Wednesday, 31 January 2018

ವಾಸ್ತುಶಾಸ್ತ್ರ ಎಂದರೇನು? ಸುದರ್ಶನ ಹೋಮವೆಂದರೇನು? - ಪ್ರಸಕ್ತ ಪ್ರಕ್ರಿಯೆಗಳು ಹಾಗೂ ನೈಜತೆ

೧) ವಾಸ್ತುಶಾಸ್ತ್ರ ಎಂದರೇನು ?

ಒಂದು ವಿಚಾರದ ಬಗ್ಗೆ ಗೋಷ್ಠಿ ನಡೆಸುವುದೆಂದರೆ ಪ್ರಸಕ್ತದಲ್ಲಿರತಕ್ಕ ಆಚರಣೆಯ ಹಿನ್ನಲೆಯಲ್ಲಿ ಏನಿದೆ ಎಂದು ತಿಳಿಯುವುದಾಗಿರುತ್ತದೆ. ನಮ್ಮ ಸನಾತನ ಧರ್ಮದಲ್ಲಿ ಇಷ್ಟೆಂದು ಸಂಖ್ಯೆ ಹೇಳಲಾಗದಷ್ಟು ಅದ್ಭುತವಾದಂತಹಾ ಧರ್ಮಶಾಸ್ತ್ರಗಳು, ವೇದಗಳು, ಶೃತಿ, ಸ್ಮೃತಿಗಳು, ತಂತ್ರ ಗ್ರಂಥಗಳ ಸಂಗ್ರಹವಿದೆ. ಅವುಗಳ ಆಧಾರದಲ್ಲಿ ಈ ಪರಂಪರೆಯು ನಡೆದುಕೊಂಡು ಬಂದಿದೆ. ಯಾವುದೇ ಆಚರಣೆಗೆ ವಿಚಾರ ಬದ್ಧವಾದ ಆಧಾರವಿದೆ. ಮನುಷ್ಯನೆಂದರೆ ಹೀಗೆಯೇ ಜೀವಿಸಬೇಕು, ಇಂತಹಾ ಆಚರಣೆಗಳನ್ನು ಹೀಗೆಯೇ ಮಾಡಬೇಕೆಂದು ಸಂಶೋಧನೆ ಮಾಡಿ ಸಪ್ತರ್ಷಿಗಳ ಪರಿಷತ್ತಿನಲ್ಲಿ ಅನುಮೋದನೆಗೊಂಡು ಲಕ್ಷಾಂತರ ಪುಟಗಳಲ್ಲಿ ಪ್ರಕಟಣೆಗೊಂಡ ಗ್ರಂಥಗಳಿವೆ. ಅವೆಲ್ಲವುಗಳ ಸ್ರೋತ, ಅಂದರೆ ಬೇರೆ ಬೇರೆ ಮಾರ್ಗವೇನಿದ್ದರೂ ಅದು ಒಂದು ನಿಶ್ಚಿತ ಗುರಿಯನ್ನಿಟ್ಟು ಅದಕ್ಕೆ ಭಿನ್ನವಾಗದ ರೀತಿಯಲ್ಲಿ ಚಿಂತನೆ ಮಾಡಿರುತ್ತದೆ. ಅಂತಹಾ ಎಲ್ಲ ಗ್ರಂಥಗಳನ್ನು ಅಧ್ಯಯನ ಮಾಡಿದಾಗ ನಮಗೆ ತಿಳಿದುಬಂದದ್ದೇನೆಂದರೆ ಇಲ್ಲಿಯವರೆಗೆ ಏನು ಸಂಶೋಧನೆಯಾಗಿದೆ, ಅದನ್ನು ಪರಿಷ್ಕರಿಸುತ್ತಾ ಮುಂದೆ ಇನ್ನೂ ಹೆಚ್ಚಿನ ಸಂಶೋಧನೆಯಾಗಬೇಕು.

ಸಂಶೋಧನೆಗೆ ಸೂಕ್ತ ಸ್ಥಳಗಳಾವುದು? ಯಾವ್ಯಾವ ಪ್ರದೇಶಗಳಲ್ಲಿ ಇಂತಹಾ ಸಂಶೋಧನೆ ಮಾಡಿದರೆ ಹೆಚ್ಚು ನಿಖರತೆ ಸಾಧಿಸಲಿಕ್ಕೆ ಸಾಧ್ಯ? ಎನ್ನುವುದನ್ನೂ ಆ ಗ್ರಂಥಗಳು ಹಲವು ಕಡೆ ಸೂಚಿಸುತ್ತವೆ. ಯಾವುದೇ ಆಚರಣೆಯ ವಿಚಾರಕ್ಕೆ ವಿಶೇಷ ಪರಿಷ್ಕರಣೆಗೆ ಒಳಪಟ್ಟಂತಹಾ ಭಾಗ ಬಂದಾಗ ಉತ್ತರ ಮೀಮಾಂಸ, ಧರ್ಮಶಾಸ್ತ್ರ, ನ್ಯಾಯ ಸೂತ್ರಗಳ ರಚನಾಕಾರರು ಬಂದದ್ದು ಸಹ್ಯಾದ್ರಿ ಬೆಟ್ಟದಿಂದ. ಪ್ರಸಕ್ತ ಪ್ರಕಟಣೆಗಳಲ್ಲಿ ಅಲ್ಲಿಯ ಗ್ರಂಥಗಳು ಸಿಕ್ಕದಿರಬಹುದು, ಆದರೆ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಅದು ಪರಿಷ್ಕರಣೆಗೊಂಡರೆ ನಿಜವಾಗಿಯೂ ಸಾರ್ಥಕ. ಏಕೆಂದರೆ ಇಲ್ಲಿ ಇರತಕ್ಕಂತಹಾ ಸಹಜ ಜೀವ ಚೇತನ ಪ್ರಪಂಚದ ಬೇರೆ ಯಾವುದೇ ಸ್ಥಳದಲ್ಲಿ ಕಂಡುಬರುವುದಿಲ್ಲ. ಹಾಗಾಗಿ ಅತ್ಯಂತ ಆಳವಾದ ಧರ್ಮ ಜಿಜ್ಞಾಸೆ ಬಂದಾಗ ಸಹ್ಯಾದ್ರಿ ಬೆಟ್ಟದಲ್ಲಿ ಏನು ಹೇಳಿದೆಯೋ ಅದುವೇ ತೀರ್ಮಾನ ಎಂದು ಒಂದಷ್ಟು ಕಾಲ ಬಳಕೆಯಲ್ಲಿತ್ತು. ಅಂದರೆ ಸಹ್ಯಾದ್ರಿ ಭಾಗದಲ್ಲಿ ಸ್ಪಷ್ಟವಾದ ಚಿಂತನೆ ಮಾಡಲಿಕ್ಕೆ ಸಾಧ್ಯ.

ಗೋದಾವರಿ ದಕ್ಷಿಣ ಪ್ರದೇಶವಾದ ಈ ಭರತ ಭೂಮಿಯಲ್ಲಿ ಯಾವುದೇ ಪೂರಕತೆ ಇಲ್ಲದೆ ಸಹಜವಾದ ಚೈತನ್ಯವು ಸ್ಫುರಿಸುತ್ತಿರುವ ಕಾರಣದಿಂದ ದ್ರಾವಿಡ ಎಂಬ ಪುಣ್ಯ ಕ್ಷೇತ್ರವಾಗಿ ಗುರುತಿಸಿಲ್ಪಟ್ಟಿದೆ. ಇಲ್ಲಿ ಪಂಚ ದ್ರಾವಿಡ ಸಂಸ್ಕೃತಿಗಳಿವೆ. ಅದನ್ನು ಈಗ ಪಂಚದ್ರಾವಿಡ ಭಾಷೆಗಳು ಎನ್ನುವಷ್ಟಕ್ಕೆ ಸೀಮಿತಗೊಳಿಸಿದ್ದಾರೆ. ಆದರೆ ನೈಜವಾಗಿ ಅದು ಭಾಷೆಯಲ್ಲ. ಐದು ವಿಭಿನ್ನ ಸಂಸ್ಕೃತಿಗಳು ಬೆರೆತಿತ್ತು. ಯಾವಾಗ ಸ್ವತಂತ್ರವಾಗಿ ವ್ಯವಹರಿಸುವ ಪಂಚ ವಿಭಿನ್ನ ಸಂಸ್ಕೃತಿಗಳಲ್ಲಿ ವಿರೋದಾಭಾಸ ಉತ್ಪನ್ನವಾಗಲು ಆರಂಭಿಸಿತೋ ಆಗ ಜನ ಮಾನಸದ ಮೇಲೆ ತೊಂದರೆಯಾಗುತ್ತದೆ ಎಂದು ಗುರುತಿಸಿ ಶಂಕರಾಚಾರ್ಯರು ಕೂಡ ಅದನ್ನು ಸರಿಪಡಿಸಲು ಪಂಚ ದ್ರಾವಿಡ ಸಂಸ್ಕೃತಿಗಳನ್ನು ಅನುಮೋದಿಸಿ ಪಂಚಾಯತನ ಪೂಜಾ ಪದ್ಧತಿಯ ಕ್ರಮವನ್ನು ಪ್ರಚುರ ಪಡಿಸಿದರು. ಹಾಗಾಗಿ ಈ ಪಂಚ ದ್ರಾವಿಡ ಸಂಸ್ಕೃತಿಯ ಆಧಾರದಲ್ಲಿರತಕ್ಕಂತಹಾ ಧರ್ಮಜಿಜ್ಞಾಸೆಯ ವಿಚಾರಗಳು ಅಷ್ಟೇ  ಸಮರ್ಥ ಹಾಗೂ ಪಾಲನೀಯವಾಗಿದೆ. ಪ್ರಪಂಚದಾದ್ಯಂತ ಎಲ್ಲಿಯೂ ಕೂಡ ಇಲ್ಲಿಯ ಜೀವನ ಜಿಜ್ಞಾಸೆಯನ್ನು ಅರ್ಥೈಸಿಕೊಂಡು ತೊಡಗಿಸಿದರೆ ಅದರಿಂದ ಯಾವುದೇ ರೀತಿಯ ತೊಡಕಾಗಲಿ, ಬಾಧಕವಾಗಲಿ ಉಂಟಾಗುವುದಿಲ್ಲ. ಅಷ್ಟು ಆಳವಾಗಿ ಜೀವ ಸಂಕುಲತೆಯ ಮೇಲೆ ಚಿಂತನೆ ಮಾಡಿ ಸಹಜತೆಯ ಆಧಾರದಲ್ಲಿಯೇ ಪರಿಷ್ಕರಿಸಿದ ವಿಚಾರಗಳಾದ್ದರಿಂದ ಎಷ್ಟೋ ಧರ್ಮಶಾಸ್ತ್ರ ಗ್ರಂಥಗಳು ಗೋದಾವರಿ ದಕ್ಷಿಣತೀರದ ಸಹ್ಯಾದ್ರಿಯಲ್ಲಿ ಪರಿಷ್ಕರಣೆಗೊಂಡದ್ದು ಕಂಡುಬರುತ್ತದೆ.

ಪಂಚ ದ್ರಾವಿಡ ಧರ್ಮಶಾಸ್ತ್ರಗಳ ಆಧಾರದಲ್ಲಿ ಮನುಷ್ಯನಿಗೆ ಬದುಕಲಿಕ್ಕೆ ಬೇಕಾದ ನಿರ್ಮಾಣ ವ್ಯವಸ್ಥೆಯನ್ನು ವಾಸ್ತುಶಾಸ್ತ್ರವೆಂದರು. ಹಾಗಾದರೆ ಬೇರೆ ಕಡೆ ವಾಸ್ತುಶಾಸ್ತ್ರ ಇಲ್ಲವೆಂದಲ್ಲ. ದಕ್ಷಿಣ ಭಾರತದಲ್ಲಿ ಬಳಸುವ ವಾಸ್ತು ಎಂಬ ಶಬ್ದದ ಅರ್ಥವ್ಯಾಪ್ತಿಯು ಉತ್ತರ ಭಾರತದಲ್ಲಿಯಾಗಲಿ, ಚೀನಾದ ಫೆಂಗ್ ಶೂಯ್‍ನಲ್ಲಿಯಾಗಲಿ, ಅಥವಾ ಇತರೆ ಯಾವುದೇ ದೇಶದ ನಿರ್ಮಾಣ ವ್ಯವಸ್ಥೆಯಲ್ಲಿ ವಾಸ್ತು ಎಂಬುದೇ ಇರುವುದಿಲ್ಲ. ಅವರು ಬಳಸುತ್ತಿರುವುದೇ ಬೇರೆ ರೀತಿಯ ನಿರ್ಮಾಣ ವಿಧಾನ ಎಂದು ಆಯಾ ಭಾಷಾ ಶಬ್ದ ವಿವರಣೆ, ನಿರ್ಮಾಣ ಶೈಲಿಯ ಅಧ್ಯಯನದಿಂದ ಕಂಡುಬರುತ್ತದೆ. ನಿರ್ಮಾಣ ಶೈಲಿಯು ಆಕಾರ ನೀಡಿದ ಮಾತ್ರಕ್ಕೆ ವಾಸ್ತು ಎಂದಾಗುವುದಿಲ್ಲ. ವಾಸ್ತು ಎನ್ನುವುದು ಉತ್ಪನ್ನವಾದದ್ದೇ ದಕ್ಷಿಣ ಭಾರತದಲ್ಲಿ. ಹಾಗಾಗಿ ವಾಸ್ತುವಿಗೆ ಆದ್ಯ ಪ್ರವರ್ತಕ ಎಂದು ಹೇಳುವುದು ಮಯ ಪ್ರಣೀತವಾದ ಮಯಮತ. ಅದು ಮಾತ್ರ ವಾಸ್ತು, ಉಳಿದವು ವಾಸ್ತುವಲ್ಲ. ಮಯಮತದಂತೆ "ವಾಸ್ತುವೆಂದರೆ ಸ್ವಾಭಾವಿಕ ಚೈತನ್ಯವನ್ನು ಆಶ್ರಯಿಸುವ ವಿಧಾನ". ಅದಕ್ಕೆ ವೇದದಲ್ಲಿ ವಾಸ್ತುವಿನ ಬಗ್ಗೆ ತಿಳಿಸುವ ಮಂತ್ರಾಧಾರವಿದೆ.

ಅಮೀವಹ ವಾಸ್ತೋಷ್ಪತೇ ವಿಶ್ವಾ ರೂಪಾಣಿ ಆವಿಶನ್ |
ಸಖಾ ಸುಶೇವ ಏದಿನಃ ||

ಮೂಲ ಪ್ರಕೃತಿಯಲ್ಲಿ ಅದರದ್ದಾದ ಬಾಹ್ಯ ಚೈತನ್ಯವಿರುತ್ತದೆ. ಅದಕ್ಕೆ ಯಾವುದೇ ನೋವಾಗದಂತೆ, ಅಂದರೆ ಪರಿಸರಕ್ಕೆ ವಿರುದ್ಧವಾಗದ ರೀತಿಯಲ್ಲಿ ವ್ಯವಹರಿಸುವ ವಿಧಾನವನ್ನು ದಕ್ಷಿಣ ಭಾರತದ ವೈಧಿಕ ಪದ್ಧತಿಯು ಆಚರಿಸಿಕೊಂಡು ಬಂದಿದೆ. ಬೇರೆ ಯಾವುದೇ ಜೀವಿಯು ತನಗಾಗಿ ಆಶ್ರಯ ನಿರ್ಮಾಣ ಮಾಡುವುದಿಲ್ಲ. ಮನುಷ್ಯ ಮಾತ್ರ ತನಗೆ ಬೇಕಾಗಿ ಆಶ್ರಯ ನಿರ್ಮಾಣ ಮಾಡುತ್ತಾನೆ. ಆಗ ಇತರೆ ಜೀವಿಗಳಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ "ವಿಶ್ವರೂಪ" ಎಂದರೆ ಹಲವು ಲಕ್ಷ ಪ್ರಭೇದ ಜೀವಿಗಳೇನಿರುವುದೋ ಅವುಗಳ್ಯಾವುದಕ್ಕೂ ತೊಂದರೆಯಾಗಲಿ ಎಂಬ ಉದ್ದೇಶದಿಂದ ನಿರ್ಮಾಣ ಮಾಡಿದ್ದಲ್ಲ. ಅವುಗಳ ಸಖ್ಯಕ್ಕಾಗಿ, ಅಂದರೆ ಅವುಗಳ ಸ್ನೇಹಿತನಾಗಿ ನಾನು ಬೆಳೆಯುತ್ತೇನೆ ಎಂದರ್ಥ. ಇದು ನನ್ನ ವೈಯಕ್ತಿಕ ಹಿತಕ್ಕಾಗಿ ಮಾಡಿಕೊಂಡ ನಿರ್ಮಾಣ. ಹಾಗಾಗಿ ದಯವಿಟ್ಟು ನನಗೆ ಈ ಪ್ರಕೃತಿಯು ಕ್ಷಮೆ ಕೊಡಲಿ ಎಂದು ಬೇಡುವುದೇ ಹಿಂದಿನ ಮಂತ್ರದ ಸಾರವಾಗಿದೆ.

ಅಷ್ಟು ಸ್ಪಷ್ಟವಾಗಿ ಮೂಲ ಪ್ರಕೃತಿಗೆ ಆಧರಿಸಿ ಇಲ್ಲಿನ ಸಹಜ ಚೈತನ್ಯಕ್ಕೆ ಭಿನ್ನವಾಗದಂತೆ ಸ್ವಾಭಾವಿಕವಾಗಿ ಬದುಕುವುದು ಎಂಬ ಯಾವ ವಾಸ್ತವೀಕತೆ ಇದೆ, ಯಾವ ಸತ್ಯವಿದೆಯೋ ಅಂತಹಾ ವಾಸ್ತವೀಕತೆಯೊಂದಿಗೆ ಬದುಕುವುದೇ ವಾಸ್ತುಶಾಸ್ತ್ರ. ಪ್ರಪಂಚವೆಲ್ಲ ವಾಸ್ತವೀಕತೆಯನ್ನು ಹುಡುಕುತ್ತಾ ಇದೆ. ಆದರೆ ಭಾರತದ ಗೋದಾವರಿ ದಕ್ಷಿಣ ಭಾಗದ ನಾವು ವಾಸ್ತವೀಕತೆ ಎಂಬ ಸತ್ಯದೊಂದಿಗೆ ಬದುಕುತ್ತಾ ಇದ್ದೇವೆ. ನಾವು ಎಷ್ಟೇ ಅಯೋಮಯರಾಗಿರಲಿ, ಎಷ್ಟೇ ಗೊಂದಲಗಳಿರಲಿ, ವಿದೇಶೀ ಪ್ರಭಾವಕ್ಕೆ ಒಳಗಾಗಿದ್ದರೂ ನಮ್ಮಲ್ಲಿ ಮೂಲ ವಾಸ್ತವೀಕತೆಯು ಇದೆ. ಹಾಗಾಗಿ ಇಲ್ಲಿ ನಮಗೆ ಸಹಜವಾಗಿ ಬದುಕುವುದಕ್ಕೆ ಆಗುತ್ತಿದೆ. ಆದ್ದರಿಂದ ಇಲ್ಲಿ ಮಾತ್ರ ವಾಸ್ತುವಿದೆ, ಪ್ರಪಂಚದ ಮತ್ತೆಲ್ಲಿಯೂ ವಾಸ್ತುವಿಲ್ಲ. ಹಲವು ದೇಶಗಳನ್ನು ಸುತ್ತಿ ನೋಡಿದಾಗ ಅಲ್ಲೆಲ್ಲ ಜೀವನ ಶೈಲಿಯಲ್ಲಿ ಏನೇನೋ ವೈಭವ ಕಂಡುಬರುತ್ತದೆ. ಆದರೆ ಸಹಜ ಜೀವನದಲ್ಲಿ ಸಿಕ್ಕುವ ಪ್ರಕೃತಿಯ ಸಮತೋಲನ ಅಲ್ಲಿ ಸಿಕ್ಕುವುದಿಲ್ಲ. ಅವರು ಒಂದಷ್ಟು ಕಾಲ ಮಾತ್ರ ಜೀವನದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಈಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು ಸಾವಿನ ಅಂಚಿನಲ್ಲಿರುವವರೂ ಆನಂದವನ್ನು ಅಪೇಕ್ಷಿಸುತ್ತಾರೆ, ಪಡೆದಿದ್ದಾರೆ. ಅಂತಹಾ ಅಗಾಧವಾಗಿದೆ; ಇಲ್ಲಿನ ವಾಸ್ತವೀಕತೆ.

ವಾಸ್ತುಶಾಸ್ತ್ರದಲ್ಲಿ ಒಂದಿಷ್ಟು ನಿಬಂಧನೆಗಳನ್ನು ಹೇಳುತ್ತದೆ. ಆ ನಿಬಂಧನೆಗೆ ಆಧರಿಸಿ ಇದಮಿತ್ಥಂ ಎಂಬ ಆಚರಣೆಗಳಿವೆ. ನಾವು ಮಾಡತಕ್ಕಂತಹಾ ನಿರ್ಮಾಣ ಏನಿದೆ ಅದು ಅಂದರೆ ಜೀವನ ಶೈಲಿಯು ಸುತ್ತುಮುತ್ತಲಿನ ಪರಿಸರಕ್ಕೆ ಯಾವ ರೀತಿ ಪೂರಕವಾಗುವಂತೆ ಮತ್ತು ಕುಪರಿಣಾಮವಾಗದಂತೆ ಇರಬೇಕು. ನಾವು ಎಲ್ಲರಿಗೆ ಭಯವಾಗುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬಾರದು. ನಮ್ಮ ಸುತ್ತಲಿನ ಪರಿಸರಕ್ಕೆ ಸ್ನೇಹಿತರಾಗಿ ರೂಪಿಸಿಕೊಳ್ಳಬೇಕು. ಅದಕ್ಕಾಗಿ ಆಚರಣೆಗಳಿರಬೇಕು. ಅದನ್ನು ಬಿಟ್ಟು ಮನೆಯ ಸುತ್ತ ಕೋವಿ, ನಾಯಿ (ಬೋರ್ಡ್:- ನಾಯಿಗಳಿವೆ ಎಚ್ಚರಿಕೆ!!) ಇಟ್ಟುಕೊಂಡರೆ ನಾವು ಸ್ನೇಹಿತರಾಗಲಿಕ್ಕೆ ಸಾಧ್ಯವಿಲ್ಲ. ಆಗ ಸಖಾ ಸುಶೇವ ಏದಿನಃ ಆಗುವುದಿಲ್ಲ. ಹಾಗಾಗಿ ಮನೆಯ ಸುತ್ತ ಹೂವಿನ ತೋಟ ಬೆಳೆಸಬೇಕು, ತುಳಸೀ ಗಿಡ ನೆಡಬೇಕು, ಬಂದವರನ್ನು ಸ್ವಾಗತಿಸತಕ್ಕಂತಹಾ ದಾರಿ ತೋರಿಸತಕ್ಕಂತಹಾ ವರ್ಣರಂಜಿತ ಸುವಸ್ತುಗಳಿರಬೇಕು. ಆಗ ಮಾತ್ರ ಇದು ಯಾವುದೋ ಸಜ್ಜನರ ಮನೆಯೆಂದು ಎಲ್ಲರೂ ಬರಲಿಕ್ಕೆ ಇಷ್ಟ ಪಡುತ್ತಾರೆ. ಈ ಲಕ್ಷಣಗಳೂ ಇದ್ದಾಗ ಮಾತ್ರ ಅದೊಂದು ಗೃಹಸ್ಥರ ಮನೆ ಎಂದೆನಿಸಿಕೊಳ್ಳುತ್ತದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಯಾವುದು ಶುಭವೂ, ಪೂರಕವೂ, ಸಂತೋಷದಾಯಕವೂ, ಭಯಾನಕವಲ್ಲದ್ದೂ ಆದ ವಿಚಾರಗಳು ವ್ಯವಹರಿಸಿ ರೂಪಿಸಿದ ಜೀವನ ವಿಧಾನವಿದೆಯೋ ಅದನ್ನು ವಾಸ್ತುಶಾಸ್ತ್ರ ಎಂದರು.


೨) ಸುದರ್ಶನ ಹೋಮವೆಂದರೇನು? ಗೃಹ ಪ್ರವೇಶದ ಸಂದರ್ಭದಲ್ಲಿ ಸುದರ್ಶನ ಹೋಮ ಮಾಡುವುದರ ಸೂಕ್ತಾಸೂಕ್ತತೆಯ ಬಗ್ಗೆ ವಿವರಣೆ ನೀಡಿರಿ.

ಈ ಸಹ್ಯಾದ್ರಿ ಪ್ರದೇಶದ ಅಗ್ನಿ ಉಪಾಸಕರಲ್ಲಿ ಹೆಚ್ಚಾಗಿ ತ್ರೇತಾಗ್ನಿಗಳ ಮುಖೇನ ಪ್ರತಿನಿತ್ಯವೂ ಎಷ್ಟೋ ಕಾರ್ಯಕ್ರಮಗಳು ನಡೆಯಲ್ಪಡುತ್ತಿದ್ದವು. ದಕ್ಷಿಣ, ಗಾರ್ಹಪತ್ಯ, ಆಹವನೀಯಗಳೆಂಬ ತ್ರೇತಾಗ್ನಿಗಳ ಉಪಾಸನೆಯನ್ನು ಮಾಡುತ್ತಾ ಬಹಳ ಎತ್ತರದ ಮಟ್ಟಿನ ಸಾಧನೆ ಮಾಡಿದ ಮಹಾತ್ಮರಿಲ್ಲಿ ಆಗಿ ಹೋಗಿದ್ದಾರೆ. ಅವರೆಲ್ಲರೂ ಈ ಪರಿಸರಕ್ಕೆ ಭಿನ್ನತೆ ಬರಬಾರದೆಂದು ಒಂದಿಷ್ಟು ಕಟ್ಟುಪಾಡುಗಳನ್ನು ಇಟ್ಟುಕೊಂಡಿದ್ದರು. ಒಂದು ಮಿತಿಯನ್ನು ಹಾಕಿಕೊಂಡು ಅದನ್ನು ಮೀರಿ ಹೋಗಬಾರದು ಎಂಬುದಾಗಿತ್ತು. ಏಕೆಂದರೆ ಮಾನವನಿಗೆ ತನ್ನ ಸಹಜ ಶಕ್ತಿಗಿಂತ ಹೆಚ್ಚಿನದ್ದು ಪ್ರಾಪ್ತವಾದರೆ ಅದರ ದುರುಪಯೋಗ ಹೆಚ್ಚು. ಮಾನವ ದಾನವನಾಗುತ್ತಾನೆಯೇ ಹೊರತು ದೇವನಾಗುವ ಪ್ರಯತ್ನ ಮಾಡುವುದಿಲ್ಲ. ಅದು ಪ್ರಲೋಭನೆಯೆಂದು ಭೂಮಿಯಲ್ಲಿರುವ ಎಲ್ಲರಿಗೂ ತಿಳಿದಿದೆ. ಹಾಗಾಗಿ ಶಕ್ತಿಯನ್ನು ಮಿತಿಯಲ್ಲಿಟ್ಟುಕೊಳ್ಳತಕ್ಕಂತಹಾ ವಿಧಾನ ಬಳಸಲಾಗುತ್ತಿತ್ತು. ಹಾಗಾಗಿ ದಕ್ಷಿಣ ಕರಾವಳಿಯಲ್ಲಿ ಬಹಳ ಸಾತ್ವಿಕವಾದ ಆಘಾರ ತಂತ್ರದಲ್ಲಿ ಪ್ರಯೋಗಗಳು ರೂಪುಗೊಂಡಿವೆ. ಅದನ್ನು ಬಿಟ್ಟು ಬೇರೆ ಮಾಡಬಾರದು ಎಂದು ಹಿರಿಯರು ಹೇಳಿಬಿಟ್ಟಿದ್ದಾರೆ. ಏಕೆಂದರೆ ಅದಕ್ಕೂ ಹೆಚ್ಚು ಸಾಧನೆ ಮಾಡಿದರೆ ಸಮಾಜವನ್ನು ತಪ್ಪು ದಾರಿಗೆ ಎಳೆಯಬಹುದು, ಸಮಸ್ಯೆ ಮಾಡಬಹುದು ಎಂದು.

ಆಘಾರ ತಂತ್ರದ ಮುಖೇನ ಅಗ್ನಿಮುಖ ಮಾಡುವಾಗ ಪ್ರತಿಯೊಂದು ಪ್ರಕ್ರಿಯೆಯೂ ನಿಗಧಿತ ಕ್ರಮದಲ್ಲಿಯೇ ನಡೆಯಬೇಕು. ಷೋಡಶ ಸಂಸ್ಕಾರಗಳಿಗೆ ಬೇರೆ ಬೇರೆ ಅಗ್ನಿಗಳು, ಪ್ರಾಯಶ್ಚಿತ್ತ, ಶಾಂತಿ, ಪುಷ್ಠಿ, ಇತ್ಯಾದಿಗಳಿಗೆ ಬೇರೆಯೇ ಅಗ್ನಿಗಳನ್ನು, ಪ್ರತ್ಯೇಕವಾದ ಇಂಧನ ನಿಯಮ, ಅನ್ವಾಧಾನ, ಇಧ್ಮಾಧಾನ, ಎಲ್ಲವೂ ನಿಯಮಬದ್ಧವಾಗಿದೆ. ಬೇರೆ ರೀತಿಯಲ್ಲಿ ಹೇಳಿದರೆ ಅನ್ವಾಧಾನವೇ ಆಗುವುದಿಲ್ಲ. ಹಾಗಾಗಿ ಆಘಾರ ತಂತ್ರದ ಮುಖೇನ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಿಕ್ಕೆ ಬರುವುದಿಲ್ಲ. ಆಘಾರ ತಂತ್ರದ ಮುಖೇನ ಶಾಂತಿ, ಪುಷ್ಠಿ, ವೃದ್ಧಿ ಕರ್ಮಗಳನ್ನು ಮಾತ್ರ ಮಾಡಲಿಕ್ಕೆ ಅವಕಾಶವಿದೆ. ಇಲ್ಲಿ ಶವದಹನ ಮಾಡುವುದಕ್ಕೂ ಅಗ್ನಿ ಪ್ರತ್ಯೇಕವಾಗಬೇಕು ಏಕೆಂದರೆ ಅದನ್ನು ಆಘಾರ ತಂತ್ರದಲ್ಲಿ ಮಾಡುವುದಕ್ಕೆ ಬರುವುದಿಲ್ಲ. ಏಕೆಂದರೆ ಆ ದೇಹದಲ್ಲಿ ಅಡಗಿರುವ ಯಾವುದೋ ಒಂದು ಜೀವಿಗೆ ಹಿಂಸೆ ಮಾಡುವುದಕ್ಕೆ ಆಘಾರ ಒಪ್ಪುವುದಿಲ್ಲ. ಅಷ್ಟು ಅಹಿಂಸಾ ಪೂರ್ವಕವಾದ ವಿಚಾರಗಳನ್ನು ಒಳಗೊಂಡಿದೆ ಈ ಆಘಾರ ತಂತ್ರ.

ಆದರೆ ಆಘಾರ ತಂತ್ರದಲ್ಲಿ ಅದೇ ಪ್ರಕ್ರಿಯೆ, ಅದೇ ಕುಂಡ, ಅದೇ ಅಗ್ನಿಮುಖದಲ್ಲಿ ಆರಂಭಿಸಿ ನೀವು ಹೋಮ ಮಾಡುತ್ತಾ ಅನ್ವಾಧಾನ ಮಾಡುವಾಗ ಅಸ್ತ್ರ ಪ್ರಕ್ರಿಯೆಗಳಲ್ಲಿ ರಂ ಸಹಸ್ರಾರ ಹುಂಫಟ್ ಸ್ವಾಹಾ ಎಂದು ಹುಂಫಟ್ಕಾರವನ್ನು ಬಳಸುತ್ತಿದ್ದೀರಿ. ಅಸ್ತ್ರ ವ್ಯವಹಾರವಿರತಕ್ಕಂತಹಾ ಆ ಮಂದ್ರ ಸ್ವರದ ಒಂದು ಅಗ್ನಿಯ ಪ್ರಬೇಧ ವ್ಯತ್ಯಾಸವು ಎಷ್ಟು ಅನಾಹುತಕಾರಿಯಾಗಿ ಪರಿಣಮಿಸುತ್ತದೆ ಎಂದರೆ ಸದಾ ಮನಸ್ಸಿನಲ್ಲಿ ಇನ್ನೊಬ್ಬರ ಬಗ್ಗೆ ಈರ್ಷೇ, ದ್ವೇಷ, ಅಸೂಯೆಗಳು ಬರಲಿಕ್ಕೆ ಕಾರಣವಾಗುತ್ತದೆ. ಹಾಗಾಗಿ ರಕ್ಷಣೆಗಾಗಿ ಸುದರ್ಶನಾದಿ ಅಸ್ತ್ರ ಪ್ರಯೋಗಿಸಬೇಕಾದರೆ ಅದಕ್ಕೆ ಸಂಬಂಧಪಟ್ಟ ಪ್ರತ್ಯೇಕ ಅಗ್ನಿ ಬೇಕು. ಅದರ ಮುಖೇನ ಮಾತ್ರ ಅಸ್ತ್ರ ಪ್ರಯೋಗ ಮಾಡಿ ರಕ್ಷಣೆ ಕೊಡಬಹುದು. ಇಲ್ಲವಾದರೆ ಗುರಿ ಸಿಕ್ಕದ ಅಸ್ತ್ರವು ಯಾರ ಮೇಲೆಯೋ ಪ್ರಯೋಗವಾಗಿ ಅನಾಹುತಕ್ಕೆ ಕಾರಣವಾಗುತ್ತದೆ. ಅಸ್ತ್ರ ಪ್ರಕ್ರಿಯೆಗಳೇ ಬೇರೆ. ಶಾಂತಿ, ಪುಷ್ಠಿ, ವೃದ್ಧಿ ಪ್ರಕ್ರಿಯೆಗಳೇ ಬೇರೆ. ದಕ್ಷಿಣ ಭಾರತದಲ್ಲಿ ಅಸ್ತ್ರ ಪ್ರಯೋಗಗಳು ಬೇಕಿಲ್ಲ. ಇಲ್ಲಿ ಮಹಾಸ್ತ್ರ ಪ್ರಯೋಗಗಳಾಗಿದ್ದು ಬಹಳ ಕಡಿಮೆ. ಏಕೆಂದರೆ ಇಲ್ಲಿನ ಜನರು ಅಷ್ಟು ಸಮಾಧಾನಿಕರು. ಅಂತಹಾ ಅಸ್ತ್ರಗಳ ಅನಿವಾರ್ಯತೆಯೇ ಬರುವುದಿಲ್ಲ. ಅನಿವಾರ್ಯತೆಯು ಬಾರದೆ ಅಸ್ತ್ರಗಳನ್ನು ಉಪಯೋಗಿಸುವುದು ಸೂಕ್ತವಲ್ಲ.

ಹಾಗಾಗಿ ಗೃಹ ಪ್ರವೇಶದಲ್ಲಿ ಹುಂಫಟ್ಕಾರದಿಂದ ಪ್ರಜ್ವಲಿಸಿದ ಅಗ್ನಿಯು ಅಸ್ತ್ರವಾಗಿ ಪ್ರಯೋಗವಾದಾಗ ಅದಕ್ಕೆ ಗುರಿಯಿಲ್ಲದೆ ಯಜಮಾನನಿಂದ ಹಿಡಿದು ಮನೆಗೆ ಬಂದ ಪ್ರತಿಯೊಬ್ಬ ಅತಿಥಿಯ ಮೇಲೂ ಪರಿಣಾಮ ಮಾಡುತ್ತದೆ. ಹೆಚ್ಚಿನ ಮನೆಗಳಲ್ಲಿ ಗೃಹಪ್ರವೇಶ ಮಾಡಿದ ಮೇಲೆ ತುಂಬ ಚೆನ್ನಾಗಾಗಿದೆ. ಆದರೆ ಏನು ಮಾಡಿದರೂ ಉದ್ದಾರವಾಗುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಏಕೆಂದರೆ ಮನೆಗೆ ಬಂದವರಿಗೆಲ್ಲ ಅಸ್ತ್ರವು ಈರ್ಷೆ ಹುಟ್ಟಿಸುತ್ತದೆ. ನಿಮ್ಮ ಅತಿಥಿಯ ಮನಸ್ಸಿನ ಮೇಲೆ ಈ ರೀತಿಯ ಪರಿಣಾಮ ಉಂಟಾಗುವ ಪ್ರಯೋಗ ಮಾಡಿಟ್ಟ ಮೇಲೆ ನಿಮಗೆ ಏನು ಶುಭವಾಗಬಹುದು? ಅರ್ಥಮಾಡಿಕೊಂಡು, ಬದಲಾಯಿಸಿಕೊಳ್ಳಿ.


೩) ಸುದರ್ಶನ ಪ್ರಕ್ರಿಯೆಯಿಂದ ದುಷ್ಟ ಶಕ್ತಿಗಳ ನಿಗ್ರಹವಾಗಿ ಮನೆಗೆ ರಕ್ಷಣೆ ದೊರೆತು ನಮಗೂ ನಮ್ಮ ಸುತ್ತಲಿನವರಿಗೂ ಒಳ್ಳೆಯದಾಗಲಿ, ಯಾರಿಗೂ ಕೆಟ್ಟದ್ದಾಗಬಾರದೆಂದು ಭಾವಿಸಿ ಧಾರ್ಮಿಕ ವಿಧಿ ವಿಧಾನಗಳಿಂದ ಸಂಕಲ್ಪಿಸಿ ಅದರಂತಯೇ ಮಾಡಿಕೊಂಡು ಹೋದ ಪ್ರಕ್ರಿಯೆಯಲ್ಲಿ ಲೋಪ ಉಂಟಾದರೆ ಪರಿಣಾಮದಲ್ಲಿ ಕೆಟ್ಟದ್ದಾಗಲಿಕ್ಕೆ ಹೇಗೆ ಸಾಧ್ಯ ?

ಸದ್ಭಾವ, ಸತ್ಸಂಗತ್ವ, ಸದ್ಭಕ್ತಿ, ಸದಿಚ್ಛೆ ಇವೆಲ್ಲಾ ಒಂದು ಹಂತದವರೆಗೆ ಮಾತ್ರ. ಆದರೆ ಧಾರ್ಮಿಕ ಪ್ರಕ್ರಿಯೆಗಳು ಅದಕ್ಕೂ ಎತ್ತರ ಮಟ್ಟದ ಚಿಂತನೆ ಮಾಡಿರುತ್ತವೆ. ಅಲ್ಲಿ ಪ್ರಕ್ರಿಯೆ ಮತ್ತು ಅದರ ಪರಿಣಾಮಗಳೆರಡೇ ಮುಖ್ಯವಾಗಿರುತ್ತದೆ. ಬಾಯಾರಿಕೆ ಆದವರಿಗೆ ನೀರು ಕೊಡಬೇಕು. ಚಾಲ್ತಿಯಲ್ಲಿರುವ ಹಾಗೆ ಬಾಯಾರಿಕೆ, ನಂತರ ನೀರಡಿಕೆ, ಅದ್ದಕ್ಕಿಂತ ಮುಂದೆ ಹೋದರೆ ಬಿಕ್ಕಳಿಕೆ. ನೀರಿನ ಕೊರತೆಯಿಂದ ಉಂಟಾಗುವ ಈ ಪ್ರಕ್ರಿಯೆಗಳಲ್ಲಿ ಮೊದಲ ಎರಡಕ್ಕೆ ನೀರನ್ನು ನೀಡಿ ಸರಿಪಡಿಸಬಹುದು. ಆದರೆ ಬಿಕ್ಕಳಿಕೆಗೆ ನೇರವಾಗಿ ನೀರು ಕುಡಿದರೆ ಅಪಾಯವಾಗಬಹುದು ಎಂದು ವೈದ್ಯ ವಿಜ್ಞಾನವೂ ಹೇಳುತ್ತಿದೆ. ಅಲ್ಲಿ ನೀರು ಕೊಟ್ಟದ್ದು ಸದ್ಭಾವದಿಂದಲೇ ಆಗಿದ್ದರೂ ಪರಿಣಾಮ ಅಪಾಯಕಾರಿಯಾಗಲಿಲ್ಲವೇ? ಬಾಯಾರಿಕೆಯಾಗಿ ಬಂದವನಿಗೆ ಅಕಸ್ಮಾತ್ ಶ್ರೇಷ್ಠವೆಂದು ಕರೆಯಲ್ಪಡುವ ಒಂದು ಚಮಚ ತುಪ್ಪವನ್ನು ಬಾಯಿಗೆ ಬಿಟ್ಟರೆ ಅಪಾಯವಾಗುತ್ತದೆ ಅಲ್ಲವೇ? ಅಲ್ಲಿ ಯಾವುದು ಚಿಕಿತ್ಸೆಯೋ ಅದನ್ನೇ ಮಾಡಬೇಕು. ಅದನ್ನು ಬಿಟ್ಟು ಬೇರೆ ಯಾವುದನ್ನು ಮಾಡಿದರೂ ಸದುದ್ದೇಶ ಕೆಲಸ ಮಾಡುವುದಿಲ್ಲ.

ಮಹಾಭಾರತ ಯುದ್ಧವಾಗುವ ಮುನ್ನ ಒಂದು ಸನ್ನಿವೇಶ ಬರುತ್ತದೆ. ಯಾದವರ ಸೇನೆ ಕೌರವರಿಗೆ, ಕೃಷ್ಣ ಪಾಂಡವರ ಪಕ್ಷಕ್ಕೆ ಬಂದನು. ಬಲರಾಮನು ಕೌರವರ ಪಕ್ಷಕ್ಕೆ ಹೋದರೆ ಕಷ್ಟವಾಗುವುದೆಂದು ಅರಿತ ಕೃಷ್ಣನು ಮುದಿ ಹಸುವನ್ನು ಬಲರಾಮನ ಎದುರು ಬರುವಂತೆ ಮಾಡಿದನು. ಪ್ರೀತಿಯಿಂದ ಅದರ ಮೈಯನ್ನು ಸವರಿದ ಕೂಡಲೇ ಬಿದ್ದು ಸತ್ತುಹೋಗುತ್ತದೆ. ಅದರ ಪ್ರಾಯಶ್ಚಿತ್ತಕ್ಕಾಗಿ ದೇಶ ಸಂಚಾರಕ್ಕೆ ಹೋಗುತ್ತಾನೆ. ಬರುವುದರೊಳಗೆ ಮಹಾಭಾರತ ಯುದ್ಧವು ಮುಗಿದು ಹೋಗಿರುತ್ತದೆ. ಇಲ್ಲಿ ಸದಿಚ್ಛೆ, ಸದ್ಭಾವದಿಂದಲೇ ಮಾಡಿದ ಕಾರ್ಯವು ಪರಿಣಾಮದಲ್ಲಿ ದೋಷಕಾರಿಯಾಯಿತು. ಶಾಂತಿ, ಪುಷ್ಠಿ, ತುಷ್ಠಿ ಕರ್ಮಗಳಲ್ಲಿ ಸದಿಚ್ಛೆ, ಸಂಕಲ್ಪಗಳೇ ಪ್ರಧಾನ. ಆದರೆ ರಕ್ಷಣಾತ್ಮಕ ಅಥವಾ ಚಿಕಿತ್ಸಾ ಕರ್ಮಗಳು ಬಂದಾಗ ಹೇಗೆ ಮಾಡಬೇಕೋ ಹಾಗೆಯೇ ಮಾಡಬೇಕು. ಸ್ವಲ್ಪ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

[ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ 
ಶಾರಧ್ವತ ಯಜ್ಞಾಂಗಣದಲ್ಲಿ ನಡೆದ ಗೋಷ್ಠಿಯ ಈ ವಿಚಾರಗಳು 
ಜೂನ್ ೨೦೦೯ರ ಋತ್ವಿಕ್ ವಾಣಿ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ]

-      ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು,
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a comment