Tuesday, 21 March 2017

ಕನ್ಯಾದಾನ vs ಕನ್ಯಾ ಆಧಾನ


ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ಚಿಕ್ಕಮಗಳೂರು ಇವರು ಹಿಂದೆ ಕನ್ಯಾದಾನ ಎಂಬ ಶಬ್ದವೇ ಸರಿಯಲ್ಲ, ಅದು ಕನ್ಯಾ ಆಧಾನ ಆಗಬೇಕು ಎಂದು ಸ್ಪಷ್ಟವಾಗಿ ಮಂಡಿಸಿದ್ದರು (http://veda-vijnana.blogspot.in/2013/04/blog-post_17.html). ಅದಕ್ಕೆ ಕೆಲ ವಿದ್ವಾಂಸರು ಆಕ್ಷೇಪಣೆ ವ್ಯಕ್ತಪಡಿಸಿ ಆಧಾರಗಳನ್ನು ಕೇಳಿದ್ದಾರೆ. ಆ ವಿಚಾರವಾಗಿ ಸ್ವಾಮೀಜಿಯವರಲ್ಲಿ ಒಂದೊಂದಾಗಿಯೇ ವಿದ್ವಾಂಸರು ಕೇಳುತ್ತಿರುವ ಪ್ರಶ್ನೆಗಳನ್ನು ಚರ್ಚಿಸಿ ಅದನ್ನು ಲೇಖಿಸಿ ಇಲ್ಲಿ ಪ್ರಕಟಿಸಲಾಗಿದೆ. ಹೆಚ್ಚೆಚ್ಚು ಜಿಜ್ಞಾಸೆ ಮಾಡುತ್ತಾ ಅಮೃತ ಸಮಾನವಾದ ಜ್ಞಾನವನ್ನು ಪಡೆಯೋಣ.
 

ಪ್ರಶ್ನೆ:- ಪ್ರಜೋತ್ಪಾದನಾರ್ಥಂ ಎಂಬ ಸಂಕಲ್ಪ ಇದೆಯಲ್ಲ? ಓಂ ಸ್ವಸ್ತಿ ಎಂದು ೩ ಸರಿ ಹೇಳಬೇಕಲ್ಲ?


ವಿಮರ್ಷೆ:- ಅದು ಪ್ರಾಜಾಪತ್ಯ ವಿವಾಹದ ಸಂಕಲ್ಪ. ಅದನ್ನು ಭಾಷ್ಯಕಾರರು ತಂದು ಬ್ರಾಹ್ಮ ವಿಹಾವ ಪದ್ಧತಿಯೊಂದಿಗೆ ಸೇರಿಸಿದ್ದು. ಹೀಗೆ ಯಾವ್ಯಾವುದನ್ನೋ ಯಾವ್ಯಾವುದಕ್ಕೋ ಮಿಶ್ರಣ ಮಾಡಿಟ್ಟಿದ್ದಾರೆ. ಪ್ರಜಾಪತಿ ಪ್ರೀತ್ಯರ್ಥೇ ಎಂದಾಗ ಅಲ್ಲಿ ಬ್ರಾಹ್ಮ ವಿವಾಹಕ್ಕೆ ಸಂಬಂಧವೇ ಇಲ್ಲವಲ್ಲ. ಅದು ಆರ್ಷೇಯ ಪದ್ಧತಿಯಲ್ಲೂ ಇಲ್ಲ. ಸಮಾಜ ಬದ್ಧತೆಗೆ ಹೊಂದಿ ಆಗುವ ವಿವಾಹವನ್ನು ಪ್ರಾಜಾಪತ್ಯ ವಿವಾಹ ಎಂದು ಹೇಳುತ್ತಾರೆ. ಅಲ್ಲಿ ಮದುವೆಯಾಗುವುದು ತನ್ನ ವೈಯಕ್ತಿಕ ಸಂಸಾರಕ್ಕಾಗಿ ಮಾತ್ರವಲ್ಲ. ಅಲ್ಲಿ ಇಡೀ ಸಾಮಾಜಿಕ ಬದ್ಧತೆ ಇರುತ್ತದೆ. ಅತಿಥಿ ಸತ್ಕಾರ, ನಿತ್ಯೋಪಾಸನೆ, ಇತ್ಯಾದಿ ಷೋಡಶ ಕರ್ಮಗಳನ್ನು ಹೇಳುತ್ತದೆ. ಅವೆಲ್ಲ ಸೇರಿಸಿ ದಂಪತಿಗಳಿಬ್ಬರಿಗೂ ಸಮಾನವಾಗಿ ವಹಿಸಿಕೊಡುವಂತಹದ್ದು ಪ್ರಾಜಾಪತ್ಯ ವಿವಾಹ ವಿಧಿ. ಹಾಗಾಗಿ ನಿತ್ಯ ಅಗ್ನಿ ಇಟ್ಟವರು ಊರಲ್ಲಿಲ್ಲದಾಗ ಅದರ ಕ್ರಿಯೆಯನ್ನು ಹೆಂಡತಿಯೇ ನೋಡಿಕೊಳ್ಳುವುದು. ಆದರೆ ಈ ಕ್ರಮದ ಜೀವನವು ಬ್ರಾಹ್ಮ ವಿವಾಹ ಪದ್ಧತಿಯಲ್ಲಿ ಆದಾಗ ಇರುವುದಿಲ್ಲ.

ಪ್ರಶ್ನೆ:- ಕನ್ಯೇ ಮೇ ಪಾರ್ಶ್ವ.... ನಾತಿ ಚರಾಮಿ || ಕನ್ಯಾದಾನ ಪ್ರತಿಷ್ಠಾ ಸಿದ್ಧ್ಯರ್ಥಂ ದಕ್ಷಿಣಾ ಸಮರ್ಪಣೆ. ಧರ್ಮಸಿಂಧುವಿನಲ್ಲಿ ಹೇಳಿರುವುದು ಸಿಂಧುವಲ್ಲವೇ?


ವಿಮರ್ಷೆ:- ಇವೆಲ್ಲ ಬ್ರಾಹ್ಮ ವಿವಾಹ ಪದ್ಧತಿಯಲ್ಲಿ ಇದ್ದಿದ್ದರೆ ಕಡೆಗೆ ಉದ್ದಾಲಕನು ಮಾಡಿದ್ದು ಹರ್ಯಶ್ವನಿಗೆ ಹೇಗೆ ತನ್ನ ಹೆಂಡತಿಯನ್ನು ಬಿಟ್ಟು ಕೊಟ್ಟ ಎಂಬ ಪ್ರಶ್ನೆ ಬರುತ್ತದೆ? ಒಂದೋ ಆ ಕಥೆಯನ್ನು ಬಿಸಾಡಬೇಕು ಇಲ್ಲವೇ ಈ ಶ್ಲೋಕ ಸಂಕಲ್ಪಗಳನ್ನು ಬಿಸಾಡಬೇಕು. ನಿರ್ಣಯ ಸಮಾಜಕ್ಕೆ ಬಿಟ್ಟದ್ದು. ಏನಕ್ಕೇನೋ ಸೇರಿಸಿ ಅದನ್ನು ಬ್ರಾಹ್ಮ ವಿವಾಹ ಎಂದರೆ ಆಗುವುದಿಲ್ಲ. ಧರ್ಮಸಿಂಧುವನ್ನು ಬರೆಯಲಿಕ್ಕೆ ಯಾರಿಗೂ ಆಗುತ್ತದೆ. ಬರೆಯಬಹುದು ಅಂಥ ಏನೇನೋ ಬರೆದರೆ ಅದು ತಪ್ಪು.

     ಹರಿಶ್ಚಂದ್ರನು ಚಂದ್ರಮತಿಯನ್ನು ಬ್ರಾಹ್ಮಣನಿಗೆ ದಾನ ಮಾಡುತ್ತಾನೆ. ಧರ್ಮ ನಿಷೇಧವಾಗಿದ್ದರೆ ಆವಾಗಲೇ ಅದನ್ನು ಖಂಡಿಸಬಹುದಾಗಿತ್ತು. ಅದು ಧರ್ಮ ನಿಷೇಧವಲ್ಲ. ಧರ್ಮ ಅದನ್ನು ಒಪ್ಪುತ್ತದೆ. ಹಾಗಾಗಿ ದಾನ ಮಾಡಿದ. ದಾನ ಮಾಡಿರದಿದ್ದರೆ ಹರಿಶ್ಚಂದ್ರನು ಮಾತಿಗೆ ತಪ್ಪಿದ ಹಾಗಾಗುತ್ತಿತ್ತು ಅಲ್ಲವೇ? ಒಂದು ವಾಕ್ಯವೋ, ಶ್ಲೋಕವೋ ಹಿಡಿದು ಸಮರ್ಥಿಸಿಕೊಳ್ಳುವುದಲ್ಲ. ಉಳಿದೆಲ್ಲ ಪ್ರಕರಣಗಳಿಗೂ ಸಮರ್ಥನೆ ಕೊಡಬೇಕಾಗುತ್ತದೆ. ಹಾರಿಶ್ಚಂದ್ರನು ವಿಪ್ರನಿಗೆ ಮಾರಿದ್ದು ಸುಳ್ಳೇ? ಉದ್ದಾಲಕನು ಹರ್ಯಶ್ವನಿಗೆ ಮಾಧವಿಯನ್ನು ಮಾರಲಿಲ್ಲವೇ? ಒಟ್ಟು ಧರ್ಮವನ್ನು ತೆಗೆದುಕೊಳಬೇಕು, ನಂತರದ ಪರಿಣಾಮಗಳು, ಉದಾಹರಣೆಗಳನ್ನೆಲ್ಲ ಸಮಗ್ರವಾಗಿ ಚಿಂತಿಸಬೇಕು. ಉದ್ದಾಲಕ ಮಾಡಿದ್ದು ಧರ್ಮಬದ್ಧವೇ? ಧರ್ಮಬದ್ಧವಲ್ಲದ ದ್ರವ್ಯವನ್ನು ವಿಶ್ವಾಮಿತ್ರನು ತೆಗೆದುಕೊಂಡಿದ್ದರೆ ವಿಶ್ವಾಮಿತ್ರ ಎಂಥಾ ಪಾಪಿಷ್ಟ ಆಗುತ್ತಾನೆ ಗೊತ್ತೇ? ಅಕ್ರಮವಾಗಿ ಸಂಪಾದಿಸಿದ ದ್ರವ್ಯ (ಹಣ)ವು ಯಾವ್ಯಾವ ರೀತಿಯಲ್ಲಿ ದೋಷಯುಕ್ತವಾಗುತ್ತದೆ ಎಂದು ಅಲ್ಲೇ ಧರ್ಮಸಿಂಧುವಿನಲ್ಲಿ ಮುಂದೆ ನೀಡಿದ್ದಾರೆ. ಉದ್ದಾಲಕನು (ಗಾಲವನು) ೬೦೦ ಕುದುರೆಗಳನ್ನು ವಿಶ್ವಾಮಿತ್ರನಿಗೆ ಗುರುದಕ್ಷಿಣೆ ರೂಪದಲ್ಲಿ ಕೊಡುವುದಕ್ಕಾಗಿ ಯಯಾತಿಯ ಪುತ್ರಿಯಾದ ಮಾಧವಿಯನ್ನು ಪಡೆದು ಅವಳನ್ನು ಹರ್ಯಶ್ವ, ದಿವೋದಾಸ, ಉಶೀನರ ಕೊನೆಗೆ ವಿಶ್ವಾಮಿತ್ರನಿಗೇ ನೀಡಿದ್ದು ವೇಶ್ಯಾವಾಟಿಕೆ ನಡೆಸಿದಂತೆ ಆಗುತ್ತದೆಯಲ್ಲವೇ? ಆಗ ವಿಶ್ವಾಮಿತ್ರ ಎಂಥಾ ಜನ ಮಾರ್ರೇ? ಈ ರೀತಿ ಖಡಕ್ ಪ್ರಶ್ನೆ ಹಾಕುವುದಕ್ಕಾಗಿಯೇ ಮೀಮಾಂಸಕರನ್ನು ದೂರ ಇಟ್ಟರು.

       ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ ಎಂದು ಹೇಳಿ ಕನ್ಯಾಧಾನ ಆದ ಮೇಲೆ ಪತಿಯೊಟ್ಟಿಗೆ ಸೇರಿದ ಮೇಲೆ ತಾನೇ ಮಕ್ಕಳಾಗುವುದು? ಅಯೋಧ್ಯೆಯ ಇಕ್ಷ್ವಾಕು ವಂಶದ ರಾಜ ಹರ್ಯಶ್ವನಿಂದ ವಸುಮನಸ್ (ವಸುಪ್ರದ), ಕಾಶೀರಾಜ ದಿವೋದಾಸನಿಂದ ಪ್ರತರ್ದನ, ಭೋಜನಗರಿಯ ರಾಜ ಉಶೀನರನಿಂದ ಶಿಬಿ ಎಂಬ ಪುತ್ರರನ್ನು ಕ್ರಮವಾಗಿ ಹೆತ್ತುಕೊಡುವುದಕ್ಕಾಗಿ  ತಲಾ ೨೦೦ ಕುದುರೆಗಳಿಗಾಗಿ ಮಾರಾಟ ಮಾಡಿದರೂ; ೬೦೦ ಕುದುರೆ ಮಾತ್ರ ದೊರಕಿತು. ಇನ್ನುಳಿದ ೨೦೦ ಕುದುರೆಗಳ ಬದಲು ಮಾಧವಿಯನ್ನು ಕೊನೆಗೆ ವಿಶ್ವಾಮಿತ್ರನಿಗೆ ಕೊಟ್ಟು ಅಷ್ಟಕ ಎಂಬ ಪುತ್ರನನ್ನು ಪಡೆದರು. ಅಲ್ಲಿಗೆ ೮೦೦ ಕುದುರೆಗಳ ಗುರುದಕ್ಷಿಣೆಗಾಗಿ ಹೆಂಡತಿಯನ್ನು ಮಾರಟ ಮಾಡಿದ್ದು ಸರಿಯೇ? ಅದಕ್ಕೆ ತಾನೇ ಪ್ರತಿ ರಾಜನೂ ಮಗು ಪಡೆದು ಅವಳನ್ನು ಹಿಂತಿರುಗಿಸಿದ್ದು. ಕೊನೆಗೆ ಉದ್ದಾಲಕನು ಅವಳನ್ನು ದಶರಥನಿಗೇ ಹಿಂತಿರುಗಿಸಿದನು. ಇದು ಎಂಥಹಾ ಪ್ರಕರಣ? ಇದು ಸಂಪೂರ್ಣ ಧರ್ಮ ವಿರುದ್ಧವಾಗುತ್ತದೆ.

ಪ್ರಶ್ನೆ:- ಇದು ಹಿಂದಿನ ಯುಗದ ಕೆಲ ಆಚರಣೆಗಳು. ಅದು ಈಗಿನ ಯುಗಕ್ಕೆ ಅನ್ವಯಿಸುವುದಿಲ್ಲವೆಂದು ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹೇಳಿಲ್ಲವೇ?


ಉತ್ತರ:- ಇದು ಪಲಾಯನ ವಾದವಷ್ಟೆ. ಪ್ರಜಾಪತ್ಯ ವಿವಾಹ ನಿಯಮಗಳು ಯುಗಧರ್ಮ ಆಧರಿಸಿದೆ. ಆದರೆ ಅದರಲ್ಲೆಲ್ಲೂ ಈ ರೀತಿ ಹೆಣ್ಣನ್ನು ದಾನ ಕೊಡಲು ಅಥವಾ ಬಾಡಿಗೆಗೆ ಕೊಡಲು ಯಾವುದೇ ಯುಗಧರ್ಮದಲ್ಲಿ ಅವಕಾಶವಿಲ್ಲ. ಯುಗಧರ್ಮದ ಹೆಸರಿನಲ್ಲಿ ಪಲಾಯನ ಮಾಡಬೇಡಿ. ನೀವು ಮಾತ್ರ ಆಧಾರ ಕೇಳಬಹುದು. ಇಂತಹಾ ಕನ್ಯಾ ಮಾರಾಟಕ್ಕೆ ಪ್ರಾಜಾಪತ್ಯ ವಿವಾಹದ ಯಾವ  ಯುಗಧರ್ಮವು ಸಿಂಧು ಮಾಡಿದೆ ಎಂದು ನಮಗೂ ಸ್ವಲ್ಪ ಆಧಾರ ಕೊಡಿ. ಇಲ್ಲಿ ಉದ್ಧಾಲಕನ ಪ್ರಕರಣದಲ್ಲಿ ಮಾಧವಿಯನ್ನು ಬಾಡಿಗೆಗೆ ಕೊಟ್ಟದ್ದು ಮಾತ್ರ. ಅದಕ್ಕೆ ಏನಾದರೂ ಶಬ್ದ ಬಳಸಿಕೊಳ್ಳಿ. ಅದು ನೀವುಗಳು ಬರೆದುಕೊಂಡಿರುವ ಧರ್ಮಶಾಸ್ತ್ರದ ವಿಚಾರಗಳೆಂದಾಗುತ್ತದೆ. ಈಗ ನಾವು ಮೀಮಾಂಸಕರಿಗೆ ಉತ್ತರ ಕೊಡಿ.

       ಧರ್ಮಶಾಸ್ತ್ರವಾದಿಗಳು, ಸಂಪ್ರದಾಯವಾದಿಗಳು ಕೆಲವು ಕಥೆಗಳನ್ನು ಹೇಳಿದಾಗ ಮೀಮಾಂಸಕರು ಅದನ್ನು ಖಂಡಿಸುತ್ತಾರೆ ಏಕೆಂದರೆ ಮೀಮಾಂಸಕರು ಆ ಕಥೆಗಳನ್ನು ನಂಬಿಕೊಂಡು ಜೀವನ ನಡೆಸುವುದಿಲ್ಲ. ಅವರು ಆ ಕಥೆಯೊಳಗಿರುವುದಿಲ್ಲ. ಆದರೆ ಪ್ರತಿವಾದಿಗಳು ಅಂತಹಾ ಕಥೆಗಳನ್ನೇ ನಂಬಿಕೊಂಡು ಬಂದಿರುವಂತಹವರು. ಹಾಗಾಗಿ ಅಂತಹಾ ಕನ್ಯಾ ಮಾರಾಟ ಕಥೆಗಳಿಗೆ ಅವರೇ ಸಮರ್ಥನೆ ಕೊಡಬೇಕಾಗುತ್ತದೆ. ಒಂದು ವೇಳೆ ನೀವು ಉದ್ಧಾಲಕನ ಕಥೆಯನ್ನು ಪ್ರಕ್ಷಿಪ್ತ ಎಂದು ಬಿಟ್ಟರೆ ಮುಂದೆ ನಡೆಯುವ ಮಹಾಭಾರತದ ಕಥೆಗಳಿಗೆ ಕೆಲವೊಂದು ಆಧಾರಗಳೇ ಬುಡಮೇಲಾಗುತ್ತದೆ. ಕಡೆಗೆ ಹಾಗೇ ಪರಸ್ಪರ ಕೊಂಡಿ ಬೆಸೆದುಕೊಂಡು ೧೮ ಪುರಾಣಗಳೂ ಹಾಳಾಗಿ ಬಿಡುತ್ತವೆ. ಮೀಮಾಂಸಕರ ಬಾಯಿಗೆ ಸಿಕ್ಕಿದರೆ ಯಾವುದನ್ನೂ ಬಿಡುವುದಿಲ್ಲ. ಸತ್ಯಪರ ಹೋರಾಟ ಮಾತ್ರ. ಹಾಗಾಗಿ ಮೀಮಾಂಸಕರನ್ನು ದೂರ ಇಟ್ಟಿದ್ದಾರೆ. ಮೀಮಾಂಸಕರಿಗೂ ಹತ್ತಿರ ಬರಬೇಕು, ಅವಲಂಬಿತವಾಗಿರಬೇಕು ಎಂದಿಲ್ಲ. ಆದರೆ ನಿಮಗೆ ಧರ್ಮಶಾಸ್ತ್ರ ಗ್ರಂಥಗಳು, ಪುರಾಣ ಕಥೆಗಳೇ ಅನಿವಾರ್ಯವಾಗಿಸಿಕೊಂಡಿದ್ದೀರ. ಅದನ್ನೇ ಹಿಡಿದುಕೊಂಡು ನೇತಾಡಬೇಕಾಗುತ್ತದೆ. ನಮಗೆ ಅವ್ಯಾವುದೂ ಬೇಡ. ಹಾಗಾಗಿ ಧಾರಾಳವಾಗಿ ಅವನ್ನೆಲ್ಲ ಖಂಡಿಸುತ್ತೇವೆ. ಆದರೆ ನೀವು ಅದನ್ನು ಅವಲಂಭಿಸಿಯೇ ಜೀವಿಸುವುದರಿಂದ ಖಂಡಿಸಲಾಗುವುದಿಲ್ಲ.

ಪ್ರಶ್ನೆ:- ಹಾಗಾದರೆ ಮೀಮಾಂಸಕರು ಒಂದು ರೀತಿಯ ಅವಕಾಶ ವಾದಿಗಳಲ್ಲವೇ? ತಮ್ಮ ಗೆಲುವಿಗೆ ಬೇಕಾಗಿ ತಮಗೆ ಬೇಕಾದಾಗ ಧರ್ಮಶಾಸ್ತ್ರದ ಆಧಾರ ಪಡೆಯುತ್ತಾರೆ. ಬೇಡ ಎಂದೆನಿಸಿದಾಗ ಅದನ್ನೇ ದೂಷಿಸುತ್ತಾರೆಯಲ್ಲವೇ?


ಉತ್ತರ:- ತನ್ನ ಸ್ವಹಿತಕ್ಕಾಗಿ ಬಳಸುವವರನ್ನು ಅವಕಾಶವಾದಿಗಳೆಂದೆನ್ನುತ್ತಾರೆ. ಆದರೆ ಇಲ್ಲಿ ಮೀಮಾಂಸಕರಿಗೆ ಸ್ವಹಿತ ಎಂಬುದಿಲ್ಲ ಸಮಾಜದ ಹಿತ ಮಾತ್ರ. ಮೀಮಾಂಸಕರು ಯಾವಾಗಲೂ ಸೋಲೇ! ಏಕೆಂದರೆ ಅವರು ಅದ್ಯಾವುದನ್ನೂ ಬಳಸುವುದಿಲ್ಲ. ಸಮಾಜಕ್ಕಾಗಿ ಸೋತು ಸಮಾಜವನ್ನು ಗೆಲ್ಲಿಸುತ್ತಾರೆ. ನಿಮ್ಮಲ್ಲಾದ ತಪ್ಪನ್ನು ತೋರಿಸಿಕೊಡುವುದಕ್ಕೆ ಮೀಮಾಂಸ ಬೇಕು. ಪಾತ್ರೆ ತೊಳೆಯುವವನು ಊಟ ಮಾಡಿ ಹೋಗುತ್ತಾನೆ ಎಂಬ ಖಾತರಿ ಇಲ್ಲ. ಅವನಿಗೆ ಊಟ ಎಂಬುದಕ್ಕಿಂತ ಪಾತ್ರೆ ತೊಳೆಯುವ ಕಾಯಕವೇ ಮುಖ್ಯ. ಅಡುಗೆ ಮಾಡುವ ಮುನ್ನ ಪಾತ್ರೆ ತೊಳೆದಿರಬೇಕು. ಇದೇ ಮೊದಲ ಪ್ರಕ್ರಿಯೆ. ಅಡಿಗೆಯ ನಂತರ ಪಾತ್ರೆ ತೊಳೆಯಲು ಹೇಳಿಲ್ಲ. ಆದರೆ ಅಡಿಗೆ ಆದ ನಂತರ ಪಾತ್ರೆ ತೊಳೆಯುವುದು ಏಕೆಂದರೆ ಮುಂದಿನ ಅಡಿಗೆಗೆ ಸಿದ್ಧತೆಗಾಗಿ. ಆ ಪಾತ್ರೆಯು ಬೇಡವೆಂದಿದ್ದರೆ ಬಿಸಾಡುತ್ತಿದ್ದರೇ ಹೊರತು ತೊಳೆದಿಡುತ್ತಿರಲಿಲ್ಲ. ಅದೇ ಉಂಡ ನಂತರ ಬಾಳೇ ಎಲೆಯನ್ನು ಬಿಸಾಡುತ್ತಾರೆ. ಆದರೂ ಊಟಕ್ಕಿಂತ ಮುಂಚೆ ಬಾಳೆ ಎಲೆಯನ್ನು ತೊಳೆದೇ ಬಳಸುತ್ತಾರೆ. ಹಾಗಾಗಿ ಅಡಿಗೆ ಊಟಕ್ಕಿಂತ ಪಾತ್ರೆ ತೊಳೆಯುವುದೇ ಮುಖ್ಯ. ಅದು ಮೀಮಾಂಸಕರ ಕಾರ್ಯ.

ಊಟ ಮಾಡಿದ ಮೇಲೆ ಕೈ ತೊಳೆಯುವುದು ಇನ್ನಿತರೆ ಕೆಲಸಗಳನ್ನು ಮಾಡುವ ಅವಶ್ಯಕತೆ ಇರುವುದರಿಂದ. ಊಟ ಮಾಡುವುದು ಮಾತ್ರ ಕೆಲಸವೆಂದಾದರೆ ಊಟದ ನಂತರ ಕೈ ತೊಳೆಯುವ ಪ್ರಶ್ನೆಯೇ ಇಲ್ಲ! ಊಟ ಮಾಡಿದ್ದಕ್ಕಾಗಿ ಕೊನೆಯಲ್ಲಿ ಕೈ ತೊಳೆಯುವುದು ಎಂಬ ಕಲ್ಪನೆಯೇ ತಪ್ಪು. ಊಟ ಮಾಡಿದ ನಂತರ ಬೇರೆ ಕೆಲಸವನ್ನು ಆರಂಭಿಸಬೇಕಿರುತ್ತದೆ. ಹಾಗಾಗಿ ಕೈ ತೊಳೆಯುವುದರಿಂದ ಮುಂದಿನ ಕೆಲಸದ ಆರಂಭವಾಗುತ್ತದೆ. ಹಾಗಾಗಿ ಸಮಾಜದಲ್ಲಿ ಕೊಳಕನ್ನು ತೊಳೆಯುವುದೇ ಮೊದಲ ಪ್ರಕ್ರಿಯೇ. ಅದೇ ಮೀಮಾಂಸಕರ ಕೆಲಸ.

ಅತಿಥಿಗಳು ಮನೆಗೆ ಬಂದಾಗ ಮೊದಲು ಅರ್ಘ್ಯ - ಕೈಗೆ ನೀರು ಕೊಡುತ್ತಾರೆ. ನಂತರ ಮಾತ್ರ ಪಾದ್ಯ  - ಕಾಲಿಗೆ ನೀರು ಕೊಡುವುದು. ಊಟವಾದ ನಂತರ ಅವರೇ ಕೈ ತೊಳೆದು ಹೋಗುತ್ತಾರೆ ಏಕೆಂದರೆ ಅವರಿಗೆ ಮುಂದಿನ ಕೆಲಸಕ್ಕೆ ಹೋಗಬೇಕಿರುತ್ತದೆ. ಅರ್ಘ್ಯ, ಪಾದ್ಯ, ಆಚಮನ ಎಂಬ ಕ್ರಮವು ನಿಮ್ಮ ಆಚರಣೆಗಳೇ ಹೊರತು ಮೀಮಾಂಸಕರು ಹೇಳಿದ್ದಲ್ಲ. ಹಾಗಾಗಿ ಮೊದಲು ತೊಳೆಯುವುದು, ನಂತರ ಊಟ ಮಾಡುವುದು. ಊಟ ಮಾಡಿದ ಮೇಲೆ ತೊಳೆಯುವುದು ಬೇರೆ. ಮುಂದಿನ ಕೆಲಸ ಇದ್ದರೆ ಮಾತ್ರ ತೊಳೆಯಬೇಕು. ಭೋಜನ ಪ್ರಕ್ರಿಯೆಯಲ್ಲಿ ಉತ್ತರಾಪೋಶನ ಎಂದಿದೆ ಬಿಟ್ಟರೆ ಅಲ್ಲಿ ಕೈ ತೊಳೆಯುವುದು ಎಂದಿಲ್ಲ.

ಪ್ರಶ್ನೆ:- ದಶಾನಾಂ ಪೂರ್ವೇಷಾಂ ದಶಾನಾಂ ಪರೇಷಾಂ ಆತ್ಮನಶ್ಚ ಏಕವಿಂಶತಿ ..... ಮತ್ಸ್ಯ ಪುರಾಣೋಕ್ತ ಪ್ರಕಾರೇಣ ಷೋಡಶ ಮಹಾದಾನಾಂತರ್ವರ್ತಿ ಸಾಲಂಕೃತ ಕನ್ಯಾದಾನಾಖ್ಯ ಮಹಾದಾನಂ ಕರಿಷ್ಯೇ ಎಂದು ಸಂಕಲ್ಪವಿದೆಯಲ್ಲವೇ? ಮಹಾಸಂಕಲ್ಪ ಏಕೆ ಮಾಡಬೇಕೆಂದು ದೇವಲ ಹಾಗೋ ಮರೀಚಿ ವಚನ ಹೇಳುತ್ತಾರೆ:- ........ ಕನ್ಯಾದಾನೇ ನದೀಸ್ನಾನೇ ಮಹಾಸಂಕಲ್ಪಮಾಚರೇತ್.... ||


ವಿಮರ್ಷೆ:- ಮೊದಲಿಗೆ ಮತ್ಸ್ಯ ಪುರಾಣವನ್ನು ಯಾರು ಯಾರಿಗೆ ಹೇಳಿದರು? ಮೇಲೆ ಹೇಳಿದ ವಾಕ್ಯಗಳು ಆ ಮತ್ಸ್ಯ ಪುರಾಣವನ್ನು ಮೂಲದಲ್ಲಿ ಹೇಳಿದವರು ಇದನ್ನು ಹೇಳಿದ್ದಾರೆಯೇ? ಮರೀಚಿ, ದೇವಲ ಇತ್ಯಾದಿ ಹೇಳಿದ ವಾಕ್ಯಗಳು ಮತ್ಸ್ಯ ಪುರಾಣಕ್ಕೆ ಪ್ರಸ್ತುತವಲ್ಲ, ಪೂರಕವಷ್ಟೆ. ವಿಷ್ಣುವಿನಿಂದ ಮನುವಿಗೆ ಈ ಮತ್ಸ್ಯ ಪುರಾಣವು ಮೊದಲು ಹೇಳಲ್ಪಟ್ಟಿತು ಎಂದಿದೆ. ಮತ್ಸ್ಯಪುರಾಣ (ಅಧ್ಯಾಯ ೨೪, ಶ್ಲೋಕ ೧೯-೨೩) ಹಾಗೂ ಕರ್ನಾಟಕದ ಹಲವು ಶಾಸನಗಳಲ್ಲಿ ರಾಜನು ತನ್ನ ಮತ್ತು ತನ್ನ ರಾಜ್ಯದ ಶ್ರೇಯಸ್ಸಿಗಾಗಿ ಮಾಡಲ್ಪಡುವ ದಾಖಲಾಗಿರುವ ೧೬ ಮಹಾದಾನಗಳು ಇಂತಿವೆ:-

೧) ತುಲಾಪುರುಷ ದಾನ

೨) ಹಿರಣ್ಯಗರ್ಭ ದಾನ

೩) ಬ್ರಹ್ಮಾಂಡ ದಾನ

೪) ಕಲ್ಪವೃಕ್ಷ ದಾನ

೫) ಗೋಸಹಸ್ರ ದಾನ

೬) ಹಿರಣ್ಯ ಕಾಮಧೇನು ದಾನ

೭) ಹಿರಣ್ಯಾಶ್ವ ದಾನ

೮) ಹಿರಣ್ಯಾಶ್ಚ ರಥ ದಾನ

೯) ಹೇಮಹಸ್ತಿ ರಥ ದಾನ

೧೦) ಪಂಚಲಾಂಗಲ ದಾನ

೧೧) ಭೂದಾನ

೧೨) ವಿಶ್ವಚಕ್ರ ದಾನ

೧೩) ಕಲ್ಪಲತಾ ದಾನ

೧೪) ಸಪ್ತಸಾಗರ ದಾನ

೧೫) ರತ್ನಧೇನು ದಾನ

೧೬) ಪಂಚಭೂತ ಘಟ ದಾನ


        ಇಲ್ಲೆಲ್ಲ ಬ್ರಹ್ಮಾಂಡ, ಸಪ್ತಸಾಗರ, ವಿಶ್ವಚಕ್ರ ಇತ್ಯಾದಿಗಳಲ್ಲಿ ಚಿನ್ನದಿಂದ ತಯಾರಿಸಿದ ವಸ್ತುಗಳನ್ನು ಆಯಾ ರೂಪದಲ್ಲಿ ದಾನ ಮಾಡುವುದಾಗಿರುತ್ತದೆ. ಇವನ್ನು ಪುರಾಣ ಪುರುಷರಾದ ಕೃಷ್ಣ, ವಾಸುದೇವ, ಅಂಬರೀಷ, ಪ್ರಹ್ಲಾದ, ಪೃಥು, ಭರತ ಮುಂತಾದವರು ಮಾಡಿದ್ದರು ಎಂದು ಮತ್ಸ್ಯ ಮಹಾಪುರಾಣ ಹೇಳುತ್ತದೆ.

        ಇನ್ನು ಉಪಲಬ್ದ ಐತಿಹಾಸಿಕ ದಾಖಲೆಗಳಲ್ಲಿ ಮಹಾದಾನಗಳ ಉಲ್ಲೇಖವು ಮೊದಲಿಗೆ ವಿಜಯನಗರದರಸರ ಕಾಲದಿಂದ ಕಾಣಸಿಗುತ್ತದೆ. ಆದರೆ ಮೊದಲು ಆಳಿದ ಗಂಗರಸರ ಉಪಲಬ್ದ ದಾಖಲೆಗಳಲ್ಲಿ ಅನೇಕ ಬಗೆಯ ದಾನಗಳ ವಿಚಾರವಿದ್ದರೂ ಎಲ್ಲಿಯೂ ಮಹಾದಾನಗಳ ಉಲ್ಲೇಖವಿಲ್ಲ. ನಂತರ ಹೊಯ್ಸಳರಲ್ಲಿಲ್ಲ. ಶಾಸನಗಳ ಆಧಾರದ ಮೇಲೆ ಹೇಳಬೇಕಾದರೆ ಷೋಡಶ ಮಹಾದಾನಗಳನ್ನು ಸಮ್ರಾಟರು ಹಾಗೂ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ಆಚರಿಸುತ್ತಿದ್ದರು ಎಂದು ಹೇಳಬಹುದು.

        ಈ ರೀತಿ ಇರುವ ಷೋಡಶ ಮಹಾದಾನಗಳಲ್ಲಿ ಎಲ್ಲಿಯೂ ಕನ್ಯಾದಾನ ಎಂಬುದರ ಉಲ್ಲೇಖವಿಲ್ಲ! ಹಾಗಿದ್ದಾಗ ಮೇಲ್ಕಂಡ ಸಂಕಲ್ಪ ಶ್ಲೋಕವು ಪ್ರಕ್ಷಿಪ್ತ ಅಂದರೆ ತಮ್ಮ ಹಿತಾಸಕ್ತಿಗಾಗಿ ಸೇರಿಸಲ್ಪಟ್ಟದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

        ಅಂದಾಜು ೭೫ ವರ್ಷದ ಹಿಂದೆಯೇ ಕನ್ಯಾದಾನ ಶಬ್ದವೇ ಸರಿಯಲ್ಲ ಎಂದು ಮಂಡಿಸಲ್ಪಟ್ಟಗ ಸುಮಾರು ೧೫೦ ಜನ ಪಂಡಿತರು ಎಲ್ಲಾ ಗ್ರಂಥಗಳನ್ನು ತಿಣುಕಾಡಿ ಸರಿಯಾದ ಆಧಾರ ಸಿಕ್ಕದೆ ಕನ್ಯಾದಾನ ಶಬ್ದ ಸರಿಯಲ್ಲ ಎಂದು ಒಪ್ಪಿದ್ದಾರೆ. ಸುಮ್ಮನೆ ಹೇಳಿದರೆ ಆಗುವುದಿಲ್ಲ. ಸರಿಯಾದ ಆಧಾರಗಳು, ದಾಖಲೆಗಳು ಬೇಕಾಗುತ್ತವೆ. ಖಂಡನೆಗಳನ್ನು ಕೆಲವೊಂದು ಶಾಸ್ತ್ರಾಧಾರದ ರೀತಿ ಇದ್ದರೆ ಇನ್ನು ಕೆಲವಾರು ಮೀಮಾಂಸದ ರೀತ್ಯಾ ಖಂಡಿಸಲ್ಪಟ್ಟಿರುತ್ತದೆ.

        ೮ ವಿಧ ವಿವಾಹ ಪದ್ಧತಿಗಳಲ್ಲಿ ಈಗ ಮಾಡುತ್ತಿರುವುದು "ಪ್ರಾಜಾಪತ್ಯ ವಿವಾಹ" ಎಂದು ಎಷ್ಟೋ ಜನ ಹೇಳಿಕೊಳ್ಳುತ್ತಾರೆ. ಆದರೆ ಪ್ರಾಜಾಪತ್ಯ ವಿವಾಹ ಪದ್ಧತಿಗೆ ಅದರದ್ದೇ ಆದ ವಿಶೇಷತೆ ಇದೆ. ಅದರ ರೀತಿ ಯಾರಿಗೆ ಹೇಗೆ ವಿವಾಹ ಮಾಡಿದರೆ ಹೇಗೆ ಸಂಸಾರವನ್ನು ನಡೆಸಬಲ್ಲರು, ಸಂಸಾರ ನಡೆಸಲು ಅವರಿಗೆ ಯಾವುದು ಪೂರಕವಾಗುತ್ತದೆ? ಯಾವುದು ಮಾರ್ಗದರ್ಶಕವಾಗುತ್ತದೆ? ಅದನೆಲ್ಲ ಈ ಪ್ರಾಜಾಪತ್ಯ ವಿವಾಹ ಪದ್ಧತಿಯು ಚಿಂತಿಸುತ್ತದೆ. ಪ್ರಾಜಾಪತ್ಯ ವಿವಾಹ ಪದ್ಧತಿಯ ರೀತಿ ಅದರದ್ದೇ ಆದ ಗೃಹಸ್ಥಾಶ್ರಮಧರ್ಮ ನಿರೂಪಣೆ ಇರುತ್ತದೆ. ಕನ್ಯಾದಾನ ಮಾಡಲು ಬರುತ್ತದೆಯೇ? ಅಥವಾ ಅದು ಕನ್ಯಾ ಆಧಾನ ಮಾತ್ರವೇ? ಎಂದು ಪ್ರಾಜಾಪತ್ಯ ಪದ್ಧತಿಯಲ್ಲಿ ವಿವಾಹ ಮಾಡುವಾಗ ಅದೇ ಪದ್ಧತಿಯಲ್ಲಿ ಚಿಂತಿಸಬೇಕಾಗುತ್ತದೆ. ಕೇವಲ ಶಬ್ದ ಇದೆ ಎಂದೊಡನೆ ಆಗುವುದಿಲ್ಲ. ಅದಕ್ಕೆ ಸಂಬಂಧಪಟ್ಟು ಪ್ರಾಜಾಪತ್ಯ ಸೂತ್ರವಿದೆ. ಅದೇ ಧರ್ಮಸೂತ್ರಗಳ ಪ್ರಕಾರ ನಿರ್ಣಯ ಮಾಡಬೇಕು. ತಮಗೆ ಇಷ್ಟ ಬಂದಂತೆ ಬರೆದುಕೊಂಡು ಈಗ ಸಂವಿಧಾನವನ್ನು ತಿದ್ದುಪಡಿ ಮಾಡುವಂತೆ ಮಾಡಲು ಬರುವುದಿಲ್ಲ.

        ಗೃಹಸ್ಥಾಶ್ರಮಧರ್ಮ ನಿರೂಪಣೆಯಲ್ಲಿ ಅಂದಾಜು ೭೪೦ ಶ್ಲೋಕಗಳಲ್ಲಿ ಪತಿ-ಪತ್ನಿಯರಿಗೆ ಸಮಾನ ಅಧಿಕಾರವನ್ನು ವಿವರಿಸುತ್ತದೆ. ಕನ್ಯೆಯನ್ನು ದಾನ ಎಂದು ಸ್ವೀಕರಿಸಿದರೆ ಆ ಎಲ್ಲಾ ಶ್ಲೋಕಗಳನ್ನು ತೆಗೆದು ಬಿಸಾಡಬೇಕಾಗುತ್ತದೆ.

ಪ್ರಶ್ನೆ:- ನೀವು ಮೀಮಾಂಸ ರೀತ್ಯಾ ಸ್ಪಷ್ಟವಾಗಿ ಕನ್ಯಾದಾನವಲ್ಲ ಅದು ಕನ್ಯಾ ಆಧಾನ ಎಂದು ಮಂಡಿಸಿದ್ದೀರಿ. ಆದರೆ ಕನ್ಯಾ ಆಧಾನ ಎಂದು ಬಳಕೆಯಾಗಿದ್ದಕೆ ಪ್ರಮಾಣ ಬೇಕಲ್ಲವೇ?


ಉತ್ತರ:- ಅದಕ್ಕಾಗಿ ಪ್ರಾಜಾಪತ್ಯ ಸೂತ್ರದಲ್ಲಿ ಗೃಹಸ್ಥಾಶ್ರಮ ಧರ್ಮವನ್ನು ನಿರ್ಣಯ ಮಾಡುತ್ತಾರೆ. ಅದರಲ್ಲಿ ಗೃಹಸ್ಥನು ಹೇಗಿರಬೇಕು? ಅವನಿಗೆ ಇರತಕ್ಕಂತಹಾ ಕರ್ತವ್ಯಗಳೇನು? ಬಾಧ್ಯತೆಗಳೇನು? ಅದಕ್ಕೆ ಅವನು ಪೂರಕತೆಗಳನ್ನು ಯಾವ್ಯಾವ ರೀತಿಯಲ್ಲಿ ಹೊಂದಿಸಿಕೊಳ್ಳಬೇಕು ಎಂದೆಲ್ಲಾ ಹೇಳುತ್ತದೆ. ಹೇಗೆ ಗಂಡು ಮಕ್ಕಳನ್ನು ಪಡೆಯಬೇಕು? ಹೇಗೆ ಹೆಣ್ಣು ಮಕ್ಕಳನ್ನು ಪಡೆಯಬೇಕು? ಎಂಬ ನಿಯಮಗಳಿವೆ. ಅದರ ಆಧಾರದಲ್ಲಿಯೇ ಹೋಗಬೇಕೇ ಹೊರತು ಇಷ್ಟಬಂದಂತೆ ಹೋಗುವ ಹಾಗಿಲ್ಲ. ಅದರ ಪ್ರಕಾರ ಆಧಾನವೇ ಆಗಬೇಕೇ ಹೊರತು ದಾನವಾಗುವುದಿಲ್ಲ.

ಪ್ರಶ್ನೆ:- ಅದು ಮೀಮಾಂಸಕರ ವಾದವಾಗುತ್ತದೆಯೇ ಹೊರತು ಸೂತ್ರಕಾರರ ಅಭಿಮತವಾಗುವುದಿಲ್ಲವಲ್ಲ?


ಉತ್ತರ:- ಸೂತ್ರಕಾರರು ಅದನ್ನು ಹೊರತುಪಡಿಸಿ ಸೂತ್ರ ಬರೆಯುವುದೇ ಇಲ್ಲ, ಬರೆಯುವ ಹಾಗಿಲ್ಲ. ಪ್ರಾಜಾಪತ್ಯ ಸೂತ್ರದಂತೆಯೇ ಸೂತ್ರಕಾರರೂ ಧರ್ಮ ನಿರ್ಣಯ ಮಾಡಿರುತ್ತಾರೆ. ಅವರಿಗೆ ಇಷ್ಟಬಂದಂತೆ ಸೂತ್ರ ರಚನೆ ಮಾಡಲು ಬರುವುದಿಲ್ಲ. ಅವರೆಲ್ಲ ಹಾಗೆ ಇಷ್ಟ ಬಂದಂತೆ ಬರೆದೂ ಇಲ್ಲ. ನಂತರ ಸೂತ್ರದ ವ್ಯಾಖ್ಯಾನಕಾರರು ತಮಗೆ ಬೇಕಾದಂತೆ ಸೇರಿಸಿಕೊಂಡರು. ವ್ಯಾಖ್ಯಾನಕಾರರಿಗೆ ಈ ನಿರ್ಬಂಧಗಳೆಲ್ಲ ಗೊತ್ತಿಲ್ಲ. ಅದು ಸಮಸ್ಯೆ.

ಪ್ರಶ್ನೆ:- ಗರ್ಭಾಧಾನ ಎಂಬ ಆಧಾನವುಳ್ಳ ಶಬ್ದವನ್ನು ಸೂತ್ರಕಾರರು ಹೇಳಿರಬೇಕಾದರೆ ಕನ್ಯಾಧಾನ ಎಂಬ ಶಬ್ದ ಅವರಿಗೆ ಗೊತ್ತಿರಲಿಲ್ಲ ಎನ್ನಲು ಸಾಧ್ಯವೇ?


ಉತ್ತರ:- ಸೂತ್ರಕಾರರು ಸರಿಯಾಗಿ ಆಧಾನ ಎಂದೇ ಬರೆದಿದ್ದಾರೆ. ನಂತರ ಭಾಷ್ಯಕಾರರಿಗೆ ಅದು ಗೊತ್ತಿಲ್ಲದ ಸಮಸ್ಯೆ. ಅದಕ್ಕೆ ಯಾರು ಜವಾಬ್ದಾರರು.

ಪ್ರಶ್ನೆ:- ಇಲ್ಲಿರುವ ಮುಖ್ಯವಾದ ಪ್ರಶ್ನೆ ಎಂದರೆ ಯಾವುದಾದರೂ ಪುರಾತನ ಗ್ರಂಥದಲ್ಲಿ ಕನ್ಯಾಧಾನ ಎಂಬ ಶಬ್ದ ಪ್ರಯೋಗವಿದ್ದರೆ ತಿಳಿಸಿಕೊಡಿ.

ಉತ್ತರ:- ಲಿಪಿಕಾರನಿಗೆ ಬರೆಯುವುದಕ್ಕೇ ಗೊತ್ತಿಲ್ಲದ ಅಜ್ಞಾನವಿದ್ದಂತಹಾ ಕಾಲಘಟ್ಟದಲ್ಲಿ ಅಲ್ಪಪ್ರಾಣ, ಮಹಾಪ್ರಾಣಗಳು ಹೇಗೆ ಗೊತ್ತಾಗುತ್ತದೆ? ಎಷ್ಟೋ ಶಬ್ದಗಳು ಅದೇ ರೀತಿ ಬದಲಾವಣೆ ಆಗಿದೆ.
ಉದಾ:- ವಿಧ್ಯ ಅಥವಾ ವಿಧ್ಯೆ ಮೂಲ ಶಬ್ದ. ಅದು ಬದಲಾವಣೆ ಆಗಿ ವಿದ್ಯೆ ಎಂದಾಗಿದೆ. ಅದನ್ನು ಯಾರು ಒಪ್ಪದಿದ್ದರೂ ಸತ್ಯವು ಸತ್ಯವೇ ಆಗಿರುತ್ತದೆ.

ಉದಾ:- ವೈಧ್ಯವೂ ಮಹಾಪ್ರಾಣವೇ ಆಗಿರುತ್ತದೆ. ಏಕೆಂದರೆ ವೈಧ್ಯರು ಯಾವತ್ತೂ ಅಲ್ಪಪ್ರಾಣರಲ್ಲ. ಅವರು ಮಹಾಪ್ರಾಣರೇ. ಹಿತಾಸಕ್ತಿಗಳು ಅವರನ್ನು ಅಲ್ಪಪ್ರಾಣರನ್ನಾಗಿ ಮಾಡಿಹಾಕಿವೆ. ಅದಕ್ಕೇನು ಮಾಡಲಾಗುತ್ತದೆ ಹೇಳಿ? ವೈಧ್ಯೋ ನಾರಾಯಣೋ ಹರಿಃ ಎನ್ನುತ್ತದೆ ಆರ್ಷ ಗ್ರಂಥಗಳು. ಅಷ್ಟು ಎತ್ತರ ಸ್ಥಾನ ಕೊಟ್ಟಿದೆ. ಕಡೆಗೆ ಪುರೋಹಿತಶಾಹಿಯು ವೈಧ್ಯರಿಗೆ ಎತ್ತರ ಸ್ಥಾನ ಕೊಟ್ಟರೆ ತಮ್ಮ ಸ್ಥಾನ ಕೆಳಗಿರುತ್ತದೆ ಎಂದು ವೈಧ್ಯರನ್ನು ವೈದ್ಯರನ್ನಾಗಿಸಿ ಕೆಳಗಿಳಿಸಿ ಇವರು ಮೇಲೆ ಬಂದರು. ಅದಕ್ಕೆ ಯಾರು ಜವಾಬ್ದಾರಿ? ಒಂದು ಖಾಯಿಲೆ ಬಂದಾಗಲೇ ಒಬ್ಬ ಮನುಷ್ಯನನ್ನು ಪರಿಷ್ಕಾರ, ಸಂಸ್ಕಾರ ಮಾಡಲಾಗುವುದು. ಎಂತಹಾ ಕೆಟ್ಟವನೂ ರೋಗಿಯಾಗಿ ಗುಣವಾದಾಗ ದಾನ-ಧರ್ಮ ಮಾಡುವ ಬುದ್ಧಿ ಬರುತ್ತದೆ. ಹಾಗಾಗಿ ಪರಿವರ್ತನೆ ಮಾಡುವ ಶಕ್ತಿ ವೈಧ್ಯನಿಗೇ ಹೆಚ್ಚು. ಒಂದು ವರ್ಷ ಒಬ್ಬ ಪುರಾಣಿಕನು ಪುರಾಣ ಹೇಳಿದರೂ ಬದಲಾವಣೆಯಾಗದ ವ್ಯಕ್ತಿಯೂ ರೋಗ ಬಂದೊಡನೆ ವೈಧ್ಯನಲ್ಲಿಗೆ ಹೋದಾಗ ಅವನ ದುರ್ಗುಣಗಳಿಗೂ ಕ್ಷಣ ಮಾತ್ರದಲ್ಲಿ ಚಿಕಿತ್ಸೆ ಕೊಟ್ಟು ಗುಣಪಡಿಸಲು ವೈಧ್ಯ ಸಮರ್ಥ. ಪುರೋಹಿತನು ಸಾವಿರ ಶಾಂತಿ ಸಂಸ್ಕಾರಗಳನ್ನು ಮಾಡಬಹುದು. ಆದರೆ ಮನಸ್ಸನ್ನು ಪರಿವರ್ತನೆ ಮಾಡಲಾಗುವುದಿಲ್ಲ. ವೈಧ್ಯ ಮಾತ್ರ ರೋಗಿಗೆ ನೀನು ಹೀಗೆ ಬದುಕಿದರೆ ಮಾತ್ರ ನೀನು ಜೀವಂತ ಇರಲು ಸಾಧ್ಯ ಎಂದು ಹೇಳಿದರೆ ಸಾಕು ಆತನು ತನ್ನ ಜೀವನ ಶೈಲಿಯನ್ನೇ ಬದಲಾವಣೆ ಮಾಡಿಕೊಳ್ಳುತ್ತಾನೆ. ಎಂತಹಾ ಪಾಪಿಷ್ಠನೂ ಕ್ರೂರಿಯೂ ಆಗಿದ್ದವನನ್ನು ಬದಲಾಯಿಸುವ ಶಕ್ತಿ ಇರುವುದು ವೈಧ್ಯ ವೃತ್ತಿಗೆ ಮತ್ರ! ಆದ್ದರಿಂದ ವೈಧ್ಯ ಮಹಾಪ್ರಾಣ ’ಧ’ ಉಳ್ಳ ಶಬ್ದ. ಎಲ್ಲರಿಗೂ ಖಾಯಿಲೆ ಬಂದೇ ಬರುತ್ತದೆ. ಇನ್ನು ವೈಧ್ಯನು ಯಾರಿಗೂ ಖಾಯಿಲೆ ಉಲ್ಬಣವಾಗುವಂತೆ ಮಾಡಿ ಕೊನೆಗೆ ಉಪಶಮನವನ್ನೂ ಮಾಡಬಲ್ಲ. ಅದು ಬೇರೆ ಯಾರಿಗೂ ಆಗುವುದಿಲ್ಲ. ಹಾಗಾಗಿ "ವ್ಯಾವಹಾರಿಕ ಸತ್ಯಪ್ರಮಾಣವನ್ನು ಆಧರವನ್ನಾಗಿ ತೆಗೆದುಕೊಳ್ಳಬೇಕು" ಎಂದು ಮೀಮಾಂಸ ಹೇಳುತ್ತದೆ. ಈ ರೀತಿ ಕೊಕ್ಕೆ ಇಡುತ್ತಾರೆ ಎಂದೇ ಪುರೋಹಿತಶಾಹಿಯು ಮೀಮಾಂಸಕರನ್ನು ಪ್ರತ್ಯೇಕವಾಗಿ ಇಟ್ಟಿತು.

ಪ್ರಶ್ನೆ:- ಆದರೆ ಇವೆಲ್ಲ ಕನ್ಯಾಧಾನ ಎಂಬ ಶಬ್ದಕ್ಕೆ ಗ್ರಂಥಾಧಾರ ಆಗುವುದಿಲ್ಲ.


ಉತ್ತರ:- ಅದು ಮುಗಿಯದ ಚರ್ಚೆ. ಏಕೆಂದರೆ ಮುಗಿಸಿ ಹೋದವರು ಯಾರು ಈ ರೀತಿಯಾಯಿತು, ಹೀಗೆ ನಿರ್ಣಯ ಬಂದಿತು ಎಂದು ಬರೆದಿಟ್ಟಿಲ್ಲ. ಅದು ಅವರವರ ಪ್ರತಿಷ್ಠೆ. ಹಾಗಾಗಿ ಆಧಾರ ಸಿಕ್ಕುವುದಿಲ್ಲ.

      ಮಹಾಸಂಕಲ್ಪವು ಪುರಾಣ ಭಾಗವಲ್ಲ. ಯಾವುದೋ ಒಂದು ಪ್ರಕ್ರಿಯೆಗಾಗಿ ಸಂಕಲ್ಪಪೂರ್ವಕ ಮಾಡಬೇಕು ಎಂದಾಗ ಇನ್ನೆಲ್ಲಿಂದಲೂ ಈ ಮಹಾಸಂಕಲ್ಪವನ್ನು ಸೇರಿಸಿರುತ್ತಾರೆಯಷ್ಟೆ. ಮತ್ಸ್ಯಾವತಾರವನ್ನು ವಿವರಿಸಲು ಮತ್ಸ್ಯ ಪುರಾಣ ಹುಟ್ಟಿತು. ಆದರೆ ಅದರ ಜೊತೆಗೆ ಇನ್ನೂ ಕೆಲವು ವಿಚಾರಗಳು ಜನರಿಗೆ ತಿಳಿದಿರಲಿ ಎಂದು ಸೇರಿಸಿರುತ್ತಾರೆಯೇ ಹೊರತು ಅದು ಪುರಾಣದ ವಿಚಾರ ಎಂದಾಗುವುದಿಲ್ಲ. ಮಹಾಸಂಕಲ್ಪ ಎನ್ನುವುದು ಒಂದು ಅಭಿಜ್ಞ್ಯಾವಾಕ್ಯವೇ ಹೊರತು ಪುರಾಣದ ಘಟನೆಯಲ್ಲ.
       
       ಮಹಾಭಾರತದಲ್ಲಿ ಧರ್ಮರಾಯನು ಒಂದು ಪಾತ್ರ. ಅಲ್ಲಿ ಯಕ್ಷನ ಪ್ರವೇಶವಾಯಿತು. ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗಿತ್ತು. ಅವು ನೀತಿ ವಾಕ್ಯಗಳೇ ಹೊರತು ಐತಿಹಾಸಿಕ ವಿಚಾರಗಳಲ್ಲ. ಉತ್ತರ ಬಂದಿತು ಎಂದರೆ ಸಾಕು. ಏನು ಪ್ರಶ್ನೆ ಕೇಳಿದ, ಏನು ಉತ್ತರ ಕೊಟ್ಟನೆಂದು ಹೇಳುವುದು ಮಹಾಭಾರತಕ್ಕೆ ಪ್ರಸ್ತುತವಲ್ಲ. ಆದರೂ ಅದರಲ್ಲಿ ದಾಖಲಿಸಿದ್ದಾರೆ. ಅದು ಧರ್ಮರಾಯನ ಯಾವುದೇ ಇತರೆ ಘಟನೆಗಳಿಗೆ ಸಂಬಂಧಪಡುವುದಿಲ್ಲ.
      
        ಹಾಗೇ ಇಲ್ಲಿ ಮಹಾಸಂಕಲ್ಪ ಹೇಳುವಂತಹಾ ಪ್ರಮೇಯ ಏನು ಬಂದಿತು? ಯಾಕೆ ಬಂದಿತು? ತೀರ್ಥ ಸ್ನಾನಕ್ಕೋ ಇನ್ಯಾವುದಕ್ಕೋ ಹೋದಾಗ ಮಹಾಸಂಕಲ್ಪ ಮಾಡಿ ಎಂದು ಹೇಳಿರಬಹುದು. ಹಾಗಾದರೆ ಮಹಾಸಂಕಲ್ಪದ ಪ್ರಸ್ತುತಿ ಏನು ಎಂದು ಅಲ್ಲೇ ಗ್ರಂಥ ತೆಗೆದು ನೋಡಿ ಮನದಟ್ಟು ಮಾಡಿಕೊಳ್ಳಿ. ಎಷ್ಟೋ ಅಂತಹಾ ಅಭಿಜ್ಞ್ಯಾ ವಾಕ್ಯಗಳನ್ನು ಸಮಾಜಕ್ಕೆ ತಿಳಿದಿರಲಿ ಎಂದು ಸೇರಿಸಿರುತ್ತಾರೆ. ಅಂದರೆ ಜನರಲ್ಲಿ ಅದರ ಪ್ರವರ್ತನೆ ಹೊರಡಲಿ ಎಂಬ ಉದ್ದೇಶದಿಂದ ಮಾತ್ರ ಸೇರಿಸಿದ್ದು. ಪುರಾಣಕ್ಕೆ ಸಂಬಂಧಪಟ್ಟದ್ದಲ್ಲ. ಮಹಾಭಾರತ ಯುದ್ಧ ಮುಗಿಯುತ್ತದೆ ಅಷ್ಟೊತ್ತಿಗೆ ಧರ್ಮರಾಯನು ಶರಶಯ್ಯೆಯಲ್ಲಿರುವ ಭೀಷ್ಮನ ಹತ್ತಿರ ಹೋಗುತ್ತಾನೆ. ಅದು ವಿಷಯ ಹೇಳುವುದಕ್ಕಾಗಿ. ಆದರೆ ಮುಂದೆ ಭೀಷ್ಮ ನೀತಿಯು ಮಹಾಭಾರತ ಗ್ರಂಥದಲ್ಲಿ ಸೇರಿಸಲ್ಪಡುತ್ತದೆ. ಹಾಗಂತ ಭೀಷ್ಮನೀತಿ ಕೇಳಿದ್ದರಿಂದ ಧರ್ಮರಾಯನಲ್ಲಿ ಯಾವುದೋ ಪರಿವರ್ತನೆಗಳಾಯಿತು ಎಂದು ಹೇಳಲಿಲ್ಲ. ಧರ್ಮರಾಯನಿಗೆ ಅವೆಲ್ಲ ಮೊದಲೇ ಗೊತ್ತಿತ್ತು.

ಪ್ರಶ್ನೆ:- ಸೂತ್ರ ಗ್ರಂಥಗಳಲ್ಲಿ ಕನ್ಯಾಧಾನ ಎಂಬ ಶಬ್ದ ಬಳಸಲ್ಪಟ್ಟಿಲ್ಲ ಮತ್ತು ಅದು ಮೀಮಾಂಸಕರ ವಾದವಷ್ಟೇ ಎಂದು ತಿಳಿದುಕೊಳ್ಳಬೇಕೇ?


ಉತ್ತರ:- ಮೀಮಾಂಸಕರಿರುವುದೇ ಎಲ್ಲೆಲ್ಲಿ ತಪ್ಪುಗಳಾಗುತ್ತವೆಯೋ ಅದನ್ನು ಎತ್ತಿ ತೋರಿಸಿ ಸರಿಪಡಿಸಿಕೊಳ್ಳುವ ಅವಕಾಶ ಮಾಡಿಕೊಡಲು. ತಾನು ತಪ್ಪು ಮಾಡಿ ಮೀಮಾಂಸಕರಿಂದ ಪೆಟ್ಟು ತಿಂದುಕೊಂಡು ಬಂದೆನು ಎಂದು ಯಾವ ಸೂತ್ರಕಾರನೂ ಬರೆದಿಡುವುದಿಲ್ಲ. ಬದಲಾವಣೆ ಮಾಡಿಕೊಂಡದ್ದನ್ನು ಬರೆಯುವುದಿಲ್ಲ. ಇಂತಹವರಿಂದ ತಪ್ಪು ತೋರಿಸಲ್ಪಟ್ಟಿತು, ಅದನ್ನು ನಾನು ತಿದ್ದಿಕೊಂಡೆ ಎಂದು ಸೂತ್ರಕಾರರು ಬರೆದಿಡುವುದಿಲ್ಲ. ಸುಮ್ಮನೆ ಮುಂದಿನ ಭಾಗವನ್ನು ಮಾತ್ರ ಬರೆಯುತ್ತಾರೆ.

        ಆಶ್ವಲಾಯನರು, ಗೋಬಿಲರು, ಆಪಸ್ತಂಭರು, ಸಾಂಖ್ಯಾಯನರು ಇತ್ಯಾದಿ ಸೂತ್ರಕಾರರು - "ಹೆಣ್ಣು ಪರಿಪೂರ್ಣ ಸಮಾನಳು, ಆಧಾನಯುಕ್ತವಾದಂತಹಾ ಕ್ರಿಯೆಗಳಲ್ಲಿ ಭಾಗಿಯಾಗುವವಳು" ಎಂದು ಸ್ಪಷ್ಟಪಡಿಸಿದ್ದಾರೆ. ಕನ್ಯಾಧಾನ ಎಂಬ ಶಬ್ದ ಹೇಳದೇ ಇರಬಹುದು. ಆದರೆ ಆಧಾನಯುಕ್ತವಾದಂತಹಾ ಎಲ್ಲಾ ಕಾರ್ಯಗಳಲ್ಲಿ ಅವಳು ಭಾಗಿಯಾಗುವವಳು ಎಂದು ಹೆಚ್ಚಿನ ಎಲ್ಲಾ ಸೂತ್ರಕಾರರೂ ಹೇಳಿದ್ದಾರೆ. ಅವರಿಗೆಲ್ಲ ಕನ್ಯಾದಾನ ಎಂಬ ವಿರೋಧಾತ್ಮಕ ಶಬ್ದವು ಮುಂದೆ ಹುಟ್ಟುತ್ತದೆ ಎಂದು ಕಲ್ಪನೆಯೇ ಇರಲಿಲ್ಲ. ಹಾಗಿದ್ದಾಗ ಪ್ರತ್ಯೇಕವಾಗಿ ಕನ್ಯಾ ಆಧಾನವೆಂಬ ಶಬ್ದವನ್ನು ಬಳಸುವ ಅಗತ್ಯತೆ ಅವರಿಗೇನು ಬರುತ್ತದೆ? ಇದು ಈಗಿನ ಕೆಲ ವಿದ್ವಾಂಸರಿಗೆ ಬಂದ ಸಮಸ್ಯೆಯಷ್ಟೆ. ಅಲ್ಲಿ ಆಧಾನ ಎಂದು ಹೇಳಿರುವುದರಿಂದ ದಾನ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಹಾಗಾಗಿ ಅದನ್ನು ಹೇಳಬೇಕಾದ್ದಿಲ್ಲ. 

ಸೂತ್ರಕಾರರ ಕಾಲದಲ್ಲಿ ಕನ್ಯಾದಾನವೇ ಇಲ್ಲದಿದ್ದಾಗ ಅವರುಗಳು ಹೇಗೆ ತಾನೇ ಇಲ್ಲದ ಪ್ರಕ್ರಿಯೆಗೆ ಸ್ಪಷ್ಟೇಕರಣ ನೀಡಲು ಸಾಧ್ಯ. ಸ್ಪಷ್ಟವಾಗಿ ಆಧಾನಯುಕ್ತವಾದ ಕ್ರಿಯೆಗಳು ಎಂದಿದ್ದಾಗ ಪ್ರಪ್ರತ್ಯೇಕಿಸಿ ಪುನರುಕ್ತಿ ಮಾಡುವುದಿಲ್ಲ. ಅವರಿಗೆ ಗ್ರಂಥದ ಪುಟ ವಿಸ್ತರಿಸಿ ಹಣ ಮಾಡುವ ಉದ್ದೇಶವಿರಲಿಲ್ಲ. 

ಈ ಕನ್ಯಾದಾನ ಎಂಬ ಪ್ರಸಕ್ತ ಆಚರಣೆಯನ್ನು ಹಿಂದೆಲ್ಲ ಎಷ್ಟೆಷ್ಟೋ ಗೋಷ್ಠಿ, ಚರ್ಚೆಗಳಲ್ಲಿ "ದಾನಾರ್ಹ" ಯಾವುದು ಎಂಬ ಜಿಜ್ಞಾಸೆ ಬಂದಾಗಲೆಲ್ಲ ಇದರ ಬಗ್ಗೆ ಚರ್ಚೆ ಆಗಿ ಅದು ತಪ್ಪು ಎಂದು ತೀರ್ಮಾನ ಆಗಿದೆ. ಆದರೆ ತೀರ್ಮಾನ ಆದ ನಂತರೂ ತಪ್ಪು ಮಾಡಿದವರು ತಾವು ತಪ್ಪು ಮಾಡಿದ್ದೇವೆಂದು ಒಪ್ಪಿಕೊಂಡಿಲ್ಲ. ಅದಕ್ಕೆ ಯಾರು ಜವಾಬ್ದಾರರು? 

ಸೂತ್ರಕಾರರು ಯಾರೂ ತಪ್ಪು ಮಾಡಿಲ್ಲ, ಸರಿಯಾಗಿಯೇ ಬರೆದಿದ್ದಾರೆ. ಆದ್ರೆ ಸೂತ್ರ ಭಾಷ್ಯಕಾರರು ಮಾತ್ರ ತಪ್ಪು ಮಾಡಿದ್ದಾರೆ. ಮತ್ತೆ ನೀವೇಕೆ ಸೂತ್ರಕಾರರು ಹೀಗೇ ಬರೆಯಬೇಕಿತ್ತು ಎನ್ನುತ್ತೀರ? ಸೂತ್ರಕಾರರು ಪ್ರಾಜಾಪತ್ಯ ಸೂತ್ರವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ. ನೀವು ಹೀಗೇ ಏಕೆ ಬರೆದಿಲ್ಲ ಎಂದು ಸೂತ್ರಕಾರರನ್ನು ಕೇಳುವುದು ಹಾಸ್ಯಾಸ್ಪದ.

ಒಂದು ದಾನ ಪಡೆದ ವಸ್ತುವಿನ ಅನುಮೋದನೆ ಪಡೆದೇ ನೀವು ಇನ್ನೊಂದು ವಸ್ತುವನ್ನು ದಾನ ಮಾಡುತ್ತೇವೆ ಎಂದರೆ ಅದಕ್ಕೆ ಧರ್ಮಶಾಸ್ತ್ರವು ಒಪ್ಪುತ್ತದೆಯೇ? ಅಕಸ್ಮಾತ್ ಒಪ್ಪಿದರೆ ಅದನ್ನು ಧರ್ಮಶಾಸ್ತ್ರ ಎಂದು ಹೇಳಲಾಗುತ್ತದೆಯೇ? ಒಂದು ಮುಷ್ಟಿ ಉಪ್ಪು ದಾನ ಮಾಡಬೇಕಾದರೂ ಹೆಂಡತಿಯು ಗಂಡನ ಕೈಗೆ ಒಂದು ಉದ್ಧರಣೆ ನೀರು ಹಾಕಬೇಕು. ಇಲ್ಲದಿದ್ದರೆ ದಾನ ಮಾಡಲು ಅರ್ಹತೆ ಬರುವುದಿಲ್ಲ ಎನ್ನುತ್ತದೆ. ನೀವು ಹೇಳುವ ಪ್ರಕಾರ ವಿವಾಹದಲ್ಲಿ ಕನ್ಯೆಯು ದಾನದ ಮೂಲಕ ಪಡೆದವಳಾಗಿದ್ದರೆ, ನಂತರ ಇತರೆ ದಾನಾದಿಗಳನ್ನು ಮಾಡುವಾಗ ಅವಳ ಅನುಮೋದನೆ ಪಡೆದು ಮಾಡುವುದೆಂತಹಾ ದಾನವದು? ಇದು ಮೀಮಾಂಸ ವಾದವಲ್ಲ, ಸಂಪ್ರದಾಯ ವಿರುದ್ಧ ಎಂದು ಥಟ್ಟನೆ ಹೇಳುತ್ತಾರೆ.  

ಇನ್ನು ಪರಪಕ್ಷದಲ್ಲಿರುವ ವಿದ್ವಾಂಸರಿಗೆ ಯಾಕೆ ಆಧಾರ ಕೊಡಬೇಕು? ಎಂಬ ಪ್ರಶ್ನೆ ಮೀಮಾಂಸಕರಿಗೆ ಬರುತ್ತದೆ. ವ್ಯಾಸರು ಕೇಳಿದರೂ ಆಧಾರ ಕೊಡುವುದಿಲ್ಲ. ವ್ಯಾಸರಿಗೂ ಅವರದ್ದೇ ಆದ ಮಿತಿಗಳಿವೆ, ಅದರಂತೆ ಅವರು ವ್ಯವಹರಿಸಬೇಕು. ಇಲ್ಲಿ ಸಮಸ್ಯೆ ಹುಟ್ಟಿರುವುದು ಮೀಮಾಂಸಕರಿಗಲ್ಲ, ಸಂಪ್ರದಾಯ ಶರಣರಿಗೆ. ಮೊದಲು ಮೀಮಾಂಸಕರ ಈ ಪ್ರಶ್ನೆಗೆ ಉತ್ತರ ಕೊಡಿ. ನೀವು ಒಂದು ಸೇರು ಅಕ್ಕಿಯನ್ನು ದಾನ ಪಡೆದು ತರುತ್ತೀರಾ, ನಂತರ ಆ ಅಕ್ಕಿಯ ಅನುಮತಿಯನ್ನು ಕೇಳಿ ಅದನ್ನು ಇನ್ನೊಬ್ಬರಿಗೆ ಕೊಡುತ್ತೀರೋ? ಯಾರೋ ಭಿಕ್ಷುಕ ಹಸಿದು ಬರುತ್ತಾನೆ, ಅವನಿಗೆ ಅದರಿಂದ ಮಾಡಿದ ಅನ್ನವನ್ನೇ ಬಡಿಸುವುದಿಲ್ಲವೇ? ಅಲ್ಲೇನು ದಾನ ಪಡೆದ ಅಕ್ಕಿಯನ್ನು ಕೇಳಿ ಭಿಕ್ಷುಕನಿಗೋ ಇನ್ಯಾರೋ ರ್ಥನಿಗೋ ದಾನ ಕೊಡುತ್ತೀರಾ? ಇಲ್ಲ ತಾನೇ? ಹಾಗೇ ನಿಮ್ಮ ಪ್ರಕಾರ ದಾನ ಪಡೆದು ತಂದಂತಹಾ ಹೆಂಡತಿಯನ್ನು ಬೇರೆ ಯಾರಿಗೋ ಯಾವುದೋ ವಸ್ತುವನ್ನು ದಾನ ಮಾಡಬೇಕಾದರೆ ಅವಳನ್ನು ಕೇಳಿ ಕೊಡಬೇಕು ಎಂಬುದು ಯಾವ ಧರ್ಮ? ಅದು ದಾನವೇ? ಅಲ್ಲವೇ? ಇದಕ್ಕೆಲ್ಲ ಮೊದಲು ಉತ್ತರ ಕೊಡಿ, ನಂತರ ನಮ್ಮ ಉತ್ತರವಿದೆ.

ಪುರಾಣಗಳಲ್ಲಿ ಒಂದೆರಡಲ್ಲ, ಇದಕ್ಕೆ ಇನ್ನೂ ಬೇಕಾದಷ್ಟು ಉದಾಹರಣೆಗಳಿವೆ. ರುಕ್ಮಾಂಗಧನು ತನ್ನ ದೇಹದ ಅರ್ಧ ಭಾಗವನ್ನೇ ಸಿಂಹಕ್ಕೆ ದಾನ ಮಾಡುತ್ತಾನೆ. ಆಗ ಸಿಂಹ ಹಾಕಿದ ನಿಯಮಗಳೆಂದರೆ ನಿನ್ನ ಹೆಂಡತಿ ಮಗ ಇಬ್ಬರೂ ಸೇರಿ ದೇಹವನ್ನು ಸೀಳಿ ಅರ್ಧ ಭಾಗ ಮಾಡಿ ತನಗೆ ಕೊಡಬೇಕು ಎಂದಿತು. ಅಲ್ಲಿ ಎಷ್ಟು ಧರ್ಮಶಾಸ್ತ್ರ ಚಿಂತನೆಯಾಗಿದೆ ಗೊತ್ತೇ? ಅಂದರೆ ಅಲ್ಲಿ ಸತ್ತ ಮೇಲೆ ತನ್ನ ದೇಹದ ಮೇಲೆ ತನಗೇ ಅಧಿಕಾರವಿರುವುದಿಲ್ಲ. ಶವದ ಮೇಲೆ ಮಗನಿಗೇ (ಮಗಳಿಗೇ) ಅಧಿಕಾರವಿರುವುದು. ಹಾಗಾದರೆ ಯಾರ ಮೇಲೆ ಯಾರಿಗೆ ಅಧಿಕಾರ? ಇದು ಮೀಮಾಂಸದ ವಿಚಾರವಲ್ಲ, ಪುರಾಣದ ವಿಚಾರ. ಈ ಪುರಾಣದ ವಿಚಾರಗಳು ನಿಮಗೆ ಪಥ್ಯವಾಗದಿದ್ದರೆ ಮೊದಲು ಅವನ್ನೆಲ್ಲ ತೆಗೆದು ಬಿಸಾಡಿ, ಆಮೇಲೆ ಅದಕ್ಕೆ ಬೇಕಾದ ಆಧಾರ ಕೊಡುತ್ತೇವೆ. ನಿಮಗೆ ನಿಮ್ಮ ಪುರಾಣಗಳು ಶ್ರೇಷ್ಠವಾಗಿದ್ದಾಗ ಅದರಲ್ಲಿ ಹುಡುಕಿ ಉತ್ತರ ಕೊಡಿ. ರುಕ್ಮಾಂಗಧ ಪ್ರಕರಣದಲ್ಲಿ ಆತನು ಸತ್ತ ಮೇಲೆ ಹೆಂಡತಿ ಅಥವಾ ಮಗ(ಳಿ)ನಿಗೇ ಅವನ ದೇಹದ ಮೇಲೆ ಅಧಿಕಾರವೇ ಹೊರತು ಆತನ ಆತ್ಮನಿಗೆ ಅಧಿಕಾರವಿರುವುದಿಲ್ಲ. ಈಗೆಲ್ಲ ತಾವು ಬದುಕಿದ್ದಾಗ ತಾವೇ ಬರೆದು ಕೊಟ್ಟು ದೇಹದಾನ ಎಂದು ಮಾಡುತ್ತಾರಲ್ಲವೇ, ಅದಕ್ಕೆಲ್ಲ ಧರ್ಮಶಾಸ್ತ್ರದಲ್ಲಿ ಅವಕಾಶವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಶವವು ಹೆಂಡತಿಯದ್ದೋ ಅಥವಾ ಮಗನದ್ದೋ ಹಕ್ಕೇ ಹೊರತು ಆತ್ಮನದ್ದಲ್ಲ! ಹಾಗಾಗಿ ಬದುಕಿರುವಾಗ ದೇಹದಾನ ಮಾಡಲು ಸಾಧ್ಯವಿಲ್ಲ. ಈಗಲೂ ದಾನವಾಗಿ ಬರೆಯಲ್ಪಟ್ಟ ಶವವನ್ನು ಅವರ ಮನೆಯವರ ಸಹಿಯನ್ನು ಪಡೆದೇ ತೆಗೆದುಕೊಂಡು ಹೋಗಬೇಕು ಎಂಬ ಕಾನೂನಿದೆ. ಅಂದರೆ ಸಂವಿಧಾನವು ಕೂಡ ಧರ್ಮಶಾಸ್ತ್ರದ ಆಧಾರದಲ್ಲಿಯೇ ರಚನೆಯಾಗಿದೆ. ಆದರೆ ಭಾರತೀಯ ಪ್ರಜೆಗೆ ಸಂವಿಧಾನವೇ ಗೊತ್ತಿಲ್ಲ.

ಶ್ಲೋಕಗಳಲ್ಲಿ ತಂದೆಯು "ಕನ್ಯಾಂ ಪ್ರತಿಗೃಹ್ಣಾತು" ಈ ಕನ್ಯೆಯನ್ನು ಸ್ವೀಕರಿಸು ಎಂದೊಡನೆ "ಕನ್ಯಾಂ ಪ್ರತಿಗೃಹ್ಣಾಮಿ" ಅಂದರೆ ಕನ್ಯೆಯನ್ನು ಸ್ವೀಕರಿಸುತ್ತೇನೆ ಎಂದು ವರನು ಹೇಳುವ ಪ್ರಕ್ರಿಯೆ ಇದೆ. ಅಲ್ಲಿ ಪಡೆಯುತ್ತೇನೆ ಎಂದು ಅರ್ಥವಲ್ಲ. ಸ್ವೀಕರಿಸುವುದು ಬೇರೆ, ಪಡೆಯುವುದು ಬೇರೆ. ಎರಡೂ ಸಮಾನಾರ್ಥಕ ಶಬ್ದಗಳಲ್ಲ. ದಾನವನ್ನು ಪಡೆಯುವುದು, ಆಧಾನದ ಮುಖೇನ ಸ್ವೀಕರಿಸುವುದು. ಹಾಗೇ ಪ್ರಯೋಗದಲ್ಲಿ "ದಾಸ್ಯಾಮಿ" ಎಂದು ನಿನ್ನಲ್ಲಿ ಇಡಲ್ಪಡುತ್ತದೆ ಎಂಬ ಆಧಾನ ಪ್ರಧಾನವಾದ ಸಂಕೇತವಿದೆಯೇ ಹೊರತು ಹೊರತು "ದಧಾಮಿ" ಎಂಬ ದಾನ ಪ್ರಧಾನವಾದ ಶಬ್ದವಿಲ್ಲ. ಇನ್ನು ಯಾರ್ಯಾರೋ ತಮ್ಮ ಗ್ರಂಥಗಳಲ್ಲಿ ಅದನ್ನು ಬರೆದುಕೊಂಡಿದ್ದರೆ ಪ್ರಕ್ಷಿಪ್ತವಷ್ಟೆ; ಧರ್ಮಶಾಸ್ತ್ರವಲ್ಲ!

ಹಾಗೇ ಕನ್ಯಾ ಆಧಾನ ಪ್ರಕ್ರಿಯೆಯಲ್ಲಿ "ಧತ್ತಂ" ಎಂದು ನಿಲ್ಲಿಸಲ್ಪಡುತ್ತದೆ. ಕೊನೆಗೆ ವರಹ ಸ್ವರೂಪೀ ಗೋಪ್ರತಿಮೆ, ಫಲ,  ಲಕ್ಷ್ಮೀನಾರಾಯಣ ಜೊತೆಗೆ ದಕ್ಷಿಣೆ ಇಟ್ಟು ಕೊಟ್ಟಾಗ "ಇದಂ ನಮಮ" ಎಂದು ಒಂದಾವರ್ತಿ ಮಾತ್ರ ಹೇಳುತ್ತಾರೆ. ಅಲ್ಲಿ ಇಡಲ್ಪಡುವ ಒಂದು ವರಹ ದುಡ್ಡೇ ವರಹದಕ್ಷಿಣೆ. ಅದನ್ನು ವರನು ಆಪದ್ಧನ ಎಂದು ಕಾಯ್ದಿರಿಸಿಕೊಂಡಿರಬೇಕೆಂದು ಗೋಬಿಲ ಸೂತ್ರದಲ್ಲಿ ಹೇಳುತ್ತಾರೆ. ಅದನ್ನು ಕಾಯ್ದಿರಿಸಿಕೊಳ್ಳುವುದು ಕಷ್ಟ ಎಂದಾದಾಗ ಕೆಲವಾರು ಅನುಕೂಲ ಸಿಂಧು ಶಾಸ್ತ್ರ ಮಾಡಿಕೊಂಡರು. ಅದು ಕೊನೆಗೆ ವರದಕ್ಷಿಣೆಯಾಗಿ, ಸಾಮಾಜಿಕ ಪಿಡುಕಾಗಿ, ಅದಕ್ಕೆ ಕಾನೂನು ಬಂದಿತು.

ದಾನ ಯೋಗ್ಯ ವಸ್ತುಗಳನ್ನು ಹೇಳುವಾಗ ಹೆಣ್ಣನ್ನು ಹೇಳಲೇ ಇಲ್ಲ. ಕೆಲಕೆಲವರು ಸಂಸ್ಕೃತ ಬರುತ್ತದೆ ಎಂದು ಸೇರಿಸಿಕೊಂಡರೆ ಅದಕ್ಕೆಲ್ಲ ಧರ್ಮಶಾಸ್ತ್ರದ ಒಪ್ಪಿಗೆ ಇರುವುದಿಲ್ಲ. ದ್ವಾಪರಾ ಯುಗದ ಕೊನೆಗೆ ಈ ವಿಚಾರದ ಚಿಂತನೆಗಳು ಹೆಚ್ಚಾಗುತ್ತಾ ಹೋಯಿತು. ಆಗ ಕೃಷ್ಣನು ಪ್ರಾಜಾಪತ್ಯ ವಿವಾಹವೂ ಕೂಡ ಕೆಲವೊಂದು ವಚನ ಭಂಗ ದೋಷಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾನೆ. ಹಾಗಾಗಿ ರುಕ್ಮಿಣಿ, ಸತ್ಯಭಾಮಾ, ಜಾಂಭವತೀ, ಕಾಳಿಂದೀ, ಮಿತ್ರವಿಂದಾ, ನಗ್ನಜಿತೀ, ಭದ್ರಾ (ಮಾದ್ರೀ/ರೋಹಿಣೀ) ಮತ್ತು ಲಕ್ಷ್ಮಣಾ ಎಂಬ ಅಷ್ಟಮಹಿಷಿಯರನ್ನೂ ರಾಕ್ಷಸ ವಿವಾಹ ಪದ್ಧತಿಯಲ್ಲೇ ವಿವಾಹವಾಗುತ್ತಾನೆ.  ಏಕೆಂದರೆ ಪ್ರಾಜಾಪತ್ಯ ವಿವಾಹದಲ್ಲೂ ಒಂದಿಷ್ಟು ವಚನ ಭಂಗ ದೋಷ ಬರುತ್ತದೆ ಎಂದೇ ರಾಕ್ಷಸ ವಿವಾಹ ಪದ್ಧತಿಯಲ್ಲಿ ವಿವಾಹವಾಗುತ್ತಾನೆ. ಎಲ್ಲಾ ಹೊತ್ತುಕೊಂಡು ಹೋಗಿಯೇ ವಿವಾಹವಾದದ್ದು. ಹಾಗಾಗಿ ಕೃಷ್ಣನನ್ನು ಪೂರ್ಣಾವತಾರ ಎಂದು ಹೇಳಿದ್ದು. ಏಕೆಂದರೆ ಪ್ರತಿಯೊಂದು ನಡೆಯಲ್ಲೂ ಶಾಸ್ತ್ರಬದ್ಧವಾಗಿಯೇ ಆಚರಿಸಿ ನಮಗೆ ಪಾಠ ಮಾಡಿದ್ದಾನೆ. ವ್ಯಾಖ್ಯಾನಕಾರರು ಮಾತ್ರ ಕೃಷ್ಣನ ನಡೆಯನ್ನು ತಮ್ಮ ಮೂಗಿನ ನೇರಕ್ಕೆ ಚಿಂತಿಸಿಟ್ಟಿದ್ದಾರೆ. ಹಾಗಾದರೆ ರಾಕ್ಷಸ ವಿವಾಹವೇ ಕೆಟ್ಟದ್ದು ಎಂದು ಬಿಂಬಿಸಲ್ಪಟ್ಟಿರುವ ಆಧುನಿಕ ಗ್ರಂಥಕಾರರು ಕೃಷ್ಣನನ್ನು ದೂಷಿಸುತ್ತಾರಾ? ಅವರಿಗೆ ಮೊದಲಿಗೆ ರಾಕ್ಷಸ ವಿವಾಹ ಎಂದರೇನೆಂದೇ ಗೊತ್ತಿಲ್ಲ.

ರಾಕ್ಷಸ ವಿವಾಹ ಪದ್ಧತಿಯಲ್ಲಿ ದಾನ-ಪ್ರತಿಗ್ರಹದ ಪ್ರಶ್ನೆಯೇ ಇಲ್ಲ. ಅದೂ ಒಂದು ಆರ್ಷೇಯ ವಿವಾಹ ಪದ್ಧತಿ. ಅಲ್ಲಿ ವಧುವಿನ ತಂದೆಯ ಒಪ್ಪಿಗೆ ಮಾತ್ರ ಬೇಕಿಲ್ಲ ಎಂದು ಹೇಳಿದೆಯಷ್ಟೆ. ಉಳಿದದ್ದೆಲ್ಲ ಧರ್ಮಬದ್ಧವಾಗಿಯೇ ನಡೆಯುತ್ತದೆ. ನಂತರ ಹುಟ್ಟಿದ ಕಲ್ಪನೆಗಳಲ್ಲಿ ರಾಕ್ಷಸೀ ಪ್ರವೃತ್ತಿ ಎಂಬಂತೆ ಬಿಂಬಿಸಿದ್ದಾರೆಯಷ್ಟೆ. ಅಲ್ಲಿ ಯಾರನ್ನೂ ಕೊಲ್ಲುವ ಪ್ರಶ್ನೆ ಇಲ್ಲ. ಕೃಷ್ಣ-ರುಕ್ಮಿಣಿ ಪ್ರಕರಣದಲ್ಲಿ ಯುದ್ಧಕ್ಕೆ ಬಂದರೂ ರುಕ್ಮಿಣಿಯ ಅಣ್ಣನನ್ನು ಕೊಲ್ಲುವುದಿಲ್ಲ. ಆ ರಾಕ್ಷಸ ವಿವಾಹ ಪದ್ಧತಿಯಲ್ಲಿ ಹೆಣ್ಣಿಗೆ ಹೇಳುವ ಉದ್ದೇಶ  ವಚನ ಏನೆಂದರೆ - "ನೀನು ಇಲ್ಲಿ ಕೇವಲ ನ್ಯಾಸ ರೂಪದಲ್ಲಾಗಿರುವವಳು, ನಿನ್ನ ತವರು ಮನೆಯೇ ನಿನಗೆ ಭಾಗ್ಯ, ಅದರ ಶ್ರೇಯಸ್ಸನ್ನೇ ಹಾರೈಸುತ್ತಾ ಇರಬೇಕು" ಎಂದು ಹೇಳುತ್ತದೆ. ಹಾಗಾಗಿ ರಾಕ್ಷಸ ವಿವಾಹದಲ್ಲಿ ಎಲ್ಲಿಯೂ ತವರು ಮನೆಯನ್ನು ಬಿಡಿಸಿ ಬಿಡು ಎಂದು ಹೇಳುವುದೇ ಇಲ್ಲ. ಹೊತ್ತುಕೊಂಡು ಬರುವುದೆಂದರೆ ಯುದ್ಧ ಮಾಡಿಯೇ ತರಬೇಕೆಂದಿಲ್ಲ. ಯಾವುದೇ ರೀತಿಯ ಬಲ ಬಳಸಬಹುದು. ಏಕೆಂದರೆ ಅಲ್ಲಿ ಹೆಣ್ಣು ಒಪ್ಪಿಯಾಗಿರುತ್ತದೆ. ಇನ್ಯಾರೂ ಒಪ್ಪಬೇಕಾಗಿಲ್ಲ.

ಈ ೮ ವಿಧದ ವಿವಾಹ ಪದ್ಧತಿಯಲ್ಲೂ ಹೆಣ್ಣಿನ ಒಪ್ಪಿಗೆ ಇರಲೇಬೇಕು. ಕೇವಲ ಶಬ್ದ ಪ್ರಯೋಗವನ್ನು ವ್ಯಾಕರಣ ಗೊತ್ತೆಂದು  ಅರ್ಥ ಮಾಡುವುದಲ್ಲ. ಧರ್ಮಶಾಸ್ತ್ರವೇ ಬೇರೆ.

ಮನುವು ಬ್ರಾಹ್ಮ, ಪ್ರಾಜಾಪತ್ಯ, ಆರ್ಷ, ದೈವ ಶ್ರೇಷ್ಠವು ಅದರಿಂದ ಪಡೆದ ಸಂತಾನವು ಶ್ರೇಷ್ಠವೆಂದು ಹೇಳುತ್ತಾನೆ ಎಂಬ ಶ್ಲೋಕ ಉದಾಹರಿಸುತ್ತಾರೆ. ಆದರೆ ಆರ್ಷೇಯ ವಾದ ಮತ್ತು ಮಧ್ವ ಸಿದ್ಧಾಂತದಲ್ಲಿ ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣ, ವಾಸುದೇವರು ಬ್ರಹ್ಮವರ್ಚಸ್ವಿಗಳು ಎಂದು ಒಪ್ಪಲಾಗಿದೆ. ಕೃಷ್ಣನು ರಾಕ್ಷಸ ವಿವಾಹ ಪದ್ಧತಿಯಲ್ಲಿ ಪಡೆದ ಈ ಮಕ್ಕಳು ಶ್ರೇಷ್ಠವಲ್ಲವೇ? ಇನ್ನು ಪ್ರಾಜಾಪತ್ಯ ವಿವಾಹದಿಂದ ಬ್ರಹ್ಮವರ್ಚಸ್ವಿಗಳಾದ ಶ್ರೇಷ್ಠ ಸಂತಾನ ಪಡೆಯಲಾಗಿದೆ ಎಂದರೆ ಉದಾಹರಣೆ ಕೊಡಿ. ಪರಾಶರರು ಯೋಜನಗಂಧಿಯನ್ನು ಗಾಂಧರ್ವ ವಿವಾಹವಾಗಿ ವೇದವ್ಯಾಸರು ಹುಟ್ಟಿದರು. ಹಾಗಾದರೆ ವೇದವ್ಯಾಸರು ಬ್ರಹ್ಮವರ್ಚಸ್ವಿಗಳಲ್ಲವೇ? ಅವರೇ ಬ್ರಹ್ಮವರ್ಚಸ್ವಿಗಳಲ್ಲವೆಂದಾದರೆ ಇನ್ಯಾರು ಬ್ರಹ್ಮವರ್ಚಸ್ವಿಗಳೆಂದು ಉದಾಹರಣೆ ಕೊಡಿ. ಯಾವ ವಾಕ್ಯವನ್ನು ಸ್ವೀಕರಿಸುತ್ತೀರಾ?
        
 ಆಸುರ, ಗಾಂಧರ್ವ, ರಾಕ್ಷಸ, ಪೈಶಾಚ ವಿವಾಹಗಳಲ್ಲಿ ಪ್ರಕ್ರಿಯೆಯಲ್ಲಿ ವ್ಯತ್ಯಾಸವಿದೆಯೇ ಹೊರತು ಅವು ನೀಚ ಎಂದು ಹೇಳುವುದ ತರವಲ್ಲ. ಅದು ತೀರಾ ಸಂಕುಚಿತವಾದಂತಹಾ ಅಜ್ಞಾನದ ಪರಮಾವಧಿ ಎಂದಾಗುತ್ತದೆ. ವ್ಯಾಖ್ಯಾನಕಾರರಿಗೆ ಶಬ್ದ ಸಾಹಿತ್ಯ ಮಾತ್ರ ಗೊತ್ತೇ ಹೊರತು ಇನ್ನಿತರೆ ಸೂತ್ರಗ್ರಂಥಗಳು, ಧರ್ಮಶಾಸ್ತ್ರಾಧಿಗಳು ಗೊತ್ತಿರುವುದಿಲ್ಲ.

ಆಯಾ ಸ್ಥಳ, ಕಾಲ, ಕಾರಣಕ್ಕೆ ಯಾವುದು ಅಗತ್ಯವೋ ಆ ವಿವಾಹ ಪದ್ಧತಿಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಎಲ್ಲವೂ ಪ್ರಾಜಾಪತ್ಯ ವಿವಾಹ ಪದ್ಧತಿಯಲ್ಲಿ ಮಾಡಲಾಗುವುದಿಲ್ಲ. ಪ್ರಾಜಾಪತ್ಯ ವಿವಾಹ ಮಾಡಲು ಎಲ್ಲಾ "ದಶಗಳು" ಸೇರಬೇಕು. ಅಲ್ಲಿ ಒಂದು ಲೋಪವಾದರೂ ಪ್ರಾಜಾಪತ್ಯ ವಿಧಾನದಲ್ಲಿ ಮಾಡಲು ಬರುವುದಿಲ್ಲ. ಇಲ್ಲೆಲ್ಲ ಪ್ರಕ್ರಿಯೆಯ ವಿಧಾನ ವ್ಯತ್ಯಾಸವಿದೆಯೇ ಹೊರತು ಹೆಣ್ಣನ್ನು ಕದ್ದುಕೊಂಡು ಬರುವುದೋ, ಹೊತ್ತುಕೊಂಡು ಬರುವುದೋ, ಗೊತ್ತಿಲ್ಲದೇ ತರುವುದೋ ಇವೆಲ್ಲ ಇಲ್ಲವೇ ಇಲ್ಲ! ಸುಮ್ಮನೆ ತಪ್ಪು ಕಲ್ಪನೆಗಳು. ವಿವಾಹ ವಿಧಿಯ ಆಧಾರದಂತೆ ಸಂತಾನದ ವ್ಯತ್ಯಾಸವೂ ಆಗುತ್ತದೆ. ಹಾಗಂತ ಬ್ರಾಹ್ಮ, ಪ್ರಾಜಾಪತ್ಯ, ಆರ್ಷ, ದೈವ ವಿಧಿಗಳಲ್ಲಿ ಮಾಡಿದ್ದು ಒಳ್ಳೆಯದು, ಉಳಿದದ್ದು ಕೆಟ್ಟದ್ದು ಎನ್ನುವುದು ತಪ್ಪು. ಯಾವುದೇ ಆದರು ಅದರ ವಿಧಿ ಬದ್ಧವಾಗಿ ಮಾಡಬೇಕು.

ಉದಾ:- ಕಾಡಿನಲ್ಲಿ ಅರುಂಧತಿಯನ್ನು ವಸಿಷ್ಠರು ಕಾಣುತ್ತಾರೆ. ಅವಳು ತಾನು ಬೇಡ ಕನ್ಯೆ ಎಂದು ಹೇಳಿಕೊಂಡರೂ ಅವಳ ಹುಟ್ಟು ಅವಳಿಗೇ ಗೊತ್ತಿಲ್ಲ. ಶಮಂತನು ಸಾಕಿರಬಹುದಷ್ಟೆ. ಅಂದರೆ ಅವಳ ಪೂರ್ವವು ಅವಳಿಗೆ ತಿಳಿದಿಲ್ಲ. ಆಗ ಅದಕ್ಕೆ ಸಂಬಂಧಪಟ್ಟ ವಿವಾಹ ವಿಧಿಯನ್ನು ಆರಿಸಿಕೊಳ್ಳಲಾಗುತ್ತದೆ. ಆಗ ಮಾತ್ರ ಅವರ ವಿವಾಹ ಯಶಸ್ವೀಯಾಗುತ್ತದೆ. ಅಲ್ಲಿ ಬ್ರಾಹ್ಮ ವಿವಾಹವೋ, ಪ್ರಾಜಾಪತ್ಯ ವಿವಾಹವೋ ಆಗುವುದಿಲ್ಲ. ಹಾಗಾಗಿ ಸೂತ್ರಕಾರರು ತಂದೆ, ತಾಯಿ, ಬಂಧು, ಬಳಗ, ಎಲ್ಲರೂ ಒಟ್ಟಾಗಿ ಒಂದು ಮದುವೆ ಮಾಡಿರಿ ಎಂದರು. ಅದು ಸಾಮಾಜಿಕ ಧರ್ಮವಾದ್ದರಿಂದ ಪ್ರಾಜಾಪತ್ಯವನ್ನು ಶ್ರೇಷ್ಠ ಎಂದರಷ್ಟೆ. ಅದು ಸಾಮಾಜಿಕ ಧರ್ಮದ ದೃಷ್ಟಿಯಲ್ಲಿ ಒಳ್ಳೆಯದು. ಹಾಗಂತ ಉಳಿದವು ಕೆಟ್ಟದ್ದು ಎಂದಲ್ಲ. ಎಲ್ಲ ೮ ವಿಧದ ವಿವಾಹ ಪದ್ಧತಿಗಳೂ ಶ್ರೇಷ್ಠ; ಅದರದರ ಕಾಲ, ದೇಶ, ಸಾಮಾಜಿಕ ಕಾರಣಗಳಿಗೆ ಹೊಂದಿ. ಈಗ ಬಳಸುವ ವಿವಾಹ ಪದ್ಧತಿಯಲ್ಲಿ ಬೇರೆ ಬೇರೆ ಪದ್ಧತಿಗಳ ಪ್ರಕ್ರಿಯೆಗಳು ಮಿಶ್ರಣವಾಗಿದೆ.

No comments:

Post a Comment