Tuesday, 19 September 2017

ಬ್ರಹ್ಮ ವಿಜ್ಞಾನ - ೧ : ಸದಸದ್ವಾದ - ಸಪ್ತ ವಿಕಲ್ಪ ಸೂತ್ರ

|| ಶ್ರೀ ಗುರುಭ್ಯೋ ನಮಃ || 
|| ಹರಿಃ ಓಂ ||

* ಮಂಗಳಾಚರಣ *

ನಿಷು ಸೀದ ಗಣಪತೇ ಗಣೇಷು ತ್ವಾಮಾಹುರ್ವಿಪ್ರತಮಂ ಕವೀನಾಮ್ |
ನ ಋತೇ ತ್ವತ್ ಕ್ರಿಯತೇ ಕಿಞ್ಚನಾರೇ ಮಹಾಮರ್ಕಂ ಮಘವನ್ ಚಿತ್ರಮರ್ಚ || ()
(ಋಗ್ವೇದ ೧೦/೧೧೨/)

೧ ಸರಳಾರ್ಥ -ಹೇ (ಗಣಪತೇ) ಸಮೂಹದ ಒಡೆಯನೇ! (ಗಣೇಷು) ನೀವು ನಿಮ್ಮ ಸಮೂಹದಲ್ಲಿ (ನಿಷುಸೀದ) ವಿರಾಜಿಸುತ್ತೀರ. (ತ್ವಾಂ) ನೀವು ಎಲ್ಲಾ (ಕವೀನಾಂ) ವಿದ್ವಾಂಸರಲ್ಲಿ (ವಿಪ್ರತಮಂ) ಅಗ್ರಗಣ್ಯನೆಂದು (ಆಹುಃ) ಕರೆಯಲ್ಪಡುತ್ತೀರ. (ತ್ವದ್ ಋತೇ) ನೀವಿಲ್ಲದೆ (ಕಿಞ್ಚನಾರೇ) ಯಾವುದೇ ಕೆಲಸವು ಎಲ್ಲಿಯೂ (ನ ಕ್ರಿಯತೇ) ಮಾಡಲ್ಪಡುವುದಿಲ್ಲ. (ಮಘವನ್) ಹೇ ಪೂಜನೀಯ ಪ್ರಭುವೇ! (ಚಿತ್ರಂ) ನಾನಾ ಪ್ರಕಾರದ (ಮಹಾಮರ್ಕ) ದೊಡ್ಡ ಪ್ರಕಾಶ ಅರ್ಥಾತ್ ದಿವ್ಯ ಜ್ಞಾನವನ್ನು (ಅರ್ಚ) ಪ್ರಕಾಶಿಸಿರಿ || ||

ವೈಜ್ಞಾನಿಕ ವಿವೇಚನೆ - ಸಂಸಾರದಲ್ಲಿ ಪ್ರತ್ಯೇಕ ಮನುಷ್ಯರ ಆತ್ಮವು ಪ್ರಜ್ಞಾ ಹಾಗೂ ಪ್ರಾಣದಿಂದ ಉಂಟಾಗಿದೆ. ಶರೀರದಲ್ಲಿ ಪ್ರಜ್ಞೆಯಿಂದ ಜ್ಞಾನದ ಮತ್ತು ಪ್ರಾಣದಿಂದ ಕ್ರಿಯೆಯ ಸಂಚಾರವು ನಿರಂತರ ಆಗುತ್ತಿರುತ್ತದೆ. ಒಂದುವೇಳೆ ಸಂಪೂರ್ಣ ಜಗತ್ತಿನ ಭೂತ, ಭವಿಷ್ಯತ್ ಮತ್ತು ವರ್ತಮಾನಗಳಲ್ಲಿ ಎಲ್ಲಾ ಆತ್ಮಗಳನ್ನು ಒಂದೇ ದೃಷ್ಟಿಯಿಂದ ನೋಡಿದರೆ, ಸರ್ವಜಗದ್-ವ್ಯಾಪಕ ಸಮಸ್ತ ಪ್ರಜ್ಞಾ ಹಾಗೂ ಪ್ರಾಣಗಳ ಘನಸ್ವರೂಪವು ಆ ಒಂದೇ ಆತ್ಮವಾಗಿರುತ್ತದೆ. ಇದನ್ನೇ ಇಂದ್ರ ಎಂದು ಕರೆಯುತ್ತಾರೆ. ಈ ಇಂದ್ರದ ಕೆಲಕೆಲವು ಭಾಗದಿಂದ ಪ್ರತ್ಯೇಕ ಮನುಷ್ಯರ ಆತ್ಮಾ ಉಂಟಾಗಿದೆ. ಅದೇ ಇಂದ್ರವು ಇಲ್ಲಿ ಗಣಪತಿ ಶಬ್ದದಿಂದ ವ್ಯವಹರಿಸಲ್ಪಟ್ಟಿದೆ. ಭಾರತವರ್ಷದಲ್ಲಿ ಹೇಗೆ ಎಲ್ಲಾ ಕರ್ಮಗಳ ಆರಂಭದಲ್ಲಿ ಗಣಪತಿಯ ಪೂಜೆ ಮಾಡಲಾಗುತ್ತದೋ, ಅದು ಇದೇ ಜಗದ್ ವ್ಯಾಪಕ ಆತ್ಮವುಳ್ಳ ಇಂದ್ರನ ಅರ್ಚನೆಯಾಗಿದೆ. ಈ ಇಂದ್ರವು ಮರುದ್ಗಣಗಳೊಂದಿಗೆ ಇರುತ್ತದೆ, ಆದ್ದರಿಂದ ಇದನ್ನು ಗಣಪತಿ ಎಂದು ಕರೆಯುತ್ತಾರೆ. ಹಾಗೇ ಮರುತ್ತುಗಳ ಉತ್ಪತ್ತಿಯು ರುದ್ರನಿಂದ ಆಗಿರುವುದರಿಂದ ಇವುಗಳನ್ನು ರುದ್ರಪುತ್ರ (ಮಹಾದೇವನ ಮಕ್ಕಳು) ಎಂದೂ ಕರೆಯುತ್ತಾರೆ. ಈ ಇಂದ್ರ ಆತ್ಮವನ್ನು ಪ್ರಜ್ಞಾ ಹಾಗೂ ಪ್ರಾಣಗಳ ಘನವೆಂದು ಹೇಳಿದ್ದೇವೆ. ಆದ್ದರಿಂದ ಎಲ್ಲಾ ವಿದ್ವಾಂಸರ ಎಲ್ಲಾ ಪ್ರಕಾರದ ಜ್ಞಾನವು ಇದೇ ಆತ್ಮದಿಂದ ಆರಂಭವಾಗುತ್ತದೆ. ಮಂತ್ರದಲ್ಲೂ ಅದಕ್ಕಾಗಿಯೇ ಗಣಪತಿಯು ವಿದ್ವಾಂಸರಲ್ಲಿ ಅಗ್ರಗಣ್ಯನೆಂದು ಹೇಳಲ್ಪಟ್ಟಿದೆ. ಇವರ ಪ್ರಾಣದ ಘನವಾಗಿರುವು ಕಾರಣದಿಂದ ಗಣಪತಿಯನ್ನು ಹೊರತುಪಡಿಸಿ ಎಲ್ಲಿಯೂ ಯಾವುದೇ ಕ್ರಿಯೆ (ಕಾರ್ಯ) ಮಾಡಲಾಗುವುದಿಲ್ಲ ಎಂಬುದು ಸತ್ಯ. ಆದ್ದರಿಂದ ಆ ವ್ಯಾಪಕ ಆತ್ಮನನ್ನು ಕುರಿತು ಪ್ರಾರ್ಥಿಸುವುದೇನೆಂದರೆ ನಿಮ್ಮ ಎಷ್ಟು ಭಾಗವು ಈ ಸಣ್ಣ ಆತ್ಮದಲ್ಲಿದೆಯೋ, ಅದರಲ್ಲಿ ಅಧಿಕ ಪ್ರಕಾಶ ಉಂಟುಮಾಡಿರಿ, ತನ್ಮುಖೇನ ನಮ್ಮ ಈ ಆತ್ಮದಲ್ಲಿ ಪ್ರಜ್ಞಾ ಹಾಗೂ ಪ್ರಾಣದ; ಅಂದರೆ ಜ್ಞಾನ ಹಾಗೂ ಕ್ರಿಯೆಗಳ ಅಧಿಕ ಪ್ರಕಾಶವಾಗಲಿ. ಅದರಿಂದ ಬಹಳ ದಿವ್ಯ, ಅಲೌಕಿಕ ವೈಜ್ಞಾನಿಕ ವಿಷಯಗಳ ಯಥಾರ್ಥಜ್ಞಾನ ನಮ್ಮಲ್ಲುಂಟಾಗಲಿ ಹಾಗೂ ಅಧಿಕ ಕ್ರಿಯೆ ಮಾಡಲು ಸಮರ್ಥರಾಗೋಣ || ||

ಜಗೃಮ್ಭಾ ತೇ ದಕ್ಷಿಣಮಿನ್ದ್ರ ಹಸ್ತಂ ವಸೂಯವೋ ವಸುಪತೇ ವಸೂನಾಮ್ |
ವಿದ್ಮಾ ಹಿ ತ್ವಾ ಗೋಪತಿಂ ಶೂರಗೋನಾಮಸ್ಮಭ್ಯಂ ಚಿತ್ರಂ ವೃಷಣಂ ರಯಿಂ ದಾಃ || ()
(ಋ ೧೦/೪೭/)

. ಸರಳಾರ್ಥ - ಹೇ ಇಂದ್ರ ಪ್ರಭುವೇ! ನಾವು ನಿಮ್ಮ ಬಲಗೈಯನ್ನು ಹಿಡಿದಿದ್ದೇವೆ. ಹೇ ಧನಾಧಿಪತಿಯೇ! ನಾವು ಧನದ ಆಶಾವಾದಿಗಳು. ಹೇ ಶೂರವೀರ! ನಿಮ್ಮನ್ನು ನಾವು ಗೋವುಗಳ ಸ್ವಾಮಿ ಎಂದು ತಿಳಿದಿದ್ದೇವೆ. ನೀವು ನಮಗೆ ವೃದ್ಧಿಸಲ್ಪಡುವ ಸಂಪತ್ತನ್ನು ಕೊಡಿರಿ.

ವೈಜ್ಞಾನಿಕ ವಿವೇಚನೆ - ಪ್ರತ್ಯೇಕ ಮನುಷ್ಯರ ಆತ್ಮದಿಂದ ಯಾವ ಶಕ್ತಿಗಳು ಹೊರಹೊಮ್ಮುತ್ತವೋ ಅವು ಸೂರ್ಯನ ದಕ್ಷಿಣ ಗತಿಯ ಕಾರಣದಿಂದ ಶರೀರದ ಬಲಭಾಗದಲ್ಲಿ ಸ್ವಲ್ಪ ಅಧಿಕವಾಗಿಹಾಗೂ ಎಡಭಾಗದಲ್ಲಿ ಸ್ವಲ್ಪ ಕಡಿಮೆಯಾಗಿ ಇರುತ್ತವೆ. ಎಡಗೈ ಅತಿಬಲ ಪಡೆದಿರುತ್ತದೆ, ಆದರೆ ಬಳಕೆ ಮಾಡುತ್ತಾ ಹೋದರೆ ವಿಕೃತಿ ಆಗಬಹುದು. ಎಡಭಾಗದ ನರಗಳನ್ನು ರಕ್ಷಿಸಲೋಸುಗ ಅದರ ಬಳಕೆ ಕಡಿಮೆ ಮಾಡಿ, ಬಲಭಾಗದ ಬಳಕೆ ಹೆಚ್ಚು ಮಾಡುವುದು ರೂಢಿ.ಈ ದೃಷ್ಟಿಯಲ್ಲಿ ಬಲಗೈ ಎಂಬುದರ ತಾತ್ಪರ್ಯವು ಅಧಿಕ ಶಕ್ತಿಯ ಕಡೆಗೆ ಸಂಕೇತಿಸುವುದಾಗಿರುತ್ತದೆ. ಒಂದುವೇಳೆ ಈ ಇಂದ್ರವು ಪ್ರಾಣದ ಘನರೂಪ ಒಂದೇ ಆತ್ಮವಾಗಿದ್ದು ಅದರ ಕೈ-ಕಾಲು ಇತ್ಯಾದಿ ಯಾವುದೇ ವಿಶೇಷ ಅಂಗಗಳು ಇರುವುದಿಲ್ಲವೋ, ಹಾಗೆಯೇ ಅದರ ಅಧಿಕ ಶಕ್ತಿಯು ಶರೀರದಲ್ಲಿ ಬಲಭಾಗದಲ್ಲಿ ಪ್ರವಹಿಸುತ್ತದೆ. ನಾವು ಅದೇ ಶಕ್ತಿಯ ಆಶ್ರಯವನ್ನು ಪಡೆಯುತ್ತೇವೆ. ಹಾಗಾಗಿ ಬಲಗೈಯನ್ನು ಹಿಡಿಯುವುದು ಎಂಬುದರ ತಾತ್ಪರ್ಯವಿದು. ನಾವು ಧನಾಕಾಂಕ್ಷಿಗಳು, ಅದು ಧನಾಧಿಪತಿ; ಇದೇ ಸಂಬಂಧ. ಇಲ್ಲಿ ಧನ ಎಂದರೆ ದುಡ್ಡು ಮಾತ್ರವೆಂದಲ್ಲ, ಧನಾತ್ಮಕ ಶಕ್ತಿ (+ve energy) ಎಂದೂ ಆಗುತ್ತದೆ. ನಾವು ಗೋವಿನ ಸದೃಶ ಅರ್ಥಾತ್ ಪಶು-ತುಲ್ಯ ಅಲ್ಪಜ್ಞರಾಗಿದ್ದೇವೆ ಹಾಗೂ ಆ ಆತ್ಮವು ಪಶುರೂಪೀ ಸಣ್ಣ-ಸಣ್ಣ ಆತ್ಮಗಳ ಸರ್ವಪ್ರಭು ಆಗಿದೆ. ಆದ್ದರಿಂದ ನಮ್ಮ ದುಃಖಗಳನ್ನು ದೂರೀಕರಿಸುವ ಅಧಿಕಾರಿಯಾದ ಆ ಪರಮಾತ್ಮಾ ಇಂದ್ರನನ್ನು ಅರ್ಥಮಾಡಿಕೊಂಡು ಪ್ರಾರ್ಥಿಸುವುದೇನೆಂದರೆ ಅವನು ನಮ್ಮ ಆಶೋತ್ತರಗಳನ್ನು ಈಡೇರಿಸಲಿ ಎಂದು.

ಪ್ರತಿಜ್ಞಾ - ಎಲ್ಲೆಲ್ಲಿ ಏನೇನು ದೃಷ್ಟಿಗೋಚರವಾಗುತ್ತದೋ, ಇವೆಲ್ಲದರ ಮೂಲವೇನು? ಆರಂಭವೆಲ್ಲಿಂದ? ಸಂಸ್ಥಾ ಅರ್ಥಾತ್ ಸ್ವರೂಪ-ವಿನ್ಯಾಸ ಹೇಗಿದೆ? ಅದರ ಗತಿಯು ಹೇಗಿದೆ? ಅಂದರೆ ಯಾವುದು ಯಾವ ದೃಷ್ಟಿಯಲ್ಲಿ ಇರುತ್ತದೋ, ಅದರ ಹಿಂದೆ ಯಾವ ರೂಪದಲ್ಲಿ ಕಾಣಸಿಗುತ್ತದೆ? ಮುಂದೆ ಎಲ್ಲಿಗೆ ಹೋಗುತ್ತದೆ? ಇತ್ಯಾದಿ ವಿಚಾರಗಳ ಜಿಜ್ಞಾಸೆಯು ಪ್ರತೀ ಮನುಷ್ಯನ ಹೃದಯದಲ್ಲಿ ತಾನೇತಾನಾಗಿ ಉತ್ಪನ್ನವಾಗುತ್ತಿರುತ್ತದೆ. ಈ ಎಲ್ಲಾ ವಿಚಾರಗಳನ್ನು ಯಥಾರ್ಥ ರೂಪದಲ್ಲಿ ತಿಳಿದುಕೊಳ್ಳಲು ಪ್ರಾಚೀನ ಸಮಯ ಅರ್ಥಾತ್ ದೇವಯುಗದಲ್ಲಿ ಪ್ರಾಪ್ತವಾಕ್ಯಗಳಿಂದ ಋಷಿ, ಮಹರ್ಷಿಗಳು ಹೇಗೆ ವಿಚಾರಶೀಲರೂ ಹಾಗೂ ಅಸಾಧಾರಣ ಧಾರಣೆಯ ಅಗ್ರಗಣ್ಯ ವಿದ್ವಾಂಸರಾಗಿದ್ದರೋ, ಅವರು ತಮ್ಮ ವಿಚಾರಾನುಸಾರ ಅಥವಾ ಪರಾಮರ್ಶಪೂರ್ವಕ ಯಾವ್ಯಾವ ಕೆಲ ಸಿದ್ಧಾಂತಗಳನ್ನು ನಿರ್ಧರಿಸಿದ್ದರೋ, ಅದೇ ಸಿದ್ಧಾಂತಗಳ ಕೊಂಚ ದಿಗ್ದರ್ಶನ ಮಾಡಿಸುಲು ಇಲ್ಲಿ ಯತ್ನಿಸಲಾಗಿದೆ.

ವೇದೋಕ್ತ ವಾಕ್ಯಗಳಿಂದ ಈ ವಿಷಯದಲ್ಲಿ ೧೦ ಪ್ರಕಾರದ ವಾದಗಳು ಕೇಳಲು ಸಿಗುತ್ತದೆ -
. ಸದಸದ್ವಾದ          
. ರಜೋವಾದ          
. ವ್ಯೋಮವಾದ
. ಅಪರವಾದ           
. ಆವರಣವಾದ         
. ಅಮ್ಭೋವಾದ
. ಅಮೃತಮೃತ್ಯುವಾದ     
. ಅಹೋರಾತ್ರ          
. ದೈವವಾದ
೧೦. ಸಂಶಯವಾದ
ಈ ರೀತಿ ೧೦ ಮುಖ್ಯವಾದಗಳಿವೆ. ಇವುಗಳಲ್ಲಿ ಎಷ್ಟೋ ಅಂತರವಾದಗಳಿವೆ. ಮುಂದಿನ ಲೇಖನಗಳಲ್ಲಿ ಅವೆಲ್ಲದರ ದರ್ಶನ ಪಡೆಯುವ ಪ್ರಯತ್ನ ಮಾಡೋಣ. ಪ್ರಸಕ್ತ ಲೇಖನದಲ್ಲಿ ಸದಸದ್ವಾದದ ವಿಕಲ್ಪಗಳನ್ನು ವಿವರಿಸುವ ಪ್ರಯತ್ನ ಮಾಡುತ್ತೇನೆ.

ವಿಕಲ್ಪ ನಿರ್ದೇಶ - ಸದಸದ್ವಾದವಿಕಲ್ಪ


ಪ್ರತ್ಯೇಕ ವಸ್ತುವು ಪ್ರತೀಕ್ಷಣ ಬದಲಾಗುತ್ತಿರುತ್ತದೆ. ಹೀಗೆ ಬದಲಾಗುತ್ತಿದ್ದರೂ ಪ್ರಾಯಶಃ ಎಲ್ಲಾ ವಸ್ತುಗಳು ದೀರ್ಘಕಾಲದವರೆಗೆ ಸ್ಥಾಯಿಯಾಗಿರುತ್ತವೆ. ಈ ರೀತಿ ಪ್ರತ್ಯೇಕ ವಸ್ತುವಿನಲ್ಲಿ ೨ ಭಾವ ಕಂಡುಬರುತ್ತದೆ - ಒಂದು ಪ್ರತಿಕ್ಷಣ ನಷ್ಟವಾಗುತ್ತಿರುವ ರೂಪ ಹಾಗೂ ಎರಡನೇಯದಾದ ಸ್ಥಾಯೀರೂಪ. ಇವೆರಡರಲ್ಲಿ ಮುಖ್ಯವಾವುದು? ಈ ವಿಚಾರಕ್ಕೆ ಸಂಬಂಧಿಸಿದಂತೆ ೩ ಮತಭೇದಗಳಿವೆ - ಸತ್, ಅಸತ್ ಹಾಗೂ ಸದಸದ್.

     ಇಲ್ಲಿ ನಷ್ಟವಾಗುವ ಭಾವವನ್ನು ಅಸತ್ ಶಬ್ದದಿಂದ, ಹಾಗೂ ಅವಿನಾಶೀ ಭಾವವನ್ನು ಸತ್ ಶಬ್ದದಿಂದ ಸಂಬೋಧಿಸುತ್ತಾರೆ. ಅಸತ್ ಭಾವವು ಒಂದು ಕ್ಷಣದಿಂದ ಮತ್ತೊಂದು ಕ್ಷಣದವರೆಗೂ ಒಂದೇ ರೂಪದಲ್ಲಿರುವುದಿಲ್ಲ, ಆದರೆ ಎರಡನೇಯದಾದ ಸತ್ ಭಾವವು ಎಷ್ಟೋ ವರ್ಷಗಳವರೆಗೆ ಏಕರೂಪದಲ್ಲಿ ಸ್ಥಾಯೀಯಾಗಿರುತ್ತದೆ.

     ಮೊದಲನೇ ಮತದಂತೆ ಇವೆರಡು ಭಾವಗಳಲ್ಲಿ ಅಸತ್ ಭಾವವೇ ಪ್ರಧಾನ. ಮೊದಲು ಅಸತ್ತೇ ಇತ್ತು, ಅದರಿಂದಲೇ ಮುಂದೆ ಸತ್ ಭಾವವು ಉತ್ಪನ್ನವಾಯಿತು. ಈಗ ಒಂದು ಬಟ್ಟೆ ಅಥವಾ ಮಡಕೆಯು ಉಪಯೋಗವಿಲ್ಲ ಎಂದು ಕಂಡರೂ ಹಿಂದೆ ತಯಾರಿಸುವಾಗ ಅದು ಉಪಯುಕ್ತವೇ ಆಗಿತ್ತು. ಅದನ್ನೇ ಈ ವಿಶ್ವಕ್ಕೂ ಹೇಳಬಹುದು. ಅಂದರೆ ಹಿಂದೆಂದೋ ಅದು ಇರಲಿಲ್ಲ, ನಂತರವದು ಉತ್ಪನ್ನವಾಯಿತು. ಅದನ್ನು ಯಾರೂ ಉತ್ಪಾದನೆ ಮಾಡಲಿಲ್ಲ, ಏಕೆಂದರೆ ಅಲ್ಲಿ ಏನೂ ಇರಲೇ ಇಲ್ಲ ಎಂದ ಮೇಲೆ ಯಾರಿಂದಲೋ, ಯಾವುದೋ ದ್ರವ್ಯದಿಂದ, ಯಾವುದೇ ರೀತಿಯಲ್ಲಿ, ಯಾವುದೇ ವಸ್ತುವಿನ ಉತ್ಪತ್ತಿ ಮಾಡುವ ಪ್ರಯತ್ನವು ಹೇಗೆ ಸಂಭವ? ಆದರೆ ಯಾವುದು ಇರಲಿಲ್ಲವೋ, ಅದು ತನಗೆ ತಾನೇ ತನ್ನನ್ನು ತಯಾರಿಸಿಕೊಂಡಿತು. ಹಾಗಾಗಿ ವಿಶ್ವವನ್ನು ಸ್ವಕೃತವೆಂದು ಕರೆಯುತ್ತಾ ಆಚಾರ್ಯವರ್ಯರು ಸುಕೃತ ಎಂಬ ನಾಮಕರಣ ಮಾಡಿದರು. ಇದು ತೈತ್ತಿರೀಯದ ಮತ. (ಇದೇ ಅಸದ್ವಾದ).

     ಎರಡನೇ ಮತದಂತೆ ಅಸತ್ತಿನಿಂದ ಸತ್ ಎಂದಿಗೂ ಉಂಟಾಗುವುದೇ ಇಲ್ಲ. ಅಸಂಭವ ವಿಷಯವನ್ನು ಒಪ್ಪುವುದು ತಿಳುವಳಿಕೆಗೆ ದೂರದ ಮಾತು. ಹೇಳಲಿಕ್ಕೆ ಇವೆರಡು ಭಾವಗಳಲ್ಲಿ ಸತ್ ಭಾವವೇ ಪ್ರಧಾನವೆಂದು ನಾವು ಹೇಳಬಹುದು. ಸತ್ ಎಂಬುದರಿಂದಲೇ ಅಸತ್ ಕೂಡ ಉಂಟಾಗುತ್ತದೆ. ಯಾವ ಬಟ್ಟೆ ಅಥವಾ ಮಡಕೆಯು ಇಂದು ಸತ್ ರೂಪದಲ್ಲಿ ಉಪಸ್ಥಿತವಿದೆಯೋ, ಅದನ್ನು ನಷ್ಟ ಮಾಡುವುದರಿಂದ ಎಂದೆಂದಿಗೂ ಅಸತ್ ರೂಪಕ್ಕೆ ಬಂದುಬಿಡುತ್ತವೆ. ಅಥವಾ ಹೀಗೆ ಅರ್ಥೈಸಬಹುದು - ಈ ಜಗತ್ತಿನಲ್ಲಿ ಯಾವ ಅಸತ್ ಭಾವವು ಕಂಡುಬರುತ್ತದೋ, ಅದು ಭ್ರಮೆ! ಏಕೆಂದರೆ ಯಾವುದನ್ನು ಅಸತ್ ಎಂದು ತಿಳಿದಿರುತ್ತೀರೋ ಅದರ ಸತ್ತೆಯನ್ನೂ ನೀವು ಒಪ್ಪುತ್ತೀರಿ. ಹೇಗೆಂದರೆ ಮೊದಲು ಇದ್ದ ಮಡಕೆಯನ್ನು ನಷ್ಟ ಮಾಡುವುದರಿಂದ ಈಗ ಅದು ಅಸತ್ ಆಗಿದೆ. ಇದರರ್ಥ ಆ ವಸ್ತುವಿಗೆ ಸ್ಥಿತಿ ಮತ್ತು ನಾಶಗಳೆಂಬ ಎರಡು ರೂಪಗಳಿವೆ ಎಂದೇ ಸಿದ್ಧವಾಗುತ್ತದೆ. ಎಲ್ಲವೂ ಸತ್ ಆಗಿದ್ದು, ಸತ್ತಿನಿಂದಲೇ ಸತ್ ಉತ್ಪನ್ನವಾಗುತ್ತದೆ. ಈ ಸಂಸಾರವು ಮೊದಲೂ ಸತ್ ಆಗಿತ್ತು, ಈಗಲೂ ಸತ್ ಆಗಿದೆ ಹಾಗೂ ಭವಿಷ್ಯದಲ್ಲೂ ಎಂದೆಂದಿಗೂ ಇದೇ ರೂಪದಿಂದ ಸತ್ ಆಗಿಯೇ ಇರುತ್ತದೆ. ಈ ಸದ್ವಾದದ ಅಂಶವು ಆರುಣೀ ವಂಶದವರದ್ದಾಗಿದೆ. (ಇದೇ ಸದ್ವಾದ).

     ಮೊದಲು ಸತ್ ಇತ್ತು, ಈಗ ಅಸತ್ ಇದೆ. ಅಂದರೆ ಶೂನ್ಯರೂಪವಾಗಿದ್ದರೂ ಈ ಅಸತ್ ಎಂಬುದು ಶೂನ್ಯರೂಪದೊಂದಿಗೂ "ಇದೆ" ಎಂಬುದನ್ನು ನೀವು ಸದ್ವಾದಿಗಳುಸೇರಿಸಿಕೊಂಡು ಹೇಳುತ್ತಿದ್ದೀರಿ. ಅಲ್ಲಿ ಸತ್ತೆಯು ಇದ್ದರೆ ಅವಶ್ಯವಾಗಿ ಅದನ್ನು ಸತ್ ಎಂದು ಪರಿಗಣಿಸಬಹುದು. ನಂತರ ನೆನಪಿಗೆ ಬರುವ ಯಾವುದೇ ದ್ರವ್ಯವನ್ನು ಅಸತ್ ಎಂದು ಸಂಬೋಧಿಸಲು ಹೇಗೆ ಸಾಧ್ಯ?

     ಈಗ ಮೂರನೇ ಅಭಿಪ್ರಾಯ - ಮೊದಲು ಸತ್ ಇದ್ದಿತು, ಅದರ ಹಿಂದೆಯೇ ಅಸತ್ ಉಂಟಾಯಿತು. ಅದನ್ನು ಹೀಗೂ ಹೇಳಬಹುದು - ಮೊದಲು ಅಸತ್ ಇದ್ದಿತು, ಅದರ ಹಿಂದೆಯೇ ಸತ್ ಹುಟ್ಟಿತು. ಇವೆರಡೂ ಅಭಿಪ್ರಾಯಗಳು ತಪ್ಪು. ಏಕೆಂದರೆ ನಾವು ಇವೆರಡೂ ಭಾವಗಳನ್ನು ಒಂದೇ ರೀತಿಯಲ್ಲಿ ನೋಡುವಾಗ ಅವುಗಳಲ್ಲಿ ಹಿಂದು-ಮುಂದೆಂದು ಹೇಳುವುದು ತಪ್ಪಾಗುತ್ತದೆ. ಸತ್ಯವೇನೆಂದರೆ ಯಾವುದು ಸತ್ ಆಗಿದೆಯೋ, ಅದೇ ಅಸತ್ ಕೂಡ ಆಗಿದೆ. ಸತ್, ಅಸತ್ ಎಂಬುದು ೨ ವಸ್ತುಗಳಲ್ಲ. ಇವಕ್ಕೆ ಎರಡೆಂಬ ಸಂಖ್ಯಾ ನಿರ್ದೇಶನವೇ ಇಲ್ಲದಿರುವಾಗ, ಇವುಗಳಲ್ಲಿ ಅಗ್ರ-ಪಶ್ಚಾತ್ ಎಂದು ಹೇಳುವುದೂ ಸರಿಯಾಗುವುದಿಲ್ಲ. ಯಾವುದೋ ರೂಪದಿಂದ ಈ ಎಲ್ಲಾ ಜಗತ್ತು ಸತ್ ಆಗಿದೆ ಎಂದರೆ ಅದೇ ಯಾವುದೋ ರೂಪದಿಂದ ಅಸತ್ ಎಂದು ಕರೆಯಲ್ಪಡುತ್ತದೆ. ಇವೆರಡೂ ಚಿಂತನೆಗಳು ಸತ್ಯ. ಇದು ಮೂರನೇಯದಾದ ಸದಸದ್ವಾದವು ಯಾಜ್ಞವಲ್ಕ್ಯಾದಿ ಋಷಿಗಳದ್ದಾಗಿದೆ.

     ಈ ರೀತಿ ಸದಸದ್ವಾದದಲ್ಲಿ ೩ ಮತಭೇದಗಳು ಇರುವುದರಿಂದ ತ್ರಿಪಕ್ಷೀ ಎಂದು ಕರೆಯಲ್ಪಡುತ್ತದೆ.ಸಪ್ತ ವಿಕಲ್ಪ ಸೂತ್ರ |


ಇಲ್ಲಿ ಹೇಳಿರುವ ಮೂರು ಪಕ್ಷಗಳು (ಮತಗಳು) ಸದಸದ್ವಾದ ಎಂದು ಕರೆಯಲ್ಪಟ್ಟಿದೆ. ಅದರ ಸತ್, ಅಸತ್ ಎಂಬೆರಡು ಪದಗಳ ಭಿನ್ನ-ಭಿನ್ನ ಅರ್ಥ ಗ್ರಹಿಸಿ ಪೂರ್ವಾಚಾರ್ಯರಲ್ಲಿ ಯಾವ ೭ ಮತಭೇದಗಳಾದವೋ ಅವು ಇಂತಿವೆ -

. ಪ್ರತ್ಯಯಾದ್ವೈತವಾದ
. ಪ್ರಕೃತ್ಯದ್ವೈತವಾದ
. ತಾದಾತ್ಮ್ಯವಾದ
. ಅಭಿಕಾರ್ಯವಾದ
. ಗುಣವಾದ
. ಸಾಮಞ್ಜಸ್ಯವಾದ
. ಅಕ್ಷರವಾದ

     ಈ ಏಳೂ ಮತಗಳಲ್ಲಿ ಮೊದಲು ವಿವರಿಸಿದ ಪ್ರತಿಯೊಂದರ ಸತ್, ಅಸತ್ ಹಾಗೂ ಸದಸತ್ ಎಂಬ ೩ ಪಕ್ಷಗಳಾಗುವುದರಿಂದ ೭ x = ೨೧ ಮತಗಳಾಗುತ್ತವೆ. ಇದೇ ೨೧ ಮತಗಳ ವರ್ಣನೆಯನ್ನು ಈ ಪ್ರಥಮ ಸದಸದ್ವಾದದಲ್ಲಿ ಮಾಡಲಾಗಿದೆ. ಇದು ೨೦ ಗಣಗಳೊಂದಿಗೆ ೨೧ನೇಯದಾದ ಗಣಪತಿಯ ತತ್ವ ಮೀಮಾಂಸೆಗೆ ಸಮೀಕರಿಸಬಹುದೇನೋ ಎಂದೆನಿಸುತ್ತದೆ. ಈಗ ಇವುಗಳ ಸ್ಥೂಲ ಪರಿಚಯ ಮಾಡಿಕೊಳ್ಳುತ್ತಾ ಮುಂದುವರೆಯೋಣ.

() ಪ್ರತ್ಯಯಾದ್ವೈತವಾದ |

ನಾವು ಎಲ್ಲಿಗಾದರೂ ದೃಷ್ಟಿ ಹರಿಸಿದರೆ, ನಮಗೆ ಏನೆಲ್ಲ ದೃಷ್ಟಿಗೋಚರವಾಗುತ್ತದೋ ಹಾಗೂ ನಾವು ಅದರಲ್ಲಿ ಏನೇನನ್ನು ನೋಡುತ್ತೇವೆ? (ಮನಸಾ). ಹೀಗೆ ನೋಡುವುದರಲ್ಲಿ ಎರಡು ಖಣ್ಡಗಳು ಪ್ರತೀತವಾಗುತ್ತವೆ - ದ್ರಷ್ಟಾ ಹಾಗೂ ದೃಷ್ಯ. ಇದರಲ್ಲಿ ದ್ರಷ್ಟಾ ಸತ್ ಹಾಗೂ ದೃಷ್ಯ ಅಸತ್ ಆಗಿದೆ. ಇವೆರಡೂ ಭಿನ್ನ-ಭಿನ್ನವೆಂದು ಪ್ರತೀತವಾಗುತ್ತದೆ. ದ್ರಷ್ಟಾ ದ್ರಷ್ಟಿಸುವವನಾದರೆ ದೃಷ್ಯವು ದೃಷ್ಟಿಗೋಚರ ಆಗುವಂತಹದ್ದೆಲ್ಲವೂ ಎಂದು ಅನ್ವಯವಾಗುತ್ತದೆ. ನೋಟಕನಾದ ನಾನುಏನನ್ನೋ ನೋಡುತ್ತಾನೆ ಎಂಬ ಯೋಚನೆಯನ್ನೇ ನೋಟ ಎಂದು ಕರೆಯುತ್ತಾರೆ. ಈ ನೋಟದಲ್ಲಿ "ನಾನು" ಎಂಬ ಭಾಗವು ದ್ರಷ್ಟಾ ಆಗಿದೆ. ಇದು ಎಲ್ಲರ ದೃಷ್ಟಿಯಲ್ಲೂ ಒಂದೇ ಆಗಿರುತ್ತದೆ. ಇದನ್ನೇ ಸತ್ ಎಂದು ಕರೆಯುತ್ತಾರೆ. ಹಾಗೇ "ಸ್ವಲ್ಪ" ಎಂಬ ಭಾಗವು ದೃಶ್ಯವಾಗಿದೆ. ಅದು ಪ್ರತಿಯೊಬ್ಬರ ದೃಷ್ಟಿಯಲ್ಲೂ ಭಿನ್ನ-ಭಿನ್ನವಾಗಿರುತ್ತದೆ; ಒಂದೇ ಆಗಿರುವುದಿಲ್ಲ. ಇದರಿಂದಲೇ ಅದನ್ನು ಅಸತ್ ಎಂದು ಕರೆಯುತ್ತಾರೆ. ಇವೆರಡರ ಸಂಯೋಜನೆಯಿಂದ ಏಕಪ್ರಕಾರದ ಜ್ಞಾನವುಂಟಾಗುತ್ತದೆ. ಈ ರೀತಿ ದ್ವಿಮುಖ ಜ್ಞಾನವನ್ನು ಪ್ರತ್ಯಯ ಎಂಬ ಏಕಮುಖವಾಗಿ ಗುರುತಿಸುತ್ತಾರೆ.

     ಈ ಪ್ರತ್ಯಯದಿಂದ ಕಾಣಲ್ಪಡುವ ಮೇಲ್ಕಂಡ ದ್ವಿಖಣ್ಡಗಳ ಮೇಲೆ ನಾವು ಸೂಕ್ಷ್ಮ ವಿಚಾರ ಮಾಡಿದರೆ, ಅವೆರಡರಲ್ಲಿ ದ್ರಷ್ಟನೇ ಮುಖ್ಯವೆಂದು ಹೇಳಬಹುದು. ಇವನ ಜ್ಯೋತಿಯಿಂದಲೇ ದೃಶ್ಯದ ರೂಪವು ಉಂಟಾಗುತ್ತದೆ. ಆದ್ದರಿಂದ ಯಾವುದೇ ದೃಶ್ಯವು ದ್ರಷ್ಟನಿಂದ ಭಿನ್ನವೆಂದು ಒಪ್ಪುಲಾಗುವುದಿಲ್ಲ. ಆ ದ್ರಷ್ಟಾ ಮತ್ತು ದೃಶ್ಯಗಳೆರಡೂ ಒಂದೇ ದ್ರಷ್ಟಾ ಆಗಿದೆ. ಹಾಗೂ ಅದನ್ನೇ ಪ್ರತ್ಯಯವೆಂದು ಹೇಳುತ್ತಾರೆ. ಇದು ಸತ್ ಪಕ್ಷದಪ್ರತ್ಯಯಾದ್ವೈತ ಮತ.

     ಎರಡನೇಯ ಮತ ಹೀಗಿದೆ - ಪ್ರತ್ಯಯದ ದ್ವಿಖಣ್ಡಗಳಲ್ಲಿ ದೃಶ್ಯ ಖಣ್ಡವೇ ಮುಖ್ಯ. ದೃಶ್ಯವನ್ನು ಹೊರತುಪಡಿಸಿ ದ್ರಷ್ಟಾ ಎಂಬುದು ಯಾವುದೇ ವಸ್ತು ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಆ ದ್ರಷ್ಟನು ನಿನಗೆ ದೃಶ್ಯವಾಗಿದೆಯೋ ಇಲ್ಲವೋ, ಆಗಿಲ್ಲವೆಂದರೆ ನೀನದರ ವರ್ಣನೆಯನ್ನು ಮಾಡಲಾರೆ. ಏಕೆಂದರೆ ನಿನಗೆ ಕಾಣಿಸಿಯೇ ಇಲ್ಲ, ಒಂದುವೇಳೆ ನೀನು, ಆ ದ್ರಷ್ಟನೂ ನನಗೆ ಕಾಣಿಸುತ್ತಾನೆಂದರೆ, ಅವಶ್ಯವಾಗಿ ಅದು ದೃಶ್ಯವಾಯಿತು. ಆಗ ದೃಶ್ಯದಿಂದ ದ್ರಷ್ಟನು ಭಿನ್ನ ಖಣ್ಡವಾಗಲೆಂತು ಸಾಧ್ಯ? ಎಷ್ಟೇ ಜನರು ದೃಶ್ಯವು ಚಿಕ್ಕದೆರಡು ಖಣ್ಡ ಮಾತ್ರದ ಪರಿಚ್ಛಿನ್ನ ಪದಾರ್ಥವಾಗಿದೆ ಎಂದು ಭೇದ ಹೇಳಿದರೂ ಪರವಾಗಿಲ್ಲ, ದ್ರಷ್ಟಾ ವ್ಯಾಪಕನಾಗಿದ್ದಾನೆ. ಈ ರೀತಿಯ ಭೇದ ಮಾಡುವುದೂ ಸರ್ವಥಾ ಮಿಥ್ಯಾ. ಏಕೆಂದರೆ ಎಷ್ಟೇ ದ್ರಷ್ಟರು ಅಧಿಕ ವಿಚಾರಶೀಲರಾಗಿರುವುದರಿಂದ ಅಧಿಕವಾಗಿ ನೋಡುತ್ತಾರೋ, ಹಾಗೇ ಎಷ್ಟೇ ಮನ್ದಬುದ್ಧಿ ಅಲ್ಪಜ್ಞರಾಗಿರುತ್ತಾರೋ; ಈ ರೀತಿ ಆತ್ಮವು ಚಿಕ್ಕದು-ದೊಡ್ಡದು ಎಂದು ಪರಿಗಣಿಸುತ್ತಾರೆಯಷ್ಟೆ. ಹಾಗೇ ಎಷ್ಟೆಷ್ಟೋ ಪರಿಚ್ಛಿನ್ನ ಔಷಧಿಗಳ ಯೋಗದಿಂದ ಮೂರ್ಛಿತವಾಗುತ್ತದೋ ಅಂತಹಾ ಆತ್ಮವನ್ನು ವ್ಯಾಪಕವೆಂದು ಹೇಗೆ ಹೇಳಲು ಸಾಧ್ಯ? ಆದ್ದರಿಂದ ಹೇಗೆ ದ್ರಷ್ಟಾ ಹಾಗೂ ದೃಶ್ಯಗಳು ಎಲ್ಲಾ ಪರಿಚ್ಛಿನ್ನ ಪದಾರ್ಥಗಳಾಗಿವೆಯೋ ಅದೇ ರೀತಿ ಈ ಆತ್ಮವೂ ಒಂದು ಪರಿಚ್ಛಿನ್ನ ವಸ್ತು ಹಾಗೂ ದೃಶ್ಯವೂ ಆಗಿದೆ. ಇದು ಅಸತ್ ಪಕ್ಷದ ಪ್ರತ್ಯಯಾದ್ವೈತವಾದವಾಯಿತು.

     ಮೂರನೇಯ ಮತವು ಇಂತಿದೆ - ದ್ರಷ್ಟಾ ಹಾಗೂ ದೃಶ್ಯಗಳೆರಡೂ ಭಿನ್ನ-ಭಿನ್ನ ಪದಾರ್ಥಗಳಾಗಿವೆ. ಎಲ್ಲಿಂದ ಜ್ಞಾನಾರಂಭವಾಗುತ್ತದೋ ಅದು ದ್ರಷ್ಟಾ. ಎಲ್ಲಿಂದ ಜ್ಞಾನಸೂತ್ರವು ತಲುಪುತ್ತದೋ ಅದು ದೃಶ್ಯ. ಇವುಗಳಲ್ಲಿ ಆದಿ ಹಾಗೂ ಅಂತ್ಯದ ಭೇದ ಮಾಡಿದರೆ ಇವೆರಡು ಖಣ್ಡಗಳು ಒಂದೇಯಾಗಿರುವುದಿಲ್ಲ. ಯಾವುದರ ಆದಿ ಹಾಗೂ ಅಂತ್ಯ ಉಂಟಾಗಿದೆಯೋ ಎಂದು ನಂಬುತ್ತೇವೆಯೋ ಅದು ಮೊದಲಿಂದ ಕೊನೆಯವರೆಗೆ ಒಂದೇ ವಸ್ತುವಾಗಿದೆ. ಅದೇ ವಸ್ತುವನ್ನು ನಾವು ಪ್ರತ್ಯಯ ಎಂದು ಕರೆಯುತ್ತೇವೆ. ಆ ಪ್ರತ್ಯಯವು ಒಂದು ಅವಶ್ಯವಾಗಿದೆ. ಆದರೆ ಅದರ ಭಾಗಗಳೂ ಎರಡಿವೆ. ಇದು ಸದಸತ್ ಪಕ್ಷದ ಪ್ರತ್ಯಯಾದ್ವೈತವಾದವಾಗಿದೆ. ಈ ಮೂರೂ ಪಕ್ಷಗಳ ಪ್ರತ್ಯಯಾದ್ವೈತವಾದವು ಪ್ರಥಮ ವಿಕಲ್ಪವಾಗಿದೆ.

() ಪ್ರಕೃತ್ಯದ್ವೈತವಾದ |


ಕರ್ಮವನ್ನು ಅಸತ್ ಎಂದು ಕರೆಯುತ್ತಾರೆ. ಕರ್ಮವೆಂಬುದು ಎಂತಹಾ ವಸ್ತುವೆಂದರೆ ಅದು ಪೂರ್ವದಲ್ಲಿ ಅಸ್ಥಿತ್ವದಲ್ಲಿರದೆ ಶೇಷ ರೂಪದಲ್ಲಿ ಉತ್ಪನ್ನವಾಗುತ್ತದೆ. ಅದು ಕ್ಷಣಮಾತ್ರವಿದ್ದು ಶೇಷ ರೂಪದಲ್ಲಿ ನಷ್ಟವಾಗುತ್ತದೆ. ಯಾವುದು ಕ್ಷಣಮಾತ್ರ ಅಸ್ಥಿತ್ವದಲ್ಲಿದ್ದು, ಪೂರ್ವ-ಪಶ್ಚಾತ್, ಅನನ್ತ ಕಾಲದವರೆಗೆ ಇರುವುದಿಲ್ಲವೋ, ಅದು ಅಸತ್ ಎಂದು ಕರೆಯಲ್ಪಡುತ್ತದೆ. ಏಕೆಂದರೆ ಅದು ಸತ್ ಆಗಿದ್ದಿದ್ದರೆ ಎಂದಿಗೂ ನಷ್ಟವಾಗುತ್ತಿರಲಿಲ್ಲ; ಆದ್ದರಿಂದ ಅದರ ಕ್ಷಣಿಕ ಸತ್ತೆಯೂ ಭ್ರಮೆಯೇ. ಈಗ ನಾವು ಜಗತ್ತಿನತ್ತ ದೃಷ್ಟಿ ಹಾಯಿಸಿದರೆ ಸರ್ವತ್ರ ಕ್ರಿಯೆಯೇ ಕ್ರಿಯೆಯಿರುವುದೆಂದು ಪ್ರತೀತವಾಗುತ್ತದೆ. ಯಾವುದೇ ವಸ್ತುವು ಒಂದು ಕ್ಷಣವಾದರೂ ಸ್ಥಿರವಾಗಿರುವುದಿಲ್ಲ. ಯಾವುದನ್ನು ನಾವು ಸ್ಥಿರವೆಂದು ಕಾಣುತ್ತೇವೆಯೋ ಅದೇ ನಮ್ಮ ಭ್ರಮೆ. ಏಕೆಂದರೆ ಕಾಲಾಂತರದಲ್ಲಿ ಅದು ಹೊಸತಿನಿಂದ ಹಳತಾಗುವ ಪರಿವರ್ತನೆಯುಗೋಚರಕ್ಕೆಬರುತ್ತದೆ. ಅದು ಸರ್ವಥಾ ಪುರಾತನವಾಗಿರುವುದಿಲ್ಲ. ಆದರೆ ಅದರಲ್ಲಿ ಪ್ರತಿಕ್ಷಣವೂ ಏನಾದರೊಂದು ಪರಿವರ್ತನೆ ಆಗುತ್ತಲೇ ಇರುತ್ತದೆ. ಪ್ರತೀ ಪರಮಾಣುವೂ ಬದಲಾಗುತ್ತಿರುತ್ತದೆ. ಈ ಪರಿವರ್ತನಾಶೀಲ ಕ್ರಿಯೆಯು ಪ್ರತೀ ವಸ್ತುವಿನಲ್ಲೂ ಸೂಕ್ಷ್ಮರೂಪದಲ್ಲಿ ಅನುಭವಕ್ಕೆ ಬರುತ್ತದೆ. ಇದರಿಂದ ಯಾವುದೇ ವಸ್ತುವಿನ ಸ್ಥಿರತೆಯ ಅಸಂಭವವೆಂದು ಪ್ರತೀತವಾಗುತ್ತದೆ. ಎಲ್ಲವೂ ಕ್ರಿಯಾಶೀಲವೇ ಆಗಿದ್ದು, ಕ್ರಿಯೆಯು ಅಸತ್ ಆಗಿರುವುದರಿಂದ ಸಂಪೂರ್ಣ ಜಗತ್ತು ಅಸತ್ ರೂಪವೆಂದು ನಾವು ನಂಬುತ್ತೇವೆ. ಇದು ಅಸತ್ ಪಕ್ಷದ ಪ್ರಕೃತ್ಯದ್ವೈತದ ಮತವಾಗಿದೆ.

     ಬ್ರಹ್ಮ ಅರ್ಥಾತ್ ಜ್ಞಾನವನ್ನು ಅಸತ್ ಎನ್ನುತ್ತಾರೆ. ಈ ಸಂಪೂರ್ಣ ಜಗತ್ತು ಜ್ಞಾನರೂಪವಾಗಿದೆ. ಏಕೆಂದರೆ ಯಾವುದೇ ವಸ್ತುವಿನ ಅಳಿವು-ಉಳಿವು ವಿಚಾರದ ಅಧೀನವಾಗಿದೆ. ಯಾವ ವಸ್ತುವಿನ ಚಿಂತನೆಯು ಹೇಗೆ ಆಗುತ್ತದೆಯೋ ಹಾಗೆಯೇ ಆ ವಸ್ತುವನ್ನು ಒಪ್ಪಲಾಗುತ್ತದೆ. ಅಳಿವು-ಉಳಿವು, ದೊಡ್ಡದು-ಸಣ್ಣದು, ಕಪ್ಪು-ಬಿಳುಪು ಇತ್ಯಾದಿ ಹೇಗೆ ನಾವು ವಸ್ತುವನ್ನು ಸಂಬೋಧಿಸುತ್ತೇವೆಯೋ ಅಥವಾ ಒಪ್ಪುತ್ತೇವೆಯೋ, ಅದೇ ರೀತಿಯಲ್ಲಿ ಎಲ್ಲವೂ ಚಿಂತನೆಗಳ ಲಹರಿಯೇ ಆಗಿವೆ. ಯಾವ ವಸ್ತುವನ್ನು ಚಿಂತಿಸಲಾಗುವುದಿಲ್ಲವೋ, ಅದನ್ನು ಸಂಬೋಧಿಸಲಾಗುವುದಿಲ್ಲ. ಆದ್ದರಿಂದ ಇವೆಲ್ಲವೂ ಚಿಂತನೆಯನ್ನು ಹೊರತುಪಡಿಸಿ ಮತ್ತೇನೂ ಅಲ್ಲ. ಯಾರು ಈ ಜಗತ್ತನ್ನು ಕರ್ಮರೂಪವೆಂದು ನಂಬುತ್ತಾರೋ ಅವರೂ ತಪ್ಪುತ್ತಾರೆ, ಏಕೆಂದರೆ ಕರ್ಮವನ್ನು ಅಸತ್ ಎಂದು ಹೇಳುತ್ತಾರೆ. ಅಸತ್ ಎಂದರೆ ಇಲ್ಲದಿರುವುದು ಎಂದರ್ಥ. ಅಸತ್ ಎಂಬುದು ಹಿಂದೆ ಇಲ್ಲದಿದ್ದದ್ದು, ಇಂದು ಇಲ್ಲದಿರುವುದು ಹಾಗೂ ಮುಂದೆ ಇರದಿರುವುದು. ಆದರೆ ಈ ಜಗತ್ತು ಹಿಂದೆಯೂ ಇತ್ತು, ಈಗಲೂ ಇದೆ ಹಾಗೇ ಮುಂದೆಯೂ ಇರುತ್ತದೆ. ಇದೊಂದೇ ಕಾರಣಕ್ಕೆ ಅದನು ಅಸತ್ ಎಂದು ಕರೆಯುವುದು ಸರ್ವಥಾ ಅನುಚಿತ. ಯಾವ ವಸ್ತುವು ಇರುವುದೋ, ಅದನ್ನು ಇಲ್ಲ ಎನ್ನುವುದು ದುಸ್ಸಾಹಸವಲ್ಲದೆ ಇನ್ನೇನು? ವಾಸ್ತವದಲ್ಲಿ ಈ ಜಗತ್ತು ಜ್ಞಾನರೂಪವಾಗಿದೆ. ಜ್ಞಾನವು ಕ್ರಿಯಾರೂಪ ಆಗಿರುವುದಿಲ್ಲ. ಆದ್ದರಿಂದ ಈ ಸಂಪೂರ್ಣ ಜಗತ್ತು ಸ ಅಸ್ಥಿತ್ವದಲ್ಲಿ ಇರುವ ಜಗತ್ತಾಗಿದ್ದು ಸತ್ ರೂಪವಾಗಿದೆ. ಇದು ಸತ್ ಪಕ್ಷದ ಪ್ರಕೃತ್ಯದ್ವೈತವಾದದ ಮತವಾಗಿದೆ.

     ಕರ್ಮವನ್ನು ಅಸತ್ ಹಾಗೂ ಬ್ರಹ್ಮ ಅಥವಾ ಜ್ಞಾನವನ್ನು ಸತ್ ಎನ್ನುತ್ತಾರೆ. ಜಗತ್ತನ್ನು ನಾವು ನೋಡುವಾಗ ಪ್ರತೀ ವಸ್ತುವಿನಲ್ಲೂ ಇವೆರಡನ್ನು ಕಾಣಬಹುದು. ಯಾರನ್ನು ನೀವು ಹುಟ್ಟಿನಿಂದ ಸಾವಿನವರೆಗೆ ನೋಡಿದ್ದೀರೋ, ಅವರ ಶರೀರದಲ್ಲಿ ಪ್ರತಿಕ್ಷಣ ಬದಲಾವಣೆಯಾಗುವುದರಿಂದ ಒಮ್ಮೆ ಬಾಲ್ಯ, ಇನ್ನೊಮ್ಮೆ ಯೌವನ, ಮತ್ತೊಮ್ಮೆ ವೃದ್ಧಾಪ್ಯ ಇತ್ಯಾದಿ ಹಲವು ದಶೆಗಳ ಭಿನ್ನ-ಭಿನ್ನ ಅನುಭವಗಳನ್ನು ಪಡೆಯುತ್ತಾ ನಾವು ಅದದಕ್ಕೆ ತಕ್ಕ ಭೇದ ವ್ಯವಹಾರವನ್ನು ಮಾಡುತ್ತೇವೆ. ಅದರ ಜೊತೆಜೊತೆಗೆ ಆತನನ್ನು ಒಂದೇ ವ್ಯಕ್ತಿಯಾಗಿಯೂ ಕಾಣುತ್ತೇವೆ. ಭಿನ್ನವನ್ನು ಏಕವೆಂದು ಅಥವಾ ಏಕವನ್ನು ಭಿನ್ನವೆಂದು ತಿಳಿಯುವುದು ಅನುಚಿತ. ಆದರ ಜಗತ್ತಿನಲ್ಲಿ ಯಾವಾಗಲೂ ಇಂತಹಾ ವ್ಯವಹಾರ ಉಂಟಾಗುವುದರಿಂದ ಎರಡೂ ವ್ಯವಹಾರಗಳ ಕಾರಣವು ಎರಡು ತತ್ವಗಳೆಂದು ನಂಬುವುದು ಅವಶ್ಯಕ. ಯಾವುದರ ಕಾರಣದಿಂದ ಏಕತೆಯ ಪ್ರತೀತ ಉಂಟಾಗುತ್ತದೋ, ಅದು ಜ್ಞಾನ ರೂಪದ ಸತ್. ಹಾಗೇ ಯಾವುದರಿಂದ ಎರಡು ಭಿನ್ನ ಅವಸ್ಥೆಗಳ ಪ್ರತೀತವಾಗುತ್ತದೋ ಅದು ಕ್ರಿಯಾ ರೂಪದ ಅಸತ್. ಈ ರೀತಿ ಪ್ರತೀ ವಸ್ತುವು ಸತ್ ಮತ್ತು ಅಸತ್ತಿನಿಂದ ಉಂಟಾಗಿದೆ. ಎಲ್ಲವೂ ಸದಸತ್ ರೂಪವಾಗಿದೆ. ಈ ಎರಡೂ (ಸತ್ ಅಸತ್) ಪಕ್ಷವುಳ್ಳ ಮೂರನೇಯ ಪ್ರಕೃತ್ಯದ್ವೈತವಾದವಿದು. ಇಲ್ಲಿಗೆ ಎರಡನೇ ವಿಕಲ್ಪವು ಸಮಾಪ್ತಿ.

() ತಾದಾತ್ಮ್ಯವಾದ


ಇದು ಮೂರನೇಯದಾದ ತಾದಾತ್ಮ್ಯವಾದ ಎಂದು ಕರೆಯಲ್ಪಟ್ಟಿದೆ. ತಾದಾತ್ಮ್ಯದ ಶಬ್ದಾರ್ಥವು ಅದರೊಂದಿಗೇ ತನ್ನ ಅಸ್ಥಿತ್ವವನ್ನು ಮೇಳೈಸುವುದು. ಹೇಗೆ ಧರ್ಮ ಹಾಗೂ ಧರ್ಮೀ ಇವುಗಳಲ್ಲಿ ತಾದಾತ್ಮ್ಯವಾಗುತ್ತದೋ, ಅಂದರೆ ಹೇಗೆ ಬೆಂಕಿ (ಭೌತಿಕ) ಹಾಗೂ ಶಾಖಗಳೆರಡೂ ಪರಸ್ಪರ ಅವಿನಾಭಾವೀ ಆಗಿವೆಯೋ ಹಾಗೆ ಈ ತಾದಾತ್ಮ್ಯ. ಇಲ್ಲಿ ಬೆಂಕಿಯ ಹೊರತು ಶಾಖದ ಅಥವಾ ಶಾಖದ ಹೊರತು ಬೆಂಕಿಯ ಅಸ್ಥಿತ್ವವು ಚಿರವಾಗುಳಿಯುವುದಿಲ್ಲವೋ, ಹಾಗೆಯೇ ಅಸತ್ ಹಾಗೂ ಸತ್ ಇವುಗಳ ಪರಸ್ಪರ ತಾದಾತ್ಮ್ಯವಿದೆ. ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ. ಅಸತ್ ಎಂದರೆ ಕರ್ಮ ಹಾಗೂ ಸತ್ ಎಂದರೆ ಜ್ಞಾನ. ಇವುಗಳಲ್ಲಿ ಅಸತ್ ಎಂಬ ಕರ್ಮವೇ ಪ್ರಧಾನ ಅಥವಾ ವಿಶೇಷ್ಯ (ಧರ್ಮೀ) ಹಾಗೂ ಜ್ಞಾನವು ಅದರ ಗುಣವೆಂಬುದು ಖಚಿತ. ಅಂದರೆ ವಿಶೇಷಣವು ಧರ್ಮ, ಇದರಿಂದ ಹೀಗೆ ಹೇಳಬಹುದು ಈ ಜ್ಞಾನವು ಕರ್ಮಕ್ಕಿಂತ ಭಿನ್ನ ವಸ್ತುವಲ್ಲ. ಕರ್ಮದ ಆಧಾರದಲ್ಲಿಯೇ ಜ್ಞಾನದ ಅಸ್ಥಿತ್ವವಿದೆ. ಇದು ಅಸತ್ ಪಕ್ಷದ ತಾದಾತ್ಮ್ಯವಾದ.

        ಅಥವಾ ಹೀಗೆ ಹೇಳಿದರೆ ಜ್ಞಾನವೇ ಇವೆರಡರಲ್ಲಿ ಪ್ರಧಾನ ಅಥವಾ ವಿಶೇಷ್ಯವಾಗಿದ್ದು, ಕರ್ಮವು ಅದರ ಗುಣಭೂತ ವಿಶೇಷಧರ್ಮವಾಗಿದೆ. ಜ್ಞಾನದ ಆಧಾರದಿಂದಲೇ ಕರ್ಮದ ಅಸ್ಥಿತ್ವವಿದೆ ಹಾಗೂ ಜ್ಞಾನದಿಂದ ಕರ್ಮವು ಭಿನ್ನವಲ್ಲ. ಅಂದರೆ ಕರ್ಮವು ಜ್ಞಾನದ ಒಂದು ಸ್ವರೂಪವಿಶೇಷವಾಗಿದೆ. ಇದು ಸತ್ ಪಕ್ಷದವರ ತಾದಾತ್ಮ್ಯವಾದವಾಯಿತು.

        ಮೂರನೇ ಪಕ್ಷದ ಪ್ರಕಾರ ಜಗತ್ತಿನ ವಸ್ತುಗಳಲ್ಲಿ ಯಾವಾಗ ಸತ್ ಮತ್ತು ಅಸತ್ ಅಂದರೆ ಜ್ಞಾನ ಮತ್ತು ಕ್ರಿಯೆಗಳೆರಡೂ ಅವಿನಾಭೂತವಾಗಿ ತೋರುತ್ತದೋ ಆಗ ಅವುಗಳಲ್ಲಿ ಯಾವುದನ್ನೂ ಪ್ರಧಾನ ಅಥವಾ ಗೌಣವೆಂದು ತಿಳಿಯಲು ಯಾವುದೇ ವಿಶೇಷ ಯುಕ್ತಿ ಇಲ್ಲ. ಒಂದನ್ನೊಂದು ಬಿಡದಂತೆ ಬಂಧಿಸಿವೆ ಅಥವಾ ಆವೃತವಾಗಿವೆ. ಎರಡೂ ಸೇರಿ ಒಂದಾದ ದ್ರವ್ಯವೇ ಜಗತ್ತಿನ ಪ್ರತ್ಯೇಕ ವಸ್ತುವಾಗಿದೆ. ಮತ್ತೆ ಇವೆರಡೂ, ಎರಡರ ಆತ್ಮವಾಗಿವೆ. ಇದು ಉಭಯಪಕ್ಷದವರ ತಾದಾತ್ಮ್ಯವಾದವಾಯಿತು. ಇಲ್ಲಿಗೆ ೩ನೇ ತಾದಾತ್ಮ್ಯವಾದದ ವಿಕಲ್ಪವು ಸಮಾಪ್ತಿ.

() ಅಭಿಕಾರ್ಯವಾದ


ನಾಲ್ಕನೇ ವಿಕಲ್ಪವನ್ನು ಅಭಿಕಾರ್ಯವಾದ ಎಂದು ಕರೆಯುತ್ತಾರೆ. ತಾತ್ಪರ್ಯವೆಂದರೆ ಈ ಮತದಲ್ಲಿ ಸತ್ ಮತ್ತು ಅಸತ್ ಶಬ್ದಗಳಿಂದ ಕಾರ್ಯದ ಕಡೆಗೆ ಲಕ್ಷ್ಯವಿದೆ. ಹಿಂದಿನ ೩ ವಿಕಲ್ಪಗಳಲ್ಲೂ ಕಾರಣ ಚಿಂತನೆಯನ್ನು ಆರೋಪಿಸಲಾಗುತ್ತಿತ್ತು. ಆದರೆ ಈಗ ಇಲ್ಲಿ ಕಾರಣ ಚಿಂತನೆ ಮಾಡದೆ, ಕೇವಲ ಕಾರ್ಯವು ಸತ್ ಅಥವಾ ಅಸತ್ ಹೇಗಾಗುತ್ತದೆ ಎಂದು ವರ್ಣಿಸಲಾಗುತ್ತದೆ. ಹಾಗಾಗಿ ಇದನ್ನು ಅಭಿಕಾರ್ಯವಾದ ಎನ್ನಲಾಗಿದೆ. ಒಂದುವೇಳೆ ಈ ಜಗತ್ತಿನಲ್ಲಿ ಬ್ರಹ್ಮ ಹಾಗೂ ಕರ್ಮಗಳೆರಡೂ ಕಾಣಸಿಗುತ್ತದೆ. ಆದರೆ ಅವುಗಳಲ್ಲಿ ಬ್ರಹ್ಮವು ಎಂದೆಂದೂ ಸತ್; ಅದೆಂದಿಗೂ ಅಸತ್ ಆಗುವುದಿಲ್ಲ. ಆದ್ದರಿಂದ ಅದರಲ್ಲಿ ೨ ಪಕ್ಷಗಳಾಗುವುದೇ ಇಲ್ಲ. ಆದ್ದರಿಂದ ಅದನ್ನು ಬಿಟ್ಟುಬಿಡೋಣ. ಆದರೆ ಎರಡನೇಯದಾದ ಕರ್ಮವು ಸತ್ ಹಾಗೂ ಅಸತ್ ಎಂಬೆರಡು ರೂಪದಲ್ಲಿ ಕಾಣಸಿಗುತ್ತದೆ. ಪೂರ್ವದಲ್ಲಿ ತಥಾಕಥಿತ ಪಶ್ಚಾತ್ ಎಂಬುದೂ ಇರುವುದಿಲ್ಲ. ಆದ್ದರಿಂದ ಅಸತ್ ಆಗಿದೆ. ಆದರೆ ಮಧ್ಯಂತರದಲ್ಲಿ ಸ್ವಲ್ಪ ಕಾಲ ವಿದ್ಯಮಾನವಾಗಿರುತ್ತದೆ. ಆದ್ದರಿಂದ ಸತ್ ಆಗಿದೆ. ಈ ರೀತಿ ಅದಕ್ಕೆ ೨ ರೂಪಗಳಿವೆ ಎಂದರೆ ಅದು ನೈಜವಾಗಿ ಸತ್ ಅಥವಾ ಅಸತ್ ಇವುಗಳಲ್ಲಿ ಯಾವುದೆಂದು ಶಂಕೆಯು ಅವಶ್ಯವಾಗಿ ವ್ಯಕ್ತವಾಗುತ್ತದೆ. ಇದರಲ್ಲಿ ಒಂದು ಮತದ ಪ್ರಕಾರ ಕರ್ಮವು ವಾಸ್ತವದಲ್ಲಿ ಅಸತ್ ಆಗಿದೆ. ಆ ಅಸತ್ ಎಂಬುದೇ ಸತ್ ಆಗಿ ಪ್ರತೀತವಾಗುತ್ತದೆ. ಇದು ಸತ್ ಆಗುವುದು ಮಿಥ್ಯಾ, ಅಸತ್ ಆಗುವುದು ಸತ್ಯ.

        ಎರಡನೇ ಮತ ಇಂತಿದೆ ಒಂದುವೇಳೆ ಈ ಕರ್ಮವು ಅಸತ್ ಆಗಿದ್ದರೆ ಇದರಲ್ಲಿ ಯಾವುದೇ ರೀತಿಯಲ್ಲೂ ಕ್ರಿಯೆಯು ಉತ್ಪನ್ನವಾಗಲು ಸಾಧ್ಯವಿಲ್ಲ. ಆದ್ದರಿಂದ ಈ ಕರ್ಮವು ಅಸತ್-ನಿಂದ ಸತ್ ಆಗಿ ಹೇಗೆ ಕಂಡುಬರುತ್ತದೆ? ಒಂದು ಕ್ಷಣಕ್ಕಾದರೂ ಅದು ಸತ್ ಆಗಿ ಕಂಡುಬಂದರೆ, ಅದು ಪೂರ್ವದಲ್ಲಿಯೂ ಸತ್ ಆಗಿತ್ತು ಎಂದು ನಂಬಬಹುದು. ಇದರ ಆವಿರ್ಭಾವವು ಹಿಂದುಳಿದು ತತ್ಪಶ್ಚಾತ್ ತಿರೋಭಾವ ಆಗಿಬಿಡುತ್ತದೆ. ಇದೇ ತಿರೋಭಾವವನ್ನು ಅಸತ್ ಎನ್ನುತ್ತಾರೆ. ಆದರೆ ವಸ್ತುತಃ ಇದರ ಅಸತ್ತೆಯು ಇರುವುದಿಲ್ಲ.

        ಮೂರನೇ ಮತವು ಹೇಳುತ್ತದೆ ಯಾವ ರೀತಿ ಬ್ರಹ್ಮವನ್ನು ಸತ್ ಎಂದು ಒಪ್ಪಲಾಗಿದೆಯೋ, ಅದೇ ರೀತಿ ಕರ್ಮವನ್ನು ಸದಸತ್ ಎಂದು ಒಪ್ಪಬೇಕಾಗುತ್ತದೆ. ವಸ್ತುವಿನ ಸ್ವಭಾವವು ವಿಲಕ್ಷಣವಾಗಿರುತ್ತದೆ. ಅದರಲ್ಲಿ ಏಕೆಂಬ ಪ್ರಶ್ನೆಯು ಹುಟ್ಟುವುದಿಲ್ಲ. ಆದ್ದರಿಂದ ಬ್ರಹ್ಮವು ಸತ್ ಆಗಿಯೇ ಇದೆ ಎಂದು ಹೇಳಬಹುದು. ಅಸತ್ ಎಂದಿಗೂ ಆಗುವುದಿಲ್ಲ. ಆದರೆ ಕರ್ಮ ಸ್ವಭಾವದಿಂದಲೇ ಸತ್ ಹಾಗೂ ಅಸತ್ ಆಗುತ್ತದೆ. ಯಾರಾದರೂ ಈ ಸತ್-ಅಸತ್ ಆಗುವುದಿಲ್ಲ ಅಥವಾ ಅಸತ್-ಸತ್ ಆಗುವುದಿಲ್ಲ ಎಂದು ಹೇಳಿದರೆ, ಆ ಪ್ರಶ್ನೆಯೂ ಅನುಚಿತವಾಗುತ್ತದೆ. ಏಕೆಂದರೆ ನಾವು ಪ್ರತ್ಯಕ್ಷವಾಗಿ ಇದರ ಸತ್ತೆ ಮತ್ತು ನಾಶಗಳೆರಡನ್ನೂ ಕಾಣುತ್ತೇವೆ. ಹಾಗೆಂದು ಅದೇ ಸ್ವಭಾವವೆಂದು ಒಪ್ಪುವುದು ಅನುಚಿತವಲ್ಲ. ಈ ರೀತಿ ಮೂರೂ ಪಕ್ಷಗಳುಳ್ಳ ಅಭಿಕಾರ್ಯವಾದವು ನಾಲ್ಕನೇಯ ವಿಕಲ್ಪವಾಗಿದೆ.

() ಆತ್ಮಗುಣವಾದ


ವೇದದಲ್ಲಿ ಒಂದೆಡೆ ಸದೇವೇದಮಗ್ರ ಆಸೀತ್ ಎಂದು ಉಲ್ಲೇಖವಿದ್ದರೆ ಇನ್ನೊಂದೆಡೆ ಅಸದೇವೇದಮಗ್ರ ಆಸೀತ್ ಎಂದಿದೆ. ಇದರ ತಾತ್ಪರ್ಯವನ್ನು ಯಾಜ್ಞವಲ್ಕ್ಯ ಮಹರ್ಷಿಗಳು ಹೇಗೆ ವರ್ಣಿಸಿದ್ದಾರೆಂದು ಗಮನಿಸೋಣ. ಯಾವ ಆತ್ಮದಲ್ಲಿ ಸಂಪೂರ್ಣ ಸೃಷ್ಟಿಯು ಉತ್ಪನ್ನವಾಗಿದೆಯೋ, ಅದರ ಸ್ವರೂಪವನ್ನು ಸ್ಥಿರಗೊಳಿಸಲು ೩ ಗುಣಗಳಿವೆ - ಮನ, ಪ್ರಾಣ ಹಾಗೂ ವಾಕ್. ಇದರಲ್ಲಿ ಮನವನ್ನು ಸದಸತ್ ಎನ್ನುತ್ತಾರೆ, ಪ್ರಾಣವನ್ನು ಅಸತ್ ಹಾಗೂ ವಾಕ್ಕನ್ನು ಸತ್ ಎನ್ನುತ್ತಾರೆ. ಇದು ಈ ಮೂರಕ್ಕಿರುವ ೩ ಹೆಸರುಗಳಾಗಿವೆ. ಇದರಲ್ಲಿ ಮೊದಲು ಮನ, ಅದರಿಂದ ನಂತರ ಪ್ರಾಣ ಹಾಗೂ ಹಿಂಬಾಲಕರಾಗಿ ವಾಕ್ ಕೂಡ ಉತ್ಪನ್ನವಾಗುತ್ತದೆ. ಇದು ಸದಸತ್ ಪಕ್ಷವಾಗಿದೆ. ಅಥವಾ ಪ್ರಾಣವು ಹಿಂದೆ ಇತ್ತು, ಅದರಿಂದಲೇ ಮನ ಹಾಗೂ ವಾಕ್ಕುಗಳು ಉತ್ಪನ್ನವಾದವು, ಎನ್ನುವುದು ಅಸತ್ ಪಕ್ಷ. ಅಥವಾ ವಾಯುವೇ ಮೊದಲಿತ್ತು; ಅದರಿಂದಲೇ ಪ್ರಾಣ ಹಾಗೂ ಮನಗಳು ಉದಿಸಿದವು, ಎನ್ನುವುದು ಸತ್ ಪಕ್ಷ. ಈ ರೀತಿ ಯಾರೋ ಈ ೩ ಗುಣಗಳ ಪೂರ್ವಾಪರ ಚಿಂತಿಸಿ ಆ ಶೃತಿಗಳ ಅರ್ಥ ಮಾಡಿದ್ದಾರೆ. ಆದರೆ ಇದು ಅನುಚಿತವಾಗಿದೆ; ಏಕೆಂದರೆ ಈ ಮೂರೂ ಗುಣಗಳು ಆತ್ಮದ ಸ್ವರೂಪ ಸಮರ್ಪಕವಾಗಿರಲು ಇವುಗಳಲ್ಲಿ ಹಿಂದು-ಮುಂದು ಎಂಬ ಚಿಂತನೆಯೇ ಅನುಚಿತ. ಈ ಮೂರೂ ನಿತ್ಯವೆಂದು ಹಾಗೇ ಆತ್ಮದ ಸ್ವರೂಪವಾಗಿರಲು ಒಮ್ಮೆಗೇ ಮೂರೂ ಅನಾದಿಯಾಗಿವೆ. ಅಂದರೆ ಆತ್ಮದ ಈ ೩ ಗುಣಗಳಿಂದ ಸೃಷ್ಟಿಯ ೩ ಧಾರೆಗಳು ಪೃಥಕ್ ೨ ಉತ್ಪನ್ನವಾಗುತ್ತದೆ - ಜ್ಞಾನಧಾರಾ, ಕ್ರಿಯಾಧಾರಾ ಹಾಗೂ ಅರ್ಥ ಅಥವಾ ದ್ರವ್ಯಧಾರಾ. ಇವುಗಳಲ್ಲಿ ಜ್ಞಾನಧಾರೆಯ ಸೃಷ್ಟಿಯಲ್ಲಿ ವೇದ ಹೇಳುವುದೇನೆಂದರೆ - ಎಲ್ಲಕ್ಕಿಂತ ಮೊದಲು ಸದಸತ್ ಇದ್ದಿತು; ಅಂದರೆ ಮನಸ್ಸು ಇತ್ತು. ಬಲ ಅಂದರೆ ಕ್ರಿಯೆಯ ಸೃಷ್ಟಿಯಲ್ಲಿ ಎಲ್ಲಕ್ಕೂ ಮೊದಲು ಅಸತ್ ಇದ್ದಿತು; ಅಂದರೆ ಪ್ರಾಣ ಇತ್ತು. ಇದೇ ರೀತಿ ಅರ್ಥದ ಸೃಷ್ಟಿಯಲ್ಲಿ ಎಲ್ಲಕ್ಕೂ ಮೊದಲು ಸತ್ ಇದ್ದಿತು; ಅಂದರೆ ವಾಕ್ ಇತ್ತು. ಇದೇ ಆ ಶೃತಿಗಳ ತಾತ್ಪರ್ಯ ಹಾಗೂ ಈ ಮೂರೂ ವಾದಗಳು ಸತ್ಯ. ಇವುಗಳಲ್ಲಿ ಯಾವುದೇ ಪ್ರಕಾರದ ವಿರೋಧ ಉಂಟಾಗುವುದಿಲ್ಲ. ಈ ತ್ರಿಪಕ್ಷೀ ಗುಣವಾದವು ೫ನೇ ವಿಕಲ್ಪವಾಗಿದೆ.

() ಸಾಮಞ್ಜಸ್ಯವಾದ


ಭಿನ್ನ-ಭಿನ್ನವೆಂದು ಹಿಂದೆ ತೋರಿಸಲ್ಪಟ್ಟ ವೇದದ ವಾಕ್ಯಗಳು; ಸ್ಥೂಲ ದೃಷ್ಟಿಯಲ್ಲಿ ಒಂದುವೇಳೆ ವಿರೋಧವು ಪ್ರತೀತವಾಗಬಹುದು. ಆದರೆ ಸೂಕ್ಷ್ಮ ವಿಚಾರಣೆಯಿಂದ ಅವುಗಳ ಸಾಮಞ್ಜಸ್ಯವು ಅಂದರೆ ಅವಿರೋಧವು (ಮೇಳೈಕೆಯು) ಸಿಗುತ್ತದೆ. ಈ ಸಮಯದಲ್ಲಿ ಉಪಸ್ಥಿತವಿರುವ ವಸ್ತುಗಳನ್ನೇ ಸತ್ ಎನ್ನುವುದೆಂಬುದು ಇದರ ತಾತ್ಪರ್ಯ. ಸೃಷ್ಟಿಯ ಆರಂಭದಲ್ಲಿ ಈ ವಸ್ತುಗಳ್ಯಾವುದೂ ಇರಲಿಲ್ಲವೆಂದು ಹೇಳಬಹುದು; ಮೊದಲು ಇವೆಲ್ಲವೂ ಅಸತ್ ಆಗಿತ್ತು ಅಂದರೆ ವಿದ್ಯಮಾನವಾಗಿರಲಿಲ್ಲ. ಇದೇ ಅಭಿಪ್ರಾಯದಿಂದ ಅಸದೇವೇದಮಗ್ರ ಆಸೀತ್ ಎಂಬ ಶೃತಿಯಿದೆ. ಆದರೆ ಇವೆಲ್ಲವೂ ಯಾವುದಾದರೊಂದು ದ್ರವ್ಯದಿಂದ ಉತ್ಪನ್ನವಾಗಿರಲೇಬೇಕು; ಅದು ಮೊದಲೇ ಅವಶ್ಯವಾಗಿ ಇದ್ದಿರಬೇಕು. ಅದು ಇಲ್ಲದಿದ್ದರೆ ವಿನಾ ಕಾರಣ ಈ ದ್ರವ್ಯಗಳ ಉತ್ಪತ್ತಿ ಆಗುತ್ತಿರಲಿಲ್ಲ. ಆದ್ದರಿಂದ ಆ ಸೃಷ್ಟಿಯ ಆದಿಯಲ್ಲಿ ಯಾವಾಗ ಕೆಲ ವಸ್ತುಗಳು ಮಾತ್ರ ಇದ್ದವೋ, ಅದೇ ಅಭಿಪ್ರಾಯದಲ್ಲಿ ಸದೇವೇದಮಗ್ರ ಆಸೀತ್ ಎಂಬ ಶೃತಿಯು ಚರಿತಾರ್ಥವಾಗುತ್ತದೆ. ಯಾವಾಗ ಈ ರೀತಿ ಕಾರ್ಯದ ಅನುರೋಧಕ್ಕೂ ಮೊದಲು ಅಸತ್ ಇರುವುದು ಹಾಗೂ ಕಾರಣದ ಅನುರೋಧಕ್ಕೂ ಮೊದಲು ಸತ್ ಇರುವುದು ಕಂಡುಬಂದರೆ, ಒಂದೇ ವಸ್ತುವನ್ನು ಸತ್ ಹಾಗೂ ಅಸತ್ ಎಂಬೆರಡನ್ನೂ ಸಂಬೋಧಿಸುವುದು ಸಂಭವ; ವಿರೋಧವಿಲ್ಲ; ಇದು ಒಂದು ಯುಕ್ತಿ.

        ಇದರಲ್ಲೇ ಎರಡನೇಯ ಯುಕ್ತಿ ಇದೆ - ಈ ಜಗತ್ತಿನಲ್ಲಿ ಪ್ರತೀ ವಸ್ತು ಆಂತರಿಕವಾಗಿ ಭಿನ್ನವಾಗಿದೆ. ಅಂದರೆ ಒಂದರಂತೆ ಇನ್ನೊಂದಿಲ್ಲ ಎಂಬುದು ಕಂಡುಬರುತ್ತದೆ. ಭೇದವನ್ನು ಅನ್ಯೋನ್ಯಾಭಾವ ಎಂದು ಕರೆಯುತ್ತಾರೆ. ಅಂದರೆ ಕುದುರೆಯು ಆನೆಯಲ್ಲ, ಆನೆಯು ಕುದುರೆಯಲ್ಲ; ತಾತ್ಪರ್ಯವೇನೆಂದರೆ ಆನೆಯು ತನ್ನ ರೂಪದಿಂದ ಭಾವ ಎಂದಾದರೆ, ಅದು ಕುದುರೆಯ ರೂಪದಿಂದ ಅಭಾವ. ಈ ರೀತಿ ಪ್ರತೀ ವಸ್ತು ಹೇಗೆ ತನ್ನ ರೂಪದಿಂದ ಭಾವವಾಗಿದೆಯೋ, ಅದೇ ಉಳಿದೆಲ್ಲ ರೂಪಗಳಿಂದ ಅಭಾವವಾಗಿದೆ. ಈ ರೀತಿ ಭಾವ-ಅಭಾವಗಳ ಸಾಮಞ್ಜಸ್ಯ ಇದ್ದರೆ ಸತ್ ಹಾಗೂ ಅಸತ್ ಇವೆರಡರ ಅರ್ಥ ಒಂದೇ ಆಯಿತು. ಇದರಿಂದಲೇ ಶೃತಿ ವಾಕ್ಯಗಳಲ್ಲೂ ವಿರೋಧವಿಲ್ಲ. ಈ ಸಾಮಞ್ಜಸ್ಯವಾದವು ಆರನೇಯ ವಿಕಲ್ಪವಾಗಿದೆ.

() ಅಕ್ಷರವಾದ


ಸಾಂಖ್ಯರ ಮತದಂತೆ ಪುರುಷ ಹಾಗೂ ಪ್ರಕೃತಿ ಎಂಬ ೨ ಮೂಲ ತತ್ವಗಳಿವೆ. ಪುರುಷವನ್ನು ಸತ್ ಹಾಗೂ ಪ್ರಕೃತಿಯನ್ನು ಅಸತ್ ಎನ್ನುತ್ತಾರೆ. ಇವುಗಳಲ್ಲಿ ಪುರುಷವು ಜ್ಞಾನರೂಪ, ನಿರ್ವಿಕಾರ ಹಾಗೂ ಎಂದೆಂದೂ ಒಂದೇ ರೂಪವಾಗಿರುತ್ತದೆ. ಆದರೆ ಪ್ರಕೃತಿ ವಿಕಾರಿಯಾಗಿದ್ದು, ಸರ್ವದಾ ನಾನಾ ರೂಪಗಳನ್ನು ಬದಲಿಸುತ್ತಿರುತ್ತದೆ. ಇದೇ ಮೂಲಪ್ರಕೃತಿಯನ್ನು ಪ್ರಧಾನ ಹಾಗೂ ಅವ್ಯಕ್ತ ಎಂದೂ ಕರೆಯುತ್ತಾರೆ. ಹಾಗೇ ಇದರ ಅಕ್ಷರವೂ ನಾಮವೇ ಆಗಿದೆ. ವೇದದಲ್ಲಿ ಅಕ್ಷರದಿಂದ ಸೃಷ್ಟಿಯಾಗುವುದೆಂದು ಹೇಳಲ್ಪಟ್ಟಲ್ಲೆಲ್ಲ ಈ ಮೂಲ ಪ್ರಕೃತಿಯಿಂದ ಎಂದು ತಿಳಿಯಬೇಕು. ಇದು ಅಸದ್ವಾದದ ತಾತ್ಪರ್ಯ.

ಆದರೆ ವೇದಾಂತದ ಮತವು ಪುರುಷ ಹಾಗೂ ಪ್ರಕೃತಿ ಇವುಗಳೆರಡರಲ್ಲಿ ಯಾವ ಪುರುಷ ಎಂಬ ಸತ್ ರೂಪವಿದೆಯೋ ಅದೇ ಅವ್ಯಕ್ತ ಹಾಗೂ ಅಕ್ಷರ ಶಬ್ದದಿಂದ ಕರೆಯಲ್ಪಡುತ್ತದೆ. ವೇದದಲ್ಲಿ ಅಕ್ಷರದಿಂದ ಸೃಷ್ಟಿಯಾಗುವುದೆಂದು ಹೇಳಲ್ಪಟ್ಟಲ್ಲೆಲ್ಲ ಈ ಪುರುಷದಿಂದ ಎಂದು ತಿಳಿಯಬೇಕು. ಇದು ಸದ್ವಾದದ ತಾತ್ಪರ್ಯ. ಈ ರೀತಿ ಏಳನೇಯದಾದ ಅಕ್ಷರವಾದವು ಸಮಾಪ್ತಿ.

ಈ ರೀತಿ ಸದಸದ್ವಾದದಲ್ಲಿ ೭ ವಿಕಲ್ಪಗಳು ಸಿದ್ಧವಾಗುತ್ತವೆ. ಇವುಗಳನ್ನು ಸಂಕ್ಷೇಪಿಸಿ ಸ್ವರೂಪಮಾತ್ರದ ಚಿತ್ರಣವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ. ಆದರೆ ಇವುಗಳನ್ನು ವಿಸ್ತಾರವಾಗಿ ಲೇಖಿಸುವ ಅವಶ್ಯಕತೆ ಇದೆ. ಇವು ಎಷ್ಟು ನಿಗೂಢ ತತ್ವಗಳೆಂದರೆ ಇವುಗಳನ್ನು ಸಹಜವಾಗಿ ವಿಚಾರ ಮಾಡುವುದು ಹಾಗೂ ವಿಚಾರ ಮಾಡಿ ಯಥಾರ್ಥ ಸತ್ಯವನ್ನು ಪಡೆಯುವುದು ಸರ್ವಥಾ ಕಠಿಣ; ಮನುಷ್ಯ ಬುದ್ಧಿಗೆ ಮೀರಿದ್ದು. ಆದರೆ ವಿಚಾರ ಚಿಂತನೆ ಮಾಡಿ ಇವುಗಳನ್ನು ಸ್ವಲ್ಪವಾದರೂ ತಿಳಿದುಕೊಳ್ಳುವುದು ಬಹಳ ಆನಂದಕ್ಕೆ ಕಾರಣವಾಗುತ್ತದೆ, ದೊಡ್ಡ ಆಪತ್ತುಗಳು ದೂರವಾಗುತ್ತವೆ. ಆದ್ದರಿಂದ ಮನುಷ್ಯನು ಎಷ್ಟು ಸಾಧ್ಯವೋ ಅಷ್ಟು ಆಳಕ್ಕಿಳಿದು ಸತ್ಯ ಶೋಧನ ಮಾಡಿ ಹೊರತೆಗೆಯಬೇಕು. ಇದೇ ತಾತ್ಪರ್ಯದಲ್ಲಿ ಈ ಏಳೂ ವಿಕಲ್ಪಗಳನ್ನು ಬುದ್ಧಿಯು ನಿಲುಕುವಲ್ಲಿಯವರೆಗೆ ಸ್ವಲ್ಪ ವಿಚಾರ ಚಿಂತನೆ ಮಾಡೋಣ ಎಂದು ಹೊರಟಿದ್ದೇವೆ, ನೀವು ಸೇರಿರಿ; ಬ್ರಹ್ಮ ಜಜ್ಞಾನ ಉದಿಸಲಿ.

|| ಇಲ್ಲಿಗೆ ಸದಸದ್ವಾದದ ಮೊದಲನೇಯ ಉಪಕ್ರಮಾಧಿಕಾರವು ಸಮಾಪ್ತಿ || 


- ಹೇಮಂತ್ ಕುಮಾರ್ ಜಿ.
(ಸೆಪ್ಟಂಬರ್ ೨೦೧೭ರ ಋತ್ವಿಕ್ ವಾಣಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ )

No comments:

Post a comment