಾಗೇ ಆತನು ಸಪತ್ನೀಕನಾಗಿರಬೇಕೆಂದೂ ಇದೆ. ಆ ಕಾಲದಲ್ಲಿ ವಸಿಷ್ಠರ ಪತ್ನಿ ಇರಲಿಲ್ಲ. ಉತ್ತಮನು ವಸಿಷ್ಠರನ್ನೇ ಕೇಳಿದ ಇದಕ್ಕೇನು ಮಾರ್ಗೋಪಾಯವೆಂದು. ಆಗ ಅನಿವಾರ್ಯವಾಗಿ ವಸಿಷ್ಠರು “ಅಯ್ಯಾ ಅರಸನೇ, ನೀನು ಬೇರೆ ಪುರೋಹಿತರನ್ನು ನೇಮಿಸಿಕೊ, ನಾನು ಕಾಡಿಗೆ ತಪಸ್ಸಿಗೆ ತೆರಳುತ್ತೇನೆ, ರಾಜ ಚಂದ್ರಧ್ವಜನ ಅಪೇಕ್ಷೆಯೂ ನೆರವೇರಲಿ, ನಿನ್ನ ಮಾತೂ ನಡೆಯಲಿ” ಎಂದರು. ಆಗ ಇದೇ ಉದ್ದೇಶ ಹೊಂದಿದ ಬ್ರಾಹ್ಮಣವರ್ಗವೆಲ್ಲಾ ಸಂತೋಷ ಪಟ್ಟಿತು. ಆದರೆ ರಾಜನು ವಸಿಷ್ಠರಿಗೆ ವಿವಾಹ ಮಾಡುವ ಪ್ರಯತ್ನ ಮಾಡಿದ. ಬ್ರಾಹ್ಮಣರಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಆಗ ಅನಿವಾರ್ಯವಾಗಿ ವಸಿಷ್ಠರು ಪೌರೋಹಿತ್ಯ ಬಿಟ್ಟು ಕಾಡಿಗೆ ತೆರಳಿದರು. ಚಂದ್ರಧ್ವಜನ ಯಾಗವೂ ನಡೆಯಿತು, ಉತ್ತಮನು ವಸಿಷ್ಠರನ್ನು ಪುನಃ ಕರೆಯಿಸಿಕೊಳ್ಳುವ ಯತ್ನ ಮಾಡಿದ, ಆದರೆ ಕೈಗೂಡಲಿಲ್ಲ.

ಮುಂದೆ ವಸಿಷ್ಠರು ದಕ್ಷಿಣಭಾರತಕ್ಕೆ ಬಂದು ವೃಷಭಾಚಲದಲ್ಲಿ ನೆಲಸಿದರು. ತಮ್ಮದ್ದೇ ಆದ ಒಂದು ಆಶ್ರಮ, ಗುರುಕುಲ ಸ್ಥಾಪಿಸಿಕೊಂಡು ತಪೋನಿಷ್ಠರಾಗಿದ್ದರು. ಹಾಗೇ ಗುರುಕುಲದಲ್ಲಿ ವಿಧ್ಯಾಭ್ಯಾಸಕ್ಕಾಗಿ ಬಂದ ವಿಧ್ಯಾರ್ಥಿಗಳಲ್ಲಿ ಶಮದಂತನೆಂಬ ಬೇಡನ  ಮಗಳೂ ಒಬ್ಬಳು. ಅವಳಿಗೆ ಈ ವಸಿಷ್ಠರ ಮೇಲೆ ತುಂಬಾ ಭಕ್ತಿ ಪ್ರೀತಿ. ನಿರಂತರ ವಸಿಷ್ಠರ ಸೇವೆ ಮಾಡುತ್ತಾ ವಿಧ್ಯಾಭ್ಯಾಸ ಮಾಡುತ್ತಿದ್ದಳು. ಬೇರೆಲ್ಲಾ ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮುಗಿಸಿ ತೆರಳಿದರೂ ಈಕೆ ಮಾತ್ರ ವಸಿಷ್ಠರನ್ನು ಬಿಟ್ಟು ಹೋಗಲೇ ಇಲ್ಲ. ಒಂದು ದಿನ ಶಮದಂತನು ವಸಿಷ್ಠಾಶ್ರಮಕ್ಕೆ ಬಂದು ವಸಿಷ್ಠರನ್ನು ಕಂಡು “ತನ್ನ ಮಗಳು ಇಲ್ಲಿ ವಿಧ್ಯಾಭ್ಯಾಸಕ್ಕೆ ಬಂದು ಬಹಳಕಾಲವಾಯ್ತು, ಮನೆಗೆ ಕರೆದುಕೊಂಡು ಹೋಗಿ ಕುಲಾಚಾರದಂತೆ ವಿವಾಹ ಮಾಡುತ್ತೇನೆ ಎಂದರೆ ಆಕೆ ಬರಲು ಒಪ್ಪುತ್ತಿಲ್ಲ, ನಿಮ್ಮನ್ನು ಬಿಟ್ಟು ಬರಲಾರೆ ಎನ್ನುತ್ತಾಳೆ, ನಾನೀಗ ಧರ್ಮಸಂಕಟಕ್ಕೆ ಸಿಕ್ಕಿದ್ದೇನೆ, ಪ್ರಾಯಪ್ರಬುದ್ಧಳಾದ ಮಗಳ ವಿವಾಹ ಮಾಡದಿದ್ದಲ್ಲಿ ಕುಲಾಚಾರಕ್ಕೆ ಭಂಗ ಬಂದು ಧರ್ಮಭ್ರಷ್ಟನಾಗುತ್ತೇನೆ, ಅದಕ್ಕೆ ಅವಳು ಒಪ್ಪುತ್ತಿಲ್ಲ, ನಮ್ಮ ಕುಲಾಚಾರ ಪದ್ಧತಿಯಂತೆ ಕೂಡಿಕೆ ಇಲ್ಲದಿದ್ದರೆ ವಿವಾಹ ಮಾಡಲಾಗದು, ಹಾಗೆಂದು ಅವಳು ನಿಮ್ಮನ್ನು ಪೂಜ್ಯಭಾವದಿಂದ ಗೌರವದಿಂದ ಸೇವೆ ಮಾಡುತ್ತಿದ್ದಾಳೇ ವಿನಃ ಬೇರೆ ಭಾವ ಅವಳಲ್ಲಿಲ್ಲ. ಈಗ ನಾನೇನು ಮಾಡಲಿ? ನೀವು ಉಪಪತ್ನಿಯಾಗಿ, ದಾಸಿಯಾಗಿ, ಕರ್ದಮೆಯಾಗಿ, ಸೇವಕಿಯಾಗಿ, ಶಿಷ್ಯೆಯಾಗಿ ಯಾವ ರೀತಿಯಿಂದ ಅವಳನ್ನು ಸ್ವೀಕರಿಸುತ್ತೇನೆ ಎಂದರೂ ನಾನಂತೂ ಬದ್ಧನೆ. ಒಟ್ಟಾರೆ ನನ್ನ ಕುಲಾಚಾರ ಬಹಿಷ್ಕಾರದಿಂದ ಬಿಡುಗಡೆ ಕೊಡಿಸಿರಿ” ಎಂದು ಬೇಡಿದನು.

ಆಗ ವಸಿಷ್ಠರು “ಅಯ್ಯಾ ಬೇಡನೇ, ನೀನು ನಿನ್ನ ಮನಸ್ಸಿನಲ್ಲಿರುವ ಎಲ್ಲಾ ವಿಚಾರವನ್ನೂ ಬಿಚ್ಚಿಕೊಂಡಿದ್ದೀಯಾ, ತುಂಬಾ ಸಂತೋಷ. ನಾನು ಕುಲದಲ್ಲಿ ಬ್ರಾಹ್ಮಣ, ಉಚ್ಚ ಜಾತಿಯವನು ಎಂಬ ಭಾವದಿಂದ ನೀನು ಒಟ್ಟಾರೆ ನಿನ್ನ ಕುಲಾಚಾರದಿಂದ ಬಿಡುಗಡೆ ಹೊಂದಬೇಕೆಂಬ ಕಾರಣವನ್ನೇ ಮುಂದಾಗಿಟ್ಟು ನಿನ್ನ ಮಗಳನ್ನು ದಾಸಿ, ಸೇವಕಿ, ಕರ್ದಮೆ, ಶಿಷ್ಯೆ, ಉಪಪತ್ನಿಯಾಗಿಯೇ ಹೇಗಾದರೂ ಸ್ವೀಕರಿಸಿ ಎನ್ನುತ್ತೀಯ. ನೀನು ಬುದ್ಧಿವಂತನೇ, ಆದರೆ ನೀನು ಹೇಳಿದ ಮಾರ್ಗ ಸೂಕ್ತವಲ್ಲ. ನಿನ್ನ ದ್ರಾವಿಡ ಸಂಸ್ಕೃತಿ, ಕುಲಾಚಾರಗಳ ಬಗ್ಗೆ ನನಗೂ ಗೌರವವಿದೆ ಮತ್ತು ಅವಳ ಪ್ರೀತಿ ಏನು ಎಂದು ನಾನೂ ಬಲ್ಲೆ. ಹಾಗೆಂದು ಈಗಲೇ ಅವಳನ್ನು ನಾನು ವಿವಾಹವಾಗಲಾರೆ. ಸ್ವಲ್ಪ ಸಮಯ ಕಾಯಬೇಕು. ಮುಂದೆ ಕಾಲಕೂಡಿ ಬಂದಾಗ ಅವಳನ್ನು ನಾನು ಧರ್ಮಪತ್ನಿಯಾಗಿ ಸ್ವೀಕರಿಸುತ್ತೇನೆ” ಎಂದು ಶಮದಂತನಿಗೆ ಹೇಳಲಾಗಿ, ಆ ಕೂಡಲೇ ಶಮದಂತನು “ತಮ್ಮ ಕುಲಾಚಾರದಲ್ಲಿ ವಾಗ್ದತ್ತ ವಿಧಿ ಎಂದೊಂದು ಕ್ರಮವಿದೆ, ಹಾಗೇ ನಾನು ಅವಳನ್ನು ನಿಮಗೆ ನೀಡಿದ್ದೇನೆ, ಮುಂದೇನೂ ಹೇಳಲಾರೆ, ನಮ್ಮ ಕುಲದಲ್ಲಿ ಘೋಷಿಸುತ್ತೇನೆ; ಸ್ವೀಕರಿಸಿ ನಮ್ಮನ್ನು ಉದ್ಧರಿಸಿರಿ” ಎಂದು ಪ್ರಾರ್ಥಿಸಿ ಅಲ್ಲಿಂದ ಹೊರಟು ಹೋದನು.

ವಸಿಷ್ಠರು ಯಾವುದೇ ಮರು ಉತ್ತರ ಕೊಡದಿದ್ದರೂ ಅದೊಂದು ರೀತಿಯ ಅಂಗೀಕಾರವೆಂದೇ ಲೋಕ ತಿಳಿಯಿತು. ಹಾಗೇ ವಸಿಷ್ಠರು ತಪಸ್ಸಿಗೆ ಇಳಿದು ಧ್ಯಾನಮಗ್ನರಾದರು. ಈ ಬೇಡಕನ್ಯೆ ಶ್ಯಮಂತಳು ವಸಿಷ್ಠರ ಸೇವೆಯಲ್ಲೇ ನಿರತಳಾಗಿದ್ದಳು. ಹಲವು ವರ್ಷಗಳೇ ಕಳೆಯಿತು. ವಯಸ್ಸು ಹೆಚ್ಚಿತು, ಶ್ಯಮಂತಳು ವೃದ್ಧೆಯಾದಳು; ಆದರೆ ವಸಿಷ್ಠರ ಸೇವೆ ಬಿಡಲಿಲ್ಲ.  ಒಂದು ದಿನ ವಸಿಷ್ಠರು ಧ್ಯಾನ ಸಮಾಧಿಯಿಂದ ಎದ್ದು ನೋಡುತ್ತಾರೆ - ತಾನು ಕುಳಿತಿದ್ದ ಆಸನದ ಕೆಳಗೆ ಉದ್ದವಾಗಿ ಮಲಗಿದ್ದ ವೃದ್ಧೆಯನ್ನು!! ಕೂಡಲೇ ಅರಿತರು ಆಕೆ ಶ್ಯಮಂತಳೆಂದು. ಕೂಡಲೇ ತಮ್ಮ ಕಮಂಡಲುವಿನ ನೀರನ್ನು ತೆಗೆದು “ಅರುಂಧತಿ” ಎಂದು ಹೇಳಿ ಪ್ರೋಕ್ಷಿಸಿದರು. ಕೂಡಲೇ ಎಚ್ಚೆತ್ತ ಆಕೆ ನವಯೌವನ ಭರಿತಳಾಗಿ ಎದ್ದು ನಿಂತಳು. ಹಾಗೂ ವಸಿಷ್ಠರಿಗೆ ನಮಸ್ಕರಿಸಿ “ಆರ್ಯಪುತ್ರ ನನ್ನನ್ನೇಕೆ ಯುವತಿಯನ್ನಾಗಿ ಮಾಡಿದೆ? ಈ ಕಾರಣದಿಂದಾಗಿ ನನ್ನಲ್ಲಿ ರಾಗಾದಿಗಳು ಹುಟ್ಟಲಾರದೆ? ತತ್ಕಾರಣವಾಗಿ ನಿಮ್ಮ ಸೇವೆಯಲ್ಲಿ ನ್ಯೂನತೆ ಬರಲಾರದೆ? ನನ್ನನ್ನು ಅನುಗ್ರಹಿಸಿ” ಎಂದು ಬೇಡಿದಳು. ವಸಿಷ್ಠರು ಅವಳನ್ನು ಕೈಹಿಡಿದು ಮೇಲೆತ್ತಿ “ನೀನು ಇನ್ನು ಮುಂದೆ ನನ್ನ ಧರ್ಮಪತ್ನಿ, ಅರುಂಧತಿ” ಎಂಬ ಹೆಸರಿನಿಂದ ಶಾಶ್ವತಳೂ, ಸುಂದರಳೂ, ಸದ್ಗುಣಿಯೂ, ಧರ್ಮಭೀರುವೂ, ಪತಿಸೇವಾಪರಾಯಣಳೂ, ಸುದರ್ಶನಳೂ ಆಗಿರುತ್ತೀಯ” ಎಂದು ಹರಿಸಿದರು. ಅಲ್ಲಿಂದ ಶ್ಯಮಂತಳು ಅರುಂಧತಿಯೆಂದು ಕರೆಸಿಕೊಳ್ಳುತ್ತಾ ವಸಿಷ್ಠರ ಧರ್ಮಪತ್ನಿಯಾಗಿಯೇ ಉಳಿದಳು.

 ಗೃಹಸ್ಥನಲ್ಲ ಎಂಬ ಕಾರಣಕ್ಕೆ ರಾಜಪುರೋಹಿತ ಪಟ್ಟವನ್ನೇ ತ್ಯಾಗ ಮಾಡಿ ಬಂದ ವಸಿಷ್ಠರು ಬೇಡ ಕನ್ಯೆಯನ್ನು ವಿವಾಹವಾಗಿ ಗೃಹಸ್ಥರಾದರು. ಈ ವಿಚಾರವನ್ನು ತಿಳಿದ ದೇವತೆಗಳೆಲ್ಲಾ ಸಂತೋಷಪಟ್ಟರು. ರಾಜಾ ಉತ್ತಮನೂ ನಾನಾ ವಿಧ ಉಡುಗೊರೆ, ಸುವಸ್ತುಗಳು, ಧನ, ಕನಕ, ವಸ್ತ್ರ, ದವಸ, ಧಾನ್ಯಗಳನ್ನು ಹತ್ತುಸಾವಿರ ಬಂಡಿಯಲ್ಲಿ ತುಂಬಿಸಿ ವೃಷಭಾಚಲಕ್ಕೆ ಕಳಿಸಿಕೊಟ್ಟನು. ವಸಿಷ್ಠರ ಸಾಂಸಾರಿಕ ಜೀವನ ಆರಂಭವಾಯ್ತು. ಸಾವಿರ ವರ್ಷಗಳ ಕಾಲ ಇಬ್ಬರೂ ಆನಂದವಾಗಿ ಕಳೆದರು. ಒಂದು ದಿನ ಅರುಂಧತಿಯು ವಸಿಷ್ಠರಲ್ಲಿ “ನಮ್ಮ ದಾಂಪತ್ಯದ ಕುರುಹಾಗಿ ನಮಗೆ ಮಕ್ಕಳು ಬೇಡವೆ? ನನಗೇನೋ ಆಸೆಯಿದೆ. ಆದರೆ ನಿಮಗಿಷ್ಟವಾದರೆ ಮಾತ್ರಾ”ವೆಂದಳು. ಕೂಡಲೇ ವಸಿಷ್ಠರು “ಚಿಂತಿಸಬೇಡ, ನಿನಗೆ ನೂರ ಒಂದು ಸಂತಾನ ಅನುಗ್ರಹಿಸಿದ್ದೇನೆ, ಆದರೆ ಅವರೆಲ್ಲಾ ಮುಂದೆ ವೈವಸ್ವತ ಮನ್ವಂತರದಲ್ಲಿ “ಬ್ರಹ್ಮ ನಿವೇದನೆ” ಯಾಗುತ್ತಾರೆ, ನೀನು ದುಃಖಿಸಬಾರದು” ಎಂದು ಅನುಗ್ರಹಿಸಿದರು. ಹಾಗಾಗಿ ಅರುಂಧತಿಯು ಏಕಕಾಲದಲ್ಲಿ ಶಕ್ತ್ಯಾದಿ 101 ಮಕ್ಕಳನ್ನು ಹಡೆದಳು. ಅವರ ಪಾಲನೆ, ಪೋಷಣೆಗಳಲ್ಲಿ ಆನಂದವಾಗಿ ಕಾಲ ಕಳೆದಳು. ಆ ಮಕ್ಕಳಿಗೆ ವಸಿಷ್ಠರು -

ಶಕ್ತಿ,  
ಶಾಕ್ತ
ಶಂಖ
ಶಕೇಯ
ಶಾಕಲ
ಶಾಕಲ್ಯ
ಶಾಂಡಿಲ್ಯ
ಸುಶಕ್ತ
ಸುಷೇಣ,  
ಸುಧರ್ಮ
ಶಾಕ್ತವರ
ಶಾಕ್ತದೇಶೀ
ಶಾಕ್ತಬಾರಾ
ಶಾಕ್ತವ್ರಣ
ಶಾಕ್ತಮೋದ
ಶಾಕ್ತಪ್ರಮೋದ
ಶಾಕ್ತಾಮೋದ
ಶಾಕ್ತಕ
ಶಾಕ್ತಚಿತ್ತ
ಶಾಕ್ತಷೇಣ,  
ಶಾಕ್ತಂಭರ
ಶಾಕ್ತರಶ್ಮಿ
ಶಾಕ್ತಕಾಂತ
ಶಾಕ್ತಸೌರಭರೆಂಬ ಇಪ್ಪತ್ತನಾಲ್ಕು ಶಾಕ್ತೇಯವೂ
ಹಾಗೇ ಇಪ್ಪತ್ತನಾಲ್ಕು ಯುಕ್ತೇಯವೂ
ಹಾಗೇ ಇಪ್ಪತ್ತನಾಲ್ಕು ಭಕ್ತೇಯವೂ
ಹಾಗೇ ಇಪ್ಪತ್ತನಾಲ್ಕು ಧರ್ಮೇಯವೂ ಆದ ಹೆಸರನ್ನಿಟ್ಟು 
ನಾಲ್ಕು ಮಂದಿಗೆ ಪೌತ್ರ, ಕುತ್ಸ, ಧನು, ಕಲ್ಮಷರೆಂದೂ,  
ಒಬ್ಬನಿಗೆ ಆಂಗಿರನೆಂದೂ 

ನಾಮಕರಣ, ಚೌಲ, ಉಪನಯನಾದಿಗಳನ್ನು ಮಾಡಿಸಿ ವೇದಾಧ್ಯಯನಕ್ಕೆ ಕಳಿಸಿದರು. ಅವರೆಲ್ಲಾ ಪ್ರಸಿದ್ಧರೂ, ಪ್ರಬುದ್ಧರೂ, ಶ್ರೇಷ್ಠರೂ, ತಪಸ್ವಿಗಳೂ ಆಗಿ ಗೃಹಸ್ಥಾಶ್ರಮ ಧರ್ಮದ ಏಳ್ಗೆ ಉಳಿಕೆಗಾಗಿ ನಿತ್ಯ ಶ್ರಮಿಸಲಾರಂಭಿಸಿದರು. ಇವರಲ್ಲಿ ಯುಕ್ತೇಯರೂ ಹಾಗೂ ಭಕ್ತೇಯರೂ ಉತ್ತಮ ಮನ್ವಂತರಕ್ಕೆ ತಮ್ಮ ಈ ಪಾರ್ಥಿವತ್ವವನ್ನು ಬಿಟ್ಟು ದೇವ ಸಾಲೋಕ್ಯವನ್ನು ಸಾಧಿಸಿಕೊಂಡರು. ಧರ್ಮೇಯರೂ ಹಾಗೂ ಶಾಕ್ತೇಯರೂ ಹಾಗೂ ಪೌತ್ರ, ಕುತ್ಸ, ಧನು, ಕಲ್ಮಷರೆಂಬ ಒಟ್ಟು ೫೨ ಮಂದಿ ವಸಿಷ್ಠ ಪುತ್ರರು ಈ ವೈವಸ್ವತ ಮನ್ವಂತರ ಕಾಲದಲ್ಲಿಯೂ ತಮ್ಮ ಕಾರ್ಯಭಾರವನ್ನು ನಡೆಸುತ್ತಿದ್ದಾರೆ.

ಈ ವೈವಸ್ವತ ಮನ್ವಂತರ ಕಾಲದಲ್ಲಿ ವಸಿಷ್ಠರ ಪೌರೋಹಿತ್ಯ ಪ್ರಭುತ್ವವನ್ನು ಸಹಿಸದ ಕೆಲ ಜನರ ಕುಟಿಲತೆಯನ್ನು ಅನುಭವಿಸಲಾಗದೇ ಅರುಂಧತಿಯು ಚಿಂತೆಗೀಡಾಗಲಾಗಿ ವಸಿಷ್ಠರು ಬ್ರಹ್ಮಕುಲವನ್ನೇ ನಿರ್ಬಂಧಿಸಿ ಮಂತ್ರ, ಮಂತ್ರಾನುಷ್ಠಾನ ದೇವತೆಗಳು, ಮಂತ್ರಾಧಿದೇವತೆಗಳು, ಪ್ರಯೋಗ, ಕೀಲಕ, ನ್ಯಾಸ, ಅಸ್ತ್ರ, ಕವಚಗಳನ್ನು ನಿರ್ಬಂಧಿಸುತ್ತಾರೆ. ಆಗ ಅಯೋಮಯ ಸ್ಥಿತಿಗೆ ತಲುಪಿದ ಋಷಿಮುನಿಗಳೂ, ಬ್ರಾಹ್ಮಣರೂ, ಹಾಹಾಕಾರವೆಬ್ಬಿಸುತ್ತಾರೆ. ಲೋಕ ಅಲ್ಲೋಲ-ಕಲ್ಲೋಲವಾಗುತ್ತದೆ. ಬ್ರಹ್ಮಸೃಷ್ಟಿಯೇ ನಿಲ್ಲುತ್ತದೆ. ಜೀವಿಗಳೆಲ್ಲಾ ನಾನಾ ಸಂಕಷ್ಟಕ್ಕೀಡಾಗುತ್ತವೆ. ಆಗ ಸಕಲ ದೇವತೆಗಳೊಡಗೂಡಿ ತ್ರಿಮೂರ್ತಿಗಳೇ ಬಂದು ವಸಿಷ್ಠರನ್ನು ಕಂಡು ಸಮಾಧಾನಿಸುತ್ತಾರೆ. ಹಾಗೂ ಅರುಂಧತಿಯನ್ನು ಹರಸಿ “ಮುಂದೆ ಯಾರೇ ಗೃಹಸ್ಥಾಶ್ರಮ ಸ್ವೀಕರಿಸಿದರೂ ನಿನ್ನ ಅನುಮತಿ ಪಡೆಯಲೇ ಬೇಕೆಂದೂ, ಯಾವುದೇ ಮಂತ್ರ ಬಳಸಲೂ ವಸಿಷ್ಠಾದಿ ಋಷಿಗಳ ಅನುಮೋದನೆ ಬೇಕೆಂದೂ ಅನುಗ್ರಹಿಸಿ” ಸಮಸ್ಯೆಗೆ ಪರಿಹಾರ ನೀಡಿ ಲೋಕ ಸುಸ್ಥಿತಿಗೆ ಕಾರಣರಾಗುತ್ತಾರೆ. ಇಂತಹಾ ಶ್ರೇಷ್ಠ,  ಸಜ್ಜನ, ಸದ್ಗುಣಿಯಾದ ವಸಿಷ್ಠರ ತಪೋಶಕ್ತಿಯ ಬಗ್ಗೆ ಒಂದು ವಿಚಾರ ಬರೆದು ಈ ಲೇಖನ ಮುಗಿಸುತ್ತೇನೆ.

ಒಂದು ಕಾಲದಲ್ಲಿ ಸೂರ್ಯವಂಶದ ಕುಶಿಕನ ಮಗನಾದ ವಿಶ್ವರಥನು ಅತೀ ಪರಾಕ್ರಮದಿಂದ ಮಹಾಗರ್ವಿತನಾಗಿದ್ದನು. ಆತನು ಮಹರ್ಷಿ ಜಮದಗ್ನಿಯ ತಪಃಪ್ರಭಾವದಿಂದ ಜನಿಸಿದವನಾದ್ದರಿಂದ ಅಜೇಯನಾಗಿದ್ದನು. ಹಾಗೆಯೇ ಅಹಂಕಾರಿಯಾದ ಆತ ಕ್ಷಾತ್ರಬಲವೇ ಪ್ರಧಾನವೆಂದೂ, ಲೋಕವು ಕ್ಷಾತ್ರವನ್ನು ಮಾತ್ರ ಗೌರವಿಸಬೇಕೆಂದೂ, ಬ್ರಹ್ಮಬಲ, ದೇವಬಲ, ಕರ್ಮಬಲ, ಕಾರಣಬಲ, ಕಾಲಬಲಗಳು ನಿಮಿತ್ತ ಮಾತ್ರವೆಂದೂ ಸಾರಿದ್ದನು. ಸದಾ ದಿಗ್ವಿಜಯಶೀಲನಾದ ಆತನು ಒಂದು ಬಾರಿ ದಿಗ್ವಿಜಯ ಮಾಡುತ್ತಾ ಈ ವೃಷಭಾಚಲ ಪ್ರದೇಶಕ್ಕೆ ಬರುತ್ತಾನೆ. ವಸಿಷ್ಠರು ಅವನನ್ನು ಕಂಡು ಗೌರವಿಸಿ ಸತ್ಕರಿಸುತ್ತಾರೆ. ಹಾಗೇ ಅವನ ಸೇನೆ ಸಹಿತ ಎಲ್ಲರಿಗೂ ಮೃಷ್ಟಾನ್ನ ಭೋಜನ ಉಣಬಡಿಸುತ್ತಾರೆ; ಅವರಲ್ಲಿರುವ ನಂದಿನಿ ಎಂಬ ಧೇನುವಿನ ಸಹಕಾರದಿಂದ. ಅದನ್ನರಿತ ವಿಶ್ವರಥನು ಆ ಧೇನುವನ್ನು ತನಗೆ ಕೊಡೆಂದು ಕೇಳುತ್ತಾನೆ. ಆಗ ವಸಿಷ್ಠರು “ಅದು ಸಹಿತ ಈ ಪ್ರಕೃತಿಯಲ್ಲಿರುವ ಎಲ್ಲವೂ ಸ್ವತಂತ್ರ. ನಾನು ಕೊಡಲಾರೆ, ಅದು ಇಷ್ಟಪಟ್ಟರೆ ಕೊಂಡುಹೋಗು” ಎನ್ನುತ್ತಾರೆ.

  

ಇಲ್ಲಿ ಗಮನಿಸಿ ಒಂದು ಹಸುವಿಗೂ ಅದಕ್ಕೆ ಅದರದ್ದೇ ಆದ ಸ್ವಾತಂತ್ರ್ಯವನ್ನು ಗೌರವಿಸಿದ್ದಾರೆ ವಸಿಷ್ಠರು. ಆದರೆ ವಿಶ್ವರಥನು ಪ್ರಪಂಚದ ಎಲ್ಲವುದರ ಮೇಲೂ ತನ್ನಧಿಕಾರವೆಂಬ ಅಹಂಕಾರದಿಂದ ಆ ಧೇನುವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಆದರೆ ಧೇನುವು ತನ್ನ ರೋಮ ರೋಮಗಳಿಂದ ಸೇನೆಯನ್ನು ಸೃಷ್ಟಿಸಿ ಅವನ ಸೇನೆ, ರಥ, ಪದಾತಿ, ಆನೆ, ಕುದುರೆಗಳನ್ನು ನಾಶ ಮಾಡಿ ವಿಶ್ವರಥನನ್ನು ನಿರಾಯುಧನನ್ನಾಗಿ ಮಾಡಿ ಓಡಿಸಿಬಿಡುತ್ತದೆ. ಕೂಡಲೇ ಕುಪಿತನಾದ ರಾಜನು ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಎಲ್ಲಾ ಮಂತ್ರಾಸ್ತ್ರಸಹಿತವಾದ ಆಯುಧಗಳನ್ನು ಪಡೆದು ಬಂದು ವಸಿಷ್ಠರ ಮೇಲೆ ಯುದ್ಧ ಸಾರುತ್ತಾನೆ. ಅದನ್ನರಿತ ವಸಿಷ್ಠರು ತಮ್ಮ ದಂಡವನ್ನು ಮುಂದಿಟ್ಟು ಇದನ್ನು ಜಯಿಸಿ ನೀ ಮುಂದೆ ಬಂದರೆ ಆಗ ನಾನು ಯುದ್ಧಕ್ಕೆ ಬರುತ್ತೇನೆ ಎಂದು ದಂಡವನ್ನು ಆಶ್ರಮದ ಗಡಿಯ ಹೊರಭಾಗದಲ್ಲಿಟ್ಟು ಬಂದು ತಪಸ್ಸಿಗೆ ಕುಳಿತಕೊಳ್ಳುತ್ತಾರೆ.  

ವಸಿಷ್ಠರ ದಂಡವನ್ನು ದಾಟಿ ಆಶ್ರಮ ಪ್ರವೇಶಿಸಲು ವಿಶ್ವರಥನಿಂದ ಆಗಲೇ ಇಲ್ಲ. ತನ್ನೆಲ್ಲಾ ಅಸ್ತ್ರ, ಶಸ್ತ್ರಗಳನ್ನೂ ಪ್ರಯೋಗಿಸಿದ, ದಂಡದಲ್ಲಿ ಲೀನವಾದವು, ದಂಡವೇ ನುಂಗಿಬಿಟ್ಟಿತು. ಶಿವನಿಂದ ಅನುಗ್ರಹೀತವಾದ ಮಂತ್ರಾಸ್ತ್ರಗಳು ಹಾಗೂ ಪಾಶುಪತ, ಶೂಲ, ಶಾಂರ್ಘ್ಯ, ಪರಶು, ದಂಡ, ಮುದ್ಗರ, ಕಪಾಲ, ಮೃಗ, ವಡಬಾ, ಕ್ರೋಧಗಳನ್ನೂ ದಂಡವು ನುಂಗಿತು. ಬ್ರಹ್ಮನಿಂದ ಅನುಗ್ರಹೀತ ವಾದ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ, ಅದನ್ನೂ ದಂಡ ನುಂಗಿತು. ವಿಶ್ವರಥ ಗಲಿಬಿಲಿಗೊಂಡ. ಒಬ್ಬ ತಪಸ್ವಿಯ ದಂಡ ಮಾತ್ರದಿಂದಲೇ ಎಲ್ಲಾ ಅಸ್ತ್ರಗಳೂ ನಾಶವಾಯ್ತು ಎಂದರೆ ಇನ್ನು ಆ ತಪಸ್ವಿಯ ಶಕ್ತಿ ಎಷ್ಟಿರಬಹುದು? ಏನೇ ಆಗಲಿ, ಕ್ಷಾತ್ರ ತೇಜಸ್ಸಿನಿಂದ ಇವನನ್ನು ಜಯಿಸಲಾರೆ, ಬ್ರಹ್ಮತೇಜಸ್ಸಿನ ತಪಃ ಪ್ರಭಾವದಿಂದ ಇವನನ್ನು ಗೆದ್ದು ಇವನಿಂದಲೇ ಬ್ರಹ್ಮರ್ಷಿಯೆನ್ನಿಸಿ ಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿ ರಾಜೋಚಿತ ಉಡಿಗೆ-ತೊಡಿಗೆಗಳನ್ನು ಕಳಚಿ ನಾರುಮುಡಿಯನ್ನು ತೊಟ್ಟು ಹೇಮಾಚಲದತ್ತ ತಪಸ್ಸಿಗಾಗಿ ತೆರಳಿದ. ವಸಿಷ್ಠರ ಶಕ್ತಿ ಅರ್ಥವಾಯ್ತೆ? ಇಂತಹಾ ಇನ್ನೂ ಸಾವಿರಾರು ಉದಾಹರಣೆಗಳು ವಸಿಷ್ಠರ ಬಗ್ಗೆ ಇದೆ. ಆದರೆ ಇಷ್ಟು ಸಾಕೆಂದು ಬರೆದಿದ್ದೇನೆ.

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು

No comments:

Post a comment