Tuesday, 11 July 2017

ಸಾಮವೇದ ಭಾಷ್ಯ ಸಂಹಿತಾ ಗ್ರಂಥ ಲೋಕಾರ್ಪಣೆ
ದಿನಾಂಕ 29-06-2017 ರಂದು ಷಷ್ಠೀ ಗುರುವಾರ ಶುಭ ಘಳಿಗೆಯಲ್ಲಿ ಶ್ರೀಶ್ರೀಶ್ರೀ ನೃಸಿಂಹಾಶ್ರಮ ಸ್ವಾಮಿಗಳು, ಬಾಳೆಕುದ್ರು ಶ್ರೀ ಮಠ, ಹಂಗಾರಕಟ್ಟೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ತಮ್ಮ ಅಮೃತ ಹಸ್ತದಿಂದ ಶ್ರೀಯುತ ಕೆ.ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರು ಕನ್ನಡದಲ್ಲಿ ರಚಿಸಿದ ಸಾಮವೇದ ಭಾಷ್ಯ ಸಂಹಿತಾ ಎಂಬ ಬೃಹದ್ ಗ್ರಂಥವನ್ನು ಲೋಕಾರ್ಪಣೆ ಮಾಡಿ ಆಶೀರ್ವಚನಗೈದರು. 

ಸಾಮವೇದದ ಮಂತ್ರಗಳು ಹೇಗೆ ಪ್ರಪಂಚದ ಜನರ ದುರ್ನಡತೆಯನ್ನು ಸನ್ನಡತೆಯಾಗಿ ಪರಿವರ್ತಿಸಿ, ಪ್ರಪಂಚದಲ್ಲಿ ಮಳೆ ಬೆಳೆ ಸಮೃದ್ಧವಾಗುವಂತೆ ಮಾಡುತ್ತವೆ ಜೊತೆಯಲ್ಲಿ ಪರಸ್ಪರ ಸಹಕಾರ-ಒಗ್ಗಟ್ಟು, ಪ್ರೀತಿ-ವಿಶ್ವಾಸ ಅಭಿವೃದ್ಧಿ ಪಡಿಸುತ್ತವೆ ಇತ್ಯಾದಿ ಮಂತ್ರಗಳ ಉದ್ದೇಶ ಮತ್ತು ಪ್ರಯೋಗವನ್ನು ವಿವರಿಸಿದ  ಶ್ರೀಯುತ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರು ದೇವರಿಗೆ ಶತರುದ್ರೀಯ ಗಾನವನ್ನು ಹಾಡಿ ಭಗವಂತನನ್ನು ಸಂತೋಷಪಡಿಸಿದರು. 

ಶ್ರೀಯುತ ಮಂಜುನಾಥ ಶ್ರೌತಿಗಳು, ಮೈಸೂರು ಇವರು ಸಹ ಸಾಮವೇದ ಮಂತ್ರದ ಗಾನವನ್ನು ಹಾಡಿದರು. ಶ್ರೀಯುತ ಯಾಜಿ ಡಾ. ನಿರಂಜನ್ ಭಟ್, ಉಡುಪಿ ಅವರೂ ಕೂಡ ಸಾಮಗಾನವನ್ನು ಹಾಡಿ ಭಗವಂತನ ಸ್ತುತಿಗೈದರು. ವೈದ್ಯ ಬಿ. ಕುಮಾರಸ್ವಾಮಿಯವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ತಮ್ಮ ಅನುಭವಗಳನ್ನು ಹಂಚಿದರು. 

ಗ್ರಂಥದ ಬೆರಳಚ್ಚು ಮಾಡಿದ ಶ್ರೀಯುತ ಕೆ.ಎಸ್. ಕೃಷ್ಣಮೂರ್ತಿ ಅಡಿಗರವರು ಉಪಸ್ಥಿತರಿದ್ದರು. ಗ್ರಂಥಕ್ಕೆ ಬೇಕಾದ ಕನ್ನಡ ತಂತ್ರಾಂಶ ಹಾಗೂ ಮುಖಪುಟವಿನ್ಯಾಸ ಮಾಡಿದ ಶ್ರೀಯುತ ನಾಗೇಶ ಹೆಚ್.ಜಿ. ಋತ್ವಿಕ್ ವಾಣಿ ಸಂಪಾದಕರು ಇವರು ಸ್ವಾಗತಿಸಿದರು. ಶ್ರೀಯುತ ನಾಗೇಶ ಅಡಿಗರು ಈ ಸಾಮವೇದ ಭಾಷ್ಯ ಸಂಹಿತಾ ಗ್ರಂಥದ ಪ್ರಕಟಣೆಗೆ ಸಹಕರಿಸಿದ ಶ್ರೀಮತಿ ಪ್ರತಿಭಾ ಪೈ ಮತ್ತು ಅವರ ಕುಟುಂಬಕ್ಕೆ ಶುಭವನ್ನು ಹಾರೈಸಿ ವಂದನಾರ್ಪಣೆಗೈದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.


ಸಾಮದ ಮಹತ್ವ (ತಿರುಕ ಸಂಹಿತಾ - ೧೮)
ಜಗವ ಗೆಲ್ಲಲುಬಹುದು ಗಾಯತ್ರದಲಿ ಪೋಷಿಸಬಹುದು
ಜಗವ ಗೋಸಾಮದಲಿ ಜನಮಾನಸವ ಹಿಡಿತದಲಿಟ್ಟು
ಜಗದ ಜಂಜಾಟದಿಂದಲಿ ದೂರೀಕರಿಸಿ ಆತ್ಮೋನ್ನತಿಯ ಸಾಧಿಸಬಹುದು ವೃಂದದಲೀ ||
ಜಗದ್ಗುರು ಶ್ರೀಹರಿಯ ಸಾಮದ ರೂಪ ಆತ್ಮೋನ್ನತಿಯ ನೀವನು
ಜಗಕೆ ಜ್ಞಾನವನೀವ ಅನ್ನಕಾರಣ ವೇದ ಸಾಮ ಕೇಳೈ ನೀನು
ಜಗದ ಸಕಲಾತ್ಮದರಿವ ಪಡೆಯಲು ಪವಮಾನ ಕಾಂಡವನರಿಯೋ ಮಗನೇ ಕೇಳೆಂಬೇ || ೧ ||

ಜೀವ ಜೀವರ ಭೇದ ನರರೊಳಗೆ ಮಾತ್ರವಲ್ಲವು ಸಕಲ
ಜೀವಿಗಳೊಳಗೆ ಇದೆ ಆದರೇನ್ ಜಂಜಾಟವಿಲ್ಲವು ಸಾಮ
ಜೀವಿಗಳಲ್ಲಿ ಮೂಡಿಸುವುದು ಒಮ್ಮತ ಕೇಳು ನಯನ ಮೋಹಕ ಕರ್ಣಾನಂದಕರ ||
ಜೀವಲೋಕದ ಸೃಷ್ಟಿ ನಾದ ಬಿಂದುವಿನಿಂದ ನಾದವೇ
ಜೀವರಸ ಕೇಳು ನಿರಂತರತೆಗೆ ಪ್ರಕೃತಿನಾದವೇ ನಿ
ರ್ಜೀವತೆಗೆ ಜೀವ ತುಂಬುವ ವಿಧ್ಯೆ ಸಾಮದೊಳಗಿದೆ ಕೇಳು ಮಗುವೆ ನೀನೆಂಬೇ || ೨ ||

ಉತ್ತರಾರ್ಚಿಕ ಕೇಳು ಜೀವರ ಸಕಲಾಭಿಷ್ಟದಾಯಕ
ಉತ್ತರೋತ್ತರ ಕಾವ ಚೈತನ್ಯ ಸ್ವರ ವೇದದೊಳಗಣ
ಉತ್ತರಿಸಿ ತೋರುವ ಶಕ್ತಿಯೇ ನಾದಬಿಂದುವು ಸಾಮದೊಳು ಅಡಕವಾಗಿಹುದೂ ||
ತತ್ತರಿಸಿ ಸೊರಗಿದಾ ಜೀವಚರಗಳಿಗೆಲ್ಲ ಸಾಮದಲಿ
ಎತ್ತರದ ಸುಖ ಜೀವನದರ್ಥ ಬೋಧಿಸುವ ಸಾಮವು
ಉತ್ತರೋತ್ತರನೀವುದು ಅದು ರಾಥಂತರವು ಕೇಳೆಲವೊ ಮಗುವೆ ನೀನೆಂಬೇ || ೩ ||

ಇನ್ನು ಕೇಳು ಮಾಧವಿಯು ಮನದ ತೋಷಿಪ ರಾಗ
ತನ್ನೆಲ್ಲ ಕಾಮನೆಯ ನೀಗಿ ಉತ್ತರಿಪ ರಾಗವು ಮೋದವು
ಬನ್ನ ಪಡುವರ ಸಂತೈಪ ರಾಗವಿದೆ ಕೇಳು ಉತ್ಸಾಹ ತುಂಬುವುದು ಮಲ್ಹಾರವು ||
ಚೆನ್ನಾದ ರಾಗಗಳು ಬಾರ್ಹತವು ಸಕಲ ಚರಾಚರಗ
ಳೆನ್ನು ತಲೆದೂಗಿ ಕುಣಿವವು ಕೇಳಿಯಲಿ ಸಂತೋಷ
ವಿನ್ನು ಬಾಳಿನಾ ಸಾರ ಉಣ್ಣಲಿಕ್ಕುವ ಗಾನ ಮಂದಾರ ಕೇಳೈ ಮಗುವೆ ನೀನೆಂಬೇ || ೪ ||

ಮಗುವೆ ಕೇಳ್ ಒಂದು ಮೂರರ ಸಂಧಿ ಬಲ್ಲೆಯ ಅದು
ಮೊಗವೆತ್ತಿ ನಡೆವ ದಾರಿ ತೋರಿಪ ರಾಗ ಗಾಂಧಾರ ಇದರಲಿ
ನಗಧರನು ಮೋಹವನಿಟ್ಟ ಹಾಡಿದೊಡೆ ಬಂದು ಕೃಪೆಯಿಟ್ಟು ಸಲಹುವನಾಗ ||
ನಾಗಪತಿ ಹಣೆಲೆಕ್ಕ ಬಲ್ಲೆಯ ಅದರೊಳಗೆ ಮೂರು ಮತ್ತೇಳು
ಬಗೆ ಕಳೆದು ನೀ ಸಂಧಿ ಹಾಡಲು ನಾಗಶಯನನು ಕುಣಿವ
ಬಾಗೆಯರರಸ ತಾನೆದ್ದು ವೀಣೆಯ ಮೀಟುವನು ರಾಗಕೆ ಅನುಕರಿಸು ನೀನೆಂಬೇ || ೫ ||

ಕಲ್ಲಕರಗಿಸಬಹುದು ಕೊರಡು ಕೊನರುವುದು ಕೇ
ಳೆಲ್ಲವನು ಮಾಡಲು ಶಕ್ತ ಸಾಮವು ಹರಿಯಧಿದೇವತೆ
ಎಲ್ಲದರೊಳಗಿಹನಾತ ನಾದರೂಪದಿ ನಾದಮಯವೆಲ್ಲ ಲೋಕವು ಇದನರಿತುಕೊ ||
ಬಲ್ಲವರಿದ ನರಿತಿಹರು ಜಗದ ನಾಟಕವೆಲ್ಲ ನಾದದಿಂದಲೆ
ಹುಲ್ಲು ಚಿಗುರುವುದು ಜೀವಿ ಜನಿಸುವುದು ಹೆಚ್ಚೇಕೆ ಕೇಳ್
ಎಲ್ಲ ಜೀವಿಗಳ ಹುಟ್ಟಿಗೆ ಕಾರಣವೇ ನಾದ ಅದುವೆ ಸಾಮವು ಕುಣುಪವೆಂಬರದಕೇ || ೬ ||

ಕುಣಾಲದಲಿ ಕೇಳು ಕಂಪವಿದೆ ಕಂಪನದ ಕಾರಣದಿ ಅಣುಚಲನೆ
ಕಾಣೆಲವೊ ಮಗುವೆ ಅಣುಗಳ ಯೋಜಿತ ಯೋಜನೆಯೆ ಧಾತುಗಳು
ಅಣುವಿನಿಂದಲೇ ಎಲ್ಲ ವಸ್ತು ರೂಪವು ಭೌತಿಕವು ಅದಕೆ ಮೇರೆ ನೀಡುವ ಗಾನವಿದಯ್ಯಾ ||
ಕುಣಾಲಗಾನದ ಪರಿಯ ಕೇಳೈ ಮೊದಲಾರು ಹನ್ನೊಂದು ನೆಪ್ಪ
ಳೆಣಿಕೆಯ ನೆಣವು ಹನ್ನೊಂದು ಬಗೆಯಿಹುದು ಅದ ಸಂಧಿಸಿರೆ
ಕುಣಾಲವಪ್ಪುದು ಕೇಳು ಇದು ಪರಾದಿಂದುದ್ಭವಿಸಿ ಮೇಲಣ ಮಧ್ಯಮದೊಳಾವರ್ತಿಸುವುದೂ || ೭ ||

ಮೋಹನವು ಕೇಳ್ ಪ್ರೀತಿ ಜನಕವು ಬಾಂಧವ್ಯ ಬಂಧುರವು
ಬಹಳ ಜೀವಿಗಳಲ್ಲಿ ಕರುಳ ನರ ಮೀಟುವುದು ಅದರಿಂದ
ಇಹದ ವ್ಯಾಪಾರ ಸುಗಮವು ಲೋಕ ಮೋಹಿಪ ವಿಧ್ಯೆಯದರೊಳಗಡಕವಿದು ಕಾಣೂ ||
ಸಹಜ ಸ್ವಭಾವ ಮೀಂಟುವ ವಿಧ್ಯೆ ಅಸಹಜವ ಸೃಷ್ಟಿಪ
ಬಹಳ ನಾಟಕ ವಿಧ್ಯೆ ಸಕಲವನು ಒಂದುಗೂಡಿಪ ವಿಧ್ಯೆ
ಮೋಹನವು ಅರಿತುಕೊ ಮಗುವೆ ಲೋಕದ ಹಿತ ಕಾಯ್ವ ವಿಧ್ಯೆಯಿದು ಮರೆಯದಿರು ನೀನೂ || ೮ ||

ಸುರವು ಕೇಳ್ ಮಧುರ ಗಂಧವ ಮೋಹಕ ಸ್ಥಿರತೆಯೀವುದು
ಸುರರರಸು ನಿರಂತರ ಇದನು ಈಂಟುವ ನಾರದ ತುಂಬುರರು
ಸುರಗಾನ ಪ್ರವೀಣರೈ ಸುರವನರಿತವರೆಲ್ಲ ದೇವತೆಗಳಪ್ಪರೈ ನಿರಂತರ ದೇವತ್ವ ಪಡೆಯೇ ||
ವರ ಕಂಸಗಾನ ಕೇಳ್ ಬಿಂದುಮಾಧವನಿದಕೆ ದೇವತೆ ಚಂದದಿ
ವರವೀವ ಗಾಯಕಗೆ ನಿರಂತರಾನಂದ ಬ್ರಹ್ಮಾನಂದದಾಯಕವು
ಚಿರಯೌವ್ವನವನೀವ ಗುಣ ಇದಕಿದೆ ಕಂಸಗಾನವೆಂಬರು ಇದನು ಅರಿತುಕೊ ಮಗುವೆ || ೯ ||

ಲೋಕದೊಳಗಷ್ಟಸಿರಿ ಲೋಕಜನಿತವು ಕೇಳು ಬಯಸುವರು
ಲೋಕಿಗಳೆಲ್ಲ ಮೊದಲಾರೋಗ್ಯ ಭಾಗ್ಯವೆಂಬರು ಅದಕೆ ಮಾನವಗಾನ
ಲೋಕದಲಿ ಋಜೆಗಳಿಲ್ಲವು ನೀ ಮಾನವನಾಗು ಹಾಡು ಮಾನವಗಾನ ಚಿರಂತನವಾಗಿರಲೀ ||
ಬೇಕು ಬೇಕಾದ ಸಿರಿ ಪಡೆಯೆ ಹೊನ್ನಿಗೆ ಗಭೀರ ಪೌರುಷಕೆ
ಸಾಕು ನಿಷಾಧ ಮಣ್ಣಿಗೆ ಭೃಂಗ ಹೆಣ್ಣಿಗೆ ಮೋದಗಾನವು ಕೇಳು
ಬೇಕಾದ ವಸ್ತುವನೀವ ಕಣ್ವ ಕುಣುಪಗಳು ಇನ್ನೆಷ್ಟೋ ವಿಧದ ಗಾನವು ಸಾಮದೊಳಗಿಹುದು || ೧೦ ||

ತಾರ ಮಧ್ಯಮ ಮಂದ್ರಗಳು ಬೇಕು ಮೂರು ವಿಧ ಜ್ಞಾನ
ತಾರವೇ ಈವುದು ಮಧ್ಯಮವು ಪ್ರಾಪ್ತಿಯು ಮಂದ್ರಯೋಗ್ಯವು
ಕಾರಕನು ಹರಿ ಹಾಡಿ ಪಡೆಯಲು ಬೇಕು ಹೊಗಳಿ ಸ್ತುತಿಸಲು ಬೇಕು ವೃಂದಗಾನದೊಳು ನೀನೂ ||
ಶಾರದೆಯ ಪತಿ ತಾನು ಸ್ತುತಿಸಿ ಹರಿಯನು ಸ್ಥಿರತೆ ಪಡೆದನು
ಶಾರದಗಾನ ಶಕ್ತಿಯರಿತ ವೀರನಾತನು ಹಿರಣ್ಯಗರ್ಭನು
ಪಾರವಿಲ್ಲವೋ ಮಗುವೇ ಕೇಳ್ ವರ್ಣಿಸಲಾಗದು ಸಾಮಶಕ್ತಿಯ ಮುಂದೆ ಆಂಗಿರವ ಪೇಳುವೆನೂ || ೧೧ ||

- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ
ವೇದ ವಿಜ್ಞಾನ ಮಂದಿರ
ಚಿಕ್ಕಮಗಳೂರು

4 comments:

 1. Hi

  Greetings ! How is swamiji? Is this book available online? English or Telugu ?

  Thanks

  Sreedhar Vankayala

  ReplyDelete
 2. how do i get this book please? i would like to have this one.

  ReplyDelete
 3. Available in Veda Vijnaana Mandira, Chikmagalur. For more details contact uragabhushan@gmail.com

  ReplyDelete