Saturday, 6 October 2018

ಪಿತೃಕಾರ್ಯಗಳು ಸತ್ತವರಿಗೇ ಹೊರತು ಬದುಕಿರುವವರಿಗಲ್ಲ

ಪಿತೃಕಾರ್ಯಗಳು ಬದುಕಿರುವವರಿಗೆ, ಸತ್ತವರಿಗಲ್ಲ ಎಂದು ವೇದದ ಮಂತ್ರ ಉದಾಹರಿಸುವವರಿಗೆ ಅವರೇ ಉದಾಹರಿಸಿದ ಮಂತ್ರಗಳಲ್ಲಿ ಅದು ಮೃತ ಪಿತೃಗಳಿಗೇ ಹೇಳಿರುವುದು ಎಂಬ ಪ್ರತ್ಯುತ್ತರ.

ಕೆಳಕಂಡ ಮಂತ್ರಗಳನ್ನು ಮೃತ ಪಿತೃಕಾರ್ಯ ವಿರೋಧಕ್ಕಾಗಿ ಬಳಸಿಕೊಂಡಿದ್ದಾರೆ. ಆದರೆ ಅದು ದುರ್ವ್ಯಾಖ್ಯಾನ ಎಂಬುದನ್ನು ತೋರಿಸಿ ಕೊಡುವ ಸಲುವಾಗಿ ಮಾತ್ರ ಕೆಳಕಂಡ ವ್ಯಾಖ್ಯಾನವಿದೆ. ಇನ್ನೂ ಆಳದ ವಿಚಾರಗಳನ್ನು ವೇದದ ಮೂಲ ಭಾಷೆಯಾದ ಬ್ರಾಹ್ಮಿ ಭಾಷೆಯ ಅಧ್ಯಯನ ಹಾಗೂ ವೇದದ ನಿತ್ಯ ಉಪಾಸನೆಯಿಂದ ಮಾತ್ರ ತಿಳಿಯಲು ಸಾಧ್ಯ.

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ |
ತತ್ತ್ವಂ ಪೂಶನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||ಶುಕ್ಲ ಯಜುರ್ವೇದ ೪೦-೧೫||

ಆದಿತ್ಯ ಮಂಡಲಲ್ಲಿ ನೆಲೆಗೊಂಡ ಸತ್ಯಾತ್ಮರೂಪಿಯಾದ ಪರಬ್ರಹ್ಮಕ್ಕಿರುವ ಪ್ರವೇಶದ್ವಾರವು ತೇಜೋಮಯವಾದ ಚಿನ್ನದ ಮುಚ್ಚಳದಿಂದ ಮುಚ್ಚಿಗೊಂಡಿದ್ದು. ಹೇ ಪೂಷನ್! ಸತ್ಯಸ್ವರೂಪಿಯಾದ ನಿನ್ನ ಉಪಾಸನೆ ಮಾಡುವ ಅಥವಾ ನಿಜವಾದ ಧರ್ಮವನ್ನು ಉಪಾಸನೆ ಮಾಡುವ ನನಗೆ ನಿನ್ನ ಕಾಣುವುದಕ್ಕೆ ಸಾಧ್ಯವಾಗುವಂತೆ ಮುಚ್ಚಳವನ್ನು ತೆಗದು ಕೊಡು. ಪರಬ್ರಹ್ಮವು  ನಿರ್ಗುಣ ನಿರಾಕಾರ ವಸ್ತು. ಸಾಮಾನ್ಯರಿಂದ ಅದರ ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಎಲ್ಲರ ಸೌಲಭ್ಯಕ್ಕೆ ಬೇಕಾಗಿ ಪರತತ್ತ್ವದ ಸಗುಣಸಾಕಾರರೂಪನಾದ ಸೂರ್ಯನನ್ನು ಇಲ್ಲಿ ಸ್ತೋತ್ರ ಮಾಡಿದ್ದು. ಇದು ಪ್ರಸಿದ್ಧ ಈಶಾವಾಸ್ಯ ಉಪನಿಷತ್ತಿನ ವಾಕ್ಯವೂ ಹೌದು. ಇದರಲ್ಲಿ ಅದು ಹೇಗೆ ಜೀವತ್ ಪಿತಾದಿಗಳಿಗೆ ಮಾತ್ರ ಪಿತೃಕಾರ್ಯ ಮೃತರಿಗಲ್ಲ ಎಂಬುದು ಕಂಡುಬರುತ್ತದೆಯೋ, ಆ ದೇವರೇ ಬಲ್ಲ!!

ಆದರೆ ಈ ಮಂತ್ರವು ಪಿತೃ, ಪಿತಾಮಹ, ಪ್ರಪಿತಾಮಹಕ್ಕೆ ಸಂಬಂಧಿಸಿದ ವಸು, ರುದ್ರ, ಆದಿತ್ಯ ಎಂಬ ಸ್ಥಾನಗಳಲ್ಲಿ ಆದಿತ್ಯ ಮಂಡಲವನ್ನು ವಿವರಿಸುತ್ತಿರುವುದು ಎಂಬುದು ಸ್ಪಷ್ಟವಾಗುತ್ತದೆ.ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ |
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನ್ಯೋ ಅಭಿ ಚಾಕಶೀತಿ ||ಋಗ್ವೇದ ೧-೧೬೪-೨೦||

ಇದು ಜೀವಾತ್ಮ ಪರಮಾತ್ಮ ಎಂಬ ಭೇದವು ಬಾಹ್ಯ ರೂಪದಲ್ಲಿದ್ದರೂ ದೇಹದಲ್ಲಿ ವ್ಯವಹರಿಸುವಾಗ ಏಕಾತ್ಮವಾಗಿಯೇ ಇರುತ್ತದೆ ಎಂದು ಸಾರುವ ಅದ್ವೈತದ ಮಂತ್ರ. ಇಲ್ಲಿ ಸತ್ತ ನಂತರದ ವಿಚಾರಗಳನ್ನು ಚರ್ಚಿಸಿಲ್ಲ. ಇದನ್ನು ಉದಾಹರಿಸಿ ಶ್ರಾದ್ಧಾದಿ ಪಿತೃ ಕರ್ಮಗಳು ಮೃತ ಪಿತೃಗಳಿಗಲ್ಲ, ಬದುಕಿರುವವರಿಗೆ ಎಂದು ವೇದದಲ್ಲಿ ಹೇಳಿದೆ ಎಂಬ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ.

ಅನಚ್ಛಯೇ ತುರಗಾತು ಜೀವಮೇಜದ್ಧ್ರುವಂ ಮಧ್ಯ ಆ ಪಸ್ತ್ಯಾನಾಮ್ |
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ || ಋಗ್ವೇದ ೧-೧೬೪-೩೦ ||

ಇದರ ಮೊದಲನೆಯ ಪಾದವು ಹಿಂದಿನ ಋಕ್ಕುಗಳೊಂದಿಗೆ ಮುಂದುವರೆದ ವ್ಯಾಖ್ಯಾನ ಹೊಂದಿರುತ್ತದೆ. ಅದು ಜೀವು ಜೀವಿಸುವ ಜೀವನದ ವಿಚಾರವನ್ನು ಹೇಳುತ್ತದೆ. ಮಂತ್ರದ ಎರಡನೇ ಪಾದದಲ್ಲಿ ಆ ಜೀವಶಕ್ತಿಯು ಸ್ವಧಾಕಾರದ ಮುಖೇನ ಹೇಗೆ ಮೃತ್ ಸ್ವರೂಪದಲ್ಲಿ ಪ್ರವರ್ತಿಸುತ್ತದೆ ಎಂದು ವಿವರಿಸುತ್ತದೆ. ಸ್ವಧಾಕಾರದಿಂದ ವ್ಯವಸ್ಥಿತವಾಗಿ ಮರ್ತ್ಯದಲ್ಲಿ ಪಿಂಡ ಪ್ರಧಾನ ಮಾಡಿದಾಗ ಜೀವವು ಮರ್ತ್ಯದಲ್ಲಿ ಕರ್ಮಾನುಸಾರ ಆಯಾ ಗತಿಯನ್ನು ಅಥವಾ ಮಾರ್ಗವನ್ನು (ಯೋನಿ) ಹೊಂದುತ್ತದೆ. ಅಂದರೆ ಮುಂದಿನ ಗತಿ ನಿರ್ಣಯವು ಸ್ವಧಾದಿಂದ ಆಗುತ್ತದೆ ಎಂದು ಸ್ಪಷ್ಟವಿದೆ. ಅಮರ್ತ್ಯೋ ಮರ್ತ್ಯೇನಾ ಸಯೋನಿಃ = ಆತ್ಮದ ದೈವಿಕಾಂಶವು ವಂಶದಲ್ಲೇ ಉಳಿದು ಮರ್ತ್ಯರೊಂದಿಗೆ ವ್ಯವಹರಿಸುತ್ತದೆ, ಇದು ದೈವಿಕ ವರ್ಗ, ಸಂತಾನ ನಿಸ್ತಂತು ಆಗದಂತೆ ಬೆಸೆಯುವ ಕೊಂಡಿ. ಅದಕ್ಕೆ ಪಿತೃಲೋಕದಲ್ಲಿ ೩ ತಲೆಮಾರಿನವರೆಗೆ ಸ್ಥಾನ ಎಂಬ ವಿಚಾರ ಬೇರೆ ಮಂತ್ರಗಳಲ್ಲಿದೆ.

ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು |
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋಽಮರ್ತ್ಯಸ್ತನ್ವಾ೩ ವರ್ಧಮಾನಃ || ಋಗ್ವೇದ ೬-೯-೪ ||

ಜೀವನ ಯಜ್ಞದಲ್ಲಿ ನಿಸ್ವಾರ್ಥವಾಗಿ ಸಾಮಾಜಿಕ ಪರವಾಗಿ ನನ್ನನ್ನು ನಾನು ತೊಡಗಿಸಿಕೊಂಡಾಗ ಮರ್ತ್ಯದಲ್ಲಿಯೇ  ಆತ್ಮವೆಂಬ “ಜ್ಯೋತಿಯ” ದರ್ಶನವಾಗುತ್ತದೆ. ಆ ನನ್ನಲ್ಲಿರುವ ನಾನು ಎಂಬುದು ಅಚಲವಾದದ್ದು, ಶಾಶ್ವತವಾದದ್ದು. ಆ ಶಾಶ್ವತತೆ ಹೇಗೆ ನಿರಂತರವಾಗುತ್ತದೆ? ಮಂತ್ರದಲ್ಲಿ ತನ್ವಾ (ಅ ಅ ಆ) ಎಂಬ ೩ ಸ್ವರಗಳ ಉಚ್ಚಾರಣೆ ಆಗುತ್ತದೆ. ಅಂದರೆ ಪಿತೃ, ಪಿತಾಮಹ, ಪ್ರಪಿತಾಮಹ ಅಥವಾ ಮಾತಾ, ಮಾತಾಮಹಿ, ಪ್ರಮಾತಾಮಹಿ ಎಂಬ ಮೃತ ಪಿತೃ/ಮಾತೃ ವರ್ಗದ ಕಾರಣದಿಂದಲೇ ವಾಂಶಿಕ ಕೊಂಡಿಯು ನಿರಂತರತೆ (ವರ್ಧಮಾನಃ) ಹೊಂದುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ವೇದ ಭಾಷೆ ಗೊತ್ತಿಲ್ಲದ ಮೂಢರು ಮಾತ್ರ ಈ ಮಂತ್ರವು ಶ್ರಾದ್ಧ ವಿರೋಧಿ ಎಂದು ಬಡಬಡಾಯಿಸುತ್ತಾರೆ.

ತ್ವಂ ಸ್ತ್ರೀ ತ್ವಂ ಪುಮಾನ್ ಅಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || ಅಥರ್ವ ೧೦-೦೮-೨೭ ||

ಈ ಮಂತ್ರವು ಶ್ರಾದ್ಧ ವಿರೋಧಿ ಎಂದು ವೇದದ್ರೋಹಿಗಳು ಉಲ್ಲೇಖಿಸಿದ್ದಾರೆ. ಆದರೆ ಇದು ಮೂಲತಃ ಅಥರ್ವವೇದದ “ಜ್ಯೇಷ್ಠಬ್ರಹ್ಮವರ್ಣನಮ್” ಸೂಕ್ತದ ಮಂತ್ರ. ಸ್ತ್ರೀ, ಪುರುಷ, ಕುಮಾರ, ಕುಮಾರಿ, ಇತ್ಯಾದಿಯಾಗಿ ವ್ಯವಹಾರ. ಜೀವನ ವ್ಯವಹಾರ ಕಾಲದಲ್ಲಿ ದೇಹ ಜೀರ್ಣವಾದಾಗ ಅದನ್ನು ಬಿಟ್ಟು ಹೊರ ಹೋಗುತ್ತದೆ. ಅದು ವಿಶ್ವತೋಮುಖವಾಗುತ್ತದೆ. ಅಂದರೆ ವಿಶ್ವ ಎನ್ನುವುದಕ್ಕೆ ಬದ್ಧವಾಗಿರುವ ಗಣಿತ ಸೂತ್ರಗಳೇನಿವೆಯೋ ಅದಕ್ಕೆ ಬದ್ಧವಾಗಿ ವ್ಯವಹರಿಸುತ್ತದೆ. ಆಗ ವಿಶ್ವಸೂತ್ರದ ಮುಖೇನ (ಮಂತ್ರ ೩೭, ೩೮) ಅದರ ಗತಿ ನಿರ್ಣಯವಾಗುತ್ತದೆ. ಅಂದರೆ ಕರ್ಮಸಿದ್ಧಾಂತದ ಲೆಕ್ಕದಂತೆ ಜನ್ಮ ಪುನರ್ಜನ್ಮಗಳು ಘಟಿಸುತ್ತವೆ. ಯಾವುದು ಆತ್ಮದ ಆತ್ಮಿಕಾಂಶ ಮಾತ್ರ!! ದೈವಿಕಾಂಶವು ೩ ತಲೆಮಾರಿನವರೆಗೆ ವಂಶದಲ್ಲೇ ಉಳಿಯುತ್ತದೆ. ಇದೂ ವಿಶ್ವಸೂತ್ರದ ಅಂತರ್ಗತವಾದ ವಿಚಾರವೇ ಆಗಿದೆ. ಇನ್ನು ಇದೇ ಸೂಕ್ತದ ಕೊನೆಯ ಮಂತ್ರದಲ್ಲಿ “ರಸೇನ ತೃಪ್ತೋ ನ ಕುತಶ್ಚನೋನಃ” ಅಂದರೆ ಮೃತ ಪಿತಾದಿಗಳು ತರ್ಪಣಾದಿಗಳಿಂದ ತೃಪ್ತರಾಗುತ್ತಾರೆ ಎಂದೇ ಅರ್ಥ.

ಇನ್ನು ಅಥರ್ವವೇದದ ೧೮ನೇ ಕಾಂಡವು ಸಂಪೂರ್‍ಣ ಪಿತೃಮೇಧವನ್ನು ೪ ಸೂಕ್ತಗಳಲ್ಲಿ ೨೮೩ ಮಂತ್ರಗಳಲ್ಲಿ ಉದಾಹರಿಸಿದೆ. ಒಂದೊಂದು ಮಂತ್ರದ ಸರಿಯಾದ ಉಪಾಸನೆ ಮಾಡುತ್ತಾ ನಾದಾನುಸಂಧಾನ ಮಾಡುತ್ತಾ ಹೋದರೆ ಮೃತ ಪಿತೃಗಳು, ಅಗ್ನಿಷ್ವಾತ್ತಾದಿ ದೇವ ಪಿತೃಗಳು ಪ್ರತ್ಯಕ್ಷವಾಗಿ ಕಾಣುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸುಮ್ಮನೆ ಶ್ರಾದ್ಧ ಮಾಡಬೇಡಿ ಎಂದು ಯಾರೋ ಬ್ರಿಟೀಷ್ ದಾಸರು ಹೇಳಿದ್ದನ್ನು ಕೇಳಿ ಗೊಣಗುವುದಕ್ಕಿಂತ ಸ್ವಾಧ್ಯಾಯ, ಅನುಷ್ಠಾನ, ಉಪಾಸನಾದಿಗಳಿಂದ ಪ್ರತ್ಯಕ್ಷ ಅನುಭವ ಪಡೆಯಿರಿ ಎಂದು ಶ್ರಾದ್ಧ, ತರ್ಪಣಾದಿ ಮೃತ ಪಿತೃ ಕರ್ಮಗಳನ್ನು ವಿರೋಧಿಸುವವರಲ್ಲಿ ಸವಿನಯ ಪ್ರಾರ್ಥನೆ.

ಪಿತೃಕಾರ್ಯಗಳು ಮೃತರಿಗೇ ಮಾಡುವುದು ಎಂಬುದರ ವೇದದ ಆಧಾರಕ್ಕಾಗಿ ಕೆಳಕಂಡ ಲೇಖನ ಓದಿರಿ. ಶ್ರಾದ್ಧಾದಿ ಕರ್ಮಗಳನ್ನು ಬಿಡಬೇಡಿರಿ. ಬಿಟ್ಟು ಕೆಟ್ಟ ಮೇಲೆ ಸರಿಪಡಿಸುವುದು ಬಹಳ ಕಷ್ಟ; ಕೆಲ ಸಂದರ್ಭದಲ್ಲಿ ಅದಕ್ಕೆ ಪರಿಹಾರವೇ ಇರುವುದಿಲ್ಲ. ನಿಮ್ಮ ಸಂತತಿಯ ನಿರಂತರತೆಗಾಗಿ ಶ್ರಾದ್ಧಾದಿ ಕರ್ಮಗಳು ಅತ್ಯವಶ್ಯಕ. ಇದಕ್ಕೆ ಜೆನೆಟಿಕ್ಸ್ ಕಾರಣವೂ ಇದೆ. ಸಮಯಾವಕಾಶ ಮಾಡಿಕೊಂಡು ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳಿ. ಆದರೆ ಶ್ರಾದ್ಧಾದಿಗಳನ್ನು ಬಿಡಬೇಡಿರಿ.


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a Comment