Saturday, 16 March 2013

ಕಂಬಳ - ವಾಜಪೇಯ, ಮೂಲ್ಕಿಯ ಅರಸೊತ್ತಿಗೆ, ನಾಗಾರಾಧನೆ

ಶ್ರೀ ಕ್ಷೇತ್ರ ಮೂಲಿಕಾ ವನದುರ್ಗೆಯ ನೆಲೆವೀಡಿನಲ್ಲಿ ನಡೆದ ಒಂದು ಮಾಹಾಯಾಗ ಈ ಕಥಾನಕಕ್ಕೆ ಹೊಂದಿಕೊಳ್ಳುತ್ತದೆ. ಅಲ್ಲಿ ನಡೆದ ಅತೀ ಶ್ರೇಷ್ಠ ಯಾಗಗಳಲ್ಲೊಂದಾದ “ವಾಜಪೇಯ” ಯಾಗದಲ್ಲಿ ಯಜಮಾನತ್ವ ವಹಿಸಿ, ನಿರ್ವಹಿಸಿ ಮುಂದೆ ಇದೇ ಅರಸುಮನೆತನ ಅಸ್ತಿತ್ವಕ್ಕೆ ಬಂತು ಎಂದು ಕಂಡುಬರುತ್ತದೆ. ಹಾಗಿದ್ದ ಮೇಲೆ ಯಾಗದ ಸ್ಥೂಲ ಪರಿಚಯವೂ ಕೂಡ ವಿವರಿಸುವುದು ಸೂಕ್ತವಲ್ಲವೇ? ಹಾಗಾಗಿ ಮೊದಲಾಗಿ ವಾಜಪೇಯ ವಿವರಣೆ ನೀಡುತ್ತೇನೆ ಗಮನಿಸಿ.

ವಾಜಪೇಯ ಎಂದರೆ ಮನುಷ್ಯನಲ್ಲಿರುವ ವಿಕೃತತೆಯನ್ನು ನಿವಾರಿಸುವ, ಶುದ್ಧ ತಾದಾತ್ಮ್ಯ ಭಾವವನ್ನು ಸಂಸ್ಕರಿಸುವ, ಪೂರಕ ಸಹಕಾರ ಸಿದ್ಧಾಂತವನ್ನು ರೂಪಿಸುವ ಮೂಲಿಕಾದಿಗಳಿಂದ ಮಾಡುವ ಒಂದು ಯಾಗಪ್ರಕ್ರಿಯೆ. ಕಡಿಮೆಯೆಂದರೆ ಇಲ್ಲಿ ೧೦೦೦ ದಿನ ಪರ್ಯಂತ ಬರೇ ಯಾಗವೇ ನಡೆದಿದೆಯೆಂದು ಕಂಡುಬರುತ್ತದೆ. ಈ ಯಾಗವಿಧಿಯಲ್ಲಿ ಮೊದಲಾಗಿ ಮಿಶ್ರಮಣ್ಣಿನ ಮುಖಜಭೂಮಿ ಬೇಕು. ಮಿಶ್ರಮಣ್ಣು ಎಂದರೆ ಹಲವಾರು ಕಡೆಯಿಂದ ನದಿಯಲ್ಲಿ ತೊಳೆದು ಬಂದು ಎಲ್ಲಾ ಮಣ್ಣಿನ ಗುಣವೂ ಬೆರೆತು ಮೆಕ್ಕಲುಮಣ್ಣಾಗಿ ಕೂಡಿ ನದಿಯ ಇಕ್ಕೆಲಗಳಲ್ಲಿ ಸಮುದ್ರ ಸೇರುವೆಡೆ ಸಂಗ್ರಹವಾಗುವ ಮಣ್ಣು. ಅಂತಹಾ ಮಣ್ಣಿನಲ್ಲಿ ಮಾತ್ರ ಈ ವಾಜಪೇಯಕ್ಕೆ ಬೇಕಾದ ಮೂಲಿಕೆ ಬೆಳೆಯಬಹುದು. ಮೂಲ್ಕಿಯ ಪರಿಸರ ಹಾಗೇ ಇದೆ ಗಮನಿಸಿ. ಈ ಮಣ್ಣಿನಲ್ಲಿ ಮೂಲಿಕಾಧಿಪತಿಯಾದ ಪಶುಪತಿಯನ್ನು ಪ್ರತಿಷ್ಠಾಪಿಸಿ ಬೀಜವಾಪನ ಮಾಡಲಾಗುತ್ತದೆ. ನಂತರ ಅದರ ಪೋಷಣೆಗಾಗಿ ವಿಷ್ಣು ಸ್ಥಾಪನೆ ಅಭಿಮುಖವಾಗಿ ಮಾಡಿ ಮಧ್ಯಭಾಗದಲ್ಲಿ ನೆಡಲ್ಪಡುತ್ತವೆ. ಹಾಗೇ ನೆಟ್ಟ ಮೂಲಿಕೆಗಳು ಬೆಳೆದು ಯಾಗಕ್ಕೆ ಬೇಕಾಗುವಷ್ಟು ಸಿದ್ಧವಾದ ಮೇಲೆ ಅದನ್ನು ಸಂಸ್ಕರಿಸುವ, ಶುದ್ಧಮಾಡುವ, ಪುಟಕೊಡುವ ವಿಧಿಯಂತೆ ಸಿದ್ಧಪಡಿಸಿಕೊಂಡು ಶಿವವಿಷ್ಣುವಿನ ಮಧ್ಯಭಾಗದಲ್ಲಿ ಯಾಗಕುಂಡ ನಿರ್ಮಿಸಿಕೊಂಡು ಸತತವಾಗಿ ಅಗ್ನಿಮುಖೇನ ಹವಿರ್ಭಾಗ ಸಲ್ಲಿಸುತ್ತಾ ಪಶುಪತಿಯನ್ನೂ, ನಾರಾಯಣನನ್ನೂ ಕುರಿತು ಯಾಗ ನಡೆಯುತ್ತದೆ. ಜೊತೆಗೆ ಮೂಲಿಕಾ ಸಂಸ್ಕರಣ, ಮನಸ್ಸಂಸ್ಕರಣ, ಪ್ರಕೃತಿಸಂಸ್ಕರಣಗಳೂ ನಡೆದು ಯಾಗ ಪೂರ್ಣಾಹುತಿಯಾಗುತ್ತದೆ. ಅದರ ಯಾಗಶೇಷವು ಔಷಧೀ ರೂಪದಲ್ಲಿ ಸಮಾಜದಲ್ಲಿ ಹಂಚಿ ವಿಕೃತಮನಸ್ಸಿನ ತಾಕಲಾಟವನ್ನು ಸರಿಪಡಿಸುವುದರ ಮುಖೇನ ಮುಂದೆ ಸಮಾಜದಲ್ಲಿ ವಿಕೃತತೆ ಅಂಕುರವಾಗದಂತೆ ವ್ಯವಸ್ತೆಗೊಳಿಸಲಾಗುತ್ತದೆ. ಅದರ ಪರಂಪರಾಗತ ಕಾವಲಿನ ವ್ಯವಸ್ಥೆಯೇ ಅರಸೊತ್ತಿಗೆ ಅಥವಾ ಯಜಮಾನತ್ವ.

ಈ ಯಾಗದಲ್ಲಿ ಋತ್ವಿಜರಾಗಿಯೂ, ಯಾಜಿಗಳಾಗಿಯೂ, ದೀಕ್ಷಿತರಾಗಿಯೂ, ಅಧ್ವರ್ಯುಗಳಾಗಿಯೂ, ಬ್ರಹ್ಮ, ನಿರ್ದೇಶಕರಾಗಿಯೂ ಹಲವಾರು ಮಂದಿ ವ್ಯವಹರಿಸಿರುತ್ತಾರೆ. ಆದರೆ ಯಜಮಾನನಾಗಿ ವ್ಯವಹರಿಸಿದವರು ಮಾತ್ರಾ ಯಾಗ ಪೂರ್ಣಾಹುತಿಯ ನಂತರ ದೀಕ್ಷಾಸ್ನಾನಪೂರ್ವಕ ದೀಕ್ಷಾಬದ್ಧನಾಗಿ ಮುಂದೆ “ಪಾಲಕ” ಬಿರುದಾಂಕಿತನಾಗಿ ವಂಶಪರಂಪರೆಯಿಂದಲೋ ಅಥವಾ ಆಯ್ಕೆಯ ಪದ್ಧತಿಯಿಂದಲೋ ಆ ವ್ಯವಸ್ಥೆಯನ್ನು ಕಾಯ್ದುಕೊಂಡು ಬರುವ ವ್ಯವಸ್ಥೆಗೆ ಬದ್ಧನಾಗುತ್ತಾನೆ. ಇದೇ ಮೂಲ್ಕಿಯ ಅರಸೊತ್ತಿಗೆ. ಆ ಯಾಗದಲ್ಲಿ ಯಜಮಾನತ್ವ ವಹಿಸಿ ನಿರ್ವಹಿಸಿದ ಪುಣ್ಯಪುರುಷನ ಪೀಳಿಗೆ ಅಲ್ಲಿಂದ ಇಲ್ಲಿಯವರೆಗೂ ನಡೆದು ಬಂದಿರುತ್ತದೆ. ಮೂಲಪುರುಷನಾದ ಧನಪಾಲರಿಂದ ಆರಂಭಿಸಿಕೊಂಡುಬಂದ ಈ ವಾಜಪೇಯ ವ್ಯವಸ್ಥೆ ಇಂದಿಗೂ ಪಾಲಿಸಿಕೊಂಡು ಬರುತ್ತಿದೆ. ಅಲ್ಲಿಂದ ಇಲ್ಲಿಯವರೆಗೂ ಆ ಮೂಲಪುರುಷನ ಆತ್ಮಶಕ್ತಿಯು ಈಗಿನ ಪಟ್ಟದರಸರ ಕೈಯಲ್ಲಿ ಮುದ್ರೆಯುಂಗುರ ರೂಪದಲ್ಲಿ ಸ್ಥಿರವಾಗಿ ನೆಲೆಸಿರುತ್ತದೆ. 

ಈಗ ಇದರ ಹಿನ್ನಲೆಯಲ್ಲಿ ಕಂಬಳಕ್ಕೆ ಬರೋಣ. ಮಾನವ ಮನಸ್ಸಿನ ಸ್ಥೂಲರೂಪವನ್ನು ನಾಡುನುಡಿಯಲ್ಲಿ ಗಮನಿಸಿದರೆ ವಿಕೃತಮನಸ್ಸನ್ನು, ಅವಿವೇಕಿಯನ್ನು ಕೋಣವೆಂದು ಕರೆಯುತ್ತಾರೆ. ಸಾತ್ವಿಕ ಶುದ್ಧ ಮನಸ್ಸಿನವನನ್ನು ಹಸುವೆಂದು ಕರೆಯುತ್ತಾರೆ. ಚಂಚಲ ಮನಸ್ಸಿಗೆ ಕುದುರೆಯೆಂದೂ, ಮನೋವಿಹಾರಕ್ಕೆ ಹಕ್ಕಿಯೆಂದೂ, ಮನೋ ವ್ಯವಹಾರರೂಪವನ್ನು ನಾಗವೆಂದೂ, ಅದನ್ನು ಯುಗ್ಮ ಚಿಹ್ನೆ ನಾಗಮೈಥುನವೆಂದೂ ಕರೆಯುತ್ತಾರೆ. ಮನಸ್ಸು ೨ ವಿಧ. ಒಂದು ಬಹಿರ್ಮನ, ಇನ್ನೊಂದು ಅಂತರ್ಮನ. ಇವೆರಡನ್ನೂ ಸಂಯೋಜಿಸಿ ೨ ನಾಗನ ರೂಪದಲ್ಲಿ ನಮ್ಮ ಪೂರ್ವೀಕರು ನಾಗಾರಾಧನೆಯಲ್ಲಿ ವಿವರಿಸಿದ್ದಾರೆ. ಋಗ್ವೇದದಲ್ಲಿ ಮನೋ ವಿಶ್ಲೇಷಣೆ ತುಂಬಾ ಅಗಾಧವಾಗಿ ಸಿಗುತ್ತದೆ. ಋಗ್ವೇದ ಅಷ್ಟಕ-೫, ಅಧ್ಯಾಯ-೭ರ ಕೆಲ ಸೂಕ್ತಗಳಲ್ಲಿ ಮಂಡೂಕ ಮಹರ್ಷಿಗಳು ಯಾಗಪ್ರಕ್ರಿಯಾ ನಿರ್ಣಯ ಮಾಡುವಾಗ ಮನುಷ್ಯನ ಮನಸ್ಸು ಹೇಗೆ ಪ್ರವರ್ತಿಸುತ್ತದೆ ಎಂದು ವಿವರಿಸಿದ್ದಾರೆ. ಇನ್ನು ಭರದ್ವಾಜ ಮಹರ್ಷಿಗಳು ಮನಃಶಾಸ್ತ್ರ ರೀತ್ಯಾ ವಿವರಿಸುತ್ತಾ, ಮನಸ್ಸಿಗೂ ನಾಗನಿಗೂ ಇರುವ ಸಂಬಂಧವನ್ನು ಹೇಳುತ್ತಾ ಅಷ್ಟಕ-೫, ಅಧ್ಯಾಯ-೧, ಸೂಕ್ತ-೭೫ ರಲ್ಲಿ ವಿವರಿಸಿದ್ದಾರೆ ಗಮನಿಸಿ. ಈಗ ನಾಗಾರಾಧನೆಯ ಮಹತ್ವಪೂರ್ಣ ಪೂಜೆಯಾದ ಆಶ್ಲೇಷಾಬಲಿ ಪ್ರಕ್ರಿಯೆಯಲ್ಲ್ ಈ ತಂತ್ರಗಳ ಬಳಕೆಯಾಗುತ್ತಿದೆ. ಹೀಗೆ ಮನಸ್ಸಿಗೂ, ನಾಗನಿಗೂ ಇರುವ ಸಂಬಂಧ. ಅಥವಾ ನಾಗ ವಿಶ್ಲೇಷಣೆಯ ರೂಪದಲ್ಲಿ ಮನೋ ವಿಶ್ಲೇಷಣೆ ವೇದಕಾಲದಿಂದಲೂ ಬೇಕಾದಷ್ಟಾಗಿದೆ. ಹಾಗಾಗಿ ವಿಕೃತಿ-ಪ್ರಕೃತಿಗಳನ್ನು ಸುಕೃತದತ್ತ ಕೊಂಡೊಯ್ಯುವ ಪ್ರಯತ್ನ ಈ ಯಾಗಮುಖದಲ್ಲಿ ಕಂಡುಬರುತ್ತದೆ. ಮತ್ತೆ ಮುಂದೆ ಅದು ಯಥಾವತ್ತಾಗಿ ಉಳಿದು ಬೆಳೆಸಿಕೊಂಡು ಬರಲು ಅದಕ್ಕೆ ಅರಸೊತ್ತಿಗೆ ಬೇಕು. ಹಾಗೇ ಮನಸ್ಸಿನ ವಿಕೃತಿಯನ್ನು ದಂಡಿಸುವ ಶಕ್ತಿ, ದಾರ್ಷ್ಟತೆಯೂ ಈ ಯಜಮಾನನಲ್ಲಿ ಇರಬೇಕು. ಅದಕ್ಕಾಗಿ ಅರಸ ಬೇಕೇಬೇಕು.

ಕೋಣರೂಪದ ವಿಕೃತ ಮನಸ್ಸನ್ನು ದಂಡಿಸುವ ವಿಧಾನವೇ ಇಲ್ಲಿ ಚಾಲ್ತಿಯಲ್ಲಿರುವ ಕಂಬಳವಾಗಿರುತ್ತದೆ. ಈಗ ಕ್ರೀಡಾರೂಪದಲ್ಲಿ ಮಲೆತುನಿಂತ ಕೋಣವನ್ನು ದಂಡಿಸುವ ಮುಖೇನ ಕಂಬಳ ನಡೆಯುತ್ತಿದ್ದರೂ ಹಿಂದೆ ಅದು ಅಂತಹಾ ಕೋಣನಂತಹಾ ಮನುಷ್ಯನನ್ನು ಹದ್ದುಬಸ್ತಿನಲ್ಲಿಡುವ ವ್ಯವಸ್ಥೆಯಾಗಿತ್ತು. ಅದಕ್ಕೆ ಅಲ್ಲಿ ಕಂಬಳ ಬೇಕಿತ್ತು. ಅಂದರೆ ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ ಕಂಬಳವಾಗಿತ್ತು, ಈಗ ಅರ್ಥವಾಯ್ತೇ?

ಕಂಬಳವೆಂದರೆ ಕೋಣನಂತಹಾ ದುರ್ಗುಣಭರಿತವಾದ ಮಲೆತಮನಸ್ಸನ್ನು ಹಿಡಿತದಲ್ಲಿಟ್ಟು ದಂಡಿಸಿ ಸರಿದಾರಿಗೆ ತರುವ ವ್ಯವಸ್ಥೆಯಾಗಿತ್ತು. ಹಾಗಾಗಿಯೇ ಒಂದು ಗಾದೆ ಅಥವಾ ವಾಡಿಕೆ ಆ ಪ್ರದೇಶದಲ್ಲಿ ಜನಜನಿತವಾಗಿದೆ. ಏನೆಂದರೆ ಒಂದು ಕಂಬಳ ನೋಡಿದರೆ ಹತ್ತು ರಂಗಪೂಜೆ ನೋಡಿ ಪರಿಹರಿಸಿಕೊಳ್ಳಬೇಕು ಎನ್ನುವ ಮಾತು. ಏಕೆಂದರೆ ಒಂದು ವ್ಯಕ್ತಿಗೆ ದಂಡನೆ ವಿಧಿಸುವುದನ್ನು ನೋಡುವುದೂ ಅಪರಾಧವೇ! ಇಲ್ಲಿ ಸಾಮೂಹಿಕ ನೆಲೆಯಲ್ಲಿ ವ್ಯಕ್ತಿರೂಪದ ಕೋಣಗಳ ಮಲೆತ ಮನಸ್ಸಿನ ದಂಡನೆಯಾಗಿರುತ್ತದೆ. ಹಾಗೇ ನಾಗಸಂಬಂಧವೂ ಕೂಡ ಗಮನಿಸಿ. ರಾಜಾ ಜನಮೇಜಯನು ದುಷ್ಟಸರ್ಪಗಳ ಮೇಲೆ ಕ್ರುದ್ಧನಾಗಿ ಸರ್ಪಯಾಗವನ್ನು ಸಂಯೋಜಿಸಿದ. ಎಲ್ಲಾ ನಾಗಗಳನ್ನೂ ಅಗ್ನಿಯಲ್ಲಿ ಹೋಮಿಸುತ್ತಾ ಬಂದ. ಆಗ ಚಿಂತಿತರಾದ ಜೀವವೈವಿಧ್ಯ ಚಿಂತಕರು ಜನಮೇಜಯನನ್ನು ಬೇಡಿ ೮ ಕುಲದ ನಾಗಗಳನ್ನು ಉಳಿಸಿದರು ಎಂದು ಓದುತ್ತೇವೆ. ಹಾಗೇ ಉಳಿದ ೮ ಕುಲಗಳಿಗೂ ಒಂದು ನಿಬಂಧನೆ ಹಾಕಿ ಒಬ್ಬ ನಿರ್ದೇಶಕನನ್ನು ನೇಮಿಸಿ ಅವುಗಳ ಪ್ರವರ್ತನೆಯನ್ನು ನಿರ್ಬಂಧಿಸಿದ ವ್ಯವಸ್ಥೆಯೇ ಕಂಬಳವಿರಬೇಕು. ಹಾಗಾಗಿ ಕಂಬಳವೆಂಬ ಮನೋರೂಪದ ನಾಗನ ಅಧೀನದಲ್ಲಿ ಇದ್ದು ಸರ್ಪರೂಪದ ೮ ಕುಲದ ನಾಗಗಳು ಪ್ರವರ್ತಿಸಬೇಕೆಂಬ ಅಭಿಪ್ರಾಯ ಇದಾಗಿರಬಹುದಲ್ಲವೇ? ಹಾಗಾಗಿಯೇ ಕಂಬಳಾದಿ ಸರ್ಪಾದ್ಯಷ್ಟಕುಲ ನಾಗ, ನವನಾಗ ಎಂದರೆ ಕಂಬಳ ಸೇರಿಯಲ್ಲವೇ? ಚಿಂತಿಸಿ.

ಹೀಗೆ ಕಂಬಳದ ಹಿನ್ನಲೆಯಲ್ಲಿ ಚಿಂತಿಸುತ್ತಾ ಹೋದಾಗ ಈ ಅರಸುಮನೆತನವೆಂದರೆ ಯಾವ ಕಂಬಳ ಎಂಬ ನಾಮಾಂಕಿತ ವ್ಯವಸ್ಥೆ ಇದೆಯೋ ಅದಾಗಿರುತ್ತದೆ. ಈ ಅರಸು ಮನೆತನವೇ ಕಂಬಳ. ಅಲ್ಲಿನ ಪಟ್ಟದರಸರೇ ನಿರ್ದೇಶಕರು. ಅಲ್ಲಿನ ಸುತ್ತಮುತ್ತಲಿನ ಜನರ ದೈಹಿಕ ಅಪರಾಧವಲ್ಲ, ಮಾನಸಿಕ ಅಪರಾಧವನ್ನೂ ಕೂಡ ನಿರ್ಬಂಧಿಸಿ, ದಂಡಿಸಿ, ಶಿಕ್ಷಿಸುವ ಅಧಿಕಾರ ಹೊಂದಿದ ಮನೆತನವೆಂದು ಅರ್ಥವಾಗುತ್ತದೆ.

ಇಲ್ಲಿಗೆ ಮೂಲಿಕಾ ಪುರವಾಸಿ ವನದುರ್ಗಾ ದೇವತೆಯಲ್ಲಿ ಸೇವಾಧುರಂಧರರಾಗಿ ಸೇವೆ ಸಲ್ಲಿಸುತ್ತಿದ್ದರೂ ಆ ಸ್ಥಳದ, ಕ್ಷೇತ್ರದ ನಿರ್ದೇಶಕ ಸ್ಥಾನದಲ್ಲಿಯೂ ಅವರೇ ವ್ಯವಹರಿಸುತ್ತಿದ್ದರು ಎಂಬಲ್ಲಿಗೆ ಒಂದು ವ್ಯವಸ್ಥೆಯ ಕುರುಹು. ಸುತ್ತಮುತ್ತಲಿನ ಜನರಲ್ಲಿ ಆಡಳಿತ ಭದ್ರತೆಯೊದಗಿಸುತ್ತಾ ರಾಜದಂಡವನ್ನು ನಿರ್ವಹಿಸಿದ ಎರಡನೆಯ ವ್ಯವಸ್ಥೆಯ ಕುರುಹು. ಹಾಗೂ ವಿಕೃತ ಮನಸ್ಸಿನ ಜನರ ಮನಸ್ಸಿಗೆ ಸಂಸ್ಕಾರ ಕೊಡುತ್ತಾ ಉತ್ತಮ ವಿಧ್ಯಾಬುದ್ಧಿ, ಪ್ರವರ್ತನೆ ಕೆಲಸ ನಿರ್ವಹಣೆಯ ಮೂರನೆಯ ವ್ಯವಸ್ಥೆಯ ಕುರುಹು. ಹಾಗೂ ನಾಲ್ಕನೆಯದಾಗಿ ಆತ್ಮಪಟ್ಟ ನಿರ್ವಹಿಸುತ್ತಾ ನಿಸ್ತಂತುವಾಗಿ ನೆಲೆನಿಂತು ಆ ಪ್ರದೇಶದ ಅಭಿವೃದ್ಧಿಗೆ ಪೂರಕವಾದ ಮಹಾಶಕ್ತಿಯ ರೂಪದ ಅರಸೊತ್ತಿಗೆ ಅಂದರೆ ಪದ್ಮಾವತಿ ದೇವಿ. ಇದು ನಾಲ್ಕನೆಯ ಕುರುಹು. ಈ ನಾಲ್ಕು ಮುಖ್ಯ ಕುರುಹುಗಳ ಆಧಾರದಲ್ಲಿ ಮುಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

- ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ
ಅಘಸ್ತ್ಯಾಶ್ರಮ ಗೋಶಾಲೆ, ಬಂದ್ಯೋಡು
ಇವರ ಆಯ್ದ ಲೇಖನ

No comments:

Post a Comment

Note: only a member of this blog may post a comment.