Saturday, 28 December 2013

ಉಚಥ್ಯ ಋಷಿವರೇಣ್ಯರ ಗಣಿತ ಸಮೀಕರಣಗಳು - ೧ಋಗ್ವೇದ ಮಂಡಲ -೧, ಸೂಕ್ತ - ೧೬೧ರಲ್ಲಿ ಉಚಥ್ಯ ಋಷಿವರೇಣ್ಯರು ತಮ್ಮ ಸಂಶೋಧನಾ ಅನುಭವವನ್ನು ಗಣಕೀಕರಿಸಿ ಇಂತೆಂದಿದ್ದಾರೆ:

ಯಾವುದಾವುದು ಕೇಳು ಯಾವುದರೊಳಗೊಂದು ಅದಾವುದೋ
ಭಾವಿಸಿದರದರೊಳಗೆ ಬೀದಿಯಿದೆ ಹಾದಿಯಿದೆ ನಾದುವುದು |
ಮೇದಿಯ ಒಳಗೆ ಜೀವರ ಶೋಧಿಸಿದರದರರ್ಥ ಸತ್ಯವ ಕಾಂಬ
ವೇದಿಯಿದೆ ಅದುವೆ ನಾಟಕ ರಂಗಭೂಮಿ ಕಾಣೈ ತಿರುಕ ||

        ಒಟ್ಟು ೧೪ ಮಂತ್ರಗಳ ಮುಖೇನ ಜಗತ್ತಿನ ಭಿನ್ನ ಭಿನ್ನವಾಗಿ ಕಾಣುವ ವಿಚಿತ್ರ ಪ್ರಪಂಚದ ಮೂಲದಲ್ಲಿ ಮುಖ್ಯವಾಗಿ ಒಂದು ಸೂತ್ರ ಅಳವಡಿಸಲ್ಪಟ್ಟಿದೆ. ಅದೇ ಬೇರೆ ಬೇರೆಯಾಗಿ ಕಾಣುವುದಕ್ಕೆ ಕಾರಣ. ಆದರೆ ಮಾನವರಲ್ಲಿಯೇ ಭಿನ್ನತೆಯನ್ನು ಪ್ರಪಂಚ ಕಾಣುತ್ತಿದೆ. ಆದರೆ ಉಚಥ್ಯರು ಸಕಲ ಜೀವಿಗಳಲ್ಲೂ ಒಂದು ಏಕತೆ ಇದೆ ಅದನ್ನರ್ಥಮಾಡಿಕೊಳ್ಳಲು ಹಿಂದೆ ಉದಾಹರಿಸಿದ ಸೂತ್ರ ಬಳಸಿರಿ ಎಂದಿದ್ದಾರೆ."ಆಹುಸ್ತೇ ತ್ರೀಣಿ ಬಂಧನಾನಿ ತ್ರೀಣಿತ ಆಹುರ್ದಿವಿ ಬಂಧನಾನಿ ತ್ರೀಣ್ಯಪ್ಸು ತ್ರೀಣ್ಯಂತಃ ಸಮುದ್ರೇ "||

ಎಂಬುದು ಉಚಥ್ಯರ ಅಭಿಮತ. ಅದರ ಸೂತ್ರದ ಒಟ್ಟು ಸರಳ ಅರ್ಥ ಹೀಗಿದೆ- ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಮುಖ್ಯವಾಗಿ ೩ ಕಾರಣವಿರುತ್ತದೆ. ಆ ಕಾರಣವೆಂಬುದೇ ಈ ಜೀವನಬಂಧನ. ಅಂದರೆ ಕರ್ಮ + ಋಣ + ಯೋಗ ಎಂಬ ಮೂರರಿಂದಾಗಿ ಜೀವ ಜಗತ್ತು ನಿರಂತರವಾಗಿರುತ್ತದೆ. ಆ ಬಂಧನ ಬಿಡಿಸಿಕೊಳ್ಳುವ ಜಾಣ್ಮೆಯನ್ನು ಜೀವಿಗಳು ತಪ್ಪಿಯೂ ಮಾಡಲಾರವು. ಹಾಗಾಗಿಯೇ ಜೀವ = ನೀರು, ಕಾಲ = ಮಧ್ಯ, ಆದಿ, ಅಂತ್ಯ. ಮಾರ್ಗ ಸಮಯೋಜಿತವಾದ ಜೀವನ ಸಾಗರ ಅಥವಾ ಸಮುದ್ರ. ಅದರ ಸಂಖ್ಯಾ ಮೊತ್ತವೇ ಕರ್ಮ. ಅದರ ಶೇಷವೇ ಯೋಗ. ಗುಣಿತವೇ ಋಣಗಳಾಗಿ ವ್ಯವಹರಿಸುತ್ತದೆ. ಗುಣಿತ ಮೂಲವ್ಯಾವುದು? ಮೊತ್ತವ್ಯಾವುದು? ಅರಿವಿಲ್ಲ ಜೀವಿಗಳಿಗೆ! ಹಾಗಾಗಿ ಅಸಂಖ್ಯಾತವೆಂದಿದೆ. ಅದಕ್ಕೊಂದು ಸೂತ್ರ ಅಳವಡಿಸಲ್ಪಟ್ಟಿದೆ. ಆ ಸಮೀಕರಣ ಅರ್ಥ ಮಾಡಿಕೊಂಡಲ್ಲಿ ಮಾನವ ಜೀವನ ಸಾರ್ಥಕ. ಆತನು ದೇವತ್ವಕ್ಕೇರುವುದ ಖಂಡಿತ. ಆದರೆ ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಲು ನಿಮಗೆ ಪುರುಸೊತ್ತು ಇದೆಯೇ? ಇಲ್ಲ. ಕಾರಣ ನಮ್ಮ ಈಗಿನ ಸ್ಥಿತಿ. ನಾವೇ ವಿಧಿಸಿಕೊಂಡ ಜೀವನ ವಿಧಾನ. ನಮ್ಮ ಶಿಕ್ಷಣ ಪದ್ಧತಿ, ನಮ್ಮ ಧನದಾಹ, ನಮ್ಮ ಅತೀ ದುರಾಸೆ, ನಮ್ಮ ಮೂರ್ಖತನ, ನಮ್ಮ ಹುಚ್ಚು ಕಲ್ಪನೆ. ಇದಕ್ಕೆಲ್ಲಾ ಕಾರಣ ಬ್ರಿಟಿಷರು ನಮಗೆ ಮಾಡಿದ ಮೋಸ. ಬುದ್ಧಿಜೀವಿಗಳೆಂಬ ಸೋಗಲಾಡಿ ಲದ್ದಿಗಳಿಗೆ ಇದು ಅರ್ಥವಾಗಲಾರದು. ಅದಕ್ಕಾಗಿ ನಮ್ಮ ಹಿಂದಿನ ಜೀವನ ಪದ್ಧತಿಯ ಬಗ್ಗೆ ಸ್ವಲ್ಪ ಬರೆದು ನಂತರ ಸಮೀಕರಣದ ಬಗ್ಗೆ ಬರೆಯುತ್ತೇನೆ. ಏಕೆಂದರೆ ಆಗಲಾದರೂ ಸಮೀಕರಣ ನಮಗೆ ಸುಲಭವಾದೀತು.

        ಹದಿನೆಂಟನೆಯ ಶತಮಾನದ ಪೂರ್ವದಲ್ಲಿ ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೆವು. ಏಕೆಂದರೆ ಆಗ ನಮಗೆ ತೃಪ್ತಿಯಿತ್ತು, ಜೀವನದರಿವಿತ್ತು, ದುರಾಸೆ ಇರಲಿಲ್ಲ, ಮಹತ್ವಾಕಾಂಕ್ಷೆ ಇರಲಿಲ್ಲ, ಉತ್ತಮ ವಿಧ್ಯೆಯಿತ್ತು. ಅದರ ಕೆಲ ಮುಖ್ಯ ಧ್ಯೇಯ ಗಮನಿಸಿ -
·        ಮಾತೃದೇವೋ ಭವ
·        ಪಿತೃ ದೇವೋ ಭವ
·        ಆಚಾರ್ಯ ದೇವೋ ಭವ
·        ಅತಿಥಿ ದೇವೋ ಭವ
·        ಸಹನಾವವತು | ಸಹನೌಭುನಕ್ತು | ಸಹ ವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು | ಮಾದ್ವಿಷಾವಹೈ ||
·        ಸಂಗ  ಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಂ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
·        ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಮ್ |
ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ ||
·        ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ||
·        ಕೃಣ್ವಂತೋ ವಿಶ್ವಮಾರ್ಯಂ ||
·        ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ
·        ಗಾವೋ ವಿಶ್ವಸ್ಯ ಮಾತರಃ
· ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ | ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ||

       ಹೀಗೆ ಉದಾಹರಿಸುತ್ತಾ ಹೋದರೆ ನಾವೆಷ್ಟು ವಿಶಾಲ ಹೃದಯಿಗಳು ಎಂಬುದು ಅರ್ಥವಾಗುತ್ತದೆ. ಆಗ ಇದ್ದುದ್ದು ಕೂಡು ಕುಟುಂಬ. ಒಬ್ಬ ಯಜಮಾನ, ಅವನೇ ಇಡೀ ಕುಟುಂಬದ ಪಾಲನೆ, ಪೋಷಣೆಗೆ ಜವಾಬ್ದಾರ. ಆಗಲೂ ದುಡಿಮೆ ಇತ್ತು. ಕುಟುಂಬ ಪೋಷಣೆ ಇತ್ತು. ಜನ ತೃಪ್ತರಾಗಿ ಬದುಕುತ್ತಿದ್ದರು. ನಿಧಾನವಾಗಿ ಬ್ರಿಟಿಷರು ಬಿತ್ತಿದ ವಿಷಬೀಜವು ನಮ್ಮ ಕುಟುಂಬ ವ್ಯವಸ್ಥೆಯನ್ನೇ ಒಡೆಯಿತು. ಯಜಮಾನಿಕೆ ಪದ್ಧತಿಯು ದಾಸ್ಯವೆಂದು ಬಿಂಬಿಸಿದರು. ಈಗ ಗಂಡ, ಹೆಂಡತಿ, ಮಕ್ಕಳು, ಎಲ್ಲರೂ ದುಡಿಮೆಯ ಯಂತ್ರಗಳಾಗುತ್ತಿದ್ದಾರೆ. ದುಡಿದು ದುಡಿದು ಸಾಯುತ್ತಿದ್ದಾರೆ. ಹಾಗಾಗಿ ಪುರುಸೊತ್ತಿಲ್ಲ. ಈಗ ಬಾಂಧವ್ಯಕ್ಕೆ ಬೆಲೆಯಿಲ್ಲ, ಗೌರವವಿಲ್ಲ. ಹಣ ಮಾತ್ರ ಲೋಕದ ಎಲ್ಲವೂ ಆಗಿದೆ. ಆದರೆ ತೃಪ್ತಿ ಇಲ್ಲ. ಹಿಂದೆ ತೃಪ್ತಿಯಿತ್ತು, ಪೂರ್ಣ ಸ್ವಾತಂತ್ರ್ಯವಿತ್ತು. ನೀವು ದುಡಿದ ಸಂಪತ್ತು ನಿಮ್ಮದಾಗಿತ್ತು. ಆದರೆ ಈಗ ನೀವು ದುಡಿದ ಹಣ ನಿಮ್ಮದಲ್ಲ. ನಿಮ್ಮದು ಎಂಬ ಭ್ರಾಂತಿಯಲ್ಲಿ ಇದ್ದೀರಷ್ಟೆ. ಈಗ ನಿಮ್ಮನ್ನು ನೀವು ಆಳಿಕೊಳ್ಳುತ್ತಿಲ್ಲ. ಇದು ಒಂದು ರೀತಿಯ "ಭಯಂಕರ ದಾಸ್ಯ". ಆದರೆ ಭ್ರಾಂತಿ, ಹುಚ್ಚಿನ ಅತಿರೇಕದಲ್ಲಿರುವ ನಿಮಗೆ ಅರ್ಥವಾಗುತ್ತಿಲ್ಲವಷ್ಟೆ.
       
ಹಿಂದೆ "ನಮ್ಮ ಹಿರಿಯರಿಗೆ ಸಾವಿರಾರು ಎಕರೆ ಜಮೀನಿತ್ತು". ಈ ವಾಕ್ಯ ದೇಶದ ೭೦% ಜನ ಹೇಳುತ್ತಾರೆ. ಈಗ ಅವರು ಸತ್ತರೆ ಹುಗಿಯಲು 3x6 ಅಡಿ ಜಾಗವಿಲ್ಲದವರ ಸಂಖ್ಯೆ ೨೦ ಕೋಟಿ. ಇವರಿಗೆ ಒಂದಿಂಚು ಭೂಮಿಯೂ ಇಲ್ಲ. ಇನ್ನು ೪೫ ಕೋಟಿ ಜನರಿಗೆ ಅಡಿಲೆಕ್ಕದಲ್ಲಿ ಎಲ್ಲೋ ಸ್ವಲ್ಪ ಜಮೀನಿರಬಹುದು. ಆದರೆ ಅದರ ಪೂರ್ಣ ಸ್ವಾತಂತ್ರ್ಯವಿಲ್ಲ. ಪ್ರತಿ ವರ್ಷ ನೀವು ನಿಮ್ಮ ಪಂಚಾಯಿತಿಗೆ ಅಥವಾ ನಗರಸಭೆಗೆ ಸ್ಥಳ ಬಾಡಿಗೆ ಅರ್ಥಾತ್ ಕಂದಾಯ ಕಟ್ಟಿದರೆ ಮಾತ್ರ ನಿಮ್ಮದದು. ಇಲ್ಲವಾದರೆ ನಿಮ್ಮದಲ್ಲ. ಬ್ಯಾಂಕಿನಲ್ಲಿ ಹಣ ಇಟ್ಟರೆ ಅದು ಲೆಕ್ಕಬದ್ಧವಾಗಿದ್ದರೆ ಮೊತ್ತ ಮಾತ್ರ ನಿಮ್ಮದು. ಬಡ್ಡಿ ಬಂದಾಗ ಅದಕ್ಕೂ ತೆರಿಗೆ ಕಟ್ಟಲೇಬೇಕು. ಉಳಿಕೆ ಮೊತ್ತ ನಿಮ್ಮದು. ಅದೂ ಬ್ಯಾಂಕ್ ದಿವಾಳಿಯಾಗುವವರೆಗೆ. ಬರೇ ಲೆಕ್ಕದ ರೂಪದ ಹಣ. ಅದಕ್ಕೆ ಬೆಲೆ ಇದೆಯೆಂದು ತಿಳಿದಿರಾ?

೧೯೪೫ನೇ ಇಸವಿಯಲ್ಲಿ ನೀವು ಬ್ಯಾಂಕಿನಲ್ಲಿ ಒಂದು ಲಕ್ಷ ಇಟ್ಟಿದ್ದರೆ ಅದು ಈಗ ಕೇವಲ ೧,೧೪೦ ರೂಪಾಯಯಾಗಿ ಪರಿವರ್ತನೆಯಾಗಿದೆ. ಹಣದ ಹಿಂಜರಿತ ಅಥವಾ ಮೌಲ್ಯಕ್ಷಯವೆಂದು ಹೇಳುತ್ತಾರೆ. ಹಾಗಾದರೆ ನಿಮ್ಮ ಹಣವೆಲ್ಲಿ ಹೋಯ್ತು? ಚಿಂತಿಸಿ. ಕೇವಲ ೨% ಅಂದರೆ "ಜೀವಚ್ಛವ" ಎನ್ನುತ್ತಾರೆ ಅರ್ಥವಾಯ್ತೇ? ಈಗ ಮಾನವ ಬರೇ ಜೀವಚ್ಛವ. ಆದರೆ ಅರ್ಥ ಮಾಡಿಕೊಳ್ಳಲಾರ. ಅಸಹಾಯಕ, ಗುಲಾಮ, ಮೂರ್ಖನಾಗಿಯೇ ಬದುಕುತ್ತಿದ್ದಾನೆ. ಅದರಂತೆ ಮುಂದಿನ ಒಗಟು ಸಾಲನ್ನು ಅರ್ಥಮಾಡಿಕೊಂಡರೆ ಉಚಥ್ಯರ ಅಭಿಪ್ರಾಯ ನಿಮಗಾಗುವುದು. ಅದನ್ನು ಸಂಖಲೀಕರಣ ಎಂಬ ಸೂತ್ರದಡಿಯಲ್ಲಿ ಬರೆದಿರುತ್ತೇನೆ.

ಮೂರರೊಳಗೇಳು ಇನ್ನೆರಡು ಲೋಕದ ಸೂತ್ರವಿದೆ
ತೋರಮುತ್ತಿನ ಬಣ್ಣ ಬಿಳಿಯಹುದೇ ನಿಜವಲ್ಲ
ಜಾರು ತರ ಮೂರು ಮೂರೆಂದು ಬಣ್ಣವಿದೆ ಅದರಲಿ
ತೋರುವುದು ಬಿಳಿಯಾಗಿ ಅದರೊಳಗಡಕವಿದೆ ಸಂಖ್ಯೆ, ಪ್ರಮಾಣ, ಘನ, ಶಕ್ತಿ, ವೀರ್ಯಗಳೂ || ೧ ||

ಮೊದಲೇರಡು ಇನ್ನು ಮೇಲೇಳು ಗುಣಕದಲಿ ಉದ್ಧತವು ಸಮುದ್ರ
ಚದುರಂಗದಾ ಲೆಕ್ಕದಲಿ ಕವಡೆ, ಪಕ್ಷಿಯು, ಹರಿಣ, ಮತ್ಸ್ಯವು ಕೂಡ
ಎದುರಲಿ ಕಾಂಬ ಲೆಕ್ಕದ ಮೊತ್ತವೇ ಮಹಿಯೊಳಗೆ ಹುಟ್ಟಿದಾ ಜೀವಿಯಾ ಲೆಕ್ಕ
ವಿದು ಅವಕನ್ನ, ಕಾಲ, ಬಟ್ಟೆಯ ಮೊತ್ತವೇ ಮಿತ್ತಿಹುದು ನೀನದರ ಗುಣಕ ದಂಕವು ಕೇಳು ಮನುಜಾ || ೨ ||

ಲೋಕವಿದೆ ಮೇಲೇಳು ಅದರೊಳು ಗಂಧರ್ವವನು ಕಳೆ
ದೇಕದಲಿ ಭಾಜಿಸಿರೆ ಅಶನವು ಅಶನಿಶಕ್ತಿಯ ಬಲ ವಜ್ರ
ದಂಕೆಯಲಿ ಅಶ್ವಬಲವಿದೆ ಮೂರನೆಯ ಲೋಕದಾಡಂಬರದಿ
ಶಾಖ ಸಖನ ಸಖನಂಕೆಯನು ಗುಣಿಸಿ ಯಮನೊಳು ಕಳೆಯೆ ಕಾಲಗಂಧರ್ವಾ || ೩ ||

ಕಿರಣಪಾತವು ನೈಮಿಷದ ಮೊದಲೆರಡು ಮತ್ತೊಂಬತ್ತು ಇನ್ನೆರಡು
ಕಾರಣವಿದೆ ಜನುಮ ಜನುಮಕೆ ಕರ್ಮವಿದೆ ಭೋಗ್ಯಕೆ ಯಮನದಕೆ
ವರಣವಿತ್ತಿಹ ಜೀವಿ ಕೇಳ್ ವರುಣಪಾಶದ ಬಂಧದಲಿ ಸಿಲುಕಿಹೆ ನೀನು
ಚರಣ ಸಂಖ್ಯೆಯ ಋಣದ ಕಾರಣ ಅಶನ ಭದ್ರತೆ ದೇವನೀವನು ಜನಿಜನಿತಜಾನಿತ್ರವೆಲ್ಲಾ || ೪ ||

ಓಡಿ ಬದುಕುವೆನೆಂಬಾಸೆ ಬಿಡು ಉಣು ನೀ ನಿನ್ನಯ ಕರ್ಮ
ಕೂಡಿ ಕಳೆವನು ಚಿತ್ರಕಾರನು ದಿವಿಯ ಬಂಧನ ಉಂಡಾ
ದೊಡೆ ಕೊನೆಯ ಲೆಕ್ಕವ ಪೇಳ್ವೆ ಜಿಗೀಷದೊಳು ಆಮಿಷದ
ಪಡೆದೇಳು ಆರರ ಮೂರರಲಿ ಅನುಭೋಗ ಓಷಧೀ ಇಳಾಗ್ರಸಿಷ್ಠವದೂ || ೫ ||

ಅದಕೆ ಹೊಂದಿ ಬಂದಿಹೆ ಈ ಶರೀರ ನಿನ್ನದಲ್ಲವು ಮಾತಾಪಿತರು
ಇದಕೆ ಋಣವಿದೆ ದ್ವಿಗುಣ ಮಾತ್ರವದು ಹೊಂದಿದೆ ಜ್ಞಾನ ನಿನ್ನದಲ್ಲಾ
ಅದಕೆ ಋಣ ಸಲ್ಲವು ಮುಂದಿನ ಋಣದ ಮೊತ್ತದ ಏಳು ಭಾಗವು ಈ
ಗದಕೆ ಕೂಡಿಸಿದೆ ನಿನ್ನಯ ಜೀವನ ಯಾವದಾ ಯೋಜನೆದಳತೆ ಬದುಕು ಅಲ್ಲಿಯವರೆಗೆಂಬೇ || ೬ ||


        ಈ ನಾಲ್ಕು ಸಾಲಿನ ಪದ್ಯಗಳು ಕನ್ನಡದಲ್ಲಿದ್ದರೂ ಗೂಡಾರ್ಥದಲ್ಲಿ ಅಡಕವಾಗಿದೆ. ಅದನ್ನು ಸಂಖಲೀಕರಣ ಸೂತ್ರವೆಂಬ ಗಣಿತ ಸೂತ್ರದಂತೆ ಶಬ್ದಗಳಿಗೆ ಅಕ್ಷರ ಸಂಜ್ಞೆಯನ್ನು ಕೊಟ್ಟು ಅಂಕಾದಿ ರೂಪು ಕೊಡುವುದು ಇದರ ರಹಸ್ಯ. ಒಂದು ಜೀವಿಯು ಭೂಮಿಯಲ್ಲಿ ಹುಟ್ಟಿ ಏನೇನು ಏನಕ್ಕೇನು ಮಾಡಬಹುದು ಎಂಬುವುದು ಈ ಆರು ಸೂತ್ರಗಳಲ್ಲಿ ನಿಖರವಾಗಿ ಕಂಡುಹಿಡಿಯಬಹುದು. ಇದು ಋಗ್ವೇದದ ೧ನೇ ಮಂಡಲದ ೧೬೩ನೇ ಸೂಕ್ತದಲ್ಲಿ ಅಳವಡಿಸಿದ್ದಾರೆ ಉಚಥ್ಯರು! ಅದನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಲ್ಲಿ ಜಗದೆಲ್ಲವೂ ಎಷ್ಟು ಸರಳ ಸುಸೂತ್ರವೆಂಬರಿವು ನಿಮಗಾಗುತ್ತದೆ. 

ಇಂತು
- ಕೆ. ಎಸ್. ನಿತ್ಯಾನಂದ
ಅಗಸ್ತ್ಯಾಶ್ರಮ ಗೋಶಾಲೆ
ಬಂದ್ಯೋಡ್, ಕಾಸರಗೋಡು

Wednesday, 11 December 2013

ಶ್ರಾದ್ಧ ಕರ್ಮ, ಪಿಂಡ-ತರ್ಪಣಗಳು, ನಂಬಿಕೆಯ ಭದ್ರ ಬುನಾದಿ

ಶ್ರಾದ್ಧ ಕರ್ಮದ ಉದ್ದೇಶವೇನು? ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಅಮರತ್ವ. ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು? 

ಸಾಮಾನ್ಯವಾಗಿ ವೈದಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಅವರ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥಿ ಅಥವಾ ಪುಣ್ಯತಿಥಿ ಆಚರಿಸಲಿ, ಸದುಪಯೋಗ ಪಡೆಯಲಿ ಎಂಬುದು ಇದರ ಹಿನ್ನಲೆಯ ಉದ್ದೇಶವಾಗಿರುತ್ತದೆ.

ಮೊದಲಾಗಿ ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು? ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ. 

ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ; ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನೀವು. ಹಾಗಿದ್ದಾಗ ಅವರು ನಿರ್ವಹಣೆಯಲ್ಲಿ ಅನರ್ಹರು ಎಂದರೆ ನೀವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆಯು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ನಾಯಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ನಾಯಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ನಾಯಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ-ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿಯ ಆಕಾಂಕ್ಷಿಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತೀಜೀವಿಯ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. ಮತ್ತು ನಿಮ್ಮ ಜೀವನವಿಧಾನಕ್ಕೆ ಕನ್ನಡಿಯಿದ್ದಂತೆ. ಆದ್ದರಿಂದ ಶ್ರಾದ್ಧಪ್ರಕ್ರಿಯೆ ಏನು? ಎನ್ನುವುದನ್ನು ಶ್ರದ್ಧೆಯಿಂದ ಅರ್ಥಮಾಡಿಕೊಳ್ಳಿ.

ಯಾವುದು ಸತತವೂ ಪುನರಾವರ್ತನೆಯಾಗುತ್ತದೋ ಅದನ್ನು ನಮ್ಮಲ್ಲಿ ಚಕ್ರ, ಗೋಳ, ವೃತ್ತ, ಅಂಡ, ಪಿಂಡವೆಂದು ಗುರುತಿಸುತ್ತಾರೆ, ಹೇಳುತ್ತಾರೆ. ಪ್ರತಿಯೊಂದು ಜೀವಿಯೂ ಪುನಃ ಹುಟ್ಟಿ ಬರುತ್ತಲೇ ಇರುತ್ತದೆ. ಈ ಪುನರ್ಜನ್ಮವೆಂಬ ಕಲ್ಪನೆಯಲ್ಲಿ ತಾನು ನಿರ್ವಹಿಸಿದ ಗೋಳದ ಕಲ್ಪನೆ ಈ ಪಿಂಡ. ತನಗೆ ಚಲನಾಧಾತುವಾಗಿ, ಸ್ನೇಹಕವಾಗಿ ಸಹಕರಿಸಿದ್ದು ನೀರು = ತರ್ಪಣ. ಈ ಭೂಮಿಯ ವ್ಯವಹಾರದಲ್ಲಿ ಶಕ್ತಿಪ್ರದವಾಗಿ ಲಭ್ಯವಾಗಿ ಜ್ಞಾನರೂಪದಲ್ಲಿ ಏಳ್ಗೆಗೆ ಸಹಕರಿಸಿದ್ದು ಎಳ್ಳು. ತನ್ನ ರೂಪದಲ್ಲಿ ಸಣ್ಣಕಣವಾದರೂ ಅಗಾಧಶಕ್ತಿಯ ರೂಪದಲ್ಲಿ ತನ್ನಲ್ಲೇ ತೈಲವನ್ನು ತುಂಬಿಸಿಕೊಂಡು ನೀನು ಶ್ರಮ ಪಟ್ಟರೆ ತೈಲ ಪಡೆಯಬಹುದು. ನಿನ್ನ ಬಾಳ ಪಯಣಕ್ಕೆ ದಾರಿ ತೋರುವ ದೀಪವಾಗಬಹುದು ಎಂಬ ಜ್ಞಾನದೀವಿಗೆ ಎಳ್ಳು. ಸೂತ್ರ ಹೇಳುತ್ತದೆ, ಯಾವುದು ತೈಲವನ್ನು ಕೊಡುತ್ತದೊ ಅದು ತಿಲವೆಂದು. 

ಶುದ್ಧತೆ, ಮಡಿ ನಿಮ್ಮ ಜೀವನವಿಧಾನದಲ್ಲಿರಲಿ ಎಂದು ಬೋಧಿಸುತ್ತದೆ. ಆಹಾರ ತುಂಬಾ ಸರಳ, ಸಾತ್ವಿಕವಾಗಿರಲಿ ಎನ್ನುತ್ತದೆ. ಪ್ರಪಂಚದ ಸಕಲ ಜೀವಿಗಳನ್ನೂ ನಿನ್ನ ಸಹೋದರರಂತೆ ಭಾವಿಸು ಎನ್ನುತ್ತದೆ. ಗೋಗ್ರಾಸ, ಕಾಕಬಲಿ, ಗಯಾಶ್ರಾದ್ಧವೆಂದು ಪ್ರತೀತಿ ಇದೆ. ಗೋವಿನಿಂದ ಮೊದಲ್ಗೊಂಡು ಎಲ್ಲಾ ಪ್ರಾಣಿ, ಪಕ್ಷಿಗಳಿಗೂ ಸಂತಪ್ತಿಯನ್ನು, ಮಾನವಜೀವಿಯಾಗಿಯೂ ತನ್ನ ಕರ್ಮಬಂಧನದಿಂದ ಯಾಚಕನಾಗಿದ್ದವನಿಗೂ ಅನ್ನವಿಟ್ಟು ಮಾಡುವ ಪಿತೃಶ್ರಾದ್ಧವೇ ಗಯಾಶ್ರಾದ್ಧ. = ಗೋವು, ಯಾ = ಯಾಚಕ, ಸಂಧಿಯಾದರೆ ಗಯಾ. ಅದನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಗಯಾಶ್ರಾದ್ಧ. ಶಕ್ತನಾದವನು ತನ್ನ ಸುತ್ತಿನ ಪರಿಸರ, ಜೀವ ಪ್ರಭೇದಗಳ ರಕ್ಷಣೆಯನ್ನು ಚಿಂತಿಸಿ ಅವುಗಳಿಗೆ ಆಸರೆಯಾಗುವುದೇ ಶ್ರಾದ್ಧದ ಆದರ್ಶ. ಮತ್ತು ತಾನು ತನ್ನ ಜೀವನವಿಧಾನವನ್ನು ಒರೆಗಲ್ಲಿಗೆ ಹಚ್ಚುವ ವಿಧಾನ, ಸರಿಯಿಲ್ಲದಿದ್ದಲ್ಲಿ ತಿದ್ದಿಕೊಳ್ಳುವ ಪರೀಕ್ಷಾವಿಧಾನವೇ ಶ್ರಾದ್ಧ. ನಿಮಗಾಗಿ ನಿಮ್ಮ ಶ್ರೇಯಸ್ಸನ್ನು ಹಾರೈಸಿ ಮಾಡುವ ಶ್ರಾದ್ಧ ಪ್ರಕ್ರಿಯೆಯಲ್ಲಿ ಕಟ್ಟಿದ ಪಿಂಡವನ್ನು ಸೌಚೀಕ ಮಂತ್ರಗಳ ಮೂಲಕ ಕೈಯಲ್ಲಿ ಹಿಡಿದು, ಕೈಯನ್ನು ಮಗುಚಿ ಪಿಂಡವನ್ನು ಇಡುತ್ತೀರ. ಅಂದರೆ ಒಂದು ವರ್ಷದ ನಿಮ್ಮ ಜೀವನದ ಪೂರ್ವಾವಲೋಕನ ಮಾಡಿಕೊಳ್ಳುತ್ತೀರಾ ಎಂದು ಅರ್ಥ.

ಪಿತೃಸ್ಥಾನ ಬೇಕಾದ ಪ್ರತೀಜೀವಿಯೂ ಅಗತ್ಯವಾಗಿ ಮಾಡಲೇ ಬೇಕಾದ ಪ್ರಕ್ರಿಯೆಯ ಬಗ್ಗೆ ಈ ರೀತಿಯ ತೀರಾ ಬಾಲಿಶವಾದ, ಶ್ರದ್ಧಾಳುಗಳ ಮನನೋಯಿಸುವ ಅಭಿಪ್ರಾಯ ಖಂಡಿತಾ ಸರಿಯಲ್ಲ, ಸುಳ್ಳು. ವಿಜ್ಞಾನ ಮುಂದುವರೆದಿದೆಯೆಂದು ಭ್ರಮೆಯಲ್ಲಿ ಈ ಪುರಾತನ ಆಚರಣೆಗಳನ್ನು ದೂಷಿಸಬೇಡಿ. ಮೂಢನಂಬಿಕೆಯೆಂದು ಹಳಿಯಬೇಡಿ. ಮೂಢ = ತಿಳಿವಳಿಕೆ ಇಲ್ಲದವನೆಂದು ಅರ್ಥ. ನೀವು ತಿಳುವಳಿಕೆ ಇದ್ದವರಾದರೆ ಶ್ರಾದ್ಧ ಅಪರಾಧವಲ್ಲ. ನೀವು ಮೂಢರೇ ಆಗಿದ್ದಲ್ಲಿ ಶ್ರಾದ್ಧವೇನು ಊಟ ಮಾಡುವುದೂ ಮೂಢನಂಬಿಕೆಯೇ.

ಉದಾ:- ನಿಮಗೆ ಬೇಳೆ ಸಾರು ತುಂಬಾ ರುಚಿ, ನೀವು ಅದನ್ನೇ ಇಷ್ಟಪಡುತ್ತೀರ, ಅದು ನಿಮ್ಮ ತಿಳುವಳಿಕೆ. ಆದರೆ ಇನ್ನೊಬ್ಬನು ಅದನ್ನು ಇಷ್ಟಪಡುವುದಿಲ್ಲ. ಅದು ಅವನ ನಂಬಿಕೆ. ರುಚಿಯೆನ್ನುವುದು ಅವರವರ ಪಾಲಿನ ನಂಬಿಕೆ. ಇಲ್ಲಿ ಯಾರೂ ಮೂಢರಲ್ಲ. ಮೂಢನೆಂದು ಹೇಳುವವರು ಮೂಢರು. ನಂಬಿಕೆಯು ಪ್ರಾಪಂಚಿಕವಾಗಿ ವ್ಯಕ್ತಿಗತವಾಗಿ ರೂಪುಗೊಳ್ಳುತ್ತದೆ. ಹಾಗೆಂದು ಅದನ್ನು ದೂಷಿಸುವುದು ಮೂರ್ಖತನವಾಗುತ್ತದೆ. ಒಬ್ಬ ಚಲನಚಿತ್ರ ಪ್ರೇಮಿಗೆ ನೀನು ಹುಚ್ಚನೆಂದರೆ ನಿಮಗೆ ಚಲನಚಿತ್ರದಲ್ಲಿ ಆಸಕ್ತಿಯಿಲ್ಲವೆಂದು ಅರ್ಥ ಅಷ್ಟೆ. ಇಲ್ಲಿ ಯಾರೂ ಹುಚ್ಚರಲ್ಲ. ಅವರವರಿಗೆ ಅವರವರ ಇಷ್ಟ ಪ್ರವರ್ತನೆ ಇದಾಗಿರುತ್ತದೆ. ಹಾಗೆಂದು ನಂಬಿಕೆ ಮೂಢವಲ್ಲ.

ಪ್ರಪಂಚದಾದ್ಯಂತ ನಡೆಯುವ ಪುಣ್ಯತಿಥಿ, ಜನ್ಮದಿನ, ರಾಷ್ಟ್ರೀಯ ಹಬ್ಬ ಹರಿದಿನ, ಅಭಿನಂದನಾ ಸಭೆ, ಸಮಾರಂಭ, ಉತ್ಸವ, ಪೂಜೆ, ಪ್ರಾರ್ಥನೆ, ದೇವಾಲಯ, ಮಸೀದಿ, ಚರ್ಚುಗಳು, ಇವೆಲ್ಲವೂ ಮೂಢನಂಬಿಕೆಯೆಂದು ವಿಜ್ಞಾನಿ ಹೇಳಬಹುದು. ಆದರೆ ಮಾನವಜೀವಿಗೆ ತನ್ನ ಬಿಡುವಿನ ಕಾಲದಲ್ಲಿ ಸತ್ ಚಿಂತನೆ ಮಾಡುವ ಸ್ಥಳಗಳವು ಎಂದು ಅರ್ಥವಾಗದ ಮೂಢರಿಗೆ ಮಾತ್ರ. ಈ ದೇವಾಲಯಾದಿಗಳ ಸಾತ್ವಿಕ ಚಿಂತಕರಿಗೆ, ಕ್ಲಬ್ಬು, ಬಾರು, ಸಿನೆಮಾ, ರಾತ್ರಿನೃತ್ಯಗಳು ಬೇಕಿಲ್ಲ. ಕಾರು, ಬಾರು ಅವರಿಗೆ ಇಷ್ಟವಿಲ್ಲ. ಅವರ ಚಿಂತನೆ ಎನ್ನಬೇಡಿ. ಪ್ರತಿಯೊಂದು ಆಚರಣೆಯಲ್ಲೂ ಅದರದ್ದೇ ಆದ ಸತ್ಯವಿದೆ, ಜ್ಞಾನಬೋಧೆಯಿದೆ. ತನ್ನ ನಂಬಿಕೆಯನ್ನು ಗೌರವಿಸಿ, ಅದನ್ನು ಚ್ಯುತಿಯಿಲ್ಲದಂತೆ ಪಾಲಿಸಿಕೊಂಡು ಬರುವವನೇ ಮಾನವ. ಅದನ್ನು ಅರ್ಥ ಮಾಡಿಕೊಂಡು ಸಾರ್ಥಕತೆಯನ್ನು ಪಡೆಯುವವನೇ ಜ್ಞಾನಿ.

ತಾನು ಪಡೆದ ಫಲವನ್ನು ಸಮಾಜಕ್ಕೆ ಒದಗಿಸಿ, ಸಮಾಜವನ್ನು ಆ ಕಡೆಗೆ ತಿರುಗಿಸಿ ಎಲ್ಲರೂ ಸಾಫಲ್ಯತೆ ಪಡೆಯುವಂತೆ ಮಾರ್ಗದರ್ಶನ ಮಾಡುವವನೇ ಗುರು. ಈ ಪ್ರಪಂಚ ನಿಂತಿರುವುದೇ ನಂಬಿಕೆಯ ನೆಲೆಯಲ್ಲಿ. ಅದಿಲ್ಲದಿದ್ದರೆ ಅಲ್ಲೋಲ ಕಲ್ಲೋಲವಾದೀತು. 

ತಾನು ಇಂತಹವರ ಮಗ; ಇದು ನಂಬಿಕೆ ಮಾತ್ರ. 
ತನ್ನ ತಾಯಿ ಇವಳು; ಇದೂ ನಂಬಿಕೆಯೇ. 
ಇವನು ತನ್ನ ಮಗ; ಇದೂ ನಂಬಿಕೆಯೇ. 
ಇದು ತನ್ನ ಆಸ್ತಿ, ಇದೂ ನಂಬಿಕೆಯೇ. 
ಇದು ತನ್ನ ದೇಶ, ಇದೂ ನಂಬಿಕೆಯೇ. 
ಈ ದೇಹ ತನ್ನದು, ಇದೂ ನಂಬಿಕೆಯೇ. 

ಇಲ್ಲೆಲ್ಲಾ ನಿಮ್ಮ ಕರ್ತವ್ಯ ನ್ಯೂನತೆಯಾದರೆ ನಿಮ್ಮದು ಎನ್ನುವ ಅಸ್ತಿತ್ವ ನಾಶ ಖಂಡಿತ.

ಅದಕ್ಕಾಗಿ ನಂಬಿಕೆಯೆನ್ನುವ ಆಧಾರದಲ್ಲಿ ಭದ್ರವಾಗಿ ಕಟ್ಟಿರಿ ಮೂರು ಪಿಂಡ. ಅದು ಹಸಿಯಾಗಿಯೇ ಇರಲಿ. ಒಡೆಯದಂತೆ ಇರಲಿ. ಅದಕ್ಕಾಗಿ ನೀರು = ತರ್ಪಣ ಬಿಡಿರಿ. ಆ ನಂಬಿಕೆಯನ್ನು ಗೌರವಿಸಿ ನಮಸ್ಕರಿಸಿ. ಅದನ್ನು ನೀರಿನಲ್ಲೋ, ಭೂಮಿಯಲ್ಲೋ, ಅಥವಾ ಪ್ರಕೃತಿಯ ಸಕಲ ದೇವತಾರೂಪದ ಗೋವಿನಲ್ಲೋ ಭದ್ರಪಡಿಸಿ. ಆ ನಂಬಿಕೆಯ ಪಿಂಡವನ್ನು ಒಡೆಯ ಬೇಡಿರಿ, ಒಡೆದಿರೋ ಕೆಟ್ಟಿರಿ. ಅದನ್ನು ಮೂಢನಂಬಿಕೆಯನ್ನುವ ಮೂಢರ ಮಾತನ್ನು ನಂಬದಿರಿ. ಶ್ರಾದ್ಧ ಪ್ರಕ್ರಿಯೆ ಅಜ್ಞಾನವಲ್ಲ. ಅವೆಲ್ಲಾ ಬೋಧಪ್ರದವಾದ ಸಾಮಾಜಿಕ ನ್ಯಾಯದ ಬದ್ಧತೆಯೊಂದಿಗೆ ಕೃತಜ್ಞತಾ ಸಮರ್ಪಣೆಯ ಕ್ರಿಯೆಯಾಗಿರುತ್ತದೆ. ಅದು ಮಾನವಜೀವಿಯ ಕರ್ತವ್ಯ. ಕೃತಜ್ಞತೆ ಸಲ್ಲಿಸುವುದು ಅಪರಾಧವೆನ್ನುವ ಮೂಢರ, ಮೂರ್ಖರ, ಮಾತನ್ನು ನಂಬದಿರಿ.


|| ಸತ್ಯಂ ಶಿವಂ ಸುಂದರಂ ||

Saturday, 7 December 2013

ಅಗಸ್ತ್ಯರ ಅದ್ಭುತ ವೈಜ್ಞಾನಿಕ ಸಂಶೋಧನೆಗಳು - ೧


ಕಯಾ ಶುಭಾ ಸವಯಸಃ ಸನೀಳಾಃ” ಎಂದಿದ್ದಾರೆ ಅಗಸ್ತ್ಯರು. ನಮ್ಮೀ ಭಾರತ ಭೂಮಿಯಲ್ಲಿ ಲೋಕ ಹಿತಕರವಾದ ಬಡವರ, ದೀನರ, ಏಳ್ಗೆಗಾಗಿ ಶ್ರಮಿಸಿದ ಸರ್ವರನ್ನೂ ಸಮಾನದೃಷ್ಟಿಯಿಂದ ಕಂಡ ಆದರ್ಶ ವ್ಯಕ್ತಿಗಳಲ್ಲಿ ಎತ್ತರದಲ್ಲಿರುವವರು “ಅಗಸ್ತ್ಯರು”. “ಕಸ್ಯ ಬ್ರಹ್ಮಾಣಿ”ಕೋ ಅಧ್ವರೇ”ಕೇನ ಮಹಾ ಮನಸಾ” ಅಹಮೇತಾ ಮನವೇ ವಿಶ್ವಶ್ಚಂದ್ರಾಃ” ಇವೆಲ್ಲಾ ಅಗಸ್ತ್ಯರ ಎತ್ತರದ ಮನಸ್ಥಿತಿಯ ದ್ಯೋತಕಗಳು. ಅವರ ಕೆಲವೊಂದು ಸಮೀಕರಣಗಳನ್ನು ಉದಾಹರಿಸುತ್ತೇನೆ.

ಋಗ್ವೇದ ಮಂಡಲ ೧, ಸೂಕ್ತ ೧೬೫, ಮಂತ್ರ ೧೩

ಕೋನ್ವತ್ರ ಮರುತೋ ಮಾಮಹೇವಃ ಪ್ರಯಾತನ ಸಖೀಙ್ ರಚ್ಛಾ ಸಖಾಯಃ |
ಮನ್ಮಾನಿ ಚಿತ್ರಾ ಅಪಿವಾತಯಂತ ಏಷಾಂ ಭೂತ ನವೇದಾ ಮ ಋತಾನಾಮ್ ||

ಈ ಜಗದ ಋತವ ನರಿತವ ಮನುಜ ಕೇಳ್ ಸಾಗರದಿ
ಈಜುತಿದೆ ನಾವೆ ದೂರದಿ ದಡದಿ ನಿಂತಿಹ ಮನುಜ ನದರ
ಈಜು ಕೋಲನು ಎತ್ತಿ ನಾವಿಕ ಮೀಟುತಿರೆ ಜಲದಂಕ ತೆರೆಯಂಕದಳತೆಯಲಿ ಮೇಲಿರೆ |
ಈಂಕಾರದಕ್ಷರದ ಸ್ವರದ ಮೇಲಣ ಭಾರನಾದೆಯಾ ಹೇರದೂರ
ಈಕ್ಷಿಸಿಯೇ ಲೆಕ್ಕ ಹಾಕಲುಬಹುದು ಆಳವೆಷ್ಟು ಹರಿವೆಷ್ಟು
ಈಡೆಷ್ಟು ಎಂಬುದಕೆ ನೀರಿಗಿಳಿಯಲು ಬೇಡ ಲೆಕ್ಕ ಹಾಕಿಯೇ ತಿಳಿಯಬಹುದು ಜಾಣಾ ||

ಒಂದು ನಾವೆಯು ದೂರ ಸಮುದ್ರದಲ್ಲಿ ತೇಲುತ್ತಿದ್ದರೆ ದಡದ ತೆರೆಗಳ ಲೆಕ್ಕ ಆಧರಿಸಿ ದಡದಲ್ಲಿರುವ ಮರ್ತ್ಯನು ನಾವೆಯಲ್ಲಿರುವ ಹೇರೆಷ್ಟು, ದೂರವೆಷ್ಟು, ನಾವಿಕರೆಷ್ಟು, ಅವರ ಮೀಟು ಗೋಲೆಷ್ಟು, ಹುಟ್ಟೆಷ್ಟು, ವೇಗವೆಷ್ಟು, ಎಲ್ಲವನ್ನೂ ಕೇವಲ ಕಣ್ಣೋಟದಿಂದಲೇ ಅಳೆದು ನಿಖರವಾಗಿ ಹೇಳಬಹುದೆನ್ನುತ್ತಾರೆ ಅಗಸ್ತ್ಯರು. ಅದಕ್ಕೆ ಬೇಕಾದ್ದು ಋತ” ಎಂಬ ಒಂದು ಸೂತ್ರ. ಅದನ್ನರಿತವನು ಹೊರ ಸಮುದ್ರ ಆಳ ಅರಿತುಕೊಳ್ಳಬಲ್ಲವ ಎನ್ನುತ್ತಾರೆ ಅಗಸ್ತ್ಯರು.

ಮಹಾತ್ಮರಾದ ಅಗಸ್ತ್ಯರು ಹೆಚ್ಚಾಗಿ ದಕ್ಷಿಣ ಭಾರತವನ್ನೇ ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ಇಲ್ಲಿಯೇ ಹೆಚ್ಚಾಗಿ ತಮ್ಮ ಅಧ್ಯಯನ, ಸಂಶೋಧನೆಗಳನ್ನು ಮಾಡುತ್ತಾ ಜನ ಮಧ್ಯದಲ್ಲಿ ಸೇರಿ ಒಂದಾಗಿ ಬಾಳಿ ಬದುಕಿದವರು. ಇಲ್ಲಿನ ಆಜ್ಞ ಜನರಿಗೆ ವೈಜ್ಞಾನಿಕ ಜೀವನ ಪದ್ಧತಿಯನ್ನು ತೋರಿಸಿಕೊಟ್ಟವರು. ನಿರಂತರ ಸಂಶೋಧನಾಸಕ್ತರು. ಸರಳ, ಸಾತ್ವಿಕ, ಸದ್ಗುಣಿ, ಶಮದಮಾದಿಗಳನ್ನು ಮೈಗೂಡಿಸಿಕೊಂಡವರು. ಕೋಪಾದಿ ಅರಿಷಡ್ವರ್ಗಗಳನ್ನು ಜಯಿಸಿದ ಜಿತೇಂದ್ರಿಯರು. ಸತ್ಯಾದಿ ಷಡ್ಬಂಧುಗಳನ್ನು ಪ್ರೀತಿಯಿಂದ ಆಧರಿಸಿ ಬಾಳಿದವರು. ತೀರಾ ಕೆಳ ಮಟ್ಟದ ಜೀವನ ಮಾಡುತ್ತಿದ್ದ ಬೆಸ್ತರು, ಈಡಿಗರು, ಮಲೆಕುಡಿಯರು, ಜೇನುಕುರುಬರು, ಕಿರಾತರು, ಬೇಡರು ಇವರೆಲ್ಲರನ್ನೂ ಸುಧಾರಿಸಿ ಒಂದು ಉತ್ತಮ ಜೀವನ ಪದ್ಧತಿ ರೂಪಿಸಿಕೊಟ್ಟವರ. ಹಾಗೇ ಅವರವರ ಕುಲವೃತ್ತಿಗೆ ಬೇಕಾದ ಕೆಲ ವೈಜ್ಞಾನಿಕ ಮೂಲದ ಸಂಶೋಧನೆ ಮಾಡಿಕೊಟ್ಟವರು. ಅದರ ಕೆಲ ಉದಾಹರಣೆಯನ್ನೇ ಈ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ.

ಋಗ್ವೇದ ಮಂಡಲ ೧, ಸೂಕ್ತ ೧೬೭, ಮಂತ್ರ ೧

ಸಹಸ್ರಂತ ಇಂದ್ರೋತಯೋ ನಃ ಸಹಸ್ರಮಿಷೋ ಹರಿವೋ ಗೂರ್ತತಮಾಃ |
ಸಹಸ್ರಂ ರಾಯೋ ಮಾದಯಧ್ಯೈ ಸಹಸ್ರಿಣ ಉಪ ನೋ ಯಂತು ವಾಜಾಃ ||

ಈ ರೀತಿಯಲ್ಲಿ ಹಲವು ಮುಖದಿಂದ ಚಿಂತನೆ ಮಾಡಿದ್ದಾರೆ. ಬದುಕು ಕಲಿಯುವ ಜನಕ್ಕೆ ಹಲವು ಜೀವನ ಮುಖವನ್ನು ತೋರಿಸಿಕೊಟ್ಟರು. “ನ ರೋದಸೀ ಅಪನುದಂತ ಘೋರಾ” ಎಂದರು. ಒಟ್ಟಾರೆ ನಮ್ಮ ಸಮಾಜದ ಏಳ್ಗೆಗಾಗಿ ಕುಲವೃತ್ತಿಯಾಧರಿಸಿ ವೈಜ್ಞಾನಿಕತೆಯನ್ನು ತೋರಿಸಿಕೊಟ್ಟವರು ಅಗಸ್ತ್ಯರು. ಅವರದ್ದೇ ಆದ ಒಂದು ಮತ್ಸ್ಯೋದ್ಯಮ ಕರಿತ ಮಾತನ್ನು ಗಮನಿಸಿ –

ಋಗ್ವೇದ ಮಂಡಲ ೧, ಸೂಕ್ತ ೧೭೦, ಮಂತ್ರ ೧-೫

ನ ನೂನಮಸ್ತಿ ನೋಶ್ವಃ ಕಸ್ತದ್ವೇದ ಯದದ್ಭುತಮ್ |
ಅನ್ಯಸ್ಯ ಚಿತ್ತಮಭಿ ಸಂಚರೇಣ್ಯಮುತಾಧೀತಂ ವಿನಶ್ಯತಿ || ೧ ||
ಕಿಂ ನ ಇಂದ್ರ ಜಿಘಾಂಸಸಿ ಭ್ರಾತರೋ ಮರುತಸ್ತವ |
ತೇಭಿಃ ಕಲ್ಪಸ್ವ ಸಾಧುಯಾ ಮಾನಃ ಸಮರಣೇ ವಧೀಃ || ೨ ||
ಕಿಂ ನೋ ಭ್ರಾತರಗಸ್ತ್ಯ ಸಖಾ ಸನ್ನತಿ ಮನ್ಯಸೇ |
ವಿದ್ಮಾ ಹಿ ತೇ ಯಥಾ ಮನೋಸ್ಮಭ್ಯಮಿನ್ನ ದಿತ್ಸಸಿ || ೩ ||
ಅರಂ ಕೃಣ್ವಂತು ವೇದಿಂ ಸಮಗ್ನಿಮಿಂಧತಾಂ ಪುರಃ |
ತತ್ರಾಮೃತಸ್ಯ ಚೇತನಂ ಯಜ್ಞಂ ತೇ ತನವಾವಹೈ || ೪ ||
ತ್ವಮೀಶಿಷೇ ವಸುಪತೇ ವಸೂನಾಂ ತ್ವಂ ಮಿತ್ರಾಣಾಂ ಮಿತ್ರಪತೇ ಧೇಷ್ಠಃ |
ಇಂದ್ರ ತ್ವಂ ಮರುದ್ಭಿಃ ಸಂ ವದಸ್ವಾಧಪ್ರಾಶಾನ ಋತುಥಾ ಹವೀಂಷಿ || ೫ ||

ಮಖೆಯೊಳಶ್ವಗತಿ ಋತಪುಠಧ್ವನಿ ತಾಡನ ಭೇಧನಗಳಿರೆ
ಸುಖವಪ್ಪುದೈ ಮತ್ಸ್ಯಗಳೊಳಾಡೆ ಸಂತತಿ ವೃದ್ಧಿ ಕೂರ್ಮಗಳಾ ಮೆಲೆ
ಮುಖ ಸಂಖ್ಯೆಯೊಳಾರು ಬಲ್ಲಿರೇ ನೂನದ ಅಧ್ವೇಧಃ ಮೊತ್ತದೊಳಹಿತರಾರು ಅನ್ನರಾರೊ ಅರಿಯೇ |
ಮುಖಾದ್ಭುತವನರಿ ಮುತಾಧೀತನಾಗೈ ಮನುಜ ಮೊತ್ತದ ಸಂಖ್ಯೆಯೊಳಾರು
ಮುಖದವನ ಕರುಣೆಯಲಿ ಜೊಂಡು ಬಸಿರಾಯ್ತು ಮತ್ಸ್ಯಗಳಾಯ್ತು
ಮಖೆಯೊಳಗೆ ಶಿಶುತನವು ಋತುವರಿತು ನಡೆ ನೀನು ಜೀವನ ರಥ ನಡೆಸು ಸುಗಮದಲೀ ||

ಅಂದೇ ಅಘಸ್ತ್ಯರು ಮತ್ಸ್ಯೋದ್ಯಮದ ವಿಸ್ತೃತ ಸಂಶೋಧನೆ ಮಾಡಿ ಯಾವ ಕಾಲದಲ್ಲಿ ಮತ್ಸ್ಯೋದ್ಯಮ ಮಾಡಬೇಕು? ಹೇಗೆ ಮಾಡಬೇಕು? ಜಲಚರಗಳ ಸಂತತಿ ವೃದ್ಧಿಕಾಲವ್ಯಾವುದು? ಎಲ್ಲವನ್ನೂ ವಿವರಿಸಿದ್ದಾರೆ. ಹಾಗೆ ಹೆಚ್ಚೆಚ್ಚು ಮತ್ಸ್ಯ ಬೆಳವಣಿಗೆಯಾಗಲು ನಾವೇನು ಪ್ರಾಕೃತಿಕ ನಿಯಮ ಪಾಲಿಸಬೇಕು ಎಂದೂ ತಿಳಿಸಿದ್ದಾರೆ. ಹಾಗೇ ಪ್ರಕೃತಿಯ ಲಕ್ಷಣ ಆಧರಿಸಿ ಯಾವ್ಯಾವ ದಿಕ್ಕಿನಲ್ಲಿ ಎಷ್ಟೆಷ್ಟು ಮತ್ಸ್ಯ ಸಂತತಿ ವೃದ್ಧಿಯಾಗಿದೆ? ಹೇಗೆ ಆಗುತ್ತದೆ? ಅದರಲ್ಲಿ ನಮ್ಮ ಪಾಲೆಷ್ಟು? ಖಗಾದಿಗಳ ಪಾಲೆಷ್ಟು? ಎಲ್ಲವನ್ನೂ ವಿವರಿಸಿದ್ದಾರೆ. ಈ ಮಾತುಗಳ ಜೊತೆಯಲ್ಲಿ ಕೆಲ ಪೌರಾಣಿಕ ಮಾಹಿತಿಗಳನ್ನೂ ಹೇಳಿ ಮುಂದೆ ಅಘಸ್ತ್ಯರ ವಿಚಾರವಾಗಿ ಬರೆಯುತ್ತೇನೆ.

ನಮ್ಮ ಪುರಾಣಗಳಲ್ಲಿ ನವ ಖಂಡಗಳನ್ನೂ, ಸಪ್ತದ್ವೀಪಗಳನ್ನೂ, ಸಪ್ತ ಸಾಗರಗಳನ್ನೂ ಗುರುತಿಸಿ ಹೆಸರಿಸಿದ್ದಾರೆ. ಅದರಲ್ಲಿ ಭರತಖಂಡವೆಂಬ ಈ ಭೂಭಾಗ, ಅದರಲ್ಲಿ ಜಂಬೂದ್ವೀಪ ಪ್ರಸಿದ್ಧ. ಭರತಖಂಡವೆಂದರೆ ಈಗಿನ ಭಾರತಭೂಮಿ ಮಾತ್ರವಲ್ಲ, ಪೂರ್ವಪಶ್ಚಿಮವಾಗಿ ಆಫ್ಘಾನಿಸ್ಥಾನ, ಬಲೂಚಿಸ್ಥಾನದಿಂದ ಆರಂಭಿಸಿ ಬರ್ಮಾ, ಅದರ ದಕ್ಷಿಣೋತ್ತರವಾಗಿ ಹರಡಿದ ಎಲ್ಲಾ ಭೂಖಂಡಗಳೂ ಸೇರಿರುತ್ತವೆ. ಹಾಗೇ ಉತ್ತರ ದಕ್ಷಿಣವಾಗಿ ಉತ್ತರ ಕುರು ಪ್ರಾಂತ್ಯದಿಂದ ದಕ್ಷಿಣಕ್ಕೆ ಅಂದರೆ ಸಿಂಹಳದ ಕೊನೆವರೆಗೆ ಇರುವ ಪ್ರದೇಶ ಭರತಖಂಡ. ಅದರಲ್ಲಿ ಸುತ್ತ ಕರಾವಳಿ ಆವರಿಸಿರುವ ವಿಂಧ್ಯದ ದಕ್ಷಿಣ ಭಾಗವೆಲ್ಲಾ ಜಂಬೂದ್ವೀಪ. ಈ ಭರತಖಂಡದ ಒಟ್ಟು ವ್ಯಾಪ್ತಿಯಲ್ಲಿ ಆವರಿಸಿರುವ ಸಮುದ್ರಗಳೇ ಸಪ್ತ ಸಾಗರಗಳು. ಇಕ್ಷು, ಕ್ಷೀರ, ಸುರಾ, ಸರ್ಪಿ, ದಧಿ, ಲವಣ, ಶುದ್ಧೋದಕ ಎಂಬ ಸಪ್ತಸಾಗರಗಳಿವೆ ಈ ಭರತಖಂಡವನ್ನಾಧರಿಸಿ!

ಈಗಿನ ಹೆಸರುಗಳನ್ನು ಬಿಟ್ಟ ಪ್ರಾದೇಶಿಕತೆಯನ್ನು ಬಿಟ್ಟು ಪೂರ್ತಿ ಸಾಗರ ಪ್ರಾಂತ್ಯದಲ್ಲಿ ಸಂಚರಿಸಿದರೆ ಇದೆಲ್ಲಾ ಸತ್ಯವೇ. ಈಗಿನ ಅರಬ್ಬೀ ಸಮುದ್ರವೆಂಬುದು ಲವಣ ಸಮುದ್ರ ಎಂಬ ಹೆಸರುಳ್ಳದ್ದಾಗಿತ್ತು. ಅದರ ಮಧ್ಯದ ದ್ವೀಪ ಪ್ರದೇಶಗಳನ್ನು ಲವಣಾಸರನೆಂಬ ರಾಕ್ಷಸನು ಆಳುತ್ತಿದ್ದ. ರಾಮನ ಕಾಲದಲ್ಲಿ ಶತ್ರುಘ್ನನು ಅವನನ್ನು ಜಯಿಸಿ ಚಕ್ರಾಧಿಪತ್ಯಕ್ಕೆ ಸೇರಿಸಿದನೆಂಬ ಕಥೆಯಿದೆ. ಹಾಗೇ ಸಮುದ್ರಗಳ ಮಧ್ಯದಲ್ಲಿ ಅಲ್ಲಲ್ಲ ಸಿಹಿನೀರಿನ ಪ್ರವಾಹಗಳಿವೆ. ಅದೇ ಇಕ್ಷು ಸಾಗರ. ಹಾಗೇ ಕುಡಿಯಲು ಆರ್ಹವಾದ ಶುದ್ಧೋದಕ ಪ್ರವಾಹವೂ ಇದೆ. ಹಾಗೇ ಮಂಜುಗೆಡ್ಡೆಗಳ ನೀರಿನ ಮೇಲೆ ತೇಲುತ್ತಾ ಪ್ರವಹಿಸುವ ದಧಿ ಸಾಗರವೂ ಇದೆ. ಹಾಗೇ ಯಾವಾಗಲೂ ಬೆಳ್ಳಗೆ ಕಿರಣ ಪ್ರತಿಫಲಿಸುವ, ಎಲ್ಲಾ ಕಿರಣಗಳನ್ನು ಸಮಾನವಾಗಿ ಸ್ವೀಕರಿಸಿ ಪ್ರತಿಫಲಿಸುವ ಶಕ್ತಿ ಹೊಂದಿದ ಸಮುದ್ರ ಪ್ರದೇಶವೇ ಕ್ಷೀರಸಾಗರ ಎನ್ನಿಸಿದೆ. ಇನ್ನು ನೀರಿನ ಘನಾಂಶ ಹೆಚ್ಚಿ ಔಷಧೀಯ ಗುಣಗಳನ್ನು ತನ್ನಲ್ಲಿ ಕ್ರೋಢೀಕರಿಸಿಕೊಂಡ ನೀರಿನ ಭಾಗವೇ ಸರ್ಪಿ ಎನ್ನಿಸಿದೆ. ಹಾಗೇ ತೀಕ್ಷ್ಣತೆಯನ್ನು ಮೈಗೂಡಿಸಿಕೊಂಡ ಕೆಲ ಕಾಂತೀಯ ಕಿರಣಗಳನ್ನು ಹೊಂದಿದ ಸಮುದ್ರಭಾಗವೇ ಸುರಾಸಾಗರ ಎನ್ನಿಸಿದೆ. ಈ ಭರತಖಂಡ ಪ್ರದೇಶದಲ್ಲಿ ಇವೆಲ್ಲಾ ಕಂಡುಬರುತ್ತವೆ. ಹಾಗಾಗಿ ಸಪ್ತ ಸಾಗರಗಳು ಹೆಸರಿಸಲ್ಪಟ್ಟವು.

ಆಯಾಯ ಸಾಗರ ಪ್ರದೇಶದಲ್ಲಿ ಕೆಲ ವಿಶೇಷಗಳಿವೆ. ತೀಕ್ಷ್ಣ ಗುಣ ಹೊಂದಿದ ಸುರಾ ಸಾಗರ ಪ್ರದೇಶದಲ್ಲಿ ನೀರಿನಲ್ಲಿ ಮತ್ತಿನ ಅಂಶವಿದೆ. ವಜ್ರ, ಮಾಣಿಕ್ಯ, ಹವಳ ಇತ್ಯಾದಿ ರತ್ನಗರ್ಭವಾಗಿದೆ ಈ ಸಾಗರ. ಹಾಗೇ ಕ್ಷೀರದಲ್ಲಿ ಮುತ್ತು, ಶಂಖಗಳು ಇದ್ದರೆ ಸರ್ಪಿಯಲ್ಲಿ ಲೋಹಗಳೂ, ಇತರೆ ಖನಿಜಗಳೂ, ಕಲ್ಲೆಣ್ಣೆಯೂ ಇರುತ್ತದೆ. ದಧಿಯಲ್ಲಿ ನಾನಾ ರೀತಿಯ ವಿಶಿಷ್ಟ ಮೀನುಗಳೂ, ತರಹೇವಾರಿ ಗಿಡಮರಗಳೂ ಬೆಳೆಯುವುದಾಗಿ ವಿವರಿಸಿದ್ದಾರೆ (ಸಮುದ್ರ ಸಸ್ಯಗಳು). ಹೀಗೆ ಸಮುದ್ರದಾಳದ ಪ್ರತಿಯೊಂದನ್ನೂ ಅಘಸ್ತ್ಯರು ಇದಮಿತ್ಥಂ ಎಂದು ಸಂಶೋಧಿಸಿ ಬರೆದಿಟ್ಟಿದ್ದಾರೆ. ಹಾಗೇ ಸಮುದ್ರದ ಏರಿಳಿತ, ಅದಕ್ಕೆ ಕಾರಣ, ಅದರ ಉಪಯೋಗ, ನಿರಂತರ ಬೀಸುವ ಗಾಳಿ, ಅದರ ಬೀಸುವಿಕೆಗೆ ಕಾರಣವಾಗುವ ಭೂಮಿಯ ಮೇಲಿನ ಶಾಖೋತ್ಪಾದನೆ ಇತ್ಯಾದಿ ಇತ್ಯಾದಿಯೆಲ್ಲವೂ ಸೂತ್ರಬದ್ಧ ರೀತಿಯಲ್ಲಿರುತ್ತದೆ ಎಂದಿದ್ದಾರೆ. ಹಾಗೇ ಋತುಮಾನಗಳು, ತ್ರಿಕಾಲಗಳು, ಹಗಲು, ರಾತ್ರಿ, ಮಾಸಭೇದ, ದಿನಗಣನೆ, ಸಂವತ್ಸರ ಚಕ್ರವರ್ಣನೆ ಇತ್ಯಾದಿಗಳನ್ನೂ ಅಘಸ್ತ್ಯರು ನಿಶ್ಚಿತವಾಗಿ ವಿವರಿಸಿದ್ದಾರೆ. ಅವೆಲ್ಲದರ ವಿಚಾರವಾಗಿ ಮುಂದೆ ಉದಾಹರಣೆ ಸಹಿತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ. ಅಘಸ್ತ್ಯರ ಪ್ರವೇಶ ಯಾವ್ಯಾವ ವಿಭಾಗದಲ್ಲಿದೆ? ಅದನ್ನು ವೈಜ್ಞಾನಿಕವಾಗಿ ಹೇಗೆ ವಿಶ್ಲೇಷಿಸಿದ್ದಾರೆ ಎಂಬುದರ ವಿವರವನ್ನು ಮೊದಲಾಗಿ ಪಟ್ಟಿ ಮಾಡಿ ವಿವರಿಸಿ ನಂತರ ಆ ಸೂತ್ರಗಳ ಪರಿಚಯ ಮಾಡಿಕೊಡುತ್ತೇನೆ.

೧. ಜಲಯಂತ್ರಗಳು

೨. ನೌಕಾಯಾನಗಳು

೩. ಸಮುದ್ರ + ಸಾಗರಗಳ ಪರಿಚಯ

೪. ಸಮುದ್ರೋತ್ಪನ್ನಗಳು

೫. ಮತ್ಸ್ಯೋದ್ಯಮ ಮತ್ತು ಸಮುದ್ರೋತ್ಪಾತಗಳು

೬. ಉತ್ಪಾತಗಳಿಂದ ಮತ್ಸ್ಯೋತ್ಪತ್ತಿ

೭. ಮತ್ಸ್ಯ ಪ್ರಮಾಣ + ಉದ್ಯಮದಲ್ಲಿ ಹಿಡಿತ

೮. ನೇಕಾರಿಕೆ – ನೇಯುವ ಯಂತ್ರ ರಚನೆ

೯. ಹಾಸು + ಹೊಕ್ಕುಗಳ ಮುಖೇನ ನೇಯ್ಗೆ

೧೦. ನೇಯ್ಗೆಯಲ್ಲಿ ಚಿತ್ರ ರಚನೆ (ಚಿಕಣಿ ಚಿತ್ರಗಳು)

೧೧. ಲೋಹ ವಿಧ್ಯಾ – ಪರಿಕರ ತಯಾರಿಕೆ

೧೨. ಕಾಷ್ಟವಿಧ್ಯಾ – ಕಾಷ್ಟ ಕೃತಿಗಳ ನಿರ್ಮಾಣ, ಗೃಹವಾಸ್ತು, ಗೃಹರಚನೆ

೧೩. ಶಿಲ್ಪಕಲಾ ಶಿಲಾಶಿಕ್ಷಣ, ಶಿಲಾಶುದ್ಧಿ, ಶಿಲಾಸಂಸ್ಕಾರ, ವಜ್ರಶಿಲಾ ಲಕ್ಷಣ

೧೪. ತಂತ್ರಶಾಸ್ತ್ರಗಳ ರಚನೆ, ಯಂತ್ರ ತಯಾರಿಕೆ (ಸನ್ನೆಗಳು ಇತ್ಯಾದಿ)

೧೫. ತಿರುಗಣೆ ಮಣೆ, ಮರುಸುತ್ತು ಕೀಲಿಗಳು, ಅದರಲ್ಲಿ ಎಡ+ಬಲ.

೧೬. ಸನ್ನೆಯ ಕೆಲ ವಿಶಿಷ್ಠ ಆವಿಷ್ಕಾರಗಳು

೧೭. ವಿಷ ಚಿಕಿತ್ಸಾ ಪದ್ಧತಿ

೧೮. ವಿಷಜಂತುಗಳ ನಿಯಂತ್ರಣ

ಇಷ್ಟು ಭಾಗದಲ್ಲಿ (೧೮) ಅಘಸ್ತ್ಯರು ತಮ್ಮ ನೈಪುಣ್ಯ ಮೆರೆದಿದ್ದಾರೆ. ಅದೆಲ್ಲದರ ಕೆಲ ಅಳತೆ, ಲೆಕ್ಕ, ಆಕಾರ + ರೂಪ, ರಚನಾ ವಿನ್ಯಾಸ, ಸೂತ್ರಗಳು ವಿವರಿಸಲ್ಪಟ್ಟಿವೆ. ತನ್ನ ಈ ಅಲ್ಪ ಮತಿಗೆ ಹೊಳೆದಂತೆ ಮುಂದಿನ ಕಂತುಗಳಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ. ಹೆಚ್ಚಿನ ವಿವರಗಳಿಗಾಗಿ ನೀವೂ ಸಂಶೋಧನೆ ಮಾಡಿರೆದು ಪ್ರಾರ್ಥಿಸುತ್ತೇನೆ.

ಇಂತು,
ಕೆ. ಎಸ್. ನಿತ್ಯಾನಂದ
ಅಗಸ್ತ್ಯಾಶ್ರಮ ಗೋಶಾಲೆ,
ಬೇರಿಕೆ ಬೆಂದ್ರ, ಬಂದ್ಯೋಡ್, ಕಾಸರಗೋಡು

Friday, 6 December 2013

ಡಾರ್ವಿನ್ ವಿಕಾಸ ವಾದ ಸರಿಯೇ? ಮಂಗನಿಂದ ಮಾನವನೇ?


ಮಂಗ ಮತ್ತು ಮನುಷ್ಯವೆರಡು ಸಮಕಾಲೀನ. ಮಂಗನಿಂದ ಮನುಷ್ಯನಾದದ್ದಲ್ಲ. ಡಾರ್ವಿನ್ ವಾದ ಸರಿಯಿಲ್ಲವೆಂದು ಎಂದೋ ವೈಜ್ಞಾನಿಕ ವಲಯದಲ್ಲಿ ಬಿದ್ದು ಹೋಗಿದೆ. ಅಂತರ್ಜಾಲದಲ್ಲಿ ಹುಡುಕಿ ನೋಡಿ ಎಷ್ಟೆಷ್ಟು ವಿರೋಧಾಭಾಸಗಳಿವೆ ಎಂದು ನಿಮಗೇ ತಿಳಿದುಬರುತ್ತದೆ. ಆದರೆ ವೈಧಿಕ ಭೌತಶಾಸ್ತ್ರದಲ್ಲಿ ಗೊಂದಲವಿಲ್ಲ. ಒಂದು ಕರ್ಮವನ್ನು ನಿರ್ವಹಿಸುವುದಕ್ಕೆ ಯಾವ ರೂಪ ಬೇಕೋ ಆ ರೂಪ ಧಾರಣೆಯಾಗುತ್ತದೆ ಎನ್ನುತ್ತದೆ. ಉದಾ:- ಹುಲ್ಲು ಕೊಯ್ಯಲು ಕತ್ತಿತರಕಾರಿ ಹೆಚ್ಚಲು ಈಳಿಗೆ ಮಣೆ. ಅದು ಬಿಟ್ಟು ಮಂಗನು ತಾನು ಮನುಷ್ಯನಾಗಬೇಕು ಎಂದುಕೊಂಡರೆ ಹಾಗಾಗುವುದಿಲ್ಲ. ಅದಕ್ಕಾದ ಕರ್ಮವಿರಬೇಕು. 

ಪಂಚಭೂತಾತ್ಮಕ ಸೃಷ್ಟಿ ಎನ್ನುವ ಒಂದು ಭಾಗದ ವಿವರಣೆಯು ಸತತ ಐದು ವರ್ಷಗಳ ಅಗ್ನ್ಯಾವೈಷ್ಣವೀ ಯಾಗದಲ್ಲಿ ಕಂಡುಬಂದ ಸತ್ಯ ವಿಚಾರಗಳನ್ನು ತಿರುಕ ಸಂಹಿತಾ ಎಂಬ ಸಂಪುಟಗಳಲ್ಲಿ ಪ್ರಕಟಿಸಿದ್ದೇವೆ. ಇನ್ನು 3 ಭಾಗದ ಜಗತ್ ಸೃಷ್ಟಿಯ ನಿಯಮಗಳನ್ನು ಹೇಳುತ್ತದೆ. ವಿಚಾರ ಒಂದೇಯಾದರೂ, ಬೇರೆ ಬೇರೆ ಕೋನಗಳಲ್ಲಿ ಚಿಂತಿಸಲಾಗಿದೆ. ಸಮಾನ್ಯವಾಗಿ 4 ಭೂತಗಳ ಪರಿಚಯ ಮಾತ್ರ ನಮಗಿರುವುದು. 5ನೇಯದರ ಪರಿಚಯ ನಮಗಿಲ್ಲ. ಇದೆ ಎಂಬ ಕಲ್ಪನೆ ಮಾತ್ರ ಇರುವಂತಹದ್ದು. ಆಕಾಶದ ಕಲ್ಪನೆಯಿದೆ ಬಿಟ್ಟರೆ ಅದರ ವ್ಯಾಪ್ತಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ.

ಆಕಾಶ ವ್ಯಾಪ್ತಿಯಾದಂತಹಾ ಯಾವುದೋ ಒಂದು ಮೂಲ ಚೈತನ್ಯಕ್ಕೊಂದು ಇಚ್ಛೆ/ಅಪೇಕ್ಷೆ/ಕುತೂಹಲ/ಬೇಕು/ಪ್ರಶ್ನೆ ಹುಟ್ಟುತ್ತದೆ. ಈ ರೀತಿಯಾದ ಇಚ್ಛೆ ಉತ್ಪತ್ತಿಯಾದಾಗ, ಮೂಲ ವಸ್ತು ಮತ್ತು ಉತ್ಪತ್ತಿಯೊಂದಿಗಾಗುವ ಘರ್ಷಣೆಯು ಒಂದು ರೀತಿಯ ಋಣಾತ್ಮಕ ಶಕ್ತಿ ಉತ್ಪನ್ನವಾಗುತ್ತದೆ. ಆ ಶಕ್ತಿಯ ಪ್ರವಹನೆಯೇ ವಾಯು. ವಾಯುವಿನ ಚಲನೆಯು ಶಾಖ ಉತ್ಪನ್ನಕ್ಕೆ ಕಾರಣವಾಯಿತು. ಹಾಗಾಗಿ ಅಗ್ನಿ ಉತ್ಪನ್ನವಾಯಿತು. ಅಗ್ನಿಯ ದಹ್ಯ ಶಕ್ತಿಯಿಂದಾಗಿ ನೀರು ಹುಟ್ಟುತ್ತದೆ. ನೀರಿನಲ್ಲಿದ್ದ ಶ್ಲೇಷ್ಮಾಂಶ ಎಂಬ ಮತ್ಸ್ವಗಳು ಪೃಥ್ವಿಯಾಗುತ್ತದೆ. ಇದು ಪಂಚಭೂತಗಳ ಸೃಷ್ಟಿಯ ಮೂಲ ಸೂತ್ರ. ಮತ್ಸ್ವಗಳಿಗಿರುವ ಒಂದು ಗುಣವೆಂದರೆ ತನ್ನತನವನ್ನು ಕಾಯ್ದುಕೊಳ್ಳುವುದು. ನೀರನ್ನು ಎಷ್ಟೇ ಶುದ್ಧಗೊಳಿಸಿದರೂ ಅದರಲ್ಲೆ ಶ್ಲೇಷ್ಮವು ಇದ್ದೇ ಇರುತ್ತದೆ. ಮತ್ಸ್ವಗಳಿಗೆ ಸದಾ ಪ್ರವಹನಶೀಲ ಶಕ್ತಿ ಇರುತ್ತದೆ. ಅದರಿಂದ ಯಾವುದೊಂದನ್ನೋ ಹಿಡಿದುಕೊಳ್ಳುತ್ತದೆ, ತನ್ಮೂಲಕ ಬೆಳೆಯುತ್ತಾ ಹೋಗಿ ರೂಪ ಬರುತ್ತದೆ. ಆಗ ಈ ಪೃಥ್ವಿಯನ್ನು ಬಂದು ಸೇರುತ್ತಾ ಹೋಗುತ್ತವೆ. ಆದರೆ ಪೃಥ್ವಿಯಲ್ಲಿ ಆಕಾಶದ ಅವಕಾಶವಿಲ್ಲ. ಆಕಾಶವಿಲ್ಲದ ಕಾರಣ ಪೃಥ್ವಿಯು ಮತ್ಸ್ವದಿಂದಾದ ರೂಪಗಳನ್ನು ಪ್ರತೇಕವಾಗಿ ಇಡುತ್ತಾ ಬರುತ್ತದೆ. ಹಾಗಾಗಿ ಪೃಥ್ವಿಯಲ್ಲಿರತಕ್ಕ ಎಲ್ಲವೂ ಅಣು-ಅಣುವಾಗಿ ಬೇರೆಯಾಗಿಯೇ ಇವೆಯೇ ಹೊರತು ಒಂದಾಗಿಲ್ಲ. ನೋಡಲಿಕ್ಕೆ ಒಂದು ಬೃಹತ್ ಬಂಡೆಯಾದರೂ ಅದು ಅಣುಗಳ ಸಂಯೋಗವೇ ಆಗಿರುತ್ತದೆ. ಯಾವುದೂ ಒಂದನ್ನೊಂದು ಸೇರುವುದಿಲ್ಲ, ಅದು ಪೃಥ್ವಿಯ ಗುಣ. ಹಾಗೆ ಸೇರದೆ ಪ್ರತ್ಯೇಕವಾಗಿ ಉಳಿದ ತುಣುಕುಗಳು ಕೊನೆಯಲ್ಲಿ ಆಕಾಶ ತತ್ವದಲ್ಲಿ ಉಂಟಾಗಿದ್ದ ಮೂಲ ಋಣಾಂಶವು ಅವುಗಳ ಮೇಲೆ ಆರೋಪಿಸಲ್ಪಡುತ್ತದೆ. ಹಾಗಾಗಿ ಅದನ್ನು ಜೀವ ಎಂದರು. ಆದ್ದರಿಂದ ಮೂಲ ಋಣವನ್ನೇ ಜೀವ ಎಂದರು. ಪ್ರತ್ಯೇಕವಾದ ಅಂಶಗಳಲ್ಲಿ ಸೇರಿದಂತಹಾ ಬೀಜವಾದ ಜೀವವೇ ಅಣು, ಅದರಲ್ಲಿರುವ ಚಾಲನಾ ಶಕ್ತಿಯೇ ಮೂಲ ಚೈತನ್ಯ. ಅದು ಆರಂಭಿಕ ಪ್ರಕೃತಿಯಲ್ಲಿ ಸಹಜ ವ್ಯವಹಾರದಲ್ಲಿದ್ದಾಗ ಭಿನ್ನ-ಭಿನ್ನ ರೂಪಗಳಾಗಿ ಬರುತ್ತದೆ. ರೂಪಕ್ಕಾಧರಿಸಿ ವ್ಯವಹಾರಗಳು ಉಂಟಾಗುತ್ತವೆ. ಅದರಲ್ಲಾದ ಋಣವು ಅದನ್ನು ವ್ಯವಹರಿಸುವಂತೆ ಮಾಡುತ್ತಲೇ, ಅದಕ್ಕಾಧರಿಸಿದ ಕರ್ಮವು ಸೃಷ್ಟಿಯಾಗುತ್ತದೆ. ಯಾವುದೇ ಒಂದು ಕೆಲಸವಾದರೆ ಒಂದು ಫಲ ಎಂಬುದು ಬರುತ್ತದೆ. ಒಂದು ವಸ್ತುವು ಒಂದು ಪ್ರದೇಶದಲ್ಲಿ ಹರಿಯುತ್ತಿದ್ದರೆ, ಅಲ್ಲೊಂದು ದಾರಿ ನಿರ್ಮಾಣವಾಗುತ್ತದೆ. ಅದನ್ನೇ ಕರ್ಮ ಎಂದರು. ಕರ್ಮ ಸೃಷ್ಟಿಯಾದಾಗ ಅದಕ್ಕೊಂದು ಭೋಕ್ತೃ ಬೇಕು. ಅದಕ್ಕಾಗಿ ಜೀವ ಸೃಷ್ಟಿಯಾಗುತ್ತದೆ. ಅಂದರೆ ಜೀವವು ಆ ಕರ್ಮವನ್ನು ಅನುಭವಿಸುವುದಕ್ಕಾಗಿ ಸೃಷ್ಟಿಯಾಗುವುದು. ಆ ಕರ್ಮವನ್ನು ಅನುಭವಿಸುವುದರಿಂದಾಗಿ ಅನುಭವ ಕಾಲದಲ್ಲಿ ಮಾಡತಕ್ಕಂತಹಾ ಸಂಚಿತಗಳೇನಿವೆಯೋ ಅವು ವೃದ್ಧಿಸುತ್ತವೆ. ಈ ರೀತಿ ಸಂಚಿತ ಭಾಗದ ಕರ್ಮಗಳ ಪ್ರಾಬಲ್ಯವು ಹೆಚ್ಚಿದಂತೆ ಹಲವು ಭಿನ್ನ-ಭಿನ್ನ ರೀತಿಯ ಜೀವಿಗಳ ಸೃಷ್ಟಿಯಗುತ್ತದೆ. ಅದರಲ್ಲಿ ಒಂದು ರೂಪ ಮನುಷ್ಯ!

ಮನುಷ್ಯ ರೂಪ ಬಂದಾಗ ಒಂದಿಷ್ಟು ವಿಶೇಷ ಗುಣಗಳನ್ನು ಸಂಯೋಜಿಸುತ್ತದೆ ಕರ್ಮ, ಅದನ್ನಾಧರಿಸಿ ಜೀವನ ನಡೆಸಲು ಬೌದ್ಧಿಕತೆ, ಬುದ್ಧಿಯನ್ನು ಕೊಟ್ಟು ಕರ್ಮ ಸ್ವಾತಂತ್ರ್ಯ. ಪ್ರಪಂಚದ ಇತರೆ ಯಾವುದೇ ಜೀವಿಗಳಿಗೂ ಕರ್ಮದ ಸ್ವಾತಂತ್ರ್ಯವಿಲ್ಲ, ಮನುಷ್ಯ ಮಾತ್ರ ಕರ್ಮವನ್ನು ತನ್ನ ಬೌದ್ಧಿಕತೆಯಿಂದ ಬೇಕಾದಂತೆ ಬಳಸಿ ಪ್ರಪಂಚದಲ್ಲಿ ಬೆಳೆಯಬಹುದು. ಅದು ಉತ್ತಮ ಮಾರ್ಗದಲ್ಲಾದರೆ ದೇವತ್ವಕ್ಕೆ ಏರುತ್ತಾನೆ, ಪುನಃ ಮೂಲ ಚೈತನ್ಯದಲ್ಲಿ ಹೋಗಿ ಸೇರುತ್ತಾರೆ. ಕೆಟ್ಟ ಮಾರ್ಗದಲ್ಲಿ ಹೋದರೆ ರಾಕ್ಷಸತ್ವಕ್ಕೆ ಇಳಿದು, ಈ ಭೂಮಿಯಲ್ಲಿ ನಿರಂತರತೆಯನ್ನು ಕಾಯ್ದುಕೊಂಡು ಬರುತ್ತಾರೆ. ಇದು ಮನುಷ್ಯ ಗುಣದ ಒಂದು ವ್ಯವಸ್ಥೆ.

ಮೂಲ ಮತ್ಸ್ವದಿಂದಾದ ಏಕಾಣು ಜೀವಿಯು ಬೇರೆ ಬೇರೆ ರೂಪವನ್ನು ಹೊಂದುತ್ತಾ ಹೋಗುತ್ತದೆ. ಈಗ ಇರುವ ಮನುಷ್ಯ ಸರಿಯಲ್ಲವೆಂದೆನಿಸಿದರೆ ಇದೇ ರೀತಿ ಭೌದ್ಧಿಕತೆ ಇರುವ ಮತ್ತೊಂದು ಮನುಷ್ಯ ರೂಪ ಬರಬಹುದು. ಆದರೆ ಒಟ್ಟು ಸಂಖ್ಯೆಯಲ್ಲಿ ಸಮಾನವಿರುತ್ತದೆ. 84 ಲಕ್ಷ ಪ್ರಭೇದಗಳಲ್ಲಿ ಮನುಷ್ಯ ಒಂದು ಪ್ರಭೇದ, ಮಂಗ ಮಂಗ ಮತ್ತೊಂದು ಪ್ರಭೇದ. ಆದರೆ ಜೀವಿಗಳ ಸಂಖ್ಯೆ ಇಷ್ಟೇ ಎಂದು ಸ್ಥಿರವಲ್ಲ. ಒಂದು ಪ್ರಭೇದದಲ್ಲಿ ಹೆಚ್ಚಿದರೆ ಮತ್ತೊಂದರಲ್ಲಿ ಕಡಿಮೆಯಾಗುತ್ತದೆ. ಹೀಗೆ ತೂಗಿಕೊಂಡು ಹೋಗುತ್ತದೆ. ಉದಾ:- ಹುಲಿ, ನರಿ, ನಾಯಿ, ಕರಡಿ ಸಂತತಿ ಕಡಿಮೆಯಾಗುತ್ತಾ ಮನುಷ್ಯರಾಗಿ ಜನ್ಮತಾಳುತ್ತಾ ಬಂದರು. ಪರಿವರ್ತನೆಯು ನಿರಂತರ. 

ಚೈತನ್ಯವು 84 ಲಕ್ಷ ಪ್ರಭೇದಗಳನು ನಿರ್ಧರಿಸಿ ಏಕ ಕಾಲದಲ್ಲೇ ತನ್ನ ಋಣವು ವ್ಯವಹರಿಸಲಿಕ್ಕೆ ಸಾಧ್ಯ ಎಂಬುವ ಕಾರಣಕ್ಕೇ ಪ್ರವೇಶವಾದದ್ದು. ಪುರಾಣದಲ್ಲೂ ಪ್ರಕೃತಿಯೆಲ್ಲಾ ಪೂರ್ಣ ಜಡವಾಗಿಯೇ ಇತ್ತು ಎಂದಿದೆ. ವ್ಯವಹರಿಸಲಿಕ್ಕೆ ಆಗುತ್ತೆ ಎನ್ನುವ ಕಾರಣಕ್ಕಾಗಿಯೇ ಚೈತನ್ಯವು ೮೪ ಲಕ್ಷ ಪ್ರಭೇದಗಳನ್ನು ಸೃಜಿಸಿ ಏಕ ಕಾಲದಲ್ಲಿಯೇ ಪ್ರವೇಶಿಸಿತು. ವೇದದಲ್ಲಿ 84 ಲಕ್ಷ ಪ್ರಭೇದಗಳ ಸರ್ವ ವಿವರಣೆ ಇದೆ.        


ಈ ವಿಚಾರಗಳು ಪ್ರಸಕ್ತದಲ್ಲಿ ಸಿಗದಿರಲು ಬೇಡಿಕೆ ಇಲ್ಲದ ಕಾರಣ ಅಧ್ಯಯನದ ಕೊರತೆಯೇ ಕಾರಣ. ಮತ್ತೊಂದು ಕೂಪಮಂಡೂಕ ವಾದ. ಅವರು ಆಚರಿಸಿಕೊಂಡು ಬಂದ ಸೈದ್ಧಾಂತಿಕ ವಾದವನ್ನು ಬಿಟ್ಟು ಕಿಟಕಿಯಲ್ಲೂ ನೀಕುವುದಿಲ್ಲ. ಆ ಪ್ರವೃತ್ತಿಯಿಂದಾಗಿ ವಿಶೇಷ ವಿಚಾರಗಳನ್ನು ಸ್ವೀಕರಿಸುವುದಕ್ಕೆ ಆಗುವುದೇ ಇಲ್ಲ. ಹಾಗಾಗಿ ವಿಶೇಷ ವಿಚಾರ ಸಿಕ್ಕುತ್ತಿಲ್ಲ. ಆ ವಿಚಾರಗಳು ಎಲ್ಲೋ ಹೊರಗಿಲ್ಲ. ನಮ್ಮ ಸಮಾಜದ ಮಧ್ಯದಲ್ಲಿ, ವೇದ, ಸಾಹಿತ್ಯಾದಿ ಗ್ರಂಥಗಳಲ್ಲೇ ಇದೆ. ಜನರಿಗಿರುವ ಸಮಸ್ಯೆ, ತಳಮಳಗಳ ಕಾರಣದಿಂದ ಒಟ್ಟಾರೆ ಆಕರ್ಷಕವಾಗಿ ಕೇಳುವ ಹಾಗೆ ವರ್ಣಿಸಿದರೆ ಸತ್ಯಾಸತ್ಯತೆ ಚಿಂತಿಸದೆ ಅದನ್ನೇ ಒಪ್ಪಿಬಿಡುತ್ತಾರೆ.

Sunday, 24 November 2013

ವೇದೋಕ್ತ ಉಡುಗೆ ತೊಡಿಗೆ ಅಲಂಕಾರ ವೇಷ ಭೂಷಣ ಭಾಗ್ಯಗಳು


ಬೇಲಿಯೇ ಎದ್ದು ಹೊಲ ಮೇಯ್ದರೆ? ಇಂದಿನ ವೇದಶಾಸ್ತ್ರಜ್ಞರೂ, ವಿದ್ವಾಂಸರೂ, ಪ್ರಕಾಂಡ ಪಂಡಿತರು, ಜ್ಯೋತಿರ್ವಿದ್ವಾನ್ ಎಂದೆಲ್ಲ ಮಾಧ್ಯಮಗಳಿಂದ ಬಿರುದಾವಳಿ ಪಡೆದ ವಿಧ್ವಂಸಕರು ಉನ್ಮಾದದಿಂದ ಭಾರತೀಯ ಸಂಸ್ಕೃತಿಯನ್ನೇ ತಿರುಚುವ ಹುನ್ನಾರ ಗೈದಿದ್ದಾರೆ. ಏನಾಯ್ತು ಎಂದಿರಾ? ಮಾಂಗಲ್ಯಧಾರಣೆಯು ವೇದೋಕ್ತವಲ್ಲವಂತೆ ಅಂತ ಗಂಟೆಗಟ್ಟಲೆ ಟಿವಿಯಲ್ಲಿ ಚರ್ಚೆ. ಓತಿಕೇತನಿಗೊಂದು ಬೇಲಿ ಸಾಕ್ಷಿ ಎಂಬಂತೆ ಇಲ್ಲಸಲ್ಲದ ವಿತಂಡವಾದದ ಸರಣಿಯನ್ನೇ ಮಂಡಿಸುತ್ತಾರೆ. ಒಂದಂತು ನಿಜ, ಆ ರೀತಿ ಕುತಂತ್ರದಿಂದ ತಾಳಿ ಕಟ್ಟುವುದೇ ನಿಷೇಧ ಎಂಬಂತಹಾ ವಾಕ್ಯಗಳಿಂದ ಜನರನ್ನು ಭ್ರಾಂತರಾಗುವಂತೆ ಮಾಡಿದವರ ವಂಶದಲ್ಲಿ ಮುಂದೆ ಮಾಂಗಲ್ಯ ಭಾಗ್ಯವೇ ನಾಶವಾಗಿ ನಿರ್ವಂಶವಾಗುವುದು ಎಂಬುದಕ್ಕೆ ಕರ್ಮಸಿದ್ಧಾಂತ ಆಧಾರ ಹಾಗೂ ಪ್ರಾತ್ಯಕ್ಷತೆ ಇದೆ.

ಮೊತ್ತ ಮೊದಲಿಗೆ ತಿಳಿಯಬೇಕಾದ ವಿಚಾರವೆಂದರೆ ವೇದಗಳು ತಾವು ತಿಳಿದಂತೆ ಸಂಸ್ಕೃತದಲ್ಲಿಲ್ಲ! ಅದು ವೇದಭಾಷೆಯಾದ ಬ್ರಾಹ್ಮಿಯಲ್ಲಿದೆ. ಸಂಸ್ಕೃತದ ಹಲವು ಪದಪುಂಜಗಳು, ವ್ಯಾಕರಣ ನಿಯಮಗಳು ಬ್ರಾಹ್ಮಿಗೆ ಸಮೀಪವಿದೆ. ಆದರೆ ಸಂಸ್ಕೃತದಿಂದ ವೇದಾರ್ಥ ಮಾಡಿದರೆ ಅಪಾರ್ಥವೇ ಆಗುವುದು ಶತಃಸಿದ್ಧ.

ಎರಡನೆಯದು ವೈಧಿಕ ಭೌತಶಾಸ್ತ್ರ. ಇದು ವೇದದಲ್ಲಿ ಬರುವ ಋಷಿಗಳೇ ಸಮಾನ ಕಾಲದಲ್ಲಿ ಮಾಡಿದ ಅಗಾಧ ಸಂಶೋಧನೆಗಳ ಸಮುಚ್ಚಯ. ಪ್ರಕೃತಿಯ ಎಲ್ಲಾ ಜ್ಞಾನ, ವಿಜ್ಞಾನಗಳನ್ನು ಇನ್ನಿಲ್ಲದಂತೆ ವಿವರಿಸುತ್ತದೆ. ಅದಕ್ಕೆ ಬೆನ್ನೆಲುಬು ನೇರವಾಗಿ ವೇದಮಂತ್ರಗಳೇ ಆಗಿವೆ. ಈಗಿನ ವಿಜ್ಞಾನಕ್ಕಿಂತ ಸಹಸ್ರ ಸಹಸ್ರ ಪಟ್ಟು ಮುಂದುವರೆದ ವಿಜ್ಞಾನವನ್ನು ವೈಧಿಕ ಭೌತಶಾಸ್ತ್ರವು ಮಂಡಿಸಿ ಆಗಿದೆ. ಅದು ಅತೀ ನಿಖರ, ಇದಮಿತ್ಥಂ ಎಂದು ಪ್ರಾಯೋಗಿಕವಾಗಿ ಸಿದ್ಧಪಡಿಸಲಾದ ವಿಚಾರಗಳು ಮಾತ್ರ ಇದೆ. ಕೂದಲೆಳಯಷ್ಟು ಅಸತ್ಯ ಕಂಡರೆ ಭೌತಶಾಸ್ತ್ರವು ಅದನ್ನು ಒಪ್ಪುವುದಿಲ್ಲ. ಈಗಿನ ಮೂರ್ಖ ಪಂಡಿತರ ವಿತಂಡವಾದಗಳು, ವಿಜ್ಞಾನಿಗಳೆಂದು ಅಜ್ಞಾನ ಪಸರಿಸುವ ಪಾಖಂಡಿಗಳಿಗೆ ಇದರ ಗಂಧ ಗಾಳಿಯೂ ತಾಕಿದಂತೆ ಕಂಡುಬರುವುದಿಲ್ಲ.

ಮೂರನೆಯದು ತಂತ್ರಶಾಸ್ತ್ರ. ವೇದವು ಉದಯಿಸಿದ ಕ್ಷಣದಿಂದಲೇ ಅದರ ಜೊತೆಜೊತೆಗೆ ಬೆಳೆದು ಬಂದದ್ದು ತಂತ್ರಶಾಸ್ತ್ರ. ಭೌತಶಾಸ್ತ್ರವು ಪಂಚೇಂದ್ರಿಯಗಳಿಂದ ಅನುಭವಕ್ಕೆ ಬರತಕ್ಕಂತಹಾ ಸಹಜ ಪ್ರಾಕೃತಿಕ ವಿಚಾರಗಳನ್ನು ಹೇಳಿದರೆ ತಂತ್ರಶಾಸ್ತ್ರವು ಅದನ್ನು ಬಳಸಿ ಅದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಿ ತೋರಿಸುತ್ತದೆ. ವೇದ ಪುಸ್ತಕಗಳಾದರೂ ಒಂದಿಷ್ಟು ಮುದ್ರಣ ದೋಷ ಬಿಟ್ಟರೆ ಮೂಲದಲ್ಲಿ ಕಂಠಸ್ಥವಾಗಿದ್ದರಿಂದ ಸಮಗ್ರತೆಯನ್ನು ಕಾಯ್ದುಕೊಂಡುಬಂದಿದೆ. ಆದರೆ ಲಭ್ಯ ತಂತ್ರಶಾಸ್ತ್ರ ಗ್ರಂಥಗಳನ್ನು ಓದಲೇ ಬೇಡಿ, ೯೯% ಅಸತ್ಯವೇ ಕಂಡುಬರುತ್ತದೆ. ಇದಕ್ಕೆ ಕಾರಣ ವಿದೇಶೀ ಆಕ್ರಮಣಕಾರರ ಕೈವಾಡ, ತಂತ್ರಸೂತ್ರ ಅರಿಯದ ಮೂರ್ಖ ಪಂಡಿತರ ವಿಕೃತ ವ್ಯಾಖ್ಯಾನ. ವೈಧಿಕ ಭೌತಶಾಸ್ತ್ರವನ್ನು ಕರತಲಾಮಲಕ ಮಾಡಿಕೊಂಡು ಶುದ್ಧ ಜೀವನ ನಡೆಸುವವರಿಗೆ ಮಾತ್ರ ಸಮಗ್ರ ತಂತ್ರಶಾಸ್ತ್ರದ ಪಾಠ ಮಾಡುತ್ತಿದ್ದರೆ ವಿನಃ ಎಲ್ಲರಿಗೂ ಮಾನ್ಯವಲ್ಲ. ಶಮ-ದಮಾದಿಗಳಿಲ್ಲದೆ ತಂತ್ರ ಸಿಕ್ಕರೆ ಪ್ರಪಂಚವೇ ನಾಶವಾಗುತ್ತದೆ. ಅದಕ್ಕೆ ರಾವಣ, ಭಾಣಾಸುರರೆಲ್ಲ ಸಾಕ್ಷಿ. ಮೂಲದಲ್ಲಿ ತಂತ್ರಶಾಸ್ತ್ರವು ವೇದಮಂತ್ರಗಳಿಂದಲೇ ರಚನೆಯಾಗಿದೆ. ಅದರಲ್ಲಿ ಎಲ್ಲ ಸೂತ್ರಗಳು ವೇದದಿಂದಲೇ ತಯಾರಿಸಲ್ಪಟ್ಟಿದೆ. ನಿಜವಾದ ತಂತ್ರಶಾಸ್ತ್ರ ಗ್ರಂಥಗಳು ವೇದಮಯವಾಗಿವೆ.

ನೀವು ಮಾಡುವ ನಾಮಕರಣ, ಚೌಲ, ಉಪನಯನ, ವಿವಾಹ, ಇತ್ಯಾದಿ ಪೂರ್ವಸಂಸ್ಕಾರಗಳು; ಉತ್ತರಕ್ರಿಯಾ, ಶ್ರಾದ್ಧಾದಿ ಉತ್ತರಸಂಸ್ಕಾರಗಳು; ಸಂಧ್ಯಾವಂದನೆ, ದೇವಪೂಜೆ, ಹೋಮ, ಯಜ್ಞ, ಯಾಗ, ವ್ರತ, ದಾನಾದಿ ಪ್ರಕ್ರಿಯೆಗಳ ಕಾರಿಕೆಯು ಸಿದ್ಧವಾಗುವುದು ವೇದವನ್ನು ಆಧರಿಸಿದ ತಂತ್ರಶಾಸ್ತ್ರದ ನಿಯಮದಂತೆಯೇ ಆಗಿದೆ.

ಉದಾ:- ಅಕ್ಕಿ ಎಂದರೇನು? ಅದು ಹೇಗೆ ಬೆಳೆಯುತ್ತದೆ? ಅದರ ಉಪಯುಕ್ತತೆ ಏನು? ಬೀಜ ನಿಯಮವದೇನು? ಬೀಜ ಸಂಸ್ಕಾರ ಹೇಗೆ? ಅಕ್ಕಿಯ ಬೆಳವಣಿಗೆಯಲ್ಲಿ ಕ್ರಿಮಿ-ಕೀಟ-ಸರಿಸೃಪಾದಿ ಬಾಧೆ ನಿರಸನ ಹೇಗೆ? ಇತ್ಯಾದಿ ಅಗಾಧವಾಗಿ ವೈಧಿಕ ಭೌತಶಾಸ್ತ್ರವು ವಿಸ್ತರಿಸಿದರೆ, ತಂತ್ರಶಾಸ್ತ್ರವು ಅದನ್ನೆಲ್ಲಾ ಪ್ರಾಯೋಗಿಕವಾಗಿ ಮಾಡಿ ಅಕ್ಕಿಯನ್ನು ಪಕ್ವಗೊಳಿಸಿ ಅತೀ ಶಕ್ತಿಶಾಲಿಯದ ಅನ್ನವಾಗಿ ಬಳಸಿ ಅನ್ನದಿಂದ ಬ್ರಹ್ಮವನ್ನು ಸಾಧಿಸುವುದನ್ನೂ ಪ್ರತ್ಯಕ್ಷವಾಗಿ ತೋರಿಸಿಕೊಡುತ್ತದೆ. ಬೇಕಾದರೆ ಅನ್ನದಿಂದ ಅಕ್ಕಿಯನ್ನೂ ಮಾಡಿ ತೋರಿಸುತ್ತದೆ, ತಂತ್ರ! ಹೀಗೆ ಯಾವ ತತ್ತ್ವವು, ಯಾವ ಉಪಾಂಶುಗಳೊಂದಿಗೆ ಯಾವ ಪರಿಕರದಲ್ಲಿ ಹೇಗೆ ಪ್ರತಿಷ್ಠಾಪಿಸಿ ಹೇಗೆ ಉಪಾಸಿಸಲ್ಪಡಬೇಕು ಎಂಬ ಸೂತ್ರವನ್ನು ತಂತ್ರಶಾಸ್ತ್ರದ ಮೂರ್ತಿಕಲ್ಪದಲ್ಲಿದೆ. ಅದಕ್ಕೂ ವೇದಾಧಾರವಿದೆ! ಮೂರ್ತಿಕಲ್ಪವು ವೇದ ಮತ್ತದರ ಭೌತಶಾಸ್ತ್ರದಿಂದಲೇ ಸಾಧಿಸಲ್ಪಟ್ಟಿದೆ. ಹಾಗಾಗಿ ಮೂರ್ತಿಪೂಜೆ ವೇದಾಧಾರಿತವೇ ಆಗಿದೆ. ನೇರವಾಗಿ ವೇದದಲ್ಲಿ ಸಿಕ್ಕದಿದ್ದರೂ, ಹಲವು ಕಡೆ ಸೂಚ್ಯವಾಗಿ ಹೇಳಲ್ಪಟ್ಟದ್ದನ್ನು ತಂತ್ರಶಾಸ್ತ್ರವು ವಿಶದೀಕರಿಸಿದೆ. ಹಾಗಾಗಿ ಕರಿಮಣಿಸರ, ಮಾಂಗಲ್ಯಗಳಲ್ಲಿ ಯಾವ್ಯಾವ ಉಪಾಂಶು ಲಭ್ಯತೆ, ಯಾವ್ಯಾವ ತತ್ತ್ವಗಳು, ಯಾವ್ಯಾವ ದೇವತೆಗಳು ಪ್ರತಿಷ್ಠಾಪಿಸಲ್ಪಟ್ಟಿವೆ ಎನ್ನುವುದು ಭೌತಶಾಸ್ತ್ರದ ಪರಿಕರ ವಿಜ್ಞಾನದಿಂದ ಸಿದ್ಧವಾದ ತಂತ್ರಸೂತ್ರಗಳಲ್ಲಿ ಬದ್ಧವಾಗಿಯೇ ಇದೆ.

ವೇದವನ್ನು ನಿಗಮ ಎಂದು, ತಂತ್ರಶಾಸ್ತ್ರವನ್ನು ಆಗಮ ಎಂದು ಕರೆದರು. ಜಗದ್ಗುರು ಎಂದರೆ ನಿಗಮಾಗಮ ಪ್ರವೀಣ ಎಂದರ್ಥ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರಂತಹಾ ಹಲವು ದರ್ಶನಕಾರರೇ ಮಾಂಗಲ್ಯಧಾರಣೆಯನ್ನು ಉದಾಹರಿಸಿದ್ದಾರೆ. ಅವರರಿಗಿಂತ ಹೆಚ್ಚಿನವರು ಅವರ ಇಂದಿನ ಶಿಷ್ಯವರ್ಗದವರು ಆಗಲಿಕ್ಕೆ ಸಾಧ್ಯವೇ ಇಲ್ಲ. ದರ್ಶನಕಾರರಿಗಿದ್ದ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಲವಲೇಷವೂ ಅವರ ಅನುಚರರಿಗಿಲ್ಲ.

ನಾಲ್ಕನೆಯ ಹಂತದಲ್ಲಿ ಸೂತ್ರಗ್ರಂಥಗಳು. ಇಡೀ ಭೂಮಿಯನ್ನು ೨೭ ರೀತಿಯಲ್ಲಿ ವಿಭಾಗ ಮಾಡಿ ಆಯಾಯ ಪ್ರಾದೇಶಿಕತೆಯನ್ನು ಸಹಸ್ರಾರು ಸೂತ್ರಕಾರ ಗುಂಪು ಸಹಸ್ರಾರು ವರ್ಷಗಳ ಕಾಲ ಅಧ್ಯಯನ, ಪ್ರಯೋಗ, ಪರಿಣಾಮಗಳನ್ನೆಲ್ಲಾ ವಿಶ್ಲೇಷಿಸಿ ಸೂತ್ರಗ್ರಂಥವನ್ನು ರಚಿಸಿದ್ದರೆ. ಇದು ಕಾಲಘಟ್ಟದಲ್ಲಿ ಬೆಳೆದು ಬಂದ ಸಂಶೋಧನೆಯಾಗಿವೆ. ಈಗ ಒಟ್ಟು ೨೭ ಮೂಲ ಸೂತ್ರಗ್ರಂಥಗಳು ಆಯಾ ಪ್ರದೇಶಕ್ಕೆ ಆಧರಿಸಿ ರಚೆನೆಯಾದವು ಆಗಿವೆ. ಸಹಜ ಜೀವನ ನಡೆಸಲು ಬೇಕಾದ ಎಲ್ಲಾ ಸೂತ್ರ, ವಿವರಣೆ, ವೃತ್ತಿ ಎಂಬ ಉದಾಹರಣೆಗಳೊಂದಿಗೆ ಎಲ್ಲರಿಗೂ ಸುಲಭ ಸಾಧ್ಯವಾಗಿ ಅರ್ಥವಾಗುವ ವಿಚಾರಗಳನ್ನು ಒಳಗೊಂಡಿವೆ. ವೇದ, ವೈಧಿಕ ಭೌತಶಾಸ್ತ್ರ, ತಂತ್ರಶಾಸ್ತ್ರ, ಪ್ರಯೋಗಗಳಿಂದ ಬಟ್ಟಿ ಇಳಿಸಿ ಅದರ ತಿರುಳನ್ನು ಮಾತ್ರ ಮಧುರವಾಗಿ ಬೆರೆಸಿ ಸೂತ್ರಗ್ರಂಥವು ಸಿದ್ಧಪಡಿಸಲಾಗುತ್ತದೆ. ಹಾಗಾಗಿ ನಿಮ್ಮ ಸೂತ್ರವು ಯಾವುದು ಎಂದರೆ ಆಯಾ ಪ್ರದೇಶಕ್ಕೆ ಆಧರಿಸಿದ ಆಶ್ವಲಾಯನವೋ, ಬೋಧಾಯನವೋ, ಆಪಸ್ತಂಭವೋ, ಕಾತ್ಯಾಯನವೋ, ಇತ್ಯದಿ ೨೭ರಲ್ಲಿ ಒಂದು. ಅದು ಆಯಾ ಪ್ರದೇಶಕ್ಕೆ ಸೀಮಿತವೇ ಹೊರತು ಎಲ್ಲಕಡೆ ಒಂದೇ ಸೂತ್ರ ಬಳಸುವುದಲ್ಲ.

ಐದನೆಯ ಹಂತದಲ್ಲಿ ಯೋಗಶಾಸ್ತ್ರ, ಆಯುರ್ವೇದಗಳು. ಇವೂ ಕೂಡ ಪ್ರಾದೇಶಿಕತೆಯ ಒಕ್ಕಣೆಯಾದ ಉಷ್ಣ ವಲಯ, ಸಮಶೀತೋಷ್ಣ ವಲಯ, ಶೀತ ವಲಯ; ಕಾಲ ನಿಬಂಧನೆಗಳಾದ ತಿಥಿ, ಋತುಮಾನ, ಆಯನ, ಸಂವತ್ಸರ, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆಯುರ್ವೇದವು ಒಂದು ಉಪವೇದ. ಆಧುನಿಕ ಆಯುರ್ವೇದ ಗ್ರಂಥಗಳನ್ನು ಬಿಟ್ಟು ಅತೀ ಪುರಾತನವಾದ ಆಯುರ್ವೇದ ಗ್ರಂಥಗಳನ್ನು ಪರಿವೀಕ್ಷಿಸಿದರೆ ಅದು ಸಂಪೂರ್ಣ ವೇದಮಯವಾಗಿದೆ. ಮತ್ತು ಅಲ್ಲಲ್ಲಿ ತಂತ್ರಶಾಸ್ತ್ರದ ಅಂಗಗಳನ್ನು ಸೇರಿಸಿಕೊಂಡಿದೆ. ಉದಾ:- ಮೂಳೆಗೆ ಸಂಬಂಧಿಸಿದ ಶಾಸ್ತ್ರವನ್ನು ಶಲ್ಯತಂತ್ರ. ಯೋಗಶಾಸ್ತ್ರವು ಯಮ, ನಿಯಮ, ಆಸನ, ಪ್ರಾಣಾಯಾಮಾದಿಗಳಿಂದ ಯೋಗದ ಆರಂಭ ಪಾಠವನ್ನು ಹೇಳುತ್ತದೆ. ವೇದವನ್ನು ಕಲಿತ ಮೇಲೆ ಇದರಲ್ಲಿ ಉತ್ತೀರ್ಣತೆಯ ಪಡೆಯಲುಬೇಕು. ಯೋಗವು ಕರ್ಮದೂಷಿತವಾಗದಂತೆ ಇರಬೇಕು. ಅದಕ್ಕೆ ಮಾನವು ಶುದ್ಧ ಚಾರಿತ್ರ್ಯ ಸಂಪನ್ನನಾಗಿರಬೇಕು. ಆಗ ಯೋಗನಿದ್ರೆಯೊಳಗೆ ಇರುವ ಮನದ ಶಕ್ತಿಯ ಮೂಲ ಚೇತನವು ೬೪ ಯೋಗಿನೀ ಗಣ ರೂಪದಲ್ಲಿ ಮೂಲಾಧಾರ ಶಕ್ತಿಯನ್ನು ಎಚ್ಚರಿಸುತಲಿ ಮನವನು ಯೋಗಶಕ್ತಿಯೊಳ್ ಪಿಡಿದು ಮನವನುದ್ಧರಿಸಿ ನೀ ಉದ್ಧಾರವಾಗು ಎಂದು ಮಾನವನಿಗೆ ಹರಸಿದರು.

ಮೊದಲಾಗಿ ಯೋಗಿನೀ ಗಣದಲ್ಲಿ ಮುಖ್ಯ ಕೂಟ 64. ಅವರೊಬ್ಬೊಬ್ಬರ ಸಮೂಹವು 20 ಸಾವಿರ ಮೊದಲ್ಗೊಂಡು ಕೆಲ ಕೂಟಗಳು 2 ಕೋಟಿ ಮೀರಿದ್ದೂ ಇದೆ. ಒಟ್ಟಾರೆ ತಂತ್ರಶಾಸ್ತ್ರಗಳು 33 ಕೋಟಿ ಯೋಗಿನಿಯರನ್ನು ಗುರುತಿಸಿದೆ. ಅವರೆಲ್ಲರ ಸಂಶೋಧನಾ ಸಂಗ್ರಹವೇ ಯೋಗಿನೀ ತಂತ್ರ. ಕೆಲವರದ್ದು ಒಂದೊಂದು ಶ್ಲೋಕವಾದರೆ ಕೆಲವರು ಸಾವಿರಕ್ಕೂ ಮಿಕ್ಕಿ ಶ್ಲೋಕರೂಪದಲ್ಲಿ ತಮ್ಮ ಸಂಶೋಧನೆಗಳನ್ನು ಬರೆದಿಟ್ಟಿದ್ದಾರೆ. ಅವೆಲ್ಲಾ ಒಟ್ಟು 1 ಲಕ್ಷ 26 ಸಾವಿರ ಶ್ಲೋಕಗಳಿವೆ. ಅವುಗಳಲ್ಲಿ ಮುಖ್ಯವಾಗಿ 18 ಪ್ರಧಾನ ಮಾಲೆಗಳು,ಇತರೆ 126 ಮಣಿಗಳು. ಇತರೆ ನೂರಕ್ಕೂ ಮಿಕ್ಕಿ ಮಾಲೆಗಳ ಬಗ್ಗೆ ಮಾಹಿತಿ ಬರೆದಿಟ್ಟಿದ್ದಾರೆ. 

ಇಲ್ಲಿ ಹಲವು ಕೋಟಿ ಯೋಗಿನಿಯರ ಸಾಧನೆ ಸಂಶೋಧನೆ ಸಾಧ್ಯವಾಯ್ತು. ದೇಶಕ್ಕೆ ಲಾಭವಾಯ್ತು.  ಇವರೆಲ್ಲರ ಸಾಧನೆಯ ಮುಖದಲ್ಲಿ ಸಾಧಕರಿಗೆ ಸಹಕರಿಸಲೆಂದೇ ಮಣಿವಿಧ್ಯೆಯ ಆವಿಷ್ಕಾರ ವಾಯ್ತು. ಮಾಲೆಗಳ ಆವಿಷ್ಕಾರವಾಯ್ತು. ಒಂದಾದರೂ ಹಾರವನ್ನು ಹೆಂಗಸರು ಧರಿಸಲೇ ಬೇಕು ಎಂಬ ನಿಯಮ ಈಗಲೂ ಚಾಲ್ತಿಯಲ್ಲಿದೆ. ಅದು ಕರಿಮಣಿಹಾರದ ರೂಪದಲ್ಲಿ ಈಗ. ಅದರರ್ಥ ಈ ಮಾಲೆಗಳ ಸಂಶೋಧನೆಗಳ ಹಿಂದೆ ಹಲವು ಆವಿಷ್ಕಾರಗಳು ಆಗಿ ಹೋಗಿವೆ ಎಂಬುದು. ಇಂತಹಾ ಉದಾಹರಣೆಗಳನ್ನು ಕೊಡುತ್ತಾ ಹೋದಲ್ಲಿ ಮುಗಿಯಲಾರದು. ಇನ್ನು ಹಾಗೆ ಇತರೆ ಕೆಲ ಹಾರ, ಕುಂಡಲ, ಕೇಯೂರ, ಕಂಕಣ, ಕಡಗ, ಉಂಗುರ, ಮೌಂಜಿ (ಉಡಿದಾರ), ಶುನಾಸೀರ, ಶುಖಮುದ್ರಾ, ಶಿರಸ್ತ್ರಾಣ, ಕವಚ, ಅಂಗುಲೀಯಕಗಳ ಬಗ್ಗೆಯೂ ವಿಸ್ತೃತ ವಿವರಣೆಗಳೂ ಈ ಯೋಗಿನೀ ತಂತ್ರದಲ್ಲಿ ಕಂಡುಬರುತ್ತವೆ. 
ಇವೆಲ್ಲಾ ವಿಶೇಷಾಧ್ಯಯನ ಕೈಗೊಳ್ಳಬೇಕಾದ ವಿಚಾರಗಳು. ಈ ನಿಟ್ಟಿನಲ್ಲಿ ನಮ್ಮ ಜನಮಾನಸ ಹರಿದರೆ ಖಂಡಿತಾ ಲೋಕಕ್ಷೇಮ ಸಾಧಿಸಬಹುದು. ಈಗ ಬರೇ ಇಂಜನಿಯರಿಂಗ್, ವೈದ್ಯಕೀಯ ಹೊರತು ಪಡಿಸಿದ ಒಂದು ಅಧ್ಯಯನ ಭಾಗದತ್ತ ಜನ ಮಾನಸ ತಿರುಗಿದರೆ ಖಂಡಿತಾ ಒಳ್ಳೆಯದಲ್ಲವೆಯುವಶಕ್ತಿಗೆ ಒಂದು ಉತ್ತಮ ಗುರಿ ತೋರಿದಂತಲ್ಲವೆಯಾವಾಗಲೂ ಹಣದ ಹಿಂದೆ ಹೋಗುವ ಭ್ರಷ್ಟತೆ, ಸುಖ ಲೋಲುಪತೆಯಿಂದ ಸರಿದಾರಿಗೆ ಬರಲು ಸಹಾಯಕವಲ್ಲವೆಇಂತಹಾ ಯೋಜಿತ ನಿಯಮಬದ್ಧ ವ್ಯವಸ್ಥೆಗಾಗಿ  ಮತ್ತು ಸಾಮಾಜಿಕ ಅಸಮಾನತೆ ನೀಗುವತ್ತಣ ಪ್ರಯತ್ನವಾದ ಯೋಗಮಾರ್ಗವೆಂಬ ನಿರಂತರ ಸಂಶೋಧನಾ ಶೀಲ ಮಹಿಳೆಯರ ಸಾಹಸ ಸ್ತುತ್ಯರ್ಹ.  

The Anatomical Man in Ayurveda
ಅವರೇ ಗುರುತಿಸಿದ ನಾಡೀಜ್ಞಾನ ಮತ್ತು ಯೋಗಾಭ್ಯಾಸ ಶರೀರವೇ ಯೋಗ ರಂಗಸ್ಥಳವೆಂಬ ವಿಚಾರಕ್ಕೆ ಆಧರಿಸಿ ಋಗ್ವೇದದಲ್ಲಿ ಒಂದು ಉದಾಹರಣೆ ಕಂಡು ಬರುತ್ತದೆ. ಮಂಡಲ 8, ಸೂಕ್ತ 19, 37 ನೇ ಮಂತ್ರವು ಶರೀರವೊಂದು ಹೇಗೆ ಯೋಗಸಾಧನಾ ವೇದಿಕೆಯೆಂದು ವಿವರಿಸುತ್ತದೆ. 

ಉತ ಮೇ ಪ್ರಯಿಯೋರ್ವಯಿಯೋಃ ಸುವಾಸ್ತ್ವಾ ಅಧಿ ತುಗ್ವನಿ | 
ತಿಸೃಣಾಂ ಸಪ್ತತೀನಾಂ ಶ್ಯಾವಃ ಪ್ರಣೇತಾ ಭುವದ್ವಸುರ್ದಿಯಾನಾಂ ಪತಿಃ ||

ಈ ಶರೀರವೆಂಬುದು ಆತ್ಮನಾ ಸಾಧನಾ ವೇದಿಕೆ. ಶರೀರ ರೂಪ ಪ್ರಧಾನವಲ್ಲ. ರೂಪು ಪಡೆದ ಮೇಲೆ ಅದರ ಆಕಾರ ಗುಣ ಹೊಂದಿ ತನ್ಮೂಲಕ ಸಾಧನೆ ಮಾಡುತ್ತಾ ಶರೀರಮಾದ್ಯಂ ಖಲು ಧರ್ಮಸಾಧನಂ” ಎಂಬಂತೆ  ಶರೀರಧರ್ಮವನ್ನು ಹಿಡಿತದಲ್ಲಿಟ್ಟು ಆತ್ಮ ಧರ್ಮಸಾಧನೆ ಮಾಡಬೇಕೆಂದಿದೆ. ಅದಕ್ಕೆ ಈ ಯೋಗಮಾರ್ಗವೇ ಶ್ರೇಷ್ಠ ದಾರಿಯೆನ್ನುತ್ತದೆ ಯೋಗಿನೀ ತಂತ್ರ. ಅದರಂತೆ ಕರಿಮಣಿಸರ, ಸಾಧನಾಮಾಲೆ ಧಾರಣೆ ಮಾಡಿದಲ್ಲಿ ಸಾಮಾನ್ಯ ಸಮಕಾಲೀನ ಪ್ರಾಪಂಚಿಕ ಸಮಸ್ಯೆಗಳಿಂದ ದೂರವಿರಲು ಸಾಧ್ಯವೆಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿರುತ್ತದೆ.

ಈಗ ವೇದೋಕ್ತ ಭೌತಶಾಸ್ತ್ರದ ವಿಚಾರಕ್ಕೆ ಬರೋಣ. ಭೌತಶಾಸ್ತ್ರ ರಚನಾಕಾರರಾದ ವೇದ ದ್ರಷ್ಟಾರ ಋಷಿಗಳೇ ಹೇಳುವ ಒಂದು ಉದಾಹರಣೆ ಉಲ್ಲೇಖಿಸುತ್ತೇನೆ, ಗಮನಿಸಿ, ವೇದದ ಅಗಾಧತೆ ಅರ್ಥಮಾಡಿಕೊಳ್ಳಿ. ಭೌತಶಾಸ್ತ್ರದ ಸಿಂಹ ಎಂಬ ಮಾನುಷ ಪ್ರಕರಣದಲ್ಲಿ “ನಿವೇಶಿನಿ” ಎಂಬ ಸೂತ್ರ ಬರುತ್ತದೆ. ಅದಕ್ಕೆ ವೇದ ಪ್ರಮಾಣ ಇಂತಿದೆ-

ಆ ಕೃಷ್ಣೇನ ರಜಸಾ ವರ್ತಮಾನೋ ನಿವೇಶಯನ್ ಅಮೃತಂ ಮರ್ತ್ಯಂಚ |
ಹಿರಣ್ಯಯೇನ ಸವಿತಾ ರಥೇನ ದೇವೋ ಯಾತಿ ಭುವನಾನಿ ಪಶ್ಯನ್ ||

ಈ ಮಾನುಷ ಪ್ರಕರಣವು ಮಾನವ ದೇಹಶಾಸ್ತ್ರವನ್ನು ವಿವರಿಸುತ್ತದೆ. ಅದರಲ್ಲಿ ಈ ನಿವೇಶಿನಿ ಸೂತ್ರವನ್ನು ಋಷಿಗಳು ಬ್ರಾಹ್ಮಿಯಲ್ಲಿ ಹೀಗೆ ವಿಸ್ತರಿಸಿದ್ದಾರೆ:

ನೀವೀತೈಃ ವೇಷ್ಟಿತೈಃ ಶಿಂಸಿತೈಃ ನಿಯತೈಃ ಇತಿ ಚತುರ್ವಿಧಃ”

ಪರಿವೀಕ್ಷಿಸಿದಿರಾ ವೇದದ ಒಂದು ಶಬ್ದದ ಅಕ್ಷರಗಳ ಹಿಂದೆ ಅಡಗಿರುವ ಸೂತ್ರಗಳನ್ನು? ಈ ರೀತಿ ಹಲವು ಸಾಂಖ್ಯ ನಿಯಮಗಳಲ್ಲಿ, ಶಬ್ದೋತ್ಪತ್ತಿಗಳಲ್ಲಿ ಋಷಿ ಮತ್ತು ಗುರುಪರಂಪರಾನುಗತವಾಗಿ  ಬಂದಂತೆ ಯಾವ ಶಾಸ್ತ್ರವನ್ನು ಹೇಳುತ್ತಿದೆಯೋ ಅದರಂತೆ ಅರ್ಥೈಸಬೇಕೇ ವಿನಃ ನಮಗೆ ಮನಬಂದಂತಲ್ಲ! ನಿವೇಶಿನಿ ಸೂತ್ರದ ಅಂಗಗಳು ದೇಹ ರಕ್ಷಣೆಗೆ ಸಂಬಂಧಪಟ್ಟಂತಹಾ ಪ್ರಕ್ರಿಯೆಗಳು. ಬಟ್ಟೆ ಹಾಕದೆ ಇರುವ ಸಂಸ್ಕೃತಿ ಉಳ್ಳ ಜನರಿಗೆ ಇದು ವಿರೋಧಾಭಾಸವಾಗುತ್ತದೆ. ಈ ಸೂತ್ರದ ಪ್ರಕಾರ ದೇಹಕ್ಕೆ ಆವಶ್ಯಕವಾದ ಆಚ್ಛಾದನೆಗಳನ್ನು ತಿಳಿಸುತ್ತದೆ. ಅದರಲ್ಲಿ ಮೊದಲಿಗೆ ನೀವೀತಿ ಎಂಬ ನಿಯಮವಿದೆ. ಅಂದರೆ ಯಾವಾಗಲೂ ಸಮ ಚಿತ್ತವಾಗಿರುವಂತಹಾ ದೇಹ ಭಂಗಿಯನ್ನು ಅಳವಡಿಸಿಕೊಳ್ಳುವುದು. ಕ್ರಮಬದ್ಧವಾದ ರೀತಿಯಲ್ಲಿ ದೇಹದ ಆಕಾರವನ್ನು ಸದಾ ಕಾಯ್ದುಕೊಂಡು ಹೋಗುವುದರಿಂದ. ಅದನ್ನು ಮಾಲಾ ಅಥವಾ ನೀಮೀತಿ ಎಂದೂ ಕರೆದರು.

ದೇಹದಲ್ಲಿ ೧೦ ಸ್ಥಲಗಳಿರುತ್ತವೆ. ಅವಕ್ಕೆ ಸಮಪ್ರಮಾಣದ ಒತ್ತಡ ಕೊಟ್ಟರೆ ಎಲ್ಲಾ ಸಂಧಿಗಳು ಹಾಗೂ ಮೂಳೆಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತವೆ. ಸಮ ಒತ್ತಡ ಬೀಳದಿದ್ದಾಗ ಯಾವುದೋ ಒಂದು ಗ್ರಂಥಿ ಅಥವಾ ಮೂಳೆಗೆ ಹೆಚ್ಚು ಒತ್ತಡ ಬಿದ್ದು ದೇಹದ ಅವ್ಯವಸ್ಥೆಗೆ ಕಾರಣವಾಗುತ್ತದೆ. ಸಮ ಸ್ಥಿತಿ ಕಾಯ್ದುಕೊಳ್ಳುವ ಕೆಲವು ಸೂತ್ರಗಳು:
೧. ಅತೀ ಹೆಚ್ಚಾಗಿ ಕತ್ತನ್ನು ತಗ್ಗಿಸಿದರೆ ಕುತ್ತಿಗೆ ನೋವು ಬರುತ್ತದೆ, ಅತೀ ಮೇಲೆ ಎತ್ತಿದರೆ ತಲೆ ಸುತ್ತು ಬರುತ್ತದೆ. ಹಾಗಾಗಿ ಕತ್ತಿನ ಸಮತೋಲನ ಅಗತ್ಯ. ಹಾಗಾಗಿ ಮಾಲೆಯು ಬೆನ್ನಿನ ರಕ್ಷಣೆಯನ್ನು ಮಾಡುತ್ತದೆ ಎಂದು ವೇಷ್ಟಿತ ಸೂತ್ರವು ಹೇಳುತ್ತದೆ.

೨. ಕುತ್ತಿಗೆ ಹಿಂಭಾಗವು ಶಿಖದ ಹಿಡಿತದಲ್ಲಿರುತ್ತದೆ. ಅದಕ್ಕೆ ಪೇಟ ಕಟ್ಟುವುದು ಅಥವಾ ಶಿಖೆ ಕಟ್ಟವುದು ರಕ್ಷಣಾತ್ಮಕ ಎಂದು ವೇಷ್ಟಿತ ಸೂತ್ರವು ಹೇಳುತ್ತದೆ. ಅದನ್ನು ಸ್ನಾನದಿಂದ ಸಮತೋಲನದಲ್ಲಿ ಇಡಬೇಕು ಎಂದು ಶಿಂಸಿತ ಸೂತ್ರವು ಹೇಳುತ್ತದೆ.


೩. ಒಂದು ಪ್ರಮಾಣ ಬದ್ಧವಾಗಿಯೇ ಬೆನ್ನಿನ ನೇರವನ್ನು ಕಾಯ್ದುಕೊಳ್ಳಬೇಕು. ಮುಂದೆ ಹೆಚ್ಚು ಬಗ್ಗಿದರೆ  ಬೆನ್ನು ನೋವು ಬರುತ್ತದೆ. ಉಪವೀತವು ಉದರ ರಕ್ಷಣೆಯನ್ನು ಮಾಡುತ್ತದೆ. ಅದು ಸೊಂಟಕ್ಕೆ ಕಟ್ಟುವ ಬಟ್ಟೆಯ ಒಳಗಡೆ ಸೇರಬೇಕು. ಇದರಿಂದ ಅಲ್ಲಿಯ ಗ್ರಂಥಿಗಳ ಮೇಲೆ ಒತ್ತಡ ಬಿದ್ದು ಹೊಟ್ಟೆಯು ಮುಂದೆ ಬರದ ಹಾಗೆ ತಡೆಯುತ್ತದೆ. ಇದು ವೇಷ್ಟಿತ ಸೂತ್ರದ ವಿವರ.

೪. ಬೆನ್ನನ್ನು (ಹೊಟ್ಟೆಯನ್ನು) ಮುಂದೆ ಮಾಡಿದರೆ ಜೀರ್ಣಾಂಗಗಳು ನಿಷ್ಕ್ರಿಯೆಯಾಗುತ್ತಾ ಬರುತ್ತವೆ. ಉಪವಾಸದಲ್ಲಿ ಇರುವಾಗ ವಿಪರೀತ ಹಸಿವೆ ಉಂಟಾದರೆ ಬೆನ್ನು ಮುಂದೆ ಮಾಡಿ ಕೆಲ ಕಾಲ ಕಳೆದರೆ ಹಸಿವೆ ಕಡಿಮೆಯಾಗುತ್ತದೆ. ಹಾಗಾಗಿ ಸ್ವಲ್ಪ ಹಸಿವೆಯಾದಾಗ ಆಕಳಿಸುತ್ತಾರೆ, ಮೈಮುರಿಯುತ್ತಾರೆ. ಇವುಗಳನ್ನು ಮಾಡುವಾಗಲೂ ಬೆನ್ನು (ಹೊಟ್ಟೆ) ಮುಂದೆ ಬರುತ್ತದೆ.

೫. ಆಧಾರ ಭಾಗ:- ಸೊಂಟದ ಭಾಗ. ಇದರಿಂದ ಬೆನ್ನಿಗೆ ನೇರವನ್ನು ನೀಡಬೇಕು. ಉಡಿದಾರವು ಆಧಾರವನ್ನು ರಕ್ಷಿಸುತ್ತದೆ. ಆಧಾರದ ಎರಡೂ ಪಕ್ಕದ ಮೂಳೆಗಳ ಮೇಲೆ ಉಡಿದಾರ ನಿಲ್ಲುತ್ತದೆ. ಆಧಾರದ ನಿಯಮಿತತೆ ಇಡುತ್ತದೆ. ಅಂದರೆ ಹೊಕ್ಕಳ ಕೆಳಗೆ ಉಡಿದಾರ ಬರುತ್ತದೆ. ಪಂಚೆಯಾಗಲೀ, ಸೀರೆಯಾಗಲಿ ಹೊಕ್ಕಳ ಮೇಲೆ ಬರುತ್ತದೆ. ಇದು ವೇಷ್ಟಿತ ನಿಯಮ. ಇದನ್ನು ಅರಿಯದ ಮೂರ್ಖ ವಿದ್ವಾಂಸರು ಮಾಂಗಲ್ಯಸರವನ್ನು ಕುತ್ತಿಗೆಗೇ ಏಕೆ ಕಟ್ಟಬೇಕು, ಸೊಂಟಕ್ಕೆ ಕಟ್ಟಿದರೆ ಆಗುವುದಿಲ್ಲವೇ ಎಂದು ಅಪಹಾಸ್ಯ ಮಾಡುತ್ತಾರೆ. ಯಾವುದನ್ನು ಎಲ್ಲಿ, ಹೇಗೆ ಬಳಸಿದರೆ ದೇಹದ ಯಾವ ಸ್ಥಲದ ರಕ್ಷಣೆಯಾಗುತ್ತದೆ ಎಂಬುದನ್ನು ತಿಳಿಸುವ ವೇಷ್ಟಿತ ಸೂತ್ರವನ್ನೇ ತಿಳಿಯದವ ಎಂತಾ ವಿದ್ವಾಂಸನೋ ನಾನರಿಯೆ!

೬. ಊರೂ – ತೊಡೆಗಳಲ್ಲಿ ಒಂದಷ್ಟು ವಿಶಿಷ್ಟ ಮೂಳೆಗಳಿವೆ. ದೇಹದ ಶೇಖಡ ೮೦% ರಕ್ತವು ತೊಡೆ ಮತ್ತು ಮೊಣಕಾಲಿನ ೨ ಮೂಳೆಗಳ ಭಾಗದಿಂದ ಉತ್ಪತ್ತಿಯಾಗುತ್ತದೆ. ಇದಕ್ಕೆ ಪದ್ಮಾಸನದಿಂದ ರಕ್ಷಣೆ ಎನ್ನುತ್ತದೆ ವೇಷ್ಟಿತ ಸೂತ್ರ. ಒಂದು ಪಾದವಾದರೂ ಮೇಲ್ಮುಖವಾಗಿದ್ದರೆ ಅದು ಪದ್ಮ ಎಂದಿದೆ ಈ ಸೂತ್ರ. ಆಸನವೆಂಬುದು ೨೧ ವಿಧ. ಅದರಲ್ಲಿ ಊರೂ ಎಂಬುದೂ ಒಂದು ಆಸನ. ಪತ್ನೀ, ಪುತ್ರಯೋಃ ಊರೂ ಆಸನಂ ಎಂದಿದೆ.

೭. ಪಾದ – ದತ್ತಾತ್ರೇಯರಿಂದ ಪ್ರಸರಿಸಲ್ಪಟ್ಟ ಮೂರ್ತಿಕಲ್ಪದ ಮೊತ್ತ ಮೊದಲ ಪ್ರಾತ್ಯಕ್ಷತೆ ಎಂದರೆ ಪಾದುಕಾ ಪೂಜೆ. ಪಾದದಲ್ಲಿ ೬೪ ತತ್ತ್ವ ದ್ಯೋತಕ ಪ್ರಾಕೃತಿಕ ಮೂಲ ಶಕ್ತಿ ಕೇಂದ್ರಗಳಿವೆ. ದೇಹದ ಎಲ್ಲ ಚಟುವಟಿಕೆಗಳಿಗೆ ಇಲ್ಲಿಂದ ಪ್ರೇಷಣೆ ಸಿಗುತ್ತದೆ. ಇದಕ್ಕೂ ಪದ್ಮಾಸನವೇ ಶ್ರೇಷ್ಠ ಎಂದಿದೆ ವೇಷ್ಟಿತ ಸೂತ್ರ. ಪದದ ಗಂಟಿನಿಂದ ಹೆಚ್ಚು ಒತ್ತಡವನ್ನು ಕೊಟ್ಟಾಗ ತೊಡೆಯ ಮೂಳೆಗಳಲ್ಲಿ ಹೆಚ್ಚು ರಕ್ತ ಉತ್ಪಾದನೆಯಗಲು ಚಾಲನೆ ನೀಡಿದ ಹಾಗಾಗುತ್ತದೆ.


೮. ಹಸ್ತ – ನಮ್ಮ ಕೈಗಳಿಗೆ ಕಣ್ಣು, ಕಿವಿ, ಮೂಗು, ಬಾಯಿ, ಸ್ಪರ್ಷೇಂದ್ರಿಯಗಳಿಂದ ಮಾಡಬಹುದಾದ ಎಲ್ಲಾ ಕೆಲಸಗಳ ಹತ್ತು ಪಟ್ಟು ಕೆಲಸ ಮಾಡುವ ಸಾಮಾರ್ಥ್ಯವಿದೆ. ಮಣಿಕಟ್ಟಿನ ಮೇಲ್ಭಾಗಕ್ಕೆ ಕೃಪಾಣ ಅಂದರೆ ಬಳೆಗಳು. ಸ್ತ್ರೀಯರಿಗೆ ಅತಿ ಹೆಚ್ಚು ಬಳಗಳ ಅವಶ್ಯಕತೆ ಇರುತ್ತದೆ. ಸ್ತ್ರೀಯರು ಕೈಯಲ್ಲಿ ಎಷ್ಟು ಹೆಚ್ಚು ಬಳೆಗಳನ್ನು ಹಕಿಕೊಂಡಿರುತ್ತಾರೋ ಅದರ ಆಧಾರದ ಮೇಲೆ ಅವರ ಧೀಶಕ್ತಿ ನಿರ್ಣಯವಾಗುತ್ತದೆ. ಬಳೆಗಳು ಯಾವ ಒಳ್ಳೆಯ ಲೋಹದಿಂದ ಮಾಡದ್ದರೂ, ಪೂರ್ಣ ಹಸ್ತ ಭಾಗವನ್ನು ಮುಚ್ಚುವಂತಿರಬೇಕು. ಅದೇ ಈ ವೇಷ್ಟಿತ ಸೂತ್ರತ ಭಾವವಾಗಿರುತ್ತದೆ.
೯. ಭುಜೈಃ – ಭುಜಕ್ಕೆ ವಂಕಿ, ಕವಚ; ಮೊಣಕೈ ಮೇಲ್ಭಾಗಕ್ಕೆ ಖಡ್ಗ; ಇದರಿಂದ ಭುಜಗಳ ರಕ್ಷಣೆಯಾಗುತ್ತದೆ. ಮತ್ತು ತಾಡನೆಯಿಂದ ಭುಜಗಳ ಸಮತೋಲನ ಸಾಧ್ಯ ಎಂದು ಶಿಂಸಿತ ಸೂತ್ರವು ಹೇಳುತ್ತದೆ. ಭುಜ (ಕೈ) ತಟ್ಟುವುದು ಎಂದು ಆಡುಭಾಷೆಯಲ್ಲಿ ಹೇಳಬಹುದು.

೧೦. ಪಾರ್ಶ್ವೆ – ಓರೆಯಾಗಿ ಕೂರಬೇಡಿ. ಅದರಿಂದ ಪಕ್ಕೆಗಳು ನೋವು ಅನುಭವಿಸುತ್ತವೆ. ಪಾರ್ಶ್ವೈಃ ಕವಚಃ ಎನ್ನುತ್ತದೆ ವೇಷ್ಟಿತ ಸೂತ್ರ. ಅಂದರೆ ಶಲ್ಯವನ್ನು ಬಲ ಕಂಕಳ ಕೆಳಗಿನ ಪಕ್ಕೆಗಳನ್ನು ಬಳಸಿ ಎಡಭುಜದ ಮೇಲಿಂದ ಹಿಂದಕ್ಕೆ ಇಳಿಬಿಡುವ ಬ್ರಹ್ಮವಸ್ತ್ರವನ್ನು ಹಾಕುವುದು. ಇದರಿಂದ ಹೆಚ್ಚು ಬಗ್ಗಿ ಶ್ರಮಿಸುವ ಬಲ ಪಾರ್ಶ್ವದ ಪಕ್ಕೆಗಳಿಗೆ ಬಿಗಿಯಾದ ಹಿಡಿತ ದೊರೆತು, ಎಡ ಪಾರ್ಶ್ವದ ಮೇಲ್ಭಾಗದಿಂದ ಬಿಗಿ ಪಟ್ಟು ಬಂದು ಭುಜದಿಂದ ಮೇಲ್ಬರಿಸಿ ಕತ್ತಿನವರೆಗೆ ಹಿಡಿತ ನೀಡುತ್ತದೆ. ಹಾಗಾಗಿ ಭಾರತೀಯ ಧಾರ್ಮಿಕ ಹಾಗು ಆಧ್ಯಾತ್ಮಿಕತೆಯಲ್ಲಿ ಮತ್ತೆ ಅದನ್ನು ಅನುಸರಿಸಿ ಹಲವು ದೇಶಗಳ ಹಲವು ಸಂಸ್ಕೃತಿಗಳಲ್ಲಿ ಬ್ರಹ್ಮವಸ್ತ್ರಕ್ಕೆ ಪ್ರಾಧ್ಯಾನ್ಯತೆ ನೀಡಿದರು.

ಹೆಂಗಸರಿಗೆ ಮೇಖಲವು ಶ್ರೇಷ್ಠವೆಂದರು. ಸೆರಗು ಬರಿಸಿ ಮೇಲಿನಿಂದ ಹೊದಿಕೆ ಬಂದು ಆಧಾರ ಭಾಗದಲ್ಲಿ ಕೊನೆಗೊಳ್ಳುವ ವಸ್ತ್ರವೇ ಮೇಖಲೆಯಾಗಿರುತ್ತದೆ. ಹಾಗಾಗಿ ಸರಿಯಾಗಿ ಸೀರೆ ಉಡುವ ವಿಧಾನವನ್ನು ರೂಢಿಸಿಕೊಳ್ಳಬೇಕು. ಆಯಾಯ ಪ್ರಾದೇಶಿಕತೆಯಂತೆ ಸೀರೆ ಉಡುವುದು ಸರಿಯಾದ ಕ್ರಮವಾಗಿರುತ್ತದೆ. ಅದ ಬಿಟ್ಟು ಬಿಗಿಯಾದ ಪ್ಯಾಂಟು, ಅಂಗಿ ಧರಿಸಿ ವಿಪರೀತ ಒತ್ತಡ ಕೊಡುತ್ತಾ ಬರಲು ದಶಸ್ಥಲಗಳಲ್ಲಿ ಸಂಕುಚಿತ ಉಂಟಾಗಿ ಪ್ರತ್ಯುಪನ್ನ ಶಕ್ತಿಹೀನತೆ ಅಂದರೆ ಸಂತಾನ ಶಕ್ತಿ ಕ್ಷೀಣ, ಮಾನಸಿಕ ಒತ್ತಡ, ವಿಪರೀತ ಅಂಗಾಂಶ ವೃದ್ಧಿ, ಚರ್ಮದ ಕಾಂತಿಹೀನರೆ, ಮಾಂಸಪೇಶಗಳ ಬಲ ಕುಂದುವಿಕೆ, ರಕ್ತದೊತ್ತಡ ಇತ್ಯಾದಿ ಉಂಟಾಗುತ್ತದೆ. ಹಾಗಾಗಿ ಶುಭ್ರವಾದ ಮೃದು ಬಟ್ಟೆಗಳನ್ನು ಸಂಪ್ರದಾಯದಂತೆ ಎಲ್ಲೆಲ್ಲಿ ಎಷ್ಟೆಷ್ಟು ಸಡಿಲ, ಎಷ್ಟೆಷ್ಟು ಬಿಗಿ ಬೇಕೋ ಅಷ್ಟನ್ನೇ ಕೊಟ್ಟು ಉಡುಗೆ ತೊಡಿಗೆಯಲ್ಲಿ ಅಲಂಕಾರಗಳಿರಲಿ. ಇದು ನಿಮ್ಮ ಆರೋಗ್ಯ ದೃಷ್ಟಿಯಿಂದ ಬಹಳ ಅವಶ್ಯಕವಾಗಿದೆ. ಬಣ್ಣದ ಮಾಧ್ಯಮದ ಸೋಗಿನ ಜಾಹಿರಾತಿಗೆ ಮರುಳಾಗದಿರಿ. ಭಾರತೀಯ ಉಡುಗೆ ತೊಡಿಗೆಯು ನಿಮ್ಮ ಜೀವನಾಡಿ, ಅದು ಮಾತ್ರ ನಿಮ್ಮನ್ನು ಎಲ್ಲ ರೀತಿಯಲ್ಲೂ ರಕ್ಷಿಸಬಲ್ಲದು.

ಹೆಂಗಸರಿಗೂ ಉಪವೀತವನ್ನು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಅಗಲವಾದ ಪಟ್ಟಿಯಂತಹಾ ಹಾಸಿನಿಂದ ಉಪವೀತವನ್ನು ತಯಾರಿಸಿ ಹೆಂಗಸರು ಬಳಸುತ್ತಿದ್ದರು. ಅದು ಉಪವೀತವಾಗಿ ಉದರ ರಕ್ಷಣೆ ಮಾಡುತ್ತದೆ. ಅದನ್ನು ಒಳಗೆ ಸೇರಿಸಿ, ಅದರ ಮೇಲೆ ಸೀರೆ ಉಡುತ್ತಿದ್ದರು. ಹೆಂಗಸರೇ ಹೆಚ್ಚು ಬಗ್ಗಿ ಕೆಲಸ ಮಾಡುತ್ತಾರೆ. ಕುತ್ತಿಗೆಯಿಂದ ಹಾರ (ಸರ) ಬಂದಿರುತ್ತದೆ. ಮುಂದೆ ಬಗ್ಗಿದಾಗ ಬೆನ್ನು ಮೂಳೆಯ ಮೇಲೆ ಒತ್ತಡ ಬೀಳದ ಹಾಗೆ ಕಾಯುತ್ತದೆ. ಇದು ಕತ್ತಿನಲ್ಲಿರುವ ವಿಶೇಷ ನರತಂತು ಹಾಗೂ ಮೂಳೆಗಳಿಂದ ಬೆನ್ನನ್ನು ಹಿಡಿತದಲ್ಲಿ ಇಡುತ್ತದೆ. ಕೇವಲ ಮಾಲೆಯ ಒತ್ತಡ ಕಡಿಮೆಯಾದಾಗ ಉತ್ತರೀಯ, ತೂಕದ ಲೋಹವಾದ ಬಂಗಾರದ ಸರಗಳನ್ನು ಹಾಕುತ್ತಾರೆ. ಏಕೆಂದರೆ ಚಿನ್ನದ ಗಾತ್ರ ಕಡಿಮೆ, ತೂಕ ಜಾಸ್ತಿ.

ವೇಷ್ಟಿತಗಳಲ್ಲಿ ಮುಖ್ಯ ಆಚ್ಛಾದನೆಗಳನ್ನು ಹೇಳಿದ್ದಾರೆ. ಮುಂದಿನ ಪಾಠಗಳಲ್ಲಿ ಸಂವೇದನಾ ಗ್ರಂಥಿಗಳಿಗೆ ಸ್ಪಂದನ ನೀಡಲು ಉಂಗುರಗಳು, ವಾಯು ರೋಗ ನಿವಾರಣೆಗೆ ಕಿವಿಯಲ್ಲಿ ೩ ಕಡೆ ಚುಚ್ಚುವುದು, ಮೂಗು ಚುಚ್ಚುವುದು, ದಂತದ ಉಂಗುರದಿಂದ ಸಣ್ಣದಾದ ಕೈ ನಡುಕ ಸರಿಪಡಿಸುವುದು, ಇತ್ಯಾದಿಗಳನ್ನು ಚಿಕಿತ್ಸಾ ವಿಧಾನ ಪ್ರಕ್ರಿಯೆಗಳಲ್ಲಿ ವಿಸ್ತರಿಸಿದ್ದಾರೆ. ಎಷ್ಟು ಅಗಾಧವಲ್ಲವೇ ನಮ್ಮ ಭೌತಶಾಸ್ತ್ರ?

ಇನ್ನು ಮುಖ್ಯ ಸಂಸ್ಕಾರವಾದ ಮದುವೆಯ ವಿಚಾರ. ಮದುವೆಯ ಎಲ್ಲ ವಿಚಾರಗಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ಮಾಂಗಲ್ಯಧಾರಣೆ ಸ್ತ್ರೀಪುರುಷ ಪ್ರಧಾನವಾಗಿ ನ್ಯಾಸರೂಪವಾಗಿ ಹುಡುಗಿಯಲ್ಲಿ ಇಡುವಂತಹ ಒಂದು ಚಿನ್ನ ಅದು ಆಭರಣ ಸ್ವರೂಪದಲ್ಲಿರುತ್ತದೆ. ಚಿನ್ನವನ್ನು ಧಾತು ಮೂಲವಾಗಿ ವಿಶ್ಲೇಷಿಸಿದಾಗ ಅದು ನಮ್ಮ ದೇಹಕ್ಕೆ ಅತೀ ಅಗತ್ಯವಾದ ಸಹಜ ಪ್ರಾಕೃತಿಕ ಲೋಹದಲ್ಲಿ ಲಭ್ಯವಾಗದ ಒಂದು ಅಂಶ ಚಿನ್ನ. ಆಹಾರದಲ್ಲಿ ಅದು ಪೂರೈಕೆಯಾಗುವುದಿಲ್ಲ. ಬೇರೆ ಎಲ್ಲಾ ಲೋಹದ ಅಂಶಗಳು ಆಹಾರದ ಮುಖೇನ ನಮ್ಮ ದೇಹವನ್ನು ಸೇರುತ್ತವೆ. ಚಿನ್ನವಸ್ತುವು ಆಹಾರದ ರೂಪದಲ್ಲಿ ಪೂರೈಕೆಯಾಗುವುದಿಲ್ಲ. ಚಿನ್ನವು ನಮ್ಮ ದೇಹಕ್ಕೆ ಅನಿವಾರ್ಯ. ಅದಕ್ಕಾಗಿ ಅದನ್ನು ಆಭರಣ ರೂಪದಲ್ಲಿ ದೇಹದಲ್ಲಿ ಧರಿಸಿ ನಮ್ಮ ದೇಹಕ್ಕೆ ಬೇಕಾದಂತಹ ಪೂರೈಕೆಯನ್ನು  ಮಾಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಚಿನ್ನವನ್ನು ಧರಿಸುವುದರಿಂದ ಬರತಕ್ಕಂತಹ ಕಾಯಿಲೆಗಳು ಅವರಿಗೆ ಬರುವುದಿಲ್ಲ. ಅದನ್ನು ತಡೆಯುವುದಕ್ಕೂ ಅದಕ್ಕೆ ಸಾಧ್ಯತೆಯಿದೆ. ಹಾಗೆ ಚಿನ್ನದ ಅಂಶವು ಸದಾ ನಮ್ಮ ದೇಹವನ್ನು ಸೇರುತ್ತಾ ಇರುತ್ತದೆ. ಅದು ವೃದ್ಧ್ಯರ್ಥವಾಗಿ ತುಂಬಾ ಸುಲಭದಲ್ಲಿ ಸೇರುತ್ತದೆ. ಹಾಗಾಗಿ ಹೃದಯದ ಮೇಲೆ ಚಿನ್ನವನ್ನು ಧಾರಣೆ ಮಾಡಿ, ನಿಮಗೆ ರೋಗಾದಿಗಳಿಂದ ರಕ್ಷಣೆ ಕೊಡಲು ಸಾಧ್ಯ ಎಂದರು. ಹಾಗಾಗಿ ಅದನ್ನು ಆಭರಣ ರೂಪದಲ್ಲಿ ಧಾರಣೆ ಮಾಡುವ ಪದ್ಧತಿ ಬಂತು. ಅದರಲ್ಲಿ ಹೆಂಗಸರಿಗೆ ವೃದ್ಧ್ಯರ್ಥವಾಗಿ ಹೃದಯದ ಮೇಲೆ ಆಭರಣ ಇರಬೇಕು. ಏಕೆಂದರೆ ಅವರಲ್ಲಿ ಪ್ರತ್ಯುತ್ಪನ್ನ ಶಕ್ತಿಯಿದೆ. ಹೆಣ್ಣಿಗೆ ತನ್ನಂತೆಯೇ ಸೃಷ್ಟಿ ಮಾಡುವ ಶಕ್ತಿಯಿರುತ್ತದೆ; ಗಂಡಿಗಲ್ಲ. ಹೆಣ್ಣು ಮಾತ್ರ ತನ್ನಂತೆಯೇ ಇನ್ನೊಂದು ಪ್ರತಿರೂಪವನ್ನು ಸೃಷ್ಟಿ ಮಾಡಿ ಪ್ರಪಂಚಕ್ಕೆ ಕೊಡಬಲ್ಲಳು. ಪ್ರತ್ಯತ್ಪನ್ನ ಶಕ್ತಿಯಿರುವವರಿಗೆ ಶಕ್ತಿಯನ್ನು ಉಂಟುಮಾಡುವುದು ಚಿನ್ನಲೋಹ. ಹಾಗಾಗಿ ಅವರಲ್ಲಿ ಅಂಶವು ಹೆಚ್ಚು ಬೇಕಾಗುತ್ತದೆ. ಪುರುಷನಿಗೆ ಅಷ್ಟು ಅಗತ್ಯವಿಲ್ಲ. ಆದರೆ ಹೆಂಗಸರಿಗೆ ಹೆಚ್ಚು ಚಿನ್ನ ಬೇಕು. ಅದಕ್ಕಾಗಿ ಚಿನ್ನ ಧಾರಣೆ ಕಡ್ಡಾಯ ಮಾಡಿದರು. ಹೆಚ್ಚು ಎಂದರೆ ಸಾಧ್ಯವಾದರೆ ಮೈತುಂಬಾ ಆಭರಣ, ಒಂದು ವಧುವಿನ ಅಲಂಕಾರವನ್ನು ಹೆಚ್ಚು ಕಡಿಮೆ ೩೦೦ ರೀತಿಯ ಆಭರಣಗಳಿಂದ ಅಲಂಕರಿಸಬಹುದು ಎಂದು ಹೇಳುತ್ತದೆ. ಸಾಲಂಕೃತ ಕನ್ಯಾ ಆಧಾನ ಎಂದು ಹೇಳುತ್ತದೆ. ಅಷ್ಟು ಚಿನ್ನವನ್ನು ಧರಿಸಬೇಕು ಅವಳು ಎಂದರ್ಥ. ಈಗ ಕೊಡಬೇಕು ಎಂದಾಗ ಕಡೆಯಲ್ಲಿ ಬೇಡಿಕೆಯಾದರೆ ಕಷ್ಟ. ಪರಿಸ್ಥಿತಿಯಿದೆ. ಸ್ವಲ್ಪವಾದರೂ ಚಿನ್ನವನ್ನು ಧರಿಸುವುದರಿಂದ ಅವರಿಗೆ ಪ್ರತ್ಯುತ್ಪನ್ನ ಶಕ್ತಿಯು ನಿಖರವಾಗಿ ಸಮೃದ್ಧವಾಗಿ ಪ್ರಾಪ್ತವಾಗುತ್ತದೆ ಎನ್ನುವ ಉದ್ದೇಶದಿಂದ ಚಿನ್ನ ಧಾರಣೆಗೆ ಮಹತ್ವವನ್ನು ಕೊಟ್ಟರು.

ಈ ರೀತಿ ಭಾರತೀಯ ಸಂಪ್ರದಾಯದಂತೆ ಉಪವೀತ, ಸೀರೆ, ಕುಪ್ಪಸ, ಮೇಖಲಾ, ಆಭರಣ, ಮಾಂಗಲ್ಯ ಇತ್ಯಾದಿಗಳು ಸ್ತ್ರೀ ದೇಹವನ್ನು ಶಿಸ್ತು ಬದ್ಧವಾಗಿಸಿ ಪ್ರಸಕ್ತ ಕಾಡ್ಗಿಚ್ಚಿನಂತೆ ಹರಡುತ್ತಿರುವ "ಸ್ತನ ಕ್ಯಾನ್ಸರ್" ನಂತಹಾ ಮಾರಣಾಂತಿಕ ಕಾಯಿಲೆಗಳನ್ನು ದೂರವಿರಿಸಲು ಸಹಕಾರಿ.
[
http://en.wikipedia.org/wiki/Dressed_to_Kill_%28book%29
http://www.collective-evolution.com/2014/04/16/ladies-its-finally-time-to-take-off-that-bra-for-good/ ]


ಬಡವರು ಚಿನ್ನವಿಲ್ಲದೇನೇ ಅರಶಿನಕೊಂಬು ಕಟ್ಟಿ ಮದುವೆಯಾಗುತ್ತಾರೆ. ಆಗ ಬಂಗಾರದ ಅಂಶ ಅರಿಶಿನ ಕೊಂಬಿನಲ್ಲಿ ಸಿಗುತ್ತದೆಯೇ?
       
ನೇರ ಬಂಗಾರದ ಅಂಶವಲ್ಲದಿದ್ದರೂ ಬಂಗಾರದ ಕೆಲವೊಂದು ಅಂಶಗಳು ಅರಶಿನ ಕೊಂಬುಗಳಲ್ಲಿ ಸಿಗುತ್ತದೆ. ಹಾಗಾಗಿ ಅರಶಿನ ಬಳಕೆಯನ್ನೂ ಸ್ತ್ರೀಯರಿಗೆ ವಿಶೇಷವಾಗಿ ಹೇಳಿದ್ದಾರೆ. ಹಾಗಾಗಿ ಪ್ರತೀನಿತ್ಯವೂ ಸ್ವಲ್ಪವಾದರೂ ಅರಶಿನವನ್ನು ಬಳಸಬೇಕೆಂದು ನಮ್ಮ ಭಾರತೀಯ ಅಡಿಗೆಯಲ್ಲಿ ಸೇರಿಸಿದ್ದಾರೆ. ಹಾಗಂತ ಅರಶಿನವನ್ನು ಮೈತುಂಬಾ ಬಳಿದುಕೊಂಡರೆ ಚಿನ್ನದ ಅಂಶ ಬರುವುದಿಲ್ಲ. ಆದರೆ ಸ್ವಲ್ಪ ಪ್ರಮಾಣ ಚಿನ್ನದ ಗುಣ ಸಿಗಬಹುದು ಎನ್ನುವ ಅಭಿಪ್ರಾಯ ಇರುವುದರಿಂದ ಅರಶಿನಕ್ಕೂ ಅಷ್ಟೇ ಮಹತ್ವ ಬಂದಿತು. ಲಭ್ಯವಿಲ್ಲ, ಬಡತನವೆಂದಾಗ ಅರಶಿನ ಕೊಂಬನ್ನಾದರೂ ಕಟ್ಟಿಕೊಳ್ಳಿ ಎಂದರು. ಹಾಗೆ ಮುಂದೆ ಮಾಡಿಸಿಕೊಳ್ಳಬಾರದೆಂದು ಹೇಳಿಲ್ಲ. ಗಂಡನಿಗೆ ಆರ್ಥಿಕ ಸಬಲತೆ ಉಂಟಾಗಲು ಒಂದು ಚಿನ್ನದ ಆಭರಣವನ್ನು ಮಾಡಿಸಿ ಹಾಕಿಕೊಳ್ಳಬಹುದು. ತಾತ್ಕಾಲಿಕ ಅರಶಿನ ಕೊಂಬು ಅಷ್ಟೆ.

ನಿವೇಶಿನಿಯ ನಿಯತಿ ಸೂತ್ರವು ಯಾವುದೇ ಒಂದು ವ್ಯವಸ್ಥೆಯಲ್ಲಿ ಇರುವ ನಿಯಮವನ್ನು ಹೇಳುತ್ತದೆ. ಯೋಗಶಾಸ್ತ್ರದಲ್ಲಿ ನಿಯಮಗಳನ್ನು ವಿಶದೀಕರಿಸಿದ್ದರೆ. ಅದರಲ್ಲಿ ದೇಹಶಾಸ್ತ್ರಕ್ಕೆ ಬೇಕಾದ ೧೦ ನಿಯಮಗಳೆಂದರೆ: “ಆಹಾರ, ನ್ಯಾಸ, ಕಾಲ, ಪ್ರಾಪಂಚಿಕ, ವ್ಯಾಪಾರ, ಭೋಗ, ಆನಂದ, ದುಃಖ, ಕ್ರೋಧ, ಮೋಹ” ಎಂಬ ೧೦ ಸೂತ್ರಗಳು. ದೇಹವನ್ನು ಈ ದಶಸೂತ್ರಗಳ ನಿಯಮಬದ್ಧತೆಯಲ್ಲಿ ಇರಿಸಿಕೊಳ್ಳಬೇಕು.

ಇನ್ನು ದೇಹಶಾಸ್ತ್ರದ ಹಿರಣ್ಯಂ ಎಂಬ ಸೂತ್ರವು ಆಕರ್ಷಕವಾಗಿ ಕಾಣುವಂತಹಾ ಪ್ರವೃತ್ತಿಯನ್ನುವಿವರಿಸುತ್ತದೆ. ಅದೂ ಕೂಡ ಒಂದು ಮಂತ್ರದ ಒಂದು ಶಬ್ದವೇ ಆಗಿದೆ-

ಆ ಕೃಷ್ಣೇನ ರಜಸಾ ವರ್ತಮಾನೋ ನಿವೇಶಯನ್ ಅಮೃತಂ ಮರ್ತ್ಯಂಚ |
ಹಿರಣ್ಯಯೇನ ಸವಿತಾ ರಥೇನ ದೇವೋ ಯಾತಿ ಭುವನಾನಿ ಪಶ್ಯನ್ ||

ಅದನ್ನು ವಿಸ್ತರಿಸಲು ಶ್ರೀಸೂಕ್ತದ ಮೊದಲನೆಯ ಮಂತ್ರ ನೀಡಿದ್ದಾರೆ-

ಹಿರಣ್ಯ ವರ್ಣಾಂ ಹರಿಣೀಂ ಸುವರ್ಣ ರಜತಸ್ರಜಾಂ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋಮ ಆವಹ ||

ಅಂದರೆ ಆಕರ್ಷಕ ಪ್ರವೃತ್ತಿ ಎನ್ನವುದರಲ್ಲಿ ೯ ವಿಧ – “ಸಹಜ, ಸ್ವಭಾವ, ಉದ್ದೇಶಿತ, ಅನಿವಾರ್ಯ, ಬಂಧುರ, ಭ್ರಮಾ, ಲಾಸ್ಯ, ಮೋಹ, ಜ್ವಲಂತ”. ಇದು ೯ ರೀತಿಯಲ್ಲಿ ತನ್ನ ಅಸ್ತಿತ್ವವನ್ನು ಪ್ರಕಟಿಸಿಕೊಳ್ಳುವ ವಿಧಾನದಲ್ಲಿ ವ್ಯವಹರಿಸುತ್ತದೆ. ಹಾಗಾಗಿ ಇದನ್ನು ಹಿರಣ್ಯವೆಂದರು. ಅಂದರೆ ಆಕರ್ಷಕವಾಗಿ ಕಾಣುವ ಪ್ರವೃತ್ತಿ ಎಂದರು. ಇದು ದೇಹದ ಮುಖ್ಯ ಕಾರ್ಯ ಚಟುವಟಿಕೆಯಾಗಿದೆ. ಇಡೀ ದೇಹವೇ ಆಕರ್ಷಕವಾಗಿ ಕಾಣಲು ಹಿಂದಿನ ಉಡುಗೆ, ತೊಡಿಗೆಯ ಜೊತೆಗೆ ಸಾಂಪ್ರದಾಯಿಕ ವೇಷ, ಭೂಷಣ, ಅಲಂಕಾರಗಳು ಸೇರಿದಲ್ಲಿ ದೇಹದ ಅಸ್ತಿತ್ವವು ಸಹಜವಾಗಿ ಪ್ರಕಟಗೊಳ್ಳುತ್ತದೆ. ಇದರಲ್ಲಿ ಸದ್ಗುಣಗಳೂ ಒಂದು ಹಿರಣ್ಯ ಎಂದರು. ಈ ೯ ದೇಹದ ಅಸ್ತಿತ್ವ ಕಾಯ್ದುಕೊಳ್ಳುವ ಪ್ರವತ್ತಿಗಳನ್ನು ಕರಿಮಣಿಸರ ಸಹಿತ ಮಾಂಗಲ್ಯದಲ್ಲಿ ಸಂಯೋಜಿಸಿರುತ್ತಾರೆ. ಅದರ ಧಾರಣೆಯಿಂದ ಸ್ತ್ರೀಯರು ತಮ್ಮ ದೇಹದ ಅಸ್ತಿತ್ವ ಕಾಯ್ದುಕೊಳ್ಳುವುದರ ಜೊತೆಯಲ್ಲಿ ಪತಿಯ ಅಸ್ತಿತ್ವವನ್ನು ಪತಿವ್ರತಾ ಶಕ್ತಿಯಿಂದ ಕಾಯ್ದುಕೊಳ್ಳಬಹುದು. ಅದಕ್ಕೇ ಈ ಆದರ್ಶ ಶ್ಲೋಕವು ಮಂತ್ರವಾದದ್ದು-

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ |
ಕಂಠೇ ಭದ್ರಾಣಿ ಶುಭದೇ ತ್ವಂ ಜೀವಃ ಶರದಃ ಶತಂ ||

ಹೀಗೆ ಮುಂದುವರೆಯುತ್ತಾ ಭೂಃ ಎಂಬ ಸೂತ್ರದಲ್ಲಿ ಜೈವಿಕ, ರಾಸಾಯನಿಕ, ಖಗೋಲ, ಭೌತ, ಇನ್ನಿತರೆ ಶಾಸ್ತ್ರಗಳ ವಿವರಣೆಯಲ್ಲಿ ೯ ವಿಭಾವನ್ನು ಮಂಡಿಸುತ್ತಾರೆ-

               ಸ್ಯೋನಾ ಪೃಥಿವೀ ಭವ ಅನೃಕ್ಷರಾ ನಿವೇಶನೀ ಯಚ್ಛಾನಃ ಶರ್ಮ ಸಪ್ರಥಃ ||

ಈ ಸೂತ್ರದಲ್ಲಿ ನಿವೇಶನಿಯು ಸತ್-ಅಸತ್‍ಗಳ ರಂಗಮಂಟಪದಲ್ಲಿ ವ್ಯವಹರಿಸತಕ್ಕಂತಹಾ ವ್ಯಾಪಾರವಾಗಿರುತ್ತದೆ. ನಿವೇಶನದಲ್ಲಿ ವ್ಯವಹರಿಸುವ ವ್ಯಾಪಾರವನ್ನು ನಿವೇಶನಿ ಎಂದರು. ನೋಡಿ ಇಲ್ಲಿನ ನಿವೇಶನಿಯ ಶಬ್ದೋತ್ಪತ್ತಿಯು ಹಿಂದಿನದಕ್ಕಿಂತ ವಿಭಿನ್ನ. ಹಾಗಾಗಿ ಒಂದು ಶಬ್ದಕ್ಕೆ ಒಂದೇ ಅರ್ಥ, ಅಥವ ಹಲವು ಅರ್ಥ, ಎಲ್ಲೆಲ್ಲಿ ಯಾವ್ಯಾವ ಅರ್ಥ, ಉತ್ಪತ್ತಿ ನಿಯಮ ಬಳಸಬೇಕೆನ್ನುವುದು ಮಂತ್ರ ದ್ರಷ್ಟಾರರೇ ಹೇಳಿಕೊಡಬೇಕೇ ವಿನಃ ನಾವು ಅರ್ಥ ಮಾಡಲು ಹೊರಟರೆ ಅಪಾರ್ಥವಾಗಬಹುದು. ಇಲ್ಲಿ ಮಾಂಗಲ್ಯವು ನಿವೇಶನಿಯ ನಿಯತಿ ಸೂತ್ರದಂತೆ ಪತಿಯಿಂದ ನ್ಯಾಸ ರೂಪವಾಗಿ ಪತ್ನಿಯಲ್ಲಿ ಕೊಡಲ್ಪಟ್ಟಿರುತ್ತದೆ. ನಿವೇಶಾತ್ – ಒಂದರಲ್ಲಿ ನ್ಯಾಸ ರೂಪವಾಗಿ ಇಡಲ್ಪಟ್ಟದ್ದು. ಅದು ನಿಯುಕ್ತೈಃ – ಒಂದು ವಿಚಾರದ ಹಿನ್ನಲೆಯಲ್ಲಿ ನಿಯುಕ್ತವಾಗಿರುತ್ತದೆ. ವೇಷ್ಟಿತೈಃ – ಅದು ಮುಚ್ಚಿಟ್ಟು ಕಾಯ್ದಿರಿಸಲ್ಪಟ್ಟಿರುತ್ತದೆ. ಹಾಗಾಗಿ ಇನ್ನೇಷ್ಟೆಷ್ಟೋ ವಿಚಾರಗಳು ಪ್ರಕಟಗೊಳ್ಳದೆ ಅದರ ಉಪಯುಕ್ತತೆ ತಿಳಿಯದಿದ್ದರೂ ಅದರ ಉಪಯೋಗ ಮಾತ್ರ ನಮಗೆ ಆಗುವಂತೆ ವ್ಯವಸ್ಥೆ ಮಾಡಿರುತ್ತಾರೆ ಋಷಿ ಮುನಿಗಳು. ಶೀಕ್ಷೈಃ – ವ್ಯವಹರಿಸುವ ಉದ್ದೇಶ ಎಂದರ್ಥ. ಹಾಗಾಗಿ ನಿವೇಶನಿ ಎಂದರೆ ಸಿದ್ಧವಾದ ಪರಿಕರ ಎಂದರ್ಥ.

ಹಾಗಾಗಿ ನಿಯುಕ್ತೈಃ ವೇಷ್ಟಿತೈಃ ಶೀಕ್ಷೈಃ ಇವುಗಳು ಅಧೀನವಾದರೆ “ನಿ” ಆಗುತ್ತದೆ. ಅದರಿಂದಲೇ ನಿವೇಶನವು ನಿವೇಶನಿ ಎಂದಾಗುತ್ತದೆ. ನಿವೇಶನಿ ಎಂದರೆ ಸಿದ್ಧವಾದ ಪರಿಕರ ಎಂದರ್ಥ. ಅದೇ ‘ನಿ’ಯು ಪತಿಯೊಂದಿಗೆ ಮಾಂಗಲ್ಯ ನ್ಯಾಸ ಪೂರ್ವಕ ಸೇರುವುದರಿಂದ ಪತ್ನಿ ಆಗುತ್ತದೆ. ಅವಳೇ ಗೃಹಕ್ಕೆ ಗೃಹಿಣಿ ಎಂದೆನಿಸಿಕೊಳ್ಳುತ್ತಾಳೆ. ಅದಕ್ಕೇ ಗಹಿಣೀ ಗೃಹಮುಚ್ಯತೇ – ಅಂದರೆ ಗೃಹಿಣಿಯೇ ಸಾಕ್ಷಾತ್ ಗೃಹ ಸ್ವರಪಿಣಿ, ಅವಳಿಲ್ಲದೆ ಗೃಹವಿಲ್ಲ. ಅದೇ ನಿಯುಕ್ತೈಃ ವೇಷ್ಟಿತೈಃ ಶೀಕ್ಷೈಃ ಇವುಗಳಿಂದ ಸ್ವತಂತ್ರವಾದರೆ “ನ” = “ನಿವೇಶನ”; ಅಂದರೆ ತಯಾರಾದ ವಿಚಾರ ಎಂದಾಗುತ್ತದೆ. ನಿವೇಶನದಲ್ಲಿ ನಿವೇಶನಿಯು ಇರಬೇಕು. ಅದಕ್ಕೆ ಮಾಂಗಲ್ಯಾದಿ ಧಾರಣೆ ಅತ್ಯಗತ್ಯ. ಪತಿ-ಪತ್ನಿಯರ ದೇಹದ, ತಮ್ಮ ಗೃಹದ, ತಮ್ಮ ಜೀವನದ ತಾಳಿಕೆ ಬಾಳಿಕೆಗಾಗಿ ಬೇಕು ಈ ತಾಳಿ. ಇದು ಇಳೆಯ ಬೆಳೆಯ ಸಂಕೇತ. ನಮ್ಮ ಸಂಸ್ಕೃತಿಯಲ್ಲಿ ಅದು ಬೇಡವೆನ್ನುವುದು ಸಮಾಜದ್ರೋಹ, ಮನೆಮುರುಕುತನ ಎಂದಾಗುತ್ತದೆ.

“ನಾಳಾಂತರ್ಗತಂ ಜಗತ್ಸರ್ವಂ” ಎಂಬುದು ಅಗಸ್ತ್ಯರ ನಾಳೀ ತಂತ್ರದ ಉದ್ಘೋಷ. ದೇಹವಾಗಲೀ ತತ್ಸ್ವರೂಪಿಯಾದ ಬ್ರಹ್ಮಾಂಡವಾಗಲಿ ನಾಳಿಯೊಳಗೇ ಇರುವುದು. ಎಲ್ಲ ಚರಾಚರಗಳೂ ನಾಳದಲ್ಲಿ ವ್ಯವಹರಿಸುತ್ತವೆ. ಮಗು ಹುಟ್ಟುವುದು ನಾಳದಿಂದ, ಅನ್ನ ಒಳಹೊಕ್ಕುವುದು ನಾಳದಿಂದ, ಪ್ರಾಣ ಹೋಗುವುದು ನಾಳದಿಂದಲೇ. ನಾಳೀಯೊಳಗೆ ತ, ಥ, ದ, ಧ, ಎಂಬ ಚತುಷ್ತತ್ವಗಳು ಸೇರಿ ಪಂಚಭೂತಾತ್ಮಕವಾಗಿ ವ್ಯವಹರಿಸುವುದೇ ತಾಳಿ. ಆ ತಥದಧಗಳೇ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು.  ಅದರಿಂದ “ನ” ಅಂದರೆ ತನ್ನ ಅಸ್ತಿತ್ವ, ಅದರಿಂದ ನಾನು, ನನ್ನದು, ನನ್ನವರು, ಎಂಬುದು ಉಂಟಾಗುತ್ತದೆ. ತಾಳಿ ಮತ್ತು ನಾಳಿಗಳು ಒಂದು ತಾನ ಅಥವಾ ತಾಳದಲ್ಲಿ ಇರುತ್ತವೆ. ಪತಿಯು ತಾಳಿ ಕಟ್ಟುವುದು ಮತ್ತು ಪತ್ನಿಯು ತಾಳಿ ಕಟ್ಟಿಸಿಕಳ್ಳುವುದು ಎಂಬ ಪ್ರಕ್ರಿಯೆ ನಡೆದರೆ ಮಾತ್ರ ಅದರ ತಾನವು ಅರ್ಥವಾಗುತ್ತದೆ. ಅದನ್ನೇ ಜೀವನರಾಗ, ಜೀವನ ನಡೆ, ಜೀವನ ತಾಳ ಎಂದೆಲ್ಲ ಕರೆದರು. ಇವೆಲ್ಲ ಬ್ರಾಹ್ಮಿಯ ಅಕ್ಷರ ವಿಧ್ಯೆಯಿಂದ ತಿಳಿದು ಬರುವ ವಿಚಾರಗಳಾಗಿವೆ. ಇದರ ಉಲ್ಲೇಖವು ಲಭ್ಯ ಗ್ರಂಥಗಳಲ್ಲಿ ಕನ್ನಡದ ಪ್ರಪ್ರಥಮ ಕೃತಿಯಾದ ಕುಮುದೇಂದು ಕೃತ ಸಿರಿಭೂವಲಯದಲ್ಲಿ ಅಂಕಾಕ್ಷರ ಗಣಿತ ಮುಖೇನ ಸ್ಪಷ್ಟವಾಗಿದೆ.

|| ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ ||