Thursday, 4 January 2018

ಶ್ರೀ ಚಕ್ರ, ಶ್ರೀ ವಿಧ್ಯೆ - ೮ : ಭಗವದ್ಗೀತೆ, ಸೂತ್ರಗಳು, ಆಶ್ರಮಧರ್ಮ, ರಾಮಾಯಣ, ಮಹಾಭಾರತಾದಿ ಸಾಹಿತ್ಯಗಳಲ್ಲಿ ಇಲ್ಲದ ವಿಕೃತ ಆಚರಣೆಯೇ ಈಗಿನ ಶ್ರೀವಿಧ್ಯೆ ಶ್ರೀಚಕ್ರ!!

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಇಲ್ಲಿಯವರೆಗೆ ಪೂಜಿಸಿಕೊಂಡು ಬರುತ್ತಿರುವ ಪ್ರಸಕ್ತ ಕಾಲದ ಶ್ರೀಚಕ್ರ, ಅದರ ಅನುಷ್ಠಾನ ವಿಚಾರ, ಈ ವಿಚಾರವಾಗಿ ನೋಡೋಣ. ಅದರಲ್ಲಿ ಬಳಸುವ ಮಂತ್ರಗಳು ಹೆಚ್ಚಾಗಿ ವೇದದಿಂದ ಆಯ್ಕೆ ಮಾಡಲಾಗಿದೆ, ಆದರೆ, ಅವರು ಆರೋಪಿಸಿದ ದೇವತೆಗೂ ಆ ಮಂತ್ರಕ್ಕೂ ಪರಸ್ಪರ ಸಂಬಂಧವಿಲ್ಲ. ಇದ್ದರೂ ಕೂಡ ಆ ಕಾರ್ಯಸಾಧಕ ಯಂತ್ರ ಅದಲ್ಲ. ಷಟ್ಚಕ್ರ ಯೋಗದ ಉದಾಹರಣೆಯಂತೆ ಮೂಲಾಧಾರದಿಂದ ಉದ್ದೀಪನಗೊಂಡ ಕುಂಡಲಿನೀ ಶಕ್ತಿಯು ಸುಷುಮ್ನಾ ನಾಡಿಯ ಮೂಲಕ ಮೇಲ್ಮುಖವಾಗಿ ಪ್ರವಹಿಸಿ ಆರು ಹಂತಗಳಲ್ಲಿ ನಿಂತು ಅಥವಾ ಆ ಹಂತವನ್ನು ದಾಟಿ ಪ್ರವಹಿಸಬೇಕು. ಅದರ ಗಮ್ಯ ಸಹಸ್ರಾರ ಅಥವಾ ಜ್ಞಾನಚಕ್ರ ಎಂಬ ವಿಚಾರ ನಿಮಗೆ ಗೊತ್ತಿರಬಹುದು. ಕುಂಡಲಿನಿಯ ಮಾರ್ಗವಾದ ಸುಷುಮ್ನಾ ನಾಡಿಯಲ್ಲಿ ಈ ಹಂತಗಳೇಕೆ? ಆಲೋಚಿಸಬೇಕಿದೆ. ಸಹಸ್ರಾರ ದರ್ಶನಕ್ಕೆ ಮೊದಲಾಗಿ ಬೌದ್ಧಿಕ ಪಕ್ವತೆಗೆ ಬೇಕಾಗಿ ಈ ಹಂತಗಳಲ್ಲಿ ಅಲ್ಲಲ್ಲಿ ವಿರಮಿಸಿ ಆಯಾಯಾ ಹಂತದಲ್ಲಿ ಅದರ ಸಾಧಿತ ಕಾರ್ಯೋನ್ಮುಖನಾಗಿ ಪಕ್ವತೆಯನ್ನು ಪಡೆದು ಮುಂದುವರೆಯಬೇಕು ಎಂದು ಅರ್ಥ. ಹಾಗಿದ್ದ ಮೇಲೆ ಈ ಯಂತ್ರ ಪೂಜೆಯಲ್ಲಿ ಹೇಳುವ ಮೋಕ್ಷ ಲಭ್ಯವಾದೀತೆ, ಚಿಂತಿಸಿ? ನೀವು ಪಕ್ವತೆಯನ್ನ ಹೊಂದಲು ಬೇಕಾದ ಯಾವ ಆದರ್ಶ ಆ ಪೂಜೆಯಲ್ಲಿದೆ?

        ಹಿಂದೆ ನಮ್ಮ ಗೋಷ್ಠಿಯಲ್ಲಿ ಉದಾಹರಿಸಿದರೂ ಶ್ರೀವಿಧ್ಯಾ ಎಂಬುದು ಯಾರಿಗೆ ಇದು ಕೊನೆಯ ಜನ್ಮವಾಗಿರುತ್ತದೆಯೋ ಅವರಿಗೆ ಮಾತ್ರ ಲಭ್ಯ ಎಂದರು ಶ್ರೀಯುತ ಡಾ|| ರಾ. ಸತ್ಯನಾರಾಯಣರವರು. ಒಬ್ಬನಿಗೆ ಕೇವಲ ಶ್ರೀಚಕ್ರ ಪೂಜೆ ಲಭ್ಯವಾದಾಗಲೇ ಅವನಿಗೆ ಮೋಕ್ಷ ಕಟ್ಟಿಟ್ಟ ಬುತ್ತಿ ಎಂದಾಗ ಈ ವಿಚಾರವಾಗಿ ಆಧ್ಯಾತ್ಮ ಪ್ರಭೃತಿಗಳು ಈಗ ಸುಲಭವಾಗಿ ಜನಸಂಖ್ಯಾ ನಿಯಂತ್ರಣ ಸಾಧಿಸಬಹುದು. ಎಲ್ಲರನ್ನೂ ಮೋಕ್ಷಕ್ಕೆ ಕಳುಹಿಸಬಹುದಲ್ಲವೇ? ಪ್ರಪಂಚದ ಒಟ್ಟು ಜೀವ ವೈವಿಧ್ಯದಲ್ಲಿ ಇಷ್ಟೇ ಎಂಬ ಸಂಖ್ಯಾ ನಿಯಮವಿದೆ. ಅದು ೮೪,೦೦,೦೦೦ ಮಾತ್ರ. ಅದರಲ್ಲಿ ಒಟ್ಟು ಸಂಖ್ಯಾ ನಿಯಮವಿಲ್ಲ, ಆದರೆ ಒಟ್ಟು ಜೀವರಾಶಿಯಲ್ಲಿ ಮನುಷ್ಯ ಒಂದು ರೂಪ ಅಷ್ಟೆ. ಎಲ್ಲಾ ಜೀವರಾಶಿಗಳು ಮನುಷ್ಯನಾಗಿ ಹುಟ್ಟಿದವರೆಲ್ಲಾ ಶ್ರೀವಿಧ್ಯಾ ಉಪದೇಶ ಹೊಂದಿ ಮುಕ್ತರಾಗುತ್ತಿದ್ದರೆ ಪ್ರಪಂಚದಲ್ಲಿ ಜೀವರಾಶಿ ಉಳಿಯುತ್ತಿತ್ತೆ? ಆಗ ಬೇರೆ ಬೇರೆ ಜೀವ ವೈವಿಧ್ಯಕ್ಕೆ ಅವಕಾಶವೆಲ್ಲಿ? ಅವುಗಳ ಸಂಖ್ಯಾ ನಿಯಮ "ಸಪ್ತವಿಂಶತ್ ಲಕ್ಷಾರ್ಬುದಾಃ." ಅರ್ಬುದವೆಂದರೆ ಕೋಟಿಯ ನೂರು ಪಟ್ಟು. ೨೭ ಲಕ್ಷ ಅರ್ಬುದ x ೮೪ ಲಕ್ಷ = ೨೭ x ೧,೦೦,೦೦೦ x ೧,೦೦,೦೦,೦೦೦ = ೨,೭೦,೦೦,೦೦,೦೦,೦೦,೦೦೦ x ೮೪,೦೦,೦೦೦ = ೨೨,೬೮,೦೦,೦೦,೦೦,೦೦,೦೦,೦೦,೦೦,೦೦೦. ಒಟ್ಟು ಜೀವ ರಾಶಿಗಳ ಸಂಖ್ಯೆ ಬಹಳ ಕಡಿಮೆ. ಹಾಗದ್ದಲ್ಲಿ ಹಲವಾರು ಸಾವಿರ ವರ್ಷಗಳಿಂದ ಸಾಧಿಸಿಕೊಂಡು ಬಂದ ಈ ಶ್ರೀವಿಧ್ಯಾ ಮೋಕ್ಷದಾಯಕ ಖಂಡಿತವಾಗದ್ದಲ್ಲಿ ಈ ಜೀವರಾಶಿಯು ಪ್ರಪಂಚದ ಮೇಲೆ ಹೇಗೆ ಉಳಿದಿವೆ? ಎಲ್ಲವೂ ಮೋಕ್ಷವಾಗಿರಬೇಕಿತ್ತಲ್ಲವೆ ಚಿಂತಿಸಿ?

        ಹಿಂದೆ ಪುರಾಣದ ಉದಾಹರಣೆ ತೆಗೆದುಕೊಳ್ಳಿ. ರಾಜ ಅಂಬರೀಷ, ಚಂದ್ರಹಾಸಾದಿಗಳು ಏಕಾದಶಿ ವ್ರತವನ್ನು ಸಾರ್ವತ್ರಿಕವಾಗಿ ಆಚರಿಸಲು ರಾಜಾಜ್ಞೆ ಮಾಡಿದ್ದರು ಎಂದು ಕಂಡುಬರುತ್ತದೆ. ಅವರು ಏಕೆ ಈ ಶ್ರೀವಿಧ್ಯೆ ಬಿಟ್ಟರು? ಆಗ ಇರಲಿಲ್ಲವೆ? ಅದು ಸಾರ್ವತ್ರಿಕ ಪೂಜಾವಿಧಾನ ಎಂದಾದಲ್ಲಿ ಇಂತಹಾ ಉತ್ತಮ ಪೂಜಾ ವಿಧಾನ ಬಿಟ್ಟು ಏಕಾದಶಿ ವ್ರತ ಏಕೆ ಬಳಕೆಗೆ ತಂದರು? ಅವರೇನು ಶತಮೂರ್ಖರೇ? ಕಥೆಯೇ ಅಂದರೆ ಫಲಶೃತಿಯು ಹೇಳುವಂತೆ ಅತೀ ರಹಸ್ಯ ವಿಧ್ಯೆ ಎಂದಾದ ಉದಾಹರಿಸಲ್ಪಟ್ಟ ಶ್ರೀವಿಧ್ಯೆಯು ಈ ಕಾಲದಲ್ಲಿ ಮಾತ್ರ ಸಾರ್ವತ್ರಿಕ ಯಾರು ಪೂಜಿಸಬಹುದು, ಯಾರು ಬೇಕಾದರೂ ಅನುಷ್ಠಿಸಬಹುದು ಎಂದು ಧರ್ಮಶಾಸ್ತ್ರ ನಿರ್ಣಯ ಕೊಟ್ಟವರಾರು? ಅಂಗೀಕರಿಸಿದವರಾರು? ಅಗಸ್ತ್ಯರಿಗೆ ಅಲಭ್ಯವಾಗಿತ್ತು, ಹಯಗ್ರೀವರು ಉಪದೇಶಿಸಲಿಲ್ಲ, ಆಮೇಲೆ ವಿಶೇಷ ಪ್ರಾರ್ಥನೆಯಿಂದ ಹಯಗ್ರೀವರಿಗೆ ಲಲಿತೆಯೇ ಆದೇಶಿಸಿ ಕೊಡು ಎಂದು ಹೇಳಿದ ಮೇಲೆ ಅಗಸ್ತ್ಯರಿಗೆ ಉಪದೇಶಿಸಲ್ಪಟ್ಟಿತು ಎಂದು -

ಲೋಪಾಮುದ್ರಾ ಪತೇಗಸ್ತ್ಯ ಸಾವಧಾನಮನಾಃ ಶೃಣು |
ನಾಮ್ನಾಂ ಸಹಸ್ರಂ ಯನ್ನೋಕ್ತಂ ಕಾರಣಂ ತದ್ವದಾಮಿ ತೇ ||
ರಹಸ್ಯಮಿತಿ ಮತ್ತ್ವಾಹಂ ನೋಕ್ತವಾಂಸ್ತೇ ನ ಚಾನ್ಯಥಾ |
ಪುನಶ್ಚ ಪೃಚ್ಛತೇ ಭಕ್ತ್ಯಾ ತಸ್ಮಾತ್ತತ್ತೇ ವದಾಮ್ಯಹಮ್ ||
ಸಮಾವಲಂಬೇ ತತ್ಪಾದಯುಗಲಂ ಕಲಶೋದ್ಭವಃ |
ಹಯಾನನೋ ಭೀತಭೀತಃ ಕಿಮಿದಂ ಕಿಮಿದಂ ತ್ವಿತಿ ||
ಮುಂಚ ಮುಂಚೇತಿ ತಂ ಚೋಕ್ತ್ವಾ ಚಿಂತಾಕ್ರಾಂತೋ ಬಭೂವ ಸಃ |
ಚಿರಂ ವಿಚಾರ್ಯ ನಿಶ್ಚಿನ್ವನ್ ವಕ್ತವ್ಯಂ ನ ಮಯೇತ್ಯಸೌ ||
ವರ್ಷತ್ರಯಾವಧಿ ತಥಾ ಗುರುಶಿಷ್ಯೌ ತಥಾ ಸ್ಥಿತೌ |
ತೃಚ್ಛೃಣ್ವಂತಶ್ಚ ಪಶ್ಯಂತಸ್ಸರ್ವೇ ಲೋಕಾಸ್ಸುವಿಸ್ಮಿತಾಃ ||
ತತಃ ಶ್ರೀ ಲಲಿತಾದೇವೀ ಕಾಮೇಶ್ವರಸಮನ್ವಿತಾ |
ಪ್ರಾದುರ್ಭೂಯ ಹಯಗ್ರೀವಂ ರಹಸ್ಯೇವಮಚೋದಯತ್ ||

ಎಂದು ಅಂದು ಗೋಷ್ಠಿಯಲ್ಲಿ ಶ್ರೀಯುತ ಶಂಕರ ಶಾಸ್ತ್ರಿಯವರು ಹೇಳಿದರು. ಅಂತಹ ಗೌಪ್ಯವಾದ ಶ್ರೀವಿಧ್ಯೆ ಈಗ ಮಾತ್ರ ಸಾರ್ವತ್ರಿಕವೇ? ಅದು ಹೇಗೆ ಅಂಗೀಕಾರವಾಯಿತು? ಈಗಿನ ಪ್ರಭೃತಿಗಳೆಲ್ಲಾ ಅಗಸ್ತ್ಯರಿಗಿಂತ ಹೆಚ್ಚೆ? ಆಲೋಚಿಸಿ. ನಿಮಗೆ ಇಲ್ಲಿರುವ ಸುಳ್ಳು ಅರ್ಥವಾಗುತ್ತದೆ. ಶ್ರೀವಿಧ್ಯೆಯಲ್ಲಿ ಉತ್ತೀರ್ಣರಾದ ಮಹನೀರ್ಯರಲ್ಲಿ, ಮಹಿಳೆಯರಲ್ಲಿ ಲೋಪಾಮುದ್ರೆಯೂ ಒಬ್ಬಳು ಎಂದು ಹೇಳಿದ್ದಾರೆ. ಅವಳು ಅಗಸ್ತ್ಯ ಪತ್ನಿ, ಅವಳಿಗೆ ಇದು ಮೊದಲೇ ಉಪದೇಶಿಸಲ್ಪಟ್ಟಿತ್ತು. ಹಾಗಿದ್ದರೂ ಕೂಡ ಅಗಸ್ತ್ಯರು ಯಾವ ಕರ್ಮಕ್ಕಾಗಿ ಹಯಗ್ರೀವರಿಂದ ಈ ವಿಧ್ಯೆ ಬೇಡಿದರು. ಪತ್ನಿಯಿಂದ ಈ ರಹಸ್ಯ ಅರಿಯಬಹುದಿತ್ತು ತಾನೆ?

ಕಾರ್ಯೇಷು ದಾಸೀ ಕರಣೇಷು ಮಂತ್ರೀ | ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರೀ |
ಭೋಜ್ಯೇಷು ಮಾತಾ ಶಯನೇಷು ವೇಶ್ಯಾ | ಷಟ್ಕರ್ಮಯುಕ್ತಾ ಕುಲಧರ್ಮಪತ್ನೀ |
ಇಲ್ಲಿಯೇ ಗೊತ್ತಾಗುತ್ತದೆ ಇವೆಲ್ಲಾ ಕಟ್ಟು ಕಥೆಗಳೆಂದು.

ಪ್ರಪಂಚದಲ್ಲಿ ಧರ್ಮಿಷ್ಠನೆಂದು, ಅಜಾತಶತ್ರುವೆಂದೂ ಪ್ರಸಿದ್ಧನಾದ ಅನ್ವರ್ಥನಾಮವಾದ ಧರ್ಮರಾಯನಿಗೆ ಹಲವಾರು ವ್ರತ ಕಥೆಗಳೂ, ವ್ರತೋಪದೇಶವೂ ಕೊಡಲ್ಪಟ್ಟಿತೇ ವಿನಃ ಈ ಶ್ರೀವಿಧ್ಯೆ ಕೊಡಲ್ಪಟ್ಟಿದ್ದು ಕಂಡು ಬರುವುದಿಲ್ಲ. ಶಿವ ಸಹಸ್ರನಾಮ, ವಿಷ್ಣು ಸಹಸ್ರನಾಮ ಇತ್ಯಾದಿ ಉಪದೇಶಿಸಲ್ಪಟ್ಟಿತೇ ವಿನಃ ಲಲಿತಾ ಸಹಸ್ರನಾಮ ಉಪದೇಶವಾಗಿಲ್ಲ. ಆಗಿನ ಕಾಲದ ವ್ಯಾಸ, ನಾರದ, ಸನಕಾದಿಗಳು, ಕೃಷ್ಣ ಇವರೆಲ್ಲ ಅಲ್ಪಜ್ಞರಿರಬೇಕು. ಗೀತಾಚಾರ್ಯನೂ ಆದ ಕೃಷ್ಣನಿಗೆ ಅಥವಾ ಅವರನ್ನೇ ನಂಬಿದ ಧರ್ಮರಾಯನಿಗೆ ದ್ರೋಹ ಮಾಡಿರಬೇಕಲ್ಲವೆ? ನೀವೇ ನಿರ್ಣಯಿಸಿ.

        ಶ್ರೀಕೃಷ್ಣನಿಗೇ ಗೊತ್ತಿಲ್ಲದ, ವೇದವ್ಯಾಸರೆಂಬ ಅನ್ವರ್ಥಕ ನಾಮಧಾರಿಗಳು ಅರಿಯದ, ನಾರದ ಸನಕಾದಿಗಳಿಗೆ ಅವರ ಜೀವನದಲ್ಲೇ ಕಂಡರಿಯದ ಈ ಮಹಾವಿಧ್ಯೆ ಎಷ್ಟು ಆದಿಯಾಗಿರಬಹುದು? ಹೋದಲ್ಲೆಲ್ಲಾ ದೇವಾಲಯ ಕಟ್ಟಿದ ಭೀಮ ಧರ್ಮರಾಯರು ಹಾಳು ಶಿವಲಿಂಗ ಬಿಟ್ಟರೆ ಈ ಲಲಿತೆಯನ್ನು ಯಾಕೆ ಪ್ರತಿಷ್ಠಿಸಲಿಲ್ಲ? ಅವರೆಲ್ಲಾ ಶತಮೂರ್ಖರಿರಬೇಕು.

"ಸರ್ಮಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |"

ಎಂದ ಕೃಷ್ಣನನ್ನು ಹೇಗೆ ನಂಬುವುದು? ಇಂತಹಾ ಮಹಾವಿಧ್ಯೆ ಇದ್ದೂ ಪ್ರಪಂಚಕ್ಕೆಲ್ಲಾ ವಂಚಿಸಿದನೆಂತಾದರೆ ಅವನು ಹೇಳಿದ ಮಾತಿನಲ್ಲಿ ಏನು ಸತ್ಯವಿದೆ ಆಲೋಚಿಸಿದ್ದೀರಾ? ಇಲ್ಲಾ ಅದು ಸತ್ಯವೆಂದಾದರೆ ಈ ಶ್ರೀವಿಧ್ಯೆ, ಶ್ರೀಚಕ್ರ, ಲಲಿತೆ ಯಾರು? ಎಲ್ಲಿಂದ ಬಂತು ಆಲೋಚಿಸಿ? ಉತ್ತರ ಸಿಗಲಾರದು. ಅದೇ ಉದ್ದೇಶದಿಂದ ಪ್ರತಿಪಾದಿಸಿದ ಪ್ರಕಟಣೆ ಬಿಟ್ಟರೆ, ಬೇರೆಲ್ಲೂ ಅದರ ಯಾವ ಕುರುಹುಗಳೂ ಕಂಡುಬರುವುದಿಲ್ಲ.

ಒಂದು ವಿಚಾರದ ನಿಖರತೆ ಅಂದರೆ ಘಟನೆಯ ಸತ್ಯಾಸತ್ಯತೆಯನ್ನು ಹೇಗೆ ತಿಳಿಯಬೇಕೆಂದರೆ, ಆ ಗ್ರಂಥವನ್ನು ಆಧಾರವಾಗಿಟ್ಟು ಸಮಕಾಲೀನ ಪ್ರಕಟಣೆಯೊಂದಿಗೆ ಹೋಲಿಸಬೇಕು. ಅಲ್ಲಿ ಹೊಂದಿದರೆ ಘಟನೆ ಸತ್ಯವೆಂದು ಸಾಬೀತಾಗುತ್ತದೆ. ಪುರಾಣಗಳನ್ನು ಕೂಡಾ, ಪುರಾಣ ಘಟನೆಗಳನ್ನು ಕೂಡಾ ಹೀಗೆ ವಿಶ್ಲೇಷಿಸುವುದಕ್ಕೆ ಅವಕಾಶವಿದೆ. ಇಲ್ಲಿ ಹೀಗೆ ವಿಶ್ಲೇಷಿಸಿ ನೋಡಿ ಅರ್ಥವಾಗುತ್ತದೆ. (ಸಾಹಿತ್ಯಕ ವಿಧದಲ್ಲಿ) ಈ ಮೇಲಿನ ನಿಯಮ ವಿಶೇಷಾಧ್ಯಯನ ಮಾಡುವ ಅಂದರೆ ಈಗಿನ P.Hd. ಮಾಡುವ ಸೂತ್ರದಲ್ಲಿ ಒಂದು ಆಗಿರುತ್ತದೆ ಎಂಬುದು ಗೊತ್ತಿರಬಹುದು.

        ಇನ್ನು ಮೂಲಕ್ಕೆ ಹೋಗೋಣ. ಅಗಸ್ತ್ಯರಿಗೆ ಹಯಗ್ರೀವರಿಂದ ಉಪದೇಶಿಸಲ್ಪಟ್ಟಿತು ಎಂಬ ಈ ವಿಧ್ಯೆ ಎಲ್ಲಾ ವಿಧ್ಯೆಗಿಂತ ಹೆಚ್ಚಿನದಾದಲ್ಲಿ ರಾಮಾಯಣದಲ್ಲಿ ಬರುವ ರಾಮ-ರಾವಣರ ಯುದ್ಧಕಾಂಡದಲ್ಲಿ ಒಂದು ವಿಚಾರ ಗಮನಿಸಿ. ರಾವಣನ ಹತ್ಯೆಗಾಗಿ ರಾಮ ಕಂಕಣ ಬದ್ಧನಾಗಿದ್ದಾನೆ. ಆದರೆ ರಾವಣ ಸಾಯುತ್ತಿಲ್ಲ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಅಗಸ್ತ್ಯರು ರಾಮನಿಗೆ ಆದಿತ್ಯ ಹೃದಯ ಉಪದೇಶಿಸುತ್ತಾರೆ. ಅಲ್ಲಿ ಗಮನಿಸಿ-

ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಂ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಂ ||
ದೈವತೈಶ್ಚ ಸಮಾಗಮ್ಯ ದೃಷ್ಟುಮಭ್ಯಾಗತೋ ರಣಂ |
ಉಪಗಮ್ಯಾಬ್ರವೀತ್ ರಾಮಮಗಸ್ತ್ಯೋ ಭಗವಾಂ ಸ್ತದಾ ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಂ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸೇ ||
ಆದಿತ್ಯಹೃದಯಂ ಪುಣ್ಯಂ ಸರ್ವ ಶತೃ ವಿನಾಶನಂ |
ಜಯಾವಹಂ ಜಪಂ ನಿತ್ಯಮಕ್ಷಯಂ ಪರಮಂ ಶಿವಂ ||


ಶತೃಂಜಯ ವಿಧ್ಯೆಯಾದ ಈ ಶ್ರೀವಿಧ್ಯೆಯನ್ನು ಬಿಟ್ಟು ಅಗಸ್ತ್ಯರು ಆದಿತ್ಯ ಹೃದಯ ಏಕೆ ಉಪದೇಶಿಸಿದರು?

ಇಲ್ಲಾ, ಶತೃ ಪೀಡೆ ಪರಿಹರಿಸಲು ಶ್ರೀವಿಧ್ಯೆಗೆ ಸಾಧ್ಯವಿಲ್ಲವೇ?

ಹಾಗಿದ್ದರೆ, ಸಾಧ್ಯವೆಂದು ಏಕೆ ಬರೆದರು?

ಇನ್ನು ಪಲಾಯನ ವಾದಿಗಳು ಹೇಳಬಹುದು. ಇದು ಕಲಿಯುಗಕ್ಕೆ ಮಾತ್ರ ವಿಶೇಷವೆಂದು. ಏಕೆ ಈ ತಾರತಮ್ಯ? 

ಕಲಿಯುಗದಲ್ಲಿ ಯುಗಧರ್ಮಕ್ಕನುಸಾರವಾಗಿ ಮೋಕ್ಷ ಪಡೆಯಲು ಬೇರೆ ಸಾಧನವೇ ಇಲ್ಲವೇ?

ಕೃತ ತ್ರೇತಾ ದ್ವಾಪರ ಯುಗದವರಿಗೆ ಈ ಲಲಿತೆಯ ಅನುಗ್ರಹ ಪಡೆಯುವ ಯೋಗವಿಲ್ಲವೇ? ಚಿಂತಿಸಿ ನೋಡಿ.

ವಿಷ್ಣುನಾಮ ಸಹಸ್ರಾಚ್ಚ ಶಿವನಾಮೈಕಮುತ್ತಮಮ್ |
ಶಿವನಾಮ ಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ಒಂದು ಸಾವಿರ ವಿಷ್ಣುನಾಮಕ್ಕಿಂತ ಒಂದು ಶಿವನಾಮ ಉತ್ತಮ, ಒಂದು ಸಾವಿರ ಶಿವನಾಮಕ್ಕಿಂತ ಲಲಿತಾದ ಒಂದು ನಾಮೋಚ್ಚಾರಣೆ ವಿಶೇಷವೆಂದಾದಲ್ಲಿ (ನಾನು ಹೇಳಿದ್ದಲ್ಲ, ಲಲಿತಾ ಸಹಸ್ರನಾಮದಲ್ಲಿರುವುದು) ಎಲ್ಲಿಯೂ ಕೂಡಾ ಯಾರಿಗೂ ಈ ನಾಮ ಮಂತ್ರ ಜಪ ಉಪದೇಶಕ್ಕೆ ಸೂತ್ರಕಾರರೂ ಬರೆದಿಟ್ಟಿಲ್ಲವೇಕೆ?

ತನ್ನ ಸೂತ್ರ ಅನ್ವಯಿಸುವ ಶಿಷ್ಯವರ್ಗ ಈ ಪಾಪಕೂಪದಲ್ಲೇ ಕೊಳೆಯಲಿ ಎಂದೇ?

ಹಾಗಿದ್ದರೆ, ನಿಮ್ಮ ಸೂತ್ರಕಾರರು ನಿಮಗೆ ದ್ರೋಹ ಮಾಡಿದಂತಾಗಲಿಲ್ಲವೇ?

ಗಾಯತ್ರೀ, ಅಷ್ಟಾಕ್ಷರೀ, ಪಂಚಾಕ್ಷರೀ, ಗೌರೀ ಪಂಚಾಕ್ಷರೀ, ದ್ವಾದಶಾಕ್ಷರೀ ಮಂತ್ರ ಉಪದೇಶ ಕೊಡಲು ಸೂಚಿಸಿದ ಸೂತ್ರಕಾರರಿಗೆ ಈ ಶ್ರೀವಿಧ್ಯೆ ತಿಳಿದಿರಲಿಲ್ಲವೇ?

ನಿಮ್ಮ ಸೂತ್ರಕಾರರನ್ನು ನೀವು ನಂಬುತ್ತೀರೀ? ನಂಬಿದರೆ ನಂಬಿ, ಬಿಟ್ಟರೆ ಬಿಡಿ, ನಿಮಗೆ ಸ್ವಾತಂತ್ರ್ಯವಿದೆ.

        ಇನ್ನು ಆಶ್ರಮಗಳಲ್ಲಿ ಕೊನೆಯ ಆಶ್ರಮವಾದ ಸನ್ಯಾಸ. ಇದನ್ನು ಯಾರು ಸ್ವೀಕರಿಸುತ್ತಾರೋ ಅವರು ಮೋಕ್ಷ ಸಾಮ್ರಾಜ್ಯದ ಅಧಿಕಾರಿಗಳು, ಸಾಕ್ಷಾತ್ ಬ್ರಹ್ಮಸ್ವರೂಪರು ಎಂಬ ಚಾಲ್ತಿ ನಮ್ಮಲ್ಲಿದೆ. ಆದರೆ, ಆ ಆಶ್ರಮ ಸ್ವೀಕಾರ ಕಾಲದಲ್ಲಿ ಅವರಿಗೆ ಅಧಿಕೃತ ಪ್ರಣವ ಬೀಜ ಉಪದೇಶಿಸಲ್ಪಡುತ್ತದೆ. ನಾರಾಯಣ ನಾಮಸ್ಮರಣೆ ಉಪದೇಶಿಸಲ್ಪಡುತ್ತದೆ. ಶಿಷ್ಯನಿಗೆ ಗುರುಗಳು ಆಶೀರ್ವಾದ ಮಾಡುವಾಗ ಕೇವಲ ನಾರಾಯಣ ನಾಮಸ್ಮರಣೆಯಿಂದ ಆಶೀರ್ವಾದ ಮಾಡುತ್ತಾರೆಯೇ ವಿನಃ ಲಲಿತಾ ಎಂದು ಆಶೀರ್ವದಿಸುವುದಿಲ್ಲ, ಕಾರಣವೇನು? ನಿಮ್ಮ ಮೇಲೆ ಶ್ರೀಗಳವರಿಗೆ ಪೂರ್ಣ ಅನುಗ್ರಹವಿಲ್ಲವೆಂತಲೇ? ಈ ಮೇಲಿನ ಉದಾಹರಣೆಗಳೆಲ್ಲಾ ಪ್ರಶ್ನೆಗಳಾಗಿ ಉದ್ಭವಿಸಿದ್ದು ಲಲಿತಾಸಹಸ್ರನಾಮದಿಂದಲೇ. ಅಷ್ಟೆಲ್ಲಾ ಅರ್ಹತೆ ಹೊಂದಿದ ಲಲಿತೆಯಾಗಿದ್ದರೆ ಉದಾಹರಿಸಿದ ಒಂದು ಕಡೆಯಾದರೂ ಬಳಕೆಗೆ ಬಂದಿರಬೇಕಿತ್ತು, ಯಾಕೆ ಬಂದಿಲ್ಲ? ಇದು ಉತ್ತರನು ರಣರಂಗದಲ್ಲಿ ತನ್ನ ಪೌರುಷವನ್ನು ಹೇಗೆ ತೋರಿಸಲಿಲ್ಲವೋ ಹಾಗೆಯೇ ಪ್ರಯೋಗಾತ್ಮಕವಾಗಿ ಬಳಸಿಲ್ಲ. ಬಳಸಿ ನೋಡಿದವರು ಹೇಳಿಲ್ಲ, ಹೇಳುವುದಕ್ಕೆ ಬರುತ್ತಿಲ್ಲ. ಈ ವಿಚಾರ ಅರ್ಥಮಾಡಿಕೊಳ್ಳಿ, ಶ್ರೀಯುತ ಯೆನ್.ಜಿ. ರಾವ್‍ರವರು ಲಲಿತೆಯು ತನ್ನ ಅರ್ಹತೆ ಹೇಳಿಕೊಂಡಿದ್ದಾಳೆ ಎಂದು ಅಂದು ಸಭೆಯಲ್ಲಿ ಉದಾಹರಿಸಿದ್ದರು. ಆದರೆ ಲಲಿತೆ ಹೇಳಿಕೊಂಡದ್ದೇನು ಎಂದು ನಿಮಗೂ, ಅವರಿಗೂ ಅರ್ಥವಾದರೆ ಸಾಕು.
  (ಸಶೇಷ..)

ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯) 

No comments:

Post a comment