Sunday, 31 March 2013

ವೇದದಲ್ಲಿ ಯಾವುದೇ ಪಶು ಹಿಂಸೆ, ಹತ್ಯೆ, ಭಕ್ಷಣೆ ಇಲ್ಲಕೆಳಗೆ ಮಂಡಿಸಿರುವ ವಿಷಯವು ಪೂರ್ಣವಾಗಿ ಹಾಗು ನಿಷ್ಪಕ್ಷಪಾತವಾಗಿ ವೇದಗಳು, ಅದರ ಅನ್ವಯ, ವ್ಯಾಕರಣ, ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ವೇದ ಮಂತ್ರಗಳ ಹಾಗು ಅದರ ಸರಿಯಾದ ಉದ್ದೇಶವನ್ನು ಆಧರಿಸಿದ್ದಾಗಿದೆ. ಆದ್ದರಿಂದ ಇದು ಮ್ಯಾಕ್ಸ್ ಮುಲ್ಲರ್, ಗ್ರಿಫ಼ತ್, ವಿಲ್ಸನ್, ವಿಲಿಯಂಸ್ ಮತ್ತು ಇನ್ನಿತರ ಭಾರತೀಯ ಅನ್ವೇಷಕರ ಅಭಿಪ್ರಾಯವನ್ನು ಕುರುಡಾಗಿ ಪ್ರತಿಬಿಂಬಿಸುತ್ತಿಲ್ಲ. ಇವರ ಅನ್ವೇಷಣೆಯು ಪಾಶ್ಚಾತ್ಯ ದೇಶದಲ್ಲಿ ಪ್ರಸಿದ್ಧಿ ಹೊಂದಿದ್ದರೂ ನಮಗೆ ಹಲವಾರು ಬಲವಾದ ಕಾರಣಗಳಿಂದ ಅವರ ಅನ್ವೇಷಣೆಯು ಕಪೋಲಕಲ್ಪಿತ ಹಾಗು ನ್ಯಾಯಯುತವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಹೆಚ್ಚಿನ ವಿಷಯವನ್ನು ವರದಿಯಲ್ಲಿ ವಿಮರ್ಷಿಸುತ್ತಿದ್ದೇವೆ.

ವೇದಗಳುಪ್ರಪಂಚದ ಮೊದಲನೆಯ ಜ್ಞಾನದ ಪುಸ್ತಕ. ನಮ್ಮ ಮೊದಲನೆ ಭಾಗವಾದ ವೇದಗಳಿಗೆ ಸಂಬಂಧಿಸಿದಂತ ತಪ್ಪು ಗ್ರಹಿಕೆಗಳ ವಿಮರ್ಷೆಗೆ ನಿಮಗೆ ಸ್ವಾಗತ.

ಭಾರತೀಯರ ಪವಿತ್ರ ಗ್ರಂಥವಾದ ವೇದವು ಶತಕಗಳಿಂದ ಹಲವಾರು ರೀತಿಯಲ್ಲಿ ಹಲವಾರು ಜನರಿಂದ ನಿಂದನೆಗೆ ಗುರಿಯಾಗಿದೆ. ಇವರ ತಪ್ಪು ಗ್ರಹಿಕೆಯಿಂದ ಬಹಳಾ ಅಪವಿತ್ರ ವಿಷಯಗಳನ್ನು ಸೇರಿಸಿ ಜನರನ್ನು ನಂಬಿಸುತ್ತಿದ್ದಾರೆ. ಇವರ ನಿಂದನೆಗಳನ್ನು ಪೂರ್ಣವಾಗಿ ನಂಬಿದರೆ ಹಿಂದುಗಳ ತತ್ವಜ್ಞಾನ, ಸಂಸ್ಕೃತಿ, ಪದ್ಧತಿ, ಕೇವಲ ಬರ್ಬರತೆ, ಅಸಭ್ಯತೆ, ಕ್ರೌರ್ಯತೆ ಹಾಗು ನರಭಕ್ಷತೆಗೆ ಮೀಸಲೆಂದು ಅನಿಸುತ್ತದೆ.

ಹಿಂದುಗಳ ಮೂಲ ಬೇರಾದ ವೇದವು, ಪ್ರಪಂಚದ ಜ್ಞಾನದ ಮೊದಲನೆಯ ಮೂಲಸ್ರೋತವಾಗಿದೆ. ವೇದಗಳು ಮನುಷ್ಯನ ಪರಮಾನಂದಕ್ಕೆ ಕೈಪಿಡಿಯಾಗಿದೆ. ಇದನ್ನು ಇಷ್ಟಪಡದ ಕೆಲವರು ವೇದಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಸಲುವಾಗಿ ಹುಚ್ಚುಹುಚ್ಚಾದ, ಅರ್ಥ ಗರ್ಭಿತವಲ್ಲದ ವಿಷಯಗಳಿಗೆ ವೇದಗಳೇ ಆಧಾರವೆಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಇವರ ಪ್ರಯತ್ನದಿಂದ ಬಡವರು ಹಾಗು ಅನಕ್ಷರಸ್ಥರು ಭಾರತದ ಮೂಲ ಆಧಾರವಾದ ವೇದವು ಹೆಂಗಸರ ಮೇಲೆ ದೌರ್ಜನ್ಯ, ಮಂಸ ಭಕ್ಷಣೆ, ಬಹು ಪತ್ನಿತ್ವ, ಜಾತೀಯತೆ ಹಾಗು ಇದೆಲ್ಲಕ್ಕಿಂತ ಹೆಚ್ಚಾಗಿ ಗೋಮಾಂಸ ಭಕ್ಷಣೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅರ್ಥೈಸಿಕೊಳ್ಳುತ್ತಾರೆ.

ಯಜ್ಞಗಳಂತಹ ಇತರೆ ಉತ್ಸವಗಳಲ್ಲಿ ಪ್ರಾಣಿಗಳನ್ನು ಬಲಿದಾನ ಮಾಡಲು ವೇದಗಳು ಪ್ರೋತ್ಸಾಹಿಸುವುದು ಎಂಬ ಆಪಾದನೆಗೆ ವೇದಗಳು ಗುರಿಯಾಗಿವೆ. ವಿದೇಶಿಯರಷ್ಟೆ ಅಲ್ಲ, ನಮ್ಮ ದೇಶದ ಎಷ್ಟೋ ಬುದ್ಧಿಜೀವಿಗಳು ಹಿಂದೆ ಉಲ್ಲೇಖಿಸಿದ ವಿದೇಶಿ ಅನ್ವೇಷಕರ ಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ವೇದಗಳಲ್ಲಿ ಪಾಂಡಿತ್ಯ ಹೊಂದಿದವರಂತೆ ವರ್ತಿಸಿ ವೇದಗಳ ಮೇಲೆ ಹಲವಾರು ಆಪಾದನೆ ಹೊರಸಿದ್ದಾರೆ.

ಗೋಮಾಂಸ ಭಕ್ಷಣೆಯನ್ನು ವೇದವು ಓಪ್ಪುತ್ತದೆ ಎಂಬ ಘನಘೋರ ಸುಳ್ಳನ್ನು ಹೇಳಿ, ಗೋವಿನ ಮೇಲಿರುವಂತಹ ಗೌರವವನ್ನು ಹಾಳುಮಾಡುತಿದ್ದಾರೆ. ಎಲ್ಲಿಯವರಗೆ ವೇದಗಳ ಸಂಪೂರ್ಣ ಜ್ಞಾನ ಹೊಂದಿರುವುದಿಲ್ಲವೊ ಅಲ್ಲಿಯವರೆಗೆ ಸನಾತನ ಧರ್ಮೀಯ ಅನುಯಾಯಿಗಳಾದ ಭಾರತೀಯರು ವಿದೇಶಿ ಬೇಟೆಗಾರರಿಗೆ ಸುಲಭ ತುತ್ತಾಗಬಹುದು. ಸಂಪೂರ್ಣವಾಗಿ ವೇದಗಳನ್ನರಿಯದ ಲಕ್ಷಾಂತರ ಭಾರತೀಯರು ವಿದೇಶಿಯರು ಮಂಡಿಸುವ ವಿತಂಡವಾದಗಳಿಗೆ, ಹುಚ್ಚು ತರ್ಕಗಳಿಗೆ ಹಾಗು ಸುಳ್ಳಿನ ಸರಮಾಲೆಗೆ ಸೋತು ಶರಣಾಗುತ್ತಿದ್ದಾರೆ.

ವೇದಗಳನ್ನು ಕಲ್ಮಶಗೊಳಿಸಲು ಕೇವಲ ವಿದೇಶಿಯರು ಹಾಗು ಬುದ್ದಿಜೀವಿಗಳು ಮಾತ್ರ ಹೊಣೆಯಲ್ಲ, ಇವರ ಜೊತೆಗೆ ಹಿಂದುಗಳಲ್ಲೆ ಕೆಲವು ಪಂಗಡಗಳು ಆರ್ಥಿಕ ಹಾಗು ಸಾಮಾಜಿಕ ಬಲಹೀನರಾಗಿರುವ ಹಲವು ಪಂಗಡಗಳನ್ನು ವೇದಗಳ ಕಾರಣ ಹೇಳಿ ಅನುಚಿತ ಉಪಯೋಗ ಪಡೆದುಕೊಂಡಿದ್ದಾರೆ. ವೇದಗಳನ್ನರಿತ್ತಿದ್ದ ಜನರು, ಅದರ ಜ್ಞಾನವನ್ನು ಇತರರಿಗೆ ಹಂಚದೆ ತಮ್ಮ ಸ್ವಪ್ರಯೋಜನಕ್ಕಾಗಿ ತಾವೇ ಶ್ರೇಷ್ಠರು ಎಂಬ ನಂಬಿಕೆಯನ್ನು ಇತರ ಪಂಗಡಗಳಲ್ಲಿ ಹುಟ್ಟುಹಾಕಿದ್ದಾರೆ.

ವೇದಗಳ ಎಲ್ಲಾ ಆಪಾದನೆಗಳಿಗೆ ಮುಖ್ಯಕಾರಣವೆಂದರೆ, ಮಧ್ಯಕಾಲೀನ ಬರಹಗಾರರಾದ ಮಾಹಿಧರ್, ಉವಾತ್ ಸಾಯನ ಹಾಗು ದಯಾನಂದರ ವ್ಯಾಖ್ಯಾನಗಳ ಟೇಕೆಗಳಿಂದ ಹಾಗು ವೇದಗಳು ಕೇವಲ ವಾಮಾಚಾರ, ಗೂಢಾಚಾರ, ಮಾಟಮಂತ್ರಗಳಿಗೆ ಸೀಮಿತ ಎಂದು ಹಬ್ಬಿಸಿರುವುದು ಇದಕ್ಕೆ ಕಾರಣವಾಗಿದೆ. ವೇದಗಳ ಪಾವಿತ್ರ್ಯತೆಯನ್ನು ಮತ್ತಷ್ಟು ಉಲ್ಬಣಗೊಳಿಸಲು, ಅರ್ಧಜ್ಞಾನ ಹೊಂದಿದ ವಿದೇಶಿ ಅನ್ವೇಶಕರು, ಮಾಹಿಧರ್, ಉವಾತ್ ಹಾಗು ಸಾಯನರ ವ್ಯಾಖ್ಯಾನಗಳ ಟೇಕೆಯನ್ನು ಭಾಷಾಂತರಿಸಿ ವೇದಗಳನ್ನೇ ಭಾಷಾಂತರ ಮಾಡಿದುದಾಗಿ ಹೇಳಿಕೊಂಡರು.

ಸಂಸ್ಕೃತದ ಬಗ್ಗೆ ಅರ್ಧಜ್ಞಾನ ಹೊಂದಿದಂತಹ ವಿದೇಶಿ ಭಾಷಾಂತರರು ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಬಹು ಅವಶ್ಯಕವಾಗಿರುವಂತಹ ವೇದ ಭಾಷೆ ಬ್ರಾಹ್ಮಿ(Language), ಭಾಷಾಧ್ವನಿ ರೂಪಕ(Phonetic), ನಿಘಂಟು(Vocabulary), ಛಂದಸ್ಸು(Prosody), ಜ್ಯೋತಿಷ ಶಾಸ್ತ್ರ(Astronomy), ಮತ್ತು ಇತರ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಓಮ್ಮೆ ಮೂಲ ವೇದಗಳನ್ನು ಓದಿದರೆ ಅವರ ತಪ್ಪುಗಳನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ಈ ಪ್ರಯತ್ನದ ಹಿಂದಿರುವ ಉದ್ದೇಶವೇನೆಂದರೆ, ವೇದಗಳ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಅದರ ಪಾವಿತ್ರ್ಯತೆಯನ್ನು ಕಾಪಡುವುದು ಹಾಗು ವೇದಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಲ್ಲದೆ ಪ್ರಪಂಚದ ಎಲ್ಲಾ ಮಾನವರಿಗು ಅನ್ವಯಿಸುತ್ತದೆ ಎಂದು ತಿಳಿಸುವಂತದ್ದಾಗಿದೆ.

ಭಾಗ                ಪ್ರಾಣಿ ಹಿಂಸೆ ಮಹಾ ಪಾಪ
ಯಜುರ್ವೇದ ೪೦.
ಯಸ್ಮಿನ್ ಸರ್ವಾಣಿ ಭೂತಾನಿ ಆತ್ಮೈವಾಭೂದ್ ವಿಜಾನತಃ
ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||
ಯಾರು, ಎಲ್ಲಾ ಜೀವಿಗಳು ಒಂದೇ ಆತ್ಮನೆಂದು ತಿಳಿಯುತ್ತಾರೊ ಅವರು ದಡ್ಡತನದಿಂದಾಗಲಿ, ಯಾತನೆಯಿಂದಾಗಲಿ ಬಳಲುವುದಿಲ್ಲ ಏಕೆಂದರೆ ನಾವೆಲ್ಲರೂ ಒಂದೇ ಎಂಬ ಅನುಭವವನ್ನು ಹೊಂದಿರುತ್ತಾರೆ.
ಯಾವ ಮನುಷ್ಯರು ಅನಶ್ವರ (ಶಾಶ್ವತತೆ) ಹಾಗು ಪುನರ್ಜನ್ಮ ಸಿದ್ಧಾಂತಗಳನ್ನು ನಂಬುತ್ತಾರೊ, ಅವರು ಪ್ರಾಣಿಗಳನ್ನು ಯಜ್ಞಗಳಲ್ಲಿ ಕೊಲ್ಲಲು ಧೈರ್ಯವಾದರೂ ಹೇಗೆ ಮಾಡಿಯಾರು? ಏಕೆಂದರೆ ಪ್ರಾಣಿಗಳಲ್ಲಿ ಒಂದಾನೊಂದು ಸಮಯದಲ್ಲಿ ತಮಗೆ ಹತ್ತಿರವಾಗಿದ್ದ, ಪ್ರೀತಿ ಪಾತ್ರರಾಗಿದ್ದ ಆತ್ಮ – ಅಂದರೆ ಪರಮಾತ್ಮನ ಅಂಶವನ್ನೇ ನೋಡುತ್ತಾರೆ.

ಮನುಸ್ಮೃತಿ .೫೧
ಅನುಮನ್ತಾ ವಿಶಸಿತಾ ನಿಹನ್ತಾ ಕ್ರಯವಿಕ್ರಯೀ
ಸಂಸ್ಕರ್ತಾ ಚೋಪಹರ್ತಾ ಚ ಖಾದಕಶ್ಚೇತಿ ಘಾತಕಾಃ ||
ಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡುವವರು, ಬಲಿಕೊಡಲೆಂದೇ ಪ್ರಾಣಿಗಳನ್ನು ತರುವವರು, ಪ್ರಾಣಿಗಳನ್ನು ಕೊಲ್ಲುವವರು, ಮಾಂಸವನ್ನು ಮಾರುವವರು, ಮಾಂಸವನ್ನು ಕೊಂಡುಕೊಂಡವರು, ಮಾಂಸದಿಂದ ಅಡುಗೆ ಮಾಡುವವರು, ಮಾಂಸದ ಅಡುಗೆಯನ್ನು ಬಡಿಸುವವರು ಮತ್ತು ಮಾಂಸವನ್ನು ತಿನ್ನುವವರನ್ನು ಕೊಲೆಗಡುಕರೆಂದೇ ಪರಿಗಣಿಸಲಾಗುವುದು.

ಅಥರ್ವ ವೇದ .೧೪೦.
ಬ್ರೀಹಿಮತ್ತಂ ಯವಮತ್ತಮಥೋ ಮಾಷಮಥೋ ತಿಲಮ್ |
ಏಷ ವಾಂ ಭಾಗೋ ನಿಹಿತೋ ರತ್ನಧೇಯಾಯ ದಾನ್ತೌ ಮಾ ಹಿಂಸಿಷ್ಟಂ ಪಿತರಂ ಮಾತರಂ ಚ ||
ಹಲ್ಲುಗಳೇ, ನೀವು ಅಕ್ಕಿ, ಗೋಧಿ, ಎಳ್ಳು ಇತ್ಯಾದಿ ಧವಸಧಾನ್ಯಗಳ ಜೊಳ್ಳನ್ನು ತಿಂದರೂ ಹಾಲು ಇತ್ಯಾದಿ ಶ್ರೇಷ್ಠ ಉತ್ಪನ್ನಗಳನ್ನು ನಮಗಾಗಿ ಕೊಡುವಿರಿ. ತಂದೆ+ತಾಯಿಯರ ಸ್ಥಾನದಲ್ಲಿರುವ ಈ ಗೋ+ವೃಷಭಾದಿ ಪ್ರಾಣಿ ವರ್ಗವನ್ನು ಎಂದಿಗೂ ಹಿಂಸಿಸಬೇಡಿ, ಕೊಲ್ಲಬೇಡಿ.

ಅಥರ್ವ ವೇದ ..೨೩
ಯ ಆಮಂ ಮಾಂಸಮದನ್ತಿ ಪೌರುಷೇಯಂ ಚ ಯೇ ಕ್ರವಿಃ
ಗರ್ಭನ್ ಖಾದನ್ತಿ ಕೇಶವಾಸ್ತಾನಿತೋ ನಾಶಯಾಮಸಿ ||
ಹಸಿ ಮಾಂಸವಾಗಲಿ ಅಥವ ಬೇಯಿಸಿದ ಮಾಂಸವಾಗಲಿ, ಮಾಂಸ ತಿನ್ನುವುದನ್ನು ನಾಶಪಡಿಸಬೇಕು. ಮಾಂಸವೆಂದರೆ ಗಂಡಾಗಲಿ, ಹೆಣ್ಣಾಗಲಿ, ಭ್ರೂಣವಾಗಲಿ ಅಥವ ಮೊಟ್ಟೆಯಾಗಲಿ ನಾಶಪಡಿಸುವುದನ್ನು ನಿಲ್ಲಿಸಬೇಕು.

ಅಥರ್ವ ವೇದ ೧೦..೨೯
ಅನಾಗೋಹತ್ಯಾ ವೈ ಭೀಮಾ ಕೃತ್ಯೇ, ಮಾ ನೋ ಗೋಮಶ್ವಂ ಪುರುಷಂ ವಧೀಃ ||
ಅಮಾಯಕರನ್ನು ಕೊಲ್ಲುವುದು ಮಹಾಪಾಪ. ಹಸು, ಕುದುರೆ ಅಥವ ಮನುಷ್ಯರನ್ನು ಎಂದಿಗೂ ಕೊಲ್ಲಬೇಡಿ.
ವೇದಗಳು, ಪ್ರಾಣಿಹಿಂಸೆ ಮಾಡುವುದು ನಿಷೇಧಿಸಲಾಗಿದೆ ಎಂದು ಇಷ್ಟು ಪರಿಪಕ್ವವಾಗಿ ಹೇಳಿದರೂ ಸಹ ಗೋವು ಮತ್ತು ಇತರ ಪ್ರಾಣಿಗಳನ್ನು ಕೊಲ್ಲಿ ಎಂದು ಹೇಳುವುದು ಎಷ್ಟು ನ್ಯಾಯಯುತವಾಗಿದೆ? ಇದು ನಂಬುವಂತಹ ವಿಷಯವಲ್ಲ.

ಯಜುರ್ವೇದ .
ಅಘ್ನ್ಯಾ ಯಜಮಾನಸ್ಯ ಪಶೂನ್ಪಾಹಿ ||
ಮಾನವನೆ! ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿ ಅಲ್ಲ, ಪಶುಗಳನ್ನು ರಕ್ಷಿಸು

ಯಜುರ್ವೇದ .೧೧
ಪಶೂಂಸ್ತ್ರಾಯೇಥಾಂ – ಎಲ್ಲಾ ಪಶುಗಳನ್ನು ರಕ್ಷಿಸು

ಯಜುರ್ವೇದ ೧೪.
ದ್ವಿಪಾದವ ಚತುಷ್ಪಾತ್ ಪಾಹಿ - ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು
ಕ್ರವ್ಯಾದ  – ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು
ಪಿಶಾಚ   – ಪಿಶಿತ (ಮಾಂಸ) + ಅಶ (ತಿನ್ನುವವನು)  = ಮಾಂಸ ತಿನ್ನುವವನು
ಅಸುತೃಪಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು)    = ಇನ್ನೊಂದು ಜೀವಿಯನ್ನು                                                                                          ಆಹಾರಕ್ಕೆಂದು ಬಳಸುವವನು
ಗರ್ಭದಾ ಮತ್ತು ಅಂಡದಾ –  ಗರ್ಭವನ್ನು ಮತ್ತು ಮೊಟ್ಟೆಯನ್ನು ತಿನ್ನುವವನು
ವೈದಿಕ ಸಾಹಿತ್ಯದಲ್ಲಿ ಮಾಂಸ ಭಕ್ಷಕರನ್ನು ಯಾವಾಗಲೂ ತಿರಸ್ಕರಿಸಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಶಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಬಹಿಷ್ಕರಿಸಲಾಗಿದೆ.

ಯಜುರ್ವೇದ ೧೧.೮೩
ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ - ಎಲ್ಲಾ ದ್ವಿಪಾದಿಗಳು ಹಾಗು ಚತುಷ್ಪಾದಿಗಳು ಶಕ್ತಿಗೊಂಡು ಬೆಳೆಯಲಿ
ಮೇಲಿನ ಮಂತ್ರವನ್ನು ಹಲವು ಕಡೆ ಸನಾತನ ಧರ್ಮೀಯರು ಪ್ರತಿ ಊಟದ ಮೂದಲು ಪಠಿಸುತ್ತಾರೆ. ಯಾವ ಶಾಸ್ತ್ರವು ಪ್ರತಿ ಆತ್ಮದ ಸೌಖ್ಯಕ್ಕಾಗಿ ಪ್ರಾರ್ಥಿಸುತ್ತದೊ ಅಂತಹ ದರ್ಶನಶಾಸ್ತ್ರವು ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲು ಹೇಗೆ ಸಾಧ್ಯ?

ಭಾಗ                            ಯಜ್ಞಗಳಲ್ಲಿ ಹಿಂಸೆ ಸಲ್ಲದು
ಜನಪ್ರಿಯವಾಗಿ ತಿಳಿದಿರುವಂತೆ, ಯಜ್ಞಗಳಲ್ಲಿ ಪ್ರಾಣಿ ಬಲಿಯಾಗುವುದಿಲ್ಲ. ವೇದಗಳಲ್ಲಿ ಯಜ್ಞಗಳೆಂದರೆ ಶ್ರೇಷ್ಠತಮ ಕರ್ಮ ಅಥವ ವಾತಾವರಣವನ್ನು ಅತ್ಯಂತ ಶುದ್ಧಿಗೊಳಿಸುವ ಕಾರ್ಯ.

ನಿರುಕ್ತ ೨/೭
ಅಧ್ವರ ಇತಿ ಯಜ್ಞಾನಾಮ – ಧ್ವರತಿಹಿಂಸಾ ಕರ್ಮ ತತ್ಪ್ರತಿಷೇಧಃ
ಯಾಸ್ಕ ಆಚಾರ್ಯರು ಹೇಳಿರುವಂತೆ ವೇದಗಳ ಭಾಷಾಶಾಸ್ತ್ರ ಅಥವ ನಿರುಕ್ತದ ಪ್ರಕಾರ ಯಜ್ಞದ ಇನ್ನೊಂದು ಅರ್ಥವೇ ಅಧ್ವರ. ಧ್ವರ ಎಂದರೆ ಹಿಂಸೆ ಅಥವ ದೌರ್ಜನ್ಯದ ಕೃತ್ಯ. ಅಧ್ವರ ಎಂದರೆ ಅಹಿಂಸೆ, ದೌರ್ಜನ್ಯವಿಲ್ಲದ ಕೆಲಸ. ವೇದಗಳಲ್ಲಿ ಅಧ್ವರ ಎಂಬ ಪದವನ್ನು ಬಹಳವಾಗಿ ಉಪಯೋಗಿಸಲಾಗಿದೆ.

ಮಹಾಭಾರತ ನಂತರದ ಕಾಲದಲ್ಲಿ ವೇದಗಳನ್ನು ಅಪವ್ಯಾಖ್ಯಾನಿಸಲಾಗಿದೆ, ಹಾಗು ಮೂಲ ಗ್ರಂಥಕ್ಕೆ ಹೊಸ ವಿಚಾರಗಳನ್ನು ಸೇರಿಸಿ ಅಪಮೌಲ್ಯಗೊಳಿಸಲಾಗಿದೆ. ಶಂಕರಾಚಾರ್ಯರು ವೇದದ ಮೌಲ್ಯಗಳನ್ನು ಮರುಸ್ಥಾಪಿಸಲು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ. ಸ್ವಾಮಿ ದಯಾನಂದ ಸರಸ್ವತಿಯವರು, ಒಂದಿಷ್ಟು ಅಧಿಕೃತ ಸಾಕ್ಷಾಧಾರಗಳನಿಟ್ಟುಕೊಂಡು ಕೆಲವು ಭಾಷಾ ಪಂಡಿತರೊಂದಿಗೆ ಮೇಳೈಸಿದ ವಿಧಿ ವಿಧಾನಗಳೊಂದಿಗೆ ವೇದಗಳನ್ನು ವ್ಯಾಖ್ಯಾನಿಸಿದ್ದಾರೆ. ಇವರ ಸಾಹಿತ್ಯದಲ್ಲಿ ವೇದಗಳ ವಿವರಣೆ, ಸತ್ಯರ್ಥ್ ಪ್ರಕಾಶ್ ರವರು ಶಿಥಿಲವಾಗಿ ಭಾಷಾಂತರಿಸಿದಸತ್ಯದ ಬೆಳಕು”(Light of truth), ವೇದಗಳ ಪರಿಚಯ ಮತ್ತು ಇತರೆ ಪಠ್ಯಗಳು ಜನಪ್ರಿಯಗೊಂಡು ವೇದ ತತ್ವಶಾಸ್ತ್ರದ ಅನ್ವಯ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗು ಅದಕ್ಕೆ ಅಂಟಿದ್ದಂತಹ ಕಳಂಕವನ್ನು ಗಮನಾರ್ಹವಾಗಿ ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಇವರ ಭಾಷ್ಯವು ಕೆಲವಾರು ಮೌಢ್ಯಗಳನ್ನು ನಿವಾರಿಸಲು ಶಕ್ಯವೇ ಹೊರತು ವೇದದ ಮೂಲ ಬ್ರಾಹ್ಮಿ ಭಾಷೆಯ ನೈಜ ವಿಚಾರಗಳಿಗೆ ಸರಿಹೊಂದುವುದಿಲ್ಲ.
ಭಾಗದಲ್ಲಿ ನಮ್ಮ ಪವಿತ್ರ ವೇದಗಳು ಯಜ್ಞದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೊಣ.

ಋಗ್ವೇದ: ..
ಅಗ್ನೇ ಯಂ ಯಜ್ಞಮಧ್ವರಂ ವಿಶ್ವತಃ ಪರಿ ಭೂರಸಿ, ಸ ಇದ್ದೇವೇಷು ಗಚ್ಛತಿ ||
ಕಾಂತಿಯುತವಾದ ದೇವರೆ! ನೀನು ಆಜ್ಞಾಪಿಸುವಂತಹ, ಎಲ್ಲಾ ಕಡೆಗಳಿಂದಲೂ ಮಾಡುವಂತಹ ಅಹಿಂಸೆಯ ಯಜ್ಞವು ಎಲ್ಲಾರಿಗೂ ಬಹಳ ಉಪಯೋಗಕಾರಿಯಾಗಿದೆ ಮತ್ತು ಯಜ್ಞವು ಆಧ್ಯಾತ್ಮ ತ್ರೈರಾಶಿಯನ್ನು ಹಾಗು ಕೀರ್ತಿವಂತ ಆತ್ಮಗಳನ್ನು ಮುಟ್ಟುತ್ತದೆ.

ಋಗ್ವೇದದಲ್ಲಿ, ಮೊದಲಿನಿಂದ ಕೊನೆಯವರೆಗೂ ಯಜ್ಞವನ್ನು ಅಧ್ವರ ಅಥವ ಅಹಿಂಸೆ ಎಂದು ವರ್ಣಿಸಲಾಗಿದೆ, ಅಷ್ಟೇ ಅಲ್ಲದೆ ಉಳಿದ ಮೂರು ವೇದಗಳಲ್ಲೂ ಸಹ ಪ್ರಾಣಿ ಹಿಂಸೆಯನ್ನು ವಿರೋಧಿಸಲಾಗಿದೆ. ಹೀಗಿರುವಾಗ ಹಿಂಸೆಯನ್ನಾಗಲಿ ಅಥವ ಪ್ರಾಣಿ ಬಲಿಯನ್ನಾಗಲಿ ವೇದಗಳು ನೇರವಾಗಿ ಅಥವ ಪರೋಕ್ಷವಾಗಿ ಸಮ್ಮತಿಸಲು ಹೇಗೆ ತಾನೆ ಸಾಧ್ಯ? ಹಲವಾರು ದುಷ್ಟರ ಪ್ರಯತ್ನದಿಂದ ವೇದಗಳನ್ನು ತಿರುಚಲು ಪ್ರಯತ್ನಿಸಿ, ವೇದಗಳ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾರೆ.

ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಾಗ, ಗೋಮೇಧ ಯಜ್ಞ, ಅಜಮೇಧ ಯಜ್ಞ, ಪಿತೃಮೇಧ ಯಜ್ಞ, ನರಮೇಧ ಇತ್ಯಾದಿ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೇ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ. ವೇದದಲ್ಲಿ ಹೇಳಿದ ಮೇಧವೇ ಬೇರೆ ನೀವು ದೇಹಶಾಸ್ತ್ರದಲ್ಲಿ ಹೇಳುವ ಕೊಬ್ಬಿನಾಂಶವುಳ್ಳ ಮೇದ(ಧ)ಸ್ಸೇ ಬೇರೆ.
ಯಜುರ್ವೇದವು ಕುದುರೆಗಳ ಬಗ್ಗೆ ಏನು ಹೇಳುವುದೆಂದು ತಿಳಿಯುವುದು ಮುಖ್ಯ

ಯಜುರ್ವೇದ ೧೩.೪೮
ಇಮಂ ಮಾ ಹಿಂಸೀರೇಕಶಫಂ ಪಶುಂ ಕನಿಕ್ರದಂ ವಾಜಿನಂ ವಾಜಿನೇಷು ||
ಗೊರಸುಳ್ಳ, ಹೇಷಾರವ ಮಾಡುತ್ತಾ ಇತರೆ ಪ್ರಾಣಿಗಳಿಗಿಂತಲೂ ವೇಗವಾಗಿ ಚಲಿಸಿ ನಿಮಗೆ ಸಹಾಯಕವಾಗಿರುವ ಪಶುವನ್ನು ಸಂಹಾರ ಮಾಡಬೇಡಿ. ಅಶ್ವಮೇಧ ಯಾಗ ಎಂದರೆ ಕುದುರೆಯನ್ನು ಬಲಿಕೊಡುವುದಲ್ಲ. ಯಜುರ್ವೇದವು ಕುದುರೆ ಬಲಿಯನ್ನು ಮಾಡಲೇಬಾರದೆಂದು ಸ್ಪಷ್ಟವಾಗಿ ಹೇಳಿದೆ.

ಶತಪಥ ೧೩-೧-೬-೩
ರಾಷ್ಟ್ರಂ ವಾ ಅಶ್ವಮೇಧಃ, ಅನ್ನಂ ಹಿ ಗೌಃ, ಅಗ್ನಿರ್ವಾ ಅಶ್ವಃ, ಆಜ್ಯಂ ಮೇಧಾಃ ||
ಶಥಪಥದಲ್ಲಿ ಅಶ್ವ ಎಂದರೆ ದೇಶ ಅಥವ ಸಾಮ್ರಾಜ್ಯ ಎಂದರ್ಥ. ಮೇಧ ಎಂಬ ಪದದ ಅರ್ಥ ಸಂಹಾರ ಎಂದಲ್ಲ. ಅದರ ಧಾತು ಮೇಧೃ –ಸಂ –ಗಂ –ಮೇ ಎಂಬ ಮೂಲಾರ್ಥದಲ್ಲಿ ಮೇಧ ಎಂದರೆ ವಿವೇಕದಿಂದ ಮಾಡಿದಂತಹ ಕೆಲಸ ಒಟ್ಟು ಗೂಡುಸುವಿಕೆ ಎಂದು ಸ್ಪಷ್ಟವಾಗುತ್ತದೆ. ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಸತ್ಯದ ಬೆಳಕಿನಲ್ಲಿ ಹೀಗೆ ಬರೆಯುತ್ತಾರೆಅಶ್ವಮೇಧ ಯಜ್ಞವು ರಾಷ್ಟ್ರದ, ದೇಶದ ಅಥವ ಒಂದು ಸಾಮ್ರಾಜ್ಯದ ವೈಭವ, ಸುಖನೆಮ್ಮದಿ ಹಾಗು ಸಮೃದ್ಧಿಗೆ ಅರ್ಪಿಸಲಾಗುತ್ತದೆ.
ಗೋಮೇಧ ಯಜ್ಞ ಎಂದರೆ ನಮ್ಮ ಆಹಾರವನ್ನು ಶುಚಿಯಾಗಿಡಲಿ ಅಥವ ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಡಲು / ಸ್ಥಿತ ಪ್ರಜ್ಞರಾಗಲು ಅಥವ ಆಹಾರವನ್ನು ಶುಚಿಮಾಡಲು ಅಥವ ಸೂರ್ಯನ ಕಿರಣಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಥವ ಭೂಮಿಯನ್ನು ಮಲಿನತೆಯಿಂದ ಕಾಪಾಡಿಕೊಳ್ಳುವುದು. ಗೋ ಪದದ ಇನ್ನೊಂದು ಅರ್ಥ ಭೂಮಿ ಎಂದು ಹಾಗು ಗೋವಿನಿಂದ ಸ್ಥಿರತೆಯನ್ನು ಪಡೆಯುವ ಈ ಭೂಮಿಯನ್ನು, ಗೋವಿನಿಂದಲೇ ಶುಚಿಯಾಗಿಡಲು ಮಾಡುವ ಯಜ್ಞವೇ ಗೋಮೇಧ ಯಜ್ಞ.

ಅಜ ಎಂದರೆ ಧಾನ್ಯಗಳು. ಅಜಮೇಧ ಯಜ್ಞ ಎಂದರೆ ಕೃಷಿ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸುವ ವಿಧಾನ. ಇದರಲ್ಲಿ ವಿವಿಧ ಧಾನ್ಯಗಳ ಬಳಕೆ ಮಾಡಲಾಗುತ್ತದೆ (ಶಾಂತಿ ಪರ್ವ- ೩೩೭.೪-೫).

ನರಮೇಧ/ನೃಮೇಧ ಯಜ್ಞ ಎಂದರೆ ವ್ಯಕ್ತಿ ಸತ್ತ ನಂತರ ದೇಹವನ್ನು ವೇದಗಳ ವಿಧಿವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವುದು. ಪುರುಷಮೇಧ ಯಜ್ಞಗಳಲ್ಲಿ ಅದು ಮಾತ್ರವಲ್ಲದೆ ಹಲವು ಜನರ ತಂಡಗಳನ್ನು ಶ್ರಮಭರಿತರಾಗುವಂತೆ, ದುಡಿಯುವತ್ತ, ದೇಶದ ಪ್ರಗತಿಯತ್ತ, ರಾಷ್ಟ್ರ ರಕ್ಷಣೆಯತ್ತ, ಉತ್ಪಾದಕತೆಯತ್ತ, ಇತ್ಯಾದಿಯಾಗಿ ಒಗ್ಗೂಡಿಸಲು ಮಾಡುವ ಪ್ರಕ್ರಿಯೆಯೂ ಸೇರಿರುತ್ತದೆ. ಪಿತೃಮೇಧದಲ್ಲಿ ಉತ್ತರ ಕ್ರಿಯಾ ಕರ್ಮದ ನಂತರ ಮಕ್ಕಳು ಆ ಆತ್ಮದ ದೈವೀಕಾಂಶವನ್ನು ಪಿತೃ ಸ್ವರೂಪದಲ್ಲಿ ಉಳಿಸಿಕೊಂಡು ಅಗ್ನಿಶ್ವಾತ್ಥಾ-ಬರ್ಹಿಷಾದಿಗಳಲ್ಲಿ ಅಗ್ನಿಯಲ್ಲಿ ಸ್ವಧಾ ಮುಖೇನ ಉಪಾಸನೆ ಗೈದು ತಮ್ಮ ಶ್ರೇಯೋಭಿಲಾಷೆನ್ನು ಪಡೆಯುವ ಶ್ರೇಷ್ಠ ಯಜ್ಞ ಪ್ರಕ್ರಿಯೆ.

ಪಂಚತಂತ್ರದಲ್ಲಿ ವಿಷ್ಣುಶರ್ಮನು ಸ್ಪಷ್ಟವಾಗಿ ಹೇಳಿದ್ದಾನೆ – ಯಜ್ಞದಲ್ಲಿ ಪಶು ಹಿಂಸೆ ಮಾಡುವವರು ವೇದವನ್ನರಿಯದ ಮೂರ್ಖರು. ಪಶು ಹತ್ಯೆಯೇ ಸ್ವರ್ಗಕ್ಕೆ ಹೋಗಲು ರಹದಾರಿಯಾದರೆ, ನರಕಕ್ಕೆ ಹೋಗಲು ಏನು ಮಾಡಬೇಕು? ಹಾಗೆಯೇ ಮಹಾಭಾರತದ ಶಾಂತಿ ಪರ್ವದಲ್ಲಿ (೨೬೩.೬, ೨೬೫.೯) ಯಜ್ಞದಲ್ಲಿ ಮತ್ಸ್ಯ, ಮದಿರ, ಮಾಂಸಗಳನ್ನು ಬಳಸಬೇಕೆನ್ನುವವರು ಪಾಖಂಡಿಗಳು, ನಾಸ್ತಿಕರು, ಶಾಸ್ತ್ರಾರ್ಥ ತಿಳಿಯದವರು ಎಂದಿದೆ.


ಭಾಗ            ವೇದಗಳಲ್ಲಿ ಗೋಮಾಂಸ ಸೇವನೆ ಇಲ್ಲ.
ವೇದಗಳು ಪ್ರಾಣಿಸಂಹಾರವನ್ನು ವಿರೋಧಿಸುತ್ತದೆ, ಅದರಲ್ಲಿಯೂ ಗೋ ಸಂಹಾರವನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಗೋಸಂಹಾರವನ್ನು ನಿಷೇಧಿಸಿದೆ.

ಯಜುರ್ವೇದ ೧೩.೪೯
ಘೃತಂ ದುಹಾನಾಮದಿತಿಂ ಜನಾಯಾಗ್ನೇ ಮಾ ಹಿಂಸೀಃ ||
ಶೇಷ್ಠತ್ವದ ಪ್ರತೀಕವಾಗಿರುವಂತಹಾ, ರಕ್ಷಣೆಗೆ ಅರ್ಹರಾಗಿರುವಂತಹ ಹಸು ಹಾಗು ಎತ್ತುಗಳನ್ನು ಹಿಂಸಿಸಬೇಡಿ, ಕೊಲ್ಲಬೇಡಿ.

ಋಗ್ವೇದ .೫೬.೧೭
ಆರೇ ಗೋಹಾ ನೃಹಾ ವಧೋ ವೋ ಅಸ್ತು ||
ಋಗ್ವೇದದಲ್ಲಂತೂ ಗೋ ಹತ್ಯೆಯನ್ನು ಮಾನವಹತ್ಯೆಗೆ ಸಮನಾದ ಅಪರಾಧವೆಂದು ಘೋಷಿಸಲ್ಪಟ್ಟಿದೆ. ಇಂತಹ ಹೀನ ಕೃತ್ಯ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳುತ್ತದೆ.

ಋಗ್ವೇದ .೧೬೪.೪೦, ಅಥರ್ವ ವೇದ೭.೭೩.೧೧, .೧೦.೨೦
ಸೂಯವಸಾದ್ ಭಗವತೀ ಹಿ ಭೂಯಾ ಅಥೋ ವಯಂ ಭಗವಂತಃ ಸ್ಯಾಮ
ಅದ್ಧಿ ತರ್ಣಮಘ್ನ್ಯೇ ವಿಶ್ವದಾನೀಂ ಪಿಬ ಶುದ್ಧಮುದಕಮಾಚರಂತೀ ||
ಪಾವಿತ್ರ್ಯತೆ, ಜ್ಞಾನ ಹಾಗು ಐಶ್ವರ್ಯವನ್ನು ಏತೇಚ್ಛವಾಗಿ ಪಡೆಯಲು ಅಘ್ನ್ಯಾ ಗೌಅಂದರೆ ಹಸುಗಳನ್ನು ಕೊಲ್ಲದೆ ಅವುಗಳಿಗೆ ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ನೀಡಿ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ರಕ್ಷಿಸತಕ್ಕದ್ದು. ವೇದಗಳ ಶಬ್ದಕೋಶದಲ್ಲಿ ಅಥವ ನಿಘಂಟಿನಲ್ಲಿ ಗೋ ಅಥವ ಹಸುವಿಗೆ ಸಮಾನಾರ್ಥಕವಾಗಿ ಅಘ್ನ್ಯಾ, ಅಹಿ ಮತ್ತು ಅದಿತಿ ಎಂದು ಬಳಸಲಾಗಿದೆ. ಯಾವುದನ್ನು ಕೊಲ್ಲಬಾರದೊ ಅದನ್ನು ಅಘ್ನ್ಯಾ ಎನ್ನುತ್ತಾರೆ. ಯಾವುದನ್ನು ಸಂಹಾರಮಾಡಬಾರದೊ ಅದನ್ನು ಅಹಿ ಎನ್ನುತ್ತಾರೆ. ಯಾವುದನ್ನು ತುಂಡುತುಂಡಾಗಿ ಕತ್ತರಿಸಬಾರದೊ ಅದನ್ನು ಅದಿತಿ ಎನ್ನುತ್ತಾರೆ. ಈ ಮೂರು ಪದಗಳು ಹಸುಗಳನ್ನು ಯಾವುದೇ ರೀತಿಯಲ್ಲಿ ಹಿಂಸಿಸುವಂತಿಲ್ಲ ಎಂದು ಅರ್ಥೈಸುತ್ತದೆ. ಹಸುಗಳಿಗೆ ಸಂಬಂಧಿಸಿದಂತೆ ವೇದಗಳಲ್ಲಿ ಪದಗಳು ಎತೇಚ್ಛವಾಗಿ ಬಳಸಲಾಗಿದೆ.

ಋಗ್ವೇದ .೧೬೪.೨೭
ಅಘ್ನ್ಯೇಯಂ ಸಾ ವರ್ದ್ಧತಾಂ ಮಹತೇ ಸೌಭಗಾಯ ||
ಅಘ್ನ್ಯಾ = ಗೋವು - ನಮಗಾಗಿ ಆರೋಗ್ಯ, ಐಶ್ವರ್ಯ ಇತ್ಯಾದಿ ಮಹತ್ತರವಾದ ಸೌಭಾಗ್ಯವನ್ನು ತರುವುದು.

ಋಗ್ವೇದ .೮೩.
ಸುಪ್ರಪಾಣಂ ಭವತ್ವಘ್ನ್ಯಾಭ್ಯಃ ||
ಆಘ್ನ್ಯಾ = ಗೋವುಗಳಿಗೆ ಶುದ್ಧ ನೀರನ್ನು ಪೂರೈಸಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸಬೇಕು.

ಋಗ್ವೇದ ೧೦.೮೭.೧೬
ಯಃ ಪೌರುಷೇಯೇಣ ಕ್ರವಿಷಾ ಸಮಂಕ್ತೇ ಯೋ ಪಶುನಾ ಯಾತುಧಾನಃ
ಯೋ ಅಘ್ನ್ಯಾಯಾ ಭರತಿ ಕ್ಷೀರಮಗ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||
ನ್ಯಾಯಶಾಸ್ತ್ರದ ದಂಡಸಂಹಿತೆಯ ವ್ಯಾಖ್ಯಾನದಂತೆ ಯಾರು ಮಾನವರನ್ನು, ಕುದುರೆಗಳನ್ನು ಅಥವ ಇತರೆ ಪ್ರಾಣಿಗಳ ಮಾಂಸವನ್ನು ಆಹಾರಕ್ಕೆಂದು ಬಳಸುತ್ತಾರೊ ಹಾಗು ಹಾಲು ಕೊಡುವ ಆಜ್ಞ ಹಸುಗಳನ್ನು ನಾಶ ಪಡಿಸುತ್ತಾರೊ ಅವರನ್ನು ತೀವ್ರವಾಗಿ ಶಿಕ್ಷಿಸಬೇಕು.

ಋಗ್ವೇದ .೧೦೧.೧೫
ಮಾ ಗಾಮನಾಂಗಾಮದಿತಿಂ ವಧಿಷ್ಟ ||
ಗೋವುಗಳನ್ನು ಕೊಲ್ಲಬೇಡಿ. ಗೋವು ಬಹಳಾ ಮುಗ್ಧ ಪ್ರಾಣಿ. ಅವುಗಳನ್ನು ತುಂಡುತುಂಡಾಗಿ ಕತ್ತರಿಸುವ ಹೇಯ ಕೃತ್ಯ ಮಾಡಬೇಡಿ. (ನೀತಿಶಾಸ್ತ್ರ ವ್ಯಾಖ್ಯಾನ)

ಯಜುರ್ವೇದ ೧೨.೭೩
ವಿಮುಚ್ಯಧ್ವಮಘ್ನ್ಯಾ ದೇವಯಾನಾ ಅಗನ್ಮ || ಅಘ್ನ್ಯಾ - ಹಸುಗಳು ಹಾಗು ಎತ್ತುಗಳು ಸಮೃದ್ಧಿತರುತ್ತದೆ.

ಯಜುರ್ವೇದ ೩೦,೧೮
ಅಂತಕಾಯ ಗೋಘಾತಂ - ಗೋವುಗಳನ್ನು ಕೊಲ್ಲುವವರನ್ನು ನಾಶ ಮಾಡು. (ರಾಜ್ಯಶಾಸ್ತ್ರದ ರಾಜನೀತಿ ವ್ಯಾಖ್ಯಾನ)

ಅಥರ್ವ ವೇದ .೧೬.
ಯದಿ ನೋ ಗಾಂ ಹಂಸಿ ಯದ್ಯಶ್ವಮ್ ಯದಿ ಪೂರುಷಂ
ತಂ ತ್ವಾ ಸೀಸೇನ ವಿಧ್ಯಾಮೋ ಯಥಾ ನೋ ಸೋ ಅವೀರಹಾ ||
ಯಾರಾದರೊ ಹಸುಗಳನ್ನು, ಕುದುರೆಗಳನ್ನು ಅಥವ ಮನುಷ್ಯರನ್ನು ನಾಶಪಡಿಸಿದರೆ ಅವರ ವೀರತ್ವವನ್ನು ಸೀಸವಿಧ್ಯೆಯಿಂದ ಮಟ್ಟಹಾಕಬೇಕು. (ನ್ಯಾಯಶಾಸ್ತ್ರದ ದಂಡನೀತಿ ವ್ಯಾಖ್ಯಾನ)

ಅಥರ್ವ ವೇದ .೩೦.
ವತ್ಸಂ ಜಾತಮಿವಾಘ್ನ್ಯಾ – ಎಂದಿಗೂ ಕೊಲ್ಲಬಾರದಂತಹ ಗೋವು ಹೇಗೆ ತನ್ನ ಕರುವನ್ನು ಪ್ರೀತಿಸುತ್ತದೋ ಹಾಗೆಯೇ ಒಬ್ಬರನ್ನೊಬ್ಬರು ಪ್ರೀತಿಸಿ.

ಅಥರ್ವ ವೇದ ೧೧..೩೪
ಧೇನುಂ ಸದನಂ ರಯೀಣಾಮ್ - ಹಸುವು ಎಲ್ಲಾ ಐಶ್ವರ್ಯಗಳ ಉಗಮಸ್ಥಾನ.
ಋಗ್ವೇದದ, ಆರನೆಯ ಮಂಡಲದ, ೨೮ನೆಯ ಎಲ್ಲಾ ಸೂಕ್ತಗಳು ಗೋವಿನ ಕೀರ್ತಿ ಮಹಿಮೆಯನ್ನು ಹಾಡಿಹೊಗಳುತ್ತದೆ. ಅದಕ್ಕೆ ಸಂಸ್ಕೃತದ ಲೌಕಿಕಾರ್ಥ ನೀಡಲಾಗಿದೆ:

. ಆ ಗಾವೋ ಅಗ್ಮನ್ನುತ ಭದ್ರಮಕ್ರನ್ತ್ಸೀದಂತು - ಹಸುಗಳನ್ನು ಆರೋಗ್ಯಕರ ರೀತಿಯಲ್ಲಿದಯೇ, ಅವುಗಳು ತೊಂದರೆಗಳಿಂದ ದೂರವಿದಯೇ, ಅವುಗಳು ಸುಭದ್ರವಾಗಿದಯೇ ಎಂದು ನೋಡಿಕೊಳ್ಳುತ್ತಿರಬೇಕು.

. ಭೂಯೋಭೂಯೋ ರಯಿಮಿದಸ್ಯ ವರ್ಧಯನ್ನಭಿನ್ನೇ - ಹಸುಗಳ ಬಗ್ಗೆ ಕಾಳಜಿ ವಹಿಸುವವರಿಗೆ ದೇವರ ಕೃಪಾಕಟಾಕ್ಷವಿರುತ್ತದೆ.

. ನ ತಾ ನಶಂತಿ ನ ದಭಾತಿ ತಸ್ಕರೋ ನಾಸಾಮಾಮಿತ್ರೋ ವ್ಯಥಿರಾ ದಧರ್ಷತಿ - ಶತ್ರುಗಳು ಸಹ ಹಸುಗಳ ಮೇಲೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಬಾರದು.

. ನ ತಾ ಅರ್ವಾ ರೇಣುಕಕಾಟೋ ಅಶ್ನುತೇ ನ ಸಂಸ್ಕೃತ್ರಮುಪ ಯಂತಿ ತಾ ಅಭಿ - ಯಾರೊಬ್ಬರು ಹಸುಗಳನ್ನು ಹತ್ಯೆಮಾಡಬಾರದು.

. ಗಾವೋ ಭಗೋ ಗಾವ ಇಂದ್ರೋ ಮೇ ಅಚ್ಛನ್ - ಹಸುವು ಸನ್ಮಾರ್ಗದರ್ಶಕ ಹಾಗು ಬಲಪ್ರದಾಯಕ.

. ಯೂಯಂ ಗಾವೋ ಮೇದಯಥಾ - ಹಸುಗಳು ಖುಷಿಯಾಗಿ ಹಾಗು ಆರೋಗ್ಯಕರ ರೀತಿಯಲ್ಲಿ ಇದ್ದಲ್ಲಿ ಗಂಡಸರು ಹಾಗು ಹೆಂಗಸರಿಗೆ ಬಾಧಿಸುವ ರೋಗ ರುಜಿನಗಳಿಂದ ದೂರವಿದ್ದು ಅಭಿವೃದ್ಧಿ ಹೊಂದುತ್ತಾರೆ.

. ಮಾ ವಃ ಸ್ತೇನ ಈಶತ ಮಾಘಶಂಸಃ - ಹಸುವು ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ಸೇವಿಸಲು ಅವುಗಳನ್ನು ಯಾರು ಕೊಲ್ಲದಿರಲಿ, ಅವು ನಮಗೆ ಸಮೃದ್ಧಿಯನ್ನು ನೀಡಲಿ.

ವೇದಗಳಲ್ಲಿ ಕೇವಲ ಹಸುಗಳನಲ್ಲದೆ ಸಕಲ ಜೀವಜಂತುಗಳನ್ನು ಉತ್ತಮವಾಗಿ ಪ್ರಶಂಸಿಸಲಾಗಿದೆ ಹಾಗು ಪ್ರಾಣಿ ಹಿಂಸೆಯನ್ನು ಖಂಡಿಸಲಾಗಿದೆ ಎಂದು ಸಾಬೀತು ಪಡಿಸಲು ಯಾರಿಗಾದರೂ ಇದಕ್ಕಿಂತ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಬೇಕೇ? ಯಾವುದೇ ಅಮಾನವೀಯ ಕೃತ್ಯಗಳಿಗೆ ವೇದಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಎಲ್ಲಾ ಪ್ರಮಾಣಗಳು ಧೃಢಪಡಿಸುತ್ತದೆ. ಅದರಲ್ಲೂ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ಬಗ್ಗೆ ವೇದಗಳ ಪೂರ್ಣ ವಿರೋಧವಿದೆ. ಆದ್ದರಿಂದ ವಿಧ್ಯಾವಂತ ಓದುಗರೆ, ವೇದಗಳಲ್ಲಿ ಪ್ರಾಣಿ ಹಿಂಸೆ ಇದಯೇ? ಅಥವ ಇಲ್ಲವೇ? ಎಂಬುದನ್ನು ನೀವೇ ನಿರ್ಧರಿಸಿ.

ಭಾಗ – ೪                      ವಿತಂಡವಾದಿಗಳ ಆಪಾದನೆಗಳಿಗೆ ಸತ್ಯಾಂಶದ ಉತ್ತರ

ರೀತಿಯ ಅಹಿಂಸಾ ಪ್ರಧಾನ ವಿಚಾರಗಳು ಪ್ರಕಟವಾದ ನಂತರ, ವೇದಗಳ ಪಾವಿತ್ರ್ಯತೆಯನ್ನು ಹಾಗು ನಮ್ಮ ಪುರಾತನ ಸಂಸ್ಕೃತಿಯನ್ನು ಸಹಿಸದ ಕೆಲವರು ನಾನಾ ಕಡೆಗಳಿಂದ ತೀವ್ರವಾದ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಋಗ್ವೇದದ ಮಂತ್ರಗಳು, ಮನುಸ್ಮೃತಿಯ ಕೆಲವು ಶ್ಲೋಕಗಳು ಹಾಗು ಇತರೆ ಮೂಲಗಳು. ಅದಕ್ಕಾಗಿ ಈ ಕೆಳಗಂಡಂತೆ ಹೆಚ್ಚಿನೆ ವಿವರಣೆ ನೀಡಲಾಗಿದೆ.

. ಲೇಖನವು ಮನುಸ್ಮೃತಿಯ ಆಧಾರವನ್ನು ಉಲ್ಲೇಖಿಸಿದೆ. ಅದರಂತೆ ಯಾರಾದರು ಕೊಲ್ಲಲು ಅನುಮತಿ ಕೊಟ್ಟರೂ ಅವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು. ಆದ್ದರಿಂದ ಹಿಂದೆಯೇ ಹೇಳಿದಂತೆ ಎಷ್ಟೊ ಶ್ಲೋಕಗಳು ಹಾಗು ವಿಷಯಗಳನ್ನು ಹೊಸದಾಗಿ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ನಿಮ್ಮ ಸಂಶಯವು ಕಲಬೆರಕೆ ಮನುಸ್ಮೃತಿಯನ್ನೋ ಅಥವ ತಪ್ಪು ವ್ಯಾಖ್ಯಾನ ಮಾಡಿದಂತಹ ಕೃತಿಯಿಂದಲೋ ಬಂದಂತಾಗಿದೆ. ಮೊಟ್ಟಮೊದಲಾಗಿ ಮನುಸ್ಮೃತಿಯಲ್ಲಿ ಪ್ರಾಣಿಹಿಂಸೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ. http://www.vedicbooks.com  ನಲ್ಲಿ ಸಿಗುವಂತಹ ಡಾ. ಸುರೇಂದ್ರ ಕುಮಾರ್ ರವರ ಮನುಸ್ಮೃತಿಯನ್ನು ಓದಲು ಶಿಫ಼ಾರಸ್ಸು ಮಾಡುತ್ತೇವೆ.

.ಇಲ್ಲಿ ಕೆಲವರು ಗೋಮಾಂಸ ಸೇವನೆಯು ವೇದಗಳಲ್ಲಿ ಅಥವ ಸನಾತನ ಪಠ್ಯಗಳಲ್ಲಿ ಉದಾಹರಣೆಗಳನ್ನು ತೋರಿಸಲೇಬೇಕೆಂಬ ಹುಚ್ಚು ಹಠವಾದಿಗಳು ಮಾನ್ಸವನ್ನು ಮಾಂಸ ಎಂದು ಅರ್ಥೈಸಿಕೊಂಡಿದ್ದಾರೆ. ನೈಜತೆಯಲ್ಲಿ ಮಾನ್ಸ ಎಂಬ ಪದವು ಮೆತ್ತಗಿರುವ ತಿರುಳು ಎಂದರ್ಥ. ಮೆತ್ತಗಿರುವ ತಿರುಳು ಹಣ್ಣಿನದ್ದಾಗಿರಬಹುದು, ತರಕಾರಿಯದಾಗಿರಬಹುದು ಅಥವ ಮಾಂಸದಾದರೊ ಆಗಿರಬಹುದು. ವೇದಗಳಲ್ಲಿ ಪ್ರಾಣಿ ಹಿಂಸೆಯನ್ನು ಅಷ್ಟು ತೀವ್ರವಾಗಿ ವಿರೋಧಿಸಿರುವುದರಿಂದ, ಮಾನ್ಸ ಎಂಬ ಪದಾದ ಅರ್ಥ ಖಂಡಿತ ಮಾಂಸವಾಗಿರಲು ಸಾಧ್ಯವೇ ಇಲ್ಲ. ಇನ್ನು ಕೆಲವು ಕಡೆ ಮಾಂಸಃ ಎಂದರೆ ಮಾಂ + ಸಃ ಅಂದರೆ ನಾನು ಹಾಗೂ ನನ್ನ ಜೊತೆಯಲ್ಲಿರುವ ಸಮಾಜ ಎಂಬಿತ್ಯಾದಿ ಸಂದರ್ಭೋಚಿತ ವ್ಯಾಖ್ಯಾನವನ್ನು ಅಕ್ಷಸೂತ್ರದಂತೆ ಹೊಂದುತ್ತದೆ.

. ಇನ್ನು ಕೆಲವರು ಸತ್ಯಕ್ಕೆ ದೂರವಿರುವಂತಹ, ಪ್ರಮಾಣವಲ್ಲದ ಪಠ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅದೇ ಉತ್ತಮ ಸಾಕ್ಷಿಗಳೆಂದು ಬಣ್ಣಿಸಿದ್ದಾರೆ. ಇವರು ಮಾಡುವಂತಹ ಕೆಲಸ ಬಹಳಾ ಸುಲಭ. ಯಾವುದಾದರೋ ಸಂಸ್ಕೃತದಲ್ಲಿ ಬರೆದಂತಹ ಪಠ್ಯಗಳನ್ನೊ, ವಾಕ್ಯಗಳನ್ನೊ ಧರ್ಮವೆಂದೇ ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಭಾಷಾಂತರಿಸಿ ನಮ್ಮ ಸನಾತನ ಧರ್ಮವೇ ತಪ್ಪೆಂದು ಧೃಡಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ನಮ್ಮನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತಿರುಚಿದ ಸಾಕ್ಷಾಧಾರಗಳನ್ನು ತೋರಿಸಿ ಮೂರ್ಖರನ್ನಾಗಿ ಮಾಡುತಿದ್ದಾರೆ.

. ಇವರು ಹೇಳುವಂತಹಾ ಋಗ್ವೇದದ ಮಂತ್ರಗಳನ್ನು ವಿಶ್ಲೇಷಿಸೋಣ;

೧. ಋಗ್ವೇದ ೧೦.೮೫.೧೩
ಋಷಿ – ಸೂರ್ಯಾಸಾವಿತ್ರೀ, ದೇವತಾ – ಸೂರ್ಯಾವಿವಾಹಃ, ಛಂದಃ – ವಿರಾಡನುಷ್ಟುಪ್, ಸ್ವರ - ಗಾಂಧಾರ
ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ |
ಅಘಾನು ಹನ್ಯಂತೇ ಗಾವೋಽರ್ಜುನ್ಯೋಃ ಪರ್ಯುಹ್ಯತೇ ||

ಆಪಾದನೆ:- ಮಗಳ ಮದುವೆಯ ಸಮಾರಂಭದಲ್ಲಿ ಎತ್ತುಗಳನ್ನು ಹಾಗು ಹಸುಗಳನ್ನು ಬಲಿಕೊಡುತ್ತಾರೆ.
ಸತ್ಯಾಂಶ:- ಋಗ್ವೇದದ ಮಂತ್ರದಲ್ಲಿಸೂರ್ಯನಕಿರಣವು ಚಳಿಗಾಲದಲ್ಲಿ ಬಲಹೀನಗೊಂಡು, ವಸಂತ ಋತುವಿನಲ್ಲಿ ಮತ್ತೆ ಬಲಶಾಲಿಯಾಗುತ್ತದೆಎಂದು.

ಹಸುವನ್ನು ಕೂಡ ಗೋ ಎಂದು ಕರೆಯಲಾಗುವುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಬದಲಾಗಿ ಗೋವು ಎಂದೇ ಮಂತ್ರದಲ್ಲಿ ಭಾಷಾಂತರಿಸಿದ್ದಾರೆ. ಮಂತ್ರದಲ್ಲಿ ಬಲಹೀನ ಎಂಬುದಕ್ಕೆ ಸಂಸ್ಕೃತದಲ್ಲಿ ಹನ್ಯತೆ ಎಂಬ ಪದ ಉಪಯೋಗಿಸಲಾಗಿದೆ. ಇದರ ಇನ್ನೊಂದರ್ಥ ಕೊಲ್ಲುವುದು ಎಂದು. ಕೆಲವರು ಬೇಕೆಂತಲೆ ಮಂತ್ರವನ್ನು ಸಂಪೂರ್ಣವಾಗಿ ಹೇಳದೆ, ಅವರಿಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ಇಂತಹ ಅಜ್ಞಾನಿ ಮೋಸಗಾರರಿಗೆ ಕೇಳುವುದಿಷ್ಟೇ, ಚಳಿಗಾಲದಲ್ಲಿ ಕೊಂದಂತಹ ಹಸುವು ಪುನಃ ವಸಂತ ಋತುವಿನಲ್ಲಿ ಬಲಶಾಲಿಯಾಗಲು ಹೇಗೆ ತಾನೆ ಸಾಧ್ಯ?

. ಋಗ್ವೇದ .೧೭.
ಋಷಿ - ಭರದ್ವಾಜೋ ಬಾರ್ಹಸ್ಪತ್ಯಃ, ದೇವತಾ – ಇಂದ್ರಃ, ಛಂದಃ – ತ್ರಿಷ್ಟುಪ್, ಸ್ವರ – ಧೈವತಃ
ಪಿಬಾ ಸೋಮಮಭಿ ಯಮುಗ್ರ ತರ್ದ ಊರ್ವಂ ಗವ್ಯಂ ಮಹಿ ಗೃಣಾನ ಇಂದ್ರ |
ವಿ ಯೋ ಧೃಷ್ಣೋ ವಧಿಷೋ ವಜ್ರಹಸ್ತ ವಿಶ್ವಾ ವೃತ್ರಮಮಿತ್ರಿಯಾ ಶವೋಭಿಃ ||

ಆಪಾದನೆ:- ಇಂದ್ರನು ಹಸು, ಕುರಿ, ಕುದುರೆ ಹಾಗು ಎಮ್ಮೆಗಳ ಮಾಂಸವನ್ನು ತಿನ್ನುತ್ತಿದ್ದ.
ಸತ್ಯಾಂಶ:- ಋಗ್ವೇದದ ಮಂತ್ರವುಹೇಗೆ ಮರದ ಸೌದೆಯು ಯಜ್ಞದ ಬೆಂಕಿಯನ್ನು ಹೆಚ್ಚಿಸುತ್ತದೊ ಹಾಗೆಯೇ ಉತ್ತಮ ವಿದ್ವಾಂಸರು ಪ್ರಪಂಚವನ್ನು ಪ್ರಾಕಾಶಿಸುತ್ತಾರೆಎಂದು ಹೇಳುತ್ತದೆ.

ಮಂತ್ರದಲ್ಲಿ ಅದು ಹೇಗೆ ಇಂದ್ರನು, ಹಸು, ಕುರಿ, ಕುದುರೆ ಹಾಗು ಎಮ್ಮೆಗಳು ಬಂದವೊ ಇವರ ದಡ್ಡತಲೆಗಳಿಗೆ ಮಾತ್ರ ತಿಳಿದಿರುವಂತದ್ದು.

೫. ಆಪಾದನೆ:- ಯಜುರ್ವೇದ ೨೪.೨೯ “ಹಸ್ತಿನಾ ಆಲಂಭತೇ” ಎಂದು ಆನೆಯನ್ನು ಆಹುತಿ ನೀಡುವುದಾಗಿ ಹೇಳಿದೆಯಲ್ಲ?
ಸತ್ಯಾಂಶ:- ಲಭ್ ಧಾತುವಿನಿಂದ ಉತ್ಪನ್ನ ಆಲಂಭ ಶಬ್ದವು ಆಹುತಿ ಅಥವಾ ಹತ್ಯೆ ಎಂದು ಯಾರು ನಿಮಗೆ ಹೇಳಿದರು? ಲಭ ಎಂದರೆ ಗ್ರಹಿಸುವುದು. ಇಲ್ಲಿ ಹಸ್ತಿನಾ ಎಂದರೆ ಆನೆ ಎನ್ನುವ ಪ್ರಾಣಿಯ ವ್ಯಾಪ್ತಿಯನ್ನು ಮೀರಿದ ಬೇರೆಯೇ ಅರ್ಥ ಉಳ್ಳದ್ದು. ಹೋಗಲಿ ಪಾಮರರು ನಾವು ಪಾರಮಾರ್ಥಿಕ ಬೇಡವೆಂದರೆ ರಾಜನು ತನ್ನ ಗಜಸೇನಾ ಬಲವೃದ್ಧಿಗೆ ಆನೆಗಳನ್ನು ಗ್ರಹಿಸಬೇಕು ಎಂದು ರಾಜ್ಯಶಾಸ್ತ್ರ ವ್ಯಾಖ್ಯಾನ. ಇದರಲ್ಲಿ ಹಿಂಸೆ ಎಲ್ಲಿದೆ? ಆಲಂಭ ಶಬ್ದವು ಬೇರೆ ಬೇರೆ ವಾಕ್ಯ ಪ್ರಯೋಗದಲ್ಲಿ ಕಂಡುಬರುತ್ತದೆ. ಮನುಸ್ಮೃತಿಯಲ್ಲಿ ಬ್ರಹ್ಮಚಾರಿಯು “ವರ್ಜಯೇತ್ ಸ್ತ್ರೀನಾಮ್ ಆಲಂಭಮ್” ಎಂದಿದೆ. ಆಲಂಭತೇ ಎನ್ನುವುದು ಕೊಲ್ಲುವುದೇ ಎಂದು ಪ್ರತಿಪಾದಿಸುವವರು ಪ್ರಾಯಶಃ ಪ್ರಾಣಿಭಕ್ಷಕರಾಗಿದ್ದು ತಮ್ಮನ್ನು ಸರ್ಮರ್ಥಿಸಿಕೊಳ್ಳಲು ವೇದಾರ್ಥವನ್ನೇ ತಿರುಚಿದ್ದಾರೆ.

೬. ಆಪಾದನೆ:- ಬ್ರಾಹ್ಮಣ ಹಾಗೂ ಶ್ರೌತ ಗ್ರಂಥಗಳಲ್ಲಿ ಯಜ್ಞದಲ್ಲಿ ಸಂಜ್ಞಾಪನಾ ಎಂದು ಹತ್ಯೆಯನ್ನು ಸೂಚಿಸಿದೆ.
ಸತ್ಯಾಂಶ:- ಅಥರ್ವವೇದ ೬.೧೦.೯೪-೯೫ ಇದರಲ್ಲಿ ಮನಸ್ಸು, ದೇಹ, ಹೃದಯಾದಿಗಳ ಸಂಜ್ಞಾಪನೆಯನ್ನು ಹೇಳಿದೆ. ಅಂದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅರ್ಥವೇ? ಸಂಜ್ಞಾಪನಾ ಎಂದರೆ ಸಂಯೋಗ + ಪೋಷಣೆ ಎಂದರ್ಥ. ಈ ಮಂತ್ರ ಹೇಳುವುದೇನೆಂದರೆ ನಾವು ನಮ್ಮ ಮನಸ್ಸು, ದೇಹ ಮತ್ತು ಹೃದಯಗಳನ್ನು ಸದೃಢಗೊಳಿಸಿಕೊಂಡು ಎಲ್ಲವೂ ಒಟ್ಟಾಗಿ ಚಟುವಟಿಕೆ ಮಾಡಲು ಪೋಷಣೆ ಒದಗಿಸಿಕೊಳ್ಳಬೇಕು ಎಂಬ ಭಾವನೆ ಇದೆ. ಸಂಜ್ಞಾಪನಾ ಎಂದರೆ ತಿಳಿಸುವುದು ಎಂಬ ಅರ್ಥವೂ ಇದೆ.

೭.  ಆಪಾದನೆ:- ಯಜುರ್ವೇದ ೨೫.೩೪-೩೫ ಭೂಮಿ ಅಥವ ಹುಲ್ಲುಗಾವಲಲ್ಲಿದ್ದ ಸಾವಿರಾರು ಕಾಯವನ್ನು ಕುದಿಸಿ, ಮಾಂಸವ ರೋಸ್ಟ್ ಮಾಡಿ ಸುಟ್ಟು ಭಗವಂತನಿಗೆ ಅರ್ಪಿಸುವುದು. ಋಗ್ವೇದ ೧.೧೬೨.೧೧-೧೨ ಅಶ್ವಪಾಲಕರನ್ನು ಕರೆದು ಹೇಳು- ಅದರ ದುರ್ಗಂಧವನ್ನು ತೆಗೆದು, ಮಾಂಸ ಬಗೆದು, ಹಂಚಲಿಕ್ಕೆ ಕಾಯಿರಿ, ಪ್ರಧಾನರಿಂದ ಆಜ್ಞೆ ದೊರೆತೊಡನೆ ಹಂಚಿರಿ. ಇವುಗಳಿಂದ ಯಜ್ಞದಲ್ಲಿ ಅಶ್ವ ಹತ್ಯೆಯು ಸಿದ್ಧವಾಗುತ್ತದೆ.
ಸತ್ಯಾಂಶ:- ಇದು ವೇದವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಗ್ರಿಫಿತ್‌ನ ಕಪೋಲ ಕಲ್ಪಿತ ವಾಕ್ಯಗಳು. ಮೊದಲನೆಯ ಮಂತ್ರದಲ್ಲಿ ಅಶ್ವದ ಉಲ್ಲೇಖವೇ ಇಲ್ಲ. ಅದೊಂದು ಚಿಕಿತ್ಸಾ ಪ್ರಕ್ರಿಯೆ. ಏರಿದ ಜ್ವರವನ್ನು ಉಪಶಮನ ಗೈಯಲು ಬೇಕಾದ ಪರಿಹಾರೋಪಾಯಗಳನ್ನು ವೈದ್ಯನಿಗಾಗಿ ಹೇಳಲಾಗಿದೆಯೇ ಹೊರತು ಅಲ್ಲ್ಯಾವುದೇ ಪ್ರಾಣಿ ವಿಚಾರವೇ ಇಲ್ಲ. ಎರಡನೆಯ ಮಂತ್ರದಲ್ಲಿ ವಾಜಿನಮ್ ಎಂದರೆ ಕುದುರೆ ಮಾತ್ರವಲ್ಲದೆ ವೀರತ್ವ, ಶೂರತ್ವ, ಧೀರತ್ವ, ಖಗ, ಮನುಷ್ಯತ್ವ, ಯೋಧ, ಬಾಣ ಪ್ರಯೋಗ, ಪೌರುಷತ್ವ, ವೇಗ ಇತ್ಯಾದಿ ಹಲವು ಅರ್ಥ ಕೊಡುತ್ತದೆ. ಹಾಗಾಗಿ ವೇಗ, ವೀರ, ಶೂರತ್ವಕ್ಕೆ ಸರಿಸಾಟಿಯಾದ ಕುದುರೆಯನ್ನೂ ವಾಜಿನಮ್ ಎಂದರು. ನಿರುಕ್ತದ ಯಾವುದೇ ಅರ್ಥವನ್ನು ನೋಡಿದರೂ ಯಜ್ಞದಲ್ಲಿ ಅಶ್ವ ಹತ್ಯೆ ಎನ್ನುವ ಅಪಾರ್ಥವನ್ನು ಬಿಂಬಿಸುವುದೇ ಇಲ್ಲ.

ಎರಡನೆಯ ಮಂತ್ರದಲ್ಲಿ ಅದನ್ನು ಕುದುರೆ ಎಂದೇ ಗ್ರಹಿಸಿದರೆ ಅಲ್ಲಿ ಅಶ್ವವಧೆಯನ್ನು ಹತ್ತಿಕ್ಕಬೇಕು ಎಂಬ ಭಾವ ಬಿಂಬಿತವಾಗುತ್ತದೆಯೇ ಹೊರತು ಕೊಲ್ಲಲಿಕ್ಕಲ್ಲ.

೮. ಆಪಾದನೆ:- ಗೋಘ್ನ ಎಂದು ಗೋಹತ್ಯೆಯನ್ನು ವೇದದಲ್ಲಿ ಹೇಳಿದೆ. ಅತಿಥಿಗ್ವ/ಅತಿಥಿಘ್ನ – ಗೋಮಾಂಸವನ್ನು ಅತಿಥಿಗಳಿಗೆ ಉಣಬಡಿಸುವವ ಎಂದಿದೆ.
ಸತ್ಯಾಂಶ:- ಈ ಲೇಖನದ ಒಂದನೇ ಭಾಗದಲ್ಲಿ ಅಘ್ನ್ಯ ಹಾಗೂ ಅದಿತಿ ಎಂದರೆ ಕೊಲ್ಲಲರ್ಹವಲ್ಲದ್ದು ಎಂದು ಸಾಧಿಸಲಾಗಿದೆ. ಗೋನಾಶಕರಿಗೆ ನ್ಯಾಯಶಾಸ್ತ್ರವು ಕಠಿಣ ಸಜೆ ವಿಧಿಸಲು ಹೇಳಿದೆ. ಗಮ್ ಧಾತುವು ‘ಹೋಗುವುದು’ ಎಂಬ ಶಬ್ದವಾಗಿ ಪ್ರಯೋಗವಾಗುತ್ತದೆ. ಆದ್ದರಿಂದ ಗ್ರಹಗಳನ್ನೂ ಗೋ ಎಂದಿದೆ. ಅತಿಥಿಗ್ವ/ಅತಿಥಿಘ್ನ ಎಂದರೆ ಅತಿಥಿಗಳ ಹತ್ತಿರ ಹೋಗಿ ಅವರ ಕುಶಲೋಪರಿಯನ್ನು ವಿಚಾರಿಸುವವ.

ಗೋಘ್ನ ಎಂದರೆ ಹಲವು ಅರ್ಥಗಳನ್ನು ಬಿಂಬಿಸುತ್ತದೆ. ಗೋ + ಹನ್ = ಗೋವಿನ ಹತ್ತಿರ ಹೋಗುವುದು, ಗೋ + ಅಘ್ + ಹನ್ = ಗೋವು ಪಾಪ ಕರ್ಮಗಳನ್ನು ನಾಶಮಾಡುತ್ತದೆ. ವೇದದಲ್ಲಿ ಹನ್ ಧಾತುವು ಹತ್ತಿರ ಹೋಗುವುದು ಎಂದು ಎಷ್ಟೋ ಕಡೆ ಬಳಕೆಯಾಗಿದೆ. ಅಥರ್ವವು ಪತಿಯು ಪತ್ನಿಯನ್ನು ಹನ್ – ಎಂದರೆ ಹತ್ಯೆಯಲ್ಲ, ಹತ್ತಿರ ಇರುವುದು. ಆದ್ದರಿಂದ ಈ ಎಲ್ಲಾ ಮಂಡನೆಗಳು ಆಧಾರ ರಹಿತವಾದ ವಿತಂಡ ವಾದಗಳು.

೯. ಆಪಾದನೆ:- ವೇದಗಳು ಬಾಲ, ಯುವ, ಪ್ರೌಢ ಹಸುಗಳನ್ನು ಕೊಲ್ಲಬಾರದೆಂದಿದೆ. ಆದರೆ ವಶಾ ಗೋ = ವಯೋವೃದ್ಧವಾದ, ಬರಡಾದ ಹಸುಗಳನ್ನು, ಊಕ್ಷ = ಎತ್ತುಗಳನ್ನು ಕೊಲ್ಲಬೇಕು ಎಂದಿದೆ.
ಸತ್ಯಾಂಶ:- ಇದು ಅರೆ ಬೆಂದ ಕಾಳಿನಂತಹಾ ವಿದ್ವಾನ್ ಡಿ. ಎನ್ ಜಾಹ್ ಎನ್ನುವವ ಗೋಹತ್ಯೆ ವಿರುದ್ಧ ಸನಾತನ ಧರ್ಮೀಯರಿಂದ ನೀಡಲ್ಪಟ್ಟ ವೇದಾಧಾರಗಳನ್ನು ಪೊಳ್ಳಾಗಿಸಲು ಮಾಡಿದ ಪ್ರಯತ್ನ. ಇಂತಹಾ ವಿದ್ವಾಂಸರು ನಮ್ಮಲ್ಲೇ ಇದ್ದು ನಮಗೇ ಬೆನ್ನಿಗೆ ಚೂರಿ ಹಾಕುತ್ತಿರುವಾಗ ಅನ್ಯ ಧರ್ಮೀಯರ ಆಕ್ರಮಣ ಏನೂ ಅಲ್ಲ! ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತಿದೆ. ಆದರೆ ಹೊಲದ ಮಾಲೀಕನಿಗೆ ಬೇಲಿಯನ್ನೂ ಕತ್ತರಿಸಲು ತಿಳಿದಿದೆ ಎಂದು ಅದಕ್ಕೆ ತಿಳಿದಿರುವುದಿಲ್ಲ.
ಊಕ್ಷ ಎಂದರೆ ಒಂದು ಓಷಧಿ ಸಸ್ಯ. ಅದನ್ನು ಸೋಮ ಎಂದು ಮೊನಿಯರ್ ವಿಲಿಯಮ್ಸ್‍ನಂತಹಾ ಕೆಲ ಸಂಸ್ಕೃತ-ಆಂಗ್ಲ ಶಬ್ದಕೋಶ ರಚನಾಕಾರರೂ ಹೆಸರಿಸಿದ್ದಾರೆ.

ವಶಾ ಎಂದರೆ ಪರಮಾತ್ಮನ ಹಿಡಿತದಲ್ಲಿರುವ ಶಕ್ತಿಗಳೇ ಹೊರತು ಬರಡು ಹಸುಗಳಲ್ಲ. ಅಥರ್ವವೇದ ೧೦.೧೦.೪ ವಶಾಮ್ ಸಹಸ್ರಧಾರಾಮ್ ಎಂದು ಧಾರಾಕಾರವಾಗಿ ಅಮೃತಸುಧೆಯನ್ನು ತನ್ನ ದೇಹದ ಕಣ ಕಣಗಳಿಂದ ಹೊರಸೂಸುವ ಶಕ್ತಿ ಪುಂಜಗಳು ಎಂದಿದೆ. ಹೀಗಿರುವಾಗ ವಶಾ ಎಂದರೆ ಬರಡು ಎಂದಾಗುವುದೇ ಇಲ್ಲ.
ಋಗ್ವೇದ ೧೦.೧೯೦ – ವಶೀ ಎಂದರೆ ಭಗವಂತನ ಹಿಡಿತದಲ್ಲಿರುವ ಶಕ್ತಿಯನ್ನು ಸಂಧ್ಯಾಕಾಲದಲ್ಲಿ ಉಪಾಸಿಸಲಾಗುತ್ತದೆ. ಮತ್ತೆ ಕೆಲವು ಋಕ್ಕುಗಳಲ್ಲಿ ವಶಾ ಎನ್ನುವುದನ್ನು ಸಮೃದ್ಧ ಭೂಮಿ, ತಾಯಿಯು ಮಗುವನ್ನು ಹೇಗೆ ತನ್ನ ಹಿಡಿತದಲ್ಲಿ ಪೋಷಿಸುತ್ತಾಳೆ (ಅಥರ್ವ ೨೦.೧೩೦.೧೫), ಒಂದು ಓಷಧೀ ಸಸ್ಯ, ಇತ್ಯಾದಿಯಾಗಿ ಬಳಕೆಯಾಗಿದೆ.
ಯಾವ ರಾಕ್ಷಸೀ ಪ್ರೇರಣೆಯು ಬರಡು ಹಸುವನ್ನು ಕೊಲ್ಲಿರೆಂದು ವಿದ್ವಾಂಸರಿಂದ ಹೇಳಿಸಿತೋ ಗೊತ್ತಿಲ್ಲ!!

೧೦. ಆಪಾದನೆ:- ಬೃಹದಾರಣ್ಯಕ ಉಪನಿಷತ್ತು ೬.೪.೧೮ ಹೇಳುವುದೇನೆಂದರೆ ಸುಪುತ್ರ ಪ್ರಾಪ್ತಿಗಾಗಿ ದಂಪತಿಗಳು ಮಾಂಸಾನ್ನ (ಮಾಂಸೌದನಂ) ಅಥವಾ ಎತ್ತು (ಆರ್ಷಭಃ) ಅಥವಾ ಕರುವನ್ನು (ಊಕ್ಷ) ಭುಂಜಿಸಬೇಕು.

ಸತ್ಯಾಂಶ:-
ಪ್ರತಿಪಾದನೆ ೧:- ಈಗ ವಿತಂಡವಾದಿಗಳು ವೇದಗಳನ್ನು ಬಿಟ್ಟು ಉಪನಿಷತ್ ಭಾಗಕ್ಕೆ ಇಳಿದಿದ್ದಾರೆ. ಯಾರಾದರೂ ಉಪನಿಷತ್ತಿನಲ್ಲಿ ಮಾಂಸಭಕ್ಷಣೆ ಇದೆ ಎಂದು ಒಂದು ಪಕ್ಷ ಸಾಧಿಸಿ ತೋರಿಸಿದರೂ ವೇದದಲ್ಲಿ ಇದೆ ಎಂದು ಸಾಧಿಸಿದಂತೆ ಆಗುವುದಿಲ್ಲ. ಸನಾತನ ಧರ್ಮದ ತಳಹದಿಯೇ ವೇದಗಳು ಹೊರತು ಉಪನಿಷತ್ತಲ್ಲ. ಇದನ್ನು  ಪೂರ್ವ ಮೀಮಾಂಸಾ ೧.೩.೩, ಮನುಸ್ಮೃತಿ ೨.೧೩ + ೧೨.೯೫, ಜಾಬಾಲ ಸ್ಮೃತಿ, ಭವಿಷ್ಯ ಪುರಾಣ ಇತ್ಯಾದಿಗಳ ಮತದಂತೆ ವೇದ ಮತ್ತು ಶಾಸ್ತ್ರಗಳಲ್ಲಿ ಭಿನ್ನತೆಯಿಂದ ಶಂಕೆ ಉಂಟಾದಲ್ಲಿ ವೇದವೇ ಸರ್ವಮಾನ್ಯ, ಸರ್ವಗ್ರಾಹ್ಯ, ಸಾರ್ವಕಾಲಿಕ, ಸಾರ್ವದೇಶಿಕ ಸತ್ಯ ಎಂದು ಪರಿಗಣಿಸಬೇಕು. ಉಪನಿಷತ್ತುಗಳು ಯಾವುದೋ ಒಂದು ಮಂತ್ರವನ್ನು ವ್ಯಾಖ್ಯಾನಿಸಲು ಹೊರಟು ಹಲವು ಪರಿಷ್ಕರಣೆಗಳನ್ನು ಹೊಂದಿ ಇಂದು ಮೂಲ ಉಪನಿಷತ್ತುಗಳು ಮರೆಯಾಗಿ ವ್ಯಾಖ್ಯಾನವೇ ಮೂಲವೆಂಬ ಅಯೋಮಯ ಉತ್ಪನ್ನವಾಗಿದೆ.
ಪ್ರತಿಪಾದನೆ ೨:- ಪ್ರತಿವಾದಕ್ಕೆ ಪ್ರತಿಪಾದನೆ ೧ ಸಾಕಾದರೂ ನೀಡಲ್ಪಟ್ಟಿರುವ ಉಪನಿಷತ್ ವಾಕ್ಯವನ್ನು ಪರಾಮರ್ಷಿಸಿ ಆಧಾರ ರಹಿತವೆಂದು ಸಾಧಿಸಿ ತೋರಿಸುತ್ತೇವೆ.
ಪ್ರತಿಪಾದನೆ ೨.೧:- ಮಾಷೋದನಮ್ – ಈ ಶಬ್ದವುಳ್ಳ ಶ್ಲೋಕವು ಬರುವ ಮುನ್ನ ಇನ್ನೂ ೪ ಶ್ಲೋಕಗಳುಂಟು. ಅದರಲ್ಲಿ ಅನ್ನದೊಂದಿಗೆ ಅಗ್ನಿಯಲ್ಲಿ ವಿವಿಧ ಆಹುತಿ ಸಂಯೋಜನೆಗಳಿಂದ ಉಳಿದ ಸರ್ಪಿಷ ಪ್ರಸಾದವನ್ನು ಸ್ವೀಕರಿಸುವ ಮುಖೇನ ವೇದದ ವಿವಿಧ ಜ್ಞಾನವುಳ್ಳ ಮಗುವನ್ನು ಪಡೆಯುವ ವಿಚಾರ ಹೇಳಿದೆ. ಆ ವಿವಿಧ ವಸ್ತುಗಳೆಂದರೆ:
·         ಕ್ಷೀರೌದನಮ್ (ಹಾಲು+ಅನ್ನ) – ಶುಕ್ಲೋ ಜಾಯತೇ ಏಕವೇದಜ್ಞ,
·         ದಧ್ಯೋದನಮ್ (ಮೊಸರು+ಅನ್ನ) – ಕಪಿಲಃ ಪಿಂಗಲೋ ಜಾಯತೇ ದ್ವಿವೇದಿ,
·         ಉದೌದನಮ್ (ನೀರು+ಅನ್ನ) – ಶ್ಯಾಮೋ ಲೋಹಿತಾಕ್ಷೋ ಜಾಯತೇ ತ್ರಿವೇದಿ,
·         ತಿಲೌದನಮ್ (ತಿಲ+ಅನ್ನ)  - ದ್ಯುಹಿತಾ ಮೇ ಪಂಡಿತಾ ಜಾಯತೇ,
·         ಮಾಂÆಸೌದನಮ್ (ಮಾಂಸ ಅಲ್ಲ ಅದು ಮಾಂÆಸ ಅಂದರೆ) – ಪಂಡಿತೋ ವಿಗೀತಃ ಸಮಿತಿಂಗಮಃ ಶುಶ್ರೂಷಿತಾಂ ವಾಚಂ ಭಾಷಿತಾ ಜಾಯೇತ ಸರ್ವಾನ್ ವೇದಾನನುಬ್ರುವೀತ.
ಅಂದರೆ ಮನಸ್ಸಿಗೇ ಬೇಕಾದ ಸರಿಯಾದ ಅನ್ನವನ್ನು ಅಗ್ನಿಯಲ್ಲಿ ಆಹುತಿ ನೀಡಿ ಸರ್ಪಿಷವನ್ನು ೬೪ ಲಕ್ಷ ಮನೋ ಕೇಂದ್ರಗಳಲ್ಲಿ ವಿನ್ಯಸಿತಗೊಳಿಸಿದರೆ ಸರ್ವವೇದಗಳನ್ನೂ ಬಲ್ಲವನಾದ ಪುತ್ರ ಪ್ರಾಪ್ತಿ ಸಾಧ್ಯ ಎಂದು ವಿವರಿಸುವ ಪುಷ್ಟಿ ಯಜ್ಞ ಪ್ರಕ್ರಿಯೆ ಇದು.

[ಗಮನಿಸಿ:-  ಮಾಂÆಸ ಎಂಬಲ್ಲಿ Æ ಎಂಬುದು ಚಂದ್ರ ಬಿಂದು ವಿರಾಮ ಎಂಬ ಚಿಹ್ನೆ. ಯೂನಿಕೂಡ್ ಫಾಂಟಿನಲ್ಲಿ ಇದು ಇನ್ನೂ ಸರಿಯಾಗಿ ದಾಖಲಾಗಿಲ್ಲ.]

ಪ್ರತಿಪಾದನೆ ೩:- ಇನ್ನು ಇದೇ ವಿಚಾರವನ್ನು ಆಯುರ್ವೇದದಲ್ಲಿ ವಿಸ್ತರಿಸುತ್ತಾ ಚರಕ ಸಂಹಿತೆಯಲ್ಲಿ ಈ ಶಬ್ದವನ್ನು ಮಾಷೋದನ ಎಂಬ ಭಾವ ಮೂಡುವಂತೆ ಬಳಸಲಾಗಿದೆ. ಮಾಷವೆಂದರೆ ಒಂದು ಉದ್ದು ಧಾನ್ಯ. ಇದರಲ್ಲಿ ಯಾವುದೇ ಮಾಂಸಭಾಗವಿಲ್ಲ. ಗರ್ಭಿಣೀ ಸ್ತ್ರೀಗೆ ಮಾಂಸಾಹಾರವು ನಿಷಿದ್ಧವೆಂದು ಆಯುರ್ವೇದ ಹೇಳುತ್ತದೆ (ಸುಶ್ರುತ ಸಂಹಿತೆ). ಸುಶ್ರುತರ ಒಂದು ಶ್ಲೋಕವು ದಂಪತಿಗಳಿಗೆ ಸುಪುತ್ರ ಪ್ರಾಪ್ತಿಗೆ ಮಾಷ ಧಾನ್ಯವನ್ನು ಹೇಳುತ್ತದೆ.
ಪ್ರತಿಪಾದನೆ ೪:- ಇದನ್ನೂ ಒಪ್ಪದ ಮತ್ತ ವಿದ್ವಾಂಸರಿಗೆ ಅದು ಮಾಷ ಅಥವಾ ಮಾಂÆಸವಲ್ಲ, ಮಾಂಸವೇ ಎಂದು ವಾದಿಸಿದರೆ – ಮಾಂಸವೆಂದರೆ ಚೆನ್ನಾಗಿ ಕಳೆತ ಭಾಗ ಎಂದೂ ಅರ್ಥ ನೀಡುತ್ತದೆ ಎಂಬುದು ತಿಳಿದಿರಲೇಬೇಕು. ಈ ರೀತಿ ಸಸ್ಯದಲ್ಲಿ ಸಂಗ್ರಹಿತ ಚೆನ್ನಾಗಿ ಕಳೆತ ಧಾನ್ಯವನ್ನು / ತಿರುಳನ್ನು ಮಾಂಸವೆಂದು ಎಷ್ಟೋ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಆಮ್ರಮಾಂಸ ಎಂದರೆ ಮಾವಿನ ತಿರುಳು, ಖರ್ಜೂರಮಾಂಸ ಎಂದರೆ ಖರ್ಜೂರದ ತಿರುಳು, ಎಂದು ಚರಕ ಸಂಹಿತೆಯಲ್ಲಿ ಹಲವು ಉದಾಹರಣೆ ಸಿಗುತ್ತದೆ. ತೈತ್ತರೀಯ ಸಂಹಿತೆ ೨.೩೨.೮ ಮೊಸರು, ಜೇನುತುಪ್ಪ ಹಾಗೂ ಧಾನ್ಯಕಗಳಿಗೆ ಮಾಂಸವೆಂದು ಹೇಳಿದೆ.
ಪ್ರತಿಪಾದನೆ ೫:- ಮೊನೆರ್ ವಿಲಿಯಮ್ಸ್‌ನ ಶಬ್ದಕೋಶ ರೀತ್ಯಾ ಊಕ್ಷವೆಂದರೆ ಓಷಧೀ ಸಸ್ಯ ಅಥವಾ ಸೋಮ ಎಂದು ಹಿಂದೆಯೇ ತಿಳಿಸಲಾಗಿದೆ. ಅದೇ ಶಬ್ದಕೋಶವು ಋಷಭ (ಇದರಿಂದ ಆರ್ಷಭ) ಎಂದರೂ ಒಂದು ಓಷಧಿ ಸಸ್ಯ (Carpopogan pruriens). ಚರಕ ಸಂಹಿತಾ ೧.೪-೧೩ ಋಷಭವನ್ನು ಒಂದು ಓಷಧೀಯ ಸಸ್ಯವೆಂದು ಪಟ್ಟಿಮಾಡಿದೆ. ಅದನ್ನೇ ಸುಶ್ರುತ ಸಂಹಿತಾ ೩೮ ಮತ್ತು ಭಾವಪ್ರಕಾಶದ ಪೂರ್ಣಕಾಂಡದಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಪಾದನೆ ೬:- ಆರ್ಷಭ (ಋಷಭ) ಮತ್ತು ಊಕ್ಷ ಎರಡೂ ಎತ್ತು ಎಂಬ ಅರ್ಥವನ್ನೂ ಕೊಡುತ್ತದೆಯೇ ಹೊರತು ಕರು ಎಂದಲ್ಲ. ಏಕೆ ಒಂದೇ ವಸ್ತು/ವಿಚಾರವನ್ನು ಸೂಚಿಸಲು ಸಮಾನಾರ್ಥಕ ಶಬ್ದಗಳನ್ನು ಬೃಹದಾರಣ್ಯಕದ ಶ್ಲೋಕದಲ್ಲಿ ಹೇಳಲಾಗಿದೆ? ಅಂದರೆ ಒಂದು ಕಡೆ ದಧಿ ಅಥವಾ ಮೊಸರನ್ನು ತಿನ್ನಬೇಕು ಎಂದಾಗ “ಅಥವಾ” ಪ್ರಯೋಗದಿಂದ ಪರ್ಯಾಯವಾಚಕವಲ್ಲದೆ ೨ ಪ್ರತ್ಯೇಕ ಶಬ್ದಗಳುಳ್ಳ ಪ್ರತ್ಯೇಕ ಗುಣವಾಚಕ ಏಕೆ ಆಗಿರಬಾರದು? ಆದ್ದರಿಂದ ಈ ೨ ಶಬ್ದಗಳೂ ೨ ಬೇರೆಯ ವಿಚಾರಗಳನ್ನೇ ಹೇಳುತ್ತಿವೆ. ಹಿಂದಿನ ಶ್ಲೋಕಗಳಲ್ಲಿ ಓಷಧೀಯ ಧಾನ್ಯಗಳನ್ನೇ ಹೇಳಿರುವುದರಿಂದ ಯಥಾ ಪೂರ್ವಮಕಲ್ಪಯತ್ ಎಂಬಂತೆ ಈ ಶಬ್ದಗಳೂ ಧಾನ್ಯವನ್ನೇ ಹೇಳುತ್ತಿವೆ ಎಂದಾಗುತ್ತದೆ.
೧೧. ಆಪಾದನೆ:- ಮಹಾಭಾರತ ವನ ಪರ್ವ ೨೦೭ – ರಾಜಾ ರಂತಿದೇವನು ಯಜ್ಞಗಳನ್ನು ಮಾಡುವಾಗ ಸಾವಿರಾರು ಗೋಹತ್ಯೆಯಾಗುತ್ತಿತ್ತು ಎಂದು ಬಹಿರಂಗ ಪಡಿಸಿದೆಯಲ್ಲಾ?
ಸತ್ಯಾಂಶ:-
ಹಿಂದಿನ ಪ್ರತಿಪಾದನೆಯಲ್ಲಿ ತಿಳಿಸಿದಂತೆ ವೇದ ಮತ್ತು ಇನ್ನಿತರೆ ಸಾಹಿತ್ಯದಲ್ಲಿ ವಿವಾದ ಕಂಡುಬಂದರೆ ವೇದವೇ ಸರ್ವೋಚ್ಛ ಎಂಬುದು ನಿರ್ವಿವಾದ. ಈಗಿರುವ ಮಹಾಭಾರತ ಎನ್ನುವುದು ಅತ್ಯಂತ ಕಲುಷಿತ ಪ್ರಕ್ಷಿಪ್ತಗಳುಳ್ಳದ್ದಾಗಿದೆ. ಅದನ್ನು ಆಧಾರ ಗ್ರಂಥವೆಂದೇ ಹೇಳಲಾಗುವುದಿಲ್ಲ. ವ್ಯಾಸೋಕ್ತ ಗಣೇಶ ಲಿಖಿತ ಮೂಲ ಜಯಭಾರತಕ್ಕೆ ಮಾತ್ರ ಪಂಚಮ ವೇದ ಎಂದದ್ದೇ ಹೊರತು ಈಗಿನ ಮಹಾಭಾರತಕ್ಕಲ್ಲ!

ಆದರೂ ರಾಜ ರಂತಿದೇವನ ಆಸ್ಥಾನದಲ್ಲಿ ಗೋಹತ್ಯೆ ನಡೆಯುತ್ತಿದ್ದಿತು ಎನ್ನುವುದು ಸುಳ್ಳು ಆಪಾದನೆ ಎಂದು ದಶಕಗಳ ಹಿಂದೆಯೇ ಹಲವು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.

ಪ್ರತಿಪಾದನೆ ೧:- ಮಹಾಭಾರತ ಅನುಶಾಸನ ಪರ್ವ ೧೧೫ರ ಪ್ರಕಾರ ರಾಜಾ ರಂತಿದೇವನು ಮಾಂಸವನ್ನೇ ಭಕ್ಷಿಸದ ರಾಜರ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದಾನೆ. ಅವನ ಆಸ್ಥಾನದಲ್ಲಿ ಹೇರಳವಾಗಿ ಮಾಂಸ ಲಭ್ಯವಿದ್ದರೂ ತಿನ್ನಲಿಲ್ಲವೇ?

ಪ್ರತಿಪಾದನೆ ೨:- ಮಾಂಸವೆಂದರೆ ಪಶುವಿನ ದೇಹದ್ದೇ ಅಲ್ಲವೆಂದು ಹಿಂದೆಯೇ ಸಾಧಿಸಲಾಗಿದೆ.

ಪ್ರತಿಪಾದನೆ ೩:- ಆ ಶ್ಲೋಕವು ದಿನಕ್ಕೆ ೨೦೦೦ ಗೋವುಗಳನ್ನು ಕೊಲ್ಲುತ್ತಿದ್ದರು ಎಂದು ಹೇಳುತ್ತದೆ. ಅಂದರೆ ವರ್ಷಕ್ಕೆ ೭,೨೦,೦೦೦ ಗೋಹತ್ಯೆ ನಡೆಯುತ್ತಿತ್ತೇ? ಹಾಗಾಗಿ ಈ ಶ್ಲೋಕವು ತರ್ಕ ಹಾಗೂ ಅರ್ಥ ಬದ್ಧವೇ?

ಪ್ರತಿಪಾದನೆ ೪:- ಮಹಾಭಾರತ ಶಾಂತಿಪರ್ವ ೨೬೨.೪೭ರ ಪ್ರಕಾರ ಗೋವೃಷಭ ಹಂತಕರು ಅತೀ ಪಾಪಿಗಳು ಎಂದಿದೆ. ಅದೇ ಮಹಾಭಾರತವು ರಂತಿದೇವನನ್ನು ಒಬ್ಬ ದೊಡ್ಡ ತಪಸ್ವಿ, ತ್ಯಾಗಿ ಎಂದೂ ಹೇಳಿದೆ. ಹೇಗೆ ಪರಸ್ಪರ ವಿರುದ್ಧ ಶ್ಲೋಕಗಳು ಹೇಗೆ ಇರಲು ಸಾಧ್ಯ? ಇದು ಪ್ರಕ್ಷಿಪ್ತವಲ್ಲವೇ? ಸ್ವಲ್ಪ ಚಿಂತಿಸಿ.

ಪ್ರತಿಪಾದನೆ ೫:- ನೈಜವಾಗಿ ಈ ಶ್ಲೋಕಗಳನ್ನು ದಾರಿತಪ್ಪಿಸಲೆಂದೇ ಇದ್ದ ರಾಹುಲ್ ಸಂಕೃತ್ಯಾಯನರಂತಹಾ ವಿದ್ವಾಂಸರು ವೇದ ವಿಧ್ವಂಸಕರಾಗಿ ಮೆರೆದಿದ್ದಾರೆ. ರಾಹುಲ್ ಸಂಕೃತ್ಯಾಯನನು ಉದ್ದೇಶ ಪೂರ್ವಕವಾಗಿ ಶ್ಲೋಕದ ಮೊದಲ ೩ ಪಾದಗಳನ್ನು ಹೇಳಿ, ದ್ರೋಣ ಪರ್ವ ಅಧ್ಯಾಯ ೬೭ರ ಮೊದಲೆರಡು ಶ್ಲೋಕದಿಂದ ಒಂದು ಪಾದವನ್ನು ಊನಗೊಳಿಸಿದನು. ಹಾಗೆಯೇ ದ್ವಿಶತಸಹಸ್ರವೆಂದರೆ ನೈಜವಾಗಿ ೨೦೦ ಸಾವಿರ ಎಂದಾಗ್ಯೂ, ೨೦೦೦ ಎಂದು ತಪ್ಪು ವ್ಯಾಖ್ಯಾನ ಮಾಡಿದನು. ಇಷ್ಟು ಸಾಕು ಆತನ ಸಂಸ್ಕೃತ ವಿದ್ವತ್ ವರ್ಣಿಸಲು!

ಈ ಶ್ಲೋಕಗಳ ಯಾವುದೇ ಸಾಲುಗಳಲ್ಲಿ ಗೋಮಾಂಸದ ಉಲ್ಲೇಖವಿಲ್ಲ. ಮತ್ತೆ ಆತನು ಬಿಟ್ಟ ಒಂದು ಪಾದವನ್ನು ಸೇರಿಸಿ ಓದಿದರೆ ರಂತಿದೇವನು ೨,೦೦,೦೦೦ ಬಾಣಸಿಗರನ್ನು (ಪಾಕಶಾಸ್ತ್ರಿ) ಉತ್ತಮ ಪಾಕ ತಯಾರಿಸಿ ಪ್ರಜೆಗಳು, ಸೇನೆ, ಅತಿಥಿಗಳು, ಅಭ್ಯಾಗತರು, ವಿದ್ವಾಂಸರಾದಿಯಾಗಿ ಸರ್ವರಿಗೂ ಚೆಂದದಿಂದ ಉಣಬಡಿಸಲು ಹಗಲು-ರಾತ್ರಿ ಎನ್ನದೆ ಶ್ರದ್ಧೆಯಿಂದ ಕಾರ್ಯಗೈಯ್ಯಲು ನೇಮಿಸಲ್ಪಟ್ಟಿದ್ದರು ಎಂದು ತಿಳಿದುಬರುತ್ತದೆ. ನಂತರದಲ್ಲಿ ಮಾಷವನ್ನು ತಿದ್ದಿ ಮಾಂಸವೆಂದು ಮಾಡಿ ಅದನ್ನು ಗೋಹತ್ಯಾ ಪ್ರಸಂಗವಾಗಿ ಕಾಣುವಂತೆ ಬಣ್ಣಗೆಡಿಸಿದರು.

ಪ್ರತಿಪಾದನೆ ೬:- ಇದಕ್ಕೆ ವಿಪರೀತ ಎಂಬಂತೆ ಮಹಾಭಾರತದಲ್ಲಿ ಅಹಿಂಸೆ ಮತ್ತು ಮಾಂಸ ಭಕ್ಷಣೆಯನ್ನು ಖಂಡಿಸುವ ವಿಪುಲ ಶ್ಲೋಕಗಳು ದೊರಕುತ್ತವೆ. ಅದಲ್ಲದೆ ಗೋವುಗಳ ಮಹತ್ವ ಸಾರುವ, ಅವುಗಳನ್ನು ಪೋಷಿಸುವ, ಸ್ತುತಿ ಗೈಯ್ಯುವ ಶ್ಲೋಕಗಳಿವೆ.

ಪ್ರತಿಪಾದನೆ ೭:- ಬಾಧ್ಯತೇ ಎಂದರೆ ಕೊಲ್ಲುವುದು ಎಂದು ಅರ್ಥ ಮಾಡಿದ್ದು ಮೂರ್ಖರೇ ಸರಿ. ಯಾವುದೇ ಸಂಸ್ಕೃತ ವ್ಯಾಕರಣ ಸಾಹಿತ್ಯ ಅಥವಾ ಪ್ರಯೋಗಗಳಲ್ಲಿ ಇಂತಿಲ್ಲ. ಬಾಧ್ಯತೇ ಎಂದರೆ ಹತೋಟಿಯಲ್ಲಿಡುವುದು. ಆದ್ದರಿಂದ ಯಾವುದೇ ರೀತಿಯಲ್ಲಿ ರಾಜಾ ರಂತಿದೇವನು ಗೋಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಸಾಧಿಸಲು ಸಾಧ್ಯವಿಲ್ಲ.

ಕೊನೆಯದಾಗಿ ನಾನು ಎಲ್ಲಾರಿಗೂ ಸವಾಲು ಹಾಕುತ್ತೇನೆ, ವೇದಗಳ ಯಾವುದಾದರೋ ಮಂತ್ರಗಳಲ್ಲಿ ಗೋಮಾಂಸ ಸೇವನೆಯನ್ನು ಪರೋಕ್ಷವಾಗಾದರೋ ಸಮ್ಮತಿಸಿದ್ದು ಅದು ಧೃಡಪಟ್ಟಲ್ಲಿ ಅವರು ಹೇಳಿದಂತಹ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ, ಇಲ್ಲವಾದಲ್ಲಿ ಅವರು ವೇದಗಳ ನಿಜಸಾರವನ್ನು ಬೆಂಬಲಿಸಲು  ಒಪ್ಪಿಕೊಂಡು ವೇದಗಳ ಅನುಯಾಯಿಯಾಗಬೇಕು

ಗೋಮಾತೆಯೇ ವೇದಮಾತೆಯಹುದು, ಆಕೆಯಿಂದ ತರಣಿಯ ಜ್ಞಾನ ಕಿರಣವು ಎಲ್ಲರ ಮನಸ್ಸಿನಲ್ಲಿ ಪಸರಿಸಲಿ, 
ತನ್ಮುಖೇನ ಎಲ್ಲ ಲೋಕಗಳಲ್ಲಿನ ಎಲ್ಲ ಜೀವಿಗಳಿಗೂ ಬದುಕಲು ಅನುಕೂಲವಾಗುವಂತೆ 
ಘೋಟಿಸಲಿ ಎಂದು ವೇದಪುರುಷನಲ್ಲಿ ಪ್ರಾರ್ಥಿಸುತ್ತೇನೆ.

References: 

5 comments:

 1. ತುಂಬಾ ಒಳ್ಳೆಯ ಮಾಹಿತಿ

  ReplyDelete
 2. ದನ್ಯವಾದಗಳು

  ReplyDelete
 3. ಧನ್ಯವಾದ ನಮಗೆ ನಿಮ್ಮ ಕಾಂಟೆಕ್ಟ್ ಬೇಕು ದಯವಿಟ್ಟು ಸಹಕರಿಸಿ

  ReplyDelete
  Replies
  1. You can comment in blog,I will answer in my own time. More than that if very necessary, send your queries to uragabhushan@gmail.com

   Delete
 4. ಮನಸೋ ಇಚ್ಛೆ ಅರ್ಥಹೀನವಾಗಿ ವಾದಿಸುವವರು ಮೂಲಭೂತವಾಗಿ ಅರಿಯಬೇಕಾದ ಮಾಹಿತಿಗಳಿರುವುದು ಸಂತಸದ ಸಂಗತಿ.

  ReplyDelete

Note: only a member of this blog may post a comment.