Thursday, 25 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ರೇತೋಮಯ ಕರ್ಮ್ಮಾತ್ಮಾ (೬)

೬. ರೇತೋಮಯ ಕರ್ಮ್ಮಾತ್ಮಾ -

ವಾಕ್ಕಿನ ರೇತವೇ ಕರ್ಮ್ಮವಾಗಿದೆ. ಮಾನಸರೇತೋಭೂತಾ ವಾಕ್ಕು ಕರ್ಮ್ಮಾಶ್ರಯದಿಂದಲೇ ವೀರ್ಯ್ಯವತೀ ಆಗುತ್ತದೆ. ಎಲ್ಲಿಯವರೆಗೆ ಕೇವಲ ವಾಕ್-ಪ್ರಯೋಗವು ತದನುರೂಪ ಕರ್ಮ್ಮವಿಭೂತಿಯ ಆಶ್ರಯ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಸರ್ವಥಾ ವ್ಯರ್ಥವು. ಇದೇ ಕರ್ಮ್ಮವಿಭೂತಿಯು ಇದರ ಜೀವನ್ಮುಕ್ತಿಯ ಕಾರಣವಾಗುತ್ತದೆ. ಅದಕ್ಕೆ ನಿಮ್ನಲಿಖಿತ ಉಪನಿಷಚ್ಛ್ರುತಿಯು ಪ್ರಮಾಣವಿದೆ –

“ಕುರ್ವನ್ನೇವೇಹ ಕರ್ಮ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ್ಮ ಲಿಪ್ಯತೇ ನರೇ ||” (ಈಶೋಪನಿಷದ್)

ರೇತೋಮೂಲವಾದ ಇದೇ ಪಿತೃಸೃಷ್ಟಿಯ ಬಗ್ಗೆ ಮಹರ್ಷಿ ಐತರೇಯರು (ಮಹೀದಾಸರು) ನಿಮ್ನಲಿಖಿತ ಶಬ್ದಗಳಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ –

“ಅಥಾತೋ ರೇತಸಃ ಸೃಷ್ಟಿಃ |
ಪ್ರಜಾಪತೇ ರೇತೋ ದೇವಾಃ,
ದೇವಾನಾಂ ರೇತೋ ವರ್ಷ,
ವರ್ಷಸ್ಯ ರೇತ ಓಷಧಯಃ,
ಓಷಧೀನಾಂ ರೇತೋಽನ್ನಂ,
ಅನ್ನಸ್ಯ ರೇತೋ ರೇತಃ,
ರೇತಸೋ ರೇತಃ ಪ್ರಜಾಃ |
ಪ್ರಜಾನಾಂ ರೇತೋ ಹೃದಯಂ,
ಹೃದಯಸ್ಯ ರೇತೋ ಮನಃ,
ಮನಸೋ ರೇತೋ ವಾಕ್,
ವಾಚೋ ರೇತಃ ಕರ್ಮ್ಮ |
ತದಿದಂ ಕರ್ಮ್ಮಕೃತಮಯಂ ಪುರುಷೋ ಬ್ರಹ್ಮಣೋ ಲೋಕಃ” (ಐ. ಆ. ೨|೧|೩)

ಇರಾ’ ರಸಮಯ ಕರ್ಮ್ಮಾತ್ಮಾ –

ವಿಜ್ಞಾನಾತ್ಮತತ್ತ್ವದ ವಿಕಾಸವು (ಉತ್ಪತ್ತಿಯು) ಸೌರ ಹಿರಣ್ಮಯ ತೇಜದಿಂದ ಆಗಿದೆ. ಪ್ರಭವಭೂತ ಹಿರಣ್ಮಯತೇಜದ ಸಮ್ಬನ್ಧದಿಂದಲೇ ಈ ವಿಜ್ಞಾನವು ‘ಹಿರಣ್ಮಯಪುರುಷ’ ಎಂದು ಕರೆಯಲ್ಪಟ್ಟಿದೆ. ಆಪೋಮಯ ಪರಮೇಷ್ಠೀ ಪ್ರಜಾಪತಿಯ ರೇತವು ‘ಆಪಃ’ ಆಗಿದೆ. ಇದಕ್ಕೆ “ಆಪೋ ಭೃಗ್ವಙ್ಗಿರೋರೂಪಮಾಪೋಭೃಗ್ವಙ್ಗಿರೋಮಯಮ್” ಎಂಬ ಗೋಪಥ ವಚನದ ಅನುಸಾರ ಭೃಗು-ಅಙ್ಗಿರಾ ನಾಮದ ಎರಡು ವಿವರ್ತ್ತಗಳಿವೆ. ಭೃಗುವು ಸ್ನೇಹ ತತ್ತ್ವ, ಅಙ್ಗಿರವು ತೇಜ ತತ್ತ್ವ. ತೇಜೋಭೂತ ಅಙ್ಗಿರವು ಯೋನಿ, ಸ್ನೇಹಭೂತ ಭೃಗುವು ರೇತ. ಇದರ ಆಹುತಿಯಿಂದ ಹಿರಣ್ಯಗರ್ಭ ಸೂರ್ಯ್ಯನ ಪ್ರಾದುರ್ಭಾವವಾಯಿತು. ಅದು ‘ಚಿತ್ರಂ ದೇವಾನಾಮುದಗಾತ್’ (ಯಜುಃ ಸಂ..) ಮನ್ತ್ರವರ್ಣನೆಯಿಂದ ದೇವಪ್ರಾಣಘನವಾಗಿದೆ. ‘ಕಂಸ್ವಿದ್‍ಗರ್ಭ ದಧ್ರ ಆಪಃ’ – ‘ಅಯಂ ಗಮ್ಮನ್ತ್ಸೀದ’ ಇತ್ಯಾದಿ ಅನ್ಯ ಮನ್ತ್ರಶ್ರುತಿಗಳೂ ಭೃಗ್ವಙ್ಗಿರೋಮಯ ಪರಮೇಷ್ಠೀ ಪ್ರಜಾಪತಿಯ ರೇತದಿಂದಲೇ ದೇವಘನ ಹಿರಣ್ಯಗರ್ಭದ ವಿಕಾಸವನ್ನು ಹೇಳುತ್ತಿದೆ. ಇದನ್ನು ಸಹಜಭಾಷೆಯಲ್ಲಿ ಆದಿತ್ಯಪುರುಷ ಎಂದೂ ಹೇಳಬಹುದು.

ಪ್ರಜಾಪತಿಯ (ಪರಮೇಷ್ಠಿಯ) ಭೃಗ್ವಙ್ಗಿರೋಮಯ ಅಬ್‍ಲಕ್ಷಣ ರೇತದಿಂದ ಉತ್ಪನ್ನವಾದಂತಹಾ ಆದಿತ್ಯನಾಮಕ ಹಿರಣ್ಮಯ ದೇವತೆಯೇ ತನ್ನ ಆಗ್ನೇಯ ರೇತದಿಂದ ವರ್ಷಾ-ಓಷಧಿ-ಅನ್ನ-ರೇತೋ ರೂಪದಲ್ಲಿ ಪರಿಣತವಾಗುತ್ತಾ ಪುರುಷ ಸ್ವರೂಪದಲ್ಲಿ ಆವಿರ್ಭೂತವಾಗುತ್ತದೆ. ಹಾಗಾಗಿ “ದೇವೇಭ್ಯಶ್ಚ ಜಗತ್ ಸರ್ವಂ ಚರಂ ಸ್ಥಾಣ್ವನುಪೂರ್ವಶಃ” ಎಂದು ಹೇಳುವುದು ಅನ್ವರ್ಥವಾಗುತ್ತಿದೆ.  ಆದಿತ್ಯಪುರುಷ ಹಾಗೂ ಮಾನವಪುರುಷ, ಇವರಿಬ್ಬರೂ ಈ ರೇತಃ ಸೃಷ್ಟಿವಿಜ್ಞಾನದ ಅಪೇಕ್ಷೆಯಲ್ಲಿ ಅಭಿನ್ನರಾಗಿದ್ದಾರೆ. ಹಾಗಾಗಿ ‘ಯೋಽಸಾವಾದಿತ್ಯೇ ಪುರುಷಃ ಸೋಽಹಮ್’ ಎಂದು ಹೇಳುವುದೂ ನ್ಯಾಯಸಙ್ಗತವಾಗುತ್ತಿದೆ.

ಪಾರ್ಥಿವ ಓಷಧಿರಸವು ‘ಇರಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಓಷಧಿಗಳಲ್ಲಿ ಇದೇ ರಸದ ಪ್ರಾಧಾನ್ಯತೆ ಇದೆ. ಈ ಪಾರ್ಥಿವ ಇರಾರಸದ ಪ್ರಾಧಾನ್ಯದಿಂದ ಅಲ್ಲಿ ಹೋಗುವ ಹಿರಣ್ಮಯ ದೇವತೆಗಳೂ ಇರಾಮಯರಾಗುತ್ತಾರೆ.  ಈ ರೀತಿ ಅದೇ ದ್ಯುಲೋಕಸ್ಥ ಹಿರಣ್ಮಯ ಪುರುಷವು ಪೃಥಿವಿಯಲ್ಲಿ ಬಂದು ತದ್ರಸದಿಂದ ಸಮ್ಪರಿಷ್ವಕ್ತವಾಗಿ (ನಿಕಟವಾಗಿ ಸ್ವೀಕರಿಸಿ) ‘ಇರಾಮಯ’ ಆಗುತ್ತಿರುತ್ತದೆ. ಇದೇ ಇರಾಮಯ ಪಾರ್ಥಿವ ಪುರುಷವು ಸುಪ್ರಸಿದ್ಧ ಕರ್ಮ್ಮಾತ್ಮಾ ಆಗಿದೆ, ಇದನ್ನು ನಾವು ದ್ಯುಲೋಕಸ್ಥ ದಿವ್ಯ ಹಿರಣ್ಮಯಪುರುಷದ ದ್ವಿತೀಯಾವತಾರ ಎಂದು ಹೇಳಬಹುದು. ಪಾರ್ಥಿವ ಸ್ತೌಮ್ಯತ್ರಿಲೋಕಿಯ ವೈಶ್ವಾನರ-ತೈಜಸ-ಪ್ರಾಜ್ಞರಸವೂ ಇರಾಮಯ ಪುರುಷದಲ್ಲಿ ಸಮನ್ವಿತವಾಗಿದೆ. ಆದ್ದರಿಂದ ಈ ತದ್ರೂಪವು (ವೈ-ತೈ-ಪ್ರಾ. ಮಯ) ಪ್ರಾಜ್ಞಮೂರ್ತ್ತಿ ಪುರುಷವು ‘ಕರ್ಮ್ಮಾತ್ಮಾ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ, ಇದನ್ನು ಪೂರ್ವದಲ್ಲಿ ‘ದೇವಸತ್ಯ’ ಎಂಬ ಹೆಸರಿನಿಂದಲೂ ವ್ಯವಹೃತಗೊಳಿಸಲಾಗಿದೆ.

ಹೇಗೆ ದ್ಯುಲೋಕರಸಪ್ರಧಾನ ವಿಜ್ಞಾನಾತ್ಮವು ತನ್ನ ವಾಸ್ತವಿಕ ಹಿರಣ್ಯತೇಜದ ಸಮ್ಬನ್ಧದಿಂದ ‘ಹಿರಣ್ಮಯಪುರುಷ’ ಎನ್ನಿಸಿಕೊಳ್ಳುತ್ತದೆ, ಹಾಗೇ ಪಾರ್ಥಿವರಸಪ್ರಧಾನ ಕರ್ಮ್ಮಾತ್ಮವೂ ಪರೋಕ್ಷಭಾಷಾ ಸಮ್ಬನ್ಧದಿಂದ ‘ಹಿರಣ್ಮಯ’ ಎಂಬ ಹೆಸರಿನಿಂದಲೇ ವ್ಯವಹೃತವಾಗಿದೆ. ಎರಡೂ ಹಿರಣ್ಮಯವಾಗಿವೆ. ಅನ್ತರವೇನೆಂದರೆ, ವಿಜ್ಞಾನಾತ್ಮವು ಹಿರಣ್ಮಯವಾಗುವುದರಿಂದ ಹಿರಣ್ಮಯ ಎನ್ನಿಸಿಕೊಂಡಿದ್ದರೆ, ಕರ್ಮ್ಮಾತ್ಮವು ಇರಾಮಯ ಆಗುವುದರಿಂದ ಹಿರಣ್ಮಯ ಆಗಿದೆ. ಇರಾಮಯ ಕರ್ಮ್ಮಾತ್ಮವನ್ನು ಹಿರಣ್ಮಯ ಎಂದು ಹೇಳುವ ಏಕಮಾತ್ರ ಅಭಿಪ್ರಾಯ ಏನೆಂದರೆ, ಕರ್ಮ್ಮಾತ್ಮವು ವಾಸ್ತವದಲ್ಲಿ ಅದೇ ದಿವ್ಯ ಹಿರಣ್ಮಯದ ಪ್ರವರ್ಗ್ಯಾಂಶವಾಗಿರುವುದು. ಕೇವಲ ಭೂತಭಾಗಾಸಕ್ತಿಯಿಂದ ಭೂತಪ್ರಧಾನವಾದ ಇರಾರಸದ ಪ್ರಾಧಾನ್ಯದಿಂದ ಇದು ಹಿರಣ್ಮಯದಿಂದ ಭಿನ್ನವಾಗಿದೆ. ಶ್ರೇಷ್ಠತಮ ಯಜ್ಞಾದಿ ಸೌರ ಕರ್ಮ್ಮಾನುಷ್ಠಾನದಿಂದ ಯಾವ ದಿನ ಈ ಕರ್ಮ್ಮಾತ್ಮವು ತನ್ನ ಪಾರ್ಥಿವ ಇರಾರಸದ ಗ್ರನ್ಥಿಗಳನ್ನು ಶಿಥಿಲಗೊಳಿಕೊಳ್ಳುತ್ತದೆಯೋ, ಆ ಸಮಯದಲ್ಲಿ ಈ ಪಾರ್ಥಿವಾಕರ್ಷಣೆಯಿಂದ ವಿಮುಕ್ತವಾಗಿ ತನ್ನ ಪ್ರಾತಿಸ್ವಿಕ (ಸ್ವಂತ) ವಿಶುದ್ಧ ಹಿರಣ್ಮಯರೂಪದಲ್ಲಿ ಪರಿಣಾತವಾಗುತ್ತದೆ. ಇದೇ ಉಭಯವಿಧ ಪುರುಷವಿಜ್ಞಾನವನ್ನು ಲಕ್ಷ್ಯದಲ್ಲಿಟ್ಟುಕೊಂಡು ಐತರೇಯರು ವೇದದ ಅಭಿಪ್ರಾಯವನ್ನು ಒತ್ತಿ ಹೇಳುತ್ತಾರೆ –

“ಸ ಇರಾಮಯಃ | ಯದ್ಧಿ-ಇರಾಮಯಃ, ತಸ್ಮಾದ್ಧಿರಣ್ಮಯಃ |

ಹಿರಣ್ಮಯೋ ವಾ ಅಮುಷ್ಮಿಂಲ್ಲೋಕೇ ಸಮ್ಭವತಿ, ಯ ಏವಂ ವೇದ |” (ಐ.ಆ. ೨|೧|೩)

ಮುಂದಿನ ಲೇಖನದಲ್ಲಿ  . ಪ್ರಪದತಿಷ್ಠ ಕರ್ಮ್ಮಾತ್ಮಾ

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment