Thursday, 7 June 2018

ಭಗವದ್ಗೀತೆಯ ಕೆಲ ರಹಸ್ಯಗಳ ಅನಾವರಣ - ೧
ಪ್ರಸಕ್ತ ಲೇಖನದಲ್ಲಿ ಭಗವದ್ಗೀತೆಯ ಕೆಲ ರಹಸ್ಯಗಳನ್ನು ಅನಾವರಣಗೊಳಿಸಲಾಗಿದೆ. ಭಗವದ್ಗೀತೆಯು ಕೃಷ್ಣ ಕೃತವೆಂದು ಜನಜನಿತವಾಗಿದೆ. ಅದು ಸತ್ಯವೇ? ಎಂದು ಪರಿಶೀಲಿಸಿದಾಗ ಭಗವದ್ಗೀತೆಯು ಶಿವಪ್ರೋಕ್ತ, ಅಲ್ಲಿ ಕೃಷ್ಣಾರ್ಜುನರು ನಿಮಿತ್ತ ಮಾತ್ರವೆಂದು ಶೃತಿ ಸ್ಮೃತಿಗಳ ಆಧಾರದಿಂದ ತಿಳಿದುಬರುತ್ತದೆ. ಈಗಿನ ಪ್ರಕಟಿತ ಮಹಾಭಾರತದಲ್ಲಿ ಸಿಗುವ ಭಗವದ್ಗೀತೆಯಲ್ಲಿ ಕೃಷ್ಣ ಉವಾಚಎಂದು ಹೇಳದೆ ೨೮ ಕಡೆ ಭಗವಾನುವಾಚಎಂದು ಹೇಳುವುದೇ ಇದಕ್ಕೆ ಮೊದಲ ಸಾಕ್ಷಿ. ಇನ್ನೂ ಹೆಚ್ಚಿನ ವಿವರಗಳನ್ನು ಶೃತಿ-ಸ್ಮೃತಿಗಳಿಂದ ಉದ್ದರಿಸಲಾಗಿದೆ.

ಭಗವದ್ಗೀತೆಯು ಉತ್ಕೃಷ್ಟ ವೇದಾಂತ ಗ್ರಂಥ. ಕೃಷ್ಣನಿಂದ ನಮಗೆಲ್ಲ ಕೊಡಲ್ಪಟ್ಟಿದೆ. ಅದು ಉಪನಿಷತ್ ಸಾರ ಮತ್ತು ಮೋಕ್ಷಶಾಸ್ತ್ರ ಎಂದು ಪ್ರಸಿದ್ಧವಾಗಿದೆ. ಆದರೆ ಅಷ್ಟೇ ಅಪವ್ಯಾಖ್ಯಾನಕ್ಕೂ ಒಳಗಾಗಿದೆ. ಇದನ್ನು ಒಂದು ವೇದಾಂತ ಜ್ಞಾನದ ಗ್ರಂಥವೆಂದು ಪರಿಗಣಿಸುವ ಬದಲಾಗಿ ಭಗವಂತನ ಪರಮೋಚ್ಛ ವಾಣಿಯುಳ್ಳ ಗ್ರಂಥ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ತನ್ಮುಖೇನ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಕೃಷ್ಣನೇ ಪರಮೋಚ್ಛ ದೇವ, ಉಳಿದದ್ದೆಲ್ಲ ನೀಚ ಎಂಬ ರೀತಿಯಲ್ಲಿ ಕೆಲ ಮುತ್ಸದ್ದಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಕೃಷ್ಣನು ನಾನು ಪರಮೋಚ್ಛ ಎಂದು ಶ್ಲೋಕಗಳಲ್ಲಿ ಹೇಳಿದ್ದರೆ ಅದು ತನಗೆ ತಾನೇ ಹೇಳಿಕೊಂಡದ್ದಲ್ಲ. ಆದರೆ ಅಂಧಭಕ್ತರು ಅದನ್ನು ಕೃಷ್ಣನೇ ಪರಮೋಚ್ಛ ಎಂದು ವ್ಯಾಖ್ಯಾನ ಮಾಡಿಕೊಂಡರು. ಅದರ ಪುಷ್ಠಿಗೆ ಎಷ್ಟೆಷ್ಟೋ ಪ್ರಕ್ಷಿಪ್ತ ಸಂಹಿತೆಗಳನ್ನೇ ರಚಿಸಿಕೊಂಡರು. ಇನ್ನು ಪುರಾಣೇತಿಹಾಸಗಳಲ್ಲಿ ಪ್ರಕ್ಷಿಪ್ತಗಳನ್ನು ಸೇರಿಸಿದರು. ಇರುವ ಶ್ಲೋಕಗಳಿಗೆ ವಿಕ್ಷಿಪ್ತ ವ್ಯಾಖ್ಯಾನ ಮಾಡಿದರು. ದೇವಾನುದೇವತೆಗಳನ್ನು ಕೃಷ್ಣನ ಸೇವಕರಂತೆ ಬಿಂಬಿಸಿದರು. ಆದರೆ ವೇದ ವೇದಾಂತಗಳು ಎರಡಿಲ್ಲದ ಏಕಮೇವ ಬ್ರಹ್ಮನನ್ನೇ ಪ್ರತಿಪಾದಿಸಿವೆ. ವೇದಾಂತವು ಆತ್ಮವೇ ಬ್ರಹ್ಮನ್, ಎಲ್ಲರೊಳಗೆ ಅಡಗಿರುವುದದು ಎಂದು ಸಾರಿದೆ. ಹಾಗಾಗಿ ಆತ್ಮನಿಗಿಂತ ಪರಮೋಚ್ಛವಾದದ್ದು ಇನ್ನೊಂದಿಲ್ಲ. ಹಾಗಾಗಿ ಕೃಷ್ಣನು ನಾನು ಪರಮೋಚ್ಛಎಂದಿದ್ದರೆ ಅಲ್ಲಿ ನಾನು = ಆತ್ಮನ್ = ಬ್ರಹ್ಮನ್ ಎಂದರ್ಥ. ಭಗವದ್ಗೀತೆಯು ಎಲ್ಲಾ ದ್ವೈತ, ಅನೇಕಾಂತ ಭಾವಗಳ ಭಿನ್ನತೆಗಳನ್ನು ತೊಲಗಿಸಿ, ಆತ್ಮ ಮತ್ತು ಬ್ರಹ್ಮದ ಏಕತೆಯನ್ನು ಸಿದ್ಧಪಡಿಸಿ, ಆತ್ಮವೇ ಪರಮೋಚ್ಛವೆಂದು ಸ್ಥಾಪಿಸಿ, ನಮ್ಮಲ್ಲೇ ಇರುವ ಆ ನಾನು ಎಂಬುದರ ದರ್ಶನ ಮಾಡಿಸಿ ಕೊಡುತ್ತದೆ.

ಆದರೆ ಇಂತಹಾ ಅದ್ವೈತದ ಕೃತಿಯನ್ನು ತಪ್ಪಾಗಿ ಬಳಸಿಕೊಂಡು ಕೃಷ್ಣನು ಮಾತ್ರ ಪರಮೋಚ್ಛ, ಉಳಿದ ದೇವತೆಗಳು ನೀಚ, ಎಂಬಂತೆ ಬಿಂಬಿಸುತ್ತಿದ್ದಾರೆ. ವಿಶೇಷವಾಗಿ ಕೃಷ್ಣನನ್ನು ಮೇಲಿಟ್ಟು ಶಿವನನ್ನು ಕೆಳದರ್ಜೆಗೆ ಇಳಿಸುವ ಹುನ್ನಾರ ನಡೆದುಕೊಂಡು ಬಂದಿದೆ. ಆದರೆ ಶಿವನಿಲ್ಲದೆ ಮತ್ತಾವುದರ ಅಸ್ಥಿತ್ವವೇ ಇಲ್ಲವೆಂಬ ಸತ್ಯ ತಿಳಿಯದಾಯಿತೇ ಇವರಿಗೆ? ಭಗವದ್ಗೀತೆಯನ್ನು ಸರಿಯಾಗಿ ಪರಾಮರ್ಷಿಸಿದರೆ ಅದು ಪರಮೋಚ್ಛ ಶಿವನನ್ನೇ ಪ್ರತಿಪಾದಿಸಿದೆ ಎಂದು ಕಂಡುಬರುತ್ತದೆ. ವೇದೋಪನಿಷತ್ತುಗಳನ್ನು ಆಳವಾಗಿ ಚಿಂತಿಸಿದರೆ ಅವೆಲ್ಲವೂ ಶಿವನನ್ನೇ ಕುರಿತದ್ದಾಗಿರುವವು ಎಂಬ ಸತ್ಯ ಗೋಚರಿಸುತ್ತದೆ. ವೇದೋಪನಿಷತ್ ಪುರಾಣಗಳಲ್ಲಿನ ಬ್ರಹ್ಮನ್, ಪುರುಷ, ಆತ್ಮನ್ ಇತ್ಯಾದಿಗಳೆಲ್ಲ ಶಿವನೇ.

ಮಂಡನೆ :- ಭಗವದ್ಗೀತೆಯು ಕೃಷ್ಣ  ಕೃತವಲ್ಲ, ಶಿವನು ಕೃಷ್ಣನ ಮುಖೇನ ಹೇಳಿಸಿದ್ದಷ್ಟೆ.

ಮೊದಮೊದಲು ಓದಿದಾಗ ಇದೊಂದು ಅಚ್ಚರಿಯ ವಿಷಯ ಎಂದೆನಿಸುತ್ತದೆ. ಆದರೆ ಶಿವನು ಕೃಷ್ಣನನ್ನು ಮಾಧ್ಯಮವನ್ನಾಗಿ ಬಳಸಿಕೊಂಡು ವೇದಾಂತ ವಿಜ್ಞಾನವನ್ನು ಮನುಕುಲದಲ್ಲಿ ಸಾರಿದನು. ಶಿವನೇ ಕೃಷ್ಣನ ವಾಣಿಯಿಂದ ನುಡಿದ ವಿಚಾರವದು. ಅದು ಕೃಷ್ಣನನ್ನು ತುರೀಯ ಸ್ಥಿತಿಯಲ್ಲಿಟ್ಟು ಪರಮಾತ್ಮನಾದ ಶಿವನು ನುಡಿಸಿದ ವಿಚಾರ. ಇದು ಹಲವರಿಗೆ ಅಪಥ್ಯವಾಗಬಹುದು ಹಾಗೂ ಅಸತ್ಯವೆನ್ನಿಸಬಹುದು. ಆದರೆ ಇಂತಹ ಎಷ್ಟೋ ರಹಸ್ಯಗಳನ್ನು ವೈಷ್ಣವಾಚಾರ್ಯರು ಉದ್ದೇಶ ಪೂರ್ವಕವಾಗಿ ಮರೆಮಾಚಿದ್ದಾರೆ. ಇದನ್ನೆಲ್ಲ ಪ್ರಕಟಿಸದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಭಾಗವತ ಎಂಬ ಪುರಾಣದಲ್ಲಿ ಹೇಳಿದ ಕೃಷ್ಣನ ಜೀವನಶೈಲಿಯನ್ನೇ ಬೋಧಿಸುತ್ತಾರೆ. ಯಾವುದೇ ಮಿತಿ ಇಲ್ಲದ ದೇವನೆಂದು ಬಿಂಬಿಸುತ್ತಾರೆ. ಆದರೆ ಮಾನವ ರೂಪದಲ್ಲಿದ್ದ ಕೃಷ್ಣನಿಗೆ ಮಾನವ ಧರ್ಮದ ಮಿತಿ ಇದ್ದೇ ಇತ್ತು. ಹಾಗಾಗಿ ಮಹಾದೇವನ ಕೃಪಾಕಟಾಕ್ಷದೊಂದಿಗೇ ಕೃಷ್ಣನು ವ್ಯವಹರಿಸಿದ್ದು. ಮೂರ್ಲೋಕದಲ್ಲಿ ನರ ಮತ್ತು ನಾರಾಯಣರ ಹೊರತಾಗಿ ಇನ್ಯಾರೂ ಶಿವನ ಮಹಾಭಕ್ತರಿಲ್ಲ ಎಂಬಷ್ಟು ಪ್ರಸಿದ್ಧಿ ಇದೆ. ಆ ನಾರಾಯಣ ಎಂಬ ಮಹರ್ಷಿಯೇ ಕೃಷ್ಣ. ಹಾಗಾಗಿ ಕೃಷ್ಣನು ಶಿವನ ಪರಮಭಕ್ತ. ಅದಕ್ಕೆ ಸಾಕ್ಷಿಯಾಗಿ ಮಹಾಭಾರತದ ಸೌಪರ್ಣಿಕಾ ಪರ್ವದಲ್ಲಿಅಶ್ವತ್ಥಾಮನಿಗೆ ಶಿವನ ವಚನ ಗಮನಿಸಿ:

ಸತ್ಯಶೌಚಾರ್ಜವ ತ್ಯಾಗೈಸ್ತಪಸಾ ನಿಯಮೇನ |
ಕ್ಷಾಂತ್ಯಾ ಭಕ್ತ್ಯಾ ಧೃತ್ಯಾ ಬುದ್ಧ್ಯಾ ವಚಸಾ ತಥಾ || .ಭಾ. ೧೦--೬೦ ||
ಯಥಾವದ್ ಅಹಂ ಆರಾದ್ಧಃ ಕೃಷ್ಣೇನಾಕ್ಲಿಷ್ಟ ಕರ್ಮಣಾ |
ತಸ್ಮಾದ್ ಇಷ್ಟತಮಃ ಕೃಷ್ಣಾದ್ ಅನ್ಯೋ ಮಮ ವಿದ್ಯತೇ || .ಭಾ. ೧೦--೬೧ ||”

ಮಹಾಭಾರದಲ್ಲಿ ಶ್ರೀಕೃಷ್ಣನು ಶಿವನ ಪ್ರತಿ ಅನನ್ಯ ಭಕ್ತಿ ಭಾವದೊಳು ಭಜಿಸಿ, ವಿವಿಧ ಕಾಮ್ಯ ಸಿದ್ಧಿಗೆ  ಶಿವಾಶ್ರಯವನ್ನು ಬೇಡಿದ ಉಲ್ಲೇಖಗಳಿವೆ. ಆ ಶಂಕರನ ರಕ್ಷೆಯು ನಂಬಿದವರನ್ನು ಅಚಲವಾಗಿ ದೃಢವಾಗಿಸುತ್ತದೆ. ವೇದದ ಪ್ರಕಾರ ಇರುವುದು ಒಂದೇ ಭಗವಂತ. ಆತನು ಯಾವುದೇ ಯುದ್ಧಗಳಲ್ಲೂ ಅಜೇಯನಾಗಿರುತ್ತಾನೆ. ಆತನೇ ಮಹಾದೇವ. ಈ ಎಲ್ಲಾ ವಿಚಾರಗಳು ಮಹಾಭಾರತದಲ್ಲಿವೆ. ಆದರೆ ಈ ಲೇಖನಕ್ಕೆ ಅಪ್ರಸ್ತುತ.

. ಅರ್ಜುನನು ಮತ್ತೊಮ್ಮೆ ಭಗವದ್ಗೀತೆಯನ್ನು ಹೇಳಬೇಕು ಎಂದು ಕೇಳಿದಾಗ ಕೃಷ್ಣನು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದು.

ಇಲ್ಲಿ ವೈಷ್ಣವಾಚಾರ್ಯರು ಹೇಳದೆ ಮುಚ್ಚಿಟ್ಟಿರುವಂತಹಾ ಸತ್ಯವನ್ನು ಘೋಷಿಸುವ ಉದ್ದೇಶವಿದೆ. ಆ ಸತ್ಯವೇನೆಂದರೆ ಕೃಷ್ಣನು ಭಗವದ್ಗೀತೆಯನ್ನು ತಾನೇ ಸ್ವಂತವಾಗಿ ರಚಿಸಲಿಲ್ಲ, ತಾನೇ ಸ್ವಂತವಾಗಿ ಹೇಳಲೂ ಇಲ್ಲ. ಮತ್ತೊಂದು ದಿವ್ಯ ಶಕ್ತಿಯು ಕೃಷ್ಣನ ಮುಖೇನ ಗೀತೆಯನ್ನು ಹೇಳಿಸಿತು. ಅಲ್ಲಿ ಕೃಷ್ಣ ಒಂದು ಮಾಧ್ಯಮವಷ್ಟೆ. ಈ ಸತ್ಯವನ್ನು ಸ್ವಯಂ ಕೃಷ್ಣನೇ ಮಹಾಭಾರತದಲ್ಲಿ ನುಡಿದಿದ್ದಾನೆ

ವಿದಿತಂ ಮೇ ಮಹಾಬಾಹೋ ಸಂಗ್ರಾಮೇ ಸಮುಪಸ್ಥಿತೇ |
ಮಾಹಾತ್ಮ್ಯಮ್ ದೇವಕೀಮಾತಸ್ತಚ್ಚ ತೇ ರೂಪಮೈಶ್ವರಂ ||||
ಯತ್ತದ್ಭಗವತಾ ಪ್ರೋಕ್ತಮ್ ಪುರಾ ಕೇಶವ ಸೌಹೃದಾತ್ |
ತತ್ಸರ್ವಮ್ ಪುರುಷ ವ್ಯಾಘ್ರ ನಷ್ಟಮ್ ಮೇ ಭ್ರಷ್ಟಚೇತಸಃ ||||
ಮಮ ಕೌತೂಹಲಮ್ ತ್ವಸ್ತಿ ತೇಷ್ವರ್ಥೇಷು ಪುನಃ ಪುನಃ |
ಭವಾಮ್ಸ್ತು ದ್ವಾರಕಾಮ್ ಗನ್ತಾ ಚಿರಾದಿವ ಮಾಧವ ||||
ವೈಶಂಪಾಯನ ಉವಾಚ -
ಏವಮುಕ್ತಸ್ತು ತಮ್ ಕೃಷ್ಣಃ ಫಾಲ್ಗುಣಮ್ ಪ್ರತ್ಯಭಾಷತ |
ಪರಿಷ್ವಜ್ಯ ಮಹಾತೇಜಾ ವಚನಮ್ ವದತಾಮ್ ವರಃ ||||
ವಾಸುದೇವ ಉವಾಚ -
ಶ್ರಾವಿತಸ್ತ್ವಮ್ ಮಯಾ ಗುಹ್ಯೇ ಜ್ಞಾಪಿತಶ್ಚ ಸನಾತನಂ |
ಧರ್ಮಮ್ ಸ್ವರೂಪಿಣಮ್ ಪಾರ್ಥ ಸರ್ವಲೋಕಾಂಶ್ಚ ಶಾಶ್ವತಾನ್ ||||
ಅಬುದ್ಧ್ಯಾ ನಾಗ್ರಹೀರ್ಯಸ್ತ್ವಮ್ ತನ್ಮೇ ಸುಮಹದಪ್ರಿಯಮ್ |
ಸಾದ್ಯ ಪುನರ್ಭೂಯಃ ಸ್ಮೃತಿರ್ಮೇ ಸಂಭವಿಷ್ಯತಿ ||೧೦||
ನೂನಮಶ್ರದ್ದಧಾನೋಸಿ ದುರ್ಮೇಧಾ ಹ್ಯಸಿ ಪಾಂಡವ |
ಶಕ್ಯಮ್ ಪುನರ್ವಕ್ತುಮಶೇಶೇಣ ಧನಂಜಯ ||೧೧||
ಹಿ ಧರ್ಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ |
ಶಕ್ಯಮ್ ತನ್ಮಯಾ ಭೂಯಸ್ತಥಾ ವಕ್ತುಮಶೇಷತಃ ||೧೨||
ಪರಮ್ ಹಿ ಬ್ರಹ್ಮ ಕಥಿತಂ ಯೋಗಯುಕ್ತೇನ ತನ್ಮಯಾ | “ 
(.ಭಾ. ೧೪:೧೬:-೧೩)

ಇಲ್ಲಿ ಕೆಲ ಪ್ರಶ್ನೆಗಳು ಉದ್ಭವಿಸುತ್ತವೆ. ಕೃಷ್ಣನಿಗೆ ಭಗವದ್ಗೀತೆಯ ಶ್ಲೋಕಗಳನ್ನು ನೆನಪು ಮಾಡಿಕೊಳ್ಳಲು ಏಕೆ ಆಗಲಿಲ್ಲ? ಹಿಂದೆ ಹೇಳಿದ್ದನ್ನು ಪುನಃ ನೆನಪು ಮಾಡಿಕೊಂಡು ಹೇಳಲು ಸಾಧ್ಯವೇ ಇಲ್ಲಎಂದು ಏಕೆ ಹೇಳಿದ? ಹಿಂದೆ ಯೋಗಸ್ಥಿತಿಗೆ ಹೋದವನು ಇಂದು ಏಕೆ ಹೋಗಲಾಗಲಿಲ್ಲ?

ಈ ಸಂಭಾಷಣೆಯು ಮಹಾಭಾರತದ ಅಶ್ವಮೇಧ ಪರ್ವದಲ್ಲಿ, ಯುದ್ಧವಾಗಲೇ ಮುಗಿದು ಹೋಗಿದ್ದ ಸಂದರ್ಭದಲ್ಲಿ ಬರುತ್ತದೆ. ಹಾಗಾಗಿ ಯುದ್ಧರಂಗ, ಸಮಯಾವಕಾಶ ಇಲ್ಲ ಎನ್ನುವ ಹಾಗಿಲ್ಲ. ಮೇಲಾಗಿ ಯುದ್ಧರಂಗದಲ್ಲಿ ಸಮಯಾವಕಾಶ ಇಲ್ಲದಿರುವಾಗಲೇ ಅಷ್ಟು ಬೃಹತ್ತಾದ ೧೮ ಅಧ್ಯಾಯಗಳಲ್ಲಿ ವ್ಯಾಪ್ತ ೭೦೦ ಶ್ಲೋಕಗಳ ಭಗವದ್ಗೀತೆಯನ್ನು ಬೋಧಿಸಿದವನು, ಈಗ ಯುದ್ಧ ಮುಗಿದು ಶಾಂತಿ ಸ್ಥಾಪನೆಯಾದ ಮೇಲೆ, ಅದೂ ತನ್ನ ಪ್ರಿಯನಾದ ಪಾರ್ಥನೇ ಕೇಳುತ್ತಿರಬೇಕಾದರೆ ಕೃಷ್ಣನು ಏಕೆ ಪುನಃ ಬೋಧಿಸಲಾಗಲಿಲ್ಲ? ಅರ್ಜುನನು ತನಗೆ ಎಷ್ಟು ಪ್ರಿಯನೆಂದು ಇನ್ನಿತರೆ ಹಲವು ಸಂದರ್ಭಗಳಲ್ಲಿ ಸ್ವಯಂ ಕೃಷ್ಣನೇ ನುಡಿದಿರುವ ವಚನಗಳಿವೆ.

ಹಾಗಾಗಿ ಶ್ರೀಕೃಷ್ಣನು ಭಗವದ್ಗೀತೆಯ ಆದ್ಯ ಕರ್ತೃವಲ್ಲ; ಪ್ರವಾದಿ ಮಾತ್ರ. ಕೃಷ್ಣನು ಯೋಗದಿಂದ  ಯಾವುದೋ ದಿವ್ಯ ಶಕ್ತಿಯನ್ನು ಸಂಪರ್ಕಿಸಿದಾಗ, ಆ ಅದೃಶ್ಯ ನಿರ್ಗುಣ ಶಕ್ತಿಯೇ ಸಗುಣ ಕೃಷ್ಣನ ಮುಖೇನ ಭಗವದ್ಗೀತೆಯ ವಿಜ್ಞಾನವನ್ನು ಬೋಧಿಸಿತು. ಕೃಷ್ಣನು ಪುನಃ ಉಚ್ಛರಿಸಲು ಸಾಧ್ಯವೇ ಇಲ್ಲ ಎನ್ನುವಾಗ, ಅದು ಅವನ ನಿಯಂತ್ರಣಕ್ಕೂ ಸಿಕ್ಕದ ಮಹಾಶಕ್ತಿ ಎಂದೇ ಆಯಿತು. ಆ ಮಹಾಶಕ್ತಿಯು ಮಾನವರ ಶ್ರೇಯೋಭಿವೃದ್ಧಿಗಾಗಿ ಕೃಷ್ಣನೆಂಬ ಪ್ರವಾದಿಯ ಮುಖೇನ ಒಮ್ಮೆಲೇ ಭಗವತ್ ಗೀತೆಯನ್ನು ನುಡಿಸಿತು. ಹಾಗಾಗಿ ಆ ಮಹಾನ್ ಶಕ್ತಿಯನ್ನು ಪುನಃಪುನಃ ಆಹ್ವಾನಿಸಲು ಕೃಷ್ಣನಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಂತದಲ್ಲಿ ನೀವು ಈ ವಿಚಾರವನ್ನು ಒಪ್ಪದಿದ್ದರೂ ಚಿಂತೆಯಿಲ್ಲ. ಆದರೆ ಪೂರ್ವಾಗ್ರಹ ಬಿಟ್ಟು ಈ ವಿಚಾರಧಾರೆಯನ್ನು ಸಮಗ್ರವಾಗಿ ಅಧ್ಯಯನ ಮತ್ತು ಚಿಂತನೆ ನಡೆಸಿದರೆ, ಶಿವನೇ ಕೃಷ್ಣನ ಬಾಯಿಯಿಂದ ಭಗವದ್ಗೀತೆಯನ್ನು ನುಡಿಸಿದ್ದು ಎಂಬ ಸತ್ಯ ಗೋಚರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಂಡನೆ :-ಕೃಷ್ಣನಿಂದ ಕೊಡಲ್ಪಟ್ಟ ಭಗವದ್ಗೀತೆಯು ಮೂಲತಃ ಶಿವನಿಂದ ಕೊಡಲ್ಪಟ್ಟ ಈಶ್ವರ ಗೀತೆ

ಕೂರ್ಮ ಪುರಾಣದಲ್ಲಿ ಶಿವನಿಂದ ಬೋಧಿಸಲ್ಪಟ್ಟ ಉನ್ನತ ವೇದಾಂತ ಡಿಂಡಿಮದ ದಾಖಲೆ ಇದೆ. ಅದೇ ಈಶ್ವರ ಗೀತಾ’. ಈ ಬೋಧನೆಯು ಬ್ರಹ್ಮವಾದಿ ಋಷಿಗಳು ಮತ್ತು ರೋಮಹರ್ಷಣರ ನಡುವಿನ ಚರ್ಚೆಯಿಂದ ಆರಂಭವಾಗುತ್ತದೆ. ಋಷಿಗಳು ರೋಮಹರ್ಷಣರಿಗೆ ಬ್ರಹ್ಮನನ್ನು ಕುರಿತು ಬೋಧಿಸಿ ಎಂದು ಕೇಳುತ್ತಾರೆ. ಆ ಸಮಯಕ್ಕೆ ಅಲ್ಲಿಗೆ ರೋಮಹರ್ಷಣರ ಗುರುವಾಗಿದ್ದ ವ್ಯಾಸರು ಬರುತ್ತಾರೆ. ಸಹಜವಾಗಿ ವ್ಯಾಸರೇ ಬ್ರಹ್ಮವನ್ನು ವಿವರಿಸಬೇಕೆಂದು ರೋಮಹರ್ಷಣರು ಮೊರೆ ಇಡುತ್ತಾರೆ. ಆಗ ವ್ಯಾಸರು ಪುರಾತನ ಕಾಲದಲ್ಲಿ ಕೂರ್ಮಾವತಾರ ಸಂದರ್ಭದಲ್ಲಿ ಕೂರ್ಮವು ಋಷಿಗಳಿಗೆ ಆ ವಿಷಯವನ್ನು ಹೇಳಿತು; ಆದರೆ ಆ ಕೂರ್ಮವೂ, ತನ್ನ ಕಾಲಕ್ಕೂ ಪುರಾತನ ಕಾಲದಲ್ಲಿ, ಶಿವನು ನಾರಾಯಣ ಋಷಿಯ ಸಮ್ಮುಖದಲ್ಲಿ ಋಷಿಗಳಿಗೊರೆದ ವಿಷಯವೇ ಆಗಿದೆ ಎನ್ನುತ್ತದೆ. ಹಾಗಾಗಿ ಮೂಲ ವಿಚಾರವು ಶಿವನಿಂದಲೇ ವ್ಯಾಸರವರೆಗೆ; ಅಲ್ಲಿಂದ ಸಮಕಾಲೀನ ಋಷಿಗಳಿಗೆ ಬಂದದ್ದೆಂಬುದು ಸ್ಪಷ್ಟವಾಗುತ್ತದೆ.

ಸಂಪೂರ್ಣ ಈಶ್ವರ ಗೀತೆಯನ್ನು ಬೋಧಿಸಿದ ನಂತರ, ಆ ಗೀತೆಯು ಹೇಗೆ ಪರಂಪರಾನುಗತವಾಗಿ ಉಳಿದುಕೊಂಡು ಬಂದಿದೆ ಎಂದು ವಿವರಿಸುತ್ತದೆ. ಅದರ ಪ್ರಕಾರ ಸನತ್ಕುಮಾರನು ಸತ್ಯವ್ರತನಿಗೆ, ಸನಂದನನು ಗೌತಮನಿಗೆ, ಅಂಗಿರನು ಭರದ್ವಾಜನಿಗೆ ಬೋಧಿಸಿದರು. ಹಾಗೇ ಕಪಿಲ, ಜೈಗೀಷವ್ಯ, ಪಂಚಶಿಖಾ, ಪರಾಶರ, ವಾಲ್ಮೀಕಿಗಳಿಗೂ ಬೋಧಿಸಲಾಯಿತು.

ನಂತರ ಬರುವುದೇ ಆಶ್ಚರ್ಯಕರವಾದ ರಹಸ್ಯದ ಉದ್ಘಾಟನೆ. ಮೂಲತಃ ಶಿವಪ್ರೋಕ್ತ ಈಶ್ವರ ಗೀತೆಯುವಿವಿಧ ಜನರಿಂದ ಪರಂಪರೆಯಲ್ಲಿ ಹಸ್ತಾಂತರಗೊಂಡು ಭಗವಾನ್ ನಾರಾಯಣನು ಸ್ವಯಂ ದೇವಕೀ ಸುತ ಕೃಷ್ಣನಾಗಿ ಅರ್ಜುನನಿಗೆ ಉಪದೇಶಿಸಿದನು ಎನ್ನುತ್ತದೆ

ನಾರಾಯಣೋಽಪಿ ಭಗವಾನ್ ದೇವಕೀತನಯೋ ಹರಿಃ |
ಅರ್ಜುನಾಯ ಸ್ವಯಂ ಸಾಕ್ಷಾತ್ ದತ್ತವಾನಿದಮುತ್ತಮಮ್ ||
(ಕೂರ್ಮ ಪುರಾಣ :೧೧:೧೩೧)

ಕೂರ್ಮ ಪುರಾಣದ ಮತ್ತೊಂದು ಅಧ್ಯಾಯದಲ್ಲಿ ವ್ಯಾಸ ಮತ್ತು ಅರ್ಜುನರ ನಡುವಿನ ಸಂಭಾಷಣೆಯಲ್ಲಿ, ಕಲಿಯುಗದಲ್ಲಿನ ಕರ್ತವ್ಯಗಳು ಮತ್ತು ಪರಿಹಾರಗಳ ಬಗೆಗಿನ ಚರ್ಚೆ ಬರುತ್ತದೆ. ಅಲ್ಲಿ ವ್ಯಾಸರು ರುದ್ರನ ಉಪಾಸನೆಯ ಅನಿವಾರ್ಯತೆಯ ಬಗ್ಗೆ ಒತ್ತಿ ಹೇಳಿದ್ದಾರೆ. ಕೊನೆಗೆ ವ್ಯಾಸರು ಅರ್ಜುನನಿಗೆ ಹಸ್ತಲಾಘವ ಮಾಡಿ, ಶಿವನ ಪರಮ ಭಕ್ತನಾದ ಪಾರ್ಥನೇ - ಹೃಷೀಕೇಶನು ಭಗವದ್ಗೀತೆಯನ್ನು ಬೋಧಿಸುವಾಗ, ಶಿವನ ಆ ವಿರಾಟ್ ರೂಪವನ್ನು ಕಂಡ ನೀನೇ ಭಾಗ್ಯವಂತ ಎಂದು ಹೇಳುತ್ತಾರೆ.

ದೃಷ್ಟ್ವಾಂಸಿ ತಂ ದೇವಂ ವಿಶ್ವಾಕ್ಷಂ ವಿಶ್ವತೋಮುಖಮ್ |
ಪ್ರತ್ಯಕ್ಷಮೇವ ಸರ್ವೇಷಾಂ ರುದ್ರಂ ಸರ್ವ ಜಗನ್ಮಯಮ್ || ೬೦ ||
ಜ್ಞಾನಂ ತದೈಶ್ವರಂ ದಿವ್ಯಂ ಯಥಾವದ್ ವಿದಿತಂ ತ್ವಯಾ |
ಸ್ವಯಮೇವ ಹೃಷೀಕೇಶಃ ಪ್ರೀತ್ಯೋವಾಚ ಸನಾತನಃ ||
(ಕೂರ್ಮ ಪುರಾಣ :೨೮:೬೧)

ಹಾಗಾಗಿ ಭಗವದ್ಗೀತೆಯ ಬಗೆಗಿನ ಈ ಮಂಡನೆಯು ನಿರಾಧಾರವಲ್ಲ. ಭಗವದ್ಗೀತೆಯು ಶಿವನ ದಿವ್ಯ ಧ್ವನಿ. ಅದನ್ನು ಯೋಗದ ಪರಾಕಾಷ್ಟೆಯ ಮುಖೇನ ಶಿವನಿಂದಲೇ ಪಡೆದು, ನಮಗೆಲ್ಲ ಬೋಧಿಸಿದ ಆಚಾರ್ಯನೇ ಕೃಷ್ಣ. ಹಾಗಾಗಿ ಕೃಷ್ಣನನ್ನು ಗೀತಾಚಾರ್ಯ ಎನ್ನುವುದು.

. ಭಗವದ್ಗೀತೆಯನ್ನು ಶಿವನಲ್ಲದೆ ಇನ್ಯಾರ ದಿವ್ಯಧ್ವನಿಯಿಂದ ಪ್ರಕಟವಾಗಲು ಸಾಧ್ಯವೇ ಇಲ್ಲ

ಮಹಾಭಾರತದಲ್ಲಿ ಕೃಷ್ಣನು - ಎರಡನೇ ಸಲ ಭಗವದ್ಗೀತೆಯನ್ನು ಹೇಳಲು ಸಾಧ್ಯವಿಲ್ಲ, ಅದು ಯೋಗದಲ್ಲಿ ಪಡೆದದ್ದು ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಯೋಗವು ಯುಜ್ ಧಾತುವಿನಿಂದ ಅಂದರೆ ಕೂಡಿಸು, ಸೇರಿಸು ಎಂಬುದಾಗಿ ಉತ್ಪನ್ನವಾಗುತ್ತದೆ. ಅಂದರೆ ಕೃಷ್ಣನು ಯೋಗಶಕ್ತಿಯ ಮುಖೇನ, ತನ್ನತನವನ್ನು ಶಿವನಲ್ಲಿ ಐಕ್ಯಗೊಳಿಸಿದಾಗ, ಮಹಾನ್ ಶಿವಭಕ್ತ ಅರ್ಜುನನಿಗಾಗಿ, ಕೃಷ್ಣನ ವೈಖರಿಯಿಂದ ಹೊರಹೊಮ್ಮಿದ ಗೀತೆಯೇ ಭಗವದ್ಗೀತೆಯಾಯಿತು.

ಕೃಷ್ಣನು ಬ್ರಹ್ಮ ಅಥವಾ ಆತ್ಮನ ಕುರಿತಾಗಿ ತುರೀಯ ಆಧ್ಯಾತ್ಮ ವಿಚಾರದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸದಿರುವುದು ಇದೇ ಮೊದಲಲ್ಲ, ಹಿಂದೆಯೂ ನಡೆದಿತ್ತು. ನಾರಾಯಣನು ಆತ್ಮನ ಕುರಿತಾಗಿ ಉಪದೇಶವನ್ನು ಕೊಡಲು ಈಶ್ವರನಿಗೇ ಕೇಳುತ್ತಾನೆ. ಅದೇ ಆಗ ಈಶ್ವರನು ಋಷಿಗಳಿಗೆ ಬೋಧಿಸಿದ ತನ್ನ, ಅಂದರೆ ಬ್ರಹ್ಮದ ವಿಷಯವಾಗಿ ಇರುವ ಈಶ್ವರ ಗೀತೆ (ಈಗ ಮಹಾಭಾರತದಲ್ಲಿ ಅದೇ ಭಗವದ್ಗೀತೆಯಾಗಿದೆ).

ಬದರಿಕಾಶ್ರಮದಲ್ಲಿ ಸನಕಾದಿ ಹಲವಾರು ಋಷಿಗಳು ಬ್ರಹ್ಮನನ್ನು ತಿಳಿದುಕೊಳ್ಳುವ ಸಲುವಾಗಿ ತಪೋ ನಿರತರಾಗಿದ್ದರು. ಮಹಾನ್ ಋಷಿಗಳಾದ ನರ ಮತ್ತು ನಾರಾಯಣರು ಪ್ರತ್ಯಕ್ಷರಾಗುತ್ತಾರೆ. ಆಗ ಅವರನ್ನು ಉಳಿದ ಋಷಿಗಳು ಸ್ತುತಿಸುತ್ತಾರೆ. ನಾರಾಯಣನಿಗೆ ಗೊತ್ತಿದ್ದರೂ, ಅವರ ತಪಸ್ಸಿನ ಉದ್ದೇಶವೇನೆಂದು ಮಾರ್ಮಿಕವಾಗಿ ಕೇಳುತ್ತಾನೆ. ಆಗ ಬ್ರಹ್ಮನ ಕುರಿತಾಗಿ ಇರುವ ಕೆಲ ಪ್ರಶ್ನೆಗಳಿಗೆ ಉತ್ತರ ಬೇಕೆಂದು ಕೇಳುತ್ತಾರೆ. ಅವರ ಪ್ರಶ್ನೆಗಳು – 
 • ಈ ಪ್ರಪಂಚದ ಮೂಲ ಕಾರಣವೇನು
 • ಈ ಸಂಸಾರವನ್ನು ಸದಾ ಸಂಸರತೇ, ಅಂದರೆ ಮುನ್ನಡೆಸುವವರಾರು
 • ಆತ್ಮವೆಂದರೇನು
 • ಮುಕ್ತಿ ಎಂದರೇನು
 • ಸಂಸಾರವು ಏತಕ್ಕಾಗಿ ಇದೆ
 • ಸಂಸಾರದ ಒಡೆಯನಾರು (ಈಶಾನನಾರು)? 
 • ಯಾರು ಇವೆಲ್ಲವನ್ನೂ ನೋಡಿಕೊಳ್ಳುವಂತಹವನು
 • ಅವೆಲ್ಲದರ ಹಿಂದಿರುವ ಬ್ರಹ್ಮ ಎಂದರೇನು? ಇವೆಲ್ಲವನ್ನೂ ಹೇಳಬೇಕೆಂದು ಕೇಳುತ್ತಾರೆ.

ಇವೆಲ್ಲವೂ ವೇದಾಂತದ ಪ್ರಶ್ನೆಗಳು ಹಾಗೂ ಭಗವದ್ಗೀತೆಯ ಸಾರಾಂಶ. ಆಗ ನಾರಾಯಣ ಋಷಿಯು ತನ್ನ ಋಷಿ ವೇಷವನ್ನು ಕಳಚಿ ಶಂಖ, ಚಕ್ರ, ಗಧಾ ಮತ್ತು ಪದ್ಮ ಆಯುಧಧಾರಿ, ಹೃದಯದಲ್ಲಿ ಶ್ರೀವತ್ಸ ಲಾಂಛನವುಳ್ಳ, ಲಕ್ಷ್ಮಿ ಸಹಿತನಾದ ವಿಷ್ಣುವು ಪ್ರಕಟವಾಗುತ್ತಾನೆ. ವಿಷ್ಣುವಿನ ಕಾಂತಿಯ ಮುಂದೆ ನರ ಋಷಿಯು ಕಾಣುವುದೇ ಇಲ್ಲ. ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಡಿ. ಈಗ ಇಲ್ಲಿರುವುದು ಋಷಿಗಳ ಮುಂದಿದ್ದ ನಾರಾಯಣ ಋಷಿಯಲ್ಲ; ಇದು ವಿಷ್ಣು.

ಈ ಅಂತರದಲ್ಲಿ ಶಶಾಂಕಾಂಕಿತ ಶೇಖರನಾದ ಮಹಾದೇವನು ಪ್ರತ್ಯಕ್ಷನಾಗುತ್ತಾನೆ. ಆಗ ಹೃಷೀಕೇಶನನ್ನು ಆಲಂಗಿಸಿ, ಬ್ರಹ್ಮವಾದಿ ಋಷಿಗಳೊಳಗೂಡಿ ಪುಂಡರೀಕಾಕ್ಷನು ತನ್ನನ್ನು ಸ್ಮರಿಸಿದ ಕಾರಣವೇನೆಂದು ಕೇಳುತ್ತಾನೆ. ಆಗ ಅಚ್ಯುತನು - ಮುನಿಗಳ ತಪಸ್ಸಿಗೆ ನೀನು ಪ್ರಸನ್ನನಾಗಿದ್ದರೆ ಅವರ ಪ್ರಶ್ನೆಗಳಿಗೆ ನನ್ನ ಸಮ್ಮುಖದಲ್ಲಿ ಉತ್ತರಿಸುವಂತವನಾಗು, ಏಕೆಂದರೆ ನಿನ್ನ ಬಗ್ಗೆ ನಿನ್ನನ್ನು ಬಿಟ್ಟರೆ ಇನ್ಯಾರಿಗೂ ತಿಳಿದಿಲ್ಲ. ನೀನೇ ಆಗಿರುವ ಆ ಆತ್ಮ ತತ್ವವನ್ನು ಮುನೀಂದ್ರರಿಗೆ ಪ್ರದರ್ಶಿಸು ಎಂದು ಮೊರೆ ಇಡುತ್ತಾನೆ.

ಈಗ ಋಷಿಗಳ ಪ್ರಶ್ನೆಯನ್ನು ಅವಲೋಕಿಸಿ. ಅವರು ಶಿವನ ಬಗ್ಗೆ ಕೇಳಿದ್ದಲ್ಲ. ಅವರು ಆತ್ಮ ಅಥವಾ ಬ್ರಹ್ಮನ ಬಗ್ಗೆ ಕೇಳಿದ್ದು. ಯಾರು ಈ ಜಗತ್ಕಾರಣ, ಜಗತ್ಸಾಕ್ಷಿ ಎಂದೆಲ್ಲ ಕೇಳಿದರು. ಮತ್ತೆ ಇಲ್ಲಿ ವಿಷ್ಣುವು ಶಿವನನ್ನು ಕುರಿತು ಶಿವನ ಬಗ್ಗೆ ಉಪದೇಶಿಸುವ ಕೃಪೆದೋರಲು ಕೇಳುತ್ತಿದ್ದಾನೆ. ಹಾಗೂ ಆ ಶಿವನನ್ನು ಶಿವನಲ್ಲದೆ ಇನ್ಯಾರು ತಾನೇ ಅರಿತಾರೂ? ಎಂದೂ ಹೇಳಿದ್ದಾನೆ.

ಇವೆರಡೂ ಘಟನಾವಳಿಗಳನ್ನು ಗಮನಿಸಿದಾಗ ಶಿವನೇ ವೇದಾಂತದ ಬ್ರಹ್ಮನ್; ಶಿವನನ್ನು ಹೊರತುಪಡಿಸಿ ವಿಷ್ಣುವಾಗಲೀ ಅಥವಾ ಇನ್ಯಾರೇ ಆಗಲಿ ಆ ಉಪಾಧಿಯನ್ನು ಹೊಂದಿದವರಲ್ಲ. ಶಿವನು ತಾನೇ ತಾನಾಗಿ ಎಲ್ಲರೊಳಗಿರುವ ನಾನುಎಂದರೇನೆಂದು ಹೇಳಲು ಶಕ್ಯನು.

ಮಹಾಭಾರತದ ಸಂದರ್ಭದಲ್ಲೂ ಇದೇ ರೀತಿ ನಡೆದದ್ದು. ಇಲ್ಲಿ ಮಿಕ್ಕ ಋಷಿಗಳು ಹೇಗೆ ನಾರಾಯಣ ಋಷಿಗೆ (ಕೃಷ್ಣನ ನಿಜ ರೂಪಕ್ಕೆ) ಮೊರೆ ಹೊಕ್ಕರೋ, ಹಾಗೆಯೇ ಅರ್ಜುನನು ಕೃಷ್ಣನಿಗೆ ಮೊರೆ ಹೊಕ್ಕನು. ಋಷಿಗಳಾದರೂ ಬ್ರಹ್ಮ ಚಿಂತನೆಯ ಬಗ್ಗೆ ಕೇಳಿದರು. ಅರ್ಜುನನು ಮಾಯಾ ಮೋಹ ಪಾಶಗಳಿಂದ ಹೊರಬರುವ ಮತ್ತು ಉನ್ನತ ಮಾರ್ಗವನ್ನು ಕೇಳಿದನು. ಭಗವದ್ಗೀತೆಯು ಓರ್ವ ನಾಯಕನು ಯುದ್ಧದಲ್ಲಿ ತನ್ನ ಬಂಧುಗಳನ್ನು ಕೊಲ್ಲಲು ಉಪದೇಶಿಸಿದ್ದಲ್ಲ. ಅದು ಆತ್ಮ-ವಿಧ್ಯೆ. ನಾರಾಯಣ ಋಷಿಯು ವಿಷ್ಣುವಾಗಿ ಪ್ರಕಟಗೊಂಡು ಯಾರಿಗೂ ತಿಳಿಯದಂತೆ ಮಹಾದೇವನನ್ನು ಆಹ್ವಾನಿಸಿದನು. ಏತಕ್ಕಾಗಿ? ಬ್ರಹ್ಮತತ್ವವೇ ಆಗಿರುವ ಶಿವತತ್ವವನ್ನು ಶಿವನಿಂದಲೇ ವಿವರಿಸುವುದಕ್ಕಾಗಿ. ಮಹಾಭಾರತದಲ್ಲಿಯೂ ಕೃಷ್ಣನು ಅರ್ಜುನನಿಗೆ ತಿಳಿಯದಂತೆ ಯೋಗದ ಮುಖೇನ ಶಿವನೊಂದಿಗೆ ಸಂಪರ್ಕ ಸಾಧಿಸಿ, ಶಿವವಾಣಿಯನ್ನು ತನ್ನ ವೈಖರಿಯಿಂದ ಪ್ರಕಟಿಸಿದ.

ಆ ಕಾಲಕ್ಕೆ ಭಗವದ್ಗೀತೆಯು ಪ್ರಕಟವಾಗಬೇಕಿತ್ತು; ಪ್ರಕಟವಾಯಿತು. ಕೃಷ್ಣಾರ್ಜುನರು ಈಶ್ವರ ಗೀತೆಯುಭಗವದ್ಗೀತೆಯಾಗಿ ಪ್ರಕಟಗೊಳ್ಳಲು ನಿಮಿತ್ತ ಮಾತ್ರವಾಗಿದ್ದರು. ಭಗವದ್ಗೀತೆಯಲ್ಲಿಯೇ ಈ ವಿಜ್ಞಾನವು ಪುರಾತನ ಕಾಲದಲ್ಲಿ ಇದ್ದಿತು, ಆದರೆ ಕಾಲಕ್ರಮೇಣ ಸುಪ್ತವಾಯಿತು ಎಂದು ಹೇಳಿದೆ -

ಏವಂ ಪರಂಪರಾ ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ |
ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂ ತಪಾ ||
ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ |
ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದ್ ಉತ್ತಮಮ್ || .ಗೀ. :-

ಈ ವಿಜ್ಞಾನವನ್ನು ಪುನರುತ್ಥಾನಗೊಳಿಸಿ ಲೋಕಮುಖಕ್ಕೆ ಕೊಡುವುದು ಶಿವಸಂಕಲ್ಪವಾಗಿತ್ತು. ಅದನ್ನು ವ್ಯಾಸರು ಜಯಭಾರತದಲ್ಲಿ (ಜಯಾಕಾವ್ಯ / ಜಯಾಖ್ಯಾನದಲ್ಲಿ) ದಾಖಲಿಸಿ ಸಮಾಜಕ್ಕೆ ನೀಡಿದರು. ಅಲ್ಲಿಗೆ ಶಿವಸಂಕಲ್ಪ ನೆರವೇರಿತು. ಹಾಗಾಗಿ ಕೃಷ್ಣನಿಗೆ ಪುನಃ ಪ್ರಶ್ನಿಸಲಾಗಿ ಉತ್ತರಿಸಲಾಗಲಿಲ್ಲ. ಈ ಬ್ರಹ್ಮರಹಸ್ಯವನ್ನು ಶಿವನೇ ಹೇಳಲು ಶಕ್ಯ, ಇನ್ಯಾರಿಗೂ ಸಾಧ್ಯವಿಲ್ಲ ಎಂದು ನಾರಾಯಣನೇ ಕೂರ್ಮ ಪುರಾಣದಲ್ಲಿ ಹೇಳಿದ್ದನ್ನು ನೋಡಿದೆವು. ಗೀತೆಯೊಂದು ಸಿದ್ಧಾಂತವಲ್ಲ, ಪ್ರಾಯೋಗಿಕವಾಗಿ ಸಿದ್ಧಪಡಿಸಿ ತೋರಿಸಿದ ವಿಚಾರ; ಅದಕ್ಕೆ ಶಿವನಲ್ಲದೆ ಇನ್ಯಾರೂ ಶಕ್ತರಲ್ಲ.

ಶಿವನು ಕೃಷ್ಣನ ಮೂಲಕ ಅರ್ಜುನನಿಗೆ ನಾನುಎಂಬುದರ (ಶಿವನ) ಪರಿಚಯ ಮಾಡುವಾಗ ಹೀಗೆ ಹೇಳುತ್ತಾನೆ

ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾಂ ಈಶ್ವರಃ” || .ಗೀ. :

ಅಂದರೆ ನಾನು ಅಜನು = ಜನಿಸಿದವನಲ್ಲ, ಅವ್ಯಯನು = ಖಾಲಿಯಾಗದವನು, ಆತ್ಮನು, ಈಶ್ವರನು = ಸಕಲ ಚರಾಚರಗಳಿಗೆ ಒಡೆಯನು ಎಂದನು. ಇಲ್ಲಿ ಈಶ್ವರನೆಂದರೆ ಪತಿ ಅಥವಾ ಒಡೆಯ. ಅದನ್ನು ಈ ಶ್ಲೋಕದಲ್ಲಿ ಸರಿಯಾಗಿ ಜೋಡಿಸಿದರೆ ಭೂತಾನಾಂ ಪತಿಎಂದಾಗುತ್ತದೆ. ಎಲ್ಲಾ ಭೂತಗಳು = ಜೀವಿಗಳು ಈಶನ ಪಾಶದಿಂದ ಬಂಧಿಸಲ್ಪಟ್ಟಿರುವುದರಿಂದ ಪಶುಗಳು’. ಹಾಗಾಗಿ ಆ ಶಬ್ದವು ಪಶೂನಾಂ ಪತಿಎಂದಾಗಿ ಮಹಾ ದೇವನಾದ ಪಶುಪತಿ ಎಂದೇ ಆಗುತ್ತದೆ.

. ಭಗವದ್ಗೀತೆಯು ಈಶ್ವರ ಗೀತೆಯೇ ಆಗಿದೆ:-

ಈಶ್ವರ ಹಾಗೂ ಭಗವಾನ್ ಎಂಬುದು ಸಮಾನಾರ್ಥಕ ಪದಗಳು. ಶೃತಿಗಳು ರುದ್ರನನ್ನು ಮಾತ್ರ ಭಗವಾನ್ಎಂದು ಸಂಬೋಧಿಸಿದೆ. ಯೋ ವೈ ರುದ್ರಃ ಭಗವಾನ್ || (ಅಥರ್ವ ಉಪನಿಷದ್ :೦೧) ರುದ್ರನಾರೋ ಅವನೇ ಭಗವಾನ್. "ಏಕ ಏವ ರುದ್ರೋ ನ ದ್ವಿತೀಯಾಯ" (ಕೃಷ್ಣ ಯಜುರ್ವೇದ ಕಾಂಡ ೧, ಪ್ರಶ್ನಃ ೮, ಪಂಚಾಶತ್ ೧೦) ಯಜುರ್ವೇದದ ಈ ಪಂಚಾಶತ್ತನ್ನು ಪೂರ್ಣ ಪಾರಾಯಣ ಮಾಡುತ್ತಾ  ಬಂದರೆ, ಆ ಪರಮ ಪುರುಷನೆಂದು ಯಾರಿರುವನೋ ಅವನು ಏಕಮೇವ ಅದ್ವಿತೀಯನಾದ ರುದ್ರನೇ ಆಗಿದ್ದಾನೆ ಎಂದು ತಿಳಿದುಬರುತ್ತದೆ. ಹಾಗಾಗಿ ಮೂಲ ಚೈತನ್ಯವನ್ನೇ ಈಶ್ವರ ಅಥವಾ ಭಗವಾನ್ ಎಂದು, ಪಶುಪತಿ ರುದ್ರನನ್ನೇ ಸಂಬೋಧಿಸಿರುವುದು. ಇದರಲ್ಲಿ ಯಾವುದೇ ಭೇದವಿಲ್ಲ. ಹಾಗಾಗಿ ಭಗವದ್ಗೀತೆಯು ಈಶ್ವರ ಗೀತೆಯೇಆಗಿದೆ. ಹಾಗಾಗಿ, ಇವೆರಡೂ ಮಹಾದೇವನ ಮಹಿಮೆಯನ್ನು ಸಾರುವ ಸ್ತುತಿಗಳೇ ಆಗಿವೆ.

. ಆದಿಶಂಕರರು ಬ್ರಹ್ಮಸೂತ್ರಭಾಷ್ಯದಲ್ಲಿ ಭಗವದ್ಗೀತೆಯನ್ನು ಈಶ್ವರ ಗೀತೆಯೆಂದೇ ಗುರುತಿಸಿದ್ದಾರೆ.

ಈಗ ಲಭ್ಯ ಶಂಕರರದ್ದೆಂದು ಹೇಳಲ್ಪಡುವ ಬ್ರಹ್ಮಸೂತ್ರಭಾಷ್ಯ ೨::೪೫ರಲ್ಲಿ ಭಗವದ್ಗೀತೆಯ ಶ್ಲೋಕವನ್ನು ಉದಾಹರಿಸಿ, ಅದನ್ನು ಈಶ್ವರ ಗೀತಾಎಂದೇ ಸಂಬೋಧಿಸಿದ್ದಾರೆ.

ಈಶ್ವರ ಗೀತಾಸ್ವಪಿ ಈಶ್ವರಾಂಶತ್ವಂ ಜೀವಸ್ಯ ಸ್ಮರ್ಯತೇ ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ಇತಿ || 
ಶಂ.ಬ್ರ.ಸೂ.ಭಾ ::೪೫

ಶಂಕರರಿಗೆ ಭಗವದ್ಗೀತೆಯು ಇನ್ಯಾವುದೋ ಗೀತೆಯಲ್ಲ, ಅದು ಕೃಷ್ಣನ ವೈಖರಿಯಲ್ಲಿ ಕುಳಿತು ಪರಮ ಶಿವಭಕ್ತನಾದ ಅರ್ಜುನನಿಗೆ, ವೇದಾಂತದ ಮೂಲ ವಿಚಾರವನ್ನು ಬದಲಿಸದೆ ಯಥಾವತ್ತಾಗಿ,  ಶಿವನುಪದೇಶಿಸಿದ ಈಶ್ವರ ಗೀತೆಯೆಂದೇ ತಿಳಿದಿತ್ತು.

(ಮುಂದುವರೆಯುತ್ತದೆ..)
-        ಹೇಮಂತ್ ಕುಮಾರ್ ಜಿ.

2 comments:

 1. ವಿಚಾರಪೂರ್ಣವಾದ ಲೇಖನಕ್ಕೆ ಅಭಿನಂದನೆಗಳು. ಶಿವಾಂಶವೇ ಆದ ಶರೀರಕ್ಕೆ ಶಿವಾನುಗ್ರಹವಾಗಲೆಂದು ಆಶಿಸುವುದೆಂತು!?

  ReplyDelete
  Replies
  1. ಶಿವಾಂಶ ಎಂದದ್ದು ಶರೀರಕ್ಕಲ್ಲ. ಅದರಲ್ಲಿರುವ ಆತ್ಮ ಅಥವ ಚಾಲನಾ ಶಕ್ತಿ. ದೇಹ ಪಡೆದ ಆತ್ಮನು ಸ್ವತಂತ್ರನಲ್ಲ. ಋಣ ಕರ್ಮ ಪಾಶದಿಂ ಬಂಧಿತನು. ಕಾಯಕವೇ ಕೈಲಾಸ ಎಂದು ಶೀಲ ವ್ರತಾದಿಗಳಿಂದ ಕರ್ಮ ಸವೆಸುತ್ತಾ ಬರಲು ಶಿವಾನುಗ್ರಹವಾದರೆ ಮಾತ್ರ ಅವುಗಳಿಂದ ಬಿಡುಗಡೆ. ಆಗ ಮಾತ್ರ ಸತ್ಯದರ್ಶನ. ಇದು ಆತ್ಮೋನ್ನತಿ ಮಾರ್ಗ.

   Delete