Saturday, 6 October 2018

ವೇದ, ವೇದ-ಶಾಖೆಗಳು, ವೇದ-ಪಾಠಭೇದಗಳು, ೧೦೮ ಉಪನಿಷತ್ತುಗಳು

ಪ್ರಶ್ನೆ ೧:- ವೇದ ಮತ್ತು ವೇದ ಶಾಖೆಗಳ ಕುರಿತಾಗಿ ನನಗೆ ಈ ಒಂದು ವಿವರಣೆ ಸಿಕ್ಕಿತು. ಇದು ಎಷ್ಟು ಅಧಿಕೃತ? ತಿಳಿಸುವಿರಾ?
          ಭಗವಾನ್ ವೇದವ್ಯಾಸರು ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಭಾಗ ಮಾಡಿದರು. ಅದರಲ್ಲಿ ಋಗ್ವೇದದಲ್ಲಿ ೨೪ ಶಾಖೆಗಳಿದ್ದವಂತೆ. ಆದರೆ ಈಗ ಶಾಕಲ ಸಂಹಿತೆ, ಭಾಷ್ಕಲ ಸಂಹಿತೆ, ಸಾಂಖ್ಯಾಯನ ಸಂಹಿತೆ ಎಂಬ ೩ ಶಾಖೆಗಳು ಮಾತ್ರ ಲಭ್ಯ. ಯಜುರ್ವೇದದ – ಕೃಷ್ಣ ಯಜುರ್ವೇದದಲ್ಲಿ ೮೬ ಶಾಖೆಗಳಿದ್ದವಂತೆ. ಆದರೆ ಈಗ ಕಠ, ತೈತ್ತಿರೀಯ, ಮೈತ್ರಾಯಣೀಯ ಎಂಬ ೩ ಶಾಖೆಗಳು ಮಾತ್ರ ಲಭ್ಯ. ಯಜುರ್ವೇದದ – ಶುಕ್ಲ ಯಜುರ್ವೇದದಲ್ಲಿ ೧೫ ಶಾಖೆಗಳಿದ್ದವಂತೆ. ಆದರೆ ಈಗ ಕಾಣ್ವ ಮತ್ತು ಮಾಧ್ಯಂದಿನ ಎಂಬ ೨ ಶಾಖೆ ಮಾತ್ರ ಲಭ್ಯ. ಹಾಗೆಯೇ ಸಾಮವೇದದಲ್ಲಿ ೧೦೦೦ ಶಾಖೆಗಳಿದ್ದವಂತೆ. ಆದರೆ ಈಗ ರಾಣಾಯಣೀಯ, ಜೈಮಿನೀಯ ಮತ್ತು ಗೌತಮೀಯ ಎಂಬ ೩ ಶಾಖೆ ಮಾತ್ರ ಲಭ್ಯ. ಅದೇ ರೀತಿ ಅಥರ್ವವೇದದಲ್ಲಿ ೧೨ ಶಾಖೆಗಳಿದ್ದವಂತೆ. ಆದರೆ ಅದರಲ್ಲಿ ಒಂದೇ ಒಂದು ಶೌನಕ ಶಾಖೆ ಉಳಿದುಕೊಂಡಿದೆಯಂತೆ. ಅಂದರೆ ಚತುರ್ವೇದದ ಒಟ್ಟು ೧೧೩೭ ಶಾಖೆಗಳಲ್ಲಿ ಕೇವಲ ೧೨ ಶಾಖೆಗಳು ಮಾತ್ರ ಈಗ ಲಭ್ಯವಂತೆ. ಉಳಿದ ೧೧೨೫ ಸಾಖೆಗಳ ವೇದ ಸಂಪತ್ತನ್ನು ನಾವು ಇನ್ನು ಮುಂದೆ ಯಾವತ್ತೂ ಸಿಗದಂತೆ ಕಳೆದುಕೊಳ್ಳಲು ಕಾರಣವೇನಿರಬಹುದು? ಈ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ಏನು?

ಅಭಿಪ್ರಾಯ:- ವೇದ ಮತ್ತು ವೇದಶಾಖೆಗಳ ವಿಚಾರವಾಗಿ ತುಂಬಾ ನೊಂದಿದ್ದೀರಿ. ವೇದ ನಷ್ಟವಾಯ್ತಲ್ಲಾ ಎಂದು ಬೇಸರ ಪಟ್ಟುಕೊಂಡಿದ್ದೀರಿ. ದುಃಖ ಪಡಬೇಡಿ. ವೇದ ನಷ್ಟವಾಗಿಲ್ಲ. ವೇದ ಎಂದರೆ ಜ್ಞಾನ ಅಂದರೆ ಅಮೃತ. ಅದು ನಷ್ಟವಾಗತಕ್ಕದ್ದಲ್ಲ, ಅದು ಶಾಶ್ವತ. ನಿಮ್ಮ ಅಥವಾ ಕೆಲವರ ಅಂಕೆಗೆ ಸಿಗಲಿಲ್ಲ ಎಂದು ನಷ್ಟವಾಯ್ತು ಎಂದು ಹೇಳಬೇಡಿ. ವೇದ ಅಪೌರುಷೇಯ ಎಂದರೆ ಸಾಹಿತ್ಯಕ ವೇದದ ವಿಚಾರ ಬಿಡಿ. ಅದರ ಜ್ಞಾನ ಅಪೌರುಷೇಯ. ಅದು ನಾದಬಿಂದುವಿನಲ್ಲಿ ಗುಪ್ತವಾಗಿದೆ. ೬೪ ಅಕ್ಷರಗಳಲ್ಲಿ ಸಮಗ್ರ ವೇದ ಅಡಗಿದೆ. ಪರಾ, ಪಶ್ಯಂತಿ, ಮಧ್ಯಮಾ, ವೈಖರಿಗಳಲ್ಲಿ ಪ್ರಸಾರವಾಗುವ ನಾದಸ್ವರೂಪವು ವೈಖರಿಯಲ್ಲಿ ನೀವು ಗುರುತಿಸುತ್ತೀರಾ. ಆದರೆ ಅಲ್ಲಿ ನಿಮಗೆ ವೇದ ನಷ್ಟವಾಯ್ತು ಅನ್ನಿಸಬಹುದು. ಅದು ಪರಾದಲ್ಲಿ ಶಾಶ್ವತವಾಗಿದೆ ನಷ್ಟವಾಗಿಲ್ಲ. ಪರಾದಿಂದ ಹೊರಟ ಜ್ಞಾನರೂಪದ ನಾದಬಿಂದುವು ಪಶ್ಯಂತಿಯಲ್ಲಿ ತರಂಗ ಶಕ್ತಿ ಮಾಧ್ಯಮವಾಗಿ ಮಧ್ಯಮದಲ್ಲಿ ಧ್ವನಿಯಾಗಿ ವೈಖರಿಯಲ್ಲಿ ಸಾಹಿತ್ಯರೂಪ ಪಡೆಯುತ್ತದೆ ಎಂಬ ವಿಚಾರ ನಿಮಗೆ ತಿಳಿದಿರಬಹುದು. ನೀವು ವೈಖರಿಯಲ್ಲಿ ಅದಕ್ಕೆ ಸ್ವರರೂಪ ಕೊಡುವಾಗ ನಿಮ್ಮ ಜ್ಞಾನದಂತೆ ಕೊಡುತ್ತೀರೇ ವಿನಃ ವೇದದ್ದು ಕೊಡಲು ಸಾಧ್ಯವಿಲ್ಲ. ಹಾಗಾಗಿ ಪರಾಜ್ಞಾನವನ್ನು ಹೊಂದಿ ವೇದವನ್ನು ಗಮನಿಸಿ. ಸಮಗ್ರ ವೇದ ಕಾಣಿಸುತ್ತದೆ. ಯಾವುದೂ ನಷ್ಟವಾಗಿಲ್ಲ. ಯಾವ ಶಾಖೆಯೂ ಕ್ಷೀಣಿಸಿಲ್ಲ. ಶಾಖಾ ಹಿಂಬಾಲಕರು ಅಜ್ಞಾನದಿಂದ ಶಾಖೆಯ ಬಗ್ಗೆ ಉಂಟಾದ ತಪ್ಪು ತಿಳುವಳಿಕೆಯಿಂದ ಗುಂಪುಗಾರಿಕೆ ನಡೆಸಿರಬಹುದು. ಸಮಗ್ರ ವೇದವೂ ಒಂದೇ; ಅದು ಪೂರ್ಣವಾಗಿದೆ.

ವೇದವ್ಯಾಸರು ವೇದದ ಉಪಯುಕ್ತತೆಯನ್ನು ಅರಿತು ಅದು ಸಾಮಾಜಿಕ ಉಪಯೋಗಕ್ಕೆ ಪ್ರಾಪಂಚಿಕ ಸಫಲತೆಗೆ ಬಳಸಲು ಎಂದು ೪ ವಿಭಾಗ ಮಾಡಿ ೧೧೩೭ ಶಾಖೆ ಮಾಡಿರಬಹುದು. ಆದರೆ ವ್ಯಾಸರ ಸಂಕಲ್ಪಕ್ಕೂ, ಈಗ ಬಳಕೆಯಾಗುತ್ತಿರುವ ವಿಧಾನಕ್ಕೂ ವ್ಯತ್ಯಾಸವಿದೆ. ವೇದಮಂತ್ರಗಳು ಎಲ್ಲಾ ಪ್ರಾಪಂಚಿಕ ಉಪಯೋಗಕ್ಕೆ ಬಳಕೆಯಾಗುತ್ತದೆಯೇ? ಇಲ್ಲ. ಆದರೆ ಸಮಗ್ರ ವೇದವು ಅಕ್ಷರ ರೂಪದಲ್ಲಿರತಕ್ಕ ಸ್ವರ ಮಾತ್ರ ಸ್ವರೂಪದ ಧ್ವನಿತರಂಗ ರೂಪದಲ್ಲಿ ಅಡಗಿದೆ; ಅದೇ ಪ್ರಣವ. ಪರಾದಲ್ಲಿ ಹಾಗಾಗಿಯೇ ಪ್ರಕೃತಿಧ್ವನಿಯಾದ ಓಂ ಕಾರವನ್ನು ಯಾರೂ ಹೊರಡಿಸಿಲ್ಲವಾದ್ದರಿಂದ ಅದು ಅಪೌರುಷೇಯವೆಂದರು. ಅದರಿಂದ ಸಮಗ್ರ ವೇದವನ್ನು ಪರಾದಿಂದ ಪಡೆಯಿರಿ. ಸಮಗ್ರ ವೇದವೂ ಇದೆ.

ಪ್ರಶ್ನೆ ೩:- ಸಸ್ವರ ವೇದಮಂತ್ರ ಪಾರಾಯಣ ಕೇಳುವಾಗ ಕಾಶ್ಮೀರ, ಕಾಂಚಿ, ವಾರಣಾಸಿ, ಕೇರಳ, ಉಡುಪಿ, ಶೃಂಗೇರಿ, ಗೋಕರ್ಣ ಈ ಬೇರೆ ಬೇರೆ ಪ್ರದೇಶದ ವೇದಪಾಠಿಗಳು ಪಾರಾಯಣ ಮಾಡುವುದನ್ನು ಕೇಳುವಾಗ ಸೂಕ್ಷ್ಮವಾಗಿ ಗಮನಕೊಟ್ಟರೆ ಸ್ವಲ್ಪ ಸ್ವರವ್ಯತ್ಯಾಸವನ್ನು ಬೇರೆ ಬೇರೆ ಪ್ರದೇಶದವರ (ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ) ಉಚ್ಚಾರಣೆಯಲ್ಲಿ ಗಮನಿಸಬಹುದು. ಇದು ಹೌದಾಗಿದ್ದರೆ ಯಾಕೆ ಆ ರೀತಿ ಇದೆ?

ಅಭಿಪ್ರಾಯ:- ಮಂತ್ರವು ಹೀಗೆ ಹೇಳಬೇಕೆಂಬ ನಿಯಮ ಕೇವಲ ಪ್ರಾದೇಶಿಕ. ಒಟ್ಟು ವೇದಾಧ್ಯಯನದ ಉದ್ದೇಶ ಸ್ವರಜ್ಞಾನ, ತರಂಗಜ್ಞಾನ, ಅಕ್ಷರವಿಧ್ಯಾಜ್ಞಾನಕ್ಕೆ ಸಂಬಂಧಪಟ್ಟ ಸಿದ್ಧತೆ ಅಷ್ಟೆ. ಅದನ್ನು ನೀವು ಹೇಗೆ ಹೇಳಿದರೂ ಸ್ವರ ಹೇಳಲಾರಿರಿ. ಈ ಶಬ್ದರೂಪ ಪ್ರಸಾರ ಮಾಧ್ಯಮದಲ್ಲಿ ನೀವು ದನ ಕೂಗುತ್ತದೆ; ಅದನ್ನು ನೀವು ನಿಮ್ಮ ಭಾಷೆಯಲ್ಲಿ ಶಬ್ದರೂಪದಲ್ಲಿ ಹೇಳಲು ಸಾಧ್ಯವಿಲ್ಲ. ಅದು ಕೂಗುವುದು ಹಾಗೆ ಎಂದು ಕಲ್ಪಿಸಿದ ಒಂದು ಶಬ್ದವನ್ನು ಭಾಷೆಯಲ್ಲಿ ಅಂಗೀಕರಿಸಿದ್ದೀರಿ ಅಷ್ಟೆ. ಆದರೆ ದನವು ಹೊರಡಿಸುವ ಶಬ್ದತರಂಗ ಯಾವುದು ಗೊತ್ತೆ? ಅದಕ್ಕೆ ನಿಮಗೆ ಸ್ವರಜ್ಞಾನ ಇರಬೇಕು. ಅದೇಕೆ ಹ್ರಸ್ವವು ದೀರ್ಘವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಹಿಂದೆ ತಿಳಿಸಿದ ಪರಾಜ್ಞಾನ ಬೇಕು. ಇಲ್ಲವಾದಲ್ಲಿ ದನ ಕೂಗುತ್ತದೆ; ಅದರಷ್ಟಕ್ಕೆ ಬಿಡಿ. ಕಾಲಟಿಯವರು ಮಂತ್ರ ಹೇಳುತ್ತಾರೆ; ಅವರಷ್ಟಕ್ಕೆ ಬಿಡಿ. ವಾರಣಾಸಿಯವರನ್ನು ಅವರಷ್ಟಕ್ಕೇ ಬಿಟ್ಟು ನಿಮ್ಮ ಸಂಪ್ರದಾಯದಂತೆ ವೇದ ಹೇಳಿ. ಅವರದ್ದು ತಪ್ಪು ಎನ್ನುವ ಕಲ್ಪನೆ ಬಿಡಿ. ಹೇಗೆ ಹೇಳಿದರೂ ಆ ತರಂಗೋತ್ಪಾದನೆ ಸ್ಪಷ್ಟವಾದರೆ ಸಾಕು. ಇದು ಸತ್ಯ.

ಪ್ರಶ್ನೆ ೨:- ನಾಲ್ಕು ವೇದಗಳಲ್ಲಿ ಒಟ್ಟು ೧೦೮ ಉಪನಿಷತ್ತುಗಳಿವೆ ಎಂದು ಹೇಳುತ್ತಾರೆ. ಆ ೧೦೮ ಉಪನಿಷತ್ತುಗಳ ಹೆಸರು, ಅದು ಯಾವ ವೇದದಲ್ಲಿ ಬರುತ್ತದೆ ಎಂಬುದನ್ನು ತಿಳಿಸುವಿರಾ?

ಅಭಿಪ್ರಾಯ:- ಉಪನಿಷತ್ತುಗಳು ವೇದಭಾಗದಲ್ಲಿ ನಡೆದ ಅಧ್ಯಯನ ವರದಿ. ಅದರಲ್ಲಿ ಬೇರೆ ಬೇರೆ ಅಭಿಪ್ರಾಯಗಳೂ, ವಿರುದ್ಧ ಅಭಿಪ್ರಾಯಗಳೂ ಕೊಡುವ ಉಲ್ಲೇಖವಿರುತ್ತದೆ. ಅಲ್ಲದೇ ಈ ದೇಶಕಾಲಕ್ಕೆ ಅದು ಪ್ರಸಕ್ತವೂ ಅಲ್ಲದಿರಬಹುದು. ಆದರೆ ಸಾರ್ವತ್ರಿಕ ಹೊಂದಾಣಿಕೆ ಇರುವ ಹತ್ತು ಉಪನಿಷತ್ತುಗಳು ಮುಖ್ಯ. ಇನ್ನೂ ಉಪನಿಷತ್ತು ಇರಬಹುದು. ನಮ್ಮಲ್ಲಿಗೆ ಬಂದರೆ ನಿಮಗೆ ಉಪನಿಷತ್ತಿನ ಪಟ್ಟಿ ಸಿಗುತ್ತದೆ. ವೇದದಲ್ಲಿ ಸಾಹಿತ್ಯಕವಾಗಿ ಉದಾಹರಿಸಿಲ್ಲದಿರಬಹುದು.
ಋತ್ವಿಕ್ ವಾಣಿ
ಅಕ್ಟೋಬರ್ ೨೦೦೨


ಪ್ರಚಲಿತವಿರುವ ೧೦೮  ಉಪನಿಷತ್ತುಗಳು


(I) ಪ್ರಧಾನ ಉಪನಿಷತ್ತುಗಳು (೧೦):-
೧. ಐತರೇಯ ಉಪನಿಷದ್ (ಋಗ್)
೨. ಕಠ ಉಪನಿಷದ್ (ಕೃಷ್ಣ ಯಜುರ್ವೇದ)
೩. ತೈತ್ತಿರೀಯ ಉಪನಿಷದ್ (ಕೃಷ್ಣ ಯಜುರ್ವೇದ)
೪. ಈಶಾವಾಸ್ಯ ಉಪನಿಷದ್ (ಶುಕ್ಲ ಯಜುರ್ವೇದ)
೫. ಬೃಹದಾರಣ್ಯಕ ಉಪನಿಷದ್ (ಶುಕ್ಲ ಯಜುರ್ವೇದ)
೬. ಕೇನ ಉಪನಿಷದ್ (ಸಾಮವೇದ)
೭. ಛಾಂದೋಗ್ಯ ಉಪನಿಷದ್ (ಸಾಮವೇದ)
೮. ಪ್ರಶ್ನ ಉಪನಿಷದ್ (ಅಥರ್ವವೇದ)
೯. ಮಾಂಡುಕ್ಯ ಉಪನಿಷದ್ (ಅಥರ್ವವೇದ)
೧೦. ಮುಂಡಕ ಉಪನಿಷದ್ (ಅಥರ್ವವೇದ)

(II) ವೇದಾಂತ ಉಪನಿಷದ್ (೨೪)
೧. ಆತ್ಮ-ಬೋಧ ಉಪನಿಷದ್ (ಋಗ್ವೇದ)
೨. ಕೌಷೀತಕೀ-ಬ್ರಾಹ್ಮಣ ಉಪನಿಷದ್ (ಋಗ್ವೇದ)
೩. ಮುದ್ಗಲ ಉಪನಿಷದ್ (ಋಗ್ವೇದ)
೪. ಅಕ್ಷಿ ಉಪನಿಷದ್ (ಕೃಷ್ಣ ಯಜುರ್ವೇದ)
೫. ಏಕಾಕ್ಷರ ಉಪನಿಷದ್ (ಕೃಷ್ಣ ಯಜುರ್ವೇದ)
೬. ಗರ್ಭ ಉಪನಿಷದ್ (ಕೃಷ್ಣ ಯಜುರ್ವೇದ)
೭. ಪ್ರಾಣಾಗ್ನಿಹೋತ್ರ ಉಪನಿಷದ್  (ಕೃಷ್ಣ ಯಜುರ್ವೇದ)
೮. ಶ್ವೇತಾಶ್ವತರ ಉಪನಿಷದ್ (ಕೃಷ್ಣ ಯಜುರ್ವೇದ)
೯. ಶಾರೀರಕ ಉಪನಿಷದ್ (ಕೃಷ್ಣ ಯಜುರ್ವೇದ)
೧೦. ಶುಕ-ರಹಸ್ಯ ಉಪನಿಷದ್ (ಕೃಷ್ಣ ಯಜುರ್ವೇದ)
೧೧. ಸ್ಕಂಧ ಉಪನಿಷದ್ (ಕೃಷ್ಣ ಯಜುರ್ವೇದ)
೧೨. ಸರ್ವಸಾರ ಉಪನಿಷದ್ (ಕೃಷ್ಣ ಯಜುರ್ವೇದ)
೧೩. ಅಧ್ಯಾತ್ಮ ಉಪನಿಷದ್ (ಶುಕ್ಲ ಯಜುರ್ವೇದ)
೧೪. ನಿರಾಲಂಬ ಉಪನಿಷದ್ (ಶುಕ್ಲ ಯಜುರ್ವೇದ)
೧೫. ಪೈಂಗಲ ಉಪನಿಷದ್ (ಶುಕ್ಲ ಯಜುರ್ವೇದ)
೧೬. ಮಾಂತ್ರಿಕ ಉಪನಿಷದ್ (ಶುಕ್ಲ ಯಜುರ್ವೇದ)
೧೭. ಮುಕ್ತಿಕ ಉಪನಿಷದ್ (ಶುಕ್ಲ ಯಜುರ್ವೇದ)
೧೮. ಸುಬಲ ಉಪನಿಷದ್ (ಶುಕ್ಲ ಯಜುರ್ವೇದ)
೧೯. ಮಹಾ ಉಪನಿಷದ್ (ಸಾಮವೇದ)
೨೦. ಮೈತ್ರಾಯಣಿ ಉಪನಿಷದ್ (ಸಾಮವೇದ)
೨೧. ವಜ್ರಸೂಚಿಕ ಉಪನಿಷದ್ (ಸಾಮವೇದ)
೨೨. ಸಾವಿತ್ರೀ ಉಪನಿಷದ್ (ಸಾಮವೇದ)
೨೩. ಆತ್ಮ ಉಪನಿಷದ್ (ಅಥರ್ವವೇದ)
೨೪. ಸೂರ್ಯ ಉಪನಿಷದ್ (ಅಥರ್ವವೇದ)

(III) ಸನ್ಯಾಸ ಉಪನಿಷದ್ (೧೭)
೧. ನಿರ್ವಾಣ ಉಪನಿಷದ್ (ಋಗ್ವೇದ)
೨. ಕಥಾ-ರುದ್ರ ಉಪನಿಷದ್ (ಕೃಷ್ಣ ಯಜುರ್ವೇದ)
೩. ಬ್ರಹ್ಮ ಉಪನಿಷದ್ (ಕೃಷ್ಣ ಯಜುರ್ವೇದ)
೪. ಅವದೂತ ಉಪನಿಷದ್ (ಕೃಷ್ಣ ಯಜುರ್ವೇದ)
೫. ಜಾಬಾಲ ಉಪನಿಷದ್ (ಶುಕ್ಲ ಯಜುರ್ವೇದ)
೬. ತುರೀಯಾತೀತ-ಅವದೂತ ಉಪನಿಷದ್ (ಶುಕ್ಲ ಯಜುರ್ವೇದ)
೭. ಪರಮಹಂಸ ಉಪನಿಷದ್ (ಶುಕ್ಲ ಯಜುರ್ವೇದ)
೮. ಭಿಕ್ಷುಕ ಉಪನಿಷದ್ (ಶುಕ್ಲ ಯಜುರ್ವೇದ)
೯. ಯಾಜ್ಞವಲ್ಕ್ಯ ಉಪನಿಷದ್ (ಶುಕ್ಲ ಯಜುರ್ವೇದ)
೧೦. ಸತ್ಯಾಯನೀಯ ಉಪನಿಷದ್ (ಶುಕ್ಲ ಯಜುರ್ವೇದ)
೧೧. ಆರುಣಿ ಉಪನಿಷದ್ (ಸಾಮವೇದ)
೧೨. ಕುಂಡಿಕಾ ಉಪನಿಷದ್ (ಸಾಮವೇದ)
೧೩. ಮೈತ್ರಾಯಣಿ ಉಪನಿಷದ್ (ಸಾಮವೇದ)
೧೪. ಸಂನ್ಯಾಸ ಉಪನಿಷದ್ (ಸಾಮವೇದ)
೧೫. ನಾರದ-ಪರಿವ್ರಾಜಕ ಉಪನಿಷದ್ (ಅಥರ್ವವೇದ)
೧೬. ಪರ-ಬ್ರಹ್ಮ ಉಪನಿಷದ್ (ಅಥರ್ವವೇದ)
೧೭. ಪರಮಹಂಸ-ಪರಿವ್ರಾಜಕ ಉಪನಿಷದ್ (ಅಥರ್ವವೇದ)

(IV) ಯೋಗ ಉಪನಿಷದ್ (೨೦)
೧. ನಾದ-ಬಿಂದು ಉಪನಿಷದ್ (ಋಗ್ವೇದ)
೨. ಅಮೃತ-ನಾದ ಉಪನಿಷದ್ (ಕೃಷ್ಣ ಯಜುರ್ವೇದ)
೩. ಅಮೃತ-ಬಿಂದು ಉಪನಿಷದ್ (ಕೃಷ್ಣ ಯಜುರ್ವೇದ)
೪. ಕ್ಷುರಿಕ ಉಪನಿಷದ್ (ಕೃಷ್ಣ ಯಜುರ್ವೇದ)
೫. ತೇಜೋ-ಬಿಂದು ಉಪನಿಷದ್ (ಕೃಷ್ಣ ಯಜುರ್ವೇದ)
೬. ಧ್ಯಾನ-ಬಿಂದು ಉಪನಿಷದ್ (ಕೃಷ್ಣ ಯಜುರ್ವೇದ)
೭. ಬ್ರಹ್ಮ-ವಿಧ್ಯಾ ಉಪನಿಷದ್ (ಕೃಷ್ಣ ಯಜುರ್ವೇದ)
೮. ಯೋಗ-ಕುಂಡಲಿನಿ ಉಪನಿಷದ್ (ಕೃಷ್ಣ ಯಜುರ್ವೇದ)
೯. ಯೋಗ-ತತ್ತ್ವ ಉಪನಿಷದ್ (ಕೃಷ್ಣ ಯಜುರ್ವೇದ)
೧೦. ಯೋಗ-ಶಿಖಾ ಉಪನಿಷದ್ (ಕೃಷ್ಣ ಯಜುರ್ವೇದ)
೧೧. ವರಾಹ ಉಪನಿಷದ್ (ಕೃಷ್ಣ ಯಜುರ್ವೇದ)
೧೨. ಮಂಡಲ-ಬ್ರಾಹ್ಮಣ ಉಪನಿಷದ್ (ಶುಕ್ಲ ಯಜುರ್ವೇದ)
೧೩. ತ್ರಿಶಿಖಿ-ಬ್ರಾಹ್ಮಣ ಉಪನಿಷದ್ (ಶುಕ್ಲ ಯಜುರ್ವೇದ)
೧೪. ಅದ್ವಯ-ತಾರಕ ಉಪನಿಷದ್ (ಶುಕ್ಲ ಯಜುರ್ವೇದ)
೧೫. ಹಂಸ ಉಪನಿಷದ್ (ಶುಕ್ಲ ಯಜುರ್ವೇದ)
೧೬. ಜಾಬಾಲ ಉಪನಿಷದ್ (ಸಾಮವೇದ)
೧೭. ಯೋಗ-ಚೂಡಾಮಣಿ ಉಪನಿಷದ್ (ಸಾಮವೇದ)
೧೮. ಪಾಶುಪತ-ಬ್ರಾಹ್ಮಣ ಉಪನಿಷದ್ (ಅಥರ್ವವೇದ)
೧೯. ಮಹಾ-ವಾಕ್ಯ ಉಪನಿಷದ್ (ಅಥರ್ವವೇದ)
೨೦. ಶಾಂಡಿಲ್ಯ ಉಪನಿಷದ್ (ಅಥರ್ವವೇದ)

(V) ವೈಷ್ಣವ ಉಪನಿಷದ್ (೧೪) 
೧. ಕಲಿ-ಸಂತರಣ ಉಪನಿಷದ್ (ಕೃಷ್ಣ ಯಜುರ್ವೇದ)
೨. ಮಹಾ-ನಾರಾಯಣ (ಯಾಜ್ಞಿಕೀ) ಉಪನಿಷದ್ (ಕೃಷ್ಣ ಯಜುರ್ವೇದ)
೩. ತಾರ-ಸಾರ ಉಪನಿಷದ್ (ಶುಕ್ಲ ಯಜುರ್ವೇದ)
೪. ಅವ್ಯಕ್ತ ಉಪನಿಷದ್ (ಸಾಮವೇದ)
೫. ವಾಸುದೇವ ಉಪನಿಷದ್ (ಸಾಮವೇದ)
೬. ಕೃಷ್ಣ ಉಪನಿಷದ್ (ಅಥರ್ವವೇದ)
೭. ಗರುಡ ಉಪನಿಷದ್ (ಅಥರ್ವವೇದ)
೮. ಗೋಪಾಲ-ತಾಪನೀಯ ಉಪನಿಷದ್ (ಅಥರ್ವವೇದ)
೯. ತ್ರಿಪಾದ್ ವಿಭೂತಿ-ಮಹಾನಾರಾಯಣ ಉಪನಿಷದ್ (ಅಥರ್ವವೇದ)
೧೦. ದತ್ತಾತ್ರೇಯ ಉಪನಿಷದ್ (ಅಥರ್ವವೇದ)
೧೧. ನೃಸಿಂಹ-ತಾಪನೀಯ ಉಪನಿಷದ್ (ಅಥರ್ವವೇದ)
೧೨. ರಾಮ-ತಾಪನೀಯ ಉಪನಿಷದ್ (ಅಥರ್ವವೇದ)
೧೩. ರಾಮ-ರಹಸ್ಯ ಉಪನಿಷದ್ (ಅಥರ್ವವೇದ)
೧೪. ಹಯಗ್ರೀವ ಉಪನಿಷದ್ (ಅಥರ್ವವೇದ)

(VI) ಶಿವ ಉಪನಿಷದ್ (೧೪)
೧. ಅಕ್ಷ-ಮಾಲಿಕಾ ಉಪನಿಷದ್ (ಋಗ್ವೇದ)
೨. ಕಾಲಾಗ್ನಿ-ರುದ್ರ ಉಪನಿಷದ್ (ಕೃಷ್ಣ ಯಜುರ್ವೇದ)
೩. ಕೈವಲ್ಯ ಉಪನಿಷದ್ (ಕೃಷ್ಣ ಯಜುರ್ವೇದ)
೪. ದಕ್ಷಿಣಾಮೂರ್ತಿ ಉಪನಿಷದ್ (ಕೃಷ್ಣ ಯಜುರ್ವೇದ)
೫. ಪಂಚ-ಬ್ರಹ್ಮ ಉಪನಿಷದ್ (ಕೃಷ್ಣ ಯಜುರ್ವೇದ)
೬. ರುದ್ರ-ಹೃದಯ ಉಪನಿಷದ್ (ಕೃಷ್ಣ ಯಜುರ್ವೇದ)
೭. ಜಾಬಾಲಿ ಉಪನಿಷದ್ (ಸಾಮವೇದ)
೮. ರುದ್ರಾಕ್ಷ-ಜಾಬಾಲ ಉಪನಿಷದ್ (ಸಾಮವೇದ)
೯. ಅಥರ್ವಶಿಖಾ ಉಪನಿಷದ್ (ಅಥರ್ವವೇದ)
೧೦. ಅಥರ್ವಶಿರಸ್ ಉಪನಿಷದ್ (ಅಥರ್ವವೇದ)
೧೧. ಗಣಪತಿ ಉಪನಿಷದ್ (ಅಥರ್ವವೇದ)
೧೨. ಭಸ್ಮ-ಜಾಬಾಲ ಉಪನಿಷದ್ (ಅಥರ್ವವೇದ)
೧೩. ಶರಭ ಉಪನಿಷದ್ (ಅಥರ್ವವೇದ)
೧೪. ಬೃಹದ್-ಜಾಬಾಲ ಉಪನಿಷದ್ (ಅಥರ್ವವೇದ)

(VII) ಶಕ್ತಿ ಉಪನಿಷದ್ (೯)
೧. ತ್ರಿಪುರಾ ಉಪನಿಷದ್ (ಋಗ್ವೇದ)
೨. ಬಹೃಚ ಉಪನಿಷದ್ (ಋಗ್ವೇದ)
೩. ಸೌಭಾಗ್ಯ-ಲಕ್ಷ್ಮೀ ಉಪನಿಷದ್ (ಋಗ್ವೇದ)
೪. ಸರಸ್ವತೀ-ರಹಸ್ಯ ಉಪನಿಷದ್ (ಕೃಷ್ಣ ಯಜುರ್ವೇದ)
೫. ಅನ್ನಪೂರ್ಣ ಉಪನಿಷದ್ (ಅಥರ್ವವೇದ)
೬. ತ್ರಿಪುರ-ತಾಪಿನೀ ಉಪನಿಷದ್ (ಅಥರ್ವವೇದ)
೭. ದೇವೀ ಉಪನಿಷದ್ (ಅಥರ್ವವೇದ)
೮. ಭಾವನ ಉಪನಿಷದ್ (ಅಥರ್ವವೇದ)
೯. ಸೀತ ಉಪನಿಷದ್ (ಅಥರ್ವವೇದ)

ಇವುಗಳನ್ನು ತಮ್ಮ ವೇದಗಳ ಪ್ರಕಾರ ಗುಂಪು ಮಾಡುವುದಾದರೆ:-
೧. ಋಗ್ವೇದ (೧೦):- ವಾಙ್ಮೇ ಮನಸಿ… ಶಾಂತಿಯಿಂದ ಆರಂಭ
೨. ಕೃಷ್ಣ ಯಜುರ್ವೇದ (೩೨):- ಸಹನಾವವತು… ಶಾಂತಿಯಿಂದ ಆರಂಭ
೩. ಶುಕ್ಲ ಯಜುರ್ವೇದ (೧೯):- ಪೂರ್ಣಮದಃ… ಶಾಂತಿಯಿಂದ ಆರಂಭ
೪. ಸಾಮವೇದ (೧೬):- ಆಪ್ಯಾಯಂತು… ಶಾಂತಿಯಿಂದ ಆರಂಭ
೫. ಅಥರ್ವವೇದ (೩೧):- ಭದ್ರಂ ಕರ್ಣೇಭಿಃ… ಶಾಂತಿಯಿಂದ ಆರಂಭ


No comments:

Post a comment