Saturday, 22 September 2018

ಸಿರಿಭೂವಲಯ ಚಕ್ರಾಂಕಿತ ಪದ್ಯಗಳ ಗೂಡಾರ್ಥ ವಿಸ್ತಾರ ಯೋಜನೆ

ಕನ್ನಡದ ಅಗ್ರಗಣ್ಯ ಸಾಹಿತಿಗಳಾದ ಶತಾಯುಷಿ ಪ್ರೊಫೇಸರ್ ಜಿ. ವೆಂಕಟಸುಬ್ಬಯ್ಯನವರು ತಮ್ಮ ೧೦೬ನೇ ಇಳಿ ವಯಸ್ಸಿನಲ್ಲಿ ಸಿರಿಭೂವಲಯದ ಮೇಲೆ ತೋರುತ್ತಿರುವ ಆಸಕ್ತಿಯು ಯುವ ಪೀಳಿಗೆಯನ್ನು ನಾಚಿಸುವಂತಿದೆ.

೩೫ ವರ್ಷಗಳ ಸತತ ಅಧ್ಯಯನ ಮತ್ತು ನಿರಪೇಕ್ಷಿತ ಪ್ರಕಟಣೆಗಳಲ್ಲಿ ನಿರತರಾಗಿರುವ, ಸಿರಿಭೂವಲಯದ ಸುಧಾರ್ಥಿ ಎಂದು ಪ್ರೊ. ಜಿ. ವೆಂಕಟಸುಬ್ಬಯ್ಯನವರಿಂದ ಕಾವ್ಯನಾಮ ಪಡೆದ, ಹಾಸನದ ಹಾಲುವಾಗಿಲು ಗ್ರಾಮ ನಿವಾಸಿ, ೭೦ರ ಹರಯದ ಕೃಷಿಕರಾದ ಶ್ರೀಯುತ ಶಂಕರನಾರಾಯಣ ಇವರ ನಿಕಟ ಒಡನಾಟದಿಂದ ನಮಗೆ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಭೇಟಿಯಾಗುವಂತಾಯಿತು.

ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇದರ ಸಂಸ್ಥಾಪಕರು, ಪೂರ್ವೋತ್ತರ ಮೀಮಾಂಸಕರಾದ ಕೆ. ಎಸ್. ನಿತ್ಯಾನಂದರ ಸಿರಿಭೂವಲಯದ ಆದಿ ಪದ್ಯದ ಅದ್ಭುತಗಳು ಎಂಬ ಲೇಖನವನ್ನು ಪರಾಮರ್ಷಿಸಿದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಅಕ್ಷರೋತ್ಪನ್ನ ವಿಷಯವು ತಾವು ಕಂಡರಿಯದಂತಹಾ ಅತ್ಯುನ್ನತ ಸಾಹಿತ್ಯಕ ವಿಸ್ತಾರ ಮತ್ತು ವಿಶ್ಲೇಷಣಾ ವಿಧಾನವೆಂದು ಕೊಂಡಾಡಿದರು. ತಮ್ಮ ಅಗಾಧ ಸಾಹಿತ್ಯಕ ವಿಮರ್ಷಾ ಚಾತುರ್ಯದಿಂದ ಪ್ರೊ. ಜಿ ವೆಂಕಟಸುಬ್ಬಯ್ಯನವರು ನಿತ್ಯಾನಂದರು ನೀಡಿದ ಸಿರಿಭೂವಲಯದಿಂದ ಉತ್ಪನ್ನವಾದಂತಹಾ ಹೊಸ ಪದ್ಯಗಳ ಜಾಡನ್ನು ಹಿಡಿಯಲು ತಮ್ಮೆಲ್ಲಾ ಪೂರ್ವಾನುಭವಗಳನ್ನು ಕೆಲ ದಿನಗಳ ಕಾಲ ಒರೆಗಲ್ಲಿಗೆ ಹಚ್ಚಿ ಪ್ರಯತ್ನಿಸಿ ಇದು ಬಡಪಟ್ಟಿಗೆ ಬಗ್ಗುವುದಿಲ್ಲ, ಇದನ್ನು ಸಾಮಾನ್ಯ ಲೌಕಿಕ ಸಾಹಿತಿಗಳು ಮಾಡಿರಲು ಸಾಧ್ಯವಿಲ್ಲ; ಯಾವುದೋ ಅಲೌಕಿಕ ಸಾಧನಾ ಬಲದಿಂದ ಬಂದಿರುವಂತಹದ್ದು; ಲೇಖಕರು ಯಾರು? ಹೇಗೆ ಉತ್ಪನ್ನವಾದವು? ಹೇಗೆ ನವಾರ್ಥಗಳನ್ನು ಪಡೆಯುತ್ತದೆ? ಅದರ ಹಿಂದಿರುವ ರಹಸ್ಯ ಸೂತ್ರಗಳಾವವು? ಎಂದು ಬ್ರಹ್ಮಾನಂದದ ಅನುಭವವಾಯಿತೋ ಎಂಬಂತೆ ಭಾವನಾತ್ಮಕರಾಗಿ ಲೇಖಕರಾದ ನಿತ್ಯಾನಂದರನ್ನು ತಾವೇ ಖುದ್ದಾಗಿ ಹೋಗಿ ನೋಡಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಜ್ಞಾನವೃದ್ಧರೂ ವಯೋವೃದ್ಧರೂ ಆದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಈ ವಯಸ್ಸಿನಲ್ಲಿ ಪ್ರಯಾಣ ಮಾಡಿ ಆಯಾಸಪಡುವುದಲ್ಲ, ತಾವೇ ಅವರನ್ನು ಅವರಿರುವಲ್ಲಿ ಖುದ್ದಾಗಿ ಭೇಟಿಯಾಗುವೆಂದು ಆಶ್ವಾಸನೆ ಕೊಟ್ಟರು. ಶ್ರೀಯುತರು ತಂತ್ರ ಸಮುಚ್ಚಯ ಗ್ರಂಥ ಪ್ರಕಟಣೆ, ವಿಶ್ವಜಿಗೀಷದ್ ಯಾಗ, ತಮ್ಮ ಪುತ್ರನ ವಿವಾಹ, ಧನ್ವಂತರಿ ಯಾಗಕ್ಕೆ ಚಾಲನೆ, ಆಯುರ್ವೇದ ಚಿಕಿತ್ಸಾ ಪಾಠಗಳು, ಗೋಶಾಲೆ ನಿರ್ಮಾಣ, ಮಠ-ಮಂದಿರಗಳ ಅಭಿವೃದ್ಧಿ, ಆಶ್ರಮ, ಚಿಕಿತ್ಸಾಲಯ ಇತ್ಯಾದಿ ಕೆಲ ನಿರ್ಮಾಣಗಳನ್ನು ಮುಗಿಸುತ್ತಾ ಬಿಡುವು ಮಾಡಿಕೊಂಡು  ಬೆಂಗಳೂರು ನಿವಾಸಿ ಪ್ರೋ. ಜಿ ವೆಂಕಟಸುಬ್ಬಯ್ಯನವರ ಸ್ವಗೃಹದಲ್ಲಿ ದಿನಾಂಕ ೨೧-೦೯-೨೦೧೮ರಂದು ಭೇಟಿಯಾದರು. ಆ ಸಂದರ್ಭದಲ್ಲಿ ನಡೆದ ವಿಚಾರ ವಿಮರ್ಷೆಯ ದೃಶ್ಯಾವತರಣಿಕೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.


- ಹೇಮಂತ್ ಕುಮಾರ್. ಜಿ 

1 comment:

  1. 1) Interesting video clip. The great literary giant Dr. Venkatasubbaiah is thinking of unraveling secrets of Siri Bhoovalaya even at the age of 106! A true 'Vidhvansa'.
    2) Though the posts on Siri Bhoovalaya have been here on this blog spot since 2011, went through them only recently. Rare effort, lot of dedication - not commonly seen among tech grads in recent times. Compliments and appreciations.

    ReplyDelete