Wednesday, 1 March 2017

ಪಾಣಾಜೆ ಪಂಡಿತರ ಆಯುರ್ವೇದ ಚಿಕಿತ್ಸಾ ಮಾಹಿತಿ ಪ್ರಶ್ನಾವಳಿ
ವೈದ್ಯ ಭಟ್ಟರೆಂದೇ ಪ್ರಖ್ಯಾತಿಗಳಿಸಿದ್ದ ಜನಪ್ರಿಯ ಆಯುರ್ವೇದ ಪಂಡಿತರಾಗಿದ್ದ ಪಾಣಾಜೆಯ ವೈದ್ಯ ಶಂಕರನಾರಾಯಣ ಭಟ್ಟರ ಹಿರಿಯ ಪುತ್ರರೂ, ಖ್ಯಾತ ಆಯುರ್ವೇದ ಚಿಕಿತ್ಸಕರೂ ಆಗಿದ್ದ ಪಾಣಾಜೆ ಶಂಕರನಾರಾಯಣ ಭಟ್ಟರು (೧೯೦೯-೧೯೭೧) ವೈದ್ಯ ವೃತ್ತಿಯನ್ನು ನಿಃಸ್ವಾರ್ಥ ಸೇವಾ ವಿಧಾನವಾಗಿಯೇ ಬಳಸಿಕೊಂಡು ಕೀರ್ತಿಶಾಲಿಗಳಾದರು. ವಿವಿಧ ಪತ್ರಿಕೆಗಳ ಮೂಲಕ ಮೂಲಿಕಾ ವೈದ್ಯದ ಕುರಿತು ನೂರಾರು ಲೇಖನಗಳನ್ನು ಪ್ರಕಟಿಸಿದ ಈ ಸಾಹಸಿ ಸಾವಿರಾರು ಮಂದಿಗೆ ಆರೋಗ್ಯದಾನ ಮಾಡಿದ್ದಾರೆ. ಆಧುನಿಕ ವೈದ್ಯಶಾಸ್ತ್ರ ಪರಾಭವಗೊಂಡ ಅನೇಕ ರೋಗಗಳನ್ನಿವರು ಗುಣಪಡಿಸಿದ್ದಾಗಿದೆ.

ಇಲ್ಲಿ ಅವರ ಸಂಗ್ರಹದಲ್ಲಿ ಒಳಗೊಂಡಿರುವ "ಆರೋಗ್ಯದಾನ ಕೈಪಿಡಿ" ಯಲ್ಲಿ ಮಾಹಿತಿ ಸಂಗ್ರಹಣ ಪ್ರಶ್ನಾವಳಿಯನ್ನು ಆಯುರ್ವೇದದ್ ಪ್ರಕಾಶನ, ಪಾಣಾಜೆ, ಪುತ್ತೂರು, ದ.ಕ., ಮತ್ತು ನಾಗರಿಕ ಸೇವಾ ಟ್ರಸ್ಟ್(ರಿ.), ಗುರುವಾಯನಕೆರೆ ಇವರ ಪ್ರಕಾಶನದಲ್ಲಿ ಪ್ರಕಟಿಸಿದ "ಕಷಾಯ ಕಷಾಯ ಕಷಾಯ" ಎಂಬ ಪುಸ್ತಕದಿಂದ ಆಯ್ದುಕೊಂಡು ಆಯುರ್ವೇದ ಅಭ್ಯಸಿಸುವ ವೈದ್ಯರಿಗೆ ಮಾರ್ಗಸೂಚಿ ಹಾಗೂ ಆಯುರ್ವೇದವನ್ನು ಖಂಡಿಸುವ ವಿತಂಡವಾದಿಗಳಿಗೆ ಸ್ಪಷ್ಟ ಉತ್ತರ ಎಂಬ ರೀತಿಯಲ್ಲಿ ಈ ಲೇಖನವಿರುತ್ತದೆ.

|| ಪಂಡಿತ ಶಂಕರನಾರಾಯಣ ಭಟ್ಟರ ಚಿಕಿತ್ಸಾ ಮಾಹಿತಿ ಪತ್ರ ವಿಧಾನ ||
(ಮಾಹಿತಿ ಸಂಗ್ರಹಣ ಪ್ರಶ್ನಾವಳಿ)
ಮಾಹಿತಿ ವಿಧಾನ ೧
೧. ಹೆಸರು; ಹಿರಿಯರ ಹೆಸರು; ಪೂರ್ಣ ವಿಳಾಸ

೨. ಪ್ರಾಯ. ಗಂಡೋ, ಹೆಣ್ಣೋ?; ವೃತ್ತಿ

೩. ವಿವಾಹ ಆಗಿದೆಯೋ? ಎಷ್ಟನೇ ಪ್ರಾಯದಲ್ಲಿ?

೪. ದೇಹಸ್ಥಿತಿ:- ಕ್ಷೀಣವೋ? ದಪ್ಪವೋ? ನಿತ್ರಾಣವಾಗಿದೆಯೋ?

೫. ಜೀರ್ಣಶಕ್ತಿ ಹೇಗಿದೆ? ದಿನ ಬಳಕೆಯ ಆಹಾರ ಯಾವುವು?

೬. ಮಲಶೋಧನೆ:- ದಿನಾ ಎಷ್ಟು ಸರ್ತಿ? ರಾತ್ರಿ ಶೋಧನೆ ಆಗುತ್ತದೋ? ಮಲಬದ್ಧತೆ ಇದೆಯೋ? ಎಷ್ಟು ದಿನಕ್ಕೆ ಶೋಧನೆ? ಅಜೀರ್ಣವಾಗಿ, ಬಿಳಿಯಾಗಿ, ಒಣಗಿ, ಹಿಕ್ಕೆಗಳಾಗಿ, ಕಫ, ರಕ್ತ ಮಿಶ್ರವಾಗಿ ಶೋಧನೆಯಾಗುವುದೋ? ಮಲವು ನೀರಲ್ಲಿ ಮುಳುಗುತ್ತದೋ?

೭. ಮೂತ್ರ:- ಹಗಲು ಎಷ್ಟು ಸರ್ತಿ? ರಾತ್ರಿ ಎಷ್ಟು ಸರ್ತಿ? ಪದೇಪದೇ ಹೋಗುವುದೋ? ಹೆಚ್ಚಾಗಿ ಅಥವಾ ಸ್ವಲ್ಪ ಸ್ವಲ್ಪವಾಗಿ ಹೋಗುವುದೋ? ಮೂತ್ರದ ಬಣ್ಣ ಹೇಗಿದೆ? ಮೂತ್ರದೊಂದಿಗೆ ಏನಾದರೂ ಸ್ರಾವವಿದೆಯೋ? ವಾಸನೆ ಇದೆಯೋ? ಮೂತ್ರ ದಪ್ಪವಾಗಿರುತ್ತದೋ? ಮೂತ್ರಕ್ಕೆ ಇರುವೆ ಬರುತ್ತದೋ? "ಮೂತ್ರ ಪರೀಕ್ಷಾ ವಿಧಾನ" ದಂತೆ ಸ್ವತಃ ಪರೀಕ್ಷಿಸಿ ತಿಳಿಯಿರಿ.

೮. ನಿದ್ದೆ:- ಹೆಚ್ಚೋ? ಕಡಿಮೆಯೋ? ಸ್ವಪ್ನ ಏನಿದೆ? ಹಗಲು ನಿದ್ದೆ ಬರುತ್ತದೋ? ಹಗಲು ನಿದ್ದೆಯ ಅಭ್ಯಾಸವಿದೆಯೋ?

೯. ಕಣ್ಣು:- ಉರಿ, ಕೆಂಪು, ನೀರು ಸುರಿಯುವುದು, ತುರಿಕೆ, ಪಿಚ್ಚುಗಟ್ಟುವುದು, ಮಂದ ಇತ್ಯಾದಿ ಯಾವುದಿದೆ?

    ಕಿವಿ:- ಬಂದಾಗುವುದು, ಕಿವುಡು, ಸೋರುವುದು, ಸಿಡಿತ, ಶಬ್ದವಾಗುವುದು ಇತ್ಯಾದಿ ಇವೆಯೋ?

    ಮೂಗು:- ಸಿಂಬಳ, ಸೀನು ಬರುವುದು, ರಕ್ತ ಬೀಳುವುದು, ನೀರು ಸುರಿಯುವುದು, ಶ್ವಾಸ ಬಂದಾಗುವುದು ಇತ್ಯಾದಿ

   ಯಾವುದಾದರೂ ಇದೆಯೋ?

    ಹಲ್ಲು:- ಸಿಡಿತ, ನೋವು, ತೂತು, ಬುಡದಲ್ಲಿ ಹುಣ್ಣು, ಬಾವು, ಕೀವು, ರಕ್ತ ಸುರಿಯುವುದು, ಎಲ್ಲಾ ಹಲ್ಲುಗಳು ಅಲುಗಾಡುವುದು,

   ಜಾರುವುದು, ವಸಡು (ನಿದಿ)ಕರಗುವುದು ಇತ್ಯಾದಿ ಇವೆಯೋ?

    ಬಾಯಿ:- ಹುಣ್ಣು, ಅರುಚಿ, ಚಪ್ಪೆನೀರು, ಸಿಹಿ, ಕಹಿ, ಉಪ್ಪು, ಹುಳಿ ಇತ್ಯಾದಿ ರುಚಿ; ಕಫ, ನಾಲಿಗೆ ಮುಳ್ಳು, ಸೀಳು, ಅಗ್ರ, ಉರಿ,  

   ಇವುಗಳಲ್ಲಿ ಯಾವುದಿದೆ?

೧೦. ತಲೆ:- ಕೂದಲುದುರುವುದು, ಬಾಲ ನರೆ, ಹೊಟ್ಟುದುರುವುದು, ತುರಿಕೆ, ವ್ರಣ ಇತ್ಯಾದಿ ಯಾ ನೋವು, ಸಿಡಿತ, ಒರ್ಕೆನ್ನಿ ಸಿಡಿತ, ಬೆಂಕಿ ಬರುವುದು ಇ. ವಿವರ.

೧೧. ಮೈಮೇಲೆ ಆಗಾಗ ಪಿತ್ತಗಂದೆ ಏಳುವುದು, ತುರಿಕೆ, ದಡಿಕೆ, ದದ್ದು, ಗಜಕರ್ಣ, ಹುಳಕಡ್ಡಿ, ಕರಿಸಿಬ್ಬ, ಪದೇಪದೇ ಕುರಗಳಾಗುವಿಕೆ, ದಪ್ಪ ಕಪ್ಪು ಕಲೆಗಳು, ಗ್ರಂಥಿಗಳು, ಮುದ್ದಣ, ಬಂಗು ಇತ್ಯಾದಿ ಇವೆಯೋ?

೧೨. ಹೊಟ್ಟೆ:- (ನಾಭಿಯಿಂದ ಮೇಲೆ) ಉಬ್ಬರ, ಉರಿ, ದಪ್ಪ, ಗಟ್ಟಿ, ಶೂಲೆ, ಗುಲ್ಮ, ವಾಯು ವಿಕಾರ, ಬೆರಳಿನಿಂದ ಒತ್ತಿದಾಗ ನೋವು, ಏನಿದೆ?

೧೩. ಕಿಬ್ಬೊಟ್ಟೆ:- (ನಾಭಿಯಿಂದ ಕೆಳಗೆ) ಶೂಲೆ, ದಪ್ಪ, ಗುಲ್ಮ, ಉರಿ, ಗಟ್ಟಿ, ಬೆರಳಿನಿಂದ ಒತ್ತುವಾಗ ನೋವು ಇದೆಯೋ? ಯಾವ ಭಾಗ? ಎಡಬಲ ಪಾರ್ಶ್ವಗಳಲ್ಲಿ ಏನಿದೆ?

೧೪. ಕೈಕಾಲು:- ಊದು, ಉರಿ, ಸೀಳು, ಬಾವು, ದಪ್ಪವಾಗಿ, ವಾತದ ಬೇನೆ, ಗಂಟುಗಳಲ್ಲಿ ಬಾವುನೋವು, ಪಾದದಲ್ಲಿ ಆಣಿ, ತೂತು ಯಾವುದಿದೆ?

೧೫. ಒಳಜ್ವರ, ತಲೆಸಿಡಿತ, ತಿರುಕ, ಬವಳಿ, ಮೂರ್ಛೆ, ಪಿತ್ತವಿಕಾರ, ಮೂಲವ್ಯಾಧಿ, ಗುದಭ್ರಂಶ, ಗಳರೋಗ, ಆಂತ್ರವೃದ್ಧಿ, ಅಂಡವೃದ್ಧಿ, ಬಹಳವಾಗಿ ತೇಗು, ಉಬ್ಬಸ, ಕೆಮ್ಮು ಇತ್ಯಾದಿ ಇವೆಯೋ?

೧೬. ಯಾವುದಾದರೂ ಅಂಗ ಊನವಿದೆಯೋ?

೧೭. ತೆಗೆಲೆಬೇನೆ; ಪಾರ್ಶ್ವಶೂಲೆ; ಸೊಂಟಸಿಡಿತ; ಬೆನ್ನೆಲುಬು ನೋವು; ಇತ್ಯಾದಿ ಯಾವುದಿದೆ?

೧೮. ಕಾಮವಿಚಾರ:- ಸ್ವರತಿ; ಸ್ವಪ್ನಸ್ಖಲನ; ಧಾತುಸ್ರಾವ; ಶೀಘ್ರ ಸ್ಖಲನ ಇತ್ಯಾದಿ; ದುಶ್ಚಟಗಳು ಮೊದಲು ಇತ್ತೋ? ಈಗ ಇದೆಯೋ?

೧೯. ವ್ಯಭಿಚಾರ:- ಗುಹ್ಯರೋಗ; ಅಕ್ರಮಸಂಗ ಇತ್ಯಾದಿ ವಿವರ.

೨೦. ಈಗ ಇರುವ ಕಾಯಿಲೆ ಆರಂಭವಾಗಿ ಎಷ್ಟು ಸಮಯ? ಮಾಡಿಕೊಂಡ ಚಿಕಿತ್ಸಾ ವಿಧಾನ? ಫಲಿತಾಂಶ; ಆರಂಭ ಲಕ್ಷಣ; ಈಗಿರುವ ಸ್ಥಿತಿ; ಕಾಯಿಲೆಯ ಕಾರಣ? ಇತ್ಯಾದಿ ತಿಳಿಸಿರಿ.

೨೧. ಈ ವಿಧ ಕಾಯಿಲೆ ನಿಮ್ಮ ಹಿರಿಯರಿಗೆ ಮತ್ತು ಕಿರಿಯರಿಗೆ ಬಂದಿದೆಯೋ?

೨೨. ಬೇರೇನಾದರೂ ಕಾಯಿಲೆಯಾಗಿದೆಯೋ?

೨೩. ಮಕ್ಕಳಿದ್ದಾರೋ? ಅವರ ಆರೋಗ್ಯ ಹೇಗಿದೆ?

೨೪. ಅನುಭವದಂತೆ ಅನ್ಯ ಮಾಹಿತಿ.ಮೂತ್ರ ಪರೀಕ್ಷಾ ವಿಧಾನ
ಬೆಳಿಗ್ಗೆ ಎದ್ದೊಡನೆ ಸ್ವಚ್ಛ ಬಿಳಿ ಗಾಜಿನ ಲೋಟದಲ್ಲಿ ಮೂತ್ರದ ಮಧ್ಯಭಾಗವನ್ನು ಹಿಡಿದು ಇರಿಸಿ ಬಿಸಿಲು ಬಂದಮೇಲೆ ಪ್ರಕಾಶದ ಎದುರಾಗಿ ಇಟ್ಟು ಸೂಕ್ಷ್ಮ ಪರಿಶೀಲಿಸುವುದು. ಅನಂತರ ಇವುಗಳನ್ನು ತಿಳಿಯಿರಿ. ಮೇಲೆ ಎಣ್ಣೆಪಸೆಯಂತೆ ತೇಲುತ್ತದೋ? ಮಧ್ಯೆ ಮೋಡದಂತೆ, ನೂಲಿನಂತೆ, ಹೊಗೆಯಂತೆ, ಬಲೆಯಂತೆ, ಹತ್ತಿಯಂತೆ ಏನಾದರೂ ವಸ್ತು ಕಾಣುತ್ತದೋ?

          ಅಡಿಯಲ್ಲಿ ಹಿಟ್ಟಿನಂತೆ, ಲೋಳೆಯಂತೆ, ಬೂದಿಯಂತೆ, ಸಕ್ಕರೆಯಂತೆ, ಮಜ್ಜಿಗೆಯಂತೆ ತಳ ನಿಂತಿರುವುದೋ? ಬಣ್ಣ:- ಹಳದಿ, ಕೆಂಪು? ಎಳ್ಳೆಣ್ಣೆಯಂತೆ ದಪ್ಪ ಕಾಣುತ್ತದೋ? ನೋಡಿದ ನಂತರ ಬಿಸಿಲಿನಲ್ಲಿ ಒಂದು ಜಾವ ಇರಿಸಿ ತೆಗೆದು, ಪುನಃ ಪರೀಕ್ಷಿಸಿ ಏನು ಬದಲಾವಣೆಯಾಗಿದೆ ಎಂದು ತಿಳಿದು ಬರೆದಿಟ್ಟುಕೊಂಡು, ತಕ್ಕ ಔಷಧ ಸೇವನಾ ನಂತರ ಪುನಃ ಮೊದಲಿನಂತೆ ಪರೀಕ್ಷಿಸಿ ಗುಣವಾದ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. "ಮಾಹಿತಿ ಪತ್ರ" ದಲ್ಲಿಯೂ ತಿಳಿಸಿರಬೇಕು.ಮಾಹಿತಿ ಪತ್ರ ವಿಧಾನ ೨

(ವಿ.ಸೂ: ಸ್ತ್ರೀಯರು ಮಾಹಿತಿ ವಿಧಾನ ೧ನ್ನು ಕ್ರಮವಾಗಿ ಉತ್ತರಿಸಿ ಇದನ್ನೂ ಪ್ರತ್ಯೇಕವಾಗಿ ಉತ್ತರಿಸಬೇಕು)

೧. ಪ್ರಥಮ ಋತುಮತಿಯಾದುದು ಎಷ್ಟನೇ ಪ್ರಾಯದಲ್ಲಿ? ಈಗ ಮಾಸಿಕ ಸ್ನಾನ ಎಷ್ಟು ದಿನಗಳಿಗೊಮ್ಮೆ ಆಗುವುದು?

೨. ಆರ್ತವ ಸ್ರಾವ ಎಷ್ಟು ದಿನಗಳವರೆಗೆ ಇರುತ್ತದೆ?

೩. ಸ್ರಾವದ ಬಣ್ಣ ಯಾವುದಿದೆ? ಕೆಂಪು, ಹಳದಿ, ಬಿಳಿ, ಕಪ್ಪು, ಕೆಂಪುಕಪ್ಪಾಗಿ, ನೀಲವಾಗಿ, ಹಸುರಾಗಿ, ಕಲಗಚ್ಚಿನಂತೆ, ಮಿಶ್ರವಾಗಿ ಹೇಗಿರುತ್ತದೆ?

೪. ಸ್ರಾವವು ತೆಳ್ಳಗೆ, ದಪ್ಪ, ಜಿಗುಟಾಗಿ (ಅಂಟು), ಲೋಳೆ ಸ್ವಭಾವ, ನೀಳವಾಗಿ, ನೊರೆಯೊಡನೆ, ಮಾಂಸದ ಗಟ್ಟಿಗಳಂತೆ (ಇದು ನೀರಲ್ಲಿ ಹಾಕಿದಾಗ ಬಿಳಿಯಾಗುತ್ತದೋ?) ಹುಣಸೆ ಬೀಜದಂತೆ, ದುರ್ವಾಸನೆ ಯಾವುದಾದರೂ ಇದೆಯೋ?

೫. ಅತಿಯಾಗಿ, ಅಲ್ಪವಾಗಿ, ಅಲ್ಪಾಲ್ಪವಾಗಿ, ಪದೇ ಪದೇ, ತಿಣಿಕಿ, ಕಷ್ಟದಲ್ಲಿ, ಒಮ್ಮೆಗೇ ಸುರುವಿದಂತೆ, ಬಿಸಿಯಾಗಿ, ಶೀತವಾಗಿ, ಉರಿಯಾಗಿ, ಹುಂಕಾರ ಶಬ್ದದೊಡನೆ, ಹೊಟ್ಟೆ ನೋವಾಗಿ ಆಗುವುದೋ?

೬. ಜನನೇಂದ್ರಿಯ:- ಬಾವು, ಊದು, ಶೂಲೆ, ನೋವು, ಇರುವೆ ಹರೆದಂತೆ, ತುರಿಕೆ, ಸ್ತಬ್ಧವಾಗಿ, ಚುಚ್ಚಿದಂತೆ, ಸೆಳೆತ, ಸಿಡಿತ, ಜಾರಿದಂತೆ, ಗಾಳಿ ಹೊರಟಂತೆ, ಅಂಡಾಕಾರವಾಗಿ ಬಾವು, ವ್ರಣ ಇತ್ಯಾದಿ ಇವೆಯೋ?

೭. ಸೊಂಟ, ತೊಡೆ, ಮೊಣಕಾಲು ಮಣಿಗಂಟುವರೆಗೆ ಸೆಳೆತ, ಸಿಡಿತ, ಎಳೆದಂತೆ ನೋವು ಇದೆಯೋ? ಮೀನೋಡುವುದು ಇದೆಯೋ? ಯಾವ ಕಾಲು?

೮. ಶೂಲೆಯಾಗಿ ಸ್ರಾವ; ಸ್ರಾವವಾಗಿ ಶೂಲೆ; ಒಂದು, ಎರಡು, ಮೂರು ದಿನಗಳ ಶೂಲೆ; ಮುಟ್ಟಾಗುವ ಮೊದಲು, ಮುಟ್ಟಾದ ನಂತರ, ಸ್ನಾನದ ನಂತರ ಶೂಲೆ ಇತ್ಯಾದಿ ಯಾವ ರೀತಿಯ ಶೂಲೆಯಿದೆ?

೯. ಮುಟ್ಟಿನ ಸರತಿಯಲ್ಲಿ ಉಬ್ಬಸ, ಕೆಮ್ಮು, ಮೊಲೆಯಲ್ಲಿ ಹಾಲು ತುಂಬಿದಂತಾಗುವುದು, ಮೊಲೆ ನೋವು, ಕಟಶೂಲೆ ಯಾವುದಾದರೂ ಇದೆಯೋ?

೧೦. ಸ್ನಾನದ ನಂತರ ಸ್ರಾವ, ಶೂಲೆ, ಆರನೇ ದಿನ ಜಾಸ್ತಿ ಸ್ರಾವ ಇದೆಯೋ? ಸ್ರಾವ ತಗಲಿದ ಬಟ್ಟೆಯಲ್ಲಿ ಕಲೆ ನಿಲ್ಲುತ್ತದೋ? ಹಳದಿ, ಕಪ್ಪು, ನೀಲ, ರಕ್ತದ ಕಲೆಯಂತೆ, ಯಾವುದು?

೧೧. ಬಿಳಿದು ಸ್ರಾವವಾಗುವುದು ಇದೆಯೋ? ಋತುವಾಗುವ ಮೊದಲೇ ಬಿಳಿದು ಸ್ರಾವ ಆರಂಭವಾಗಿತ್ತೋ?

೧೨. ಹಾಲಿನಂತೆ, ಲೋಳೆಯಂತೆ, ಹಿಟ್ಟಿನಂತೆ, ಸಿಂಬಳದಂತೆ, ಗಂಜಿ ತಿಳಿಯಂತೆ, ಕೀವಿನಂತೆ, ಯಾವ ರೀತಿಯಲ್ಲಿ ಆಗುವುದು?

೧೩. ಸ್ರಾವವಾಗುವ ಮೊದಲು ತಿಳಿಯುತ್ತದೋ? ದುರ್ವಾಸನೆ ಇರುತ್ತದೋ?

೧೪. ಮೈಬಿಸಿಯಾಗಿ ಸ್ರಾವವಾಗುತ್ತದೋ? ಸ್ರಾವದ ನಂತರ ಬಿಸಿ ಆಗುವುದೋ? ತಿಳಿಯದೆ ಸ್ರಾವವಾಗುವುದೋ? ನಿಶ್ಚಿತ ದಿನಗಳಲ್ಲಿ ಸ್ರಾವವಾಗುವುದು ಇದೆಯೋ? ಎಷ್ಟನೇ ದಿನ?

೧೫. ಬೆಳಿಗ್ಗೆ ಏಳುವಾಗ ಕಣ್ಣಿನ ಕೆಳಬದಿ ದಪ್ಪವಾಗಿ, ಕಾಲಿನಲ್ಲಿ ಊದಿದಂತೆ ಇದ್ದು ಅನಂತರ ಮಾಯುವುದೋ?

೧೬. ಮುಟ್ಟಾಗಿದ್ದಾಗ ಮಲ, ಮೂತ್ರ, ಸ್ರಾವಗಳಿಗೆ ತಡೆಯಾಗುವುದೋ? ಕೈಕಾಲು, ಕಿಬ್ಬೊಟ್ಟೆ ಸ್ತಬ್ಧವಾಗಿ, ತಣ್ಣಗೆ ಆಗುವುದೋ?

೧೭. ಕಿಬ್ಬೊಟ್ಟೆ ದಪ್ಪ, ಸ್ತಬ್ಧ, ಕಚ್ಚಿದಂತೆ ನೋವು, ಸುರಿದಂತೆ, ಭಾರವಾದಂತೆ ಇರುತ್ತದೋ?

೧೮. ಮುಟ್ಟಾಗದೆ ಗರ್ಭಧಾರಣೆ ಆಗಿದೆಯೋ?

೧೯. ಗರ್ಭಧಾರಣೆಯಾಗಿ ಏಳನೆ ದಿನ ವಾ ಮೂರು ತಿಂಗಳೊಳಗೆ ಗರ್ಭಸ್ರಾವ, ಆ ಮೇಲೆ ಗರ್ಭಪಾತ, ಮೃತ ಪ್ರಸವ ಆಗಿದೆಯೋ? ಗರ್ಭಾಶಯಭ್ರಂಶ ಸ್ಥಾನಚ್ಯುತ ಆಗಿದೆಯೋ?

೨೦. ಈಗ ಗರ್ಭಿಣೀಯೋ? ಬಾಣಂತಿಯೋ?

೨೧. ಬಾಣಂತಿ ಕಾಯಿಲೆ ಏನಾದರೂ ಇದೆಯೋ? ಆಗಿತ್ತೋ?

೨೨. ಗ್ರಾಮ್ಯಧರ್ಮದಲ್ಲಿ ಕೊರತೆ ಏನಿದೆ? ರತಿಕಾಲದಲ್ಲಿ ನೋವು, ಅಸಹ್ಯವಾಗುವುದು, ಅನಾಸಕ್ತಿ, ಅತ್ಯಾಸಕ್ತಿ, ಅತೃಪ್ತಿ, ಅಪೇಕ್ಷೆ ಇಲ್ಲದಿರುವುದು ಇತ್ಯಾದಿ ಯಾವುದಿದೆ?

೨೩. ಸ್ವಾನುಭವದಲ್ಲಿದ್ದ ಬೇರೆ ಮಾಹಿತಿ. (ಸಂದಿಗ್ಧವಾದ ವಿಚಾರಗಳು, ಮೇಲೆ ಕೇಳದಿರುವ ವಿಚಾರಗಳು ಇದ್ದಲ್ಲಿ ಅನುಭವದಂತೆ ವಿವರಿಸಿರಿ.)
- ವಾಸುದೇವ ಭಟ್ಟ,
ದ.ಕ., ಕರ್ನಾಟಕ, ಭಾರತ

No comments:

Post a Comment