Tuesday, 9 January 2018

ಶ್ರೀ ಚಕ್ರ, ಶ್ರೀ ವಿಧ್ಯೆ - ೯ : ಲಲಿತಾ - ಸಾಹಿತ್ಯಕ ಅಪಭ್ರಂಶ! ಶ್ರೀಚಕ್ರಾಕಾರದ ನಿರ್ಮಾಣಗಳಿಂದ ಸರ್ವನಾಶ!! ಅಗಸ್ತ್ಯರಿಗೆ ಶ್ರೀಚಕ್ರ, ಶ್ರೀವಿಧ್ಯೆ, ಲಲಿತೆ ಗೊತ್ತಿರಲಿಲ್ಲವೇ?

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)


[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಇನ್ನು ಲಲಿತೆಯ ಬಗ್ಗೆ ಹೇಳುವುದಿದ್ದರೆ ಈ ಲಲಿತಾ ಶಬ್ದವು ಸಾಹಿತ್ಯದಲ್ಲಿ ಸುಲಭ, ಆಕರ್ಷಕ, ಮೋಹಿತ ಹೀಗೆ ಹಲವಾರು ಅರ್ಥದಲ್ಲಿ ಬಳಸಲ್ಪಟ್ಟ ಉದಾಹರಣೆ ಕಂಡು ಬರುತ್ತದೆಯೇ ವಿನಃ ನಾಮಪದ ರೂಪದಲ್ಲಿ ಕಂಡುಬಂದದ್ದು ಇತ್ತೀಚೆಗೆ. ಅದಕ್ಕೆ ಭಾಷಾ ಸಾಹಿತ್ಯದಲ್ಲಿ ಉದಾಹರಣೆ ಸಾವಿರಾರು ಕೊಡಬಹುದು. ಅದೆಲ್ಲಾ ಇಲ್ಲಿಗೆ ಅಪ್ರಸ್ತುತ. ಲಲಿತಾಸಹಸ್ರನಾಮ, ಅದರ ಪೂರ್ವೋತ್ತರ, ಪೀಠಿಕೆ, ಅಲ್ಲಿ ಉದಾಹರಿಸಿದ ಉಪಮಾಲಂಕಾರಗಳನ್ನು ಭಾಷಾ ಸಾಹಿತ್ಯಾಧ್ಯಯನ ಮಾಡುವ ದೃಷ್ಟಿಯಿಂದ ಅಧ್ಯಯನ ಮಾಡಿದರೆ ಯಾವ ಪುರಾಣ ಕಾಲದ್ದೂ ಅಲ್ಲ ಎಂದು ಕಂಡು ಬರುತ್ತದೆ. ಅಲ್ಲಿ ಉದಾಹರಿಸಿದ ಕೆಲ ಉದಾಹರಣೆ ಕೊಡಬಹುದಿತ್ತು, ಸಮಯಾಭಾವ ಹಾಗೂ ಲೇಖನದ ದೀರ್ಘತೆಗೆ ಕಟ್ಟು ಬಿದ್ದು ಅವೆಲ್ಲಾ ಕೊಡುತ್ತಿಲ್ಲ.

        ಒಂದೇ ಉದಾಹರಣೆ ಕೊಡುತ್ತೇನೆ. ಶ್ರೀ ರಾಮಕೃಷ್ಣ ಆಶ್ರಮ, ಬೆಂಗಳೂರು, ಇವರು ಮುದ್ರಿಸಿದ ಲಲಿತಾಸಹಸ್ರನಾಮ ಸ್ತೋತ್ರ ಮತ್ತು ಭಾಷ್ಯ ಸಹಿತವಿದೆ. ಅದರಲ್ಲಿರುವಂತೆಯೇ ಸಾಮಾನ್ಯ ಮುದ್ರಿತ ಎಲ್ಲಾ ಪುಸ್ತಕಗಳೂ ಇರಬಹುದು ಅಥವಾ ಸ್ವಲ್ಪ ವ್ಯತ್ಯಾಸವಿರಬಹುದು. ಅಲ್ಲಿ ಸಹಸ್ರನಾಮ ರಹಸ್ಯದ ಬಗ್ಗೆ ಕವಿ ಒಂದು ಉಪಮೆ ಕೊಡುತ್ತಾನೆ. ಆ ಉಪಮೆ ಎಷ್ಟು ಅಸಹ್ಯವಾಗಿದೆ ಎಂದರೆ ಖಂಡಿತಾ ಲಲಿತಾಸಹಸ್ರನಾಮದ ಆರಂಭ ಎಂದು ಅದು ಹೇಳುವ ಕಾಲದ ಜನರಿಗೆ ಆ ಕಲ್ಪನೆಯೂ ಇರಲು ಸಾಧ್ಯವಿಲ್ಲ. ಯಾವುದೇ ಸಾಹಿತ್ಯದಲ್ಲಿ ಕವಿಗೆ ಸಮಕಾಲೀನ ವಿಧ್ಯಮಾನವೇ ಉಪಮಾಲಂಕಾರವಾಗಿ ಬಳಸಲ್ಪಡುವುದು ಸಾಮಾನ್ಯ ಎಂದು ಸಾಹಿತ್ಯಾಭ್ಯಾಸಿಗಳಿಗೆ ತಿಳಿದಿದೆ. ಹಾಗಿದ್ದರೆ ಆ ಉಪಮೆಯ ಕಾಲ ಯಾವುದು ಊಹಿಸಿ. ಆ ಶ್ಲೋಕವನ್ನು ಉದಾಹರಿಸುತ್ತೇನೆ ಮತ್ತು ಗ್ರಂಥಕರ್ತೃವು ಕೊಟ್ಟ ಅರ್ಥವನ್ನು ಯಥಾವತ್ತಾಗಿ ಬರೆದಿರುತ್ತೇನೆ ಓದಿಕೊಳ್ಳಿ -

ಸ್ವಮಾತೃ ಜಾರ ವದ್ಗೋಪ್ಯಾ ವಿದ್ಯೈಪೇತ್ಯಾಗ ಮೂಜಗಃ |
ತತೋತಿ ಗೋಪನೀಯಾ ಮೇ ಸರ್ವ ಪೂರ್ತಿಕರೀ ಸ್ತುತಿಃ ||

ಭಾಷ್ಯ:- ಮಗನು ತನ್ನ ತಾಯಿಯ ಜಾರಪುರುಷನನ್ನು ಗೋಪ್ಯವಾಗಿಡುವಂತೆ ಈ ವಿದ್ಯೆಯನ್ನು ರಹಸ್ಯವಾಗಿಡಬೇಕೆಂದು ಆಗಮಗಳು ಹೇಳುತ್ತವೆ. ಆದುದರಿಂದ ಸರ್ವಪೂರ್ತಿಕರವಾದ ನನ್ನ ಸ್ತುತಿಯು ಅತಿ ಗೋಪನೀಯವಾದುದು.

        ಈ ಲಲಿತೆಯ ಗೌಪ್ಯತೆಯ ಬಗ್ಗೆ ಕೊಡುವುದಕ್ಕೆ ಬೇರೆ ಯಾವ ಉಪಮೆಯೂ ಸಿಕ್ಕಿಲ್ಲವೇ? ಪ್ರಾಚೀನ ಕಾಲದಲ್ಲಿ ಈ ಕಲ್ಪನೆಯು ಇರಲೂ ಸಾಧ್ಯವೇ? ನೀವೇ ಆಲೋಚಿಸಿ, ಒಂದು ಇದ್ದೀತು ಎಂದು ನೀವು ವಾದಿಸುವುದಿದ್ದರೆ ಆ ಶ್ಲೋಕವೇ ಹೇಳುವಂತೆ, ಯಾವ ಜಾರ ಪುತ್ರ ಇದನ್ನು ಬಳಕೆಗೆ ತಂದ? ಸಾರ್ವತ್ರಿಕವಾಗಿ ಅಷ್ಟು ಮಾತ್ರವಲ್ಲ, ಗೌಪ್ಯತೆಯನ್ನು ಕಾಪಾಡಲಾರದ ಆ ಮಗನನ್ನು ಹಡೆದ ತಾಯಿಯ ನೋವಿನ ಕಲ್ಪನೆ ಅವನಿಗೆ ಇದೆಯೇ? ತನ್ನ ಹೆತ್ತ ತಾಯಿಯ ಗೌಪ್ಯತೆಯನ್ನೇ ಕಾಪಾಡಲಾರದ ಮಗನು ಅವಳ ಭಯಂಕರ ಊಹಿಸಲಾರದ ಯಾತನೆಗೆ ಮಾತೃ ಸ್ವರೂಪಿ ಎಂದು ಹೇಳುವ ಈ ಲಲಿತೆಯ ಅನುಗ್ರಹ ಹೇಗಾಗಲು ಸಾಧ್ಯ? ಆಲೋಚಿಸಿ, "ಮಾತೃ ದೇವೋ ಭವ, ಪಿತೃ ದೇವೋಭವ" ಎಂಬ ವಾಕ್ಯ ಸುಳ್ಳೆ? ವಿಚಾರ ಕಟುವಾಗಿದ್ದರೆ ಕ್ಷಮಿಸಿ. ಯಾವುದೇ ವಿಷಯ ಇದ್ದದ್ದು ಇದ್ದಂತೆ ಹೇಳಿದರೆ ಬಾಧಕವಿಲ್ಲ. ಹೀಗೆಲ್ಲಾ ಆದಾಗ ಈ ಪ್ರಶ್ನೆ ಉದ್ಭವಿಸುವುದು ಸಹಜ ತಾನೇ? ಪ್ರಪಂಚದಲ್ಲಿ ಎಲ್ಲಾ ಕಡೆ ಸಾರ್ವತ್ರಿಕವಾಗಿ ಬಳಸುವ, ಅನುಷ್ಠಾನಿಸುವ ಶ್ರೀವಿಧ್ಯಾ ಉಪಾಸಕರು ನಿಮ್ಮ ಗುರುಗಳ ಕಡೆ ನೋಡಿಕೊಳ್ಳಬೇಕಲ್ಲವೇ? ಇದು ನ್ಯಾಯವೇ? ಸೂಕ್ತವೇ? ಅದಕ್ಕೆ ಪ್ರಮಾಣವಿಡುವುದಕ್ಕೆ ತಾಯಿಯ ಶೀಲವೇ ಬೇಕೇ? ಇಂತಹಾ ಪರಿಸ್ಥಿತಿ ಯಾವಾಗ ಇತ್ತು? ಒಂದು ಕಾಲದಲ್ಲಿ ಇತ್ತು. ಮುಸ್ಲಿಮರ ಆಕ್ರಮಣ ಭಾರತದ ಮೇಲಾದಾಗ ಮಿತಿ ಮೀರಿದ ಅತ್ಯಾಚಾರ ನಡೆದು ಹೋದವು. ಆ ಕಾಲದಲ್ಲಿ ಜನಜೀವನದಲ್ಲಿ ಈ ವಿಚಾರ ಅಷ್ಟು ಪ್ರಾಧಾನ್ಯತೆ ಹೊಂದಿರಲಿಲ್ಲ. ಇದರ ಪ್ರಾಚೀನತೆ ಅರ್ಥಮಾಡಿಕೊಳ್ಳಿ. ಹೀಗೆ, ಲಲತಾ ಸಹಸ್ರನಾಮದಲ್ಲಿರತಕ್ಕ ನಾಮಾವಳಿಗಳೂ ಮತ್ತು ಫಲಶ್ರುತಿಯಲ್ಲೂ ಇಂತಹಾ ಹಲ ಉದಾಹರಣೆ ಕೊಡಬಲ್ಲೆ, ಕಾರಣ ನನಗೆ ಆ ಭಾಷೆ ಅರ್ಥವಾಗದ್ದು. ನಿಮಗೆ ಅರ್ಥವಾಗಲಿ ಎಂದು ಹಾರೈಸುತ್ತೇನೆ.

        ಇನ್ನು ಲಲಿತೆಯ ಪರಮ ಭಕ್ತರೂ, ಉಪಾಸಕರೂ ಆದ ಅಗಸ್ತ್ಯರು ಅವರ ಮುಂದಿನ ಜೀವನ ಅವಲೋಕಿಸಿದಾಗ ಸ್ಥಳ ಪುರಾಣ ಚರಿತ್ರೆ ಹೇಳುವಂತೆ ಕಾವೇರಿಯೇ ಲೋಪಾಮುದ್ರೆ ಎಂಬುದು ನಿಜವಾದರೆ ಅವರಿಗೆ ಪತ್ನೀ ವಿಯೋಗವು ಮತಿ ಭ್ರಮಣೆಯನ್ನು ಉಂಟು ಮಾಡಿತೇ? ಈ ಹುಚ್ಚಿಗೆ ಕಾರಣವೇನು? ಲಲಿತೆಯನ್ನು ಯಾಕೆ ಮರೆತರು? ಅದು ಸರಿಯಲ್ಲವೆಂದೇ? ಅದು ಶುದ್ಧ ವಿಧ್ಯೆಯಲ್ಲವೆಂದೇ? ಅವರಿಗೆ ಪತ್ನಿ ವಿಯೋಗಕ್ಕೆ ಕಾರಣವೇನು? ಕಾವೇರಿ ನದಿ ಉಗಮ ಸ್ಥಾನದಿಂದ ಸಮುದ್ರ ಸಂಗಮದವರೆಗೆ ತಮ್ಮ ಉಪಾಸನಾ ದೇವತೆಯ ಬಿಟ್ಟು ಶಿವಲಿಂಗ ಸ್ಥಾಪಿಸಿದ್ದೇಕೆ? ತಾನು ಲಲಿತಾ ಉಪಾಸನೆ ಮಾಡಿದ ಪಾಪ ತೊಳೆಯಲೆಂದೇ ಅಥವಾ ಲಲಿತೆ ಅವರಿಗೆ ಸಂಪೂರ್ಣ ಮತಿ ಭ್ರಮಣೆಯುಂಟು ಮಾಡಿದಳೇ? ಇದಕ್ಕೆ ಉತ್ತರವಿದೆಯೇ? ಎಲ್ಲಾ ಪಾಪಗಳನ್ನೂ ಕರ್ಮವನ್ನೂ ನಾಶಮಾಡತಕ್ಕ ಅರ್ಹತೆ ಇರುವ ಲಲಿತೆ ಅವರಿಗೆ ಮಾತ್ರಾ ಇನ್ಯಾರಿಗೂ ಸಿಗಬಾರದೆಂದೇ? ಹಾಗಿದ್ದಲ್ಲಿ ಅದಕ್ಕೆ ಕಾರಣವೇನು? ಒಟ್ಟಾರೆ ಗಂಡ-ಹೆಂಡಿರಿಬ್ಬರೂ ಪರಮ ಪದ ಸೇರುವುದು ಬಿಟ್ಟು ಶಿವನ ಪಾದ ತೊಳೆಯುತ್ತಿದ್ದಾರಲ್ಲ! ಇದಕ್ಕೆ ಕಾರಣವೇನು? ಲಲಿತೋಪಾಸನೆಯ ದೋಷವೇ? ಅವರಿಗೆ ಮುಕ್ತಿ ಎಂದು? ಅಥವಾ ಹಾಗಿಲ್ಲದಿದ್ದಲ್ಲಿ ಲಲಿತಾ ದೇವಸ್ಥಾನ ಯಾಕೆ ಕಟ್ಟಲಿಲ್ಲ? ಅದು ಪೂಜಾರ್ಹವಲ್ಲವೇ? ಅಥವಾ ಶ್ರೀಚಕ್ರ ಅವರಿಗೆ ಗೊತ್ತಿರಲಿಲ್ಲವೇ? ಬರೇ ಲಲಿತೆ ಮಾತ್ರ ತಿಳಿದಿದ್ದರೇ? ಏಕೆಂದರೆ ಈಗ ಶ್ರೀಚಕ್ರ ಸ್ವರೂಪದಲ್ಲಿ ದೇವಾಲಯ ಕಟ್ಟುತ್ತಿದ್ದಾರೆ ಮಹಾಜ್ಞಾನಿಗಳು. ಆಗ ಅದಕ್ಕೆ ಅವಕಾಶವಿರಲಿಲ್ಲವೇ ಅಥವಾ ಕಟ್ಟಬಾರದೆಂದೇ? ಹಾಗಿದ್ದರೆ ಈ ದೇವಾಲಯ ಹೇಗೆ ಕಟ್ಟಿದರು? ಒಬ್ಬ ಸ್ಥಪತಿಯೂ ತನ್ನ ಪ್ರಾಣವನ್ನೇ ಪಣವಾಗಿಡುವುದಕ್ಕೆ ಸಿದ್ಧನಾದ ವಿಚಾರ ತಿಳಿದುಬಂದಿದೆ.

        ಆದರೆ, ದೇವಾಲಯದ ಸ್ವರೂಪವೂ, ದೇವತಾ ಸ್ವರೂಪವೂ ಒಂದೇ ಆದಲ್ಲಿ ದೇವಾಂಶ ಅಂದರೆ ೪೦ ಕಲೆಗಳು ಅಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಗೋಚರಿಸಲಿಲ್ಲವಲ್ಲ. ಏಕೆಂದರೆ ಎರಡು ಆಯಸ್ಕಾಂತಗಳ ಮಧ್ಯದಲ್ಲಿ ಒಂದು ಕಬ್ಬಿಣವಿಟ್ಟರೆ ಆಗ ಕಬ್ಬಿಣವನ್ನು ಗಾತ್ರದಲ್ಲಿ ದೊಡ್ಡದಾದ ಆಯಸ್ಕಾಂತವೇ ಆಕರ್ಷಿಸುತ್ತದೆ ಎಂಬುದು ವೈಜ್ಞಾನಿಕ ಸಿದ್ಧಾಂತ; ನಿಮಗೆಲ್ಲ ಗೊತ್ತಿರಬಹುದು. ಹಾಗಿದ್ದಾಗ ಒಳಗಿರುವ ಸಣ್ಣ ಶ್ರೀಚಕ್ರವು ಅದರ ಸಾವಿರ ಪಟ್ಟು ದೊಡ್ಡದಾದ ಶ್ರೀಚಕ್ರ ರೂಪದ ಕಟ್ಟಡದಲ್ಲಿ ವಿಲೀನವಾಗಬಹುದೇ ವಿನಃ ತನ್ನತನವನ್ನು ಹೇಗೆ ಸ್ಥಾಪಿಸುತ್ತದೆ? ಇದಕ್ಕೆ ಪ್ರಾಣವೇ ಪಣವಾಗಿಡಬೇಕೇ? ಮೂರ್ಖತ್ವವಾದೀತು. ಸಣ್ಣ ಎರಡು ಆಯಸ್ಕಾಂತ ಕಲ್ಲನ್ನು ಹಿಡಿದು ಪರೀಕ್ಷೆ ಮಾಡಿ ನೋಡಲಿ, ಅವರಿಗೆ ತಿಳಿಯುತ್ತದೆ. ಹಿರಿಯವರಾದ ಅವರಿಗೆ ನೋವುಂಟು ಮಾಡುವ ಉದ್ದೇಶವಲ್ಲ. ಆದರೆ ಮಕ್ಕಳಾಟಿಕೆ, ತಾಯಿಯ ಮುಂದೆ ಪ್ರತಿ ಮಗುವೂ ಮಾಡುತ್ತದೆ. ಆದರೆ, ಮುಂದೆ ತಾನು ಬೆಳೆದಾಗಲೂ ಅದೇ ತಾಯಿ, ಅದೇ ಮಗು ಆದರೆ ವರ್ಷ ಕೆಲವು ಕಳೆದಿರುತ್ತದೆ. ಆಗ ಮಕ್ಕಳಾಟಿಗೆ ಮಾಡಿದರೆ ಸಮಾಜ ನಗಲಾರದೇ? ಆಲೋಚಿಸಿ. ಈ ರೀತಿಯ ನಾಟಕ ಬೇಕೇ? ಸಹಜತೆಗೆ ಒತ್ತು ಕೊಟ್ಟು ದೇವಾಲಯ ನಿರ್ಮಿಸಿದ್ದರೆ, ಈ ಸಮಸ್ಯೆ ಉಂಟಾಗುತ್ತಿತ್ತೇ? ಅವರವರ ಅನುಷ್ಠಾನ ಅವರವರಿಗೆ, ಜನರಾಡಿಕೊಳ್ಳಲು ಅವಕಾಶವಿರುತ್ತಿರಲಿಲ್ಲವಲ್ಲವೇ? ಆಲೋಚಿಸಿ, ವಿಷಯ ಕಟುವಾಗಿದ್ದರೆ ಕ್ಷಮಿಸಿ. ಯಾಕೆಂದರೆ ನಾನು ಹೇಳುವ ಧಾಟಿಯೇ ಇದು. 

    
ಇನ್ನೊಬ್ಬ ವಾಸ್ತುಶಾಸ್ತ್ರಿ ಹೇಳಿದರು, ಭಾರತದಲ್ಲಿ ಶ್ರೀನಗರವೆಂಬ ಒಂದು ನಗರವೇ ಕಟ್ಟಲ್ಪಟ್ಟಿದೆ; ಶ್ರೀಚಕ್ರದ ಆಕಾರದಲ್ಲಿ ಎಂದು. ಅದು ಯಾವುದೂ ಬಲ್ಲಿರಾ? ಕಾಶ್ಮೀರದ ರಾಜಧಾನಿಯಾಗಿರುವುದು. ಆದರೆ ಅಲ್ಲಿನ ಪರಿಸ್ಥಿತಿ, ದೈವ ದೇವರಿಗೆ ಇರತಕ್ಕ ಮಾನ್ಯತೆ, ಅಲ್ಲಿನ ಜನಜೀವನ ನಿಮಗೆ ನಿತ್ಯವೂ ಸುದ್ದಿ ಮಾಧ್ಯಮದಲ್ಲಿ ಬರುತ್ತಿದೆ; ನಾನೇನು ಹೇಳಬೇಕಾಗಿಲ್ಲ. ಇದು ಇಂದಿನ ಪರಿಸ್ಥಿತಿಯಲ್ಲ. ಆ ನಗರ ನಿರ್ಮಾಣದ ಕಾಲದಿಂದಲೂ ಆ ಪರಿಸ್ಥಿತಿ ಎಂದು ನಿಮಗೆ ಚರಿತ್ರೆಯ ಪರಿಚಯವಿದ್ದರೆ ತಿಳಿಯುತ್ತದೆ. ಈ ವಿಚಾರ ಒಬ್ಬ ಪ್ರಖ್ಯಾತ ವಾಸ್ತುಶಾಸ್ತ್ರಿ ಹೇಳಿದ್ದು. ನೀವೇ ಆಲೋಚಿಸಿ, ವಾಸ್ತುಶಾಸ್ತ್ರದ ಮೇಲೆ ಇಂತಹಾ ಪ್ರಯೋಗಾತ್ಮಕ ಪರೀಕ್ಷೆ ಬೇಕೇ? ಅದೂ ಏನೂ ಅರಿಯದ ಅಮಾಯಕ ಜನರ ಮೇಲೆ ಅವರಿಗೇ ತಿಳಿಯದಂತೆ! ನಿಮ್ಮನ್ನು ಪ್ರಯೋಗ ಪಶುಗಳನ್ನಾಗಿ ನೋಡಿಕೊಳ್ಳುವುದು ನ್ಯಾಯವೇ? ಆಲೋಚಿಸಿ.

   ಸಹಜತೆಗೆ ಒತ್ತು ಕೊಟ್ಟು ಪ್ರಕೃತಿ ಮತ್ತು ರಕ್ಷಣೆಯ ದೃಷ್ಠಿಯಿಂದ ಗೃಹ ನಿರ್ಮಾಣ ಕಲೆ ಆರಂಭವಾಯಿತೇ ವಿನಃ ಈ ವಾಸ್ತುಶಾಸ್ತ್ರಗಳು ಬೇರೆ ಯಾವುದೇ ಕಾರಣಕ್ಕಾಗಿಯಲ್ಲ. ಕಲ್ಪನೆ ಹಾಗಿಲ್ಲ, ಅದಕ್ಕೆ ಕಟ್ಟುವ ಮನೆಯು ಸಹಜ ರೂಪದಲ್ಲಿರಬೇಕೇ ವಿನಃ ನಮ್ಮ ಮನೆಯ ನಾಯಿಯ ರೂಪದಲ್ಲಿ ನನ್ನ ಮನೆ ಇರಬೇಕು, ನನಗೆ ಅದರ ಮೇಲೆ ಹೆಚ್ಚು ಪ್ರೀತಿ. ನಾನು ಕಾರು ತಯಾರಿಕಾ ಸಂಸ್ಥೆಯ ಯಜಮಾನ, ನನ್ನ ಮನೆಯ ವಿನ್ಯಾಸ ಹಡಗಿನಂತಿರಬೇಕು ಎಂಬ ಕಲ್ಪನೆ ಬಂದರೆ ಅದು ಹುಚ್ಚುತನವಾಗುತ್ತದೆ. ಈ ವಿನ್ಯಾಸಗಳೆಲ್ಲಾ ಆಯಾಯ ಉದ್ದೇಶಗಳಿಗೆ ಮಾತ್ರ ಉಪಯುಕ್ತವಲ್ಲವೇ, ಹಾಗೆಯೇ ವಾಸ್ತು ಸಹಜವಾಗಿರಲಿ. ನಿಮ್ಮ ಕಲ್ಪನೆ ಬೇಕಿದ್ದರೆ ಆ ವಾಸ್ತುವಿಗೆ ಒಳಗೊಂದು ಸೌಲಭ್ಯ ಕಲ್ಪನೆಯಲ್ಲಿರಲಿ, ಆದರೆ ಕಲ್ಪನೆಯು ಹುಟ್ಟು ವಿನ್ಯಾಸವಾಗದಿರಲಿ, ಯಾವುದೋ ಪ್ರಾಣಿ, ವಾಹನ, ದೇವರು, ಯಂತ್ರಗಳು ನಿಮ್ಮ ಗೃಹ ನಕ್ಷೆಯಾಗದಿರಲಿ, ಅದು ಸೂಕ್ತವೂ ಅಲ್ಲ. ಶ್ರೀಚಕ್ರದ ಆಕಾರದಲ್ಲಿ ಮನೆ ಕಟ್ಟಿ ಅದರಲ್ಲಿ ವಾಸಮಾಡಬೇಕಾದ ಅನಿವಾರ್ಯತೆ ಏನಿದೆ? ಪ್ರಪಂಚದಲ್ಲಿ ಬೇರೆಲ್ಲಾ ಜನರು ಬೇರೆ ರೀತಿಯ ವಿನ್ಯಾಸದ ಮನೆಯಲ್ಲಿ ಬದುಕಿಲ್ಲವೇ? ದಾರ್ಶನಿಕರಾಗಿಲ್ಲವೇ? ಮನೇನೇ ಅಲ್ಲದೆ ಜೋಪಡಿಗಳಲ್ಲಿ ವಾಸಿಸಿದ ಅನಕ್ಷರಿಗಳೆಷ್ಟು ಜನ ಮಹಾಪುರುಷಾಗಿಲ್ಲ? ಪರ್ಣಶಾಲೆಯಲ್ಲೇ ವಾಸಿಸಿದ ತಪಸ್ವಿಗಳು ಋಷಿಗಳಾಗಲಿಲ್ಲವೇ? ಬ್ರಹ್ಮಜ್ಞಾನಿಗಳಾಗಲಿಲ್ಲವೇ? ವಿಚಿತ್ರ ವಿನ್ಯಾಸವೇ ನಿಮ್ಮನ್ನು ಉತ್ತುಂಗಕ್ಕೇರಿಸುವುದಾದರೆ, ಪ್ರಪಂಚಕ್ಕೆ ನಿಯಮಬದ್ಧತೆ ಅಥವಾ ಕಾನೂನು ಎಂಬ ಚೌಕಟ್ಟನ್ನು ಸೃಷ್ಟಿಸಿದವರು ಮೂರ್ಖರೇ? ಅವರು ನಡೆದ ಅಥವಾ ಹಾಕಿದ ಮಾರ್ಗ ಸರಿಯಲ್ಲವೇ? ಸರಿಯಲ್ಲವಾದರೆ ಬಿಡಿ, ನೀವು ಹೇಗೆ ಬೇಕಾದರೂ ನಡೆಯಿರಿ, ನಿಮಗೆ ಸ್ವಾತಂತ್ರವಿದೆ. ಅಮಾಯಕ ಜನರನ್ನು ಬಲಿಗೊಡಬೇಡಿ. ನಿಮ್ಮ ದೇವರು ನಿಮಗಾಗಿರಲಿ, ಎಲ್ಲರಿಗೂ ವೇಷ ತೆಗೆಯುವ ಭ್ರಾಂತಿ ಹುಟ್ಟಿಸಬೇಡಿ. ಅವರನ್ನೂ ಮೂರ್ಖರನ್ನಾಗಿಸಬೇಡಿ. ಇದೇ ನಿಮ್ಮಲ್ಲಿ ಪ್ರಾರ್ಥನೆ. ಇವಿಷ್ಟು ವಿಷಯಗಳಿಂದ ನಿಮಗೆ ಅರ್ಥವಾಗಿರಬಹುದು, ಅದು ಸಾರ್ಥಕವಾದರೆ ಧನ್ಯೋಸ್ಮಿ.
(ಸಶೇಷ..)

ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರಚಿಕ್ಕಮಗಳೂರು


(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯) 

4 comments:

 1. plz translate it in english so it can spread all over the world

  ReplyDelete
  Replies
  1. Publishing in Kannada is done in my limited time and resource. Anybody can pick up the translation work.

   Delete
 2. You asking only questions. There is no important subject in this article about Sri Chakra

  ReplyDelete
  Replies
  1. Veda Brahma Shri Venkatesh Joshi, can't you use the links provided in the right side list in this blog? Also "Veda Brahma" didn't read the instruction given in the starting of the article? This article is one among 11 articles. If all 11 articles are read together, then only can be understood. "Veda Brahma Sri" can you answer the questions posed in this article?

   Delete