Saturday, 15 April 2017

"ರೇಖೀ" - ವೇದ ಮುಖದಲಿ ಸಾಧಕ ಬಾಧಕ ಚಿಂತನೆ

ರೇಖಿಯ ಹಿಂದಿನ ವೇದ ವಿಧ್ಯೆ ಯಾವುದು? ಪ್ರಸಕ್ತ ಕಾಲಕ್ಕೆ ಎಷ್ಟು ಉಪಯುಕ್ತ? ಎಷ್ಟು ಅಪಾಯಕಾರಿ? ಪೂರ್ವೋದಾಹರಣೆಗಳೊಂದಿಗೆ ಸುದೀರ್ಘ ಚಿಂತನಾ ಲೇಖನ


ಇಂದಾ,
        ವೈಧ್ಯೆ ಬಿ. ವಿಜಯಲಕ್ಷ್ಮಿ,
        ವೈಧ್ಯ ಬಿ.ವಿ. ಕುಮಾರಸ್ವಾಮಿಯವರ ಪತ್ನಿ
        ಆಯುರ್ವೇದ ವೈಧ್ಯೆ, ಮೈಸೂರು

ಪೂಜ್ಯ ಸ್ವಾಮೀಜಿಯವರಿಗೆ ವಿಜಯಲಕ್ಷ್ಮಿ ಮಾಡುವ ನಮಸ್ಕಾರಗಳು.

        ಈಗ ವಿಶ್ವಾದ್ಯಂತ "ರೇಖೀ" ಎಂಬ ಹೆಸರಿನಲ್ಲಿ ಒಂದು ಚಿಕಿತ್ಸಾ ಪದ್ಧತಿಯು ಚಾಲ್ತಿಯಲ್ಲಿದೆ. ಇದನ್ನು ಜಪಾನ್ ಮೂಲದ ಒಬ್ಬ ವ್ಯಕ್ತಿ ೧೮೩೦ರಲ್ಲಿ ಪುನರ್ಜೀವನಗೊಳಿಸಿ ಪ್ರಖ್ಯಾತಗೊಳಿಸಿದರು. ಇದರಲ್ಲಿ ತಂತ್ರಶಾಸ್ತ್ರದ ಬಹುತೇಕ ಪ್ರಯೋಗಗಳು ಸ್ವಲ್ಪ ರೂಪಾಂತರಗೊಂಡು ಪ್ರಯೋಗದಲ್ಲಿರುವುದು ಕಂಡುಬರುತ್ತದೆ. ಮಂತ್ರ, ತಂತ್ರ, ಯಂತ್ರ ಇವೆಲ್ಲದರ ಸಂಯೋಜನೆ, ಶರೀರರ ನಾಡಿಗಳ ರಚನೆ ಹಾಗೂ ಕ್ರಿಯೆಗಳ ಆಧಾರದ ಮೇಲೆ ಮಾಡಿರುವುದು ಗೋಚರವಾಗುತ್ತದೆ.

        ಈ ರೇಖಿಯ ಬಗ್ಗೆ ಕೆಲವು ವಿಚಾರ ನಿಮ್ಮಿಂದ ತಿಳಿದುಕೊಳ್ಳಬೇಕಾಗಿದೆ. ಅದೇನೆಂದರೆ ರೇಖೀ ಚಿಕಿತ್ಸೆಯು ಭಾರತೀಯ ಮೂಲದ ಚಿಕಿತ್ಸಾ ವಿಧಾನವೇ? ವೇದಪೂರ್ವ ಕಾಲದಲ್ಲಿ ಶುಕಮುನಿಯು ರೇಖಿಯ ಬಗ್ಗೆ ವಿವರಣೆ ನೀಡಿದ್ದಾರೆಯೇ? ಅಥರ್ವಣ ವೇದದಲ್ಲಿ "ಕ್ರಿಯಾವತೀ ದೀಕ್ಷೆ" ಎಂಬ ಹೆಸರಿನಲ್ಲಿ ಉಲ್ಲೇಖವಾಗಿದೆಯೇ? ರೇಖಿಗೆ ಸಂಸ್ಕೃತದ ಪದವಿದೆಯೇ? ಇಲ್ಲಿ ಉಪಯೋಗಿಸುವ ಯಂತ್ರ, ಮಂತ್ರ, ತಂತ್ರಗಳು ಜಪಾನಿನ ಭಾಷೆಗೆ ಬದಲಾಗಿ ನಮ್ಮ ಸಂಸ್ಕೃತಿ ಅಥವಾ ಕನ್ನಡಭಾಷೆಯಲ್ಲಿ ಪ್ರಯೋಗಿಸಲು ಸಾಧ್ಯವೇ?

        ಈ ವಿಷಯವಾಗಿ ಅರಿತುಕೊಳ್ಳಲು ನಾನು ಮುಖತಃ ಬರುವುದೊ? ಅಥವಾ ಮಾಸಪತ್ರಿಕೆ ಋತ್ವಿಕ್ವಾಣಿಯಿಂದ ಅರಿತುಕೊಳ್ಳಬಹುದೊ? ದಯವಿಟ್ಟು ತಿಳಿಸುವುದು.
ನಮಸ್ಕಾರಗಳೊಂದಿಗೆ
ವಿಜಯಲಕ್ಷ್ಮಿ
(ಸಹಿ)

ಉತ್ತರ (ಋತ್ವಿಕ್ ವಾಣಿ ಏಪ್ರಿಲ್ ೨೦೧೦) :- ಶ್ರೀಮತಿ ವಿಜಯಲಕ್ಷ್ಮಿ ಕುಮಾರಸ್ವಾಮಿ ಇವರ ಪ್ರಶ್ನೆ ತುಂಬಾ ಸಾಂದರ್ಭಿಕವಾಗಿದೆ. ಪ್ರಸಕ್ತಕಾಲದಲ್ಲಿ ಈ ರೇಖೀಯು (ಸಂಜೀವನವು) ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಅದರ ಬಗ್ಗೆ ಹೇಳುವುದಕ್ಕೆ ಬಹಳಷ್ಟಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದು ಹಾಸು ಹೊಕ್ಕಾಗಿದೆ. ಆದರೆ ಅದನ್ನು ರೇಖಿಯೆಂದೊ, ಒಂದು ಚಿಕಿತ್ಸಾ ಪದ್ಧತಿಯೆಂದೊ ಹೇಳಿಲ್ಲ. ಇದನ್ನು ಔದ್ಯೋಗಿಕರಣ ಮಾಡಿಲ್ಲ ಅಷ್ಟೆ. ಈಗ ರೇಖೀ ಎನ್ನುವ ಒಂದು ವೃತ್ತಿ ತನ್ನ ಇತಿ ಮಿತಿ ಇಲ್ಲದೆಯೊ, ಅರಿಯದೆಯೊ ಮೀರಿ ವರ್ತಿಸಿ ಸದ್ಯ ಸಮಾಜಕ್ಕೆ ಮೋಸ ಮಾಡುವವರ ವೃತ್ತಿಯಾಗಿದೆ. ಅದು ಜಪಾನಿನ ಯಾವುದೋ ವಿದ್ಯೆಯಲ್ಲ. ಅದು ಅಥರ್ವಣ ವೇದದಲ್ಲಿರತಕ್ಕ
೧. ಸಂಜ್ಞಾಪನಾ,
೨. ಸಂವೇದನಾ,
೩. ಸಂಮೋಹನ,
೪. ಶೋಷಣ,
೫. ಕ್ರಿಯಾಕರ್ಮ,
೬. ಉದ್ದೀಪನ
ಎಂಬ ಆರು ಬಗೆಯ ಶಕ್ತಿಪಾತವೆಂಬ ಒಂದು ಪ್ರಕ್ರಿಯೆ. ಇದರ ಬಗ್ಗೆ ಬೆಳಕು ಚೆಲ್ಲುತ್ತೇನೆ. ಮೊದಲಾಗಿ ಕೆಲ ಉದಾಹರಣೆ ಕೊಡುತ್ತೇನೆ.

        ಮೊದಲಾಗಿ ಈ ಸಂಜೀವನವು ಅಥರ್ವದಲ್ಲಿ ಉದಾಹರಿಸಿದ್ದರೂ ಅದರ ದುರುಪಯೋಗವಾಗದಿರಲಿ ಎಂದು ಅದರ ಮುಖ್ಯ ಸೂತ್ರಗಳನ್ನು, ಕೀಲಕ, ಬೀಜ, ನ್ಯಾಸವನ್ನು ರಹಸ್ಯವಾಗಿಟ್ಟಿದ್ದಾರೆ. ಅವರ ಉದ್ದೇಶ, ಕಾರಣ ಮುಂದೆ ವಿವರಿಸುತ್ತೇನೆ. ಅತ್ರಿ + ಅನಸೂಯ ನಮ್ಮ ಭಾರತೀಯ ಸಂಸ್ಕೃತಿಯ ಪುರಾತನ ಆದರ್ಶ ದಂಪತಿಗಳು. ಅವರು ಈ ಶಕ್ತಿಪಾತ ವಿಧ್ಯೆಯಿಂದ ತಮ್ಮ ಸುತ್ತಿನ ಪರಿಸರವನ್ನು ಎಷ್ಟು ರಕ್ಷಣಾತ್ಮಕವಾಗಿ ಮೋಹಕವಾಗಿಟ್ಟಿದ್ದರು ಎಂಬಲ್ಲಿಂದ ಆರಂಭಿಸಿ ಋಚೀಕನ + ಜಮದಗ್ನಿ, ವಿಶ್ವಾಮಿತ್ರನ ಜನನ, ರೇಣುಕಾ ಸಂಹಾರ, ಪುನರುಜ್ಜೀವನ, ಶಿವನ ಗಣರೂಪೀ ಭಸ್ಮಾಸುರ ಜನನ, ಅವನ ಹಸಿವಿನ ನಿರಸನ, ಕೀರ್ತಿಮುಖನ ದಾಹ, ನಿರಸನ, ಹೀಗೆ ಕೊಡುತ್ತಾ ಹೋದರೆ ಲಕ್ಷ ಲಕ್ಷ ಉದಾಹರಣೆ ಕೊಡಬಹುದು. ಇಂದ್ರಜಿತುವಿನ ಬಾಣ ಹತಿಯಿಂದ ನೊಂದ ಕಪಿಗಳನ್ನು ಸ್ಪರ್ಶಮಾತ್ರದಿಂದ ಉಪಸಂಹರಿಸುತ್ತಿದ್ದ ಉದಾಹರಣೆ ರಾಮಾಯಣದಲ್ಲಿದೆ. ಇನ್ನು ಮಹಾಭಾರತ ಕಾಲದಲ್ಲಿಯೋ ಇಂತಹಾ ಸಾವಿರ ಉದಾಹರಣೆಗಳು ಸಿಗುತ್ತವೆ. ವ್ಯಾಸರಂತೂ ಈ ಸಂಜೀವನ ಚಿಕಿತ್ಸಾ ವಿಧಾನದಿಂದಲೇ ವಿದುರ, ಧೃತರಾಷ್ಟ್ರ, ಪಾಂಡು ಎಂಬ ಮಕ್ಕಳನ್ನು ಅನುಗ್ರಹಿಸಿದರು. ನಂತರ ಧೃತರಾಷ್ಟ್ರನ ಮಕ್ಕಳ ಸಂಜೀವನಕ್ಕೂ ಕಾರಣರಾದರು. ಉತ್ತರೆಯ ಗರ್ಭದ ರಕ್ಷಣೆ, ಪರೀಕ್ಷಿತನ ಹುಟ್ಟಿಗೆ ಕೃಷ್ಣ ಬಳಸಿದ್ದೂ ಅದೇ ವಿಧ್ಯೆಯನ್ನು. ಕೃಷ್ಣನು ಇದರಲ್ಲಿ ನಿಷ್ಣಾತ. ಹಾಗಾಗಿಯೇ ಕೃಷ್ಣ, ಕರ್ಷಯತೀತಿ ಕೃಷ್ಣಃ. ಮುಂದೆ ಇತ್ತೀಚಿನ ಇತಿಹಾಸ ಚರಿತ್ರೆಯಲ್ಲಿ ರಾಮಕೃಷ್ಣರು ಸ್ವಾಮಿ ವಿವೇಕಾನಂದರ ಮೇಲೆ ಪ್ರಯೋಗಿಸಿದ್ದೂ ಇದೇ ಶಕ್ತಿಪಾದ ವಿಧ್ಯೆ; ಅಂದರೆ ಸಂಜೀವನ ಚಿಕಿತ್ಸೆ. ಇಂತಹಾ ಸಾವಿರ ಸಾವಿರ ಉದಾಹರಣೆಗಳಿವೆ. ಇದರಲ್ಲಿ ೬ ವಿಧದಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಕೆಗೆ ಅವಕಾಶವಿರುತ್ತದೆ. ಇವೆಲ್ಲಾ ಉದಾಹರಣೆಗಳೊಂದಿಗೆ ಈ ಪ್ರಸಕ್ತಕಾಲೀನ ಸಂಜೀವನ ವಿಧಿಯು (ರೇಖಿಯ) ಈಗಿನ ವಿಶ್ವರೂಪ, ಅದರ ಸಾಧಕ ಬಾಧಕಗಳೊಂದಿಗೆ ವಿವರಿಸಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಸಮಾಜಸ್ವಾಸ್ಥ್ಯ ಮತ್ತು ಹಿತ. ಇದರ ದುರ್ಬಳಕೆಯಾಗದಿರಲಿ ಎಂಬುದು ಇದರ ಉದ್ದೇಶ.

        ಮೊದಲಾಗಿ ಸಂಜೀವನ (ರೇಖಿಯು) ವೇದದಲ್ಲಿ ವಿವರವಾಗಿ ವಿವರಿಸಿದೆ. ಅದರಲ್ಲಿ ಕೆಲ ಮುಖ್ಯ ಯಾಗಪ್ರಕ್ರಿಯೆಗಳಲ್ಲೂ ಅದರ ಬಳಕೆ ಇದೆ. ಒಬ್ಬ ಋಷಿಯು ತನ್ನ ಸಾಧನಾ ಫಲವನ್ನು ಸಮರ್ಪಕವಾಗಿ ಸಮಾಜದಲ್ಲಿ ಹಂಚುವುದಕ್ಕೆ ಕೂಡ "ಕ್ರಿಯಾಕರ್ಮ" ಎಂಬ ವಿಧಿಯ ಮೂಲಕ ಸಾಧ್ಯವಿದೆ. ಸಮೂಹ ಸಮ್ಮೋಹನ, ಒಂದು ಗುರಿಯತ್ತ ಸಮಾಜವನ್ನು ಸಾಗಿಸುವುದು. ತನ್ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆ ಗುರಿಯಾಗಿ ಈ ಪ್ರಯೋಗಗಳು ನಡೆಯುತ್ತಿದ್ದವು. ಆದರೆ ಮುಂದೆ ಅದರ ದುರ್ಬಳಕೆಯಾಗಲು ಆರಂಭಿಸಿದಾಗ ಅದನ್ನು ಮುಖ್ಯ ಸೂತ್ರಗಳ ಸಹಿತ ಗುಪ್ತವಾಗಿರಿಸಿದರು. ಈ ಕಲಿಗಾಲಕ್ಕೆ ಆ ಮೂಲವಿಧ್ಯೆ ಖಂಡಿತಾ ಬೇಡ. ಸಮೂಹ ಸನ್ನಿಗೆ ಪ್ರಚೋದಿಸುವ ಈ ಸಂಜೀವನ ವಿಧ್ಯೆಯ ಕೆಲ ಅಂಶಗಳು ಮಾತ್ರ ಈಗ ಪ್ರಚಲಿತ ರೇಖಿ ಎನ್ನಿಸಿಕೊಂಡು ಪ್ರಚಾರದಲ್ಲಿದೆ. ಆದರೆ ಒಟ್ಟಾರೆ ಅದು ಸಂಜೀವನ ವಿಧಿಯ ಒಂದು ಅಂಗ ಅಂಶ ಅಷ್ಟೆ. ಬೌದ್ಧರ ಉಚ್ಛ್ರಾಯ ಸ್ಥಿತಿಯಲ್ಲಿ ಇದು ಸಾರ್ವತ್ರಿಕವಾಗಿತ್ತು. ಬೌದ್ಧಧರ್ಮ ಪ್ರಚಾರಕ್ಕೂ ಇದನ್ನು ಬಳಸಿದ್ದಾಗಿ ಕಂಡುಬರುತ್ತದೆ. ಇದರಲ್ಲಿ ಶಕ್ತಿಪಾತವು ದೃಷ್ಟಿ, ಧ್ವನಿ, ಸ್ಪರ್ಶ, ಮೋಹನ ಎಂಬ ನಾಲ್ಕು ವಿಧದಲ್ಲಿ ಪ್ರಯೋಗವಾಗುತ್ತದೆ. ಅದರಲ್ಲಿ ಸ್ವಲ್ಪ ಏರು ಪೇರಾದರೂ ಭವಿಷ್ಯದಲ್ಲಿ ಅಪಾಯ ಅನಾಹುತ ಖಂಡಿತ ಮತ್ತು ರೇಖಿಯ ಅಂದರೆ ಸಂಜೀವನದ ಪರಿಪೂರ್ಣ ಜ್ಞಾನವಿಲ್ಲದಿದ್ದರೆ ಪ್ರಯೋಗ ಪಡೆದ ವ್ಯಕ್ತಿಗೆ ಅರ್ಧಾಯುಷ್ಯ ಖಂಡಿತ!!

ಮುಖ್ಯವಾಗಿ ನಾಭಿದೇಶದಿಂದ ದೇಹವೆಲ್ಲಾ ವ್ಯಾಪಿಸಿರುವ ವಾಘೆಯ ಮೇಲೆ ಅದು ನೇರ ಪರಿಣಾಮ ಮಾಡುವುದರಿಂದ ಅಪಾಯಕಾರಿ. ಇದು:
೧. ದೃಷ್ಟಿಯಿಂದ ಕ್ರುದ್ಧತೆಯನ್ನೂ,
೨. ಧ್ವನಿಯಿಂದ ತೀಕ್ಷ್ಣತೆಯನ್ನೂ,
೩. ಸ್ಪರ್ಶದಿಂದ ವಾತ್ಸಲ್ಯವನ್ನೂ,
೪. ಮೋಹನದಿಂದ ಪ್ರೀತಿಯನ್ನೂ ಉದ್ದೀಪನ ಮಾಡುತ್ತದೆ.

        ಅದೆಲ್ಲಾ ದೇಹದ ಮುಖ್ಯ:-
೧. ನರ
೨. ನಾಡಿ
೩. ನಾಳ
೪. ತಂತು
೫. ಸ್ನಾಯು
೬. ವಾಘೆ
ಎಂಬ ೬ ಪ್ರಸ್ತಾರಗಳಲ್ಲಿ ಪ್ರಸರಿಸುವುದರಿಂದ ಅಳತೆ ತಪ್ಪಿದರೆ ಆಪತ್ತು ಖಂಡಿತ! ಹಾಗಾಗಿ ಜನ ಎಚ್ಚೆತ್ತುಕೊಂಡರೆ ಕ್ಷೇಮ. ಮುಂದೆ ಸರಿಪಡಿಸಲಾಗದ ಹಂತಕ್ಕೆ ತಲುಪುವುದು ಖಂಡಿತ. ಒಟ್ಟಾರೆ ಸಮಗ್ರ ಜೀವಸಂಕುಲದ ಮೇಲೆ ಪರಿಣಾಮಕಾರೀ ಕೆಲಸ ಮಾಡಬಲ್ಲ ಈ ಸಂಜೀವನ ವಿಧಿಯೇ ಈಗ ರೇಖಿಯೆಂದು ಅಲ್ಪಸ್ವಲ್ಪ ಪ್ರಚಾರದಲ್ಲಿದೆ; ಇದು ಸತ್ಯ. ಇಲ್ಲಿ ಮನಸ್ಸಿನ ಭಾವನೆಗೆ ಹೆಚ್ಚು ಶಕ್ತಿ ಇರುವುದರಿಂದ ಸ್ವಲ್ಪ ಮಟ್ಟಿನ ಪರಿಣಾಮವೂ ಇರುತ್ತದೆ. ತಾಯಿ ಮಗುವನ್ನು ತಡುವುದರಿಂದಲೇ ಮಗು ನಿದ್ರಾವಸ್ಥೆಗೆ ತೆರಳುತ್ತದೆಯೆಂದರೆ ಅಲ್ಲಿ ಭಾವನೆಯೇ ಪ್ರಧಾನವೆಂಬುದು ಸತ್ಯ. ತಲೆಯನ್ನು ನೇವರಿಸುವುದರಿಂದ ಒಬ್ಬ ವ್ಯಕ್ತಿ ಸುಲಭದಲ್ಲಿ ಮೋಹನಕ್ಕೆ ಒಳಗಾಗಬಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ.
೧. ಸೂಕ್ಷ್ಮಸ್ಥರಗಳು,
೨. ನರಕೇಂದ್ರಗಳು,
೩. ಗ್ರಂಥಿಗಳು
೪. ಸ್ನಾಯುಮೂಲ
೫. ಮೃದ್ವಸ್ಥಿಭಾಗ
೬. ತೀವ್ರಸಂವೇದನಾಶೀಲ ಭಾಗಗಳು
ಅವುಗಳ ಮೇಲೆ ಧ್ವನಿಯಿಂದ ತಾಡನ, ದೃಷ್ಟಿ, ಸ್ಪರ್ಶನ, ಹಸ್ತಸ್ಪರ್ಶನಗಳೂ ಪರಿಣಾಮಕಾರಿ. ಇವೆಲ್ಲಾ ಏಕೆಂದೂ, ಏನೆಂದೂ ಅರಿಯದಿದ್ದರೂ ಸಹಜ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಆದರೆ ಅದು ತೀರಾ ಸಣ್ಣ ಪ್ರಮಾಣದಾದ್ದರಿಂದ ಏನೂ ಅಪಾಯವಿಲ್ಲ. ಆದರೆ ಅದನ್ನೇ ವಿಶೇಷವಾಗಿ ಕೆಲ ಧ್ವನಿತರಂಗ ಮುಖೇನ ಅಥವಾ ದೃಷ್ಟಿಕಿರಣ ಮುಖೇನ, ಹಸ್ತಸ್ಪರ್ಶನ ಮುಖೇನ ಪ್ರಯೋಗಿಸ ಹೊರಟರೆ ಅಷ್ಟೇ ಪ್ರಭಾವಶಾಲಿ, ಪರಿಣಾಮಕಾರಿ ಎಂಬುದು ಸತ್ಯ. ಒಬ್ಬ ಮೃತಪ್ರಾಯನಾಗಿ ಬಿದ್ದಿರುವ ವ್ಯಕ್ತಿಯನ್ನು ಸರಿಯಾದ ಹದವರಿತು ತಟ್ಟಿ, ತಡವರಿಸಿ, ನೇವರಿಸಿ ಪುನರುಜ್ಜೀವನಗೊಳಿಸಬಲ್ಲ ಈ ಸಂಜೀವನ ವಿಧಿಯೇ "ರೇಖೀ".

ಗಮನಿಸಿ ಅಥರ್ವ ೬-೪೧-೧
ಮನಸೇ ಚೇತಸೇ ಧಿಯ ಆಕೂತಯ ಉತ ಚಿತ್ತಯೇ |
ಮತ್ಯೈ ಶ್ರುತಾಯ ಚಕ್ಷಸೇ ವಿಧೇಮ ಹವಿಷಾ ವಯಮ್ ||
ಮುಖ್ಯವಾಗಿ ಮಾನವನ ಮನೋಭೂಮಿಕೆಯ ಮೇಲೆ ವ್ಯವಹರಿಸುವ ಈ ಸಂಜೀವನ ವಿಧ್ಯೆಯು ಮನಸ್ಸು, ಚಿತ್ತ, ಬುದ್ಧಿ, ಅಹಂಕಾರಗಳಲ್ಲಿ ವ್ಯಾಪಿಸಿ ತನ್ನೆಲ್ಲಾ ಶಕ್ತಿಯನ್ನು ಜೀವಿ ಕಳೆದುಕೊಂಡಂತೆ ಮಾಡುತ್ತಾ, ದೃಷ್ಟಿ, ಶ್ರವಣದ ಮೇಲೂ ತನ್ನ ಹಿಡಿತ ಸಾಧಿಸಿ ಒಟ್ಟಾರೆ ಜೀವಿಯನ್ನು ನಿರ್ವೀರ್ಯನನ್ನಾಗಿ ಮಾಡುತ್ತದೆ. ಅದೇ ರೀತಿ
ಅಥರ್ವ ೧೦-೦೩-೧೭ ರಲ್ಲಿ
ಯಥಾ ಸೂರ್ಯೋ ಅತಿಭಾತಿ ಯಥಾಸ್ಮಿನ್ ತೇಜ ಆಹಿತಂ |
ಏವಾ ಮೇ ವರಣೋ ಮಣಿಃ ಕೀರ್ತಿಂ ಭೂತಿಂ ನಿಯಚ್ಛತು
ತೇಜಸಾ ಮಾ ಸಮುಕ್ಷತು ಯಶಸಾ ಸಮನಕ್ತು ಮಾ ||
ಇದನ್ನು ಒಂದು ಮಣಿವಿಧ್ಯೆಯೆಂದು ಉದಾಹರಿಸಿದೆ. ಯಥಾ ನಿಯಚ್ಛತು - ಷಂಡರನ್ನು ಕೂಡ ವೀರತೆಯ ಭ್ರಾಂತಿಗೆ ತಳ್ಳಬಲ್ಲ ಶಕ್ತಿ ಈ ಮಣಿವಿಧ್ಯೆಗೆ ಇದೆ ಎನ್ನುತ್ತದೆ ಅಥರ್ವ. ಮಣಿಯೆಂದರೆ ಶ್ರೇಷ್ಠ. ಅಂದರೆ ಜೀವಿಗಳಿಗೆ ಪ್ರಾಣವೇ ಶ್ರೇಷ್ಠವಾದ್ದರಿಂದ ಸಂಜೀವನವು ಮಣಿವಿಧ್ಯೆ ಎನ್ನಿಸಿಕೊಂಡಿದೆ. ಶಕ್ತಿಪಾತದ ಸೋದಾಹರಣೆ ಗಮನಿಸಿ.

ಅಥರ್ವ ೧-೧೩-೩
ಪ್ರವತೋ ನಪಾನ್ನಮ ಏವಾಸ್ತು ತುಭ್ಯಂ ನಮಸ್ತೇ ಹೇತಯೇ ತಪುಷೇ ಚ ಕೃಣ್ಮಃ |
ವಿದ್ಮ ತೇ ಧಾಮ ಪರಮಂ ಗುಹಾ ಯತ್ ಸಮುದ್ರೇ ಅಂತರ್ನಿಹಿತಾಸಿ ನಾಭಿಃ ||
ನಾಭಿಯಿಂದ ಹೊರಡುವ ಸಹಜಶಕ್ತಿಕೇಂದ್ರವಾದ ವಾಘೆಯ ಮೇಲೆ ಶಕ್ತಿಯನ್ನು ಅಧೋಮುಖವಾಗಿ ಹರಿಸಿದಲ್ಲಿ ದೇಹದ ಪೂರ್ಣ ವ್ಯಾಪಾರದ ಮೇಲೆ ನಿಯಂತ್ರಣ ಸಾಧ್ಯವೆಂದೂ, ಅದರ ತೀಕ್ಷ್ಣತೆ ವಿಪುಲವೆಂದೂ ಗುರುತಿಸಿದ್ದಾರೆ. ಅಲ್ಲದೇ ಅದು ವಿಶೇಷವಾದ ವಿದ್ಯುತ್ ಎಂದೂ ಹೇಳಿದ್ದಾರೆ. ಆ ಶಕ್ತಿಪಾತ ವಿಧಾನವನ್ನು ಮಾತ್ರ ಮುಚ್ಚಿಟ್ಟಿದ್ದಾರೆ.

ಅಥರ್ವ ೧-೧೩-೧೪ ನೇ ಮಂತ್ರವು
ಯಾಂ ತ್ವಾ ದೇವಾ ಅಸೃಜಂತ ವಿಶ್ವ ಇಷುಂ ಕೃಣ್ವಾನಾ ಅಸನಾಯ ಧೃಷ್ಣುಮ್ |
ಸಾ ನೋ ಮೃಡ ವಿದಥೇ ಗೃಣಾನಾ ತಸ್ಯೈ ತೇ ನಮೋ ಅಸ್ತು ದೇವೀ ||
ಅದರ ಶಕ್ತಿ ಮತ್ತು ಸ್ಥೈರ್ಯದ ಪ್ರಮಾಣ ಹೇಳುತ್ತದೆ. ಮತ್ತು ದೇಶದ ಆಸುರೀಶಕ್ತಿಯ ವಿನಾಶ, ದೈವೀಕತೆಯ ಉದ್ದೀಪನಕ್ಕೆ ಇದರ ಬಳಕೆಯೆಂದೂ ಉದಾಹರಿಸಿದೆ. ಪ್ರತಿಯೊಬ್ಬ ಮಾನವನಿಂದ ವಿಶೇಷ ಸಂದರ್ಭಗಳಲ್ಲಿ ವಿಶೇಷ ಸಾಧನೆ ಮಾಡಿಕೊಂಡಿದ್ದರೆ ಹರಿಯುವ ವಿದ್ಯುತ್ ಪ್ರವಾಹರೂಪದ ಶಕ್ತಿಪಾತ ಅಥವಾ ಸಂಜೀವನ ವಿಧಿಯು ವಿಶೇಷವಾದ ಅನಿರ್ವಚನೀಯ ಆನಂದದಾಯಕವೆಂದೂ ಹೇಳಿದೆ.

ಅಥರ್ವ ೧-೨೭-೨
ವಿಷೂಚ್ಯೇತು ಕೃಂತತೀ ಪಿನಾಕಮಿವ ಬಿಭ್ರತೀ |
ವಿಷ್ವಕ್ ಪುನರ್ಭವಾ ಮನೋಽಸಮೃದ್ಧಾ ಅಘಾಯವಃ ||
ಮನಸ್ಸನ್ನು ಕೇಂದ್ರೀಕರಿಸಿ ಏಕಾಗ್ರತೆಯಿಂದ ಪೂರ್ಣಶಕ್ತಿಯೊಂದಿಗೆ ಇನ್ನೊಂದು ದೇಹದಲ್ಲಿ ಪ್ರವಹಿಸುವ ಚೇತನ ಶಕ್ತಿಯೇ ಆ ದೇಹದ ಕೊಳೆಯೆಂಬ ಶತ್ರುಗಳನ್ನು ಸದೆಬಡಿಯಿರಿ, ರೋಗ ನಿರ್ಮೂಲನ ಮಾಡಿ, ಮನಸ್ಸು ಶುದ್ಧಿಯಾಗಲಿ, ಈ ದೇಹವನ್ನು ಹೊಂದಿದ ಜೀವನು ಪುನರ್ಜನ್ಮ ಪಡೆದಂತೆ ಹೊಸ ಹುರುಪಿನಿಂದ ಪ್ರವೃತ್ತನಾಗಲಿ, ಸುಖ, ಸಮೃದ್ಧಿ, ಆರೋಗ್ಯ ಲಭಿಸಲು ಎಂದಿದೆ. ಹೀಗೆ ಅಥರ್ವದಲ್ಲಿ ಚಿಕಿತ್ಸಾಭಾಗದಲ್ಲಿ ಉದಾಹರಿಸುತ್ತಾ ಹೋದಲ್ಲಿ ಇದು ಮುಗಿಯದ ಲೇಖನವಾದೀತು. ಹಾಗಾಗಿ ಅದರ ಸ್ಥೂಲ ಪರಿಚಯದತ್ತ ಈ ಲೇಖನ ಮುಂದುವರೆಸುತ್ತೇನೆ.

ಅಥರ್ವ ೧-೨೭-೪ ನೇ ಮಂತ್ರ
ಪ್ರೇತಂ ಪಾದೌ ಪ್ರಸ್ಫುರತಂ ವಹತಂ ಪೃಣತೋ ಗೃಹಾನ್ |
ಇಂದ್ರಾಣ್ಯೇತು ಪ್ರಥಮಾಜೀತಾಮುಷಿತಾ ಪುರಃ ||
ಹೇಳುವಂತೆ ಜೀವನದಲ್ಲಿ ಸೋತು ಬಸವಳಿದ ಜೀವಿಯು ಪುನಃ ಚೈತನ್ಯ ಪಡೆಯಲು ಈ ಸಂಜೀವಕ ಸಹಾಯಕವೆಂದೂ, ಅದರ ಬಲದಿಂದ ತಾನು ಜೀವನದಲ್ಲಿ ಗೆದ್ದು ಆತ್ಮವಿಶ್ವಾಸಗಳಿಸಬಹುದೆಂದೂ, ಅದರ ತತ್ಪರಿಣಾಮಕಾರಕವಾದ ಜೀವನಸ್ವರ್ಗವೆಂಬ ಕಾಲದಲ್ಲಿ ಇಂದ್ರಾಣಿಯ ಅಂದರೆ ಸ್ವರ್ಗಸುಖ ಲಭ್ಯವೆಂದೂ ಉದಾಹರಿಸಿರುತ್ತದೆ.

ಅಥರ್ವ ೧-೩೦-೧
ವಿಶ್ವೇದೇವಾ ವಸವೋ ರಕ್ಷತೇಮಮುತಾದಿತ್ಯಾ ಜಾಗೃತ ಯೂಯಮಸ್ಮಿನ್ |
ಮೇಮಂ ಸನಾಭಿರುತ ವಾನ್ಯನಾಭಿರ್ಮೇಮಂ ಪ್ರಾಪತ್ ಪೌರುಷೇಯೋ ವಧೋ ಯಃ ||
ಎಲೈ ಸಾಮಾನ್ಯ ಮನೋ ವಿಕೃತಿಯನ್ನು ಹೊಂದಿದ ಜೀವಿಯೇ! ನೀನು ನನಗೆ ಅಧೀನನಾಗು, ನಿನ್ನಲ್ಲಿ ನಾನು ಅಧೀಕ್ಷಕನಾಗಿಯೋ, ಅಧಿಕಾರಿಯಾಗಿಯೋ ಆಜ್ಞೆ ಮಾಡುತ್ತೇನೆ. ನಿನ್ನ ಮನೋ ವಿಕೃತಿಯನ್ನು ದೂರೀಕರಿಸಿ, ಪರಿಶುದ್ಧಗೊಳಿಸಿ ಜೀವ+ಆತ್ಮ ಅನುಸಂಧಾನ ಮಾಡುತ್ತೇನೆ ಶರಣಾಗು. ತನ್ಮೂಲಕ ಮುಂದಿನ ನಿನ್ನ ಆತ್ಮೋನ್ನತಿಯತ್ತ ನಿನ್ನ ದಾರಿ ಸುಗಮವಾಗಲಿ.

ಅಥರ್ವ ೨-೩೦-೨
ಸಂಚೇನ್ನಯಾಥೋ ಅಶ್ವಿನಾ ಕಾಮಿನಾ ಸಂಚ ವಕ್ಷಥಃ |
ಸಂವಾಂ ಭಗಾಸೋ ಅಗ್ಮತ ಸಂ ಚಿತ್ತಾನಿ ಸಮುವ್ರತಾ ||
ಚಿತ್ತಾದಿ ಪಂಚಕಗಳಿಂದ ವ್ಯವಹರಿಸುತ್ತಾ ಪಂಚೇಂದ್ರಿಯ ವ್ಯಾಪ್ತಿಯಲ್ಲೇ ನೀನು ವಿಹರಿಸಬೇಡ. ಜೀವನೇ ಅದು ನಿನ್ನ ಕರ್ಮವಾಗಿರಬಹುದು. ಆದರೆ ಆತ್ಮ ಸಂಸರ್ಗದಿಂದ ಅದನ್ನು ತಿದ್ದಿಕೊ. ಆಗ ನಿನಗೆ ದಾರಿ ಕಾಣುತ್ತದೆ. ನಿನ್ನ ಚಿತ್ತ ವಿಕಾರಗಳನ್ನು ಬಿಟ್ಟು ಆತ್ಮ ವಿಕಸನದತ್ತ ಮುನ್ನಡೆ. ಜೀವ+ಆತ್ಮರ ಸಹಯೋಗವೇ ಪರಮಾತ್ಮಾನುಸಂಧಾನ ಎಂಬುದನ್ನು ಅರಿತುಕೊ.

ಅಥರ್ವ ೨-೩೦-೩
ಯತ್ ಸುಪರ್ಣಾ ವಿವಕ್ಷವೋ ಅನಮೀವಾ ವಿವಕ್ಷವಃ |
ತತ್ರ ಮೇ ಗಚ್ಛತಾದ್ಧವಂ ಶಲ್ಯ ಇವ ಕುಲ್ಮಲಂ ಯಥಾ ||
ಹೇ ಮಾನವರೂಪಿ ಜೀವಿಯೇ ನಿನ್ನ ಚಿತ್ತ ಚಾಂಚಲ್ಯ ಹಾರೈಕೆ, ಹಾರಾಟ ನಿಲ್ಲಿಸು. ಜೀವ+ಆತ್ಮವೆಂಬ ಈ ಎರಡು ಶಕ್ತಿಗಳನ್ನು ಸಂಯೋಗಿಸಿ ನೀನು ಪರಮಾತ್ಮನಲ್ಲಿ ಸೇರುವತ್ತ ನಿನ್ನ ಹಾರಾಟವಿರಲಿ. ಅದಕ್ಕೆ ಬೇಕಾದ ಈ ಸಂಜೀವನ ನಿನಗೆ ಪ್ರಾಪ್ತವಿದೆ. ಅದನ್ನು ಜಯಿಸು. ನಿನ್ನ ಗುರಿ ಆತ್ಮೋನ್ನತಿ ಪರಮಾತ್ಮ ಸಂಗತಿಯೆಂಬುದನ್ನು ಮರೆಯದೆ ನಡೆ ಮುಂದೆ.

ಅಥರ್ವ ೨-೩೦-೪
ಯದಂತರಂ ತದ್ಬಾಹ್ಯಂ ಯದ್ಬಾಹ್ಯಂ ತದಂತರಮ್ |
ಕನ್ಯಾನಾಂ ವಿಶ್ವರೂಪಾಣಾಂ ಮನೋ ಗೃಭಾಯೌಷಧೇ ||
ಯಾವುದನ್ನು ನೀನು ಬಿಡಬೇಕೋ, ತ್ಯಜಿಸಬೇಕೋ ಅದನ್ನರಿತು ತ್ಯಜಿಸು. ಯಾವುದು ನಿನ್ನ ದಾರಿಗೆ ಅಗತ್ಯವೋ ಅದನ್ನು ಸ್ವೀಕರಿಸು. ಪ್ರಾಪಂಚಿಕದಲ್ಲಿ ಇಲ್ಲದ ಆನಂದತ್ತ ಪಯಣವಾಗಬೇಕಾದರೆ ನಿನ್ನ ಇಂದ್ರಿಯ ಚಾಪಲ್ಯ ಕಾರಣದ ಐಹಿಕ ಸುಖ ಭೋಗಗಳನ್ನು, ಈ ವಿಶ್ವದ ಅಸತ್ತನ್ನು ಬಿಡು. ನಿನ್ನ ಆತ್ಮದ ಗುರಿ ನೆನಪಿಸಿಕೊಂಡು ಸಾಧಿಸು. ಮನೋಚಾಂಚಲ್ಯವೇ ಈ ವಿಶ್ವರೂಪ. ಅದು ಅಸತ್. ಸಚ್ಚಿದಾನಂದದತ್ತ ಪ್ರಯಾಣಕ್ಕೆ ಅಸತ್ತನ್ನು ಬಿಡುವುದೇ ಔಷಧ ಅರಿತುಕೊ.

ಅಥರ್ವ ೨-೩೦-೫
ಏಯಮಗನ್ ಪತಿಕಾಮಾ ಜನಿಕಾಮೋಽಹಮಾಗಮಮ್ |
ಅಶ್ವಃ ಕನಿಕ್ರದದ್ ಯಥಾ ಭಗೇನಾಹಂ ಸಹಾಗಮಮ್ ||
ಪರಮಾತ್ಮನನ್ನು ಸಂಧಿಸುವ ಆಕಾಂಕ್ಷಿಯಾದ ಆತ್ಮನೇ ನೀನು ನಿನ್ನ ದಾರಿಯಲ್ಲಿ ಮುನ್ನಡೆದೆಯಾದರೆ ನೀನು ಯಾರನ್ನು ಹಾರೈಸುತ್ತಿದ್ದೀಯೋ, ಯಾರು ಈ ಲೋಕ ಒಡೆಯನೆಂದು ತಿಳಿದಿದ್ದೀಯೋ ಅವನನ್ನು ಸೇರಬಲ್ಲೆ. ಅದಕ್ಕಾಗಿ ಚಂಚಲವಾದ ನಿನ್ನ ಮನಸ್ಸನ್ನು ಕಟ್ಟು. ಅದರ ವಾಘೆಯನ್ನು ಬಿಗಿಮಾಡು. ಆಗ ನೀನು ಎನ್ನುವ ಅಹಂಕಾರವಳಿದು ಆ ಪರಮಾತ್ಮನ ಸಮಾಗಮವಾಗುತ್ತದೆ. ಆತ್ಮ+ಪರಮಾತ್ಮ ಸಂಯೋಗವೇ ಈ ಜೈವಿಕಸೃಷ್ಟಿಯ ಉದ್ದೇಶ, ಅರ್ಥ, ಗುರಿಯೆಂದು ತಿಳಿ. ಹೀಗೆಂದು ಹೇಳುತ್ತಾ ಮನೋ ನಿಗ್ರಹ ಸಾಧನೆಗೆ ಅತೀ ಉತ್ತಮ ದಾರಿ ಶಕ್ತಿ ಸಂಚಯನ, ಶಕ್ತಿಪಾತ, ಶಕ್ತಿ ಪ್ರವಹನ, ಆತ್ಮಾನುಸಂಧಾನ. ಈ ಆತ್ಮಾನುಸಂಧಾನದ ದಾರಿಯೇ ಈಗಿನ "ರೇಖಿ" ಅಥವಾ "ಸಂಜೀವನವಿಧಿ". ಮೊದಲಾಗಿ ತನ್ನಲ್ಲಿ ಶಕ್ತಿಸಂಚಯನ. ನಂತರ ಎರಡನೆಯ ಹಂತ ಶಕ್ತಿಪಾತ ಮುಖೇನ ಇನ್ನೊಂದು ಆತ್ಮದ ಸಂಪರ್ಕಸಾಧನೆ. ತನ್ಮೂಲಕ ಉದ್ದೀಪಿತನಾಗಿ ಪರಮಾತ್ಮಾನುಸಂಧಾನ ಸಾಧ್ಯವೆಂದು ಕಂಡುಹಿಡಿದರು. ಅತ್ರಿ+ಅನಸೂಯ ದೇವಿಯರು ಮೊತ್ತಮೊದಲಾಗಿ ಶಕ್ತಿಪಾತದ ಈ ೬ ಹಂತಗಳ ಸಂಜೀವನ ವಿಧಿ ನಿರ್ದೇಶಿಸಿದವರು ಅವರು. ನಂತರ ಅದು ಭೂಮಿಯಲ್ಲಿ ಹಲವು ಮುಖದಲ್ಲಿ ಬಳಕೆಗೆ ಬಂದಿರುತ್ತದೆ.

        ಈಗ ಅದರ ಉಪಪರಿಣಾಮಗಳು ಮತ್ತು ಅವುಗಳ ಪರಿಚಯ ಮಾಡಿಕೊಳ್ಳೋಣ.

ಶಕ್ತಿಪಾತ ಮಾಡುವ ಈ "ಸಂಜೀವನವಿಧಿ"(ರೇಖಿ)ಯಲ್ಲಿ ಮೊದಲನೆಯದಾಗಿ ಸಂಜ್ಞಾಪನಾವಿಧಿ. ಇದು ಮಾನವನ ಬುದ್ಧಿಶಕ್ತಿಯನ್ನು ವೃದ್ಧಿಸುತ್ತದೆ. ಧೀಶಕ್ತಿಯನ್ನು ವೃದ್ಧಿಸುವ ಇದು ಶಕ್ತಿಪಾತ ಮಾಡಿದ ವ್ಯಕ್ತಿಯ ಮನೋಗುಣ, ಸಿದ್ಧಾಂತ ದಾರಿಯನ್ನು ಅನುಸರಿಸುತ್ತಾ ಬೌದ್ಧಿಕವಾಗಿ ಬೆಳೆದು ಆತ್ಮೋನ್ನತಿ ಪಡೆಯಲು ಸಾಧ್ಯ. ಅಲ್ಲದೆ ಶಕ್ತಿಪಾತ ಮಾಡಿದ ಗುರುವೂ ಉನ್ನತಿಗೇರಬಲ್ಲ, ಪೂರ್ಣತ್ವವನ್ನು ಪಡೆಯಬಲ್ಲ. ಇಲ್ಲಿ ಶಕ್ತಿಪಾತ ಮಾಡುವ ವ್ಯಕ್ತಿಯೇನಾದರೂ ಪೂರ್ವಾಗ್ರಹ ಪೀಡಿತನಾದರೆ, ಕೆಟ್ಟ ಅಭಿಲಾಷೆ ಹೊಂದಿದ್ದರೆ, ಕುಟಿಲನಾಗಿದ್ದರೆ, ದುಷ್ಟಹಿತಾಸಕ್ತಿಯಿದ್ದಲ್ಲಿ ಈ ಸಂಜ್ಞಾಪನಾವಿಧಿಗೆ ಒಳಪಟ್ಟ ವ್ಯಕ್ತಿಯೂ ಅವನಂತೆಯೇ ಮತ್ತೂ ಆರು ಪಟ್ಟು ಹೆಚ್ಚು ದುಷ್ಟನಾಗಿ, ಕುಟಿಲನಾಗಿ, ಸಮಾಜ ಕಂಟಕನಾಗಬಹುದು.

ಅಂದರೆ ಶಕುನಿಯು ಮಹಾಭಾರತದಲ್ಲಿ ಪ್ರಯೋಗಿಸಿದ ತಂತ್ರ. ಉತ್ತಮ ವಿಚಾರ ಬೋಧನೆಯೆಂಬಂತೆಯೇ ನಟಿಸಿ ಕೆಟ್ಟ ವಿಚಾರಗಳನ್ನು ಮಾತ್ರಾ ತಲೆಗೆ ತುಂಬುತ್ತಾ ಲೋಕಕಂಟಕ, ಕುಲಕಂಟಕರನ್ನು ಸೃಷ್ಟಿಸುವುದು. ಸಹಜವಾಗಿ ಕೌರವರಿಗೆ ಶಕುನಿ ಸೋದರಮಾವ. ಯಾರಿಗೂ ಸಂಶಯವಿಲ್ಲ. ಹಾಗಾಗಿ ಸುಲಭದಲ್ಲಿ ಕೌರವ ದುಶ್ಶಾಸನರಲ್ಲಿ ಪ್ರಯೋಗ ಮಾಡಿದ ಈತ ನಂತರ ಧರ್ಮಭೀರುವೂ, ಸಹಿಷ್ಣುವೂ, ತನ್ನೆಲ್ಲಾ ಸದ್ಗುಣಗಳ ಜೊತೆಯಲ್ಲಿ ಅವಿವೇಕತನ ಪಡೆದ ಮಹಾಶಿವಭಕ್ತನಾದ ಜಯದ್ರಥನನ್ನೂ ಮೂರ್ಖನನ್ನಾಗಿ ಮಾಡಿದ. ಈ ದುಷ್ಟ ಚತುಷ್ಟಯ ಕಾರಣದಿಂದಲೇ ಮಹಾಭಾರತಯುದ್ಧ. ಇದು ಶಕುನೀ ತಂತ್ರ. ತಂತ್ರಶಾಸ್ತ್ರಗಳಲ್ಲಿ ಗಾಂಧಾರತಂತ್ರಗಳು ವಿಶೇಷ. ಅವುಗಳಲ್ಲಿ ಈ ರೀತಿಯ ಕೆಲಸ ಸುಲಭಸಾಧ್ಯ. ಈ ಸಂಜೀವನವು ಪ್ರಯೋಗಿಸುವ ವ್ಯಕ್ತಿಯ ಆತ್ಮಶಕ್ತಿ, ಧೀಶಕ್ತಿ, ಇಚ್ಛಾಶಕ್ತಿಯು ಒಟ್ಟಾಗಿ ಪ್ರಯೋಗವಾಗುತ್ತದೆ. ಹಾಗಿದ್ದಾಗ ಈಗಿನ ಕಾಲಕ್ಕೆ ಅದು ಎಷ್ಟು ಸೂಕ್ತ ಅರ್ಥಮಾಡಿಕೊಳ್ಳಿರಿ. ಭೀಷ್ಮನಂತಹಾ ಮುತ್ಸದ್ದಿಗೆ ಅರ್ಥವಾಗದಂತೆ ಶಕುನಿ ತಂತ್ರ ಮಾಡಿದ್ದಾನೆಯೆಂದರೆ ಈಗಿನ ಕಾಲದಲ್ಲಿ ಅದು ಅರ್ಥವಾಗಬಹುದೇ?

ಇನ್ನು ಸಂವೇದನಾ (ಚಿಕಿತ್ಸಾ) ವಿಧಿ. ಹೆಚ್ಚಾಗಿ ನರಸಂವೇದಿ ಶಕ್ತಿಯನ್ನು ಹೊಂದಿದ ಇದು ವಿಕೃತಿಯನ್ನು ಸರಿಪಡಿಸಬಲ್ಲದು. ಎಂತಹಾ ಹುಚ್ಚನ್ನು ಬಿಡಿಸಿ ಸಮಮನಸ್ಕನಾಗುವಂತೆ ಮಾಡಬಲ್ಲ ಈ ಚಿಕಿತ್ಸೆ ತುಂಬಾ ಲೋಕೋಪಕಾರಿ. ಮಾನವ ಮತ್ತತೆಯನ್ನು ನಿವಾರಿಸಬಲ್ಲ ಈ ಶಕ್ತಿಯು ಪ್ರಕೃತಿಯ ಮೇಲೂ ಪರಿಣಾಮಕಾರಿ ಪ್ರಯೋಗ ಮಾಡಲು ಸಾಧ್ಯ. ಯುಗಂಧರನು ಮಹಾಶಕ್ತಿಶಾಲಿಯಾದ ಆದರೆ ಮತ್ತವಾದ ಮಹಾಗಜವನ್ನು ಈ ಪ್ರಯೋಗದಿಂದಲೇ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾನೆ ಎಂದು ಉಲ್ಲೇಖವಿದೆ. ಇದು ಧ್ವನಿ ಪ್ರಧಾನವಿಧಿ. ಶಕ್ತಿಪಾತವಾಗುವುದು ಶ್ರವಣಾಂಗದ ಮುಖೇನ. ಒಮ್ಮೆ ಮೋಹಕ್ಕೆ ಒಳಪಟ್ಟರೆ ಅದು ತನ್ನೆಲ್ಲಾ ಅಸ್ತಿತ್ವವನ್ನು ಮರೆತು ಆ ಧ್ವನಿಯ ನಿರ್ದೇಶನಕ್ಕಾಗಿಯೇ ಹಾತೊರೆಯುತ್ತಿರುತ್ತದೆ. ಗಿಡಮರಗಳನ್ನು ಮೋಹಿಸುವ ಶಕ್ತಿ ಈ ಸಂವೇದನಾ ವಿಧಿಗೆ ಇದೆ. ಮಳೆ, ಬೆಳೆ ನಿಯಂತ್ರಿಸಬಹುದು. ಉತ್ಪಾತಗಳನ್ನು ನಿಯಂತ್ರಿಸಬಹುದು. ಗುಡುಗು, ಸಿಡಿಲು, ಮಿಂಚುಗಳನ್ನೂ ನಿಯಂತ್ರಿಸಬಹುದು. ಹಾಗೇ ಯುದ್ಧಾದಿಗಳಲ್ಲಿ ಮೃತಸೈನಿಕರನ್ನು ಪುನರುಜ್ಜೀವನಗೊಳಿಸಿ ಶತ್ರುಶೇಷ ನಾಶಮಾಡುವಂತೆ ಮಾಡಬಹುದು. ಸತ್ತ ವ್ಯಕ್ತಿಯು ತನ್ನ ನೋವಿಗೆ ಕಾರಣವಾದದ್ದರ ನಾಶವಾಗುವಲ್ಲಿಯವರಗೂ ವಿಶೇಷ ಚೈತನ್ಯ ಪಡೆದು ಹೋರಾಡಬಲ್ಲದು. ಹಾಗಾಗಿ ಜಯ ಖಂಡಿತ. ಇದೆಲ್ಲಾ ಉದ್ದೇಶದಿಂದ ಕಂಡುಕೊಂಡ ಈ ವಿಧ್ಯೆ ಶಾಲಿವಾಹನನ ಕಾಲದಲ್ಲಿ ವಿಕ್ರಮನೊಂದಿಗಿನ ಹೋರಾಟದಲ್ಲಿ ಪ್ರಯೋಗಿಸಲ್ಪಟ್ಟಿದೆ. ನಂತರ ಅದನ್ನು ವೇದದಲ್ಲಿರತಕ್ಕ ರಹಸ್ಯ ಸೂತ್ರಗಳನ್ನು ತೆಗೆದು ಹಾಕಲಾಯ್ತು. ಈಗ ತಂತ್ರಶಾಸ್ತ್ರ ಗ್ರಂಥಗಳಲ್ಲಿ ಮಾತ್ರ ಅವುಗಳ ಪ್ರಯೋಗ ಸೂತ್ರಗಳಿವೆ. ವೇದಗಳಲ್ಲಿ ಅವುಗಳ ಉಪಯುಕ್ತತೆ ಬಣ್ಣಿಸಲ್ಪಟ್ಟಿದೆ ಅಷ್ಟೆ. ಆದರೆ ಈಗಿನ ಕಾಲಕೆ ಈ ಪ್ರಕಾರವು ಎಷ್ಟು ಅಪಾಯಕಾರಿ ಎಂದು ಚಿಂತಿಸಿ.

ಮೂರನೆಯದಾದ ಸಂಮೋಹನವಿಧಿ. ಇದು ಸಾರ್ವತ್ರಿಕವಾಗಿ ಅಲ್ಪ ಸ್ವಲ್ಪ ಚಾಲ್ತಿಯಲ್ಲಿದೆ. ಅತೀ ಅಪಾಯಕಾರಿಯೂ ಅಲ್ಲ, ಅತೀ ಪರಿಣಾಮಕಾರಿಯೂ ಅಲ್ಲ. ಮತ್ತು ತಾತ್ಕಾಲಿಕ ಪರಿಣಾಮ ಮಾತ್ರವಾದ್ದರಿಂದಲೂ, ಮಾನವ ಕುಲಕ್ಕೆ ಉಪಯುಕ್ತವೋ, ಅನುಪಯುಕ್ತವೋ, ಅನಿವಾರ್ಯವಾದ್ದರಿಂದಲೂ ಒಪ್ಪಬಹುದು. ಇದರಿಂದ ಹೆಚ್ಚಿನ ಸಮಸ್ಯೆ ಹುಟ್ಟಿಸಲು ಸಾಧ್ಯವಿಲ್ಲ. ಸಮಾಜಮುಖಿಯಾಗಿ ಪ್ರಯೋಗಿಸಲ್ಪಟ್ಟರೆ ಫಲಕಾರಿ.

ನಾಲ್ಕನೆಯದಾದ ಶೋಷಣ. ಇದು ಅತೀ ಅಪಾಯಕಾರಿ ವಿಧಿ. ಇದರಲ್ಲಿ ಒಂದು ವ್ಯವಸ್ಥೆಯನ್ನೇ ನಿರ್ವೀರ್ಯಗೊಳಿಸುವ ಶಕ್ತಿ ಇದೆ. ಈ ಶೋಷಣದ ಕೆಲ ಅಲ್ಪ ಸ್ವಲ್ಪ ಜ್ಞಾನದಿಂದಲೇ ಈಗಿನ ಮಾಟ, ಮಂತ್ರ, ಮದ್ದು, ಆಭಿಚಾರಿಕಗಳು, ಇಂದ್ರಜಾಲ, ಅಹೇಂದ್ರಜಾಲ, ಮಹೇಂದ್ರಜಾಲ, ಚಾಟಕ, ಪ್ರಲಾಪನ, ಲಂಭನ, ಪ್ರತಿಕ್ರಿಯಾ, ಕೃತ್ಯಸೃಷ್ಟಿ, ಭೂತಭಯ, ಮಾರಣಗಳನ್ನು ಮಾಡುತ್ತಿದ್ದರು. ಬಹಳ ಹಿಂದೆಯೇ ಇದು ನಿಷೇಧಿಸಲ್ಪಟ್ಟಿತು. ಎಷ್ಟು ಕಠೋರವಾಗಿ ಇದನ್ನು ಸಮಾಜ ಬಹಿಷ್ಕರಿಸಿತು ಎಂದರೆ ಈ ವಿಧ್ಯೆ ಕಲಿತ ಜನರನ್ನು ಅಸ್ಪೃಶ್ಯರಂತೆ ದೂರವಿಟ್ಟರು. ಹಿಂದೆ ಇದನ್ನು ಶತ್ರುದೇಶಗಳಲ್ಲಿ ಕ್ಷೋಭೆ ಹುಟ್ಟಿಸುವ ಉದ್ದೇಶಕ್ಕೆ ಬಳಸುತ್ತಿದ್ದರು. ಚಾಣಕ್ಯನು ಪರ್ವತರಾಜನಾದ ಮತಂಗನಲ್ಲಿ ಇದನ್ನೇ ಪ್ರಯೋಗಿಸಿದ್ದು. ಮಹಾಬಲಿಷ್ಠನಾದ ಆತ ತನ್ನವರಿಂದಲೇ ಹತನಾದ. ಈ ವಿಧ್ಯೆಯಿಂದಲೇ ಹಲವಾರು ರಾಜಮನೆತನಗಳು ನಾಶವಾಗಿದ್ದ ಉದಾಹರಣೆಯಿದೆ. ಇದು ಸರ್ವಥಾ ಬೇಡ.

ಐದನೆಯದಾದ ಉದ್ದೀಪನವು ಸಮೂಹಸನ್ನಿಯನ್ನು ಹುಟ್ಟಿಸುವ ಈ ವಿಧಿ ದುರ್ಬಳಕೆಯೇ ಹೆಚ್ಚು. ಆದರೆ ತಿಳಿದೊ, ತಿಳಿಯದೆಯೊ ಪ್ರಸಕ್ತಕಾಲದಲ್ಲಿ ಬಳಕೆಯಲ್ಲಿದೆ. ರಾಜಕಾರಣಿಗಳು, ಮಾಧ್ಯಮದವರು ಅವರಿಗರಿವಿಲ್ಲದೆ ಅದನ್ನು ಕೆಟ್ಟದ್ದಾಗಿ ಬಳಸುತ್ತಿದ್ದಾರೆ. ಈ ಉದ್ದೀಪನ ತಂತ್ರ ಸದ್ಬಳಕೆಯಾದ ಒಂದು ಉದಾಹರಣೆಯೂ ಕಂಡುಬರುವುದಿಲ್ಲ. ಆದರೆ ಕೆಟ್ಟದ್ದಾಗಿ ಮಾತ್ರ ತುಂಬಾ ಆಗುತ್ತಿದೆ. ಉದಾಹರಣೆ:- ಕೆಲ ವರ್ಷದ ಹಿಂದಿನ ಶಿವಮೊಗ್ಗ ಗಲಾಟೆ, ಬಿಡದಿಯ ನಿತ್ಯಾನಂದಸ್ವಾಮಿಯ ಪ್ರಕರಣ, ರಾಜಕೀಯ ಕಾರಣದ ರಾಜಶೇಖರ ರೆಡ್ಡಿಯವರ ಮರಣಕಾರಣ, ಪ್ರತ್ಯೇಕ ತೆಲಂಗಾಣ ಹೋರಾಟ ಇತ್ಯಾದಿಯೆಲ್ಲಾ ಉದ್ದೀಪನ ತಂತ್ರವು. ಅವರಿಗೇ ತಿಳಿಯದೆ ಪ್ರಯೋಗವಾದ ಉದಾಹರಣೆಗಳು. ಇಲ್ಲೆಲ್ಲಾ ನಮ್ಮ ದೇಶದ ಪ್ರಬಲಶಕ್ತಿಯಾದ ಮಾಧ್ಯಮದ ಹುಚ್ಚುತನವೇ ಉನ್ಮಾದಕ್ಕೆ ಕಾರಣವಾಗಿ ಉದ್ದೀಪನಗೊಂಡಿದೆ.

ಇಲ್ಲೆಲ್ಲಾ ಹೆಚ್ಚಿನ ಭಾಗ ಮಾಧ್ಯಮದವರು ತಪ್ಪು ಹೆಜ್ಜೆ ಇಟ್ಟಿದ್ದಾರೆ. ಇದು ಖಂಡಿತ ಭವಿಷ್ಯದಲ್ಲಿ ಈ ಮಾಧ್ಯಮ ವ್ಯವಸ್ಥೆಯ ಸರ್ವನಾಶಕ್ಕೆ ಕೀರ್ತಿಮುಖದಂತೆ ತಾವೇ ಕಾರಣರಾಗುತ್ತಿದ್ದಾರೆ ಎಂಬುದೂ ಸತ್ಯ. ಮಾಧ್ಯಮಗಳು ತುಂಬಾ ಜವಾಬ್ದಾರಿಯಿಂದ, ಉದ್ವೇಗ ರಹಿತವಾಗಿ, ವೈಯಕ್ತಿಕತೆಯನ್ನು ಬಿಟ್ಟು, ಉನ್ಮಾದಕ್ಕೆಡೆಯಿಲ್ಲದೆ, ವಿವೇಕಯುಕ್ತವಾಗಿ ವ್ಯವಹರಿಸಬೇಕಿದೆ. ಇದೇ ಉದ್ದೀಪನವೇ ವಿಕೃತ ಪ್ರಯೋಗವಾಗಿ ಇಡೀ ಯಾದವಕುಲ ನಾಶವಾಯ್ತು. ಅದಕ್ಕೆ ಶಾಪದ ಕಾರಣವಿಟ್ಟರು; ಕಥೆ ಕಟ್ಟುವವರು. ಆದರೆ ಕೃಷ್ಣ ಬಳಸಿದ ಯಾವ ಸಂಜೀವನ ವಿಧ್ಯೆಯ ಕೊನೆಯಗಾಲದ ಅಡ್ಡ ಪರಿಣಾಮವೇ ಈ ಯಾದವ ಕುಲನಾಶ. ಹಾಗಾಗಿ ಬೇಸರಗೊಂಡ ಕೃಷ್ಣ ಅವತಾರ ಸಮಾಪ್ತಿ ಮಾಡಿದನೆಂದ ಮೇಲೆ ಸಾಮಾನ್ಯ ವರ್ಗದ ಕೈಗೆ ಈ ವಿಧ್ಯೆ ಸಿಕ್ಕಿದರೆ ಏನಾಗಬಹುದು ಚಿಂತಿಸಿ.

ಇನ್ನು ಕೊನೆಯದಾದ ಕ್ರಿಯಾಕರ್ಮ. ಇದೊಂದು ವಿಶೇಷ ಪ್ರಕ್ರಿಯೆ. ಯಾವ ಪ್ರಯೋಗಕ್ಕೆ ಮಾನವ ದೇಹದಲ್ಲಿ ಯಾವ ಭಾಗ ನಿರ್ಣಯಿಸುವುದು, ಅಲ್ಲಿ ಶಕ್ತಿಪಾತ ಮಾಡುವುದು. ಇದು ಅದರ ವಿಧಿ. ಪ್ರಾಕೃತಿಕವಾದರೆ ಯಾವ ಮರ, ಯಾವ ಗಿಡ ಎಂದು ಗುರುತಿಸುವುದು. ಖಗೋಲವಾದರೆ ಮೇಷ + ಕಾಲ ನಿರ್ಣಯ, ಇವೆಲ್ಲಾ ಇರುವ ವಿಧಿಯೇ ಕ್ರಿಯಾಕರ್ಮ. ಈ ಉಳಿದ ೫ ಬಗೆಯ ವಿಧಿಗಿಂತ ಜೀವಶಕ್ತಿ ತುಂಬುವ ವಿಭಾಗ ಈ ಆರನೆಯದಾದ ಈ ಕ್ರಿಯಾಕರ್ಮವೆಂಬ ವಿಭಾಗ.

ಓಂ ಮಿತ್ರಸ್ಯ ಚಕ್ಷುರ್ವರುಣಂ ಬಲೀಸ್ತೇಜೋ ಯಶಸ್ವಿಸ್ಥವಿರಂ ಸಮಿದ್ಧಂ |
ಅನಾಹತಸ್ಯಂ ವಸನಾ ಜರಾಯೇಷು ಪರೀದಂ ವಾಜಾಯಾಜಿನಃ ಸದೇಹಮ್ ||

ಇದು ಲುಪ್ತಮಂತ್ರ ಭಾಗದ ಒಂದು ತುಣುಕು. ಈ ಸಂಜೀವಿನಿ ವಿಧ್ಯೆಯಿಂದ ಮಾನವನು ಎಲ್ಲವನ್ನೂ ಸಾಧಿಸಬಹುದು. ಯಾಗ ಯಜ್ಞಗಳಿಂದ ಅಸಾಧ್ಯವಾದದ್ದನ್ನು ಸಾಧಿಸಲು ಇದು ಮಾರ್ಗ. ಅಲ್ಲದೆ ದೇಹದೊಂದಿಗೇ ಇದ್ದು ಜರೆಯನ್ನು ಜಯಿಸಿ ಬಲ, ತೇಜಸ್ಸು, ಯಶಸ್ಸು ಸಾಧಿಸಬಹುದು ಎಂದಿದೆ. ಇಂತಹಾ ಒಂದು ವಿಶೇಷ ವಿಧ್ಯೆಯ ತುಣುಕೇ ಈಗಿನ "ರೇಖಿ". ಇದು ಪ್ರಸಕ್ತ ಜಪಾನೀಯೊಬ್ಬನ ಸಂಶೋಧನೆಯೆನ್ನಿಸಿದರೂ ಇದರ ಸಾವಿರಪಟ್ಟು ಹೆಚ್ಚು ಉತ್ತಮವಾದ "ಸಂಜೀವನ ವಿಧಿಯೆಂಬ" ವಿಧ್ಯೆಯು ಮೂಲತಃ ಭಾರತೀಯವೇ. ಅದರ ಕಿಲುಬು ರೂಪದಲ್ಲಿ ವಿಸರ್ಜಿಸಿದ್ದನ್ನು ಈಗ ರೇಖಿಯೆಂದು ಗುರುತಿಸಿದ್ದಾರೆ. ದೃಷ್ಟಿ, ಶಬ್ದ, ಸ್ಪರ್ಶ, ಮೋಹನಗಳಿಂದ ಜೀವಿಗಳನ್ನು ಸುಸ್ಥಿತಿಯಲ್ಲಿಡುವ ಈ ಚಿಕಿತ್ಸಾ ಪದ್ಧತಿ ಸದ್ಬಳಕೆಯಾದಲ್ಲಿ ಶುಭವೇ. ಪ್ರಸಕ್ತಕಾಲೀನ ರೇಖಿಯಿಂದ ಸದ್ಯಕ್ಕೆ ಉಪಯೋಗವೂ ಇಲ್ಲ, ಉಪದ್ರವವೂ ಇಲ್ಲ ಚಿಂತೆ ಬೇಡ. ಶಕ್ತಿಪಾತ ಮಾಡುವವನು ಸಶಕ್ತನಾಗಿರದಿದ್ದಲ್ಲಿ ಅವನೇ ನಾಶವಾಗುತ್ತಾನೆಯಾದ್ದರಿಂದ ಸಾಮಾಜಿಕ ತೊಂದರೆ ಇಲ್ಲ. ತಾನು ದುಡಿದು ಹಂಚಿದರೆ ಅಪಾಯವಿಲ್ಲ. ಸಾಧಕನು ತಾನು ಸಾಧನೆ ಮಾಡಿ ಈ ರೇಖಿ ಪದ್ಧತಿಯಿಂದ ಸಮಾಜದ ಸಮಸ್ಯೆಗೆ ಪರಿಹಾರ ಕೊಟ್ಟರೆ ತೊಂದರೆ ಏನೂ ಇಲ್ಲ. ಬೇರೆ ಶಕ್ತಿಯನ್ನು ಕ್ರೋಢೀಕರಿಸಿ ಪ್ರಯೋಗಿಸುವ ವಿಧಾನ, ಶಕ್ತಿ, ಅರಿವು, ಈಗಿನ ರೇಖಿಗಿಲ್ಲ. ಹಾಗಾಗಿ ಚಿಂತೆ ಬೇಡ. ಹಾಗಾಗಿ ಸದ್ಯಕ್ಕೆ ರೇಖಿಯ ಬಗ್ಗೆ ಅಥವಾ ಪುರಾತನ ಸಂಜೀವನವಿಧಿಯ ಬಗ್ಗೆ ಹೆಚ್ಚಿನ ಸಂಶೋಧನೆ ಬೇಡವೆಂದೇ ನನ್ನ ಅಭಿಪ್ರಾಯ. ಸದ್ಯಕಾಲೀನ ರೇಖಿಯೂ ಉಪಯುಕ್ತವೇನೋ ಅಲ್ಲವೆಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಇಂತು,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರ ಮೀಮಾಂಸಕರು
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a comment