Tuesday, 26 February 2013

ವಿಜ್ಞಾನದ ಗೊಬ್ಬರ - ದೇವಕಣದಿಂದ ಜಗತ್ತು ನಾಶ.
ದಿನಾಂಕ ೨೬-೦೨-೨೦೧೩ರ ವಿಜಯವಾಣಿ ಮುಖಪುಟದ ಪ್ರಧಾನ ಸುದ್ದಿ ಇದು. ಪ್ರಳಯದ ಭೀತಿಯ ಮೌಢ್ಯದಲ್ಲಿ ಮೂರು ಕಾಸಿನ ಪ್ರಚಾರ ಸಿಗದ ಕಾರಣ ವಿಜ್ಞಾನಿಗಳು ಈಗ ದೇವ ಕಣದ ಸುನಾಮಿ ಎಂಬ ನಾಟಕ ಶುರು ಮಾಡಿದ್ದಾರೆ. ರೀ ಸ್ವಾಮಿ ನೀವೇನು ವಿಜ್ಞಾನಿಗಳಾ ಅಥವಾ ಜ್ಯೋತಿಷಿಗಳಾ? ಜನರಿಗೆ ನಯಾ ಪೈಸದ ಉಪಯುಕ್ತ ಕೆಲಸ ಮಾಡಿಕೊಡಲು ಆಗದಿದ್ದರೂ ಪರವಾಗಿಲ್ಲ, ಸುಮ್‍ಸುಮ್ನೆ ಗಾಳಿಸುದ್ದಿ ಏಕೆ ಹಬ್ಬಿಸುತ್ತೀರಾ? ಇದೇ ಹೇಳಿಕೆಯನ್ನು ಯಾವುದಾದರೂ ಜ್ಯೋತಿಷಿ ನೀಡಿದ್ದರೆ, ಎಲ್ಲ ಮಾಧ್ಯಮ ಅವರ ಹಿಂದೆನೇ ಸುಳಿದಾಡುತ್ತಾ ತಮ್ಮ ಚಾನೆಲ್‍ನ ಬೊಕ್ಕಸ ತುಂಬಿಸಿಕೊಳ್ಳುತ್ತಾ ಪ್ರಜೆಗಳ ಸಮಯ ಹಾಳು ಮಾಡುತ್ತಿದ್ದರು.

ಓ ಶಾಲೆಯಲ್ಲಿ ವಿಜ್ಞಾನ ಕಲಿಸುವ ಮಾಸ್ಟರ್/ಮೇಡಂಗಳೇ ಈಗಿನ ಈ ವಿಜ್ಞಾನ ಎಂಬುದು ವಿಧ ವಿಧದ ಕುರುಡು ಆವರಿಸಿರುವ ಅಜ್ಞಾನ. ಇದೊಂದು ದೊಡ್ಡ ಸಂಶೋಧನೆ ಎಂಬಂತೆ ಮಕ್ಕಳಿಗೆ ಬೋಧಿಸಬೇಡಿ. ಸಾಧ್ಯವಿದ್ದರೆ ಭಾರತೀಯ ಋಷಿ-ಮುನಿಗಳು ಸಂಶೋಧಿಸಿ ಇದಮಿತ್ಥಂ ಎಂದು ನಿರ್ಣಯಿಸಲ್ಪಟ್ಟ ವೈಧಿಕ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ ಕೆಲ ವಿಚಾರಗಳನ್ನಾದರೂ ಬೋಧಿಸಿರಿ. ನೀವು ಪ್ರೌಢಶಾಲೆಯಾಗಲಿ, ಪದವಿಪೂರ್ವ ಕಾಲೇಜಿಗಾಗಲಿ ಮಾಡುತ್ತಿರುವ ಪಾಠದಲ್ಲಿನ ಎಷ್ಟೋ ಸಿದ್ಧಾಂತಗಳು ನೆಲಕಚ್ಚಿ ದಶಕಗಳೇ ಸಂದಿವೆ. ಒಬ್ಬೊಬ್ಬ ವಿಜ್ಞಾನಿಗೆ ಒಂದೊಂದು ದಿನ ಪಿತ್ತ ನೆತ್ತಿಗೇರಿದಾಗಲೆಲ್ಲ ಹೊಸ ಹೊಸ ಹೇಳಿಕೆ ನೀಡುತ್ತಾರೆ. ಅದನ್ನು ಪ್ರಕಟಿಸಿ ತಮ್ಮ ಇಂಪ್ಯಾಕ್ಟ್ ಫ್ಯಾಕ್ಟರ್‌, ಬೇರೆ ಬೇರೆ ಇಂಡೆಕ್ಸಿಂಗ್‍ಗಳಿಂದ ಪ್ರಚಾರಪ್ರಿಯತೆ ಹಾಗೂ ಲಾಭಾಂಶ ಹೆಚ್ಚಳಕ್ಕಾಗಿಯೇ ತೋಳದಂತೆ ಕಾಯ್ದು ಕೂತ ಪ್ರತಿಷ್ಠಿತ ಜರ್ನಲ್‍ಗಳೆಂಬ ಭ್ರಷ್ಟ ವ್ಯವಸ್ಥೆಯ ನಂಬದಿರಿ! 

ಈ ಅಣುವಿಧ್ಯೆ ಎಂಬುದು ಕಪಿಲ ಮುನಿ ಪ್ರಣೀತ ವೇದಾಂತರ್ಗತ ವಿಧ್ಯೆ. ವಿಜ್ಞಾನಿಗಳು ಇದರ ಎಂಟರಲ್ಲೊಂದು ಕುಂಟೆಯನ್ನೂ ಅರಿತಿಲ್ಲ. ಕಪಿಲರೇ ಹೇಳುವಂತೆ ಜನರು ಅಣುವಿನ ಸಂಶೋಧನೆಯು ಸ್ಫೋಟಕವೆಂದೇ ಸುಳ್ಳು ನಂಬಿಕೆಯಲ್ಲಿರುತ್ತಾರೆ. ಆದರೆ ನೈಜತೆಯನ್ನು ಸತತ ಸಾಧನೆ, ತಪಸ್ಸಿನಿಂದ ಮಾತ್ರ ತಿಳಿಯಲು ಸಾಧ್ಯ -

ಅಂದಿನಾ ಸಂಶೋಧನೆಯು ಮುಂದಿನಾ ಪರಿಣಾಮವೆಲ್ಲವ
ಇಂದು ಕಪಿಲನ ಮಾತಿನಲಿ ಪೇಳುವೆನು ಕೇಳಿರೀ ವಿಬುಧರೇ
ಚಂದದಿಂ ಅರ್ಥ ಮಾಡಿಕೊಂಡರೆ ನೀವು ಕಪಿಲರಾಗುವಿರಿ ಸಾಧಕರು ಸಿದ್ಧರು ನೀವಾಗಿರೆಂಬೇ |
ಅಂದು ಹಲವು ಮುನಿಗಳ ಕೂಡಿ ಅರ್ಜಿಸಿದ ಶಕ್ತಿಯದು ಚೇತನಮೂಲ
ವಿಂದು ಅದು ಅಣುವೆಂದು ಅದರ ಮಾತೃಕೆಯ ನಂತರದಿ ಗೋಚರಿಸಿ
ಎಂದೆದೂ ಅಪಾಯಕಾರಿ ಎಂದೆಂಬ ಸುಳ್ಳು ನಂಬಿಕೆಯಲಿಹುದು ಜನರೆಲ್ಲ ಅದುವೆ ಚೈತನ್ಯ ಶಕ್ತಿ ಕಾಣೋ ||

ಘಾಟಕವು ಘೋಟಕವು ಸ್ಫೋಟಕವು ಅದು ಕಾಣು ವ್ಯವಸ್ಥೆಯ
ಘಾಟಿ ತಪ್ಪಲು ಪ್ರಪಾತಕೆಳಸುವುದು ಸತ್ಯವು ಆದರದುಪಕಾರಿ
ಘಂಟಾಘೋಷವಾಗಿಯೆ ಪೇಳ್ವೆ ಮೂಲ ಚೇತನ ಬೀಜ ಸಹಜವು ಸಾತ್ವಿಕವು ಉಪಕಾರಿಯೂ |
ಘಾಟಕದ ನೀತಿಯನು ಅರಿತು ನಡೆಯಲು ಪ್ರಪಂಚದುನ್ನತಿ
ಘೋಟಕದ ಪರಿಯರಿತು ನಡೆಯಲು ಪ್ರಪಂಚದನ್ನವು ಕೇಳಿ
ಸ್ಫೋಟಕವಗೊಳಿಸಿದರೆ ಪ್ರಪಂಚನಾಶಕರವದು ಮನುಜ ಕೇಳ್ ಸ್ಫೋಟಗೊಳಿಸಬೇಡಾ ||

ಅರ್ಥವಾಯಿತೇ? ಮೊದಲಾಗಿ ಹ್ಯಾಡ್ರನ್ ಕೊಲೈಡರ್ ಪ್ರಯೋಗವೇ ಒಂದು ಕಣ್ಕಟ್ಟು ಎಂಬುದು ಕೆಲ ನಿಷ್ಠಾವಂತ ವಿಜ್ಞಾನಿಗಳಿಗೆ ತಿಳಿದಿದೆ. ಮತ್ತಿನ್ನು ದೇವಕಣ ಕಂಡುಹಿಡಿದದ್ದು ತಮ್ಮ ಹೂಡಿಕೆಧಾರರ ಕಣ್ಣೊರೆಸುವ ನಾಟಕ. ಬೇಕಾದರೆ ಬರೆದು ಇಟ್ಟುಕೊಳ್ಳಿ, ಇನ್ನು ಕೆಲ ವರ್ಷದ ನಂತರ ಹಿಗ್ಸ್ ಬೋಸಾನ್ ಎಂಬುದರ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿ ಮತ್ತೊಂದು ಕಣ, ಮಗದೊಂದು ಕಣ, ಅದು ಸಿಕ್ಕಿತು ಇದು ಸಿಕ್ಕಿತು ಎಂಬ ಹೇಳಿಕೆಗಳು ಬರುತ್ತವೆ. ಆದರೆ ಅವೆಷ್ಟು ಸತ್ಯ? ಎಷ್ಟು ಪರಿಪೂರ್ಣ? 

ಕಪಿಲರಾದರೋ ಇನ್ನು ವಿಭಜಿಸಲು ಸಾಧ್ಯವೇ ಇಲ್ಲದಷ್ಟು ಆಳದಲ್ಲಿ ಉಧ್ವಾಸನೆಯ ಮಾಡಿ ಮೂಲ ಚೇತನ ಬೀಜವನ್ನು ಗೋಚರಿಸಿಕೊಂಡು ಎಷ್ಟೆಷ್ಟೋ ಪ್ರಯೋಗ, ಫಲಿತಾಂಶಗಳಿಂದ ದೃಢ ಪಡಿಸಿಕೊಂಡು ಅದು ಮೂಲತಃ ಸಾತ್ವಿಕ ಶಕ್ತಿ, ಅದು ನಿಜವಾದ ದೇವಕಣ, ಅದು ಸ್ಫೋಟಕಾರಿಯಲ್ಲ, ಉಪಕಾರಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಪ್ರಾಕೃತಿಕ ನಿಯಮಬದ್ಧತೆ ಎಂಬುದು ಏನೆಂದೇ ತಿಳಿಯದ ವಿಜ್ಞಾನಿಗಳು ಕೇವಲ ಕಣದ ವ್ಯವಹಾರದಿಂದ ಲೆಕ್ಕಿಸಿ ಇಷ್ಟು ವರ್ಷಗಳ ನಂತರ ಹೀಗೀಗೆ ವಿದಳನವಾಗುತ್ತದೆ, ಹೀಗೆ ಸಂಗ್ರಹವಾಗುತ್ತದೆ, ಹೀಗೆ ಮಿತಿಮೀರಿ ಸ್ಫೋಟವಾಗುತ್ತದೆ ಎಂದೆಲ್ಲ ಲೆಕ್ಕಿಸಿದ್ದಾರೆ. ಇದೆಲ್ಲಾ ಭವಿಷ್ಯಾವಧಾನ ಗಣಿತವೇ ಹೊರತು ಸತ್ಯವಾಗಬೇಕಿಲ್ಲ. ಅಲ್ಲಿ ಪ್ರಾಕೃತಿಕ ನಿಯಮ ಬದ್ಧತೆ ಎಂಬ ಮೂಲಪ್ರಕೃತಿಯ ಸೂತ್ರವನ್ನು ವೇದ ಮುಖೇನ ಅಧ್ಯಯನ ಮಾಡಿದವರಿಗೆ ತಿಳಿದ ವಿಚಾರವೆಂದರೆ, ಕಣವೂ ಸ್ವತಂತ್ರವಲ್ಲ, ಅದು ಪ್ರಕೃತಿಯೊಂದಿಗೆ ವ್ಯವಹರಿಸುತ್ತದೆ. ಪ್ರಕೃತಿಯ ಪ್ರಧಾನ ಜೀವಪ್ರಭೇದ ಎಂದರೆ ಮಾನವ ವರ್ಗ. ಅದರಾದಿಯಾಗಿ ೮೪ ಲಕ್ಷ ಪ್ರಭೇದಗಳ ವ್ಯವಹಾರ ಎಂಬ ವೈಧಿಕ ಭೌತಶಾಸ್ತ್ರದ ಅಗೋಚರ, ಪರಿಣಾಮ ಗೋಚರ, ಪ್ರವರ್ತನಾ ಗೋಚರ, ಗುಣಗೋಚರಗಳೆಂಬ ನಾಲ್ಕನ್ನು ಬಿಟ್ಟು ಕೇವಲ ದೃಗ್ಗೋಚರ ಎಂಬ ಒಂದು ಭಾಗದಿಂದ ಅಣುವಿನ ಮೂಲವನ್ನು ಕೆಣಕಲು ಸಾಧ್ಯವೇ ಇಲ್ಲ.

ಈ ಕಣದ ವಿಧ್ಯೆಯನ್ನು ಬೇಕಾಬಿಟ್ಟಿ ಬಳಸುವುದಲ್ಲ. ಅದಕ್ಕೆ ಅದರದ್ದಾದ ಮಾಪನವಿದೆ, ಬಳಸುವವರಿಗೆ ಪಾತ್ರತೆ ಇದೆ. ಅದಕ್ಕಾಗಿ ಮೊದಲು ಮಾನವನಾಗಬೇಕು, ನಂತರ ಸಾಧನೆಯ ಮಾರ್ಗವನ್ನು ಹೇಳುತ್ತದೆ- 

ಮೊದಲು ವೇದಗಳ್ ನಾಲ್ಕು ಅದರಲಿಹ ಆರಾರು ಶ್ರುತಿಸ್ಮೃತಿಗಳಾದಿ
ಆದಿದೇವನ ಹೊಳಹ ಪೇಳುವ ವೇದಪುರಾಣ ಇತಿಹಾಸದಜ್ಞತೆಯು
ಮೊದಲರಿತವನು ಒಂದನೆಯ ಹಂತದರಿವು ಪಡೆಯಲರ್ಹನಪ್ಪನು ಅವನು ವೇದಾಂತಿಯಹುದು ||

ಹೀಗೆ ಹಂತಹಂತವಾಗಿ ಕಣದ ವಿಧ್ಯೆ ಸಾಧಿಸುತ್ತಾ ಹೋದರೆ -

ಉತ್ಪಾತಗಳ ತಡೆವ ಉತ್ಪಾತ ಸೃಷ್ಟಿಸುವ ಉತ್ಪಾತದರಿವ
ಉತ್ಪಾತಗಳು ನಡೆದರೂ ಆಪತ್ತುಗಳ ದೂರೀಕರಿಸಿ ಜಗಕೆ
ಉತ್ಪಾತದಂಕೆಯನು ಬೋಧಿಸುವ ಭೇದಿಸುವ ಉತ್ಪಾತರಹಸ್ಯಗಳ ವಿಧ್ಯೆಯಿದರೊಳಗಿದೆ ||

ಬಂದದ್ದೆಲ್ಲ ಬರಲಿ ಭಗವಂ ದಯೆಇರಲಿ ಎಂಬುದು ಭಾರತೀ ನಂಬಿಕೆ. ಅದನ್ನೇ ಪುಷ್ಟೀಕರಿಸಲೋ ಎಂಬಂತೆ ಶ್ರೀಕೃಷ್ಣನು

ಯದಾ ಯದಾಹಿ ರ್ಮಸ್ಯ ಗ್ಲಾನಿರ್ಭವತಿ ಭಾರತಃ
ಅಭ್ಯುತ್ಥಾರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||

ಅಂದರೆ ಭೂಮಿ ನಾಶವಾದಾಗ ಬರುತ್ತೇನೆ ಎನ್ನಲಿಲ್ಲ. ಧರ್ಮ ಗ್ಲಾನಿಯಾದಾಗ ಬಂದು ಕಾಪಾಡುತ್ತೇನೆ ಎಂದು ವಾಗ್ದಾನ ಮಾಡಿಯಾಗಿದೆ. ಆ ಗ್ಲಾನಿಯು ದೇವಕಣದಿಂದಾಗಲಿ, ದೆವ್ವಕಣದಿಂದಾಗಲಿ, ಪ್ರಳಯಕಾರಣಗಳಿಂದಾಗಲೀ, ರಕ್ಷಿಸಿಯೇ ತೀರುತ್ತಾನೆ. ಇದು ಆಧ್ಯಾತ್ಮಿಕದ ಕಠೋರ ಸತ್ಯ. ಒಂದು ವೇಳೆ ಏನೋ ಉತ್ಪಾತವಾಗಿ ನಾವು ಸತ್ತರೆ ಏನು ಚಿಂತೆ? ನಾವು ನಂಬಿರುವುದು ಪುನರಪಿ ಜನನಂ ಪುನರಪಿ ಮರಣಂ ಎಂಬ ನಿತ್ಯ ಸತ್ಯವನ್ನಲ್ಲವೇ?

|| ಲೋಕಾ ಸಮಸ್ತಾ ಸುಖಿನೋ ಭವಂತು ||

Saturday, 16 February 2013

ದೇಶ ಆಳಲು ಏನು ಬೇಕು?

ಸರಕಾರದ ಕರ್ತವ್ಯವೇನು ಎಂಬ ಲೇಖನದಲ್ಲಿ ಹೇಗೆ ಸರಕಾರವು ಮಾಡಬಾರದನ್ನೆಲ್ಲಾ ಮಾಡಿ, ಆಗಬಾರದ ರೀತಿಯ ಆಗುಹೋಗುಗಳಿಗೆ ಕಾರಣವಾಗಿದೆ, ಅದನ್ನು ಜ್ಞಾಪಿಸಲೆಂದೇ ಅದರ ಕರ್ತವ್ಯಗಳನ್ನು ವಿಶ್ಲೇಷಿಸಲಾಗಿತ್ತು. ಇಂತಹಾ ದುರಂತ ಪರಿಸ್ಥಿತಿಯಲ್ಲಿ ಅಯೋಮಯರಾಗಿರುವಾಗ, ದೇಶ ಆಳಲು ಏನು ಬೇಕು ಎಂಬುದರ ಚಿಂತನೆಯನ್ನು ನಮ್ಮ ಪುರಾತನ ಇತಿಹಾಸ, ಪುರಾಣ, ರಾಜ್ಯಶಾಸ್ತ್ರಗಳ ಆಧಾರದಲ್ಲಿ ಚಿಂತಿಸೋಣ. ಪುರಾಣದ ಬಗ್ಗೆ ಚಿಂತಿಸುವುದಿದ್ದರೆ ಅಂಬರೀಷ, ಸಗರ, ನಹುಷ, ಪೃಥು, ಹರಿಶ್ಚಂದ್ರ, ನಳ, ಸತ್ಯವ್ರತ, ದೇವವ್ರತ, ರಾಮ, ಯಯಾತಿ, ದಶರಥ, ಅಜ, ಯದು, ಇಕ್ಷ್ವಾಕು, ಮಾಂಧಾತ ಹೀಗೆ ಹೆಸರಿಸುತ್ತಾ ಹೋದಲ್ಲಿ ಚಕ್ರವರ್ತಿಗಳ ಪಟ್ಟಿಯೇ ಸಿಗುತ್ತದೆ. ಅವರೆಲ್ಲಾ ಈ ಸಮಗ್ರ ಭಾರತವನ್ನು ಆಳಿದವರು. ಹೇಗೆಂದರೆ ತಮ್ಮ ಧರ್ಮಬುದ್ಧಿ, ಸನ್ನಡತೆ, ಸತ್ಯಪರಿಪಾಲನೆಯಿಂದ ಇಡೀ ಪ್ರಪಂಚದ ಭೂಭಾಗವನ್ನೆಲ್ಲಾ ಆಳಿ ಬೆಳಗಿದವರು ಇವರು. ದೇಶದಲ್ಲಿ ಇವರ ಕಾಲದಲ್ಲಿ ತುಡುಗು, ಕಳ್ಳತನ, ವಂಚನೆ ಮೋಸಗಳೆಲ್ಲಾ ಅಡಗಿ ಕುಳಿತಿದ್ದವು. ದುಷ್ಟರೆಂಬ ರಾಕ್ಷಸರೆಲ್ಲಾ ಪಾತಾಳ ಸೇರಿದ್ದರು. ಸತ್ಯ, ಪ್ರಾಮಾಣಿಕತೆ, ಸಜ್ಜನಿಕೆಯಿಂದ ಮಾನವರೇ ಎಲ್ಲೆಲ್ಲೂ ತುಂಬಿದ್ದರು. 

ಇನ್ನು ಇತಿಹಾಸ ಚಿಂತನೆ ಮಾಡಿದರೆ ನವನಂದರದ ನಂತರ ಚಂದ್ರಗುಪ್ತ, ಅಶೋಕ, ಶ್ರೀಹರ್ಷ, ಸಮುದ್ರಗುಪ್ತ, ಮಗಧೇಶ, ಉತ್ತಮೋಜಸ, ಪುಲಕೇಶಿ, ವಿಕ್ರಮಾದಿತ್ಯ, ಕೃಷ್ಣದೇವರಾಯ, ವಿಷ್ಣುವರ್ಧನಾದಿ ಅರಸರ ಹೆಸರೇನು ಕಡಿಮೆಯೆ? ಅವರೆಲ್ಲಾ ಈ ವಿಶಾಲ ಸಾಮ್ರಾಜ್ಯವನ್ನು ಸುಖಶಾಂತಿಯಿಂದ ಆಳಿಲ್ಲವೆ? ಸಜ್ಜನರೂ ಪ್ರಾಮಾಣಿಕರೂ ಆದ ಪ್ರಜೆಗಳಿದ್ದರೆ ಆಳ್ವಿಕೆ ಸುಲಭ. ನಂತರ ಭಾರತವನ್ನು ಆಕ್ರಮಿಸಿದ ವಿದೇಶಿಯರು ಬರೇ ಕುಟಿಲತೆಯಿಂದಲೇ, ಕುಹಕತನದಿಂದಲೇ ಆಳುತ್ತಾ ಜನರಲ್ಲಿ ದುರ್ಬೀಜ ಬಿತ್ತಿದರು. ಸತ್ಯವಚನ ಮರೆಯಾಯ್ತು. ಬ್ರಿಟಿಷರು ಭಾರತ ಬಿಟ್ಟರು. ಆದರೆ ಅವರ ಕೊಳಕೆಲ್ಲಾ ಇಲ್ಲೇ ಉಳಿಯಿತು. ಅದನ್ನಿಟ್ಟುಕೊಂಡು ಗಂಧವೆಂದು ಮೂಸುತ್ತಾ ನಮ್ಮ ರಾಜಕಾರಣಿಗಳು ಭ್ರಷ್ಟರಾಗಿ ಆಳುತ್ತಿದ್ದಾರೆ. ಬ್ರಿಟಿಷರು ಆಳುತ್ತಿದ್ದಾಗ ದೇಶದ ಸಂಪತ್ತ್ ಇಂಗ್ಲೆಂಡಿಗೆ ಸಾಗಿಸಲ್ಪಡುತ್ತಿತ್ತು. ಈಗ ಸ್ವಿಸ್ ಬ್ಯಾಂಕ್‍ಗೆ ಸಾಗಿಸುತ್ತಿದ್ದಾರೆ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವಿಲ್ಲ. ಇದಕ್ಕೆ ಸ್ವಾತಂತ್ರ್ಯ ಬೇಕೆ? ಚಿಂತಿಸಿ.

ಹಿಂದೆ ಅವರೆಲ್ಲಾ ಹೇಗೆ ಆಳುತ್ತಿದ್ದರು ಎಂದು ಚಿಂತಿಸಿದಲ್ಲಿ ಸತ್ಯ ಅರಿವಾಗುತ್ತದೆ. ರಾಜ್ಯಕೋಶವನ್ನು ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ದಾನ ಮಾಡಿದಾಗ ಆತನಿಗೆ ಒಪ್ಪತ್ತಿನ ಊಟಕ್ಕೂ ಅವನದ್ದಾದ ಇತರೆ ಆಸ್ತಿ ಇರಲಿಲ್ಲ. ರಾಜ್ಯಕೋಶವನ್ನು ಸೋತ ಪಾಂಡವರು ವನವಾಸಕ್ಕೆ ತೆರಳಿದಾಗ ಅವರ ನಿಸ್ಸಹಾಯಕತೆ ಅರಿತ ಜಗಚ್ಚಕ್ಷು ಸೂರ್ಯನೇ ಸ್ವತಃ ಅಕ್ಷಯ ಪಾತ್ರೆಯನ್ನು ಕೊಟ್ಟ. ಆದರೂ ಸ್ವಂತದ್ದಾದ ಯಾವುದೇ ಆಸ್ತಿ ವಗೈರೆ ಮಾಡಿಲ್ಲ. ಆದರೆ ಈಗಿನ ರಾಜಕಾರಣಿಗಳು ತಾವು ಉಂಡುಟ್ಟು ಬದುಕಲು ಮಾತ್ರವಲ್ಲ, ದೇಶವನ್ನೇ ಕೊಂಡುಕೊಳ್ಳುವಷ್ಟು ಆಸ್ತಿ ಮಾಡುತ್ತಿದ್ದಾರೆ. ಹಾಗಾಗಿ ಭ್ರಷ್ಟಾಚಾರ ಬೆಳೆಯುತ್ತಿದೆ. ಒಟ್ಟಾರೆ ಸರ್ಕಾರ ಆಳುತ್ತಿದೆ.

ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರ ವಿವರಣೆಯಲ್ಲಿ ಲೋಭಿ ಪ್ರಜೆಯು ದೇಶದಲ್ಲಿ ತ್ಯಾಗಿ ಪ್ರಜೆಯ ಸಂಖ್ಯೆಯ ೧೬ನೇ ೧ ಭಾಗ ಮಾತ್ರಾವಿರಬೇಕು. ಅದನ್ನಾಧರಿಸಿ ರಾಜ ಲೋಭಿಗಳ ಪ್ರಮಾಣ ಹೆಚ್ಚಿದಂತೆಲ್ಲಾ ತ್ಯಾಗಿಗಳ ಸಜ್ಜನರನ್ನು ಗುರುತಿಸಿ ಅವರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವುದರಿಂದ ತ್ಯಾಗಿಗಳ ಉದಾರಿಗಳ ಸಂಖ್ಯೆ ಬೆಳೆಸಬೇಕು ಎಂದಿದ್ದಾರೆ. ಕುಟುಂಬ ಸಂಖ್ಯೆಯು ಶೇ. ೪೦ ಭಾಗ, ತ್ಯಾಗಿಗಳೂ, ವಿರಕ್ತರ ಭಾಗ ೨೦%; ಬ್ರಹ್ಮಚಾರಿಗಳಾದ ಸಮಾಜ ಸೇವಕರ ಭಾಗ ೧೫%; ವಿರಕ್ತರೂ, ಸನ್ಯಾಸಿಗಳ ಭಾಗ ೧೫%; ಅಧಿಕಾರಿಗಳೂ, ರಾಜೋದ್ಯೋಗಿಗಳ ಭಾಗ ೧೦% ದಾಮಾಶಯ ಕಾಯ್ದುಕೊಂಡಿರಬೇಕು. ಅವುಗಳಲ್ಲಿ ಕೊರತೆ ಕಂಡುಬಂದರೆ ಆ ಕ್ಷೇತ್ರಕ್ಕೆ ವಿಶಿಷ್ಠ ಸೌಲಭ್ಯ ಸ್ಥಾನಮಾನ ಒದಗಿಸುವುದು ಹಿಂತೆಗೆದು ಕೊಳ್ಳುವುದು ರಾಜನ ಮುಖ್ಯ ಕರ್ತವ್ಯವಾಗಿರುತ್ತದೆ ಎಂದಿದ್ದಾರೆ. ಒಟ್ಟು ಪ್ರಜಾಜನರ ಸಂಖ್ಯೆಯಲ್ಲಿ ಎಲ್ಲರೂ ವ್ಯಾವಹಾರಿಕ ಜ್ಞಾನ ವಿಧ್ಯೆ ಕಲಿತಿರಬೇಕು. ನಂತರ ಕುಲವೃತ್ತಿಯನ್ನೇ ಆಧರಿಸಿ ಉನ್ನತ ಶಿಕ್ಷಣ ಪಡೆಯಬೇಕು ಎಂದಿದ್ದಾರೆ. ಅವರಲ್ಲಿ ೧೦% ರಾಜಾಶ್ರಯದಿಂದ ವಿಧ್ಯೆಗೆ ಸಂಶೋಧನೆಗೆ ಅನುಕರ್ಸಬೇಕೆಂದ್ದೆ. ಅವರ ವಿಧ್ಯಾಭ್ಯಾಸಾ ನಂತರ ಪೂರ್ಣ ಸ್ವತಂತ್ರರು. ಅವರ ಮೇಲೆ ರಾಜನು ಯಾವುದೇ ಹಿಡಿತವಿಡುವ ಪ್ರಯತ್ನ ಮಾಡಬಾರದು. ಆಗ ಮಾತ್ರಾ ಅವರು ದೇಶಭಕ್ತರಾಗಿ ದೇಶಸೇವೆಗೆ ತೊಡಗಿಸಿಕೊಳ್ಳುತ್ತಾರೆ ಎಂಬುದು ಚಾಣಕ್ಯರ ಮತ

ಈ ಮತದಂತೆ ಚಿಂತಿಸಿದರೆ ಉನ್ನತ ವ್ಯಾಸಂಗ ಮಾಡಿದವನು ಸ್ವತಂತ್ರವಾಗಿ ಬದುಕಬೇಕು ಎಂಬುದು ಅಭಿಪ್ರಾಯ. ಅವನು ರಾಜೋದ್ಯೋಗ ಸಲಹೆ ಮಾರ್ಗದರ್ಶನವನ್ನು ಸರಕಾರಕ್ಕೆ ಕೊಟ್ಟರೂ ಸಂಭಾವನೆ ಸಂಬಳ ಸೌಲಭ್ಯವಿಲ್ಲ. ಆಗ ಅವನು ಉತ್ತಮವಾದ ಸ್ವತಂತ್ರೋದ್ಯೋಗ ನಿರತನಾಗುವುದರಿಂದ ದೇಶಕ್ಕೆ ವಿಪುಲ ಲಾಭ, ಆದಾಯ, ಉತ್ತಮ ಉತ್ಪಾದನೆ ಜನರಿಗೆ ವಿಶೇಷ ಉದ್ಯೋಗಾವಕಾಶ ಒದಗಿ ಬರುತ್ತದೆ. ದೇಶದಲ್ಲಿ ಸ್ವತಂತ್ರ ಉದ್ದಿಮೆ ನಡೆಸುವವರಿಗೆ ಮುಕ್ತ ಅವಕಾಶ ನೀಡಿದಲ್ಲಿ ದೇಶೀಯ ಉತ್ಪಾದನೆ ಹೆಚ್ಚುತ್ತದೆ. ಇದು ಪುರುಕುತ್ಸರ ಮತ.

“ಆ ಸತ್ಯೋ ಯಾತು ಮಘವಾನ್ ಋಜೀಷೀ ದ್ರವಂತ್ವಸ್ಯ ಹರಯ ಉಪನಃ | ತಸ್ಮಾ ಇದಂಧ ಸುಷುಮಾ ಸುದಕ್ಷಮಿಹಾಭಿಪಿತ್ವಂ ಕರತೇ ಗೃಣಾನಃ” ||

ಭಗವಾನ್ ವಾಮದೇವರು ಅರ್ಥಶಾಸ್ತ್ರವು ರಾಜ್ಯಶಾಸ್ತ್ರಕ್ಕೆ ಬದ್ಧವಾಗಿರಬೇಕು. ಋಜು ಮಾರ್ಗಾನುವರ್ತಿ ಆಗಿರಬೇಕು. ಧರ್ಮ ಬದ್ಧವಾದ ಐಶ್ವರ್ಯ ಮಾತ್ರಾ ಫಲವನ್ನೀಯಬಲ್ಲದು. ಸುಖವನ್ನೀಯಬಲ್ಲದು. ಹಣದ ಸಹಜ ಗುಣವಾದ ಚಿತ್ತಾಕರ್ಷಣೆ ತನ್ಮೂಲಕ ದುರ್ಮಾರ್ಗಾವಲಂಬನೆಗೆ ದಾರಿಯಾಗುತ್ತದೆ. ಆದರೆ ಧರ್ಮ ಮಾರ್ಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವೆಂಬ ಸೈದ್ಧಾಂತಿಕ ತತ್ವದಡಿಯಲ್ಲಿ ಸಂಗ್ರಹಿಸಿದ ಅರ್ಥ ಮಾತ್ರಾ ಸನ್ಮಾರ್ಗದಲ್ಲಿ ನಡೆಸುತ್ತದೆ ಎಂದಿದ್ದಾರೆ. ತನ್ಮೂಲಕ ಋಜು ಮಾರ್ಗದಿಂದ ಧರ್ಮ ಬದ್ಧರೀತಿಯಲ್ಲಿ ಅರ್ಜಿಸಿದ ಸಂಪತ್ತು ಮಾತ್ರಾ ಅರ್ಥವೆನ್ನಿಸಿಕೊಳ್ಳುತ್ತದೆ. ಅದರಿಂದ ಸಕಾಮನೆಗಳು ಪೂರ್ಣಗೊಂಡು ಪಾಪ ಜನಿತ ಕಾರಣ ಕೈಂಕರ್ಯ ಉಂಟಾಗುವುದಿಲ್ಲ. ಆದ್ದರಿಂದ ಪ್ರತೀ ಜೀವಿಯ ನಡೆಯೂ ಉತ್ತಮ ದಾರಿಯಲ್ಲಿರುತ್ತದೆ. ಹಾಗಾಗಿ ಮೋಕ್ಷ ಮಾರ್ಗವೆಂದರು ಜ್ಞಾನಿಗಳು.

“ಅವಸ್ಯ ಶೂರಾಢ್ವನೋ ನಾಂತೇಸ್ಮಿನ್ ನೋ ಅಧ್ಯಸವನೇ ಮಂದಧೈ”
“ಶಂಶಾತ್ಯುಕ್ತಮುಶನೇವ ವೇಧಾ ಶ್ಚಿಕಿತುಷೇ ಅಸುರ್ಯಾಯ ಮನ್ಮ”

ಸಹಜವಾಗಿರುವ ಅವಿಧ್ಯೆಯೆಂದರೆ ಲಾಲಸಾಯುಕ್ತವಾದ ಕುರುಡು ಪ್ರವರ್ತನೆ ಮಾನವನಿಗಲ್ಲ. ವಿವೇಕಯುಕ್ತವಾದ ಸೂಕ್ತಾಸೂಕ್ತ ಪ್ರವರ್ತನೆ ಅತೀ ಮುಖ್ಯ. ಅದನ್ನು ಭಕ್ತಿಯಿಂದ ಅಂದರೆ ದೃಢ ವಿಶ್ವಾಸದಿಂದ ಗಳಿಸಬೇಕಿದೆ. ತನ್ಮೂಲಕ ಮಹತ್ತರ ಜ್ಞಾನ ಪ್ರಾಪ್ತಿಯಾಗುತ್ತದೆ. ಅರಿಷಡ್ವರ್ಗ ವಿಜಯಿಯಾಗುತ್ತಾನೆ. ಅಂತಹಾ ಸಂಸ್ಕಾರವಂತನೂ ಅವನ ಪರಂಪರೆಯವರು ಮಾತ್ರಾ ರಾಜಕಾರ್ಯ ಯೋಗ್ಯರಿರುತ್ತಾರೆ. ಅವನನ್ನು ಪ್ರಸಕ್ತಕಾಲದಲ್ಲಿ ಉಪಾಸನಾ ಶಕ್ತಿಯಿಂದ ಅರಿತು ನಿಯೋಗಿಸಬೇಕು. ಅದು ಗುರುವಿನ ಕರ್ತವ್ಯವಾಗಿರುತ್ತದೆ. ಅದಕ್ಕೆ ರಾಜಗುರು ಪಟ್ಟ. ಪ್ರಶ್ನಾತೀತ, ಅನಿಂದ್ಯ, ಅದೇ ದೇವವಾಣಿ ಎಂದು ತಿಳಿಯಿರಿ.

“ಸ್ವ ಅರ್ಯದ್ ವೇದೀ ಸುದೃಶೀಕ ಮರ್ಕೈಃ ಮಹೀಜ್ಯೋತಿ ರುರುಚುರ್ಯದ್ಧವಸ್ತೋಃ | ಅಂಧಾ ತಮಾಂಸಿ ದುಧಿತಾ ವಿಚಕ್ಷೇ ನೃಭ್ಯಶ್ಚಕಾರ ನೃತಮೋ ಅಭಿಷ್ಟೌ” ||

ಈ ಮಹೀಯಲ್ಲಿ ಬದುಕುವ ಶ್ರೇಷ್ಠ ಜೀವಿ ಮಾನವ. ಇತರೆ ಜೀವಿಗಳಲ್ಲಿಲ್ಲದ ವಿಶೇಷ ಶಕ್ತಿ, ವೈಖರಿ, ಬುದ್ಧಿ, ಕರ್ಮ, ಋಣಗಳೊಂದಿಗೆ ಮಾನವ ಬದುಕು ರೂಪಿಸಿಕೊಳ್ಳಬೇಕು. ಅದರ ದಿವ್ಯಜ್ಞಾನವನ್ನು ಬೋಧಿಸುತ್ತದೆ ನಮ್ಮ ವೇದಗಳು. ಅದನ್ನು ಅರ್ಥ ಮಾಡಿಕೊಂಡವನು ಮಾತ್ರಾ ಶಾಸಕನಾಗಬೇಕು, ಆಡಳಿತ ಸೂತ್ರ ಹಿಡಿಯಬೇಕು. ಅವನು ಮಾತ್ರಾ ಪ್ರಜೆಗಳಲ್ಲಿ ಪರಿವರ್ತನೆ ತರಬಲ್ಲ ಸರ್ವಶ್ರೇಷ್ಠ ನೇತಾರನಾಗಿರುತ್ತಾನೆ. ಅವನೇ ಪ್ರತ್ಯಕ್ಷ ಧೈವಸ್ವರೂಪನಾಗಿರುತ್ತಾನೆ. ರಾಜಾ ಪ್ರತ್ಯಕ್ಷ ದೇವತಾ ಎಂಬ ಉಕ್ತಿ ಹುಟ್ಟಿದ್ದು ಇದೇ ಕಾರಣದಿಂದಾಗಿ. ತ್ಯಾಗಿಯೂ ಭೋಗಿಯೂ ಎಂದಿಗೂ ಸಮವಲ್ಲ. ಊಟ, ವಸತಿ, ಮಾನಗಳಲ್ಲಿ ಮಾತ್ರಾ ಸರ್ವಸಮಾನತೆ ಇರಬೇಕು. ಇನ್ನಿತರೆ ವಿಷಯಗಳಲ್ಲಿ ನಿರ್ದಿಷ್ಟ ಅರ್ಹತೆ ಇರಲೇಬೇಕು. ಅದರಲ್ಲಿ ಮೀಸಲಾತಿ ಸರಿಯಲ್ಲ. ಆದರೆ ಈಗಿನ ರಾಜಕಾರಣ ಕುರುಡುತನದಿಂದ ಜಾತಿ ಆಧಾರದಲ್ಲಿ ಮೀಸಲಾತಿ ನಿರ್ಧರಿಸುತ್ತಿದೆ. ಆರ್ಥಿಕ, ಬೌದ್ಧಿಕವಾಗಿ ಬ್ರಿಟಿಷರ ರಾಜಕಾರಣದಿಂದ ಹಿಂದುಳಿದವರನ್ನು ಸಮಗ್ರ ವಾಹಿನಿಯಲ್ಲಿ ಮುಂದೆ ಬರುವ ಅವಕಾಶವಾದೀ ಸೌಲಭ್ಯ ಆಗ ಕೇವಲ ೩೦ ವರ್ಷಕ್ಕೆ ಅಂಗೀಕರಿಸಿದ್ದು ಈಗ ನಿರಂತರವಾಗಿದೆ. ಅದೇ ದೇಶದ ಅಧೋಗತಿಗೆ ಕಾರಣ ತಿಳಿಯಿರಿ.

“ವಿಶ್ವಾನಿ ಶಕ್ರೋ ನರ್ಯಾಣಿ ವಿದ್ವಾನ್ ಆಪೋ ರಿರೇಚ ಸಖಿಭಿರ್ನಿಕಾಮೈಃ”
“ಅಶ್ಮಾನಂ ಚಿದ್‍ಯೇ ಬಿಭಿದುರ್ವಚೋಭಿರ್ವೃಜಂ ಗೋಮಂತ ಮುಶಿಜೋ ವಿವವ್ರುಃ”

ಮಾನವೋಚಿತವಾದ ಸದ್ಗುಣಗಳಿಂದ ಪ್ರಕಾಶಮಾನವಾಗಬೇಕು. ಅವನೇ ಲೋಕ ನೇತಾರನಾಗಬೇಕು. ಪ್ರಜೆಗಳೆಲ್ಲಾ ಅವನ ಶೌರ್ಯ, ಸಾಹಸ, ಪಾಂಡಿತ್ಯ, ಸದ್ಗುಣ, ಸಹಿಷ್ಣುತೆಗಳನ್ನು ಕೊಂಡಾಡುವಂತಿರಬೇಕು. ಅವನೇ ರಾಜನೆನ್ನಿಸಿಕೊಳ್ಳುತ್ತಾನೆ. ರಾಜನ ವಾಣಿಯು ಪಾಲನೀಯವಾಗಿರಬೇಕು. ಪ್ರಜೆಗಳಲ್ಲಿ ಆಧ್ಯಾತ್ಮಿಕ ಆಸಕ್ತಿ ಹುಟ್ಟಿಸುವಂತಿದ್ದು ಸಹಜ ಸ್ವಾಭಾವಿಕ ಪ್ರಾಪಂಚಿಕ ಕಾಮನೆಗಳನ್ನು ಮಿತಿಯಲ್ಲಿಡಬೇಕು. ಪರಸ್ಪರ ಸ್ನೇಹಭಾವದಿಂದಲೇ ಪ್ರಜಾ ಜನರಿರುವಂತೆ ನೋಡಿಕೊಳ್ಳಬೇಕು. ಹುಟ್ಟುವ ಕೆಲ ಅಘಟಿತ ವಿದ್ರೋಹಗಳನ್ನು ಗುರುತಿಸಿ ಮಟ್ಟ ಹಾಕಬೇಕು. ಸದಾ ಎಚ್ಚರದಿಂದ ಪ್ರಜಾ ಕ್ಷೇಮ ಚಿಂತನೆ ಮಾಡುವವನಾಗಿರಬೇಕು. ಅದಕ್ಕಾಗಿ ವೇದವಿದನೂ, ಜ್ಞಾನಿಯೂ, ವಿವೇಕಿಯೂ ಆದವನು ದೇಶದ ರಾಜನಾದರೆ ಅಂದರೆ ಈಗಿನ ಶಾಸಕನಾದರೆ ದೇಶ ಸುಭಿಕ್ಷವಾಗುತ್ತದೆ. ಇಲ್ಲವಾದರೆ ಹುಚ್ಚು ಹಿಡಿದಂತೆ ವರ್ತಿಸುವ ಪ್ರಜಾಜನರು ಏನಕೇನ ಪ್ರಕಾರೇಣ ಏನೇನನ್ನೋ ಮಾಡಬಹುದು. ಅದನ್ನು ತಡೆಯಲು ಕಾನೂನಿಗೆ ಶಕ್ತಿ ಇರುವುದಿಲ್ಲ.

“ಕಾನೂನು ಅಪರಾಧಕ್ಕೆ ಶಿಕ್ಷೆ ವಿಧಿಸಬಹುದೇ ವಿನಃ ಅಪರಾಧವನ್ನು ತಡೆಯಲಾರದು”

ಅಪರಾಧ ತಡೆಯಲು ಒಳ್ಳೆ ಪ್ರಜಾಜನರನ್ನು ಉತ್ಪಾದಿಸಲು ಪಾಪ+ಪುಣ್ಯಗಳ ನೆಲೆಯಲ್ಲಿ ನೈತಿಕ ಶಿಕ್ಷಣವಿರಬೇಕು ಎಂದು ರಾಜ್ಯಶಾಸ್ತ್ರಾಧಾರಿತವಾದ ಈ ಲೇಖನ ಮುಗಿಸುತ್ತಿದ್ದೇನೆ.

Saturday, 9 February 2013

Interpretation of the word "Ludhiana"

Whatever exists in this world has some meaning behind it. Even every word that we use has a history of its own. It may be that not many are aware of that meaning. But that does not mean that there is no meaning in it.

There are so many things in the world the meaning of which is not known to many. Take for instance the name of this town, "Ludhiana". Not many are aware of what the word means. But it does have a meaning. In the Vedic language there was a word lodhra, which is the name of a flower. The women of those ancient times would use the pollen of this flower as their face-powder. There was also in the Vedic language a word dha'nya, meaning any green vegetation. This land had lodhra-dha'nya in abundance, and the local dialect of the land, about 3500 years ago, was Paesha'cii Pra'krta. The original Vedic Sanskrit "Lodhra-Dha'nya" became corrupted by Paesha'cii Pra'krta to "Lodhdha Ha'nna". Then 2500 years ago, that word became changed in Demi-Paesha'cii into "Lodhdhaa'nna", which then in Old Punjabi took the form of "Lodhiya'na". Now in modern Punjabi it is "Ludhiya'na". [Anglicized in turn as "Ludhiana".] In the same way, there is not a single word that does not have some meaning behind it, though people may or may not be aware of that meaning.


ಸರಕಾರದ ಕರ್ತವ್ಯವೇನು?


 ಅನ್ನ, ವಿಧ್ಯೆ, ಬಟ್ಟೆ, ರಕ್ಷಣೆ ಇವು ಮಾತ್ರ ಸರಕಾರದ ಕರ್ತವ್ಯ. ಅದು ಬಿಟ್ಟು ಬೇರಾವುದರಲ್ಲಿಯೂ ಸರಕಾರದ ಮೇಲುಸ್ತುವಾರಿ ಮಾತ್ರವಾಗಿರಬೇಕು. ಅದರಲ್ಲಿಯೇ ಸರಕಾರ ತೊಡಗಿಕೊಂಡಲ್ಲಿ ಮೊದಲಿನ ನಾಲ್ಕು ಭಾಗದಲ್ಲಿ ಸೋಲು ಖಂಡಿತ. ಸದ್ಯದಲ್ಲಿ ಸರಕಾರ ಅದನ್ನು ಮಾಡುತ್ತಿದೆಯೆ? ಇಲ್ಲ. ರಕ್ಷಣೆ ಮಾಡಬೇಕಾದವರದ್ದೇ ಹತ್ಯೆಯಾಗುತ್ತಿದೆ. ವಿಧ್ಯೆ ಮಾರಾಟವಾಗುತ್ತಿದೆ. ಬಟ್ಟೆ ಇಲ್ಲವೇ ಇಲ್ಲ. ಬಟ್ಟೆ ಎಂದರೆ ಬರೇ ಮೈಮುಚ್ಚುವ ವಸ್ತ್ರವಲ್ಲ ಮಾನ ಗೌರವ ಕಾಪಾಡುವುದು. ಅನ್ನ ದೇವರಿಗೇ ಪ್ರೀತಿ. ರೇಷನ್‍ಗಾಗಿಯೇ ಒಂದಿಲಾಖೆ ನಿರಂತರ ಹೋರಾಡುತ್ತಿದ್ದರೂ ಸರಿಪಡಿಸಲಾಗುತ್ತಿಲ್ಲ. ಅನ್ನ ಹಂಚಿಕೆ ಸರಿ ತೂಗಿಸಲು ಸಾಧ್ಯವೇ ಆಗಿಲ್ಲ. ಇಲ್ಲಿಯವರೆಗೆ ಬರೇ ರೇಷನ್ ಕಾರ್ಡ್ ಮಾಡಿಸಲೇ ಸರಕಾರಕ್ಕೆ ಆಗಿಲ್ಲ. ಆದರೆ ಅಭಾವ, ಬರಗಾಲ ಕಾಲದಲ್ಲಿ ಮಾತ್ರಾ ರೇಷನ್ ಪದ್ಧತಿ ಇಅರಬೇಕು. ಉಳಿಕೆ ಕಾಲದಲ್ಲಿ ಮುಕ್ತ ಆಹಾರ ಪದ್ಧತಿ ಇರಬೇಕು ಎಂಬ ಸತ್ಯ ಸರಕಾರಕ್ಕೆ ಹೇಳುವವರಾರು? ಸದಾಕಾಲ ರೇಷನ್ ಮೂಲಕ ಆಹಾರ ಒದಗಿಸುವ ಪದ್ಧತಿ ಎಷ್ಟು ನಿಕೃಷ್ಟವೆಂಬುದಾದರೂ ಅರಿವಿದೆಯೇ?


          ಎಲ್ಲಿಯವರೆಗೆ ಮುಕ್ತ ಆಹಾರ ಬರುವುದಿಲ್ಲ ಅಲ್ಲಿಯವರೆಗೆ ಜನರಲ್ಲಿ ಅಪರಾಧೀ ಪ್ರವೃತ್ತಿ ಬೆಳೆಯುತ್ತಲೇ ಹೋಗುತ್ತದೆ. ಅದಕ್ಕೆ ಹಸಿವು ಎಂಬ ಕಾರಣದ ಧರ್ಮರಕ್ಷಣೆ ಇದೆ. ಅಭಾವವಿದ್ದಾಗ ಕೊರತೆಯಾದಾಗ ಜನರಲ್ಲಿ ಕಿತ್ತು ತಿನ್ನುವ ಪ್ರವೃತ್ತಿಯ ಸಮತೋಲನಕ್ಕಾಗಿ ಮಾತ್ರಾ ರೇಷನ್ ಪದ್ಧತಿ ಬೇಕೇ ವಿನಃ ನಿರಂತರವಲ್ಲ. ಬರಗಾಲವಿದ್ದಲ್ಲಿ, ತೀವ್ರ ಕೊರತೆಯಿದ್ದಲ್ಲಿ ಪ್ರಜೆಗಳಲ್ಲಿ ಹುಟ್ಟುವ ಅಮಾನವೀಯ ಗುಣ, ಮೃಗೀಯ ಗುಣ ಕಿತ್ತು ತಿನ್ನುವುದು. ಆಗ ಅದನ್ನು ಸಮತೋಲನ ಮಾಡಲು ರೇಷನ್ ಪದ್ಧತಿ (ಅಥವಾ ಪಡಿತರ ಪದ್ಧತಿ) ಇರಲಿ. ಆದರೆ ನಿರಂತರ ಅದಿದ್ದರೆ ಮಾನವರೆಲ್ಲಾ ಮೃಗಗಳೆಂದರ್ಥವೇ? ತನಗೆ ಬೇಕಾದಷ್ಟನ್ನೇ ಹಿತ ಮಿತವಾಗಿ ಬಳಸಬೇಕಾದ ಸಹಜಗುಣ ಮಾನವನಿಗಿರಬೇಕು. ಅದನ್ನು ನಿರಂತರ ರೇಷನ್ ಮೂಲಕ ಇಷ್ಟೇ ತಿನ್ನಬೇಕು ಎಂಬ ಪದ್ಧತಿಯ ಸರ್ಕಸ್ ಪ್ರಾಣಿಗಳ ಸಾಕಾಣಿಕೆ ಪದ್ಧತಿ ಸಮಾಜದ ಅವಹೇಳನವಲ್ಲವೆ? ಪ್ರಜೆಗಳಿಗೆ ಮಾನವಿದೆಯೆ? ಒಂದು ರೇಷನ್ ಕಾರ್ಡ್ ಮಾಡಿಸುವ ಕಾರಣಕ್ಕಾಗಿಯೇ ದೇಶದ ಎಷ್ಟು ಮಾನವ ಶಕ್ತಿ ವ್ಯಯವಾಗುತ್ತಿದೆ ಚಿಂತಿಸಿದ್ದೀರಾ? ಅದರ ಬಗ್ಗೆ ಒಂದು ವಿವರಣೆ ಗಮನಿಸಿ.


          ಮೊದಲಾಗಿ ನಮ್ಮ ಕರ್ನಾಟಕದಲ್ಲಿ ರೇಷನ್‍ಗಾಗಿ ಕಾರ್ಡ್ ಪದ್ಧತಿ. ಬಿಪಿಎಲ್, ಆಧಾರ್, ಎಪಿಎಲ್ ಈಗ ಚಾಲ್ತಿಯಲ್ಲಿದೆ. ಮುಂಚೆ ಹಸಿರು, ಹಳದಿ, ಕೆಂಪು ಇತ್ಯಾದಿಗಳಿತ್ತು. ಅಂದಾಜ್ ೨೦೦೦ನೇ ಇಸವಿ ಆರಂಭಿಸಿ ಇಲ್ಲಿಯವರೆಗೆ ಅಂದಾಜು ಪ್ರತೀ ರಾಜ್ಯದಲ್ಲಿ ಎಷ್ಟೋ ಬಾರಿ ಕಾರ್ಡ್ ಮಾಡಿಸಿ ನಂತರ ಅದನ್ನು ಹಿಂಪಡೆದು ಪುನಃ ಮಾಡಿಸಿ ಒಟ್ಟಾರೆ ಈಗಲೂ ಯಾರಿಗೂ ಯಾವ ವ್ಯವಸ್ಥೆಯೂ ಪೂರ್ಣವಾಗಿಲ್ಲ. ಆದರೆ ಕರ್ನಾಟಕದ ಅಂದಾಜು ೬ ಕೋಟಿ ೫೦ ಲಕ್ಷ ಜನಸಂಖ್ಯೆಯು ನಿಜವಾದ ಮತ್ತು ಖೋಟಾ ಕಾರ್ಡ್ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ಕಾರ್ಡ್ ಮಾಡಿಸಿ ನಂತರ ಹಿಂಪಡೆದಿರಬಹುದು. ಅದರಲ್ಲಿ ಎಪಿಎಲ್ ಕಾರ್ಡ್ ಮಾಡುವಾಗ ಅಧಿಕೃತ ವೆಚ್ಚ ೬೦/- ರೂಪಾಯಿ. ಬಿಪಿಎಲ್ ಕಾರ್ಡ್ ಮಾಡಲು ೧೭೦/- ರೂಪಾಯಿ. ಆಧಾರ್ ಕಾರ್ಡ್‍ಗೆ ೫೦/- ರೂಪಾಯಿ ಅಧಿಕೃತ ಖರ್ಚು. ಮತ್ತು ಅನಧಿಕೃತ ಖರ್ಚುಗಳನ್ನು ಬರೆಯಲು ಸಾಧ್ಯವಿಲ್ಲ. ಇತರೆ ಓಟಿಗಾಗಿ ಐಡಿ ಕಾರ್ಡ್, ಗ್ಯಾಸ್‍ಗಾಗಿ ಗ್ಯಾಸ್ ಕಾರ್ಡ್ ಇತ್ಯಾದಿ ಇತ್ಯಾದಿ ಹಲವಿವೆ. ಅವೆಲ್ಲಾ ಬಿಡಿ. ಆದರೆ ೬ಕೋಟಿ ೫೦ಲಕ್ಷ ಜನರು ಹತ್ತು ಹನ್ನೆರಡು ವರ್ಷದಿಂದ ಒಂದು ಬದ್ಧ ಕಾರ್ಡ್ ಮಾಡಿಸುವುದಕ್ಕಾಗಿ ಹೋರಾಡುತ್ತಲ್ಲೇ ಇದ್ದಾರೆ. ವರ್ಷಕ್ಕೆ ೨-೩ ಬಾರಿ ಹೊಸ ಹೊಸ ಅಪ್ಲಿಕೇಷನ್, ಫೋಟೋ, ಗ್ರೂಪ್ ಫೋಟೋ ಇತ್ಯಾದಿ ಮಾಡಿಸುತ್ತಲೇ ಇದ್ದಾರೆ. ಆದರೂ ಇಲ್ಲಿಯವರೆಗೆ ೬೦% ಜನರಿಗೂ ಅಧಿಕೃತ ಕಾರ್ಡ್ ದೊರೆತಿಲ್ಲ. ಆದರೆ ಪ್ರತೀವರ್ಷ ಕರ್ನಾಟಕದಲ್ಲಿ ಲಕ್ಷ ಲಕ್ಷ ಅನಧಿಕೃತ ಕಾರ್ಡ್ ಹಿಂಪಡೆಯುತ್ತಲೇ ಇದೆ ಸರಕಾರ. ಈ ವರ್ಷವೂ ಮೊನ್ನೆ ಮೊನ್ನೆ ೨೦ ಲಕ್ಷ ಅನಧಿಕೃತ ಕಾರ್ಡ್ ಹಿಂಪಡೆದಿದ್ದಾರೆ ಅಧಿಕಾರಿಗಳು. ಈ ಅನಧಿಕೃತ ಕಾರ್ಡ್‍ಗಳೇನೂ ಸುಮ್ಮನೆ ಹುಟ್ಟಿಲ್ಲ. ಅಲ್ಲಿ ಭ್ರಷ್ಟಾಚಾರವಿರಲೇ ಬೇಕು.


          ಅಂದಾಜು ಕೇಳಿಕೆ ಮಾತು ಅಧಿಕೃತವಲ್ಲ ಒಂದು ಡೂಪ್ಲಿಕೇಟ್ ಕಾರ್ಡ್ ಮಾಡಿಸಲು ೨ಸಾವಿರ ರೂಪಾಯಿ ಕೊಟ್ಟರೆ ಆಗುತ್ತದೆ ಎಂಬುದು. ಆ ಲೆಕ್ಕದಲ್ಲಿ ೪೦೦ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ ಎಂದರ್ಥ ಅಲ್ಲವೇ? ೨೦ಲಕ್ಷ x ೨ ಸಾವಿರ = ೪೦೦ಕೋಟಿ ರೂಪಾಯಿ. ಇದಿಷ್ಟೂ ಕಳ್ಳ ಹಣವಲ್ಲವೇ? ಇದರಲ್ಲಿ ಯಾರ್ಯಾರ ಪಾಲು ಎಷ್ಟೆಷ್ಟು? ಇಲ್ಲಿಗೆ ೧೨ ವರ್ಷದಲ್ಲಿ ಹೀಗೆ ಸುಮಾರು ಹಲವು ಕೋಟಿ ಕಾರ್ಡುಗಳು ವಶಪಡಿಸಿಕೊಳ್ಳಲಾಗಿದೆ ಎಂದರೆ ಭ್ರಷ್ಟ ಹಣದ ಮೊತ್ತವೆಷ್ಟು? ಒಬ್ಬ ಸಾಮಾನ್ಯ ಮಧ್ಯಮವರ್ಗದ ವ್ಯಕ್ತಿ ಒಂದು ಕಾರ್ಡ್‍ಗಾಗಿ ಸರಕಾರೀ ಕಛೇರಿಗಳಿಗೆ ೪-೫ ಬಾರಿ ಕೆಲಸ ಬಿಟ್ಟು ಓಡಾಡಲೇ ಬೇಕು. ದುಡಿಮೆಯ ನಷ್ಟ ಎಷ್ಟು? ಒಬ್ಬನ ಸಾಮಾನ್ಯ ದಿನಗೂಲಿ ೨೦೦ ರೂ. ಎಂದಿಟ್ಟುಕೊಂಡರೂ ೨ ಕೋಟಿಯಷ್ಟು ಕುಟುಂಬ ೫ ಬಾರಿ ಎಂದರೆ ೧೦ ಕೋಟಿ ಕೆಲಸದ ದಿನ ದುಡಿಮೆಯಿಲ್ಲದೆ ಉತ್ಪಾದನೆ ಇಲ್ಲದೆ ಕಳೆದಿದೆ. ಅಂದರೆ ೧೦ ಕೋಟಿ x ೨೦೦ = ೨೦೦೦ ಕೋಟಿ ರೂಪಾಯಿ ರಾಜ್ಯ ಬೊಕ್ಕಸಕ್ಕೆ, ಸಾಮಾನ್ಯ ಜನರಿಗೆ ನಷ್ಟವಲ್ಲವೆ? ಇದು ವರ್ಷದ ಲೆಕ್ಕ. ೧೨ ವರ್ಷಕ್ಕೆ ನೀವೇ ಗುಣಿಸಿಕೊಳ್ಳಿರಿ. ಅಂದಾಜು ೧೨ ವರ್ಷದಲ್ಲಿ ೨೪ ಸಾವಿರ ಕೋಟಿಯಷ್ಟು ಉತ್ಪಾದನಾ ಕೊರತೆ ಬರೇ ರೇಷನ್ ಕಾರ್ಡ್ ಎಂಬ ಕುತ್ಸಿತದಿಂದ ಉಂಟಾಗಿದೆ. ಅವೆಲ್ಲಾ ಸಾಮಾನ್ಯ ಜನರಿಗೆ ಅರ್ಥವಾಗುತ್ತದೆಯೆ? ಇದು ಬರೇ ಕರ್ನಾಟಕದ ಮಾತು. ಇನ್ನು ದೇಶದ ವಿಚಾರ ಲೆಕ್ಕ ಹಾಕಲು ಸಾಧ್ಯವೇ? ಚಿಂತೆಯಿಲ್ಲ.


          ಇಂತಹಾ ಅವ್ಯವಹಾರ ಭ್ರಷ್ಟಾಚಾರಯುಕ್ತವಾದ ರೇಷನ್ ವ್ಯವಸ್ಥೆ ಅಗತ್ಯವೇ? ಖಂಡಿತಾ ಇಲ್ಲ. ಅಭಾವವೂ ಇಲ್ಲ, ಬರಗಾಲವೂ ಇಲ್ಲ, ಕೊರತೆಯೂ ಇಲ್ಲ. ಆದರೆ ಅಧಿಕಾರಿಗಳಿಗೆ ಹಣ ಮಾಡುವ ಅತೀ ಸುಲಭ ಸರಳ, ಅಧಿಕೃತ ಮಾರ್ಗವಾದ್ದರಿಂದ ಇದನ್ನು ಪೋಷಿಸಿಕೊಂಡೇ ಬರುತ್ತಿದೆ ಸರಕಾರ. ಆದರೆ ದೇಶದಲ್ಲಿ ಭ್ರಷ್ಟಾಚಾರ ಬೆಳವಣಿಗೆಯಾಗಲು ಇಂತಹಾ ವ್ಯವಸ್ಥೆಯೇ ಕಾರಣ. ಆದರೆ ರೇಷನ್ ತಿಂದೇ ಬದುಕಬೇಕಾದ ದುಃಸ್ಥಿತಿ ಭಾರತೀಯರ ದುರಾದೃಷ್ಟ ಹೀನತನ, ಹೇಡಿತನ. ದುಡಿದು ಬದುಕಲಾಗದ ರಾಜನಿಂದ ರೇಷನ್ ಬೇಡಿ ತಿನ್ನಬೇಕಾದ ವೈಕಲ್ಯತೆ ತಂದು ಕೊಟ್ಟಿದೆ ಜನರಿಗೆ ಸರಕಾರ. ಆ ದೃಷ್ಟಿಯಲ್ಲಿ ಗಮನಿಸಿದರೆ ಈ ರೇಷನ್ ಪದ್ಧತಿ ಜನರಿಗೆ ಅನುಕೂಲವೆ? ಖಂಡಿತಾ ಇಲ್ಲ. ನಾಗರೀಕ ಸರಬರಾಜು ಇಲಾಖೆಯೊಂದು ತೀರಾ ಭ್ರಷ್ಟಾಚಾರದ ಕೊಂಪೆಯಾಗಿದೆ. ನಿತ್ಯವೂ ಪತ್ರಿಕೆ, ಟಿವಿಗಳಲ್ಲಿ ಆ ಸುದ್ದಿಯೇ. ಅದು ಸರಕಾರದ ಕರ್ತವ್ಯದ ನಾಟಕವಷ್ಟೇ ವಿನಃ ಕೊರತೆ ತುಂಬುವ ವಿಧಾನವಲ್ಲ. ಬೆಳೆಯುವುದಕ್ಕೆ ಸೂಕ್ತ ಪ್ರೋತ್ಸಾಹ ಕೊಟ್ಟಿಲ್ಲ. ಆಹಾರ ಕೊರತೆ ಇಲ್ಲ. ಆಹಾರ ಅಭಾವ ಇಲ್ಲದಾಗ ಈ ರೇಷನ್ ನಾಟಕ ಅಗತ್ಯವೂ ಇಲ್ಲ. ಇನ್ನು ಈ ವಿಚಾರವಾಗಿ ನಾನಾ ಇಲಾಖೆಗಳಲ್ಲಿ ಆಗುವ ಭ್ರಷ್ಟಾಚಾರವಂತೂ ಹೇಳಲಸಾಧ್ಯ. ಮುಂದಿನ ವಿಚಾರ ಬಟ್ಟೆ.


          ಮಾನವೇಯ ನೆಲೆಯಲ್ಲಿ ಗೌರವವಾಗಿ ಬದುಕಲು ಅವಕಾಶ ಒದಗಿಸಿ ಕೊಡುವಂತಾದ್ದು ಸರಕಾರದ ಕರ್ತವ್ಯ. ಸಾಮಾನ್ಯ ವರ್ಗದ ಜನ ರಾಜಕಾರಣಿಗಳ ಮರ್ಜಿ, ಅಧಿಕಾರಿಗಳ ಮರ್ಜಿ ಮತ್ತು ಆ ಪ್ರದೇಶ ಗೂಂಡಾ, ಡಕಾಯಿತ, ಭ್ರಷ್ಟರ ಮರ್ಜಿಗೆ ತಲೆಬಾಗುತ್ತಲೇ ಬದುಕಬೇಕು. ಅವನಿಗೇನು ಬಟ್ಟೆಯಿದೆ, ಬದುಕಿದೆ. ಸ್ವಾತಂತ್ರ್ಯವೆಲ್ಲಿದೆ? ಆದರೆ ಅದೇ ಕಾನೂನು. ಬದುಕಿನಲ್ಲಿ ಗೌರವವೆಂದರೇನೆಂದು ಅರಿಯದ ಜನ ತಮ್ಮ ಕ್ರೋಧವನ್ನು ಮನೆಯಲ್ಲಿ ಅಸಹಾಯಕರ ಮೇಲೆ ತೀರಿಸಿಕೊಳ್ಳುತ್ತಾರೆ. ಅದು ಅತ್ಯಾಚಾರ, ಅನಾಚಾರವೆನ್ನಿಸಿಕೊಳ್ಳುತ್ತದೆ. ಆದರೆ ಅದರ ಮೂಲವಿರುವುದು ಸಾಮಾನ್ಯ ಜನರ ಅಸಹ್ಯಕತೆಯ ಪ್ರವರ್ತನೆಯಷ್ಟೆ. ಅದಕ್ಕೆ ಬಟ್ಟೆ ಒದಗಿಸಬೇಕಾದ ಸರಕಾರವೇ ಈ ಲಾಬಿಯನ್ನು ಪೋಷಿಸುತ್ತಿದೆ. ಸಾಮಾನ್ಯ ಕೆಳ ಹಂತದ ಒಬ್ಬ ನೌಕರನೂ ತನ್ನ ವ್ಯಾಪ್ತಿಯಲ್ಲಿ ಒಂದು ಲಾಬಿ ಮಾಡುತ್ತಾನೆ, ಗೂಂಡಾಗಿರಿ ಮಾಡುತ್ತಾನೆ. ಅದನ್ನು ಕೇಳುವ ಶಕ್ತಿ ಶ್ರೀಸಾಮಾನ್ಯನಿಗಿಲ್ಲ, ಸರಕಾರಕ್ಕೂ ಇಲ್ಲ. ಅದು ಓಟಿನ ರಾಜಕಾರಣ. ಧರ್ಮ ತುಷ್ಠೀಕರಣ; ಭ್ರಷ್ಟಾಚಾರ. ಬಟ್ಟೆಯಿಲ್ಲದ ಬದುಕಿನ ಆಕ್ರೋಶವೇ ಈಗಿನ ಕಾಲದ ಅತ್ಯಾಚಾರ, ಅನಾಚಾರಗಳೆಲ್ಲ. ನೈತಿಕ ನೆಲೆಗಟ್ಟಿನಲ್ಲಿ ಪ್ರತೀ ಶ್ರೀಸಾಮಾನ್ಯನೂ ಸ್ವತಂತ್ರವಾಗಿ ಬದುಕಲು ಸ್ವಾತಂತ್ರ್ಯ ಬೇಕೆಂದು ಹೋರಾಡಿ ಬ್ರಿಟಿಷರಿಂದ ಕಸಿದುಕೊಂಡರೂ ಬ್ರಿಟಿಷರಿಗೆ ಹುಟ್ಟಿದ ಬಂಡವಾಳಶಾಹಿ ಆಡಳಿತ ಪದ್ಧತಿ ನಮ್ಮನ್ನು ಬದುಕಲು ಬಿಡದೆ ಗುಲಾಮರಂತೆ ಆಳುತ್ತಿದೆ. ಗೌರವದ ಬದುಕು ಕೊಡಲಾರದ್ದು ಸರಕಾರ ಅನ್ನಿಸಿಕೊಳ್ಳುತ್ತದೆಯೆ?


          ಇನ್ನು ವಿಧ್ಯೆ. ಇದು ಕೇವಲ ಒಂದು ಬೂಟಾಟಿಕೆ. ಜನ ಸಾಮಾನ್ಯರಿಗೆ ವಿಧ್ಯೆ ಕೊಡುತ್ತಿಲ್ಲ. ಗುಲಾಮಿತನ ಕಲಿಸುತ್ತಿದೆ. ವಿಧ್ಯೆಯೆಂದರೆ ಅದನ್ನು ಕಲಿತವನು ಸ್ವತಂತ್ರವಾಗಿ ಬದುಕಲು ಆಗಬೇಕು. ಈಗ ಕಲಿಸುವ ವಿಧ್ಯೆಯಲ್ಲಿ ಆ ಬದುಕಿಲ್ಲ. ಯಾರಾದರೂ ಕಂಪೆನಿಯವರು ಕೆಲಸ ಕೊಟ್ಟರೆ ಅಲ್ಲಿ ಗುಲಾಮತನ ಮಾಡಬೇಕು. ಇಲ್ಲವಾದರೆ ಬದುಕಿಲ್ಲ. ಅದಕ್ಕೆ ಮೋಸವೆಂಬ ಪರೀಕ್ಷೆ, ಒಂದು ಸರ್ಟಿಫಿಕೇಟ್. ಒಂದೇ ರೀತಿಯ ಕೆಲಸ ಮಾಡಲು ವಿಧ್ಯೆ ಬೇಕಿಲ್ಲ. ಅದನ್ನು ಕಲಿಯುವುದಕ್ಕೆ ಕಾಲೇಜ್ ಎಂಬ ಒಂದು ಸೋಗಲಾಡಿ ವ್ಯವಸ್ಥೆಯಲ್ಲಿ ೩-೪ ವರ್ಷದ ಅಧ್ಯಯನ ನಂತರ ಪರೀಕ್ಷೆಯೆಂಬ ನಾಟಕ. ಅಲ್ಲಿ ಬರೇ ಕಾಪಿ, ಲಂಚ, ಭ್ರಷ್ಟಾಚಾರ. ಅದರ ಮೂಲಕ ಸಿಗುವ ಅರ್ಹತಾಪತ್ರ. ಇದೆಲ್ಲಾ ಸಮಾಜಕ್ಕೆ ಮಾಡುವ ದ್ರೋಹವಲ್ಲವೆ? ನಿಜವಾದ ತಜ್ಞತೆಗೆ ಮಾಡುವ ಅಪಚಾರವಲ್ಲವೆ? ಚಿಂತಿಸಿ. ಮೊನ್ನೆ ಬೆಂಗಳೂರಿನಲ್ಲಿ ನಮ್ಮ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ. ರವಿಯವರು ಖುದ್ದಾಗಿ ಇದನ್ನು ಕಣ್ಣಾರೆ ಕಂಡರು. ಆದರೂ ಆ ಶಿಕ್ಷಣ ಸಂಸ್ಥೆ ಮಾನ್ಯತೆ ಏಕೆ ಕಳೆದುಕೊಂಡಿಲ್ಲ. ಆ ವ್ಯವಸ್ಥೆ ಇನ್ನೂ ಏಕೆ ಜಾರಿಯಲ್ಲಿದೆ? ಕಾಪಿ ಮಾಡಿ ಬರೆದು ಪಾಸಾದ ತಜ್ಞರು ದೇಶಕ್ಕೆ ಏನು ಕೊಟ್ಟಾರು? ಪುನಃ ಪರೀಕ್ಷೆ ಮಾಡಲು ಆದೇಶ ಮಾಡಿದ್ದೇಕೆ ಸಚಿವರು? ಅವರೆಲ್ಲಾ ಅನರ್ಹರೇ ಎಂಬುದು ಪ್ರತ್ಯಕ್ಷ ಪ್ರಮಾಣವಾದ ಮೇಲೂ ಮತ್ತೆ ಪುನಃ ಪರೀಕ್ಷೆ ನಾಟಕ ಬೇಕಿತ್ತೆ? ಇದು ನಮ್ಮ ದೇಶದ ನಮ್ಮ ಸರಕಾರ ಕೊಡುವ ವಿದ್ಯೆ. ಇದನ್ನು ಸರಿಯಾಗಿ ಮಾಡುತ್ತಿದೆಯೆ? ಇಲ್ಲ. ವಿಧ್ಯೆ ಒಂದು ವ್ಯಾಪಾರವಾಗಿದೆ. ಸರಕಾರ ಕಣ್ಣುಮುಚ್ಚಿ ಕುಳಿತಿದೆ. ದೇಶದ ಗತಿ ಅಧೋಗತಿ. ಇನ್ನು ರಕ್ಷಣೆಯ ವಿಚಾರ ಸರಕಾರಕ್ಕೆ ಸಾಧ್ಯವೆ?


          ಎಲ್ಲೆಲ್ಲೂ ದೊಂಬಿ, ಗಲಾಟೆ, ಕಳ್ಳತನ, ದರೋಡೆ, ವಂಚನೆ, ಮೋಸ, ಕೊಲೆ, ಸುಲಿಗೆ ನಡೆಯುತ್ತಲೇ ಇದೆ. ಘಟನೆ ನಂತರ ಸರಕಾರ ಅಪರಾಧಿಗಳನ್ನು ಹಿಡಿದು ಕಠಿಣವ್ಗಿ ಶಿಕ್ಷಿಸಲಾಗುವುದು ಎಂದು ಹೇಳಿಕೆ ಕೊಡುತ್ತಲೇ ಇದೆ. ಪರಿಣಾಮವಿಲ್ಲ. ಯಾರನ್ನೂ ರಕ್ಷಿಸಲು ಸರಕಾರಕ್ಕೆ ಆಗಿಲ್ಲ, ಆಗುತ್ತಿಲ್ಲ. ರಾಷ್ಟ್ರಪಿತ ಗಾಂಧಿಯೂ ಹತ್ಯೆಯಾದರು. ಇಬ್ಬರು ಪ್ರಧಾನಿಗಳೂ ಹತ್ಯೆಯಾದರು. ಇನ್ನು ಶ್ರೀಸಾಮಾನ್ಯನ ಪಾಡೇನು? ದಿನಾ ದರೋಡೆ, ಲೂಟಿ, ಗಲಭೆ, ದೊಂಬಿ, ಅಪಘಾತ, ದುರಂತ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಕಳ್ಳತನ, ಮೋಸ, ವಂಚನೆ ನಡೆಯುತ್ತಲೇ ಇದೆ. ಸರಕಾರ ಘಟನೆ ಘಟಿಸಿದ ಮೇಲೆ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂಬ ಹೇಳಿಕೆ ಕೊಡುತ್ತಲೇ ಬಂದಿದೆ. ಆದರೆ ಯಾವುದೂ ನಿಂತಿಲ್ಲ. ಕಾರಣ ಜನರಿಗೆ ನೈತಿಕ ಶಿಕ್ಷಣ ಇಲ್ಲದಿರುವುದು. ಜನರಲ್ಲಿ ನೈತಿಕತೆ ಇಲ್ಲದಿದ್ದರೆ ಕಾನೂನಿನಿಂದ ಆಳಲು ಸಾಧ್ಯವಿಲ್ಲ. ಅದನ್ನೂ ಸರಕಾರ ಅರಿತುಕೊಳ್ಳಬೇಕು. ಶಿಕ್ಷಣವೆಂಬ ಮೂರ್ಖತನದಿಂದ ಸಮಾಜದ ನೈತಿಕತೆ ಪೂರ್ಣ ಹಾಳಾಗಿದೆ. ಇನ್ನೂ ೫೦ ವರ್ಷ ಬೇಕು ಈ ವ್ಯವಸ್ಥೆ ಪುನಾ ರಚಿಸಲು. ಜನರಲ್ಲಿ ಎಷ್ಟು ಭ್ರಷ್ಟಾಚಾರ ಮಡುಗಟ್ಟಿದೆಯೆಂದರೆ ನೈತಿಕತೆ ಬೋಧಿಸುವ “ಭಗವದ್ಗೀತೆ” ಶಾಲೆಗಳಲ್ಲಿ ಬೋಧಿಸಬಾರದೆಂಬಲ್ಲಿಯವರೆ ಂದಿದ. ಭವದ್ಗೀತೆಯಂತಹಾ ಜೀವನ ನೈತಿಕತೆ ಬೋಧಿಸುವ ಒಂದು ಗ್ರಂಥ ಪ್ರಪಂಚದ ಯಾವ ಧರ್ಮವೂ ಮತವೂ ಬೋಧಿಸಲಾರದು. ಅದೇ ನಮ್ಮ ಜನಕ್ಕೆ ಬೇಡ. ಹಾಗಿದ್ದ ಮೇಲೆ ಈ ಸರ್ಕಾರ ಏನು ರಕ್ಷಣೆ ಕೊಟ್ಟೀತು ಸಮಾಜಕ್ಕೆ? ಇದು ಈ ದೇಶದ ಈಗಿನ ದುಸ್ಥಿತಿ. ಪ್ರಜಾಜನರ ಪಾಡು ನಾಯಿಪಾಡು. ತನ್ನ ಮುಖ್ಯ ಕರ್ತವ್ಯ ಮರೆತ ಸರಕಾರ ಮಾಡಬಾರದ್ದನ್ನೆಲ್ಲಾ ಮಾಡಿ, ಆಗಬಾರದ ರೀತಿಯ ಆಗುಹೋಗುಗಳಿಗೆ ಕಾರಣವಾಗಿದೆ. ಇದೇ ದುರಂತ.

Friday, 8 February 2013

ಮತದಾರನೇ ಚುನಾವಣೆ ಬರುತ್ತಿದೆ ಎಚ್ಚರ! ಎಚ್ಚರ! ಎಚ್ಚರ!ಮತದಾರನ ಕರ್ತವ್ಯವೇನು?
 
ಓ ಮತದಾರರೇ! ನಿಮ್ಮ ಕರ್ತವ್ಯದ ಬಗ್ಗೆ ನಿಮಗೆ ಅರಿವಿದೆಯೆ? ಚಿಂತಿಸಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಆಡಳಿತದ ಪ್ರಭಾವ, ಪರಿಣಾಮ ಅದು ಹೇಗೇ ಇರಲಿ ನಿರಂತರವಾಗಿರುತ್ತದೆ. ಹಾಗಾಗಿ ಉತ್ತಮ ಪರಿಣಾಮ ಬೀರುವ ಶುದ್ಧ, ಸ್ಪಷ್ಟ, ಶ್ವೇತ ಆಡಳಿತ ಬೇಕೆಂದರೆ ಇದು ನಿಮಗೆ ಸುವರ್ಣಾವಕಾಶ. ಈ ಸಂದರ್ಭದಲ್ಲಿ ನೀವು ಎಚ್ಚೆತ್ತು ಪ್ರಜ್ಞಾವಂತಿಕೆಯಿಂದ ವರ್ತಿಸಿದರೆ ಮುಂದೆಂದೂ ಭ್ರಷ್ಟಾಚಾರ ಇರದ ಮುಕ್ತ ಆಡಳಿತ ಕಾಣಬಹುದು. ಅದಕ್ಕಿರುವ ಒಂದೇ ದಾರಿ “ಮತದಾನ”. ವಿವೇಚನಾಯುಕ್ತ ಮತದಾನದಿಂದ ಉತ್ತಮ ಜನರನ್ನು ಆಯ್ಕೆ ಮಾಡಿ ಭದ್ರ, ಶುದ್ಧ ಆಡಳಿತ ಬರುವತ್ತ ನಿಮ್ಮ ಪ್ರಯತ್ನವಿರಲಿ.

          ನಮ್ಮ ಭಾರತದೇಶದಲ್ಲಿ ಹಲವು ಲಕ್ಷ ವರ್ಷಗಳಿಂದ ರಾಜ್ಯಾಂಗಶಾಸ್ತ್ರ ರೀತ್ಯಾ ಪ್ರಜಾ ಪ್ರತಿನಿಧಿ ಆಡಳಿತವಿತ್ತು. ಅರಸೊತ್ತಿಗೆ ಇದ್ದರೂ ಅದು ಪ್ರಜೆಗಳದ್ದೇ ಆದ ಸರಕಾರವಾಗಿತ್ತು. ಪ್ರಜೆಗಳ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ಇತ್ತು. ನಂತರ ನಮ್ಮನ್ನು ಮುಸ್ಲಿಂ ದೊರೆಗಳೂ, ಬ್ರಿಟಿಷರೂ ಆಳುವಾಗ ಅವರ ರಾಜ್ಯಾಂಗ ನೀತಿಯೇ ಬಳಸಲ್ಪಟ್ಟಿದ್ದರಿಂದ ನಮ್ಮ ಮೂಲ ರಾಜ್ಯಶಾಸ್ತ್ರ ಮೂಲೆಗುಂಪಾಯ್ತು. ಹಾಗಾಗಿ ಈಗಿನ ಬ್ರಿಟಿಷ್ ಪಾರ್ಲಿಮೆಂಟರಿ ವ್ಯವಸ್ಥೆ ನಮ್ಮ ರಾಜಕಾರಣಿಗಳ ಹಿತಾಸಕ್ತಿಗಾಗಿ ಬಳಕೆಗೆ ಬಂತು. ಆದರೆ ಇದೂ ಕೂಡ ಮೂಲ “ಪ್ರಜಾಪತಿನಿಧಿ ಸೂತ್ರ”ಕ್ಕೆ ಬದ್ಧವಾಗಿದೆ ಪ್ರಜೆಗಳು ಪ್ರಜ್ಞಾವಂತರಾದರೆ ಮಾತ್ರ. ಈ ಸಂಬಂಧಿಯಾಗಿ ಪ್ರಜಾ ಪ್ರಜ್ಞೆ ಬಗ್ಗೆ ಒಂದೆರಡು ಕಿವಿಮಾತು ಕೇಳಿರಿ.
       
      ನಮ್ಮ ಭಾರತೀಯ ಸಂವಿಧಾನ ರೀತ್ಯಾ ಕೆಲವು ಮೂಲಭೂತ ಹಕ್ಕುಗಳು ಹೊರತುಪಡಿಸಿ ಉಳಿಕೆ ಎಲ್ಲರಿಗೂ ಸಂವಿಧಾನಾತ್ಮಕ ನಿಬಂಧನೆಯೊಂದಿಗೆ ಭಾರತದ ಯಾವುದೇ ಪ್ರದೇಶದಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರತಿಯೊಬ್ಬ ಮತದಾರನೂ ಅಧಿಕಾರಿಯಾಗಿರುತ್ತಾನೆ. ಮೂಲಭೂತ ಹಕ್ಕುಗಳು ಸಂವಿಧಾನಕ್ಕೆ ಜವಾಬ್ದಾರವಲ್ಲ. ಹಾಗೇ ಮಹಾ ಚುನಾವಣೆ ಘೋಷಣೆಯಾದ ಮೇಲೆ ಮತದಾರನೇ ಪೂರ್ಣ ಪ್ರಮಾಣದ ಬಾಧ್ಯಸ್ಥನಾಗಿರುತ್ತಾನೆ. ಮತದಾನಾ ನಂತರ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಮತದಾರನಿಂದ ಚುನಾಯಿತನ್ದ ಅಭ್ಯರ್ಥಿ, ಅವನಿಂದ ಶಾಸನಗಳು, ಆ ಶಾಸನ ಆಧರಿಸಿ ಕಾರ್ಯಾಂಗ ಅಭಿವೃದ್ಧಿ ಮತ್ತು ಆಡಳಿತ. ಅದರ ಮೇಲುಸ್ತುವಾರಿ, ವಿವೇಚನೆ, ನ್ಯಾಯದಾನಗಳು ನ್ಯಾಯಾಂಗದ ಕರ್ತವ್ಯ. ಈ ನೆಲೆಯಲ್ಲಿ ಸಾರ್ವತ್ರಿಕ ಚುನಾವಣಾ ಘೋಷಣೆ ನಂತರ ಪೂರ್ಣ ಪ್ರಮಾಣದ ಪ್ರಭುವಾದ ಪ್ರಜೆಯು ತನ್ನ ಮತವನ್ನು ಅತೀಹೆಚ್ಚು ವಿವೇಚನೆಯಿಂದ, ವಿವೇಕದಿಂದ, ಪಕ್ಷಭೇದ ಮರೆತು ಚಲಾಯಿಸಬೇಕು. ಮತದಾನ ಮತದಾರನ ಹಕ್ಕು. ಅದರಲ್ಲಿ ಉದಾಸೀನ ಬೇಡ. ಅಭ್ಯರ್ಥಿಯ ಆಯ್ಕೆಯೂ ಹಕ್ಕು; ಪಕ್ಷ ಬೇಡ. ಅರ್ಹರನ್ನು ಆರಿಸಿ. ಟಿವಿ ಮತ್ತು ಇತರೆ ಮಾಧ್ಯಮ ಮತ್ತು ಅಭ್ಯರ್ಥಿಯ ಮಾತಿಗೆ ಮರುಳಾಗಬೇಡಿ. ಅವರು ಕೊಡುವ ಆಮಿಷಕ್ಕೆ ಬಲಿಯಾಗಬೇಡಿ. ನಿಮ್ಮ ೫ ವರ್ಷದ ಜೀವನ ಅವರ ಕೈಯಲ್ಲಿಡುತ್ತಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಪ್ರಾಮಾಣಿಕತೆಯಿಂದ ಎಲ್ಲರೂ ಮತದಾನ ಮಾಡಿರಿ.
          
 ಮತದಾರನ ಕರ್ತವ್ಯದ ಬಗ್ಗೆ ಈಗ ಚಿಂತಿಸೋಣ.
1.      ನಿರಪೇಕ್ಷತೆ (ವೈಯಕ್ತಿಕ ನೆಲೆ)
2.     ನಿರ್ಭಾವ (ವ್ಯಕ್ತಿಗತ)
3.     ಸತ್ಯನಿಷ್ಠೆ
4.    ನೈಜಸ್ವಾತಂತ್ರ್ಯಾನುಭೂತಿ
5.     ಸ್ವಾಭಿಮಾನ
6.     ದೇಶಭಕ್ತಿ
7.     ತ್ಯಾಗ
ಈ ಮೇಲ್ಕಂಡ ಏಳೂ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅದರಿಂದ ಮಾತ್ರಾ ಮತದಾರನೆನಿಸಿಕೊಳ್ಳುತ್ತಾನೆ. ಆದ ಕಾರಣ ಈ ಏಳೂ ಗುಣಗಳಾಧರಿಸಿ ಸ್ವಲ್ಪ ವಿವರಣೆ ಗಮನಿಸಿ.

1. ನಿರಪೇಕ್ಷತೆ :- ಮತದಾನ ಮಾಡುವ ಕಾಲದಲ್ಲಿಯೂ ಯಾವುದೇ ಆಮಿಷಕ್ಕೆ ಒಳಗಾಗದಿರುವುದು. ನಂತರವೂ ವೈಯಕ್ತಿಕಲಾಭ ಚಿಂತನೆ ಬಿಟ್ಟು ಸಾರ್ವತ್ರಿಕವಾಗಿ ನಮ್ಮ ಅಭ್ಯರ್ಥಿಯನ್ನು ಪ್ರಚೋದಿಸುವುದು. ತನ್ಮೂಲಕ ದೇಶದ ಅಭಿವೃದ್ಧಿ ಸಾಧ್ಯ.

2. ನಿರ್ಭಾವ :- ಅಭ್ಯರ್ಥಿ ಇವನು ನಮ್ಮ ಸಂಬಂಧಿ, ನಮ್ಮ ಜಾತಿ, ನಮ್ಮ ಕುಲ, ಇತ್ಯಾದಿ ಭಾವನಾತ್ಮಕತೆಯನ್ನು ಬಿಟ್ಟು ಇವನು ಆರ್ಹ  ಅಭ್ಯರ್ಥಿ ಪ್ರಜೆಗಳೆಲ್ಲರ ಪ್ರತಿನಿಧಿ, ಇವನು ನಮ್ಮ ನಾಯಕ, ಇವನು ದೇಶಕ್ಕಾಗಿ ತ್ಯಾಗ ಮಾಡಿದವನು, ದೇಶಸೇವೆ ಮಾಡಲಿ, ವೈಯಕ್ತಿಕವಾಗಿ ಸ್ವಹಿತಾಸಕ್ತಿಯಿಂದ ಇವನಿಂದ ಏನೂ ಕೇಳ್ವುದಿಲ್ಲವೆಂದಿರಿ. ಮತ್ತು ಅವನು ನಿಮ್ಮ ಪ್ರತಿನಿಧಿಯೇ ವಿನಃ ದೇವರಲ್ಲವೆಂದು ಅರಿತಿರಿ. ಗೌರವ ಕೊಡಿ. ಪೂಜಿಸಬೇಡಿ.

3. ಸತ್ಯನಿಷ್ಠೆ :- ದೇಶದ, ಸಮಾಜದ, ಸರ್ವಜನರ ಹಿತದ ದೃಷ್ಟಿಯಿಂದ ಸತ್ಯವಂತರೂ, ಪ್ರಾಮಾಣಿಕರೂ ಆಗಿರುತ್ತಾ ಸಂವಿಧಾನ ಬದ್ಧ ಕಾನೂನನ್ನು ನಿಷ್ಠೆಯಿಂದ ಪಾಲಿಸಿರಿ. ಭ್ರಷ್ಟತನ ವಿರೋಧಿಸಿ.

4. ನೈಜಸ್ವಾತಂತ್ರ್ಯಾನುಭೂತಿ :- ಪ್ರತೀಪ್ರಜೆಯ ವೈಯಕ್ತಿಕ ಜೀವನದಲ್ಲಿ ಸರಕಾರಕ್ಕೆ ಕೈಯಾಡಿಸಲು ಅಧಿಕಾರವಿಲ್ಲ. ಅಂತಹಾ ಕುರುಡು ಕಾನೂನನ್ನು ತಂದಲ್ಲಿ ವಿರೋಧಿಸಿ. ಆದಷ್ಟು ಸರಳವಾಗಿ ಸ್ವತಂತ್ರವಾಗಿ ಬದುಕಿರಿ.

5. ಸ್ವಾಭಿಮಾನಿಗಳಾಗಿರಿ :- ಯಾವುದೇ ಅಧಿಕಾರಿ, ರಾಜಕಾರಣಿಗೆ ಗುಲಾಮರಾಗಬೇಡಿ. ಅವರು ನಿಮ್ಮ ಸೇವಕರೇ ವಿನಃ ನಿಮ್ಮ ದೊರೆಗಳಲ್ಲ. ಅವರವರ ಕರ್ತವ್ಯ ನಿರ್ವಹಣೆಯಲ್ಲಿ ತಪ್ಪು ಕಂಡರೆ ಕೂಡಲೇ ಪ್ರತಿಭಟಿಸಿ.

6. ದೇಶಭಕ್ತಿ :- ಎಲ್ಲಿ ಯಾವುದೇ ರೀತಿಯ ದೇಶದ್ರೋಹಿ ಕೃತ್ಯಗಳು ಕಂಡಲ್ಲಿ ಕೂಡಲೇ ಪ್ರತಿಭಟಿಸಿ. ಸಂಬಂಧಿಸಿದ ಇಲಾಖೆಗೆ ತಿಳಿಸಿ. ಅವರು ಕ್ರಮ ತೆಗೆದುಕೊಳ್ಳದಿದ್ದರೆ ಆ ಸಂಬಂಧಿ ನ್ಯಾಯಾಂಗಕ್ಕೆ ಮಾಹಿತಿಕೊಡಿ. ಕಾನೂನು ಉಲ್ಲಂಘಿಸುವವರ ಕುಟಿಲತೆಗೆ ಸಾರ್ವಜನಿಕರೇ ಕಾವಲುಗಾರರು. ಏಕೆಂದರೆ ನೀವೇ ಪ್ರಭುಗಳು. ದೇಶಕ್ಕಾಗಿ ಸ್ವಹಿತ ಚಿಂತನೆ ಬಿಡಿರಿ. ಕಷ್ಟವೋ ಸುಖವೋ ದೇಶಹಿತ ಮುಖ್ಯ. ದೇಶದ ಕಾನೂನು, ಲಾಂಛನ, ಧ್ವಜಗಳಿಗೆ ಸದಾ ಗೌರವ ಕೊಡಿರಿ. 

7. ತ್ಯಾಗ :- ಎಲ್ಲವೂ ಬೇಕೆಂಬ ದುರಾಸೆ ಬಿಡಿರಿ. ಯಾವುದೇ ಲಂಚ ಕೊಡಬೇಡಿ. ನಮ್ಮ ಸಂಸ್ಕೃತಿ, ಭಾಷೆಗಾಗಿ ತ್ಯಾಗಿಗಳಾಗಿ. ಸರಳ, ಧರ್ಮಬದ್ಧ, ನ್ಯಾಯಬದ್ಧ, ಲೋಕೋಪಕಾರ ಜೀವನ ಅಳವಡಿಸಿಕೊಂಡು ಸಹಜವಾಗಿ ಬದುಕುವುದೇ ತ್ಯಾಗವೆನ್ನಿಸುತ್ತದೆ.

ಈ ಏಳು ಕರ್ತವ್ಯಗಳನ್ನು ಪ್ರಜೆಯು ಪಾಲಿಸಿದಲ್ಲಿ ದೇಶವು ಸಮೃದ್ಧವೂ ಸುಭಿಕ್ಷವೂ ಆಗಿರುತ್ತದೆ. ಅದನ್ನು ಈ ಬಾರಿಯ ಚುನಾವಣೆ ಪೂರ್ವದಲ್ಲಿ ಸಂಕಲ್ಪ ಮಾಡಿ ಎಲ್ಲರೂ ಮತದಾನ ಮಾಡಿರೆಂದು ಕಳಕಳಿಯ ಪ್ರಾರ್ಥನೆಯೊಂದಿಗೆ ಈ ಲೇಖನ ಮುಗಿಸುತ್ತಿದ್ದೇನೆ.

ಕಾನೂನಿನಲ್ಲೇನಿದೆ?

ಮೊದಲಾಗಿ ಭಾರತೀಯ ಸಂಸ್ಕೃತಿಯು ಪಾಪ+ಪುಣ್ಯಗಳ ನೆಲೆಗಟ್ಟಿನಲ್ಲಿ ಕೆಳಕಂಡ ೧೧ ಸಮಾಜ ಶಿಕ್ಷಣ ಪದ್ಧತಿಯೊಂದಿಗೆ ಬೆಳೆದು ನಿಂತ ಭದ್ರ ಬುನಾದಿಯ ಸಂಸ್ಕೃತಿ:

1.      ಪರೋಪಕಾರ 
2.      ದಾನ 
3.      ಧರ್ಮ 
4.      ಸದಾಚಾರ 
5.      ಸತ್ಸಂಗ 
6.      ಪುಣ್ಯಕಥಾಶ್ರವಣ 
7.      ಭಜನ 
8.      ಕೀರ್ತನ 
9.      ವಂದನ 
10.  ದಾಸ್ಯ 
11. ಶರಣಾಗತ

ಇದಕ್ಕೆ ಸ್ವರ್ಗ+ಮೋಕ್ಷಗಳೆಂಬ ದ್ವಾಪರದ ಆಮಿಷವಿತ್ತು ಸಮಾಜವನ್ನು ಒಂದು ಉತ್ತಮ ಪ್ರಾಮಾಣಿಕ ಮಾಪನದಲ್ಲಿ ನಡೆಸುತ್ತಿತ್ತು ಆಗಿನ ರಾಜ್ಯಶಾಸ್ತ್ರ. ಆಗಿನ ಕಾಲದಲ್ಲಿ ಸಜ್ಜನರಿಗೂ, ಸತ್ಯವಂತರಿಗೂ, ಪ್ರಾಮಾಣಿಕರಿಗೂ ಗೌರವವಿತ್ತು, ರಾಜಮಾನ್ಯತೆ ಇತ್ತು. ಅಂತಹಾ ನೀತಿಕಥೆಗಳೂ, ಸಚ್ಚಾರಿತ್ರ್ಯ, ಸಜ್ಜನಿಕೆಗೇ ವಿಶೇಷ ಮಾನ್ಯತೆ ಇತ್ತು ಭಾರತೀಯ ಸಂಸ್ಕೃತಿಯಲ್ಲಿ. ಆದರೆ ಎಲ್ಲಾ ಕಾಲದಲ್ಲೂ ಅದನ್ನು ವಿರೋಧಿಸುವ, ಪ್ರತಿಭಟಿಸುವ, ಚಾರ್ವಾಕ, ರಾಕ್ಷಸೀ, ವಿತಂಡಿಗಳಿರಲಿಲ್ಲ ಎಂದಲ್ಲ. ಅದನ್ನು ವಿರೋಧಿಸಿಯೇ ಬೆಳೆದದ್ದೂ ಇದೆ. ದೇಶ ಆಳಿದ್ದೂ ಇದೆ. ಆದರೆ ಧರ್ಮಶಾಸ್ತ್ರಾಧಾರಿತ ರಾಜ್ಯಶಾಸ್ತ್ರವು ಅದನ್ನೆಲ್ಲಾ ಉಪಸಂಹಾರ ಮಾಡಿ ಪುನಃ ಉತ್ತಮ ಆಡಳಿತ ಈ ದೇಶದಲ್ಲಿ ಬಂದಿದೆ. ಮುಂದೆಯೂ ಬಂದೇ ಬರುತ್ತದೆ ಖಂಡಿತ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯಾಂಗವೆಲ್ಲಿ ತಪ್ಪಿದೆ? ಚಿಂತಿಸೋಣ.

        ಮೊದಲಾಗಿ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ೧೯೪೭ರಂದು ಅಧಿಕೃತವಾಗಿ ಬಂದಾಗ ಅಂದರೆ ಬ್ರಿಟಿಷರು ಭಾರತ ಬಿಟ್ಟು ಹೋದಾಗ ನಮಗೆ ಅಂದರೆ ನಮ್ಮ ರಾಜಕೀಯ ಮುಖಂಡರಿಗೆ ಒಂದು ನಿರ್ದಿಷ್ಟ ಸ್ಪಷ್ಟ ನಿಲುವಿರಲಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ನಾವೇನು ಮಾಡಬೇಕು ಎಂಬ ಕಲ್ಪನೆಯಿರಲಿಲ್ಲ. ಅದೇ ಬ್ರಿಟಿಷರು ಮಾಡುತ್ತಿದ್ದ ಕುರುಡು ಕಾನೂನು ಭ್ರಷ್ಟ ವ್ಯವಸ್ಥೆ, ಬಂಡವಾಳಶಾಹಿ ಪ್ರವೃತ್ತಿ, ದೊಂಬಿಗಾರರಿಗೆ ಮಣೆ ಹಾಕುವುದು. ಅದನ್ನೇ ಆಶ್ರಯಿಸಿದ ಬ್ರಿಟಿಷರು ಬಿಟ್ಟು ಹೋದ ಕುರ್ಚಿಯ ಮೇಲೆ ಭಾರತೀಯರು ಕುಳಿತರಷ್ಟೆ. 

ಅದೇ ಆಡಳಿತ ನೀತಿ, ಅದೇ ಡಂಭಾಚಾರ, ಬೂಟಾಟಿಕೆ ಹಾಗೇ ನಡೆಯುತ್ತಲೇ ಬಂತು. ಬ್ರಿಟಿಷರಿಗೇನೋ ಸಮಾಜಕ್ಕೆ ವಂಚನೆ ಮಾಡಿ ಸ್ವದೇಶಕ್ಕೆ ಸಂಪತ್ತು ಸಾಗಿಸಬೇಕಿತ್ತು. ಹಾಗಾಗಿ ಆ ಆಡಳಿತ ಪದ್ಧತಿ ಅವರಿಗೆ ಬೇಕಿತ್ತು. ಭಾರತೀಯರಿಗೆ ಬೇಕಿತ್ತೇ? ಇಲ್ಲ. ಆದರೆ ಮೂಲ ಮೌಲಿಕ ಆಡಳಿತ ಪದ್ಧತಿ ತರಲೇ ಇಲ್ಲ. ಮಕ್ಕಳಿಗೆ ನೈತಿಕ ಶಿಕ್ಷಣ ಇಲ್ಲವೇ ಇಲ್ಲ. ದೇಶದಲ್ಲಿ ಹಣ ಮಾಡುವುದು ಒಂದೇ ಸರ್ವಶ್ರೇಷ್ಠ ಗುರಿ ಎಂದು ಮಕ್ಕಳಲ್ಲಿ ಬಿಂಬಿಸಲ್ಪಟ್ಟಿತು. ನ್ಯಾಯ, ನೀತಿ, ಧರ್ಮ ದೂರವಾಯ್ತು. ಎಲ್ಲರನ್ನೂ, ಎಲ್ಲವನ್ನೂ ಕಾನೂನಿನ ಮೂಲಕ ಆಳಬಹುದೆಂಬ ಬ್ರಿಟಿಷರ ಕ್ಷುಲ್ಲಕ ಜ್ಞಾನವೇ ನಮಗೆ ವೇದಜ್ಞಾನಕ್ಕಿಂತ ಮಿಗಿಲಾಯ್ತು. ಆಳಲಾರದೇ ಸರಕಾರ ಸೋತು ಸುಣ್ಣವಾಗಿದೆ ಈಗ.

ಕಾನೂನು ಧರ್ಮ ಮೂಲದ ತಳಹದಿಯಲ್ಲಿಲ್ಲದಿದ್ದಲ್ಲಿ ಆ ಕಾನೂನು ಏನೂ ಮಾಡಲಾರದು, ಮಾಡಲಾಗದು. ಮೊದಲಾಗಿ ತಿಳಿಯಿರಿ ಕಾನೂನಿಗೆ ಶಕ್ತಿ ಬರುವುದು ಕಾರ್ಯಾಂಗ ಬಲದಿಂದಲ್ಲ, ನ್ಯಾಯಾಂಗ ಬಲದಿಂದಲ್ಲ. ಜನರಲ್ಲಿರುವ ನೈತಿಕತೆಯಿಂದ ಎಂಬ ಸತ್ಯ ಸುಸ್ಪಷ್ಟ. ಕಾನೂನು ಉಲ್ಲಂಘಿಸಿಯೇ ಬದುಕು ರೂಪಿಸಿಕೊಳ್ಳುವ ಇರಾದೆ ಹೊಂದಿದ ಪ್ರಜೆಗಳು ಇರುವಲ್ಲಿಯವರೆಗೆ ಕಾನೂನು ವ್ಯರ್ಥ. ಪ್ರಜೆಗಳಲ್ಲಿ ಶುದ್ಧ, ಸಾತ್ವಿಕ, ನೈತಿಕತೆ ಇರಬೇಕು. ಇಲ್ಲವಾದಲ್ಲಿ ಕಾನೂನು ಏನೂ ಮಾಡಲಾರದು. ಹಿಂದೆಯೂ ಧರ್ಮಶಾಸ್ತ್ರಗಳು, ರಾಜ್ಯಶಾಸ್ತ್ರಗಳು ನೈತಿಕ ನೆಲೆಗಟ್ಟಿನಲ್ಲಿ ರೂಪಿಸಿದ್ದ ಕಾನೂನು ಉಲ್ಲಂಘನೆಯಾಗಿಲ್ಲವೆಂದಲ್ಲ ಆಗಿದೆ. ಹಾಗಾಗಿಯೇ ಹಲವು ಮತ ಸಂಸ್ಕೃತಿ ಹುಟ್ಟಿಕೊಂಡವು. ಆದರೆ ಅಲ್ಲಿಯೂ ನೈತಿಕ ಬಲವಿತ್ತು. ಆದರೆ ಈಗ ದೇಶದಲ್ಲಿ ನೈತಿಕ ಬಲವೇ ಕಾಣುವುದಿಲ್ಲ. ಸತ್ಯವಚನ ಎಂಬುದರ ಮಹತ್ವವೇ ಚಾಲ್ತಿಯಲ್ಲಿಲ್ಲವೀಗ. ಹಾಗಾಗಿ ಕಾನೂನು ಅಸಹಾಯಕ.

ಈಗ ಕಾನೂನಿನ ವಂಚನೆ, ಮೋಸ, ಸುಳ್ಳು, ಭ್ರಷ್ಟಾಚಾರವೇ ತಾಂಡವವಾಡುತ್ತಿದೆ. ಆಡಳಿತ, ಕಾನೂನು ನಿಸ್ಸಹಾಯಕವಾಗಿದೆ. ಕಾರಣ ಕಾನೂನಿನಲ್ಲಿರುವ ವಿದೇಶೀ ಪ್ರಭಾವ. ಅಲ್ಲಿ ಸ್ವದೇಶೀಯ ಜ್ಞಾನವಿಲ್ಲ. ರಾಜ್ಯಶಾಸ್ತ್ರದ ಆಳವಾದ ಅಧ್ಯಯನವಿಲ್ಲ. ಹಾಗಾಗಿ ವ್ಯರ್ಥವಾಗುತ್ತಿದೆ. ನಮ್ಮ ದೇಶೀಯ ಸಂಸ್ಕೃತಿಯು ಮತ್ತೂ ಮತ್ತೂ ತುಳಿಯಲ್ಪಡುತ್ತಿದೆ. ಪದೇ ಪದೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನಕ್ಕೆ ಕೆಟ್ಟ ಅವಮಾನ ಮಾಡುತ್ತಿದ್ದಾರೆ ಶಾಸಕಾಂಗ ಭಾಗದವರು. ಇದೋ ತಿಳಿಯಿರಿ ಕಾನೂನಿನಲ್ಲೇನಿಲ್ಲ ಆದರೆ ಅದು ಪ್ರಜೆಗಳಲ್ಲಿದೆ - ನೈತಿಕವಾಗಿ ನಡೆದರೆ ಮಾತ್ರಾ ಇದು ಸಾರ್ವಕಾಲಿಕ ಸತ್ಯ.