Monday, 29 May 2017

ತಲೆಗೆ ಯಾವ ಎಣ್ಣೆ ಹಾಕಬೇಕು? ಅದರಿಂದ ಲಾಭವೇನು?

ಎಲ್ಲರೂ ತಲೆಗೆ ಎಣ್ಣೆ ಹಾಕಬೇಕೇ ಹೊರತು ಹೊಟ್ಟೆಗಲ್ಲ. ಹಾಗೇ ಈ ದಕ್ಷಿಣ ಕನ್ನಡ ಪ್ರದೇಶಕ್ಕೆ ಉತ್ತಮವಾದದ್ದು ಕೊಬ್ಬರಿ ಎಣ್ಣೆ. ನಿಮಗೆ ಆಹಾರಕ್ಕಾಗಲೀ ತಲೆಗೆ ಹಾಕುವುದಕ್ಕಾಗಲಿ ಉತ್ತಮವಾದದ್ದು ಕೊಬ್ಬರಿ ಎಣ್ಣೆ. ಸಹಜವಾಗಿ ತಲೆಗೆ ಎಣ್ಣೆ ಹಾಕುವುದರಿಂದ  ನಿಮ್ಮ ಕಣ್ಣಿನ ದೃಷ್ಟಿಯ ಶಕ್ತಿಯನ್ನು, ಕಿವಿಯ ಶ್ರವಣ ಶಕ್ತಿಯನ್ನು, ನಾಲಗೆಯ ರುಚಿ ಶಕ್ತಿಯನ್ನು ಕಾಯ್ದುಕೊಂಡು ಬರುತ್ತದೆ. ತಲೆ ಕೂದಲನ್ನು ಚೆನ್ನಾಗಿ ಇಟ್ಟುಕೊಂಡು ಬರುತ್ತದೆ. ವಾತಾವರಣದಲ್ಲಿ ತುಂಬಿರುವ ವಿಪರೀತ ಸೀಸ ಇತ್ಯಾದಿ ಲೋಹಾಂಶಗಳಿಂದ ತಲೆಗೆ ಉಂಟಾಗುವ ತೊಂದರೆಗಳನ್ನು ತಡೆಗಟ್ಟುತ್ತದೆ. ಹಾಗಾಗಿ ಈಗಿನ ನಗರಿಗಳಲ್ಲಿ ಹೊರಗೆ ಸಂಚರಿಸುವಾಗ, ಫ್ಯಾಕ್ಟರಿಗಳಲ್ಲಿ, ರಾಸಾಯನಿಕ ಹೆಚ್ಚಿರುವಲ್ಲೆಲ್ಲಾ ತಲೆಗೆ ಎಣ್ಣೆ ಹಾಕಿಕೊಂಡು ಹೋದರೆ ರಕ್ಷಣಾತ್ಮಕ. ಅದು ಯಾವುದೇ ಕೃತಕಾಂಶ ಬೆರೆಸದ ಕೊಬ್ಬರಿ ಎಣ್ಣೆ ಆಗಬೇಕು. ಆಹಾರವಾಗಿ ನೀವು ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಇಡೀ ದೇಹವನ್ನು ಅದು ರಕ್ಷಣೆ ಮಾಡುತ್ತದೆ. ರಕ್ತದ ಕೊರತೆ ಇರುವುದಿಲ್ಲ. ಹಾಗೇ ಸಂಧಿವಾತ ಇತ್ಯಾದಿ ಕಾಯಿಲೆಗಳು ಬರುವುದಿಲ್ಲ. ಆದರೆ ಈಗ ಡಾಕ್ಟರುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೊಬ್ಬರಿ ಎಣ್ಣೆ ತಿಂದರೆ ಕೊಲೆಸ್ಟ್ರಾಲ್ ಬರುತ್ತದೆ ಎಂದು ಎಲ್ಲರನ್ನೂ ಕೊಲೆ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಅಮೇರಿಕಾ ದೇಶ ಒಂದು ಹೇಳಿಕೆ ಕೊಟ್ಟಿತು. ಕೊಲೆಸ್ಟ್ರಾಲ್ ಎಂಬ ಕಲ್ಪನೆಯೇ ಸುಳ್ಳು, ಅದು ನಮ್ಮ ಸಂಶೋಧನೆಯಲ್ಲಿ ಕಂಡುಬಂದ ಒಂದು ಸುಳ್ಳು ಎಂದು ಅಧಿಕೃತವಾಗಿ ಹೇಳಿಕೆ ಕೊಟ್ಟಿದೆ. ಆದರೆ ಅರ್ಧ ಶತಮಾನದಿಂದ ಕೊಲೆಸ್ಟ್ರಾಲ್ ಎಂಬ ಸುಳ್ಳು ಕಲ್ಪನೆಯ ಬಗ್ಗೆ ಪ್ರಚಾರ ಮಾಡಿ ಅದಕ್ಕಾಧರಿಸಿದ ಚಿಕಿತ್ಸೆಗಳು, ಸಿದ್ಧಾಹಾರಗಳು ಇತ್ಯಾದಿ ಜನರಿಗೆ ಮಾಡಿದ ಮೋಸ ಹಾಗೂ ನಷ್ಟಕ್ಕೆ ಅಮೇರಿಕಾ ಜವಾಬ್ದಾರಿ ಅಲ್ಲವೆಂಬಂತಿದೆ. ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳುತ್ತೇವೆ ಎನ್ನುವ ಮಟ್ಟಿಗೆ ಅದಕ್ಕೊಂದು ತಿಪ್ಪೆ ಸಾರಿಸಿದ ವರದಿ ಪ್ರಕಟಿಸಿದೆ. ಆಧಾರ:- https://goo.gl/5WBR0x, https://goo.gl/Ekww3U
ಈ ಪ್ರದೇಶದ ಅತೀ ಉತ್ತಮವಾದ ತೈಲ ಎಂದರೆ ಕೊಬ್ಬರಿ ಎಣ್ಣೆ. ಅದನ್ನು ಆಹಾರ ರೂಪದಲ್ಲಿ ಚೆನ್ನಾಗಿ ಬಳಸಬಹುದು, ಏನೂ ಸಮಸ್ಯೆ ಇಲ್ಲ. ನಂತರ ಎಳ್ಳೆಣ್ಣೆ, ಕಡಲೇಕಾಯಿ ಎಣ್ಣೆ, ಇವೆಲ್ಲ ಕೂಡ ಇಲ್ಲಿ ಬೆಳೆಯುವುದಕ್ಕೂ ಸಾಧ್ಯ, ಬಳಸಲಿಕ್ಕೂ ಆಗುತ್ತದೆ. ಆದರೆ ಆಹಾರವಾಗಿ ಬಳಸುವುದಕ್ಕೆ ಅವ್ಯಾವುದೂ ಕೊಬ್ಬರಿ ಎಣ್ಣೆಯ ಸ್ಥಾನಕ್ಕೆ ಬರುವುದಿಲ್ಲ. ತುಪ್ಪಕ್ಕಿಂತಲೂ ಒಂದು ರೀತಿಯಲ್ಲಿ ಕೊಬ್ಬರಿ ಎಣ್ಣೆ ಶ್ರೇಷ್ಠ; ಕಡಿಮೆದಲ್ಲ. ತುಪ್ಪವು ತುಂಬಾ ಉತ್ತಮವಾದ ಆಹಾರ. ಆದರೆ ಅದು ಏನು ನಿಮ್ಮ ದೇಹಕ್ಕೆ ಪೂರೈಸಿ ಸಹಾಯ ಮಾಡಬಹುದೋ ಅದಕ್ಕಿಂತ ೧೦% ಹೆಚ್ಚು ಕೊಬ್ಬರಿ ಎಣ್ಣೆಯು ಸಹಾಯಕ. ಹಾಗಾಗಿ ಇತ್ತೀಚೆಗೇನೋ ಗೊತ್ತಿಲ್ಲ, ಒಂದು ೫೦ ವರ್ಷದ ಹಿಂದೆ ಇಲ್ಲಿ ಸಂಚಾರ ಮಾಡುವಾಗ ನೋಡಿದ್ದೇನೆಂದರೆ ಊಟಕ್ಕೆ ಎಲೆಗೆ ಅನ್ನ ಹಾಕುತ್ತಾರೆ, ಉಪ್ಪು, ಆಮೇಲೆ ಪಲ್ಯ ಹಾಕುತ್ತಾರೆ, ನಂತರ ಕೊಬ್ಬರಿ ಎಣ್ಣೆ ತೆಗೆದುಕೊಂಡು ಬರುತ್ತಿದ್ದರು. ತುಪ್ಪ ಬೇಕೋ ಎಂದು ಕೇಳುವುದಿಲ್ಲ. ಆ ಪಲ್ಯವನ್ನು ಎಣ್ಣೆಯ ಜೊತೆಯಲ್ಲಿ ಚೆನ್ನಾಗಿ ಕಲಸಿ ಊಟ ಮಾಡುವ ಪದ್ಧತಿ ಇತ್ತು. ಅದು ಆರೋಗ್ಯದಾಯಕವೂ ಹೌದು. ಈಗ ಅದೆಲ್ಲ ಬಿಟ್ಟು ಹೋಗಿದೆ. ಸಾಧ್ಯವಾದರೆ ಆ ಸಂಸ್ಕೃತಿಯನ್ನು ಪುನಃ ಬಳಕೆಗೆ ತನ್ನಿರಿ.

     ಹಿಂದೆಲ್ಲ ದಕ್ಷಿಣ ಕನ್ನಡದಲ್ಲಿ ಈಗಿನಂತೆ ತೊಗರಿಬೇಳೆಯನ್ನು ಬಳಸುತ್ತಲೇ ಇರಲಿಲ್ಲ. ಬಳಸುವುದಾದರೂ ತಾವೇ ಒಂದು ರೀತಿಯ ಬೇಳೆಯನ್ನು ಬೆಳೆದುಕೊಳ್ಳುತ್ತಿದ್ದು ಅದನ್ನೇ ಬಳಸುತ್ತಿದ್ದರು. ಬಹಳ ವಿಶೇಷ ಸಂದರ್ಭ ಅಂದರೆ ಮದುವೆ ಇತ್ಯಾದಿಗಳಲ್ಲಿ ಮಾತ್ರ ತೊಗರಿಬೇಳೆ ತರುವುದಿತ್ತು. ಹಾಗಂತ ಸಾರು ಮಾಡಲು ಬರುವುದಿಲ್ಲ ಎಂದಲ್ಲ. ತುಂಬಾ ರುಚಿಕರವಾದ ಸಾರು ಮಾಡುತ್ತಿದ್ದರು. ಒರಿಸ್ಸಾ ಪ್ರದೇಶದ ಸಾರು ಬಿಟ್ಟರೆ ದಕ್ಷಿಣ ಕನ್ನಡದ ಸಾರೇ ನನಗೆ ಬಹಳ ಇಷ್ಟವಾದದ್ದು. ಅದಕ್ಕೆ ಈ ಕಡೆಯಲ್ಲಿ ಔಡೆ, ಅಲಸಂಡೆ, ಇತ್ಯಾದಿ ಕಾಳುಗಳಿಂದ ಬೇಳೆ ಮಾಡಿ ಸಾರು, ಹೋಳಿಗೆ, ಹಪ್ಪಳ, ಇತ್ಯಾದಿ ಮಾಡುತ್ತಿದ್ದರು. ಅದೆಲ್ಲ ಬಿಟ್ಟು ಹೋಗಿದೆ. ಉದಾ:- ಈ ಪ್ರದೇಶದಲ್ಲಿ ಇದ್ದ ಕಪ್ಪು ಹೆಸರುಕಾಳು ಈಗ ಗೊತ್ತೇ ಇಲ್ಲ. ಕುಂದಾಪುರದ ಕಡೆ ಇದ್ದರೆ ಸಿಗಬಹುದಷ್ಟೆ. ಅದು ಅಷ್ಟೇ ತಂಪು ಹಾಗೂ ಸ್ನಿಗ್ಧ. ಹೆಸರು ಕಾಳನ್ನು ಹೆಚ್ಚು ತಿಂದರೆ ಅಗ್ನಿಮಾಂದ್ಯ ಆಗಬಹುದು. ಆದರೆ ಕರಿ ಹೆಸರನ್ನು ತಿಂದರೆ ನಿಮಗೇನು ಬಾಧಕವಿಲ್ಲ. ಅಷ್ಟು ಸ್ನಿಗ್ಧ ಶಕ್ತಿಯನ್ನು ಹೊಂದಿರತಕ್ಕಂತಹಾ ಔಷಧ ಅದರಲ್ಲಿದೆ. ಅಂತಹಾ ಆಹಾರ ಪದ್ಧತಿಗಳನ್ನೆಲ್ಲ ಬಿಟ್ಟುಕೊಂಡು ಬಂದಿದ್ದೇವೆ. ಸಾಧ್ಯವಾದರೆ ಆದಷ್ಟು ನಮ್ಮ ಹಿಂದಿನ ಆಹಾರ ಪದ್ಧತಿಯನ್ನು ಬಳಸಿಕೊಂಡರೆ ನಾವು ಬಹಳ ಮುಂದೆ ಹೋಗಬಹುದು. ಈಗ ಹಿಂದಕ್ಕೆ ಹೋಗುತ್ತಿದ್ದೇವೆ. ಇನ್ನು ಹೀಗೆ ಮುಂದುವರೆಯುತ್ತಾ ಹೋದರೆ ೫೦ ವರ್ಷ ಆಗುತ್ತಲೇ ಬದುಕಿದ್ದರೂ  ಯಾರಿಗೇನೂ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಮಲ ಮೂತ್ರ ಹೋಗುವುದಕ್ಕೂ ಆಗದೆ ಚೀಲ ಚುಚ್ಚಿಕೊಂಡೇ ಪೇಟೆಯಲ್ಲಿ ಮೆರವಣಿಗೆತಿರುಗಬೇಕಾದ ಪರಿಸ್ಥಿತಿ ಬರಬಹುದು. ಆದರೆ ನಾವು ಹಾರೈಸುವುದು ದೇವರನ್ನು ಚೆನ್ನಾಗಿ ಅಲಂಕಾರ ಮಾಡಿ ಮೆರವಣಿಗೆ ಹೊರಡಿಸಿಕೊಂಡು ಹೋಗಬೇಕು. ಆದರೆ ಮೆರವಣಿಗೆ ಮಾಡಿಸುವ ಜನರೇ ಮಲಮೂತ್ರದ ಚೀಲ ಹಾಕಿಕೊಂಡು ಬರುವ ಸ್ಥಿತಿ ಬಂದಿದೆ ಈಗ. ಅದಕ್ಕೆ ಕಾರಣ ಈಗಿನ ಡಾಕ್ಟರುಗಳು. ಅದಕ್ಕೆಲ್ಲ ಪರಿಹಾರವೇ ನಮ್ಮ ಮೂಲ ಆಹಾರ ಪದ್ಧತಿಗೆ ಹಿಂತಿರುಗುವುದು. ಅದರಿಂದ ಮಾತ್ರ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ.

ಕೊಬ್ಬರಿ ಎಣ್ಣೆಯನ್ನು ತಿಮರೆ, ಮೆಹಂದಿ ಸೊಪ್ಪು ಇತ್ಯಾದಿ ಸೇರಿಸಿ ಬಿಸಿ ಮಾಡಿ ತಲೆಗೆ ಹಾಕುತ್ತಾರಲ್ಲ, ಅದು ಸರಿಯೇ?
     ಅದು ಹಾಗಲ್ಲ. ಹಿಂದೆ ತೆಂಗಿನ ಎಣ್ಣೆಯು ಗಟ್ಟಿಯಾಗದಂತೆ ಶುದ್ಧ ಮಾಡಿ ಇಡುವ ವಿಧಾನವಿತ್ತು. ದಕ್ಷಿಣ ಕನ್ನಡದಲ್ಲಿ ಸರಾಸರಿ ೨೩ ಡಿಗ್ರಿಗಿಂತ ಹೆಚ್ಚೇ ವಾತಾವರಣದ ಶಾಖ ಇರುತ್ತದೆ. ಹಾಗಾಗಿ ಇಲ್ಲಿ ಅಷ್ಟು ಸಮಸ್ಯೆ ಇಲ್ಲ. ಈಗ ಬೆಳೆಯುವ ತೆಂಗಿನಕಾಯಿಗಳನ್ನು ಬೆಳೆಯುವಾಗ ಸಿಂಪಡಿಸಿದ ರಾಸಾಯನಿಕಗಳ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಎಣ್ಣೆಯು ಹೆಚ್ಚು ಗಟ್ಟಿಯಾಗುತ್ತದೆ. ಆದರೆ ಹಿಂದೆ ಏನು ಮಾಡುತ್ತಿದ್ದರು ಎಂದರೆ ಬಿಸಿ ಮಾಡುವುದೆಂದರೆ ಒಲೆಯಲ್ಲಿ ಖಾಯಿಸುವುದಲ್ಲ. ಅಗಲವಾದ ತಟ್ಟೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ವೀಳ್ಯದೆಲೆ, ಒಂದು ಚೂರು ಉಪ್ಪು (ಹೆಚ್ಚಾಗಿ ಸೈಂಧವ ಲವಣ), ಮೈತಾಳ ಎಂಬ ಎಲೆ ಇವುಗಳನ್ನು ಸೇರಿಸಿ ಆ ಎಲೆ ಒಣಗುವವರೆಗೆ ಬಿಸಿಲಿನಲ್ಲಿ ಇಡುತ್ತಿದ್ದರು. ಅಷ್ಟು ಮಟ್ಟಕ್ಕೆ ಎಣ್ಣೆ ಬಿಸಿಯಾದ ಮೇಲೆ ಅದನ್ನು ಸೋಸಿದಾಗ ಕೆಳಗೆ ಒಂದಿಷ್ಟು ರಜಪುಡಿ ಸಿಗುತ್ತದೆ. ಅದೇ ಘಟ್ಟಿಯಾಗತಕ್ಕಂತಹಾ ಗುಣ, ಅದನ್ನು ಬೇರ್ಪಡಿಸಲಾಯಿತು. ಕಡೆಗೆ ಕೊಬ್ಬರಿ ಎಣ್ಣೆ ಘಟ್ಟಿಯಾಗುವುದಿಲ್ಲ. ಅದು ದಕ್ಷಿಣ ಕನ್ನಡದಲ್ಲಿ ಬಳಸುತ್ತಿದ್ದ ಒಂದು ಉಪಾಯ.

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ,
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು

2 comments:

  1. Paravaagilla Bidi.. Satya yaavaagalu kahiyaage irutte. Yellarigu ruchisalla; ruchisabaaradu kuda.

    ReplyDelete