Thursday, 3 May 2018

ವಾತಾಪಿ ಜೀರ್ಣೋಭವ vs ವಾತಾಪಿ ಪೀವ ಇದ್ಭವ


ಪೌರಾಣಿಕವಾಗಿ ಒಂದು ದೃಷ್ಟಾಂತವನ್ನು ನೋಡೋಣ. ವಾತಾಪಿ ಎಂಬ ರಾಕ್ಷಸನು ಊಟದಲ್ಲಿ ಸೇರಿಕೊಂಡು ತಿಂದವರ ಹೊಟ್ಟೆ ಬಗೆದು ಅವರನ್ನು ಸಾಯಿಸುತಿದ್ದ ಎಂದು ಕಥೆ ಬರುತ್ತದೆ. ಒಮ್ಮೆ ಅಗಸ್ತ್ಯರಿಗೆ ಆ ರೀತಿ ಮಾಡಲು ಹೋಗಿ ಅವರ ಹೊಟ್ಟೆ ಸೇರಿದನು. ಅಗಸ್ತ್ಯರು "ವಾತಾಪೀ ಜೀರ್ಣೋಭವ" ಎಂದು ಅವನನ್ನೇ ಜೀರ್ಣಿಸಿಬಿಟ್ಟರು ಎಂದು ವ್ಯಾಖ್ಯಾನ ಸಿಗುತ್ತದೆ. 



ದ್ರಾವಿಡ ಸೊಗಡನ್ನು, ಆರ್ಯ ಸಂಸ್ಕೃತಿಯನ್ನೇ ಅರಿಯದ ಮೂರ್ಖ ವಿದೇಶೀ ಬಂಡುಕೋರರು ಅಗಸ್ತ್ಯರು ಈ ರೀತಿ ಮಾಂಸಭಕ್ಷಣೆ ಮಾಡಿದರು ಎಂದೂ ವ್ಯಾಖ್ಯಾನಿಸಿರಬಹುದು. ಆದರೆ ಅದು ಶುದ್ಧ ಸುಳ್ಳು. 

ಋಗ್ವೇದದಲ್ಲಿ ಗಮನಿಸಿದರೆ ಅಗಸ್ತ್ಯರು "ವಾತಾಪಿ ಪೀವ ಇದ್ಭವ" ಎಂದಿದ್ದಾರೆಯೇ ಹೊರತು ವಾತಾಪಿ ಜೀರ್ಣೋ ಭವ ಎಂದಿಲ್ಲ. ಅಂದರೆ ಆ ಮಂತ್ರದ ಉದ್ದೇಶಾರ್ಥದಲ್ಲಿ ಅಸಹಜ ವಾತಕ್ಕೆ ಚಿಕಿತ್ಸಾ ವಿಧಿಯನ್ನು ಹೇಳಿದರು. ವಾತ + ಅಪಿ + ಪೀವ + ಇದ್ + ಭವ = ವಾತ ಸಮಸ್ಯೆಯಾಗದಂತೆ ನೀರಿನೊಂದಿಗೆ ಆಹಾರವು ಸರಿಯಾಗಿ ಸೇರಿ ಜೀರ್ಣವಾಗುವ ಆರೋಗ್ಯ ಸೂತ್ರವನ್ನು ಬ್ರಾಹ್ಮಿ ಭಾಷೆಯ ಸೂಕ್ಷ್ಮ ಸಂಕೇತಗಳಲ್ಲಿ ಹೇಳಿದ್ದಾರೆ. ಅಲ್ಲಿ ವೇದದ ಸ್ವರಗಳಾದ ಉದಾತ್ತ, ಅನುದಾತ್ತ, ಸ್ವರಿತಗಳೂ ಅರ್ಥ ಸೂಚಕವಾಗಿರುತ್ತವೆ. 

ಪೌರಾಣಿಕ ಕಲ್ಪನೆ ತಪ್ಪೇ? ಕಥೆಗಳನ್ನು ಬೇರೆಬೇರೆಯವರು ಬೇರೆಬೇರೆ ಕಾರಣಕ್ಕೆ ಸೇರಿಸಿರುತ್ತಾರೆ. ಆದರೆ ಅದನ್ನು ವೇದದಿಂದ ವೇದಭಾಷೆಯಲ್ಲಿ ವಿಚಾರ ಮಂಥನ ಮಾಡಿ ವೇದ್ಯವಾಗಬೇಕು. ಆಗ ಪೌರಾಣಿಕವಾಗಿ "ವಾತಾಪಿ ಜೀರ್ಣೋ ಭವ" ಎಂಬ ಬದಾಲಾದ ವಾಕ್ಯವೂ ಅಸಹಜವಾಗಿ ವಾಯು ಸಂಯೋಜನೆ + ಜಲ + ಆಹಾರವು ವಾತಸಮಸ್ಯೆ  ಹುಟ್ಟಿಸದಂತೆ ಆಹಾರವು ಸರಿಯಾಗಿ ಜೀರ್ಣವಾಗಲಿ ಎಂಬ ಆಯುರ್ವೇದಿಯ ಸದಾಶಯವೇ ಕಂಡುಬರುತ್ತದೆ. ಆ ನಿಟ್ಟಿನಲ್ಲಿ ವಾತಾಪಿ ರಾಕ್ಷಸ ಎಂದರೆ ವಾತ ಸಮಸ್ಯೆ ಎಂಬ ವೇದದ ವೈಚಾರಿಕ ರಹಸ್ಯ ಹೇಳುವುದು ಪುರಾಣದ ಉದ್ದೇಶ. ಅದಕ್ಕಾಗಿ ದಶಲಕ್ಷಣ ಯುಕ್ತವಾಗಿ ಪುರಾಣ ಅಧ್ಯಯನ ಮಾಡಬೇಕು.

ಮೊದಲು ವೇದ ಕಲಿಯಬೇಕು, ನಿತ್ಯ ಓದಬೇಕು. ಸುಮ್ಮನೆ ಯಾರೋ ಏನೋ ಬರೆದರು ಎಂದು ಅದನ್ನು ಪರಾಮರ್ಷಿಸದೆ ವೇದ ಹೇಳಿದ್ದನ್ನು ತಿರುಚಿ ದೂಷಿಸಿ, ಅಪಪ್ರಚಾರವನ್ನೇ ವೃತ್ತಿಯಾಗಿಸಿಕೊಂಡರೆ ನರಕ ಸದೃಶ ಜೀವನ ಪ್ರಾಪ್ತಿಯಾಗುತ್ತದೆ ಹುಷಾರ್! ಮಾನವರಾಗಿ, ಪುಣ್ಯವಂತರಾಗಿ!

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a Comment