Saturday, 29 July 2017

"ವೈಧಿಕ" ಶಬ್ದ ಜಿಜ್ಞಾಸೆ

ಮೂಲ ಪ್ರಾಕೃತಿಕ ಆಚರಣೆಗಳನ್ನು "ವೈಧಿಕ" ಎನ್ನುತ್ತಾರೆ. ಕಡೆಗೆ ಆ ಶಬ್ದದ ಅರ್ಥ ಗೊತ್ತಿಲ್ಲದ್ದರಿಂದ ಜಾನಪದೀಯ ಆಚರಣೆ ಎಂದು ಬಳಕೆಗೆ ತಂದರು. ಆದರೆ ಅದು ಜಾನಪದೀಯ ಆಚರಣೆಯಲ್ಲ, ಮೂಲ ಪ್ರಾಕೃತಿಕ ಆಚರಣೆಯನ್ನೇ ವೈಧಿಕ ಆಚರಣೆ ಎಂದರು. ವೇದ ಅದನ್ನು ಮಾನ್ಯ ಮಾಡಿದೆ. ಏಕೆಂದರೆ ಅಲ್ಲೆಲ್ಲೂ ವೇದ ನಿಂದ್ಯವಾದ ಆಚರಣೆಯೇ ಇಲ್ಲ. ವೇದವು ವೇದ ನಿಂದ್ಯವಲ್ಲದ, ಗೌರವಯುತವಾದ ವಿಚಾರಗಳನ್ನು ಮಾನ್ಯ ಮಾಡುತ್ತದೆ. ಅರ್ಥವಿಲ್ಲದ, ನಿರರ್ಥಕ, ಉಪಯೋಗಕ್ಕೆ ಬಾರದ ವಿಚಾರಗಳನ್ನು ಬಿಟ್ಟಿದೆ. ಎಲ್ಲಿಂದಲೋ ಬಂದು, ಏನೇನೋ ಅರ್ಥ ಕಳೆದುಕೊಂಡು ಕೊನೆಗೆ ಇನ್ನೇನೋ ಆಗಿರುವುದನ್ನೆಲ್ಲ ಮಾನ್ಯ ಮಾಡುವುದಿಲ್ಲ. ಜಾನಪದೀಯ ಆಚರಣೆಗಳು ಅರ್ಥವಿಲ್ಲದವಲ್ಲ. ಮೂಲದಲ್ಲಿ ವೇದ ಮಾನ್ಯವಾದ ವಿಚಾರಗಳನ್ನೇ ಆಚರಿಸುವುದಾಗಿತ್ತು. ಹಾಗಾಗಿ ವೇದವು ಅದನ್ನು ಒಪ್ಪಿದೆ.

        "ವೈಧಿಕ" ಎಂಬುದು ಸ್ವಯಂ ವಿಶೇಷವಾದ ಶಬ್ದ. ಮೂಲ ಪ್ರಾಕೃತಿಕ ನಿಯಮ ಎನ್ನುವ ಅರ್ಥದಲ್ಲಿ ಅದು ಬಳಕೆಯಾಗಿದೆ. ಮೂಲ ನಿಯಮ ಹೊರತುಪಡಿಸಿ ಅಲ್ಲೇನು ಕೆಲಸ ನಡೆಯುವುದಿಲ್ಲ. ಎಲ್ಲವೂ ಮೂಲ ನಿಯಮಕ್ಕೆ ಬದ್ಧವಾಗಿದೆ. ಜನಗಳಿಗೆ ತಮ್ಮ ಮೂಗಿನ ನೇರಕ್ಕೆ ಅರ್ಥವಾಗಲಿಲ್ಲ ಎಂದ ಮಾತ್ರಕ್ಕೆ ಒಂದು ಆಚರಣೆಯು ತನ್ನ ಅರ್ಥ ಕಳೆದುಕೊಂಡಿದೆ ಎನ್ನುವುದು ಮೂರ್ಖತನ.

ಉದಾ:- ಇಡೀ ಭಾರತಾದ್ಯಂತ ಶ್ರಾದ್ಧಾದಿ ಪ್ರಕ್ರಿಯೆಗಳಿಗೆ "ವೈದೀಕ" ಎಂಬ ಶಬ್ದ ಬಳಕೆಯಾಗಿದೆ. ಏಕೆಂದರೆ ಅದು ಅಷ್ಟು ಅರ್ಥಪೂರ್ಣವಾಗಿದ್ದರೂ ಯಥಾವತ್ತಾಗಿಯೇ ಇದೆ, ಬದಲಾಗಿಯೇ ಇಲ್ಲ.


ಯಾಸ್ಕರ ನಿರುಕ್ತದಲ್ಲಿ "ವೈಧಿಕ" ಶಬ್ದ ಸಿಗಲಿಲ್ಲ ಎಂದರೆ ಅದು ಎಂಥಾ ವಾದ? ಹುಣಸೇ ಮರದಲ್ಲಿ ಮಾವಿನ ಸ್ವಾದವನ್ನು ಬಯಸಿದಂತಾಯಿತು. ಯಾಸ್ಕರು ವೇದಕ್ಕೆ ಸಂಬಂಧಪಟ್ಟ ಶಬ್ದಗಳನ್ನು ಮಾತ್ರ ಸೇರಿಸಿದರೇ ಹೊರತು ಪ್ರಾಕೃತಿಕ ಶಬ್ದಗಳನ್ನು ಸೇರಿಸಲಿಲ್ಲ. ಅವರಿಗೆ ಸಂಬಂಧಪಡದ ಶಬ್ದಕ್ಕೆ ವ್ಯಾಖ್ಯಾನ ಬರೆದಿದ್ದರೆ ಅವರು ಹೋದ ದಾರಿ ಸರಿಯಿಲ್ಲ ಎಂದಾಗುತ್ತಿತ್ತು. ಪ್ರಾಕೃತ ಭಾಷೆಯ ಶಬ್ದವಲ್ಲ, ಇಲ್ಲಿ ವಿವರಿಸುತ್ತಿರುವುದು "ಪ್ರಾಕೃತಿಕ ಶಬ್ದ". ಈ ಪ್ರಾಕೃತಿಕ ಶಬ್ದಗಳೇ ಎಲ್ಲಾ ಭಾಷೆಗಳಿಗೂ ಮೂಲ. "ವೈಧಿಕ" ಶಬ್ದಕ್ಕೆ ಅದರದ್ದೇ ಆದ ಧಾತು ಮೂಲವೂ ಇದೆ. ಅದು "ಪಾರ್ಥಿವ ಕಲ್ಪ"ದಲ್ಲಿ ಸಿಗುತ್ತದೆ. ಅದರಲ್ಲಿ ಹಲವು ಪ್ರಾಕೃತಿಕ ಶಬ್ದಗಳ ಚಿಂತನೆ ಮಾಡಲಾಗಿದೆ. ಅದು ಬಿಟ್ಟರೆ ಬ್ರಹ್ಮ ಕಲ್ಪ, ವಿಷ್ಣು ಕಲ್ಪಾದಿಗಳಲ್ಲಿ ಈ ಶಬ್ದಾಡಂಬರಗಳ ಚಿಂತನೆ ಮಾಡಿಲ್ಲ. ಬರೇ ದೈವೀಕ ಚಿಂತನೆಗಳನ್ನು ಮಾಡುತ್ತಾ ಹೋದರು. ಆದರೆ ಪಾರ್ಥಿವ ಕಲ್ಪದಲ್ಲಿ ಮಾತ್ರ ಶಬ್ದಗಳ ವಿಶ್ಲೇಷಣೆ, ಮನುಷ್ಯನಿಗೆ ಮಾತು ಏಕೆ ಬೇಕು? ದೇವರು ಮನುಷ್ಯನಿಗೆ ಮಾತನ್ನು ಏಕೆ ಕೊಟ್ಟ? ಇವುಗಳೆಲ್ಲದರ ವಿಶ್ಲೇಷಣೆ ಇದೆ.

ಹಾಗಾಗಿ ಮೂಲ ಗ್ರಂಥದಲ್ಲಿ "ವೈಧಿಕ ಭೌತಶಾಸ್ತ್ರ" ಎಂದೇ ಗ್ರಂಥಶೀರ್ಷಿಕೆ ದಾಖಲಾಗಿದೆ. ಹಾಗೇ "ವೈಧಿಕ  ನ್ಯಾಯಶಾಸ್ತ್ರ" ಎಂಬುದೂ ಅರ್ಥಬದ್ಧ ಶಬ್ದ. ನ್ಯಾಯವು ಜೀವಿಗಳಿಗೆ ಬದುಕುವುದಕ್ಕೆ ಆಶ್ರಯ ಮಾಡಿಕೊಡುವುದಕ್ಕಾಗಿ ಇರುವುದು. ಜೀವಿಗಳ ಮೂಲ ಪ್ರಕೃತಿ. ಹಾಗಾಗಿ ಪ್ರಾಕೃತಿಕ ನಿಯಮಗಳಿಗೆ ಬದ್ಧವಾಗಿಯೇ ನಡೆಯುವುದರಿಂದ "ವೈಧಿಕ ನ್ಯಾಯಶಾಸ್ತ್ರ" ಎಂದೇ ಹೇಳಲಾಗುತ್ತದೆ.

ಕೆಲ ವಿದ್ವಾಂಸರು "ವಿಧಿ"ಗೆ ಸಂಬಂಧಪಟ್ಟದ್ದು ವೈಧಿಕ ಎಂದಿದ್ದಾರೆ. ಆದರೆ ಮೂಲತಃ ಪ್ರಾಕೃತಿಕ ನಿಯಮಗಳನ್ನೇ ವಿಧಿ ಎಂದು ಹೇಳಲಾಗಿದೆ. ಏಕೆಂದರೆ ಅದು ನಮ್ಮ ಹಿಡಿತಕ್ಕೆ ಸಿಕ್ಕದ್ದು. ಪ್ರಕೃತಿಯು ನಮ್ಮ ಹಿಡಿತಕ್ಕೆ ಸಿಕ್ಕದ್ದು. ಹಾಗಾಗಿ ಅದು ವಿಧಿ! ಏನು ಮಾಡಲಾಗುತ್ತದೆ, ನಮ್ಮ ವಿಧಿ ಎಂದು ಗೊಣಗುವುದನ್ನು ಕಾಣಬಹುದು. ಅಂದರೆ ಮೀರಲಾಗದ ಪ್ರಾಕೃತಿಕ ನಿಯಮ ಎಂಬ ಭಾವ. ಆ ಅರ್ಥದಲ್ಲಿಯಾದರೆ ವಿಧಿಯನ್ನು "ವೈಧಿಕ" ಶಬ್ದಕ್ಕೆ ಅನ್ವಯಿಸಿದರೆ ಸರಿ. ಆದರೆ ಆಧುನಿಕ ಕಾಲದಲ್ಲಿ ಸಾರ್ವತ್ರಿಕವಾಗಿ ಬಳಸಲ್ಪಡುತ್ತಿರುವ ವಿಧಿ ಎಂಬ ಶಬ್ದಕ್ಕೆ ಅನ್ವಯಿಸುವುದಿಲ್ಲ.

ವೇದಕ್ಕೆ ಸಂಬಂಧಪಟ್ಟದ್ದು "ವೈದಿಕ" ಎಂದು ಈಗ ಆಧುನಿಕರು ಬಳಸುತ್ತಾರೆ. ಆದರೆ "ವೈದಿಕ" ಎಂಬ ಶಬ್ದವು ವೇದದಲ್ಲಿಲ್ಲ. ನಂತರ ಪ್ರಯೋಗ ಭಾಗದಲ್ಲಿ ಮಾತ್ರ ವೇದ ಆಧರಿಸಿದ "ಧೀಯತಾಂ", "ಧಾಯತಾಂ", "ಧಾತಾ" ಎಂದೆಲ್ಲ ಮಹಾಪ್ರಾಣ "ಧ" ಉಳ್ಳ ಶಬ್ದಗಳು ಬರುತ್ತದೆ. "ಮನಃ ಸಮಾಧೀಯತಾಂ", "ಧಾತಾ ಯಥಾ ಪೂರ್ವಮಕಲ್ಪಯತ್" ಇತ್ಯಾದಿ ಮಹಾಪ್ರಾಣ ಪ್ರಯೋಗಗಳೇ ಜಾಸ್ತಿ. ಅಲ್ಲೆಲ್ಲ ಅಲ್ಪಪ್ರಾಣ ಬರುವುದಿವಿಲ್ಲ. ಕೆಲವೊಂದಿಷ್ಟು ಅಕ್ಷರಗಳಿಗೆ ವೇದದ ನಿರುಕ್ತಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಅಲ್ಪಪ್ರಾಣ ಬಳಸಿದರೆ ಗ್ರಾಮ್ಯವಾಗುತ್ತದೆ. ಮಹಾಪ್ರಾಣ ಅಕ್ಷರಗಳೇ ಆಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಮ್ಯಾಕ್ಸ್ ಮುಲ್ಲರ್, ಗ್ರಿಫತ್, ಮೊನೆರ್ ವಿಲಿಯಂಸ್, ಕಿಟ್ಟೆಲ್ ಇತ್ಯಾದಿ ಆಶ್ರಯದಲ್ಲಿ ಬೆಳೆದ ಈಗಿನ ವಿದ್ವಾಂಸವಲಯಕ್ಕೆ ಮೂಲ ಪ್ರಾಕೃತಿಕ ನಿಯಮಗಳ, ಅದರ ಶಬ್ದ ಭಂಡಾರದ ಕಿಂಚಿತ್ ಪರಿಚಯವೂ ಇಲ್ಲ. ಅದಕ್ಕೆ ಶಂಕರಾಚಾರ್ಯರು "ನಹಿ ನಹಿ ರಕ್ಷತಿ ಡುಕೃಙ್ಕರಣೇ" ಎಂದೋ ಹೇಳಿಬಿಟ್ಟಿದ್ದಾರೆ. ಯಾರೋ ಒಬ್ಬ ಹುಚ್ಚ ತನಗೆ ಹೊಳೆದ ಶಬ್ದಕೋಶವನ್ನು ಬರೆದಿಟ್ಟ ಎಂದ ಮಾತ್ರಕ್ಕೆ ಅದು ಪರಿಷತ್ತು ಮಾನ್ಯವಾಗಬೇಕೆಂದಿಲ್ಲ. ಹುಚ್ಚರು ಹೇಳಿದ್ದಕ್ಕೆಲ್ಲ ಚಿಂತನೆ ಮಾಡುತ್ತಾ ಕುಳಿತರೆ ಸಮಯ ವ್ಯರ್ಥ. ಎಲ್ಲ ಕ್ರೈಸ್ತ ಮತಾನುಯಾಯಿಗಳು ನಮ್ಮ ಶಬ್ದಕೋಶ, ನಿಘಂಟು, ನಿರುಕ್ತ, ವೇದ ಭಾಷ್ಯಗಳ ಮೇಲೆ ಏಕೆ ಕೆಲಸ ಮಾಡಿದರು? ಎಂಬ ಪ್ರಶ್ನೆಗೆ ಉತ್ತರವೂ ಯಾವುದೇ ಭಾರತೀಯನಿಗೆ ಹೊಳೆಯದೆ ಇರದು!

ಇನ್ನೊಂದು ಸ್ವಲ್ಪ ವರ್ಷದ ನಂತರ ಅರ್ಧಂಬರ್ಧ ಕಲಿತ ವಿದ್ವಾಂಸರೆಲ್ಲ ಹೊರಟು ಹೋಗುತ್ತಾರೆ. ಆಗ ಏನೂ ಗೊತ್ತಿಲ್ಲದವರು ಸಂಶೋಧನೆ ಮಾಡುತ್ತಾರೆ. ಅವರು ಸರಿಯಾದ ದಾರಿಯಲ್ಲಿ ಹೋಗುತ್ತಾರೆ. ನಮಗೆ ಗೊತ್ತು ಎಂದು ತಪ್ಪು ಗ್ರಹಿಕೆಯನ್ನು ಮಾಡಿಕೊಂಡಿರುವವರು ಸಂಶೋಧನೆ ಮಾಡಲೇ ಹೋಗುವುದಿಲ್ಲ. ಏಕೆಂದರೆ ಅವರಲ್ಲಿ ಪೂರ್ವಾಗ್ರಹವಿರುತ್ತದೆ. ಯಾವುದೋ ಒಂದು ಗೊತ್ತಿದೆ ಎಂದು ತಿಳಿದವನು, ಅದನ್ನೇ ಹುಡುಕುತ್ತಿರುತ್ತಾನೆ. ಅವನು ಮೂಲವನ್ನು ಹುಡುಕುವ ಪ್ರಯತ್ನ ಮಾಡುವುದೇ ಇಲ್ಲ. ಅವನ ಕಲ್ಪನೆಗೆ ಸರಿ ಹೊಂದುವುದನ್ನು ಮಾತ್ರ ಸರಿ ಎನ್ನುತ್ತಾನೆ. ಇಲ್ಲದಿದ್ದರೆ ತಪ್ಪೆನ್ನುತ್ತಾನೆ. ಆದರೆ ಏನೂ ಗೊತ್ತಿಲ್ಲದವನು ಹುಡುಕಲು ಹೊರಟಾಗ ಸರಿಯಾದ್ದೇ ಸಿಗುತ್ತದೆ. ಗಡಿಬಿಡಿ ಬೇಡ!

-      ಕೆ. ಎಸ್. ನಿತ್ಯಾನಂದರು
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ ಚಿಕ್ಕಮಗಳೂರುNo comments:

Post a Comment