Friday, 9 November 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಗಮನಸ್ಥಿತಿ ವಿಶ್ಲೇಷಣೆ (೧೬)

೧೬. ಗಮನಸ್ಥಿತಿ ವಿಶ್ಲೇಷಣೆ

ಇಂದು ಆಶ್ವಿನ ಶುಕ್ಲ ದ್ವಿತೀಯಾ ಎಂದು ಕಲ್ಪನೆ ಮಾಡಿಕೊಳ್ಳಿ. ಪಶ್ಚಿಮ ಕ್ಷಿತಿಜದಲ್ಲಿ ಚನ್ದ್ರೋದಯ ಆಗಿದೆ. ಈ ಸಮಯದಲ್ಲಿ ಚನ್ದ್ರನು ಸ್ವಾತಿ-ನಕ್ಷತ್ರದೊಂದಿಗೆ ಯೋಗ ಮಾಡಿದ್ದಾನೆ, ಶರದೃತು, ಸಾಯಂಕಾಲವಾಗಿದೆ. ಈ ಮುಹೂರ್ತ್ತದಲ್ಲಿ ಓರ್ವ ಪೂರ್ಣಾಯುರ್ಭೋಕ್ತಾ ಭಾಗ್ಯಶಾಲೀ ಗೃಹಸ್ಥನ ಆತ್ಮವು ಶರೀರವನ್ನು ಬಿಟ್ಟಿದೆ. ಮೃತಶರೀರದ ಈ ಉತ್ಕ್ರಾನ್ತ ಆತ್ಮವು (ಮಹಾನಾತ್ಮಯುಕ್ತ ಕರ್ಮ್ಮಾತ್ಮವು, ಅಂದರೆ ಕರ್ಮ್ಮಾತ್ಮಯುಕ್ತ ಮಹಾನಾತ್ಮವು) ಯಾವ ಕಡೆ ಚನ್ದ್ರನು ಸ್ಥಿತನಾಗಿದ್ದಾನೆಯೋ, ಅದೇ ಕಡೆ ತನ್ನ ಗತಿ ಪಡೆದುಕೊಳ್ಳುತ್ತದೆ. ಉತ್ಕ್ರಾನ್ತ ಆತ್ಮವು ತತ್ಸಮಯದ ಚನ್ದ್ರಸ್ಥಿತಿಯ ಅನುರೂಪವಾದ ಯಾವ ಗಮನ ಮಾರ್ಗವನ್ನು ನಿಶ್ಚಿತಗೊಳಿಸಿಕೊಂಡಿದೆಯೋ, ಆಸಾಪಿಣ್ಡ್ಯಭಾವ ಪರ್ಯ್ಯನ್ತ ಇದು ಆ ನಿಶ್ಚಿತ ಪಥದತ್ತಲೇ ಕ್ರಮವಾಗಿ ಅಗ್ರೇಸರವಾಗುತ್ತಾ ಇರುತ್ತದೆ.

ಆಶ್ವಿನ ದ್ವಿತೀಯದಂದು ಪಶ್ಚಿಮ ಕ್ಷಿತಿಜದ ಬಿನ್ದುವಿಶೇಷದ ಮೇಲೆ ಉದಿತವಾಗುವ ಚನ್ದ್ರನು ಕ್ರಮವಾಗಿ ಬದಲಿಸಲು ಆರಂಭಿಸುತ್ತಾನೆ. ನಕ್ಷತ್ರಭೋಗಾನುಗತ ಕಾಲಭೇದದಿಂದ, ಚಾನ್ದ್ರ ಉದಯಾಸ್ತವು ಪರಿವರ್ತ್ತನಶೀಲ ಆಗಿರುತ್ತದೆ. ತನ್ನ ಪರಿವರ್ತ್ತನರೂಪೀ ಈ ಪರಿಕ್ರಮದಿಂದ ಇದು ೨೭ ದಿನ, ಹಾಗೂ ಕೆಲ ಘಂಟೆಗಳಲ್ಲಿ ಒಂದು ದಕ್ಷಪರಿಕ್ರಮವನ್ನು ಪೂರ್ತಿಗೊಳಿಸುತ್ತದೆ. ಸ್ವಾಕ್ಷಪರಿಭ್ರಮಣಗತಿವಞ್ಚಿತ ಚನ್ದ್ರನ ಈ ಸ್ವವೃತ್ತಗತಿಯು ನಿರ್ದ್ದಿಷ್ಟ ಉಕ್ತ ಸಮಯದಲ್ಲಿ ಪೂರ್ತಿಯಾಗುತ್ತದೆ. ೨೭ ದಿನ ಹಾಗೂ ಕೆಲ ಅಂಶಗಳ ಸಂಕಲನದಿಂದ ಚಾನ್ದ್ರ ಸಮ್ವತ್ಸರದಲ್ಲಿ ೧೩ ಮಾಸಗಳು ಆಗುತ್ತವೆ. ಈ ರೀತಿ ಸೌರಸಮ್ವತ್ಸರದ ಪೂರ್ತಿ ಪರಿಕ್ರಮ ಮಾಡಲು ಚನ್ದ್ರನಿಗೆ ಭರ್ತಿ ೧೩ ತಿಂಗಳು ಹಿಡಿಯುತ್ತದೆ. ಪ್ರತಿ ಮಾಸದ ಶುಕ್ಲ-ದ್ವಿತೀಯಕ್ಕೆ ಗಮನಶೀಲವಾದ ಪ್ರೇತಾತ್ಮ ಹಾಗೂ ಚನ್ದ್ರನ ಸಮಸಾಮ್ಮುಖ್ಯವಾಗುತ್ತಾ ಇರುತ್ತದೆ. ಈ ತಿಥಿಯಲ್ಲಿ ಪ್ರೇತಾತ್ಮದಲ್ಲಿ ಚಾನ್ದ್ರಬಲವು ಸಮಾವೇಶಕ್ಕಾಗಿ ಆ ವೈಜ್ಞಾನಿಕ ಪ್ರಕ್ರಿಯೆಯ ಆಶ್ರಯ ಪಡೆಯಲಾಗುತ್ತದೆ. ಅದುವೇ ಮಾಸಿಕ ಶ್ರಾದ್ಧಾಪರಪಯ್ಯಾಯಕ ‘ಏಕೋದ್ದಿಷ್ಟಶ್ರಾದ್ಧ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. 

ಮೊದಲ ತಿಂಗಳಿನಲ್ಲಿ ಪಾರ್ಥಿವ ಆಕರ್ಷಣ ವಿಶೇಷತೆಯಿಂದ ಪ್ರಬಲವಾಗಿರುತ್ತದೆ, ಹಾಗಾಗಿ ಆರಂಭದಲ್ಲಿ ಪಾಕ್ಷಿಕಶ್ರಾದ್ಧ (ಹದಿನೈದನೇ ದಿನದ ಶ್ರಾದ್ಧ) ಮಾಡಲಾಗುತ್ತದೆ. ಅನಂತರ ಷಾಣ್ಮಾಸಿಕ, ಸರ್ವಾನ್ತದಲ್ಲಿ ವಾರ್ಷಿಕಶ್ರಾದ್ಧ ಮಾಡಲಾಗುತ್ತದೆ. ಹೇಗೇಗೆ ಪ್ರೇತಾತ್ಮವು ಪಾರ್ಥಿವಾಕರ್ಷಣದಿಂದ ವಿಮುಕ್ತವಾಗಿ ಚಾನ್ದ್ರಮಣ್ಡಲದ ಸಮೀಪಕ್ಕೆ ಹೋಗುತ್ತಲಿರುತ್ತದೆಯೋ, ಹಾಗಾಗೆ ಇದರ ಸ್ಥಿತಿಯಲ್ಲಿ ವಿಕಾಸವಾಗುತ್ತಾ ಹೋಗುತ್ತದೆ. ಈ ಎಲ್ಲಾ ಸ್ಥಿತಿಗಳನ್ನು ತ್ರೈಲೋಕ್ಯದ ಆಧಾರದಲ್ಲಿ ಅಶ್ರುಮುಖ-ಪಾರ್ವಣ-ನಾನ್ದೀಮುಖ, ಎಂಬ ಹೆಸರುಗಳಿಂದ ವ್ಯವಹೃತಗೊಳಿಸಲಾಗಿದೆ. ಪಾರ್ಥಿವ ಸ್ಥಿತಿಯಲ್ಲಿ ಇದೇ ಅಶ್ರುಮುಖವಾಗಿದ್ದರೆ, ಅನ್ತರಿಕ್ಷ ಸ್ಥಿತಿಯಲ್ಲಿ ಪಾರ್ವಣ ಎಂದೂ, ದಿವ್ಯ ಚಾನ್ದ್ರಸ್ಥಿತಿಯಲ್ಲಿ ನಾನ್ದೀಮುಖ ಎಂದೂ ಆಗುತ್ತವೆ. ಚಾನ್ದ್ರಲೋಕಕ್ಕೆ ತಲುಪಿ ಅಲ್ಲಿರುವ ಸ್ವವಂಶಜ ನಾನ್ದೀಮುಖ ಪಿತರರೊಂದಿಗೆ ಸೇರಿಕೊಂಡು ತಾನೂ ತದ್ರೂಪವನ್ನು ಪಡೆಯುತ್ತಾ ಇದು ಪ್ರೇತ ವಿಶುದ್ಧ ಸೌಮ್ಯಭಾವದಲ್ಲಿ, ಪವಿತ್ರಭಾವದಲ್ಲಿ ಪರಿಣತವಾಗುತ್ತದೆ. ಈ ಪಾವನ ಸ್ಥಿತಿಯೇ ಆಶೌಚ ನಿವೃತ್ತಿಯ ಬೀಜ ಎಂದು ನಂಬಲಾಗಿದೆ. ಇಲ್ಲಿ ೧೩ ಮಾಸಾತ್ಮಕ ಕಾಲವನ್ನು ೧೩ ದಿನಗಳಲ್ಲಿ ಅನ್ತರ್ಭಾವವೆಂದು ನಂಬಲಾಗಿದೆ.
ತಾತ್ಪರ್ಯವೇನೆಂದರೆ ಪ್ರೇತಾತ್ಮವು ತನ್ನ ನಿಶ್ಚಿತ ಗತಿಮಾರ್ಗದಿಂದ ವೃದ್ಧಿಯಾಗುತ್ತಲಿರುತ್ತದೆ. ಚನ್ದ್ರನೂ ಬದಲಾಗುತ್ತಲಿರುತ್ತಾನೆ. ತ್ರಯೋದಶ ಮಾಸಾನಂತರ ಸರಿಯಾಗಿ ಅದೇ ಸಾಮ್ಮುಖ್ಯಭಾವವು ಉಪಲಬ್ಧವಾದಾಗ ಈ ನಾನ್ದೀಮುಖರೊಂದಿಗೆ ಸಂಯುಕ್ತವಾಗುತ್ತದೆ. ಇದೇ ಅದರ ಸಾಪಿಣ್ಡ್ಯಭಾವವು. ಇಲ್ಲೇ (ಚನ್ದ್ರಲೋಕದಲ್ಲಿ) ಈ ಪ್ರೇತಪಿಣ್ಡದ ಪಿತಾ, ಪಿತಾಮಹ, ಪ್ರಪಿತಾಮಹಾದಿಗಳ ಅಪತ್ಯಪಿಣ್ಡ ಪ್ರತಿಷ್ಠಿತವಾಗಿರುತ್ತದೆ. ಈ ಪಿತೃಪಿಣ್ಡಗಳೊಂದಿಗೆ ಈ ಪ್ರೇತಪಿಣ್ಡವು ಯುಕ್ತವಾಗುವುದೇ “ಸಾಪಿಣ್ಡ್ಯ” ಆಗಿದೆ. ಇದೇ ಪ್ರಾಕೃತಿಕ ಸ್ಥಿತಿಯ ಪ್ರಾಪ್ತಿಗಾಗಿ ಪ್ರೇತಾತ್ಮದ ಪುತ್ರ/ಪುತ್ರಿ/ಕರ್ತೃವಿನಿಂದ ‘ಸಪಿಣ್ಡೀಕರಣ’ ಎಂಬ ಹೆಸರಿನ ಪ್ರಕ್ರಿಯಾ ವಿಶೇಷವನ್ನು ಮಾಧ್ಯಮವನ್ನಾಗಿಸಿಕೊಳ್ಳುವುದು ಆವಶ್ಯಕವಾಗುತ್ತದೆ. ಯಾವ ಋತುವಿನಲ್ಲಿ ಕರ್ಮ್ಮಾತ್ಮವು ಶರೀರ ಪರಿತ್ಯಾಗ ಮಾಡುತ್ತದೆಯೋ, ಅದೇ ಋತುಮಯ ಸೂಕ್ಷ್ಮಭೂತ ಅಙ್ಗುಷ್ಠಮಾತ್ರ ಶರೀರದಿಂದ ಈ ಪ್ರೇತಾತ್ಮವನ್ನು ವಹನಗೊಳಿಸುತ್ತದೆ. ಹಾಗಾಗಿ ಈ ಪಿಣ್ಡ-ಶರೀರವನ್ನು ‘ಆತಿವಾಹಿಕಶರೀರ’ ಎಂದು ಹೇಳಲಾಗುತ್ತದೆ. ಇದನ್ನು ಆತ್ಮಗತಿವಿಜ್ಞಾನೋಪನಿಷತ್ತಿನಲ್ಲಿ ವಿಸ್ತಾರವಾಗಿ ಹೇಳಲಾಗಿದೆ.


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment