Tuesday, 8 August 2017

ಸರಕು ಮತ್ತು ಸೇವಾ ತೆರಿಗೆ (GST) : ವೇದದ ಪುಣ್ಯಕಾಮನ ಅರ್ಥಶಾಸ್ತ್ರ ರೀತ್ಯಾ


ಸದ್ಯದಲ್ಲಿ ಕೇಂದ್ರ ಸರಕಾರವು ಭಾರತೀಯರಿಗೆ ಭಾರತೀಯತೆಯಲ್ಲಿ ಬದುಕು ಸಾಗಿಸಲು ಮಾಡಿಕೊಟ್ಟ ಒಂದು ವಿಶೇಷ ಸೌಲಭ್ಯ. ಸಾಮಾನ್ಯರೂ, ಬಡವರೂ ಚೆನ್ನಾಗಿ ಬದುಕಲು ಈ G.S.T. ಒಂದು ರೀತಿಯಲ್ಲಿ ವಿಪುಲ ಅವಕಾಶ ಒದಗಿಸಿರುತ್ತದೆ. ಅದರ ಸೌಲಭ್ಯಗಳ ಬಗ್ಗೆ ಒಂದು ವಿವರಣೆ ಕೊಡಲು ಪ್ರಯತ್ನಿಸುತ್ತೇನೆ.

ಮೊದಲಾಗಿ ಗಮನಿಸಬೇಕಾದ್ದು ನಮ್ಮ ಜೀವನ ಪದ್ಧತಿ. ಅದು ವಿಶೇಷವಾದ ಸರಳತೆಯಿಂದ ಕೂಡಿದ್ದು ವೈಭವ ಪ್ರಧಾನತೆಯನ್ನು ಖಂಡಿಸಿತ್ತು. ಯಾರು ಸರಳ ಜೀವನ ತ್ಯಾಗ, ದಯೆ ಧರ್ಮಪಾಲನೆ, ಸತ್ಯವಾಕ್ಯ ವೃತಿಯೋ ಅವನೇ ಸಂತನೆಂದೂ, ಮಹಾತ್ಮನೆಂದೂ ಗೌರವಿಸುತ್ತಿತ್ತು. ವೇದಧರ್ಮವೂ ಸರಳ ತ್ಯಾಗಜೀವನವನ್ನೇ ಬೋಧಿಸುತ್ತದೆ. ನಮ್ಮ ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ಕೊಡಿಸಲು ಹೋರಾಡಿದ ಮಹಾತ್ಮಾ ಗಾಂಧಿಯವರ ಜೀವನ ವಿಧಾನವೂ ತ್ಯಾಗ ಸರಳವಾಗಿತ್ತು. ಹಾಗಾಗಿಯೇ ಮಹಾತ್ಮರಾದರು, ರಾಷ್ಟ್ರಪಿತರಾದರು. ಅದು ಮಹಾತ್ಮಾಗಾಂಧಿಯವರು ನಮಗೆ ತೋರಿಸಿಕೊಟ್ಟ ಭಾರತೀಯ ಜೀವನ ಪದ್ಧತಿಯ ಸನ್ಮಾರ್ಗ. ಭಾರತೀಯರೆಲ್ಲರೂ ಅದರಂತೆಯೇ ಬದುಕಬೇಕು. ಹಾಗೂ ತಮ್ಮ ಸಂಪಾದನೆಯಲ್ಲಿ ಉಳಿಕೆಯಾದರೆ ಆಪದ್ಧನವಾಗಿ ಒಂದಂಶ ಸಂಗ್ರಹಿಸಿಟ್ಟು ಉಳಿದಿದ್ದನ್ನು ತೆರಿಗೆ ರೂಪದಲ್ಲಿ ಸಲ್ಲಿಸಿ ದೇಶದ ಅಭಿವೃದ್ಧಿಗೆ ತೊಡಗಿಸಬೇಕು. ಅದು ಧರ್ಮ. ಧರ್ಮಪಾಲನೆಯೇ ಆತ್ಮೋನ್ನತಿಗೆ ಆಧಾರಸ್ಥಂಭ. ಸ್ವಧರ್ಮೋ ನಿಧನಶ್ರೇಯಃ ಪರಧರ್ಮೋ ಭಯಾವಹಃ ಹಾಗಾಗಿ ಸ್ವಧರ್ಮವೆಂದರೆ ಸರಳ, ಸಾತ್ವಿಕ, ದಯಾಪರನಾದ ಮಾನವ ಜೀವನಪದ್ದತಿ. ಇದನ್ನು ಪಾಲಿಸಿಕೊಂಡು ಬರಲು ಭಾರತೀಯನಿಗೆ ಈ G.S.T. ತೆರಿಗೆ ಪದ್ಧತಿ ತುಂಬಾ ಸಹಾಯಕವೆಂದೂ ಹಾಗೂ ಭಾರತೀಯರಿಗೆ ತಮ್ಮ ಸ್ವಾಭಿಮಾನ ಶ್ರೇಯಸ್ಸನ್ನೂ ಸಾಧಿಸಲು ಸಹಾಯಕವೆಂದೂ ಖಂಡಿತವಾಗಿ ಹೇಳಬಹುದು. ಹಾಗೇ ಮಹಾತ್ಮಾ ಗಾಂಧಿಯವರ ನಂತರ ದೇಶಕ್ಕೊಬ್ಬನಾದರೂ ಮಹಾತ್ಮಾ ಗಾಂಧಿ ಬೇಡವೆ? ಆ ಮುಖದಲ್ಲಾದರೂ ಪ್ರಯತ್ನಿಸಿದಲ್ಲಿ ನಮ್ಮಲ್ಲಿ ಮಹಾತ್ಮರಾಗಲು ಸಾಧ್ಯವಿಲ್ಲವೆ? ಹಾಗಿದ್ದರೆ ಸರಳ ಜೀವನ ನಡೆಸಿರಿ. G.S.T. ಯಿಂದ ಮುಕ್ತ ಬದುಕು ಸಾಧಿಸಿಕೊಳ್ಳಿರಿ ಎಂದು ಈ ಮೂಲಕ ಭಾರತೀಯ ಜೀವನಪದ್ಧತಿ ಹೇಳಿ G.S.T.ಯ ಬಗ್ಗೆ ಬರೆಯುತ್ತೇನೆ.

ಭಾರತೀಯ ಜೀವನ ಪದ್ಧತಿಯಲ್ಲಿ ಸರಳ ಜೀವನ ನಡೆಸುವವರಿಗೆ G.S.T. ಯ ಯಾವುದೇ ಅಂಶವೂ ಬಾಧಿಸುವುದಿಲ್ಲ. ಶೇ.೬೦ ಭಾಗ ಜನರಿಗೆ ಈ ಸಮಸ್ಯೆಯೊಂದು ನಗಣ್ಯ. ಜೀವನಾವಶ್ಯಕ ವಸ್ತುಗಳೆಲ್ಲವೂ ತೆರಿಗೆ ಮುಕ್ತವಾಗಿದೆ. ಹಾಗಾಗಿ ನೆಮ್ಮದಿಯ ಸರಳ ಜೀವನ ನಡೆಸಿ ನಿಜವಾದ ಭಾರತೀಯರಾಗಿರಿ. ಹಾಗೇ ತೆರಿಗೆಯೆಂದರೇನು? ತಿಳಿಯೋಣ. ನಮ್ಮನ್ನಾಳುವ ರಾಜನು ನಮಗೆ ರಕ್ಷಣೆ, ಆರೋಗ್ಯ, ವಿಧ್ಯೆ, ಆಹಾರ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಲು ಮಾಡುವ ಅಭಿವೃದ್ಧಿ ಕಾರ್ಯಕ್ಕೆ ತಗಲುವ ವೆಚ್ಚ ಭರಿಸಲು ನಾವು ಸಂಪಾದಿಸಿದ ಹಣದಲ್ಲಿ ದಾಯಭಾಗ ಸಲ್ಲಿಸುವಿಕೆ ಎಂದರ್ಥ. ಪರ್ಯೂರಾ ಎಂದು  ಇದು ಕರೆಯಲ್ಪಟ್ಟಿದೆ.  ಪುರಾತನ ಅರ್ಥಶಾಸ್ತ್ರಜ್ಞನಾದ ಪುಣ್ಯಕಾಮನು ತನ್ನ ಅರ್ಥಶಾಸ್ತ್ರ+ರಾಜ್ಯಶಾಸ್ತ್ರದಲ್ಲಿ ವಿವರಿಸಿದ್ದಾನೆ. ದೇಶದ ಅಭಿವೃದ್ಧಿಗೆ ತೆರಿಗೆ ಎಷ್ಟು ಮುಖ್ಯವೆಂದೂ, ಅದನ್ನು ಸಂಗ್ರಹಿಸುವ ವಿಧಿ, ವಿಧಾನಗಳನ್ನೂ ವಿವರಿಸುತ್ತಾ ಪ್ರಜಾಜನರು ತೆರಿಗೆಯನ್ನು ಹೇಗೆ ಕಟ್ಟಬೇಕು? ಏಕೆ ಕಟ್ಟಬೇಕು? ಹಾಗೇ ಕಟ್ಟುವುದರಿಂದ ತೆರಿಗೆದಾರನ ಅಭಿವೃದ್ಧಿ ಹೇಗೆ ಸಾಧಿಸಲ್ಪಡುತ್ತದೆ? ಹಾಗೂ ಪುಣ್ಯಸಂಚಯನವಾಗುತ್ತದೆ ಎಂದೆಲ್ಲಾ ವಿವರಿಸಿದ್ದಾನೆ. ಹಾಗೇ ತೆರಿಗೆ ವಂಚನೆ ಎಂತಹಾ ಪಾಪಕರ, ದ್ರೋಹವೆಂದೂ ವಿವರಿಸಿದ್ದಾನೆ. ಅದರಲ್ಲಿ ಕೆಲ ಮುಖ್ಯ ಅಂಶಗಳನ್ನು ಗಮನಿಸೋಣ.

1)             ಸೇನೇವ ವಾಜೀ ರಜತೇನ ರಾಜೀ ಗೋನ್ಯೋಗಾ ಪರ್ಯೂವರಾತೀ ಸಹ ಹಂತಿ ರಕ್ಷೋ ಬಾಧತೇ ತಮ ಕೃಣ್ವನ್ ವೃಜನಸ್ಯ ಸಹ ಸೋಮ ರಾಜಾಃ ೧ ॥

2)            ಅಧ ಧಾರಯಾ ಮತ್ ವಾ ಪೃಚಾ ಪೃಚಾ ನಃ ಸ್ತಿರೋ ನ ವಾಜೇ । ಸಖ್ಯಂ ಜುಷಾಣೋ ಪವತೇ ಮತ್ಸರೋ ಅದ್ರಿ ದುಗ್ಧತೇ ಮದಾಯ ॥ ೨ ॥

ಎಂದಿದ್ದಾನೆ ಪುಣ್ಯಕಾಮ. ಹಾಗೇ ತೆರಿಗೆ ಕಟ್ಟುವುದರಿಂದ ಆಗತಕ್ಕ ದೇಶಕಲ್ಯಾಣ ಅರ್ಥಾತ್ ಪ್ರಜಾ ಕಲ್ಯಾಣ ಎಷ್ಟು ಮಹತ್ ಎಂದಿದ್ದಾನೆ. ಯಾರು ರಾಜಾದಾಯ ವಂಚನೆ ಮಾಡುತ್ತಾನೋ ಅವನು ಮುಂದೆ ಅನುಭವಿಸಲೇಬೇಕಾದ ಕೆಲ ವಿಶಿಷ್ಟ ರೋಗಗಳಿಂದ ಬಾಧಿಸಲ್ಪಟ್ಟು ನಾನಾ ಹಿಂಸೆಗೆ ಸಿಲುಕುತ್ತಾನೆ. ಹಾಗಾಗಿ ರಾಜದ್ರೋಹ ಮಾಡಬೇಡಿ. ತೆರಿಗೆಯನ್ನು ಪ್ರಾಮಾಣಿಕವಾಗಿ ಸಲ್ಲಿಸಿ ನೀವು ಸುಖಿಗಳಾಗಿರೆಂದು ಹೇಳುತ್ತಾ ದ್ರೋಹ ಚಿಂತನೆ ಎಷ್ಟು ಅಪಾಯಕಾರಿ ಎಂಬುದನ್ನು ಪಟ್ಟಿ ಮಾಡಿದ್ದಾನೆ. ಹಲವು ರೀತಿಯ ದ್ರೋಹಗಳಿವೆ. ಅದರಲ್ಲಿ ರಾಜದ್ರೋಹವು ಎಲ್ಲದಕ್ಕಿಂತ ಹೆಚ್ಚು ವಿನಾಶಕಾರಿ, ಪ್ರಾಯಶ್ಚಿತ್ತ ವಿಲ್ಲದ್ದು ಎಂದಿದ್ದಾನೆ.

೧)     ಮಾತೃದ್ರೋಹ                 
೨)    ಪಿತೃದ್ರೋಹ
೩)    ಧರ್ಮದ್ರೋಹ          
೪)   ಗುರುದ್ರೋಹ
೫)    ಭಾರ್ಯಾದ್ರೋಹ              
೬)    ಭ್ರಾತೃದ್ರೋಹ
೭)    ಮಿತ್ರದ್ರೋಹ                   
೮)    ಮತಿದ್ರೋಹ
೯)    ಧೈವದ್ರೋಹ                   
೧೦)  ಆರ್ತದ್ರೋಹ
೧೧)   ರಾಜದ್ರೋಹ                   
೧೨)  ದೇಶದ್ರೋಹ

ಈ ರೀತಿಯ ೧೨ ದ್ರೋಹಗಳಲ್ಲಿ ತೆರಿಗೆ ವಂಚನೆ, ಪ್ರಜಾವಂಚನೆ, ಆಹಾರ ಧಾನ್ಯಗಳ ಕಲಬೆರಕೆ, ಗುಣಮಟ್ಟ ರಹಿತ ವಸ್ತುಗಳ ಮಾರಾಟ, ಮೌಲ್ಯವರ್ಧಿತ ಅನಿಯಮತತೆ, ನಿಯಮ ಬಾಹಿರ ಸಾಗಾಟ, ಅನಗತ್ಯ ಸಂಗ್ರಹಣೆಯಂತಹಾ ಸಂದರ್ಭಗಳು ರಾಜದ್ರೋಹವೆನಿಸುತ್ತವೆ. ಅದು ಅವನನ್ನು ಆರ್ಥಿಕವಾಗಿಯೂ, ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ನಾಶಮಾಡು ತ್ತಲೇ ಹೋಗುತ್ತದೆ. ಹಾಗಾಗಿ ವಂಚನೆರಹಿತ ಜೀವನ ಸುಖ, ಸಂತೃಪ್ತಿಯನ್ನು ನೀಡುತ್ತದೆ. ಹಾಗಾಗಿ ತನ್ನ ಆದಾಯದಲ್ಲಿ ಯಾರು ೧/೬ನೇ ಭಾಗವನ್ನು ತೆರಿಗೆ ರೂಪದಲ್ಲಿ ಪ್ರಾಮಾಣಿಕವಾಗಿ ಸಲ್ಲಿಸುತ್ತಾನೋ ಅವರು ನಿರೋಗಿಯಾಗಿ ಯಾವುದೇ ಅವಘಡ ಆಕಸ್ಮಿಕಗಳಿಲ್ಲದೇ ತೃಪ್ತ, ಸುಖ ಸಮೃದ್ಧಿಯಿಂದ ಬಾಳಬಲ್ಲ. ಹಿಂದೆ ತಿಳಿಸಿದ ದ್ವಾದಶ ದ್ರೋಹ ವಿಧಿಗಳಲ್ಲಿ ಈ ಎರಡು ದೇಶದ್ರೋಹ+ರಾಜದ್ರೋಹಕ್ಕೆ ಪ್ರಾಯಶ್ಚಿತ್ತವಿಲ್ಲ. ಅನುಭವಿಸಿಯೇ ತೀರಬೇಕು. ಉಳಿದವಕ್ಕೆ ದಾನ, ಧರ್ಮ, ಕ್ಷೇತ್ರಯಾತ್ರೆ, ಹೋಮ, ಹವನ ಇತ್ಯಾದಿ ಇತ್ಯಾದಿಗಳಿಂದ ಪರಿಹಾರ ಪಡೆಯಬಹುದು ಎಂದಿದ್ದಾನೆ ಪುಣ್ಯಕಾಮ. ಹಾಗಾಗಿ ನಾವೆಲ್ಲ ಪ್ರಾಮಾಣಿಕವಾದ ವಂಚನೆ ರಹಿತ ಸುಖ ಸಾಮ್ರಾಜ್ಯ ಕಟ್ಟುವಲ್ಲಿ ಶ್ರಮಿಸೋಣ. ಸರಕಾರಕ್ಕೆ ಪ್ರಾಮಾಣಿಕ ತೆರಿಗೆ ಕೊಡೋಣ. ದೇಶ ರಾಜನೀತಿಯನ್ನು ಅರ್ಥ ಮಾಡಿಕೊಂಡು ದೇಶಕ್ಕೆ ತೆರಿಗೆಯನ್ನು ಸಲ್ಲಿಸುವುದರ ಮುಖೇನ ಭಾರತೀಯರಾಗೋಣವೆಂದು ಹಾರೈಕೆ.

ಹಾಗೆಂದು ಎಲ್ಲರೂ ತೆರಿಗೆಯ ಬಂಧನದಲ್ಲಿ ಬರುವುದಿಲ್ಲ. ಹೇಗೆಂದರೆ ಸರಳ ಜೀವನ ಮಾಡುವವರಿಗೆ ಯಾವುದೇ ತೆರಿಗೆ ಬಂಧನವಿಲ್ಲ. ಐಷಾರಾಮಿ ಜೀವನ ಮಾಡಿದರೆ ಮಾತ್ರ ತೆರಿಗೆ. ಈ G.S.T. ಕ್ರಮ ಸರಳ ಜೀವನಕ್ಕೆ ಪೂರಕವಾಗಿದೆ. ನಿಮಗೆ ಮೊಬೈಲ್ ಬೇಕಿದ್ದರೆ ತೆರಿಗೆ ಕಟ್ಟಿ. ಹಲವು ಲಕ್ಷ ಬೆಲೆಯ ಕಾರು ಬೇಕಿದ್ದರೆ ತೆರಿಗೆ ಕಟ್ಟಿ. ದೊಡ್ಡ ಬಂಗ್ಲೆ ಬೇಕಿದ್ದರೆ ತೆರಿಗೆ ಕಟ್ಟಿ. ಸಾಮಾನ್ಯ ಮನೆಗೆ ತೆರಿಗೆ ಇಲ್ಲ. ಆಹಾರ ಧಾನ್ಯಗಳಿಗೆ ತೆರಿಗೆ ಇಲ್ಲ. ಸರಕಾರೀ ಶಾಲೆಯಲ್ಲಿ ಕಲಿತರೆ ತೆರಿಗೆ ಇಲ್ಲ. 20 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಮಾಡಿದರೆ ತೆರಿಗೆ ಇದೆ. 20 ಲಕ್ಷ ವಹಿವಾಟಿಗೆ ಉತ್ಪಾದಕನಿಗೆ 4 ಲಕ್ಷ ಲಾಭವಿದೆ. ತಿಂಗಳಿಗೆ ಅಂದಾಜು 37 ಸಾವಿರ ರೂಪಾಯಿ ಆಗುತ್ತದೆ. ಅದರಲ್ಲಿ ಜೀವನ ಸಾಗಿಸಲು ಯಾವುದೇ ಕಷ್ಟವಿಲ್ಲ. ಎಲ್ಲವೂ ಕಾನೂನು ಬದ್ಧವಾಗಿದ್ದಲ್ಲಿ ನಿಮ್ಮ ಜೀವನ ಸುಖಮಯ ಖಂಡಿತ. ಈ ರೀತಿಯಲ್ಲಿ ಆಲೋಚಿಸಿ ಎಂದು ಪ್ರಾರ್ಥನೆ.

ಇನ್ನೊಂದು ಮುಖ್ಯ ಅಂಶ ಗಮನಿಸಿ. ಭಾರತೀಯರಾರೂ ತೆರಿಗೆ ವಂಚಕರಲ್ಲ. ಎಲ್ಲರೂ ಪ್ರಾಮಾಣಿಕರೆ, ಸತ್ಯವಂತರೆ, ದಯಾಮಯಿಗಳೇ. ಆದರೆ ನಮ್ಮನ್ನು ವಿದೇಶೀಯರು ಆಳಲಾರಂಭಿಸಿದಾಗ ತೆರಿಗೆ ರೂಪದಲ್ಲಿ ನಮ್ಮನ್ನು ವಂಚಿಸಿ ಅವರ ದೇಶಕ್ಕೆ ಸಾಗಿಸುತ್ತಿದ್ದ ಕಾರಣದಿಂದಾಗಿ ಒಂದಷ್ಟು ವರ್ಷಗಳ ಕಾಲ (ಅಂದಾಜು ೩೦೦ ವರ್ಷ) ನಮ್ಮಲ್ಲಿ ನಮ್ಮ ನಾಯಕರೂ ತೆರಿಗೆ ಕಟ್ಟಬೇಡಿ ಎಂದೇ ಬೋಧಿಸಿರಬಹುದು. ಅದು ವಿದೇಶೀಯರನ್ನು ಪ್ರತಿಭಟಿಸುವ ಉದ್ದೇಶವಾಗಿತ್ತು. ಆದರೆ ಈಗ ನಮ್ಮದೇ ದೇಶ, ನಾವೇ ರಾಜರು. ಹಾಗಿದ್ದ ಮೇಲೆ ನಮಗೇ ನಾವೇ ವಂಚನೆ ಮಾಡಬೇಕೇ? ಚಿಂತಿಸಿ. ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಕಾಲದ ಕೆಲ ಭ್ರಷ್ಟಚಾರಗಳು ಈಗಲೂ ನಿಂತಿರಬಹುದು. ಸಮಾಜ ಮನಸ್ಸು ಮಾಡಿದರೆ ಆ ಭ್ರಷ್ಟಾಚಾರ ನಿಲ್ಲಿಸುವುದೇನೂ ಕಷ್ಟವಲ್ಲ. ಕೆಲ ರಾಜಕಾರಣಿಗಳು ಭ್ರಷ್ಟರಿರಬಹುದು ಅವರಿಗೆ ಪಾಠ ಮಾಡುವುದೂ ಕಷ್ಟವಲ್ಲ. ಹಾಗೆಂದು ತೆರಿಗೆ ವಂಚನೆ ಮಾಡಿ ನಾವು ಭ್ರಷ್ಟರಾಗಬಾರದಲ್ಲವೆ? ಆದ ಕಾರಣ ನಮ್ಮ ಸರಳ ಜೀವನ ಪದ್ಧತಿಯನ್ನು ಬಳಸಿಕೊಂಡು ತೆರಿಗೆ ವಂಚನೆಯ ಭೂತಕ್ಕೆ ಸಿಗದೇನೇ ಬದುಕು ರೂಪಿಸಿಕೊಳ್ಳಬೇಕು. ಇಲ್ಲಾ ಅನಿವಾರ್ಯ ಕಾಲದಲ್ಲಿ ತೆರಿಗೆ ಕಟ್ಟಲೇ ಬೇಕು. ಅದು ಬಿಟ್ಟು ವಂಚನೆ ಮಾಡಬೇಡಿ. ತನ್ಮೂಲಕ ಸುಖಜೀವನವನ್ನು ಕಳೆದುಕೊಳ್ಳಬೇಡಿ. ಮುಖ್ಯವಾಗಿ ಸಾಮಾನ್ಯ ಜೀವನ ಸರಕುಗಳಲ್ಲಿ ತೆರಿಗೆ ಇಲ್ಲ. ಇದ್ದಲ್ಲಿ ಕ್ಷುಲ್ಲಕ ಲಾಭಕ್ಕಾಗಿ ತೆರಿಗೆ ಕಟ್ಟದಿರಬೇಡಿ. ತನ್ಮೂಲಕ ನೀವೂ+ವ್ಯಾಪಾರಿ ಇಬ್ಬರೂ ವಂಚಕರಾಗುವ ಅವಕಾಶ ಸೃಷ್ಟಿ ಮಾಡಬೇಡಿ. ಬಿಲ್ ಕೇಳಿ, ತೆರಿಗೆ ಕಟ್ಟಿ, ಸುಖವಾಗಿ ಬಾಳಿರಿ.


-  ಕೆ.ಎಸ್. ನಿತ್ಯಾನಂದ
ವೇದ ವಿಜ್ಞಾನ ಮಂದಿರ, 
ಚಿಕ್ಕಮಗಳೂರು

No comments:

Post a Comment